Thursday, January 08, 2009

ಸಮ್ಮೋಹನ

ಸಮ್ಮೋಹನ

2008 KKNC ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೊದಲ ಬಹುಮಾನ ಬಂದಿದೆ.
2008 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.


ಕ್ರಿ.ಶ.೧೭ನೇ-ಶತಮಾನದ ಆದಿಭಾಗ; ಮುಘಲ್-ಸಾಮ್ರಾಜ್ಯದ ಒಳನಾಡು

ಶಿಶಿರಋತುವಿನ ಅಂತ್ಯಭಾಗವಾಗಿತ್ತು. ಶೀತಲ ವಾತಾವರಣದಲ್ಲಿ ಕಮಲದಹೂ ಹಾಗು ಮಾವು-ನಾರಿಕೀಳಗಳ ಕಲಶ ಹೊತ್ತ ಉನ್ನತ ಶಿಖರವುಳ್ಳ ಅಗ್ರೇಶ್ವರ ಮಹಾದೇವನ ನಳಿನಳಿಸುವ ಅಮೃತಶಿಲೆಯ ಮಹಾಲಯ ಕೈಲಾಸಪರ್ವತವೇ ಬಂದು ನಿಂತಂತೆ ಕಂಗೊಳಿಸುತ್ತಿತ್ತು. ಪಕ್ಕದಲ್ಲಿಯೇ ಹರಿಯುತ್ತಿದ್ದ ಯಮುನೆ ಮಹಾದೇವನ ತಾಣವನ್ನೇ ನಕಲು ಮಾಡಲೆಂಬಂತೆ ತಂಗಾಳಿ ಸೂಸುತ್ತಿದ್ದಳು.

ಅಂದು ಶಿವರಾತ್ರಿ-ಅಗ್ರೇಶ್ವರ ಮಹಾದೇವನ ಪ್ರತೀಕವಾದ, 'ನಾಗನಾಥೇಶ್ವರ' ಎಂಬ ಹೆಸರುಳ್ಳ ಅಮೃತಶಿಲೆಯ ಅಗಾಧ ಜ್ಯೋತಿರ್ಲಿಂಗವಿದ್ದ ಗರ್ಭಗುಡಿಯಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲು ಸಿದ್ಧತೆಗಳು ಸಾಗಿದ್ದವು. ದೂರ-ದೂರದಿಂದ ಬಂದು ನೆರೆದಿದ್ದ ಭಕ್ತಾದಿಗಳಿಗೆ ಮಹಾಲಯದ ಎರಡೂ ಬದಿಗಳಲ್ಲಿದ್ದ ಛತ್ರಗಳಲ್ಲಿ ತಂಗುವ ಏರ್ಪಾಡು ಮಾಡಲಾಗಿತ್ತು. ಅಂದು ಉಪವಾಸವಾದ್ದರಿಂದ ಗರ್ಭಗುಡಿಯ ನೆಲಮಾಳಿಗೆಯಲ್ಲಿದ್ದ, ದಿನನಿತ್ಯ ನೂರಾರು ಜನರಿಗೆ ಅನ್ನ ಹಾಕುವ ವಿಶಾಲ ಪಾಕಶಾಲೆಯಲ್ಲಿ ಹೆಚ್ಚು ಚಟುವಟಿಕೆ ಕಾಣಿಸುತ್ತಿರಲಿಲ್ಲ. ಮಹಾಲಯದ ಹಿಂಬದಿಯಲ್ಲಿ ಯಮುನೆಯೊಳಕ್ಕೆ ಇಳಿದು ಹೋಗುತ್ತಿದ್ದ ಘಟ್ಟಗಳ ಮೇಲೆ ಸ್ನಾನ-ಸಂಧ್ಯಾವಂದನೆಗಳಲ್ಲಿ ಕೆಲವರು ವ್ಯಸ್ಥರಾಗಿದ್ದರೆ ಇನ್ನು ಕೆಲವರು ಮಹಾದೇವನ ಅಭಿಶೇಖಕ್ಕೆಂದು ನೀರು ತುಂಬಿದ ಕುಂಭಗಳನ್ನು ಹೊತ್ತು ಗುಡಿಯತ್ತ ನಡೆದಿದ್ದರು. ಮಂದಿರದ ಎರಡು ನಗಾರಿಖಾನೆಗಳಿಂದ ಢೋಲು-ಢಮರು-ನಗಾರಿಗಳ ಧ್ವನಿ ಮೊಳಗುತ್ತಿತ್ತು.

ನಗಾರಿಖಾನೆಯ ಪಕ್ಕದಲ್ಲಿ ಒಂದು ಬಹು-ಅಗಲವಾದ ಅಷ್ಟಕೋನಾಕಾರದ ಕೂಪ. ನೀರಿಗೆ ಹೋಗಲು ಮೇಲಿನಿಂದ ಕೆಳಗಿನವರೆಗು ಚಕ್ರಾಕಾರದ ಮೆಟ್ಟಿಲುಗಳು. ಕೂಪದ ಒಳಗೋಡೆಯಲ್ಲಿ ಸುತ್ತಲೂ ಒಂದರ ಕೆಳಗೊಂದು ಎಂಟು ಅಂತಸ್ತುಗಳಲ್ಲಿ ಕಛೇರಿಗಳು. ಈ ದಫ್ತರುಗಳಲ್ಲಿ ಮಹಾಲಯದ ವ್ಯವಸ್ಥಾಪಕರು, ಕೋಶಾಧಿಕಾರಿಗಳು, ಕರಣಿಕರು, ಗುಮಾಸ್ಥರು ಮತ್ತಿತರ ಅಧಿಕಾರಿಗಳು ಅವರವರ ಕೆಲಸಗಳಲ್ಲಿ ವ್ಯಸ್ಥರಾಗಿದ್ದರು. ಮೇಲಿನ ಅಂತಸ್ತಿನಲ್ಲಿದ್ದ ವ್ಯವಸ್ಥಾಪಕರ ಕಛೇರಿಯಲ್ಲಿ ರಾಜ್​ಪೂತ-ಮಹಾರಾಜ ರತ್ನಸಿಂಹನು ಮಹಾಲಯದ ವ್ಯವಸ್ಥಾಪಕ, ಶಂಭುಶರ್ಮರ ಜೊತೆ ಮಾತನಾಡುತ್ತಿದ್ದನು.

"ಪ್ರಣಾಮ್...ಎಲ್ಲವೂ ಕುಶಲವೇ? ಮಂದಿರದ ನಿರ್ವಹಣೆ ಹೇಗೆ ನಡೆಯುತ್ತಿದೆ?"

"ವಿಜಯೀಭವ. ಇಂದಿನ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ. ಎಲ್ಲವೂ ನಿಮ್ಮಂಥವರ ಉತ್ತೇಜನದಿಂದಲೇ ಸಾಧ್ಯವಲ್ಲವೆ?" ಶಂಭುಶರ್ಮರು ಉತ್ತರಿಸಿದರು.

"ಹಿಂದಿನ ಬಾರಿ ಬಂದಾಗ ಹಲವು ದುರುಸ್ತಿ ಕೆಲಸಗಳ ಬಗ್ಗೆ ಹೇಳಿದ್ದಿರಿ. ಶಹನಶಾಹರ ಫರ್ಮಾನಿನ ಪ್ರಕಾರ ಯಾವ ಹಿಂದೂ-ಮಂದಿರವನ್ನೂ ದುರುಸ್ತಿ ಮಾಡಿಸುವಂತಿಲ್ಲ. ಆದರೂ ಮಹಾರಾಜ್-ಜೈ​ಸಿಂಹರ ಜೊತೆಗೆ ಮಾತನಾಡಿ ಮಧ್ಯರಾತ್ರಿಯ ಸಮಯದಲ್ಲಿ ಆದಷ್ಟೂ ಕೆಲಸ ಮಾಡಿಸುವ ಏರ್ಪಾಡು ಮಾಡುತ್ತೇವೆ. ನೀವದರ ಬಗ್ಗೆ ಚಿಂತಿಸಬೇಡಿ" ರತ್ನಸಿಂಹ ಹೇಳಿದ.

"ಧನ್ಯವಾದ. ಮಹಾರಾಜರಿಗೆ ಹೇಳಿ ಶಹನಶಾಹರಿಂದ ದುರುಸ್ತಿಗೆ ಅನುಮತಿ ಪಡೆಯಲು ಸಾಧ್ಯವೇ? ಇದೇ ಸ್ಥಳದಲ್ಲೊಂದು ಕಲ್ಯಾಣಮಂಟಪ ಕಟ್ಟಿಸಿದರೆ ಭಕ್ತಾದಿಗಳಿಗೆ ಬಹಳ ಅನುಕೂಲವಾದೀತು"

"ಅದು ಸಾಧ್ಯವಾಗುವುದರ ಬಗ್ಗೆ ನಮಗೆ ಬಹಳ ಅನುಮಾನವಿದೆ. ಆದರೂ ಪ್ರಯತ್ನಿಸುತ್ತೇವೆ. ನೋಡುವ ಏನಾಗುತ್ತದೆ" ಎಂದು ಕೊಂಚ ಮೌನದ ನಂತರ ವಿನಯ ಧ್ವನಿಯಲ್ಲಿ "ಮಹಾದೇವನಿಗೆ ಅರ್ಪಿಸಲು ಕಾಣಿಕೆಯನ್ನು ತಂದಿದ್ದೇವೆ. ದಯವಿಟ್ಟು ಸ್ವೀಕರಿಸಬೇಕು"

"ತಥಾಸ್ತು...ನಡೆಯೆರಿ ಕೋಶಾಧಿಕಾರಿಗಳ ಬಳಿ ಹೋಗಿ ಜಮಾ ಮಾಡಿಸೋಣ" ಎಂದ ಶಂಭುಶರ್ಮರು ಎದ್ದು ಕೂಪದ ಒಳಗೋಡೆಯ ಸುತ್ತಲಿದ್ದ ಮೆಟ್ಟಿಲುಗಳನ್ನು ಇಳಿಯಲಾರಂಭಿಸಿದರು. ಉದ್ದಕ್ಕೂ ಒಂದೊಂದು ಅಂತಸ್ತಿನ ಕೊಠಡಿಗಳಲ್ಲಿ ಒಂದೊಂದು ದಫ್ತರುಗಳು ಇರುವುದನ್ನು ರತ್ನಸಿಂಹನಿಗೆ ವಿವರಿಸುತ್ತಿದ್ದರು. ಮೇಲಿನಿಂದ ಎರಡನೆಯ ಅಂತಸ್ತಿನಲ್ಲಿ ಜ್ಯೋತಿಷ್ಯ-ಪಂಚಾಂಗ-ತಿಥಿಗಳನ್ನು ನಿರ್ಧರಿಸುವ ದಫ್ತರು, ಕೆಳಗೆ ಮೂರು-ನಾಲ್ಕನೆಯ ಅಂತಸ್ತುಗಳಲ್ಲಿ ಮಹಾಲಯದ ಇತಿಹಾಸ ಮತ್ತಿತರ ವಿಷಯಗಳ ದಸ್ತಾವೇಜುಗಳು. ಐದು-ಆರನೆಯ ಅಂತಸ್ತುಗಳಲ್ಲಿ ವೇದ-ಪುರಾಣ-ವೇದಾಂತಗಳ ಒಂದು ವಿಶಾಲ ಗ್ರಂಥಾಲಯ. ಅತೀ ಕೆಳಗಿನ ಎರಡು ಅಂತಸ್ತುಗಳಲ್ಲಿ ಹಣಕಾಸು-ವಿಚಾರಣೆ, ಮಹಾಲಯದ ಬೊಕ್ಕಸ, ಅನೇಕ ದೇವರುಗಳ ಪ್ರತಿಮೆಗಳ ಸಂಗ್ರಹ ಮತ್ತು ಕೋಶಾಧಿಕಾರಿಯ ದಫ್ತರು.

ರತ್ನಸಿಂಹನನ್ನು ಕೋಶಾಧಿಕಾರಿಯ ಬಳಿ ಬಿಟ್ಟು ಶಂಭುಶರ್ಮರು ಪುನಃ ಮೇಲಿನ ಅಂತಸ್ತಿನಲ್ಲಿದ್ದ ತಮ್ಮ ಕಛೇರಿಗೆ ಹತ್ತಲಾರಂಭಿಸಿದರು. ಆರನೆಯ ಮಹಡಿಯನ್ನು ದಾಟಿದ್ದರು ಅಷ್ಟರಲ್ಲಿ ರತ್ನಸಿಂಹನ ರಕ್ಷಾಪಡೆಯ ನಾಯಕ ಸರಸರನೆ ಇಳಿದು ಬರುತ್ತಿದ್ದದ್ದು ಕಾಣಿಸಿತು.

"ಮಹಾರಾಜ್...ಎಲ್ಲಿದ್ದಾರೆ?" ನಾಯಕ ಅತಂಕದಿಂದ ಕೇಳಿದ.

"ಕಳಗೆ-ಕೋಶಾಧಿಕಾರಿಯ ಬಳಿ...ಏಕೆ-ಏನಾಯಿತು?" ಶರ್ಮರು ವಿಚಾರಿಸಿದರು.

ರತ್ನಸಿಂಹನು ಗದ್ದಲವನ್ನು ಕೇಳಿಸಿಕೊಂಡು ಹೊರಬಂದನು.

"ಮಹಾರಾಜ್- ​ಕೀ-ಜೈ-ಹೋ. ಮಹಾರಾಜ್, ತುರುಷ್ಕರು ಮಂದಿರಕ್ಕೆ ಮುತ್ತಿಗೆಯಿಟ್ಟಿದ್ದಾರೆ. ನೊಡಿದರೆ ಶಹನಶಾಹನ ಸೈನ್ಯದಂತೆ ಕಾಣಿಸುತ್ತಿದೆ. ಸುಮಾರು ಐದುಸಹಸ್ರ ಸೈನಿಕರ ತುಕಡಿ ಬಂದಿದೆ. ಇಲ್ಲಿ ಅವರನ್ನೋಡಿಸಲು ನಮ್ಮ ರಕ್ಷಾತುಕಡಿ ಬಿಟ್ಟರೆ ತರಬೇತಿ ಪಡೆದವರು ಬೇರಾರೂ ಇಲ್ಲ. ಮಹಾಲಯದ ರಕ್ಷಣೆ ಮಾಡುವುದು ಸಂದೇಹಾಸ್ಪದವಾಗಿ ಕಾಣಿಸುತ್ತಿದೆ" ಉದ್ವಿಗ್ನನಾಗಿ ಹೇಳಿದ. 'ಅಲ್ಲಾಹು-ಅಕ್ಬರ್' ಎಂಬ ನಾರೆ ಆಗಲೇ ಕೇಳಬರುತ್ತಿತ್ತು.

ರತ್ನಸಿಂಹನು "ಶರ್ಮಾಜಿ, ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ" ಎನ್ನುತ್ತ ತುಕಡಿಯ ನಾಯಕತ್ವ ವಹಿಸಿಕೊಳ್ಳಲು ಮುಖ್ಯ-ದ್ವಾರದ ಕಡೆಗೆ ಧಾವಿಸಿದ.

ರಾಜ್​ಪೂತರ "ಹರ-ಹರ-ಮಹಾದೇವ್" ಘೋಷಣೆ, ಶಹನಶಾಹನ ಸೈನ್ಯದ "ಅಲ್ಲಾಹು-ಅಕ್ಬರ್" ನಾರೆಯೊಂದಿಗೆ ಭೀಕರ ಘರ್ಷಣೆ ನಡೆಯಿತು. ಭಕ್ತಾದಿಗಳೊಡನೆ ಕೂಡಿ ರಾಜಪೂತರು ವೀರಾವೇಶದಿಂದ ಹೋರಾಡಿದರೂ ಪರಿಣಾಮ ಮೊದಲೇ ತಿಳಿದಿದ್ದ ವಿಚಾರವಾಗಿತ್ತು.

ಯುದ್ಧಾನಂತರ ಶಹನಶಾಹನ ನಾಯಕ ಮಹಾಲಯವನ್ನು ಪ್ರವೇಶಿಸಿದಾಗ ಅವನಿಗೆ ದೇವಾಲಯದ ಸಂಪತ್ತಾಗಲಿ, ದಾಖಲೆ-ಗ್ರಂಥಗಳಾಗಲಿ, ದೇವ-ದೇವತೆಗಳ ಮೂರ್ತಿಗಳಾಗಲಿ ಸಿಗಲಿಲ್ಲ. ಕೇವಲ ಖಾಲಿ ಇಮಾರತ್ತು ಅವನ ಕೈಹತ್ತಿತು. "ಸುವರ್ ಕಾಫೀರರು. ಅವರ ಆರಾಧ್ಯ ಕಲ್ಲುಗಳು ನಮ್ಮ ಮಸೀದಿಯ ಹಾದಿಯಲ್ಲಿ ಹಾಕಿ ದಿನವೂ ನಮಾಜ್​ಗೆ ಹೋಗುವಾಗ ತುಳಿದು ಹೋಗೋಣವೆಂದರೆ, ಕೈಗೆ ಸಿಗದಂತೆ ಮಾಡಿದ್ದಾರೆ" ಎಂದು ಶಪಿಸುತ್ತ ಮಂದಿರವನ್ನು ವಶಪಡಿಸಿಕೊಂಡನು.


ಕ್ರಿ.ಶ.೨೦೦೭-ನವದೆಹಲಿ

ಜನ್ ​ಪಥ್​ನಲ್ಲಿರುವ ಆರ್ಕಿಯಾಲಾಜಿಕಲ್-ಸರ್ವೇ-ಆಫ್-ಇಂಡಿಯಾದ ಪ್ರಧಾನಕಾರ್ಯಾಲಯದೊಳಗೆ ಡೈರೆಕ್ಟರ್-ಜನರಲ್​ರ ಕ್ಯಾಬಿನ್​ನಲ್ಲಿ ಡಿ.ಜಿ. ಅನ್ಶುಮಾನ್ ವಸಿಷ್ಟ್ ತಮ್ಮ ಕೆಳಗೆ ಡೈರೆಕ್ಟರ್-ಆಫ್-ಮಾನ್ಯುಮೆಂಟ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶುಭಕರನೊಂದಿಗೆ ಮಾತನಾಡುತ್ತಿದ್ದರು.

"ನೀನು ಕೇಳ್ತಿರೋದು ಎಂಥಹ ಸೂಕ್ಷ್ಮ ವಿಚಾರವೆಂದು ನಿನಗೆ ತಿಳಿದಿದೆಯೇ, ಶುಭಕರ್? ಈ ವಿಚಾರವನ್ನು ನಾನು ಮಿನಿಸ್ಟ್ರಿ-ಆಫ್-ಕಲ್ಚರ್​ನಲ್ಲಿ ಪ್ರಸ್ತಾಪಿಸಿದರೆ ಎರಡೇ‌ ಸೆಕೆಂಡುಗಳಲ್ಲಿ ನನ್ನನ್ನೂ-ನಿನ್ನನ್ನೂ‌ ವರ್ಗಾಯಿಸಿಯಾರು. ನೀನು ಉತ್ತೇಜನ ಕೊಟ್ಟು ತೆಗೆಸಿದ ಡಾಕ್ಯುಮೆಂಟರೀನೇ ತೊಗೋ-ಪ್ರದರ್ಶನದ ಮುಂಚೆಯೇ ಬ್ಯಾನ್ ಮಾಡಲಿಲ್ಲವೇ?"

