Language: Kannada
Category: Historical, Drama, Spy-Thriller
Abstract: This is the story of a young man living in the 7th century, during the time of the Chalukya King Pulikeshi II, Harshavardhana, and Hiuen Tsang (Huang Zang), who turns into a spy, travels with Tsang, and has many adventures along the way.
Keywords: kannada, pulikeshi, harshavardhana, chalukya, spy thriller, adventure, hiuen tsang, ancient india, travel, 7th century, historical
ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ್ಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಲುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಲುಕ್ಯ ಅರಸುತನವನ್ನು ಸ್ಥಾಪಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ ವರೆಗೂ ಆ ಪಾಳುಬಿದ್ದ ಹಳ್ಳಿಯಲ್ಲೇ ಇದ್ದರಂತೆ. ನಮ್ಮ ತಂದೆ ಆ ಪಾಳು ಹಳ್ಳಿಯನ್ನು ಬಿಟ್ಟು ವಾತಾಪಿ ನಗರಕ್ಕೆ ಬಂದರಂತೆ. ಯಾವಾಗೆಂದು ತಿಳಿಯದು - ನನಗಂತೂ ನೆನಪಿಲ್ಲ. ಬಹುಶಃ ನಾನು ಹುಟ್ಟುವ ಮುನ್ನವೇ ಇರಬಹುದು.
ನಾನು ಬೆಳೆದಿದ್ದೆಲ್ಲ ವಾತಾಪಿ ನಗರದ ಬಳಿಯೇ. ಆಗ ಹಿಂದಿನ ಮಹಾರಾಜನಾದ ಕೀರ್ತಿವರ್ಮನ ಮರಣದ ಸಮಯದಲ್ಲಿ ಯುವರಾಜ ಎರೆಯ ಬಹಳ ಚಿಕ್ಕವನಾದ ಕಾರಣ ಮಹಾರಾಜ ಕೀರ್ತಿವರ್ಮನ ತಮ್ಮನಾದ ಮಂಗಳೇಶ ರಾಜ್ಯವಾಳುತ್ತಿದ್ದು, ಗುರ್ಜರ ಪ್ರದೇಶದ ಕಳಚೂರಿ ನಗರದ ರಾಜ ಬುದ್ಧಿರಾಜ, ರೇವತೀ ದ್ವೀಪದ ಪಾಳೆಯಗಾರ ಸ್ವಾಮಿರಾಜ ಮತ್ತಿತರರನ್ನು ಪರಾಜಯ ಗೊಳಿಸಿ, ಅವರನ್ನು ಚಾಲುಕ್ಯರ ಆಧೀನರಾಗಿಸಿ, ಊರುರಾಣಪರಾಕ್ರಮ, ರಾಣವಿಕ್ರಮ, ಪರಮಭಾಗವತನೆಂಬ ಬಿರುದುಗಳನ್ನು ಹೊಂದಿ ವಾತಾಪಿ ನಗರಿಯಲ್ಲಿ ವೈಶ್ಣವ ದೇವಾಲಯವೊಂದನ್ನು ಕಟ್ಟಿಸಿದ ಕತೆಗಳು ಕೇಳಿಬರುತ್ತಿದ್ದವು. ನಮ್ಮಂತಹ ಸಾಮಾನ್ಯ ಜನರಿಗೆ ಹೀಗೆ ಕೇಳಿ ಬರುತ್ತಿದ್ದ ಸುದ್ಧಿಗಳೆಷ್ಟೋ ಅಷ್ಟೆ. ನಜ ಸಂಗತಿ ತಿಳಿಯಲು ಬೇರಾವ ಸಾಧನಗಳೂ ಇರಲಿಲ್ಲ.
ಈ ಮಂಗಳೇಶ ಮಹಾರಾಜನು ಯುವರಾಜ ಎರಯ ವಯಸ್ಸಿಗೆ ಬಂದಾಗ ಸಿಂಹಾಸನ ಬಿಟ್ಟುಕೊಡಬೇಕಾಗಿದ್ದರೂ, ಅಧಿಕರಣದ ಮದವು ಅವನ ತಲೆಗೇರಿ ತನ್ನ ಮಗನಾದ ಸುಂದರವರ್ಮನನ್ನು ಸಿಂಹಾಸನಕ್ಕೇರಿಸುವ ಕುಯೋಜನೆ ಹೂಡಿದ್ದು ಯುವರಾಜ ಎರೆಯನಿಗೆ ತಿಳಿದುಬಂದು, ಯುವರಾಜನು ತನ್ನ ಸ್ವಾಭಾವಿಕ ದಕ್ಷತೆಯಿಂದ ಅವರಿಬ್ಬರನ್ನೂ ನಿರ್ಮೂಲ ಮಾಡಿ, ಪುಲಿಕೇಶಿ ಎಂಬ ಬಿರುದನ್ನು ಹೊತ್ತು, ತಾನೇ ಸಿಂಹಾಸನವನ್ನೇರಿದ್ದು ಚಿರಪರಿಚಿತ ಕತೆಯಾಗಿತ್ತು.
ಸುಮಾರು ಆ ಕಾಲದಲ್ಲಿ ನನ್ನ ಜನ್ಮವಾದದ್ದು ಎಂದು ನಾನು ಬಾಲಕನಾದಾಗ ಅಮ್ಮ ಹೇಳುತ್ತಿದ್ದ ನೆನಪು. ವಯಸ್ಸು ಸುಮಾರು ಏಳೆಂಟು ಇದ್ದಿರಬಹುದು - ಪರಂಪರೆಯಾನುಸಾರವಾಗಿ ನನ್ನನ್ನು ಗುರುಕುಲಕ್ಕಟ್ಟಲಾಯಿತು. ಅಲ್ಲಿ ನಮ್ಮ ಸಂಪ್ರದಾಯದಂತೆ ನನ್ನ ವಿದ್ಯಾಭ್ಯಾಸ ನಡೆಯಿತು. ಸಂಸ್ಕೃತ, ವೇದ-ಪುರಾಣಗಳು ಹಾಗು ವೇದಾಂತ-ಮೀಮಾಂಸಗಳ ವಿಷಯಗಳಲ್ಲಿ ಶಿಕ್ಷಣೆ ಹೊಂದಿದೆ. ಹೀಗೇ ಹಲವಾರು ಸಂವತ್ಸರಗಳು ಕಳೆದವು. ಸುಮಾರು ಹದಿನಾರರ ವಯಸ್ಸಿರಬಹುದು, ಗುರುಗಳು ನಾನು ಗುರುಕುಲದಿಂದ ಹೊರಹೋಗಲು ಸಮರ್ಥನಾಗಿರುವೆ ಎಂದು ಹೇಳಿ ಕಳುಹಿಸಿಕೊಟ್ಟರು.
ಬೇರೆ ದಾರಿ ಕಾಣದೆ ವಾತಾಪಿ ನಗರಕ್ಕೆ ಹಿಂತಿರುಗಿದೆ. ಬಾಲಕನಾಗಿದ್ದಾಗ ನೋಡಿದ್ದು ಬಿಟ್ಟರೆ, ನಾನು ಕಾಣದ ಊರದು, ಎಲ್ಲವೂ ಹೊಸದು. ನಮ್ಮ ತಂದೆಯವರಿಗೆ ನಾನೂ ಅವರಂತೆ ವೈದಿಕ ಕಾರ್ಯ ನಿರ್ವಹಣೆ ನಡೆಸಿಕೊಂಡು, ವಿವಾಹ ಮಾಡಿಕೊಂಡು ವಾತಾಪಿಯಲ್ಲೇ ನೆಲೆಸಬೇಕೆಂಬ ವಿಚಾರ. ಆಗ ನಾನಿನ್ನೂ ಯುವಕ, ಮೇಲಾಗಿ ನನಗೆ ತಲೆಮಾರುಗಳಿಂದ ಬಂದಿರುವ ಬ್ರಾಹ್ಮವಿದ್ಯೆ ಮುನ್ನಡೆಸುವ ವಿಶೇಷ ಆಸೆಯೇನು ಇರಲಿಲ್ಲ. ದೇಶ ಸುತ್ತುವ ಸ್ವಾಭಾವಿಕ ಆಸೆ, ಏನಾದರೂ ಬೇರೆ ಕಾಯಕ ನಡೆಸಿ ಪದವಿ, ಹೊನ್ನು ಗಳಿಸುವ ಆಸೆ.
ಹೀಗೇ ನನ್ನ ಪಾಡೇನಾಗುವುದೆಂದು ಯೋಚಿಸುತ್ತ ಒಂದು ದಿನ ಊರಾಚೆ ಕಾಡಿನಲ್ಲಿ ಹೋಗಿ ಚಿಂತೆ ಮಾಡುತ್ತ ಕುಳಿತಿದ್ದೆ. ಹಾಗೆ ಕುಳಿತಿದ್ದಾಗ ಪ್ರಾಣಿಯೊಂದು ನಡೆದು ಹೋಗುತ್ತಿರುವ ಧ್ವನಿ ಕೇಳಿಸಿತು. ಕುಳಿತಲ್ಲೇ ಕುಳಿತು ಕತ್ತು ತಿರುಗಿಸಿ ನೋಡಿದರೆ ವ್ಯಾಘ್ರವೊಂದು ನೀರು ಕುಡಿಯಲು ಸರೋವರದ ಕಡೆ ಹೊರಟಿದೆ. ಅದರ ಸ್ವಲ್ಪ ಹಿಂದೆಯೇ ವ್ಯಕ್ತಿಯೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ಅದರ ಮೇಲೆ ಗುರಿಯಿಟ್ಟು ಅದನ್ನೇ ಹಿಂಬಾಲಿಸಿ ಹೋಗುತ್ತಿದ್ದದ್ದು ಕಾಣಿಸಿತು.
ಗುರುಕುಲದ ವಿದ್ಯಾಭ್ಯಾಸದಲ್ಲಿ ನಾನು ಕಲಿತ ಒಂದು ಪಾಠವೆಂದರೆ ಪ್ರಕೃತಿಯ ಸೃಷ್ಟಿಯ ರಕ್ಷಣೆ. ಆ ಪಾಪದ ಪ್ರಾಣಿಯನ್ನು ಸಾಯಲು ಬಿಡುವವ ನಾನಾಗಿರಲಿಲ್ಲ. ನಾನು ಮರದ ಮರೆಯಲ್ಲಿದ್ದೆಯಾದ್ದರಿಂದ ಆ ಮನುಷ್ಯನ ಕಣ್ಣಿಗೆ ನಾನು ಕಾಣಿಸಿರಲಿಲ್ಲ. ವ್ಯಾಘ್ರ ನನ್ನ ಪಕ್ಕದಿಂದ ಸುಳಿದಾಗ ನಾನು ಅದರ ಮೇಲೆ ನೆಗೆದೆ. ಅದಕ್ಕೆ ಆಶ್ಚರ್ಯವಾಯಿತಾದರೂ ಅದು ಹೋರಾಡ ತೊಡಗಿತು. ಹೋರಾಟದಲ್ಲಿ ನನ್ನನ್ನು ಬಗರಿ ಓಡಿಹೋಯಿತು. ನೋವಿನಿಂದ ನರಳುತ್ತ ಬಿದ್ದಿದ್ದಲೇ ಬಿದ್ದಿದ್ದೆನಾದರೂ ವ್ಯಾಘ್ರನ ಜೀವ ಉಳಿಸಿದ ತೃಪ್ತಿಯ ಭಾವ ನನ್ನಲ್ಲಿ ಹರಿಯಿತು. ಆದರೆ ನಾನು ಹುಲಿಯನ್ನು ಅಟ್ಟಿ ಬಂದ ಆ ಮನುಷ್ಯನನ್ನು ಎಣಿಸಿರಲಿಲ್ಲ.
ಕೋಪದಿಂದ ನನ್ನ ಬಳಿ ದುರ-ದುರನೆ ನಡೆದು ಬಂದ. ಬಹಳ ಎತ್ತರವಾಗಿದ್ದು, ತೆಳುವಾದ, ಎಲುಬು ಕಾಣುವಂತಹ ಮೈಕಟ್ಟು ಹೊಂದಿದ್ದ. ಅವನ ಮುಖದಲ್ಲಿ ಕಠಿಣ, ನಿಷ್ಟುರ ರೇಖೆಗಳಿದ್ದು, ಕಣ್ಣುಗಳು ಗರುಡನ ಕಣ್ಣುಗಲಹಾಗೆ ರಕ್ತ-ಕೆಂಪಾಗಿದ್ದವು. ಅವನ ದಟ್ಟವಾದ ಒರಟಾದ ತಲೆಗೂದಲು ಅವನ ಮುಖದಸುತ್ತ ಚದುರಿ ಅವನಿಗೇ ವ್ಯಾಘ್ರನ ರೂಪ ಕೊಟ್ಟಿದ್ದವು. ಅವನೆ ಎದೆಯ ಮೇಲೆ ಒಂದು ವರಾಹದ ಲಾಂಛನವಿತ್ತು. ಸಮೀಪ ಬಂದು ಘರ್ಜಿಸಿದ:
"ನಮ್ಮ ಬೇಟೆಯನ್ನು ತಪ್ಪಿಸಲು ಎಷ್ಟು ಧೈರ್ಯವೋ ನಿನಗೆ? ನಾವು ಯಾರೆಂದು ಬಲ್ಲೆಯಾ"
ನಾನು ವಿನಯದಿಂದಾದರೂ ಸ್ವಲ್ಪ ಹೆಮ್ಮೆಯಿಂದ ಉತ್ತರಿಸಿದೆ "ನೀನು ಯಾರಾದರೇನು? ಆ ಮೂಕ ವ್ಯಾಘ್ರನನ್ನು ಕೊಲ್ಲುವ ಹಕ್ಕು ನಿನಗಿಲ್ಲ. ಆ ಕಾರಣದಿಂದ ನಾನು ಅದಕ್ಕೆ ಓಡಿಹೋಗಲು ದಾರಿ ಮಾಡಿಕೊಟ್ಟೆ."
ಅವನಿಗೆ ಕೋಪ ಇನ್ನಷ್ಟು ಹೆಚ್ಚಾಯಿತು. ಅಷ್ಟು ಹೊತ್ತಿಗೆ ಕಾಡಿನಲ್ಲಿ ಯಾರೋ ಬರುತ್ತಿದ್ದ ಸದ್ದು ಕೇಳಿಸಿತು. ಆತ ಒದರಿದ "ಯಾರಲ್ಲಿ"
ಕೆಲವೇ ಕ್ಷಣಗಳಲ್ಲಿ ಇಬ್ಬರು ರಾಜ ಭಟರು ಬಂದು ಆತನಿಗೆ ಬಾಗಿ ಆದರ ತೋರಿ "ಅಪ್ಪಣೆ ಮಹಾರಾಜ" ಎಂದರು. ಮಹಾರಾಜನ ತಂಡದ ಉಳಿದವರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗಲು ಆರಂಭಿಸಿದರು.
ನನಗಾಗ ಹೊಳೆಯಿತು. ಈತ ಮಹಾರಾಜ ಪುಲಿಕೇಶಿ - ವ್ಯಾಘ್ರನ ಕೇಶ ಉಳ್ಳವನು. ಸಿಂಹಾಸನವನ್ನೇರಿದಮೇಲೆ ಈತ ಅಪ್ಪಯಕ ಹಾಗು ಗೋವಿಂದರೆಂಬ ದಂಗೆಯೆದ್ದ ಪಾಳೆಯಗಾರರನ್ನು ಸದೆಬಡೆದು ಅವರು ಕಪ್ಪ ಸಲ್ಲಿಸುವಂತೆ ಮಾಡಿದವ. ವೈಜಯಂತಿಯ ಕದಂಬರನ್ನು ಪೂರ್ಣ ನಿರ್ಮೂಲ ಮಾಡಿ, ನಂತರ ತಲಕಾಡಿನ ಗಂಗರನ್ನು ಹಾಗು ಕರಾವಳಿಯ ಅಲೂಪರನ್ನು ಯುದ್ಧ ದಲ್ಲಿ ಸೋಲಿಸಿ ಸಾಮಂತರನ್ನಾಗಿಸಿದವ. ಕೊಂಕಣ ಕರಾವಳಿ ಹಾಗು ಪುರಿ ಬಂದರನ್ನು ಸಮುದ್ರ ಕಾಳಗದ ನಂತರ ಗೆದ್ದವ. ಲತರು, ಗುರ್ಜರರು ಹಾಗು ಮಾಳವರನ್ನು ಪೂರ್ಣ ಸದೆಬಡೆದು ದಕ್ಷಿಣಪಥಕ್ಕೇ ಅಧಿಪತಿಯಾದಂತವ. ಕೆಲವೇ ಸಂವತ್ಸರಗಳ ಹಿಂದೆ ಮಹಾರಾಜನು ಪಲ್ಲವ ಚಕ್ರವರ್ತಿ ಮಹೇಂದ್ರವರ್ಮನ ತಾಣವಾದ ಕಾಂಚೀಪುರಕ್ಕೆ ಧಾಳಿಯಿಟ್ಟು, ಪುಳ್ಳಲೂರಿನ ಯುದ್ಧದಲ್ಲಿ ಪಲ್ಲವರನ್ನು ಸೋಲಿಸಿ ಮಹೇಂದ್ರವರ್ಮನು ಕಾಂಚೀಪುರದ ಕೋಟೆಯೊಳಗೆ ಅಡಗಿಕೊಳ್ಳುವ ಪರಿಸ್ಥಿತಿ ಬಂದಾಗ, ಆ ಕೋಟೆಗೆ ಧಾಳಿಯಿಟ್ಟು, ಕಾಂಚೀನಗರದೊಳಗೆ ಹೊಕ್ಕಿ, ಅಲ್ಲಿ ಪಲ್ಲವರನ್ನು ಸದೆಬಡೆದು, ಅವರನ್ನೂ ಕಪ್ಪ-ಕಾಣಿಕೆ ಸಲ್ಲಿಸಲು ಒತ್ತಾಯ ಮಾಡಿದವ. ನಾನು ಇಂತಹ ಮಹಾರಾಜನ ಬೇಟೆ ತಪ್ಪಿಸಿದ್ದೆ! ನನಗೇನು ಕಾದಿತ್ತೋ ಯೋಚನೆ ಮಾಡಲು ಭಯವಾಗುತ್ತಿತ್ತು.
ಇಷ್ಟೆಲ್ಲ ಯೋಚನೆ ಮಾಡಲು ನನಗೆ ಕೆಲವೇ ಕ್ಷಣಗಳ ಸಮಯ ಬೇಕಾಗಿದ್ದದ್ದು. ನನಗಷ್ಟೂ ಸಮಯ ಕೊಡದೆ ಮಹಾರಾಜನು "ಇವನನ್ನು ಒಯ್ದು ಕಾರಾಗ್ರಹಕ್ಕೆ ತಳ್ಳಿ" ಎಂದು ಹೇಳಿ ಹೊರಟು ಹೋದನು.
* * * * *
ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೇಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಢೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ.
ಕೊನೆಗೊಮ್ಮೆ ಭಟರು ಬಂದು ನನ್ನ ಕಣ್ಣುಗಳನ್ನು ಕಟ್ಟಿ ನನ್ನನ್ನು ಎಲ್ಲಿಗೋ ಕರೆದೊಯ್ದರು. ಯಾವುದೋ ಸುರಂಗ ಮಾರ್ಗಗಳಲ್ಲಿ ಹೋದ ಅನಿಸಿಕೆ. ಕೊನೆಗೆ ಮತ್ತಾವುದೋ ಸ್ಥಳದಲ್ಲಿ ನನ್ನನ್ನು ಕೂರಿಸಿ ಭಟರು ಹೊರಟು ಹೋದರು.
ಸ್ವಲ್ಪ ಸಮಯದ ನಂತರ ನನ್ನ ಕಣ್ಣಿನ ಕಟ್ಟು ಬಿಚ್ಚಲಾಯಿತು. ದೀಪದ ಬೆಳಕಿದ್ದ ಒಂದು ವಿಶಾಲವಾದ ಕೋಣೆಯಲ್ಲಿದ್ದೆ. ಕೋಣೆಗೆ ಯಾವ ಬೆಳಕಿಂಡಿಗಳಿರುವುದು ಕಾಣಿಸಲಿಲ್ಲವಾದರೂ ರಾತ್ರಿ ಹೊತ್ತಿರಬಹುದೆನಿಸಿತು. ನೆಲಮಾಳಿಗೆಯ ಕೋಣೆ ಇರಬಹುದೆಂದುಕೊಂಡೆ. ರಾಜಸೇವಕರು ತಿನ್ನಲು ಒಂದಿಷ್ಟು ಫಲಗಳು ಹಾಗು ಬೇರೆ ಆಹಾರಗಳನ್ನು ನನ್ನ ಮುಂದೆ ಇರಿಸಿದರು. ನನಗೆ ಏನು ತಿಳಿಯಲಿಲ್ಲ. ಆದರೂ ಹೊಟ್ಟೆ ಹಸಿವಾದರಿಂದ ಆ ಫಲಗಳನ್ನು ಭಕ್ಷಿಸಿದೆ. ಏನು ನಡೆಯುತ್ತಿದೆಯೆಂದು ಯೋಚಿಸಬೇಕೆಂಬ ವಿಚಾರ ಇನ್ನೂ ನನ್ನ ಬುದ್ಧಿಗೆ ಹೊಳೆದಿರಲಿಲ್ಲ, ಅಷ್ಟುಹೊತ್ತಿಗೆ ಸ್ವತಃ ಮಹಾರಾಜನೇ ಮತ್ತೊಬ್ಬ ವಯಸ್ಸಾದ ವ್ಯಕ್ತಿಯೊಂದಿಗೆ ಅಲ್ಲಿಗೆ ಬಂದ. ಇಬ್ಬರು ನನ್ನೆದುರಿಗೆ ಕುಳಿತರು.
ಮಹಾರಾಜ ಸ್ವಲ್ಪ ಶಾಂತವಾಗಿದ್ದರೂ ಇನ್ನೂ ಕೋಪದಿಂದಲೇ ಹೇಳಿದ "ನಮ್ಮ ಗುರಿ ಆ ವ್ಯಾಘ್ರನ ಮೇಲಿತ್ತು. ನೀನು ಅದರೊಡನೆ ಹೋರಾಡುತ್ತಿದ್ದಾಗಲೂ ನಿನ್ನನ್ನೂ, ಅದನ್ನೂ ಕೊಲ್ಲುವ ಸಾಮರ್ಥ್ಯವಿದೆ ನಮ್ಮಲ್ಲಿ"
ನಾನು ಪೆಚ್ಚಾದರೂ, ಉತ್ತರಿಸಲಿಲ್ಲ. ಮಹಾರಾಜನೇ ಮತ್ತೂ ಸ್ವಲ್ಪ ಶಾಂತನಾಗಿ ಹೇಳಿದ "ಮೈ ಮೇಲೆ ಒಂದು ಪಂಚೆ ಧರಿಸಿರುವ ನಿಶಕ್ತ ಬ್ರಾಹ್ಮಣ ನೀನು. ಆ ವ್ಯಾಘ್ರನ ಮೇಲೆ ಹಾರಲು ಭಯವಾಗಲಿಲ್ಲವೇ ನಿನಗೆ?"
ಈಗ ಸ್ವಲ್ಪ ಗತ್ತಿನಿಂದಲೇ ಹೇಳಿದೆ "ಭಯವಾಯಿತು. ಯಾರಿಗೆ ವ್ಯಾಘ್ರನ ಮೇಲೆ ಹಾರಿ ಅದರೊಡನೆ ಸೆಣೆಸಾಡಲು ಭಯವಾಗುವುದಿಲ್ಲ? ಆದರೂ ಅದನ್ನು ಬದುಕಿಸುವ ಹೊಣೆ ಆ ಕ್ಷಣದಲ್ಲಿ ನನ್ನದಾಗಿತ್ತು ಎನಿಸಿತು"
ಮಹಾರಾಜ ಹೇಳಿದ "ನಮಗೆ ಭಯವಾಗುವುದಿಲ್ಲ"
ಸ್ವಲ್ಪ ಹೊತ್ತು ಶಾಂತಿ ಕಾದಿತ್ತು. ಮತ್ತೆ ಮಹಾರಾಜನೇ ನುಡಿದ "ನಿನ್ನ ಧ್ಯೇಯದಲ್ಲಿ ನಿನಗಷ್ಟು ನಂಬಿಕೆಯೆ?"
ನಾನು ಹೇಳಿದೆ "ಮಹಾರಾಜ, ನನ್ನ ಜೀವನದಲ್ಲಿ ಕಲಿತಿರುವ ಒಂದು ಪಾಠ ನನ್ನ ಕೈಯಲ್ಲಿ ಸಾಧ್ಯವಾದಾಗ ಪ್ರಕೃತಿಯ ಸೊಬಗಿನ ರಕ್ಷಣೆ"
ಮಹಾರಾಜ ಪ್ರತಿಯುತ್ತರಿಸಿದ "ಆ ವ್ಯಾಘ್ರ ಪ್ರಕೃತಿಯ ಸೊಬಗೆ? ಅದಕ್ಕೆ ಸಾಧ್ಯವಾಗಿದ್ದಿದ್ದರೆ ನಿನ್ನನ್ನೂ ತಿಂದುಬಿಡುತ್ತಿತ್ತು"
ನಾನು ಹೇಳಿದೆ "ಅದು ನನ್ನನ್ನು ತಿಂದಿದ್ದರೂ ಅದನ್ನು ಬದುಕಿಸಲು ಪ್ರಯತ್ನಿಸುತ್ತಿದ್ದೆ. ಅದನ್ನು ವಿನಾಃ ಕಾರಣ ಕೊಲ್ಲುವ ಅನುಮತಿ ಮನುಷ್ಯನಿಗಿಲ್ಲ"
"ಮಹಾಮಂತ್ರಿಗಳೆ..." ಕೆಲವು ಕ್ಷಣಗಳ ಕಾಲ ಯೋಚಿಸಿ, ಮಹಾರಾಜ ನುಡಿದ
ಪಕ್ಕ ಕುಳಿತಿದ್ದ ವ್ಯಕ್ತಿ ಈಗ ನುಡಿದರು "ಯುವಕ, ನಿನಗೆ ನಿನ್ನ ಮಾತೃಭೂಮಿಯಲ್ಲಿ ಎಷ್ಟು ಭಕ್ತಿ ಇದೆ?"
ನಾನು ಹೇಳಿದೆ "ನನ್ನ ಮಾತೃಭೂಮಿಗೆ ಪ್ರಾಣವನ್ನೂ ಕೊಡಬಲ್ಲೆ"
"ಆ ವ್ಯಾಘ್ರನನ್ನು ಕಾಪಾಡುವ ಧ್ಯೇಯದಲ್ಲಿದ್ದ ನಂಬಿಕೆಯೇ ಮಾತೃಭೂಮಿಯನ್ನು ಕಾಪಾಡುವುದರಲ್ಲೂ ಇದೆಯೆ?" ಎಂದು ಕೇಳಿದರು.
ನಾನು ಇದೆ ಎನ್ನುವಂತೆ ತಲೆದೂಗಿದೆ.
"ಹಾಗಾದರೆ ಮಹಾರಾಜನಿಗೆ ರಾಜ್ಯಾಡಳಿತ ಹಾಗು ರಾಜ್ಯ ಸಂರಕ್ಷಣೆಯಲ್ಲಿ ಸಹಾಯ ಮಾಡುವೆಯಾ?" ಎಂದರು.
ನನಗೀಗ ನನ್ನ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಾಧನೆ ಕಾಣಿಸತೊಡಗಿತು "ಮಾಡುವೆ - ಏನು ಮಾಡಬೇಕು?" ಎಂದೆ
ಈಗ ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈತನು ಮಹಾರಾಜರ ಬೇಟೆ ಅಡ್ಡಪಡಿಸಿದ ಕಾರಣ ಈತನ ಶಿರ ಕಡಿಸುವ ಶಿಕ್ಷೆ ವಿಧಿಸಲಾಗಿರುವುದನ್ನು ಡಂಗೂರ ಹೊಡೆಸಿ"
ನಾನು ತಬ್ಬಿಬ್ಬಾದೆ "ಆ...?"
ಮಹಾಮಂತ್ರಿಗಳು ನುಡಿದರು "ಹೆದರಬೇಡ ಯುವಕ, ನೀನು ಗೂಢಚಾರನಾಗಬೇಕಾದರೆ ನೀನು ಮಾಯವಾಗಬೇಕು. ಯಾರೂ ನಿನ್ನನ್ನು ಗುರುತಿಸಬಾರದು. ಇದಕ್ಕೆ ನಿನಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಡಂಗೂರ ಹೊಡೆಸುವದಕ್ಕಿಂತ ಒಳ್ಳೆಯ ಉಪಾಯ ಬೇರಿಲ್ಲ"
ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈ ಯುವಕನ ಗೂಢಚಾರ ಶಿಕ್ಷಣೆ ಪ್ರಾರಂಭವಾಗಲಿ"
ಇಬ್ಬರೂ ಕೋಣೆ ಬಿಟ್ಟು ಹೊರಟು ಹೋದರು. ನನ್ನನ್ನು ಮತ್ತೆ ಕಣ್ಣು ಕಟ್ಟಿ ನನ್ನ ಕಾರಾಗ್ರಹಕ್ಕೆ ಕಳುಹಿಸಲಾಯಿತು. ನಾನು ಬರುವ ಮುಂಜಾವನ್ನು ಕಾಯ್ದು ಕುಳಿತೆ. ನನ್ನ ದೇಶ ಸುತ್ತುವಾಸೆ ಈ ನೆವದಲ್ಲಾದರೂ ಪೂರೈಸಬಹುದೆಂದು ಯೋಚಿಸುತ್ತ ಕಾಲ ಕಳೆದುಹೋಯಿತು.
* * * * *
ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು ಯೋಚಿಸತೊಡಗಿದೆ.
ಎಷ್ಟು ಹೊತ್ತು ಕಳೆದಿತ್ತೋ ನನಗೆ ತಿಳಿಯದು. ಮತ್ತೆ ರಾತ್ರಿಯಾಗಿರಬಹುದೆಂಬ ಅನಿಸಿಕೆ. ಏನೊ ಸದ್ದು ಕೇಳಿಸಿತು. ನೋಡುತ್ತಿದ್ದಂತೆಯೇ ನನ್ನ ಕಾರಾಗ್ರಹದ ಕೋಣೆಯ ನೆಲದೊಳಗಿಂದ ಒಂದು ಚೌಕ ಬೆಳಕು ಕಾಣಿಸಿತು. ನೆಲದೊಳಗೆ ಒಂದು ಬಾಗಿಲು ತೆರೆಯಿತು. ಇಬ್ಬರು ಭಟರು ಬಂದು "ನಡೆ ನಮ್ಮ ಜೊತೆ" ಎಂದಷ್ಟೆ ಹೇಳಿದರು. ನನಗೆ ಮಾತನಾಡಲು ಅವಕಾಶವಾಗಲಿಲ್ಲ. ಅವರೊಂದಿಗೆ ಆ ಬಾಗಿಲೊಳಗಿನಿಂದ ಸುರಂಗ ಮಾರ್ಗವಾಗಿ ಎಲ್ಲಿಗೋ ಕರೆದೊಯ್ದರು. ಹೀಗೆ ಸ್ವಲ್ಪ ಹೊತ್ತು ನಡೆದ ಮೇಲೆ ಸುರಂಗದಿಂದ ಆಚೆ ಹೋದೆವು. ಮೂರು ಕುದುರೆಗಳನ್ನು ಕುದುರೆ ಏರಿದ ಮತ್ತೊಬ್ಬ ಕಾಯ್ದು ನಿಂತಿದ್ದ.
"ಕುದುರೆ ಸವಾರಿ ಬಲ್ಲೆಯಾ?" ಭಟರಲ್ಲೊಬ್ಬ ಕೇಳಿದ.
ನಾನೆಂದೂ ಕುದುರೆ ಏರಿದವನಲ್ಲ. "ಇಲ್ಲ" ನಾನು ಉತ್ತರಿಸಿದೆ.
"ಇಂಥವರನ್ನು ಎಲ್ಲಿಂದ ಹಿಡಿಯುತ್ತಾರೋ" ಎಂದು ಗೊಣಗುತ್ತ "ರಿಕಾಬಿನೊಳಗೆ ಎಡಗಾಲು ಹಾಕಿ ಬಲಗಾಲು ಕುದುರೆಯ ಬೆನ್ನಮೇಲೆ ಹಾಕು... ಹೀಗೆ" ಎಂದ ಒಬ್ಬ ಹೇಳಿದ ಮಾತಿಗೆ ಕ್ರಿಯೆ ತೋರಿಸುತ್ತ.
ನಾನು ಪ್ರಯತ್ನಿಸಿದೆ. ಅವನು ತೋರಿಸಿದಷ್ಟು ಸುಲಭವಾಗಿರಲಿಲ್ಲ. ಅಂತೂ ಅವರುಗಳ ಸಹಾಯದಿಂದ ಕುದುರೆ ಏರಿ ನಾನೂ ಅವರೊಂದಿಗೆ ಹೊರಟೆ. ಮೊದಲಿಗೆ ಸ್ವಲ್ಪ ಕಷ್ಟವಾದರೂ ಸಾಗುತ್ತಿದ್ದಂತೆ ಅಳವಡಿಸಿಕೊಂಡು ಕೊನೆಗೆ ಸುಲಭವಾಗಿಯೇ ಸವಾರಿ ಮಾಡ ತೊಡಗಿದೆ. ಮಾರನೆಯ ದಿನ ಮಧ್ಯಾಹ್ನದವರೆಗು ಹೀಗೆ ಅರಣ್ಯದೊಳಗೆ ಹೋಗುತ್ತಿದ್ದು, ಸೂರ್ಯ ನೆತ್ತಿಗೇರುವಷ್ಟು ಹೊತ್ತಿಗೆ ನಮ್ಮ ಗುರಿ ತಲುಪಿದೆವು. ಕಾಡಿನ ಮಧ್ಯೆ ಒಂದು ಸಣ್ಣ ಬಿಡಾರದಂತಿತ್ತು. ನನಗೀಗ ಅರ್ಥವಾಯಿತು. ಇದು ಗೂಢಚಾರ ಪಾಠಶಾಲೆ. ಗೂಢಚರ್ಯೆಯ ಶಿಕ್ಷಣಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿತ್ತು.
ಕಾಲ ಕಳೆದಂತೆ ಏನೇನೊ ಶಿಕ್ಷಣ ಹೊಂದಿದೆ. ಗೂಢಚರ್ಯೆ ಪ್ರಪಂಚದ ಎರಡನೇ ಹಳೆಯ ವೃತ್ತಿ. ವರುಣದೇವನೇ ಇದರ ಮೂಲ ಗುರುವಂತೆ. ಅಂತೆಯೇ ನನ್ನ ಗುರುವಿನ ಹೆಸರೂ ವರುಣಾಚಾರ್ಯ ಎಂದೇ ಆಗಿತ್ತು.
ವರುಣಾಚಾರ್ಯರು ಒಮ್ಮೆ ನನಗೆ ಹೇಳಿದ್ದರು "ನ್ಯಾಸ, ವೃತ್ತಿ, ಭಾಷ್ಯಗಳಿಂದ ಕೂಡಿದ, ಪಾಣಿನಿಯ ಸೂತ್ರಗಳನ್ನವಲಂಭಿಸಿದ ವ್ಯಾಕರಣವು ಪಾಪಸ ಭಾಷ್ಯವಿಲ್ಲದೆ ಹೇಗೆ ಒಪ್ಪುವುದಿಲ್ಲವೋ, ಹಾಗೆ ರಾಜನೀತಿಯಲ್ಲಿ ದಂಡನೀತಿಯ ವಿರುದ್ಧ ಯಾವುದೇ ಒಂದು ಹೆಜ್ಜೆ ಹಾಕಿದರೂ ಗೂಢಚಾರರಿಲ್ಲದೆ ಅದು ಒಪ್ಪುವುದಿಲ್ಲವೆಂದು ಶಿಷುಪಾಲ ವಧೆ ಹೇಳುತ್ತದೆ. ಗೂಢಚಾರರು ರಾಜನ ಕಣ್ಣುಗಳಂತೆ"
ಮತ್ತೊಮ್ಮೆ ಹೇಳಿದರು "ಗೂಢಚರ್ಯೆ ರಾಜ್ಯಾಡಳಿತದ ಒಂದು ಅತ್ಯಗತ್ಯ ಅಂಗ. ವೈರಿಗಳು, ವೈರಿಗಳ ಅನಿಷ್ಟಾವಂತರು, ಸ್ವಾಮಿದ್ರೋಹಿಗಳು, ಹಾಗು ಹೊರದೇಶದ ಗುಪ್ತಚರರ ಚಟುವಟಿಕೆಗಳು, ತೊಂದರೆಗಳು ಹಾಗು ಕಾರ್ಯಕಲಾಪಗಳನ್ನು ರಾಜನಿಗೆ ತಿಳಿಸುವುದೇ ಗೂಢಚಾರರ ಕೆಲಸ. ಗೂಢಚರ್ಯೆ ರಾಯಭಾರದಷ್ಟೇ ಅಗತ್ಯ ಅಂಗ, ಹಾಗು ರಾಜನೀತಿಯಲ್ಲಿ ಇದಕ್ಕೆ ಹಲವಾರು ಕಟ್ಟಲೆಗಳು ಹಾಗು ಉಪಯೋಗಗಳು ಇವೆ"
ಗೂಢಚರ್ಯದಲ್ಲಿ ಎರಡು ಅಂಗಗಳು - ಸಂಸ್ಥ ಹಾಗು ಸಂಚಾರ. ಸಂಥವೆಂದರೆ ಒಂದು ಕಡೆ ಸ್ಥಿತವಾಗಿರುವ ಗೂಢಚಾರರು, ಸಂಚಾರವೆಂದರೆ ಎಲ್ಲೆಡೆ ಓಡಾಡುವವರು. ಈ ಎರಡು ಅಂಗಗಳನ್ನು ಆಯಾ ಅಗ್ರರು ನಿಯಂತ್ರಿಸುವರು, ಹಾಗು ಒಂದು ಅಂಗಕ್ಕೆ ಇನ್ನೊಂದು ಅಂಗದ ವಿಚಾರ ತಿಳಿದಿರುವುದಿಲ್ಲ. ಆದರೆ ವರುಣಾಚಾರ್ಯರು ನನ್ನ ಹಿಂದಿನ ಗುರುಕುಲ ಶಿಕ್ಷಣದ ಕಾರಣ ನನ್ನನ್ನು ಬುದ್ಧಿಜೀವಿಯೆಂದು ಎಣಿಸಿ ಈ ಎರಡು ಅಂಗಗಳ ಸಹಕಾರ ನಿರ್ವಹಿಸುವ, ಮಹಾಮಂತ್ರಿ ಹಾಗು ಮಹಾರಾಜರಿಗೆ ನೇರವಾಗಿ ವರದಿ ಒಪ್ಪಿಸುವ ಗುಂಪಿನ ಪದಾತಿಯಾಗಿ ಮಾಡಲು ಶಿಕ್ಷಣ ಕೊಡುತ್ತಿದ್ದರು.
ಗೂಢಚರ್ಯೆ ಪಾಠಶಾಲೆಯಲ್ಲಿ ನನ್ನಂತೆ ಹಲವಾರು ಜನರು. ನನ್ನ ಹಾಗೆ ಕಾರಾಗ್ರಹದಿಂದ, ಗುರುಕುಲಗಳಿಂದ, ಸೈನ್ಯದಿಂದ, ಹಲವರು ಕಳ್ಳ ಖದೀಮರು, ಹೀಗೆ ಎಲ್ಲ ತರಹದ ಸದಸ್ಯರಿದ್ದರು. ವೇಶ ಬದಲಾವಣೆ, ಸೂಚನಾಶಾಸ್ತ್ರ, ಗುಪ್ತ ಲೇಖನ, ಕಳ್ಳ ಖದೀಮರನ್ನು ಹುಡುಕಿ ಗುರುತಿಸುವುದು, ಸಾರ್ವಜನಿಕ ಅಭಿಪ್ರಾಯವನ್ನು ಯುಕ್ತಿಯಿಂದ ನಿಭಾಯಿಸುವುದು, ಹಾಗು ವೈರಿಗಳಲ್ಲಿ ಅಸಮ್ಮತಿ ಹಾಗು ಒಡಕುಂಟುಮಾಡುವುದರಲ್ಲಿ ಶಿಕ್ಷಣೆ ಪಡೆದೆ.
ಸಂಸ್ಥ ಹಾಗು ಸಂಚಾರ ಗೂಢಚರ್ಯೆಕ್ಕೆ ಒಗ್ಗೂಡಿಸಿದ ಪಾರುಪತ್ಯವಿರಲಿಲ್ಲ. ನನ್ನ ಸುತ್ತಲೂ ಗೂಢಚಾರರನ್ನು ಪ್ರೇರಿಸಲು ಉಪಯೋಗಿಸುತ್ತಿದ್ದ ಸಾಧನಗಳನ್ನು ನೋಡುತ್ತಿದ್ದೆ. ಹೊನ್ನು, ಹೆಣ್ಣು, ಮಣ್ಣು ಇವು ತಪ್ಪಿದರೆ ಪ್ರತೀಕಾರ, ಅಧಿಕರಣದ ಮದ್ದುಗಳನ್ನು ಗೂಢಚಾರರ ಪ್ರೇರೆಣೆಗೆ ವಿನಿಯೋಗಿಸಲಾಗುತ್ತಿತ್ತು. ದುರ್ಬಲರನ್ನು ಕಾಣಿಕೆ ಹಾಗು ರಾಯಭಾರದಿಂದ ಗೆದ್ದರೆ, ಬಲವಂತರನ್ನು ದಂಡ ಹಾಗು ಅಸಮ್ಮತಿಯಿಂದ ಗೆಲ್ಲಲಾಗುತ್ತಿತ್ತು. ನನ್ನ ಮೇಲೆ ದೇಶಪ್ರೇಮದ ಬಾಣ ಬಿಡುತ್ತಿದ್ದದ್ದು ನನಗೇ ಗೊತ್ತಾದರೂ, ನನಗೆ ಆ ರೀತೆಯ ಯಾವ ಪ್ರೇರಣೆಯೂ ಬೇಡವೆಂದು ಮನಸ್ಸಿನಲ್ಲೇ ಅಂದುಕೊಂಡು ಮುನ್ನಡೆದೆ. ವರುಣಾಚಾರ್ಯರಿಗೆ ನನ್ನ ನಿಜ ಸಂಗತಿಯನ್ನು ಹೇಳಿ ಅವರ ಅನುಮತಿ ಪಡೆದು ಮನೆಗೆ ಒಂದು ಗುಪ್ತ ಓಲೆ ಕಳುಹಿಸಿದೆ. ಎಲ್ಲಿರುವೆ ಹೇಗಿರುವೆ ಎಂದು ಹೇಳದಿದ್ದರೂ ಮನೆಯವರಿಗೆ ನಾನಿನ್ನೂ ಜೀವಂತವಾಗಿರುವೆನೆಂಬುದು ನಂಬಲಾಗುವಂತಹ ಓಲೆ.
ಹೊರ ದೇಶಗಳಲ್ಲಿ, ಮನುಷ್ಯರ ಮಾನಸಶಾಸ್ತ್ರವನ್ನರಿತು, ಅವರ ಪ್ರೇರಣೆ ಹಾಗು ದೌರ್ಬಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಗುರಿ ಆಯ್ದುಕೊಳ್ಳಬೇಕು. ವೈರಿ ರಾಜನೊಡನೆ ಅತೃಪ್ತರಾಗಿರುವವರು, ಅವನಿಂದ ಅಪಮಾನಿತರಾದವರು, ಅತವ ಗಡಿಪಾರು ಮಾಡಲ್ಪಟ್ಟವರು, ರಾಜನಿಂದ ತಮ್ಮ ಸೇವೆಗೆ ಹೊನ್ನು ಪಡೆಯದಿದ್ದವರು, ಅಧಿಕಾರ ಅಥವ ಹೊನ್ನು ಕಳೆದುಕೊಂಡವರು, ಕಾರಣರಹಿತವಾಗಿ ಕಾರಾಗ್ರಹ ಸೇರಿದವರು, ಬೆದರಿಕೆಗಳಿಗೆ ಹೆದರುವಂಥವರನ್ನು ಹಿಡಿದು ಕೆಲಸಗಳನ್ನು ಮಾಡಿಸಿಕೊಳ್ಳಬೇಕು.
ಗೂಢಚಾರರು ವೈರಿಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದರೆ ಬಿಡಬಾರದು - ತಟವಟ ಗೂಢಚಾರರಾಗಬೇಕು. ತಟವಟ ಗೂಢಚಾರನೆಂದರೆ ತನ್ನ ಒಡೆಯನಿಗೆ ನಿಷ್ಠೆ ತೋರುತ್ತ ಎದುರಾಳಿಗೆ ಕೆಲಸ ಮಾಡುವವ. ವೈರಿಗಳಲ್ಲಿ ಒಡಕು ಹಾಗು ಕೋಲಾಹಲ ಉಂಟು ಮಾಡಲು ಇದು ಸುವರ್ಣಾವಕಾಶ. ಸುಳ್ಳು ಕಾಗದ ಪತ್ರಗಳನ್ನು ವೈರಿಗಳ ದಂಡನಾಯಕನ ಬಳಿ ಸಿಗುವಹಾಗೆ ಮಾಡಿ ವೈರಿ ಸೇನೆಯನ್ನು ನಿಶಕ್ತ ಮಾಡಬಹುದು. ಒಡೆಯನ ಪಡೆಯಲ್ಲಿ ವೈರಿಯ ಗೂಢಚಾರರನ್ನು ಹಿಡಿಯಲೂ ಇಂತಹವರು ಬೇಕಾಗುತ್ತಾರೆ.
ಹೀಗೆ ಸಂಪರ್ಕದವರಿಗೆ ಹೊನ್ನು ತಲುಪಿಸುವುದರಲ್ಲಿ, ಓಲೆಗಳನ್ನು ಕದ್ದು ಓದುವುದರಲ್ಲಿ, ಸುದ್ಧಿ ವಿಮರ್ಶನ ಮಾಡುವುದರಲ್ಲಿ, ವೇಶ ಬದಲಿಸಿ ಕೆಲಸ ಮಾಡುವುದರಲ್ಲಿ, ವೈರಿ ಗೂಢಚಾರರನ್ನು ಕಂಡುಹಿಡಿಯುವುದರಲ್ಲಿ, ತಪ್ಪು ಸುದ್ಧಿ ಹರಡಿ ಅಸಮ್ಮತಿಯುಂಟು ಮಾಡುವುದರಲ್ಲಿ, ವಿಶಕನ್ಯೆಯರ ಉಪಯೋಗದಲ್ಲಿ, ಹಾಗು ವಿಧ್ವಂಸಕ ಕೃತ್ಯಗಳಲ್ಲೂ ಶಿಕ್ಷಣೆ ಪಡೆದೆ.
ಹಲವು ಮಾಸಗಳು ಕಳೆದವು. ಕಾಲ ಕಳೆದಂತೆ ನಾನು ಈ ಎಲ್ಲ ವಿಷಯಗಳಲ್ಲಿ ನಿಪುಣನಾಗತೊಡಗಿದೆ.
ಒಂದು ದಿನ ವರುಣಾಚಾರ್ಯರು ನನ್ನನ್ನು ಅವರ ಬಳಿ ಕರೆದು ಹೇಳಿದರು "ಇಂದಿಗೆ ನಿನ್ನ ಶಿಕ್ಷಣೆ ಮುಕ್ತಾಯವಾಯಿತು. ನಾನು ಹೇಳಿರುವ ಎಲ್ಲ ವಿಷಯಗಳನ್ನು ಯಾವಾಗಲೂ ನೆನಪಿರಲಿ"
"ಹಾಗೆಂದರೆ ... " ನಾನು ಹೇಳಿದೆ
"ನೀನು ಇಲ್ಲಿಂದ ಹೊರಡುವ ಕಾಲ ಬಂದಿದೆಯೆಂದು ಅರ್ಥ" ಎಂದು ಹೇಳಿದರು
"ಮುಂದೇನು?" ನಾನು ಕೇಳಿದೆ
"ನಿನ್ನ ಶಿಷ್ಯವೃತ್ತಿಯಿಂದ ನಾನು ಪ್ರಸನ್ನನಾಗಿದ್ದೇನೆ. ವಾತಾಪಿ ನಗರಕ್ಕೆ ಹಿಂತಿರುಗು. ಮಹಾಮಂತ್ರಿಗಳಿಗೆ ನೇರವಾಗಿ ವರದಿ ಒಪ್ಪಿಸುವ ರಾಯಭಾರ ಹೊತ್ತಿರುವ ಸಂಘದಲ್ಲಿ ನೀನೊಬ್ಬ ಪದಾತಿ. ಈ ಓಲೆ ತೆಗೆದುಕೊಂಡು ಸುರಂಗ ಮಾರ್ಗವಾಗಿ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗು. ಮುಂದಿನದನ್ನು ಅವರೇ ನೋಡುತ್ತಾರೆ" ಎಂದು ಹೇಳಿ ಒಂದು ಓಲೆ ನನ್ನ ಕೈಗಿತ್ತು, ನಾನು ಹೋಗಬೇಕಾಗಿರುವ ಸ್ಥಳದ ವಿವರಗಳನ್ನು ಕೊಟ್ಟರು.
ನಾನು ಅವರಿಗೆ ನಮಿಸಿ, ಪ್ರವರ ಹೇಳಿ ಹೊರಬಿದ್ದೆ.
ಕೊನೆಯದಾಗಿ ವರುಣಾಚಾರ್ಯರು ನನಗೆ ಹೀಗೆ ಹೇಳಿ ಬೀಳ್ಕೊಟ್ಟರು "ಶಕ್ತಿಯಿಂದ ಗಳಿಸಲಾದದ್ದು ಯುಕ್ತಿಯಿಂದ ಗಳಿಸಬಹುದು. ಕರಿ ನಾಗನನ್ನು ಕಾಗೆಯು ಹೊನ್ನಿನ ಸರದ ಯುಕ್ತಿಯಿಂದ ಗೆದ್ದಿತು". ನಿರ್ಬಲ ಕಾಗೆಯು ಕರಿ ನಾಗನ ಕಾಟದಿಂದ ತಪ್ಪಿಸಿಕೊಳ್ಳಲು ಹೊನ್ನಿನ ಸರವನ್ನು ಅದರ ಹುತ್ತದೊಳಗೆ ಹಾಕಿ ಅದರ ನಾಶಕ್ಕೆ ಕಾರಣವಾದ ಕತೆಯನ್ನು ಸ್ಮರಿಸುತ್ತ ಮಾತನಾಡದೆ ಕುದುರೆಯೇರಿ ಹೊರಟೆ.
