Monday, October 09, 2006

ವಿಷ್ಣುವಿನ ದಶಾವತಾರಗಳಲ್ಲಿ ಬುದ್ಧನೊಬ್ಬನೇ?ಈ ಲೇಖನದಲ್ಲಿ ಬರೆದಿರುವುದೆಲ್ಲ ಕೇವಲ ನನ್ನ ಅನಿಸಿಕೆ/ಅಭಿಪ್ರಾಯ ಮಾತ್ರ. ಯಾರನ್ನೇ ನೋಯಿಸುವ ಅಥವ ಯಾವ ಧರ್ಮವನ್ನೇ ಟೀಕಿಸುವ ಯಾ ಖಂಡಿಸುವ ಉದ್ದೇಶ ನನ್ನದಲ್ಲ. ಬುದ್ಧನ ಮಹತ್ತನ್ನಾಗಲಿ, ಜ್ಞಾನವನ್ನಾಗಲಿ ಪ್ರಶ್ನಿಸುವ ಯತ್ನ ಇದಲ್ಲ. ಬುದ್ಧ ಹಾಗು ಹಿಂದೂ ದೇವತೆ ವಿಶ್ಣುವಿನ ದಶಾವತಾರ ಕುರಿತ ಲೇಖನವಿದು. ಯಾರಿಗಾದರೂ ಇದರಿಂದ ತೊಂದರೆಯಾದಲ್ಲಿ ನನ್ನ ಹೃತ್ಪೂರ್ವ ಕ್ಷಮಾಪ್ರಾರ್ಥನೆ.


ದಶಾವತಾರದ ಕತೆಯನ್ನು ಎಲ್ಲರೂ ಬಲ್ಲೆವು. ಇಂದಿನ ದಿನಾಂಕದ ಜನಪ್ರಿಯ ದಶಾವತಾರಗಳ ಸರಣಿ ಹೀಗಿದೆ:

ಮತ್ಸ್ಯ

ಕೂರ್ಮ

ವರಾಹ

ನರಸಿಂಹ

ವಾಮನ

ಪರಶುರಾಮ

ರಾಮ

ಕೃಷ್ಣ

ಬುದ್ಧ

ಹಾಗು ಇನ್ನೂ ಬಾರದ ಕಲ್ಕಿ


ಈ ಲೇಖನದಲ್ಲಿ ನಾನು ಮೂಲತಃ ಬುದ್ಧ ಈ ಸರಣಿಯಲ್ಲಿರಲಿಲ್ಲವೆಂಬ ವಾದವನ್ನು ಮಾಡಲು ಹೊರಟಿರುವೆ.


ಮೇಲೆ ಕಂಡ ದಶಾವತಾರಗಳ ಕತೆಗಳಲ್ಲಿ ಮತ್ಸ್ಯದಿಂದ ಕೃಷ್ಣನವರೆಗು ಎಲ್ಲ ಅವತಾರಗಳೂ ತಮ್ಮ ತಮ್ಮ ಅವತಾರ ಧ್ಯೇಯಗಳಲ್ಲಿ ಸಫಲರಾಗಿದ್ದಾರೆ. ಮತ್ಸ್ಯವು ಪ್ರಳಯದಲ್ಲಿ ಸಪ್ತಋಷಿಗಳಿಗೆ ದಾರಿ ತೋರಿಸಿ, ಕೂರ್ಮವು ಸಮುದ್ರ ಮಥನದಲ್ಲಿ ಮಂದಾರಪರ್ವತವನ್ನು ಎತ್ತಿ ಹಿಡಿದು, ವರಾಹ ಹಿರಣ್ಯಾಕ್ಷನನ್ನು ಕೊಂದು, ಭೂದೇವಿಯನ್ನು ರಕ್ಷಿಸಿ, ನರಸಿಂಹನು ಹಿರಣ್ಯಕಷಿಪುವನ್ನು ಕೊಂದು, ಪ್ರಹ್ಲಾದನನ್ನು ರಕ್ಷಿಸಿ, ಪರಷುರಾಮ ಧರ್ಮಭ್ರಷ್ಟರಾದ ಕ್ಷತ್ರಿಯರನ್ನು ಕೊಂದು, ರಾಮನು ತಾಟಕಿ, ರಾವಣಾಸುರ-ಕುಂಭಕರ್ಣರನ್ನು ಕೊಂದು, ಕೃಷ್ಣನು ಕಂಸನನ್ನು ಕೊಂದು, ಗೀತೆಯನ್ನು ಬೋಧಿಸಿ, ಕುರುಕ್ಷೇತ್ರದಲ್ಲಿ ಧರ್ಮವನ್ನು ಎತ್ತಿ ಹಿಡಿದು, ಹೀಗೆ.