ಶುಭಕರ ಸುಮಾರು ೩೫-ವರ್ಷದ ವ್ಯಕ್ತಿ. ತೆಳ್ಳನೆಯ-ಕ್ರೀಡಾಸಕ್ತನ ಮೈಕಟ್ಟು, ತಲೆ ತುಂಬ ಕೂದಲು, ಸಾಹಸವನ್ನು ಹುಡುಕುತ್ತಿರುವಂತೆ ಹೊಳೆವ ಚುರುಕು ಕಣ್ಣುಗಳು. ಎರಡು ವರ್ಷಗಳ ಹಿಂದೆ ಡಿ.ಜಿ.ವಸಿಷ್ಟ್ ಅಮೇರಿಕದ ಆರಿಜೋನಾ-ರಾಜ್ಯದಲ್ಲಿ ಟ್ಯೂಸಾನ್​ನಲ್ಲಿರುವ ಯೂನಿವರ್ಸಿಟಿ-ಆಫ್-ಅರಿಜೋನಾಗೆ ಭೇಟಿ ಕೊಟ್ಟಾಗ ಅಲ್ಲಿಯ ಡಿಪಾರ್ಟ್​ಮೆಂಟ್-ಆಫ್-ಆರ್ಕಿಯಾಲಜಿಯಲ್ಲಿ ರಿಸರ್ಚ್-ಪ್ರೊಫೆಸರ್​ಆಗಿದ್ದ ಡಾಕ್ಟರ್-ಶುಭಕರನ ಪರಿಚಯವಾಯಿತು. ಶುಭಕರ ಪ್ರಾಕ್ತನಶಾಸ್ತ್ರಕ್ಕೆ ತಂತ್ರಜ್ಞಾನದ ಕಿಚ್ಚು ಹೊತ್ತಿಸಿ ಇಜಿಪ್ತ್, ಇಸ್ರೇಲ್, ಹಾಗು ಗ್ರೀಸ್ ದೇಶಗಳಲ್ಲಿ ಉತ್ಖನನಗೊಂಡ ಅವಶೇಷಗಳನ್ನು ಹುಡುಕಿ, ಹೊರತೆಗೆದು ಆರ್ಕಿಯಾಲಜಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದ. ಕಾಲ-ಕ್ರಮೇಣ ಇಬ್ಬರ ನಡುವೆ ಸ್ನೇಹ-ಗೌರವ ಬೆಳೆದು, ವಸಿಷ್ಟ್ ಶುಭಕರನಿಗೆ ಏ.ಎಸ್.ಐ ಡೈರೆಕ್ಟರ್-ಆಫ್-ಮಾನ್ಯುಮೆಂಟ್ಸ್ ಹುದ್ದೆ ನೀಡಿದಾಗ ಶುಭಕರ ಅದನ್ನು ಸ್ವೀಕರಿಸಿ ಭಾರತಕ್ಕೆ ಹಿಂತಿರುಗಿದ್ದ. ಕಳೆದ ಎರಡು ವರ್ಷಗಳಲ್ಲಿ ಇಬ್ಬರ ಮೈತ್ರಿ ಇನ್ನೂ‌ ಹೆಚ್ಚಾಯಿತೇ ಹೊರತು, ಮೇಲಾಧಿಕಾರಿ-ಕೀಳಾಧಿಕಾರಿಯೆಂಬ ಸಂಬಂಧ ಬೆಳೆಯಲಿಲ್ಲ. ಹಾಗಾಗಿ ಶುಭಕರ ಮನಸು ಬಿಚ್ಚಿ ಮಾತನಾಡಿದ:

"ಹುಹ್!‌ ನಮ್ಮ ದೇಶದಲ್ಲಿ ಬಿಡಿ-ಹೆಸರಿಗೆ ಮಾತ್ರ ಫ್ರೇ-ಪ್ರೆಸ್, ಡೆಮಾಕ್ರಸಿ. ಪುಸ್ತಕ, ಸಿನಿಮಾ, ಎಟ್ಸೆಟ್ರಾ ಬ್ಯಾನ್ ಮಾಡ್ತಿರೋವರೆಗು ನಮ್ಮವರು ಉದ್ಧಾರವಾಗೋದಿಲ್ಲ. ಮೈನಾರಿಟಿ-ಸೆಂಟಿಮೆಂಟ್​ಗೆ ಅಥವ ರಾಜಕಾರಣಿಗಳಿಗೆ ನೋವಾಗುತ್ತೆ ಅನ್ನೋ ನೆಪ ಮಾಡಿ ಕಂಡಿದ್ದನ್ನೆಲ್ಲ ಬ್ಯಾನ್ ಮಾಡೋದು ಕೇವಲ ಪಬ್ಲಿಸಿಟಿ ಮತ್ತೆ ವೋಟ್​ಬ್ಯಾಂಕ್ ಗಟ್ಟಿ ಮಾಡಿಕೊಳ್ಳೋ ಸಾಧನ. ಮೆಜಾರಿಟಿ-ಸೆಂಟಿಮೆಂಟ್​ಗೆ ನೋವಾಗುತ್ತೆಯಂತ ಯಾವ ಪುಸ್ತಕವಾಗಲಿ, ಸಿನಿಮಾ-ಆಗಲಿ ಬ್ಯಾನ್ ಮಾಡಿದ್ದಾರೆಯೇ? ಸಾಕ್ಷಿ ಸಹಿತ ತಯಾರ್ ಮಾಡಿದ್ದ ಡಾಕ್ಯುಮೆಂಟರಿ ಅದು. ಯಾರಿಗಾದರೂ‌ ಬೇಕಿದ್ದರೆ ಆ ಸಾಕ್ಷಿಳು ತಪ್ಪೆಂದು ವಾದ ಮಾಡಲಿ-ನಾನು ಸಮ್ಮತಿಸಿಕೊಳ್ಳುವೆ. ಇಲ್ಲವೇ ನೋವಾಗಿದ್ದಲ್ಲಿ ನ್ಯಾಯಾಂಗ ಇರೋದೇಕೆ?‌ ಮುಕದ್ದಮೆ ಹೂಡಲಿ-ಅಲ್ಲೂ‌ ವಾದ ಮಾಡೋಕ್ಕೆ ಸಿದ್ಧ ನಾನು. ಅದೆಲ್ಲಾ ಬಿಟ್ಟು ಬ್ಯಾನ್ ಮಾಡಿದರೆ...ಹೋಗಲಿ ಬಿಡಿ, ನಿಮ್ಮೆದುರು ಅದನ್ನ ಹೇಳಿಕೊಂಡು ಉಪಯೋಗವಿಲ್ಲ"

ಗರ್ಭಿತ ಮೌನ ತಾಳಿತು. ಶುಭಕರ ವಸಿಷ್ಟರ ಮುಜುಗರವನ್ನು ಕಂಡು ವಿಚಿತ್ರವಾದ ತೃಪ್ತಿ ಕಾಣತೊಡಗಿದ. ಕೊಂಚ ಸಮಯದ ನಂತರ ವಸಿಷ್ಟರೇ ಮುಂದುವರೆಸಿದರು

"ಸೋ...?"

"ನೋಡಿ ಸರ್, ಪುಢಾರಿಗಳ ಜೊತೆ ಕಿತ್ತಾಡೋಕ್ಕೆ ನನಗೆ ಬರೋದಿಲ್ಲ. ಅದು ನಿಮ್ಮ ಕೆಲಸ. ನನಗೆ ಈ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಡೋದಾಗಿ ಹೇಳಿಯೇ ನೀವು ನನಗೆ ಈ‌ ಕೆಲಸ ನೀಡಿದ್ದು. ಈಗ ಆ ಭಾಷೆಗೆ ಹಿಂದೆ ಹೋದರೆ ನನ್ನ ರೆಸಿಗ್ನೇಶನ್ ನಿಮ್ಮ ಟೇಬಲ್​ಮೇಲೆ ತಲುಪಿಸ್ತೀನಿ" ಶುಭಕರ ಕಠೋರತನದ ನಟನೆ ಮಾಡುತ್ತ ಹೇಳಿದ.

ವಸಿಷ್ಟರಿಗೆ ಈ ನಟನೆ ತಿಳಿದರೂ‌ ಶುಭಕರ ಅನ್ಯಾಯವಾಗಿ ಯಾವುದಕ್ಕೂ‌ ಒತ್ತಾಯ ಪಡಿಸುವವನಲ್ಲವೆಂದು ಅರಿತವರು. ಅವರೂ‌ ಕೋಪದ ನಟನೆ ಮಾಡುತ್ತ "ನಿನಗೆ ಕೊಟ್ಟ ಭರವಸೆ ಒಂದಲ್ಲ ಒಂದಿನ ನನ್ನ ಕುತ್ತಿಗೆಗೇ ಬರುತ್ತೆ. ಒಳ್ಳೆ ದಶರಥ-ಕೈಕೇಯಿಯರ ಕಥೆಯಾಯಿತು" ಎಂದು ಗೊಣಗಿದರು.

"ಹೂಂ-ನಾನೇ ಕೈಕೇಯಿ...ಇಷ್ಟಾಗಿ ನೀವಾದರೂ‌ ಆ ಸಾಕ್ಷ್ಯಚಿತ್ರ ನೋಡಿದ್ದೀರ?" ಶುಭಕರ ಧ್ವನಿ ಬದಲಾಯಿಸಿ ಕೇಳಿದ. ಅವನ ಕಣ್ಣುಗಳಲ್ಲಿ ಮುಗುಳ್ನಗೆ ತುಂಬಿತ್ತು.

"ಊಂ...ಆಂ...ಅದೂ..."‌ ತಡವರಿಸಿದರು ವಸಿಷ್ಟ್.

"ಏಕೆ?‌ ನೀವೂ‌ ಕೂಡ ಫಾಲ್ಸ್-ಲಿಬರಲ್ ಆಗಿದ್ದೀರ್ಯೇ? ಇಲ್ಲವೇ ಸೂಡೋ-ಸೆಕ್ಯುಲರಿಸ್ಟ್ ಎನ್ನಲೆ?"

"ಹಾಗೇನಿಲ್ಲ...ಸಮಯವಾಗಿಲ್ಲ...ನೀನ್ಯಾಕೆ ನನ್ನನ್ನ ಧರ್ಮಸಂಕಟಕ್ಕೆ ಸಿಕ್ಕಿಸಿ ಅದರಿಂದ ಮಜಾ ತೊಗೊಳ್ತೀಯ?"

ಶುಭಕರ ಜೋರಾಗಿ ನಕ್ಕಿದ. ವಸಿಷ್ಟರೂ‌ ಅವನೊಂದಿಗೆ ಸೇರಿಕೊಂಡರು. "ಹೇಗಿದ್ದರೂ‌ ನೊಣ ಹೊಡೀತ್ತಿದ್ದೀರಿ. ಈಗಲೇ ಏಕೆ ಒಮ್ಮೆ ಆ ಚಿತ್ರ ನೋಡಬಾರದು?"‌ ಶುಭಕರ ಕೇಳಿದ.

"ಅದೀಗೆಲ್ಲಿ ಸಿಕ್ಕೀತು?"

"ನಿಮಗಾಗಿಯೇ ನನ್ನ ಆಫೀಸಿನಲ್ಲಿ ಒಂದು ಕಾಪಿ ಇಟ್ಟುಕೊಂಡಿದ್ದೀನಿ. ತರುತ್ತೀನಿ ನಿಲ್ಲಿ-ಲ್ಯಾಪ್​ಟಾಪಿನಲ್ಲಿ ಪ್ಲೇ-ಮಾಡಬಹುದು" ಎನ್ನುತ್ತ ಶುಭಕರ ಎದ್ದು ಹೊರಟ.


ಮುಝಾಫರಾಬಾದ್, ಪಾಕಿಸ್ತಾನ-ಆಕ್ರಮಿಸಿದ-ಕಾಶ್ಮೇರ

ಶಲ್ವಾರ್ ಧರಿಸಿದ್ದ ಲತೀಫ್ ತನ್ನ ತಲೆಯ ಪೇಟವನ್ನು ಮುಖಕ್ಕೆ ಮುಚ್ಚಿಕೊಂಡು ಸಣ್ಣ ಗಲ್ಲಿಗಳನ್ನು ಹಾಯ್ದು ಊರ ಮಧ್ಯವಿದ್ದ ಹಳೆಯ ಮೊಹಲ್ಲಾವೊಂದರೊಳಗೆ ಪ್ರವೇಶಿಸಿದ. ಅಲ್ಲಿ ಒಂದು ಚಿಲ್ಲರೆ ಅಂಗಡಿಯನ್ನು ಹೊಕ್ಕು ತನ್ನ ಮುಸುಕು ತೆಗೆದಾಗ ಮಾತನಾಡದೆ ಅಂಗಡಿಯ ಮಾಲಿಕ ತನ್ನ ಹಿಂದಿದ್ದ ಬಾಗಿಲಕಡೆ ಸನ್ನೆ ಮಾಡಿ ತೋರಿಸಿದ. ಬಾಗಿಲೊಳ ಹೊಕ್ಕ ಲತೀಫ್ ಒಳಗಿನ ಕೋಣೆಯ ನೆಲದಲ್ಲಿದ್ದ ಬಾಗಿಲೊಂದನ್ನು ತೆಗೆದು ಏಣಿ ಇಳಿದು ಕೆಳಗೆ ಹೋದ. ಅಲ್ಲಿ ನಮಾಜ್ ಮಾಡುತ್ತಿದ್ದ ಜನಾಬ್-ಕಾಝಿಯನ್ನು ಕಂಡು ಸದ್ದಿಲ್ಲದೆ ನಿಂತ. ಕಾಝಿ ನಮಾಜ್ ಮುಗಿಸಿ ಎದ್ದಮೇಲೆ

"ಅಸ್ಸಲಾಂ-ಅಲೈಕುಮ್, ಭಾಯ್ಜಾನ್"‌ ಲತೀಫ್ ವಿನಯದಿಂದ ಹೇಳಿದ.

"ವಾಲೆಕುಂ-ಸಲಾಂ"‌ ಮೀಸೆಯಿಲ್ಲದ ದಟ್ಟ ಗಡ್ಡ ಹಾಗು ಧಡೂತಿ ಮೈಕಟ್ಟನ್ನು ಹೊಂದಿದ್ದ ಕಾಝಿ ಗಾಢ ದ್ವನಿಯಲ್ಲಿ ಮಾತನಾಡಿದ.ಸೂರ್ಮಾ ಮೆತ್ತಿದ ಕಪ್ಪು ಕಣ್ಣುಗಳಲ್ಲಿ ಕಟುಕತನ ತುಂಬಿತ್ತು. ಬಣ್ಣ-ರಹಿತ ತೆಳ್ಳನೆ ತುಟಿಗಳಲ್ಲಿ ಎಂದೂ ಮುಗುಳ್ನಗೆ ಮೂಡಿರಲಿಲ್ಲ. ಕಾಝಿ ಭಾರತದ ಕಾಶ್ಮೇರದಲ್ಲಿ ನಡೆದ ಅರ್ಧ ಭಯೋತ್ಪಾದಕ ಘಟನೆಗಳ ಪ್ರಚೋದಕ. ೯೦ರ ದಶಕದ ಆರಂಭದಲ್ಲಿ ಹತ್ತಾರು ಘಟನೆಗಳಲ್ಲಿ ಭಾಗವಹಿಸಿ, ನೂರಾರು ಜನರ ಸಾವಿಗೆ ಕಾರಣನಾಗಿ, ನಂತರ ತನ್ನ ಮೇಲೆ ಭಾರತೀಯ ಸೇನೆಯ ಬಿಸಿ ಹೆಚ್ಚಾದಾಗ ಮುಝಾಫರಾಬಾದಿಗೆ ಪಲಾಯನ ಮಾಡಿ ಅಲ್ಲಿನಿಂದ ಲತೀಫ್​ನಂತಹ ಪಧಾತಿಗಳ ಮೂಲಕ ಭಾರತದ ಮೇಲೆ ಹಿಂಸಾಚಾರ ಮುನ್ನಡೆಸುತ್ತಿದ್ದ. "ಬಾ ಲತೀಫ್-ಅಲ್ಲಾಹ್ ನಿನ್ನನ್ನು ಉನ್ನತ ಕೆಲಸಗಳಿಗೆ ಆರಿಸಿದ್ದಾನೆ"

"ಅಲ್ಲಾಹ್-ಮೆಹೆರ್ಬಾನ್"‌ ಎಂದಷ್ಟೇ ಹೇಳಿ ಲತೀಫ್ ಸುಮ್ಮನಾದ.

ಕೊಂಚ ಸಮಯ ಭಾರತದ ವಿರುದ್ಧ ನಡೆಸುತ್ತಿದ್ದ ಆತಂಕವಾದದ ವಿಚಾರ ಕುರಿತು ಮಾತನಾಡಿದರು. ಕೊನೆಗೆ ಕಾಝಿ ಲತೀಫ್​ನನ್ನು ಕರೆಸಿದ ಕಾರಣ ವಿವರಿಸ ತೊಡಗಿದ.

"ಹಿಂದೋಸ್ಥಾನದಲ್ಲಿರುವ ಎಷ್ಟೋ‌ ಇಮಾರತ್ತುಗಳು ನಮ್ಮ ಕೌಮಿನವರು ಕಟ್ಟಿಸಿದ್ದು. ತುಘ್ಲಕರು, ಲೋಧಿಗಳು, ಮುಘಲರು, ಕಟ್ಟಿಸಿದ ಇಮಾರತ್ತುಗಳು. ವತನ್ ವಿಭಾಗದ ಸಮಯದಲ್ಲಿ ನಾವು ಇವುಗಳನ್ನೆಲ್ಲ ಕೆಡವಿ ಒಂದೊಂದು ಕಲ್ಲನ್ನೂ‌ ನಮ್ಮ ಪಾಕ್-ವತನ್​ಗೆ ಸಾಗಿಸಿ, ಇಲ್ಲಿ ಪುನಃ ಸಂಯೋಜಿಸುವುದಾಗಿ ಹೇಳಿದೆವು. ಆದರೆ ಫಿರಂಗಿಯರ ದುಸ್ಸಾಹಸ, ಕಾಫೀರ್-ಹಿಂದೂಗಳ ಕುತಂತ್ರದಿಂದ ಇದು ಸಾಧ್ಯವಾಗದೆ ನಮ್ಮ ಕೌಮಿಗೇ ದೂಷಣೆಯಂತೆ ಇಂದಿಗೂ‌ ಅವು ಆ ಕಾಫೀರ್-ದೇಶದಲ್ಲೇ ನಿಂತಿವೆ. ಅವು ನಮಗೆ ಸಿಗದಿದ್ದರೆ ಬೇಡ; ಆ ದಾರ್-ಉಲ್-ಹರಬ್​ನಲ್ಲಿ ನಿಂತಿರುವುದು, ಅಲ್ಲಿಗೆ ಶಾನ್ ತರುವುದು ಅಲ್ಲಾಹ್​ನಿಗೆ ಒಪ್ಪಿಗೆಯಿಲ್ಲ. ಬಾರ್ಡರ್ ದಾಟಿ, ಹಿಂದೋಸ್ಥಾನಕ್ಕೆ ಹೋಗಿ ಆ ಇಮಾರತ್ತುಗಳನ್ನು ನಿರ್ನಾಮ ಮಾಡುವುದು ನಿನಗೆ ನಿಗದಿಸಿದ ಕೆಲಸ"‌

"ಭಾಯ್ಜಾನ್, ಇಸ್ಲಾಮೀ ಇಮಾರತ್ತುಗಳನ್ನೇಕೆ ಕೆಡವಬೇಕು?‌ ಮಸೀದಿಗಳನ್ನು ತಮಾಮ್ ಮಾಡುವುದು ಅಲ್ಲಾಹನಿಗೆ ಪ್ರಿಯವಾದೀತೇ?‌ ಅದರ ಬದಲು ಕಾಫಿರ್..."