* * * * *
ನಾನು ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ತಿನ್ನಲೇನು ಸಿಕ್ಕಲಿಲ್ಲ. ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡಿದೆ. ನಾನು ಎಲ್ಲರ ಪಾಲಿಗೆ ಸತ್ತು ಹೋಗಿದ್ದೆ. ನಾನು ಕಳುಹಿಸಿದ ಓಲೆ ಮನೆ ಸೇರಿತ್ತೋ ಇಲ್ಲವೋ ಒಂದೂ ತಿಳಿಯದು. ಇನ್ನೂ ಸ್ವಲ್ಪ ಕತ್ತಲಾಗುವವರೆಗೆ ಕಾಯ್ದು ಮನೆ ಕಡೆ ಕುದುರೆ ತಿರುಗಿಸಿದೆ. ಸ್ವಲ್ಪ ದೂರದಲ್ಲೇ ಕುದುರೆಯನ್ನು ಕಟ್ಟಿ ಹಾಕಿ ಮನೆಯವರೆಗೆ ನಡೆದೇ ಹೋದೆ. ಮನೆಯಲ್ಲಿ ಯಾರಿರುವರು ಏನೂ ತಿಳಿಯದು. ಯಾರಿಗಾದರೂ ಕಾಣಿಸಿದರೆ? ನಾನು ಮಹಾರಾಜನ ಬೇಟೆ ತಪ್ಪಿಸಿದಾಗ ನನಗೆ ಗಡ್ಡ ಮೀಸೆಗಳಿರಲಿಲ್ಲ. ಈಗ ಪೂರ್ಣ ಗಡ್ಡ ಮೀಸೆಗಳಿದ್ದವು. ತಲೆಯ ಮೇಲಿದ್ದ ಜಟೆ ಈಗ ಹೋಗಿ ತಲೆ ತುಂಬ ಕೂದಲಿತ್ತು. ಎಂದೂ ತಲೆಗೆ ಪೇಟ ಧರಿಸದವ ಈಗ ಪೇಟ ಧರಿಸಿದ್ದೆ. ಯಾರೂ ನನ್ನನ್ನು ಗುರುತು ಹಿಡಿಯುವಂತೆ ಇರಲಿಲ್ಲ. ಆದರೂ ಮನೆಯೊಳಗೆ ಹೋಗಲು ಹೆದರಿ ಮರೆಯಲ್ಲೇ ಕಾಯ್ದು ನಿಂತೆ.
ಸ್ವಲ್ಪ ಹೊತ್ತಿನಲ್ಲಿ ಮನೆಯ ಕದ ತೆರೆದು ಅಮ್ಮ ಆಚೆ ಬಂದರು. ನಾನು ಮರೆಯಿಂದ ಇಳಿದು ಅಮ್ಮನ ಕಡೆ ನಡೆದೆ.
"ಯಾರಲ್ಲಿ" ಅಮ್ಮ ಕೂಗಿದರು.
"ನಾನು... ಅಮ್ಮ" ಎಂದು ಹತ್ತಿರಹೋದೆ.
"ಯಾರಪ್ಪ ನೀನು.... ಸೂರ್ಯ" ಅಮ್ಮ ಆಶ್ಚರ್ಯಪಟ್ಟರು.
"ಹೌದು, ನಾನೆ" ನಾನು ಹೇಳಿದೆ.
"ಏನಾಯಿತು? ಹೇಗೆ ತಪ್ಪಿಸಿಕೊಂಡೆ? ಈಗ ಎಲ್ಲಿರುವೆ? ಏನೀವೇಶ?" ಒಟ್ಟಿಗೆ ಪ್ರಶ್ನೆಗಳ ಸುರಿಮಳೆ ಮಾಡಿದರು
"ಒಂದೊಂದಾಗಿ ಹೇಳುವೆ. ನಾನು ತಪ್ಪಿಸಿಕೊಳ್ಳಲಿಲ್ಲ, ನನ್ನನ್ನು ಬಿಟ್ಟರು. ಇಷ್ಟು ದಿನ ಊರಿನಲ್ಲಿರಲಿಲ್ಲ ಇಂದು ಬಂದೆ. ನನಗಾವ ಅಪಾಯವೂ ಇಲ್ಲ ಹೆದರಬೇಡ. ನನ್ನ ಕಾಯಕಕ್ಕಾಗಿ, ಯಾರಿಗೂ ಗುರುತು ಸಿಗಬಾರದೆಂದು ಈ ವೇಶ" ನಾನೂ ಎಲ್ಲ ಒಟ್ಟಿಗೆ ಉತ್ತರಿಸಿದೆ.
"ಕಾಯಕಕ್ಕೆ ವೇಶವೇ? ಏನು ಕಾಯಕ? ಕಳ್ಳನಾಗಿರುವೆಯಾ?" ಪ್ರಶ್ನಿಸಿದರು
"ಇಲ್ಲ ಅಮ್ಮ, ನಾನು ಕಳ್ಳನಲ್ಲ. ದೇಶಸೇವೆಯ ಕೆಲಸ, ಆದರೆ ಗುಪ್ತ ಈಗ ಹೇಳಲಾರೆ" ಎಂದು ಉತ್ತರಿಸಿದೆ
"ಇದೇಕೆ ಹೀಗೆ? ಒಳಗೆ ಬಾ. ಮನೆಯವರನ್ನೆಲ್ಲ ನೋಡುವುದಿಲ್ಲವೆ?" ಅಮ್ಮ ಕೇಳಿದರು
"ನೋಡುವೆ, ಆದರೆ ಈಗಲ್ಲ. ನಾನು ಈಗ ಬೇರೆಲ್ಲೋ ಹೋಗಬೇಕು. ಯಾರಿಗೂ ನನ್ನ ಬಗ್ಗೆ ಹೇಳಬೇಡ" ಎಂದೆ.
"ಇಷ್ಟು ದಿನದ ಮೇಲೆ ಬಂದಿರುವೆ, ಇಷ್ಟು ಬೇಗ ಹೊರಟೆಯಾ?" ಎಂದರು
"ನಾನು ಕಳಿಸಿದ ಓಲೆ ಸಿಕ್ಕಿತೋ ಇಲ್ಲವೋ?" ನಾನು ಪ್ರತಿ ಪ್ರಶ್ನಿಸಿದೆ.
"ಸಿಕ್ಕಿತು, ಆದರೆ ಅದರಲ್ಲಿ ಏನೂ ವಿವರಣೆ ಇರಲಿಲ್ಲ. ಅದೊಂದೆ ನಮ್ಮಿಬ್ಬರಿಗೂ ಆಶಾಜನಕವಾಗಿತ್ತು. ಈಗಲಾದರೂ ನಿಜ ಸಂಗತಿ ಹೇಳು" ಎಂದು ಹೇಳಿದರು
"ಅಮ್ಮ, ತುಂಬಾ ಹೊಟ್ಟೆ ಹಸಿವಾಗಿದೆ. ತಿನ್ನಲು ಏನಾದರೂ ಇದೆಯೆ?" ಎಂದು ಕೇಳಿದೆ ಮಾತು ಮರೆಸಲು.
ಅಮ್ಮ ಒಳಗೆ ಹೋಗಿ ಬಟ್ಟೆಯಲ್ಲಿ ಕಟ್ಟಿ ಏನೋ ಬುತ್ತಿ ತಂದರು. ನಾನು ನಮ್ಮ ತಂದೆಯವರ ಬಗ್ಗೆ ವಿಚಾರಿಸಿದೆ. "ಅಪ್ಪ ಎಲ್ಲಿದ್ದಾರೆ ಹೇಗಿದ್ದಾರೆ?"
"ಒಳಗಿದ್ದಾರೆ. ನಾನು ಹಸು ನೋಡುವ ನೆಪ ಮಾಡಿ ಬಂದಿರುವೆ" ಎಂದರು
ಮತ್ತೆ ಪುಟ್ಟ ಹುಡುಗನೆನಿಸಿತು. ಅಮ್ಮ ತಂದ ಬೋಸಿ ನೀರಲ್ಲಿ ಕೈತೊಳೆದು, ಬುತ್ತಿ ತೆಗೆದೆ. ಅಮ್ಮ ತಮ್ಮ ಕೈಯಿಂದಲೇ ತಿನ್ನಿಸಿದರು. ಇಬ್ಬರೂ ಸ್ವಲ್ಪ ಕಾಣ್ಣೀರು ಹಾಕಿದೆವು. ಸ್ವಲ್ಪ ಹೊತ್ತಿನ ಬಳಿಕ ಊಟ ಮುಗಿಸಿ ಕೈತೊಳೆದು ಹೇಳಿದೆ.
"ಅಪ್ಪನಿಗೆ ತಿಳಿದರೂ ಯಾವಕಾರಣಕ್ಕೂ ಬೇರೆಯಾರುಗೂ ತಿಳಿಯಬಾರದು, ನಾನಿನ್ನು ಹೊರಡಬೇಕು" ಎಂದು ಎದ್ದೆ.
ಅಷ್ಟು ಹೊತ್ತಿಗೆ ಅಪ್ಪ ದೀಪ ಹಿಡಿದು ಬಾಗಿಲಾಚೆ ಬಂದರು. "ಯಾರು...? ಯಾರಲ್ಲಿ...?"
ನಾನು ಅಮ್ಮನ ಚರಣ ಸ್ಪರ್ಶಿಸಿ, ಬೇಗನೇ ಅಪ್ಪನ ಬಳಿ ಹೋಗಿ "ನಾನು ಸೂರ್ಯ, ಅಮ್ಮನಿಗೆ ಎಲ್ಲ ವಿಷ್ಯ ಹೇಳಿರುವೆ, ಯಾವಕಾರಣಕ್ಕೂ ನನ್ನ ಹೆಸರು ಕೂಗಬೇಡಿ ನಾನೀಗಲೇ ಹೋಗಬೇಕು" ಎಂದು ಹೇಳಿ ಅವರ ಚರಣ ಸ್ಪರ್ಶಿಸಿ, ಕುದುರೆಯ ಕಡೆ ಓಡಿ ಹೊರಟು ಹೋದೆ.
"ಅವನು ನಮ್ಮ ಸೂರ್ಯ! ನೋಡಿದೆಯಾ? ನಾನು ಹೇಳುತ್ತಿರಲಿಲ್ಲವೇ? ನಮ್ಮ ಸೂರ್ಯ....." ಎಂದು ಅಪ್ಪ ಅಮ್ಮನಿಗೆ ಹೇಳುತ್ತಿದ್ದದ್ದು ನಾನು ಓಡುತ್ತಿದ್ದಂತೆ ಕುಂದುತ್ತಿತ್ತು.
* * * * *
ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ ಹೊಕ್ಕೆ.
ಗುಡಿಯೊಳಗೆ ಒಂದು ಕಲ್ಲಿನ ಮೂರ್ತಿ. ಮೂರ್ತಿಯ ಹಿಂದೆ ನಡೆದು ಹೋದೆ. ಅಲ್ಲಿದ್ದ ಒಂದು ಸಣ್ಣ ಗುಬುಟನ್ನು ಒತ್ತಿದಾಗ ನನ್ನ ಕಾರಾಗ್ರಹದ ನೆಲದ ಮೇಲೆ ಬಾಗಿಲು ತೆರೆದಂತೆ ಇಲ್ಲೂ ನೆಲದಲ್ಲಿ ನಿಶ್ಯಬ್ದವಾಗಿ ಒಂದು ಬಾಗಿಲು ತೆರೆಯಿತು. ಇಳಿದುಹೋಗಲು ಮೆಟ್ಟಲುಗಳಿದ್ದವು. ನಿಧಾನವಾಗಿ ಮೆಟ್ಟಲು ಇಳಿದು ಸುರಂಗದೊಳಗೆ ಹೊಕ್ಕೆ. ಒಂದು ಸಣ್ಣ ದೀಪ ಉರಿಯುತ್ತಿತ್ತು. ಒಳಗಿನಿಂದ ನೆಲದ ಬಾಗಿಲು ಮುಚ್ಚುವ ಗುಬುಟು ಒತ್ತಿದೆ. ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿತು. ದೀಪವನ್ನೆತ್ತಿಕೊಂಡು ಸುರಂಗದಲ್ಲಿ ನಡೆದು ಹೊರಟೆ.
ಸ್ವಲ್ಪ ಕಾಲ ನಡೆದು ಹೋದೆ. ಉದ್ದಕ್ಕೂ ನಾನು ವಾತಾಪಿ ನಗರದ ಕೆಳಗೆ ಹೋಗುತ್ತಿರಬಹುದೆಂಬ ನಿರೀಕ್ಷೆ. ಕೊನೆಗೆ ಒಂದು ಬಾಗಿಲ ಎದುರಿಗೆ ಬಂದು ನಿಂತೆ. ಬಾಗಿಲನ್ನು ಗುಪ್ತ ಸಂಜ್ಞೆಯಲ್ಲಿ ತಟ್ಟಿದೆ. ಬಾಗಿಲು ತೆರೆಯಿತು; ಒಳಗೆ ಹೋದೆ. ಅಲ್ಲಿ ಹಲವಾರು ಜನ ಕೂಡಿದ್ದರೂ ನನ್ನೊಡನೆ ಮಾತನಾಡಲು ಯಾರೂ ಬರಲಿಲ್ಲ. ಮುಂದೇನೆಂದು ನಿರೀಕ್ಷಿಸುತ್ತಾ ಮೂಲೆಯೊಂದರಲ್ಲಿ ಕಾಯ್ದು ನಿಂತೆ.
"ಹಿಂದೆ ತಿರುಗಬೇಡ. ವರುಣಾಚಾರ್ಯರ ಓಲೆ ತೆಗೆದುಕೊಡು" ಎಂದು ನನ್ನ ಕಿವಿಯಲ್ಲಿ ಯಾರೋ ಹೇಳಿದಹಾಗಾಯಿತು. ಈ ಮೂಲೆಯಲ್ಲಿ ನನ್ನ ಕಿವಿಯೊಳಗೆ ಯಾರಿರಬಹಿದೆಂದು ನನ್ನ ವಸ್ತ್ರಗಳೊಳಗಿಂದ ಓಲೆಯನ್ನು ತೆಗೆದು ಕೈಯಲ್ಲಿ ಹಿಡಿದೆ. ಒಂದು ಕ್ಷಣದಲ್ಲಿ ಮಾಯವಾಯಿತು, ಆದರೆ ಅಷ್ಟರಲ್ಲಿ ನಾನು ಗೋಡೆಯಲ್ಲಿದ್ದ ಸಣ್ಣ ಕಿಂಡಿಯ ಬಾಗಿಲು ಮುಚ್ಚುತ್ತಿರುವುದನ್ನು ನೊಡಿದೆ. ಅದರೊಳಗಿನಿಂದ ಯಾರೋ ಕೈ ಹಾಕಿ ಓಲೆ ತೆಗೆದುಕೊಂಡಿರಬೇಕು ಎಂದುಕೊಂಡೆ.
ಸ್ವಲ್ಪ ಹೊತ್ತಿನ ಬಳಿಕ, ಮಹಾಮಂತ್ರಿಗಳು ಹಾಗು ನನಗೆ ಗೊತ್ತಿಲ್ಲದ ಒಂದಿಬ್ಬರು ಒಟ್ಟಿಗೆ ಬಂದು ಸಭೆಯನ್ನು ಕೂಗಿದರು. ಮಹಾಮಂತ್ರಿಗಳು ನುಡಿದರು "ಮಹಾರಾಜ ಪುಲಿಕೇಶಿ ಸಿಂಹಾಸನವನ್ನೇರಿದ ಮೇಲೆ ಮೊದಲಿಗೆ ಭೀಮಾನದಿ ತೀರದಲ್ಲಿ ಅಪ್ಪಯಕ ಹಾಗು ಗೋವಿಂದರನ್ನು ಸದೆಬಡೆದರು. ಅಪ್ಪಯಕ ಯುದ್ಧಭೂಮಿಯಿಂದ ಹೇಡಿಯಂತೆ ಓಡಿಹೋಗಿ, ಸಾಮಂತ ಗೋವಿಂದ ಶರಣಾಗತನಾದ. ಈ ಯುದ್ಧದಲ್ಲಿ ನೀವೆಲ್ಲ ಸಲ್ಲಿಸಿದ ಸೇವೆ ನೆನೆಸಿಕೊಳ್ಳಿ"
"ನಂತರ ರಾಜ್ಯ ವಿಸ್ತಾರಣಾತ್ಮಕ ಯುದ್ಧಗಳು - ವೈಜಯಂತಿಯ ಅಳಿದುಳಿದ ಕದಂಬರು, ತಲಕಾಡಿನ ಗಂಗರು, ಕರಾವಳಿಯ ಅಳೂಪರನ್ನು ಚಾಲುಕ್ಯ ಸೇನೆಗಳು ಸೋಲಿಸಿದ್ದು ನಿಮ್ಮ ಸಹಾಯದಿಂದಲೆ. ಕೊಂಕಣ ಹಾಗು ಪುರಿ ಬಂದರಿನ ಕಡಲ ಯುದ್ಧದಲ್ಲಿ ಈ ತಂಡದ ಯೋಗದಾನ ಯಾರೂ ಹೇಳಬೇಕಾಗಿಲ್ಲ. ಗುರ್ಜರ ಪ್ರದೇಶದ ಗುರ್ಜರರು, ಲತರು ಹಾಗು ಮಾಲವರು, ಇವರೆಲ್ಲ ಸಾಮಂತರಾಗಲು ಸಹ ನೀವೆಲ್ಲ ಕೆಲಸ ಮಾಡಿದ್ದೀರಿ. ಕೊನೆಗೆ ಕಾಂಚೀಪುರದ ಪಲ್ಲವಾಧೀಶ ಮಹೇಂದ್ರವರ್ಮನ ಪರಾಜಯದ ಪ್ರಕ್ರಿಯೆ ಪ್ರಾರಂಭವಾಗಿದ್ದೂ ಇಲ್ಲಿಂದಲೇ" ಎಂದು ಮೊದಲು ಹುರಿದುಂಬಿಸಿದರು.
"ಈಗ ಉತ್ತರಾಪಥೇಶ್ವರನಾದ ಹರ್ಷ ಚಕ್ರವರ್ತಿಯಕಡೆಯವರು ನರ್ಮದೆಯ ತೀರದಲ್ಲಿ ನಮ್ಮ ಮೇಲೆ ಧಾಳಿ ಮಾಡುವ ಯೋಜನೆ ಹೂಡುತ್ತಿದ್ದಾರೆಂಬ ಸೂಕ್ಷ್ಮ ಸುದ್ಧಿ ತಿಳಿದು ಬಂದಿದೆ. ಹರ್ಷ ಚಕ್ರವರ್ತಿ ಧಾಳಿ ಮಾಡುವ ಮುನ್ನವೇ ನಾವು ಅವರ ಮೇಲೆ ಧಾಳಿ ಮಾಡಬೇಕೆಂಬುದೇ ಮಹಾರಾಜ ಪುಲಿಕೇಶಿಯ ಇಚ್ಚೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿ ಮಹಾರಾಜ ಪುಲಿಕೇಶಿಗೆ ಜಯ ತರಿಸಿಕೊಡುವಿರಿ ಎಂಬ ನಂಬಿಕೆ ನನಗಿದೆ" ಎಂದು ಮುಂದುವರೆಸಿದರು.
ಇದಾದ ಮೇಲೆ ಮಹಾಮಂತ್ರಿಗಳು ಅಲ್ಲಿ ಸೇರಿದ್ದ ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಕೆಲಸಕ್ಕೆ ನೇಮಿಸಿದರು. ವೈರಿಯ ಸೇನೆಯ ಸಂಖ್ಯೆಗಳನ್ನು ತಿಳಿಯಲು ಒಬ್ಬ, ಅವರ ಬಿಡಾರಗಳ ಸ್ಥಳ ಗಳನ್ನು ತಿಳಿಯಲು ಮತ್ತೊಬ್ಬ, ಅವರು ಯುದ್ಧ ಭೂಮಿಗೆ ನಡೆದು ಬರುವ ದಾರಿ ತಿಳಿಯಲು, ಅವರ ಶಸ್ತ್ರಾಸ್ತ್ರಗಳ ವರದಿಗೆ, ಅವರಲ್ಲಿ ಒಡಕುಂಟು ಮಾಡುವ ಸಾಧನಗಳನ್ನು ಹೂಡಲು, ಅವರ ರಾತ್ರಿಯ ಕಾವಲು ಪದ್ಧತಿ ಹಾಗು ಕಾವಲುಗಾರರು ಬದಲಾಗುವ ಸಮಯಗಳನ್ನು ತಿಳಿಯಲು, ಹೀಗೆ ಏನೇನೊ ನಾನೆಂದೂ ಯೋಚಿಸದಂತಹ ಕಾರ್ಯಗಳಿಗೆ ಒಬ್ಬೊಬ್ಬರನ್ನು ನಿಯುಕ್ತಿಸಿದರು.
ಕಡೆಗೆ ಎಲ್ಲರೂ ತಮ್ಮ ತಮ್ಮ ಆಜ್ಞೆಗಳನ್ನು ಪಡೆದು ಈ ಕೋಣೆಯಲ್ಲಿದ್ದ ಹಲವಾರು ಬಾಗಿಲುಗಳಿಂದ ಹೊರಟುಹೋದರು. ನಾನಿನ್ನೂ ಅಲ್ಲೇ ಇದ್ದೆ. ಕೊನೆಗೆ ಮಹಾಮಂತ್ರಿಗಳು ನನ್ನನ್ನು ನೋಡಿದರು. "ಯುವಕ, ನಿನ್ನ ಶಿಕ್ಷಣೆ ಮುಗಿದಿದೆ. ವರುಣಾಚಾರ್ಯರು ಕೊಟ್ಟ ಓಲೆಯನ್ನು ನಾನು ಓದಿರುವೆ. ಅವರು ನಿನ್ನನ್ನು ಬಹಳ ಹೊಗಳಿದ್ದಾರೆ, ಆದರೆ ನೀನೊಂದು ತಪ್ಪು ಮಾಡಿದೆ" ಎಂದರು.
"ಏನದು" ಎಂದೆ.
"ನಾನು ಕೇಳಿದಾಗ ನೀನು ಹಿಂದೆ ತಿರುಗದೆ ಓಲೆ ಕೊಡಬೇಕಿತ್ತು. ನೀನು ಹಿಂದೆ ತಿರುಗಿದೆ." ಒಂದು ಕ್ಷಣ ಮೌನ ತಳಿದು ಬಳಿಕ "ಮನೆಯ ಊಟ ರುಚಿಕರ ಅಲ್ಲವೆ?" ಎಂದರು
"ಆ....?" ನಾನು ತಬ್ಬಿಬ್ಬಾದೆ
"ಇರಲಿ, ನೀನು ಮನೆಗೆ ಹೋಗುವುದರಲ್ಲಿ ಸಂಶಯವೇ ಇರಲಿಲ್ಲ. ಈ ಸಂದರ್ಶನದ ಬಗ್ಗೆ ನಿನ್ನ ಅನಿಸಿಕೆಗಳು?" ಎಂದು ಕೇಳಿದರು
"ನಾನು ಏನು ಮಾಡಲು ಬೇಕಾದರೂ ಸಿದ್ಧ" ಎಂದೆ
"ನೀನು ಬ್ರಾಹ್ಮಣ. ನಿನ್ನ ಕೈಯಲ್ಲಿ ಅವರುಗಳು ಮಾಡುವ ಕೆಲಸ ಮಾಡಲಾಗುವುದಿಲ್ಲ. ಅವರುಗಳು ತರುವ ಸೂಚನೆ ಸುದ್ಧಿಗಳನ್ನು ಒಗ್ಗೂಡಿಸಿ, ಶೋಧಿಸಿ, ನಮಗೆ ಸಂಕ್ಷಿಪ್ತವಾಗಿ, ಯಾವ ವಿಷಯವೂ ಬಿಡದಂತೆ ಹೇಳುವುದು ನಿನ್ನ ಕೆಲಸ. ನೀನು ನಮ್ಮೊಡನೆ ನರ್ಮದಾ ತೀರದ ಯುದ್ಧ ಭೂಮಿಗೆ ಹೋಗುವ ಸಿದ್ಧತೆಗಳನ್ನು ಮಾಡಿಕೊ" ಎಂದು ನುಡಿದರು.
"ಸಿದ್ಧತೆಗಳು...?"
"ಏನಿದ್ದರೂ ಮಾಡಿಕೊ. ಇಂದು ರಾತ್ರಿ ಬೇಕಾದರೆ ಇಲ್ಲೇ ತಂಗುವ ಅವಕಾಶವಿದೆ. ನಾಳೆ ಬೆಳಗ್ಗೆ ಹೊರಡುವೆ" ಎಂದು ಹೇಳಿ ಹೊರಟುಹೋದರು.
* * * * *
ಅಂದು ಅಲ್ಲೇ ಮಲಗಿದ್ದೆ. ನನಗೀಗ ಮಲಗಲು ಹೆಚ್ಚು ಸಿದ್ಧತೆ ಬೇಕಾಗಿರಲಿಲ್ಲ. ಎಲ್ಲಿಯಂದರಲ್ಲಿ, ಮಲಗುವ ಸಾಮರ್ಥ್ಯ ಬೆಳೆಸಿಕೊಂಡಿದ್ದೆ. ಆದರೆ ಮಲಗಿದಾಗಲೂ ಒಂದು ಕಣ್ಣು ತೆರೆದೇ ಮಲಗಿರುತ್ತಿದ್ದೆ. ಮಾರನೆಯ ದಿನ ಬೆಳಗ್ಗೆ ಎದ್ದು ಹೊರಡಲು ಸಿದ್ಧನಾಗಿ ಕುಳಿತೆ. ನಾನೆಂದೂ ಅಂತಹ ಪ್ರಯಾಣ ಮಾಡಿದವನಲ್ಲ. ಏನೇನು ಸಿದ್ಧತೆಗಳು ಬೇಕೆಂದು ನನಗೆ ತಿಳಿದಿರಲಿಲ್ಲ. ಎಲ್ಲವೂ ಬೇರೆಯಾರಾದರೂ ಮಾಡಬಹುದು, ಇಲ್ಲವಾದರೆ ಹೇಗೋ ಅನುಸರಿಸಿಕೊಂಡು ಹೋಗೋಣವೆಂದು ಹಾಗೇ ಹೊರಡಲು ಸಿದ್ಧನಾದೆ.
ಯಾರಿಗೂ ಏನನ್ನೂ ಹೇಳುವ ಅವಕಾಶ ಸಿಕ್ಕಲಿಲ್ಲ. ಹಾಗೆಯೇ ಹೊರಟು ಸುರಂಗಮಾರ್ಗವಾಗಿ ಊರ ಹೊರಬಿದ್ದು ಮೊದಲೇ ನೇಮಿಸಿದ್ದ ಸ್ಥಳಕ್ಕೆ ಹೋದೆ. ಕುದುರೆ ಕಾದಿತ್ತು, ಜೊತೆಗೆ ಒಬ್ಬ ಭಟನೂ ಇದ್ದ. ಮಾತಿಲ್ಲದೆ ಅವನೊಡನೆ ಹೊರಟೆ. ಸ್ವಲ್ಪ ಪ್ರಯಾಣದ ನಂತರ ಮಹಾಮಂತ್ರಿಗಳೊಡನೆ ಕೂಡಿ ಅಲ್ಲಿಂದ ಒಟ್ಟಿಗೆ ಹೋರಟೆವು.
ನಾವು ಸುಮಾರು ಹದಿನೈದು ಜನ ಒಟ್ಟು. ದಿನ ನಿತ್ಯ ಸಂಜೆ ಯಾವುದಾದರು ನದಿ, ತೊರೆ ಅಥವ ಸರೋವರದ ಬಳಿ ಬಿಡಾರ ಊರುವುದು. ಮುಂಜಾವು ಎದ್ದು ಪ್ರಯಾಣ ಮುಂದುವರೆಸುವುದು. ಊರೂರುಗಳಲ್ಲಿ ಊಟ ಉಪಹಾರಗಳ ವ್ಯವಸ್ಥೆ ಹೇಗೋ ಅಗುತ್ತಿತ್ತು. ಮರಾಠ, ಮಾಳವ ಪ್ರದೇಶಗಳನ್ನು ಹಾಯ್ದು ಕೊನೆಗೆ ನರ್ಮದೆಯ ತೀರವನ್ನು ತಲುಪಿದೆವು. ಇಷ್ಟು ಪ್ರಯಾಣ ಸುಮಾರು ಒಂದು ಮಾಸ ಸಮಯ ತೆಗೆದುಕೊಂಡಿತ್ತು. ನರ್ಮದೆಯ ತೀರದಲ್ಲಿ ಒಂದು ಸಣ್ಣ ಪಟ್ಟಣವಾದ ವರಾಹಪುರಿ ನಮ್ಮ ಗುರಿಯಾಗಿತ್ತು.
ಊರಿನಿಂದ ಹಲವು ಕ್ರೋಶಗಳ ಹಿಂದೆಯೇ ಪರ್ವತಗಳಲ್ಲಿದ್ದ ಒಂದು ಗುಹೆ ಹೊಕ್ಕೆವು. ಇಲ್ಲಿ ಎಲ್ಲರೂ ಊರು ಸೇರುವ ಯೋಜನೆ ಹೂಡಿದೆವು. ಎಲ್ಲರೂ ಒಟ್ಟಿಗೆ ಹೋಗುವಂತಿಲ್ಲ. ಇಬ್ಬಿಬ್ಬರಾಗಿ, ಸಾಧ್ಯವಾದರೆ ಯಾರಾದರೂ ಹೆಂಗಸರೊಡಗೂಡಿ ಇಲ್ಲವಾದರೆ ನಮ್ಮಲ್ಲೆ ಯಾರಾದರು ಹೆಣ್ಣು ವೇಷ ಧರಿಸಿ ರಾತ್ರಿ ಸಮಯಗಳಲ್ಲಿ ಊರು ತಲುಪುವ ಯೋಜನೆಯಾಗಿತ್ತು. ಅದೇ ಊರಿನಲ್ಲಿದ್ದ ನಮ್ಮ ಪಡೆಯ ಒಬ್ಬ ಗೂಢಚಾರನ ಮನೆ ನಮ್ಮ ಕೇಂದ್ರವಾಗುವುದಿತ್ತು.
ಬಂದ ಹಲವು ದಿನಗಳಲ್ಲಿ ನಾವೆಲ್ಲರೂ ನಮ್ಮ ಈ ಕೇಂದ್ರವನ್ನು ಹೇಗೋ ತಲುಪಿದೆವು. ಗೂಢಚಾರರು ತಂದ ಸುದ್ಧಿಗಳಿಂದ ಯಾರಿಗೂ ನಾವು ಬಂದ ವಿಚಾರ ತಿಳಿದಿಲ್ಲವೆಂಬುದು ಖಚಿತವಾಯಿತು. ಮಹಾಮಂತ್ರಿಗಳು ಸ್ವಲ್ಪ ದಿನಗಳ ಕಾಲ ನಮ್ಮೊಡನೆಯೇ ಇದ್ದು ನನಗೆ ಇನ್ನಷ್ಟು ನಿರ್ದೇಶನ ನೀಡಿ ವಾತಾಪಿಗೆ ಹಿಂತಿರುಗಿದರು. ನಾನು ನನ್ನ ವಿಶ್ಲೇಷಣಾ ಕಾರ್ಯವನ್ನು ಆರಂಭಿಸಿದೆ. ನನಗೆ ಕೆಲಸ ಮಾಡಲು ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕತ್ತಲು ಕೋಣೆ ಕೊಡಲಾಗಿತ್ತು. ಮೇಲಿನಿಂದ ನೋಡಿದರೆ ಕಂಬಳಿ ಹಾಸಿದ್ದ ನೆಲ. ಕಂಬಳಿಯ ಕೆಳಗೆ ಒಂದು ಗುಪ್ತ ದ್ವಾರ. ಅದು ನನ್ನ ತಲೆಯ ಮೇಲೆ ತೆರೆಯುತ್ತಿತ್ತು. ಗಾಳಿ ಬರಲು ನಾಲ್ಕಾರು ಸಣ್ಣ ಕಿಂಡಿಗಳು ಬಿಟ್ಟರೆ ಹೊರ ಪ್ರಪಂಚಕ್ಕೆ ಸಂಪರ್ಕವೇ ಇರಲಿಲ್ಲ. ನನಗಾದರೋ ಬಿಡುವಿಲ್ಲದ ಕೆಲಸ.
ಹತ್ತಾರು ಗೂಢಚಾರರು ಸಂದೇಶಗಳನ್ನು ತಂದು ಕೊಡುತ್ತಿದ್ದರು. ಎಲ್ಲವನ್ನೂ ದಿನಕ್ಕೆ ಎರಡು ಬಾರಿ ನನ್ನ ಗೂಡಿನೊಳಕ್ಕೆ ಮೇಲಿನಿಂದ ಹಾಕುತ್ತಿದ್ದರು. ಇವೆಲ್ಲವನ್ನೂ ಓದಿ, ಒಗ್ಗೂಡಿಸಿ, ಸತ್ಯಾಸತ್ಯಗಳನ್ನು ಬೇರ್ಪಡಿಸಿ, ವರದಿ ಬರೆದು, ಅದನ್ನು ಗುಪ್ತ ಲಿಪಿಗೆ ಬದಲಿಸಿ ಮೇಲಕ್ಕೆ ಹಿಂತಿರುಗಿಸುವುದು ನನ್ನ ಕೆಲಸ. ಮೇಲಿನವರು ಅದನ್ನು ನಾ ನಾ ಮಾರ್ಗಗಳಲ್ಲಿ ವಾತಾಪಿಗೆ ಕಳುಹಿಸುತ್ತಿದ್ದರು. ಹೀಗೆಯೇ ನಾಲ್ಕು ಮಾಸಗಳು ಕಳೆದವು. ನನಗೆ ಹರ್ಷರಾಜನ ಚರಿತ್ರೆ, ಇತಿಹಾಸಗಳ ಬಗ್ಗೆ ಎಲ್ಲ ವಿವರಗಳು ತಿಳಿದುಹೋದವು. ತಿಳಿದಂತೆ ನಾನು ಅದರ ವರದಿ ಗುಪ್ತ ಲಿಪಿಯಲ್ಲಿ ತಲುಪಿಸುತ್ತಿದ್ದೆ. ಹರ್ಷರಾಜನ ಜೀವನದ ಬಗ್ಗೆ ಬೇಕಾದಷ್ಟು ಮಾಹಿತಿ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು.
ಹರ್ಷವರ್ಧನನ ತಂದೆ ಪ್ರಭಾಕರವರ್ಧನ ಸ್ಥಾನೇಶ್ವರದ ಅರಸನಾಗಿದ್ದನು. ಪ್ರಭಾಕರವರ್ಧನನ ಹಿರಿಯ ಪುತ್ರ ರಾಜ್ಯವರ್ಧನ; ಹರ್ಷವರ್ಧನ ಕಿರಿಯ ಪುತ್ರ. ರಾಜ್ಯವರ್ಧನ-ಹರ್ಷವರ್ಧನರ ಸಹೋದರಿಯಾದ ರಾಜ್ಯಶ್ರೀ ಮೌಖಾರಿ ದೇಶದ ರಾಜ ಗೃಹವರ್ಮನ ವಧುವಾಗಿದ್ದಳು. ಪ್ರಭಾಕರವರ್ಧನನು ಮುಪ್ಪಿನಿಂದ ಮರಣಹೊಂದಿದ ದಿನವೇ ಆ ಸಮಯದಲ್ಲಿ ಮಾಳವ ದೇಶದ ರಾಜನು ಗೌಡದೇಶದ ರಾಜ ಶಶಾಂಕನನ್ನೋಡಗೂಡಿ ಹರ್ಷನ ಶ್ಯಾಲ ಗೃಹವರ್ಮನನ್ನು ಯುದ್ಧದಲ್ಲಿ ಸೋಲಿಸಿ, ಅವನನ್ನು ಕೊಂದು ಅವನ ಪತ್ನಿಯಾದ ರಾಜ್ಯಶ್ರೀಯನ್ನು ಕನ್ಯಾಕುಬ್ಜದಲ್ಲಿ ಬಂಧಿಸಿದ ಸುದ್ಧಿ ಸ್ಥಾನೇಶ್ವರವನ್ನು ಮುಟ್ಟಿತು.
ಪ್ರಭಾಕರವರ್ಧನನ ಹಿರಿಯ ಪುತ್ರ ಹಾಗು ಹರ್ಷರಾಜನ ಹಿರಿಯ ಭ್ರಾತೃವಾದ ರಾಜ್ಯವರ್ಧನ ಕೋಪಗೊಂಡು, ಹರ್ಷವರ್ಧನನನ್ನು ಸ್ಥಾನೇಶ್ವರದಲ್ಲಿಯೇ ಉಳಿಯಲು ಒಪ್ಪಿಸಿ, ತಾನೊಬ್ಬನೇ ಸೈನ್ಯದೊಡನೆ ಶಶಾಂಕ ರಾಜನ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋದನು. ತಂದೆಯನ್ನು ಕಳೆದುಕೊಂಡು, ಶ್ಯಾಲನ ಸಂಹಾರವಾಗಿರುವುದು ತಿಳಿದು ಸಹೋದರಿ ಬಂಧಿತಳಾಗಿರುವುದನ್ನು ಕೇಳಿ, ಭ್ರಾತೃ ಯುದ್ಧಕ್ಕೆ ಹೋದಾಗ ಕುಮಾರ ಹರ್ಷವರ್ಧನನಿಗೆ ಕಾಲ ಕಳೆಯಲಾಗದೆ ಮದವೇರಿದ ಆನೆಯಂತಾದನು. ಸ್ವಲ್ಪವೇ ಕಾಲದಲ್ಲಿ ರಾಜ್ಯವರ್ಧನನ ಸೇನಾಧಿಪತಿಯೊಬ್ಬನು ಶೋಕಭಾವದಲ್ಲಿ ಬಂದು "ರಾಜ್ಯವರ್ಧನನು ಮಾಳವ ಸೈನ್ಯವನ್ನು ಸುಲಭವಾಗಿ ಸೋಲಿಸಿದರೂ ಗೌಡರಾಜ ಅವನನ್ನು ಸಂಧಾನಕ್ಕೆಂದು ಕರೆದು ವಂಚನೆಯಿಂದ ಅವನ ಸಂಹಾರ ಮಾಡಿದನು" ಎಂದು ಹೇಳಲು, ಕುಮಾರ ಹರ್ಷನು ಕಿಡಿಕಿಡಿಯಾದನು.
"ಗೌಡ ರಾಜನನ್ನು ಬಿಟ್ಟು ಇಂತಹ ಹೀನ ಕೃತ್ಯವನ್ನು ಬೇರೆ ಯಾರು ಮಾಡಲು ಸಾಧ್ಯ? ಅಗ್ನಿಪುತ್ರನಾದ ದೃಷ್ತದ್ಯುಮ್ನನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ದ್ರೋಣರನ್ನು ಕೊಂದಂತೆ! ಗಂಗಾನದಿಯ ನೊರೆಯಂತೆ ಅಕಳಂಕಿತನಾದ ಹಾಗು ಪರಶುರಾಮನ ವೀರ್ಯವನ್ನು ಮನಸ್ಸಿಗೆ ತರಿಸುವಂತಹ ನನ್ನ ಭ್ರಾತೃವನ್ನು ಕೊಲ್ಲುವ ಸಂಚು ಆ ಅನಾರ್ಯನನ್ನು ಬಿಟ್ಟು ಬೇರೆ ಯಾರ ಮನದಲ್ಲಿ ಬರಲು ಸಾಧ್ಯ? ಗ್ರೀಷ್ಮ ಋತುವಿನ ಸೂರ್ಯ ರಾಜೀವಪುಷ್ಪಗಳ ಸರೋವರಗಳನ್ನು ಬತ್ತಿಸುವಂತೆ ಸ್ನೇಹದಲ್ಲಿ ಕೈಯೊಡ್ಡಿ ನನ್ನ ಅರಸನ ಪ್ರಾಣ ಹೇಗೆ ತಾನೆ ತೆಗೆದಾನು? ಇವನ ಶಿಕ್ಷೆ ಏನಾದೀತು? ಯಾವ ಹುಳುವಾಗಿ ಪುನರ್ಜನಿಸುವನು? ಯಾವ ನರಕಕ್ಕೆ ಬಿದ್ದಾನು? ಯಾವ ಭ್ರಷ್ಟನೂ ಮಾಡದಂತಹ ಕೃತ್ಯವಿದು! ಈ ಪಾಪಿಯ ಹೆಸರನ್ನು ನನ್ನ ಜಿಹ್ವೆಗೆ ತಂದರೇ ನನ್ನ ಜಿಹ್ವೆ ಕಶ್ಮಲವಾಗುವುದು. ಸಣ್ಣ ಗೆದ್ದಲು ಚಂದನದ ಮರವನ್ನು ಕೊರೆಯುವಂತೆ ಯಾವ ವಿಧದಿಂದ ಈ ಕಠಿಣ ಪ್ರಾಣಿ ನನ್ನೊಡೆಯನ ಪ್ರಾಣ ತೆಗೆದ? ಸಿಹಿಯ ಲೋಭದಲ್ಲಿ ನನ್ನ ಭ್ರಾತೃವಿನ ಜೇನುತುಪ್ಪದಂತಹ ಪ್ರಾಣ ತೆಗೆದ ಮೂರ್ಖ, ಬರುತ್ತಿರುವ ಜೇನು ನೊಣಗಳ ಸಮೂಹವನ್ನು ನೋಡಲಿಲ್ಲವೇ? ಈ ದುರುಳ ಪಥಕ್ಕೆ ಬೆಳಕು ಚೆಲ್ಲಿ ಈ ಗೌಡರ ದುಷ್ಟ ತನ್ನ ಮನೆಯ ದೀಪದ ಕಜ್ಜಲದಂತೆ ಕೇವಲ ಮಲಿನ ನಾಚಿಕೆಗೇಡನ್ನೇ ಸಂಪಾದಿಸಿದ್ದಾನೆ. ಉತ್ತಮ ರತ್ನಗಳನ್ನು ಕೆಡಿಸುವ ಇಂತಹ ಕಶ್ಮಲ ರತ್ನವ್ಯಾಪಾರಿಗಳಿಗೆ ಶಿಕ್ಷೆ ಕೊಡುವುದು ಯಾರಿಗೆ ಸೂಕ್ತವಲ್ಲ? ಇವನ ಗತಿ ಇನ್ನೇನಾದೀತು?" ಎಂದೆಲ್ಲ ಹೇಳಿ ತನ್ನ ಕ್ರೋಧ ತೋಡಿಕೊಂಡನಂತೆ.
* * * * *
ಈ ಸುದ್ಧಿಗಳೆಲ್ಲ ಬಂದಂತೆ ನಮಗೆ ಹರ್ಷರಾಜನು ಪುಲಿಕೇಶಿ ಅರಸನ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ಧಿಗಳೂ ತಲುಪಿದವು. ಹರ್ಷ ರಾಜನ ಗುಪ್ತಚಾರರ ಪಡೆಯಲ್ಲಿದ್ದ ನಮ್ಮವರು ಆ ಸುದ್ಧಿಗಳನ್ನು ನಮಗೆ ತಂದು ಕೊಡುತ್ತಿದ್ದರು. ಆ ಅಪಾರ ಸೈನ್ಯವನ್ನು ಸಿದ್ಧಗೊಳಿಸಿ ದೇಶದ ಸೀಮೆಯಾದ ನರ್ಮದಾ ನದಿ ತೀರದಲ್ಲಿ ಬಿಡಾರ ಊರಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ವಾರ್ತೆಗಳೆಲ್ಲ ನಮಗೆ ತಿಳಿದುಬಂದ ಕ್ಷಣದಲ್ಲಿ ನಾನು ವಾತಾಪಿನಗರಕ್ಕೆ ಸಂದೇಶ ಕಳುಹಿಸಿದೆ. ಅಂತೆಯೇ ದಳಶಕ್ತಿಗಳು, ದೌರ್ಬಲ್ಯಗಳು, ಹಾಗು ಸೈನ್ಯಕ್ಕೆ ಸಂಬಂಧಿಸಿದ ಇತರ ವಾರ್ತೆಗಳನ್ನೂ ಕಳುಹಿಸಿದೆ.
ನಮ್ಮವರೂ ಅಷ್ಟು ಹೊತ್ತಿಗೆ ಸಾಕಷ್ಟು ಸಿದ್ದತೆಗಳನ್ನು ನಡೆಸಿದ್ದಿರಬೇಕು. ನೋಡುತ್ತಿದ್ದಂತೆಯೇ, ಕೆಲವೇ ದಿನಗಳಲ್ಲಿ ಎರಡೂ ಸೈನ್ಯಗಳು ನರ್ಮದೆಯ ತೀರದಲ್ಲಿ ಬಂದು ಎದುರಿಸಿ ನಿಂತವು. ದಕ್ಷಿಣ ತೀರದಲ್ಲಿ ಪುಲಿಕೇಶಿ ಅರಸನ ಸಮರ್ಥ ಧನುರ್ಧರರಿಂದ ಕೂಡಿದ ಅಪಾರ ಆನೆಯ ಸೈನ್ಯ, ಉತ್ತರ ತೀರದಲ್ಲಿ ಸಮರ್ಥ ಕುಂತಲಧರರಿಂದ ಕೂಡಿದ ಪ್ರಬಲ ರಥಗಳ ಸೈನ್ಯ. ಪುಲಿಕೇಶಿ ಅರಸ ಹಾಗು ಹರ್ಷರಾಜರಿಬ್ಬರೂ ಯುದ್ಧಭೂಮಿಗೆ ತಮ್ಮ ತಮ್ಮ ಸೈನ್ಯಗಳನ್ನು ನಿರ್ದೇಶಿಸಲು ಬಂದು ನಿಂತರು. ಇಬ್ಬರು ಘಟಾನುಘಟಿಗಳು ಒಬ್ಬರನ್ನೊಬ್ಬರು ದಿಟ್ಟಿಸಿ ಎದುರು-ಬದುರು ನೆಲೆಸಿದರು. ಬೇರ್ಪಡಿಸುತ್ತಿದ್ದದ್ದು ಕೇವಲ ಮಧ್ಯೆ ಹರಿಯುತ್ತಿದ್ದ ನರ್ಮದೆಯೊಂದೇ. ಘೋರ ಯುದ್ಧ ಖಚಿತವಾಯಿತು.
ಇದು ಈ ಯುದ್ಧದ ಕತೆಯಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚು ವಿವರಗಳು ಹೇಳಲಾರೆ. ಆದರೂ ಇದರ ಮುಖ್ಯ ಘಟನೆಗಳನ್ನು ಹೇಳುವುದು ಇಲ್ಲಿ ಸೂಕ್ತವಾಗಿದೆ. ಯುದ್ಧ ಆರಂಭವಾಯಿತು. ಹರ್ಷರಾಜನ ಕಡೆಯವರು ಕದನಕ್ಕೆ ನಾಂದಿ ಹಾಡುತ್ತ ನಮ್ಮನ್ನು ಕುಂತಲಗಳಿಂದ ಹಾಗು ದೊಡ್ಡ ದೊಡ್ಡ ಶಿಲೆಗಳನ್ನು ಎಸೆಯುವ ಆಯುಧಗಳಿಂದ ಆಕ್ರಮಣ ಮಾಡಿದರು. ಪುಲಿಕೇಶೀ ರಾಜನ ಧ್ಯೇಯ ನದಿಯನ್ನು ದಾಟಿ ಸ್ವತಃ ಆಕ್ರಮಣ ಮಾಡುವುದಾಗಿತ್ತು. ಆದರೆ ವೈರಿಗಳು ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಸೈನಿಕರು ನೀರಿಗಿಳಿದಂತೆ ಅವರು ಶಿಲೆಗಳನ್ನು ಎಸೆದು ನಮ್ಮವರನ್ನು ಕೊಲ್ಲುತ್ತಿದ್ದರು ಇಲ್ಲವಾದರೆ ಗಾಯಗೊಳಿಸುತ್ತಿದ್ದರು. ಹಲವಾರು ದಿನ ಹೀಗೆಯೇ ನಡೆಯಿತು. ನಮ್ಮ ಸೈನ್ಯದ ಉತ್ಸಾಹ ಕಿಂಚಿತ್ತು ಕುಂದ ತೊಡಗಿತು.