ಆದರೆ ಬುದ್ಧನ ವಿಚಾರದಲ್ಲಿ ಇದು ನಿಜವಲ್ಲ. ಬುದ್ಧನ ಕತೆ ಇತಿಹಾಸ ಅಂದರೆ ದಾಖಲೆಗಳಿರುವ ಕತೆ. ಬುದ್ಧನ ಅವತಾರ ಧ್ಯೇಯಗಳೇ ಸಂದಿಗ್ಧತೆಯಲ್ಲಿವೆ. ಹಲವರು ನಿಪಾತವಾಗಿದ್ದ ಸನಾತನ (ಹಿಂದೂ) ಧರ್ಮಕ್ಕೆ ಪ್ರತಿಯಾಗಿ ಮತ್ತೊಂದು ಧರ್ಮ ಸ್ಥಾಪಿಸುವುದೇ ಬುದ್ಧಾವತಾರದ ಧ್ಯೇಯವಾಗಿತ್ತೆಂದು ಹೇಳುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಸತ್ಯವಾಗಿದ್ದು, ಹಲವಾರು ಸುಪ್ರಸಿದ್ಧ ಹಿಂದೂ ಮೇಧಾವಿಗಳು ಬೌದ್ಧರಾದರೂ, ಕಾಲ ಕ್ರಮೇಣ ಬೌದ್ಧಧರ್ಮವೇ ಭಾರತದಿಂದ ಮಾಯವಾಗಿ, ಹಿಂದೂ ಧರ್ಮದ ಅನುಯಾಯಿಗಳೇ ಹಚ್ಚಾಗಿರುವ ಕಾರಣ ಈ ಧ್ಯೇಯದಲ್ಲಿ ಆ ಅವತಾರವು ವಿಫಲವಾದಂತಾಯಿತು. ಇನ್ನು ಹಲವರು ಬುದ್ಧನು ರಾಕ್ಷಸಾದಿ ದಾನವರನ್ನು ಸನಾತನ ಧರ್ಮ, ಹಾಗು ಅದರಿಂದುಂಟಾಗುವ ಪುಣ್ಯಗಳಿಂದ ವಂಚಿಸಲು ಅವರಿಗೆ ಅನ್ಯ ಧರ್ಮ ಬೋಧಿಸಲು ಪಾಶಾಂಡ ವೇಶವನ್ನು ಧರಿಸಿ ಬಂದವನೆಂದು ಹೇಳುತ್ತಾರೆ. ಆದರೆ ಕೊನೆಗೆ ಭಾರತದಲ್ಲಿ ಬೌದ್ಧ ಧರ್ಮವೇ ಇಲ್ಲವಾಗಿ, ಆ ಕಾಲದ ಬೌದ್ಧರೆಲ್ಲ ಪುನ: ಸನಾತನ ಧರ್ಮವನ್ನವಲಂಬಿಸಿದ ಕಾರಣ ಈ ಧ್ಯೇಯವೂ ವಿಫಲವಾದಂತಾಯಿತು.


ಈ ಧರ್ಮವನ್ನು ಹೋಗಲಾಡಿಸಲು ಹಿಂದೂ ಧರ್ಮದ ಅತ್ಯಂತ ಆದರಣೀಯ ಹಾಗು ಶ್ರೇಷ್ಠ ಪುಣ್ಯ ಪುರುಷರೇ ಕೆಲಸ ಮಾಡಿದ್ದಾರೆ - ಉದಾಹರಣೆಗೆ ಕುಮಾರಿಲ ಭಟ್ಟರು, ಆದಿ ಶಂಕರಾಚಾರ್ಯರು. ಹೀಗಿದ್ದಲ್ಲಿ, ಬುದ್ಧನು ಹಿಂದೂ ಧರ್ಮದ ದೇವರ ಅವತಾರವಾಗಿದ್ದೇ ನಿಜವಾದರೆ ಈ ಸಂಗತಿ ಸತ್ಯವಾಗಿ ವಿಡಂಬನೆಯ ವಿಚಾರವೇ ಸರಿ! ಮೇಲಾಗಿ ಮೂಲತಃ ಬೌದ್ಧಧರ್ಮಕ್ಕೆ ಬದಲಾಯಿಸಿ ಆ ಧರ್ಮವನ್ನು ಎತ್ತಿ ಹಿಡಿದವರು ದಾನವರಲ್ಲ - ಸನಾತನ ಧರ್ಮದವರೇ - ಅದರಲ್ಲೂ ಗರಿಷ್ಠರು, ಸಮ್ಪ್ರದಾಯ ಬದ್ಧರು! ಹಾಗಾಗಿ ಈ ಧ್ಯೇಯವೂ ನಷ್ಟಗೊಂಡಂತಾಯಿತು. ಈ ರೀತಿ ಲಕ್ಷ್ಯದಲ್ಲೇ ವಿಫಲ ಗೊಂಡ ಈ "ಅವತಾರ" ನಿಜವಾಗಿ ಭಗವಂತನ ಅವತಾರವಾಗಿರಲು ಸಾಧ್ಯವೆ?


ದೇವಾಲಯಗಳ ವಿಚಾರದಲ್ಲಿ ರಾಮ, ಕೃಷ್ಣ, ಬುದ್ಧರು ಒಂದೇ ಸಮ. ಈ ಮುವರು ಅವತಾರಗಳನ್ನು ಬಿಟ್ಟು, ಉಳಿದ ಅವತಾರಗಳಿಗೆ ಹೆಚ್ಚು ದೇವಾಲಗಳೇ ಇಲ್ಲವಾದ್ದರಿಂದ, ಅವುಗಳನ್ನು ಈ ವಾದದಿಂದ ಹಿಂದಿಡೋಣ. ಕೃಷ್ಣ ಯಾ ರಾಮನಂತೆ ಬುದ್ಧನಿಗೂ ಅಸಂಖ್ಯ ದೇವಾಲಯಗಳಿವೆ. ಹಿಂದೂ ಜನಾಂಗ ರಾಮ-ಕೃಷ್ಣರ ದೇವಾಲಯಗಳಿಗೆ ಹೋಗುವಂತೆ ಬುದ್ಧನ ಮಂದಿರಗಳಿಗೆ ಹೋಗುವ ರೂಢಿ ಏಕೆ ಬೆಳೆಸಿಕೊಳ್ಳಲಿಲ್ಲ? ರಾಮ-ಕೃಷ್ಣರ ದೇವಾಲಯಗಳಲ್ಲಿ ಪ್ರಾಚೀನ ಕಾಲದಿಂದ ರೂಢಿಯಲ್ಲಿ ಬಂದಿರುವುದು ಬ್ರಾಹ್ಮಣ ವಿಧಾನ ಪೂಜೆ. ಆದರೆ ಬುದ್ಧನಿಗೆ ಆ ವಿಧಾನದ ಪೂಜೆಯೂ ಇಲ್ಲ. ಬುದ್ಧನು ಅದೇ ಹರಿಯ ಅವತಾರನಾಗಿದ್ದರೆ ಅವನಿಗೆ ಉಳಿದ ಅವತಾರಗಳಂತೆ ಪೂಜೆಯೇಕಿಲ್ಲ?