"ಖಾಮೋಷ್, ಗುಸ್ಥಾಖ್"‌ ಕಾಝಿ ಗುಡುಗಿದ. ನಂತರ ಸ್ವಲ್ಪ ಸಮಾಧಾನದಿಂದ "ನಾನು ಮಸೀದಿಯನ್ನು ನಷ್ಟಮಾಡುವುದರ ಬಗ್ಗೆ ಮಾತನಾಡುತ್ತಿಲ್ಲ. ಕುತುಬ್​ಮಿನಾರ್, ಚಾರ್​ಮಿನಾರ್, ಗೋಲ್​ಗುಂಬಝ್​ನಂತಹ ಪ್ರವಾಸೀ‌ ಇಮಾರತ್ತುಗಳ ಮೇಲೆ ಧಾಳಿ ನಡೆಸಿದರೆ ಆ ಕಾಫಿರ್​ಸ್ಥಾನದಲ್ಲಿ ದಂಗಾ-ಫಸಾದ್ ಉಂಟಾಗುತ್ತೆ, ಜೊತೆಗೆ ಆ ಕಾಫಿರರಿಗೆ ಅವರ ಒಂದೊಂದು ಹಳ್ಳಿಯೂ, ಪಟ್ಟಣವೂ‌ ಸುರಕ್ಷಿತವಲ್ಲವೆಂಬ ಆತಂಕ ಹುಟ್ಟುತ್ತೆ. ಮೇಲಾಗಿ ಇಸ್ಲಾಮೀ‌ ಇಮಾರತ್ತುಗಳ ಮೇಲೆ ಹಮ್ಲಾ ಮಾಡಿದರೆ ಅದರ ಶಕ್ ಕಾಫಿರರ ಮೇಲೇ ಬೀಳುತ್ತೆ. ಗಡಿಯಲ್ಲಿ ಹಿಂದೋಸ್ಥಾನದ ಆರ್ಮಿ ಒಳಗೆ-ಹೊರಗೆ ಎರಡೂ‌ಕಡೆ ನೋಡಬೇಕಾದರೆ ನಮ್ಮಮೇಲಿರುವ ಬಿಸಿ ಸ್ವಲ್ಪ ತಂಪಾದೀತು" ಎಂದು ವಿವರಿಸಿದ.

"ಆಗಲಿ, ಭಾಯ್ಜಾನ್-ಈ ಆಪರೇಶನ್​ಗೆ ಏನು ಇನ್ತಝಾಮ್ ಮಾಡಬೇಕು?" ನಮ್ರನಾಗಿ ಲತೀಫ್‌ ಕೇಳಿದ.

"ತಲಾ ಆರು ಆದ್ಮಿಯ ಐದು ಲಶ್ಕರ್ ತಯಾರಿಸಿಕೋ. ಸಮಯ ನೋಡಿ ಬಾರ್ಡರ್ ಪಾರು ಮಾಡಬೇಕು. ಆಮೇಲೆ..."‌ ಕಾಝಿ ತನ್ನ ಉಪಾಯ ಮುಂದುವರೆಸಿದ.


ನವದೆಹಲಿ

"ತಾಜ್ ​ಮಹಲ್-ವಿಶ್ವದ ಎಂಟನೆ ವಿಸ್ಮಯವೆನ್ನುತ್ತಾರೆ, ಪ್ರೇಮದ ಸ್ಮಾರಕವೆನ್ನುತ್ತಾರೆ. ಇದೇ ಜಗಜನಿತ ವಿಚಾರ. ಇದು ಶಹ್​ಜಹಾನ್-ಮುಮ್ತಾಝ್ ಗೋರಿಯೇ? ಅಥವ ವಾಸ್ತವವಾಗಿ ಹಿಂದು ದೇವಾಲಯವೇ? ಬನ್ನಿ ಈ ವಿಚಾರವಾಗಿ ಕೆಲವು ಸಾಕ್ಷಿಗಳನ್ನು ಪರೀಕ್ಷೆ ಮಾಡೋಣ"‌ ತಾಜ್​ಮಹಲ್​ನ ಚಿತ್ರ ತೋರಿಸುತ್ತ ಹಿನ್ನೆಲೆಯಲ್ಲಿ ವ್ಯಾಖ್ಯಾನಕಾರ ಹೇಳುತ್ತಿದ್ದ.

ಸ್ಕ್ರೀನ್ ಮೇಲೆ ತಾಜ್​ಮಹಲ್​ನ ಜಗಜನಿತ ಇತಿಹಾಸ ಸಂಕ್ಷಿಪ್ತವಾಗಿ ಮೂಡಿಬರುತ್ತಿತ್ತು. ಡಿ.ಜಿ ಕ್ಯಾಬಿನ್​ನಲ್ಲಿ ವಸಿಷ್ಟ್ ಶುಭಕರನ ಕಡೆ ನೋಡಿ ಹುಬ್ಬೇರಿಸಿದರು. ಶುಭಕರ ಮುಗುಳ್ನಗೆ ಬೀರಿದರೂ ಮಾತನಾಡಲಿಲ್ಲ.

"ವಾಸ್ತುಶಾಸ್ತ್ರದ ಪ್ರಕಾರ ತಾಜ್​ಮಹಲ್ ನೋಡಿದರೆ ಮೊಗಲ್ ಕಟ್ಟಡದಂತೆ ತೋರುತ್ತದೆಯೇ?‌ ಗುಮ್ಮಟವನ್ನು ಕಂಡ ಕೂಡಲೆ ಸಾರಸೆನಿಕ್-ಶೈಲಿಯ ಮೊಗಲ್-ವಾಸ್ತು ನೆನಪಿಗೆ ಬರುತ್ತದೆ. ಆದರೆ ಮೊಗಲ್ ಶೈಲಿಯ ಗುಮ್ಮಟವೆಂದರೇನು? ಇದು ನಿಜವಾಗಿ ಮೊಗಲ್ ಶೈಲಿಯೇ?"‌ ಎಂದು ಕಾಮೆಂಟೇಟರ್ ಅಖಂಡನೀಯ ಆಧಾರಗಳ ಸಮೇತ ಸಮರ್​ಖಂಡ್​ನ ಸಾರಾಸೆನಿಕ್ ಶೈಲಿ ಭಾರತದಲ್ಲೇ‌ ಜನಿಸಿರಬಹುದೆಂದು, ಕೆನಿಷ್ಠ ಪಕ್ಷ ತಾಜ್​ಮಹಲ್​ನ ಛಾವಣಿಯಾಗಿರುವ ಉಬ್ಬಿದ-ಗುಮ್ಮಟ ಮತ್ತು ಏಕಶೃಂಗ-ಕಮಾನುಗಳು ಕೇವಲ ಇಸ್ಲಾಂನ ಕಟ್ಟಡಗಳಿಗೆ ಸೀಮಿತವಲ್ಲವೆಂದು ಸಾಬೀತು ಪಡಿಸಿದ. ತಾಜ್​ಮಹಲ್ ಸುತ್ತಲಿರುವ ನಾಲ್ಕು ಮಿನಾರುಗಳು ಕೂಡ ಮೂಲ ಕಟ್ಟಡದಲ್ಲಿಲ್ಲದೆ ನಂತರ ಸೇರಿಸಿದವೆಂಬುದನ್ನೂ‌ ವ್ಯಕ್ತಪಡಿಸಿದ. ತಾಜ್​ಮಹಲ್ ಬಲಭಾಗದಲ್ಲಿರುವ ಕಟ್ಟಡ ಮುಸಲ್ಮಾನರ ಅತಿಶ್ರೇಷ್ಠ ಪಟ್ಟಣವಾದ ಮಕ್ಕಾ‌ದೆಡೆ-ಪಶ್ಚಿಮಕ್ಕೆ ತಿರುಗಿರದೆ ಪೂರ್ವಕ್ಕೆ ತಿರುಗಿರುವುದರಿಂದ ಅದು ಮಸೀದಿಯಾಗಿರಲು ಸಾಧ್ಯವಿಲ್ಲ, ಮೇಲಾಗಿ ಭವ್ಯ ಗೋರಿಯ ಪಕ್ಕದಲ್ಲಿ ಸಾಧಾರಣ ಮಸೀದಿಯ ಅಗತ್ಯವೂ ಇಲ್ಲವಾದ್ದರಿಂದ ತಾಜ್​ಮಹಲ್ ಎರಡು ಬದಿಯಲ್ಲಿರುವ ಕಟ್ಟಡಗಳು ತಾಜ್​ಮಹಲ್​ನ ಹಿಂದಿನ ಅವತಾರದಲ್ಲಿ ಛತ್ರಗಳಾಗಿದ್ದಿರಬೇಕೆಂದು ವಿವರಿಸಿದ.

"ಹಲವಾರು ರಾಜ್​ಪೂತ್ ಅರಮನೆಗಳಲ್ಲಿ ಹಾಗು ಹಿಂದು ದೇವಾಲಯಗಳಲ್ಲಿ ಇದೇ ವಾಸ್ತುಶೈಲಿಯನ್ನು ಕಾಣಬಹುದು. ಮಧ್ಯೆ ದೊಡ್ಡ ಗುಮ್ಮಟವಿದ್ದು, ಸುತ್ತ ನಾಲ್ಕು ಸಣ್ಣ ಗುಮ್ಮಟಗಳಿವೆ. ಹಿಂದು ಮನೆಗಳಲ್ಲಿನ ದೇವರ-ಮಂಟಪ ಕೂಡ ಇದೇ ರೀತಿ ಮಧ್ಯ ದೊಡ್ಡ ಗುಬುಟು,ಸುತ್ತ ನಾಲ್ಕು ಸಣ್ಣ ಗುಬುಟುಗಳು ಸೇರಿದಂತಿರುತ್ತದೆ.‌ ಈ ಗುಬುಟುಗಳಿಗೆ 'ಕಲಶ'ವೆಂದೇ ಹೆಸರು. ಗುಮ್ಮಟಗಳ ಮೇಲೆ ಕವಿಚಿದ ಕಮಲದ ಹೂವಿದ್ದು, ಆ ಹೂವಿನ ತೊಟ್ಟು ಶಿಖರದ ತುದಿಯಾಗಿದೆ. ಶಿಖರದಲ್ಲಿರುವುದು ಇಸ್ಲಾಂನ ಬಾಲಚಂದ್ರ-ತಾರೆಯ ಚಿಹ್ನೆಯಲ್ಲ, ಮಾವಿನಎಲೆ-ತೆಂಗಿನಕಾಯಿ ಹೊತ್ತ ಕುಂಭದ ಕಲಶ-ಇದರ ಪ್ರತಿರೂಪವನ್ನು ತಾಜ್​ನ ಪೂರ್ವ-ಒಳಾಂಗಣದಲ್ಲೂ ಕಾಣಬಹುದು. ತಾಜ್​ನಲ್ಲಿ ಹಲವಾರು ಕಡೆ ಶಂಖ, ತಾವರೆ, ಹಾಗು ಓಂ-ಅಕ್ಷರಗಳ ಕೆತ್ತನೆಯಲ್ಲದೆ ಆನೆ-ಸರ್ಪಗಳ ಚಿತ್ರಣವನ್ನೂ ಕಾಣಬಹುದು-ಆದರೆ ಪ್ರಾಣಿ ಚಿತ್ರಣ ಇಸ್ಲಾಂನಲ್ಲಿ ನಿಷೇಧ. ಎಲ್ಲವೂ‌ ತಾಜ್​ಗೆ ಹಿಂದೂ‌ ಮೂಲವಿರುವುದನ್ನು ತೋರಿಸುತ್ತವೆ" ಎಂದು ಹಿನ್ನೆಲೆ-ವ್ಯಾಖ್ಯಾನ ವಿವರಿಸಿತು.

ಕೆಲ ಕ್ಷಣಗಳ ನಂತರ ತಾಜ್​ಮಹಲ್​ನ ಹಿನ್ನೆಲೆಯಲ್ಲಿ ವ್ಯಾಖ್ಯಾನಕಾರ ಬಂದು ನಿಂತ. "ತಾಜ್​ಮಹಲ್ ಕಟ್ಟಿಸುವುದು ಶಹ್​ಜಹಾನ್​ನಿಗೆ ಆರ್ಥಿಕವಾಗಿ ಬಹುಭಾರದ ಸಮಸ್ಯೆಯೇ ಆಗಿದ್ದಿರಬೇಕು. ಶಹ್​ಜಹಾನ್​ನ ದಿನನಿತ್ಯ ಆಡಳಿತದ ವಿಚಾರ ಕುರಿತು ಆಸ್ಥಾನ-ಪತ್ರಗಳು ಸಿಕ್ಕಿವೆ. ಅವನ ಆಸ್ಥಾನ-ಕವಿಗಳು ಆವನ ಒಂದೊಂದು ಹೆಗ್ಗಳಿಕೆಯನ್ನೂ ಗಗನದೆತ್ತರ ಹಾಡಿ-ಹೊಗಳಿದ್ದಾರೆ. ಶಹ್​ಜಹಾನ್ ಜಾರಿ ಮಾಡಿದ ಕೆಲವು ಫರ್ಮಾನ್​ಗಳು ಸಿಕ್ಕಿವೆ-ಅವು ಸಹಕರಿಸದ ರಾಜಾ-ಜೈಸಿಂಹನಿಗೆ ಮಕ್ರಾನ ಕಲ್ಲುಗಣಿಯಿಂದ ಅಮೃತಶಿಲೆಯನ್ನು ತರಿಸಲು ಅಡ್ಡಿಮಾಡದಿರಲು ಶಹ್​ಜಹಾನ್ ಹಾಕಿದ ಬೆದರಿಕೆಗಳಂತೆ ತೋರುತ್ತವೆಯಷ್ಟೆ. ಎಲ್ಲಿಯೂ ತಾಜ್​ಮಹಲ್​ ನಿರ್ಮಾಣದ ಆರಂಭ-ಅಂತ್ಯಗಳ ದಿನಾಂಕವಷ್ಟೇಯೇಕೆ 'ತಾಜ್​ಮಹಲ್' ಏಂಬ ಹೆಸರಿನ ಉಲ್ಲೇಖವನ್ನೂ ಮಾಡಿಲ್ಲ". ಶಹ್​ಜಹಾನ್​ನನ್ನು ಕುರಿತು ಬರೆದ ಹಲವಾರು ಕವಿಗಳ, ಪ್ರಸಂಗಗಳ, ಚರಿತ್ರೆಗಳ ಹಾಗು ಫರ್ಮಾನ್​ಗಳ ಉದಾಹರಣೆ ಕೊಟ್ಟು ಅವುಗಳಲ್ಲಿ ತಾಜ್​ಮಹಲ್​ನ ನಿಗೂಢ ಗೈರುಹಾಜರಿಯ ವಿಚಾರ ವಿನಿಮಯಿಸಿ ಕಾಮೆಂಟೇಟರ್ ಮರೆಯಾದ.

ಹಿನ್ನೆಲೆ ಸಂಗೀತದ ವಿರಾಮದ ನಂತರ "ಫ್ರೆಂಚ್ ಪ್ರವಾಸಿ ಟೆವರ್ನಿಯೇ ಪ್ರಕಾರ ತಾಜ್​ಮಹಲ್ ಕಟ್ಟಲು ರೂ.೩,೧೭,೪೮,೦೨೬ ವೆಚ್ಛವಾಗಿದೆ, ಇದರ ಮುಖ್ಯ ವಾಸ್ತುಶಿಲ್ಪಿ ಉಸ್ತಾದ್-ಎಸ್ಸಾ; ಕಟ್ಟಲು ೨೦೦೦೦ ಕಾರ್ಮಿಕರು ೨೨ ವರ್ಷಗಳ ಕಾಲ ೧೬೩೧ಇಂದ-೧೬೫೩ವರೆಗೆ ನಿರೆಂತರ ಕೆಲಸ ಮಾಡಿದ್ದಾರೆ. ಇವರುಗಳ ಬಗ್ಗೆ ಹೆಚ್ಚು ವಿವರಣೆ ಸಿಕ್ಕಿಲ್ಲವಾದರೂ ಮುಖ್ಯ ವಾಸ್ತುಶಿಲ್ಪಿಗಳ ಸಂಬಳ ಕುರಿತು ಮತ್ತು ಮುಮ್​ತಾಝ್​ಳ ಗೋರಿ ಕಟ್ಟಲು ೪೦-ಲಕ್ಷ-ರೂಪಾಯಿ ವೆಚ್ಛವಾಗಿದೆ ಎಂದು ತಿಳಿಸುವ ಶಹ್​ಜಹಾನ್ ಆಸ್ಥಾನದ ಕೆಲವು ಕಾಗದ-ಪತ್ರಗಳು ಸಿಕ್ಕಿವೆ. ಟೆವರ್ನಿಯೇ ಪ್ರಮಾಣಗಳಿಗೂ, ಶಹ್​ಜಹಾನ್ ಆಸ್ಥಾನ-ಪತ್ರಗಳಿಗೂ ಹೊಂದಾಣಿಕೆ ಸಿಗುವುದಿಲ್ಲ. ಇದಲ್ಲದೆ ಟೆವರ್ನಿಯೇ ದಾಖಲೆಗಳಲ್ಲಿ ಇನ್ನೂ ಹಲವಾರು ಅಸಮಂಜಸ ಕಾಣಬರುವುದರಿಂದ ಇವನ ಯಾವುದೇ ಅಭಿಲೇಖಗಳಿಗೆ ಮುಖಬೆಲೆ ಕೊಡುವುದು ಅಪಾಯಕಾರಿಯಾಗಿ ತೋರುತ್ತದೆ. ಆದರೂ, ಶಹ್​ಜಹಾನ್ ಅಮೃತಶಿಲೆ ತರಿಸಿದ್ದ, ವಾಸ್ತುಶಿಲ್ಪಿಗಳಿಗೆ ಸಂಬಳ ಕೊಟ್ಟಿದ್ದ ಎನ್ನುವುದರ ಬಗ್ಗೆ ಸಂದೇಹವಿಲ್ಲ. ಇವರುಗಳು ಮೊದಲೇ ನಿಂತಿದ್ದ ತಾಜ್​ನೊಳಗೆ ಅರಬೀ ಬರಹವಿರುವ ಅಮೃತಶಿಲೆಗಳನ್ನು ಕೂರಿಸಿ, ಮುಸಲ್ಮಾನ ಗೋರಿಯಾಗಿ ಬದಲಾಯಿಸುವ ಕೆಲಸದಲ್ಲಿ ತೊಡಗಿದ್ದಿರಬೇಕು. ತಾಜ್​ಮಹಲ್ ಮುಂದಿರುವ ತೋಟ-ಕಾರಂಜಿಗಳಂತು ಮೊಘಲರ ಸಂಕಲನವೆಂದು ತೋರುತ್ತದೆ"‌ ಎಂದು ನೀರೂಪಕ ವಿಷದ ಪಡಿಸಿದ. ಇದಲ್ಲದೆ ಪೀಟರ್ ಮಂಡಿ ಎಂಬ ಬ್ರಿಟೀಷ್-ಪ್ರವಾಸಿ ತಾಜ್​ಮಹಲ್ ಬಹು ಹಳೆಯ ಕಟ್ಟಡವೆಂದು, ಪೋರ್ಚುಗೀಸ್-ಪ್ರವಾಸಿ ಸೆಬಾಸ್ಟಿಯನ್ ಮನ್ರೀಕ್ ಇದರ ಮುಖ್ಯ ವಾಸ್ತುಶಿಲ್ಪಿ ಈಟಲೀ-ದೇಶದ ಗೆರೋನಿಮೋ-ವೆರೋನಿಯೋ‌ ಎಂಬಾತನೆಂದು ಹೇಳಿರುವುದು ಸೇರಿದಂತೆ ಮತ್ತಿತರ ಪ್ರವಾಸಿಗಳ ರುಜುವಾತುಗಳನ್ನು ಪ್ರಸ್ತುತಪಡಿಸಿ ಅವುಗಳಲ್ಲಿರುವ ಅಸಾಮ್ಯಗಳನ್ನು ವಿವರಿಸಿ, "ಮುಘಲ್ ಸಾಮ್ರಾಜ್ಯ ಇತಿಹಾಸದ ಸೂಕ್ಷ್ಮ ವಿವರಗಳ ದಾಖಲೆಗಳಿರಬೇಕಾದರೆ ಅದರ ಉನ್ನತ-ಶಿಖರವೆನಿಸಿದ ತಾಜ್​ಮಹಲ್ ವಿಚಾರದಲ್ಲಿ ಈ‌ ನಿರ್ಲಕ್ಷ್ಯವೇಕೆ?" ಎ೦ಬ ಪ್ರಶ್ನೆ ಹಾಕಿದಾಗ ಮತ್ತೊಂದು ಅಂಕವಿರಾಮ ತಾಳಿತು.