ಬೇಸತ್ತು, ವಿಧಿಯೇ ಇಲ್ಲವೆಂದು ಅರಿತು, ನಮ್ಮ ಕಡೆಯ ಸೇನಾಪತಿಗಳು ನಮ್ಮ ಬಳಿ ಇದ್ದ ವಿಶಿಷ್ಟ ದರ್ಪಣಾಸ್ತ್ರವನ್ನು ಪ್ರಯೋಗಿಸುವ ನಿರ್ಣಯ ಮಾಡಿದರು. ಅಂತೆಯೇ ಮಾರನೆಯ ದಿನ ಸೂರ್ಯನು ನೆತ್ತಿಗೇರಿದಾಗ ನಮ್ಮ ಸೈನಿಕರು ನದಿಯಬಳಿ ಹೋಗಿ ನಿಂತರು. ಅವಕಾಶ ಸಿಕ್ಕಿದ ಕೂಡಲೆ ಅವರು ನದಿಯನ್ನು ದಾಟಿ ಆಕ್ರಮಣಮಾಡುವುದಾಗಿತ್ತು. ಅವಕಾಶ ದೊರಕಿಸುವುದು ದರ್ಪಣಾಸ್ತ್ರದ ಗುರಿಯಾಗಿತ್ತು. ದರ್ಪಣಾಸ್ತ್ರ ಪ್ರಯೋಗ ಮಾಡುವವರು ತೀರದಲ್ಲಿ ದೊಡ್ಡ ದೊಡ್ಡ ದರ್ಪಣಗಳನ್ನು ಹಿಡಿದು ನಿಂತರು. ಸೇನಾಧಿಪತಿಯಿಂದ ಅಪ್ಪಣೆ ಬರುತ್ತಲೇ ಈ ರಾಕ್ಷಸಗಾತ್ರದ ದರ್ಪಣಗಳನ್ನು ನೆಟ್ಟಗೆ ನಿಲ್ಲಿಸಿ ಸೂರ್ಯನ ಕಿರಣಗಳು ಅವುಗಳಿಂದ ಪ್ರತಿಬಿಂಬಿಸಿ ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಲಾಯಿತು. ಆ ಕೋಲಹಲದಲ್ಲಿ ನಮ್ಮ ಸೈನಿಕರು ನದಿಯೊಳಗೆ ಧುಮುಕಿ, ನದಿಯನ್ನು ದಾಟಿ ಶತ್ರುಗಳೊಡನೆ ಹೋರಾಡಲು ಆರಂಭಿಸಿದರು. ಸ್ವಲ್ಪವೇ ಕಾಲದಲ್ಲಿ ನಮ್ಮ ವೀರ ಸೈನಿಕರು ಹರ್ಷರಾಜನ ಸೈನ್ಯವು ದಿಕ್ಕಾಪಾಲಾಗಿ ಓಡುವಂತೆ ಮಾಡಿದರು.
ಕಂಗೆಟ್ಟ ಹರ್ಷರಾಜನ ಸೈನ್ಯ ಪಲಾಯನ ಮಾಡಿದ ಮೇಲೆ ನಮ್ಮವರು ನಮ್ಮ ತೀರಕ್ಕೆ ಹಿಂತಿರುಗಿದರು. ನದಿಯ ಆ ತೀರದಲ್ಲಿರುವುದು ಸೂಕ್ತವಾಗಿರಲಿಲ್ಲ. ವೈರಿ ಯಾವಾಗಲಾದರೂ ಹಿಂತಿರುಗುವ ಸಂಭವವಿತ್ತು. ಯುದ್ಧದ ಈ ಪಾದದಲ್ಲಿ ಹರ್ಷರಾಜನ ಸೈನ್ಯವು ಬಹಳಷ್ಟು ನಷ್ಟ ಹೊರಬೇಕಾಯಿತು. ನಮ್ಮಲ್ಲಿಯೂ ಸಾಕಷ್ಟು ಭಟರು ಹತರಾಗಿ ಮತ್ತಷ್ಟು ಜನ ಗಾಯಗೊಂಡಿದ್ದರೂ, ಯುದ್ಧದ ಈ ಹಂತ ನಮ್ಮದೆನಿಸಿತು ನಮಗೆ. ಆದರೆ ಹರ್ಷರಾಜನು ಇನ್ನೂ ಸೋಲನ್ನೊಪ್ಪಿಲ್ಲವೆನ್ನುವುದನ್ನು ನಾವೆಲ್ಲ ಅರಿತಿದ್ದೆವು. ವೈರಿ ಸೈನ್ಯದ ಮುಂದಿನ ಸಂಚನ್ನು ಕಾಯ್ದು ನಮ್ಮ ತೀರದಲ್ಲಿಯೇ ಬಿಡಾರ ಮುನ್ನಡೆಸಿದೆವು. ಸ್ವಲ್ಪವೇ ಕಾಲದಲ್ಲಿ ಸ್ವತಃ ಹರ್ಷರಾಜನೇ ಮುಂದಾಳತ್ವ ವಹಿಸಿಕೊಂಡು ವಿಶಾಲ ಕುಂಜರ ಸೈನ್ಯದೊಡನೆ ಯುದ್ಧಭೂಮಿಗೆ ಬರುತ್ತಿರುವ ಸುದ್ಧಿ ಗೂಢಚಾರರಿಂದ ತಿಳಿಯಿತು. ನಮ್ಮ ಸೈನ್ಯವು ಅವನ್ನು ಕಾಯ್ದು ನದಿಯ ನಮ್ಮ ತೀರದಲ್ಲಿಯೇ ತಂಗಿತು.
ಮಾರನೆಯ ದಿನ ಮತ್ತೆ ಯುದ್ಧ ಪ್ರಾರಂಭವಾಯಿತು. ಮತ್ತೆ ಮೊದಲಿನಂತೆ ತುಲದ ಎರಡೂ ಕಡೆ ಒಂದೇ ಭಾರದಂತೆ ಯಾವ ಸೈನ್ಯಕ್ಕೂ ಏನೂ ಸಾಧಿಸಲಾಗಲಿಲ್ಲ. ಈ ಕಗ್ಗಂಟು ಬಹಳ ದಿನಗಳ ಕಾಲ ಸಾಗಿತು. ದರ್ಪಣಾಸ್ತ್ರದ ನವ್ಯತೆ ಮುಗಿದುಹೋಗಿ ಈಗ ಅವರು ಆ ಅಸ್ತ್ರ ಪ್ರಯೋಗಕ್ಕೆ ಸಿದ್ಧರಾಗಿದ್ದರು. ಸಂತುಲನವನ್ನು ಮುರಿಯಲು ಹಾಗು ವೈರಿಯ ಮೇಲೆ ಜಯ ಸಾಧಿಸಲು ಪುಲಿಕೇಶಿ ಅರಸನು ನಮ್ಮ ಮತ್ತೊಂದು ವಿಶೇಶ ಅಸ್ತ್ರವಾದ ಅಗ್ನಿಯಸ್ತ್ರವನ್ನು ಪ್ರಯೋಗ ಮಾಡುವ ನಿಶ್ಚಯ ಮಾಡಿದನು.
ರಾತ್ರಿ ಕತ್ತಲಾಗಿ ಸುಮಾರು ಹೊತ್ತಾಗಿತ್ತು. ಆಗ ಸದ್ದಿಲ್ಲದೆ ನಮ್ಮ ಧನುರ್ಧರರನ್ನು ಸಾಲಾಗಿ ನದಿಯ ನಮ್ಮ ಕಡೆಯ ತೀರದಲ್ಲಿ ನಿಲ್ಲಿಸಿದೆವು. ಅಗ್ನಿ ಶರಗಳನ್ನು ಸಿದ್ಧಗೊಳಿಸಿ ಧನುರ್ಧರರಿಗೆ ಒದಗಿಸುವವರೂ ಸಿದ್ಧರಾದರು. ಈ ಶರಗಳ ವಿಶಿಷ್ಟತೆ ಏನೆಂದರೆ ಇವು ಸಾಮಾನ್ಯ ಶರಗಳಿಗಿಂತ ಹೆಚ್ಚು ಉದ್ದವಾಗಿದ್ದು ಇವುಗಳಿಗೆ ತೈಲದಲ್ಲಿ ಹಾಗು ಕೀಲೆಣ್ಣೆಯಲ್ಲಿ ಅದ್ದಿ ಸಿದ್ಧಪಡಿಸಿದ ಉದ್ದವಾದ ವಸ್ತ್ರಗಳು ಸುತ್ತಲ್ಪಟ್ಟಿದ್ದವು. ಕೊನೆಗೆ ನಮ್ಮ ಅಗ್ನಿಯಸ್ತ್ರಗಳಿಗೆ ಅಗ್ನಿಯನ್ನಿ ಕೊಡುವ ಭಟರೂ ಸಿದ್ಧರಾಗಿ ನಿಂತರು. ಸೇನಾದಿಪತಿಯ ಆಜ್ಞೆ ಬಂದಂತೆ ಧನುರ್ಧರರು ಶರಗಳನ್ನು ಧನುಸ್ಸಿಗೆ ಏರಿಸಿ ದೊರಕವನ್ನು ಕಿವಿಗೆಳೆದರು, ಅಗ್ನಿ ಕೊಡುವ ಭಟರು ಶರಗಳಿಗೆ ಅಗ್ನಿ ತಗುಲಿಸಿದರು, ಧನುರ್ಧರರು ಆ ಶರಗಳ ಪ್ರಯೋಗ ಮಾಡಿದರು. ಅಷ್ಟು ಹೊತ್ತಿಗೆ ಶರ ಒದಗಿಸುವವರು ಹೊಸ ಶರಗಳನ್ನು ಸಂಯೋಜಿಸುತ್ತಿದ್ದರು.
ಆಗ್ನೇಯಸ್ತ್ರಗಳು ಹರ್ಷರಾಜನ ಸೈನ್ಯದ ಬಿಡಾರದ ಮೇಲೆ ಬಿದ್ದಂತೆ ಎಲ್ಲೆಡೆ ಕೋಲಾಹಲ ಕಳವಳಗಳು. ವೈರಿಯ ಆನೆಗಳು ನಿಶೀತದಲ್ಲಿ ಬಂದು ಬೀಳುತ್ತಿದ್ದ ಅಗ್ನಿ ಜ್ವಾಲಗಳನ್ನು ಕಂಡು ಬೆದರಿ ತಮ್ಮ ಸೈನ್ಯದವರನ್ನೇ ತುಳಿದು ಓಡತೊಡಗಿದವು. ಎಲ್ಲೆಡೆ ಬೆಂಕಿ, ಶಿಬಿರಗಳೆಲ್ಲ ಧೂಮವಾಗಿ ಹೋದವು. ಮಾರನೆಯ ದಿನ ಪ್ರಾತಃ ಕಾಲದಲ್ಲಿ ಎದುರು ತೀರವನ್ನು ನೋಡಿದಾಗ ಅಲ್ಲಿ ಕಂಡದ್ದು ಕೇವಲ ಹತವಾದ ಕುಂಜರಗಳು, ಭಟರು. ನನಗಾದರೋ ಆ ದೃಶ್ಯ ನೋಡಲು ಅಸಾಧ್ಯವಾಯಿತು, ಆದರೆ ಯುದ್ಧವು ಮುಗಿದಿತ್ತು.
ಮತ್ತೂ ಕೆಲ ದಿನಗಳ ಕಾಲ ನಮ್ಮ ಸೈನ್ಯ ನರ್ಮದೆಯ ತೀರದಲ್ಲೇ ಬಿಡಾರ ಹೂಡಿತ್ತು. ಹರ್ಷರಾಜನನಿಗೀಗ ತಾನು ದಕ್ಷಿಣಾಪಥವನ್ನು ಜಯಿಸುವುದು ಅಸಾಧ್ಯವೆಂದು ಮನದಟ್ಟಾಗಿತ್ತು. ಪುಲಿಕೇಶಿ ಅರಸನು ಯುದ್ಧದಲ್ಲಿ ಜಯ ಹೊಂದಿದರೂ ಹರ್ಷರಾಜನ ಶಕ್ತಿ ಹಾಗು ಪ್ರಾಬಲ್ಯತೆ ಅರಿತಿದ್ದನು. ಉತ್ತರಾಪಥವನ್ನು ತನ್ನದಾಗಿಸಿಕೊಳ್ಳುವುದು ಸುಲಭಾಕಾರ್ಯವಲ್ಲವೆಂಬುದೂ ಅರಿತಿದ್ದನು. ಕೆಲವು ದಿನಗಳ ನಂತರ ವೈರಿ ಪಡೆಯ ಒಬ್ಬ ದೂತನು ಹರ್ಷರಾಜನ ಓಲೆಯೊಂದನ್ನು ತೆಗೆದುಕೊಂಡು ಬಂದನು.
ದೂತನನ್ನು ಪುಲಿಕೇಶಿಯ ರಾಜ್ಯ ಸಭೆಗೆ ಕರೆಸಲಾಯಿತು. ದೂತನು ಪುಲಿಕೇಶಿ ಅರಸನಿಗೆ ತಲೆಬಾಗಿ ಕಾಣಿಕೆ ಸಲ್ಲಿಸಿ, ನಂತರ "ಮಹಾರಾಜ ಪುಲಿಕೇಶಿಗೆ ಜಯವಾಗಲಿ. ನನ್ನ ಒಡೆಯನಾದ ಹರ್ಶವರ್ಧನ ಮಹಾರಾಜನ ಕಡೆಯಿಂದ ಓಲೆಯೊಂದನ್ನು ತಂದಿರುವೆ. ಅದನ್ನು ಓದಿ ಹೇಳುವ ಅಪ್ಪಣೆ ಬೇಡುವೆ" ಎಂದು ಹೇಳಿದನು.
"ಅಪ್ಪಣೆ ಇದೆ" ಅರಸ ಉತ್ತರಿಸಿದನು.
"ಹರ್ಷವರ್ಧನ ಚಕ್ರವರ್ತಿ ಚಾಲುಕ್ಯರ ಕಡೆ ಸಂಧಾನದ ಕೈ ಬೆಳೆಸಲು ಸಿದ್ಧರಾಗಿರುತ್ತಾರೆ. ಅವರು ಪುಲಿಕೇಶಿ ಮಹಾರಾಜರೊಡನೆ ಕೂಡಿ ಸಂಧಾನದ ವಿವರಗಳನ್ನು ಚರ್ಚಿಸುವ ಅನುಮತಿಯನ್ನು ಕೇಳುತ್ತಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಪುಲಿಕೇಶಿ ಮಹಾರಾಜರು ಹರ್ಷ ಚಕ್ರವರ್ತಿಯ ಆತಿಥ್ಯವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಹೊಂದಿರುತ್ತಾರೆ. ಪುಲಿಕೇಶಿ ಮಹಾರಾಜರು ದೂತರ ಮೂಲಕ ಉತ್ತರ ಕಳುಹಿಸಲೆಂದು ಕೋರುತ್ತಾರೆ" ಎಂದು ದೂತನು ಓಲೆಯನ್ನೋದಿದನು.
"ನಮ್ಮ ಮಂತ್ರಿಗಳ ಜೊತೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಉತ್ತರ ಕೊಡುವೆವು. ಅಲ್ಲಿಯವರೆಗು ಈ ದೂತನನ್ನು ನಮ್ಮ ಅತಿಥಿಯಾಗಿ ಕಾಣುವುದು" ಎಂದು ಹೇಳಿ ಪುಲಿಕೇಶಿ ಅರಸ ಸಭೆಯನ್ನು ಅಂತ್ಯ ಗೊಳಿಸಿದನು.
ಕಾಲ ಕ್ರಮೇಣವಾಗಿ ಸಂಧಾನ ಧೃಡವಾಯಿತು. ಅದರ ಪ್ರಕಾರ ಪುಲಿಕೇಶಿ- ಹರ್ಷವರ್ಧನರ ಸಾಮ್ರಾಜ್ಯಗಳ ಸೀಮೆ ನರ್ಮದಾ ನದಿಯೆಂದು ನಿಶ್ಚಯ ಮಾಡಲಾಯಿತು. ಯಾರೊಬ್ಬರೂ ಇನೂಬ್ಬರ ಮೇಲೆ ಯುದ್ಧ ಆರಂಭಿಸಬಾರದೆಂಬ ವ್ಯವಸ್ಥೆಯೂ ಆಯಿತು. ಇದರ ಬದಲಾಗಿ ಪುಲಿಕೇಶಿ ಅರಸನಿಗೆ ಹರ್ಷರಾಜನು ಐದು ಸಹಸ್ರ ಆನೆಗಳು ಹಾಗು ನೂರು ಮಣ ಬಂಗಾರ, ರತ್ನ ವಜ್ರ ವೈಡೂರ್ಯಗಳನ್ನು ಕಾಣಿಕೆಯಾಗಿ ಕೊಟ್ಟು, ದಕ್ಷಿಣಾಪಥೇಶ್ವರನೆಂಬ ಬಿರುದನಿತ್ತು ಸನ್ಮಾನಿಸಿದನು.
* * * * *
ಪುಲಿಕೇಶಿ ಮಹಾರಾಜನು ಸಾಧಿಸಿದ ದಿಗ್ವಿಜಯದಿಂದ ಅವನು ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಒಡೆಯನಾಗಿದ್ದನು. ಇದರಿಂದಾಗಿ ಅರಸನು ಪರಮೇಶ್ವರನೆಂಬ ಬಿರುದನ್ನೂ ಹೊಂದಿದನು. ಕರ್ನಾಟ್ಟ ದೇಶ, ಮರಾಠದೇಶ, ಆಂಧ್ರದೇಶ ಕೂಡಿದಂತೆ ಇಡೀ ದಕ್ಷಿಣಾಪಥದ ಒಡೆಯನಾಗಿದ್ದನು.
ಮಹಾರಾಜ, ಮಹಾಮಂತ್ರಿ, ಸೇನಾಧಿಪತಿ ಸಮೇತರಾಗಿ ಎಲ್ಲ ಸಾಮಂತರೂ ಸೈನ್ಯಗಳೊಡನೆ ವಾತಾಪಿಗೆ ಹಿಂತಿರುಗಿದರು. ನಾನೂ ಅವರೊಡನೆಯೇ ವಾತಾಪಿ ನಗರಕ್ಕೆ ಹಿಂತಿರುಗಿದೆ. ನನ್ನ ಗೂಢಚರ್ಯೆಯ ಕೆಲಸ ಸಧ್ಯಕ್ಕೆ ಮುಗಿದಿತ್ತಾದ್ದರಿಂದ ನನ್ನ ಗೂಢಚಾರನ ವೇಷದ ಅಗತ್ಯ ಇನ್ನಿರಲಿಲ್ಲ. ನನ್ನ ಶ್ಮಶ್ರುಗಳನ್ನು ಕ್ಷೌರಿಕನಿಗೆ ಅರ್ಪಿಸಿ, ನನ್ನ ಕಂಚುಕ ಪಗಡಿಗಳನ್ನು ತ್ಯಜಿಸಿ, ಪುನಃ ನನ್ನ ಹಳೆಯ ಶ್ವೇತ ವರ್ಣದ ಕಚ್ಚೆ ಪಂಚೆ ಹಾಗು ಶಿರದಲ್ಲಿ ಜಟೆ ಧರಿಸಿದೆ. ಇನ್ನೇನು ಅಜ್ಞಾತವಾಸದ ಅವಶ್ಯಕತೆಯೂ ಇರಲಿಲ್ಲ. ಮನೆಗೆ ಹಿಂತಿರುಗಿ ಮಾತಾ-ಪಿತರನ್ನು ಮತ್ತೆ ಕಂಡು ಸಂತೋಷವಾಯಿತು. ಅವರಿಗೂ ಬಹಳ ದಿನಗಳ ನಂತರ ನನನ್ನು ಕಂಡು ಹರ್ಷವಾಯಿತು. ಮನ ಮುಟ್ಟುವ ಪುನರ್ಮಿಲನ - ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಮನೆಯ ಜೀವನದ ಆನಂದವನ್ನು ಮತ್ತೆ ಕಾಣುವಂತಾಯಿತು.
ಈ ಸಮಯದಲ್ಲಿ ಪುಲಿಕೇಶಿ ಅರಸನು ಹರ್ಷರಾಜನ ಮೇಲೆ ತಾನು ಸಾಧಿಸಿದ ದಿಗ್ವಿಜಯ ಸ್ಮರಣೆಗೆಂದು ದೇವಾಲಯವೊಂದನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದನು. ಅಂತೆಯೇ ಅರಸನ ವಂಶಜರ ಮೊದಲ ರಾಜಧಾನಿಯಾದ, ಹತ್ತಿರದಲ್ಲಿಯೇ ಮಲಪ್ರಭಾ ನದಿಯ ತೀರದಲ್ಲಿದ್ದ ಅಯ್ಯವೊಳೆ ನಗರದಲ್ಲಿ ದೇವಾಲಯವನ್ನು ಕಟ್ಟಿಸುವ ಯೋಜನೆ ಹೂಡಿದನು. ಇದನ್ನು ಕಾರ್ಯರೂಪಕ್ಕೆ ತರಲು ಅರಸನು ಮಂತ್ರಿ ಹಾಗು ಕವಿಯಾದ ರವಿಕೀರ್ತಿಯನ್ನು ಕರೆಸಿ ಹೀಗೆ ಹೇಳಿದನು:
"ಮಂತ್ರಿ ರವಿಕೀರ್ತಿ, ನಾವು ನಮ್ಮ ಮುದ್ರೆಯನ್ನು ಇತಿಹಾಸದಮೇಲೆ ಒತ್ತಲು ಇಚ್ಚಿಸಿದ್ದೇವೆ. ಅಂತೆಯೇ, ನಮ್ಮ ಮೂಲ ರಾಜಧಾನಿಯಾದ ಅಯ್ಯವೊಳೆಯಲ್ಲಿ ದೇವಾಲಯವೊಂದನ್ನು ನಿರ್ಮಿಸಿ. ಬರುವ ಪೀಳಿಗೆಗಳಿಗೆ ನಮ್ಮ ಶೌರ್ಯ, ದಿನಾಂಕ, ಖ್ಯಾತಿ ಹಾಗು ವೈಭವಗಳನ್ನು ನೆನಪಿಗೆ ತರಿಸುವಂತಹ ಸ್ಮಾರಕವೊಂದನ್ನು ರಚಿಸಿ. ಈ ಮಂದಿರವು ನಮ್ಮ ದಿಗ್ವಿಜಯದ ಸಂಕೇತವಾಗಿರಲಿ. ಎಷ್ಟು ವೆಚ್ಚವಾದರೂ ಸರಿ, ನಮ್ಮ ಬೊಕ್ಕಸದಿಂದ ಕೊಡಲಾಗುವುದು. ಈ ಕಾರ್ಯವನ್ನು ಸಾಧಿಸಲು ನೀವೇ ಸಮರ್ಥ ವಾಸ್ತುಶಿಲ್ಪಿ"
ಮಂತ್ರಿ ರವಿಕೀರ್ತಿಯು "ಅಪ್ಪಣೆಯಂತಾಗಲಿ, ದೊರೆ. ಆದರೆ ನನ್ನದೊಂದು ಸಣ್ಣ ಕೋರಿಕೆ" ಎಂದರು
"ಏನದು" ಅರಸ ಪ್ರಶ್ನಿಸಿದನು.
"ಬ್ರಾಹ್ಮಣ ಧರ್ಮದ ದೇವತೆಗಳೊಂದಿಗೆ ನನ್ನ ಮೆಚ್ಚಿನ ದೇವನಾದ ಜಿನೇಂದ್ರನ ಮೂರ್ತಿಯೊಂದನ್ನು ಆ ಸ್ಮಾರಕ ದೇವಾಲಯದಲ್ಲಿ ಇರಿಸುವ ಅನುಮತಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಧಾರ್ಮಿಕ ಸಹಿಷ್ಣುತೆಗೂ ಸಂಕೇತವಾಗಲಿ" ಎಂದು ಮಂತ್ರಿ ಕೋರಿಕೊಂಡರು.
ಜೈನ ಶ್ರಾವಕರು ಅರಸನ ಪೂರ್ವದಿನಗಳಲ್ಲಿ ಅವನು ಮಂಗಳೇಶನನ್ನು ಸೋಲಿಸಿ ಚಾಲುಕ್ಯಾಧಿಪತಿಯಾಗಲು ಹೆಚ್ಚು ಬೆಂಬಲ ನೀಡಿದ್ದರೆಂಬುದು ಎಲ್ಲರೂ ಅರಿತಿದ್ದರು. ಹಾಗಾಗಿ ಶ್ರಾವಕರು ನಮ್ಮ ರಾಜ್ಯದಲ್ಲಿ ವಿಶಾಲ ಪ್ರಾಧಿಕಾರ ಹಾಗು ಪ್ರಭಾವಗಳನ್ನು ಹೊಂದಿದ್ದರು. ಜೈನ ಸನ್ಯಾಸಿಗಳ ಕಾರಣವಾಗಿಯೇ ಅರಸನ ಸಹೋದರನಾದ ಕುಬ್ಜ ವಿಷ್ಣುವರ್ಧನನಿಗು ಹಾಗು ಗಂಗಾಪಾದಿ ರಾಜ ದುರ್ವಿನೀತನ ಪುತ್ರಿಗೂ ವಿವಾಹವಾಗಿ, ಪುಲಿಕೇಶಿ ಅರಸನು ಅವರ ಪ್ರತಿ ತನ್ನ ಋಣವನ್ನು ಅರಿತಿದ್ದನು. ಅದಕ್ಕಾಗಿ "ಹಾಗೆಯೇ ಆಗಲಿ" ಎಂದು ಸಮ್ಮತಿಸಿ "ನಾಳೆಯ ದಿನವೇ ನಿಮ್ಮ ಶಿಲ್ಪಕಲೆಯ ಮೇರುಕೃತಿಗೆ ಸಂಕಲ್ಪ ಹಾಗು ನಾಂದಿ" ಎಂದು ಹೇಳಿ ರವಿಕೀರ್ತಿಯನ್ನು ಅಯ್ಯವೊಳೆಗೆ ಕಳುಹಿಸಿಕೊಟ್ಟನು.
ರವಿಕೀರ್ತಿ ಅಯ್ಯವೊಳೆಗೆ ನಿರ್ಗಮಿಸಿದರು. ಅಲ್ಲಿ ಭವ್ಯ ಮಂದಿರ ನಿರ್ಮಾಣದ ಕಾರ್ಯದಲ್ಲಿ ತೊಡಗಿದರು. ಆ ಸಮಯದಲ್ಲಿ ಪುಲಿಕೇಶಿ ಅರಸನು ಉತ್ತಮ ಪ್ರಶಾಸಕನಾಗಲು ಯತ್ನಿಸುತ್ತಿದ್ದನು. ಅರಸನ ಪ್ರಭಾವವು ಧಾರ್ಮಿಕ ಕಟ್ಟಲೆಗಳಿಂದ ಸೀಮಿತವಾಗಿತ್ತು. ರಾಜ್ಯದ ಭಾಗಗಳನ್ನು ಆಯಾ ಸಾಮಂತರಾಜರು ಆಳಿಕೊಂಡು ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ರಾಜನ ಶಾಸನ ಸಹಾಯಕ್ಕೆ ಮಂತ್ರಿವರ್ಗದವರು, ಮಹಾರಾಣಿ ಹಾಗು ಯುವರಾಜರು ಸಹಕರಿಸುತ್ತಿದ್ದರು. ರಾಜ್ಯವನ್ನು ವಿಷಯ, ರಾಷ್ಟ್ರ, ಭೋಗ ಕಾಂಪನ ಹಾಗು ಗ್ರಾಮಗಳಾಗಿ ವಿಭಾಜಿಸಲಾಗಿತ್ತು. ಅಲ್ಲಿಯ ಆಡಳಿತಕ್ಕೆ ಅರಸನು ಪ್ರಬಲ ಹಾಗು ಸಮರ್ಥ ಸಾಮಂತರನ್ನು ನೇಮಿಸಿದನು. ಇವರಲ್ಲಿ ಹಲವರು ಹೆಂಗಳೆಯರೂ ಇದ್ದರು. ಗ್ರಾಮ ಮಟ್ಟದಲ್ಲಿ ಊರ ಗಾವುಂಡರು ಅರಸನ ಪ್ರತಿನಿಧಿಯಾಗಿದ್ದರು. ಸೈನ್ಯ ಹಾಗು ನಾವಸೇನೆಯನ್ನೂ ಮಹಾರಾಜನು ಕಾಲ ಕಾಲಕ್ಕೆ ಸಂಯೋಜಿಸಿ ಇಟ್ಟಿದ್ದನು. ನಾಡು ಸಮೃದ್ದವಾಗಿದ್ದು ಜನರು ಸುಖಸಂತೋಷಗಳಿಂದ ಕೂಡಿದ್ದರು. ಪುಲಿಕೇಶಿ ಅರಸ ನೀಡಿದ ಸುರಕ್ಷೆಯ ನೆರಳಲ್ಲಿ ಎಲ್ಲರೂ ಭೀತಿಹೀನರಾಗಿದ್ದರು. ಸತ್ಯ, ಧರ್ಮ, ನ್ಯಾಯಗಳೇ ಚಾಲುಕ್ಯ ರಾಷ್ಟ್ರದ ಕಂಬಗಳಾಗಿದ್ದವು.
ಯುದ್ಧದ ಪೂರ್ವದಲ್ಲಿ ನಾನು ಮಾಡಿದ ಕೆಲಸ ಮಹಾಮಂತ್ರಿಗಳಿಗೆ ಹಿಡಿಸಿತ್ತು. ಈಗಲೂ ನಾನು ಅವರ ಕೈಯ ಕೆಳಗೇ ಕಾರ್ಯ ನಿರ್ವಹಿಸುತ್ತಿದ್ದೆ. ಕಾಲ ಕಳೆದಂತೆ ಮಹಾಮಂತ್ರಿಗಳು ನನ್ನ ಕಾರ್ಯದಿಂದ ಇನ್ನಷ್ಟು ಸಂತುಷ್ಟರಾಗಿದ್ದರು. ಅವರಿಗೆ ನನ್ನ ಮೇಲೆ ಹೆಚ್ಚು ಭರವಸೆ ಬಂದು ಅವರ ಹತ್ತಿರದ ವೃಂದದಲ್ಲಿ ನನ್ನನ್ನು ಎಣಿಸುತ್ತಿದ್ದರು. ಸಧ್ಯಕ್ಕೆ ನಾನೂ ತೃಪ್ತನಾಗಿ ಮನೆಯಲ್ಲಿದ್ದುಕೊಂಡು ಅರಮನೆಯಲ್ಲಿ ಕೆಲಸ ಮಾಡುತ್ತಿದ್ದೆ.
ಹಾಗೆಯೇ ನನ್ನ ವೃತ್ತಿ ಬದಲಾವಣೆಯಾಗಿತ್ತು. ಈಗ ನಾನು ಗೂಢಚಾರ ವಿಶ್ಲೇಷಣೆಗಳನ್ನು ಬಿಟ್ಟಿದ್ದೆ. ಈ ಕಾರ್ಯಗಳು ಈಗಿರಲಿಲ್ಲವೆಂದಲ್ಲ ಆದರೆ ನಾನು ಕಾಯಕ ಪಥದಲ್ಲಿ ಪ್ರಗತಿ ಹೊಂದಿದ್ದೆ. ಈಗ ಮಹಾಮಂತ್ರಿಗಳು ನನ್ನನ್ನು ವಿಶೇಷ ಕಾರ್ಯಗಳಿಗೆ ನೇಮಿಸಿದ್ದರು. ಅರಸ ಪುಲಿಕೇಶಿ ದಕ್ಷಿಣಾಪಥೇಶ್ವರನೆನಿಸಿ ಚಕ್ರವರ್ತಿಯಾಗಿದ್ದ. ಹಾಗಾಗಿ ಸುತ್ತ ಮುತ್ತಲಿನ ದೇಶಗಳಲ್ಲೇ ಅಲ್ಲದೆ ದೂರ ದೂರದ ದೇಶಗಳಲ್ಲೂ ರಾಯಭಾರಿ ಸಂಬಂಧಗಳನ್ನು ಬೆಳೆಸುವ ಅಗತ್ಯವಿತ್ತು. ನನ್ನ ಸಂಸ್ಕೃತ ನೈಪುಣ್ಯತೆ ಹಾಗು ಜಂಬೂದ್ವೀಪವನ್ನು ಒಗ್ಗೂಡಿಸುವ ಶಕ್ತಿ ಸಂಸ್ಕೃತವೇ ಆದ ಕಾರಣ, ಮಹಾಮಂತ್ರಿಗಳು ನನ್ನನ್ನು ಕಾಮರೂಪ ದೇಶಕ್ಕೆ ರಾಯಭಾರಿಯಾಗಿ ಕಳುಹಿಸಲೆಂದು ಶಿಕ್ಷಣ ನೀಡಲಾರಂಭಿಸಿದ್ದರು. ನನ್ನನ್ನು ತಮ್ಮ ವಿಚಾರ ಸಭೆಯಲ್ಲಿಯೂ ಸೇರಿಸಿಕೊಳ್ಳುತ್ತಿದ್ದರು.
ಹೀಗೆ ಶ್ರೀಮುಖ ಸಂವತ್ಸರವು ಭವ, ಭವವು ಯುವ ಸಂವತ್ಸರಕ್ಕೆ ತಿರುಗಿದವು. ಮಂತ್ರಿ ರವಿಕೀರ್ತಿಯು ಸ್ಮಾರಕ ದೇವಾಲಯವು ಸಂಪೂರ್ಣವೆಂಬ ಸುದ್ಧಿಯೊಂದಿಗೆ ಅಯ್ಯವೊಳೆಯಿಂದ ವಾತಾಪಿ ನಗರಕ್ಕೆ ಹಿಂತಿರುಗಿದರು. ಎಲ್ಲ ಸಾಮಂತರಾಜರು ಹಾಗು ಪಾಳೆಯಗಾರರಿಗೆ ಓಲೆ ಕಳುಹಿಸಲಾಯಿತು. ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಎಲ್ಲರಿಗೂ ನಿಮಂತ್ರಣ ನೀಡಲಾಗಿತ್ತು. ಅಂತೆಯೇ ನಿಯಮಿತ ದಿನದಂದು ಎಲ್ಲರೂ ಅಯ್ಯವೊಳೆಯಲ್ಲಿ ನೆರೆದಿದ್ದರು.
ಮಂತ್ರಿ ರವಿಕೀರ್ತಿಯು ಯಾರೂ ಕಾಣದಂತಹ ಭವ್ಯ ದೇವಾಲಯವನ್ನು ನಿರ್ಮಿಸುವ ಪ್ರಯತ್ನವನ್ನು ಈ ಪ್ರಯೋಗದ ಮೂಲಕ ಮಾಡಿದ್ದರು. ದೇವಾಲಯವು ಒಂದು ಸಣ್ಣ ಗುಡ್ಡದಮೇಲೆ ನಿಂತಿದೆ. ಎತ್ತರಿಸಿದ ಜಗಲಿಯೊಂದರ ಮೇಲೆ ದೇವಾಲಯದ ಕಟ್ಟಡವನ್ನು ಕಟ್ಟಲಾಗಿದೆ. ಮೆಟ್ಟಲು ಹತ್ತಿ ಹೋದರೆ ಭಕ್ತರು ಮುಖಮಂಟಪದೊಳಗೆ ಇರುತ್ತಾರೆ. ವಿಶಾಲವಾದ ಮುಖಮಂಟಪದ ಛಾವಣಿಯನ್ನು ಕಂಬಗಳು ಎತ್ತಿ ಹಿಡಿದಿವೆ. ಗರ್ಭಗುಡಿಯಲ್ಲಿ ಜಿನೇಂದ್ರನ ಕಲ್ಲಿನ ಪ್ರಥಿಮೆ ಇರಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥವಿದೆ. ದೇವಾಲಯದ ಸುತ್ತಲೂ ಸುಂದರ ಕೆತ್ತನೆಗಳನ್ನು ಹೊತ್ತ ಕಂಬಗಳುಳ್ಳ ಜಗಲಿ ಇದೆ.
ಮುಖಮಂಟಪ ಹಾಗು ಗರ್ಭಗುಡಿಗಳ ಮಧ್ಯೆ ಒಂದು ವಿಶಾಲ ಅಂತರಾಳವಿದೆ. ಅಂತರಾಳದಲ್ಲಿ ಅರ್ಧ ಲಲಿತಾಸನದಲ್ಲಿ ಕುಳಿತ ಚಾಲುಕ್ಯ ಕುಲದೇವಿಯಾದ ಕೌಶಿಕಾಂಬಿಕೆಯ ಬಹುಸುಂದರ ಕಲ್ಲಿನ ವಿಗ್ರಹವಿದೆ. ಆದಿಸ್ಥಾನದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ದೇವಾಲಯದ ಎಲ್ಲ ಕಕ್ಷಗಳಲ್ಲಿ ಹಲವಾರು ದೇವಾದೇವಿಯರ ಸುಂದರ ಶಿಲಾ ಪ್ರಥಿಮೆಗಳಿವೆ. ಮೆಟ್ಟಲು ಹತ್ತಿ ದೇವಾಲಯದ ಛಾವಣಿಯ ಮೇಲೆ ಹೋದರೆ ಗರ್ಭಗೃಹದ ಮೇಲೆ ಮತ್ತೊಂದು ಗರ್ಭಗುಡಿಯಲ್ಲಿ ತೀರ್ಥಂಕರನ ಮತ್ತೊಂದು ಪ್ರಥಿಮೆಯನ್ನು ಕಾಣಬಹುದು. ಛಾವಣಿಯಿಂದ ಇಡೀ ಅಯ್ಯವೊಳೆ ಊರಿನ ನೋಟವನ್ನೂ ಕಾಣಬಹುದು. ಪುಲಿಕೇಶಿ ಅರಸನ ಪಿತಾಮಹ ಕಟ್ಟಿಸಿದ ದೇವಾಲಯಗಳು, ಹಾಗು ಹಿಂದಿನ ಕಾಲದ ಅರಮನೆ ಎಲ್ಲವೂ ಕಾಣಿಸುತ್ತವೆ.
ಪ್ರತಿಷ್ಠಾಪನೆಗೆ ಬ್ರಾಹ್ಮಾಣರ ಹಾಗು ಜೈನ ಶ್ರಾವಕರ ಮಂತ್ರಗಳು ಮೊಳಗುತ್ತಿದ್ದವು. ರಾಷ್ಟ್ರದ ಪದವೀಧರರಲ್ಲದೆ ಸಾಮಾನ್ಯ ಜನರೂ ಆ ದಿವ್ಯ ನೋಟವನ್ನು ಕಾಣಲೆಂದು ಅಂದು ಅಲ್ಲಿ ನೆರೆದಿದ್ದರು. ಆಡಂಬರ ಅಭಿಶೇಕಗಳೊಂದಿಗೆ ದೇವತೆಗಳ ಪ್ರತಿಷ್ಠಾಪನೆಯಾಯಿತು.
"ಜೈ ಕೌಶಿಕಾಂಬಿಕೆ", "ಜೈ ಚಾಲುಕ್ಯೇಶ್ವರ" ಎಂಬ ಘೋಷಣೆಗಳು ಗಗನಕ್ಕೇರುದವು.
* * * * *
ಈ ಮುಂಚೆಯೇ ವಾತಾಪಿಯಲ್ಲಿದ್ದಾಗ ಮಹಾಮಂತ್ರಿಗಳು ಒಂದು ದಿನ ಬಂದು "ಅರಸ ಅಯ್ಯವೊಳೆಯಲ್ಲಿ ನಿರ್ಮಿಸುತ್ತಿರುವ ದೇವಾಲಯದ ಬಗ್ಗೆ ನಿನಗೆ ತಿಳಿದೇ ಇದೆ. ಅರಸನಿಗೆ ಅವನ ಮುದ್ರೆ ಇತಿಹಾಸದ ಮೇಲೆ ಬೀಳಬೇಕೆಂಬ ಇಚ್ಛೆ. ಹಾಗಾಗಿ ಆ ದೇವಾಲಯದಲ್ಲಿ ಒಂದು ಶಾಸನ ಇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರಸನ ಕುಲ, ಹೆಸರು, ದಿನಾಂಕ, ಶೌರ್ಯ, ದಿಗ್ವಿಜಯ, ಹಾಗು ಈಗಿನ ಕಾಲದ ವಿವರಗಳನ್ನು ಬರುವ ಪೀಳಿಗೆಗಳಿಗೆ ತಿಳಿಸುವಂತಹ ಶಾಸನವಾಗಬೇಕು. ಇಂತಹ ಪ್ರತಿಯೊಂದನ್ನು ಸಿದ್ಧ ಗೊಳಿಸು. ನಮ್ಮ ಹಾಗು ಅರಸನ ಸಲಹೆಯ ಮೇರೆಗೆ ಅದನ್ನು ನಂತರ ತಿದ್ದೋಣ" ಎಂದು ಹೇಳಿದ್ದರು. ನಾನು ಅಂತಹ ಒಂದು ಪ್ರತಿಯನ್ನು ನಿಯೋಜಿಸಿ, ಮಹಾಮಂತ್ರಿ, ಅರಸ ಹಾಗು ಉಳಿದ ನಿಪುಣರ ಸಲಹೆಮೇರೆಗೆ ಅದನ್ನು ತಿದ್ದಿ ಸಿದ್ಧಪಡಿಸಿದೆ. ಈಗ ಆ ಪ್ರತಿಯನ್ನು, ಕೆಲವು ಬದಲಾವಣೆಗಳೊಂದಿಗೆ, ರವಿಕೀರ್ತಿಯು ತಾವು ನಿರ್ಮಿಸಿದ್ದ ದೇವಾಲಯದ ಭಿತ್ತಿಗಳ ಮೇಲೆ ಷಟ್ಪದಿಗಳ ರೂಪದಲ್ಲಿ ಕೆತ್ತಿದ್ದರು. ಆ ಶಾಸನದ ಸರಳ ಭಾಷೆಯ ಸಾರಾಂಶ ಹೀಗಿತ್ತು:
ಜನನ, ಮುಪ್ಪು, ಸಾವುಗಳು ಬಾರದ, ಜ್ಞಾನ ಸಾಗರದಲ್ಲಿ ಇಡೀ ಜಗತ್ತನ್ನೇ ದ್ವೀಪದ ಹಾಗೆ ತೋರುವ ಜಿನೇಂದ್ರನಿಗೆ ಜಯವಾಗಲಿ
ಈ ಪೃಥ್ವಿಗೇ ಆಭರಣಗಳಂತಿರುವ ಪುರುಷರತ್ನಗಳನ್ನು ಹೆತ್ತ ವಿಶಾಲ ಸಾಗರದಂತಹ ಚಾಳುಕ್ಯ ವಂಶಕ್ಕೆ ಜಯವಾಗಲಿ
ಪದವಿ ನೋಡದೆ ವೀರರಿಗೆ ಹಾಗು ವಿದ್ಯಾವಂತರಿಗೆ ವರ-ಸನ್ಮಾನಗಳನ್ನು ನೀಡುವ ಸತ್ಯಾಶ್ರಯನಿಗೆ ಜಯವಾಗಲಿ
ದಿಗ್ವಿಜಯವನ್ನು ಆಶಿಸುವ, ಭೂಪ್ರಿಯರೆಂಬ ಬಿರುದು ಹೊರಲು ಸಮರ್ಥರಾಗಿರುವ, ಈ ವಂಶದ ವೀರರು ಹತರಾದ ನಂತರ
ಚಾಳುಕ್ಯ ವಂಶದಲ್ಲಿ ಜನಿಸಿದ ಜಯಸಿಂಹ-ವಲ್ಲಭನೆಂಬ ರಾಜನು ಅಶ್ವ, ಪಧಾತಿ, ಕುಂಜರಗಳು ಖಡ್ಗಕ್ಕೆ ತತ್ತರಿಸಿ ಬೀಳುತ್ತಿದ್ದ ಯುದ್ಧದಲ್ಲಿ ತನ್ನ ವೀರ್ಯದಿಂದ ಚಂಚಲ ಜಯಲಕ್ಷ್ಮಿಯನ್ನು ಒಲಿಸಿಕೊಂಡನು
ಅವನಪುತ್ರನಾದ ರಣರಾಗನು ದಿವ್ಯ ತೇಜಸ್ಸುಳ್ಳ ಜಗದೊಡೆಯ ಅತಿಮಾನುಷ ಶಕ್ತಿಯುಳ್ಳವನಾಗಿರುವುದು ಅವನು ಮಲಗಿದಾಗಲೂ ಜನರಿಗೆ ತಿಳಿಯುತ್ತಿತ್ತು.
ಇವನ ಪುತ್ರ ಪುಲಿಕೇಶಿ - ಚಂದ್ರನ ರೂಪುವುಳ್ಳವನಾಗಿ ಜಯಲಕ್ಷ್ಮಿಯ ಪ್ರಿಯನಾದರೂ ವಾತಾಪೀನಗರದ ಒಡೆಯನಾದ
ಈತನು ಅನುಸರಿಸಿದಂತೆ ಭೂಪತಿಗಳು ಸಾಗುವ ತ್ರಿ-ಕರ್ಮಗಳ ಮಾರ್ಗವನ್ನು ಇಂದಿಗೂ ಯಾರೂ ಪಾಲಿಸಲಾರರು! ಈತನು ಅಶ್ವಮೇಧಯಾಗ ಮಾಡಿದಾಗ ಈತನು ಮಿಂದ ನೀರು ನೆಲದಮೇಲೆ ಬಿದ್ದು ಭೂಮಿಯೇ ಹೊಳೆಯುತ್ತಿತ್ತು.
ಇವನ ಪುತ್ರನಾದ ಕೀರ್ತಿವರ್ಮನು ನಳ, ಮೌರ್ಯ ಕದಂಬರನ್ನು ಸದೆಬಡೆದು ಪರಸ್ತ್ರೀಯನ್ನು ಎಂದೂ ಸ್ಮರಿಸದಿದ್ದರೂ ವೈರಿಯ ಅದೃಷ್ಟಕ್ಕೆ ಆಕರ್ಷಿತನಾಗುತ್ತಿದ್ದ
ಇವನು ಯುದ್ಧದಲ್ಲಿ ತನ್ನ ಬಾಹುಬಲದಿಂದ ಜಯಲಕ್ಷ್ಮಿಯನ್ನು ತನ್ನವಳಾಗಿಸಿಕೊಂಡು, ಬಲಿಷ್ಠ ಕುಂಜರದಂತಹವನಾಗಿ ವಿಶಾಲವಾಗಿ ಬೆಳೆದಿದ್ದ ಕದಂಬ ವೃಕ್ಷಗಳನ್ನು ಕೆಡವಿದನು.
ಇವನು ದೇವೇಂದ್ರನನ್ನೇ ಜೈಸುವ ಇಚ್ಛೆ ಹೊಂದಿರಲು ಇವನ ಕಿರಿಯ ಸಹೋದರನಾದ ಮಂಗಳೇಶ ಅರಸನಾಗಿ, ತನ್ನ ಯುದ್ಧದ ಕುದುರೆಯ ಧೂಳಿನಿಂದಲೇ ಪೂರ್ವ ಹಾಗು ಪಶ್ಚಿಮಸಾಗರಗಳ ತೀರಗಳಲ್ಲಿ ಬಿಡಾರ ಊರಿ ಅವರೆಡಕ್ಕೂ ಕಮಾನು ಕಟ್ಟಿ
ಯುದ್ಧಭೂಮಿಯಲ್ಲೇ ಕಳಚೂರಿಗಳ ಅದೃಷ್ಟದೇವತೆಯನ್ನು ವಧುವಾಗಿ ಸ್ವೀಕರಿಸಿ ನೆರೆದಿದ್ದ ವೈರಿಯ ಕುಂಜರಬಲದ ಅಂಧಕಾರವನ್ನು ನೂರಾರು ಖಡ್ಗಗಳ ಹೊಳಪಿನ ದೀಪಗಳಿಂದ ಹೋಗಲಾಡಿಸಿ
ನಂತರ ರೇವತೀ ದ್ವೀಪವನ್ನು ವಶಪಡಿಸಿಕೊಳ್ಳಲಿಚ್ಛಿಸಿದಾಗ ಆ ದ್ವೀಪಕ್ಕೆ ಮುತ್ತಿಗೆಯಿಟ್ಟ, ಧ್ವಜ-ಲಾಂಛನ-ಪತಾಕೆಗಳನ್ನು ಹೊತ್ತ ಇವನ ಸೈನ್ಯದ ಪ್ರತಿಬಿಂಬ ಸಮುದ್ರಜಲದೊಳಗೆ ಕಾಣಿಸುತ್ತಿರಲು ವರುಣನ ಆಜ್ಞೆಮೇರೆಗೆ ಬಂದ ಅವನ ಬಲದಂತೆ ತೋರುತ್ತಿತ್ತು.
ಇವನ ಹಿರಿಯ ಭ್ರಾತೃವಿನ ಪುತ್ರನಾದ, ನಾಹುಶನ ತೇಜಸ್ಸುಳ್ಳ, ರಾಜ್ಯಲಕ್ಷ್ಮಿಯ ಪ್ರಿಯನಾದ ಪುಲಿಕೇಶಿ ಎಂಬ ಹೆಸರಿನ ಯುವಕನು ಚಿಕ್ಕಪ್ಪನಲ್ಲಿ ತನ್ನ ಬೆದರಿಕೆಯಿಂದ ತನ್ನೆಡೆ ಮತ್ಸರ ಭಾವ ಕಂಡು ವನವಾಸದಲ್ಲಿರಲು
ಮಂಗಳೇಶನ ರಾಜಯೋಗವು ಇವನು ಶೇಖರಿಸಿದ ಹಿತೈಷಿಗಳ ಉಪದೇಶಗಳಿಂದ ಎಲ್ಲೆಡೆ ಕುಂದುತ್ತಿದ್ದು, ರಾಜ್ಯಲಕ್ಷ್ಮಿಯನ್ನು ಅವನ ಮಗನಿಗೆ ದೊರಕಿಸುವ ಯತ್ನವನ್ನೂ, ಪ್ರಾಣವನ್ನೂ ಪರಿತ್ಯಜಿಸಿ
ವೈರಿಗಳ ಅಂಧಕಾರದಿಂದ ಸುತ್ತುವರಿಯಲ್ಪಟ್ಟಿದ್ದ ಇಡೀ ಜಗವೇ ಭ್ರಮರಗಳ ಹಿಂಡಿನಂತೆ ಕಾರ್ಮೋಡಗಳು ಕವಿದ ಆಕಾಶದಲ್ಲಿ ಪತಾಕೆಗಳ ಮಿಂಚುತ್ತಿದ್ದ ಸೌದಾಮಿನಿಯು ಮಾರುತಗಳಿಂದ ಅಡಸುತ್ತಿದ್ದಂತೆ, ಇವನ ಅಪ್ರತಿಹತ ತೇಜಸ್ಸಿನ ಕಿರಣಗಳಿಂದ ಆಕ್ರಮಿಸಿದಂತೆ ಉಜ್ವಲವಾಗಿ
ಅವಕಾಶ ದೊರಕಿದಾಗ ಅಪ್ಪಯಿಕ ಹಾಗು ಗೋವಿಂದ ಎಂಬ ಹೆಸರುಳ್ಳವರು ತಮ್ಮ ಕುಂಜರ ಬಲದೊಡನೆ ಬಂದು ಭೈಮರಾಠಿಯ ಉತ್ತರದ ದೇಶವನ್ನು ಆಕ್ರಮಿಸಿದಾಗ ಇವನ ಸೇನೆಯ ಬಲದಿಂದ ಒಬ್ಬ ಭಯದ ರುಚಿಯನ್ನು ಕಂಡು, ಮತ್ತೊಬ್ಬ ತಾನು ಸಲ್ಲಿಸಿದ ಸೇವೆಯಿಂದ ಪಾರಿತೋಷಿಕವನ್ನು ಪಡೆದನು.