ದಶಾವತಾರವೇನೋ ಸ್ವೀಕೃತ ತತ್ತ್ವ. ಆದರೆ ಹತ್ತು ಅವತಾರಗಳಲ್ಲಿ ಬುದ್ಧನಿಲ್ಲದಿದ್ದರೆ ಬೇರೆ ಯಾರಿದ್ದರು? ೧೦ನೆಯ ಅವತಾರ ಯಾರು? ಎಂಬ ಪ್ರಶ್ನೆಗಳು ಬರುತ್ತವೆ. ಇದಕ್ಕೂ ಹಲವಾರು ವರದಿಗಳಿವೆ. ಅದರಲ್ಲೊಂದು ದಶಾವತಾರದ ಬುದ್ಧ ಬೌದ್ಧ ಧರ್ಮದ ಬುದ್ಧನಲ್ಲ ಎಂಬುದು. ಇದು ಪ್ರಶ್ನಾಱ. ದಶಾವತಾರದ ಬುದ್ಧ ಬೇರೆಯವನಾದರೆ ಅವನು ಯಾರು? ಅವನ ಕತೆ ಏನು? ಆ ಅವತಾರದ ಧ್ಯೇಯ ಏನು? ಎಂಬ ಪ್ರಶ್ನೆಗಳು ಮುಂದೆಬರುತ್ತವೆ. ಈ ಪ್ರಶ್ನೆಗಳಿಗೆ ಯಾವ ಪ್ರಮಾಣಗಳಿಂದ ಸಿದ್ಧಪಡಿಸುವಂತಹ ಉತ್ತರಗಳಿಲ್ಲವಾದ ಕಾರಣ ಈ ಲೇಖನದ ಮಟ್ಟಿಗೆ ಇದನ್ನು ಇಲ್ಲಿಯೇ ಕೈ ಬಿಡೋಣ.


ಮತ್ತೊಂದು ವರದಿ ಹರೆಕೃಷ್ಣ ವೃಂದದವರು ಕೊಡುವಂಥದ್ದು. ಇವರ ಪ್ರಕಾರ ರಾಮನ ನಂತರ ಹಲಾಧಾರಿ ಬಲರಾಮ, ಅನಂತರ ಕೃಷ್ಣ, ಕೊನೆಗೆ ಕಲ್ಕಿ. ಈ ಸಿದ್ಧಾಂತವೂ ಸಂಶಯಾಸ್ಪದವಾದದ್ದು. ನಮಗೆ ಗೊತ್ತಿರುವಂತೆ ಕೃಷ್ಣ-ಬಲರಾಮರು ಸಮಕಾಲೀನರು. ಅದೇ ಸಮಯದಲ್ಲಿ ಅವತಾರ ಪುರುಷನಾದ ಮೇಲೆ ಬಲರಾಮ ಸಾಧಿಸುವುದನ್ನು ಕೃಷ್ಣ ಸಾಧಿಸಲಾರನೇ? ಅಷ್ಟೇ ಏಕೆ ಒಂದೇ ಸಮಯದಲ್ಲಿ ಎರಡು ಅವತಾರಗಳೇ? ಏನೋ ನನಗಂತೂ ಇದಷ್ಟು ಸರಿಯಾಗಿ ಕಾಣಿಸುವುದಿಲ್ಲ. ಮೇಲಾಗಿ ವಿಷ್ಣು ಶಯನನಾದ ಆದಿಶೇಷನು ರಾಮಾವತಾರದ ಕಾಲದಲ್ಲಿ ಲಕ್ಷ್ಮಣನಾಗಿ ರಾಮನಿಗೆ ಸಲ್ಲಿಸಿದ ಸೇವೆಯ ಕಾರಣ, 'ತಮ್ಮನಾಗಿ ಸಲ್ಲಿಸಿದಸೇವೆ ಸಾಕಾಯಿತು, ಮುಂದಿನ ಅವತಾರದಲ್ಲಿ ಭಗವಂತನ ಅವತಾರದ ಅಣ್ಣನಾಗಿ ಜನಿಸುವೆ' ಎಂಬ ವರ ಪಡೆದು ಕೃಷ್ಣಾವತಾರದಲ್ಲಿ ಅಣ್ಣ ಬಲರಾಮನಾಗಿ ಜನಿಸಿದನೆಂಬುದು ಸ್ವೀಕೃತ ಕತೆ. ಬಲರಾಮನು ಆದಿಶೇಷನ ಅವತಾರನಾದರೆ, ವಿಷ್ಣುವಿನ ದಶಾವತಾರಗಳಲ್ಲೊಬ್ಬನಾಗಲು ಹೇಗೆ ಸಾಧ್ಯ? ಹಾಗಾಗಿ ಈ ವರದಿಯೂ ಸರಿಯಲ್ಲವೆಂಬುದು ನನ್ನ ಅನಿಸಿಕೆ.