"ಬಾದ್​ಶಹನಾಮಾದಲ್ಲಿ ಹೀಗೆ ಹೇಳಲಾಗಿದೆ 'ಅಕ್ಬರಾಬಾದಿ​ನ (ಆಗ್ರಾ) ದಕ್ಷಿಣಭಾಗದಲ್ಲಿ ರಾಜಾ-ಮಾನ್​ಸಿಂಹನ ಪೌತ್ರನಾದ ರಾಜಾ-ಜೈಸಿಂಹನ ಒಡೆತನದಲ್ಲಿರುವ ಆರಮನೆ [ಮಹಾಲಯ?] ಇರುವ ಸ್ಥಳವನ್ನು ಮುಂತಾಝ್-ಉಲ್-ಝಮಾನಿಯ ಗೋರಿಯಾಗಿ ಆರಿಸಲಾಗಿದೆ. ರಾಜಾ-ಜೈಸಿಂಹನು ಪೂರ್ವಿಕರಿಂದ ತನಗೆ ಬಂದ ಆ ಮಹಲ್​ಅನ್ನು ಬಿಟ್ಟುಕೊಡಲು ಹಿಂಜರಿದರೂ‌ ಶಹನ್​ಶಾಹ್-ಶಹ್​ಜಹಾನ್​ನನಿಗೆ ಮುಫ್ತಾಗಿ ಕೊಡಬೇಕಾಯಿತು. ಆ‌ ಭವ್ಯ ಆಲಯದ ಬದಲಿಗೆ ರಾಜಾ-ಜೈಸಿಂಹನಿಗೆ ಸರಕಾರದಿಂದ ಜಮೀನು ಕೊಡಲಾಯಿತು.ಮರುವರ್ಷ ಆ‌ ಗಗನದೆತ್ತರದ ಸಮಾಧಿ-ಸೌಧದಲ್ಲಿ ಬೇಗಮ್-ಮುಂತಾಝ್​ಳ ಹೆಣವನ್ನು ಜಗತ್ತಿನಿಂದ ಅಡಗಿಸಿಡಲಾಯಿತು' ಇದರ ಅರ್ಥ ಬಿಡಿಸಿ ಹೇಳುವ ಅವಶ್ಯಕತೆಯೇ ಇಲ್ಲ. ಜೈಸಿಂಹನ ಒಡೆತನದಲ್ಲಿದ್ದ ಅರಮನೆಯಲ್ಲಿ ಮುಂತಾಝ್​ಳ ಗೋರಿ ಮಾಡಲಾಯಿತೆಂದರೆ ಅದರ ನಿರ್ಮಾಪಕ ಶಹಜನಾನ್ ಅಲ್ಲವೆಂದಾಯಿತು"‌ ಕಾಮೆಂಟೇಟರ್ ಸ್ವಲ್ಪ ಮೌನತಾಳಿ ಹಿನ್ನೆಲೆ ಸಂಗೀತ ಮೊಳಗಿದಾಗ ವಸಿಷ್ಟ್ ಪುನಃ ಶುಭಕರನ ಕಡೆ ತಿರುಗಿದರು. ಶುಭಕರ ಹೌದೆಂದು ತಲೆಯಾಡಿಸಿದ.

ಇನ್ನೇನು ಸಾಕ್ಷ್ಯಚಿತ್ರದ ಅಂತ್ಯ ಹತ್ತಿರವಾಗಿತ್ತು. ನಿರ್ದೇಶಕ ಚಿತ್ರವನ್ನು ಚಿಂತಾಜನಕ ಪ್ರಶ್ನೆಗಳೊಡನೆ ಅಂತ್ಯ ಮಾಡಿದ್ದ:

"ತಾಜ್ ​ನಲ್ಲಿ ಕನಿಷ್ಠ ಆರು ಮಹಡಿಗಳಿವೆ-ನಾಲ್ಕು ಅಮೃತಶಿಲೆಯ ಪೀಠದಮೇಲೆ, ಎರಡು ಕೆಳಗೆ; ಹತ್ತಾರು-ನೂರಾರು ಕೋಣೆಗಳಿವೆ. ಗೋರಿಯಲ್ಲಿ ಇಂತಹ ಗುಪ್ತ ಕೋಣೆಗಳಿಗೇನು ಕೆಲಸ?‌ ಬಹುಶಃ ಮಹಾಲಯದ ಪಾಕಶಾಲೆ-ಗೊದಾಮುಗಳಾಗಿರಬಹುದೆ?"

"ತಾಜ್​ನ ಅಮೃತಶಿಲೆಯ ಕಟ್ಟಡದ ಕೆಳಗೆ, ಹಿಂಭಾಗದಲ್ಲಿ ಹರಿಯುವ ಯಮುನಾ-ನದಿ ಪಕ್ಕದಲ್ಲಿ ೨೨-ಕೋಣೆಗಳಿವೆ. ಇವುಗಳನ್ನು ಶಹ್​ಜಹಾನ್ ಇಟ್ಟಿಗೆಗಳಿಂದ ಮುಚ್ಚಿಹಾಕಿದ್ದಾನೆ. ಏ.ಎಸ್.ಐ ಕೂಡ ಇವುಗಳಿಗೆ ಬೀಗ ಬಡಿದಿಟ್ಟಿದೆ. ಈ‌ ಕೋಣೆಗಳನ್ನು ಒಡದು ತೆಗೆದರೆ ಒಳಗೇನು ಸಿಗಬಹುದು?"

"ತಾಜ್ ಆವರಣದೊಳಗೇ‌ ತಾಜ್​ನ ಎರಡೂ‌ಬದಿಯಲ್ಲಿ ಎರಡು ನಗಾರಿಖಾನೆಗಳಿವೆ-ಇಂದಿಗೂ ಇವುಗಳಿಗೆ 'ನಕ್ಕರ್-ಖಾನಾ' ಎಂದೇ ಹೆಸರು. ಶಾಂತಿಯಿರಬೇಕಾದ ಗೋರಿಯಲ್ಲಿ ನಗಾರಿಯೇ?‌ ಮೇಲಾಗಿ ತಾಜ್ ಪಕ್ಕದಲ್ಲಿಯೇ ಮಸೀದಿಯೂ ಇದೆ. ಸಂಗೀತ ಇಸ್ಲಾಂನಲ್ಲಿ ನಿಶೇಧ. ಹೀಗಿರುವಾಗ ಇಲ್ಲಿ ನಗಾರಿಖಾನೆಗಳೇಕಿವೆ? ನಗಾರಿಖಾನೆಗಳು ಅಲ್ಲಿದ್ದ ದೇವಾಲಯದ ಭಾಗವಾಗಿದ್ದಿರಬಹುದೇ?"

"ತಾಜ್ ಆವರಣದಲ್ಲಿ ಮತ್ತೊಂದು ಅವಿವರಣೀಯ ಕಟ್ಟಡ ಮುಖ್ಯದ್ವಾರದ ಪೂರ್ವದಲ್ಲಿರುವ 'ಗೋಶಾಲೆ'. ಇಂದಿಗೂ ಅದಕ್ಕೆ ಗೋಶಾಲೆಯೆಂದೇ ಹೆಸರು. ಗೋರಿಯಲ್ಲೇಕೆ ಗೋಶಾಲೆ?‌ ದೇವಾಲಯದ ಅಭಿಶೇಖಾದಿಗಳಿಗೆ ಬೇಕಾಗುವೆ ಹಾಲು-ಮೊಸರು-ಬೆಣ್ಣೆ-ತುಪ್ಪಗಳ ಸರಬರಾಜಿಗೆ ಈ‌‌ ಗೋಶಾಲೆ ಕಟ್ಟಿಸಿದ್ದಿರಬಹುದೇ?"

"ಅಮೃತಶಿಲೆಯ ತಾಜ್​ ಕಡೆ ಮುಖ ಮಾಡಿ ಅದರ ಎರಡೂ ಬದಿಯಲ್ಲಿ ಒಂದೇ ರೀತಿಯ ಎರಡು ಕಟ್ಟಡಗಳಿವೆ. ಒಂದು ಮಸೀದಿ, ಮತ್ತೊಂದು ಸಭಾಂಗಣ. ಗೋರಿಯಲ್ಲಿ ಮಸೀದಿ-ಸಭಾಂಗಣಗಳಿಗೇನು ಕೆಲಸ?‌ ಮಸೀದಿ ಏಕೆ ಮಕ್ಕಾ-ಮುಖವಾಗಿಲ್ಲ?‌ ಮಸೀದಿ-ಸಭಾಂಗಣದಂತಹ ಎರಡು ವಿಭಿನ್ನ ಕಟ್ಟಡಗಳು ಒಂದೇ ರೀತಿಯೇಕಿವೆ?‌ ಇವು ಮಸೀದಿ-ಸಭಾಂಗಣಗಳೇ?‌ ಅಥವ ಮಂದಿರಕ್ಕೆ ಜೋಡಿಕೊಂಡಿದ್ದ, ಭಕ್ತಾದಿಗಳಿಗೆ ತಂಗುಲು ಕಟ್ಟಿಸಿದ್ದ ಛತ್ರಗಳೇ?

"ತಾಜ್​ನ ಹಿಂಭಾಗದಲ್ಲಿ ಯಮುನಾ ನದಿಗೆ ಇಳಿದು ಹೋಗಲು ಸ್ನಾನ ಘಟ್ಟಗಳೇಕಿವೆ?‌ ಮಂದಿರಕ್ಕೆ ಬಂದ ಭಕ್ತಾದಿಗಳಿಗೆ ಸ್ನಾನ ಮಾಡುವ ಸೌಕರ್ಯಕ್ಕೆ ಮಾಡಿದ್ದಿರಬಹುದೇ?"

"ಅರಬೀ ಬರವಣಿಗೆ ಇರುವ ಅಮೃತಶಿಲೆ ಬಿಳಿ ಬಣ್ಣದ್ದಾಗಿದ್ದರೆ ತಾಜ್​ನ ಉಳಿದ ಅಮೃತಶಿಲೆಗೆ ನಸುಹಳದಿ ಬಣ್ಣವಿದೆ. ಅರಬಿಕ್ ಬರವಣಿಗೆಯ ಕಲ್ಲು ಮೂಲ ಕಟ್ಟಡ ಕಟ್ಟಿದಾನಂತರ ಕೂರಿಸಿರಬಹುದೇ?"

ಫತೇಪುರ್-ಸಿಕ್ರಿಯ ಅಕ್ಬರನ ಗೋರಿ, ದೆಹಲಿಯ ಜಾಮಾ-ಮಸ್ಜಿದ್, ಹಾಗು ಸಫ್ದರ್​ಜಂಗನ ಗೋರಿ, ಹೈದರಾಬಾದಿನ ಕುಲಿ-ಕುತ್ಬ್-ಶಾಹ್​ನ ಗೋರಿ ಹಾಗು ಚಾರ್ಮಿನಾರ್, ಬಿಜಾಪುರಿನ ಗೋಲ್-ಗುಂಬಝ್, ಕೈರೋನಗರದಲ್ಲಿರುವ ಮಹಮದ್​ಅಲಿ-ಮಸೀದಿ, ಲಹೋರಿನ ಬಾದ್​ಶಾಹೀ-ಮಸೀದಿ, ಟರ್ಕಿಯ ನೀಲಿ-ಮಸೀದಿ, ಇರಾನಿನ ಗೋಹರ್ಶದ್-ಮಸೀದಿ ಈ‌ ಎಲ್ಲ ಕಟ್ಟಡಗಳಲೂ ಸುತ್ತ ನಾಲ್ಕು ಸ್ಥಂಭಗಳಿವೆ-ಆದರೆ ಆ ನಾಲ್ಕು ಸ್ಥಂಭಗಳು ಮುಖ್ಯ ಕಟ್ಟಡಕ್ಕೆ ಸೇರಿದಂತೆಯೇ ಇವೆ. ತಾಜ್​ನಲ್ಲಿ ನಾಲ್ಕು ಸ್ಥಂಭಗಳು ಕಟ್ಟಡದಿಂದ ದೂರದಲ್ಲಿ, ಕಟ್ಟಡವನ್ನು ಮುಟ್ಟದಂತೇಕಿವೆ?‌ ಇವುಗಳ ಉಪಯೋಗ ಬೇರೆಯೇ?‌ ಇಲ್ಲವೇ ನಂತರ ಕಟ್ಟಿದ ಸೇರ್ಪಡೆಗಳೇ?

"ತಾಜ್ ​ನೊಳಗೆ ಹಲವಾರು ಹಿಂದು ಸಂಕೇತಗಳು ಕಂದು ಬರುತ್ತವೆ, "ಓಂ' ಆಕಾರದ ಹೂವಿನ ಕೆತ್ತನೆ, ಶಂಖ-ಕಮಲದಹೂಗಳ ಕೆತ್ತನೆ, ಗುಮ್ಮಟದ ಮೇಲುಭಾಗದಲ್ಲಿ ಸೂರ್ಯ-ನಾಗಗಳ ಹೊನ್ನಿನ ಚಿತ್ರಣ, ಇತ್ಯಾದಿ. ಇಸ್ಲಾಂನಲ್ಲಿ ಪ್ರಾಣಿ-ಪಕ್ಷಿಗಳ ಚಿತ್ರಣ ನಿಶೇಧವಾಗಿದೆ. ಹೀಗಿರುವಲ್ಲಿ ಈ ಸಂಕೇತಗಳು ತಾಜ್​ನ ಹಿಂದೂ ಮೂಲವನ್ನು ಸೂಚಿಸುತ್ತಿವೆಯೇ?"

"ನಗಾರಿಖಾನೆಯಿಂದ ಕೊಂಚ ದೂರದಲ್ಲಿ ಒಂದು ಸ್ಥಂಭದೊಳಗೆ ಅಷ್ಟಕೋನಾಕಾರದ ವಿಶಾಲ ಬಾವಿ ಇದೆ. ಈ ಬಾವಿಯ ಒಳಗೋಡೆಯಲ್ಲಿ ಮೇಲಿನಿಂದ ನೀರಿನವರೆಗು ಇಳಿದು ಹೋಗಲು ಮೆಟ್ಟಿಲುಗಳಿವೆ. ಬಾವಿಯ ಒಳಗೋಡೆಯ ಸುತ್ತಲು ಎಂಟು-ಅಂತಸುಗಳಲ್ಲಿ ಕೊಠಡಿಗಳಿವೆ. ಗೋರಿಯಲ್ಲಿ ಇಂತಹ ವಿಸ್ತಾರವಾದ ಬಾವಿಯ ಉದ್ದೇಶವೇನಿದ್ದಿರಬಹುದು?‌ ಹಿಂದಿನ ಕಾಲದಲ್ಲಿ ಇಂತಹ ಬಾವಿಗಳು ಪುಷ್ಕಳ ಹಿಂದು-ದೇವಾಲಯಗಳಲ್ಲಿ ಸರ್ವೇಸಾಮಾನ್ಯವಾಗಿದ್ದವು. ಮಂದಿರದ ಕೋಶಾಧಿಕಾರಿಯ-ಕಛೇರಿ ಇಂತಹ ಕೊಠಡಿಯಲ್ಲಿದ್ದು, ಖಜಾನೆ-ಪೇಟಿಗಳನ್ನು ಮತ್ತಿತರ ಅಮೂಲ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿತ್ತು. ದೇವಾಲಯ ಕೈಬಿಟ್ಟು ಹೋಗುವಹಾಗಾದರೆ ಖಜಾನೆಯನ್ನು ಬಾವಿಯೊಳಕ್ಕೆ ತಳ್ಳಿಲಾಗುತ್ತಿತ್ತು-ಖಜಾನೆ ಶತ್ರುವಿನ ಕೈ ಸೇರಲು ಅವಕಾಶ ಕೊಡದಿರುವ, ದೇವಾಲಯ ಪುನರ್ಜೈಸಿದ ನಂತರ ಹೊರತೆಗೆಯುವ ದೂರಾಲೋಚನೆಯಿಂದ. ತಾಜ್ ​‌ಆವರಣದಲ್ಲಿರುವ ಬಾವಿಯೂ ಹಿಂದು ದೇವಾಲಯಗಳ ಸಾಂಪ್ರದಾಯಿಕ ಕೋಶ-ಕೂಪವಿರಬಹುದೇ?"

"ತಾಜ್​ಮಹಲ್ ಎಂಬ ಹೆಸರು-ಇಲ್ಲಿದ್ದ ಮಂದಿರದ ಹೆಸರಾದ 'ತೇಜೋಮಹಾಲಯ'ದ ಬ್ರಷ್ಟ-ರೂಪವಿರಬಹುದೇ?"

ಪುನಃ ಪ್ರಸ್ತುತಕ ಸ್ರೀನ್ ಮೇಲೆ ಬಂದ. "ಈ ಚಿತ್ರದಲ್ಲಿ ತೋರಿಸಿರುವ ಯಾವ ಸಂದೇಶವೂ‌ ಬಹುಶಃ‌ ತಾಜ್ ಹಿಂದೂ ದೇವಾಲಯವೆಂದು ಸಾಧಿಸುವುದಿಲ್ಲ. ಆದರೆ ಇದರ ಮೊಘಲ್ ಮೂಲಗಳ ಮೇಲೂ ಪ್ರಶ್ನೆ-ಚಿಹ್ನೆಗಳು ಏಳುತ್ತವೆ. ಈ ಎಲ್ಲಾ ಗೊಂದಲಗಳಿಂದ ಕೂಡಿರುವ 'ತಾಜ್​ಮಹಲ್' ಎಂಬ ಎನಿಗ್ಮಾ‌ ಎಂದಿಗಾದರೂ‌ ಬಿಡಿಸಲಾದೀತೆ?‌ ಭಾರತ ಸರಕಾರ ತಾಜ್​​ನೊಳಗೆ ಅಂತರರಾಷ್ಟ್ರೀಯ ಪರಿಣಿತರಿಗೆ ಸ್ವಾವಲಂಬೀ-ಸಂಶೋಧನೆ ಮಾಡಲು ಅವಕಾಶ ಮಾಡಿಕೊಡುತ್ತದೆಯೇ? ತಾಜ್​ನ ಸತ್ಯ ಇತಿಹಾಸ ಎಂದಿಗಾದರೂ‌ ಹೊರಬರುವ ಸಾಧ್ಯತೆ ಇದೆಯೇ?" ಎನ್ನುವಲ್ಲಿಗೆ ತಾಜ್​ಮಹಲ್​ನ ಚಿತ್ರದ ಹಿನ್ನೆಲೆಯಲ್ಲಿ ಕ್ರೆಡಿಟ್ಸ್ ಓಡ ತೊಡಗಿದವು.

"ಹಂಮ್​ಮ್..." ಎಂದು ಸ್ವಲ್ಪಕಾಲ ವಸಿಷ್ಟ್ ಮೌನರಾದರು. ನಂತರ "ಈ ಎಲ್ಲ ಪಾಯಿಂಟ್ಸ್ ನೀನೇ ಸಂಗ್ರಹಿಸಿದೆಯೇ?"