ಹಂಸ ಪಕ್ಷಿಗಳು ವರದಾ ತರಂಗಗಳಮೇಲೆ ನಲಿಯುವ ಕಾಂಚಿಯುಳ್ಳ, ದೇವನಗರದಂತೆ ಸಮೃದ್ಧವಾದ, ವನವಾಸಿಗೆ ಇವನು ಮುತ್ತಿಗೆಯಿಟ್ಟಾಗ, ಭೂಮಿಯಮೇಲಿದ್ದ ಕೋಟೆಯು ಎಲ್ಲೆಡೆ ಇವನ ಸೈನ್ಯದ ಸಾಗರದಿಂದ ಸುತ್ತುವರಿಯಲ್ಪಟ್ಟಾಗ ವೀಕ್ಷಕರಿಗೆ ಅಬ್ಧಿಯಮೇಲಿರುವ ದುರ್ಗದಂತೆ ಕಾಣಿಸುತ್ತಿತ್ತು
ಪೂರ್ವಕಾಲದಲ್ಲಿ ಗಂಗರು ಹಾಗು ಅಲೂಪರು ಏಳು ಪಾಪಗಳನ್ನು ತ್ಯಜಿಸಿ ಸಂತುಷ್ಟರಾಗಿದ್ದರೂ, ಇವನ ಘನತೆಯಿಂದ ಪರಂತಪರಾಗಿ ಇವನ ಸಾಮೀಪ್ಯದ ಮಧುವಿನಿಂದ ಮದವೇರಿಸಿಕೊಂಡಿರುತ್ತಿದ್ದರು.
ಕೊಂಕಣದಲ್ಲಿ ಇವನು ವಿಹಿಸಿದ ಸೈನ್ಯದ ಸಾಗರ ಉಲ್ಲೊಲಗಳು ಮೌರ್ಯರ ಸಣ್ಣ ಸರೋವರದ ತರಂಗಗಳನ್ನು ಕೊಚ್ಚಿಸಿಬಿಟ್ಟವು
ಆನೆಗಳ ಹಿಂಡಿನಂತೆ ಕಾಣಿಸಿಕೊಳ್ಳುವ ನೂರಾರು ನೌಕೆಗಳ ಸಹಾಯದಿಂದ, ಪುರ ವಿನಾಶಕನಂತೆ, ಪಶ್ಚಿಮ ಸಾಗರದ ಅದೃಷ್ಟದೇವತೆಯಾದ ಪುರಿಗೆ ಮುತ್ತಿಗೆಯಿಟ್ಟಾಗ, ಆಕಾಶವು ಎಳೆಯ ನೀಲಾಬ್ಜ ನೀಲಲೊಹಿತವರ್ಣವಾಗಿ ಕಾರ್ಮೋಡಗಳ ಪದರುಗಳಿಂದ ಕವಿದು ಸಾಗರದಂತೆ ಕಾಣಿಸುತ್ತಿದ್ದು ಸಾಗರವು ನಾಭದಂತೆ ಕಾಣಿಸುತ್ತಿತ್ತು
ಇವನ ಕಾಂತಿಯಿಂದ ಪರಾಜಯ ಹೊಂದಿದ ಲತ-ಮಾಲವ-ಗುರ್ಜರರು ಇವನ ಬಲಕ್ಕೆ ಸೋತ ಸಾಮಂತರ ಆಚಾರ ಗುಣಗಳಿಗೆ ಗುರುಗಳಾದರು.
ಅನಂತ ದ್ರವ್ಯ ಹಾಗು ಪರಾಕ್ರಮವುಳ್ಳ ಸಾಮಂತ ರಾಜರುಗಳ ಮುಕುಟಗಳ ರತ್ನಗಳ ಕಿರಣಗಳಿಂದ ಚುಂಬಿಸಲ್ಪಡುತ್ತಿದ್ದ ರಾಜೀವ ಚರಣಗಳುಳ್ಳ ಹರ್ಷನು ಇವನ ಕಾರಣದಿಂದ ತನ್ನ ಹರ್ಷವನ್ನು ಕಳೆದುಕೊಂಡು, ಯುದ್ಧದಲ್ಲಿ ತನ್ನ ಕುಂಜರಬಲದ ಹತವನ್ನು ಕಂಡು ಭಯ-ಭೀಬತ್ಸಗಳನ್ನು ಗ್ರಹಿಸಿದ.
ಅಪಾರ ಸೈನ್ಯಗಳೊಡಗೂಡಿದ ಇವನು, ರೇವಾ ಮರಳು ತೀರಗಳು ಇವನ ಕಾಂತಿಯಿಂದ ಇನ್ನೂ ಹೆಚ್ಚು ಪ್ರಜ್ವಲಿಸಿದ ಕಾರಣ, ಘನತೆಯ ಕೊರತೆಯೇ ಇಲ್ಲದ ವಿಂಧ್ಯಾ ಪರ್ವತ ಪ್ರದೇಶದಲ್ಲಿ ಭೂಮಂಡಲವನ್ನಾಳುತ್ತಿರಲು, ಇವನ ಆನೆಯ ಬಲ ಅದಕ್ಕೆ ಸಾಟಿಯಾಗಿ ಅದು ವರ್ಜ್ಯವಾಯಿತು.
ದೇವೇಂದ್ರನಿಗೆ ಸಮಾನನಾಗಿ, ನಿಯಮದ ಪ್ರಕಾರ ಮೂರೂ ಶಕ್ತಿಗಳನ್ನು ಸಂಯೋಜಿಸಿದ ಇವನು, ತನ್ನ ಅಭಿಜಾತ ಹಾಗು ಅನ್ಯ ಅಮೂಲ್ಯ ಗುಣಗಳಿಂದ ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಆಧೀನ ಹೊಂದಿದನು.
ಪ್ರಜೆಗಳ ಜೀವನದ ಮೂರು ಅರ್ಥಗಳ ಸಾಧನೆಯಿಂದ, ಅವರ ಉತ್ತಮ ನಡತೆಯಿಂದ ಭೂಮಿಯ ಉಳಿದ ಅರಸರ ಸೊಕ್ಕು ಮುರಿದಿದ್ದ ಕಳಿಂಗ-ಕೋಸಲರು ಇವನ ಬಲದಿಂದ ಭೀತಿಯನ್ನು ಕಾಣುವಂತಾದರು
ಇವನಿಂದ ಪಿಷ್ಠಿತವಾದ ಪಿಷ್ಠಪುರ ಕಷ್ಟ ಗ್ರಹಣದ ದುರ್ಗವಾಗಲಿಲ್ಲ; ಅತಿಶಯವಾಗಿ ಕಲಿಯುಗದ ಪಂಥಗಳು ಇವನಿಗೆ ನಿರ್ಗ್ರಹಣ್ಯವಾದವು.
ಇವನಿಂದ ನಾಶಮಾಡಲ್ಪಟ್ಟ ಕುನಲದ ನೀರು ಬಹುಶಸ್ತ್ರಗಳಿಂದ ಹತರಾದವರ ರಕ್ತದ ವರ್ಣ ಹೊಂದಿ ಭೂಮಿಯು ಹತ ಗಜಗಳ ಅಂಗಗಳಿಂದ ಆವರಿಸಲ್ಪಟ್ಟು ಮೋಡತುಂಬಿದ ಸಂಧ್ಯಾಕಾಲದ ಅಂಬರದಲ್ಲಿ ಚೆಲ್ಲಿದ ಕೆಂಪು ಪ್ರಕಾಶದಂತಿತ್ತು.
ಅಕಳಂಕಿತ ಶಂಖಗಳು, ನೂರಾರು ಧ್ವಜಗಳು, ಛತ್ರಗಳು ಹಾಗು ಅಂಧಕಾರವನ್ನೇ ಹೊತ್ತು ಹೊರಟ, ಶೌರ್ಯ-ವೀರ್ಯಗಳಿಂದ ವೈರಿಯನ್ನು ಸದೆಬಡೆದ ಇವನ ಆರು ವರ್ಗದ ಸೈನ್ಯದೊಡಗೂಡಿ, ಇವನ ಸಾರ್ವಭೌಮತ್ವವನ್ನು ಎದುರಿಸಿದ ಪಲ್ಲವರಾಜನು ಇವನ ಸೈನ್ಯದ ಧೂಳಿನಿಂದ ಮರೆಯಾಗಿ ಕಾಂಚೀಪುರದ ಭಿತ್ತಿಗಳ ಹಿಂದೆ ಕಾಣೆಯಾಗುವಂತೆ ಮಾಡಿದನು.
ಇವನು ಚೋಳರನ್ನು ಜೈಸಲು ಹೊರಟಾಗ, ವೇಗವಾಗಿ ಚಲಿಸುವ ಮೀನುಗಳನ್ನೇ ಕಣ್ಣುಗಳಾಗಿ ಉಳ್ಳ ಕಾವೇರಿಯ ಪ್ರವಾಹವು ಇವನ ಆನೆಯ ಅಕ್ಷೋಹಿಣಿಯಿಂದ ತಡೆಗಟ್ಟಲ್ಪಟ್ಟು ಸಮುದ್ರದೊಡನೆ ಸಂಪರ್ಕವನ್ನೇ ಕಳೆದುಕೊಂಡಿತು.
ಅಲ್ಲಿ ಚೋಳ, ಚೇರ, ಪಾಂಡ್ಯರನ್ನು ಸಮೃದ್ಧಗೊಳಿಸಿದರೂ, ತಪ್ತ ಕಿರಣಗಳುಳ್ಳ ದಿವಾಕರನಾಗಿ ಪಲ್ಲವರ ಸೈನ್ಯವನ್ನು ನಾಶಮಾಡಿದನು.
ಸತ್ಯಾಶ್ರಯನಾದ ಇವನು, ಶಕ್ತಿ, ಯುಕ್ತಿ, ನಿಪುಣತೆ ಹಾಗೂ ಹಿತವಚನಗಳ ಅದೃಷ್ಟ ಹೊಂದಿದ ಇವನು, ಸುತ್ತ-ಮುತ್ತಲಿನ ರಾಜ್ಯಗಳನ್ನು ಜೈಸಿ, ಅಲ್ಲಿಯ ಸಾಮಂತರನ್ನು ಸನ್ಮಾನ ಸಹಿತ ಕಳುಹಿಸಿ, ದೇವ ಬ್ರಾಹ್ಮಣರನ್ನು ಆದರಿಸಿ, ವಾತಾಪಿ ನಗರವನ್ನು ಸೇರಿ, ಅಂಬುಧಿಯನ್ನೇ ಕಂದಕವಾಗಿ ಹೊಂದಿದ ಭೂಮಿಯನ್ನು ಒಂದೇ ನಗರದಂತೆ ಆಳುತ್ತಿದ್ದಾನೆ.
ಈಗ ಮಹಾಭಾರತ ಯುದ್ಧಾನಂತರ ಮೂರು ಸಹಸ್ರ ಏಳು ಶತಕ ಮೂವತ್ತೈದು ಸಂವತ್ಸರಗಳು ಕಳೆದಿರಲು
ಮತ್ತು ಕಲಿಯುಗದಲ್ಲಿ ಶಕ ಚಕ್ರವರ್ತಿಗಳ ಐದು ಶತಕ ಐವತ್ತಾರು ವರ್ಷಗಳು ಕಳೆದಿರಲು
ಸಮಸ್ಥ ಉತ್ತಣಗತಗಳನ್ನು ಹೊಂದಿದ ಜಿನೇಂದ್ರನ ಈ ಶಿಲಾಗೃಹವು ಮೂರು ಸಾಗರಗಳನ್ನಾಳುವ ಸತ್ಯಾಶ್ರಯನ ಅನುಗ್ರಹಕ್ಕೆ ಪಾತ್ರನಾಗಿರುವ ಪಂಡಿತ ರವಿಕೀರ್ತಿಯಿಂದ ಕಟ್ಟಲ್ಪಡಲಾಗಿದೆ.
ಈ ಶಾಸನದ ಲಿಪಿಕಾರ ಹಾಗು ಮೂರು ಲೋಕದಲ್ಲಿ ಶ್ರೇಷ್ಠವಾದ ಜಿನೇಂದ್ರನ ಈ ಆಲಯದ ನಿರ್ಮಾಣಕಾರಿ ಪಂಡಿತ ರವಿಕೀರ್ತಿ
ವಿವೇಕದಿಂದ, ಶಿಲೆಗಳಿಂದ ಕಟ್ಟಲ್ಪಟ್ಟ ಜಿನೇಂದ್ರನ ಈ ಆಲಯವನ್ನು, ತಮ್ಮ ನವ ವಸ್ತು ಆಚರಣೆಗಾಗಿ ಸಂಯೋಜಿಸಿರುವ, ತಮ್ಮ ಕಾವ್ಯ ದಕ್ಷತೆಯಿಂದ ಕಾಳಿದಾಸ ಭಾರವಿಯರ ಸಮಾನ ಕೀರ್ತಿ ಹೊಂದಿರುವ ಆ ರವಿಕೀರ್ತಿಗೆ ಜಯವಾಗಲಿ
ಇಷ್ಟು ಓದಿ ನನಗೆ ಮತ್ತೊಮ್ಮೆ ನಾವು ಪುಲಿಕೇಶಿ ಅರಸನ ನಾಮ-ದಿನಾಂಕಗಳು ಬರುವ ಪೀಳಿಗೆಗಳಿಗೆ ತಿಳಿಯುವ ಹಾಗೆ ಮಾಡುವ ನಮ್ಮ ಧ್ಯೇಯದಲ್ಲಿ ಯಶಸ್ವಿಯಾದವೆಂದೆನಿಸಿತು. ದಿನವು ನಿಷೆಗೆ ತಿರುಗುತ್ತಿದ್ದಂತೆ ಸಮಾರಂಭವು ಮುಕ್ತಾಯವಾಯಿತು. ಅಂದು ಅಯ್ಯವೊಳೆಯಲ್ಲಿಯೇ ತಂಗಿದ್ದು, ಮಾರನೆಯ ದಿನ ಎದ್ದು ವಾತಾಪಿ ನಗರದ ದಿಕ್ಕಿನಲ್ಲಿ ಯಾಣ ಬೆಳೆಸಿ, ಪ್ರಸಂಗರಹಿತವಾಗಿ ರಾಜಧಾನಿಯನ್ನು ಸೇರಿದೆವು.
* * * * *
ವಾತಾಪಿ ಸೇರಿ ಕೆಲವೇ ದಿನಗಳಾಗಿದ್ದವು. ಮೊದಲೇ ಹೇಳಿದಂತೆ ರಾಯಭಾರಿ ಕೆಲಸಕ್ಕೆ ಶಿಕ್ಷಣ ಪಡೆಯುತ್ತಿದ್ದೆ. ಇನ್ನು ಕಾಯಕಾರ್ಥವಾಗಿ ನಾನು ಕಾಮರೂಪಕ್ಕೆ ಹೋಗುವ ಸಮಯವಾಗಿತ್ತು. ಮನೆಯಲ್ಲಿ ಮಾತಾಪಿತರಿಗೆ ನನಗೆ ವಿವಾಹ ಮಾಡಿ ಕಳುಹಿಸಬೇಕೆಂಬ ಆಶಯ. ಆದರೆ ಅದಕ್ಕವಕಾಶವಾಗಲಿಲ್ಲ. ಮಾತಾ-ಪಿತರನ್ನು ಬೀಳ್ಕೊಟ್ಟು ಅರಮನೆಗೆ ಹೊರಟೆ.
ಅರಮನೆಯಲ್ಲಿ ಮಂತ್ರಿಗಳು "ನೀನು ಕಲಿತಿರುವ ಗೂಢಚರ್ಯೆ ಹಾಗು ನೀನು ಮಾಡಿರುವ ವಿಶ್ಲೇಷಣೆ ಕೆಲಸಕ್ಕಿಂತ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಈ ಕೆಲಸದಲ್ಲಿ ನೀನು ಆ ದೇಶದಲ್ಲಿ ಅರಸನ ಪ್ರತಿನಿಧಿ ಎನ್ನುವುದನ್ನು ಯಾವಾಗಲೂ ಮರೆಯಬೇಡ. ಅಂತೆಯೇ ಅಲ್ಲಿಯ ಸುದ್ಧಿ-ಸಂದೇಶಗಳನ್ನು ಮೊದಲಿನಂತೆ ವಿಶ್ಲೇಷಿಸಿ ಬರುವ ಸಾರ್ಥ-ಪ್ರಯಾಣಿಕರೊಂದಿಗೆ ಕಳುಹಿಸಬೇಕು" ಎಂದು ಹೇಳಿ ಕಳುಹಿಸಿಲ್ಕೊಟ್ಟರು.
ನಾನು ಇಬ್ಬರು ಭಟರೊಡಗೂಡಿ ವಾತಾಪಿಯಿಂದ ಹೊರಟೆ. ಹಲವು ದಿನಗಳ ನಂತರ ಒಂದು ಸಾರ್ಥವನ್ನು ಹಿಡಿದು ಚೋಳ-ಆಂಧ್ರ ಮಾರ್ಗವಾಗಿ ಜಗನ್ನಾಥ ಪುರಿಯವರೆಗು ಹೋದೆ. ಅಲ್ಲಿಂದ ಮತ್ತೆ ಹೊರಟು ಕಳಿಂಗ-ವಂಗ ಮಾರ್ಗವಾಗಿ ಕಾಮರೂಪಕ್ಕೆ ನಾವಾಗಿಯೇ ಹೊರಟೆವು. ಕಳಿಂಗ ದಾಟಿ ವಂಗ ದೇಶಕ್ಕೆ ಬಂದಮೇಲೆ ನಾಲ್ಕಾರುದಿನಗಳ ಕಾಲ ಕೊಳಚೆ ಪ್ರದೇಶದಲ್ಲಿ ಹೋಗಬೇಕಾಯಿತು. ಆ ಕೊಳಚೆ ಪ್ರದೇಶದಲ್ಲಿ ನಾನು ಅಸ್ವಸ್ಥನಾಗಿ, ಹಲವಾರು ದಿನಗಳ ಕಾಲ ನರಳಿದ್ದಾಯಿತು. ಕೊಳಚೆಯ ನಂತರ ವಂಗದೇಶವನ್ನು ಬಿಟ್ಟು ಕಾಮರೂಪದ ಸೀಮೆ ಸೇರಿದೆವು. ಇದು ಪರ್ವತ ಪ್ರದೇಶವಾದ್ದರಿಂದ ಕೊಳಚೆಯಂತೆ ಪ್ರಯಾಣದ ಗತಿ ನಿಧಾನವಾಯಿತು. ಕೊಳಚೆ, ಗುಡ್ಡ ಕಾಡುಗಳಿಂದ ಹಾಯ್ದು ಕಡೆಗೊಮ್ಮೆ ಕಾಮರೂಪವನ್ನು ತಲುಪಿದೆ.
ಪೂರ್ವದಲ್ಲಿ ಈ ನಗರದ ಹೆಸರು ಪ್ರಾಜ್ಯೋತಿಶಪುರ - ಇದು ಕಿರಾತರ ರಾಜಧಾನಿಯಾಗಿತ್ತು. ಕಿರಾತರ ದೇಶ ಹಿಮಾಚಲದಿಂದ ಸಾಗರದವರೆಗೆಂದು ವರ್ಣಿಸಲಾಗಿದೆ. ದೇವತೆಗಳ ಸ್ಥಪತಿಯಾದ ವಿಶ್ವಕರ್ಮನೇ ಬಂದು ಪ್ರಾಜ್ಯೋತಿಶಪುರವನ್ನು ನರಕಾಸುರನಿಗಾಗಿ ಕಟ್ಟಿಕೊಟ್ಟನಂತೆ. ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ ನಂತರ ಅವನ ಪುತ್ರನಾದ ಭಗದತ್ತನು ತನ್ನ ಗಜೇಂದ್ರನೊಂದಿಗೆ ಮಹಾಭಾರತ ಯುದ್ಧದಲ್ಲಿ ಕೌರವರ ಪಡೆಯಲ್ಲಿ ಪಾಲ್ಗೊಂಡ ಕತೆಯನ್ನು ನಾನು ಗುರುಕುಲದಲ್ಲಿ ಕೇಳಿದ್ದೆ. ನಂತರ ಇದರ ಹೆಸರು ಕಾಮರೂಪವೆಂದು ಬದಲಾಯಿಸಲಾಯಿತು. ಕಲಿಕಾ ಪುರಾಣ ಹಾಗು ವಿಷ್ಣು ಪುರಾಣಗಳ ಪ್ರಕಾರ ಈ ದೇಶದ ಹೆಸರು ಕಾಮರೂಪವೆಂದೇ. ರಾಜಧಾನಿಯಲ್ಲಿರುವ ನೀಲಾಚಲ ಪರ್ವತದ ಮೇಲಿರುವ ಕಾಮಾಖ್ಯ ದೇವಾಲಯದಿಂದ ನಾಲ್ಕು ದಿಕ್ಕಿನಲ್ಲೂ ೪೫೦ ಕ್ರೋಶಗಳಷ್ಟು ದೂರದವರೆಗು ಇದರ ಸೀಮೆಯೆಂದು ಹೇಳಲಾಗಿದೆ. ಇಲ್ಲಿಯ ದೊರೆ ಭಾಸ್ಕರವರ್ಮನೆಂಬ ರಾಜನಾಗಿದ್ದ. ಈ ಭಾಸ್ಕರವರ್ಮನ ಆಸ್ಥಾನಕ್ಕೇ ನಾನು ರಾಯಭಾರಿಯಾಗಿ ಬಂದದ್ದು.
ನಾನು ಕಾಮರೂಪ ರಾಜನ ಆಸ್ಥಾನಕ್ಕೆ ಹೋಗಿ ಅರಸ ಪುಲಿಕೇಶಿ ಕೊಟ್ಟ ಓಲೆಯಾದಿ ಉಪಹಾರಗಳನ್ನು ಸಲ್ಲಿಸಿದೆ. ರಾಜನು ನನ್ನನ್ನು ಮಿತ್ರನಂತೆ ಸ್ವಾಗತಿಸಿ ನನಗಿರಲು ರಾಜಧಾನಿಯಲ್ಲಿ ಒಂದು ಗೃಹ ಹಾಗು ಬೇಕಾದ ಸೇವಕರ ಏರ್ಪಾಡು ಮಾಡಿಸಿದ. ಆ ವಿಚಾರದಲ್ಲಿ ನನಗಾವ ಯೋಚನೆಯೂ ಇರದಂತೆ ನೋಡಿಕೊಳ್ಳುತ್ತಿದ್ದ. ಭಾಸ್ಕರವರ್ಮನೂ ಅರಸ ಪುಲಿಕೇಶಿಯಂತೆಯೇ ಹರ್ಷರಾಜನ ವೈರಿಯಾಗಿದ್ದರಿಂದ ನಮ್ಮೆರಡೂ ರಾಜ್ಯಗಳಲ್ಲಿ ಮಿತ್ರತೆಯ ಭಾವವಿತ್ತು. ಹಾಗಾಗಿ ನನಗೆ ಹೆಚ್ಚು ಪ್ರಚ್ಛನ್ನ ಕಾರ್ಯಗಳನ್ನು ಮಾಡುವ ಅವಶ್ಯಕತೆಯಿರಲಿಲ್ಲ. ನಮ್ಮವರಿಗೆ ಕಿಂಚಿತ್ತಾದರೂ ಸಂಬಂಧಪಟ್ಟ ಈ ರಾಜ್ಯದ ಆಗುಹೋಗುಗಳನ್ನು ವರದಿ ಮಾಡಿ ಸಾರ್ಥ ಪ್ರಯಾಣಿಕರ ಮೂಲಕ ವಾತಾಪಿಗೆ ಕಳುಹಿಸುತ್ತಿದ್ದೆ.
ಹೀಗೆಯೇ ಹಲವಾರು ಮಾಸಗಳು ಉರುಳಿದವು. ಕಾಮರೂಪದ ಹವಾಮಾನ ಬಹು ಸುಖದಾಯಕವಾಗಿತ್ತು. ಸದಾ ತಂಪನೆ ತಾಪಮಾನ, ಚಳಿಗಾಲದಲ್ಲಿ ವಾತಾಪಿಗಿಂತ ಚಳಿ ಹೆಚ್ಚಾಗಿರುತ್ತಿತ್ತು. ಜನರು ಮೃದು ಹಾಗು ನಿಷ್ಠಾವಂತ ಸ್ವಭಾವದವರಾಗಿದ್ದರು. ಸ್ವಲ್ಪ ಕುಬ್ಜರೂಪಿಗಳಾಗಿ ಪೀತ ವರ್ಣವುಳ್ಳವರಾಗಿದ್ದರು; ಸಣ್ಣನೆಯ ಮೂಲೆಯಮೇಲೆ ನಿಂತಂತ ಕಣ್ಣುಗಳು ಹಾಗು ಕಾಣದಂತಹ ಹುಬ್ಬು-ರೆಪ್ಪಗಳನ್ನು ಹೊಂದಿದವರು. ಚೂದನಾ ಸ್ವಭಾವದವರು, ದೀರ್ಘ ಸ್ಮೃತಿಶಕ್ತಿ, ಹಾಗು ವಿದ್ಯಾಭ್ಯಾಸದಲ್ಲಿ ಕೌತುಕರು. ರಾಜನು ಪ್ರಜ್ಞಾ ಪ್ರೇಮಿ, ಹಾಗಾಗಿ ಯಥಾ ರಾಜ ತಥಾ ಪ್ರಜ ಎನ್ನುವಂತೆ ಪ್ರಜೆಗಳೂ ಜ್ಞಾನ ಪ್ರಿಯರು.
ದೀರ್ಘ ಮಳೆಗಾಲವುಉಳ್ಳ ನಾಡಿದು. ಇಲ್ಲಿಯ ಬ್ರಹ್ಮಪುತ್ರಾ ನದಿಯು ಪ್ರತಿ ವರ್ಷಕಾಲದಲ್ಲಿ ಉಕ್ಕಿ ಹೊಸ ಕಾಲುವೆಗಳಲ್ಲಿ ಹರಿದು ಹೋಗುತ್ತದೆ. ನೀರು ಕಡಿಮೆಯಾದಂತೆ ಮರಳು ದ್ವೀಪಗಳು ಕಾಣಿಸಿಕೊಳ್ಳುತ್ತವೆ. ಈ ದ್ವೀಪಗಳಲ್ಲಿ ನದಿಯ ಪೂರದಿಂದ ಬಂದ ಮಣ್ಣು ಸಮೃದ್ಧವಾಗಿದ್ದು ಇವು ಕೃಷಿಗೆ, ಜನರ ನೆಲೆಗೆ ಯೋಗ್ಯವಾಗಿರುತ್ತವೆ. ಮಳೆಗಾಲವಲ್ಲದೆ ವರ್ಷದಲ್ಲಿ ಎರಡು ಮಾಸಗಳ ಕಾಲ ಚಕ್ರವಾತದ ಶಕ್ಯವಿದ್ದು, ಇತರ ಮಾಸಗಳಲ್ಲೂ ವೃಷ್ಟಿಯ ಸಂಭಾವನೆ ಇರುತ್ತದೆ.
ಇಲ್ಲಿಯ ಮತ್ತೊಂದು ವಿಶಿಷ್ಟತೆ ಇಲ್ಲಿಯ ಅಗರು ಪರಿಮಳ. ನಮ್ಮ ನಾಡಿನ ಶ್ರೀಗಂಧಕ್ಕೆ ಸಮಾನ ಪರಿಮಳವುಳ್ಳ ಈ ವೃಕ್ಷವು ಅರ್ಘವೆನಿಸಿದೆ. ಇಲ್ಲಿಯ ರಾಜರ ಶಾಸನಗಳೆಲ್ಲ ಈ ಅಗರು ವೃಕ್ಷದ ಬಾಹ್ಯದಮೇಲೆ ಲಿಖಿಸಲಾಗುತ್ತಿತ್ತು. ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಳದಲ್ಲಿಯೂ ಈ ಅಗರುವಿನ ಉಲ್ಲೇಖವಿದೆ. ಇಲ್ಲಿದ್ದಾಗ ಉಪಹಾರವಾಗಿ ಅರಸನಿಂದ ಅಗರು ವೃಕ್ಷದ ಬಾಹ್ಯವನ್ನು ಪಡೆದಿದ್ದೆ. ಇದರ ಹಲವು ಕಾಷ್ಠಗಳನ್ನು ವಾತಾಪಿಗೂ ಕಳುಹಿಸಿದ್ದೆ.
ನನ್ನ ಕಾಮರೂಪದ ಅತೀ ಹತ್ತಿರದ ಬಂಧು ದೇವದತ್ತನೆಂಬ ಮಂತ್ರಿವರ್ಗದಲ್ಲಿ ಕಾರ್ಯ ಮಾಡುತ್ತಿದ್ದ ಒಬ್ಬ ಸಭಾಪತಿ. ದೇವದತ್ತನ ಮನೆ ನಾನಿದ್ದ ಮನೆಯ ಪಕ್ಕದಲ್ಲಿತ್ತು. ಇಬ್ಬರದ್ದೂ ಒಂದೇ ರೀತಿಯ ಮನಸ್ಸು, ಒಂದೇ ರುಚಿ, ಹಾಗಾಗಿ ನಮ್ಮ ಬಾಂಧವ್ಯ ದಿನ ದಿನಕ್ಕೂ ಹೆಚ್ಚಾಯಿತು. ಈ ದೇವದತ್ತನು ಕಾಮರೂಪದ ಪೂರ್ವಭಾಗದಿಂದ ಬಂದವನು. ಕಾಮರೂಪದ ಭಾಷೆಯೇ ಮಧ್ಯದೇಶಗಳ ಭಾಷೆಗಿಂತ ಭಿನ್ನವಾದದ್ದು. ಈ ದೇವದತ್ತನ ಮಾತೃಭಾಷೆಯಂತೂ ನಮ್ಮ ಅಥವ ಸಂಸ್ಕೃತ ಭಾಷೆಗೆ ಹೋಲಿಕೆಯಿಲ್ಲದಂತಹ ಭಾಷೆ. ದೇವದತ್ತನ ಸಂಸ್ಕೃತವೂ ಅಷ್ಟು ನಿಖರವಾಗಿರಲಿಲ್ಲ. ಕಾಲ ಕ್ರಮೇಣ ನಾನೇ ಅವನ ಭಾಷೆಯಲ್ಲಿ ಮಾತನಾಡುವುದನ್ನು ಕಲಿತುಕೊಂಡೆ. ಇದರಿಂದ ನಮ್ಮ ಮಿತ್ರತೆ ಇನ್ನೂ ಧೃಡವಾಯಿತು.
ಹರ್ಷಚಕ್ರವರ್ತಿಯು ಕ್ರಮೇಣ ಬೌದ್ಧ ಧರ್ಮದ ಕಡೆ ತಿರುಗುತ್ತಿರಲು ಹರ್ಷನ ರಾಜ್ಯದ ಬ್ರಾಹ್ಮಾಣರೆಲ್ಲ ಆ ರಾಜ್ಯವನ್ನು, ಧರ್ಮಭ್ರಷ್ಟ ರಾಜನನ್ನು ತ್ಯಜಿಸಿ ಕಾಮರೂಪಕ್ಕೆ ಆಗಮಿಸುತ್ತಿದ್ದರು. ಭಾಸ್ಕರವರ್ಮರಾಜನು ಈ ಶರಣಾರ್ಥರಿಗೆ ಮನ್ನಣೆಯಿತ್ತು ಅವರ ನೆಲೆಗೆ ಭೂದಾನ ಮಾಡುತ್ತಿದ್ದನು. ಬೌದ್ಧ ಧರ್ಮವೇ ಪ್ರಬಲವಾಗಿದ್ದ ಈ ಪ್ರದೇಶದಲ್ಲಿ ನಮ್ಮ ಧರ್ಮವನ್ನೆತ್ತಿ ಹಿಡಿಯುವವ ಇವನೊಬ್ಬ. ಇವನನ್ನು ಬಿಟ್ಟರೆ ಗೌಡ ರಾಜ ಶಶಾಂಕ.
ನಾನು ಹರ್ಷ ಚಕ್ರವರ್ತಿಯ ವಿಷಯವಾಗಿ ಈ ಗೌಡರಾಜ ಶಶಾಂಕನ ಬಗ್ಗೆ ಕೇಳಿದ್ದು ಕೇವಲ ದುಷ್ಕರ್ಮಗಳನ್ನು. ಈಗ ಗೌಡರಾಜ್ಯದ ಸಾಮೀಪ್ಯದಿಂದ ಶಶಾಂಕರಾಜನ ಹಲವಾರು ಸತ್ಯ ಸಂಗತಿಗಳು ತಿಳಿದವು. ಶಶಾಂಕನ ರಾಜ್ಯ ವಂಗದೇಶದಿಂದ ಭುವನೇಶದವರೆಗು ಹರಡಿತ್ತು. ಮಗಧವನ್ನು ಮೌಖಾರಿಗಳಿಂದ ಬಿಡಿಸಲೆಂದು ಇವನು ಹರ್ಷನ ಶ್ಯಾಲನಾದ ಗೃಹವರ್ಮನ ಮೇಲೆ ಯುದ್ಧಕ್ಕೆ ಹೋದದ್ದು. ಆ ಕತೆ ಆಗಲೇ ಹೇಳಿದ್ದೇನೆ. ಆದರೆ ರಾಜ್ಯವರ್ಧನನ ವಿಷಯದಲ್ಲಿ ನಾನು ಕೇಳಿದ್ದ ಕತೆ ಮಿತ್ಯಾಸೆಯೆಂದು ಈಗ ಅರ್ಥವಾಯಿತು. ರಾಜ್ಯವರ್ಧನನು ಮಾಳವ ರಾಜ ದೇವಗುಪ್ತನನ್ನು ಸುಲಭವಾಗಿ ಸೋಲಿಸಿದರೂ, ಶಶಾಂಕನನ್ನು ಪರಾಜಯಗೊಳಿಸಲಾಗಲಿಲ್ಲ. ಹಾಗಾಗಿ ಅವನು ಶಶಾಂಕನೊಡನೆ ಸಂಧಾನಕ್ಕೆಂದು ಶಶಾಂಕನ ನಿಮಂತ್ರಣ ಸ್ವೀಕರಿಸಿದನು. ರಾಜ್ಯವರ್ಧನನ ನಿಷ್ಠುರತೆಯಿಂದ ಈ ಸಂಧಾನವು ಮಧ್ಯದಲ್ಲಿಯೇ ಮುರಿದುಹೋಗಿ, ಮತ್ತೆ ಯುದ್ಧ ಆರಂಭವಾಗಿ ಆಗ ಶಶಾಂಕನು ರಾಜ್ಯವರ್ಧನನ ಸಂಹಾರ ಮಾಡಿದ್ದು ಸತ್ಯ ಸಂಗತಿಯೆಂದು ನನಗೆ ತಿಳಿದುಬಂತು. ಶಶಾಂಕನನ್ನು ಖಳನನ್ನಾಗಿಸಿ ಪ್ರಚಾರ ಮಾಡಿಸಿದ್ದು ಹರ್ಷ ಚಕ್ರವರ್ತಿಯ ಕುತಂತ್ರವೆಂದೂ ಅರ್ಥವಾಯಿತು.
ಶಶಾಂಕನಿಗೆ ತಕ್ಕ ಶಾಸ್ತಿ ಮಾಡಲೆಂದು ಹರ್ಷಚಕ್ರವರ್ತಿಯು ಭಾಸ್ಕರವರ್ಮನೊಡನೆ ಸಂಧಾನ ಮಾಡಿಕೊಂಡರೂ, ಭಾಸ್ಕರವರ್ಮ-ಶಶಾಂಕರ ಮಿತ್ರತೆಯ ಕಾರಣ ಶಶಾಂಕನ ಸಂಹಾರ ಸಾಧ್ಯವಾಗಿರಲಿಲ್ಲವೆಂಬುದು ನನಗೆ ಗೂಢಚರ್ಯೆ ಸಂಪರ್ಕಗಳಿಂದ ತಿಳಿದುಬಂತು. ಸತ್ಯ ಸಂಗತಿ ತಿಳಿಯುವ ಮುನ್ನ ನಾನೂ ನನಗೆ ಹಿಂದೆ ತಿಳಿದಿದ್ದ ವಿಚಾರಗಳಿಂದ ಶಶಾಂಕರಾಜನನ್ನು ಖಳನೆಂದು ಭಾವಿಸುತ್ತಿದ್ದೆ. ಪ್ರಚಾರದಿಂದ ಜನಸಾಮಾನ್ಯರ ಮತಾಭಿಪ್ರಾಯ ನಿಯಂತ್ರಿಸುವುದು ಎಷ್ಟು ಸುಲಭದ ಕಾರ್ಯವೆಂದು ನನಗೀಗ ಅರ್ಥವಾಯಿತು. ವರುಣಾಚಾರ್ಯರೂ ನನ್ನ ಗೂಢಚರ್ಯೆ ಶಿಕ್ಷಣದಲ್ಲಿ ಈ ವಿಷಯವಾಗಿ ಹೇಳಿಕೊಟ್ಟ ಪಾಠ ಈಗ ಮನದಟ್ಟಾಯಿತು.
ಇನ್ನೂ ಹಲವು ಮಾಸಗಳುರುಳಿದವು. ನಾನು ಪುಲಿಕೇಶಿ ಅರಸನ ಬೇಟೆ ತಪ್ಪಿಸಿ ಅವನ ಸೆರೆ ಸಿಕ್ಕಿ ಸುಮಾರು ಐದು ವರ್ಷಗಳಗಿದ್ದವು. ಕಾಮರೂಪದ ಸ್ಥಿರ ಹಾಗು ಸುರಕ್ಷಿತ ಜೀವನ ನನಗೆ ಬೇಸರವಾಯಿತು. ಇನ್ನಷ್ಟು ದೇಶಗಳನ್ನು ನೋಡಬೇಕೆಂಬ ಆಸೆ ಹೆಚ್ಚಾಯಿತು. ಕಾಮರೂಪದಲ್ಲಿ ನನ್ನ ಕಾಲ ಮುಗಿಯಿತು. ನಾನು ವಾತಾಪಿಗೆ ನನ್ನ ಇಚ್ಛೆಯಬಗ್ಗೆ ಓಲೆ ಕಳುಹಿಸಿದೆ. ಮಹಾಮಂತ್ರಿಗಳಿಂದ ಉತ್ತರ ಬಂದೊಡನೆಯೇ ಕಾಮರೂಪ ಬಿಟ್ಟು ಹೊರಡಲು ಸಿದ್ಧನಾದೆ.
ರಾಜ ಭಾಸ್ಕರವರ್ಮನು ನನ್ನನ್ನು ರಾಜ್ಯದಕಡೆಯಿಂದ ಆದರಪೂರ್ವಕವಾಗಿ ಬೀಳ್ಕೊಟ್ಟ. ಕಾಮರೂಪದಲ್ಲಿ ನಾನು ಬೆಳೆಸಿಕೊಂಡಿದ್ದ ಮಿತ್ರವರ್ಗದವರೂ ನನ್ನನ್ನು ಸೌಹಾರ್ಧತೆಯಿಂದ ಬೀಳ್ಕೊಟ್ಟರು. ನನ್ನ ಮನೆಯ ಸೇವಕರಿಗೆ ಪಾರಿತೋಷಿಕವನ್ನು ಕೊಟ್ಟು ನಾನು ಹೊರಡಲು ಸಿದ್ಧನಾದೆ.
ದೇವದತ್ತನು ಬೇಸರದಿಂದಾದರೂ "ಸೂರ್ಯ, ನೀನು ಹೊರಡುವೆಯೆಂದರೆ ನನಗೆ ಬಹು ಬೇಸರ. ನಾವಿಬ್ಬರೂ ಒಮ್ಮನಸ್ಸಿನವರು. ಒಂದೇ ರುಚಿ ಹೊಂದಿದವರು. ಆದರೆ ನೀನು ನಿನ್ನ ಆಕಾಂಕ್ಷೆಯಂತೆ ದೇಶಯಾಣ ಹೊರಟಿರುವೆ. ಹೋಗಿ ಬಾ. ನಿನ್ನ ಈ ಬಂಧುವನ್ನು ಮರೆಯಬೇಡ. ಎಂದಾದರೂ ಕಾಮರೂಪಕ್ಕೆ ಹಿಂತಿರುಗಿದರೆ ಈ ಬಂಧುವನ್ನು ಕಾಣುವುದು ಮರೆಯಬೇಡ" ಎಂದು ಹೇಳಿದ.
ಆರ್ದ್ರಾಕ್ಷಿಗಳಿಂದ ನಾನೂ "ದೇವದತ್ತ, ನೀನು ನನಗೆ ಅತ್ಯಂತ ಆಪ್ತ. ನನಗೆ ಮಿತ್ರರೇ ವಿರಳ, ಆದರೆ ನೀನು ಆ ಸಣ್ಣ ವೃಂದದಲ್ಲಿ ನನಗೆ ಅತೀ ಹತ್ತಿರನಾದವನು. ನಿನ್ನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಂದಾದರೂ ನಮ್ಮ ಪಥಗಳು ತರಣೆ ಹೊಂದುತ್ತವೆ. ಮತ್ತೆ ಸಿಗೋಣ ಮಿತ್ರ" ಎಂದು ಹೇಳಿ ಹೊರಟೆ. ಸಾರ್ಥವೊಂದರ ಜೊತೆಗೆ ಹೊರಟು ಗೌಡ, ಅಂಗ, ಮಗಧ, ವತ್ಸ, ಚೇಡಿ ದೇಶಗಳನ್ನು ಹಾಯ್ದು, ಇಂದ್ರಪ್ರಸ್ಥ, ಕುರುಕ್ಷೇತ್ರಗಳನ್ನು ನೋಡಿ, ಸ್ಥಾನೇಶ್ವರ ಮಾರ್ಗವಾಗಿ ಜಾಲಂಧರಕ್ಕೆ ಹೋಗಿ ಸೇರಿದೆ.
* * * * *
ನಾನು ಕೂಡಿ ಬಂದ ಸಾರ್ಥವು ವ್ಯಾಪಾರಕ್ಕೆಂದು ಹೊರನಾಡುಗಳಿಗೆ ಹೊರಟಿತ್ತು. ನನಗೆ ಸಿಂಧೂ ನದಿಯನ್ನು ದಾಟಿ ಹೋಗುವ ಇಚ್ಛೆ ಇರಲಿಲ್ಲ. ಹಾಗಾಗಿ ಸಾರ್ಥ ಮುನ್ನಡೆದಂತೆ ಜಾಲಂಧರದಲ್ಲೇ ಉಳಿದುಕೊಂಡೆ.
ಜಾಲಂಧರ - ಐದು ನದಿಗಳ ದೇಶ. ಜಾಲಂಧರ ರಾಜಧಾನಿಯ ಸುತ್ತಳತೆ ಸುಮಾರು ೬-೭ ಕ್ರೋಶಗಳಿದ್ದಿರಬಹುದು. ಕಾಳು, ಬೇಳೆ, ಬಹು ಮುಖ್ಯವಾಗಿ ಭತ್ತ ಬೆಳೆಯಲು ಬಹು ಅನುಕೂಲವಾದ ನೆಲ. ಸುತ್ತ ದಟ್ಟ ಕಾಡು-ಮೇಡುಗಳು, ಹೂವು ಹಣ್ಣುಗಳಿಗೆ ಕೊರತೆಯೇ ಇಲ್ಲ. ಇಲ್ಲಿಯ ವಾತಾವರಣ ಶೈತ್ಯಮಯವಾಗಿದ್ದು ಜನರು ಧೀರರೆನಿಸಿದರೂ, ಸ್ವಲ್ಪ ತಾಳ್ಮೆಗೆಟ್ಟವರು. ವೈದಿಕ ಧರ್ಮದ ಅನುಯಾಯಿಗಳು ಇಲ್ಲಿ ಸ್ವಲ್ಪ ಕಡಿಮೆಯೇ ಇದ್ದರು. ಶಂಕರನೇ ಇವರ ಆರಾಧ್ಯ ದೇವ. ಬುದ್ಧನನ್ನನುಸರಿಸುವವರು ಹೆಚ್ಚಾಗಿದ್ದರು. ಕೇವಲ ಮೂರು ದೇವಾಲಯಗಳಿದ್ದರೂ ಐವತ್ತಕ್ಕೂ ಹೆಚ್ಚು ವಿಹಾರಗಳಿದ್ದವು.
ನಾನು ದೂರದ ದೇಶದಿಂದ ಬಂದ ಪ್ರಯಾಣಿಕನೆಂದು ಹೇಳಿಕೊಂಡು ನದಿಯ ತೀರದಲ್ಲಿದ್ದ ಶಂಕರನ ದೇವಾಲಯದಲ್ಲಿ ತಂಗಿದೆ. ಊಟಕ್ಕೆ ತೊಂದರೆ ಇರಲಿಲ್ಲ. ಸ್ನಾನ ಸಂಧ್ಯಾವನಾದಿಗಳಿಗೂ ಆಪತ್ತು ಇರಲಿಲ್ಲ. ಬಂದು ನಾಲ್ಕೈದು ದಿನಗಳಾಗಿದ್ದವು. ನದಿಯ ತೀರದಲ್ಲಿ ಸಂಧ್ಯಾವಂದನೆ ಮುಗಿಸಿ ಬಂಡೆಗಳ ಮೇಲೆ ಕುಳಿತು ಜಪದಲ್ಲಿ ತೊಡಗಿದ್ದೆ. ಯಾರೋ ಪ್ರಾಣವೇ ಹೋದಂತೆ ಅರಚಾಡುತ್ತಿರುವುದು ಕೇಳಿಸಿತು. ನನ್ನ ಜಪವು ಕದಳಿ, ತಿರುಗಿ ನೋಡಿದೆ.
ವಿಚಿತ್ರ ವಸ್ತ್ರಧಾರಿಯೆಂಬುದನ್ನು ಗುರುತಿಸಿದ್ದಷ್ಟೆ. ಪಾಪ ಆತನು ನಡೆದು ಹೋಗುವಾಗ ನೋಡದೆ ನಾಗಪ್ಪವೊಂದನ್ನು ತುಳಿದಂತಿತ್ತು. ಈಗ ನಾಗಪ್ಪ ಕೋಪದಿಂದ ಹೆಡೆ ಎತ್ತಿ ಅವನನ್ನು ಕುಕ್ಕುವುದರಲ್ಲಿತ್ತು. ಅವನಿನ್ನೂ ಕೂಗಾಡುತ್ತಲೇ ಇದ್ದ - ಓಡಿಹೋಗಲೂ ಯತ್ನಿಸುತ್ತಿರಲಿಲ್ಲ, ನಾಗಪ್ಪನನ್ನು ಹೊಡೆಯಲೂ ಯತ್ನಿಸುತ್ತಿರಲಿಲ್ಲ.
"ಓಡು ಓಡು" ಎಂದು ಮೊದಲು ಕೂಗಿದೆ, ನಂತರ ನಾನಿರುವ ಸ್ಥಳ ನೆನಪಿಸಿಕೊಂಡು ಸಂಸ್ಕೃತಲ್ಲಿ ಹೇಳಿದೆ. ನನ್ನ ಕೂಗು ಅವನ ಮೇಲೆ ಯಾವ ಪರಿಣಾಮವನ್ನೂ ಬೀರಿದಂತೆ ಕಾಣಲಿಲ್ಲ. ನನಗೆ ಅಲ್ಲಿಯ ಭಾಶೆ ಗೊತ್ತಿರಲಿಲ್ಲ. ಅವನು ಸನ್ನೆಗಳನ್ನು ನೋಡುವ ಸ್ಥಿತಿಯಲ್ಲಿರಲಿಲ್ಲ. ನಿಧಾನವಾಗಿ ಅವನಬಳಿ ಹೋದೆ. ನನಗೂ ಅಂಜಿಕೆ, ಹಿಂಜರಿತ. ಏನು ಮಾಡುವುದೆಂದು ಗೊತ್ತಿರಲಿಲ್ಲ. ಒಂದು ಬಡಿಗೆಯಿಂದ ನಾಗಪ್ಪನನ್ನು ದೂರತಳ್ಳುವೆ ಎಂದು ನಿರ್ಧರಿಸಿ ಬಡಿಗೆಗೆ ಅತ್ತಿತ್ತ ನೋಡಿದೆ. ಅಷ್ಟರೊಳಗೆ ನಾಗಪ್ಪ ಅವನನ್ನೊಮ್ಮೆ ಕುಕ್ಕಿ ಹರಿದು ಹೋಯಿತು.