ದೇವಾಲಯಗಳಲ್ಲಿ ದಶಾವತಾರ ಕೆತ್ತನೆಗಳಲ್ಲಿ ಬುದ್ಧನನ್ನು ನಾವೆಲ್ಲರೂ ಕಂಡಿದ್ದೇವೆ. ಹಾಸನದ ಬಳಿ ಇರುವ ಪಾಳ್ಯ ಗ್ರಾಮದ ಸುಮಾರು ೮೦೦-೯೦೦ ವರ್ಷ ಹಳೆಯ ಲಕ್ಷ್ಮೀ-ಜನಾರ್ಧನ ದೇವಾಲಯದ ಮಹಾದ್ವಾರದ ಮೇಲೆ ದಶಾವತಾರಗಳ ಕೆತ್ತನೆಗಳಿರುವವು. ಇಲ್ಲಿ ಪರಶುರಾಮನಾದ ಮೇಲೆ ಹಲಾಯುಧನನ್ನು, ನಂತರ ರಾಮ, ಕೃಷ್ಣ, ಕಲ್ಕಿಯರನ್ನು ಕೆತ್ತಲಾಗಿದೆ. ಇದೇ ರೀತಿ ಮಧುಗಿರಿಯ ಬಳಿ ಒಂದು ಹಳೆಯ ದೇವಾಲಯದಲ್ಲಿ ಕೂಡ ಇದೆ. ಇದೇ ಮೂಲ ದಶಾವತಾರ ಶ್ರೇಣಿ ಎಂಬುದನ್ನೇ ನಿರೂಪಿಸುವ ಯತ್ನ ಈ ಲೇಖನದ ಮೂಲಕ ಮಾಡುತ್ತಿದ್ದೀನಿ. ಈ ಹಲಾಯುಧ ಅವತಾರ ಪುರುಷನನ್ನು ಬಲರಾಮನೊಂದಿಗೆ ಬೆರೆಸಬಾರದು. ಬಲರಾಮ ಪೂರ್ಣವಾಗಿ ಬೇರೆಯ ಪಾತ್ರ. ಈ ಹಲಾಯುಧನಿಗು ಆ ಹಲಧಾರಿ ಬಲರಾಮನಿಗೂ ಯಾವ ಸಂಬಂಧವೂ ಇಲ್ಲ.


ದಶಾವತಾರ ಕೆತ್ತುವಿಕೆಯಲ್ಲಿ ಹಲವು ಕಡೆ ಬುದ್ಧನನ್ನು, ಹಲವು ಕಡೆ ಹಲಾಯುಧನನ್ನು ಚಿತ್ರಿಸಿರುವ ಕಾರಣಗಳೇನಿರಬಹುದು? ನಾವು ಈಗ ಕಾಣುವ ದೇವಾಲಯಗಳಂತಹ ಮಂದಿರಗಳನ್ನು ಕೆತ್ತಲಾರಂಭಿಸಿದ್ದು ಜೈನರು. ಜೈನರ ಹಿಂದೆ ಬೌದ್ಧರೂ ನಡೆದರು. ಇವರೆಲ್ಲ - ಮುಖ್ಯವಾಗಿ ಬೌದ್ಧರು - ಸ್ಥಪತಿಗಳನ್ನು ತಮ್ಮ ಧರ್ಮಕ್ಕೆ ಬದಲಾಯಿಸುವಂತೆ ಒತ್ತಾಯಿಸಿದರ ಬಗ್ಗೆ ಹಲವು ದಾಖಲೆಗಳು ಕಂಡು ಬಂದಿವೆ. ಬೌದ್ಧರು ಹಿಂದೂ ಧರ್ಮದ ಪುರಾಣಗಳಲ್ಲಿ ಹಿಂದು ದೇವತೆಗಳ ಬದಲು ಬುದ್ಧನನ್ನು ಇರಿಸಿ ಆ ದೃಶ್ಯಗಳನ್ನು ತಮ್ಮ ವಿಹಾರ ಸ್ತೂಪಗಳ ಮೇಲೆ ಕೆತ್ತಿಸುತ್ತಿದ್ದರೆಂದು ತೋರುತ್ತದೆ. ಹಾಗಾಗಿ ಬೌದ್ಧ ಯಾ ಬೌದ್ಧರೊಡನೆ ಸಂಪರ್ಕವಿದ್ದ ಸ್ಥಪತಿಗಳು ದಶಾವತಾರದಲ್ಲಿ ಬುದ್ಧನನ್ನು ಕೆತ್ತಿರಬೇಕು. ಉಳಿದವರು, ಇಲ್ಲವೆ ಹಿಂದೂ ಸ್ಥಪತಿಗಳು ಹಲಾಯುಧನನ್ನು ಕೆತ್ತಿರಬೇಕು. ಕಾಲವು ಬುದ್ಧನಿರುವ ದಶಾವತಾರ ಕೆತ್ತನೆಗಳ ಪಡೆಯಲ್ಲಿದ್ದು, ಈಗ ಅವೇ ಹೆಚ್ಚಾಗಿ ಉಳಿದಿವೆ. ಹಲಾಯುಧನನ್ನು ಚಿತ್ರಿಸಿದ ಕೆತ್ತನೆಗಳು ಹಳೆಯವಾದ್ದರಿಂದ ಅವು ನಾಶಗೊಂಡಿವೆ.