"ಛೆ-ಛೆ, ನಾಟ್-ಅಟ್-ಆಲ್-ನಾನು ಈ‌ ಡಾಕ್ಯುಮೆಂಟರಿಗೆ ನಾನು ಕೇವಲ ಎಕ್ಸ್​ಪರ್ಟ್-ಕನ್ಸಲ್ಟೆಂಟ್ ಅಷ್ಟೆ-ಪ್ರೊಡ್ಯೂಸರ್ ಅಲ್ಲ. ಇದ್ಯಾವುದೂ ಹೊಸತಲ್ಲ. ಬಹಳ ಹಿಂದೆ-ನೈನ್ಟೀನ್​-ಸೆವೆಂಟೀಸ್​ರಲ್ಲಿ-ನಮ್ಮ ಡೆಪಾರ್ಟ್ಮೆಂಟ್​ನವರೇಆದ ಪುರುಶೋತ್ತಮ್-ನಾರಾಯಣ್ ಓಕ್ ಎಂಬಾತ ಪ್ರತಿಪಾದಿಸಿದ ಥಿಯರಿ ಇದು. ಕೆಲವು ಪುಸ್ತಕಗಳನ್ನೂ ಬರೆದಿದ್ದಾರೆ. ಇವರೊಬ್ಬರೇ ಅಲ್ಲ-ವಿ.ಎಸ್.ಗೋಡ್ಬೋಲೆ, ಮಾರ್ವಿನ್ ಮಿಲ್ಸ್, ಪಿ.ಎಸ್.ಭಟ್, ಎ.ಎಲ್.ಅಥಾವಳೆ, ಇ.ಬಿ.​ಹ್ಯಾವೆಲ್, ಸರ್ ಡಬ್ಯು.ಡಬ್ಯು.ಹಂಟರ್​ಹ್ಯಾವ್ ಮತ್ತಿತರರೂ ಈ ವಿಚಾರದ ಬಗ್ಗೆ ಬರೆದಿದ್ದಾರೆ. ಆಗಲೇ ಅಷ್ಟೋ‌-ಇಷ್ಟೋ‌ ರೆಸರ್ಚ್​ಗೆ ಅವಕಾಶ ಕೊಟ್ಟಿದ್ದಿದ್ದರೆ ಅಲ್ಲೇ ವಿಚಾರ ಮುಗಿದುಹೋಗಿರುತ್ತಿತ್ತು. ರಾಜಕೀಯ ಹಿಂದೇಟಿಗೆ ಹೆದರಿ ಆಗಿನ ಇಂದಿರಾ ಗಾಂಧಿ ಕಾಂಗ್ರೆಸ್ ಸರಕಾರ ಈ‌ ವಿಚಾರ ಮುಚ್ಚಿಹಾಕೋದಲ್ಲದೆ ಓಕ್​ರ ಪುಸ್ತಕಗಳನ್ನೂ ಬ್ಯಾನ್ ಮಾಡಿತು" ಕೊಂಚ ಮೌನವಾಗಿ ನಂತರ "ಈಗ ಈ ಡಾಕ್ಯುಮೆಂಟರಿಯನ್ನೂ‌ ಸರಕಾರ ಬ್ಯಾನ್ ಮಾಡಿದೆ. ನಮ್ಮವರಿಗೆ ಸತ್ಯ, ಇತಿಹಾಸಗಳ ಬಗ್ಗೆ ಆಸಕ್ತಿಯೇ ಇಲ್ಲವೇ?‌ ಇವುಗಳಿಗೆ ಬೆಲೆಯೇ ಇಲ್ಲವೇ? ಫ್ರೀ-ಸ್ಪೀಚ್, ಡೆಮಾಕ್ರಸಿ ಎಲ್ಲ ಬರೀ‌ ಓಳು"‌ ಶುಬಕರ ಖಿನ್ನನಾಗಿ ಹೇಳಿದ. "ಅದು ಹಿಂದೂ ಕಟ್ಟಡವಾಗಲಿ, ಮುಸಲ್ಮಾನ ಕಟ್ಟಡವಾಗಲಿ ನನಗೆ ಯಾವ ಪ್ರೆಜುಡಿಸ್ ಕೂಡ ಇಲ್ಲ. ಇತಿಹಾಸದ ಸತ್ಯ ಏನು ಅನ್ನೋದನ್ನ ಮಾತ್ರ ತಿಳಿದುಕೊಳ್ಳುವ ಆಶಯವಷ್ಟೇ. ಶಹ್​ಜಹಾನ್​ನೇ ಕಟ್ಟಿದ್ದೆಂದು ಪ್ರೂವ್ ಆದರೆ ಅದೇ ಸರಿ. ಇಲ್ಲದಿದ್ದರೂ ಅದು ಮಂದಿರವಾಗೋದು ಬೇಡ, ಮುಮ್​ತಾಝ್​ಳ ಗೋರಿಯಾಗಿಯೇ ಉಳಿಯಲಿ. ಈ‌ ಡೌಟ್, ಸ್ಪೆಕ್ಯುಲೇಶನ್, ರೂಮರ್ ಎಲ್ಲಾವುದನ್ನೂ‌ ಒಮ್ಮೆಲೇ ಮಲಗಿಸಬಹುದು"

"ಫಿಲಾಸಾಫಿಕಲ್ ಆಗಬೇಡ, ಶುಬಕರ್. ಇದರ ಬಗ್ಗೆ ಮುಂದೇನು ಮಾಡಬೇಕೆಂದಿದ್ದೀಯ?"

ಶುಬಕರ ತೀವ್ರವಾಗಿ "ಮತ್ತೆ ಅದನ್ನೇ ಕೇಳ್ತಿದ್ದೀರಲ್ಲ ಸರ್" ಎಂದ. "ಆಗಲೇ ಹೇಳಿದೆನಲ್ಲ-ಡೈರೆಕ್ಟರ್-ಆಫ್-ಮಾನ್ಯುಮೆಂಟ್ಸ್​ಆಗಿ ತಾಜ್​ಮಹಲ್ ನನ್ನ ನಿರ್ವಹಣೆಗೆ ಸೇರಿದೆ. ನಾನು ತಾಜ್​ನ ರಿಸರ್ಚ್​ಗೆ ತೆಗೆಯಬೇಕೆಂಬ ನಿರ್ಧಾರ ಮಾಡಿದ್ದೇನೆ. ಶುರುವಲ್ಲಿ ನಮ್ಮ ಡಿಪಾರ್ಟ್ಮೆಂಟ್​ ಮಾತ್ರ ಇನ್ವಾಲ್ವ್ ಆಗಿರುತ್ತೆ. ಆಮೇಲೆ ಇನ್ಟರ್​ನ್ಯಾಶನಲ್-ಎಕ್ಸ್​ಪರ್ಟ್ಸ್​ಗೆ ಅವಕಾಶ"

"ನೋಡಯ್ಯ, ಏನು ರಿಸರ್ಚ್ ಇದ್ದರೂ‌ ಅದು ಮಿನಿಸ್ಟ್ರಿ-ಆಫ್-ಕಲ್ಚರ್​ನಿಂದ ಅನುಮತಿ ಪಡೆದ ಮೇಲೆ. ನನ್ನ ಕೈಯಲ್ಲಿ ಏನೂ ಇಲ್ಲ-ರೂಲ್ಸ್ ಇರೋದೇ ಹಾಗೆ. ನಿನಗಾಗಿ ನಾನು ಪ್ರಯತ್ನ ಮಾಡ್ತೀನಿ, ಆದರೆ ಇದು ಸಾಧ್ಯವಾಗೋದು ಸಂದೇಹಕರ" ನಿರ್ಣಾಯಕ ಧ್ವನಿಯಲ್ಲಿ ವಸಿಷ್ಟ್ ಹೇಳಿದರು.

"ನನಗದೆಲ್ಲ ಗೊತ್ತಿಲ್ಲ. ಗಬ್ಬು-ಪಾಲಿಟಿಕ್ಸ್ ನಿಮ್ಮ ಕೆಲಸ. ನಾನು ಈಗಿಂದೀಗಲೇ ರೆಸರ್ಚ್ ಶುರು ಹಚ್ತೀನಿ"

"ಯಾಕಪ್ಪಾ ಚೂರಿಯಿಂದ ಇರೀತೀಯ ಇಲ್ಲ ತಲೆ ಮೇಲೆ ಚಪ್ಪಡಿ-ಕಲ್ಲು ಎಳೀತೀಯ?‌ ಅನುಮತಿ ಸಿಗೋವರೆಗೂ‌ ಏನೂ ಮಾಡುವಹಾಗಿಲ್ಲಾಂತ ಹೇಳಿದೆನಲ್ಲ"‌

"ರಿಸರ್ಚ್ ಶುರುವಾಗೋದು ಆ ಬಾವಿಯಿಂದ ನೀರೆಲ್ಲ ತೆಗೆದು ಒಳಗೇನಿದೆ ಅಂತ ನೋಡೋದರಿಂದ. 'ರೆಗ್ಯುಲರ್-ಮೇಂಟೆನೆನ್ಸ್' ಅಂತ ಹೇಳಿ ನಾನೇ ನಿಂತು ಅದನ್ನ ಶುರು ಮಾಡಿಸುತ್ತೀನಿ. ನಿಮ್ಮ ಮಿನಿಸ್ಟ್ರಿ ಅನುಮತಿ ಸಿಕ್ಕ ಮೇಲೆ ತಾಜ್​ನೊಳಕ್ಕೆ ಪ್ರವೇಶ. ಇದು ಭಾರತದ ಇತಿಹಾಸಕ್ಕೆ ನಿಮ್ಮ ಕೊಡುಗೆ ಆಂದುಕೊಳ್ಳಿ"‌ ಶುಭಕರ ಚೌಕಾಶಿ ಮಾಡಿದ.

"ನನಗೇ‌ ಪೆಪ್-ಟಾಕ್ ಕೊಡ್ತೀಯಾ?" ವಸಿಷ್ಟ್ ನಕ್ಕರು. "ಮತ್ತೆ ನಿನ್ನ ರಿಸರ್ಚ್-ರೆಸಲ್ಟ್ಸ್?

"ನಿಮಗೆ ಹೇಳದೆ ಪಬ್ಲಿಶ್ ಮಾಡೋದಿಲ್ಲ"

"ಹಂಮ್​ಮ್...ಸರಿ-ಆದರೆ ಜೋಕೆ"‌ ವಸಿಷ್ಟ್ ಹೇಳಿದರು.


ಭಾರತ-ಪಾಕಿಸ್ತಾನ ಗಡಿ

ಐದು ಭಯೋತ್ಪಾದಕ ತಂಡಗಳು ಕಾಝಿಯ ಮಿಶನ್ ಸಾಧಿಸಲೆಂದು ಕಾಶ್ಮೇರದ ಅನಂತ್​ನಾಗ್ ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಗ್ಗಲು ಹೊರಟವು. ಮಂಜು ಕವಿದು, ಪ್ರಪಂಚವೇ ಶ್ವೇತವಾಗಿತ್ತು, ಛಳಿ ಕೊರೆಯುತ್ತಿತ್ತು. ಏ.ಕೆ.೪೭/ಎ.ಕೆ.೫೬-ಅಸಾಲ್ಟ್-ರೈಫಲ್​ಗಳನ್ನು ಹೊತ್ತು ಬಿಳಿಯ ಶಲ್ವಾರ್​ಗಳನ್ನು ಧರಿಸಿದ್ದ ಆತಂಕವಾದಿಗಳು ಅಕಸ್ಮಾತಾಗಿ ಬಾರ್ಡರ್-ಸೆಕ್ಯೂರಿಟಿ-ಫೋರ್ಸ್​ನ ಎದುರಾದರು. ಘಟಿಸಿದ ಬಂದೂಕು-ಯುದ್ಧದಲ್ಲಿ ಮೂರು ಭಯೋತ್ಪಾದಕ-ತಂಡಗಳು ಸಂಪೂರ್ಣವಾಗಿ ಅಳಿಸಿಹೋದವು. ನಾಲ್ಕನೆಯ ತಂಡದಲ್ಲಿ ಇಬ್ಬರು ಗಾಯಗೊಂಡು ಯಾವ ಮಿಶನ್​ನಲ್ಲೂ‌ ಭಗವಹಿಸುವಂತಿರಲಿಲ್ಲ. ಲತೀಫನ ತಂಡದಲ್ಲಿ ಒಬ್ಬ ಗುಂಡೇಟು ತಿಂದು ನೆಲಕ್ಕುರುಳಿದರೆ, ಉಳಿದವರು ಕೇವಲ ತರಚಿದ ಗಾಯಗಳೊಂದಿಗೆ ತಪ್ಪಿಸಿಕೊಂಡರು.

ಗಡಿ ಪಾರುಮಾಡಿದ ಲತೀಫ್ ತಂಡ ಮೊದಲಿಗೆ ಗಡಿಪ್ರದೇಶದ ಒಬ್ಬ ಪಾಕಿಸ್ತಾನ-ಪಕ್ಷಪಾತಿಯ ಮನೆಯಲ್ಲಿ ತಂಗಿದರು. ಎರಡು ದಿನಗಳ ನಂತರ ತಮ್ಮ ಗಾಯ-ದಣಿವುಗಳನ್ನಾರಿಸಿಕೊಂಡು, ಆಯುಧಗಳನ್ನು ಅಲ್ಲಿಯೇ ಬಿಟ್ಟು, ಬಸ್ ಹತ್ತಿ ಪಂಜಾಬ್-ಹರ್ಯಾಣಾಗಳ ಮೂಲಕ ಬಂದು ದೆಹಲಿಯಲ್ಲಿಳಿದರು. ದೆಹಲಿಯಿಂದ ಕಾರೊಂದನ್ನು ಮಾಡಿಕೊಂಡು ಪುನಃ ದಕ್ಷಿಣ-ದಿಕ್ಕಿನಲ್ಲಿ ಪ್ರಯಾಣ ಮಾಡುತ್ತ ಆಗ್ರಾಕ್ಕೆ ಬಂದು ತಲುಪಿದರು.


ತಾಜ್​ಮಹಲ್, ಆಗ್ರಾ

ಶುಭಕರ ತನ್ನ ರಿಸರ್ಚ್ ತಂಡವನ್ನು ಸೇರಿಸಿಕೊಂಡು ತಾಜ್​ಮಹಲ್ ಆವರಣದಲ್ಲಿ ಕೆಲಸ ಆರಂಭ ಮಾಡಿಸಿದ್ದ. ಆಫ್-ಸೀಸನ್ ಆಗಿದ್ದರಿಂದ ತಾಜ್​ನೊಳಗೆ ಬಹಳಷ್ಟು ಪ್ರವಾಸಿಗಳೇನೂ ಇರಲಿಲ್ಲ. ಬಾವಿಯಿದ್ದ ಸ್ಥಂಭದ ಬೀಗವನ್ನು ತೆಗೆಸಿ ಒಳಬಂದಾಗ ಹತ್ತಾರು ವರ್ಷಗಳಲ್ಲಿ ಯಾರೂ‌ ಅಲ್ಲಿ ಹಾಯ್ದ ಹಾಗೆ ಕಾಣಿಸಲಿಲ್ಲ. ಶುಭಕರ ಬಾವಿಯ ಸುತ್ತ ನಡೆದು ತನಿಖೆ ಮಾಡಿದ. ಸುಮಾರು ೨೦ಅಡಿ ಅಗಲ ಅಷ್ಟಕೋನಾಕಾರದ ಬಾವಿ-ಬಾವಿಕಟ್ಟೆ ಅಲ್ಲಲ್ಲಿ ಸ್ವಲ್ಪ ಮುರಿದಂತೆ ಕಂಡರೂ ಬಿದ್ದುಹೋಗುವ ಭಯವಿರಲಿಲ್ಲ. ಬಾವಿಯ ನೀರಿನಲ್ಲಿ ಕೊಳಕು ತುಂಬಿ ಹಸಿರಾದ ಕೊಚ್ಚೆಯಂತಾಗಿ, ಅದರಿಂದ ದುರ್ನಾಥ ಹೊಮ್ಮುತ್ತಿತ್ತು. ತನ್ನ ಕರ್ಚೀಫ್​ನಿಂದ ಮೂಗು ಮುಚ್ಚಿಕೊಂಡ ಶುಭಕರ ಬಾವಿಯೊಳಕ್ಕೆ ಇಳಿದು ಹೋಗಲು ಒಳಗೋಡೆಗೆ ಅಂಟಿದಂತೆ ನೀರಿನ ಸಮದವರೆಗು ಹೋಗಿತ್ತಿದ್ದ ಮೆಟ್ಟಿಲುಗಳ ಮೇಲೆ ನಿಂತು ಪರೀಕ್ಷೆ ಮಾಡಿದ. ಮೆಟ್ಟಿಲು ಗಟ್ಟಿಯಾಗಿ ಕಂಡಾಗ, ಹಸಿರು-ಪಾಚಿ ಕಟ್ಟಿದ ಗೋಡೆ ಹಿಡಿದು ನಿಧಾನವಾಗಿ ಇಳಿಯಲಾರಂಭಿಸಿದ. ಬಾವಿಯ ಒಳಗೋಡೆಯಲ್ಲಿ ಅನೇಕ ಬಾಗಿಲು-ಕಿಟಿಕಿಗಳಿದ್ದವು. ಶುಭಕರ ಒಟ್ಟು ಎಂಟು ಅಂತಸ್ತುಗಳನ್ನು ಎಣಿಸಿದ. ಮೆಟ್ಟಲುಗಳ ಮಧ್ಯೆ ಮೊದಲ ಚೌಕ-ನಿಲುಗಡೆಗೆ ಬಂದಾಗ ಬಾವಿಯ ಗೋಡೆಯೊಳಗೆ ಬಲಭಾಗಕ್ಕೆ ಇದ್ದ ದ್ವಾರವನ್ನು ಪ್ರವೇಶ ಮಾಡಿದ. ನೂರಾರು ವರ್ಷಗಳ ಧೂಳು ಅವನ ಕಾಲ್ಕೆಳಗೆ ಚದರುತ್ತಿತ್ತು. ದ್ವಾರದೊಳಗೆ ಒಂದು ಸಣ್ಣ ಕೊಠಡಿ-ನೆಲದಲ್ಲಿ ಕುಳ್ಳ ಕಟ್ಟೆಗಳು. ಮೂಲೆಗಳನ್ನು ಕತ್ತಲು ಆವರಿಸಿತ್ತು.

ಶುಭಕರನ ಹಿಂದೆ ಬಂದಿದ್ದ ಕೆಲಸದಾಳುಗಳ ಮೇಸ್ತ್ರಿ ಕೂಗಿದ "ಸಾಬ್-ಇದೇ ಬಾವಿನಾ?"

ಶುಭಕರ ತಿರುಗಿ ಅವನೆಡೆ ನೋಡಿದ. ಹೊರಗೆ ಬಂದು "ಹೌದು-ಇದೇ. ಮೊದಲು ಆಳ ಎಷ್ಟಿದೆ ನೋಡಿ, ಹೊರತೆಗೆದ ನೀರು ದೂರ ಹರಿದು ಹೋಗೋಕ್ಕೆ ಪೈಪ್ ಹಾಕಿ. ಆಮೇಲೆ ನೀರೆಲ್ಲ ತೆಗೆಯಬೇಕು. ಎಷ್ಟು ಸಮಯವಾಗಬಹುದು?" ಎಂದು ಕೇಳಿದ

ಮೇಸ್ತ್ರಿ ತಲೆ ಕೆರೆಯುತ್ತ "ಗೊತ್ತಾಗ್ತಿಲ್ಲ ಸಾಬ್" ಎಂದು ಸಣ್ಣ ಕಲ್ಲೊಂದನ್ನು ಬಾವಿಗೆ ಎಸೆದ. ನೀರಿಗೆ ಬಿದ್ದ ಕಲ್ಲು 'ಬುಳುಕ್' ಎಂದದ್ದನ್ನು ಕೇಳಿ "ಎರಡ್-ಮೂರ್ ದಿನ ಆಗ್ಬಹುದು. ನಣ್ಣ ಪೈಪ್ ಬೇರೆ ಹಾಕ್ಬೇಕು ಅಂತೀರ"

"ಸರಿ-ಶುರು ಮಾಡಿ. ಆದರೆ ನೀರು ಬಿಟ್ಟು ಏನೂ ಹೊರಗೆ ಹೋಗಬಾರದು" ಎಂದು ಶುಭಕರ ಎಚ್ಚರಿಸಿದಮೇಲೆ ಕೆಲಸ ಆರಂಭವಾಗಿತ್ತು.

ಮೇಸ್ತ್ರಿ ಹೇಳಿದ ಮೂರು ದಿನಗಳು ಕಳೆದರೂ ಬಾವಿಯ ತಳ ಕಾಣಲೊಲ್ಲದಾಗಿತ್ತು. ನಾಲ್ಕು-ಐದನೆಯ ದಿನಗಳೂ ಕಳೆದ ನಂತರ, ಮಧ್ಯಾಹ್ನದ ವೇಳೆಯಲ್ಲಿ ಸ್ವಲ್ಪ ದೂರ ಕುಳಿತು ಸುಧಾರಿಸಿಕೊಳ್ಳುತ್ತಿದ್ದ ಶುಭಕರನ ಬಳಿ ಬಂದ ಮೇಸ್ತ್ರಿ "ಸಾಬ್. ಕೆಳ್ಗೆ ಏನೇನೋ ಕಾಣ್ತಿದೆ" ಎಂದ.