ನಾನು ಅವನ ಹತ್ತಿರ ಹೋಗಿ ಬಿದ್ದಿದ್ದ ಅವನನ್ನು ಎತ್ತಲು ಪ್ರಯತ್ನಿಸಿದೆ. ಅವನು ನನಗೇನೋ ಅರ್ಥವಾಗದ ಭಾಷೆಯಲ್ಲಿ ಗೊಣಗಿದೆ. ನಂತರ ಭಯದಿಂದಲೇ ಮೂರ್ಛೆ ಬಿದ್ದ. ನನಗಾದರೋ ಏನು ಮಾಡುವುದು ತಿಳಿಯದು. ಸರಿ, ಬೇಗನೆ ಹೋಗಿ ದೇವಾಲಯದಿಂದ ಒಂದಿಬ್ಬರನ್ನು ಕರೆತಂದು ಒಟ್ಟಿಗೆ ಅವನನ್ನೆತ್ತಿಕೊಂಡು ಹೋಗಿ ಮಂದಿರದ ಜಗಲಿಯ ಮೇಲೆ ಮಲಗಿಸಿದೆವು. ಗುರುಕುಲದಲ್ಲಿ ಸರ್ಪ ಕಡಿತಕ್ಕೆ ಮಾಡಲು ಕಲಿತ ಸುಶ್ರೂಶೆಯನ್ನು ಸ್ಮರಿಸಿದೆ. ಬೇಗನೆ ಒಂದು ಸಣ್ಣ ಬಟ್ಟೆಯ ತುಂಡನ್ನು ಹರಿದು ಅವನ ಕಾಲಿಗೆ, ನಾಗಪ್ಪನ ಹಲ್ಲಿನ ಗುರುತಿನ ಮೇಲುಭಾಗಕ್ಕೆ, ಭಿಗಿಯಾಗಿ ಕಟ್ಟಿದೆ. ಒಂದು ಲೋಹದ ಕಡ್ಡಿ ಅದರಲ್ಲಿ ಸೇರಿಸಿ ರಕ್ತ ಹರಿಯದಂತೆ ಭದ್ರಪಡಿಸಿದೆ. ವೈದ್ಯರಿಗಾಗಿ ಯಾರೋ ಹೇಳಿ ಕಳುಹಿಸಿದರು. ವೈದ್ಯರು ಬಂದು ಉಪಚಾರ ಮಾಡಿದ ನಂತರ ಜೀವಭಯವಿಲ್ಲವೆಂದರು. ಅದಕ್ಕೆ ಪ್ರತಿಯಾಗಿ ಅವನೂ ನಿದ್ದೆಯಲ್ಲೇ ಏನನ್ನೋ ಗೊಣಗಿದನು. ನಮ್ಮೆಲ್ಲರಿಗೆ ಸ್ವಲ್ಪ ನೆಮ್ಮದಿಯಾಯಿತು.
ಈಗ ನನಗೆ ಅವನನ್ನು ನೋಡುವ ವ್ಯವಧಾನವಾಯಿತು. ವಿಚಿತ್ರ ವಸ್ತ್ರಧಾರಿಯೆಂದು ಆಗಲೇ ಹೇಳಿರುವೆ. ಅವನ ಮೈಮೇಲಿದ್ದದ್ದು ಒಂದೇ ವಸ್ತ್ರ. ಕುಂಚಕವೂ ಅಲ್ಲ, ಕಚ್ಚೆಯೂ ಅಲ್ಲ. ಎರಡೂ ಕೂಡಿದಂತೆ ಕಂದು ವರ್ಣದ ಒಂದೇ ವಸ್ತ್ರ. ಪೀತವರ್ಣದ ಕಾಯ ಹೊಂದಿದ್ದ ಇವನ ತಲೆಯ ಮೇಲೆ ಒಂದು ಕೂದಲೂ ಇರಲಿಲ್ಲ. ಉದ್ದನೆಯ ಮೀಸೆ, ಗಡ್ಡವಿರಲಿಲ್ಲ. ಹುಬ್ಬು ರೆಪ್ಪೆಗಳು ಕಾಣದಂತಿದ್ದವು. ಕಣ್ಣುಗಳು ಮುಖದ ಆಕಾರಕ್ಕೆ ಹೋಲಿಸಿದರೆ ಅತೀ ಸಣ್ಣವೆನಿಸುವಂಥವು. ಅವೂ ಮುಖಕ್ಕೆ ಕೋಣದೆ ಮೇಲೆ ನಿಂತಂತೆ ಕಾಣಿಸುತ್ತಿದ್ದವು. ಸರ್ಪ ಅವನನ್ನು ಕಡಿದ ಸಮಯ ಸ್ಮರಿಸಿದಾಗ ಅವನ ಕೈಯಲ್ಲೇನೋ ಇದ್ದಂತೆ ನೆನಪಾಯಿತು. ಕೂಡಲೆ ಆ ಸ್ಥಳಕ್ಕೆ ಹೋಗಿ ಅಲ್ಲಿ ಬಿದ್ದಿದ್ದ ಅವನ ಛತ್ರಿ-ಚೀಲಗಳನ್ನು ತಂದು ಅವನ ಬಳಿ ಇರಿಸಿದೆ.
ಸ್ವಲ್ಪ ಹೊತ್ತಿನ ಬಳಿಕ ಅವನಿಗೆ ಎಚ್ಚರವಾಯಿತು. ಅಚ್ಚರಿಯಿಂದ ಏನೇನೊ ಗೊಣಗ ತೊಡಗಿದ. ನಾನೂ ನೋಡುತ್ತಲೇ ಇದ್ದೆ. ನಿಧಾನವಾಗಿ ಅವನಿಗೆ ನಡೆದ ಸಂಗತಿಗಳು ನೆನಪಿಗೆ ಬಂದಿರಬೇಕು. ಬೆರಗನ್ನು ಬಿಟ್ಟು ಒಂದು ನಿಮಿಷ ಸುಮ್ಮನಿದ್ದ. ನಂತರ ಮೇಲೆ ನೋಡುತ್ತ ಧನ್ಯ ವಾದಗಳನ್ನು ಹೇಳಿದಂತೆ ತೋರಿತು. ಬಳಿಕ ನನ್ನ ಮುಂದೆ ಬಂದು ನಿಂತು ಏನೇನೋ ಗೊಣಗುತ್ತ ಸೊಂಟದಿಂದ ಮೇಲಿನ ಭಾಗವನ್ನು ಮತ್ತೆ ಮತ್ತೆ ಬಾಗ ತೊಡಗಿದ. ನನಗೇನು ಅರ್ಥವಾಗಲಿಲ್ಲ. ಮೊದಲು ಸಂಸ್ಕೃತದಲ್ಲಿ ಹೇಳಿದೆ, ಅವನಿಗೆ ಅರ್ಥವಾಗಲಿಲ್ಲ. ನಂತರ ನನಗೆ ಬಂದಷ್ಟು ಇಲ್ಲಿಯ ಪ್ರಾಕೃತದಲ್ಲಿ ಹೇಳಿದೆ, ಆದರೆ ಅದೂ ಅವನಿಗೆ ಅರ್ಥವಾದಂತೆ ತೋರಲಿಲ್ಲ. ಹೋಗಲಿ ಎಂದು ಕನ್ನಡದಲ್ಲೇ ಮಾತನಾಡಿದೆ - ನನ್ನ ಮುಖ ಹಾಗು ಛಾವಣಿಯನ್ನು ಬಾರಿ ಬಾರಿಯಾಗಿ ನೋಡ ತೊಡಗಿದ. ಒಂದೇ ಪದವನ್ನು ಬೇರೆ ಬೇರೆ ರೀತಿಗಳಲ್ಲಿ ಹೇಳಲಾರಂಭಿಸಿದ.
ನನಗೆ ಕಡೆಗೆ ನನ್ನ ಮಿತ್ರ ದೇವದತ್ತ ನೆನಪಿಗೆ ಬಂದ. ಇವನು ಹೇಳುತ್ತಿದ್ದದ್ದು ಏಕೋ ಏನೋ ಅವನು ಮಾತನಾಡುತ್ತಿದ್ದಂತೆ ಕೇಳಿಸಿತು. ಹಾಗಾಗಿ, ನಾನು ಕಾಮರೂಪದಲ್ಲಿ ಕಲಿತಿದ್ದ ದೇವದತ್ತನ ಭಾಷೆಯಲ್ಲಿ "ಪರವಾಗಿಲ್ಲ" ಎಂದೆ. ಆಗ ಅವನಿ ಮುಖದಲ್ಲಿ ಜ್ಯೋತಿ ಪ್ರಕಾಶ ಹೊಳೆದಂತಾಯಿತು.
"ಧನ್ಯವಾದ, ನನ್ನ ಜೀವವನ್ನು ಉಳಿಸಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು, ನೀವಿಲ್ಲದಿದ್ದರೆ ನಾನು ಇಂದು ಆ ತಥಾಗಥನ ಬಳಿ ಹೋಗಿರುತ್ತಿದ್ದೆ" ಎಂದು ದೇವದತ್ತನ ಆ ಪೂರ್ವದೇಶದ ಭಾಷೆಯಲ್ಲಿ ಹೇಳಿದ.
ನಾನು ಅದಕ್ಕೆ ಪ್ರತಿಯಾಗಿ "ನಾನು ಉಳಿಸಲಿಲ್ಲ, ವೈದ್ಯರು ಉಳಿಸಿದರು. ಈಗ ಹೇಗಿದ್ದೀರ?" ಎಂದೆ
"ವೈದ್ಯರನ್ನು ಕರೆತಂದಿದ್ದು ನೀವೇ ಅಲ್ಲವೆ? ಹಾಗಾಗಿ ನೀವೇ ನನ್ನನ್ನು ಉಳಿಸಿದಂತಾಯಿತು" ಎಂದು ಹೇಳಿದ
ಒಂದು ಕ್ಷಣ ಬಿಟ್ಟು ಮತ್ತೆ ಏನೋ ಗೊಣಗುತ್ತ ಕಳವಳದಲ್ಲಿ ಅತ್ತಿತ್ತ ನೋಡ ತೊಡಗಿದ. ಅವನ ಕಣ್ಣು ನಾನು ತಂದಿಟ್ಟ ಅವನ ಛತ್ರಿ-ಚೀಲಗಳ ಮೇಲೆ ಬಿತ್ತು. ಹರ್ಷದ ಕೂಗಿನೊಡನೆ ಅದರ ಮೇಲೆ ಬಿದ್ದು ಅದನ್ನು ತೆಗೆದು ನೋಡಿದ. ಮತ್ತೆ ಬಂದು ನನ್ನ ಕೈ ಹಿಡಿದು ಮತ್ತೇನೋ ಅರ್ಥವಾಗದನ್ನು ಹೇಳಿದ.
"ನೀವು ಯಾರು? ಎಲ್ಲಿಂದ ಬಂದಿದ್ದೀರಿ? ನಿಮ್ಮನ್ನು ನೋಡಿದರೆ ಇಲ್ಲಿಯವರಂತೆ ಕಾಣಿಸುತ್ತಿಲ್ಲ. ಆ ಚೀಲದಲ್ಲಿ ಅಷ್ಟು ಅಮೂಲ್ಯವಾದದ್ದೇನಿದೆ?" ಎಂದು ಕೇಳಿದೆ.
"ಈ ಚೀಲದಲ್ಲಿ ನನ್ನ ಪ್ರಾಣವೇ ಇದೆ. ನಾನು ಪ್ರಯಾಣದಲ್ಲಿ ಸಂಗ್ರಹಿಸಿದ ಗ್ರಂಥಗಳೆಲ್ಲ ಇದರಲ್ಲಿಯೇ ಇರುವುದು. ಇದನ್ನೂ ಉಳಿಸಿದ್ದಕ್ಕೆ ಮತ್ತೆ ಕೃತಜ್ಞತೆಗಳು. ಅಂದಹಾಗೆ ನಿಮ್ಮ ಹೆಸರೇನು? ನೀವು ಎಲ್ಲಿಯವರು?" ಎಂದ
ನನ್ನ ಗೂಢಚರ್ಯದ ಶಿಕ್ಷಣೆ ಕಳೆದುಕೊಂಡಿರಲಿಲ್ಲ. ಅವನು ಏನನ್ನೂ ಹೇಳದೆ ನಾನು ನನ್ನ ಸಮಾಚಾರವನ್ನು ಕೊಡುವವನಾಗಿರಲಿಲ್ಲ. "ನಾನು ದಕ್ಷಿಣದವನು, ನೀವು? ನಿಮ್ಮ ಹೆಸರೇನು? ಎಲ್ಲಿಂದ ಬಂದಿದ್ದೀರಿ?" ಎಂದು ಮತ್ತೆ ಕೇಳಿದೆ.
ಅವನಿಗೆ ಆ ಕುಟಿಲ ಅರ್ಥವಾದಂತೆ ಕಾಣಲಿಲ್ಲ. "ನಾನು ಪೂರ್ವದಲ್ಲಿರುವ ಮಹಾಚೀನ ದೇಶದವನು. ಬೌದ್ಧ ಧರ್ಮವನ್ನು ಕಲಿಯಲು, ಆಚರಿಸಲು ಆ ತಾಥಗಥನ ಪುಣ್ಯ ಕ್ಷೇತ್ರಗಳನ್ನು ನೋಡಲೆಂದು ನಿಮ್ಮ ದೇಶಕ್ಕೆ ಆಗಮಿಸಿದ್ದೇನೆ. ನನ್ನ ಹೆಸರು ವೇನ್ ಸಾಂಗ್" ಎಂದ.
ನನಗೆ ಹೆಸರು ಸರಿಯಾಗಿ ಕೇಳಿಸಲಿಲ್ಲವೆಂದುಕೊಂಡು "ಏನು" ಎಂದೆ
"ಪೂರ್ವ..." ಎಂದು ಮತ್ತೆ ಆರಂಭಿಸಿದ
"ಅಲ್ಲ ಅಲ್ಲ, ನಿಮ್ಮ ಹೆಸರು" ಎಂದೆ
"ವೇನ್ ಸಾಂಗ್" ಎಂದ
"ಇದೆಂಥ ಹೆಸರು" ಎಂದು ಮನಸ್ಸಿನಲ್ಲೇ ಅಂದುಕೊಂಡು "ನನ್ನ ಹೆಸರು ಶರ್ಮ - ಸೂರ್ಯ ಶರ್ಮ" ಎಂದೆ.
ನಂತರ ಅವನು ಮೊದಲ ಬಾರಿ ನನ್ನ ವೀಭೂತಿ, ಜನಿವಾರಗಳನ್ನು ಗಮನಿಸಿದನೆಂದು ಕಾಣುತ್ತದೆ. ಅವನ ಮುಖದ ಖಳೆ ಸ್ವಲ್ಪ ಕುಂದಿತು. "ನೀವು ಬ್ರಾಹ್ಮಣ ಧರ್ಮದವರೇ?" ಎಂದ
"ಹೌದು" ಎಂದು ನನ್ನ ಜನಿವಾರವನ್ನು ತೋರಿಸಿದೆ
"ತಥಾಗಥನ ಧರ್ಮವನ್ನೇಕೆ ಅನುಸರಿಸಬಾರದು..." ಎಂದು ಆರಂಭಿಸಿದ
ನಾನು ವಾತಾಪಿಯನ್ನು ಬಿಟ್ಟಾಗಿನಿಂದ ಹಲವಾರು ಬಾರಿ ಇದನ್ನು ಕೇಳಿದ್ದೆ. ಮತ್ತೆ ಕೇಳುವ ತಾಳ್ಮೆ ಇರಲಿಲ್ಲ. "ಇಲ್ಲ ನಾನು ನನ್ನ ಧರ್ಮದಲ್ಲಿ ಸಂತುಷ್ಟನಾಗಿದ್ದೇನೆ. ಧರ್ಮ ಬದಲಾವಣೆಯ ಇಚ್ಛೆ ನನಗಿಲ್ಲ" ಎಂದೆ.
"ನೀವು ಬ್ರಾಹ್ಮಣರಾದರೂ ನನ್ನ ಜೀವನವನ್ನು ಉಳಿಸಿದಿರಿ. ಪುನರ್ಜನ್ಮ ಕೊಟ್ಟ ತಂದೆಯಿದ್ದಂತೆ. ನಾನು ನಿಮ್ಮ ಮೇಲೆ ಇದೊಂದು ಕಾರಣಕ್ಕೆ ಕೋಪಗೊಳ್ಳಲಾರೆ. ನನ್ನನ್ನು ಮಿತ್ರನೆಂದು ಕಾಣುವಿರ?" ಎಂದು ಕೇಳಿದ
"ನೀವು ಧರ್ಮದ ಬಗ್ಗೆ ಮಾತನಾಡುವುದಿಲ್ಲವಾದರೆ ನಾನು ಸಿದ್ಧ" ಎಂದೆ
"ಆಯಿತು ಮಾತನಾಡುವುದಿಲ್ಲ.... ಮಿತ್ರ" ಸ್ವಲ್ಪ ಕುಂದಿದ ಉತ್ಸಾಹದಿಂದ ಹೇಳಿದ.
* * * * *
ಕೆಲವೇ ದಿನಗಳಲ್ಲಿ ನಾಮ್ಮಿಬರ ಸ್ನೇಹ ಹೆಚ್ಚಾಯಿತು. ಕಾಲ ಕಳೆದಂತೆ ನನ್ನ ಹೊಸ ಮಿತ್ರ ತನ್ನ ಕತೆಯನ್ನು ದೀರ್ಘವಾಗಿ ಹೇಳಿದ. ಅವನ ದೇಶ ಜಂಬೂದ್ವೀಪದ ಪೂರ್ವಕ್ಕೆ ನೇಪಾಳವನ್ನು ದಾಟಿ ಹಿಮಾಚಲದಾಚೆ ಇರುವ ಮಹಾಚೀನ ಎಂಬ ಹೆಸರಿನ ದೇಶವಂತೆ. ನಾಲ್ಕು ಸಹೋದರರಲ್ಲಿ ಇವನೇ ಕಿರಿಯವ. ಇವನ ತಾತ ಮುತ್ತಾತಂದಿರು ಭಾರಿ ಮೇಧಾವಿಗಳಂತೆ. ಎಂಟು ವರ್ಷದ ವಯಸ್ಸಿಗೇ ಇವನು ಧಾರ್ಮಿಕ ವಿಷಯಗಳಲ್ಲು ಆಸಕ್ತಿ ತೋರುತ್ತಿದ್ದನಂತೆ. ಇವನು ಚಿಕ್ಕವನಾಗಿದ್ದಾಗ ಇವನ ತಂದೆಯೇ ನಾಲ್ಕು ಮಕ್ಕಳಿಗೆ ಅಲ್ಲಿಯ ಧರ್ಮಬೋಧನೆ ಮಾಡುತ್ತಿದ್ದರಂತೆ. ತಂದೆಯ ಮರಣದ ನಂತರ ಇವನ ಭ್ರಾತೃ ಬೌದ್ಧ ಧರ್ಮದಕಡೆ ತಿರುಗಿ, ಅಲ್ಲಿಯ ಒಂದು ವಿಹಾರದಲ್ಲಿ ಬೌದ್ಧ ಭಿಕ್ಕುವಾದನಂತೆ. ಹದಿಮೂರು ವರ್ಷದ ವಯಸ್ಸಿಗೆ ಇವನೂ ಬೌದ್ಧ ಧರ್ಮಕ್ಕೆ ಬದಲಾವಣೆ ಹೊಂದಿದನಂತೆ.
ಇವನ ವಯಸ್ಸು ಸುಮಾರು ಹದಿನೆಂಟು ವರ್ಷಗಳಾದಾಗ ಇವನ ದೇಶದಲ್ಲಿ ಯುದ್ಧ ಆರಂಭವಾಗಿ, ಇವನು ಪರ್ವತ ಪ್ರದೇಶದಲ್ಲಿ ಅಡಗಬೇಕಾಯಿತಂತೆ. ಅಲ್ಲಿ ಆಬ್ಧಿಧರ್ಮಕೋಶಶಾಸ್ತ್ರ ಇತ್ಯಾದಿ ಬೌದ್ಧ ತಂತ್ರಗಳ ಅಧ್ಯಯನ ಮಾಡಿದನಂತೆ. ಇಪ್ಪತ್ತರ ವಯಸ್ಸಿಗೆ ಇವನು ಬೌದ್ಧ ಭಿಕ್ಕು ಎನಿಸಿದನಂತೆ. ಆ ಗ್ರಂಥಗಳಲ್ಲಿ ಅನನ್ವಯಗಳನ್ನು ಕಂಡು, ಇದನ್ನು ಇವನ ಗುರುಗಳು ಇವನಿಗೆ ವಿವರಿಸಲಾರರಾದ ಕಾರಣ ಇವನಿಗೆ ಆ ತಥಾಗಥನ ಜನ್ಮಸ್ಥಾನಕ್ಕೇ ಬಂದು ಬೌದ್ಧಧರ್ಮಾಚರಣೆಗಳನ್ನು ಕಲಿಯಬೇಕೆಂಬ ಹಂಬಲ ಉಂಟಾಯಿತಂತೆ.
ಅಂತೆಯೇ ಹೊರಡಲು ನಾಡಿನ ರಾಜನ ಅನುಮತಿ ಕೇಳಿದಾಗ ರಾಜನು ಇವನಿಗೆ ಹೋಗುವ ಅನುಮತಿ ಕೊಡಲಿಲ್ಲವಂತೆ. ಇಪ್ಪತ್ತೇಳರ ವಯಸ್ಸಿಗೆ ರಾಜಾಜ್ಞೆಯನ್ನು ಮೀರಿ ಬುದ್ಧನ ಬೀಡಿಗೆ ಪ್ರಯಾಣ ಹೊರಟನಂತೆ. ಹಗಲೆಲ್ಲ ಅಡಗಿ ರಾತ್ರಿಯಲ್ಲಿ ರೇಶ್ಮೆ ರಸ್ತೆಯನ್ನು ಹಿಡಿದು, ಮಾರ್ಗದರ್ಶಕರು, ಜೊತೆಗಾರರು ಯಾರೂ ಇಲ್ಲದೆ ಒಬ್ಬನೇ ಪ್ರಯಾಣ ಮಾಡುತ್ತ, ಸುಮಾರು ಮಾಸಗಳ ನಂತರ ದೇಶದ ಸೀಮೆ ಪ್ರದೇಶಕ್ಕೆ ಬಂದನಂತೆ. ಆ ಸೀಮೆ ಪ್ರದೇಶದ ಸಾಮಂತ ರಾಜನೂ ಬೌದ್ಧ ಧರ್ಮ ಅನುಯಾಯಿಯಂತೆ. ಇವನನ್ನು ಆದರದಿಂದ ಕಂಡರೂ ಇವನನ್ನು ಮುಂದೆ ಸಾಗಲು ಬಿಡಲಿಲ್ಲವಂತೆ. ಆಗ ಇವನು ಅನ್ನಾಹಾರಗಳನ್ನು ತ್ಯಜಿಸಿ ಸತ್ಯಾಗ್ರಹ ನಡೆಸಿದ ನಂತರ, ಆ ರಾಜ ಇವನನ್ನು ಮುಂದೆ ಸಾಗಲು ಬಿಡಲೇಬೇಕಾಯಿತಂತೆ. ಈ ಸಾಮಂತನಿಂದ ರಾಜಾಜ್ಞೆ ಪಡೆದು, ಪರಿಚಯ ಪತ್ರಗಳನ್ನು ಹೊತ್ತು ತನ್ನ ಯಾಣವನ್ನು ಪುನರಾರಂಭಿಸಿದನಂತೆ. ಪಕ್ಷಿ ಹಾರುವಂತೆ ಅವನ ದೇಶ ಜಂಬೂದ್ವೀಪಕ್ಕೆ ಬಹು ಸಮೀಪವಾದರೂ, ಮಧ್ಯೆ ಹಿಮಾಚಲ ಪರ್ವತಗಳು ನಿಂತ ಕಾರಣ ಸಾರ್ಥಗಳು ಸಂಚರಿಸುವ ರೇಶ್ಮೆ ರಸ್ತೆಯನ್ನು ಹಿಡಿದು ನಮ್ಮ ನಾಡನ್ನೇ ಸುತ್ತಿ ಪಶ್ಚಿಮದಿಂದ ಬರಬೇಕಾಯಿತಂತೆ.
ಅಗ್ನಿ, ಕುಛ, ಬಾಲುಕ, ಛಜ, ಸುತೃಷ್ಣ, ಸಮರಖಂಡ, ಬೊಖಾರ, ಕೇಶ, ಘರ್ಮ, ಬಾಮಿಯಾಣಗಳನ್ನು ದಾಟಿ ಕೊನೆಗೆ ಕಪಿತ್ಥಕ್ಕೆ ಬಂದನಂತೆ. ಕಪಿತ್ಥದಲ್ಲಿ ಕುಶಾನ ಅರಸರ ಬೌದ್ಧ ಧರ್ಮಾಚರಣೆಗಳನ್ನು ಅಖ್ಯಾನ ಮಾಡುತ್ತ ಪರ್ವತಗಳ ಮೇಲಿನ ಹಿಮ ಕರಗುವವರೆಗು ಕಯ್ದು ನಿಲ್ಲಬೇಕಾಯಿತಂತೆ. ಕೊನೆಗೆ ಗ್ರೀಷ್ಮ ಋತು ಬಂದೊಡನೆ ಹಿಮವೆಲ್ಲ ಕರಗಿ ಇವನಿಗೆ ಮುಂಬರುವ ಅವಕಾಶವಾವಾಯಿತಂತೆ. ಇಷ್ಟೆಲ್ಲ ಕಷ್ಟಪಟ್ಟು ಕೊನೆಗು ಜಂಬೂದ್ವೀಪವನ್ನು ತಲುಪಿದ್ದ. ಬಂದ ಕೂಡಲೆ ಅವನು ಇಲ್ಲಿಯ ರೀತಿ ರಿವಾಜುಗಳನ್ನು ಕಲಿಯ ತೊಡಗಿದನಂತೆ. ದೇಶದ ಹೆಸರು, ವಿಸ್ತಾರ, ಹವಾಮಾನ, ಅಳತೆಗಳು, ದಿನ-ತಿಥಿ ಇತ್ಯಾದಿಗಳು, ಆಸನಗಳು, ಒಡವೆ ವಸ್ತ್ರಗಳು, ಶುಚಿ-ಶುದ್ಧತೆಯ ಆಚರಣೆ, ಲಿಪಿ, ಪುಸ್ತಗಳು, ಹಾಗು ಶಿಕ್ಷಣ, ಬೌದ್ಧ ಧರ್ಮದ ಶಿಸ್ತು, ರಾಜ ಮನೆತನಗಳು, ಶಸ್ತ್ರಾಸ್ತ್ರಗಳು, ಅಧಿಕಾರ ಆಡಳಿತ, ಸೌಜನ್ಯತೆಯ ಆಚಾರಗಳು, ವೈದ್ಯಶಾಸ್ತ್ರ ಚಿಕಿತ್ಸೆ-ಔಷಧಿಗಳು, ಗಿಡ, ಮರ, ಭೋಜನಗಳು, ಎಲ್ಲವನ್ನೂ ಮೊದಲು ನೋಡಿ ಅಖ್ಯಾನ ಮಾಡಿದನಂತೆ.
ನಂತರ ಮತ್ತೆ ಹೊರಟು, ಲಂಘಣ, ನಾಗರಹಾರ, ಗಾಂಧಾರ, ಪುಷ್ಕಲಾವತಿ, ಉದಯನ, ತಕ್ಷಶಿಲೆ, ಸಿಂಹಪುರ, ಉರಶ ದೇಶಗಳನ್ನು ಹಾಯ್ದು ಕಾಶ್ಯಪರ ನಾಡಾದ ಕಾಶ್ಮೀರ ದೇಶವನ್ನು ಸೇರಿದನಂತೆ. ಕಾಶ್ಮೀರ ಇವನಿಗೆ ಬಹಳ ಹಿಡಿಸಿ ಸ್ವಲ್ಪ ಕಾಲ ಅಲ್ಲೇ ಇದ್ದನಂತೆ. ಬಹು ಸುಂದರ ಪ್ರದೇಶವೆಂದು ಹೊಗಳಿದ. ಕಾಶ್ಮೀರದಿಂದ ಹೊರಟು ಪೂನಚ, ರಾಜಪುರಿ, ಟಕ್ಕ, ಚೀನಪತಿ, ಮಾರ್ಗವಾಗಿ ಈಗ ಜಾಲಂಧರಕ್ಕೆ ಬಂದಿದ್ದನಂತೆ. ಇಷ್ಟೆಲ್ಲ ಅರಗಿಸಿಕೊಳ್ಳಲು ನನಗೆ ಸ್ವಲ್ಪ ಹೊತ್ತು ಬೇಕಾಯಿತು.
"ನಿನ್ನ ಕತೆಯೇನು? ನೀನೆಲ್ಲಿಯವನು? ಇಲ್ಲಿಗೆ ಹೇಗೆ ಬಂದಿರುವೆ?" ಎಂದು ಕೇಳಿದ.
ನನ್ನ ಗೂಢಚರ್ಯೆ ವೃತ್ತಿಯೊಂದನ್ನು ಬಿಟ್ಟು ನಾನೂ ನನ್ನ ಕತೆಯನ್ನು ಹೇಳಿದೆ. ಬಳಿಕ
"ನಿನ್ನ ಗುರಿ ಏನು? ಮುಂದೆ ಏನು ಮಾಡುವ ಆಶಯ ನಿನಗೆ" ನಾನು ಅವನನ್ನು ಕೇಳಿದೆ
"ಈಗಷ್ಟೆ ಈ ದೇಶದ ಪ್ರಯಾಣ ಆರಂಭಿಸಿರುವೆ. ಇನ್ನೂ ಇಲ್ಲಿಯ ರಾಜ್ಯಗಳನ್ನು, ವಿಶೇಷವಾಗಿ ನಾಳಂದಾ, ಖುಶಿನಗರ, ಕಪಿಲಾವಸ್ತು ಹಾಗು ಬೊಧಗಯ ನೋಡುವೆ. ನಂತರ ಸಮಯವಾದರೆ ದಕ್ಷಿಣಾಪಥ" ಎಂದು ಹೇಳಿದ.
ಕೊಂಚ ಹಿಂಜರಿದು "ಮಿತ್ರ ನೀನು ನನ್ನಂತೆ ದೇಶ ನೋಡಲು ಹೊರಟಿರುವೆ. ನಾವಿಬ್ಬರು ಏಕೆ ಜೊತೆಯಲ್ಲಿ ಹೋಗಬಾರದು? ನನಗಾದರೋ ಇಲ್ಲಿಯ ಭಾಷೆ ಬರುವುದಿಲ್ಲ. ನಿನಗಂತೂ ಸಂಸ್ಕೃತ ಮಾತನಾಡಲು ಬರುತ್ತದೆ. ನಿನ್ನ ಆಸೆಯೂ ಪೂರೈಸಿದಂತಾಗುತ್ತದೆ, ನನಗೂ ಜೊತೆಗಾರ ಹಾಗು ಭಾಷಾಂತರಗಾರ ಸಿಕ್ಕಿದಂತಾಗುತ್ತದೆ. ನನ್ನ ಬಳಿ ಹೇಗಿದ್ದರೂ ರಾಜಾಜ್ಞೆ ಹಾಗು ಪರಿಚಯ ಪತ್ರಗಳಿವೆ. ಎಲ್ಲೆಡೆ ಜೊತೆಗೇ ಹೋಗಬಹುದು" ಎಂದ
ನಾನು ಸ್ವಲ್ಪ ಕಾಲ ಯೋಚಿಸಿದೆ "ಸಧ್ಯಕ್ಕೆ ನಿನ್ನೊಡನೆ ಬರಲು ನನಗೇನು ಅಭ್ಯಂತರವಿಲ್ಲ. ಆದರೆ ಎಷ್ಟು ಕಾಲ ನಿನ್ನೊಡನೆ ಬರುವೆನೆಂದು ಹೇಳಲಾರೆ. ಏನಾದರೂ ಆವಿಷ್ಕರಣ ಬಂದರೆ ನಾನು ನನ್ನ ದಾರಿ ಹಿಡಿಯಬೇಕು" ಎಂದು ಉತ್ತರಿಸಿದೆ. ಇವನೊಡನೆ ನಿರಾಯಾಸವಾಗಿ ಪರ್ಯಟನೆ ಆಗುವುದೆಂದೆನಿಸಿತು. ಆದರೆ ಇವನೊಡನೆ ಒಗ್ಗದಿದ್ದರೆ ಕಟ್ಟುಬೀಳದಿರಲು ಈ ರೀತಿ ಉತ್ತರಿಸಿದ್ದೆ.
ನನ್ನ ಮಾತು ಕೇಳಿದೊಡನೆಯೇ ಕುಳಿತಿದ್ದ ಅವನು ಎದ್ದು ನಗುತ್ತ, ಚಪ್ಪಾಳೆ ತಟ್ಟುತ್ತ ಕುಣಿಯ ತೊಡಗಿದ. "ನನ್ನ ಜೀವ ಉಳಿಸಿದೆ ನೀನು. ಈಗ ನನಗೆ ಆ ಋಣ ತೀರಿಸುವ ಅವಕಾಶ ಮಾಡಿಕೊಟ್ಟಿರುವೆ. ನೀನು ಇಲ್ಲಿಯೇ ಇರು. ನಾನು ಸಂಘಾರಾಮದಿಂದ ನನ್ನ ವಸ್ತುಗಳನ್ನು ತೆಗೆದುಕೊಂಡು ಬರುವೆ. ನಾಳೆಯೇ ಇಲ್ಲಿಂದ ಹೊರಡೋಣ" ಎಂದ
ನಾನು "ಹಾಗೆಯೇ ಆಗಲಿ" ಎಂದು ಉತ್ತರಿಸಿದೆ.
ಅಂದು ರಾತ್ರಿ ಅವನು ಎಲ್ಲಿಗೋ ಹೊಡ. ನಾನು ದೇವಾಲಯದ ಜಗುಲಿಯ ಮೇಲೇ ಮಲಗಿದ್ದೆ. ಮಾರನೆಯ ದಿನ ನಾನು ನದಿಯಲ್ಲಿ ಸ್ನಾನ ಸಂಧ್ಯಾವಂದನೆ ಮುಗಿಸಿಬರುವಷ್ಟರಲ್ಲಿ ಅವನು ದೇವಾಲಯಕ್ಕೆ ಬಂದಿದ್ದ. ಕುದುರೆಗಳ ಏರ್ಪಾಡೂ ಮಾಡಿದ್ದ. ಅವನಿಗೆ ಎರಡು ಕುದುರೆಗಳು - ಒಂದು ಅವನು ಸವಾರಿ ಮಾಡಲು ಮತ್ತೊಂದು ಅವನ ವಸ್ತು-ಪುಸ್ತಕಗಳಿಗೆ. ಅವನೊಡನೆ ಇಬ್ಬರು ರಾಜಭಟರೂ ಇದ್ದರು. ಅವರು ನಮ್ಮ ಸುರಕ್ಷೆಗಾಗಿ ನಮ್ಮೊಡನೆ ಮುಂದಿನ ರಾಜ್ಯದ ವರೆಗು ಬರುವವರಿದ್ದರು. ನನಗೂ ಒಂದು ಕುದುರೆಯನ್ನು ಕರೆತಂದಿದ್ದ. ಕುದುರೆ ಏರಿ ಹೊರಟೆವು. ನನ್ನ ಮಿತ್ರ 'ಬ್ರಾಹ್ಮಣನಾದರೂ ನನ್ನ ಅಶ್ವಾರೋಹಣ ಚನ್ನ' ಎಂದು ಹೇಳಿದ. ನಾನು ಅದಕ್ಕೆ ಏನೂ ಹೇಳಲಿಲ್ಲ. ನಮ್ಮ ಮುಂದಿನ ನಿಲುವು ಕುಲೂತ ಎಂಬ ರಾಜ್ಯವಾಗಿತ್ತು.
* * * * *
ಜಾಲಂಧರ ಬಿಟ್ಟು ಅಪಾಯಕಾರಿಯಾದ ಪರ್ವತ ಮಾರ್ಗವಾಗಿ ಸುಮಾರು ೩೫೦ ಕ್ರೋಶಗಳ ದೂರ ಪ್ರಯಾಣದ ನಂತರ ಕುಲೂತ ದೇಶವನ್ನು ಸೇರಿದೆವು. ನನ್ನ ಮಿತ್ರ ಉದ್ದಕ್ಕೂ ತನ್ನ ತಾಳೇಗರಿಗಳಂತಹ ಪತ್ರಗಳ ಮೇಲೆ ಏನನ್ನೋ ಬರೆಯುತ್ತಲೇ ಇದ್ದ. ಕುಲೂತ ದೇಶವನ್ನು ಬಿಟ್ಟು ಸುಮಾರು ೩೫೦ ಕ್ರೋಶಗಳು ದಕ್ಷಿಣದಿಕ್ಕಿನಲ್ಲಿ ನಡೆದ ನಂತರ ಶತಾದ್ರು ನದಿಯ ತೀರದಲ್ಲಿದ್ದ ಶತಾದ್ರು ದೇಶವನ್ನು ತಲುಪಿದೆವು. ಶತಾದ್ರು ಬಿಟ್ಟು ನಋತ್ಯ ದಿಕ್ಕಿನಲ್ಲಿ ೪೦೦ ಕ್ರೋಶಗಳ ದೂರ ಸವೆಸಿದ ನಂತರ ಪಾರ್ಯಾತ್ರ ದೇಶವನ್ನು ಸೇರಿ, ಬಳಿಕ ಪೂರ್ವ ದಿಕ್ಕಿನಲ್ಲಿ ೨೫೦ ಕ್ರೋಶಗಳ ಪಯಣದ ನಂತರ ಮಥುರಾನಗರಿಯನ್ನು ಸೇರಿದೆವು.
ಈ ಮಥುರಾ ಪ್ರದೇಶವು ಸುಮಾರು ೨೫೦೦ ಕ್ರೋಶಗಳ ಸುತ್ತಳತೆ ಹೊಂದಿದೆ. ಮಥುರಾ ನಗರದ ಸುತ್ತಳತೆ ಸುಮಾರು ೧೦ ಕ್ರೋಶಗಳಿದ್ದು, ಈ ಊರು ಮಹಾನದಿಯಾದ ಯಮುನೆಯ ತೀರದಲ್ಲಿದೆ. ಇಲ್ಲಿಯ ನೆಲ ಸಮೃದ್ಧ ಹಾಗು ಫಲವತ್ತಾಗಿದ್ದು ಇಲ್ಲಿ ಬಹು ಮಾತ್ರದಲ್ಲಿ ಆಹಾರ ಧಾನ್ಯ ಬೆಳೆಯಲಾಗುತ್ತದೆ. ಇಲ್ಲಿಯವರು ದೊಡ್ಡ ಮರಗಳನ್ನೂ ಬೆಳೆಯುತ್ತಾರೆ. ಇಲ್ಲಿಯ ಆಮ್ಲ ಕಾಯಿ ಸುಪ್ರಸಿದ್ಧ. ಆಮ್ಲದ ಮರಗಳು ಎರಡೂ ರೀತಿಯವು - ಹಸಿರು ಹಾಗು ಹಳದಿ ವರ್ಣವುಳ್ಳ ಫಲಗಳು.
ಬಹು ಉತ್ಕಟವಾದ ಕಾರ್ಪಸವಲ್ಲದೆ ಪೀತ-ಕನಕವನ್ನೂ ಇಲ್ಲಿ ಉತ್ಪತ್ತಿ ಮಾಡಲಾಗುತ್ತದೆ. ಇಲ್ಲಿಯ ವಾತಾವರಣವು ಸುಖಮಯವಾಗಿರುತ್ತದೆ. ಇಲ್ಲಿಯ ಜನರು ಮೃದು ಸದ್ಭಾವನೆ ಸ್ವಭಾವದವರಾಗಿದ್ದು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುತ್ತಾರೆ. ವಿದ್ವತ್ತು ಹಾಗು ಸುಶೀಲತೆಯನ್ನು ಬಹಳ ಎತ್ತಿ ಆಡಿಸುತ್ತಾರೆ.
ಬೌದ್ಧರ ಸುಮಾರು ೨೦ ಸಂಘಾರಾಅಮ್ಗಳಿವೆ, ಅವುಗಳಲ್ಲಿ ಸುಮಾರು ೨೦೦೦ ಭಿಕ್ಕುಗಳು. ಅಶೋಕರಾಜನೇ ಕಟ್ಟಿಸಿದ್ದೆಂದು ಪ್ರಖ್ಯಾತಿ ಪಡೆದ ಮೂರು ಬೌದ್ಧ ಸ್ತೂಪಗಳಿವೆ. ಮೂರು ಮಾಸಗಳಿಗೊಮ್ಮೆ ಇವರು ದೊಡ್ಡ ಧರ್ಮ-ಪ್ರದರ್ಶನ ನಡೆಸಿ, ಪ್ರಸಾದಗಳನ್ನು ನೈವೇದ್ಯ ಮಾಡಿ, ಪತಾಕೆ ಲಾಂಛನಗಳೊಂದಿಗೆ ತಮ್ಮ ಉಚ್ಛ ದ್ರವ್ಯಗಳ ಪ್ರದರ್ಶನ ಮಾಡುತ್ತಾರೆ. ಧೂಪದ ಹೊಗೆ ಗಗನಕ್ಕೇರಿ, ಪುಷ್ಪಗಳ ವೃಷ್ಟಿಯನ್ನೇ ಮಾಡುತ್ತಾರೆ. ಇಲ್ಲಿಯ ಆಗಿನ ರಾಜನೂ ಇವರನ್ನು ಹುರಿದುಂಬಿಸುತ್ತಿದ್ದ. ನನ್ನ ಮಿತ್ರ ಇಂತಹ ಒಂದು ಧರ್ಮಾಚರಣೆಯಲ್ಲಿ ಪಾಲ್ಗೊಂಡ, ನಾನೂ ಅಲ್ಲಿಗೆ ವೀಕ್ಷಕಮಾತ್ರನಾಗಿ ಹೋಗಿಬಂದೆ. ಪ್ರತಿ ದಿನದ ಆಗುಹೋಗುಗಳನ್ನೂ ನನ್ನ ಮಿತ್ರ ತನ್ನ ಗರಿಗಳಲ್ಲಿ ಬರೆದುಕೊಳ್ಳುತ್ತಿದ್ದ. ನಾನು ಏನೆಂದು ಕೇಳಿದಾಗ ನಮ್ಮ ದೇಶದ ರೀತಿ ರಿವಾಜುಗಳೆಂದು ಹೇಳಿದ. ಆದರೆ ಬೌದ್ಧ ಧರ್ಮ ರಿವಾಜುಗಳನ್ನು ನಮೂದಿಸುತ್ತಿದ್ದನೇ ವಿನಃ, ಒಂದು ದಿನವಾಗಲಿ ಅವನು ನಮ್ಮ ಧರ್ಮದ ವಿವರ ಕೇಳಬರಲಿಲ್ಲ.
ಮಥುರೆಯಲ್ಲಿ ನಮ್ಮ ಧರ್ಮದ ಕೇವಲ ಐದು ದೇವಾಲಯಗಳಿದ್ದವು. ಆದರೆ ಸಾಮಾನ್ಯ ಮನುಷ್ಯರು ಹೆಚ್ಚಾಗಿ ನಮ್ಮ ದೇವರುಗಳನ್ನವಲಂಭಿಸಿದವರೇ. ಸ್ತೂಪ-ಸಂಘಾರಾಮಗಳಿಗೆ ಆಗಾಗ ಹೋಗುತ್ತಿದ್ದರೂ ಇವರ ಇಷ್ಟ ದೇವತೆ, ಹಾಗು ಪೂಜೆ ನಮ್ಮ ವಿಧಾನದಲ್ಲಿಯೇ. ಅಂತೆಯೇ ನಾವು ಅಲ್ಲಿದ್ದ ಸಮಯದಲ್ಲಿ ಬಂದ ಪರ್ವವೊಂದರಲ್ಲಿ ವ್ರತವನ್ನು ನಾನು ಅಲ್ಲಿಯೇ ಆಚರಿಸಿದೆ. ಬೌದ್ಧರು ನಡೆಸಿದ ಅದ್ದೂರಿ ನಮ್ಮಲ್ಲಿರಲಿಲ್ಲ ಆದರೂ ಭಕ್ತಿಭಾವ ಹಾಗು ಶ್ರದ್ಧೆಗಳ ಕೊರತೆ ಇರಲಿಲ್ಲವೆನಿಸಿತು.
ಊರಿನಿಂದ ಪೂರ್ವ ದಿಕ್ಕಿನಲ್ಲಿ ಸುಮಾರು ೨-೩ ಕ್ರೋಶಗಳ ದೂರದಲ್ಲಿ ಬೆಟ್ಟಗಳ ಮಧ್ಯದಲ್ಲಿ ಒಂದು ಸಂಘಾರಾಮವಿದೆ. ಇದರಲ್ಲಿ ತಥಾಗಥ ಬುಧ್ಧನ ನಖವಿದೆಯಂತೆ. ಬಳಿಯೇ ಒಂದು ಕಲ್ಲಿನ ಮನೆಯಿದೆ. ಶೂದ್ರನಾಗಿ ಹುಟ್ಟಿ, ನಂತರ ಭಿಕ್ಷುವಾಗಿ, ಅರ್ಹಟನಾದ ಉಪಗುಪ್ತನು ಇಲ್ಲಿ ಧರ್ಮ ಬೋಧನೆ ಮಾಡುತ್ತಿದ್ದನಂತೆ. ಹತ್ತಿರವೇ ಬುದ್ಧನು ಓಡಾಡಿದ ಸ್ಥಳವೆಂದು ಕಟ್ಟಿಸಿದ ಸ್ತೂಪಗಳು ಇವೆ. ಮಥುರಾ ನಗರವನ್ನು ಬಿಟ್ಟು ಹೊರಟೆವು. ಈಶಾನ್ಯ ದಿಕ್ಕಿನಲ್ಲಿ ಸುಮಾರು ೨೫೦ ಕ್ರೋಶಗಳ ಅಂತರದಲ್ಲಿ ಸ್ಥಾನೇಶ್ವರ ಇದೆ. ಮತ್ತೆ ೨-೩ ದಿನಗಳ ಪ್ರಯಾಣದನಂತರ ಸ್ಥಾನೇಶ್ವರವನ್ನು ಸೇರಿದೆವು.
ಸ್ಥಾನೇಶ್ವರ - ಹರ್ಷ ಚಕ್ರವರ್ತಿಯ ಮೂಲ ದೇಶ. ಈ ಪ್ರದೇಶದ ಸುತ್ತಳತೆ ಸುಮಾರು ೩೫೦೦ ಕ್ರೋಶಗಳು. ಇಲ್ಲಿಯ ನೆಲವೂ ಬಹು ಸಮೃದ್ಧ ಹಾಗು ಫಲವತ್ತಾಗಿದ್ದು ಇಲ್ಲಿ ಬಹುಮಾತ್ರದಲ್ಲಿ ಆಹಾರ ಧಾನ್ಯಗಳು ಬೆಳೆಯುತ್ತವೆ. ವಾತಾವರಣವು ಸ್ವಲ್ಪ ಉಷ್ಣಮಯವಾಗಿರುತ್ತದೆ. ಮೊದಲಿಗೆ ಇಲ್ಲಿಯ ಜನಾಂಗ ಏಕೋ ಸ್ವಲ್ಪ ಶೈತ್ಯ ಹಾಗು ಕುಟಿಲ ಮನೋಭಾವದವರೆನಿಸಿತು. ಆದರೆ ಇವರು ಬಹಳೇಬಹಳ ಶ್ರೀಮಂತರು ಹಾಗು ಆಮಿಷ ಪ್ರಿಯರು. ಮಾಟ ಮಂತ್ರಗಳನ್ನವಲಂಭಿಸಿದ ಇವರುಗಳು ಅಸಾಧಾರಣ ಪ್ರಚಂಡ ಅಳವು ಹೊಂದಿದವರನ್ನು ಆದರಿಸುತ್ತಾರೆ. ಹೆಚ್ಚಿನ ಜನ ಅರ್ಥ-ಕಾಮಗಳನ್ನು ಹಿಂಬಾಲಿಸುತ್ತಾರೆ. ವಿಶ್ವದಾದ್ಯಂತದಿಂದ ಅಪರೂಪ ಹಾಗು ಉಚ್ಛ ದ್ರವ್ಯಗಳು ಇಲ್ಲಿ ಬಂದು ಸೇರಿವೆಯೇನೋ ಎನ್ನುವಷ್ಟು ವೈಭವ!
ಹರ್ಷ ಚಕ್ರವರ್ತಿಯ ನೆಲೆಯವರು ಇಂಥವರೇ ಎನಿಸಿತು. ಸ್ಥಾನೇಶ್ವರದ ವೈಭವವನ್ನು, ಜನರ ಶೀಲ ಗುಣವನ್ನೂ ನನ್ನ ಗೂಢಚರ್ಯೆಯ ದಿನಗಳಲ್ಲಿ ಕೇಳಿ ತಿಳಿದಿದ್ದೆ. ಮೊದಲಿಗೆ ನನಗೆ ಅರ್ಥವಾಗಲಿಲ್ಲ. ನನ್ನ ಮಿತ್ರ ಬಳಿಯಿದ್ದ ಸಂಘಾರಮಕ್ಕೆ ತೆರಳಿದ ಕೂಡಲೆ ನನ್ನ ಜಟೆ-ಜನಿವಾರಗಳನ್ನು ಗುರುತಿಸಿ ನನಗೆ ಆದರದ ಸ್ವಾಗತ ನೀಡಿದರು; ಬ್ರಾಹ್ಮಣರೊಬ್ಬರ ಮನೆಗೆ ಕರೆದೊಯ್ದು ಸತ್ಕಾರ ಮಾಡಿ ಉಪಹಾರಗಳನ್ನಿತ್ತರು. ಭೋಜನಕ್ಕಡ್ಡಿಯಿಲ್ಲವಾದರೂ ಉಪಹಾರಗಳನ್ನು ನಾನು ಸ್ವೀಕರಿಸಲಿಲ್ಲ - ಸ್ವೀಕರಿಸುವಂತಿರಲಿಲ್ಲ. ನನಗೆ ಈಗ ಅರ್ಥವಾಯಿತು. ಇವರು ನನ್ನ ಬುದ್ಧಾನುಯಾಯಿ ಮಿತ್ರನನ್ನು ಕಂಡು ಸ್ವಲ್ಪ ಹಿಂಜರಿದಿದ್ದಿರಬೇಕು. ಈಗ ನನ್ನೊಬ್ಬನನ್ನೇ ಕಂಡು ಸ್ನೇಹಭಾವ ತೋರುತ್ತಿದ್ದರು. ಇಲ್ಲಿ ನಮ್ಮ ಧರ್ಮ ಪ್ರಬಲವಾಗಿತ್ತು; ಬೌದ್ಧರು ಹಿಂದುಳಿದಿದ್ದರು.