ಹಲಾಯುಧನು ಒಬ್ಬ ಪ್ರತ್ಯೇಕ ಅವತಾರ ಪುರುಷನಾಗಿದ್ದಿರಬೇಕು. ನಂತರ ಬೌದ್ಧರನ್ನು ಹಿಂಡು ಹಿಂಡಾಗಿ ಹಿಂದೂ ಧರ್ಮಕ್ಕೆ ಹಿಂತಿರುಗಿಸಿಕೊಳ್ಳಲೆಂದು, ಹಿಂದೂ-ಬೌದ್ಧ ಧರ್ಮಗಳಿಗೆ ವ್ಯತ್ಯಾಸವೇ ಇಲ್ಲವೆಂಬ ಕಲ್ಪನೆ ಮಾಡಿಸಲು ಬುದ್ಧನನ್ನು ಹಿಂದೂ ದಶಾವತಾರ ಶ್ರೇಣಿಗೆ ಸೇರಿಸಿರಬಹುದು. ಆದರೆ ಹೀಗೆ ಮಾಡಲು ಯಾರಾದರೂ ಒಬ್ಬ ಅವತಾರನನ್ನು ತೆಗೆಯಬೇಕಾಗಿತ್ತು. ಬಹುಶಃ ಗಮನ-ಪ್ರಚಾರಗಳಿಂದ ದೂರವಿದ್ದ ಕಾರಣ ಹಲಾಯುಧನು ಈ ಕತ್ತರಿಗೆ ಬಲಿಯಾಗಿರಬಹುದು.


ಹಲಾಯುಧನು ದಶಾವತಾರದಿಂದ ಕತ್ತರಿಸಿ ಹೋದ ನಂತರ ಇವನ ಕತೆಗಳು ಹಲವನ್ನೇ ಪ್ರಿಯ ಆಯುಧವನ್ನಾಗಿಸಿಕೊಂಡ ಮತ್ತೊಬ್ಬ ಪೌರಾಣಿಕ ವ್ಯಕ್ತಿ - ಕೃಷ್ಣನ ಅಣ್ಣ ಬಲರಾಮನ ಕತೆಗಳೊಂದಿಗೆ ಸೇರಿಕೊಂಡಿರಬೇಕು. ಇದಕ್ಕೆ ಆಧಾರವಾಗಿ ಬಲರಾಮನ ಕತೆಗಳಲ್ಲಿ ಹಲವು ಹೊರಗಿನಿಂದ ಬಂದಂತೆ ತೋರುವ ಕತೆಗಳನ್ನು ಕಾಣಬಹುದು. ಇಂತಹ ಎರಡು ಕತೆಗಳು ಮನಸ್ಸಿಗೆ ಬರುತ್ತವೆ. ಭೂಮಿಯಲ್ಲಿ ಬರ ಬಂದಾಗ ಬಲರಾಮನು ತನ್ನ ಹಲ ಪ್ರಯೋಗದಿಂದ ಯಮುನೆಯ ದಿಕ್ಕನ್ನೇ ಬದಲಿಸಿ ಬರ ಹೋಗಲಾಡಿಸಿದ್ದು. ಮತ್ತೊಂದು, ರೈವತ ಹಾಗು ಅವನ ಮಗಳಾದ ರೇವತಿ ಬ್ರಹ್ಮನ ಬಳಿ ಸತ್ಯಲೋಕಕ್ಕೆ ಹೋಗಿ ಬರುವ ಹೊತ್ತಿಗೆ ಭೂಲೋಕದಲ್ಲಿ ಯುಗಾಂತರವಾಗಿ ಜನರೆಲ್ಲ ರೈವತ-ರೇವತಿಯರಿಗೆ ಹೋಲಿಸಿದರೆ ಅತೀ ಸಣ್ಣಾಕರದವರಾಗಿದ್ದು, ಕೊನೆಗೆ ರೇವತಿಯು ಬಲರಾಮನ ಹಲವನ್ನು ಮೆಟ್ಟಿ ತಾನೂ ಉಳಿದವರಂತೆ ಸಣ್ಣಾಕಾರ ಹೊಂದಿ ಬಲರಾಮನನ್ನು ವಿವಾಹವಾಗುತ್ತಾಳೆ. ಎರಡು ಕತೆಗಳಲ್ಲೂ ಹಲಕ್ಕೆ ಪ್ರಾಮುಖ್ಯತೆ ಇದೆ. ಇವೆರಡರಲ್ಲೂ ಮತ್ತೊಂದು ವಿಶಿಷ್ಟತೆ ಕೃಷ್ಣ ಇಲ್ಲದಿರುವುದು. ಹಾಗಾಗಿ ಕನಿಷ್ಠ ಇವೆರಡು ಕತೆಗಳು ಮೂಲತಃ ಹಲಾಯುಧನಿಗೆ ಸೇರಿದ್ದವೆಂದು ಭಾವಿಸುತ್ತೇನೆ.


ಇನ್ನು ಹಲಾಯುಧ ಅವತಾರದ ಧ್ಯೇಯ. ಇದು ಹೆಚ್ಚಾಗಿ ಮರೆತು/ಕಳೆದುಹೋಗಿದೆ. ಏನಿದ್ದರೂ ಊಹೆ ಮಾತ್ರ. ಗಂಗಾ-ಯಮುನಾ ನದಿಗಳ ಮಧ್ಯದ ಭೂಮಿ ಪ್ರಪಂಚದ ಅತ್ಯಂತ ಸಮೃದ್ಧ ಭೂಮಿಯೆನ್ನುವುದು ಹಲವಾರು ಪುರಾಣ-ಉಪಪುರಾಣಗಳಲ್ಲಿ ಹೇಳಲಾಗಿರುವ ಮಾತು. ವ್ಯವಸಾಯವೇ ಇಲ್ಲಿಯ ಅತಿಶಯ ಜನರ ಬದುಕು. ಇಲ್ಲಿ ಯಾವಾಗಲೋ ದೀರ್ಘ ಕಾಲದ ಬರ ಬಂದು ಜನರ ಹಾ-ಹಾ ಕಾರಕ್ಕೆ ಉತ್ತರವಾಗಿ ಭಗವಂತನು ಆ ಬರವನ್ನು ಹೋಗಲಾಡಿಸುವುದನ್ನೇ ಧ್ಯೇಯವಾಗಿಸಿಕೊಂಡು ಹಲಾಯುಧನಾಗಿ ಅವತರಿಸಿದ. ತನ್ನ ಹಲದ ಬಲದಿಂದ ಯಮುನಾ ನದಿಯ (ಅಥವ ಯಾವುದಾದರೂ ಅನ್ಯ ಮುಖ್ಯ ನದಿಯ) ದಿಕ್ಕನ್ನು ಬದಲಿಸಿ ಆ ಬರವನ್ನು ಚಿರವಾಗಿ ಹೋಗಲಾಡಿಸಿದನೆಂಬುದು ಮೂಲ ಕತೆ ಇರಬಹುದು. ಬಲರಾಮನಿಗೆ ಸೇರಿದಾಗ ಇದು ಸ್ವಲ್ಪ ಬದಲಾವಣೆ ಹೊಂದಿರಬಹುದು.


