ದಕ್ಷಿಣಾಪಥೇಶ್ವರ
2006 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.
Language: Kannada
Category: Drama/Thriller
Abstract: This is Part One of the story "pulikESi-harShavardhanara kAladall..." as it appeared in the KKNC magazine. A story of a young man who becomes a spy and helps his king win a war.
Keywords: drama, spy thriller, historical, chalukya, kannada, dakshinapatheshwara, pulikeshi, harshavardhana, aihole
Notice: This is an abridged version of the first part of the story "ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ...", ending with the construction of the Aihole temple as it appeared in the KKNC magazine of 2006. As the story rolls further, sUrya sharma travels all over the country, meets with Hiuen Tsang, gets arrested and escapes. Continue reading "ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ..." after "ದಕ್ಷಿಣಾಪಥೇಶ್ವರ" for another adventure-filled historical yarn.
ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಳುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಳುಕ್ಯ ಅರಸುತನವನ್ನು ಸ್ಥಾಪಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ ವರೆಗೂ ಆ ಪಾಳುಬಿದ್ದ ಹಳ್ಳಿಯಲ್ಲೇ ಇದ್ದರಂತೆ. ನಮ್ಮ ತಂದೆ ಆ ಪಾಳು ಹಳ್ಳಿಯನ್ನು ಬಿಟ್ಟು ವಾತಾಪಿ ನಗರಕ್ಕೆ ಬಂದರಂತೆ. ಯಾವಾಗೆಂದು ತಿಳಿಯದು - ನನಗಂತೂ ನೆನಪಿಲ್ಲ. ಬಹುಶಃ ನಾನು ಹುಟ್ಟುವ ಮುನ್ನವೇ ಇರಬಹುದು.
ನಾನು ಬೆಳೆದಿದ್ದೆಲ್ಲ ವಾತಾಪಿ ನಗರದ ಬಳಿಯೇ. ಆಗ ಹಿಂದಿನ ಮಹಾರಾಜನಾದ ಕೀರ್ತಿವರ್ಮನ ಮರಣದ ಸಮಯದಲ್ಲಿ ಯುವರಾಜ ಎರೆಯ ಬಹಳ ಚಿಕ್ಕವನಾದ ಕಾರಣ ಮಹಾರಾಜ ಕೀರ್ತಿವರ್ಮನ ತಮ್ಮನಾದ ಮಂಗಳೇಶ ರಾಜ್ಯವಾಳುತ್ತಿದ್ದು, ಗುರ್ಜರ ಪ್ರದೇಶದ ಕಳಚೂರಿ ನಗರದ ರಾಜ ಬುದ್ಧಿರಾಜ, ರೇವತೀ ದ್ವೀಪದ ಪಾಳೆಯಗಾರ ಸ್ವಾಮಿರಾಜ ಮತ್ತಿತರರನ್ನು ಪರಾಜಯ ಗೊಳಿಸಿ, ಅವರನ್ನು ಚಾಳುಕ್ಯರ ಆಧೀನರಾಗಿಸಿ, ಊರುರಾಣಪರಾಕ್ರಮ, ರಾಣವಿಕ್ರಮ, ಪರಮಭಾಗವತನೆಂಬ ಬಿರುದುಗಳನ್ನು ಹೊಂದಿ ವಾತಾಪಿ ನಗರಿಯಲ್ಲಿ ವೈಷ್ಣವ ದೇವಾಲಯವೊಂದನ್ನು ಕಟ್ಟಿಸಿದ ಕತೆಗಳು ಕೇಳಿಬರುತ್ತಿದ್ದವು. ನಮ್ಮಂತಹ ಸಾಮಾನ್ಯ ಜನರಿಗೆ ಹೀಗೆ ಕೇಳಿ ಬರುತ್ತಿದ್ದ ಸುದ್ಧಿಗಳೆಷ್ಟೋ ಅಷ್ಟೆ. ನಿಜ ಸಂಗತಿ ತಿಳಿಯಲು ಬೇರಾವ ಸಾಧನಗಳೂ ಇರಲಿಲ್ಲ.
ಈ ಮಂಗಳೇಶ ಮಹಾರಾಜನು ಯುವರಾಜ ಎರಯ ವಯಸ್ಸಿಗೆ ಬಂದಾಗ ಸಿಂಹಾಸನ ಬಿಟ್ಟುಕೊಡಬೇಕಾಗಿದ್ದರೂ, ಅಧಿಕರಣದ ಮದವು ಅವನ ತಲೆಗೇರಿ ತನ್ನ ಮಗನಾದ ಸುಂದರವರ್ಮನನ್ನು ಸಿಂಹಾಸನಕ್ಕೇರಿಸುವ ಕುಯೋಜನೆ ಹೂಡಿದ್ದು ಯುವರಾಜ ಎರೆಯನಿಗೆ ತಿಳಿದುಬಂದು, ಯುವರಾಜನು ತನ್ನ ಸ್ವಾಭಾವಿಕ ದಕ್ಷತೆಯಿಂದ ಅವರಿಬ್ಬರನ್ನೂ ನಿರ್ಮೂಲ ಮಾಡಿ, ಪುಲಿಕೇಶಿ ಎಂಬ ಬಿರುದನ್ನು ಹೊತ್ತು, ತಾನೇ ಸಿಂಹಾಸನವನ್ನೇರಿದ್ದು ಚಿರಪರಿಚಿತ ಕತೆಯಾಗಿತ್ತು.
ಸುಮಾರು ಆ ಕಾಲದಲ್ಲಿ ನನ್ನ ಜನ್ಮವಾದದ್ದು ಎಂದು ನಾನು ಬಾಲಕನಾದಾಗ ಅಮ್ಮ ಹೇಳುತ್ತಿದ್ದ ನೆನಪು. ವಯಸ್ಸು ಸುಮಾರು ಏಳೆಂಟು ಇದ್ದಿರಬಹುದು - ಪರಂಪರೆಯಾನುಸಾರವಾಗಿ ನನ್ನನ್ನು ಗುರುಕುಲಕ್ಕಟ್ಟಲಾಯಿತು. ಅಲ್ಲಿ ನಮ್ಮ ಸಂಪ್ರದಾಯದಂತೆ ನನ್ನ ವಿದ್ಯಾಭ್ಯಾಸ ನಡೆಯಿತು. ಸಂಸ್ಕೃತ, ವೇದ-ಪುರಾಣಗಳು ಹಾಗು ವೇದಾಂತ-ಮೀಮಾಂಸಗಳ ವಿಷಯಗಳಲ್ಲಿ ಶಿಕ್ಷಣೆ ಹೊಂದಿದೆ. ಹೀಗೇ ಹಲವಾರು ಸಂವತ್ಸರಗಳು ಕಳೆದವು. ಸುಮಾರು ಹದಿನಾರರ ವಯಸ್ಸಿರಬಹುದು, ಗುರುಗಳು ನಾನು ಗುರುಕುಲದಿಂದ ಹೊರಹೋಗಲು ಸಮರ್ಥನಾಗಿರುವೆ ಎಂದು ಹೇಳಿ ಕಳುಹಿಸಿಕೊಟ್ಟರು.
ಬೇರೆ ದಾರಿ ಕಾಣದೆ ವಾತಾಪಿ ನಗರಕ್ಕೆ ಹಿಂತಿರುಗಿದೆ. ಬಾಲಕನಾಗಿದ್ದಾಗ ನೋಡಿದ್ದು ಬಿಟ್ಟರೆ, ನಾನು ಕಾಣದ ಊರದು, ಎಲ್ಲವೂ ಹೊಸದು. ನಮ್ಮ ತಂದೆಯವರಿಗೆ ನಾನೂ ಅವರಂತೆ ವೈದಿಕ ಕಾರ್ಯ ನಿರ್ವಹಣೆ ನಡೆಸಿಕೊಂಡು, ವಿವಾಹ ಮಾಡಿಕೊಂಡು ವಾತಾಪಿಯಲ್ಲೇ ನೆಲೆಸಬೇಕೆಂಬ ವಿಚಾರ. ಆಗ ನಾನಿನ್ನೂ ಯುವಕ, ಮೇಲಾಗಿ ನನಗೆ ತಲೆಮಾರುಗಳಿಂದ ಬಂದಿರುವ ಬ್ರಹ್ಮವಿದ್ಯೆ ಮುನ್ನಡೆಸುವ ವಿಶೇಷ ಆಸೆಯೇನು ಇರಲಿಲ್ಲ. ದೇಶ ಸುತ್ತುವ ಸ್ವಾಭಾವಿಕ ಆಸೆ, ಏನಾದರೂ ಬೇರೆ ಕಾಯಕ ನಡೆಸಿ ಪದವಿ, ಹೊನ್ನು ಗಳಿಸುವ ಆಸೆ.
ಹೀಗೇ ನನ್ನ ಪಾಡೇನಾಗುವುದೆಂದು ಯೋಚಿಸುತ್ತ ಒಂದು ದಿನ ಊರಾಚೆ ಕಾಡಿನಲ್ಲಿ ಹೋಗಿ ಚಿಂತೆ ಮಾಡುತ್ತ ಕುಳಿತಿದ್ದೆ. ಹಾಗೆ ಕುಳಿತಿದ್ದಾಗ ಪ್ರಾಣಿಯೊಂದು ನಡೆದು ಹೋಗುತ್ತಿರುವ ಧ್ವನಿ ಕೇಳಿಸಿತು. ಕುಳಿತಲ್ಲೇ ಕುಳಿತು ಕತ್ತು ತಿರುಗಿಸಿ ನೋಡಿದರೆ ವ್ಯಾಘ್ರವೊಂದು ನೀರು ಕುಡಿಯಲು ಸರೋವರದ ಕಡೆ ಹೊರಟಿದೆ. ಅದರ ಸ್ವಲ್ಪ ಹಿಂದೆಯೇ ವ್ಯಕ್ತಿಯೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ಅದರ ಮೇಲೆ ಗುರಿಯಿಟ್ಟು ಅದನ್ನೇ ಹಿಂಬಾಲಿಸಿ ಹೋಗುತ್ತಿದ್ದದ್ದು ಕಾಣಿಸಿತು.
ಗುರುಕುಲದ ವಿದ್ಯಾಭ್ಯಾಸದಲ್ಲಿ ನಾನು ಕಲಿತ ಒಂದು ಪಾಠವೆಂದರೆ ಪ್ರಕೃತಿಯ ಸೃಷ್ಟಿಯ ರಕ್ಷಣೆ. ಆ ಪಾಪದ ಪ್ರಾಣಿಯನ್ನು ಸಾಯಲು ಬಿಡುವವ ನಾನಾಗಿರಲಿಲ್ಲ. ನಾನು ಮರದ ಮರೆಯಲ್ಲಿದ್ದೆಯಾದ್ದರಿಂದ ಆ ಮನುಷ್ಯನ ಕಣ್ಣಿಗೆ ನಾನು ಕಾಣಿಸಿರಲಿಲ್ಲ. ವ್ಯಾಘ್ರ ನನ್ನ ಪಕ್ಕದಿಂದ ಸುಳಿದಾಗ ನಾನು ಅದರ ಮೇಲೆ ನೆಗೆದೆ. ಅದಕ್ಕೆ ಆಶ್ಚರ್ಯವಾಯಿತಾದರೂ ಅದು ಹೋರಾಡ ತೊಡಗಿತು. ಹೋರಾಟದಲ್ಲಿ ನನ್ನನ್ನು ಬಗರಿ ಓಡಿಹೋಯಿತು. ನೋವಿನಿಂದ ನರಳುತ್ತ ಬಿದ್ದಿದ್ದಲೇ ಬಿದ್ದಿದ್ದೆನಾದರೂ ವ್ಯಾಘ್ರನ ಜೀವ ಉಳಿಸಿದ ತೃಪ್ತಿಯ ಭಾವ ನನ್ನಲ್ಲಿ ಹರಿಯಿತು. ಆದರೆ ನಾನು ಹುಲಿಯನ್ನು ಅಟ್ಟಿ ಬಂದ ಆ ಮನುಷ್ಯನನ್ನು ಎಣಿಸಿರಲಿಲ್ಲ.
ಕೋಪದಿಂದ ನನ್ನ ಬಳಿ ದುರ-ದುರನೆ ನಡೆದು ಬಂದ. ಬಹಳ ಎತ್ತರವಾಗಿದ್ದು, ತೆಳುವಾದ, ಎಲುಬು ಕಾಣುವಂತಹ ಮೈಕಟ್ಟು ಹೊಂದಿದ್ದ. ಅವನ ಮುಖದಲ್ಲಿ ಕಠಿಣ, ನಿಷ್ಟುರ ರೇಖೆಗಳಿದ್ದವು; ರಕ್ತ-ಕೆಂಪಾಗಿದ್ದ ಗರುಡನಂಥಹ ಕಣ್ಣುಗಳು. ಅವನ ದಟ್ಟವಾದ ಒರಟಾದ ತಲೆಗೂದಲು ಅವನ ಮುಖದಸುತ್ತ ಚದುರಿ ಅವನಿಗೇ ವ್ಯಾಘ್ರನ ರೂಪ ಕೊಟ್ಟಿದ್ದವು. ಅವನೆ ಎದೆಯ ಮೇಲೆ ಒಂದು ವರಾಹದ ಲಾಂಛನವಿತ್ತು. ಸಮೀಪ ಬಂದು ಘರ್ಜಿಸಿದ:
"ನಮ್ಮ ಬೇಟೆಯನ್ನು ತಪ್ಪಿಸಲು ಎಷ್ಟು ಧೈರ್ಯವೋ ನಿನಗೆ? ನಾವು ಯಾರೆಂದು ಬಲ್ಲೆಯಾ"
ನಾನು ವಿನಯದಿಂದಾದರೂ ಸ್ವಲ್ಪ ಹೆಮ್ಮೆಯಿಂದ ಉತ್ತರಿಸಿದೆ "ನೀನು ಯಾರಾದರೇನು? ಆ ಮೂಕ ವ್ಯಾಘ್ರನನ್ನು ಕೊಲ್ಲುವ ಹಕ್ಕು ನಿನಗಿಲ್ಲ. ಆ ಕಾರಣದಿಂದ ನಾನು ಅದಕ್ಕೆ ಓಡಿಹೋಗಲು ದಾರಿ ಮಾಡಿಕೊಟ್ಟೆ."
ಅವನಿಗೆ ಕೋಪ ಇನ್ನಷ್ಟು ಹೆಚ್ಚಾಯಿತು. ಅಷ್ಟು ಹೊತ್ತಿಗೆ ಕಾಡಿನಲ್ಲಿ ಯಾರೋ ಬರುತ್ತಿದ್ದ ಸದ್ದು ಕೇಳಿಸಿತು. ಆತ ಒದರಿದ "ಯಾರಲ್ಲಿ"
ಕೆಲವೇ ಕ್ಷಣಗಳಲ್ಲಿ ಇಬ್ಬರು ರಾಜ ಭಟರು ಬಂದು ಆತನಿಗೆ ಬಾಗಿ ಆದರ ತೋರಿ "ಅಪ್ಪಣೆ ಮಹಾರಾಜ" ಎಂದರು. ಮಹಾರಾಜನ ತಂಡದ ಉಳಿದವರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗಲು ಆರಂಭಿಸಿದರು.
ನನಗಾಗ ಹೊಳೆಯಿತು. ಈತ ಮಹಾರಾಜ ಪುಲಿಕೇಶಿ - ವ್ಯಾಘ್ರನ ಕೇಶ ಉಳ್ಳವನು. ಸಿಂಹಾಸನವನ್ನೇರಿದಮೇಲೆ ಈತ ಅಪ್ಪಯಕ ಹಾಗು ಗೋವಿಂದರೆಂಬ ದಂಗೆಯೆದ್ದ ಪಾಳೆಯಗಾರರನ್ನು ಸದೆಬಡೆದು ಅವರು ಕಪ್ಪ ಸಲ್ಲಿಸುವಂತೆ ಮಾಡಿದವ. ವೈಜಯಂತಿಯ ಕದಂಬರನ್ನು ಪೂರ್ಣ ನಿರ್ಮೂಲ ಮಾಡಿ, ನಂತರ ತಲಕಾಡಿನ ಗಂಗರನ್ನು ಹಾಗು ಕರಾವಳಿಯ ಆಳುಪರನ್ನು ಯುದ್ಧ ದಲ್ಲಿ ಸೋಲಿಸಿ ಸಾಮಂತರನ್ನಾಗಿಸಿದವ. ಕೊಂಕಣ ಕರಾವಳಿ ಹಾಗು ಪುರಿ ಬಂದರನ್ನು ಸಮುದ್ರ ಕಾಳಗದ ನಂತರ ಗೆದ್ದವ. ಲಾಟರು, ಗುರ್ಜರರು ಹಾಗು ಮಾಳವರನ್ನು ಪೂರ್ಣ ಸದೆಬಡೆದು ದಕ್ಷಿಣಾಪಥಕ್ಕೇ ಅಧಿಪತಿಯಾದಂತವ. ಕೆಲವೇ ಸಂವತ್ಸರಗಳ ಹಿಂದೆ ಮಹಾರಾಜನು ಪಲ್ಲವ ಚಕ್ರವರ್ತಿ ಮಹೇಂದ್ರವರ್ಮನ ತಾಣವಾದ ಕಾಂಚೀಪುರಕ್ಕೆ ಧಾಳಿಯಿಟ್ಟು, ಪುಳ್ಳಲೂರಿನ ಯುದ್ಧದಲ್ಲಿ ಪಲ್ಲವರನ್ನು ಸೋಲಿಸಿ ಮಹೇಂದ್ರವರ್ಮನು ಕಾಂಚೀಪುರದ ಕೋಟೆಯೊಳಗೆ ಅಡಗಿಕೊಳ್ಳುವ ಪರಿಸ್ಥಿತಿ ಬಂದಾಗ, ಆ ಕೋಟೆಗೆ ಧಾಳಿಯಿಟ್ಟು, ಕಾಂಚೀನಗರದೊಳಗೆ ಹೊಕ್ಕಿ, ಅಲ್ಲಿ ಪಲ್ಲವರನ್ನು ಸದೆಬಡೆದು, ಅವರನ್ನೂ ಕಪ್ಪ-ಕಾಣಿಕೆ ಸಲ್ಲಿಸಲು ಒತ್ತಾಯ ಮಾಡಿದವ. ನಾನು ಇಂತಹ ಮಹಾರಾಜನ ಬೇಟೆ ತಪ್ಪಿಸಿದ್ದೆ! ನನಗೇನು ಕಾದಿತ್ತೋ ಯೋಚನೆ ಮಾಡಲು ಭಯವಾಗುತ್ತಿತ್ತು.
ಇಷ್ಟೆಲ್ಲ ಯೋಚನೆ ಮಾಡಲು ನನಗೆ ಕೆಲವೇ ಕ್ಷಣಗಳ ಸಮಯ ಬೇಕಾಗಿದ್ದದ್ದು. ನನಗಷ್ಟೂ ಸಮಯ ಕೊಡದೆ ಮಹಾರಾಜನು "ಇವನನ್ನು ಒಯ್ದು ಕಾರಾಗ್ರಹಕ್ಕೆ ತಳ್ಳಿ" ಎಂದು ಹೇಳಿ ಹೊರಟು ಹೋದನು.
ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೆಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಡೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ.
ಕೊನೆಗೊಮ್ಮೆ ಭಟರು ಬಂದು ನನ್ನ ಕಣ್ಣುಗಳನ್ನು ಕಟ್ಟಿ ನನ್ನನ್ನು ಎಲ್ಲಿಗೋ ಕರೆದೊಯ್ದರು. ಯಾವುದೋ ಸುರಂಗ ಮಾರ್ಗಗಳಲ್ಲಿ ಹೋದ ಅನಿಸಿಕೆ. ಕೊನೆಗೆ ಮತ್ತಾವುದೋ ಸ್ಥಳದಲ್ಲಿ ನನ್ನನ್ನು ಕೂರಿಸಿ ಭಟರು ಹೊರಟು ಹೋದರು.
ಸ್ವಲ್ಪ ಸಮಯದ ನಂತರ ನನ್ನ ಕಣ್ಣಿನ ಕಟ್ಟು ಬಿಚ್ಚಲಾಯಿತು. ದೀಪದ ಬೆಳಕಿದ್ದ ಒಂದು ವಿಶಾಲವಾದ ಕೋಣೆಯಲ್ಲಿದ್ದೆ. ಕೋಣೆಗೆ ಯಾವ ಬೆಳಕಿಂಡಿಗಳಿರುವುದು ಕಾಣಿಸಲಿಲ್ಲವಾದರೂ ರಾತ್ರಿ ಹೊತ್ತಿರಬಹುದೆನಿಸಿತು. ನೆಲಮಾಳಿಗೆಯ ಕೋಣೆ ಇರಬಹುದೆಂದುಕೊಂಡೆ. ರಾಜಸೇವಕರು ತಿನ್ನಲು ಒಂದಿಷ್ಟು ಫಲಗಳು ಹಾಗು ಬೇರೆ ಆಹಾರಗಳನ್ನು ನನ್ನ ಮುಂದೆ ಇರಿಸಿದರು. ನನಗೆ ಏನು ತಿಳಿಯಲಿಲ್ಲ. ಆದರೂ ಹೊಟ್ಟೆ ಹಸಿವಾದರಿಂದ ಆ ಫಲಗಳನ್ನು ಭಕ್ಷಿಸಿದೆ. ಏನು ನಡೆಯುತ್ತಿದೆಯೆಂದು ಯೋಚಿಸಬೇಕೆಂಬ ವಿಚಾರ ಇನ್ನೂ ನನ್ನ ಬುದ್ಧಿಗೆ ಹೊಳೆದಿರಲಿಲ್ಲ, ಅಷ್ಟುಹೊತ್ತಿಗೆ ಸ್ವತಃ ಮಹಾರಾಜನೇ ಮತ್ತೊಬ್ಬ ವಯಸ್ಸಾದ ವ್ಯಕ್ತಿಯೊಂದಿಗೆ ಅಲ್ಲಿಗೆ ಬಂದ. ಇಬ್ಬರು ನನ್ನೆದುರಿಗೆ ಕುಳಿತರು.
ಮಹಾರಾಜ ಸ್ವಲ್ಪ ಶಾಂತವಾಗಿದ್ದರೂ ಇನ್ನೂ ಕೋಪದಿಂದಲೇ ಹೇಳಿದ "ನಮ್ಮ ಗುರಿ ಆ ವ್ಯಾಘ್ರನ ಮೇಲಿತ್ತು. ನೀನು ಅದರೊಡನೆ ಹೋರಾಡುತ್ತಿದ್ದಾಗಲೂ ನಿನ್ನನ್ನೂ, ಅದನ್ನೂ ಕೊಲ್ಲುವ ಸಾಮರ್ಥ್ಯವಿದೆ ನಮ್ಮಲ್ಲಿ"
ನಾನು ಪೆಚ್ಚಾದರೂ, ಉತ್ತರಿಸಲಿಲ್ಲ. ಮಹಾರಾಜನೇ ಮತ್ತೂ ಸ್ವಲ್ಪ ಶಾಂತನಾಗಿ ಹೇಳಿದ "ಮೈ ಮೇಲೆ ಒಂದು ಪಂಚೆ ಧರಿಸಿರುವ ನಿಶಕ್ತ ಬ್ರಾಹ್ಮಣ ನೀನು. ಆ ವ್ಯಾಘ್ರನ ಮೇಲೆ ಹಾರಲು ಭಯವಾಗಲಿಲ್ಲವೇ ನಿನಗೆ?"
ಈಗ ಸ್ವಲ್ಪ ಗತ್ತಿನಿಂದಲೇ ಹೇಳಿದೆ "ಭಯವಾಯಿತು. ಯಾರಿಗೆ ವ್ಯಾಘ್ರನ ಮೇಲೆ ಹಾರಿ ಅದರೊಡನೆ ಸೆಣೆಸಾಡಲು ಭಯವಾಗುವುದಿಲ್ಲ? ಆದರೂ ಅದನ್ನು ಬದುಕಿಸುವ ಹೊಣೆ ಆ ಕ್ಷಣದಲ್ಲಿ ನನ್ನದಾಗಿತ್ತು ಎನಿಸಿತು"
ಮಹಾರಾಜ ಹೇಳಿದ "ನಮಗೆ ಭಯವಾಗುವುದಿಲ್ಲ"
ಸ್ವಲ್ಪ ಹೊತ್ತು ಶಾಂತಿ ಕಾದಿತ್ತು. ಮತ್ತೆ ಮಹಾರಾಜನೇ ನುಡಿದ "ನಿನ್ನ ಧ್ಯೇಯದಲ್ಲಿ ನಿನಗಷ್ಟು ನಂಬಿಕೆಯೆ?"
ನಾನು ಹೇಳಿದೆ "ಮಹಾರಾಜ, ನನ್ನ ಜೀವನದಲ್ಲಿ ಕಲಿತಿರುವ ಒಂದು ಪಾಠ ನನ್ನ ಕೈಯಲ್ಲಿ ಸಾಧ್ಯವಾದಾಗ ಪ್ರಕೃತಿಯ ಸೊಬಗಿನ ರಕ್ಷಣೆ"
ಮಹಾರಾಜ ಪ್ರತಿಯುತ್ತರಿಸಿದ "ಆ ವ್ಯಾಘ್ರ ಪ್ರಕೃತಿಯ ಸೊಬಗೆ? ಅದಕ್ಕೆ ಸಾಧ್ಯವಾಗಿದ್ದಿದ್ದರೆ ನಿನ್ನನ್ನೂ ತಿಂದುಬಿಡುತ್ತಿತ್ತು"
ನಾನು ಹೇಳಿದೆ "ಅದು ನನ್ನನ್ನು ತಿಂದಿದ್ದರೂ ಅದನ್ನು ಬದುಕಿಸಲು ಪ್ರಯತ್ನಿಸುತ್ತಿದ್ದೆ. ಅದನ್ನು ವಿನಾಃ ಕಾರಣ ಕೊಲ್ಲುವ ಅನುಮತಿ ಮನುಷ್ಯನಿಗಿಲ್ಲ"
"ಮಹಾಮಂತ್ರಿಗಳೆ..." ಕೆಲವು ಕ್ಷಣಗಳ ಕಾಲ ಯೋಚಿಸಿ, ಮಹಾರಾಜ ನುಡಿದ
ಪಕ್ಕ ಕುಳಿತಿದ್ದ ವ್ಯಕ್ತಿ ಈಗ ನುಡಿದರು "ಯುವಕ, ನಿನಗೆ ನಿನ್ನ ಮಾತೃಭೂಮಿಯಲ್ಲಿ ಎಷ್ಟು ಭಕ್ತಿ ಇದೆ?"
ನಾನು ಹೇಳಿದೆ "ನನ್ನ ಮಾತೃಭೂಮಿಗೆ ಪ್ರಾಣವನ್ನೂ ಕೊಡಬಲ್ಲೆ"
"ಆ ವ್ಯಾಘ್ರನನ್ನು ಕಾಪಾಡುವ ಧ್ಯೇಯದಲ್ಲಿದ್ದ ನಂಬಿಕೆಯೇ ಮಾತೃಭೂಮಿಯನ್ನು ಕಾಪಾಡುವುದರಲ್ಲೂ ಇದೆಯೆ?" ಎಂದು ಕೇಳಿದರು.
ನಾನು ಇದೆ ಎನ್ನುವಂತೆ ತಲೆದೂಗಿದೆ.
"ಹಾಗಾದರೆ ಮಹಾರಾಜನಿಗೆ ರಾಜ್ಯಾಡಳಿತ ಹಾಗು ರಾಜ್ಯ ಸಂರಕ್ಷಣೆಯಲ್ಲಿ ಸಹಾಯ ಮಾಡುವೆಯಾ?" ಎಂದರು.
ನನಗೀಗ ನನ್ನ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಾಧನೆ ಕಾಣಿಸತೊಡಗಿತು "ಮಾಡುವೆ - ಏನು ಮಾಡಬೇಕು?" ಎಂದೆ
ಈಗ ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈತನು ಮಹಾರಾಜರ ಬೇಟೆ ಅಡ್ಡಪಡಿಸಿದ ಕಾರಣ ಈತನ ಶಿರ ಕಡಿಸುವ ಶಿಕ್ಷೆ ವಿಧಿಸಲಾಗಿರುವುದನ್ನು ಡಂಗೂರ ಹೊಡೆಸಿ"
ನಾನು ತಬ್ಬಿಬ್ಬಾದೆ "ಆ...?"
ಮಹಾಮಂತ್ರಿಗಳು ನುಡಿದರು "ಹೆದರಬೇಡ ಯುವಕ, ನೀನು ಗೂಢಚಾರನಾಗಬೇಕಾದರೆ ನೀನು ಮಾಯವಾಗಬೇಕು. ಯಾರೂ ನಿನ್ನನ್ನು ಗುರುತಿಸಬಾರದು. ಇದಕ್ಕೆ ನಿನಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಡಂಗೂರ ಹೊಡೆಸುವದಕ್ಕಿಂತ ಒಳ್ಳೆಯ ಉಪಾಯ ಬೇರಿಲ್ಲ"
ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈ ಯುವಕನ ಗೂಢಚಾರ ಶಿಕ್ಷಣೆ ಪ್ರಾರಂಭವಾಗಲಿ"
ಇಬ್ಬರೂ ಕೋಣೆ ಬಿಟ್ಟು ಹೊರಟು ಹೋದರು. ನನ್ನನ್ನು ಮತ್ತೆ ಕಣ್ಣು ಕಟ್ಟಿ ನನ್ನ ಕಾರಾಗ್ರಹಕ್ಕೆ ಕಳುಹಿಸಲಾಯಿತು. ನಾನು ಬರುವ ಮುಂಜಾವನ್ನು ಕಾಯ್ದು ಕುಳಿತೆ. ನನ್ನ ದೇಶ ಸುತ್ತುವಾಸೆ ಈ ನೆವದಲ್ಲಾದರೂ ಪೂರೈಸಬಹುದೆಂದು ಯೋಚಿಸುತ್ತ ಕಾಲ ಕಳೆದುಹೋಯಿತು.
ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು ಯೋಚಿಸತೊಡಗಿದೆ.
ಎಷ್ಟು ಹೊತ್ತು ಕಳೆದಿತ್ತೋ ನನಗೆ ತಿಳಿಯದು. ಮತ್ತೆ ರಾತ್ರಿಯಾಗಿರಬಹುದೆಂಬ ಅನಿಸಿಕೆ. ಏನೊ ಸದ್ದು ಕೇಳಿಸಿತು. ನೋಡುತ್ತಿದ್ದಂತೆಯೇ ನನ್ನ ಕಾರಾಗ್ರಹದ ಕೋಣೆಯ ನೆಲದೊಳಗಿಂದ ಒಂದು ಚೌಕ ಬೆಳಕು ಕಾಣಿಸಿತು. ನೆಲದೊಳಗೆ ಒಂದು ಬಾಗಿಲು ತೆರೆಯಿತು. ಇಬ್ಬರು ಭಟರು ಬಂದು "ನಡೆ ನಮ್ಮ ಜೊತೆ" ಎಂದಷ್ಟೆ ಹೇಳಿದರು. ನನಗೆ ಮಾತನಾಡಲು ಅವಕಾಶವಾಗಲಿಲ್ಲ. ಅವರೊಂದಿಗೆ ಆ ಬಾಗಿಲೊಳಗಿನಿಂದ ಸುರಂಗ ಮಾರ್ಗವಾಗಿ ಎಲ್ಲಿಗೋ ಕರೆದೊಯ್ದರು. ಹೀಗೆ ಸ್ವಲ್ಪ ಹೊತ್ತು ನಡೆದ ಮೇಲೆ ಸುರಂಗದಿಂದ ಆಚೆ ಹೋದೆವು. ಮೂರು ಕುದುರೆಗಳನ್ನು ಕುದುರೆ ಏರಿದ ಮತ್ತೊಬ್ಬ ಕಾಯ್ದು ನಿಂತಿದ್ದ.
"ಕುದುರೆ ಸವಾರಿ ಬಲ್ಲೆಯಾ?" ಭಟರಲ್ಲೊಬ್ಬ ಕೇಳಿದ.
ನಾನೆಂದೂ ಕುದುರೆ ಏರಿದವನಲ್ಲ. "ಇಲ್ಲ" ನಾನು ಉತ್ತರಿಸಿದೆ.
"ಇಂಥವರನ್ನು ಎಲ್ಲಿಂದ ಹಿಡಿಯುತ್ತಾರೋ" ಎಂದು ಗೊಣಗುತ್ತ "ರಿಕಾಬಿನೊಳಗೆ ಎಡಗಾಲು ಹಾಕಿ ಬಲಗಾಲು ಕುದುರೆಯ ಬೆನ್ನಮೇಲೆ ಹಾಕು... ಹೀಗೆ" ಎಂದ ಒಬ್ಬ ಹೇಳಿದ ಮಾತಿಗೆ ಕ್ರಿಯೆ ತೋರಿಸುತ್ತ.
ನಾನು ಪ್ರಯತ್ನಿಸಿದೆ. ಅವನು ತೋರಿಸಿದಷ್ಟು ಸುಲಭವಾಗಿರಲಿಲ್ಲ. ಅಂತೂ ಅವರುಗಳ ಸಹಾಯದಿಂದ ಕುದುರೆ ಏರಿ ನಾನೂ ಅವರೊಂದಿಗೆ ಹೊರಟೆ. ಮೊದಲಿಗೆ ಸ್ವಲ್ಪ ಕಷ್ಟವಾದರೂ ಸಾಗುತ್ತಿದ್ದಂತೆ ಅಳವಡಿಸಿಕೊಂಡು ಕೊನೆಗೆ ಸುಲಭವಾಗಿಯೇ ಸವಾರಿ ಮಾಡ ತೊಡಗಿದೆ. ಮಾರನೆಯ ದಿನ ಮಧ್ಯಾಹ್ನದವರೆಗು ಹೀಗೆ ಅರಣ್ಯದೊಳಗೆ ಹೋಗುತ್ತಿದ್ದು, ಸೂರ್ಯ ನೆತ್ತಿಗೇರುವಷ್ಟು ಹೊತ್ತಿಗೆ ನಮ್ಮ ಗುರಿ ತಲುಪಿದೆವು. ಕಾಡಿನ ಮಧ್ಯೆ ಒಂದು ಸಣ್ಣ ಬಿಡಾರದಂತಿತ್ತು. ನನಗೀಗ ಅರ್ಥವಾಯಿತು. ಇದು ಗೂಢಚಾರ ಪಾಠಶಾಲೆ. ಗೂಢಚರ್ಯೆಯ ಶಿಕ್ಷಣಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿತ್ತು.
ಕಾಲ ಕಳೆದಂತೆ ಏನೇನೊ ಶಿಕ್ಷಣ ಹೊಂದಿದೆ. ಗೂಢಚರ್ಯೆ ಪ್ರಪಂಚದ ಎರಡನೇ ಹಳೆಯ ವೃತ್ತಿ. ವರುಣದೇವನೇ ಇದರ ಮೂಲ ಗುರುವಂತೆ. ಅಂತೆಯೇ ನನ್ನ ಗುರುವಿನ ಹೆಸರೂ ವರುಣಾಚಾರ್ಯ ಎಂದೇ ಆಗಿತ್ತು.
ಹಲವು ಮಾಸಗಳು ಕಳೆದವು. ಕಾಲ ಕಳೆದಂತೆ ನಾನು ಆ ಎಲ್ಲ ವಿಷಯಗಳಲ್ಲಿ ನಿಪುಣನಾಗತೊಡಗಿದೆ.
ಒಂದು ದಿನ ವರುಣಾಚಾರ್ಯರು ನನ್ನನ್ನು ಅವರ ಬಳಿ ಕರೆದು ಹೇಳಿದರು "ಇಂದಿಗೆ ನಿನ್ನ ಶಿಕ್ಷಣೆ ಮುಕ್ತಾಯವಾಯಿತು. ನಾನು ಹೇಳಿರುವ ಎಲ್ಲ ವಿಷಯಗಳನ್ನು ಯಾವಾಗಲೂ ನೆನಪಿರಲಿ"
"ಹಾಗೆಂದರೆ ... " ನಾನು ಹೇಳಿದೆ
"ನೀನು ಇಲ್ಲಿಂದ ಹೊರಡುವ ಕಾಲ ಬಂದಿದೆಯೆಂದು ಅರ್ಥ" ಎಂದು ಹೇಳಿದರು
"ಮುಂದೇನು?" ನಾನು ಕೇಳಿದೆ
"ನಿನ್ನ ಶಿಷ್ಯವೃತ್ತಿಯಿಂದ ನಾನು ಪ್ರಸನ್ನನಾಗಿದ್ದೇನೆ. ವಾತಾಪಿ ನಗರಕ್ಕೆ ಹಿಂತಿರುಗು. ಮಹಾಮಂತ್ರಿಗಳಿಗೆ ನೇರವಾಗಿ ವರದಿ ಒಪ್ಪಿಸುವ ರಾಯಭಾರ ಹೊತ್ತಿರುವ ಸಂಘದಲ್ಲಿ ನೀನೊಬ್ಬ ಪದಾತಿ. ಈ ಓಲೆ ತೆಗೆದುಕೊಂಡು ಸುರಂಗ ಮಾರ್ಗವಾಗಿ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗು. ಮುಂದಿನದನ್ನು ಅವರೇ ನೋಡುತ್ತಾರೆ" ಎಂದು ಹೇಳಿ ಒಂದು ಓಲೆ ನನ್ನ ಕೈಗಿತ್ತು, ನಾನು ಹೋಗಬೇಕಾಗಿರುವ ಸ್ಥಳದ ವಿವರಗಳನ್ನು ಕೊಟ್ಟರು.
ನಾನು ಅವರಿಗೆ ನಮಿಸಿ, ಪ್ರವರ ಹೇಳಿ ಹೊರಬಿದ್ದೆ. ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡತೊಡಗಿದೆ.
ಇನ್ನೂ ಸ್ವಲ್ಪ ಕತ್ತಲಾಗುವವರೆಗೆ ಕಾಯ್ದು ಮನೆ ಕಡೆ ಕುದುರೆ ತಿರುಗಿಸಿದೆ. ಸ್ವಲ್ಪ ದೂರದಲ್ಲೇ ಕುದುರೆಯನ್ನು ಕಟ್ಟಿ ಹಾಕಿ ಮನೆಯವರೆಗೆ ನಡೆದೇ ಹೋದೆ. ಮನೆಯಲ್ಲಿ ಯಾರಿರುವರು ಏನೂ ತಿಳಿಯದು. ಯಾರಿಗಾದರೂ ಕಾಣಿಸಿದರೆ? ನಾನು ಮಹಾರಾಜನ ಬೇಟೆ ತಪ್ಪಿಸಿದಾಗ ನನಗೆ ಗಡ್ಡ ಮೀಸೆಗಳಿರಲಿಲ್ಲ. ಈಗ ಪೂರ್ಣ ಗಡ್ಡ ಮೀಸೆಗಳಿದ್ದವು. ತಲೆಯ ಮೇಲಿದ್ದ ಜಟೆ ಈಗ ಹೋಗಿ ತಲೆ ತುಂಬ ಕೂದಲಿತ್ತು. ಎಂದೂ ತಲೆಗೆ ಪೇಟ ಧರಿಸದವ ಈಗ ಪೇಟ ಧರಿಸಿದ್ದೆ. ಯಾರೂ ನನ್ನನ್ನು ಗುರುತು ಹಿಡಿಯುವಂತೆ ಇರಲಿಲ್ಲ. ಆದರೂ ಮನೆಯೊಳಗೆ ಹೋಗಲು ಹೆದರಿ ಮರೆಯಲ್ಲೇ ಕಾಯ್ದು ನಿಂತೆ.
ಸ್ವಲ್ಪ ಹೊತ್ತಿನಲ್ಲಿ ಮನೆಯ ಕದ ತೆರೆದು ಅಮ್ಮ ಆಚೆ ಬಂದರು. ನಾನು ಮರೆಯಿಂದ ಇಳಿದು ಅಮ್ಮನ ಕಡೆ ನಡೆದೆ.
"ಯಾರಲ್ಲಿ" ಅಮ್ಮ ಕೂಗಿದರು.
"ನಾನು... ಅಮ್ಮ" ಎಂದು ಹತ್ತಿರಹೋದೆ.
"ಯಾರಪ್ಪ ನೀನು.... ಸೂರ್ಯ" ಅಮ್ಮ ಆಶ್ಚರ್ಯಪಟ್ಟರು.
"ಹೌದು, ನಾನೆ" ನಾನು ಹೇಳಿದೆ.
"ಏನಾಯಿತು? ಹೇಗೆ ತಪ್ಪಿಸಿಕೊಂಡೆ? ಈಗ ಎಲ್ಲಿರುವೆ? ಏನೀವೇಷ?" ಒಟ್ಟಿಗೆ ಪ್ರಶ್ನೆಗಳ ಸುರಿಮಳೆ ಮಾಡಿದರು
"ಒಂದೊಂದಾಗಿ ಹೇಳುವೆ. ನಾನು ತಪ್ಪಿಸಿಕೊಳ್ಳಲಿಲ್ಲ, ನನ್ನನ್ನು ಬಿಟ್ಟರು. ಇಷ್ಟು ದಿನ ಊರಿನಲ್ಲಿರಲಿಲ್ಲ ಇಂದು ಬಂದೆ. ನನಗಾವ ಅಪಾಯವೂ ಇಲ್ಲ ಹೆದರಬೇಡ. ನನ್ನ ಕಾಯಕಕ್ಕಾಗಿ, ಯಾರಿಗೂ ಗುರುತು ಸಿಗಬಾರದೆಂದು ಈ ವೇಷ" ನಾನೂ ಎಲ್ಲ ಒಟ್ಟಿಗೆ ಉತ್ತರಿಸಿದೆ.
"ಕಾಯಕಕ್ಕೆ ವೇಷವೇ? ಏನು ಕಾಯಕ? ಕಳ್ಳನಾಗಿರುವೆಯಾ?" ಪ್ರಶ್ನಿಸಿದರು
"ಇಲ್ಲ ಅಮ್ಮ, ನಾನು ಕಳ್ಳನಲ್ಲ. ದೇಶಸೇವೆಯ ಕೆಲಸ, ಆದರೆ ಗುಪ್ತ ಈಗ ಹೇಳಲಾರೆ" ಎಂದು ಉತ್ತರಿಸಿದೆ
"ಇದೇಕೆ ಹೀಗೆ? ಒಳಗೆ ಬಾ. ಮನೆಯವರನ್ನೆಲ್ಲ ನೋಡುವುದಿಲ್ಲವೆ?" ಅಮ್ಮ ಕೇಳಿದರು
"ನೋಡುವೆ, ಆದರೆ ಈಗಲ್ಲ. ನಾನು ಈಗ ಬೇರೆಲ್ಲೋ ಹೋಗಬೇಕು. ಯಾರಿಗೂ ನನ್ನ ಬಗ್ಗೆ ಹೇಳಬೇಡ" ಎಂದೆ.
"ಇಷ್ಟು ದಿನದ ಮೇಲೆ ಬಂದಿರುವೆ, ಇಷ್ಟು ಬೇಗ ಹೊರಟೆಯಾ?" ಎಂದರು
"ನಾನು ಕಳಿಸಿದ ಓಲೆ ಸಿಕ್ಕಿತೋ ಇಲ್ಲವೋ?" ನಾನು ಪ್ರತಿ ಪ್ರಶ್ನಿಸಿದೆ.
"ಸಿಕ್ಕಿತು, ಆದರೆ ಅದರಲ್ಲಿ ಏನೂ ವಿವರಣೆ ಇರಲಿಲ್ಲ. ಅದೊಂದೆ ನಮ್ಮಿಬ್ಬರಿಗೂ ಆಶಾಜನಕವಾಗಿತ್ತು. ಈಗಲಾದರೂ ನಿಜ ಸಂಗತಿ ಹೇಳು" ಎಂದು ಹೇಳಿದರು
"ಅಮ್ಮ, ತುಂಬಾ ಹೊಟ್ಟೆ ಹಸಿವಾಗಿದೆ. ತಿನ್ನಲು ಏನಾದರೂ ಇದೆಯೆ?" ಎಂದು ಕೇಳಿದೆ ಮಾತು ಮರೆಸಲು.
ಅಮ್ಮ ಒಳಗೆ ಹೋಗಿ ಬಟ್ಟೆಯಲ್ಲಿ ಕಟ್ಟಿ ಏನೋ ಬುತ್ತಿ ತಂದರು. ನಾನು ನಮ್ಮ ತಂದೆಯವರ ಬಗ್ಗೆ ವಿಚಾರಿಸಿದೆ. "ಅಪ್ಪ ಎಲ್ಲಿದ್ದಾರೆ ಹೇಗಿದ್ದಾರೆ?"
"ಒಳಗಿದ್ದಾರೆ. ನಾನು ಹಸು ನೋಡುವ ನೆಪ ಮಾಡಿ ಬಂದಿರುವೆ" ಎಂದರು
ಮತ್ತೆ ಪುಟ್ಟ ಹುಡುಗನೆನಿಸಿತು. ಅಮ್ಮ ತಂದ ಬೋಸಿ ನೀರಲ್ಲಿ ಕೈತೊಳೆದು, ಬುತ್ತಿ ತೆಗೆದೆ. ಅಮ್ಮ ತಮ್ಮ ಕೈಯಿಂದಲೇ ತಿನ್ನಿಸಿದರು. ಇಬ್ಬರೂ ಸ್ವಲ್ಪ ಕಣ್ಣೀರು ಹಾಕಿದೆವು. ಸ್ವಲ್ಪ ಹೊತ್ತಿನ ಬಳಿಕ ಊಟ ಮುಗಿಸಿ ಕೈತೊಳೆದು ಹೇಳಿದೆ.
"ಅಪ್ಪನಿಗೆ ತಿಳಿದರೂ ಯಾವಕಾರಣಕ್ಕೂ ಬೇರೆಯಾರಿಗೂ ತಿಳಿಯಬಾರದು, ನಾನಿನ್ನು ಹೊರಡಬೇಕು" ಎಂದು ಎದ್ದೆ.
ಅಷ್ಟು ಹೊತ್ತಿಗೆ ಅಪ್ಪ ದೀಪ ಹಿಡಿದು ಬಾಗಿಲಾಚೆ ಬಂದರು. "ಯಾರು...? ಯಾರಲ್ಲಿ...?"
ನಾನು ಅಮ್ಮನ ಚರಣ ಸ್ಪರ್ಶಿಸಿ, ಬೇಗನೇ ಅಪ್ಪನ ಬಳಿ ಹೋಗಿ "ನಾನು ಸೂರ್ಯ, ಅಮ್ಮನಿಗೆ ಎಲ್ಲ ವಿಷಯ ಹೇಳಿರುವೆ, ಯಾವಕಾರಣಕ್ಕೂ ನನ್ನ ಹೆಸರು ಕೂಗಬೇಡಿ ನಾನೀಗಲೇ ಹೋಗಬೇಕು" ಎಂದು ಹೇಳಿ ಅವರ ಚರಣ ಸ್ಪರ್ಶಿಸಿ, ಕುದುರೆಯ ಕಡೆ ಓಡಿ ಹೊರಟು ಹೋದೆ.
"ಅವನು ನಮ್ಮ ಸೂರ್ಯ! ನೋಡಿದೆಯಾ? ನಾನು ಹೇಳುತ್ತಿರಲಿಲ್ಲವೇ? ನಮ್ಮ ಸೂರ್ಯ....." ಎಂದು ಅಮ್ಮನಿಗೆ ಹೇಳುತ್ತಿದ್ದ ಅಪ್ಪನ ಧ್ವನಿ ನಾನು ಓಡುತ್ತಿದ್ದಂತೆ ದೂರದಲ್ಲಿ ಕುಂದುತ್ತಿತ್ತು.
ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ ಹೊಕ್ಕೆ.
ಗುಡಿಯೊಳಗೆ ಒಂದು ಕಲ್ಲಿನ ಮೂರ್ತಿ. ಮೂರ್ತಿಯ ಹಿಂದೆ ನಡೆದು ಹೋದೆ. ಅಲ್ಲಿದ್ದ ಒಂದು ಸಣ್ಣ ಗುಬುಟನ್ನು ಒತ್ತಿದಾಗ ನನ್ನ ಕಾರಾಗ್ರಹದ ನೆಲದ ಮೇಲೆ ಬಾಗಿಲು ತೆರೆದಂತೆ ಇಲ್ಲೂ ನೆಲದಲ್ಲಿ ನಿಶ್ಯಬ್ದವಾಗಿ ಒಂದು ಬಾಗಿಲು ತೆರೆಯಿತು. ಇಳಿದುಹೋಗಲು ಮೆಟ್ಟಲುಗಳಿದ್ದವು. ನಿಧಾನವಾಗಿ ಮೆಟ್ಟಲು ಇಳಿದು ಸುರಂಗದೊಳಗೆ ಹೊಕ್ಕೆ. ಒಂದು ಸಣ್ಣ ದೀಪ ಉರಿಯುತ್ತಿತ್ತು. ಒಳಗಿನಿಂದ ಬಾಗಿಲು ಮುಚ್ಚುವ ಗುಬುಟು ಒತ್ತಿದೆ. ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿತು. ದೀಪವನ್ನೆತ್ತಿಕೊಂಡು ಸುರಂಗದಲ್ಲಿ ನಡೆದು ಹೊರಟೆ.
ಸ್ವಲ್ಪ ಕಾಲ ನಡೆದು ಹೋದೆ. ಉದ್ದಕ್ಕೂ ನಾನು ವಾತಾಪಿ ನಗರದ ಕೆಳಗೆ ಹೋಗುತ್ತಿರಬಹುದೆಂಬ ನಿರೀಕ್ಷೆ. ಕೊನೆಗೆ ಒಂದು ಬಾಗಿಲ ಎದುರಿಗೆ ಬಂದು ನಿಂತೆ. ಬಾಗಿಲನ್ನು ಗುಪ್ತ ಸಂಜ್ಞೆಯಲ್ಲಿ ತಟ್ಟಿದೆ. ಬಾಗಿಲು ತೆರೆಯಿತು; ಒಳಗೆ ಹೋದೆ. ಅಲ್ಲಿ ಹಲವಾರು ಜನ ಕೂಡಿದ್ದರೂ ನನ್ನೊಡನೆ ಮಾತನಾಡಲು ಯಾರೂ ಬರಲಿಲ್ಲ. ಮುಂದೇನೆಂದು ನಿರೀಕ್ಷಿಸುತ್ತಾ ಮೂಲೆಯೊಂದರಲ್ಲಿ ಕಾಯ್ದು ನಿಂತೆ.
"ಹಿಂದೆ ತಿರುಗಬೇಡ. ವರುಣಾಚಾರ್ಯರ ಓಲೆ ತೆಗೆದುಕೊಡು" ಎಂದು ನನ್ನ ಕಿವಿಯಲ್ಲಿ ಯಾರೋ ಹೇಳಿದಹಾಗಾಯಿತು. ಈ ಮೂಲೆಯಲ್ಲಿ ನನ್ನ ಕಿವಿಯೊಳಗೆ ಯಾರಿರಬಹುದೆಂದು ನನ್ನ ವಸ್ತ್ರಗಳೊಳಗಿಂದ ಓಲೆಯನ್ನು ತೆಗೆದು ಕೈಯಲ್ಲಿ ಹಿಡಿದೆ. ಒಂದು ಕ್ಷಣದಲ್ಲಿ ಮಾಯವಾಯಿತು, ಆದರೆ ಅಷ್ಟರಲ್ಲಿ ನಾನು ಗೋಡೆಯಲ್ಲಿದ್ದ ಸಣ್ಣ ಕಿಂಡಿಯ ಬಾಗಿಲು ಮುಚ್ಚುತ್ತಿರುವುದನ್ನು ನೊಡಿದೆ. ಅದರೊಳಗಿನಿಂದ ಯಾರೋ ಕೈ ಹಾಕಿ ಓಲೆ ತೆಗೆದುಕೊಂಡಿರಬೇಕು ಎಂದುಕೊಂಡೆ.
ಸ್ವಲ್ಪ ಹೊತ್ತಿನ ಬಳಿಕ, ಮಹಾಮಂತ್ರಿಗಳು ಹಾಗು ನನಗೆ ಗೊತ್ತಿಲ್ಲದ ಒಂದಿಬ್ಬರು ಒಟ್ಟಿಗೆ ಬಂದು ಸಭೆಯನ್ನು ಕೂಗಿದರು. ಮಹಾಮಂತ್ರಿಗಳು ನುಡಿದರು "ಮಹಾರಾಜ ಪುಲಿಕೇಶಿ ಸಿಂಹಾಸನವನ್ನೇರಿದ ಮೇಲೆ ಮೊದಲಿಗೆ ಭೀಮಾನದಿ ತೀರದಲ್ಲಿ ಅಪ್ಪಯಕ ಹಾಗು ಗೋವಿಂದರನ್ನು ಸದೆಬಡೆದರು. ಅಪ್ಪಯಕ ಯುದ್ಧಭೂಮಿಯಿಂದ ಹೇಡಿಯಂತೆ ಓಡಿಹೋಗಿ, ಸಾಮಂತ ಗೋವಿಂದ ಶರಣಾಗತನಾದ. ಈ ಯುದ್ಧದಲ್ಲಿ ನೀವೆಲ್ಲ ಸಲ್ಲಿಸಿದ ಸೇವೆ ನೆನೆಸಿಕೊಳ್ಳಿ"
"ನಂತರ ರಾಜ್ಯ ವಿಸ್ತಾರಣಾತ್ಮಕ ಯುದ್ಧಗಳು - ವೈಜಯಂತಿಯ ಅಳಿದುಳಿದ ಕದಂಬರು, ತಲಕಾಡಿನ ಗಂಗರು, ಕರಾವಳಿಯ ಅಳೂಪರನ್ನು ಚಾಳುಕ್ಯ ಸೇನೆಗಳು ಸೋಲಿಸಿದ್ದು ನಿಮ್ಮ ಸಹಾಯದಿಂದಲೆ. ಕೊಂಕಣ ಹಾಗು ಪುರಿ ಬಂದರಿನ ಕಡಲ ಯುದ್ಧದಲ್ಲಿ ಈ ತಂಡದ ಯೋಗದಾನ ಯಾರೂ ಹೇಳಬೇಕಾಗಿಲ್ಲ. ಗುರ್ಜರ ಪ್ರದೇಶದ ಗುರ್ಜರರು, ಲಾಟರು ಹಾಗು ಮಾಲವರು, ಇವರೆಲ್ಲ ಸಾಮಂತರಾಗಲು ಸಹ ನೀವೆಲ್ಲ ಕೆಲಸ ಮಾಡಿದ್ದೀರಿ. ಕೊನೆಗೆ ಕಾಂಚೀಪುರದ ಪಲ್ಲವಾಧೀಶ ಮಹೇಂದ್ರವರ್ಮನ ಪರಾಜಯದ ಪ್ರಕ್ರಿಯೆ ಪ್ರಾರಂಭವಾಗಿದ್ದೂ ಇಲ್ಲಿಂದಲೇ" ಎಂದು ಮೊದಲು ಹುರಿದುಂಬಿಸಿದರು.
"ಈಗ ಉತ್ತರಾಪಥೇಶ್ವರನಾದ ಹರ್ಷ ಚಕ್ರವರ್ತಿಯಕಡೆಯವರು ನರ್ಮದೆಯ ತೀರದಲ್ಲಿ ನಮ್ಮ ಮೇಲೆ ಧಾಳಿ ಮಾಡುವ ಯೋಜನೆ ಹೂಡುತ್ತಿದ್ದಾರೆಂಬ ಸೂಕ್ಷ್ಮ ಸುದ್ಧಿ ತಿಳಿದು ಬಂದಿದೆ. ಹರ್ಷ ಚಕ್ರವರ್ತಿ ಧಾಳಿ ಮಾಡುವ ಮುನ್ನವೇ ನಾವು ಅವರ ಮೇಲೆ ಧಾಳಿ ಮಾಡಬೇಕೆಂಬುದೇ ಮಹಾರಾಜ ಪುಲಿಕೇಶಿಯ ಇಚ್ಚೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿ ಮಹಾರಾಜ ಪುಲಿಕೇಶಿಗೆ ಜಯ ತರಿಸಿಕೊಡುವಿರಿ ಎಂಬ ನಂಬಿಕೆ ನನಗಿದೆ" ಎಂದು ಮುಂದುವರೆಸಿದರು.
ಇದಾದ ಮೇಲೆ ಮಹಾಮಂತ್ರಿಗಳು ಅಲ್ಲಿ ಸೇರಿದ್ದ ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಕೆಲಸಕ್ಕೆ ನೇಮಿಸಿದರು. ವೈರಿಯ ಸೇನೆಯ ಸಂಖ್ಯೆಗಳನ್ನು ತಿಳಿಯಲು ಒಬ್ಬ, ಅವರ ಬಿಡಾರಗಳ ಸ್ಥಳ ಗಳನ್ನು ತಿಳಿಯಲು ಮತ್ತೊಬ್ಬ, ಅವರು ಯುದ್ಧ ಭೂಮಿಗೆ ನಡೆದು ಬರುವ ದಾರಿ ತಿಳಿಯಲು, ಅವರ ಶಸ್ತ್ರಾಸ್ತ್ರಗಳ ವರದಿಗೆ, ಅವರಲ್ಲಿ ಒಡಕುಂಟು ಮಾಡುವ ಸಾಧನಗಳನ್ನು ಹೂಡಲು, ಅವರ ರಾತ್ರಿಯ ಕಾವಲು ಪದ್ಧತಿ ಹಾಗು ಕಾವಲುಗಾರರು ಬದಲಾಗುವ ಸಮಯಗಳನ್ನು ತಿಳಿಯಲು, ಹೀಗೆ ಏನೇನೊ ನಾನೆಂದೂ ಯೋಚಿಸದಂತಹ ಕಾರ್ಯಗಳಿಗೆ ಒಬ್ಬೊಬ್ಬರನ್ನು ನಿಯುಕ್ತಿಸಿದರು.
ಕಡೆಗೆ ಎಲ್ಲರೂ ತಮ್ಮ ತಮ್ಮ ಆಜ್ಞೆಗಳನ್ನು ಪಡೆದು ಈ ಕೋಣೆಯಲ್ಲಿದ್ದ ಹಲವಾರು ಬಾಗಿಲುಗಳಿಂದ ಹೊರಟುಹೋದರು. ನಾನಿನ್ನೂ ಅಲ್ಲೇ ಇದ್ದೆ. ಕೊನೆಗೆ ಮಹಾಮಂತ್ರಿಗಳು ನನ್ನನ್ನು ನೋಡಿದರು. "ಯುವಕ, ನಿನ್ನ ಶಿಕ್ಷಣೆ ಮುಗಿದಿದೆ. ವರುಣಾಚಾರ್ಯರು ಕೊಟ್ಟ ಓಲೆಯನ್ನು ನಾನು ಓದಿರುವೆ. ಅವರು ನಿನ್ನನ್ನು ಬಹಳ ಹೊಗಳಿದ್ದಾರೆ" ಎಂದರು.
ಒಂದು ಕ್ಷಣ ಮೌನ ತಳಿದು ಬಳಿಕ "ಮನೆಯ ಊಟ ರುಚಿಕರ ಅಲ್ಲವೆ?" ಎಂದರು
"ಆ....?"
"ಇರಲಿ, ನೀನು ಮನೆಗೆ ಹೋಗುವುದರಲ್ಲಿ ಸಂಶಯವೇ ಇರಲಿಲ್ಲ. ಈ ಸಂದರ್ಶನದ ಬಗ್ಗೆ ನಿನ್ನ ಅನಿಸಿಕೆಗಳು?" ಎಂದು ಕೇಳಿದರು
"ನಾನು ಏನು ಬೇಕಾದರೂ ಮಾಡಲು ಸಿದ್ಧ" ಎಂದೆ
"ನೀನು ಬ್ರಾಹ್ಮಣ. ನಿನ್ನ ಕೈಯಲ್ಲಿ ಅವರುಗಳು ಮಾಡುವ ಕೆಲಸ ಮಾಡಲಾಗುವುದಿಲ್ಲ. ಅವರುಗಳು ತರುವ ಸೂಚನೆ ಸುದ್ಧಿಗಳನ್ನು ಒಗ್ಗೂಡಿಸಿ, ಶೋಧಿಸಿ, ನಮಗೆ ಸಂಕ್ಷಿಪ್ತವಾಗಿ, ಯಾವ ವಿಷಯವೂ ಬಿಡದಂತೆ ಹೇಳುವುದು ನಿನ್ನ ಕೆಲಸ. ನೀನು ನಮ್ಮೊಡನೆ ನರ್ಮದಾ ತೀರದ ಯುದ್ಧ ಭೂಮಿಗೆ ಹೋಗುವ ಸಿದ್ಧತೆಗಳನ್ನು ಮಾಡಿಕೊ" ಎಂದು ನುಡಿದರು.
"ಸಿದ್ಧತೆಗಳು...?"
"ಏನಿದ್ದರೂ ಮಾಡಿಕೊ. ಇಂದು ರಾತ್ರಿ ಬೇಕಾದರೆ ಇಲ್ಲೇ ತಂಗುವ ಅವಕಾಶವಿದೆ. ನಾಳೆ ಬೆಳಗ್ಗೆ ಹೊರಡುವೆ" ಎಂದು ಹೇಳಿ ಹೊರಟುಹೋದರು.
ಅಂದು ಅಲ್ಲೇ ಮಲಗಿದ್ದೆ. ನನಗೀಗ ಮಲಗಲು ಹೆಚ್ಚು ಸಿದ್ಧತೆ ಬೇಕಾಗಿರಲಿಲ್ಲ. ಎಲ್ಲಿಯಂದರಲ್ಲಿ, ಮಲಗುವ ಸಾಮರ್ಥ್ಯ ಬೆಳೆಸಿಕೊಂಡಿದ್ದೆ. ಆದರೆ ಮಲಗಿದಾಗಲೂ ಒಂದು ಕಣ್ಣು ತೆರೆದೇ ಮಲಗಿರುತ್ತಿದ್ದೆ. ಮಾರನೆಯ ದಿನ ಬೆಳಗ್ಗೆ ಎದ್ದು ಸುರಂಗಮಾರ್ಗವಾಗಿ ಊರ ಹೊರಬಿದ್ದು ಮೊದಲೇ ನೇಮಿಸಿದ್ದ ಸ್ಥಳಕ್ಕೆ ಹೋದೆ. ಕುದುರೆ ಕಾದಿತ್ತು, ಜೊತೆಗೆ ಒಬ್ಬ ಭಟನೂ ಇದ್ದ. ಸ್ವಲ್ಪ ಪ್ರಯಾಣದ ನಂತರ ಮಹಾಮಂತ್ರಿಗಳೊಡನೆ ಕೂಡಿ ಅಲ್ಲಿಂದ ಒಟ್ಟಿಗೆ ಹೋರಟೆವು.
ನಾವು ಸುಮಾರು ಹದಿನೈದು ಜನ ಒಟ್ಟು. ದಿನ ನಿತ್ಯ ಸಂಜೆ ಯಾವುದಾದರು ನದಿ, ತೊರೆ ಅಥವ ಸರೋವರದ ಬಳಿ ಬಿಡಾರ ಊರುವುದು. ಮುಂಜಾವು ಎದ್ದು ಪ್ರಯಾಣ ಮುಂದುವರೆಸುವುದು. ಊರೂರುಗಳಲ್ಲಿ ಊಟ ಉಪಹಾರಗಳ ವ್ಯವಸ್ಥೆ ಹೇಗೋ ಅಗುತ್ತಿತ್ತು. ಮರಾಠ, ಮಾಳವ ಪ್ರದೇಶಗಳನ್ನು ಹಾಯ್ದು ಕೊನೆಗೆ ನರ್ಮದೆಯ ತೀರವನ್ನು ತಲುಪಿದೆವು. ಇಷ್ಟು ಪ್ರಯಾಣ ಸುಮಾರು ಒಂದು ಮಾಸ ಸಮಯ ತೆಗೆದುಕೊಂಡಿತ್ತು. ನರ್ಮದೆಯ ತೀರದಲ್ಲಿ ಒಂದು ಸಣ್ಣ ಪಟ್ಟಣವಾದ ವರಾಹಪುರಿ ನಮ್ಮ ಗುರಿಯಾಗಿತ್ತು.
ಊರಿನಿಂದ ಹಲವು ಕ್ರೋಶಗಳ ಹಿಂದೆಯೇ ಪರ್ವತಗಳಲ್ಲಿದ್ದ ಒಂದು ಗುಹೆ ಹೊಕ್ಕೆವು. ಇಲ್ಲಿ ಊರು ಸೇರುವ ಯೋಜನೆಯೊಂದನ್ನು ಹೂಡಿದೆವು. ಎಲ್ಲರೂ ಒಟ್ಟಿಗೆ ಹೋಗುವಂತಿಲ್ಲ. ಇಬ್ಬಿಬ್ಬರಾಗಿ, ಸಾಧ್ಯವಾದರೆ ಯಾರಾದರೂ ಹೆಂಗಸರೊಡಗೂಡಿ ಇಲ್ಲವಾದರೆ ನಮ್ಮಲ್ಲೆ ಯಾರಾದರು ಹೆಣ್ಣು ವೇಷ ಧರಿಸಿ ರಾತ್ರಿ ಸಮಯಗಳಲ್ಲಿ ಊರು ತಲುಪುವ ಯೋಜನೆಯಾಗಿತ್ತು. ಅದೇ ಊರಿನಲ್ಲಿದ್ದ ನಮ್ಮ ಪಡೆಯ ಒಬ್ಬ ಗೂಢಚಾರನ ಮನೆ ನಮ್ಮ ಕೇಂದ್ರವಾಗುವುದಿತ್ತು.
ಬಂದ ಹಲವು ದಿನಗಳಲ್ಲಿ ನಾವೆಲ್ಲರೂ ನಮ್ಮ ಈ ಕೇಂದ್ರವನ್ನು ಹೇಗೋ ತಲುಪಿದೆವು. ಗೂಢಚಾರರು ತಂದ ಸುದ್ಧಿಗಳಿಂದ ಯಾರಿಗೂ ನಾವು ಬಂದ ವಿಚಾರ ತಿಳಿದಿಲ್ಲವೆಂಬುದು ಖಚಿತವಾಯಿತು. ಮಹಾಮಂತ್ರಿಗಳು ಸ್ವಲ್ಪ ದಿನಗಳ ಕಾಲ ನಮ್ಮೊಡನೆಯೇ ಇದ್ದು ನನಗೆ ಇನ್ನಷ್ಟು ನಿರ್ದೇಶನ ನೀಡಿ ವಾತಾಪಿಗೆ ಹಿಂತಿರುಗಿದರು. ನಾನು ನನ್ನ ವಿಶ್ಲೇಷಣಾ ಕಾರ್ಯವನ್ನು ಆರಂಭಿಸಿದೆ. ನನಗೆ ಕೆಲಸ ಮಾಡಲು ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕತ್ತಲು ಕೋಣೆ ಕೊಡಲಾಗಿತ್ತು. ಮೇಲಿನಿಂದ ನೋಡಿದರೆ ಕಂಬಳಿ ಹಾಸಿದ್ದ ನೆಲ. ಕಂಬಳಿಯ ಕೆಳಗೆ ಒಂದು ಗುಪ್ತ ದ್ವಾರ. ಅದು ನನ್ನ ತಲೆಯ ಮೇಲೆ ತೆರೆಯುತ್ತಿತ್ತು. ಗಾಳಿ ಬರಲು ನಾಲ್ಕಾರು ಸಣ್ಣ ಕಿಂಡಿಗಳು ಬಿಟ್ಟರೆ ಹೊರ ಪ್ರಪಂಚಕ್ಕೆ ಸಂಪರ್ಕವೇ ಇರಲಿಲ್ಲ. ನನಗಾದರೋ ಬಿಡುವಿಲ್ಲದ ಕೆಲಸ.
ಹತ್ತಾರು ಗೂಢಚಾರರು ಸಂದೇಶಗಳನ್ನು ತಂದು ಕೊಡುತ್ತಿದ್ದರು. ಎಲ್ಲವನ್ನೂ ದಿನಕ್ಕೆ ಎರಡು ಬಾರಿ ನನ್ನ ಗೂಡಿನೊಳಕ್ಕೆ ಮೇಲಿನಿಂದ ಹಾಕುತ್ತಿದ್ದರು. ಇವೆಲ್ಲವನ್ನೂ ಓದಿ, ಒಗ್ಗೂಡಿಸಿ, ಸತ್ಯಾಸತ್ಯಗಳನ್ನು ಬೇರ್ಪಡಿಸಿ, ವರದಿ ಬರೆದು, ಅದನ್ನು ಗುಪ್ತ ಲಿಪಿಗೆ ಬದಲಿಸಿ ಮೇಲಕ್ಕೆ ಹಿಂತಿರುಗಿಸುವುದು ನನ್ನ ಕೆಲಸ. ಮೇಲಿನವರು ಅದನ್ನು ನಾನಾ ಮಾರ್ಗಗಳಲ್ಲಿ ವಾತಾಪಿಗೆ ಕಳುಹಿಸುತ್ತಿದ್ದರು. ಹೀಗೆಯೇ ನಾಲ್ಕು ಮಾಸಗಳು ಕಳೆದವು. ನನಗೆ ಹರ್ಷರಾಜನ ಚರಿತ್ರೆ, ಇತಿಹಾಸಗಳ ಬಗ್ಗೆ ಬಹಳಷ್ಟು ಮಾಹಿತಿ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು.
ಹರ್ಷವರ್ಧನನ ತಂದೆ ಪ್ರಭಾಕರವರ್ಧನ ಸ್ಥಾನೇಶ್ವರದ ಅರಸನಾಗಿದ್ದನು. ಪ್ರಭಾಕರವರ್ಧನನ ಹಿರಿಯ ಪುತ್ರ ರಾಜ್ಯವರ್ಧನ; ಹರ್ಷವರ್ಧನ ಕಿರಿಯ ಪುತ್ರ. ರಾಜ್ಯವರ್ಧನ-ಹರ್ಷವರ್ಧನರ ಸಹೋದರಿಯಾದ ರಾಜ್ಯಶ್ರೀ ಮೌಖಾರಿ ದೇಶದ ರಾಜ ಗೃಹವರ್ಮನ ವಧುವಾಗಿದ್ದಳು. ಪ್ರಭಾಕರವರ್ಧನನು ಮುಪ್ಪಿನಿಂದ ಮರಣಹೊಂದಿದ ದಿನವೇ ಆ ಸಮಯದಲ್ಲಿ ಮಾಳವ ದೇಶದ ರಾಜನು ಗೌಡದೇಶದ ರಾಜ ಶಶಾಂಕನನ್ನೊಡಗೂಡಿ ಹರ್ಷನ ಶ್ಯಾಲ ಗೃಹವರ್ಮನನ್ನು ಯುದ್ಧದಲ್ಲಿ ಸೋಲಿಸಿ, ಅವನನ್ನು ಕೊಂದು ಅವನ ಪತ್ನಿಯಾದ ರಾಜ್ಯಶ್ರೀಯನ್ನು ಕನ್ಯಾಕುಬ್ಜದಲ್ಲಿ ಬಂಧಿಸಿದ ಸುದ್ಧಿ ಸ್ಥಾನೇಶ್ವರವನ್ನು ಮುಟ್ಟಿತು.
ರಾಜ್ಯವರ್ಧನ ಇದರಿಂದ ಕೋಪಗೊಂಡು, ಹರ್ಷವರ್ಧನನನ್ನು ಸ್ಥಾನೇಶ್ವರದಲ್ಲಿಯೇ ಉಳಿಯಲು ಒಪ್ಪಿಸಿ, ತಾನೊಬ್ಬನೇ ಸೈನ್ಯದೊಡನೆ ಶಶಾಂಕ ರಾಜನ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋದನು. ತಂದೆಯನ್ನು ಕಳೆದುಕೊಂಡು, ಶ್ಯಾಲನ ಸಂಹಾರವಾಗಿರುವುದು ತಿಳಿದು ಸಹೋದರಿ ಬಂಧಿತಳಾಗಿರುವುದನ್ನು ಕೇಳಿ, ಭ್ರಾತೃ ಯುದ್ಧಕ್ಕೆ ಹೋದಾಗ ಕುಮಾರ ಹರ್ಷವರ್ಧನನಿಗೆ ಕಾಲ ಕಳೆಯಲಾಗದೆ ಮದವೇರಿದ ಆನೆಯಂತಾದನು. ಸ್ವಲ್ಪವೇ ಕಾಲದಲ್ಲಿ ರಾಜ್ಯವರ್ಧನನ ಸೇನಾಧಿಪತಿಯೊಬ್ಬನು ಶೋಕಭಾವದಲ್ಲಿ ಬಂದು "ರಾಜ್ಯವರ್ಧನನು ಮಾಳವ ಸೈನ್ಯವನ್ನು ಸುಲಭವಾಗಿ ಸೋಲಿಸಿದರೂ ಗೌಡರಾಜ ಅವನನ್ನು ಸಂಧಾನಕ್ಕೆಂದು ಕರೆದು ವಂಚನೆಯಿಂದ ಅವನ ಸಂಹಾರ ಮಾಡಿದನು" ಎಂದು ಹೇಳಲು, ಕುಮಾರ ಹರ್ಷನು ಕಿಡಿಕಿಡಿಯಾದನು.
"ಗೌಡ ರಾಜನನ್ನು ಬಿಟ್ಟು ಇಂತಹ ಹೀನ ಕೃತ್ಯವನ್ನು ಬೇರೆ ಯಾರು ಮಾಡಲು ಸಾಧ್ಯ? ಅಗ್ನಿಪುತ್ರನಾದ ದೃಷ್ಟದ್ಯುಮ್ನನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ದ್ರೋಣರನ್ನು ಕೊಂದಂತೆ! ಗಂಗಾನದಿಯ ನೊರೆಯಂತೆ ಅಕಳಂಕಿತನಾದ ಹಾಗು ಪರಶುರಾಮನ ವೀರ್ಯವನ್ನು ಮನಸ್ಸಿಗೆ ತರಿಸುವಂತಹ ನನ್ನ ಭ್ರಾತೃವನ್ನು ಕೊಲ್ಲುವ ಸಂಚು ಆ ಅನಾರ್ಯನನ್ನು ಬಿಟ್ಟು ಬೇರೆ ಯಾರ ಮನದಲ್ಲಿ ಬರಲು ಸಾಧ್ಯ? ಗ್ರೀಷ್ಮ ಋತುವಿನ ಸೂರ್ಯ ರಾಜೀವಪುಷ್ಪಗಳ ಸರೋವರಗಳನ್ನು ಬತ್ತಿಸುವಂತೆ ಸ್ನೇಹದಲ್ಲಿ ಕೈಯೊಡ್ಡಿ ನನ್ನ ಅರಸನ ಪ್ರಾಣ ಹೇಗೆ ತಾನೆ ತೆಗೆದಾನು? ಇವನ ಶಿಕ್ಷೆ ಏನಾದೀತು? ಯಾವ ಹುಳುವಾಗಿ ಪುನರ್ಜನಿಸುವನು? ಯಾವ ನರಕಕ್ಕೆ ಬಿದ್ದಾನು? ಯಾವ ಭ್ರಷ್ಟನೂ ಮಾಡದಂತಹ ಕೃತ್ಯವಿದು! ಈ ಪಾಪಿಯ ಹೆಸರನ್ನು ನನ್ನ ಜಿಹ್ವೆಗೆ ತಂದರೇ ನನ್ನ ಜಿಹ್ವೆ ಕಶ್ಮಲವಾಗುವುದು. ಸಣ್ಣ ಗೆದ್ದಲು ಚಂದನದ ಮರವನ್ನು ಕೊರೆಯುವಂತೆ ಯಾವ ವಿಧದಿಂದ ಈ ಕಠಿಣ ಪ್ರಾಣಿ ನನ್ನೊಡೆಯನ ಪ್ರಾಣ ತೆಗೆದ? ಸಿಹಿಯ ಲೋಭದಲ್ಲಿ ನನ್ನ ಭ್ರಾತೃವಿನ ಜೇನುತುಪ್ಪದಂತಹ ಪ್ರಾಣ ತೆಗೆದ ಮೂರ್ಖ, ಬರುತ್ತಿರುವ ಜೇನು ನೊಣಗಳ ಸಮೂಹವನ್ನು ನೋಡಲಿಲ್ಲವೇ? ಈ ದುರುಳ ಪಥಕ್ಕೆ ಬೆಳಕು ಚೆಲ್ಲಿ ಈ ಗೌಡರ ದುಷ್ಟ ತನ್ನ ಮನೆಯ ದೀಪದ ಕಜ್ಜಲದಂತೆ ಕೇವಲ ಮಲಿನ ನಾಚಿಕೆಗೇಡನ್ನೇ ಸಂಪಾದಿಸಿದ್ದಾನೆ. ಉತ್ತಮ ರತ್ನಗಳನ್ನು ಕೆಡಿಸುವ ಇಂತಹ ಕಶ್ಮಲ ರತ್ನವ್ಯಾಪಾರಿಗಳಿಗೆ ಶಿಕ್ಷೆ ಕೊಡುವುದು ಯಾರಿಗೆ ಸೂಕ್ತವಲ್ಲ? ಇವನ ಗತಿ ಇನ್ನೇನಾದೀತು?" ಎಂದೆಲ್ಲ ಹೇಳಿ ತನ್ನ ಕ್ರೋಧ ತೋಡಿಕೊಂಡನಂತೆ.
ಇತ್ತ ರಾಜ್ಯವರ್ಧನನ ಮರಣದಿಂದ ಸಿಂಹಾಸನ ಬರಿದಾಯಿತು. ಮಹಾಮಂತ್ರಿ ಭಂಧಿ ಪಂಡಿತರು "ದೇಶದ ಅನುಲೇಖ ಇಂದು ನಿರ್ಧಾರವಾಗಬೇಕಾಗಿದೆ. ಮಹಾರಾಜನು ಯುದ್ಧದಲ್ಲಿ ಮರಣ ಹೊಂದಿದ್ದಾನೆ, ಆದರೆ ಮಹಾರಾಜನ ಸಹೋದರನಾದ ರಾಜಕುಮಾರನು ಸಕಲ ಗುಣ ಸಂಪನ್ನನಾಗಿರುವನು. ರಾಜಕುಮಾರ ಮಹಾರಾಜನ ವಂಶದವನೇ ಆದರಿಂದ ಪ್ರಜೆಗಳಿಗೆ ಇವನ ಮೇಲೆ ನಂಬಿಕೆಯೂ ಇರುತ್ತದೆ. ಹಾಗಾಗಿ ರಾಜಕುಮಾರನೇ ರಾಜ್ಯಭಾರ ವಹಿಸಿಕೊಳ್ಳಬೇಕೆಂಬುದು ನನ್ನ ಅನಿಸಿಕೆ" ಎಂದು ಹೇಳಿದರು.
ಅದಕ್ಕೆ ಪ್ರತಿಯಾಗಿ ಹರ್ಷರಾಜನು "ನಿಮ್ಮ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ. ಆದರೆ ಭೂಮಿಯನ್ನು ಎತ್ತಿ ಹಿಡಿದಿರುವ ನಾಗರಾಜನನನ್ನೇ ಹಕ್ಕುದಾರನಾಗಿ ನೋಡುತ್ತಿರುವೆ. ಗ್ರಹಗಳು ಸುತ್ತುತ್ತಿರಲು ಅವುಗಳನ್ನು ನಿಲ್ಲಿಸಲು ನನ್ನ ಭ್ರೂಹಗಳು ಏಳುತ್ತವೆ. ಬಾಗದ ಪರ್ವತಗಳ ಕೇಶಗಳನ್ನೇ ಹಿಡಿದು ಬಗ್ಗಿಸುವ ಬಯಕೆ ನನಗೆ. ಆ ಆದಿತ್ಯನ ಕೈಗಳಿಗೇ ಶಂಖಗಳನ್ನು ಕೊಡುವ ಮನೋರಥ. ರಾಜನೆಂಬ ಬಿರುದಿನಿಂದಲೇ ಉದ್ರಿಕ್ತನಾಗಿ ವ್ಯಾಘ್ರನನ್ನೂ ನನ್ನ ಕಾಲುಮಣೆ ಮಾಡಿಕೊಳ್ಳಬೇಕೆನಿಸುತ್ತದೆ. ನನ್ನ ಮನವು ಕ್ರೋಧದಿಂದ ತುಂಬಿ ಶೋಕಕ್ಕೆ ಸ್ಥಳವೇ ಇಲ್ಲವಾಗಿದೆ. ಶಿಕ್ಷಾರ್ಹನಾದ ಗೌಡರಾಜ ಬದುಕಿರುವುದು ನನ್ನ ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿದೆ. ಆ ಕ್ರೂರ ಪ್ರಾಣಿಯ ಪತ್ನಿಯರ ಈಕ್ಷಣದಲ್ಲಿ ಆಶ್ರುಗಳ ಮಳೆ ಸುರಿಸದಿದ್ದರೆ ನಾನು ಆಚಮ್ಯವಾದರು ಹೇಗೆ ಮಾಡಲಿ? ಆ ಗೌಡರಾಜನ ಚಿತೆಯ ಧೂಮಕ್ಕಾಗಿ ಸ್ವಲ್ಪ ಆಶ್ರು ಕಾದಿರಿಸಿದ್ದೀನಿ. ನನ್ನೊಡೆಯನ ಪಾದದ ಧೂಳಿನ ಸಾಕ್ಷಿಯಾಗಿ ಪ್ರತಿಜ್ಞೆ ಮಾಡುವೆ - ಬರುವ ಕೆಲವೇ ದಿನಗಳಲ್ಲಿ ಗೌಡರನ್ನು ನಿರ್ಮೂಲ ಮಾಡಿ ಅವರ ಬೆಂಬಲಿಗರನ್ನು ಬಂಧಿಸದಿದ್ದರೆ ಪತಂಗ ಹುಳುವಿನಹಾಗೆ ಎಣ್ಣೆಯ ಅಗ್ನಿಯಲ್ಲಿ ಹಾರಿ ಪ್ರಾಣ ತ್ಯಜಿಸುತ್ತಿನಿ." ಎಂಬ ಘೋರ ಪ್ರತಿಜ್ಞೆ ಮಾಡಿದನು. ತನ್ನ ಸಹೋದರಿಯನ್ನು ವಿಧವೆಯಾಗಿಸಿ, ಬಂಧಿಸಿ, ತನ್ನ ಸಹೋದರನನ್ನು ಕೊಂದ ವೈರಿ ಇನ್ನು ಜೀವಂತವಾಗಿರಲು ಸಿಂಹಾಸನವನ್ನೇರಿ ರಾಜನಾಗಲು ನಿರಾಕರಿಸಿ, ರಾಜನ ಕುಮಾರನೆಂದೇ ರಾಯಭಾರ ಹೊತ್ತು ಶಿಲಾದಿತ್ಯನೆಂಬ ಬಿರುದು ಪಡೆದನು.
ಮೊದಲು ಮಾಳವರನ್ನು ಸದೆಬಡೆಯಲು ಹರ್ಷನು ಮಹಾಮಂತ್ರಿ ಭಂಧಿಯನ್ನು ಒಂದು ಅಪಾರ ಸೈನ್ಯದೊಡನೆ ಕಳುಹಿಸಿದನು. ಸ್ವಲ್ಪ ಕಾಲದ ನಂತರ ಭಟನೊಬ್ಬನು ಭಂಧಿ ಪಂಡಿತರು ಮಾಳವ ರಾಜನ ಸೈನ್ಯವನ್ನು ಸೋಲಿಸಿ ಶರಣಾಗತರಾಗುವಂತೆ ಮಾಡಿ ಹತ್ತಿರದಲ್ಲಿಯೇ ಬಿಡಾರ ಊರಿರುವರೆಂದು ಓಲೆ ತಂದು ಹರ್ಷನ ಮುಂದಿಟ್ಟನು. ಹರ್ಷನು ಭಂಧಿಯನ್ನು ಭೇಟಿ ಮಾಡಲು ಧಾವಿಸಿ, ರಾಜ್ಯಶ್ರೀಯ ವಿಷಯವನ್ನು ಕುರಿತು ಅವರನ್ನು ಕೇಳಿದನು. ಆಗ ಅವರು "ಮಹಾರಾಜ, ರಾಜ್ಯವರ್ಧನನ ಮರಣದನಂತರ ಕನ್ಯಾಕುಬ್ಜವನ್ನು ಗುಪ್ತನೆಂಬ ರಾಜನು ಗ್ರಹಿಸಿದನು ಎಂದು ಜನರ ಮಾತುಗಳಿಂದ ತಿಳಿದುಬಂದಿತು. ಆಗ ಮಹಾರಾಣಿ ರಾಜ್ಯಶ್ರೀ ಬಂಧನದಿಂದ ತಪ್ಪಿಸಿಕೊಂಡು ತನ್ನ ಸಖಿಯರೊಡನೆ ವಿಂದ್ಯಾ ಪರ್ವತಗಳ ಕಾಡಿಗೆ ಹೊರಟುಹೋದಳಂತೆ. ಅಂದಿನಿಂದ ಹತ್ತಾರು ಶೋಧಕ ವೃಂದಗಳು ಮಹಾರಾಣಿಯನ್ನು ಹುಡುಕಿಕೊಂಡು ಹೋಗಿದ್ದಾರೆ. ಆದರೆ ಯಾರಿಗೂ ಮಹಾರಾಣಿ ಸಿಕ್ಕಲಿಲ್ಲ" ಎಂದು ಹೇಳಿದರು.
ಇದನ್ನೂ ಕೇಳಿದ ಹರ್ಷವರ್ಧನನು ರಾಜ್ಯದ ಕೆಲಸಗಳಿಗೆ ಜನರನ್ನು ನೇಮಿಸಿ ಕುದುರೆ ಏರಿ ಒಂದು ಸಣ್ಣ ಸೈನಿಕರ ಗುಂಪಿನೊಡನೆ ರಾಜ್ಯಶ್ರೀಯನ್ನು ಹುಡುಕಲು ವಿಂಧ್ಯಾಚಲಕ್ಕೆ ತೆರಳಿದನು. ವಿಂಧ್ಯಾಚಲದಲ್ಲಿ ಭಿಲ್ಲ ಮುಖಂಡನೊಬ್ಬನು ಹರ್ಷರಾಜನನ್ನು ಅಗ್ನಿ ಪ್ರವೇಷ ಮಾಡಲು ಹೊರಟಿದ್ದ ರಾಜ್ಯಶ್ರೀಯ ಬಳಿ ಕರೆದೊಯ್ದು ಭ್ರಾತೃ-ಭಗಿನೀಯರ ಸಂಗಮಕ್ಕೆ ಕಾರಣನಾದನು.
ನಂತರ ಹರ್ಷನು "ಜಂಬೂದ್ವೀಪದಾದ್ಯಂತ ಎಲ್ಲ ರಾಜರಿಗೆ ಎರಡು ವಿಕಲ್ಪಗಳನ್ನು ಹೇಳಿ. ಕಪ್ಪ ಕಾಣಿಕೆ ಸಲ್ಲಿಸುವುದು ಇಲ್ಲವಾದರೆ ಯುದ್ಧಕ್ಕೆ ಸಿದ್ಧವಾಗುವುದು. ಅವರು ಬೇಕಾದರೆ ತಲೆ ಬಾಗಲಿ ಇಲ್ಲವಾದರೆ ಧನಸ್ಸು ಬಾಗಿಸಲಿ. ತಮ್ಮ ಕರ್ಣಗಳನ್ನು ನನ್ನ ಆಜ್ಞೆಯಿಂದ ಅಲಂಕರಿಸಲಿ ಇಲ್ಲವಾದರೆ ತಮ್ಮ ಧನಸ್ಸು ದೊರಕದಿಂದ ಅಲಂಕರಿಸಿಕೊಳ್ಳಲಿ. ತಮ್ಮ ತಲೆಯಮೇಲೆ ನನ್ನ ಪಾದದ ಧೂಳು ಹೊತ್ತುಕೊಳ್ಲಲಿ ಇಲ್ಲವಾದರೆ ಕಿರೀಟಗಳನ್ನು ಧರಿಸಲಿ. ನನ್ನ ಭ್ರಾತೃವಿನ ಹಂತಕರಿಗೆ ಶಿಕ್ಷೆ ವಿಧಿಸಿ, ಸುತ್ತ ಮುತ್ತಲಿನ ದೇಶಗಳಿನ್ನೂ ನಮ್ಮ ಹಿಡಿತಕ್ಕೆ ತಂದುಕೊಳ್ಳುವ ವರೆಗು ನಾನು ನನ್ನ ಬಲಗೈಯಿಂದ ಊಟಮಾಡುವುದಿಲ್ಲ" ಎಂದು ಮತ್ತೊಂದು ಪ್ರತಿಜ್ಞೆ ಮಾಡಿ ಎಲ್ಲರಿಗೂ ಯುದ್ಧಕ್ಕೆ ಸಿದ್ಧರಾಗುವ ಆಜ್ಞೆಮಾಡಿದನು. ಅಂತೆಯೇ ಐದು ಸಹಸ್ರ ಆನೆ, ಎರಡು ಸಹಸ್ರ ರಥ ಹಾಗು ಐವತ್ತು ಸಹಸ್ರ ಪದಾತಿಗಳ ಸೈನ್ಯದೊಡನೆ ಪೂರ್ವದಿಂದ ಪಶ್ಚಿಮದವರೆಗು ಎಲ್ಲರನ್ನೂ ಸದೆಬಡೆದನು. ಆರು ವರ್ಷಗಳ ಯುದ್ಧಾನಂತರ ಇಡೀ ಉತ್ತರಾಪಥವನ್ನು ತನ್ನ ಆಧೀನಕ್ಕೆ ತಂದುಕೊಂಡು ಅರವತ್ತು ಸಹಸ್ರ ಆನೆಗಳು ಹಾಗು ಒಂದು ಲಕ್ಷ ರಥಗಳ ಸೈನ್ಯ ಮಾಡಿಕೊಂಡು ಉತ್ತರಾಪಥೇಶ್ವರನೆಂಬ ಬಿರುದು ಹೊಂದಿ ಕೊನೆಗೆ ಸಿಂಹಾಸನವನ್ನೇರಿದನು.
ಈ ಸುದ್ಧಿಗಳೆಲ್ಲ ಬಂದಂತೆ ನಮಗೆ ಹರ್ಷರಾಜನು ಪುಲಿಕೇಶಿ ಅರಸನ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ಧಿಗಳೂ ತಲುಪಿದವು. ಆ ಅಪಾರ ಸೈನ್ಯವನ್ನು ಸಿದ್ಧಗೊಳಿಸಿ ದೇಶದ ಸೀಮೆಯಾದ ನರ್ಮದಾ ನದಿ ತೀರದಲ್ಲಿ ಬಿಡಾರ ಊರಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ವಾರ್ತೆಗಳೆಲ್ಲ ನಮಗೆ ತಿಳಿದುಬಂದ ಕ್ಷಣದಲ್ಲಿ ನಾನು ವಾತಾಪಿನಗರಕ್ಕೆ ಸಂದೇಶ ಕಳುಹಿಸಿದೆ. ಅಂತೆಯೇ ದಳಶಕ್ತಿಗಳು, ದೌರ್ಬಲ್ಯಗಳು, ಹಾಗು ಸೈನ್ಯಕ್ಕೆ ಸಂಬಂಧಿಸಿದ ಇತರ ವಾರ್ತೆಗಳನ್ನೂ ಕಳುಹಿಸಿದೆ.
ನೋಡುತ್ತಿದ್ದಂತೆಯೇ, ಕೆಲವೇ ದಿನಗಳಲ್ಲಿ ಎರಡೂ ಸೈನ್ಯಗಳು ನರ್ಮದೆಯ ತೀರದಲ್ಲಿ ಬಂದು ಎದುರಿಸಿ ನಿಂತವು. ದಕ್ಷಿಣ ತೀರದಲ್ಲಿ ಪುಲಿಕೇಶಿ ಅರಸನ ಸಮರ್ಥ ಧನುರ್ಧರರಿಂದ ಕೂಡಿದ ಅಪಾರ ಆನೆಯ ಸೈನ್ಯ, ಉತ್ತರ ತೀರದಲ್ಲಿ ನಿಪುಣ ಕುಂತಲಧರರಿಂದ ಕೂಡಿದ ಪ್ರಬಲ ರಥಗಳ ಸೈನ್ಯ. ಪುಲಿಕೇಶಿ ಅರಸ ಹಾಗು ಹರ್ಷರಾಜ ಇಬ್ಬರು ಘಟಾನುಘಟಿಗಳು ಯುದ್ಧಭೂಮಿಗೆ ತಮ್ಮ ತಮ್ಮ ಸೈನ್ಯಗಳನ್ನು ನಿರ್ದೇಶಿಸಲು ಬಂದು ನಿಂತರು.
ಘೋರ ಯುದ್ಧ ಆರಂಭವಾಯಿತು. ಹರ್ಷರಾಜನ ಕಡೆಯವರು ಕದನಕ್ಕೆ ನಾಂದಿ ಹಾಡುತ್ತ ನಮ್ಮನ್ನು ಕುಂತಲಗಳಿಂದ ಹಾಗು ದೊಡ್ಡ ದೊಡ್ಡ ಶಿಲೆಗಳನ್ನು ಎಸೆಯುವ ಆಯುಧಗಳಿಂದ ಆಕ್ರಮಣ ಮಾಡಿದರು. ಪುಲಿಕೇಶಿ ರಾಜನ ಧ್ಯೇಯ ನದಿಯನ್ನು ದಾಟಿ ಆಕ್ರಮಣ ಮಾಡುವುದಾಗಿತ್ತು. ಆದರೆ ವೈರಿಗಳು ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಸೈನಿಕರು ನೀರಿಗಿಳಿದಂತೆ ಅವರು ಶಿಲೆಗಳನ್ನು ಎಸೆದು ನಮ್ಮವರನ್ನು ಕೊಲ್ಲುತ್ತಿದ್ದರು ಇಲ್ಲವಾದರೆ ಗಾಯಗೊಳಿಸುತ್ತಿದ್ದರು. ಹಲವಾರು ದಿನ ಹೀಗೆಯೇ ನಡೆಯಿತು. ನಮ್ಮ ಸೈನ್ಯದ ಉತ್ಸಾಹ ಕಿಂಚಿತ್ತು ಕುಂದ ತೊಡಗಿತು.
ಕೊನೆಗೆ ನಮ್ಮ ಕಡೆಯ ಸೇನಾಪತಿಗಳು ನಮ್ಮ ಬಳಿ ಇದ್ದ ವಿಶಿಷ್ಟ ದರ್ಪಣಾಸ್ತ್ರವನ್ನು ಪ್ರಯೋಗಿಸುವ ನಿರ್ಣಯ ಮಾಡಿದರು. ಅಂತೆಯೇ ಮಾರನೆಯ ದಿನ ಸೂರ್ಯನು ನೆತ್ತಿಗೇರಿದಾಗ ನಮ್ಮ ಸೈನಿಕರು ನದಿಯಬಳಿ ಹೋಗಿ ನಿಂತರು. ಅವಕಾಶ ಸಿಕ್ಕಿದ ಕೂಡಲೆ ಅವರು ನದಿಯನ್ನು ದಾಟಿ ಆಕ್ರಮಣಮಾಡುವುದಾಗಿತ್ತು. ಅವಕಾಶ ದೊರಕಿಸುವುದು ದರ್ಪಣಾಸ್ತ್ರದ ಗುರಿಯಾಗಿತ್ತು. ದರ್ಪಣಾಸ್ತ್ರ ಪ್ರಯೋಗ ಮಾಡುವವರು ತೀರದಲ್ಲಿ ದೊಡ್ಡ ದೊಡ್ಡ ದರ್ಪಣಗಳನ್ನು ಹಿಡಿದು ನಿಂತರು. ಸೇನಾಧಿಪತಿಯಿಂದ ಅಪ್ಪಣೆ ಬರುತ್ತಲೇ ಈ ರಾಕ್ಷಸಗಾತ್ರದ ದರ್ಪಣಗಳನ್ನು ನೆಟ್ಟಗೆ ನಿಲ್ಲಿಸಿ ಸೂರ್ಯನ ಕಿರಣಗಳು ಅವುಗಳಿಂದ ಪ್ರತಿಬಿಂಬಿಸಿ ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಲಾಯಿತು. ಆ ಕೋಲಹಲದಲ್ಲಿ ನಮ್ಮ ಸೈನಿಕರು ನದಿಯೊಳಗೆ ಧುಮುಕಿ, ನದಿಯನ್ನು ದಾಟಿ ಶತ್ರುಗಳೊಡನೆ ಹೋರಾಡಲು ಆರಂಭಿಸಿದರು. ಸ್ವಲ್ಪವೇ ಕಾಲದಲ್ಲಿ ನಮ್ಮ ವೀರ ಸೈನಿಕರು ಹರ್ಷರಾಜನ ಸೈನ್ಯವು ದಿಕ್ಕಾಪಾಲಾಗಿ ಓಡುವಂತೆ ಮಾಡಿದರು.
ಕಂಗೆಟ್ಟ ಹರ್ಷರಾಜನ ಸೈನ್ಯವು ಪಲಾಯನ ಮಾಡಿತು. ಯುದ್ಧದ ಈ ಪಾದದಲ್ಲಿ ಹರ್ಷರಾಜನ ಸೈನ್ಯವು ಬಹಳಷ್ಟು ನಷ್ಟ ಹೊರಬೇಕಾಯಿತು. ನಮ್ಮಲ್ಲಿಯೂ ಸಾಕಷ್ಟು ಭಟರು ಹತರಾಗಿ ಮತ್ತಷ್ಟು ಜನ ಗಾಯಗೊಂಡಿದ್ದರೂ, ಯುದ್ಧದ ಈ ಹಂತ ನಮ್ಮದೆನಿಸಿತು. ಆದರೆ ಹರ್ಷರಾಜನು ಇನ್ನೂ ಸೋಲನ್ನೊಪ್ಪಿಲ್ಲವೆನ್ನುವುದನ್ನು ನಾವೆಲ್ಲ ಅರಿತಿದ್ದೆವು. ವೈರಿ ಸೈನ್ಯದ ಮುಂದಿನ ಸಂಚನ್ನು ಕಾಯ್ದು ನಮ್ಮ ತೀರದಲ್ಲಿಯೇ ಬಿಡಾರ ಮುನ್ನಡೆಸಿದೆವು. ಸ್ವಲ್ಪವೇ ಕಾಲದಲ್ಲಿ ಸ್ವತಃ ಹರ್ಷರಾಜನೇ ಮುಂದಾಳತ್ವ ವಹಿಸಿಕೊಂಡು ವಿಶಾಲ ಕುಂಜರ ಸೈನ್ಯದೊಡನೆ ಯುದ್ಧಭೂಮಿಗೆ ಬರುತ್ತಿರುವ ಸುದ್ಧಿ ಗೂಢಚಾರರಿಂದ ತಿಳಿಯಿತು.
ಮಾರನೆಯ ದಿನ ಮತ್ತೆ ಯುದ್ಧ ಪ್ರಾರಂಭವಾಯಿತು. ಮತ್ತೆ ಮೊದಲಿನಂತೆ ತುಲದ ಎರಡೂ ಕಡೆ ಒಂದೇ ಭಾರದಂತೆ ಯಾವ ಸೈನ್ಯಕ್ಕೂ ಏನೂ ಸಾಧಿಸಲಾಗಲಿಲ್ಲ. ಈ ಕಗ್ಗಂಟು ಬಹಳ ದಿನಗಳ ಕಾಲ ಸಾಗಿತು. ದರ್ಪಣಾಸ್ತ್ರದ ನವ್ಯತೆ ಮುಗಿದುಹೋಗಿ ಈಗ ಅವರು ಆ ಅಸ್ತ್ರ ಪ್ರಯೋಗಕ್ಕೆ ಸಿದ್ಧರಾಗಿದ್ದರು. ಸಂತುಲನವನ್ನು ಮುರಿಯಲು ಹಾಗು ವೈರಿಯ ಮೇಲೆ ಜಯ ಸಾಧಿಸಲು ಪುಲಿಕೇಶಿ ಅರಸನು ನಮ್ಮ ಮತ್ತೊಂದು ವಿಶೇಷ ಅಸ್ತ್ರವಾದ ಅಗ್ನಿಯಸ್ತ್ರವನ್ನು ಪ್ರಯೋಗ ಮಾಡುವ ನಿಶ್ಚಯ ಮಾಡಿದನು.
ರಾತ್ರಿ ಕತ್ತಲಾಗಿ ಸುಮಾರು ಹೊತ್ತಾಗಿತ್ತು. ಆಗ ಸದ್ದಿಲ್ಲದೆ ನಮ್ಮ ಧನುರ್ಧರರನ್ನು ಸಾಲಾಗಿ ನದಿಯ ನಮ್ಮ ಕಡೆಯ ತೀರದಲ್ಲಿ ನಿಲ್ಲಿಸಿದೆವು. ಅಗ್ನಿ ಶರಗಳನ್ನು ಸಿದ್ಧಗೊಳಿಸಿ ಧನುರ್ಧರರಿಗೆ ಒದಗಿಸುವವರೂ ಸಿದ್ಧರಾದರು. ಈ ಶರಗಳ ವಿಶಿಷ್ಟತೆ ಏನೆಂದರೆ ಇವು ಸಾಮಾನ್ಯ ಶರಗಳಿಗಿಂತ ಹೆಚ್ಚು ಉದ್ದವಾಗಿದ್ದು ಇವುಗಳಿಗೆ ತೈಲದಲ್ಲಿ ಹಾಗು ಕೀಲೆಣ್ಣೆಯಲ್ಲಿ ಅದ್ದಿ ಸಿದ್ಧಪಡಿಸಿದ ಉದ್ದವಾದ ವಸ್ತ್ರಗಳು ಸುತ್ತಲ್ಪಟ್ಟಿದ್ದವು. ಕೊನೆಗೆ ನಮ್ಮ ಅಗ್ನಿಯಸ್ತ್ರಗಳಿಗೆ ಅಗ್ನಿಯನ್ನು ಕೊಡುವ ಭಟರೂ ಸಿದ್ಧರಾಗಿ ನಿಂತರು. ಸೇನಾದಿಪತಿಯ ಆಜ್ಞೆ ಬಂದಂತೆ ಧನುರ್ಧರರು ಶರಗಳನ್ನು ಧನುಸ್ಸಿಗೆ ಏರಿಸಿ ದೊರಕವನ್ನು ಕಿವಿಗೆಳೆದರು, ಅಗ್ನಿ ಕೊಡುವ ಭಟರು ಶರಗಳಿಗೆ ಅಗ್ನಿ ತಗುಲಿಸಿದರು, ಧನುರ್ಧರರು ಆ ಶರಗಳ ಪ್ರಯೋಗ ಮಾಡಿದರು. ಅಷ್ಟು ಹೊತ್ತಿಗೆ ಶರ ಒದಗಿಸುವವರು ಹೊಸ ಶರಗಳನ್ನು ಸಂಯೋಜಿಸುತ್ತಿದ್ದರು.
ಆಗ್ನೇಯಸ್ತ್ರಗಳು ಹರ್ಷರಾಜನ ಸೈನ್ಯದ ಬಿಡಾರದ ಮೇಲೆ ಬಿದ್ದಂತೆ ಎಲ್ಲೆಡೆ ಕೋಲಾಹಲ. ವೈರಿಯ ಆನೆಗಳು ನಿಶೀತದಲ್ಲಿ ಬಂದು ಬೀಳುತ್ತಿದ್ದ ಅಗ್ನಿ ಜ್ವಾಲೆಗಳನ್ನು ಕಂಡು ಬೆದರಿ ತಮ್ಮ ಸೈನ್ಯದವರನ್ನೇ ತುಳಿದು ಓಡತೊಡಗಿದವು. ಎಲ್ಲೆಡೆ ಬೆಂಕಿ, ಶಿಬಿರಗಳೆಲ್ಲ ಧೂಮವಾಗಿ ಹೋದವು. ಮಾರನೆಯ ದಿನ ಪ್ರಾತಃ ಕಾಲದಲ್ಲಿ ಎದುರು ತೀರವನ್ನು ನೋಡಿದಾಗ ಅಲ್ಲಿ ಕಂಡದ್ದು ಕೇವಲ ಹತವಾದ ಕುಂಜರಗಳು, ಭಟರು; ಅಲ್ಲಿಗೆ ಯುದ್ಧವು ಮುಗಿದಿತ್ತು.
ಹರ್ಷರಾಜನನಿಗೀಗ ತಾನು ದಕ್ಷಿಣಾಪಥವನ್ನು ಜಯಿಸುವುದು ಅಸಾಧ್ಯವೆಂದು ಮನದಟ್ಟಾಗಿತ್ತು. ಪುಲಿಕೇಶಿ ಅರಸನು ಯುದ್ಧದಲ್ಲಿ ಜಯ ಹೊಂದಿದರೂ ಹರ್ಷರಾಜನ ಶಕ್ತಿ ಹಾಗು ಪ್ರಾಬಲ್ಯತೆ ಅರಿತಿದ್ದನು. ಉತ್ತರಾಪಥವನ್ನು ತನ್ನದಾಗಿಸಿಕೊಳ್ಳುವುದು ಸುಲಭಕಾರ್ಯವಲ್ಲವೆಂಬುದೂ ಅರಿತಿದ್ದನು. ಕೆಲವು ದಿನಗಳ ನಂತರ ವೈರಿ ಪಡೆಯ ಒಬ್ಬ ದೂತನು ಹರ್ಷರಾಜನ ಓಲೆಯೊಂದನ್ನು ತೆಗೆದುಕೊಂಡು ಬಂದನು.
ದೂತನನ್ನು ಪುಲಿಕೇಶಿಯ ರಾಜ್ಯ ಸಭೆಗೆ ಕರೆಸಲಾಯಿತು. ದೂತನು ಪುಲಿಕೇಶಿ ಅರಸನಿಗೆ ತಲೆಬಾಗಿ ಕಾಣಿಕೆ ಸಲ್ಲಿಸಿ, ನಂತರ "ಮಹಾರಾಜ ಪುಲಿಕೇಶಿಗೆ ಜಯವಾಗಲಿ. ನನ್ನ ಒಡೆಯನಾದ ಹರ್ಷವರ್ಧನ ಮಹಾರಾಜನ ಕಡೆಯಿಂದ ಓಲೆಯೊಂದನ್ನು ತಂದಿರುವೆ. ಅದನ್ನು ಓದಿ ಹೇಳುವ ಅಪ್ಪಣೆ ಬೇಡುವೆ" ಎಂದು ಹೇಳಿದನು.
"ಅಪ್ಪಣೆ ಇದೆ" ಅರಸ ಉತ್ತರಿಸಿದನು.
"ಹರ್ಷವರ್ಧನ ಚಕ್ರವರ್ತಿ ಚಾಳುಕ್ಯರ ಕಡೆ ಸಂಧಾನದ ಕೈ ಬೆಳೆಸಲು ಸಿದ್ಧರಾಗಿರುತ್ತಾರೆ. ಅವರು ಪುಲಿಕೇಶಿ ಮಹಾರಾಜರೊಡನೆ ಕೂಡಿ ಸಂಧಾನದ ವಿವರಗಳನ್ನು ಚರ್ಚಿಸುವ ಅನುಮತಿಯನ್ನು ಕೇಳುತ್ತಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಪುಲಿಕೇಶಿ ಮಹಾರಾಜರು ಹರ್ಷ ಚಕ್ರವರ್ತಿಯ ಆತಿಥ್ಯವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಹೊಂದಿರುತ್ತಾರೆ. ಪುಲಿಕೇಶಿ ಮಹಾರಾಜರು ದೂತರ ಮೂಲಕ ಉತ್ತರ ಕಳುಹಿಸಲೆಂದು ಕೋರುತ್ತಾರೆ" ಎಂದು ದೂತನು ಓಲೆಯನ್ನೋದಿದನು.
"ನಮ್ಮ ಮಂತ್ರಿಗಳ ಜೊತೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಉತ್ತರ ಕೊಡುವೆವು. ಅಲ್ಲಿಯವರೆಗು ಈ ದೂತನನ್ನು ನಮ್ಮ ಅತಿಥಿಯಾಗಿ ಕಾಣುವುದು" ಎಂದು ಹೇಳಿ ಪುಲಿಕೇಶಿ ಅರಸ ಸಭೆಯನ್ನು ಅಂತ್ಯ ಗೊಳಿಸಿದನು.
ಕಾಲ ಕ್ರಮೇಣವಾಗಿ ಸಂಧಾನ ಧೃಡವಾಯಿತು. ಅದರ ಪ್ರಕಾರ ಪುಲಿಕೇಶಿ- ಹರ್ಷವರ್ಧನರ ಸಾಮ್ರಾಜ್ಯಗಳ ಸೀಮೆ ನರ್ಮದಾ ನದಿಯೆಂದು ನಿಶ್ಚಯ ಮಾಡಲಾಯಿತು. ಯಾರೊಬ್ಬರೂ ಇನ್ನೊಬ್ಬರ ಮೇಲೆ ಯುದ್ಧ ಆರಂಭಿಸಬಾರದೆಂಬ ವ್ಯವಸ್ಥೆಯೂ ಆಯಿತು. ಇದರ ಬದಲಾಗಿ ಪುಲಿಕೇಶಿ ಅರಸನಿಗೆ ಹರ್ಷರಾಜನು ಐದು ಸಹಸ್ರ ಆನೆಗಳು ಹಾಗು ನೂರು ಮಣ ಬಂಗಾರ, ರತ್ನ ವಜ್ರ ವೈಢೂರ್ಯಗಳನ್ನು ಕಾಣಿಕೆಯಾಗಿ ಕೊಟ್ಟು, ದಕ್ಷಿಣಾಪಥೇಶ್ವರನೆಂಬ ಬಿರುದನಿತ್ತು ಸನ್ಮಾನಿಸಿದನು.
ಪುಲಿಕೇಶಿ ಮಹಾರಾಜನು ಸಾಧಿಸಿದ ದಿಗ್ವಿಜಯದಿಂದ ಅವನು ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಒಡೆಯನಾಗಿದ್ದನು. ಇದರಿಂದಾಗಿ ಅರಸನು ಪರಮೇಶ್ವರನೆಂಬ ಬಿರುದನ್ನೂ ಹೊಂದಿದನು. ಕರ್ನಾಟ್ಟ ದೇಶ, ಮರಾಠದೇಶ, ಆಂಧ್ರದೇಶ ಕೂಡಿದಂತೆ ಇಡೀ ದಕ್ಷಿಣಾಪಥದ ಒಡೆಯನಾಗಿದ್ದನು.
ಮಹಾರಾಜ, ಮಹಾಮಂತ್ರಿ, ಸೇನಾಧಿಪತಿ ಸಮೇತರಾಗಿ ಎಲ್ಲ ಸಾಮಂತರೂ ಸೈನ್ಯಗಳೊಡನೆ ವಾತಾಪಿಗೆ ಹಿಂತಿರುಗಿದರು. ನಾನೂ ಅವರೊಡನೆಯೇ ವಾತಾಪಿ ನಗರಕ್ಕೆ ಹಿಂತಿರುಗಿದೆ. ನನ್ನ ಗೂಢಚಾರನ ವೇಷ ಯಾ ಅಜ್ಞಾತವಾಸದ ಅವಶ್ಯಕತೆಯೂ ಇನ್ನಿರಲಿಲ್ಲ. ನನ್ನ ಶ್ಮಶ್ರುಗಳನ್ನು ಕ್ಷೌರಿಕನಿಗೆ ಅರ್ಪಿಸಿ, ನನ್ನ ಕಂಚುಕ ಪಗಡಿಗಳನ್ನು ತ್ಯಜಿಸಿ, ಪುನಃ ನನ್ನ ಶ್ವೇತ ವರ್ಣದ ಕಚ್ಚೆ ಪಂಚೆ ಹಾಗು ಶಿರದಲ್ಲಿ ಜಟೆ ಧರಿಸಿದೆ. ಮನೆಗೆ ಹಿಂತಿರುಗಿ ಮಾತಾ-ಪಿತರನ್ನು ಮತ್ತೆ ಕಂಡು ಸಂತೋಷವಾಯಿತು. ಮನ ಮುಟ್ಟುವ ಪುನರ್ಮಿಲನ - ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಮನೆಯ ಜೀವನದ ಆನಂದವನ್ನು ಮತ್ತೆ ಕಾಣುವಂತಾಯಿತು.
ಈ ಸಮಯದಲ್ಲಿ ಪುಲಿಕೇಶಿ ಅರಸನು ಹರ್ಷರಾಜನ ಮೇಲೆ ತಾನು ಸಾಧಿಸಿದ ದಿಗ್ವಿಜಯ ಸ್ಮರಣೆಗೆಂದು ದೇವಾಲಯವೊಂದನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದನು. ಅಂತೆಯೇ ಅರಸನ ವಂಶಜರ ಮೊದಲ ರಾಜಧಾನಿಯಾದ, ಹತ್ತಿರದಲ್ಲಿಯೇ ಮಲಪ್ರಭಾ ನದಿಯ ತೀರದಲ್ಲಿದ್ದ ಅಯ್ಯವೊಳೆ ನಗರದಲ್ಲಿ ದೇವಾಲಯವನ್ನು ಕಟ್ಟಿಸುವ ಯೋಜನೆ ಹೂಡಿದನು. ಇದನ್ನು ಕಾರ್ಯರೂಪಕ್ಕೆ ತರಲು ಅರಸನು ಮಂತ್ರಿ ಹಾಗು ಕವಿಯಾದ ರವಿಕೀರ್ತಿಯನ್ನು ಕರೆಸಿ ಹೀಗೆ ಹೇಳಿದನು:
"ಮಂತ್ರಿ ರವಿಕೀರ್ತಿ, ನಾವು ನಮ್ಮ ಮುದ್ರೆಯನ್ನು ಇತಿಹಾಸದಮೇಲೆ ಒತ್ತಲು ಇಚ್ಚಿಸಿದ್ದೇವೆ. ಅಂತೆಯೇ, ನಮ್ಮ ಮೂಲ ರಾಜಧಾನಿಯಾದ ಅಯ್ಯವೊಳೆಯಲ್ಲಿ ದೇವಾಲಯವೊಂದನ್ನು ನಿರ್ಮಿಸಿ. ಬರುವ ಪೀಳಿಗೆಗಳಿಗೆ ನಮ್ಮ ಶೌರ್ಯ, ದಿನಾಂಕ, ಖ್ಯಾತಿ ಹಾಗು ವೈಭವಗಳನ್ನು ನೆನಪಿಗೆ ತರಿಸುವಂತಹ ಸ್ಮಾರಕವೊಂದನ್ನು ರಚಿಸಿ. ಈ ಮಂದಿರವು ನಮ್ಮ ದಿಗ್ವಿಜಯದ ಸಂಕೇತವಾಗಿರಲಿ. ಎಷ್ಟು ವೆಚ್ಚವಾದರೂ ಸರಿ, ನಮ್ಮ ಬೊಕ್ಕಸದಿಂದ ಕೊಡಲಾಗುವುದು. ಈ ಕಾರ್ಯವನ್ನು ಸಾಧಿಸಲು ನೀವೇ ಸಮರ್ಥ ವಾಸ್ತುಶಿಲ್ಪಿ"
ಮಂತ್ರಿ ರವಿಕೀರ್ತಿಯು "ಅಪ್ಪಣೆಯಂತಾಗಲಿ, ದೊರೆ. ಆದರೆ ನನ್ನದೊಂದು ಸಣ್ಣ ಕೋರಿಕೆ" ಎಂದರು
"ಏನದು" ಅರಸ ಪ್ರಶ್ನಿಸಿದನು.
"ಬ್ರಾಹ್ಮಣ ಧರ್ಮದ ದೇವತೆಗಳೊಂದಿಗೆ ನನ್ನ ಮೆಚ್ಚಿನ ದೇವನಾದ ಜಿನೇಂದ್ರನ ಮೂರ್ತಿಯೊಂದನ್ನು ಆ ಸ್ಮಾರಕ ದೇವಾಲಯದಲ್ಲಿ ಇರಿಸುವ ಅನುಮತಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಧಾರ್ಮಿಕ ಸಹಿಷ್ಣುತೆಗೂ ಸಂಕೇತವಾಗಲಿ" ಎಂದು ಮಂತ್ರಿ ಕೋರಿಕೊಂಡರು.
ಜೈನ ಶ್ರಾವಕರು ಅರಸನ ಪೂರ್ವದಿನಗಳಲ್ಲಿ ಅವನು ಮಂಗಳೇಶನನ್ನು ಸೋಲಿಸಿ ಚಾಲುಕ್ಯಾಧಿಪತಿಯಾಗಲು ಹೆಚ್ಚು ಬೆಂಬಲ ನೀಡಿದ್ದ ಕಾರಣ ಪುಲಿಕೇಶಿ ಅರಸನು ಅವರ ಪ್ರತಿ ತನ್ನ ಋಣವನ್ನು ಅರಿತಿದ್ದನು. "ಹಾಗೆಯೇ ಆಗಲಿ" ಎಂದು ಸಮ್ಮತಿಸಿ "ನಾಳೆಯ ದಿನವೇ ನಿಮ್ಮ ಶಿಲ್ಪಕಲೆಯ ಮೇರುಕೃತಿಗೆ ಸಂಕಲ್ಪ ಹಾಗು ನಾಂದಿ" ಎಂದು ಹೇಳಿ ರವಿಕೀರ್ತಿಯನ್ನು ಅಯ್ಯವೊಳೆಗೆ ಕಳುಹಿಸಿಕೊಟ್ಟನು.
ರವಿಕೀರ್ತಿ ಅಯ್ಯವೊಳೆಗೆ ನಿರ್ಗಮಿಸಿದರು. ಅಲ್ಲಿ ಭವ್ಯ ಮಂದಿರ ನಿರ್ಮಾಣದ ಕಾರ್ಯದಲ್ಲಿ ತೊಡಗಿದರು. ಆ ಸಮಯದಲ್ಲಿ ಪುಲಿಕೇಶಿ ಅರಸನು ಉತ್ತಮ ಪ್ರಶಾಸಕನಾಗಲು ಯತ್ನಿಸುತ್ತಿದ್ದನು. ರಾಜ್ಯವನ್ನು ವಿಷಯ, ರಾಷ್ಟ್ರ, ಭೋಗ ಕಾಂಪನ ಹಾಗು ಗ್ರಾಮಗಳಾಗಿ ವಿಭಾಜಿಸಲಾಗಿತ್ತು. ಅಲ್ಲಿಯ ಆಡಳಿತಕ್ಕೆ ಅರಸನು ಪ್ರಬಲ ಹಾಗು ಸಮರ್ಥ ಸಾಮಂತರನ್ನು ನೇಮಿಸಿದನು. ಇವರಲ್ಲಿ ಹಲವರು ಹೆಂಗಳೆಯರೂ ಇದ್ದರು. ನಾಡು ಸಮೃದ್ಧವಾಗಿದ್ದು ಜನರು ಸುಖಸಂತೋಷಗಳಿಂದ ಕೂಡಿದ್ದರು. ಸತ್ಯ, ಧರ್ಮ, ನ್ಯಾಯಗಳೇ ಚಾಳುಕ್ಯ ರಾಷ್ಟ್ರದ ಕಂಬಗಳಾಗಿದ್ದವು.
ಹೀಗೆ ಶ್ರೀಮುಖ ಸಂವತ್ಸರವು ಭವ, ಭವವು ಯುವ ಸಂವತ್ಸರಕ್ಕೆ ತಿರುಗಿದವು. ಮಂತ್ರಿ ರವಿಕೀರ್ತಿಯು ಸ್ಮಾರಕ ದೇವಾಲಯವು ಸಂಪೂರ್ಣವೆಂಬ ಸುದ್ಧಿಯೊಂದಿಗೆ ಅಯ್ಯವೊಳೆಯಿಂದ ವಾತಾಪಿ ನಗರಕ್ಕೆ ಹಿಂತಿರುಗಿದರು. ಎಲ್ಲ ಸಾಮಂತರಾಜರು ಹಾಗು ಪಾಳೆಯಗಾರರಿಗೆ ಓಲೆ ಕಳುಹಿಸಲಾಯಿತು. ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಎಲ್ಲರಿಗೂ ನಿಮಂತ್ರಣ ನೀಡಲಾಗಿತ್ತು. ಅಂತೆಯೇ ನಿಯಮಿತ ದಿನದಂದು ಎಲ್ಲರೂ ಅಯ್ಯವೊಳೆಯಲ್ಲಿ ನೆರೆದಿದ್ದರು.
ಮಂತ್ರಿ ರವಿಕೀರ್ತಿಯು ಯಾರೂ ಕಾಣದಂತಹ ಭವ್ಯ ದೇವಾಲಯವನ್ನು ನಿರ್ಮಿಸುವ ಪ್ರಯತ್ನವನ್ನು ಈ ಪ್ರಯೋಗದ ಮೂಲಕ ಮಾಡಿದ್ದರು. ದೇವಾಲಯವು ಒಂದು ಸಣ್ಣ ಗುಡ್ಡದಮೇಲೆ ನಿಂತಿದೆ. ಎತ್ತರಿಸಿದ ಜಗಲಿಯೊಂದರ ಮೇಲೆ ದೇವಾಲಯದ ಕಟ್ಟಡವನ್ನು ಕಟ್ಟಲಾಗಿದೆ. ಮೆಟ್ಟಲು ಹತ್ತಿ ಹೋದರೆ ಭಕ್ತರು ಮುಖಮಂಟಪದೊಳಗೆ ಇರುತ್ತಾರೆ. ವಿಶಾಲವಾದ ಮುಖಮಂಟಪದ ಛಾವಣಿಯನ್ನು ಕಂಬಗಳು ಎತ್ತಿ ಹಿಡಿದಿವೆ. ಗರ್ಭಗುಡಿಯಲ್ಲಿ ಜಿನೇಂದ್ರನ ಕಲ್ಲಿನ ಪ್ರತಿಮೆ ಇರಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥವಿದೆ. ದೇವಾಲಯದ ಸುತ್ತಲೂ ಸುಂದರ ಕೆತ್ತನೆಗಳನ್ನು ಹೊತ್ತ ಕಂಬಗಳುಳ್ಳ ಜಗಲಿ ಇದೆ.
ಮುಖಮಂಟಪ ಹಾಗು ಗರ್ಭಗುಡಿಗಳ ಮಧ್ಯೆ ಒಂದು ವಿಶಾಲ ಅಂತರಾಳವಿದೆ. ಅಂತರಾಳದಲ್ಲಿ ಅರ್ಧ ಲಲಿತಾಸನದಲ್ಲಿ ಕುಳಿತ ಚಾಳುಕ್ಯ ಕುಲದೇವಿಯಾದ ಕೌಶಿಕಾಂಬಿಕೆಯ ಬಹುಸುಂದರ ಕಲ್ಲಿನ ವಿಗ್ರಹವಿದೆ. ಆದಿಸ್ಥಾನದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ದೇವಾಲಯದ ಎಲ್ಲ ಕಕ್ಷಗಳಲ್ಲಿ ಹಲವಾರು ದೇವಾದೇವಿಯರ ಸುಂದರ ಶಿಲಾ ಪ್ರಥಿಮೆಗಳಿವೆ. ಮೆಟ್ಟಲು ಹತ್ತಿ ದೇವಾಲಯದ ಛಾವಣಿಯ ಮೇಲೆ ಹೋದರೆ ಗರ್ಭಗೃಹದ ಮೇಲೆ ಮತ್ತೊಂದು ಗರ್ಭಗುಡಿಯಲ್ಲಿ ತೀರ್ಥಂಕರನ ಮತ್ತೊಂದು ಪ್ರತಿಮೆಯನ್ನು ಕಾಣಬಹುದು. ಛಾವಣಿಯಿಂದ ಇಡೀ ಅಯ್ಯವೊಳೆ ಊರಿನ ನೋಟವನ್ನೂ ಕಾಣಬಹುದು. ಪುಲಿಕೇಶಿ ಅರಸನ ಪಿತಾಮಹ ಕಟ್ಟಿಸಿದ ದೇವಾಲಯಗಳು, ಹಾಗು ಹಿಂದಿನ ಕಾಲದ ಅರಮನೆ ಎಲ್ಲವೂ ಕಾಣಿಸುತ್ತವೆ.
ಪ್ರತಿಷ್ಠಾಪನೆಗೆ ಬ್ರಾಹ್ಮಾಣರ ಹಾಗು ಜೈನ ಶ್ರಾವಕರ ಮಂತ್ರಗಳು ಮೊಳಗುತ್ತಿದ್ದವು. ರಾಷ್ಟ್ರದ ಪದವೀಧರರಲ್ಲದೆ ಸಾಮಾನ್ಯ ಜನರೂ ಆ ದಿವ್ಯ ನೋಟವನ್ನು ಕಾಣಲೆಂದು ಅಂದು ಅಲ್ಲಿ ನೆರೆದಿದ್ದರು. ಆಡಂಬರ ಅಭಿಷೇಕಗಳೊಂದಿಗೆ ದೇವತೆಗಳ ಪ್ರತಿಷ್ಠಾಪನೆಯಾಯಿತು.
"ಜೈ ಕೌಶಿಕಾಂಬಿಕೆ", "ಜೈ ಚಾಲುಕ್ಯೇಶ್ವರ" ಎಂಬ ಘೋಷಣೆಗಳು ಗಗನಕ್ಕೇರಿದವು.
Monday, October 16, 2006
Subscribe to:
Post Comments (Atom)
No comments:
Post a Comment