ಅಂದು ನನ್ನ ಆತಿಥೇಯರ ಗೃಹದಲ್ಲೇ ತಂಗಿದ್ದೆ. ಉದ್ದಕ್ಕೂ ನಾನು ಯಾವ ಸಂಘಾರಾಮದಲ್ಲೂ ತಂಗುತ್ತಿರಲಿಲ್ಲ, ಭೋಜನ ಮಾಡುತ್ತಿರಲಿಲ್ಲ. ಊರಾಚೆ ಅಥವ ಛತ್ರ-ದೇವಸ್ಥಾನಗಳಲ್ಲಿ ತಂಗುತ್ತಿದ್ದೆ. ಮೊದಲಿನ ಒಪ್ಪಂದದಂತೆ ನನ್ನ ಮಿತ್ರ ಇದ್ಯಾವುದಕ್ಕೂ ಆಕ್ಷೇಪಣೆ ಮಾಡುತ್ತಿರಲಿಲ್ಲ. ಆದರೆ ಇಂದು ನನ್ನ ಮಿತ್ರನಿಗೆ ಇದು ಏಕೋ ಸರಿಯಾಗಿ ಕಾಣಿಸಲಿಲ್ಲ. ಮಾರನೆಯ ದಿನ ಮತ್ತೆ ಸಂಧಿಸಿದಾಗ ಕೋಪಗೊಂಡು ನನ್ನನ್ನು ಸ್ವಲ್ಪ ಖಂಡಿಸತೊಡಗಿದ. ಅವನನ್ನು ಹೀನವಾಗಿ ಕಂಡ ಈ ಸ್ಥಳದ ಜನರ ಮನೆಯಲ್ಲಿ ನಾನು ತಂಗಿದ್ದು ಅವನಿಗೆ ಸ್ವಲ್ಪ ಅವಮಾನಾವೆನಿಸಿರಬಹುದು. ಇವನೊಡನೆ ಈ ಸಮಯದಲ್ಲಿ ಜಗಳವಾಡಲು ಬಯಸದೆ, ನಾನಿದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.
ಸ್ಥಾನೇಶ್ವರದಲ್ಲಿ ನಾವು ಒಂದು ವಾರ ಕಳೆಯಬೇಕಾಯಿತು. ಊರಿನ ದೇವಾಲಯವೊಂದರಲ್ಲಿ ಇದ್ದ ವೃದ್ಧರೊಬ್ಬರು ನನ್ನ ಸಂಸ್ಕೃತ ವಾರ್ತೆಯನ್ನು ಕೇಳಿ, ಕೆಲವೇ ಘಳಿಗೆಗಳಲ್ಲಿ ನನ್ನನ್ನು ಬಹಳ ಹಚ್ಚಿಕೊಂಡಿದ್ದರು. ಒಂದು ದಿನ ಅವರು ಈ ಸ್ಥಳದ ಮಹತ್ವವನ್ನು ಹೇಳಿದರು. ನನ್ನ ಮಿತ್ರನೂ ನನ್ನೊಡನೆಯೇ ಇದ್ದ - ಅವರು ಹೇಳುತ್ತಿದ್ದಂತೆ ಅವನು ಎಲ್ಲವನ್ನೂ ಬರೆದುಕೊಳ್ಳುತ್ತಿದ್ದ.
ಊರಿನಿಂದ ಸುಮಾರು ೨-೩ ಕ್ರೋಶಗಳ ದೂರದಲ್ಲಿ ಅಶೋಕರಾಜನೇ ಕಟ್ಟಿಸಿದನೆಂದು ಹೇಳಲ್ಪಡುವ ಸ್ತೂಪವೊಂದಿದೆ. ಬೃಹತ್ ಆಕಾರದ ಈ ಸ್ತೂಪವು ಕೆಂಪು ವರ್ಣದ ಹೊಳೆವ ಶಿಲೆಗಳಿಂದ ಕಟ್ಟಲ್ಪಟ್ಟಿದೆ. ಈ ಸ್ತೂಪದಲ್ಲಿ ನನ್ನ ಮಿತ್ರ ಪ್ರಾರ್ಥನೆ ಮಾಡಿದ ನಂತರ ನಾವು ಸ್ಥಾನೇಶ್ವರವನ್ನು ಬಿಟ್ಟು ಹೊರಟೆವು.
* * * * *
ಸೃಘ್ನ, ಮಾತೀಪುರ, ಬ್ರಹ್ಮಪುರ, ಗೋವಿಶನ, ಅಹಿಕ್ಷೇತ್ರ, ವಿರಸನ ದೇಶಗಳ ಸಂದರ್ಶನದ ನಂತರ ಕಪೀಥ ದೇಶವನ್ನು ತಲುಪಿದೆವು. ನನ್ನ ಮಿತ್ರನಿಗಿಲ್ಲಿ ಸ್ವಲ್ಪ ಸಮಾಧಾನವಾಯಿತು. ಇಲ್ಲಿ ಬೌದ್ಧ ಧರ್ಮ ಅನುಯಾಯಿಗಳು ಹೆಚ್ಚು ಸಂಖ್ಯೆಯಲ್ಲಿದ್ದು ಅವನನ್ನು ಸ್ವಾಗತಿಸಿದರು. ನಮ್ಮ ದೇವಾಲಯಗಳೂ ಸುಮಾರು ಸಂಖ್ಯೆಯಲ್ಲಿದ್ದು, ಈ ಪ್ರದೇಶದ ಇಷ್ಟದೇವ ಮಹೇಶ್ವರನಾಗಿದ್ದ. ಈ ಸ್ಥಳದಲ್ಲಿದ್ದ ಒಂದು ಸುಂದರವಾದ ಸ್ತೂಪದೊಳಗೆ ತಥಾಗಥ ಬುದ್ಧನ ಹಲವಾರು ದಂತಕತೆಗಳು ಕೇಳಿಬಂದವು. ಇವೆಲ್ಲವನ್ನೂ ನನ್ನ ಮಿತ್ರ ಸಿಹಿ ಕಂಡ ಎಳೆ ಕೂಸಿನ ಮುದಿತದಿಂದ ಕೇಳಿ, ಸಮಸ್ಥವನ್ನೂ ಬರೆದುಕೊಂಡನು.
ನನ್ನ ಮಿತ್ರನ ಬರಹದ ಬಗ್ಗೆ ಮೊದಲಿನಿಂದಲೂ ಕುತೂಹಲ ನನಗೆ. ಸಾಲುಗಳನ್ನು ಬರೆಯುವ ಬದಲು ಇವನು ಮೇಲಿನಿಂದ ಕೆಳಕ್ಕೆ, ಒಂದು ಕೃಷ ಹಾಳೆಯಮೇಲೆ, ಕಜ್ಜಳ ಹತ್ತಿಸಿದ ನಿಷಿತ ಕಡ್ಡಿಯೊಂದರಲ್ಲಿ ಬರೆಯುತ್ತಿದ್ದ. ಅವನು ಬರೆಯುತ್ತಿದ್ದ ವಿಷಯಗಳಂತೂ ನನಗೆ ಗೊತ್ತೇ ಇದ್ದವು. ಅವನ ಲಿಪಿಯ ಬಗ್ಗೆ ತಿಳಿದಿರಲಿಲ್ಲ. ಒಮ್ಮೆ ಅವನನ್ನೇ ಕೇಳಿದೆ "ಮಿತ್ರ, ನೀನು ಬರೆಯುತ್ತಿರುವ ಲಿಪಿ ಯಾವುದು, ಇದರ ವಿವರಗಳನ್ನು ಸ್ವಲ್ಪ ತಿಳಿಸು"
"ಇದು ನನ್ನ ಮಾತೃಭೂಮಿಯಾದ ಮಹಾಚೀನ ದೇಶದ ಭಾಶೆ ಹಾಗು ಲಿಪಿ. ಇದನ್ನು ಈ ರೀತಿ ಮೇಲಿನಿಂದ ಕೆಳಕ್ಕೆ ಬರೆಯುವುದು. ಈ ಅಕ್ಷರಗಳ ಹೆಸರು 'ಹಾಂಜಿ'." ಎಂದ. ಅವನು ಹೇಳಿದ್ದನ್ನು ನಿಖರವಾಗಿ ನಮ್ಮ ಲಿಪಿಯಲ್ಲಿ ಬರೆಯಲಾರೆ. 'ಹಾಂಜಿ' ನಾನು ಬರೆಯಲಾಗುವಂತಹ ಅದರ ಅತ್ಯಂತ ಸಮೀಪ ರೂಪಾಂತರ.
"ಈ ಅಕ್ಷರಗಳ ಅರ್ಥವೇನು? ಒಟ್ಟು ಎಷ್ಟಿವೆ?" ಎಂದು ಕೇಳಿದೆ
"ಇದರ ಪ್ರತಿಯೊಂದು ಗುರುತೂ ನಮ್ಮ ಭಾಷೆಯ ಒಂದು ಅಕ್ಷರ; ಜೊತೆಗೆ ಪ್ರತೀ ಅಕ್ಷರಕ್ಕೂ ಒಂದು ಅರ್ಥವಿದೆ. ಆದಿಯಲ್ಲಿ ಪ್ರತಿ ಅಕ್ಷರವೂ ಮನುಷ್ಯ, ಪ್ರಾಣಿ ಯಾ ಇತರ ವಸ್ತುಗಳ ಚಿತ್ರಗಳಾಗಿದ್ದವು. ಕಾಲ ಕಳೆದಂತೆ ಆ ಚಿತ್ರಗಳು ಸ್ವಲ್ಪ ಬೇರ್ಪಟ್ಟು, ಈಗ ಮೊದಲಿನಂತೆ ಕಾಣುವುದಿಲ್ಲ. ಹಲವಾರು ಅಕ್ಷರಗಳು ಎರಡು ಅಥವ ಹೆಚ್ಚು ಅಕ್ಷರಗಳ ಸಮ್ಮಿಲನವಾಗಿವೆ" ಎಂದು ಉತ್ತರಿಸಿದ
ನಾನು ಕೇಳಿದೆ "ಒಹೋ! ಹಾಗಾದರೆ ಇದು ಚಿತ್ರಲಿಖಿತ ಲಿಪಿಯೇ? ಮತ್ತೆ ಅಕ್ಷರಗಳು ಎಷ್ಟಿವೆ? ಮಿತಿಯೇ ಇಲ್ಲ ಅಲ್ಲವೆ?"
ಅವನು ಪುನಃ ಒಂದು ದೊಡ್ಡ ವಿವರಣೆ ಕೊಟ್ಟ "ಈ ಲಿಪಿಯಲ್ಲಿ ವಾಸ್ತವವಾಗಿ ಅನಂತ ಅಕ್ಷರಗಳನ್ನು ಬರೆಯಬಹುದು. ಎಷ್ಟು ಅಕ್ಷರಗಳೆಂದು ಹೇಳಲು ಸಾಧ್ಯವೇ ಇಲ್ಲ. ಅತೀ ದೊಡ್ಡ ಶಬ್ಧಕೋಶಗಳು ಸುಮಾರು ೫೬ ಸಹಸ್ರ ಅಕ್ಷರಗಳ ಬಗ್ಗೆ ಹೇಳುತ್ತವೆ. ಆದರೆ ಅಷ್ಟೊಂದು ಅಕ್ಷರಗಳನ್ನು ನೆನಪಿಟ್ಟುಕೊಳ್ಳಲು ಅಸಾಧ್ಯ. ಸುಮಾರು ಮೂರು ಸಹಸ್ರ ಅಕ್ಷರಗಳಿಂದ ದಿನ-ನಿತ್ಯದ ಮಾತುಗಳನ್ನೆಲ್ಲ ಬರೆಯಬಹುದು. ಕ್ಲಿಷ್ಟ ಗ್ರಂಥಗಳನ್ನು ಓದಲು ಅಥವ ಬರೆಯಲು ಸುಮಾರು ಆರು ಸಹಸ್ರ ಅಕ್ಷರಗಳು ಬೇಕಾದೀತು"
"ಅಕ್ಷರಗಳನ್ನು ಒಂದರಿಂದ ಅರವತ್ತು ನಾಲ್ಕು ರೇಖೆಗಳು ಎಳೆದು ಬರೆಯ ಬಹುದು. ಇನ್ನೂ ಹೆಚ್ಚು ರೇಖೆಗಳೂ ಸಾಧ್ಯ. ಇಲ್ಲಿ ನೋಡು: ಸಂಖ್ಯೆ ೧ ಬರೆಯಬೇಕಾದರೆ ಒಂದು ರೇಖೆ, ಕನಕವನ್ನು ಬರೆಯಬೇಕಾದರೆ ಈ ರೀತಿ ೮ ಗೆರೆ, ದಂತ ತೋರಿಸಲು ಈ ರೀತಿ ೧೫ ರೇಖೆಗಳು, ಶುಕ ಪಕ್ಷಿಗೆ ೨೮ ರೇಖೆಗೆಅಳು, ವಾಚಾಳಿತ - ಮಾತಿನಗೂಳಿ ಎಂದು ಹೇಳಲು ಈ ರೀತಿ ೬೪ ರೇಖೆಗಳು" ಎಂದು ಅನೇಕ ರೇಖೆಗಳುಳ್ಳ ಚಿತ್ರಗಳನ್ನು ಬರೆದು ತೋರಿಸಿದ. ಒಂದು ಮನೆಯಂತೆ ಕಾಣಿಸಿತು ಮತ್ತೊಂದು ಚೌಕದಂತೆ, ಉಳಿದವೆಲ್ಲ ಎನೇನೋ ಗೀಚಿದ ಹಾಗೆ ಕಾಣಿಸಿದವು.
ನನಗಾದರೋ ಇವೆಲ್ಲವನ್ನು ಕಂಡು ಬಹು ಆಶ್ಚರ್ಯವಾಯಿತು. "ಇವೆಲ್ಲವಕ್ಕೂ ಬೇರೆ ಬೇರೆ ಉಚ್ಛಾರ, ಅರ್ಥಗಳಿವೆಯೇ?" ನಂಬಲಾಗದೆ ಕೇಳಿದೆ.
"ಇಲ್ಲ ಹಾಗೇನಿಲ್ಲ. ಹಲವಾರು ಗುರುತನ್ನು ಒಂದೇ ರೀತಿ ಓದುತ್ತೇವೆ. ಆದರೆ ಬರೆದಿರುವ ಅಕ್ಷರದ ಮೇಲೆ ಅದರ ಅರ್ಥ ನಿರ್ಭರವಾಗಿರುತ್ತದೆ. ಇಲ್ಲಿ ನೋಡು ಈ ಅಕ್ಷರ, ಈ ಅಕ್ಷರ ಹಾಗು ಈ ಅಕ್ಷರ ಮೂವರು ಒಂದೇ ರೀತಿ ಕಾಣಿಸುವುದಿಲ್ಲ" ಎಂದು ಮೂರು ಅಕ್ಷರಗಳನ್ನು ಬರೆದು ತೋರಿಸಿದ. "ಇವೆಲ್ಲವಕ್ಕೂ ಉಚ್ಛಾರ ಒಂದೇ ರೀತಿ 'ಬಾಂಗ್' ಎಂದು. ಆದರೆ ಅರ್ಥಗಳು ಮಾತ್ರ ಬೇರೆ ಬೇರೆ. ಕೆಲವು ಬಾರಿ ಒಂದೇ ಅಕ್ಷರದಲ್ಲಿ ಒಂದು ಪದ ಬರೆಯಲಾಗದಿದ್ದಲ್ಲಿ ಅದನ್ನು ಎರಡಾಗಿ ವಿಭಾಗಿಸಿ ಎರಡಕ್ಕೂ ಒಂದೊಂದು ಅಕ್ಷರಗಳು ಬರೆಯುವುದು" ಎಂದು ಮುಂದುವರೆಸಿದ.
"ಹೀಗಿದ್ದರೆ ಈ ಲಿಪಿ ಕೇವಲ ನಿನ್ನ ಭಾಷೆ ಬರೆಯಲು ಮಾತ್ರ ಅನುಕೂಲ ಹಾಗು ಉತ್ತಮ. ಇದರಲ್ಲಿ ನಮ್ಮ ದೇಶದ ವಿಚಾರಗಳನ್ನು ಹೇಗೆ ಬರೆಯುವೆ? ಉದಾಹರಣೆಗೆ ಈ ದೇಶದ ಹೆಸರನ್ನು ಹೇಗೆ ಬರೆಯುವೆ?" ಎಂದು ಕೇಳಿದೆ.
"ಈ ದೇಶವಾದರೋ ಸ್ವಲ್ಪ ಸುಲಭ ಕಪೀಥವನ್ನು ನಾನು ಕೀ-ಪಿ-ಥ ಎಂದು ಬರೆಯುವೆ. ಆದರೆ ಹಲವು ಹೆಸರುಗಳು ಬರೆಯಲು ಬಲುಕಷ್ಟ ಉದಾಹರಣೆಗೆ ನಾವು ಹಾಯ್ದು ಬಂದ ಬ್ರಹ್ಮಪುರ. ಇದನ್ನು ಪೊ-ಲೊ-ಹಿಹ್-ಮೊ-ಪು-ಲೊ ಎಂದು ಬರೆಯಬೇಕಾಯಿತು. ಅಂತೆಯೇ ಸ್ಥಾನೇಶ್ವರವನ್ನು ಸ-ತ-ನಿ-ಶಿ-ಫ-ಲೊ ಎಂದು ಬರೆದಿದ್ದೇನೆ." ಎಂದು ಉತ್ತರಿಸಿದ.
"ಇದು ತಪ್ಪಾಗುವುದಿಲ್ಲವೆ? ನಿನ್ನ ಕೃತಿ ಓದಿದವರಿಗೆ ಇದನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ?" ಎಂದು ಪ್ರಶ್ನಿಸಿದೆ
"ಇದು ನಮ್ಮ ಲಿಪಿಯ ಸೀಮಾಬಂಧನ - ಇದಕ್ಕಿಂತ ಹೆಚ್ಚು ನಿಖರವಾಗ ಬರೆಯಲಾರೆ" ಎಂದು ಉತ್ತರಿಸಿದ.
ಸುಮಾರು ಇದೇ ಸಮಯದಲ್ಲಿ ನನ್ನ ಮಿತ್ರ ತಾನು ಸಂಸ್ಕೃತ ಕಲಿಯುವ ಆಸೆಯನ್ನು ನನ್ನಲ್ಲಿ ತೋಡಿಕೊಂಡ "ಮಿತ್ರ, ನಾನು ಈ ದೇಶಕ್ಕೆ ಬಂದಿರುವುದೇ ತಥಾಗಥನ ಧರ್ಮವನ್ನು ಅರಿಯಲೆಂದು. ಇಲ್ಲಿಯಾದರೋ ಎಲ್ಲ ಸೂತ್ರಗಳು, ಗ್ರಂಥಗಳು ಎಲ್ಲವೂ ಸಂಸ್ಕೃತದಲ್ಲಿಯೇ ಬರೆದಿರುವಂತಾಗಿ ನನ್ನ ಈ ಗುರಿಯಲ್ಲಿ ಬಾಧೆಗಳುಂಟಾಗಿವೆ. ಧಾರ್ಮಿಕ ಗ್ರಂಥಗಳನ್ನೆಲ್ಲ ನಾನು ನಮ್ಮ ಭಾಷೆಗೆ ಅನುವಾದ ಮಾಡುವ ಆಕಾಂಕ್ಷೆ ಹೊತ್ತು ಬಂದಿದ್ದೇನೆ. ಹಾಗಾಗಿ ನಾನು ಸಂಸ್ಕೃತ ಕಲಿಯುವುದು ಅನಿವಾರ್ಯವಾಗಿದೆ. ನನಗಾದರೋ ಒಂದೇ ಸ್ಥಳದಲ್ಲಿ ನಿಂತು ಭಾಷೆ ಕಲಿಯುವ ವ್ಯವಧಾನವಿಲ್ಲ. ನೀನಾದರೆ ನನ್ನ ಜೊತೆಯಲ್ಲಿಯೇ ಬರುತ್ತಿರುವೆ. ಸಂಸ್ಕೃತವನ್ನೂ ಚೆನ್ನಾಗಿ ಬಲ್ಲವ ನೀನು. ನೀನೇ ಏಕೆ ನನಗೆ ಸಂಸ್ಕೃತ ಶಿಕ್ಷಣ ಮಾಡಿಕೊಡಿಸುವ ಆಚಾರ್ಯನಾಗಬಾರದು?" ಎಂದು ಬೇಡಿಕೊಂಡ.
ಸಂಸ್ಕೃತವನ್ನು ಅಡೆತಡೆಯಿಲ್ಲದೆ ಮಾತನಾಡಲು, ಓದಲು, ಬರೆಯಲೂ ಬಂದರೂ ನನಗಾದರೋ ಅದನ್ನು ಹೇಳಿಕೊಡುವುದು ಹೇಗೆ ಎಂದು ಗೊತ್ತಾಗುವಂತಿರಲಿಲ್ಲ. ನಾನು ಸಣ್ಣ ಹುಡುಗನಾಗಿದ್ದಾಗ ಗುರುಕುಲದಲ್ಲಿ ಗುರುಗಳು ಹೇಳಿಕೊಟ್ಟ ಸಂಸ್ಕೃತ ಪಾಠಗಳನ್ನು ಸ್ಮರಿಸಿಕೊಂಡೆ. ಬ್ರಾಹ್ಮಿ, ಗಾಂಧಾರ ಹಾಗು ಶಾರದ ಲಿಪಿಗಳು ಈಗ ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ. ದೇವನಾಗರಿ ಅಕ್ಷರಗಳೇ ಸರಿಯೆಂದು ನಿರ್ಧರಿಸಿದೆ. ಅಂತೆಯೇ ೫೧ ಅಕ್ಷರಗಳ ವರ್ಣಮಾಲೆ ಆದಿಯಾಗಿ ನನ್ನ ಪಾಠ ಆರಂಭ ಮಾಡಿದೆ.
ನಾನೇ ಗುರುವಿಗಿಂತ ಒಳ್ಳೆಯ ಶಿಷ್ಯನೋ ಅಥವ ನನ್ನ ಮಿತ್ರನೇ ಶಿಷ್ಯನಿಗಿಂತ ಒಳ್ಳೆಯ ಗುರುವೋ ಕಾಣೆ. ಅಂತು ಕಾಲ ಕಳೆದಂತೆ ಅವನು ಸಂಸ್ಕೃತ ಕಲಿಯಲು ಇನ್ನೂ ಕಷ್ಟಪಡುತ್ತಿದ್ದನಾದರೂ, ಅವನಿಗೆ ಹೇಳಿಕೊಡುತ್ತ ನಾನೇ ಅವನ ಲಿಪಿಯನ್ನು ಓದಲು ಕಲಿತೆ. ಅವನು ಬರೆಯುವುದನ್ನೆಲ್ಲ ಈಗ ಓದಲು ಸಾಧ್ಯವಾಗುತ್ತಿತ್ತು.
ಕಪೀಥವನ್ನು ಬಿಟ್ಟು ಕನ್ಯಾಕುಬ್ಜಕ್ಕೆ ಹೊರಟೆವು. ಕಪೀಥದಿಂದ ವಾಯವ್ಯ ದಿಕ್ಕಿನಲ್ಲಿ ಸುಮಾರು ೧೦೦ ಕ್ರೋಶಗಳಷ್ಟು ದೂರ ಹೋಗಿ ಕನ್ಯಾಕುಬ್ಜವನ್ನು ಸೇರಿದೆವು. ಕನ್ಯಾಕುಬ್ಜ ಹತ್ತಿರವಾಗುತ್ತಿದ್ದಂತೆ ನನ್ನ ಕಾತುರ ಹೆಚ್ಚಾಯಿತು. ಅಲ್ಲಿಯ ದೊರೆಯಾದ ಹರ್ಷವರ್ಧನನ ವಿರುದ್ಧ ಅರಸ ಪುಲಿಕೇಶಿಗಾಗಿ ಕೆಲಸ ಮಾಡಿದ್ದೆ - ಅದೂ ಗೂಢಚರ್ಯೆ. ನನ್ನನ್ನು ಗುರುತಿಸಿ ಕಾರಾಗ್ರಹಕ್ಕೆ ತಳ್ಳಿದರೆ? ಅಷ್ಟೇಯೇಕೆ, ಇನ್ನು ಮರಣ ದಂಡನೆ ವಿಧಿಸಿದರೆ? ಎಂದೆಲ್ಲ ಯೋಚಿಸಿ ನನ್ನ ಕಶೆರಿನ ಮೇಲೆ ಶೀತಲ ಬೆವರಿಳಿಯಿತು. ಆದರೆ ಈಗ ತಪ್ಪಿಸಿಕೊಳ್ಳುವಂತಿರಲಿಲ್ಲ. "ಇಷ್ಟು ದಿನಗಳ ಕಾಲವೂ ಹರ್ಷರಾಜನ ರಾಜ್ಯದಲ್ಲೇ ಇದ್ದೆ, ರಾಜಧಾನಿಗೆ ಹೋಗಲೇನು ಭಯ" ಎಂದು ನನಗೆ ನಾನೆ ಸಮಾಧಾನ ಹೇಳಿಕೊಂಡು ಮುನ್ನಡೆದೆ.
* * * * *
ಕನ್ಯಾಕುಬ್ಜವನ್ನು ಸೇರಿ ಹಲವು ದಿನಗಳ ಕಾಲ ನಾನು ದೇವಾಲಯವೊಂದರಲ್ಲಿ ತಂಗಿದ್ದು ಆಚೆಯೇ ಬರಲಿಲ್ಲ. ನನ್ನ ಮಿತ್ರ ಬಂದಾಗಲೆಲ್ಲ ಅಸ್ವಸ್ಥನಾಗಿರುವೆ ಎಂದು ಹೇಳಿ ಕಳುಹಿಸಿಬಿಡುತ್ತಿದ್ದೆ. ಸುತ್ತ-ಮುತ್ತಲಿನ ಜನರ ಬಳಿ ನನ್ನನ್ನು ಹುಡುಕಿಕೊಂಡು ಯಾರಾದರೂ ಬಂದಿದ್ದರೇ ಎಂದು ಕೇಳಿ, ನನ್ನ ಮಿತ್ರನನ್ನು ಬಿಟ್ಟು ಯಾರೂ ಬಂದಿಲ್ಲವೆಂದು ಕೇಳಿ ಸ್ವಲ್ಪ ಧೈರ್ಯ ಹೆಚ್ಚಾಯಿತು. ಕೊನೆಗೆ ಆಗೊಮ್ಮೆ ಈಗೊಮ್ಮೆ ಆಚೆ ಬರಲು ಆರಂಭಿಸಿದೆ.
ಕನ್ಯಾಕುಬ್ಜ ಪ್ರದೇಶ ಸುಮಾರು ಎರಡು ಸಹಸ್ರ ಕ್ರೋಶಗಳ ಸುತ್ತಳತೆ ಹೊಂದಿತ್ತು. ಹರ್ಷ ರಾಜನ ರಾಜಧಾನಿಯು ಸುಮಾರು ೧೦ ಕ್ರೋಶ ಉದ್ದ ಹಾಗು ೨-೩ ಕ್ರೋಶ ಅಗಲವಾಗಿದ್ದು ಗಂಗಾನಿದಿಯ ತೀರದಲ್ಲಿ ನೆಲೆಮಾಡಿತ್ತು. ಊರ ಸುತ್ತಲೂ ಕಂದಕವಿದ್ದರೂ ಈಗ ಅದು ಒಣಗಿ ಬರಿದಾಗಿತ್ತು. ಅಲ್ಲಲ್ಲೇ ಎತ್ತರದ ಕಾವಲು ಸ್ಥಂಭಗಳು ನಿರ್ಮಿತವಾಗಿದ್ದವು. ಸುಂದರ ಹೂವುಗಳುಳ್ಳ ವನಗಳು, ಹೂದೇಟಗಳು, ಕನ್ನಡಿಗಳಂತೆ ಹೊಳೆವ ಸರೋವರಗಳು ಎಲ್ಲೆಡೆ ಕಾಣಿಸುತ್ತಿದ್ದವು.
ಇಲ್ಲಿಯ ಜನಾಂಗ ಶಾಂತ ಮನೋಭಾವ ಹಾಗು ಸಮೃದ್ಧಿ ಹೊಂದಿದವರು, ನಿಸ್ಪೃಹ ಹಾಗು ಪ್ರಾಮಾಣಿಕತೆಯ ಗುಣಗಳುಳ್ಳವರು. ಕನಕಾಭರಣಗಳು ಹಾಗು ರೇಷ್ಮೆಯ ವಸ್ತ್ರಗಳನ್ನು ಧರಿಸುವ ಜನರು ವಾಸಿಸುವ ಮನೆಗಳು ಸೊಂಪಾಗಿ, ವಿಶಾಲವಾಗಿವೆ. ಶಿಕ್ಷಣೆ ಹಾಗು ವಿದ್ವತ್ತಿಗೆ ಬಹು ಮಹತ್ವ ಕೊಡುವ ಇಲ್ಲಿಯ ನಿವಾಸಿಗಳ ಶುದ್ಧ ಭಾಷೆ ಪ್ರಖ್ಯಾತವಾಗಿದೆ. ಸೌಖ್ಯ ವಾತಾವರಣದ ವರ ಪಡೆದ ನಗರ ಕನ್ಯಾಕುಬ್ಜವಾಗಿತ್ತು.
ನನ್ನ ಮಿತ್ರನಿಗೆ ಇಲ್ಲಿ ಸ್ಥಾನೇಶ್ವರದಲ್ಲಿ ಆದಷ್ಟು ಬೇಸರವಾಗಲಿಲ್ಲ. ನಮ್ಮ ಧರ್ಮದವರೇ ಹೆಚ್ಚಾಗಿದ್ದರೂ, ಬೌದ್ಧಧರ್ಮ ಅನುಸರಿಸುವವರು ಹೆಚ್ಚು ಕಡಿಮೆ ಸಮ ಸಂಖ್ಯೆಯಲ್ಲಿದ್ದರು. ಒಂದು ನೂರು ಸ್ತೂಪ-ಸಂಘಾರಾಮಗಳಿದ್ದರೆ, ಸುಮಾರು ಎರಡು ಶತಕ ನಮ್ಮ ದೇವತೆಗಳ ದೇವಾಲಯಗಳಿದ್ದವು. ಮೇಲಾಗಿ ಹರ್ಷರಾಜ ಬೌದ್ಧರಿಗೆ ಸಾಕಷ್ಟು ಬೆಂಬಲ ನೀಡಿದ್ದರೂ ಮೂಲತಃ ವೈಶ್ಯ ವರ್ಣದವನಾಗಿದ್ದು ಶಿವಶಂಕರನ ಭಕ್ತನಾಗಿದ್ದನು. ಹಾಗಾಗಿ ಕನ್ಯಾಕುಬ್ಜದಲ್ಲಿ ಎರಡೂ ಧರ್ಮಗಳು ಸರಿಸಮಾನವಾಗಿ ನಡೆಬರುತ್ತಿದ್ದವು.
ಪೂರ್ವಕಾಲದಲ್ಲಿ ಈ ಸ್ಥಳದ ಹೆಸರು ಕುಸುಮಪುರವಾಗಿದ್ದು, ಬ್ರಹ್ಮದತ್ತನೆಂಬ ರಾಜ ಇಲ್ಲಿಯ ದೊರೆಯಾಗಿದ್ದನಂತೆ. ಬ್ರಹ್ಮದತ್ತನಿಗೆ ಸಹಸ್ರ ಮೇಧಾವಿ ಪುತ್ರರು, ಶತಕ ಸುಂದರೀಮಣಿ ಪುತ್ರಿಯರು. ಗಂಗಾ ನದಿ ತೀರದಲ್ಲಿ ತಪಸ್ಸಿನಲ್ಲಿ ಮುಳುಗಿದ್ದ ಋಷಿಯೊಬ್ಬರು ಒಮ್ಮೆ ಬ್ರಹ್ಮದತ್ತನ ಪುತ್ರಿಯರು ನದಿಯಲ್ಲಿ ವಿಹರಿಸುತ್ತಿರುವುದನ್ನು ನೋಡಿ, ಅವರಲ್ಲಿ ಕಾಮಧಾತು ಎಚ್ಚೆತ್ತು, ರಾಜನ ಬಳಿ ಹೋಗಿ ರಾಜಕುಮಾರಿಯರಲ್ಲಿ ಒಬ್ಬಳನ್ನು ವಿವಾಹ ಮಾಡಿಕೊಡಲಾಗಿ ಕೇಳಿದರಂತೆ. ರಾಜಕುಮಾರಿಯರೆಲ್ಲರೂ ನಿರಾಕರಿಸಲು ರಾಜನು ಚಿಂತಾಗ್ರಸ್ಥನಾದನಂತೆ. ಆ ಸಮಯದಲ್ಲಿ ರಾಜನ ಚಿಂತನೆಯ ಕಾರಣ ಅರಿತ ಕಿರಿಯ ರಾಜಕುಮಾರಿ ಆ ಋಷಿಯನ್ನು ವಿವಾಹವಾಗಲು ಒಪ್ಪಿದಳಂತೆ. ಋಷಿಗೆ ವಿಚಾರ ತಿಳಿಯಲು, ಕುಪಿತನಾಗಿ "ನನ್ನ ಮುಪ್ಪಿನ ಕಾರಣದಿಂದ ನನ್ನನ್ನು ವಿವಾಹವಾಗಲು ನಿರಾಕರಿಸಿದ ಆ ತೊಂಬತ್ತೊಂಬತ್ತು ರಾಜಕುಮಾರಿಯರು ಗೂನು ಬೆನ್ನಿನಿಂದ ಕುಬ್ಜರಾಗಿಹೋಗಲಿ" ಎಂಬ ಶಾಪವನ್ನಿತ್ತರಂತೆ. ಆಗಿನಿಂದ ಆ ನಗರಕ್ಕೆ ಕನ್ಯಾಕುಬ್ಜವೆಂಬ ನಾಮಕರಣವಾಯಿತಂತೆ.
ಪ್ರಭಾಕರವರ್ಧನ-ರಾಜ್ಯವರ್ಧನ ಹಾಗು ಹರ್ಷವರ್ಧನರ ಕತೆಯನ್ನು ಆಗಲೇ ಹೇಳಿರುವುದಾಗಿ ಪುನಃ ಸ್ತುತಿಸುವುದಿಲ್ಲ. ಐದು ವರ್ಷಗಳಿಗೊಮ್ಮೆ ಹರ್ಷವರ್ಧನನು ಧಾರ್ಮಿಕ ಸಮಾವೇಶವನ್ನು ಆಯೋಜಿಸುವನಂತೆ. ಇದಕ್ಕೆ 'ಮೋಕ್ಷ' ಎಂಬ ನಾಮಕರಣವೂ ಮಾಡಿರುವನಂತೆ. ಬೌದ್ಧ ಶ್ರಮಣರು, ಜೈನರು, ವೈದಿಕ ಬ್ರಾಹ್ಮಣರೆಲ್ಲರನ್ನೂ ಕೂಡಿಸಿದ ಸರ್ವ-ಧರ್ಮ ಸಮಾವೇಶವದು. ಸಮಾವೇಶದ ಮೂರನೆ ಹಾಗು ಏಳನೆಯ ದಿನಗಳಂದು ರಾಜ್ಯ ಬೊಕ್ಕಸದಿಂದ ಸೈನಿಕರ ಆಯುಧಗಳನ್ನು ಬಿಟ್ಟು ಬೇರೆಲ್ಲವನ್ನೂ ದಾನವಾಗಿ ಕೊಟ್ಟುಬಿಡುವನಂತೆ. ಪ್ರವೀಣರ ನಡುವೆ ತರ್ಕ-ವಾದಗಳನ್ನು ನಡೆಸಿ ಅವುಗಳನ್ನು ಅವನೇ ತೀರ್ಮಾನಿಸುವನಂತೆ. ಗೆದ್ದವರನ್ನು ಸನ್ಮಾನಿಸಿ, ಧರ್ಮ ಪಥದಲ್ಲಿ ನಡೆವ ಈ ಪುರುಶರನ್ನು ಸಿಂಹಾಸನಕ್ಕೇರಿಸಿ ಧರ್ಮದ ಬೋಧನೆ ಪಡೆಯುತ್ತಾನಂತೆ. ಪುಣ್ಯಾತ್ಮರನ್ನು ಸನ್ಮಾನಿಸಿ ಪಾಪಾತ್ಮರನ್ನು ಗಡೀಪಾರು ಮಾಡಿಸುವನಂತೆ. ಅಂತೆಯೇ ಧರ್ಮಬದ್ಧರಾದ ಸಾಮಂತರನ್ನು 'ಶ್ರೇಷ್ಠ ಮಿತ್ರ' ಎಂದು ಕೂಗಿ ತನ್ನ ಆಸನದಲ್ಲಿಯೇ ಕುಳ್ಳಿರಿಸಿಕೊಳ್ಳುವನಂತೆ.
ಕಾಮರೂಪ ಪ್ರದೇಶದ ಒಬ್ಬ ಶ್ರೀಮಂತನಾದ ಕುಮಾರರಾಜ ಆ ಸಮಯದಲ್ಲಿ ನನ್ನ ಮಿತ್ರನನ್ನು ಕಂಡು, ನಾವು ತನ್ನೊಡನೆ ಕಾಮರೂಪಕ್ಕೆ ಹೋಗುವ ಆಹ್ವಾನವಿತ್ತ. ನನ್ನ ಮಿತ್ರನು ಮಗಧ ದೇಶ ಸಂದರ್ಶನ ಮಾಡಿ ಕಾಮರೂಪಕ್ಕೆ ಬರುವುದಾಗಿ ಹೇಳಿದನು. ನಂತರ ಕಾಜುಗೃಹದ ಬಳಿ ರಾಜಯಾತ್ರೆ ಮಾಡುತ್ತಿದ್ದ ಹರ್ಷರಾಜನನ್ನು ನೋಡಲೆಂದು ಕಾಜುಗೃಹಕ್ಕೆ ಹೋದೆವು. ನಾನು ಊರಿನಲ್ಲಿ ಹಲವು ದಿನಗಳ ಕಾಲ ಕಾಣಿಸಿಕೊಂಡಿದ್ದರೂ ಯಾರೂ ನನ್ನನ್ನು ಗುರುತಿಸಿದ ಹಾಗೆ ಕಾಣಿಸಲಿಲ್ಲ. ಬಹುಶಃ ನನ್ನ ರೂಪವೇ ಬದಲಾಗಿರುವುದರಿಂದ ಹಾಗಿರಬಹುದು ಎಂದು ಊಹಿಸಿ ಚಿಂತೆಯಿಲ್ಲದೆ ನಾನೂ ನನ್ನ ಮಿತ್ರನೊಡನೆ ಹರ್ಷರಾಜನ ಸಭೆಗೆ ಹೋರಟೆ.
ಹರ್ಷನ ಸಭೆಗೆ ಹೋಗಿ ನನ್ನ ಮಿತ್ರ ತನ್ನ ರಾಜಾಜ್ಞೆ, ಪರಿಚಯ ಪತ್ರಗಳನ್ನು ತೋರಿಸಿದ. ನಾನೂ ಸಂಸ್ಕೃತದಲ್ಲಿ ಅವನೊಡನೆ ಜಾಲಂಧರದಿಂದ ಭಾಷಾಂತರಕ್ಕಾಗಿ ಬಂದಿರುವುದಾಗಿ ಹೇಳಿದೆ. ಆಗ ಹರ್ಷರಾಜನು ನನ್ನ ಮಿತ್ರನನ್ನು ಕುರಿತು "ನೀವು ಯಾವ ದೇಶದಿಂದ ಬಂದಿರುವಿರಿ? ನಿಮ್ಮ ಯಾತ್ರೆಯಲ್ಲಿ ಏನು ಸಾಧಿಸುವ ಅಪೇಕ್ಷೆ ಇಟ್ಟುಕೊಂಡಿದ್ದೀರಿ?" ಎಂದು ಕೇಳಿದ.
ನಾನು ಇದನ್ನು ಅನುವಾದಿಸಿ ನನ್ನ ಮಿತ್ರನಿಗೆ ಕೇಳಿದೆ. ಅವನು ಕೊಟ್ಟ ಉತ್ತರವನ್ನು ಹೀಗೆ ಮಹಾರಾಜನಿಗೆ ಹೇಳಿದೆ "ನಾನು ಮಹಾನ್ 'ಟಾಂ' ದೇಶದಿಂದ ಬೌದ್ಧ ಧರ್ಮ ಗ್ರಂಥಗಳನ್ನು ಓದಿ ಅರಿಯುವ ಅಪೇಕ್ಷೆಯಿಂದ ಬಂದಿರುವೆ"
ಮಹಾರಾಜ ನುಡಿದ "ನಿಮ್ಮ ಟಾಂ ದೇಶ ಎಲ್ಲಿದೆ? ಯಾವ ರಸ್ತೆಯಲ್ಲಿ ಬಂದಿರಿ? ಎಷ್ಟು ದೂರದ ಪ್ರಯಾಣ?"
"ನನ್ನ ದೇಶ ಈಶಾನ್ಯ ದಿಕ್ಕಿನಲ್ಲಿ ಅಸಂಖ್ಯಾತ ಕ್ರೋಶಗಳ ದೂರದಲ್ಲಿದೆ. ಈ ನಿಮ್ಮ ಜಂಬೂದ್ವೀಪದಲ್ಲಿ ನಮ್ಮ ದೇಶದ ಹೆಸರು ಮಹಾಚೀನ" ನನ್ನ ಮಿತ್ರ ನನ್ನ ಮೂಲಕ ಉತ್ತರಿಸಿದ.
"ನಿಮ್ಮ ದೇಶ ಹಾಗು ಅದರ ಅರಸನ ಬಗ್ಗೆ ಕೇಳಿ ತಿಳಿದಿರುವೆ. ನಿಮ್ಮ ದೇಶದ ಬಗ್ಗೆ ಹೆಚ್ಚಿನ ವಿವರ ಕೊಡಿ" ಎಂದ ಮಹಾರಾಜ
ನನ್ನ ಮಿತ್ರ "ಮಹಾಚೀನ ನಮ್ಮ ಪೂರ್ವ ಅರಸರ ಕಾಲದ ಹೆಸರು. ಈಗಿನ ದೊರೆ ಅದನ್ನು 'ಮಹಾ ಟಾಂ' ಎಂದು ಕರೆಯುತ್ತಾನೆ. ಪೂರ್ವದಲ್ಲಿ ನಮ್ಮ ಅರಸನು 'ಸಿಂ ಸಾರ್ವಭೌಮ' ಎಂಬ ಬಿರುದನ್ನು ಹೊತ್ತಿದ್ದ. ಅವನು ಪಟ್ಟಕ್ಕೇರಿದಾಗ ಹಿಂದಿನ ಅರಸ ಮರಣ ಹೊಂದಿದವನಾಗಿ ಸಮಾಜದಲ್ಲಿ ಕೋಲಾಹಲವೆದ್ದು ಜನರ ಹಾ ಹಾ ಕಾರ ಗಗನಕ್ಕೇರಿತ್ತು. ನಮ್ಮ 'ಸಿಂ ಸಾರ್ವಭೌಮನ ಅನುಕರಣೆ, ಅನುಕಂಪಗಳಿಂದ ದುಷ್ಟರಿಗೆ ಶಿಕ್ಷೆಯಾಗಿ ಶಿಷ್ಟ ರಕ್ಷಣೆಯಾಯಿತು. ಎಂಟು ದಿಕ್ಕುಗಳು ಶಾಂತವಾಗಿ ಹತ್ತು ಸಹಸ್ರ ಸಾಮಂತರು ಕಪ್ಪ ಕಾಣಿಕೆಗಳನ್ನು ಸಲ್ಲಿಸಿದರು. ಕೊನೆಗೆ ಜನರು ಶಾಂತಿ ಸಮೃದ್ಧಿ ಹೊಂದಿದರು. ಅವನ ಗುಣಗಾನ ಎಷ್ಟುಮಾಡಿದರೂ ಸಾಲದು" ಎಂದು ದೊಡ್ಡ ಭಾಷಣವನ್ನೇ ಭಿಗಿದ.
ಹರ್ಷ ರಾಜ "ಬಹಳ ಸಂತೋಷ" ಎಂದು ಹೇಳಿ ಕಳುಹಿಸಿ ಕೊಟ್ಟ.
* * * * *
ಹರ್ಷರಾಜನ ಧಾರ್ಮಿಕ ಸಮಾವೇಶದ ಸಮಯವಾಗಿತ್ತು. ಗಜಾರೋಹಣ ಮಾಡುತ್ತ, ನಗಾರಿಗಳ ಬಡಿತ ಹಾಗು ಕಹಳೆಗಳ ನಾದಗಳೊಂದಿಗೆ ಹರ್ಷರಾಜ ಕನ್ಯಾಕುಬ್ಜದ ಬಳಿ ಗಂಗಾ ನದಿಯ ಪಶ್ಚಿಮ ತೀರಕ್ಕೆ ಆಗಮಿಸಿದ. ಅವನ ಆಜ್ಞೆಯ ಮೇರೆಗೆ ಇಪ್ಪತ್ತು ಸಾಮಂತರು ಸುತ್ತ ಮುತ್ತಲಿನ ಪ್ರದೇಶಗಳಿಂದ ಬಂದು ನೆರೆದಿದ್ದರು. ಅವರೊಂದಿಗೆ ಮೂರು ಸಹಸ್ರ ಬ್ರಾಹ್ಮಣರು, ಮೂರು ಸಹಸ್ರ ಬೌದ್ಧ ಶ್ರಮಣರಲ್ಲದೆ ಮೇಧಾವಿಗಳು, ಶ್ರೀಮಂತರು ಮತ್ತಿತರರು ಅಲ್ಲಿಗೆ ಆಗಮಿಸಿದ್ದರು. ಎಲ್ಲರಿಗೂ ತಂಗಲು ಅಲ್ಲಿಯೇ ವಿಹಾರಗಳನ್ನು ನಿರ್ಮಿಸಲಾಗಿತ್ತು.
ಆಸನವೊಂದರಲ್ಲಿ ಬುದ್ಧನ ಪ್ರತಿಮೆಯನ್ನು ಇರಿಸಲಾಗಿತ್ತು. ಅಂತೆಯೇ ಹೋಮಕುಂಡದಲ್ಲಿ ಬ್ರಾಹ್ಮಣರು ಯಜ್ಞ-ಯಾಗಾದಿಗಳನ್ನು ನಡೆಸಿದ್ದರು. ಹರ್ಷರಾಜನೂ ಆ ಸಮಯದಲ್ಲಿ ವಿಹಾರದ ಹತ್ತಿರದಲ್ಲಿಯೇ ಬಿಡಾರ ಊರಿದ್ದನು. ರಾಜನ ಬಿಡಾರದಿಂದ ಸಾರ್ವಜನಿಕ ವಿಹಾರದವರೆಗು ಗುಡಾರಗಳನ್ನು ನಿರ್ಮಿಸಲಾಗಿತ್ತು. ಸಂಗೀತಗಾರರು ತಮ್ಮ ಕಲೆಯನ್ನು ಈ ಗುಡಾರಗಳಲ್ಲಿ ಪ್ರದರ್ಶಿಸುತ್ತಿದ್ದರು. ವಸಂತ ಋತುವಿನ ಎರಡನೇ ಮಾಸವಾಗಿತ್ತು. ಬ್ರಾಹ್ಮಣ ಹಾಗು ಶ್ರಮಣರಿಗೆ ಅವರವರ ಧರ್ಮಕ್ಕೆ ತಕ್ಕಂತೆ ಭೋಜನಾದಿಗಳ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಎರಡೂ ಧರ್ಮಗಳ ದೇವತೆಗಳಿಗೆ ಅಶ್ವಾರೋಹಣ, ಗಜಾರೋಹಣ, ಛತ್ರ ಛಾಮರಾದಿ ಸಕಕಲ ರಾಜೋಪಚಾರಗಳನ್ನು ಸಲ್ಲಿಸುತ್ತಿದ್ದರು.
ಹರ್ಷರಾಜನು ಆ ಮೆರವಣಿಗೆಯಲ್ಲಿ ಹೋಗುತ್ತಿದ್ದಂತೆ ಮುತ್ತು, ರತ್ನ ಹಾಗು ಬಂಗಾರ-ಬೆಳ್ಳಿ ಹೂಗಳನ್ನು ಎಲ್ಲೆಡೆ ಚೆಲ್ಲುತ್ತ ಹೋದನು. ನಂತರ ದೇವತೆಗಳಿಗೆ ಅಭಿಶೇಕ ಮಾಡಿ ನೂರಾರು ರೇಷ್ಮೆ ವಸ್ತ್ರಗಳನ್ನು, ನಾಣ್ಯಗಳನ್ನು, ಇತರ ದ್ರವ್ಯಗಳನ್ನು ಸಲ್ಲಿಸಿದನು. ನಂತರ ಮೇಧಾವಿಗಳ ಸಭೆಯಲ್ಲಿ ಕ್ಲಿಷ್ಟ ವಿಚಾರಗಳನ್ನು ಕುರಿತು ತರ್ಕ-ವಾದಗಳಿಗೆ ಅವಕಾಶವಿತ್ತು. ಇದೇ ರೀತಿ ಆ ಸಮಾವೇಶದ ಪ್ರತಿನಿತ್ಯವೂ ಹರ್ಷರಾಜನೇ ಪೂಜೆಸಲ್ಲಿಸುತ್ತಿದ್ದನು.
ಸಮಾವೇಶದ ಕೊನೆಯ ದಿನದಂದು ಒಂದು ವಿಹಾರದಲ್ಲಿ ಮಹತ್ತಗ್ನಿ ಹೊತ್ತಿಕೊಂಡಿತು. ಉದ್ವೇಗದಿಂದ ಹರ್ಷರಾಜನು "ನನ್ನ ರಾಜ್ಯ ಸಂಪತ್ತನ್ನು ಧರ್ಮದಲ್ಲಿ ಧಾರೆಯೆರೆದು ಕೊಟ್ಟಿರುವೆ. ನನ್ನ ಪೂರ್ವಿಕರಂತೆ ಧರ್ಮಪಥದಲ್ಲಿ ಯಾಣ ಮಾಡಬಯಸಿ ಈ ವಿಹಾರವನ್ನು ಕಟ್ಟಿಸಿರುವೆ. ಆದರೂ ಯಾವ ದುರ್ವೃತ್ತಿಯಿಂದಲೋ ಏನೋ ಯಾವ ಈ ಅನಾವೃತ್ತಿ ಒದಗಿಬಂದಿದೆ. ಹೀಗಿರುವಲ್ಲಿ ನಾನು ಜೀವಿಸಿ ಫಲವೇನು?" ಎಂದು ಹೇಳಿಕೊಂಡು ದೈವ ಪ್ರಾರ್ಥನೆ ಮಾಡಿದನು.
ನಂತರ "ಪೂರ್ವಜನ್ಮದ ಪುಣ್ಯದಿಂದಲೋ ಏನೋ ನಾನು ಈ ಜಂಬೂದ್ವೀಪದ ಅಧಿಪತಿಯಾಗಿರುವೆ. ನಾನು ಸಂಪಾದಿಸಿದ ಧರ್ಮ ಕೀರ್ತಿಯಿಂದ ಈ ಅಗ್ನಿಯು ಆರಿಹೋಗಲಿ ಇಲ್ಲವಾದರೆ ನಾನು ನನ್ನ ಪ್ರಾಣವನ್ನೇ ತ್ಯಜಿಸುವೆ" ಎಂದು ಪ್ರತಿಜ್ಞೆ ಮಾಡಿದನು. ಅಷ್ಟು ಹೊತ್ತಿಗೆ ಆ ಅಗ್ನಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಭಟರು ಕಾರ್ಯದಲ್ಲಿ ಸಫಲರಾಗಿ ಆ ಅಗ್ನಿಯು ಶಾಂತವಾಯಿತು.
ಈ ದೃಶ್ಯವನ್ನು ಸಮೀಕ್ಷಿಸುತ್ತಿದ್ದ ರಾಜನನ್ನು ಯಾರೋ ಒರ್ವ ಮನುಷ್ಯ ಕೈಯಲ್ಲಿ ಕತ್ತಿಯೊಂದನ್ನು ಹಿಡಿದು ರಾಜನನ್ನು ಕೊಲ್ಲಲು ಹೊರಟ. ಒಂದು ಕ್ಷಣ ಭಯಭೀತನಾದರೂ ಹರ್ಷರಾಜನು ಅವನನ್ನು ತಡೆ ಹಿಡಿದು ಸಮೀಪದಲ್ಲಿದ್ದ ಭಟರಿಗೆ ಒಪ್ಪಿಸಿದನು. ನಂತರ ಆ ಕೊಲೆಪಾತಕನನ್ನು ಇಂತು ಪ್ರಶ್ನಿಸಿದನು "ನಾನು ನಿನಗೆ ಮಾಡಿರುವ ಅನ್ಯಾಯವಾದರೂ ಏನು? ನನ್ನನ್ನು ಕೊಲ್ಲಲೇಕೆ ಪ್ರಯತ್ನಿಸಿದೆ?"
ಆ ಮನುಷ್ಯನು ಸರಿಯಾದ ಉತ್ತರ ಕೊಡಲಿಲ್ಲ. ಹತ್ತಿರ ನೆರೆದಿದ್ದ ಶ್ರಮಣರನ್ನು ಭೀತಿಯಿಂದ ನೋಡುತ್ತ "ಮಹಾರಾಜ, ನೀನು ಬೌದ್ಧರ ಕಡೆಯಲ್ಲಿ ಪಕ್ಷಪಾತ ಮಾಡುವೆಯೆಂದು ತಿಳಿದು ಬ್ರಾಹ್ಮಣವರ್ಗದವರು ನನ್ನನ್ನು ಈ ಕಾರ್ಯಕ್ಕೆ ಒತ್ತಾಯಿಸಿದರು" ಎಂದನು.
"ಇದು ನಿಜವಲ್ಲ ನಾನು ಬೌದ್ಧರನ್ನು ಪೋಷಿಸುವಷ್ಟೇ ಬ್ರಾಹ್ಮಣರನ್ನೂ ಪೋಷಿಸುವೆ. ಇದು ನಿಜವಾಗಿರಲು ಸಾಧ್ಯವಿಲ್ಲ. ಇವನನ್ನು ಕಾರಾಗ್ರಹದಲ್ಲಿ ಬಂಧಿಸಿ, ವಿಚಾರಣೆ ಮುನ್ನಡೆಸಿ" ಎಂದು ಹೇಳಿ ತನ್ನ ಅರಮನೆಗೆ ಹಿಂತಿರುಗಿದನು.
ಈ ವಿಷಯವನ್ನು ಕುರಿತು ನೆರೆದ ಬ್ರಾಹ್ಮಣಾದಿ ಜನರಲ್ಲಿ ವಿಚಾರಣೆ ನಡೆಸಿದರೂ ಯಾವ ತೀರ್ಮಾನವೂ ಆಗಲಿಲ್ಲ. ಕೊನೆಗೆ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಕೊಲೆಪಾತಕನನ್ನು ಕಾರಾಗ್ರಹಕ್ಕೆ ತಳ್ಳಲಾಯಿತು.
ಆ ಸಮಾವೇಶ ಮುಗಿದ ಕಾಲದಿಂದ ನನಗೇಕೋ ಮನಸ್ಸಿನಲ್ಲ ಕಳವಳವುಂಟಾಗ ತೊಡಗಿತ್ತು. ಯಾವಾಗಲೂ ಯಾರೋ ನನ್ನ ಮೇಲೆ ಕಣ್ಣಿಟ್ಟಿರುವಂತೆ, ಯಾರೋ ನನ್ನ ಬೆನ್ನ ಹಿಂದೆ ಹೊಂಚು ಹಾಕುತ್ತಿರುವಂತೆ. ಈ ವ್ಯಥಿಗೆ ಕಾರಣಗಳಾದರೂ ಆಗ ಅರ್ಥವಾಗುತ್ತಿರಲಿಲ್ಲ. ಈಗ ಯೋಚಿಸಿದರೆ ನನ್ನ ಮನಸ್ಸಿನಾಳದಲ್ಲಿ 'ರಾಜನ ಪ್ರಾಣ ತೆಗೆಯಲು ಪ್ರಯತ್ನ ಮಾಡಲಾಗಿದೆ. ಯಾರು ಏನು ಎಂಬ ತೃಪ್ತ ವಿವರಣೆ ಸಿಕ್ಕಿಲ್ಲ. ನಾನಾದರೋ ಪೂರ್ವ ಗೂಢಚಾರ, ಮೇಲಾಗಿ ಈ ರಾಜನ ವೈರಿಗೆ ಇವನ ವಿರುದ್ಧ ಕೆಲಸ ಮಾಡಿದವ. ಎಲ್ಲಿಂದಲೋ ಬಂದು ಅನುಮಾನದ ಬೆರಳು ನನ್ನನ್ನು ತೋರಿಸಿದರೆ?' ಎಂಬ ಚಿಂತೆ ಇದ್ದಿರಬೇಕು. ಹೀಗೇ ಚಿಂತಾಸ್ಥಿತಿಯಲ್ಲಿ ಅಂದು ಹೋಗಿ ಮಹೇಶ್ವರ ದೇವಾಲಯದ ಜಗುಲಿಯ ಮೇಲೆ ಮಲಗಿದೆ.
ಅಂದು ದೇವಾಲಯದಲ್ಲಿ ಹೆಚ್ಚು ಮಂದಿ ಇರಲಿಲ್ಲ. ಸಮಾವೇಶದ ನಂತರ ಎಲ್ಲರೂ ತಮ್ಮ ತಮ್ಮ ಊರು ಕೇರಿಗಳ ಕಡೆ ಹೊರಟುಹೋಗಿದ್ದರು. ಮೇಲಾಗಿ ವೃಷ್ಠಿಯ ಸಂಭಾವನೆ ಇದ್ದ ಹಾಗೆ ಕಾಣಿಸುತ್ತಿತ್ತು. ಆಕಾಶದಲ್ಲಿ ಚಂದ್ರ ತಾರೆಯರು ಮಾಯವಾಗಿ ಕೇವಲ ನೀಲ ವರ್ಣ ಮೇಘಗಳಿಂದ ತುಂಬಿತ್ತು. ಶೀತವೂ ಸ್ವಲ್ಪ ಹೆಚ್ಚೆನ್ನುವಷ್ಟೇ ಇದ್ದ ಕಾರಣ ನಾನು ಜಗುಲಿಯ ಮೂಲೆಯಲ್ಲಿ ಮುದುರಿಕೊಂಡು ಮಲಗಿದ್ದೆ. ನನ್ನ ಮಿತ್ರ ತನ್ನೊಡನೆ ಸಂಘಾರಮಕ್ಕೆ ಬರಲು ಹೇಳಿದ್ದ. ನನಗಾದರೋ ಏಕೀ ಧಾರ್ಮಿಕ ಸಂಕೋಚವೆಂದು ನನ್ನನ್ನೇ ನಾನು ದೋಷಿಸುತ್ತ ನಿದ್ರೆ ಮಾಡಲು ಯತ್ನಿಸಿದೆ. ಚಳಿಯಿಂದಲೋ, ವೃಷ್ಠಿಯ ಆತಂಕದಿಂದಲೋ ಅಥವ ನನ್ನ ಮನಸ್ಸಿನೊಳಗಿನ ಚಿಂತಾ-ವ್ಯಥಗಳಿಂದಲೋ ಇಂದೇಕೋ ನಿದ್ರೆ ಬಾರದಾಗಿತ್ತು.
ಮಧ್ಯ ರಾತ್ರಿ ಕಳೆದು ಹೋಗಿ ಸುಮಾರು ಸಮಯವಾಗಿತ್ತು. ಮೆಲ್ಲನೆಯ ಶೀಶ್ಕಾರದ ಶಬ್ಧ ಕೇಳಿಸಿತು. ಇಂತಹ ಶೀಶ್ಕಾರ ಬಹು ಚನ್ನಾಗಿ ಅರಿತಿದ್ದೆ ನಾನು. ಆರ್ಯ ಜನರು ಬಳಸುವುದಲ್ಲ ಇದು. ನನಗೆ ಅದೇ ಕ್ಷಣದಲ್ಲಿ ಏನೆನಿಸಿತೋ ಏನೊ ಸದ್ದಿಲ್ಲದೆ ಜಗುಲಿಯಿಂದ ಇಳಿದು ಹತ್ತಿದರಲ್ಲಿದ್ದ ಬಂಡೆಯ ಹಿಂದೆ ಹೋಗಿ ಅವಿತು ವೃದ್ಧಿಯನ್ನು ಆಲಿಸಿ ಕುಳಿತೆ. ಹೆಚ್ಚು ಸಮಯ ಕಾಯಬೇಕಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ದಾರಿಯ ಎರಡೂ ಬದಿಗಳಿಂದ ಭಟರು ಬಂದು ಜಗುಲಿಯ ಸುತ್ತ ನಿಂತರು. ನನ್ನ ಹೊದ್ದಿಕೆ ಜಗುಲಿಯ ಮೇಲೇ ಉಳಿದುಹೋಗಿತ್ತು. ನಿಶ್ಯಬ್ದವಾಗಿ ಬಂದು ಕತ್ತಿ-ಈಟಿಗಳನ್ನು ಎತ್ತಿ ಜಗುಲಿಯ ಸುತ್ತ ನಿಂತ ಭಟರು ಒಂದು ದೀಪವನ್ನು ಗುಡಿಯ ಒಳಗಿನಿಂದ ತಂದರು. ಆ ಕ್ಷಣದಲ್ಲಿ ನನ್ನನ್ನು ಅಲ್ಲಿ ಕಾಣದೆ ಅವರಲ್ಲಿ ಕಳವಳ.
"ಇಲ್ಲಿದ್ದಾನೆ ಎಂದು ಹೇಳಿದೆಯಲ್ಲ, ಎಲ್ಲಿ?" ಒಬ್ಬ ಕೇಳಿದ
"ಇಲ್ಲೇ ಇದ್ದ... ಈಗೊಂದು ಕ್ಷಣದಲ್ಲಿ. ಹೋಗಿ ಬರುವುದರಲ್ಲಿ..." ಮತ್ತೊಬ್ಬನ ಉತ್ತರ
"ಹಾಗಾದರೆ ಜಗುಲಿ ನುಂಗಿತೆ? ಗಾಳಿಯೊಳಗೆ ಮಾಯವಾದನೇ ..." ಮೂರನೆಯ ಧ್ವನಿ ಕೇಳಿಬಂತು
"ಒಂದು ಕ್ಷಣ ನಿಲ್ಲಿ.... ಇಲ್ಲಿ ನೋಡಿ ಹೊದ್ದಿಕೆ ಇನ್ನೂ ಬೆಚ್ಚಗಿದೆ. ಈಗೆಲ್ಲೋ ಎದ್ದು ಹೋಗಿರಬೇಕು. ಸುತ್ತ ನೋಡಿ" ಒಬ್ಬವ ಜಗುಲಿಯ ಮೇಲೆ ಬಗ್ಗಿ ನನ್ನ ಹೊದ್ದಿಕೆ ಎತ್ತಿ ಹಿಡಿದು ಹೇಳಿದ.
ಭಟರೆಲ್ಲರೂ ಸುತ್ತಲೂ ಚದುರಿದರು. ಪೊದೆಗಳಲ್ಲಿ ತಮ್ಮ ಈಟಿ ಕತ್ತಿಗಳನ್ನು ತಿವಿಯುತ್ತ ನನ್ನನ್ನು ಹುಡುಕತೊಡಗಿದರು. ನಾನು ಅಷ್ಟು ಹತ್ತಿರದಲ್ಲಿರುವುದು ಅವರಾರು ಬಹುಶಃ ಆಲಿಸಿರಲಿಲ್ಲ. ಅವರು ಬಹಳ ಮಂದಿ ಇದ್ದರು. ನಾನಾದರೋ ಒಬ್ಬನೇ, ಆಯುಧವಿಲ್ಲ - ಅವರೊಂದಿಗೆ ಕಾದಾಡಲು ಸಾಧ್ಯವಿರಲಿಲ್ಲ. ನಾನು ವೀರನೆಂದಲ್ಲ, ಆದರೂ ಈ ಕ್ಷಣದಲ್ಲಿ ಪಲಾಯನವೇ ಸರಿಯಾದ ಪಾಡೂ ಎಂದು ಯೋಚಿಸಿದೆ. ನಿಂತಲ್ಲಿಯೇ ನಿಂತಿದ್ದರೆ ನಾನು ಅವರ ಕೈಗೆ ಸಿಕ್ಕಿಕೊಳ್ಳುವುದಕ್ಕೆ ಬಾಧೆಯಾಗಿದ್ದದ್ದು ಸಮಯವೊಂದೇ. ಈಗಲ್ಲದಿದ್ದರೆ ಇನ್ನು ಹಲವು ನಿಮಿಷಗಳಲ್ಲಿ ಸಿಕ್ಕಿಕೊಳ್ಳುವನಿದ್ದೆ. ಹಾಗಾಗಿ ಇವರುಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ನಿರ್ಧರಿಸಿದೆ.
ನಿಧಾನವಾಗಿ ನಾನು ಕುಳಿತಿದ್ದ ಸ್ಥಳದಿಂದ ಎದ್ದು, ನನ್ನನ್ನು ಹುಡುಕುತ್ತಿದ್ದ ಭಟರಿಂದ ನಿಶ್ಯಬ್ಧವಾಗಿ ಹಿಂದೆ ಸರಿಯಲು ಆರಂಭಿಸಿದೆ. ಭಟರು ಆಗಲೇ ಹುಡುಕಿದ್ದ ಸ್ಥಳಗಳಲ್ಲಿ ಅವಿತುಕೊಂಡು ಅವರಿಂದ ದೂರವಾದೆ. ಸ್ವಲ್ಪ ಸಮಯದ ನಂತರ ಅವರೆಲ್ಲೋ ಹುಡುಕುತ್ತಿದ್ದರು, ನಾನು ಬೇರೆಲ್ಲೋ ಇದ್ದೆ. ಸ್ವಲ್ಪ ಬೆಳಕಾಗಹತ್ತಿತ್ತು, ಅಪಾಯವಿನ್ನೂ ಕಳೆದಿರಲಿಲ್ಲ. "ಅಬ್ಬ ಇನ್ನು ತಪ್ಪಿಸಿಕೊಂಡೆ; ಏನು ಕಾರಣದಿಂದ ನನ್ನನ್ನು ಹುಡುಕಿಕೊಂಡು ಬಂದಿದ್ದರೋ ಏನೋ. ಮೊದಲು ಇಲ್ಲಿಂದ ಕಾಲು ಕೀಳಬೇಕು" ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದೆ.
ಅಷ್ಟರಲ್ಲಿ ಬೌದ್ಧ ಶ್ರಮಣನೊಬ್ಬ ನನ್ನ ಬಳಿ ಬಂದು ನನ್ನೊಡನೆ ಮಾತನಾಡತೊಡಗಿದ. ಇವನಿಗೆ ನನ್ನೊಡನೆ ಏನು ಕೆಲಸವಿದ್ದಿರಬಹುದೆಂಬುದು ನನಗೆ ತಿಳಿಯಲಿಲ್ಲ. ತಲೆ ತಗ್ಗಿಸಿಕೊಂಡು ಅವನೊಡನೆ ಮಾತನಾಡದೆ ಹೊರಟೆ. ಆದರೆ ಆ ಭಟರ ಜ್ಞಾನವು ನನ್ನೆಡೆ ಹರಿದಿತ್ತು. ಒಡನೆ ಎಲ್ಲರೂ ನಾನು ಹೊರಟಿದ್ದ ದಿಕ್ಕಿನಲ್ಲಿ ಓಡಿಬಂದರು. ನಾನೂ ಓಡಿದೆ. ಮುಂಜಾವಿನ ಮಬ್ಬಿನಲ್ಲಿ ಮನೆಗಳ ಮಧ್ಯೆ ಓಡಿದೆ. ಆದರೆ ಎಲ್ಲೆಲ್ಲಿ ನೋಡಿದರೂ ಭಟರು ಪ್ರತ್ಯಕ್ಷವಾಗುತ್ತಿದ್ದಂತೆ ತೋರುತ್ತಿತ್ತು. ಸ್ವಲ್ಪ ಕಾಲದ ಬಳಿಕ ನನ್ನ ಸುತ್ತಲು ಭಟರು ಬಂದು ನಿಂತರು. ಯಾರೋ ನನ್ನ ತಲೆಯ ಮೇಲೆ ಭಾರವಾದ ವಸ್ತುವಿನಿಂದ ಕುಟ್ಟಿರಬೇಕು; ಎಲ್ಲವೂ ಕತ್ತಲಾಯಿತು.
* * * * *
ಕೆಲವೇ ಕ್ಷಣಗಳು ಕಳೆದಿರಬೇಕು; ನನಗೆ ಪುನಃ ಜ್ಞಾನ ಬಂದಾಗ ನಾನಿನ್ನೂ ಅಲ್ಲಿಯೇ ಬಿದ್ದಿದ್ದೆ, ಆದರೆ ನನ್ನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ನನ್ನನ್ನು ಸುತ್ತುವರಿದ ಭಟರು ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಂತಿತ್ತು. ನನಗೂ ಕಣ್ಣು ಬಿಡಲು ಸಾಧ್ಯವಾಗಲಿಲ್ಲ; ಶಿರವು ನೋವಿನಿಂದ ಸಿಡಿದುಹೋಗುತ್ತಿದ್ದಂತಿತ್ತು. ಅಲುಗಾಡದೆ ಹಾಗೆಯೇ ಬಿದ್ದಿದ್ದೆ.
ಒರ್ವ ಭಟ ಘರ್ಜಿಸಿದ "ಎಳೆದುಕೊಂಡು ನಡೆಯಿರಿ ಅವನನ್ನು. ಅರಮನೆಯ ಕಾರಾಗೃಹಕ್ಕೆ ತಳ್ಳಿ. ನಾಯಕನು ಅವನನ್ನು ನಾಳೆ ವಿಚಾರಿಸುವನಂತೆ. ಅಲ್ಲಿಯ ವರೆಗೆ ಅವನಿಗೆ ದಿನಕ್ಕೆ ಒಂದು ಹೊತ್ತು ಆಹಾರ ಮಾತ್ರ ಕೊಡಬೇಕೆಂದು ಆಜ್ಞೆ ಬಂದಿದೆ."
ಅಂತೆಯೇ ನನ್ನ ಕೈಗಳನ್ನು ಮಾತ್ರ ಬಿಚ್ಚಿ ಇಬ್ಬರು ಭಟರು ನನ್ನ ತೋಳುಗಳನ್ನು ತಮ್ಮ ಹೆಗುಲಿನ ಮೇಲೆ ಇರಿಸಿ ನನಗೆ ಆಧಾರ ನೀಡಿದರು. ಕಾಲು ಕಟ್ಟಿದ್ದಂತೆಯೇ ನನ್ನನ್ನು ಊರಿನೊಳಗೆ ಎಳೆದು ಒಯ್ದರು. ಇಷ್ಟು ಹೊತ್ತಿಗೆ ಆ ದಿವಾಕರ ಪೂರ್ವದಲ್ಲಿ ಉದಿಸುತ್ತಿದ್ದ; ಜನ ಸಂಚಾರ ಆರಂಭವಾಗುತ್ತಿತ್ತು. ನನ್ನನ್ನು ಒಂದು ಸಣ್ಣ ಕತ್ತಲೆ ಕಾರಾಗೃಹಕ್ಕೆ ತಳ್ಳಿ, ಕಾಲಿಗೆ ಕಟ್ಟಿದ ಹಗ್ಗಗಳನ್ನು ಬಿಚ್ಚಿ. ಬಾಗಿಲನ್ನು ಬೀಗ ಹಾಕಿದರು.
ತಲೆಯ ಪೆಟ್ಟಿನಿಂದಲೋ ಏನೋ ಅಂದು ನಾನು ಹೆಚ್ಚಾಗಿ ನಿದ್ದೆಯೇ ಮಾಡಿದೆ. ಯಾರೂ ಆಹಾರ-ನೀರುಗಳನ್ನೂ ತಂದು ಕೊಡಲಿಲ್ಲ. ರಾತ್ರಿಯಾಗಿದ್ದಿರಬಹುದು ಎಂದುಕೊಂಡೆ, ಕೊನೆಗೆ ಕಾರಾಗೃಹದ ಬಾಗಿಲು ತೆರೆದ ಶಬ್ಧವಾಯಿತು. ಭಟನೊಬ್ಬ ಸ್ವಲ್ಪ ಅನ್ನ ನೀರುಗಳನ್ನು ತಂದಿದ್ದ. "ಇದನ್ನು ತಿನ್ನು, ನಂತರ ನಾಯಕನು ನಿನ್ನೊಡನೆ ಮಾತನಾಡಬೇಕು ಎಂದು ಹೇಳಿದ್ದಾನೆ" ಎಂದು ಹೇಳಿ ಅಲ್ಲಿಯೇ ನಿಂತ.
"ನೀವು ಯಾರು? ನನ್ನನ್ನೇಕೆ ಬಂಧಿಸಿರುವಿರಿ?" ಅವನನ್ನು ಕುರಿತು ಕೇಳಿದೆ. ಅವನೇನು ಉತ್ತರಿಸಲಿಲ್ಲ.
ಅವನು ನನಗಾಗಿ ಕಾಯುತ್ತಿದ್ದಾನೆಂದು ಅರಿತು ಬೇಗನೇ ಅವನು ತಂದಿದ್ದ ಭೋಜನವನ್ನು ತಿಂದೆ. ಬಳಿಕ ಅವನು ನನ್ನ ಕೈಗಳನ್ನು ಪುನಃ ಕಟ್ಟಿ ಕಾರಾಗೃಹದಿಂದ ಹೊರಟೆವು. ಬಾಗಿಲಲ್ಲಿ ನಿಂತಿದ್ದ ಮತ್ತೊಬ್ಬ ಭಟ ನನ್ನ ಹಿಂದೆಯೇ ಬಂದ. ನನಗಾಗಿ ಇಷ್ಟು ಕಾವಲು ಏಕೆಂದು ನನಗೆ ಅರ್ಥವಾಗಲಿಲ್ಲ. ಮೆಟ್ಟಲುಗಳನ್ನು ಹತ್ತಿ ಹೋಗಿ ದೀಪ ಉರಿಯುತ್ತಿದ್ದ ಒಂದು ಸಣ್ಣ ಕೋಣೆಯೊಳಗೆ ನನ್ನನ್ನು ತಳ್ಳಿ, ಬಾಗಿಲಾಚೆ ಇಬ್ಬರು ಭಟರೂ ನಿಂತರು.
ಸ್ವಲ್ಪವೇ ಹೊತ್ತಿನಬಳಿಕ ಒರ್ವ ದಳಪತಿಯಂತೆ ವೇಷಭೂಷಣಗಳನ್ನು ತೊಟ್ಟ ವ್ಯಕ್ತಿ ಕೋಣೆಗೆ ಬಂದ. ಭಟರು ಅವನಿಗೆ ತಲೆ ಬಾಗುವುದನ್ನು ನೋಡಿ ಇವನೇ ಅವರ ನಾಯಕನಿರಬೇಕೆಂದು ಊಹಿಸಿದೆ. ಅವನು ಸಿಡುಕುತ್ತಲೇ ಬಂದು ಕೆಲ ಕ್ಷಣಗಳ ಕಾಲ ನನ್ನನ್ನೇ ದಿಟ್ಟಿಸಿ ನೋಡತೊಡಗಿದ. ಬಳಿಕ
"ಹೂಂ... ಇದೇನು ಹೊಸ ವೇಷವೋ?" ಎಂದು ಪ್ರಾಕೃತ ಭಾಷೆಯಲ್ಲಿ ಕೇಳಿದ
"ವೇಷ? ಇದೇ ನನ್ನ ರೂಪ. ನಾನಿರುವುದೇ ಹೀಗೆ - ಯಾವ ವೇಷವನ್ನೂ ಧರಿಸಿಲ್ಲ ನಾನು. ನೀವುಗಳು ಯಾರು? ನನ್ನನ್ನೇಕೆ ಬಂಧಿಸಿದ್ದೀರಿ?" ಎಂದು ನನಗೆ ತಿಳಿದ ಪ್ರಾಕೃತ ಹಾಗು ಸಂಸ್ಕೃತಗಳ ಮಿಶ್ರಿತ ಭಾಷೆಯಲ್ಲಿ ಪ್ರತಿ ಪ್ರಶ್ನೆ ಕೇಳಿದೆ
"ಬಾಯಿಕಟ್ಟು! ಪ್ರಶ್ನೆ ನಾನು ಕೇಳುವೆ, ನೀನು ಉತ್ತರ ಮಾತ್ರ ಹೇಳು" ಎಂದು ಘರ್ಜಿಸಿದ. ಕೆಲ ಕ್ಷಣಗಳ ಬಳಿಕ "ನೀನು ನಿಜವಾದ ಬ್ರಾಹ್ಮಣನೆಂದು ನಾನು ಒಪ್ಪುವುದಿಲ್ಲ. ಗುಪ್ತವೇನು ಇಲ್ಲದಿದ್ದರೆ ನಿನ್ನನ್ನು ಹುಡುಕಿಕೊಂಡು ಬಂದಾಗ ಏಕೆ ತಪ್ಪಿಸಿಕೊಂಡು ಓಡಿದೆ" ಎಂದ.
ನನ್ನ ಬಳಿ ಇದಕ್ಕೆ ಉತ್ತರವಿರಲಿಲ್ಲ. ಸ್ವಲ್ಪ ಮೌನ ತಾಳಿದ ಬಳಿಕ ಪುನಃ ಅವನೇ "ಗೂಢಚಾರರಿಗೆ ನಮ್ಮ ರಾಜ್ಯದಲ್ಲಿ ಒಂದೇ ಶಿಕ್ಷೆ - ಮರಣದಂಡನೆ" ಎಂದ. ದೀಪದ ಬೆಳಕಿನಲ್ಲ ನನ್ನ ಮುಖಭಾವವನ್ನೇ ದಿಟ್ಟಿಸಿ ನೋಡುತ್ತಿದ್ದಂತಿತ್ತು.
ನನಗೆ ಒಂದು ಕ್ಷಣ ಕಸಿವಿಸಿಯಾದರೂ ಉದಾಸೀನದಿಂದಲೇ ಉತ್ತರಿಸಿದೆ "ಹೌದೇ? ನನಗೇಕೆ ಹೇಳುತ್ತಿದ್ದೀರಿ?"
ಅವನು ಕಿಡಿಕಿಡಿಯಾದ "ಆಟಗಳು ಸಾಕು. ನೀನು ಪುಲಿಕೇಶಿಯ ಗೂಢಚಾರನೆಂದು ನಮಗೆ ತಿಳಿದಿದೆ. ಈಗ ನಮ್ಮ ರಾಜ್ಯಕ್ಕೇಕೆ ಬಂದಿರುವೆ?"
"ಗೂಢಚಾರ? ನಾನು? ನಿಮಗೆಲ್ಲೋ ಮರುಳು. ನಾನು ಮಹಾಚೀನ ಯಾತ್ರಿಕನೊಬ್ಬನ ಭಾಷಾನುವಾದಕಾರ. ಬೇಕಿದ್ದರೆ ಅವನನ್ನೇ ಕೇಳಿ ನೋಡಿ" ಎಂದೆ
"ಮುಚ್ಚು ಬಾಯಿ. ನಮಗೆ ಯಾರನ್ನೂ ಕೇಳುವ ಅಗತ್ಯವಿಲ್ಲ. ಸತ್ಯವನ್ನು ಹೇಳಿದರೆ ಪೀಡೆರಹಿತ ಸಾವು, ಇಲ್ಲವಾದರೆ ಪೀಡೆಯೊಂದಿಗೆ ಸಾವು" ಎಂದು ಅರಚಿದ.
"ನಾನಾದರೋ ಬ್ರಾಹ್ಮಣ. ಬ್ರಾಹ್ಮಣ ಎಲ್ಲಿಯಾದರೂ ಗೂಢಚಾರನಾಗಲು ಸಾಧ್ಯವೇ?" ಎಂದು ಅವನೊಂದಿಗೆ ತಿಳುವಳಿಕೆ ಪ್ರಯತ್ನಿಸಿದೆ.
"ನಮಗೊಂದು ಈ ರೀತಿಯ ಸನ್ನಿವೇಷ ತಿಳಿದಿದೆ. ದಕ್ಷಿಣದಲ್ಲಿ ಪುಲಿಕೇಶಿಯ ರಾಜ್ಯದಲ್ಲಿ ಅವನ ಬೇಟೆ ತಪ್ಪಿಸಿ, ಸೆರೆಗೊಳಗಾಗಿ, ನಂತರ ಕಾರಾಗೃಹದಿಂದಲೇ ಗೂಢಚಾರನಾಗಿ ಹೊರಬಂದು, ವೇಷ ಬದಲಾಯಿಸಿಕೊಂಡು ನರ್ಮದಾ ತೀರದ ವರಾಹಪುರಿಯಲ್ಲಿದ್ದು ನಮ್ಮ-ಪುಲಿಕೇಶಿಯ ನಡುವಿನ ಯುದ್ಧದಲ್ಲಿ ನಮ್ಮ ವಿರುದ್ಧ ಗೂಢಚರ್ಯೆಯ ಕೆಲಸ ಮಾಡಿದ ಒಬ್ಬ ಬ್ರಾಹ್ಮಣನ ವಿಚಾರ ನಮಗೆ ತಿಳಿದಿದೆ" ಎಂದು ದೊಡ್ಡ ಕತೆಯನ್ನೇ ಹೇಳಿಬಿಟ್ಟ.
ನನಗೀಗ ಅರ್ಥವಾಯಿತು. "ಹಾಗಾದರೆ ..." ನಾನು ಅರ್ಧಕ್ಕೆ ವಾಕ್ಯ ನಿಲ್ಲಿಸಿದೆ.
"ನೀನು ಆ ಗೂಢಚಾರ ಬ್ರಾಹ್ಮಣ ಎಂದು ನಮಗೆ ಗೊತ್ತು. ನಾವು ಹರ್ಷ ಚಕ್ರವರ್ತಿಯ ಪಡೆಯವರು" ಎಂದ.
ನನ್ನ ಗುಟ್ಟು ರಟ್ಟಾಗಿದೆ ಎಂದು ನನಗೆ ಗೊತ್ತಾಯಿತು. ಇವರೊಂದಿಗೆ ವಾದ ಮಾಡಿ, ನಾನು ಆ ಗೂಢಚಾರನಲ್ಲ ಎಂದು ಪ್ರಮಾಣ ಮಾಡಿಸಲೂ ಸಾಧ್ಯವಿರಲಿಲ್ಲ. ನನ್ನ - ಯಾವುದೇ ಗೂಢಚಾರನ - ಬೆಂಬಲಕ್ಕೆ ಯಾವ ರಾಜ್ಯದವರೂ ಬರುವುದಿಲ್ಲವೆಂದೂ ಅರಿತಿದ್ದೆ. ಮುಂದ ನನ್ನ ಪಾಡೇನು ಎಂದು ಯೋಚಿಸತೊಡಗಿದೆ.
"ಈಗ ಹೇಳು. ಇಲ್ಲಿಗೇಕೆ ಬಂದಿರುವೆ? ಈಗೇನು ಕುತಂತ್ರದ ಯೋಜನೆ ಹಾಕುತ್ತಿದ್ದಾನೆ ನಿಮ್ಮ ಮಹಾರಾಜ? ಹೇಳು" ಮತ್ತೆ ಅರಚಿದ.
ನಾನು ಗೂಢಚಾರನೆಂದು ಒಪ್ಪಿಕೊಳ್ಳಲಿಲ್ಲ. ನನ್ನ ವಿಷಯ ಕುರಿತು ವಾತಾಪಿಯಲ್ಲೇ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಇನ್ನು ಇವನಿಗೆ ಹೇಗೆ ತಿಳಿಯಿತು ಎಂದು ನನಗೆ ಅರ್ಥವಾಗಲಿಲ್ಲ. "ನಾನು ಮೊದಲೇ ಹೇಳಿದಂತೆ ಮಹಾಚೀನಾ ದೇಶದ ಪ್ರಯಾಣಿಕನೊಡನೆ ಅವನ ಭಾಷಾಂತರಕಾರನಾಗಿ ಬಂದಿರುವೆ ಅಷ್ಟೆ. ಬೇರೇನೂ ನನಗೆ ತಿಳಿಯದು" ಎಂದೆ.
"ಸರಿ. ಯಾರಲ್ಲಿ" ಎಂದು ಕಾವಲುಗಾರರನ್ನು ಕೂಗಿದ. "ಇವನು ಹೇಳುವವನಲ್ಲ. ಇವನನ್ನು ಕರೆದೊಯ್ದು ಊರಾಚೆ ಗಂಗಾನದಿಯ ತೀರದಲ್ಲಿರುವ ದೇಶದ್ರೋಹಿಗಳ ಹಾಗು ಗೂಢಚಾರರ ಕಾರಾಗೃಹಕ್ಕೆ ತಳ್ಳಿ. ಹಲವು ದಿನಗಳು ಅಲ್ಲಿ ಕೊಳೆತರೆ ಬುದ್ಧಿ ಬಂದೀತು. ಈ ಬಾರಿ ಆ ಪುಲಿಕೇಶಿಯ ಕುತಂತ್ರವೇನೆಂದು ತಿಳಿದ ನಂತರ ಇವನಿಗೆ ಮರಣ ವಿಧಿಸುವವರಾಗೋಣ" ಎಂದು ಹೇಳಿ ಹೊರಟು ಹೋದ.
ಅಂತೆಯೇ ಭಟರು ಕೋಣೆಯೊಳಗೆ ಬಂದು ನನ್ನ ತಲೆ ಮತ್ತೆ ಕುಕ್ಕಿದರು. ಈ ಬಾರಿ ನಾನು ಅದಕ್ಕೆ ಸಿದ್ಧನಾಗಿದ್ದೆ. ಕುಕ್ಕುವ ಕ್ಷಣದಲ್ಲಿ ಸ್ವಲ್ಪ ತಲೆ ತಗ್ಗಿಸಿ ಕೇವಲ ಸೂಕ್ಷ್ಮ ಏಟು ಬಿತ್ತು. ಆದರೂ ಮೂರ್ಛೆ ಬಿದ್ದವನಂತೆ ನಟಿಸಿದೆ. ನನ್ನ ಕೈಕಾಲುಗಳನ್ನು ಪುನಃ ಕಟ್ಟಿ ಕುದುರೆಯ ಮೇಲೆ ನನ್ನನ್ನು ಎಸೆಯಲಾಯಿತು. ನಾಲ್ಕು ಭಟರೊಂದಿಗೆ ಊರಾಚೆಯ ಕಾರಾಗೃಹಕ್ಕೆ ಪಯಣ ಸಾಗಿತು.
* * * * *
ಕಾರಾಗೃಹದ ದಾರಿ ಕಲ್ಲು ಬಂಡೆಗಳ ಮೇಲೆ ಹಾಯ್ದು ಹೋಗುತ್ತಿತ್ತು. ಒಂದು ತಿರುವಿನಲ್ಲಿ ಎತ್ತರದ ಕಡಿದಾದ ಬಂಡೆಗಳು; ಬಂಡೆಗಳ ಮೇಲೆ ಒಂದು ಕಟ್ಟಡ ಕಾಣಿಸಿತು. ಕಟ್ಟಡಲ್ಲಿ ಕೆಲವೊಂದು ಬೆಳಕಿಂಡಿಗಳು ಕಾಣಿಸುತ್ತಿದ್ದವು. ಅವೇ ಕಾರಾಗೃಹ ಹಿಂಭಾಗದಲ್ಲಿರುವ ಸೆರೆ ಕೋಣೆಗಳಿರಬೇಕೆಂದು ಊಹಿಸಿದೆ. ಕಾರಾಗೃಹದ ಮುಂದೆ ಕೋಟೆಯಂತಹ ಭದ್ರತೆ. ಒಳಗೆ ಸೇರಿಸಿ ಬಾಗಿಲನ್ನು ಮುಚ್ಚಿದರೆ ಸೊಳ್ಳೆಯೂ ಹೊರ ಹೋಗಲಾರದು! ಈ ದುರ್ಗದಂತಹ ಕಾರಾಗೃಹಕ್ಕೆ ನನ್ನನ್ನು ಕರೆದೊಯ್ದರು. ಕುದುರೆಯಿಂದ ಕೆಳಗಿಳಿಸಿ ಮೊಗಸಾಲೆಗಳಲ್ಲಿ ಎಳೆದುಕೊಂಡು ಹೋದರು. ಮೊಗಸಾಲೆಯ ಕೊನೆಯಲ್ಲಿ ಆಕಾಶ-ತಾರೆಗಳು ಕಾಣಿಸುತ್ತಿದ್ದವು; ತಣ್ಣನೆಯ ಗಾಳಿಯೂ ಬೀಸುತ್ತಿತ್ತು. ಮೊಗಸಾಲೆಯ ಒಂದು ಬದಿಯಲ್ಲಿ ಒಂದೆರಡು ಮುಚ್ಚಿದ್ದ ಬಾಗಿಲುಗಳನ್ನು ಹಾಯ್ದು ಹೋಗಿ, ಒಂದು ತೆರೆದಿದ್ದ ಬಾಗಿಲಲ್ಲಿ ನನ್ನನ್ನು ತಳ್ಳಿ ಬಾಗಿಲು ಮುಚ್ಚಿದರು.
ನಾನು ಈ ಸೆರೆಮನೆಯಿಂದಾಚೆ ಹೋಗಲು ಒಂದೇ ಸಾಧ್ಯತೆ ಎಂದು ತಿಳಿದಿದ್ದೆ - ಅಲ್ಲಿಂದ ತಪ್ಪಿಸಿಕೊಳ್ಳುವುದು. ನಾನು ಆ ಸೆರೆಮನೆ ಸೇರಿದ ಕೂಡಲೇ ನನ್ನ ಕೋಣೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದೆ. ನೀರು ಹರಿಯುತ್ತಿದ್ದ ಶಬ್ಧ ಕೇಳಿಸುತ್ತಿತ್ತು. ನಾನು ಬಂದ ಬಾಗಿಲನ್ನು ಬಿಟ್ಟರೆ ಒಂದು ಬೆಳಕಿಂಡಿ. ಬೆಳಕಿಂಡಿಯ ಕಂಬಿಗಳನ್ನು ಹಿಡಿದು ಹತ್ತಿ ಆಚೆ ನೋಡಿದೆ. ಆಚೆ ಬರುತ್ತ ನೋಡಿದ್ದ ಕಡಿದಾದ ಬಂಡೆಗಳು ಕೆಳಗೆ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಮಾಯವಾಗುತ್ತಿದ್ದವು. ನಾನಿದ್ದ ಕೋಣೆಗೆ ಊರ್ಧ್ವವಾಗಿ ಒಂದು ಸಣ್ಣ ಅಂಗಳ ಕಾಣಿಸುತ್ತಿತ್ತು. ಅಂಗಳದ ಸುತ್ತ ಮೋಟು ಗೋಡೆ. ಮೋಟುಗೋಡೆಯಿಂದಾಚೆ ಪುನಃ ಕಡಿದಾದ ಬಂಡೆಗಳು; ಕೆಳಗೆ ಭೊರ್ಗಡೆಯುತ್ತಿದ್ದ ಗಂಗಾನದಿ.
ಆ ಬೆಳಕಿಂಡಿಯಿಂದ ಬರುತ್ತಿದ್ದ ಬೆಳಕಿನಿಂದ ಒಂದು ಮೂಲೆಯಲ್ಲಿ ಮತ್ತೊಂದು ಸಣ್ಣ ಬಾಗಿಲು ಕಾಣಿಸಿತು. ಆ ಬಾಗಿಲ ಬಳಿ ಹೋಗಿ ಮೆಲ್ಲನೆ ತಟ್ಟಿದೆ. ಆಚೆಯಿಂದ ಯಾರೋ ಉತ್ತರವಾಗಿ ತಟ್ಟಿದರು. ಸದ್ದಿಲ್ಲದೆ ನಾನು ಒದೆಗೊರಡನ್ನು ನಿಧಾನವಾಗೆ ತೆಗೆದು ಆ ಬಾಗಿಲನ್ನು ತಳ್ಳಿದೆ. ಬಾಗಿಲು ಕದಲಲಿಲ್ಲ. ಆಚೆಯಿಂದಲೂ ಒದೆಗೊರಡು ನಿಧಾನವಾಗಿ ತೆಗೆದ ಧ್ವನಿ. ಪುನಃ ತಳ್ಳಿದೆ ಬಾಗಿಲು ಕದಲಲಿಲ್ಲ. ಒಂದು ಕ್ಷಣ ಯೋಚಿಸಲು ಪಕ್ಕಕ್ಕೆ ಸರಿದು ನಿಂತೆ. ಯಾರೋ ಆ ಬಾಗಿಲನ್ನು ಬಲವಾಗಿ ಒದ್ದ ಹಾಗೆನಿಸಿತು.
"ಏನಾಯಿತು" ಆಚೆ ಕಾವಲು ನಿಂತಿದ್ದ ಭಟನಿರಬೇಕು, ಕೂಗಿದ. ಯಾರಾದರೂ ಬಂದರೆ ಎಂದು ಹೆದರಿ ನಾನು ಮೂಲೆಯಲ್ಲಿಯೇ ಮಲಗಿ, ನಿದ್ರೆ ಮಾಡಿರುವ ನಟನೆ ಮಾಡಿದೆ. ಆದರೆ ಯಾರೂ ಒಳಗೆ ಬರಲಿಲ್ಲ. ಸಣ್ಣ ಬಾಗಿಲಿನಾಚೆಯಿಂದ ಯಾರೋ ನಿದ್ದೆಗಣ್ಣಿನಲ್ಲಿ ಏನೋ ಗೊಣಗಿದ ಹಾಗಾಯಿತು. ಭಟನು ಆ ಸದ್ದಿನಿಂದ ತೃಪ್ತನಾದಂತೆ ಕಾಣಿಸಿತು. ಎಲ್ಲವೂ ಮತ್ತೆ ಶಾಂತವಾಯಿತು.
ಕೆಲವು ಕ್ಷಣಗಳ ಮೌನದ ಬಳಿಕ ಆ ಸಣ್ಣ ಬಾಗಿಲು ನಿಧಾನವಾಗಿ ತೆರೆದ ಶಬ್ದ ಕೇಳಿಸಿತು. ಒಬ್ಬ ವ್ಯಕ್ತಿ ಒಳಗೆ ಬಂದು ಬೆಳಕಿಂಡಿಯಿಂದ ಬರುತ್ತಿದ್ದ ಬೆಳಕಿನಲ್ಲಿ ನಿಂತನು. ಆಶ್ಚರ್ಯ! ಈತ ರಾಜನ ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿ! ಇವನನ್ನೂ ದೇಶದ್ರೋಹಿ ಎಂದು ಪರಿಗಣಿಸಿ ಈ ಕಾರಾಗೃಹಕ್ಕೆ ತಳ್ಳಿರಬೇಕು ಎಂದು ಊಹಿಸಿದೆ.
"ಓಹ್! ನೀನು! ಹರ್ಷರಾಜನ ಹತ್ಯೆ ಮಾಡಲು ಪ್ರಯತ್ನಿಸಿದವ! ನೀನೂ ಇಲ್ಲಿಯೇ ಇರುವೆಯಾ" ಎಂದು ಉದ್ಗಾರ ತೆಗೆದೆ
"ಕಣ್ಣಿಗೆ ಕಾಣಿಸುವುದೆಲ್ಲ ಸತ್ಯವಲ್ಲ. ಮಹಾರಾಜನನ್ನು ಕೊಲ್ಲಲು ನಾನು ಹೊರಟಿರಲಿಲ್ಲ" ಅವನು ಉತ್ತರಿಸಿದ.
"ಹಾಗಾದರೆ...? ನೀನು ಯಾರು? ನಿನ್ನ ಹೆಸರೇನು? ಕೊಲ್ಲುವ ಇಚ್ಛೆಯಿಲ್ಲದಿದ್ದರೆ ಏಕೆ ಕತ್ತಿ ಎತ್ತಿ ಹರ್ಷರಾಜನನ್ನು ಆಕ್ರಮಿಸಿದೆ?" ಎಂದು ನಾನು ಪ್ರಶ್ನೆಗಳ ಸುರಿಮಳೆಯೇ ಮಾಡಿದೆ.
"ನನ್ನ ಹೆಸರು ತ್ರಿವಿಕ್ರಮ. ನಾನೊಬ್ಬ ಕ್ಷತ್ರಿಯ - ಹರ್ಷರಾಜನ ಸೈನ್ಯದಲ್ಲಿದ್ದೆ. ದೇಶವನ್ನು ಕಂಡರೆ ಭಕ್ತಿ, ರಾಜನನ್ನು ಕಂಡರೆ ಗೌರವ. ನನ್ನ ನೆರೆಹೊರೆಯಲ್ಲಿ ಹೆಚ್ಚಾಗಿ ಬ್ರಾಹ್ಮಣರಿದ್ದರು. ಅವರೊಂದಿಗೆ ಕೂಡಿ ಧರ್ಮಾಚರಣೆಗಳನ್ನು ನಡೆಸುತ್ತಿದ್ದೆ." ಎಂದು ತನ್ನ ಕತೆ ಆರಂಭಿಸಿದ
ಮುಂದುವರೆಸುತ್ತ "ಹೀಗೊಮ್ಮೆ ಬೌದ್ಧ ಶ್ರಮಣರು ಸೈನ್ಯದವರನ್ನು ಬೌದ್ಧ ಧರ್ಮಕ್ಕೆ ಧರ್ಮಬದಲಾವಣೆ ಮಾಡಲು ಯತ್ನಿಸಿದಾಗ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಇದು ಆ ಬೌದ್ಧರಿಗೆ ಸರಿ ಬರಲಿಲ್ಲ. ನಾನಾ ರೀತಿಗಳಲ್ಲಿ ಒತ್ತಾಯ ಪಡಿಸಿದರು - ಹೊನ್ನು, ಪದವಿ, ಇತ್ಯಾದಿಗಳಿಂದ. ನನ್ನ ಧಾರ್ಮಿಕ ನೆಲೆ ಭದ್ರವಾಗಿದ್ದರಿಂದ ನಾನು ಓಸರಿಸಲಿಲ್ಲ. ಹಾಗಾಗಿ ಅವರಿಗೆ ನನ್ನ ಮೇಲೆ ಸಾಕಷ್ಟು ಕೋಪವಿತ್ತು" ಎಂದು ಹೇಳಿದ.
"ಧಾರ್ಮಿಕ ಸಮಾವೇಷದಲ್ಲಿ ಹರ್ಷರಾಜನು ಬ್ರಾಹ್ಮಣರಿಗೆ ಕೊಡುತ್ತಿದ್ದ ಪ್ರಾಮುಖ್ಯತೆಯಿಂದ ಈರ್ಷ್ಯಪಟ್ಟು ಬ್ರಾಹ್ಮಣರಿಗೆ ಅವಮಾನ ಮಾಡಿ, ಹರ್ಷ ರಾಜನನ್ನೂ ರಾಜಕುಮಾರಿ ರಾಜ್ಯಶ್ರೀಯಂತೆ ಬೌದ್ಧ ಧರ್ಮ್ಮಕ್ಕೆ ಸೆಳೆದುಕೊಳ್ಳುವ ಆಶಯದಿಂದ ಒಂದು ಸಂಚು ಹೂಡಿದರು" ಎಂದು ಹೇಳಿ ಉಸಿರೆಳೆದ
"ಹೀಗೇಕೆ? ಏನು ಸಂಚು? ಇದಕ್ಕೆ ನೀನು ರಾಜನ ಪ್ರಾಣದ ಮೇಲೆ ಮಾಡಿದ ಪ್ರಯತ್ನಕ್ಕೆ ಏನು ಸಂಬಂಧ?" ಪುನಃ ಪ್ರಶ್ನೆ ಕೇಳಿದೆ.
"ನನಗೆ ಆರ್ಥಿಕ ಹಾಗು ಸಾಂಸಾರಿಕ ತೊಂದರೆಗಳಿದ್ದವು. ನನಗೆ ಎನೇನೋ ಬೆದರಿಕೆಗಳನ್ನು ಹಾಕಿ ಮಹಾರಾಜನ ಪ್ರಾಣಾಪಹರಣದ ಪ್ರಯತ್ನ ಮಾಡಲು ಒಪ್ಪಿಸಿದರು. ಆದರೆ ಅದು ನಿಜವಾದ ಪ್ರಯತ್ನವಲ್ಲ - ಅಂದರೆ ರಾಜನನ್ನು ನಿಜವಾಗಿಯೂ ಕೊಲ್ಲುವುದಿರಲಿಲ್ಲ. ಕೇವಲ ಪ್ರಯತ್ನವನ್ನು ಮಾಡಿ ಸಿಕ್ಕಿಕೊಳ್ಳಬೇಕು, ಸಿಕ್ಕಿಕೊಳ್ಳದಿದರೆ ನನ್ನ ಇತರ ತೊಂದರೆಗಳು ನನ್ನ ಕುಟುಂಬದ ಮೇಲೆ ಬರುವ ಹಾಗೆ ಮಾಡುವುದಾಗಿ ಬೆದರಿಸಿದರು" ಎಂದು ತನ್ನ ಸಮಸ್ಯಾತ್ಮಕ ಕತೆ ಮುಂದುವರೆಸಿದ.
"ಸಿಕ್ಕಿಕೊಂಡಮೇಲೆ...?"
"ಸಿಕ್ಕಿಕೊಂಡ ಮೇಲೆ ನನ್ನನ್ನು ಬ್ರಾಹ್ಮಣ ವರ್ಗದವರು ರಾಜನನ್ನು ಕೊಲ್ಲಲು ಕಳುಹಿಸಿದರೆಂದು ನಾನು ಹೇಳಬೇಕಿತ್ತು. ಇದರಿಂದ ಹರ್ಷರಾಜ ಕೋಪಗೊಂಡು ಬ್ರಾಹ್ಮಣರನ್ನು ದೇಶಬ್ರಷ್ಟರಾಗಿಸಿ, ಬೌದ್ಧರಿಗೆ ಮತ್ತೂ ಹೆಚ್ಚು ಒಲಿಯುವನು ಎಂದು ಅವರ ಅಭಿಪ್ರಾಯ. ನಂತರ ಹರ್ಷರಾಜನನ್ನು ಬೌದ್ಧಧರ್ಮಕ್ಕೆ ಬದಲಾಯಿಸಿಕೊಂಡು ಅನಂತ ಸೌಕರ್ಯಗಳನ್ನು ಹೊಂದಬಹುದೆಂಬುದೇ ಅವರ ಸಂಚು" ಎಂದು ತನ್ನ ಕತೆಯನ್ನು ಮುಗಿಸಿದ.
"ನೀನು ಸಿಕ್ಕಿಕೊಂಡಮೇಲೆ ಏನಾಯಿತು? ಇಷ್ಟು ಹೊತ್ತಿಗೆ ನಿನಗೆ ಶಿಕ್ಷೆ ಕೊಟ್ಟಿರಬಹುದೆಂದುಕೊಂಡಿದ್ದೆ" ನಾನು ಹೇಳಿದೆ.
"ಸಿಕ್ಕಿಕೊಂಡಮೇಲೆ ವಿಚಾರಣೆ ನಡೆಸಿದರು. ಬ್ರಾಹ್ಮಣವರ್ಗದ ನನ್ನ ಮಿತ್ರರನ್ನು ರಾಜನ ಕೋಪದಿಂದ ಕಾಪಾಡುವ ಯತ್ನ ಮಾಡಿದೆ. ವಿಚಾರಣೆಅಲ್ಲಿ ನಾನು ದಬ್ಬಾಳಿಕೆಯಲ್ಲಿ ಬಂದು ಹೀಗೆ ಮಾಡಿದ್ದು, ಹಾಗು ಹೇಳಿಕೆ ಕೊಟ್ಟಿದ್ದು ಎಂದು ಅವರಿಗೆ ಅರ್ಥವಾಗುವಹಾಗೆ ನಡೆದುಕೊಂಡೆ. ಹಾಗಾಗಿ ಮತ್ತೆ 'ನಿಜ ಹೇಳು; ಯಾರು ನಿನ್ನನ್ನು ಕಳುಹಿಸಿದ್ದು' ಎಂದು ಕೇಳಿದರು" ತ್ರಿವಿಕ್ರಮ ಹೇಳಿದ.
"ಮತ್ತೆ ನೀನೇನು ಹೇಳಿದೆ?" ನಾನು ಕೇಳಿದೆ
"ನನಗೆ ಆ ಬೌದ್ಧರನ್ನು ಸಿಕ್ಕಿಹಾಕಿಸಲೂ ಇಷ್ಟವಿರಲಿಲ್ಲ. ಅವರು ನನ್ನನ್ನಾಗಲೇ ಬೆದರಿಸಿದ್ದರು. ಬೇರಾವ ದಾರಿಯೂ ಕಾಣದೆ ನನ್ನನ್ನು ಹೊರದೇಶದ ಗೂಢಚಾರರು ಈ ಕಾರ್ಯಕ್ಕೆ ಬೆದರಿಕೆಗಳಿಂದ ಒತ್ತಾಯಿಸಿದ್ದರೆಂದು, ಆದರೆ ಮಹಾರಾಜನನ್ನು ಕೊಲ್ಲಲಿಚ್ಛಿಸದೆ ನಾನು ಬೇಕೆಂದೇ ಅವನಿಗೆ ಪೆಟ್ಟು ಬೀಳದ ಹಾಗೆ ಕತ್ತಿ ಪ್ರಯೋಗಿಸಿದೆನೆಂದೂ ಹೇಳಿದೆ" ಕಳೆದದ್ದನ್ನೆಲ್ಲಾ ಹೇಳಿದ.
ನನಗೀಗ ಎಲ್ಲವೂ ಅರ್ಥವಾಯಿತು!
* * * * *
ಅಷ್ಟರಲ್ಲಿ ಅವನು "ಅದು ಹಾಗಿರಲಿ, ನಿನ್ನ ಕತೆಯೇನು" ಎಂದು ನನ್ನನ್ನೇ ಕೇಳಿದ.
"ನಾನು ದಕ್ಷಿಣ ದೇಶದವನು. ಮಹಾಚೀನಾ ದೇಶದ ಪ್ರಯಾಣಿಕನೊಬ್ಬನೊಡನೆ ಪ್ರಯಾಣ ಮಾಡುತ್ತಿದ್ದೆ. ಇಂದು ರಾತ್ರಿ ಮಹೇಶ್ವರ ದೇವಾಲಯದ ಜಗುಲಿಯ ಮೇಲೆ ಮಲಗಿದ್ದೆ. ಧಗ್ಗನೆ ಬಂದು ರಾಜಭಟರು ನಾನು ಗೂಢಚಾರನೆಂದು ಹೇಳಿ ನನ್ನನ್ನು ಬಂಧಿಸಿದರು. ನಂತರ ಇಲ್ಲಿಗೆ ಕಳುಹಿಸಿದರು" ಎಂದು ಸಂಕ್ಷಿಪ್ತವಾಗಿ ನನ್ನ ಕತೆ ಹೇಳಿದೆ. ನಾನು ನಿಜವಾಗಿ ಗೂಢಚಾರನಾಗಿದ್ದೆ ಎಂದು ಅವನಿಗೆ ಹೇಳಲಿಲ್ಲ. ನಾನು ಹೇಳಿದ ಕತೆಯನ್ನು ಅವನು ನಂಬಿದ ಹಾಗೆ ಕಾಣಿಸಿತು.
ನಾನು ತಪ್ಪಿಸಿಕೊಳ್ಳುತ್ತಿದ್ದ ಸಮಯದಲ್ಲಿ ಆ ಶ್ರಮಣ ನನ್ನ ಬಳಿ ಬಂದು ಭಟರ ಗಮನ ನನ್ನೆಡೆ ಸೆಳೆದದ್ದು ನೆನಪಾಯಿತು. "ನೀನು ಆ ವಿಚಾರಕರಿಗೆ ಹೇಳಿದ್ದ ಹೊರದೇಶ ಗೂಢಚಾರರ ವಿಚಾರ ಹೇಗೋ ಆಚೆ ಹೋಗಿ ನಿನ್ನನ್ನು ಈ ಕಾರ್ಯಕ್ಕೆ ಒತ್ತಾಯಿಸಿದವರ ಬಳಿ ಸೇರಿರಬೇಕು. ನನ್ನನ್ನು ಭಟರು ಹುಡುಕುತ್ತಿದ್ದಾಗ ನಾನು ತಪ್ಪಿಸಿಕೊಂಡು ಓಡುತ್ತಿದ್ದೆ. ಆಗ ಶ್ರಮಣನೊಬ್ಬ ನನ್ನೊಡನೆ ಮಾತನಾಡಲು ಬಂದು ಭಟರ ಗಮನ ನನ್ನೆಡೆ ಹರಿಯುವಂತೆ ಮಾಡಿದ. ಆ ಕಾರಣದಿಂದ ನಾನು ಬಂಧಿಯಾದೆ. ಅಂತೆಯೇ ಯಾರೋ ನನ್ನನ್ನು ದಕ್ಷಿಣದವನೆಂದು ಗುರುತಿಸಿದ್ದಿರಬೇಕು. ಹಾಗಾಗಿ ನಾನು ಗೂಢಚಾರನೆಂದು ನನ್ನನ್ನು ಬಂಧಿಸಿರಬೇಕು" ಎಂದು ಹೇಳಿದೆ. ಮನಸ್ಸಿನಲ್ಲೇ ಯಾರೋ ನನ್ನ ಗೂಢಚರ್ಯೆ, ರಾಯಭಾರ, ಇತ್ಯಾದಿಗಳ ಹಿನ್ನೆಲೆ ಅರಿತವರಿದ್ದಿರಬೇಕು, ಹಾಗಾಗಿ ನನ್ನ ಬಂಧನವಾಗಿರಬೇಕು ಎಂದುಕೊಂಡೆ. ಗೂಢಚಾರರು ನಮ್ಮ ಕಡೆಯಷ್ಟೇ ಅಲ್ಲ ವೈರಿಯ ಪಡೆಯಲ್ಲೂ ಇರುವರು! ಬಹುಶಃ ನಮ್ಮ ಕಡೆಯವರೇ ಯಾರೋ ಹರ್ಷರಾಜನ ಪಡೆಗೆ ವಲಸೆ ಬಂದಿದ್ದು ನನ್ನ ಗುರುತು-ಪರಿಚಯಗಳನ್ನು ಬಯಲು ಮಾಡಿರಬೇಕು ಎಂದುಕೊಂಡೆ. ಒಮ್ಮೆ ಗೂಢಚಾರನಾದರೆ ಅದರ ಕಲುಷ ಜೀವನ ಪರ್ಯಂತ!
"ನಾವೀಗಿರುವುದು ನಿಜ ಕಾರಾಗೃಹವಲ್ಲ. ಆಚೆಯ ಕಾವಲುಗಾರ ನನಗೆ ಹೇಳಿದ. ವಿಚಾರಣೆಯ ಸಮಯವಾದ್ದರಿಂದ ಇಲ್ಲಿ ಬಂಧಿಸಿರಬೇಕು. ನಾಳೆ ನಮ್ಮನ್ನು ನೆಲಮಾಳಿಗೆಯಲ್ಲಿರುವ ಸೆರೆಮನೆಗಳಲ್ಲಿ ಹಾಕುತ್ತಾರಂತೆ" ನನ್ನ ಚಿಂತನೆ ಮುರಿಯುವ ಹಾಗೆ ಮಾತನಾಡಿದ.
"ಹಾಗಾದರೆ...." ನಾನು ಹೇಳಿದೆ
ನಂತರ ಇಬ್ಬರೂ ಒಟ್ಟಿಗೆ "ಈ ಕಾರಾಗೃಹದಿಂದ ತಪ್ಪಿಸಿಕೊಳ್ಳಲು ಈ ರಾತ್ರಿಯೊಂದೇ ಇರುವುದು" ಎಂದು ಹೇಳಿದೆವು.
"ಬಂಧನ ಒಡೆದು ಓಡಿಹೋಗಲು ಸಿದ್ಧನಿರುವೆಯಾ?" ನಾನು ಅವನನ್ನು ಕೇಳಿದೆ.
"ನನಗೂ ಅದೊಂದೇ ದಾರಿ" ಅವನು ಹೇಳಿದ. "ಆದರೆ ಹೊರಗೆ ಕಾವಲುಗಾರನಿದ್ದಾನೆ. ಹೋಗುವುದಾದರೂ ಹೇಗೆ?"
"ಒಬ್ಬ ಮಾಡಲಾಗದ್ದನ್ನು ಇಬ್ಬರೂ ಸೇರಿ ಮಾಡೋಣ. ಕಾವಲುಗಾರರಿಗೆ ನಾವಿಬ್ಬರೂ ಸೇರಿರುವುದು ಗೊತ್ತಾಗಿರುವ ಹಾಗೆ ಕಾಣಿಸುತ್ತಿಲ್ಲ. ಈಗಲೆ ಉಪಾಯ ಮಾಡಬೇಕು" ನಾನು ಹೇಳಿದೆ. "ಬೆಳಕಿಂಡಿಯಿಂದಾಚೆ ನೋಡು. ಅಲ್ಲಿ ಒಂದು ಅಂಗಳ ಕಾಣುತ್ತಿದೆ. ಆ ಅಂಗಳಕ್ಕೆ ಹೋದರೆ ನದಿಯೊಳಗಿನಿಂದ ತಪ್ಪಿಸಿಕೊಳ್ಳಬಹುದು"
ಅವನು ಆಚೆ ನೋಡಿ "ನಿನಗೆ ತಲೆ ಕೆಟ್ಟಿದೆ! ಅಂಗಳದಿಂದ ನದಿಗೆ ಹಾರಿದರೆ ಮೂಳೆಯ ಒಂದು ಚೂರೂ ಸಿಗುವುದಿಲ್ಲ! ಆ ಬಂಡೆಗಳು ಎಷ್ಟು ಎತ್ತರವಾಗಿವೆ ನೋಡಿರುವೆಯಾ?" ಎಂದ
"ಅದೆಲ್ಲ ನೀನು ನನಗೆ ಬಿಡು. ನೀನು ಇಲ್ಲೇ ಇದ್ದರೂ ಅದೇ ಗತಿ ಅಲ್ಲವೇ? ಹಾಗಿದ್ದಲ್ಲಿ ಓಡಿಹೋಗುವ ಪ್ರಯತ್ನವೇಕೆ ಮಾಡಬಾರದು. ಗಂಡಾಂತರದ ಕಾರ್ಯ ಇಲ್ಲವೆಂದು ಹೇಳೋದಿಲ್ಲ"
"ಸರಿ, ಹಾಗಿದ್ದರೆ"
"ನನಗೆ ಸ್ವಲ್ಪ ಸಮಯ ಕೊಡು ಯೋಚಿಸಿ ಯೋಜನೆ ಹೂಡಲು" ಎಂದು ಹೇಳಿ ಚಿಂತನೆಯಲ್ಲಿ ತೊಡಗಿದೆ. ಸ್ವಲ್ಪ ಹೊತ್ತಿನ ಬಳಿಕ ನನ್ನ ಮನಸ್ಸಿನಲ್ಲೊಂದು ಯೋಜನೆ ಧೃಡವಾಯಿತು. ತ್ರಿವಿಕ್ರಮನಿಗೆ ಎಲ್ಲವನ್ನೂ ಹೇಳಿದೆ.
ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮೊದಲು ಕಾವಲುಗಾರನನ್ನು ಒಳಗೆ ಕರೆಸುವುದು ಅನಿವಾರ್ಯವಾಗಿತ್ತು. ನಾನು ಮೊದಲು ಬಾಗಿಲ ಬಳಿ ಹೋಗಿ ಮಾತನಾಡಲು ಇದ್ದ ಸಣ್ಣ ಕಿಂಡಿಯಿಂದ ಕಾವಲುಗಾರನನ್ನು ಕಂಡು ಮಾತನಾಡಿದೆ. ನಂತರ ಕೋಣೆಯೊಳಗೆ ಓಡಾಡತೊಡಗಿದೆ. ಪ್ರತಿ ಬಾರಿ ಕಿಂಡಿಯ ಬಳಿ ಬಂದಾಗಲೂ ಕಾವಲುಗಾರನಿಗೆ ಏನೊಂದನಾದರೂ ಮಾತನಾಡಿಸಿ ಪುನಃ: ಕೋಣೆಯೊಳಕ್ಕೆ ಹಿಂಜರಿಯುತ್ತಿದ್ದೆ. ಹೀಗೇ ಸ್ವಲ್ಪ ಕಾಲ ಓಡಾಡಿದ ಮೇಲೆ ನಾನು ಬೆಳಕಿಂಡಿಯ ಕಂಬಿಗಳನ್ನು ಹಿಡಿದು ಹತ್ತ ತೊಡಗಿದೆ. ಓಡಾಡುತ್ತಿದ್ದವನು ಏನಾದನೆಂದು ಕಾವಲುಗಾರ ಇಣುಕಿ ನೋಡಿದ. ನನ್ನನ್ನು ಬೆಳಕಿಂಡಿಯ ಬಳಿ ನೋಡಿ, ತಪ್ಪಿಸಿಕೊಳ್ಳುತ್ತಿರುವೆ ಎಂದು ಭಾವಿಸಿ, ಉಳಿದ ಭಟರನ್ನು ಕೂಗಿ ಬಾಗಿಲನ್ನು ತೆಗೆದು ನನ್ನನ್ನು ಹಿಡಿಯಲು ಕೋಣೆಯೊಳಗೆ ಬಂದ.
ಅವನಿಗೆ ನನ್ನ ಹಾಗು ತ್ರಿವಿಕ್ರಮ ಒಡಗೂಡಿದ ವಿಚಾರ ತಿಳಿದಿರಲಿಲ್ಲವಾದ್ದರಿಂದ ಅವನು ತ್ರಿವಿಕ್ರಮನನ್ನು ನನ್ನ ಕೋಣೆಯಲ್ಲಿ ಆಲಿಸಿರಲಿಲ್ಲ. ಅವನು ಕೋಣೆಗೆ ಬಂದಂತೆ ತ್ರಿವಿಕ್ರಮ ಅವನ ತಲೆಗೆ ಬಾಗಿಲ ಒದೆಗೊರಡಿನಿಂದ ಚೆಚ್ಚಿದ. ಹೆಚ್ಚು ಸಮಯವಿಲ್ಲವೆಂಬುದು ಇಬ್ಬರಿಗೂ ಗೊತ್ತಿತ್ತು. ಕಾವಲುಗಾರ ಚೆಚ್ಚಿಸಿಕೊಂಡು ಮೂರ್ಛೆಬಿದ್ದ ಕೂಡಲೆ ನಾವಿಬ್ಬರೂ ಬಾಗಿಲಿನಿಂದ ಹೊರಬಿದ್ದೆವು. ಯಾರೂ ಕಾರಾಗೃಹದ ಹಿಂಬಾಗದ ಕಡಿದಾದ ಕಲ್ಲುಬಂಡೆಗಳಿಂದ ತಪ್ಪಿಸಿಕೊಳ್ಳಲಾರರೆಂದು ಕಾವಲು ಕಾರಾಗೃಹದ ಮುಂಭಾಗದಲ್ಲಿ ಹೆಚ್ಚಾಗಿತ್ತು. ಭಟರು ನಮ್ಮ ಮೊಗಸಾಲಿನಲ್ಲಿ ಬರುತ್ತಿದ್ದಂತೆ ನಾವು ವಿರುದ್ಧ ದಿಕ್ಕಿನಲ್ಲಿ - ಅಂಗಳದ ಕಡೆ ಹೋದೆವು.
ಭಟರು ನಮ್ಮನ್ನು ನೋಡಿ ಅಟ್ಟಿಸಿಕೊಂಡು ಬಂದರು. ನಾವು ಮೊಗಸಾಲಿನ ಕೊನೆಯಲ್ಲಿದ್ದ ಅಂಗಳಕ್ಕೆ ಓಡಿ ಮೋಟುಗೋಡೆ ಹಾರಿ ಆ ಕಡಿ ಬಂಡೆಗಳಮೇಲಿನಿಂದ ಚಾಚಿಕೊಂಡಿದ್ದ ಒಂದು ಸಣ್ಣ ಜಗಲಿಯ ಮೇಲೆ ನಿಂತೆವು. ಮೇಲಿನಿಂದ ನಾವು ಕಾಣಿಸುವಂತೆ ಇರಲಿಲ್ಲ. ಭಟರು ಬರುವುದರೊಳಗೆ ಅಲ್ಲಿ ಬಿದ್ದಿದ್ದ ಬಡಿಗೆಯೊಂದಕ್ಕೆ ಒಂದು ದೊಡ್ಡ ಕಲ್ಲು ಕಟ್ಟಿ ಆ ಸಂಯೋಜನೆಯನ್ನು ನದಿಯೊಳಕ್ಕೆ ಎಸೆದೆವು.
ಭಟರು ಮೇಲಿನ ಅಂಗಳಕ್ಕೆ ಬಂದಂತೆ ಅವರು ಕಂಡಿದ್ದು ನೀರಿನೊಳಕ್ಕೆ ಬೀಳುತ್ತಿದ್ದ ಆ ಬಂಡೆ-ಬಡಿಗೆಗಳನ್ನು. ರಾತ್ರಿಯ ಆ ಮಬ್ಬಿನಲ್ಲಿ ವಿವರಗಳು ಕಾಣಿಸುತ್ತಿರಲಿಲವಾಗಿ ಅದನ್ನು ನಾವೆಂದೇ ಭಾವಿಸಿದರು.
"ಹಾರಿಬಿಟ್ಟರು! ನಾನೇ ನೋಡಿದೆ ಮೇಲಿನಿಂದ ಹಾರಿಬಿಟ್ಟರು" ಒಂದು ಧ್ವನಿ ಮೇಲಿನಿಂದ ಕೇಳಿಸಿತು.
"ಆ ಬಂಡೆಗಳ ಮೇಲೆ ಹಾರಿ ಬದುಕಲು ಸಾಧ್ಯವಿಲ್ಲ! ಎಲುಬುಗಳೂ ಪುಡಿಯಾಗಿರಬೇಕು" ಮತ್ತೊಂದು ಧ್ವನಿ
"ಈಜಿಕೊಂಡು ಹೋದರೆ?" ಮೂರನೆಯ ಧ್ವನಿ
"ಕೆಳಗೆ ಹೋಗಿ. ನದಿಯನ್ನು ಜಾಲಾಡಿರಿ. ಬಂಧಿಗಳನ್ನು, ಇಲ್ಲವಾದರೆ ಅವರ ಶವಗಳನ್ನು ತೆಗೆದುಕೊಂಡು ಬನ್ನಿ" ಒಂದು ಅಧಿಕಾರದ ಧ್ವನಿ ಹೇಳಿತು.
ಭಟರು ಮೇಲಿನ ಅಂಗಳವನ್ನು ಬಿಟ್ಟು ಹೋದ ಸದ್ದು ಕೇಳಿಸಿತು. "ಎಲ್ಲಿ ಹೋಗುತ್ತಾರೆ? ನನ್ನ ಕಾವಲಿನಿಂದ ತಪ್ಪಿಸಿಕೊಳ್ಳಲಸಾಧ್ಯ! ಕೊನೆ ಪಕ್ಷ ಅವರ ಶವಗಳನ್ನಾದರೂ ಬಂಧಿಸುವೆ" ಎಂದು ಆ ಅಧಿಕಾರದ ಧ್ವನಿ ಹೇಳಿದ್ದು ಕೇಳಿಸಿತು. ನಾನು ತ್ರಿವಿಕ್ರಮ ಮುಖ ನೊಡಿಕೊಂಡೆವು. ಒಂದು ಸಣ್ಣ ನಗೆ ಬೀರಿದೆವು.
ಇನ್ನೂ ಅಪಾಯ ಕಳೆದಿರಲಿಲ್ಲ. ಆ ಕಾರಾಗೃಹದ ನೆರಳಿನಲ್ಲೇ ಇದ್ದೆವು. ಆದಷ್ಟು ಬೇಗ ಆ ಸ್ಥಳವನ್ನು - ಬೆಳಗಿನೊಳಗೆ ಆ ದೇಶವನ್ನೇ ಬಿಟ್ಟು ಹೋಗಬೇಕಿತ್ತು. ಅದಕ್ಕೂ ಮುಂಚೆ ಕಾವಲುಗಾರರ ಕಣ್ಣು ತಪ್ಪಿಸಿ ನದಿಯೊಳಗೆ ಈಜಿ ಹೋಗಬೇಕಿತ್ತು. ತ್ರಿವಿಕ್ರಮನ ಕಡೆ ತಿರುಗಿ ಕೇಳಿದೆ.
"ನಿನಗೆ ಈಜು ಬರುವುದಲ್ಲವೆ?" ಅವನು ಬರುವುದೆಂದು ತಲೆಯಾಡಿಸಿದ. "ನಿಧಾನವಾಗಿ ಕೆಳಗಿಳಿದು ಹೋಗಿ ನದಿಗೆ ಇಳಿದು ಸಾಧ್ಯವಾದಷ್ಟು ನೀರಿನೊಳಗೆ ಈಜಿ ಹೋಗಬೇಕು. ಒಂದೆರಡು ಕ್ರೋಶಗಳ ದೂರ ನೀರಿನಲ್ಲೇ ಹೋಗಿ ನಂತರ ನೀರಿನಾಚೆ ಹೋಗಬೇಕು. ಅವರು ನಮ್ಮನ್ನು ಅಷ್ಟು ದೂರದಲ್ಲಿ ಎಂದೂ ನಿರೀಕ್ಷಿಸುವುದಿಲ್ಲ. ಈಗ ನೀನೇನು ಮಾಡುವೆ?" ಎಂದು ಕೇಳಿದೆ.
"ನಾನು ಹಿಂತಿರುಗಿ ಊರಿಗೆ ಹೋಗಿ, ಕುಟುಂಬದವರನ್ನು ಒಗ್ಗೂಡಿಸಿ ಈಗಿನಿಂದೀಗಲೆ ದೇಶಬಿಟ್ಟು ಹೋಗುವೆ" ಎಂದ.
"ನರ್ಮದೆಯನ್ನು ದಾಟಿ ವರಾಹಪುರಿಯೆಂಬ ಊರಿಗೆ ಹೋಗು. ಅಲ್ಲಿ ನನ್ನ ಮಿತ್ರನೊಬ್ಬ ಇರುವನು. ಅಲ್ಲಿ ಹೋಗಿ ವಿಚಾರವನ್ನು ಹೇಳು. ಅವನು ನಿನಗೆ ಸಹಾಯ ಮಾಡುತ್ತಾನೆ" ಎಂದು ಹೇಳಿ ನಾವು ವರಾಹಪುರಿಯಲ್ಲಿ ಗೂಢಚರ್ಯೆ ಮಾಡುತ್ತಿದ್ದ ಮನೆಯ ಒಡೆಯನ ವಿವರಗಳನ್ನು ಅವನಿಗೆ ಕೊಟ್ಟೆ. ನಂತರ ನಿಧಾನವಾಗಿ ಇಳಿದು ನದಿಗೆ ಹೋದೆವು. ಭಟರು ಹುಡುಕಾಟವನ್ನು ತೊರೆಯುತ್ತಿದ್ದ ಹಾಗೆ ಕಾಣಿಸಿತು.
"ಬಂಡೆಗಳ ಮೇಲೇ ಸತ್ತು ಹೋಗಿರಬೇಕು, ಇಲ್ಲವಾದರೆ ಮುಳುಗಿ ಹೋಗಿರಬೇಕು" ಎಂದುಕೊಂಡು ಕಾರಾಗೃಹಕ್ಕೆ ಹಿಂತಿರುಗುತ್ತಿದ್ದರು.
ನಾನು ತ್ರಿವಿಕ್ರಮನಿಗೆ "ಮಿತ್ರ, ಹೋಗಿ ಬರೋಣಾ. ಇಬ್ಬರಿಗೂ ಶುಭಕಾಮನೆಗಳು. ವಿಧಿ ನಿಯೋಜಿಸಿದರೆ ಪುನಃ ಭೇಟಿಮಾಡೋಣ" ಎಂದು ಹೇಳಿ ಬೀಳ್ಕೊಟ್ಟೆ.
ತ್ರಿವಿಕ್ರಮ ಹೊರಡುತ್ತ "ಒಂದು ವಿಚಾರ ಹೇಳು - ನಿಜ ಹೇಳು! ನೀನು ನಿಜವಾಗಿ ಗೂಢಚಾರನೋ ಅಲ್ಲವೋ?" ಎಂದ
ನಾನು ತಲೆಯಾಡಿಸುತ್ತ ಮುಗುಳ್ನಗೆ ಬೀರಿದೆ. ಇಬ್ಬರೂ ನಿಧಾನವಾಗಿ ನದಿಗೆ ಇಳಿದೆವು. ನಂತರ ತ್ರಿವಿಕ್ರಮ ಏನಾದನೆಂದು ನನಗೆ ತಿಳಿಯದು.
* * * * *
ಎಲ್ಲವನ್ನೂ ಯೋಚಿಸಿದ್ದ ನಾನು ಗಂಗಾನದಿಯ ಶೀತಲತೆಯನ್ನು ಎಣಿಸಿರಲಿಲ್ಲ. ಗಂಗಾನದಿ ಹಿಮಾಲಯ ಪರ್ವತಗಳಿಂದ ಮಂಜು ಕರಗಿ ನೀರಾಗಿ ಹರಿದು ಬರುವ ನದಿ. ಹಾಗಾಗಿ ನದಿ ಬಹಳ ತಂಪಾಗಿರುವುದು. ರಾತ್ರಿಯ ಚಳಿಯಲ್ಲಿ ಆ ಕೊರೆಯುವ ನೀರಿನಲ್ಲೀಜುವುದೆಂದರೆ ಏನು! ಆದರೂ ಆದಷ್ಟೂ ನೀರಿನೊಳಗೇ ಈಜಿಕೊಂಡು ಸ್ವಲ್ಪ ದೂರ ಹೋದೆ. ನದಿ ವೇಗವಾಗಿ ಹರಿಯುತ್ತಿತ್ತು, ನಾನು ಪ್ರವಾಹದೊಡನೆಯೇ ಈಜುತ್ತಿದ್ದರಿಂದ ಮುಂದೆ ಹೋಗಲು ಹೆಚ್ಚು ಶಕ್ತಿ ಪ್ರಯೋಗ ಮಾಡುವ ಅವಕಾಶವಿರಲಿಲ್ಲ. ನಂತರ ಉಸಿರಾಡಲೆಂದು ಮೇಲೆ ಬಂದು ಸುತ್ತ ನೋಡಿದೆ ಎಲ್ಲವೂ ನಿಶ್ಯಬ್ಧವಾಗಿ, ಸುರಕ್ಷಿತವಾಗಿ ಕಾಣಿಸಿತು. ಆದರೂ ಜಾಗ್ರತೆಗಾಗಿ ಮತ್ತೆ ಸ್ವಲ್ಪ ದೂರ ಮುಳುಗಿಕೊಂಡೇ ಈಜುತ್ತಾ ಹೋದೆ. ಸುಮಾರು ಐದಾರು ಕ್ರೋಶಗಳು ಹೋದ ನಂತರ ತೀರದಲ್ಲಿ ಒಂದು ವನ ಕಾಣಿಸಿತು. ನಿಧಾನವಾಗಿ ನೀರಿನಿಂದೆದ್ದು ವನದೊಳಗೆ ಹೊಕ್ಕೆ. ತಂಪನೆಯ ನೀರಿನಿಂದ ಮೈ ಮರಗಟ್ಟಿ ಹೋಗಿತ್ತು. ಮೈ ಬೆಚ್ಚಗೆ ಮಾಡಿಕೊಳ್ಳಲು ಸ್ವಲ್ಪ ಹೊತ್ತು ಅಲ್ಲಿಯೇ ಓಡಾಡಿದೆ. ನನ್ನ ಪಂಚೆಯನ್ನು ಹಿಂಡಿ ಆದಷ್ಟೂ ಒಣಗಿಸಿಕೊಂಡೆ. ನಂತರ ಸುಸ್ತಾಗಿ ಬಂಡೆಯ ಮಗ್ಗುಲಿನಲ್ಲಿ ಮಲಗಿ ನಿದ್ರೆ ಮಾಡಿದೆ.
ಮಾರನೆಯ ದಿನ ಬೆಳಗ್ಗೆ ಎಚ್ಚರವಾದರೂ ಎದ್ದು ಎಲ್ಲಿಯೂ ಹೋಗಲು ಯತ್ನಿಸಲಿಲ್ಲ. ನನ್ನನ್ನು ನಿಜವಾಗಿ ಗೂಢಚಾರನೆಂದು ಭಾವಿಸಿದ್ದರೆ ಅವರು ನನ್ನನ್ನು ಹೆಚ್ಚು ಹುಡುಕುವುದಿಲ್ಲವೆಂದು ನನಗೆ ತಿಳಿದಿತ್ತು. ಗೂಢಚಾರರು ಸೆರೆ ಸಿಕ್ಕುವುದು ಬಹಳ ವಿರಳ - ಅದೂ ಕಾರಾಗೃಹದಿಂದ ತಪ್ಪಿಸಿಕೊಂಡಮೇಲೆ ಅಸಾಧ್ಯವೆಂದೇ ಹೇಳಬೇಕು. ಅವರು ಕಲಿತ ವಿದ್ಯೆಗಳಿಂದ ಎಲ್ಲರ ಕಣ್ಣುಗಳಿಗೆ ಮಣ್ಣೆರಚಿ ಮಾಯವಾಗುವರು. ಮೇಲಾಗಿ ನಾವಿಬ್ಬರೂ ಮೃತರಾಗಿರುವೆವು ಎಂದು ಕಾವಲುಗಾರರು ಭಾವಿಸಿದ್ದರು. ಹಾಗಾಗಿ ನಾನು ಸುರಕ್ಷಿತವಾಗಿರುವೆ ಎಂದು ಅರಿತಿದ್ದೆ.
ಸಂಜೆಯಾಗುತ್ತಿದ್ದಂತೆ ಸುತ್ತಲೂ ಸಮೀಕ್ಷೆ ನಡೆಸಿದೆ. ನಾನೊಂದು ಸ್ತೂಪದ ಹೊರಂಗಣದಲ್ಲಿರುವೆನೆಂದು ಅರ್ಥವಾಯಿತು. ಎತ್ತರದ ಶಿಖರವಿದ್ದ ಸ್ತೂಪ ಅದು. ಮುಂದೇನು ಮಾಡುವುದು ಎಂದು ಯೋಚಿಸುತ್ತ ಅದರೊಳಗೆ ಹೊಕ್ಕೆ. ಅಲ್ಲಿ ನನ್ನ ಮಿತ್ರ ವೇಂ ಸಾಂಗ್ ಕಾಣಿಸಿಕೊಂಡ. ಓರ್ವ ಬೌದ್ಧ ಭಿಕ್ಷುವಿನೊಡನೆ ಮಾತನಾಡುತ್ತಿದ್ದ. "... ಈ ಸ್ಥಳದಲ್ಲಿ ತಥಾಗಥನು ಆರು ಮಾಸಗಳ ಕಾಲ ಅನಾತ್ಮ, ದೂಃಖ, ಅನಿತ್ಯ ಹಾಗು ಅಶುದ್ಧಿಗಳ ವಿಚಾರದಲ್ಲಿ ಬೋಧಿಸುತ್ತಿದ್ದ..." ಎಂದು ಭಿಕ್ಷುವು ಹೇಳುತ್ತಿರಲು ನಾನು ನನ್ನ ಮಿತ್ರನನ್ನು ಕೂಗಿದೆ.
"ಮಿತ್ರ, ನನ್ನನ್ನು ಬಿಟ್ಟು ನೀನೊಬ್ಬನೇ ಏಕೆ ಬಂದೆ? ನನಗೇಕೆ ಹೇಳಲಿಲ್ಲ? ನಾವಿಬ್ಬರೂ ಜೊತೆಗೇ ಹೋಗುವುದಾಗೆ ಒಪ್ಪಂದ ಮಾಡಿಕೊಂಡಿರಲಿಲ್ಲವೇ?" ಎಂದು ಹೇಳಿ ಅವನಿಗೆ ದೋಷಭಾವ ಬರುವಂತೆ ಮಾಡಿದೆ. ಅವನು ತಬ್ಬಿಬ್ಬಾದ.
ಸಮಾಕುಲನಾಗಿ "ನೀನು? ಇಲ್ಲಿ? ಆದರೆ ನೀನು ಬರುವುದಿಲ್ಲ, ಊರಿಗೆ ಹೋಗುವೆ ಎಂದು ಸಂದೇಶ ಕಳುಹಿಸಿರಲಿಲ್ಲವೆ? ನನಗೆ ಕನ್ಯಾಕುಬ್ಜದಲ್ಲಿ ಶ್ರಮಣರೊಬ್ಬರು ಹೇಳಿದರು! ಅದಕ್ಕೇ ನಾನು ಒಬ್ಬನೇ ಹೊರಟು ಬಂದೆ. ಹಾಗಾದರೆ ಅದು ಸತ್ಯವಲ್ಲವೇ? ನೀನು ನನ್ನೊಡನೆ ಪ್ರಯಾಣ ಮುಂದುವರಿಸುವೆಯೇ?" ಎಂದು ಕೇಳಿದ.
"ಸುಳ್ಳು ಮಿತ್ರ. ನಾನಾವ ಸಂದೇಶವನ್ನೂ ಕಳುಹಿಸಲಿಲ್ಲ. ಯಾರೋ ನಿನ್ನೊಡದೆ ವಿನೋದವಾಡಿರಬೇಕು, ಅಷ್ಟೆ! ನಿನಗೆ ಹೇಳದೆ ನಾನು ಹೊರಟು ಹೋಗುವೆನೆ? ಸಾಧ್ಯವಿಲ್ಲ!" ಎಂದು ಹೇಳಿದೆ. ಬಳಿಕ ಕನ್ಯಾಕುಬ್ಜದಿಂದ ಆದಷ್ಟು ದೂರ ಹೋಗಲೆಂದು "ನಡೆ ಈಗಲೇ ಹೊರಡೋಣ. ನಷ್ಟವಾದ ಹಲವು ದಿನಗಳನ್ನು ಪುನಃ ಗಳಿಸಲು ಪ್ರಯತ್ನಿಸೋಣ." ಎಂದು ಕೇಳಿಕೊಂಡೆ.
"ನಿನ್ನ ಸ್ಥಳದಲ್ಲಿ ಬೇರೆಯಾರನ್ನಾದರೂ ಕರೆದುಕೊಂಡು ಹೋಗುವೆನೆಂದು ನಿನ್ನ ಕುದುರೆಯನ್ನು ಕರೆದುಕೊಂಡು ಬಂದಿರುವೆ. ನಡೆ ಹೊರಡೋಣ" ಪ್ರಸನ್ನನಾಗಿ ನುಡಿದ.
ಇಬ್ಬರೂ ಹೊರಟು ರಾತ್ರಿಯೆಲ್ಲ ಪ್ರಯಾಣ ಮಾಡಿದೆವು. ಮಾರನೆಯ ದಿನ ಹಗಲಿನಲ್ಲಿ ನವದೇವಕುಲವೆಂಬ ಸ್ಥಳವೊಂದರಲ್ಲಿ ತಂಗಿದ್ದೆವು. ನನ್ನ ಮಿತ್ರನಿಗೆ ಅಲ್ಲಿಯೂ ಸ್ತೂಪ ಸಂಘಾರಮಗಳ ದರ್ಶನ ಮಾಡಿಕೊಂಡನು. ರಾತ್ರಿ ಅವನು ತನ್ನ ಅನುಭವಗಳನ್ನು ಬರೆಯುತ್ತಿದ್ದಾಗ ಅವನ ಪತ್ರಗಳನ್ನು ನಾನು ಓದುವ ಪ್ರಯತ್ನ ಮಾಡತೊಡಗಿದೆ. ಮೊದಲೇ ಹೇಳಿದಂತೆ ನಾನು ಅವನ ಭಾಷೆಯನ್ನು ಕಲಿಯಲಾರಂಭಿಸಿ ಸುಮಾರು ಪ್ರಗತಿ ಮಾಡಿದ್ದೆ. ಅದನ್ನು ಪರೀಕ್ಷಿಸಲು ಅವನ ಪತ್ರಗಳನ್ನು ಕೈಗೆತ್ತಿಕೊಂಡೆ.
"ಇದೇನು ಹರ್ಷರಾಜನ ಹೆಸರನ್ನು ಷೀಲದಿತ್ಯನೆಂದು ಬರೆದಿರುವೆ?" ಎಂದು ಕೇಳಿದೆ.
ಮುಗುಳ್ನಕ್ಕು ಅವನು ನಾನು ಓದುತ್ತಿದ್ದ ಪತ್ರವನ್ನು ತನ್ನ ಕೈಗೆ ತೆಗೆದುಕೊಂಡು "ಇದು ಷೀಲದಿತ್ಯ ಅಲ್ಲ. ಶಿ-ಲೊ-ತು-ತ-ಕಿಅ ಅಂದರೆ ಶಿಲಾದಿತ್ಯ. ಷೀಲಾದಿತ್ಯನಾದರೆ ಮತ್ತೊಂದು ರೇಖೆ ಇರುತ್ತದೆ. ಹೀಗೆ" ಎಂದು ಬರೆದು ತೋರಿಸಿದ.
"ಅದೇಕೆ ಹಾಗೆ ಬರೆದಿರುವೆ. ಅದು ಹರ್ಷರಾಜನ ಬಿರುದಷ್ಟೆ. ಅವನ ಹೆಸರು ಹರ್ಷವರ್ಧನ" ಎಂದು ಹೇಳಿದೆ
ಅದಕ್ಕೆ ಅವನು "ಹರ್ಷವರ್ಧನ ಹೆಸರನು ಹೊ-ಲಿ-ಶ-ಫ-ತನ್-ನ ಎಂದು ಬರೆಯ ಬೇಕು. ಇದು ಬಹು ಉದ್ದವಷ್ಟೇ ಅಲ್ಲ ಸಂದಿಗ್ಧ ಕೂಡ. ಹಾಗಾಗಿ ಶಿಲಾದಿತ್ಯ ಬಳಸಿರುವೆ" ಎಂದು ಹೇಳಿದ.
"ಓಹ್ ಹಾಗೋ! ಸರಿ ಸರಿ." ಎಂದು ಓದುವುದನ್ನು ಮುಂದುವರೆಸಿದೆ.
ಸ್ವಲ್ಪ ಓದಿದ ಬಳಿಕ ಅವನನ್ನು ಕೇಳಿದೆ "ಇದೇನು ಮಿತ್ರ, ಹೀಗೆ ನಿಜ ಸಂಗತಿ ಬಿಟ್ಟು ತಪ್ಪು ಬರೆದಿರುವೆ?" ಎಂದು ಕೇಳಿದೆ
"ಏನು ತಪ್ಪು?" ಎಂದ, ಕೋಪದಿಂದ.
"ನೀನು ಬರೆದಿರುವುದು ನನಗೆ ಓದಲು ಬರುತ್ತದೆ. ಹರ್ಷರಾಜನೇ ಕುಮಾರ ರಾಜನ ಮೂಲಕ ನಿನಗೆ ಕರೆಯಿತ್ತನೆಂದು ಬರೆದಿರುವೆ. ಇದು ಸುಳ್ಳಲ್ಲವೆ? ನಾವೇ ಹರ್ಷರಾಜನ ಸಭೆಗೆ ಹೋಗಲಿಲ್ಲವೆ? ಮೇಲಾಗಿ ಕುಮಾರರಾಜ ಕಾಮರೂಪದ ಶ್ರೀಮಂತನಷ್ಟೆ! ಅವನು ಕಾಮರೂಪದ ದೊರೆಯಲ್ಲ!" ಎಂದು ಅವನು ಬರೆದಿದ್ದ ಅಸತ್ಯ ಸಂಗತಿಗಳನ್ನು ತೋರಿಸಲಾರಂಭಿಸಿದೆ.
ಮುಂದುವರೆಸುತ್ತ "ಹರ್ಷರಾಜನು ನಿನ್ನ ಬೋಧನೆಯನ್ನು ಕೇಳಿದ ಕಾರಣ ಮಹಾಯಾನ ಬೌದ್ಧಧರ್ಮ ಶ್ರೇಷ್ಠವೆಂದು ಒಪ್ಪಿ ಧಾರ್ಮಿಕ ಸಮಾವೇಷ ಕರೆದನೆಂದು ಹೇಳಿರುವೆ. ನಿನ್ನ ಬೋಧನೆಯಿಂದಲೇ ಹರ್ಷರಾಜ ಬೌದ್ಧ ಧರ್ಮಕ್ಕೆ ಬದಲಾಯಿಸದನೆಂದೂ ಹೇಳಿರುವೆ. ಹರ್ಷರಾಜ ಬೌದ್ಧ ಧರ್ಮಕ್ಕೆ ಬದಲಾಯಿಸಿಲ್ಲವಲ್ಲ? ಅವನು ಬ್ರಾಹ್ಮಣ ಕರ್ಮಗಳ ಅನುಯಾಯಿ! ಶಿವ-ಮಹೇಶ್ವರನ ಭಕ್ತ! ಕೇವಲ ರಾಜಕುಮಾರಿ ರಾಜ್ಯಶ್ರೀ ಬೌದ್ಧ ಧರ್ಮಕ್ಕೆ ಬದಲಾಯಿಸಿದ್ದಾಳೆ ಅದೂ ಅವಳು ವಿಂಧ್ಯಾಚಲದಲ್ಲಿ ವನವಾಸದಲ್ಲಿದ್ದಾಗ. ನೀನು ಹರ್ಷರಾಜನಿಗೆ ಬೋಧನೆ ಮಾಡಿದ್ದನ್ನು ನಾನು ಕಾಣಲೇ ಇಲ್ಲವಲ್ಲ?" ಎಂದೆ.
ನನ್ನ ಮಿತ್ರನ ಮುಖ ಕೆಂಪಾಗಿ ಉಬ್ಬಿದರೂ ನಾನು ಪುನಃ ಹೇಳಿದೆ "ಧಾರ್ಮಿಕ ಸಮಾವೇಷದಲ್ಲಿ ಅವನು ಬ್ರಾಹ್ಮಣ ದೇವರುಗಳಿಗೆ ಮಾಡಿದೆ ರಾಜ್ಯೋಪಚಾರಗಳನ್ನೇ ಬುದ್ಧನ ಪ್ರತಿಮೆಗಳಿಗೂ ಮಾಡಿದ. ನೀನು ಕೇವಲ ಬುದ್ಧನ ಪ್ರತಿಮೆಯನ್ನು ಕುರಿತು ಬರೆದಿರುವೆ, ಬ್ರಾಹ್ಮಣ ದೇವತೆಗಳಿಗೆ ಸಲ್ಲಿಸಿದ ಉಪಚಾರಗಳನ್ನು ಹೇಳಿಯೇ ಇಲ್ಲವಲ್ಲ. ಇದು ಅಟಮಟಣೆಯಲ್ಲವೇ?"
ಪುನಃ ಸ್ವಲ್ಪ ಓದಿ "ಓಹೋ! ಈ ವಿಚಾರವನ್ನೂ ಬರೆದಿರುವೆಯಾ! ಹರ್ಷರಾಜನ ಪ್ರಾಣಾಪಹರಣ ಪ್ರಯತ್ನವೇನೋ ನಿಜ ಆದರೆ ಅದು ಬ್ರಾಹ್ಮಣರ ಕಾರ್ಯವಲ್ಲ - ಹೊರದೇಶ ಗೂಢಚಾರರ ಕೃತ್ಯವೆಂದು ಎಲ್ಲ್ರಿಗೂ ತಿಳಿದಿದೆ. ನೀನೇಕೆ ಅದು ಬ್ರಾಹ್ಮಣ ವರ್ಗದ ಕೃತ್ಯ, ಹರ್ಷರಾಜ ಒಂದು ಸಹಸ್ರ ಬ್ರಾಹ್ಮಣರನ್ನು ದೇಶಬ್ರಷ್ಟರಾಗಿಸಿದ ಎಂದು ಬರೆದಿರುವೆ?"
"ಧಾರ್ಮಿಕ ಸಮಾವೇಷದಲ್ಲಿ ನೀನು ಐದು ದಿನಗಳ ಕಾಲ ತರ್ಕ ಮಾಡಿದೆ, ಯಾರಿಗೂ ನಿನ್ನನ್ನು ಸೋಲಿಸಲಾಗಲಿಲ್ಲ ಎಂದು ಬರೆದಿರುವೆಯಲ್ಲ? ಅದಕ್ಕೆ ಯಾರೋ ನಿನ್ನ ಪ್ರಾಣಾಪಹರಣ ಪ್ರಯತ್ನ ಮಾಡಿದರು ಎಂದು ಹೇಳಿರುವೆಯಲ್ಲ? ನೀನು ತರ್ಕ ಮಾಡಿದ್ದು ನಾನು ನೋಡಲೇಯಿಲ್ಲವೆ? ಯಾರು ನಿನ್ನ ಪ್ರಾಣ ಹರಣ ಪ್ರಯತ್ನ ಮಾಡಿದರು?" ಪುನಃ ಕೇಳಿದೆ.
ನನ್ನ ಮಿತ್ರನ ಬಳಿ ಈ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಅವನು ಒಂದು ಬೃಹತ್ ಅಹ್ಂ ಪೋಶಿಸಿಕೊಂಡಿದ್ದ. ಕೋಪಗೊಂಡು ಎಲ್ಲಿಯೋ ಹೊರಟು ಹೋದ. ಅವನು ಹಿಂತಿರುಗಿದ ನಂತರ ನಾನು ಆ ವಿಚಾರ ಮತ್ತೆ ಹೇಳಲಿಲ್ಲ. ಆದರೆ ಅವನು ಬರೆದ ತಪ್ಪು ಸರಿಪಡಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೆ. ಹಾಗಾಗಿ ತಿದ್ದಲು ಪ್ರಯತ್ನ ಮಾಡಿದೆ.
ಇದ್ಯಾವುದೂ ನಮ್ಮ ಮಿತ್ರತೆಗೆ ಬಾಧೆಯಾಗಲಿಲ್ಲ. ಇಬ್ಬರೂ ಕೂಡಿ ಜಂಬೂದ್ವೀಪದಾದ್ಯಂತ ಪ್ರಯಾಣ ಮಾಡಹೊರಟೆವು.
Monday, October 09, 2006
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ...
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ...
Labels:
adventure,
chalukya,
harshavardhana,
historical,
hiuen tsang,
pulikeshi,
spy thriller
Subscribe to:
Post Comments (Atom)
No comments:
Post a Comment