ಕನಿಷ್ಠ ಕರ್ನಾಟಕದಲ್ಲಿ (ಭಾರತದ ದಕ್ಷಿಣಪಥದಲ್ಲಿ?) ಕ್ರಿ.ಪೂ. ೧೫-೧೬ನೆ ಶತಮಾನದಲ್ಲಿಯೂ ಬುದ್ಧಾವತಾರ ಗೊಂದಲದಲ್ಲಿತ್ತೆಂದು ಕಾಣಿಸುತ್ತದೆ. ಆ ಕಾಲದಲ್ಲಿ ರಚಿತವಾದ ದಾಸ ಸಾಹಿತ್ಯದಲ್ಲಿ ಇದನ್ನು ಕಾಣಬಹುದು. ದಾಸರು ದಶಾವತಾರವನ್ನು ಹೇಳಬೇಕಾದರೆ ಹಲವಾರು ಕಡೆ "ಬತ್ತಲೆ ನಿಂತ(ವ)ಗೆ, ಬೌದ್ಧವತಾರಗೆ" ಎಂದು ಹಾಡುತ್ತಾರೆ. ಇದನ್ನು ಹಲವರು "ಬತ್ತಲೆ ನಿಂತಿರುವ ಬುದ್ಧ" ಎಂದು ವಿವರಿಸುತ್ತಾರೆ. ಆದರೆ ಹಾಡುಗಳು "ಬತ್ತಲೆ ನಿಂತಗೆ, ಬೌದ್ಧವತಾರಗೆ" ಎಂದು ಇಬ್ಬರನ್ನು ಕುರಿತು ಹೇಳುವಂತೆ ತೋರುತ್ತದೆ. ಮೇಲಾಗಿ ಬುದ್ಧನ ಜ್ಞಾನೋದಯವೇ ಶರೀರವನ್ನು ದಂಡಿಸಬಾರದೆಂದು. ಹಾಗಾಗಿ ಬತ್ತಲೆ ನಿಂತವ ಬುದ್ಧನಾಗಿರಲು ಸಾಧ್ಯವೇ ಇಲ್ಲ. ಕೇವಲ ಜಿನೇಂದ್ರನಾದ ಮಹಾವೀರ ಬತ್ತಲೆ ನಿಂತಿರುವವನಾಗಿರಲು ಸಾಧ್ಯ. ಮಹಾವೀರನಾದರೋ ಎಂದೂ ವಿಷ್ಣುವಿನ ಅವತಾರವೆನಿಸಿರಲಿಲ್ಲ. ಹೀಗಿರುವಲ್ಲಿ ದಾಸರು "ಬತ್ತಲೆ ನಿಂತಗೆ, ಬೌದ್ಧವತಾರಗೆ" ಎಂದು ಹಾಡಲು ಏನು ಕಾರಣವಿರಬಹುದು? ಆ ಕಾಲದಲ್ಲಿ ಬುದ್ಧನೇ ಆ ಲೋಪವಾದ ಅವತಾರವೆಂದು ಇನ್ನೂ ಎಲ್ಲೆಡೆ ಪ್ರಚಾರವಾಗಿರಲಿಕಿಲ್ಲ. ದಶಾವತಾರಗಳಲ್ಲಿ ಬುದ್ಧನ ಸ್ಥಾನ ಇನ್ನೂ ಗಟ್ಟಿಯಾಗಿರಲಿಕ್ಕಿಲ್ಲ. ಆ ನಾಪತ್ತೆಯಾದ ಅವತಾರ ಬುದ್ಧನೋ ಮಹಾವೀರನೋ ಎಂಬ ಗೊಂದಲವಿದ್ದ ಕಾರಣ ದಾಸರು ಹಾಗೆ ಹಾಡಿರಬೇಕು.