ತುರ್ತಾಗಿ ಬಾವಿಯಕಡೆ ಓಡಿದ ಶುಭಕರ ನೀರು ಹೊರಹಾಕುತ್ತಿದ್ದ ಪಂಪ್​ಗಳು ಶಾಂತವಾರುವುದನ್ನು ಗಮನಿಸಿದ. ಕೊಳಚೆ ನೇರೆಲ್ಲ ಹೊರಹೊಗಿ, ಶುದ್ಧ ನೀರು ಬಾವಿಯೊಳಗೆ ಉಳಿದಿತ್ತು. ಕೊನೆಯವರೆಗೆ ಮೆಟ್ಟಿಲುಗಳು ಹೋಗುತ್ತಲೇ ಇದ್ದವು. ನೀರು ಮೇಲಿನಿಂದ ಸುಮಾರು ೭೦-ಅಡಿ ಕೆಳಗಿತ್ತು. ನೀರಿನ ಸಮದ ಸುಮಾರು ಎರಡು ಅಡಿ ಕೆಳಗೆ ಅಸ್ಫುಟ ವಸ್ತುಗಳು ಕಾಣಿಸುತ್ತಿದ್ದವು.

"ಥ್ಯಾಂಕ್ಸ್. ಈಗ ಜೋಪಾನವಾಗಿ-ನಿಧಾನವಾಗಿ ನೀರು ಪಂಪ್ ಮಾಡಿ. ಖಾಲಿ ಆಗಬೇಕು-ಆದರೆ ಆ ವಸ್ತುಗಳಿಗೆ ಯಾವ ಗಾಯವೂ ಆಗಬಾರದು" ಶುಭಕರ ಹೇಳಿದ.

"ಆಯ್ತು, ಸಾಬ್" ಎಂದವನೇ‌ ಮೇಸ್ತ್ರಿ ಕೆಲಸಗಾರನೊಬನನ್ನು ಕೆಳಗೆ ಕಳುಹಿಸಿದ. ಶುಭಕರ ನೋಡುತ್ತ ಬಾವಿಕಟ್ಟೆಯನ್ನು ಒರಗಿ ಅಲ್ಲಿಯೇ‌ ನಿಂತ. ಪಂಪ್​ಗಳು ನೀರನ್ನು ಪುನಃ ನಿಧಾನವಾಗಿ ಹೀರ ತೊಡಗಿದವು.

****

ಲತೀಫ್ ತಾಜ್​ಮಹಲ್​ನೊಳಗೆ ಹೋಗಲು ಪಾರುಮಾಡಬೇಕಾದ ಸೆಕ್ಯೂರಿಟಿ-ಚೆಕ್​ಅನ್ನು ಯಶಸ್ವಿಯಾಗಿ ಪಾರು ಮಾಡಿ ತಾಜ್​ಮಹಲ್​ನ ಲಾಲ್-ದರ್ವಾಝಾದಲ್ಲಿ ನಿಂತು ಆ ಬಿಳಿ-ಕಟ್ಟಡವನ್ನು ನೋಡುತ್ತಿದ್ದ. ಆವರಣದ ಒಳಗೆ-ತಾಜ್​ಮಹಲ್​ನ ಮುಂದಿರುವ ಹೂದೋಟದಲ್ಲಿ ಸ್ವಲ್ಪ ಮೊದಲೇ ಬಂದು ನಿಂತಿದ್ದ ಲತೀಫ್​ನ ಸಹೋದ್ಯೋಗಿ ಅಬ್ದುಲ್ ಅವನ ಕಣ್ಣಿಗೆ-ಕಣ್ಣು ಮಿಲಾಯಿಸಿ, ಅತಿಸೂಕ್ಷ್ಮವಾಗಿ ತಲಿ ಕುಲುಕಿ, ತಕ್ಷಣ ಬೇರೆಡೆ ನೋಡಿದ. ಈ‌ ಮೂಕ-ಸಂವಾದದಿಂದ ಲತೀಫನಿಗೆ ತನ್ನ ತಂಡದ ಉಳಿದ ಮೂರು ಮಂದಿ-ಬಿಲ್ಲಾ, ಶರೀಫ್ ಮತ್ತು ಬಷೀರ್ ಕೂಡ ತಾಜ್ ಆವರಣದೊಳಗೆ ಬಂದಿರುವುದು ಖಚಿತವಾಯಿತು.

ತಾಜ್ ಹೊರಗಿದ್ದ ಸೆಕ್ಯೂರಿಟಿ-ಚೆಕ್​ ಬಂದೋಬಸ್ತಾಗಿದ್ದ ಕಾರಣ ಯಾವ ಆಯುಧವನ್ನೂ‌ ಆ ದಾರಿಯ ಮೂಲಕ ಸಾಗಣೆ ಮಾಡುವ ಹಾಗಿರಲಿಲ್ಲ. ಕಾಝಿ ಹೂಡಿದ ಯೋಜನೆಯ ಪ್ರಕಾರ ವ್ಯವಸ್ಥಾಪಡೆಯೊಂದು ಯಮುನಾ ನದಿಯ ಮೂಲಕ ತಾಜ್​ಮಹಲ್ ಹಿಂಭಾಗದಲ್ಲಿ 'ಆಪರೇಶನ್'ಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ದೋಣಿಯಲ್ಲಿ ಸಾಗಣೆ ಮಾಡಿಸಿ ನಿರ್ದಿಷ್ಟ ಸ್ಥಳದಲ್ಲಿ ಇರಿಸುವುದಾಗಿತ್ತು. ತಾಜ್ ಒಳಗೆ ಹೊಕ್ಕ ದಳ ಅಡಗಿಸಿಟ್ಟ ಆಯುಧ-ಸಿಡಿಮದ್ದುಗಳನ್ನು ಹುಡುಕಿ ವಶಪಡಿಸಿಕೊಂಡು, ತಾಜ್ ಒಳಗೆ ನುಗ್ಗಿ, ವಿಸ್ಫೋಟಕಗಳನ್ನು ಕಟ್ಟಡಕ್ಕೆ ಜೀವಾಧಾರವಾದ ಸ್ಥಳಗಳಲ್ಲಿ ಇರಿಸಿ, ಟೈಮರ್​ಗಳನ್ನು ತೊಡಗಿಸಿ ಪುನಃ ನೆದಿಯ ಮೂಲಕ ತಪ್ಪಿಸಿಕೊಂಡು ದೋಣಿ ಹತ್ತಿ ಪರಾರಿಯಾಗುವುದಾಗಿತ್ತು. ತಾಜ್​ಮಹಲ್​ ಆಪರೇಶನ್​ಗೆ ಮುಖಂಡನಾಗಿದ್ದ ಲತೀಫ್ ನಾಲ್ಕಾರು ದಿನ ಕಾಝಿ ಸಂಪಾದಿಸಿದ್ದ ತಾಜ್​ನ ನೆಲನಕ್ಷೆಯನ್ನು ನೋಡಿ ಅದನ್ನು ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿದ್ದ.

ನೋಡುವವರಿಗೆ ಅವರು ಯಾರೂ‌ ಆತಂಕವಾದಿಗಳಂತೆ ಕಾಣಿಸುತ್ತಿರಲಿಲ್ಲ. ಶಲ್ವಾರ್-ಪಗಡಿಗಳನ್ನು ತ್ಯಜಿಸಿ ಜೀನ್ಸ್-ಟೀಶರ್ಟ್​ಗಳನ್ನು ಧರಿಸಿದ್ದರು. ಗಡ್ಡ-ಮೀಸೆಗಳನ್ನು ಬೋಳಿಸಿಕೊಂಡು ಸಾಧಾರಣ ಯಾತ್ರಿಕರಂತ ಕಾಣಿಸುತ್ತಿದ್ದರು. ದರ್ವಾಝಾದಲ್ಲೊಬ್ಬ, ಒಳಗೆ ಹೂದೋಟದಲ್ಲಿಬ್ಬರು, ಕಾರಂಜಿ-ಕಟ್ಟೆಯ ಮೇಲೊಬ್ಬ ಮುಂದೆ ಮೇಲುಪಾಯದ ಮೇಲೊಬ್ಬ ಹೇಗೆ ಎಲ್ಲೆಡೆ ಹರಡಿಕೊಂಡು ಆಸಕ್ತ-ಪ್ರವಾಸಿಗಳಂತೆ ತಾಜ್​ಮಹಲ್​ಅನ್ನು ಪ್ರೇಕ್ಷಿಸುತ್ತಿದ್ದರು.

ಕೊಂಚ ಸಮಯದ ನಂತರ ಲತೀಫ್‌ ಜೇಬಿನಿಂದ ಕರ್ಚೀಫ್‌ ತೆಗೆದು ಮುಖ ಒರೆಸಿಕೊಂಡ. ಅವನ ತಂಡಕ್ಕೆ ಅದು ಸಂಕೇತವಾಗಿತ್ತು. ಐವರೂ ಭಯೋತ್ಪಾದಕರು ಬೇರೆ ಬೇರೆ ದಾರಿಗಳಿಂದ ತಜ್​ಮಹಲ್ ಹಿಂಭಾಗದ ಕಡೆ ಹೊರಟರು. ಲತೀಫ್ ಮತ್ತು ಬಿಲ್ಲಾ ತಾಜ್ ಬಲಭಾಗದಿಂದ ಹೊರಟರೆ, ಅಬ್ದುಲ್ ಮತ್ತು ಬಷೇರ್ ಎಡಭಾಗದಿಂದ ಹೊರಟರು. ಮೇಲುಪಾಯಿಯ ಮೇಲೆ ನಿಂತಿದ್ದ ಶರೀಫ್ ಪಕ್ಕದಲ್ಲಿದ್ದ ಮೆಟ್ಟಿಲುಗಳನ್ನಿಳಿದು ಹೊರಟ.

*****

"ಸಾಬ್-ಬಾವಿಯಲ್ಲಿ ನೀರು ಖಾಲಿಯಾಗಿದೆ" ಮೇಸ್ತ್ರಿ ಶುಭಕರನಿಗೆ ಹೇಳಿದ.

ಬಾವಿಯ ಬುಡದಲ್ಲಿ ಅನೇಕ ವಸ್ತುಗಳು ಕಾಣಿಸ ತೊಡಗಿದ್ದವು-ಪೆಟಾರಿಗಳು, ಕಲ್ಲಿನ ವಿಗ್ರಹಗಳು, ಮಣ್ಣಿನ ಜಾಡಿಗಳು ಇತ್ಯಾದಿ. ಶುಭಕರ "ಬನ್ನಿ ನೋಡೋಣ"‌ ಎಂದ.

"ಇಲ್ಲ ಸಾಬ್-ಹಳೆ ಹಾಳ್ಬಾವಿ ಒಳ್ಗೆ ನಾನ್ಬರಲ್ಲ. ಕೆಲಸಗಾರರನ್ನೆಲ್ಲ ಕಳಿಸ್ದೆ, ನಾನೂ ಹೋಗ್ತೀನಿ" ಎಂದು ಮೇಸ್ತ್ರಿ ಹೊರಟುಹೋದ.

ಶುಭಕರನಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ಅತೀನಿಗೂಢ ರಹಸ್ಯವೊಂದು ಬಹೀರಂಗವಾಗಲಿದೆಯೆಂದು ಗ್ರಹಿಸಿದ.ದೊಡ್ಡ ಟಾರ್ಚ್​ಒಂದನ್ನು ಹಿಡಿದು ಮೆಟ್ಟಿಲುಗಳನ್ನಿಳಿದು ಹೊರಟ. ಇನ್ನೂ ಮಧ್ಯಾಹ್ನವಾಗಿದ್ದರಿಂದ ಸಾಕಷ್ಟು ಬೆಳಕಿತ್ತು. ಬಾವಿಯ ಬುಡದವರೆಗೂ‌ ಮೆಟ್ಟಿಲುಗಳು ಹೋಗುತ್ತಿರುವುದು ಕಾಣಿಸಿತು. ಗೋಡೆಯನ್ನು ಹಿಡಿದು ನಿಧಾನವಾಗಿ ಕೆಳಗಿಳಿದು ಹೋದ. ಬುಡದಲ್ಲಿ ಒಂದು ೧೨-ಅಡಿ ಎತ್ತರವಾಗಿದ್ದ ಈಶ್ವರ-ಲಿಂಗವಿತ್ತು. ಕಟ್ಟಿದ್ದ ಪಾಚಿಯನ್ನು ಬೆರಳಲ್ಲಿ ಒರೆಸಿದಾಗ ಅದು ಅಮೃತಶಿಲೆಯದೆಂದು ತಿಳಿಯಿತು. ನೀರು ಸೋರದಂತೆ ಅರಗಿನಿಂದ ಮುಚ್ಚಿ ಧೃಡಪಡಿಸಿದ ಹತ್ತಾರು ಲೋಹದ ದೊಡ್ದ ಪೆಟಾರಿಗಳು ಸುತ್ತಲು ಬಿದ್ದಿದ್ದವು. ನೂರಾರು ವರ್ಷ ನೀರಿನಲ್ಲಿ ಬಿದ್ದಿದ್ದರೂ, ವಿಸ್ಮಯಕರವಾಗಿ ಆ ಲೋಹದ ಪೆಟಾರಿಗಳು ಕಿಲುಬು ಹಿಡಿದಿರಲಿಲ್ಲ. ದೆಹಲಿಯ ಕುತುಬ್​ಮಿನಾರ್ ಬಳಿ ಇರುವ, ತುಕ್ಕು ಹಿಡಿಯದ, ಪುರಾತನ ಕಾಲದ ಲೋಹದ ಕಂಬ ಮನಸ್ಸಿಗೆ ಬಂದು, ಶುಭಕರ ಪ್ರಾಚೀನ ಭಾರತದ ಲೋಹವಿಜ್ಞಾನ ಬಹಳ ಮುಂದುವರೆದಿತ್ತೆಂಬುದನ್ನು ಸ್ಮರಿಸಿಕೊಂಡ. ಸುತ್ತಲೂ ಮರದ ಅಂಟಿನೊಳಗದ್ದಿ ಜಲನಿರೋಧಕವಾಗಿಸಿದ ಬಟ್ಟೆಗಳಿಂದ ಬಾಯಿ ಕಟ್ಟಿದ ಹತ್ತಾರು ಅನೇಕ ಗಾತ್ರಾಕಾರಗಳ ಪಿಂಗಾಣಿ ಜಾಡಿಗಳು ಬಿದ್ದಿದ್ದವು. ಬಟ್ಟೆ ಅಲ್ಲಲ್ಲಿ ಕೊಳೆತು ಲಡ್ಡಾಗಿದ್ದರೂ, ಜಾಡಿಗಳ ಮುಚ್ಚಳಗಳಿಗೆ ಹಾಕಿದ್ದ ಅರಗು ಭದ್ರವಾಗಿದ್ದರಿಂದ ಅವುಗಳೊಳಗೂ ನೀರು ಸೋರಿರಲಾದದೆನಿಸಿತು. ಕೆಲವು ಮುರಿದ ಜಾಡಿಗಳು ಕಂಡರೂ ಅವುಗಳೊಳಗೇನಿದದ್ದಿರಬಹುದೆಂದು ಊಹಿಸಲಾಗದಂತೆ ಮಾಯವಾಗಿದ್ದವು.

*****

ಸಂಜೆ-ಸೂರ್ಯ ಮುಳುಗುವ ಸಮಯವಾಗಿತ್ತು, ಮಳೆ ಹನಿಯುತ್ತಿತ್ತು; ಜನಸಂಚಾರ ಕಡಿಮೆಯಾಗಿತ್ತು. ಐವರೂ‌ ತಾಜ್ ಹೊರಭಾಗದಲ್ಲಿ ಸಂಧಿಸಿದರು. ಸುತ್ತ ಯಾರೂ ಇರಲಿಲ್ಲ. ಲತೀಫನ ಎದೆ ನೂರು-ಮೈಲಿ ವೇಗದಲ್ಲಿ ಓಡುತ್ತಿತ್ತು. ಬೆವರಿಳಿಯಲಾರಂಭಿಸಿದಾಗ ತನ್ನ ತೋಳಿನಲ್ಲೇ ಒರೆಸಿಕೊಂಡ. ಕಾಝಿ ಹೇಳಿದಂತೆ ಆಕ್ರಮಣ-ಸಲಕರಣೆಗಳು ಒಂದು ದೊಡ್ಡ ಹಸಿರು ಬಣ್ಣದ ಕಿಟ್​ನೊಳಗೆ ಕಾಯುತ್ತಿದ್ದವು. ಮಂಡಿಯೂರಿ ಕುಳಿತ ಲತೀಫ್ ಝಿಪ್ ಎಳೆದು ಕಿಟ್ಟನ್ನು ತೆಗೆದ. ಒಂದು ಎ.ಕೆ.೫೬-ರೈಫಲ್, ನಾಲ್ಕು ಆಟೋಮ್ಯಾಟಿಕ್-ಮಶೀನ್-ಪಿಸ್ಟಲ್​ಗಳು, ಮೂರು ನೇರವಾಗಿ-ಕ್ರೂರವಾಗಿದ್ದ ಚೂರಿಗಳು, ೪೦-ಕೆ.ಜಿ. ಆರ್-ಡಿ-ಎಕ್ಸ್-ಪ್ಲಾಸ್ಟಿಕ್​-ಎಕ್ಸ್​ಪ್ಲೋಸಿವ್, ೨೦ ಡೆಟೋನೇಟರ್​ಗಳು, ಮತ್ತು ೨೦ ಟೈಮರ್​ಗಳು ಕಿಟ್ನೊಳಗಿದ್ದವು. ಜೊತೆಗೆ ವಿಸ್ಫೋಟಕಗಳನ್ನು ಇಡಬೇಕಾದ ಸ್ಥಳಗಳನ್ನು ತೋರಿಸುವ ತಾಜ್​ಮಹಲ್​ನ ಒಂದು ನೆಲನಕ್ಷೆ.

ಶರೀಫ್ ಒಂದು ರೈಫಲ್ ಮತ್ತು ಒಂದು ಚೂರಿಯನ್ನು ಕೈಗೆತ್ತಿಕೊಂಡ. ಬಷೀರ್, ಬಿಲ್ಲಾ, ಲತೀಫ್ ಮತ್ತು ಅಬ್ದುಲ್ ಕೈಗಳಿಗೆ ಒಂದೊಂದು ಮಶೀನ್-ಪಿಸ್ಟಲ್ ಸೇರಿತು. ಜೊತೆಗೆ ಲತೀಫ್ ಚೂರಿಯೊಂದನ್ನು ತನ್ನ ನಡುಪಟ್ಟಿಗೆ ಸೇರಿಸಿಕೊಂಡು ಮತ್ತೊಂದನ್ನು ಅಬ್ದುಲ್ ಕೈಗೆ ಕೊಟ್ಟ. ಪ್ಲಾಸ್ಟಿಕ್-ಎಕ್ಸ್​ಪ್ಲೋಸಿವ್ ತಲಾ ೨೦-ಕೆ.ಜಿ.ಯ ಎರಡು ಬ್ಯಾಕ್​ಪ್ಯಾಕ್​ಗಳಲ್ಲಿದ್ದವು. ಎರಡೂ ಬ್ಯಾಕ್​ಪ್ಯಾಕ್​ಗಳಿಗೆ ಹತ್ತು ಟೈಮರ್, ಹತ್ತು ಡೆಟೋನೇಟರ್​ಗಳನ್ನು ಸೇರಿಸಿದರು. ಒಂದನ್ನು ಬಿಲ್ಲಾ ಹಿಡಿದು ಲತೀಫ್‌​ನ ಜೊತೆ ಹೊರಟ, ಮತ್ತೊಂದನ್ನು ಅಬ್ದುಲ್ ಹಿಡಿದು ಬಷೇರ್ ಜೊತೆ ಹೊರಟ.

ಯೋಜನೆಯ ಪ್ರಕಾರ ನಾಲ್ವರು ತಾಜ್​ಮಹಲ್ ಒಳಗೆ ಬಾಂಬ್​ಗಳನ್ನು ಜೋಡಿಸಿ ಟೈಮರ್ ಶುರು ಮಾಡಿ ಬರುವವರೆಗು ಇಬ್ಬರು ಮರೆಯಲ್ಲಿ ನಿಂತು ಅನಿರೀಕ್ಷಿತ ವಿಪತ್ತುಗಳ ವಿರುದ್ಧ ಕಾಯುವುದಿತ್ತು. ಗಡಿಯಲ್ಲಿ ತಂಡದವನೊಬ್ಬ ಹತನಾಗಿದ್ದರಿಂದ, ಕಾವಲಿಗೆ ಉಳಿದವ ಶರೀಫ್‌ ಒಬ್ಬನೆ.

ಲತೀಫ್, ಅಬ್ದುಲ್, ಬಷೀರ್ ಮತ್ತು ಬಿಲ್ಲಾ ತಾಜ್​ಮಹಲ್​ನೊಳಗೆ ಹೊಕ್ಕಿ ಬಾಂಬ್​-ಸ್ಥಾಪನೆಗೆ ಸಮಯ ಸಾಧಿಸುತ್ತಿದ್ದರು. ಮರೆಯಲ್ಲಿ ಓಡಿಯಾಡುತ್ತಿದ್ದ ಶರೀಫ್ ಮೂಲೆ ತಿರುಗಿದಾಗ ಸೆಕ್ಯೂರಿಟಿ-ಗಾರ್ಡ್ ಒಬ್ಬನ ಮುಖಕ್ಕೆದುರಾದ. ಯೋಚಿಸದೆ ತನ್ನ ಎ.ಕೆ-೫೬​ಅನ್ನು ಮೇಲಕ್ಕೆತ್ತಿ ಕುದುರೆ ಒತ್ತಿದಾಗ ಸೆಕ್ಯೂರಿಟಿ-ಗಾರ್ಡ್ ನೆಲಕ್ಕುರುಳಿದ. ನಿಶ್ಯಬ್ಧವಾಗಿದ್ದ ಸಂಜೆಯಲ್ಲಿ ಬಂದೂಕಿನಿಂದ ಗುಂಡು ಹಾರಿದ ಶಬ್ಧ ಕವುಡಾಗಿಸುವಂತಿತ್ತು. ಆ ಕ್ಷಣದಲ್ಲಿ ಅಪಾಯದ ಅರಿವಾದ ಶರೀಫ್ ಉಳಿದ ನಾಲ್ವರೊಡನಿರಲು ಒಳಗೋಡಿದ.

ಶಬ್ಧವನ್ನು ಕೇಳಿ ಸಿಕ್ಯೂರಿಟಿ-ಫೋರ್ಸ್ ತನಿಖೆ ಮಾಡಲು ಬಂದಾಗ ಬಂದೂಕಿನಿಂದ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಗಾರ್ಡ್​ನನ್ನು ಕಂಡು ತಾಜ್​ಮಹಲ್ ಒಳಗೆ ಹೋಗಲು ಪ್ರಯತ್ನಿಸಿದರು. ಒಳಗಿದ್ದ ಭಯೋತ್ಪಾದಕರ ಗುಂಡು-ಮಳೆಗೆ ಎದುರಾದ ಸೆಕ್ಯೂರಿಟಿ-ಫೋರ್ಸ್ ಕಟ್ಟಡಕ್ಕೆ ಹಾನಿಯಾಗುವುದನ್ನು ಹೆದರಿ ನಿಂತಾಗ ಬಿಕ್ಕಟ್ಟು ಸ್ಥಾಪನೆಯಾಯಿತು.

*****

ಎ.ಎಸ್.ಐ-ಲೆಬೋರೆಟರಿಗೆ ಒಯ್ದು ಪರೀಕ್ಷಿಸಲೆಂದು ಸಣ್ಣ ಜಾಡಿಯೊಂದನ್ನು ಕೈಯಲ್ಲಿ ಹಿಡಿದು ಶುಭಕರ ಕೌತುಕನಾಗಿ ಮೇಲೆ ಹತ್ತಲಾರಂಭಿಸಿದ. ಹತ್ತುತ್ತ ಈ‌ ಶೋಧನೆಯ ಬಗ್ಗೆ ಯೋಚಿಸುತ್ತಿದ್ದ ಅವನಿಗೆ ಅದರ ಸಂಕೀರ್ಣ-ಪರಿಣಾಮದ ಅರಿವಾಯಿತು. ಬೆರಗಾದ ಅವನು ತನ್ನ ಚಿಂತನೆಗಳ ವಿನ್ಯಾಸ ಮಾಡಿಕೊಳ್ಳಲು ಅಲ್ಲಿಯೇ ಮೆಟ್ಟಲುಗಳ ಮೇಲೆ ಅಂಬರದಾಚೆಯ ವಿಸ್ತಾರವನ್ನು ದಿಟ್ಟಿಸಿ ನೋಡುತ್ತಿರುವಂತೆ ಕುಳಿತು, ಕತ್ತಲಾಗುತ್ತಿದ್ದರಿಂದ ಕೈಯಲ್ಲಿ ಹಿಡಿದಿದ್ದ ಟಾರ್ಚ್​ಅನ್ನು ಆಲಸ್ಯಕರವಾಗಿ ಅತ್ತಿತ್ತ ಆಡಿಸುತ್ತಿದ್ದ. ಅಚಾನಕವಾಗಿ ಅವನು ಮೇಲಿನಿಂದ ಎಂಟನೆ ಮಹಡಿಯ ಕಟ್ಟೆಯ ಮೇಲೆ ಕುಳಿತಿರುವುದನ್ನು ಗಮನಿಸಿ ಬಲಕ್ಕಿದ್ದ ಕೊಠಡಿಯ ಒಳಗೆ ಬೆಳಕು ಹರಿಸಿದ. ಕತ್ತಲಾವರಿಸಿದ್ದ ಮೂಲೆಗೆ ಬೆಳಕು ಹರಿದಾಗ ಅಲ್ಲಿದ್ದ ಸಣ್ಣದೊಂದು ಬಾಗಿಲು ಅವನ ಕಣ್ಣಿಗೆ ಬಿತ್ತು. ಎದ್ದು ಅದರ ಬಳಿ ಹೋದ. ಲೋಹದ ಬಾಗಿಲಾಗಿತ್ತು, ಹಿಡಿಯನ್ನು ಹಿಡಿದು ಎಳೆದ. ಕಿಲುಬು ಹಿಡಿದಿದ್ದ ತಿರುಗಣೆ ಅಲುಗಾಡಲಿಲ್ಲ. ಇನ್ನೂ‌ ಸ್ವಲ್ಪ ಶಕ್ತಿ ಹರಿಸಿದಾಗ ಲೋಹಕ್ಕೆ-ಲೋಹ ತಿಕ್ಕುವ ಶಬ್ಧದೊಂದಿಗೆ ಬಾಗಿಲು ತೆರೆಯಿತು. ಹಿಂದೆ ಹಳಸಲಾದ ಧೂಳು-ವಾಸನೆ, ಕತ್ತಲು ತುಂಬಿದ ಸುಮಾರು ಮೂರು-ಅಡಿ ಎತ್ತರ, ಎರಡು-ಅಡಿ ಅಗಲದ ಸುರಂಗಮಾರ್ಗ ಉತ್ತರ ದಿಕ್ಕಿಗೆ ಹೊರಟಿತ್ತು.

ಶಭಕರ ಸುರಂಗದ ಒಳಹೊಕ್ಕ.ಇಟ್ಟಿಗೆಗಳಿಂದ ಮಾಡಿದ ಗೋಡೆ, ನೆಲ, ಸುಣ್ಣದ ಗಾರೆಯ ಛಾವಣಿಗಳಿದ್ದು, ಅಲ್ಲಲ್ಲೇ ಮುರಿದು ಬಿದ್ದ ಸುಣ್ಣದ ಹಿಂದೆ ಗೆದ್ದಲು ಹಿಡಿದ ಮರದ ತೊಲೆಗಳು ಕಾಣಿಸುತ್ತಿದ್ದವು. ಸುಮಾರು ೧೦-೧೫-ಮೀಟರ್ ಕುಕ್ಕರಗಾಲಿನಲ್ಲಿ ಕುಳಿತು ಮುನ್ನಡೆದ ಮೇಲೆ ಸುರಂಗ ನಿಂತು ನಡೆಯುವಷ್ಟು ದೊಡ್ಡದಾಗಿ ಕವಲೊಡೆಯಿತು. ಒಂದು ಕವಲು ಎಡಕ್ಕೆ ಪಶ್ಚಿಮ ದಿಕ್ಕಿಗೆ ಹೋದರೆ ಮತ್ತೊಂದು ಉತ್ತರಕ್ಕೆ ಮುಂದುವರೆಯುತ್ತಿತ್ತು. ಉತ್ತರದಲ್ಲಿ ತಾಜ್ ಕಟ್ಟಡವಿದೆಯೆಂದು ಗಣಿಸಿದ ಶುಭಕರ ಆ ದಿಕ್ಕಿನ ಕವಲನ್ನೇ ಹಿಡಿದು ನಡೆಯಲಾರಂಭಿಸಿದ. ಸುಮಾರು ಅರ್ಧ ಕಿಲೋಮೀಟರ್ ದೂರ ನಡೆದ ನಂತರ ಮತ್ತೊಂದು ಬಾಗಿಲು ಅಡ್ಡವಾಯಿತು. ಸಂಪೂರ್ಣವಾಗಿ ಗೆದ್ದಲು ಹಿಡಿದು ಧೂಳಾಗಿದ್ದ ಬಾಗಿಲೊಳಗೆ ಸುಲಭವಾಗಿ ಸೇರ್ಪಡೆ ಸಿಕ್ಕಿತು.

ತಾನು ನಡೆದಿರುವ ಅಂತರ, ದಿಕ್ಕುಗಳನ್ನು ಎಣಿಕೆ ಮಾಡಿದ್ದ ಶುಭಕರ ಆಗಲೇ ತಾನು ತಾಜ್​ಮಹಲ್​ನ ನೆಲಮಾಳಿಗೆಯಲ್ಲಿರುವುದಾಗಿ ನಿರ್ಧರಿಸಿದ್ದ. ಗೋಡೆಯೊಡೆಯದೆ ತನ್ನ ಲಕ್ಷ್ಯ ಪ್ರಾಪ್ತವಾಯಿತೆಂದು ಹರ್ಷವಾಯಿತು. ಸುತ್ತಲೂ ಟಾರ್ಚ್-ಬೆಳಕು ಬಿಟ್ಟು ನೋಡಿದ. ದೊಡ್ಡ ಸಭಾಂಗಣದಂತಹ ಕೋಣೆಯಲ್ಲಿರುವುದು ಗೊತ್ತಾಯಿತು. ನೆಲದಲ್ಲಿ ಸುಣ್ಣ ಮತ್ತಿತರ ರಂಗುಗಳಿಂದ ಬರೆದ ರಂಗೋಲಿ ಚಿತ್ರಗಳು ಕಾಣಿಸಿದವು. ಗೋಡೆಗಳ ಮೇಲೆ ಅಲ್ಲಲ್ಲೆ ಓಂಕಾರ ಹಾಗು ಸ್ವಸ್ತಿಕಗಳ ಚಿತ್ರಗಳಿದ್ದವು. ಸಂಪೂರ್ಣ ನಿಶ್ಯಬ್ಧ ಆವರಿಸಿತ್ತು. ಶುಭಕರ ನಿಧಾನವಾಗಿ ನಡೆದು ಹೋದ. ಅವನ ಹೆಜ್ಜೆಗಳ ಸಪ್ಪಳ ದೂರದ ಗೋಡೆಗಳಿಂದ ಪ್ರತಿದ್ವನಿಸುತ್ತಿದ್ದವು. ಮೂಲೆಯೊಂದರಲ್ಲಿ ಯಜ್ಞಕುಂಡ ಕಾಣಿಸಿತು. ಅದರ ಸುತ್ತ ಗಾರೆ-ಮೆತ್ತಿದ-ಇಟ್ಟಿಗೆಗಳ ಗೋಡೆಯಿತ್ತು. ಶುಭಕರ ಯಜ್ಞಕುಂಡದ ಸುತ್ತ ಗಾಳಿಯಾಡಲು ಗೋಡೆಯಲ್ಲಿ ಕಿಂಡಿಗಳಿದ್ದವೆಂದು ಊಹಿಸಿದ. ಕೊಂಚ ಮುನ್ನಡೆಯಲು ಮೂಲೆಯಲ್ಲಿ ಹತ್ತಾರು ನಷ್ಟವಾದ ಅನೇಕ ದೇವ-ದೇವತೆಯರ ಶಿಲಾಶಿಲ್ಪಗಳು ಕಾಣಿಸಿದವು. ಢಮರು ಕಟ್ಟಿದ ತ್ರಿಶೂಲವೊಂದು ಗೋಡೆಗೊರಗಿ ನಿಂತಿತ್ತು. ವಿಸ್ಮಿತನಾಗಿ ಶುಭಕರ ನಡೆದಿದ್ದ. ಸಭಾಂಗಣದ ಕೊನೆಯಲ್ಲಿ ಬಾಗಿಲಿಲ್ಲದ ವಾಸ್ಕಲ್ಲಿತ್ತು. ಅದರ ಹೊಸ್ತಿಲು ದಾಟಿ ಮೊಗಸಾಲೆಯೊಂದಕ್ಕೆ ಪ್ರವೇಶಿಸಿದ. ಮೊಗಸಾಲೆಯ ಎರಡೂ ಬದಿಯಲ್ಲಿ ಇಪ್ಪತ್ತಕ್ಕೂ‌ ಹೆಚ್ಚು ಕೋಣೆಗಳಿದ್ದವು. ಎಲ್ಲ ಕೋಣೆಗಳಲ್ಲೂ ಬಾಗಿಲು-ರಹಿತ ಚೌಕಟ್ಟುಗಳಿದ್ದವು. ಒಂದು ಕೋಣೆ ಕಣಜವಾಗಿ ತೋರಿದರೆ, ಮತ್ತೊಂದರೆಲ್ಲಿ ಅನೇಕ ಆಕಾರಗಳ ಮಸಿ ಹಿಡಿದ ದೀಪಗಳಿದ್ದವು. ಒಂದರಲ್ಲಿ ಅಡಿಗೆಗೆ ಬೇಕಾಗುವ ದೊಡ್ಡ-ದೊಡ್ಡ ಪಾತ್ರೆ-ಭಾಂಡ-ಹಾಪೆಗಳು; ಮತ್ತೊಂದರೆಲ್ಲಿ ಲೋಹದ ದೇವ-ದೇವತೆಗಳ ಮೂರ್ತಿಗಳಿದ್ದವು. ಬೇರೊಂದರಲ್ಲಿ ಒಡೆದ ಹೂಜಿ-ಜಾಡಿಗಳಿದ್ದವು; ಇನ್ನೂವೊಂದರಲ್ಲಿ ಶ್ರೀಚಕ್ರ ಮತ್ತಿತರ ಮಂಡಲಗಳ ಚಿತ್ರಗಳಿದ್ದವು. ಕೊನೆಯಲ್ಲಿ ಕೊಂಚ ದೊಡ್ಡದಾಗಿದ್ದ ಕೋಣೆಯಲ್ಲಿ ಒಲೆಗುಂಡಗಳು, ಅವುಗಳೊಳಗೆ ಸುಟ್ಟು ಭಸ್ಮವಾದ ಸೌದೆ ಅದು ಅಡಿಗೆಮೆನೆಯೆಂದು ಸೂಚಿಸುತ್ತಿತ್ತು.

ಶುಭಕರ ಸಂಪೂರ್ಣವಾಗಿ ಬೆರಗಾಗಿದ್ದ. ಅಡಿಗೆಮನೆಯಿಂದ ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿದ್ದವು. ಅವುಗಳ ಮೇಲೇರಿ ಸಾಗಿದ. ಮೂರು-ನಾಲ್ಕು ಮಹಡಿಯಷ್ಟು ಮೆಟ್ಟಲುಗಳನ್ನೇರಿದಾಗ ಎಲ್ಲೋ‌ ತಾಜ್​ಮಹಲ್​ನ ಮೇಲಿನ ಮಹಡಿಗಳಲ್ಲಿರುವಹಾಗೆನಿಸಿತು. ಮೆಟ್ಟಿಲುಗಳು ಮೂರನೆಯ ಮಹಡಿಯ ಕೋಣೆಯೊಂದರ ಕಪಾಟಿನಲ್ಲಿ ತೆರೆಯಿತು. ಹೊರಬಂದು ಸುತ್ತ ನೋಡಿದಾಗ ಕಪಾಟಿನ ಬಾಗಿಲು ಕಾಣದಿರುವಂತೆ ಅಕ್ಕ-ಪಕ್ಕದ ಗೋಡೆಯಂತಿತ್ತು.

*****

ಮೊದಲ ಮಹಡಿಯಲ್ಲಿ ಲತೀಫ್‌ ಕಿಡಿಕಿಡಿಯಾಗಿದ್ದ. ಕೆಲಸ ಮುಗಿಸಿ ಸದ್ದಿಲ್ಲದೆ ಪರಾರಿಯಾಗುವ ಬದಲು ತಾಜ್​ಮಹಲ್​ನೊಳಗೆ ಒತ್ತೆಯಾಳುಗಳ ಸಮೇತ ಬಂಧಿತರಾಗಿದ್ದರು. ಆಪರೇಶನ್​ನಲ್ಲಿ ಈ‌ ಅಂಕಣ ಬರೆದಿರಲಿಲ್ಲ.

ಲತೀಫ್‌ ಈ ಅಚಾತುರ್ಯಕ್ಕೆ ಕಾರಣನಾದ ಶರೀಫ್​ನನ್ನು ತರಾಟೆಗೆ ತೆಗೆದುಕೊಂಡು, ಅವನನ್ನೂ, ತಾನೂ ಸೇರಿದಂತೆ ಬಿಲ್ಲಾ ಮತ್ತು ಅಬ್ದುಲ್​ರನ್ನೂ ನಾಲ್ಕು ದಿಕ್ಕುಗಳನ್ನು ಕಾಯುವ ಕೆಲಸಕ್ಕೆ ಹಚ್ಚಿದ. ಒಳಗಿದ್ದ ಪ್ರವಾಸಿಗಳು ಒತ್ತೆಯಾಳುಗಳಾದರು. ಅವರಿಂದ ಅಡಚಣೆಯಾಗಬಾರದೆಂದು ಎರಡನೆ ಮಹಡಿಯಲ್ಲಿದ್ದ ಕೋಣೆಯೊಂದರ ಬೀಗವನ್ನು ಒಡೆದು ಅವರನ್ನು ಅದರೊಳಗೆ ಕೂಡಿಟ್ಟು, ಬಷೀರ್​ನಿಗೆ ಅವರನ್ನು ಕಾಯುವ ಕೆಲಸ ಅಂಟಿಸಿದ. ಮಶೀನ್-ಪಿಸ್ಟಲ್ ಹಿಡಿದ ಬಷೀರ್ ಬೋನಿನೊಳಗಿನ ಹುಲಿಯಂತೆ ಅತ್ತಲಿಂದಿತ್ತ ಓಡಾಡತೊಡಗಿದ.

ಭಯೋತ್ಪಾದಕರು, ಅವರ ಕೈಯಲ್ಲಿ ಗನ್​ಗಳು, ಅವರು ಸೆರೆಹಿಡಿದ ಒತ್ತೆಯಾಳುಗಳು ಎಲ್ಲವನ್ನೂ ಮೇಲಿನಿಂದ ಗೋಡೆಯ ಮರೆಯಲ್ಲಿ ನಿಂತು ನೋಡುತ್ತಿದ್ದ ಶುಭಕರನಿಗೆ ಕ್ಷಣಾರ್ಧದಲ್ಲಿ ನಡೆದಿದ್ದ ಘಟನೆಯ ಸಾರಾಂಶ ಅರ್ಥವಾಯಿತು. ಅವನು ಬಷೀರನ ಕಡೆ ನೋಡಿದ ಕ್ಷಣದದಲ್ಲಿಯೇ ಬಷೀರನೂ ಅವನೆಡೆ ಕಣ್ಣುಹಾಯಿಸಿದ. ಶುಭಕರನ ಹಿಂದೆ ದೀಪ ಬೆಳಗುತ್ತಿದ್ದ ಕಾರಣ ಬಷೀರನಿಗೆ ಶುಭಕರನ ನೆರಳು ಕಾಣಿಸಿತು. ತನಿಖೆ ಮಾಡಲೆಂದು ಒತ್ತೆಯಾಳುಗಳ ಕೋಣೆಯ ಚಿಲಕ ಹಾಕಿ ಮೇಲಿನ-ಮಹಡಿಗೆ ಹತ್ತಿದ.

ಶುಭಕರನಿಗೆ ಓಡುವ ದಾರಿಯಿರಲಿಲ್ಲ. ಪುನಃ‌ ಕಪಾಟಿನೊಳಗೆ ಹೋಗಿ ಮೆಟ್ಟಿಲು-ಸುರಂಗ ಹಿಡಿಯುವ ಸಮಯವಿರಲಿಲ್ಲ. ಮೇಲಾಗಿ ಅಲ್ಲಿಗೂ‌ ಭಯೋತ್ಪಾದಕ ಹಿಂಬಾಲಿಸಿದರೆ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಉತ್ಕಟನಾಗಿ ನಿಂತಲ್ಲಿಯೇ ನಿಂತ.

ಗನ್ ​ ಹಿಡಿದ ಕೈ ಮುಂದಿಟ್ಟು ಬಷೀರ್ ಅತ್ತಿತ್ತ ನೋಡುತ್ತ ತಾನು ಕಂಡ ನೆರಳಿನ ಮೂಲವನ್ನು ಹುಡುಕತೊಡಗಿದ. ಮರೆಯಲ್ಲಿ ನಿಂತಿದ್ದ ಶುಭಕರ ಕತ್ತಲಿನ ಮೂಲೆಗೊತ್ತಿ ನಿಂತ. ಬಷೀರ್ ತಾನಿದ್ದ ಕೋಣೆಯಡೆ ತಿರುಗಿದಾಗ ಶುಭಕರ ಗಟ್ಟಿಯಾಗಿ ಉಸಿರೆಳೆದುಕೊಂಡ. ಅದು ಬಷೀರ್​ನ ಕಿವಿಗೆ ಬಿದ್ದಾಗ ಅವನು ಶಬ್ಧದತ್ತ ತಿರುಗಿ ನೋಡಿದ. ಇಬ್ಬರ ಕಣ್ಣೂ ಮಿಲಾಯಿಸಿತು. ಬಷೀರ್ ಮಾತನಾಡದೆ ಗನ್​ನಿಂದ ಸನ್ನೆ ಮಾಡಿ ಬೆಳಕಿಗೆ ಬರುವಂತೆ ಹೇಳಿದ. ಕೈ ಮೇಲೆತ್ತಿ ಶುಭಕರ ಹೊರಗೆ ಬಂದ.

ಅದೇ ಸಮಯಕ್ಕೆ ಸರಿಯಾಗಿ ಹೊರಗಿದ್ದ ಸೆಕ್ಯೂರಿಟಿ-ಫೋರ್ಸ್ ತಂಡವೊಂದು ತಾಜ್​ಗೆ ದಾಳಿಯಿಟ್ಟಿತ್ತು. ಗೋಲಿಬಾರಿಯ ಶಬ್ಧ ಕೇಳಿದ ಬಷೀರ್​ನ ಧ್ಯಾನ ಅತ್ತ ಹೋದಾಗ ಶಕ್ತಿಜನಕ ಅಡ್ರಿನಾಲಿನ್-ಅಂತಃಸ್ರಾವ ಶುಭಕರನ ರಕ್ತದಲ್ಲಿ ಹರಿದುಕ್ಕಲಾರಂಭಿಸಿತ್ತು. ಶುಭಕರ ಬೆಕ್ಕಿನಂತೆ ಬಷೀರ್​ನ ಮೇಲೆ ಹಾರಿ ಅವನ ಗನ್ ಹಿಡಿದ ಕೈಯನ್ನು ತನ್ನಿಂದ ದೂರ ತಿರುಗಿಸಿ ಗಟ್ಟಿಯಾಗಿ ಹಿಡಿದ. ಇಬ್ಬರೂ‌ ನೆಲಕ್ಕುರುಳಿದಾಗ ಬಷೀರ್​ನ ಗನ್ ಕೈತಪ್ಪಿ ದೂರ ಜಾರಿಹೋಯಿತು. ಬಷೀರ್ ತರಬೇತಿ ಹೊಂದಿದ್ದ ಸೈನಿಕನಾಗಿದ್ದರೂ ಶುಭಕರನೇನು ನಿತ್ರಾಣಿಯಾಗಿರಲಿಲ್ಲ. ಮೇಲಾಗಿ ಬಷೀರ್ ಅವನಿಂದ ವಿರೋಧವನ್ನು ನಿರೀಕ್ಷಿಸಿರಲಿಲ್ಲವಾದ್ದರಿಂದ ಆಶ್ಚರ್ಯಧಾತು ಶುಭಕರನ ಪರದಲ್ಲಿತ್ತು. ಇಬ್ಬರೂ‌ ನೆಲದಲ್ಲಿ ಹೊಡೆದಾಡ ತೊಡಗಿದರು. ಕೆಲವೇ ಕ್ಷಣಗಳ ನಂತರ ಬಷೀರ್ ಮೇಲುಗೈ ಸಾಧಿಸಿ ಶುಭಕರನ ಮೇಲೆ ಕೂತು ಅವನ ಕತ್ತಿನ ಮೇಲೆ ಕೈಯಿಟ್ಟ.

ಬಷೀರ್​ನ ಸೂರ್ಮಾ ತುಂಬಿದ ಕಪ್ಪು ಕಣ್ಣುಗಳು ಕ್ರೌರ್ಯದಿಂದ ಮಿನುಗುತ್ತಿದ್ದವು. ಒಂದು ದುಷ್ಟ ನಗೆ ಬೀರಿ ಶುಭಕರನ ಕತ್ತು ಹಿಸುಕಲಾರಂಭಿಸಿದ. ಉಸಿರು ಕತ್ತರಿಸಿಹೋದ ಶುಭಕರನ ಮುಖ ಹದಿನೈದು ಸೆಕೆಂಡುಗಳ ನಂತರ ನೀಲಿಯಾಗಲಾರಂಭಿಸಿತು. ಅರ್ಧ ನಿಮಿಷದ ನಂತರ ಕಣ್ಣುಗಳುಬ್ಬಿ ಕತ್ತಲಾವರಿಸ ತೊಡಗಿತು. ಯುವಕನಾಗಿದ್ದಾಗ ಎನ್.ಸಿ.ಸಿ-ಕೆಡೆಟ್​ಆಗಿದ್ದ ಶುಭಕರ ತನ್ನ ತರಬೇತಿಯನ್ನು ನೆನಪಿಸಿಕೊಳ್ಳುತ್ತ ದೇಹವನ್ನು ಸಡಿಲಗೊಳಿಸಿಕೊಂಡ. ಅದನ್ನು ಕಂಡ ಬಷೀರ್ ಒಂದು ಕ್ಷಣ ತನ್ನ ಜಾಗ್ರತೆಯನ್ನು ಕಳೆದುಕೊಂಡಾಗ ಶಕ್ತಿಯ ಕೊನೆ ಅಂಶವನ್ನುಪಯೋಗಿಸಿ ಬಷೀರ್​ನನ್ನು ತಳ್ಳಿ, ಏದುಸಿರೆಳೆಯುತ್ತ ಎದ್ದು ತಲೆಯಲ್ಲಾಡಿಸುತ್ತ ನಿಂತು ಕಣ್ಕತ್ತಲೆ ಹೋಗಿಸಿಕೊಳ್ಳಲು ಪ್ರಯತ್ನಿಸಿದ.

ಸಮತೋಲನ ಕಳೆದುಕೊಂಡ ಬಷೀರ್ ಕೆಳಗೆ ಬಿದ್ದಾಗ ಅವನ ಗಮನ ನೆಲದಮೇಲೆ ಬಿದ್ದಿದ್ದ ತನ್ನ ಮಶೀನ್-ಪಿಸ್ಟಲ್ ಮೇಲೆ ಬಿತ್ತು. ಅದನ್ನು ತೆಗೆದುಕೊಳ್ಳಲೆಂದು ಮೊಣಕಾಲು-ಕೈಗಳನ್ನೂರಿ ಹೊರಟಾಗ ಅವನನ್ನು ಗಮನಿಸಿದ ಶುಭಕರ ಓಡುತ್ತ ಬಂದು ಕೆಳಗಿದ್ದ ಬಷೀರ್​ನ ಪಕ್ಕೆಗೆ ಬಲವಾಗಿ ಒದ್ದ. ಸ್ತಬ್ಧನಾದ ಬಷೀರ್ ಮುಖ ಮೇಲೆ ಮಾಡಿಕೊಂಡು ಉರಿಳಿ, ಏಳಲು ಪ್ರಯತ್ನಿಸಿದ. ಸ್ವರಕ್ಷಣೆಯ ಆತಂಕದಲ್ಲಿ ಶುಭಕರ ಬಷೀರ್​ನ ಪಕ್ಕೆಗೆ ಮತೆರಡು ಬಾರಿ ಒದ್ದ. ತ್ರಾಣವನ್ನು ಸಂಪೂರ್ಣವಾಗಿ ಕಳೆದುಕೊಂಡ ಬಷೀರ್​ನ ಜ್ಞಾನ ತಪ್ಪಿತು.

ಶುಭಕರ ಸುಸ್ತಾಗಿ ಮಂಡಿಯಮೇಲೆ ಕೈಯೂರಿ ದೀರ್ಘವಾಗಿ ಉಸಿರಾಡುತ್ತ ನಿಂತ. ಇನ್ನು ಮುಂದಿನ ಕೆಲಸ ಸ್ಪಷ್ಟವಾಗಿತ್ತು. ಹೊರಗಿನ ಸೆಕ್ಯೂರಿಟಿ-ಫೋರ್ಸ್​ಗೆ ಒಳಗಿರುವ ಆತಂಕವಾದಿಗಳ ಸಂಖ್ಯೆಯಾಗಲಿ, ಅವರು ಮಾಡಿಕೊಂಡಿರುವ ರಕ್ಷಾ-ವ್ಯವಸ್ತೆಗಳಾಗಲಿ, ಒತ್ತೆಯಾಳುಗಳನ್ನು ಕೂಡಿಟ್ಟಿರುವ ಸ್ಥಳವಾಗಲಿ ಗೊತ್ತಿರಲಿಕ್ಕಿಲ್ಲವೆಂಬುದು ಊಹಿಸಿದ. ತಾನು ಹಿಂತಿರುಗಿ ಈ ಗುಪ್ತಮಾಹಿತಿಯನ್ನು ತಿಳಿಸಿದರೆ ಆತಂಕವಾದಿಗಳನ್ನು ಸದೆಬಡೆಯಲು ಸಾಧ್ಯವಾದೀತೆಂದು ಅರ್ಥ ಮಾಡಿಕೊಂಡ. ಕೂಡಲೆ ಕಪಾಟಿನ ಹಿಂದಿದ್ದ ಮೆಟ್ಟಿಲುಗಳನ್ನಿಳಿದು, ಅಡಿಗೆಮನೆ-ಮೊಗಸಾಲೆಗಳನ್ನು ದಾಟಿ, ಸುರಂಗ ಹಿಡಿದು ಬಾವಿಯೊಳಗಿಂದಾಚೆ ಬಿದ್ದ.

ಇಷ್ಟು ಹೊತ್ತಿಗೆ ಸಂಪೂರ್ಣ ಕತ್ತಲಾಗಿತ್ತು. ಶುಭಕರ ತನ್ನ ಎ.ಎಸ್.ಐ-ಪರಿಚಯವನ್ನು ಹೇಳಿ, ಸೆಕ್ಯೂರಿಟಿ-ಫೋರ್ಸ್​ನ ಕಮಾಂಡರ್​ನ ಜೊತೆ ಮಾತನಾಡಿ ಒಳಗಿನ ಎಲ್ಲ ವಿಚಾರವನ್ನು ತಿಳಿಸಿದ. ಜಾಗರೂಕವಾಗಿ ಬಾವಿ, ಸುರಂಗ ಹಾಗು ತಾಜ್ ನೆಲಮಾಳಿಗೆಯ ವಿಚಾರಗಳನ್ನು ಲೋಪ ಮಾಡಿದ.

ನಂತರ ಎಲ್ಲವೂ‌ ಬೇಗನೆ ನಡೆದುಹೋಯಿತು. ಸೆಕ್ಯೂರಿಟಿ ಫೋರ್ಸ್ ದಾಳಿ ಇಟ್ಟಾಗ ಕೂಗಿದರೂ ಉತ್ತರಿಸದ ಬಷೀರ್​ನನ್ನು ನೋಡಲು ಲತೀಫ್ ಬಲ್ಲಾನನ್ನು ಕಳಿಸಿದ್ದ. ಜ್ಞಾನ ತಪ್ಪಿ ಬಿದ್ದಿದ್ದ ಬಷೀರ್​ನನ್ನು ಕಂಡು ಬಿಲ್ಲಾ ಕೆಳಗೆ ಕೂಗಿದಾಗ ನೋಡಲು ಅಬ್ದುಲ್ ಮೇಲೆ ಬಂದಿದ್ದ. ಹಾಗಾಗಿ ಆಕ್ರಮಣ-ದಳ ಬಹು ಕಡಿಮೆ ವಿರೋಧವನ್ನೆದುರಿಸಿತು. ಕದನಾನಂತರ ಶರೀಫ್ ಮತ್ತು ಲತೀಫ್ ಹತರಾಗಿ ಬಿದ್ದಿದ್ದರು, ಅಬ್ದುಲ್ ಮತ್ತು ಬಿಲ್ಲಾ ಸೆರೆ ಸಿಕ್ಕಿರು. ಭಯೋತ್ಪಾದಕರ ಐದು ಗನ್​ಗಳು, ೪೦-ಕೆ.ಜಿ ಪ್ಲಾಸ್ಟಿಕ್-ಎಕ್ಸ್​ಪ್ಲೋಸಿವ್ಸ್ ಮತ್ತಿತರ ಆಯುಧ-ಸಲಕರಣೆಗಳು ಬರಾಮತ್ತಾಗಿದ್ದವು.


ನವದೆಹಲಿ

ಶುಭಕರ, ವಸಿಷ್ಟ್ ಪುನಃ‌ ವಸಿಷ್ಟ್​ರ ಕ್ಯಾಬಿನ್​ನಲ್ಲಿ ಮಾತನಾಡುತ್ತಿದ್ದರು.

"ಇದೇನು ಅನ್ಯಾಯ, ಸರ್? ಇನ್ನೂ‌ ನಿಮ್ಮ ಮಿನಿಸ್ಟ್ರಿ ಈ ವಿಚಾರದ ಬಗ್ಗೆ ನಿಧಾನ ಮಾಡುತ್ತಿದೆಯೇ?" ಶುಭಕರ ಉಗ್ರತೆಯ ಹತ್ತಿರವಿದ್ದ ಅಸಮಾಧಾನದಿಂದ ಹೇಳಿದ.

"ಇದೇನು ಹೊಸತೇ,‌ ಶುಭಕರ್? ಇದೆಲ್ಲ ಘಂಟೆ-ದಿನಗಳಲ್ಲಾಗುವ ಕೆಲಸವೇ?" ವಸಿಷ್ಟ್ ಪ್ರತಿವಾದಿಸಿದರು

"ಹಾಗಾದರೆ ಆ ಸುರಂಗ-ಬಾವಿಗಳನ್ನೇಕೆ ಮತ್ತೆ ಸೀಲ್ ಮಾಡಿಸಿದ್ದೀರಿ?"

"ಅದೂ‌ ನನ್ನ ಕೈಯಲ್ಲಿಲ್ಲ-ಆದರೆ ನಿನಗಾಗಿ ಹೋರಾಡಿದ್ದಕ್ಕೆ ಈಗೊಂದು ಗುಡ್-ನ್ಯೂಸ್ ಕೊಡಲೆಂದೇ ನಿನಗೆ ಹೇಳಿಕಳಿಸಿದ್ದು"

"ಅಂದರೆ?"

"ಇಗೂ ಅನ್​ಸೀಲಿಂಗ್-ಆರ್ಡರ್. ನಿನ್ನ ರೆಸರ್ಚ್ ಪಬ್ಲಿಶ್ ಮಾಡಲೊಪ್ಪದಿದ್ದರೂ‌ ನಿನ್ನ ರಿಸರ್ಚ್ ಮುಂದುವರೆಸಬಹುದು"

ಶುಭಕರ ವಸಿಷ್ಟ್ ಕೊಟ್ಟ ಪತ್ರವನ್ನು ತಗೆದು ನೋಡಿದ. "ಇದೇನು? ಲಿಮಿಟೆಡ್ ಆರ್ಡರ್ರೇ?"

"ನಿನಗಂತೂ ಅನ್​ಲಿಮಿಟೆಡ್. ಆದರೆ ಅಕ್ಯಾಡಮಿಯಾ, ಇಂಟರ್​ನ್ಯಾಶನಲ್-ಎಕ್ಸ್​ಪರ್ಟ್ಸ್​ಗಳನ್ನು ಕರೆಯೋಕ್ಕೆ ಅವಕಾಶವಿಲ್ಲ. ಕೇವಲ ಎ.ಎಸ್.ಐ-ನಿನ್ನ ಟೀಮ್​ಗೆ ಸೀಮಿತ. ಇದರ ಬಗ್ಗೆ ಒಂದೇಒಂದು ಪದ ಹೊರಗೆ ಲೇಕ್​ಆದರೆ ತಕ್ಷಣ ಎಲ್ಲ ರಿಸರ್ಚ್ ಬಂದ್. ಸಾರಿ, ನಿನಗಾಗಿ ನಾನಿಷ್ಟೀ ಮಾಡಲಾಗಿದ್ದು"

"ನಿಮ್ಮ ಮಿನಿಸ್ಟ್ರಿ ಸತ್ಯ ಎಷ್ಟು ದಿನ ಅಂತ ಮುಚ್ಚಿಡತ್ತೆ? ಎಷ್ಟೇ ಮುಚ್ಚಿಟ್ಟರೂ ಒಂದಲ್ಲಾ-ಒಂದು ದಿನ ನಿಜ ಆಚೆ ಬರುತ್ತೆ, ಅವತ್ತು ಏನು ಮಾಡ್ತೀರ? ಜನರಿಗೆ ಏನು ಉತ್ತರ ಕೊಡ್ತೀರ?"

"ಶುಭಕರ್, ರಿಸರ್ಚ​ಗೆ ಅವಕಾಶವೇ ಇಲ್ಲದಿರೋ ಸ್ಥಿತಿಯಿಂದ ಇವತ್ತು ರಿಸರ್ಚ್ ಸಾಧ್ಯವಾಗುವ ಸ್ಥಿತಿ ಬಂದಿದೆ. ಒಂದಲ್ಲಾ ಒಂದು ದಿನ ನಿಜಾನೂ ಹೊರಗೆ ಬರುತ್ತೆ. ನಿಧಾನವಾಗಿ ಎವಲ್ಯೂಶನ್ ಆಗಲಿ ಬಿಡು-ರೆವಲ್ಯೂಶನ್ ಬೇಡ. ಬಿಲೀವ್-ಮಿ:ನಿನ್ನ ಶ್ರಮ ವ್ಯರ್ಥವಾಗೋಕ್ಕೆ ಬಿಡೋದಿಲ್ಲ. ಅದು ನನ್ನ ಆಶ್ವಾಸನೆ"

"ಥ್ಯಾಂಕ್ಸ್" ಎಂದು ಶುಭಕರ ಮುಂದಿನ ಕಾರ್ಯ-ಯೋಜನೆ ಹಾಕತೊಡಗಿದ.