ಕೆಳಗೆ ಇಂತಹ ಹಾಡುಗಳ ಹಲವು ಉದಾಹರಣೆಗಳಿವೆ (ಎಲ್ಲ ಪುರಂದರದಾಸರ ಕೃತಿಗಳು; ಕೆಲವಕ್ಕೆ ಬೇರೆ ಅರ್ಥವೂ ಕೊಡಬಹುದು):


೧. ಅರಿಯದೆ ಬಂದೆವು ಕಿಂಸನ್

(ಬತ್ತಲೆ ನಿಂತಗೆ ಕಿಂಸನ್ ಮತ್ತಶ್ವವೇರಿದವಗೆ ಭಂಸನ್ )


೨.ಬಾರೆ ಗೋಪಿ ಬಾಲಕನಳುತಾನೆ

(ಬತ್ತೆಲೆ ನಿಂತವನು ಎತ್ತಿಕೋ ಎಂದಳುತಾನೆ)


೩.ಧರಣಿಗೆ ದೊರೆಯೆಂದು ನಂಬಿದೆ

( ಬತ್ತಲೆ ನಿಂತೆ ತೇಜಿಯನೇರಿದೆ)


೪. ಇವಗೇಕೆ ಶೃಂಗಾರ

(ಬತ್ತಲೆ ನಿಂತವಗ್ಯಾಕೆ ಕಸ್ತೂರಿ)


೫. ನೀನೆ ಅಚುತ ನೀನೆ ಮಾಧವ

(ಬತ್ತಲೆ ನಿಂತು ಒಳ್ಳೆ ಹಯವನೇರಿದೆ)


೬. ಸಕಲ ದುರಿತಗಳ ಪರಿಹಾರ

(ಅಧಮ ಜನರಿಗೆ ಬೋಧಿಸಿ ಬತ್ತಲೆ ನಿಂದ್ಯೋ ವೇನ್ಕಟೇಶ್ಹ)


೭. ಮಂಗಳಂ ಜಯ ಮಂಗಳಂ

(ಬತ್ತೆಲೆ ನಿಂತಗೆ ಬೌದ್ಧವತಾರಗೆ)


ಕೊನೆಯದಾಗಿ ನಮಗೆ ಮೂಲ ದಶಾವತಾರಗಳ ಧೃಡ ಪುರಾವೆಗಳು ಪುರಾಣಗಳಲ್ಲೇಕೆ ಸಿಕ್ಕಿಲ್ಲವೆಂಬ ಪ್ರಶ್ನೆ ಏಳುತ್ತದೆ. ಅತೀ ಪ್ರಾಚೀನ ಪ್ರತಿಗಳು ಎಲ್ಲೂ ದೊರಕಿಲ್ಲ - ದೊರಕುವುದಿಲ್ಲ. ಅವುಗಳೆಲ್ಲ ಬೆಂಕಿ, ರಾಜಾಕ್ರಮಣಗಳು, ಧಾರ್ಮಿಕ ಕಳವಳ, ಕಾಲ ಇತ್ಯಾದಿಗಳಿಂದ ನಷ್ಟವಾಗಿರುತ್ತವೆ. ಕಾಲ ಕಾಲಕ್ಕೆ ಗ್ರಂಥಗಳ ಹಸ್ತ-ಪ್ರತಿಗಳನ್ನು ಮಾಡಿರುವುದು ಕಂಡುಬರುತ್ತದೆ. ಈ ಹಸ್ತ-ಪ್ರತಿಗಳಾದರೋ ಯಾವಾಗಲೂ ನಿಖರವಾಗಿರುವುದಿಲ್ಲ. ಪ್ರತಿ ಮಾಡುವವರು ಸಹಜವಾಗಿ ತಮ್ಮದೇ ಆದ ತಿದ್ದುವಿಕೆಗಳನ್ನು ಪ್ರತಿಯಲ್ಲಿ ಮಾಡಿರುತ್ತಾರೆ. ಹೀಗೆ ಪುರಾಣಗಳ ಪ್ರತಿ ಮಾಡುವವರು ಅಲ್ಲಿ ಹಲಾಯುಧನನ್ನು ಕಂಡು, ಅದು ತಾವು ಕೇಳಿದ ಕತೆಗೆ ಹೋಲುವುದಿಲ್ಲವೆಂದು ನಿರ್ಧರಿಸಿ, ಅವನನ್ನು ಕಿತ್ತು ಬುದ್ಧನನ್ನು ಸೇರಿಸಿರಬೇಕು. ನಮಗೆ ಸಿಕ್ಕಿರುವ ಗ್ರಂಥಗಳ ಪ್ರತಿಗಳೆಲ್ಲ ಈ ರೀತಿ ತಿದ್ದುಪಡಿಸಿದ ಪ್ರತಿಗಳು ಮಾತ್ರ. ಹಾಗಾಗಿ ನಮಗೆ ಸಿಕ್ಕಿರುವ ಎಲ್ಲ ಪುರಾಣಾದಿ ದಂತ ಕತೆಗಳ ಪ್ರತಿಗಳಲ್ಲಿ ಬುದ್ಧನೇ ಇದ್ದು ಹಲಾಯುಧ ಕೇವಲ ಶಿಲಾಧಾರಗಳಿಗೆ ಸೀಮಿತವಾಗಿದ್ದಾನೆ.


ಮೇಲಿನ ವಾದಗಳಿಂದ ಅವತಾರದ ಶ್ರೇಣಿ ಹೀಗಿದೆಂದು ತೋರುತ್ತದೆ:


ಮತ್ಸ್ಯ

ಕೂರ್ಮ

ವರಾಹ

ನರಸಿಂಹ

ವಾಮನ

ಪರಶುರಾಮ

ಹಲಾಯುಧ

ರಾಮ

ಕೃಷ್ಣ

ಕಲ್ಕಿ


ಹಲವಾರು ಮಂದಿ ಈ ಶ್ರೇಣಿಯಲ್ಲಿ ಚಾರ್ಲ್ಸ್ ಡಾರ್ವಿನ್‌ನ ಉತ್ಕ್ರಾಂತಿ ತತ್ತ್ವವನ್ನು ಹೇಳಿದ್ದಾರೆ. ಇದು ಹೀಗಿದೆ:


ಆದಿಯಲ್ಲಿ ಮತ್ಸ್ಯ - ಜೀವ ಜನಿಸಿದ್ದೇ ನೀರಿನಲ್ಲಿ ಎಂಬುದರ ಸಂಕೇತ. ನಂತರ ಕೂರ್ಮ - ನೀರಿನಲ್ಲೇ ಹೆಚ್ಚಾಗಿದ್ದರೂ ನೆಲದ ಮೇಲೆ ಬರುವ ಸಾಮರ್ಥ್ಯವುಳ್ಳ ಪ್ರಾಣಿ - ಭೂಸಂಚಾರಿ ಪ್ರಾಣಿಗಳ ಸಂಕೇತ. ಮತ್ತೆ ವರಾಹ - ಸಸ್ತನಿ ಪ್ರಾಣಿಯಾದರೂ (mammal) ಕೊಳಚೆ ಪ್ರದೇಶದಲ್ಲೇ ವಾಸಿಸುತ್ತದೆ, ಮುಂದೆ ನರಸಿಂಹ - ಅರ್ಧ ಪ್ರಾಣಿ ಅರ್ಧ ಮನುಷ್ಯ. ಆನಂತರ ವಾಮನ - ಕುಬ್ಜ ರೂಪಿ, ಇನ್ನೂ ಪೂರ್ಣ ಪ್ರವೃದ್ಧಿ ಹೊಂದದ ಮಾನವ, ಪರಶುರಾಮ - ಕೊಡಲಿ ಹೊತ್ತು ಕಾಡು-ಮೇಡುಗಳನ್ನು ಕತ್ತರಿಸಿ ಬದುಕುವ ಗುಡ್ಡಗಾಡಿನ ಜನಾಂಗದ (hunter-gatherer) ಸಂಕೇತ.


ಮಧ್ಯದಲ್ಲಿ ಗೊಂದಲದ ಅವತಾರಗಳನ್ನು ಬಿಟ್ಟು ಮುಂದೆ, ರಾಮ - ಜನರೆಲ್ಲ ಒಗ್ಗೂಡಿ ರಾಜ್ಯ-ರಾಷ್ಟ್ರಗಳಾಗಿ ಕಾನೂನು ವ್ಯವಸ್ಥೆಯಾದ ಸಂಕೇತ. ಕೃಷ್ಣ - ನಿರತಿಯಶ ಮಾನವ - ಪುರುಶೋತ್ತಮನ (perfect being) ಸಂಕೇತ. ಕೊನೆಗೆ ಕಲ್ಕಿ ಇನ್ನೂ ಬಾರದಿರುವುದರಿಂದ ನಮ್ಮ ವಿನಾಶದ ಸಂಕೇತವೆಂದಾದರೂ ಹೇಳಬಹುದು, ಇಲ್ಲವಾದರೆ ಅತಿಮಾನುಷ ಮಾನವನ (super-human) ಸಂಕೇತವೆಂದಾದರೂ ಹೇಳಬಹುದು.


ಪರಶುರಾಮನ ಮುಂದೆ ರಾಮನನ್ನು ಸೇರಿಸಿದರೆ ಸರಪಳಿಯಲ್ಲಿ ಒಂದು ಕೊಂಡಿ ತಪ್ಪಿದಂತೆ ಕಾಣಿಸುತ್ತದೆ. ಅಂತೆಯೇ ಕೊನೆಯಲ್ಲಿ ಬುದ್ಧ ಕೂಡ - ಬುದ್ಧನನ್ನು "ಜ್ಞಾನೋದಯವಾದ ಮಾನವನ" ಸಂಕೇತವೆಂದು ಹಲವರು ಹೇಳುತ್ತಾರೆ. ಆದರೆ ಪುರುಶೋತ್ತಮನಾದಮೇಲೆ ಜ್ಞಾನೋದಯವಾದ ಮಾನವನೇ? ಗೀತೆ ಬೋಧಿಸಿದ ಕೃಷ್ಣನಿಗಿಂತ ಜ್ಞಾನವೇ? ಎಂಬ ಪ್ರಶ್ನೆ ಏಳುತ್ತದೆ. ಅದೇ ಪರಶುರಾಮನ ಮುಂದೆ ಹಲಾಯುಧನನ್ನು ಸೇರಿಸಿದರೆ? ಗುಡ್ಡಗಾಡಿನ ಜನಾಂಗದ ನಂತರ ಉತ್ಕ್ರಾಂತಿಯಲ್ಲಿ ಮುಂದಿನ ಪಾದ ಕೃಷಿ ಹಾಗು ನೆಲೆಸುವಿಕೆ. ಹಲವನ್ನು ಹೊತ್ತ ಹಲಾಯುಧ ಈ ಕೃಷಿ ಹಾಗು ಜನರ ನೆಲೆಯ ಸಂಕೇತ. ನಂತರ ರಾಮ, ಕೃಷ್ಣರು ತಾವಾಗಿಯೇ ಸ್ಥಾನಗಳಿಗೆ ಬೀಳುತ್ತಾರೆ. ಬುದ್ಧನಿಲ್ಲದಿರುವ ಕಾರಣ ಗೊಂದಲವೂ ಇಲ್ಲ.


ಉತ್ಕ್ರಾಂತಿಯ ಈ ವಿಚಾರವು ಪ್ರಶ್ನಾಱವೆಂದು ನಾನೇ ಒಪ್ಪಿಕೊಳ್ಳುತ್ತೇನೆ. ಆದರೂ ಇದು ಚಿಂತನೀಯವೇ ಸರಿ. ಬೌದ್ಧ ಧರ್ಮದ ಗೌತಮ ಬುದ್ಧ ಹಿಂದೂ ದೇವತೆ ವಿಶ್ಣುವಿನ ಅವತಾರವೋ, ಅಲ್ಲವೋ?

No comments: