Monday, October 09, 2006

ಕಾಲಪಯಣ

ಕಾಲಪಯಣ

Language: Kannada
Category: Fantasy/Adventure-Thriller
Abstract: This is a fictional story about an archaeologist getting lost in time - he accidentally travels to the past and finds out interesting facts about the Sarasvati (Indus Valley) Civilization.
Keywords: time travel, indus valley civilization, saraswati civilization, fiction, fantasy, time portal, kannada, thriller, history


ನಾನು 'ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ'ದಲ್ಲಿ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು ಹೊರತೆಗೆಯುತ್ತಿದ್ದೆವು.

ಅಂದು ಸಾಧಾರಣ ದಿನಗಳಿಗಿಂತ ಸ್ವಲ್ಪ ವಿಚಿತ್ರವಾದ ಹವಾಮಾನವಾಗಿತ್ತು. ದಿನವಿಡೀ ಮೋಡ ಕವಿದಿದ್ದು ಮಳೆರಾಯ ಹುಯ್ಯುವ ಬೆದರಿಕೆ ಹಾಕುತ್ತಿದ್ದ. ಮಳೆಯನ್ನು ಹೆದರಿ ನಮ್ಮ ಭೂಶೋಧನೆ ಬಹು ವೇಗದಿಂದ ಸಾಗಿತ್ತು. ಸಂಜೆಯಾಗಿತ್ತು, ಇನ್ನೇನು ಪ್ರವಾಸಿ ಮಂದಿರಕ್ಕೆ ಹಿಂತಿರುಗುವ ಸಮಯ. ಕೊನೆ ಘಳಿಗೆಯಲ್ಲಿ ಒಂದು ಪುಟ್ಟ ಆಕಾರದ ಮನುಷ್ಯನ ಮೂರ್ತಿ ನೆಲದಲ್ಲಿ ದೊರಕಿತು.

ಕುಳಿತಿರುವ ಓರ್ವ ಋತ್ವಿಕ-ರಾಜನ ಮೂರ್ತಿಯದು. ಸುಮಾರು ೧೭ ಸಿಂಟಿಮೀಟರ್ ಉದ್ದ, ೧೧ ಸಿಂಟಿಮೀಟರ್ ಅಗಲದ ಮೂರ್ತಿ, ಹಣೆಯ ಸುತ್ತ ಯಾವುದೋ ಒಂದು ಆಭರಣ ಧರಿಸಿದ್ದ, ಹಣೆಯ ಮಧ್ಯದಲ್ಲಿ ಚಕ್ರಾಕಾರ ಪದಕ. ತಲೆಯ ಕೂದಲು ಹಿಂದೆ ಬಾಚಿದಂತೆ ಕಾಣಿಸುತ್ತಿತ್ತು. ಗಡ್ಡ ಮೀಸೆಗಳು ಆ ಮೂರ್ತಿಗೆ ಕೆತ್ತಲಾಗಿದ್ದವು. ಉದ್ದನೆಯ ಕಿವಿ ಹಾಳೆಗಳು, ಕಿವಿಯಲ್ಲಿ ಏನೋ ಆಭರಣ. ಮೂಗಿನ ಭಾಗದಲ್ಲಿ ಮೂರ್ತಿ ಸ್ವಲ್ಪ ಮುರಿದಂತೆ ಕಾಣಿಸುತ್ತಿತ್ತು. ಆತ ಎಡಗಡೆ ಹೆಗಲಿನ ಮೇಲಿಂದ ಬಲ ಸೊಂಟಕ್ಕೆ ಒಂದು ಅಂಚುಳ್ಳ ಶಲ್ಯ ಹೊದ್ದುಕೊಂಡ ಹಾಗಿತ್ತು. ಬಲಗೈ ತೋಳಿನಲ್ಲಿ ಮತ್ತೊಂದು ಚಕ್ರಾಕಾರ ಪದಕವುಳ್ಳ ಆಭರಣ. ಇದರಿಂದ ಕೆಳಗೆ ಎಲ್ಲವೂ ಮುರಿದು ನಷ್ಟವಾಗಿದ್ದರೂ, ನೆಲದ ಮೇಲೆ ನಿಲ್ಲಲ್ಲು ಒಂದು ಚಪ್ಪಟ್ಟೆ ಬುಡವಿತ್ತು.

ಮಳೆ ರಭಸದಿಂದಾಗಮಿಸಲು, ನಾನು ಆ ಮೂರ್ತಿಯನ್ನು ಜೋಪಾನ ಮಾಡಲು ನನ್ನ ಚೀಲದೊಳಗೆ ಇರಿಸಿ ನನಗಾಗಿ ಕಾದಿದ್ದ ಜೀಪ್ ಹತ್ತಿ ಪ್ರವಾಸಿ ಮಂದಿರವನ್ನು ಸೇರಿದೆ. ಚೀಲವನ್ನು ಕೋಣೆಯಲ್ಲಿರಿಸಿ, ಬೆಳಗ್ಗಿನಿಂದ ಆಚೆ ಇದ್ದು ಬೆವರು, ಮಣ್ಣು, ಧೂಳುಗಳು ಅಂಟಿದ್ದ ಕಾಯವನ್ನು ತೊಳೆಯಲು ಸ್ನಾನದ ಕೋಣೆಗೆ ಹೋದೆ. ಹೊರಗೆ ಬಂದು ಎಂದಿನಂತೆ ಮಾಣಿ ತಂದು ಮೇಜಿನ ಮೇಲೆ ಇರಿಸಿದ್ದ ಕಾಪಿ ಕುಡಿಯುತ್ತಿದ್ದಾಗ ಮಳೆಯು ಸಿಡಿಲಬ್ಬರದ ಬಿರುಗಾಳಿಗಳಿಂದ ಕೂಡಿ, ವಾತವರಣವು ರೋಷ ತುಂಬಿಕೊಂಡಂತೆ ಕಾಣಿಸುತ್ತಿತ್ತು. ಸಿಡಿಲೊಂದು ಬಂದು ಮೇಜಿನ ಮೇಲೆ ಇರಿಸಿದ್ದ ನನ್ನ ಚೀಲಕ್ಕೆ ತಾಕಿದಹಾಗೆನಿಸಿತು. ತಿರುಗಿ ನೋಡಿದರೆ ನಿಂತಿದ್ದ ನನ್ನ ಚೀಲ ಅಲ್ಲಿಯೇ ಉರುಳಿಕೊಂಡಿತ್ತು. ಅದನ್ನು ಪುನಃ ನಿಲ್ಲಿಸಿ, ಆ ಮೂರ್ತಿಯನ್ನು ಹೊರತೆಗೆದಿಟ್ಟು. ದಿನಪತ್ರಿಕೆಯನ್ನು ಹಿಡಿದು ಕುರ್ಚಿಯಲ್ಲಿ ಕುಳಿತೆ.

ಸ್ವಲ್ಪ ಸಮಯ ಕಳೆದ ನಂತರ, ಇನ್ನೇನು ಊಟದ ಸಮಯವಾಯಿತೆಂದು ಯೋಚಿಸುತ್ತ, ಮಾಣಿಯು ಊಟ ತರುವುದನ್ನು ಎದುರು ನೋಡುತ್ತಿದ್ದೆ. ಬಾಗಿಲನ್ನು ಯಾರೋ ಬಡಿದ ಶಬ್ಧ ಕೇಳಿಸಿತು. ಹೋಗಿ ಬಾಗಿಲನ್ನು ತೆರೆದು ನೋಡದೆಯೇ ನನ್ನ ಕುರ್ಚಿಗೆ ಹಿಂತಿರುಗಿದೆ. ಏಕೋ ಏನೋ ಎಂದಿನಂತೆ ಮಾಣಿ ಊಟ ಹಿಡಿದು ಒಳಗೆ ಬಂದಿದ್ದು ಕೇಳಿಸಲಿಲ್ಲ. ಬದಲಿಗೆ ವಿಚಿತ್ರ ರೀತಿಯ ಶಬ್ಧ ಕೇಳಿಸಿತು. ಯಾರೋ ಬೇರೆ ಇರಬಹುದೇ ಎಂದು ಯೋಚಿಸಿ ಬಾಗಿಲಲ್ಲಿ ನೋಡಿದರೆ, ಆಶ್ಚರ್ಯ!

ಪ್ರವಾಸೀ ಮಂದಿರದ ಕೋಣೆಯ ಹೊರಗೆ ಕಾಣುವ ನೋಟ ಕಾಣಿಸಲಿಲ್ಲ. ಬದಲಾಗಿ ಕಾಡೊಂದು ಕಾಣಿಸಿತು! ನನಗೆ ನಂಬಲಾರದಾಗಿತ್ತು! ಪುನಃ ಬಾಗಿಲ ಬಳಿ ಹೋಗಿ ಇಣುಕಿ ನೋಡಿದೆ. ಪರಮಾಶ್ಚರ್ಯ! ದೈತ್ಯ ಹಲ್ಲಿ - ಡೈನೋಸಾರ್​ಗಳು! ಬೆರಗಾಗಿ ನೋಡುತ್ತ ನಿಂತೆ. ನೆಲ ನಡುಗುವ ಆಭಾಸ ನನ್ನ ಭ್ರಾಂತಿಯನ್ನು ಮುರಿಯಿತು. ಎಡಕ್ಕೆ ತಿರುಗಿ ನೋಡಿದರೆ ದೈತ್ಯವೊಂದು ನನ್ನೆಡೆಗೆ ಬರುತ್ತಿದೆ. ಬಾಯ್ತೆಗೆದು ಒಮ್ಮೆ ಅರಚಿತು. ಭೀತಿಯಿಂದ ಬಾಗಿಲನ್ನು ಜೋರಾಗಿ ಬಡಿದೆ.

ಮೀಸೋಝೋಯಿಕ್ ಕಾಡಿನ ಗದ್ದಲದ ನಡುವೆಯೋ, ನಾನೇ ಆ ಕಾಡಿನಲ್ಲಿ ಮಗ್ನನಾಗಿದ್ದು ಕೇಳಿಸಿಕೊಂಡಿರಲಿಲ್ಲವೋ, ಅಥವ ಹೊಸದಾಗಿ ಶುರುವಾಗಿತ್ತೋ ತಿಳಿಯದು. ಇದ್ದಕ್ಕಿದ್ದಂತೆ ಶಾಂತವಾದ ಕೋಣೆಯಲ್ಲಿ ಈಗ ಬೇರೆ ರೀತಿಯ ಶಬ್ಧಗಳು ಕೇಳಿಸತೊಡಗಿದವು. ಯುದ್ಧದ ಕೋಲಾಹಲ, ಕೂಗಾಟ. ಕುದುರೆ, ಆನೆಗಳ ಧಾಂಧಲೆ, ಮನುಷ್ಯರ ಅರಚಾಟ. ಕಿಟಕಿಯೊಂದು ಪೂರ್ಣವಾಗಿ ಮುಚ್ಚಿರಲಿಲ್ಲ - ಸ್ವಲ್ಪ ತೆರೆದಿತ್ತು. ಅದರಾಚೆಯಿಂದ ಬರುತ್ತಿದ್ದ ಶಬ್ಧಗಳವು. ಕಿಟಕಿಯ ಬಳಿ ಹೋಗಿ ನಿಂತೆ. ಮತ್ತೊಂದು ಕಾಣದಂತಹ ದೃಷ್ಯ. ಇತಿಹಾಸದಲ್ಲಿ ನೋಡಿದ ಚಿತ್ರಗಳಂತಹ ಗ್ರೀಕ್ ಸೈನಿಕರು ಯುದ್ಧದಲ್ಲಿ ವ್ಯಸ್ಥರಾಗಿದ್ದರು. ಎದುರಿಗೆ ಕಚ್ಚೆಪಂಚೆ, ಪೇಟಧಾರಿಗಳ ಭಾರತೀಯರ ಒಂದು ಸೈನ್ಯ. ಬಿಲ್ಲು ಬಾಣ, ಈಟಿ, ಕತ್ತಿಗಳ ಸಹಾಯದಿಂದ ನಡೆಯುತ್ತಿದ್ದ ಯುದ್ಧ. ನಮ್ಮವರೇ ಮೇಲುಗೈ ಸಾಧಿಸುತ್ತಿದ್ದಂತಿತ್ತು. ಅಲೆಕ್ಸಾಂಡರ್, ಮೌರ್ಯ ಎಂಬ ಹೆಸರುಗಳು ಆ ಕೋಲಾಹಲದಲ್ಲಿ ಕಿವಿಗೆ ಬಿದ್ದವು. ಬಾಣವೊಂದು ತೆರೆದ ಕಿಟಕಿಯೊಳಗೆ ಬಂದು ನನ್ನ ಬೆನ್ನಿನ ಹಿಂದಿದ್ದ ಸೋಫಾಗೆ ನಾಟಿದಾಗ ಆತುರದಿಂದ ಥಪಕ್ಕನೆ ಆ ಕಿಟಕಿಯನ್ನು ಮುಚ್ಚಿದೆ.

ಏನೂ ಅರ್ಥವಾಗಲಿಲ್ಲ. ನನಗೆ ಹುಚ್ಚು ಹಿಡಿದಿದೆಯೇ, ಇಲ್ಲವೇ ಭ್ರಾಂತಿಯುಂಟಾಗಿದೆಯೇ, ಯಾವುದೂ ತಿಳಿಯಲಿಲ್ಲ. ತಲೆ ಕೆಟ್ಟು, ಕನಸು ಕಂಡಿರಬಹುದೇ ಎಂದು ಯೋಚಿಸಿ ಅಲ್ಲೇ ಬಿದ್ದಿದ್ದ ರಿಮೋಟ್ ಕೈಗೆತ್ತಿಕೊಂಡು ಟೀವಿಯನ್ನು ಹಾಕಿದೆ. ಸ್ವಾತಂತ್ರ್ಯ ಹೋರಾಟದ ಒಂದು ದೃಷ್ಯ. ಬ್ರಿಟೀಷರ ವಿರುದ್ಧ ನಾರೆಗಳು, "ಭಾರತ ಬಿಟ್ಟು ತೊಲಗಿ" ಎಂಬ ಕೂಗು ಗನಕ್ಕೇರಿತ್ತು. ಅಷ್ಟರಲ್ಲಿ ಆ ಚಳುವಳಿಗಾರರ ಮೇಲೆ ಬ್ರಿಟೀಷ್ ಪೋಲೀಸರ ಧಾಳಿ ನಡೆಯಿತು. ಬಿಳಿಯನೊಬ್ಬ ಕ್ಯಾಮರಾ ಕಡೆ ತಿರುಗಿ ಬಂದೂಕಿನಿಂದ ಗುಂಡು ಹಾರಿಸಿದಾಗ ಟೀವಿ ಸ್ಕ್ರೀನ್ ಒಡೆದು ಹೋಗಿದ್ದನ್ನು ನೋಡಿ ದಿಗಿಲಾದೆ. ಒಡೆದ ಸ್ಕ್ರೀನಿನಿಂದ ಆ ಆಂದೋಳನ ಕಾಣಿಸುತ್ತಲೇ ಇತ್ತು. ಇದು ಹೇಗೆ ಸಾಧ್ಯ ಎಂದು ಯೋಚಿಸುವಷ್ಟರಲ್ಲಿ ಪೋಲೀಸ್ ಪ್ಯಾದೆಗಳು ಟೀವಿಯೊಳಗಿನಿಂದ ಹೊರ... ಅಲ್ಲ ನನ್ನ ಕೋಣೆಯ ಒಳಗೆ ಬರಹತ್ತಿದರು. ಹೆದರಿ ನಾನು ಸ್ನಾನದ ಕೋಣೆಯೊಳಗೆ ಓಡಿನೀರು ತುಂಬಿದ್ದದೆ. ಓಡುತ್ತಿದ್ದಾಗ ಮೇಜಿನ ಮೇಲಿದ್ದ ಆ ಪುಟ್ಟ ಮೂರ್ತಿಯನ್ನು ಕೈಗೆತ್ತಿಕೊಂಡೆ.

ಸ್ನಾನದ ಕೋಣೆಯ ಬಾಗಿಲು ತೆಗೆದೇ ಇತ್ತು - ಬಹುಶಃ ಸ್ನಾನ ಮುಗಿಸಿ ಹೊರ ಬಂದಾಗ ಬಾಗಿಲನ್ನು ಮುಚ್ಚಿರಲಿಲ್ಲವೇನೋ. ಒಂದು ನಿಮಿಷ ಯೋಚಿಸುವ ಸಮಯ ದೊರಕಿತು. ನನ್ನ ಕೈಯಲ್ಲಿದ್ದ ಆ ಪ್ರಾಚೀನ ವಿಗ್ರಹ, ಹಾಗು ಬಡಿದ ಸಿಡಿಲಿನ ಪ್ರತಿಕ್ರಿಯೆಯಿಂದ ನನ್ನ ಕೋಣೆಯೇ ಒಂದು ಟೈಮ್​ಮಶೀನ್ - ಸಮಯ ಬದಲಾಯಿಸುವ ಯಂತ್ರವಾಗಿರ ಬೇಕು. ಕೋಣೆಯ ಒಂದೊಂದು ಬಾಗಿಲು-ಕಿಟಕಿಗಳೂ ಒಂದೊಂದು ಕಾಲಕ್ಕೆ ಹೆಬ್ಬಾಗಿಲುಗಳಾಗಿರಬೇಕು! ಸ್ನಾನದ ಕೋಣೆಯ ಬಾಗಿಲು ತೆರೆದೇ ಇದ್ದರಿಂದ ಈ ಕೋಣೆಗೆ ಆ ಪ್ರತಿಕ್ರಿಯೆ ತಗುಲಿರಲಿಲ್ಲವೇನೋ ಎಂದುಕೊಂಡೆ. ಕುತೂಹಲದಿಂದ ಆ ಮೂರ್ತಿಯನ್ನು ಗಮನಿಸ ತೊಡಗಿದೆ.

ಬಚ್ಚಲು ಮನೆಯ ನಲ್ಲಿಯಲ್ಲಿ ನೇರು ತೊಟಕುತ್ತಿತ್ತು. ಸ್ನಾನ ಮುಗಿಸಿದಾಗ ಬಹುಶಃ ನಲ್ಲಿ ನಿಲ್ಲಿಸಿರಲಿಲ್ಲವೇನೋ. ಸ್ನಾನದ ಕೋಣೆಯಲ್ಲಿ ನೀರು ತುಂಬಲೆಂದು ಇದ್ದ ಒಂದು ತೊಟ್ಟಿಯ ಕಟ್ಟೆಯ ಮೇಲೆ ಕೈಯಲ್ಲಿದ್ದ ಮೂರ್ತಿಯನ್ನು ಇರಿಸಿ, ನೀರು ನಿಲ್ಲಿಸಲು ಬಚ್ಚಲಿಗಿಳಿದೆ. ನೇರು ನಿಲ್ಲಿಸಿ ಹೊರಬಂದಾಗ ನನ್ನ ಕೈ ತಗುಲಿ ಆ ಮೂರ್ತಿ ನೀರು ತುಂಬಿದ್ದ ತೊಟ್ಟೊಯೊಳಗೆ ಬಿದ್ದು ಮುಳುಗಿತು. ನಾನೂ ತೊಟ್ಟಿಯೊಳಗೆ ಬಗ್ಗಿ ನೋಡಿದೆ; ಮಬ್ಬು ಬೆಳಕಿದ್ದ ಕಾರಣ ಏನೂ ಕಾಣಿಸಲಿಲ್ಲ. ಮೂರ್ತಿಯನ್ನು ಉಳಿಸುವ ಯತ್ನದಲ್ಲಿ ನಾನೇ ತೊಟ್ತಿಯೊಳಕ್ಕಿಳಿದು ಬುಡದಲ್ಲಿ ಕಾಲು ತಡವರಿಸಿದೆ. ಬಹಳ ದಿನಗಳಿಂದ ತೊಳೆದಿರಲಿಲ್ಲವೋ ಏನೋ -ತೊಟ್ಟಿಯಲ್ಲಿ ಪಾಚಿ ಕಟ್ಟಿತ್ತು. ಪಾಚಿ, ಒಂದೇ ಕಾಲಿನ ಮೇಲೆ ಮೈ ಭಾರ, ಎಲ್ಲವೂ ಸೇರಿ ಜಾರಿ ಬಿದ್ದೆ.

ತೊಟ್ಟಿಯಲ್ಲಿ ಮುಳುಗಿದವ ತಲೆಯೆತ್ತಿದಾಗ ಎಲ್ಲೋ ಹೊರಗೆ ಎದ್ದ ಆಭಾಸ. ನೋಡಿದರೆ ಒಂದು ಸಾರ್ವಜನಿಕ ಸ್ನಾನದ ಹೊಂಡ. ಇಳಿದು ಬರಲು ಸುತ್ತಲೂ ಕಲ್ಲಿನ ಮೆಟ್ಟಲುಗಳು. ಬೆಳಗಿನ ಜಾವವಾಗಿತ್ತು. ಸೂರ್ಯ ಆಗಿನ್ನೂ ಹುಟ್ಟುತ್ತಿದ್ದ. ಸುತ್ತಲೂ ಬೆಳಗಿನ ಪೂಜೆಗಳಲ್ಲಿ ವ್ಯಸ್ಥವಾಗಿದ್ದ ಜನರು. ಪುನಃ ನನ್ನ ಮನಸ್ಸಿನಲ್ಲಿ ಗೊಂದಲವುಂಟಾಯಿತು. ಕೊನೆಗೆ ಕೊಂಡದಲ್ಲಿ ಬಿದ್ದವನು ಯಾವುದೋ ಬೇರೆ ಕಾಲದಲ್ಲಿ ಎದ್ದಿರಬೇಕೆಂದು ತೀರ್ಮಾನಿಸಿದೆ. ದಡದಲ್ಲಿ ನೋಡಿದರೆ ಮತ್ತೊಂದು ಆಶ್ಚರ್ಯ ಕಾದಿತ್ತು! ನಾನು ಹೊರತೆಗೆದ, ಈ ಕಾಲ-ಪಯಣಕ್ಕೆ ಕಾರಣನಾದ ಆ ಋತ್ವಿಕ-ರಾಜ; ಮೂರ್ತಿಯಲ್ಲ - ಪ್ರತ್ಯಕ್ಷವಾಗಿ, ಮಾಂಸ-ರಕ್ತಗಳಿಂದ ಕೂಡಿ!

ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ ಋತ್ವಿಕನ ಕಾಲಿನ ಬಳಿ ಕುಸಿದುಬಿದ್ದೆ. ನಾನು ಓದಿದ್ದ 'ಸಯನ್ಸ್ ಫಿಕ್ಷನ್' ಕತೆಗಳು ನಿಜವೇನೋ ಎನ್ನುವಂತೆ ಕಾಲ ಪ್ರಯಾಣ ನನ್ನನ್ನು 'ಡಿಸ್​ಓರಿಯಂಟ್' ಮಾಡಿದೆ ಎಂದು ಯೋಚಿಸುವಷ್ಟು ತ್ರಾಣವಿತ್ತು. ಮರುಕ್ಷಣದಲ್ಲಿ ಎಲ್ಲವೂ ಕತ್ತಲಾಯಿತು.

*****

ನನ್ನ ಕಣ್ತೆರೆದಾಗ ಯಾವುದೋ ಮನೆಯ ಒಂದು ಕೋಣೆಯಲ್ಲಿ, ಅಟ್ಟಣಿಗೆಯ ಮೇಲೆ ಹಾಸಿದ್ದ ಮೆತ್ತನೆಯ ಹಾಸಿಗೆಯಲ್ಲಿ ಮಲಗಿದ್ದೆ. ಸುತ್ತ ಯಾರೂ ಕಾಣಿಸಲಿಲ್ಲ. ಎದ್ದು ಕೋಣೆಯಿಂದ ಹೊರಬಂದೆ. ಆಚೆ ಬೀದಿಯಿಂದ ಜನರ ಓಡಾಡುವ ಗದ್ದಲ ಒಳಬರುತ್ತಿತ್ತು. ಮತ್ತೊಂದು ಕಡೆ ಅಡುಗೆ ಮನೆಯಂತಿದ್ದ ಮೂಲೆಯೊಂದರಲ್ಲಿ ಒಲೆಗುಂಡದ ಮೇಲೆ ಮಣ್ಣಿನ ಮಡಿಕೆಗಳನ್ನಿಟ್ಟು ಒಬ್ಬಾಕೆ ಅಡಿಗೆ ಮಾಡುತ್ತಿದ್ದರು. ಅದನ್ನು ಕಂಡು ನನಗೆ ಹೊಟ್ಟೆ ಹಸಿವಾಗಿರುವುದು ನೆನಪಾಯಿತು.

ಆಡಿಗೆ ಮಾಡುತ್ತಿದ್ದಾಕೆ ನನ್ನನ್ನು ನೋಡಿದರೂ ಮಾತನಾಡಲಿಲ್ಲ. ಬಾಗಿಲಾಚೆ ಹೋಗಿ ಸಣ್ಣನೆಯ ಧ್ವನಿಯಲ್ಲಿ ಏನೋ ಮಾತನಾಡಿದ ಶಬ್ಧ ಕೇಳಿಸಿತು. ಕೆಲ ಕ್ಷಣಗಳ ನಂತರ ಆ ಋತ್ವಿಕರೊಡನೆ ಒಳಬಂದು, ಅಡಿಗೆ ಮೂಲೆಗೆ ಮರಳಿದರು. ಋತ್ವಿಕರು ನನ್ನ ಕಡೆ ಬಂದು ತಿಳಿಯದ ಭಾಷೆಯಲ್ಲಿ ಏನೋ ಮಾತನಾಡಿದರು. ನನ್ನನ್ನು ನಾನೇ ನೋಡಿಕೊಂಡೆ - ಶರ್ಟನ್ನು ಧರಿಸಿದ್ದರೂ ನನ್ನ ಎಂದಿನ ಅಭ್ಯಾಸದಂತೆ ಸ್ನಾನದ ನಂತರ ಪಂಚೆಯನ್ನೇ ಉಟ್ಟಿದ್ದೆ. ನನ್ನ ಬಟ್ಟೆಗಳು ಇನ್ನೂ ನನ್ನ ಮೇಲೇ ಇದ್ದವು. ಒಂದು ಕ್ಷಣದಲ್ಲಿ ಹಲವಾರು ಯೋಚನೆಗಳು ನನ್ನ ತಲೆ ಹಾಯ್ದು ಹೋದವು:

"ಕಾಲ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವುದಂತೂ ಖಚಿತ. ಇವರ ಭಾಷೆಯನ್ನೂ ಅರಿಯದವ ನಾನು. ಇಲ್ಲಿಗೆ ಹೇಗೆ ಬಂದೆ ಎಂದು ತಿಳಿದಿಲ್ಲ. ಇಲ್ಲಿಂದ ಹೇಗೆ ಹಿಂತಿರುಗುವುದು? ನನ್ನ ಕಾಲದಲ್ಲಿ ನನ್ನ ಮನೆ, ಮಠ, ಬಂಧು, ಬಳಗ? ಹಿಂತಿರುಗಲಾಗದಿದ್ದರೆ ಇಲ್ಲಿಯೇ ಬದುಕಿ, ಇಲ್ಲಿಯೇ ಸಾಯುವುದೇ? ಕಾಲ ಪ್ರಯಾಣದ ಪರಿಣಾಮಗಳು?" ಅಷ್ಟರಲ್ಲಿ ಮತ್ತೊಂದು ವಿಚಿತ್ರ ವಿಚಾರ ಹೊಳೆಯಿತು "ನನ್ನ ಕಾಲದಲ್ಲಿಯೂ ನಾನಿದ್ದೇನೆಯೇ? ಈ ಕಾಲ ಪ್ರಯಾಣ ಎಂಥದ್ದು ಎಂದು ಅರಿತವರಾರು?" ಈ ವಿಚಾರಗಳು ಮುಗಿಯುವಷ್ಟರಲ್ಲಿ ಮತ್ತಷ್ಟು ವಿಚಾರಗಳು - "ಇದೇನು ಬರೀ ಕಾಲ ಪ್ರಯಾಣವೋ, ಅತವ ನಾನೇನಾದರೂ ಮತ್ತೊಂದು ಲೋಕಕ್ಕೇ ಬಂದಿರುವೆನೋ? ಕಾಲ ಪ್ರಯಾಣ ಸಾಧ್ಯವಾದರೆ 'ಪ್ಯಾರಲಲ್ ಯೂನಿವರ್ಸ್' ಏಕೆ ಸಾಧ್ಯವಿಲ್ಲ?"

"ನನ್ನ ಕಾಲದಲ್ಲಿ ನಾನು ಕಾಣೆಯಾದರೆ ನಮ್ಮವರು ನನಗಾಗಿ ಹುಡುಕುವರೆ? ನನ್ನ ಆ ವಿಚಿತ್ರ ಕೋಣೆಯೊಳಗೆ ಯಾರಾದರೂ ಬರಲು ಸಾಧ್ಯವೇ? ತೊಟ್ಟಿಯಲ್ಲಿ ಮುಳುಗಿದವ ಬೇರೆ - ಯಾರಾದರೂ ಪತ್ತೆ ಹಚ್ಚುವರೇ? ಭಗವಂತ, ನನಗೆ ಮೋಕ್ಷವೆಲ್ಲಿ?" ಇಷ್ಟೆಲ್ಲ ನನ್ನ ತಲೆಯಲ್ಲಿ ಹಾಯ್ದು ಹೋಗಲು ಇದನ್ನು ಬರೆಯುವಷ್ಟು, ಹೇಳುವಷ್ಟು ಅಥವ ಓದುವಷ್ಟು ಸಮಯ ತೆಗೆದುಕೊಳ್ಳಲಿಲ್ಲ. ಒಂದೇ ಕ್ಷಣದಲ್ಲಿ ಹಾಯ್ದು ಹೋದವು.

ನಾನು ಪುನಃ ಎಚ್ಚೆತ್ತುಕೊಂಡಾಗ ನನ್ನೆದುರಿದ್ದ ಮನುಷ್ಯ ಮತ್ತೇನೋ ಹೇಳುತ್ತಿದ್ದರು. ನನ್ನ ಮುಖದ ಶೂನ್ಯ ಭಾವ ನೋಡಿ ಮತ್ತೆ ನಿಧಾನವಾಗಿ ಹೇಳಲಾರಂಭಿಸಿದರು. ಹಿಂದಿ, ಸಂಸ್ಕೃತಗಳನ್ನೂ, ಹಾಗೂ ಆ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಅರಿತಿದ್ದೆ. ಅವರು ಹೇಳುತ್ತಿದ್ದ ಕೆಲವು ಪದಗಳು ಅರ್ಥವಾಗತೊಡಗಿದವು. ಹೊಟ್ಟೆ ಹಸಿದಿತ್ತು, ಇದು ನಿಜವಾಗಿ ಅನ್ಯ ಲೋಕವಾಗಿ ಇವರ ಆಹಾರ ಬೇರೆಯಾಗಿದ್ದರೆ? ನಾನು ಸಸ್ಯಾಹಾರಿ, ಇಲ್ಲಿ ಸಸ್ಯಾಹಾರ ಇಲ್ಲವಾದರೆ? ಎಂದೆಲ್ಲ ಯೋಚನೆ ಬಂದರೂ, ಹೊಟ್ಟೆ ಕೇಳಬೇಕೇ! ಹೊಟ್ಟೆಯ ಕಡೆ ಸನ್ನೆ ಮಾಡಿ ತೋರಿಸಿದೆ. ಅವರು ತಲೆ ಕುಲುಕುತ್ತ ಹಿಂದೆ ತಿರುಗಿ ಕೂಗಿದರು. ಒಂದು ಮಣ್ಣಿನ ಬೋಸಿಯಲ್ಲಿ ಬೆಂದ ಹೆಸರುಬೇಳೆ ಹಾಗು ಲೋಹದ ತಟ್ಟೆಯಲ್ಲಿ ಗಂಜಿಯುಕ್ತ ಅನ್ನವನ್ನು ನನ್ನ ಮುಂದೆ ತಂದಿಟ್ಟರು. ಮನೆಯ ಅಡಿಗೆ ನೆನಪಾಯಿತು - ಅನ್ನ-ಸಾರಿನ ನನ್ನ ಪರಮಪ್ರಿಯ ಅಡಿಗೆ. ಒಟ್ಟಾರೆ ಅನ್ನದಲ್ಲಿ ಬೇರೆಯ ರುಚಿಯಿದ್ದರೂ ಅನ್ನವೇ ಆಗಿತ್ತು. ಹೊಟ್ಟೆ ತುಂಬ ತಿಂದು ಮತ್ತೊಂದು ಪುಟ್ಟ ಮಡಿಕೆಯಲ್ಲಿ ತಂದಿಟ್ಟ ನೀರನ್ನು ಕುಡಿದೆ. ಈಗ ಉಳಿದ ವಿಚಾರಗಳನ್ನು ಯೋಚಿಸುವ ಶಕ್ತಿ ಬಂದಿತ್ತು.

ಋತ್ವಿಕರ ಬಳಿ ಹೋಗಿ ಕುಳಿತೆ. ಅವರು ದೊಡ್ಡ ವಾಕ್ಯಗಳನ್ನು ಪುನಃ ಮಾತನಾಡಿದರು. ಈಗ ಅವರ ಮೇಲೆ ನನ್ನ ಸಂಪೂರ್ಣ ಗಮನ ಇದ್ದರಿಂದಲೋ ಏನೋ ಇನ್ನೂ ಹೆಚ್ಚು ಪದಗಳು ಪರಿಚಿತವಾಗಿ ಕೇಳಿಸಿದವು. ಹೆಚ್ಚು ಕಡಿಮೆ "ನೀನು ಯಾರು? ಎಲ್ಲಿಂದ ಬಂದಿರುವೆ?" ಎಂದು ಕೇಳುತ್ತಿದ್ದಾರೆಂದು ಊಹಿಸಿದೆ. ಇವರಿಗೇನು ಹೇಳಲಿ? ಹೇಗೆ ಹೇಳಲಿ? "ಕಾಲ ಪ್ರಯಾಣ ಮಾಡಿ ಬಂದಿರುವೆ, ನಾನು ಭವಿಷ್ಯ ಮಾನವ" ಎಂದು ಹೇಳಲೇ? ಅದು ಇವರಿಗೆ ಅರ್ಥವಾದೀತೆ? ನಂಬಿಯಾರೆ? ಎಂಬ ಯೋಚನೆಗಳು ಮನಸ್ಸನ್ನು ಕಾಡಹತ್ತಿದವು.

ಕಡೆಗೆ "ದೂರದ ಊರಿನಿಂದ ಬಂದಿರುವವ, ಈ ಊರಿನಲ್ಲಿ ಯಾರೂ ಗೊತ್ತಿಲ್ಲ" ಎಂದು ಹೇಳಲು ನಿರ್ಧರಿಸಿದೆ. ಇದನ್ನು ಹೇಳುವುದಾದರೂ ಹೇಗೆ? ಸಂಸ್ಕೃತ, ಹಿಂದಿ ಹಾಗು ನಾನರಿತ ಇತರ ಭಾಷೆಗಳನ್ನು ಉಪಯೋಗಿಸಿಕೊಂಡು ಒಂದೊಂದಾಗಿ ಪದಗಳನ್ನು ಹೇಳಲಾರಂಭಿಸಿದೆ. ಒಂದೊಂದು ಪದವನ್ನೂ ಎಲ್ಲ ಭಾಷೆಗಳಲ್ಲಿ ಹೇಳತೊಡಗಿದೆ. ಭಾವಹೀನರಾಗಿದ್ದರೆ ಮುಂದಿನ ಭಾಷೆಯಲ್ಲಿ ಹೇಳುತ್ತಿದ್ದೆ, ಅವರ ಮುಖದಲ್ಲಿ ಜ್ಞಾನೋದಯ ಕಂಡಾಗ ಮುಂದಿನ ಪದಕ್ಕೆ ವೃದ್ಧಿಸುತ್ತಿದ್ದೆ. ಹಲವು ನಿಮಿಷಗಳು ಇದೇ ರೀತಿ ಮಾತನಾಡಿದ ನಂತರ ನನ್ನ ಮಾತು ಅವರ ಬುದ್ಧಿಗೆ ತಲುಪಿತೆಂದು ನಿಟ್ಟುಸಿರೆಳೆದೆ. ಈಗ ಇವರಿಗರ್ಥವಾಗುವ ಕೆಲವು ಪದಗಳು ನನ್ನ ಕೈಯಲ್ಲಿದ್ದವು. ಅವನ್ನು ಕಾಳಜಿ ವಹಿಸಿ ನೆನಪಿನಲ್ಲಿಟ್ಟುಕೊಂಡೆ.

ನಾನು ಆಚೆ ಹೋಗಲು ಹೊರಟಾಗ ಋತ್ವಿಕರು ನನ್ನನ್ನು ಅವರ ಕೈ ಅಡ್ಡ ಹಾಕಿ ತಡೆದರು. ಅವರ ಮಾತುಗಳಿಂದ ನನ್ನ ದೇಹಸ್ಥಿತಿ ಇನ್ನೂ ಸರಿಯಾಗಿಲ್ಲವೆಂದೂ, ಹಾಗು ನಾನು ಈಗಲೇ ಹೊರ ಹೋಗಬಾರದೆಂದು ಅರ್ಥವಾಯಿತು. ನಾನು ಎಷ್ಟು ದಿನ ಮಲಗಿದ್ದೆ ಎಂದು ಸನ್ನೆ ಮಾಡಿ ಸೂರ್ಯನಕಡೆ ತೋರಿಸಿ ಕೇಳಿದೆ. ಅವರು ಆರು ಬೆರಳುಗಳನ್ನು ಎತ್ತಿ ಹಿಡಿದರು. "ಅಂದರೆ, ನಾನು ಮುಳುಗಿದ್ದು ಬುಧವಾರದಂದು - ಹಾಗಾದರೆ ಇವತ್ತು...ಛೆ-ಛೇ....ಇದೇನು ಸಮಯ ಪ್ರಯಾಣ ಮಾಡಿ ಹಿಂದೆ ಬಂದ ಮೇಲೆ ನನ್ನ ಕಾಲದಲ್ಲಿ ಸಮಯ ಗತಿಸುವುದೇ?" ಎಂದೆಲ್ಲ ಆಲೋಚನೆಯುಂಟಾಗಿ ಅದರ ಬಗ್ಗೆ ಯೋಚಿಸಲೇಬಾರದೆಂದು ನಿರ್ಧರಿಸಿದೆ.

ಸುಮಾರು ಒಂದು ವಾರದ ಕಾಲ ನನ್ನನ್ನು ಆಚೆ ಹೋಗಲು ಬಿಡಲಿಲ್ಲ. ದಿನ ನಿತ್ಯ ಎರಡು ಬಾರಿ ಊಟ ತಿಂದು ಮಲಗಿರುತ್ತಿದ್ದೆ. ಋತ್ವಿಕರು ಆಗಾಗ ಔಷಧದೊಡನೆ ಬಂದು ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ಇವರ ಭಾಷೆಯ ಇನ್ನೂ ಹಲವಾರು ಪದಗಳು ಗೊತ್ತಾಗಿ ಈಗ ಇವರೊಂದಿಗೆ ಸಂಭಾಷಣೆ ನಡೆಸಲಾಗುತ್ತಿತ್ತು. ಏಳನೆಯ ದಿನದಂದು ಋತ್ವಿಕರೇ ಬಂದು ನನ್ನನ್ನು ಬಾಗಿಲಿಂದ ಹೊರಗೆ ಕರೆದೊಯ್ದರು. ಅವರೊಂದಿಗೆ ಮಾತನಾಡುತ್ತ ನನಗೆ ಅವರು ತೋರಿಸಿದ ಆರು ಬೆರಳುಗಳು ನಾನು ಮೂರ್ಛೆ ಬಿದ್ದಿದ್ದ ಸಮಯವಲ್ಲ, ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದ್ದ ಸಮಯವೆಂದು ಅರ್ಥವಾಯಿತು.

ಮುಂದೇನು ಮಾಡುವುದು ತಿಳಿಯಲಿಲ್ಲ. ಹಿಂತಿರುಗುವುದು ನನ್ನ ಕೈಯಲ್ಲಿರಲಿಲ್ಲ. ನನ್ನೊಳಗಿನ ಆರ್ಕಿಯಾಲಜಿಸ್ಟ್ ಎಚ್ಚೆತ್ತುಕೊಂಡಿದ್ದ. ನನ್ನ ಊಹೆ ಸರಿಯಾಗಿದ್ದರೆ ಈ ಜನಾಂಗದ ಬಗ್ಗೆ ಇವರ ಅವಶೇಶಗಳನ್ನು ನೋಡಿ ಕೇವಲ ಊಹಿಸಿದ್ದೆವು. ಈಗ ನನಗೆ ಇವರುಗಳ ಮಧ್ಯೆ ಜೀವನ ಮಾಡಿ ಇವರ ರೀತಿ-ರಿವಾಜುಗಳನ್ನು ತಿಳಿಯುವ ಅವಕಾಶ ದೊರಕಿತ್ತು. ಆದಷ್ಟು ಇವರುಗಳ ಬಗ್ಗೆ ತಿಳಿಯಬೇಕೆಂದು ತೀರ್ಮಾನಿಸಿದೆ. ಜೊತೆಗೆ ನಾನು ಬಹು ಎಚ್ಚರದಿಂದಿರಬೇಕೆಂದೂ ಅರ್ಥಮಾಡಿಕೊಂಡೆ. ಇವರು ಪ್ರಾಚೀನ ಕಾಲದವರಾಗಿ ನನ್ನ ಈ ಕಾಲದ ತಂತ್ರಜ್ಞಾನದಿಂದ ಇವರ ತಾಂತ್ರಿಕ ಅಭಿವೃದ್ಧಿ ಬದಲಾಯಿಸಬಾರದು. ಹಾಗೇನಾದರೂ ಆದಲ್ಲಿ, ಹಾಗೂ ನಾನು ನೋಡಿರುವ 'ಸಯನ್ಸ್ ಫಿಕ್ಶನ್' ನಿಜವಾಗಿದ್ದಲ್ಲಿ, ಇವರ ತಂತ್ರಜ್ಞಾನವೇನಾದರೂ ಬದಲಾದರೆ ನಮ್ಮ-ನಿಮ್ಮ ಭವಿಷ್ಯವಷ್ಟೇ ಅಲ್ಲ ನಮ್ಮ ಕಾಲವೇ ಬದಲಾಗಿ, ನಾವೆಲ್ಲರು ಹುಟದೆಯೇ ಇರಬಹುದು. ಆದರೆ ನಾನು ಹುಟ್ಟದಿದ್ದರೆ, ಇಲ್ಲಿಗೆ ಬರಲು ಹೇಗೆ ಸಾಧ್ಯ? ಇದು ಕಾಲ ಪ್ರಯಾಣದ ದೊಡ್ಡ ವಿರೋಧಾಭಾಸ!

ಸರಸ್ವತೀ-ಸಿಂಧು ಜನಾಂಗದ ನಡುವ ಜೀವನ ಮಾಡಲು ನಿರ್ಧಾರ ಮಾಡಿ, ಅದಕ್ಕೆ ಮಾನಸಿಕವಾಗಿ ಸಿದ್ಧನಾದೆ. ನಾನು ಬಿಟ್ಟು ಬಂದ ಕಾಲದ ಬಗ್ಗೆ ಹೆಚ್ಚು ಯೋಚಿಸಿ ಗೊಂದಲಕ್ಕೊಳಗಾಗಬಾರದೆಂದೂ ತೀರ್ಮಾನಿಸಿದೆ.

*****

ನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ ಶರ್ಟ್ ಕೈಗೆತ್ತಿಕೊಂಡೆ. ಅದರೊಳಗಿನ ನನ್ನ ಚೆಕ್ ಸಹಿ ಮಾಡುವ ಪೆನ್ ಸ್ವಲ್ಪ ಒದ್ದೆಯಾಗಿದ್ದರೂ ನನ್ನ ಕೈ ಮೇಲೆ ಗೀಚಿ ನೋಡಿದಾಗ ಬರೆಯುತ್ತಿತ್ತು. ಬರೆಯಲು ಹಾಳೆಗಳೆಲ್ಲಿ? ಈ ಕಾಲದಲ್ಲಂತೂ ಹಾಳೆಗಳು ಸಿಗುವ ಹಾಗಿಲ್ಲ - ಇನ್ನೂ ನಾವು ಕಾಣುವಂತಹ ಹಾಳೆಗಳ ಅವಿಶ್ಕಾರವೇ ಆಗಿರಲಿಲ್ಲ! ಇವರು ಬರೆಯುತ್ತಿದ್ದದ್ದು ಕಲ್ಲು ಶಾಸನಗಳೆಂದು ನಮ್ಮ ಕಾಲದಲ್ಲಿಯೇ ನನ್ನ ಶೋಧನೆಯಿಂದ ಅರಿತಿದ್ದೆ. ಆ ಕಲ್ಲುಗಳ ಮೇಲೆ ಬರೆಯುವುದು ಕಷ್ಟವಷ್ಟೇ ಅಲ್ಲ, ಅಕಸ್ಮಾತ್ ನನ್ನ ಕಾಲಕ್ಕೆ ಹಿಂತಿರುಗುವ ಸಂದರ್ಭ ಬಂದರೆ ಹೇಗೆ ಕೊಂಡೊಯ್ಯುವುದು? ಕಡೆಗೆ ನನ್ನ ಬಿಳಿಯ ಪಂಚೆಯ ಮೇಲೆ ಬರೆಯುವ ನಿರ್ಧಾರ ಮಾಡಿದೆ. ಹಾಗೆ ಬರೆದರೆ ಅದನ್ನು ಉಡುವಹಾಗಿಲ್ಲ. ಮೇಲಾಗಿ ಆ ಪಂಚೆಯುಟ್ಟು ಹೊರಗೆ ಹೋಗಲಾಗದು. ಹಾಗಾಗಿ ಮೊದಲಿಗೆ ಈ ಕಾಲದ ವಸ್ತ್ರಗಳ ಏರ್ಪಾಡು ಮಾಡುವುದು ಸೂತ್ಕವೆನಿಸಿತು.

ಆ ಯೋಚನೆ ಬಂದಾಗ ಋತ್ವಿಕರ ಬಳಿ ಹೋಗಿ ಆದಷ್ಟು ನಿಖರವಾದ ಭಾಷೆಯಲ್ಲಿ ಕೇಳಿಕೊಂಡೆ:

"ನನ್ನ ವಸ್ತ್ರಗಳನ್ನು ಧರಿಸಿ ಹೊರ ಹೋಗುವಂತಿಲ್ಲ. ನಿಮ್ಮ ರೀತಿಯ ವಸ್ತ್ರಗಳನ್ನು ನನಗೆ ಕೊಡಲಾಗುತ್ತದೆಯೇ?"

ಅವರ ಮುಖದ ಮೇಲೆ ಕಂಡ ಅಚ್ಚರಿ ನನಗರ್ಥವಾಗಲಿಲ್ಲ. ನಂತರ ಇದಕ್ಕೆ ಕಾರಣ ತಿಳಿದಿದ್ದು. ಅವರು ಧರಿಸಿದ್ದ ವಸ್ತ್ರಗಳು ಅವರ ಪದವಿ ಹಾಗು ಸ್ಥಾನ-ಮಾನಗಳ ಸಂಕೇತ. ಅವರು ಕಂದು ಬಣ್ಣದ ದಪ್ಪನೆಯ ಕಾರ್ಪಸ (ಕಾಟನ್) ಬಟ್ಟೆಯನ್ನು ಎಡ ಹೆಗಲಿನ ಮೇಲಿನಿಂದ ಬಲ ಹೆಗಲಿನ ಕೆಳಕ್ಕೆ ಮಂಡಿಯಿಂದ ಸ್ವಲ್ಪ ಕೇಳಗಿನ ವರೆಗು ಧರಿಸಿದ್ದರು. ಅವರ ಈ ವಸ್ತ್ರಕ್ಕೆ ವಿಶೇಷವಾದ ಕೆಂಪು ಬಣ್ಣದ ಅಂಚಿತ್ತು. ಅಂಚಿನ ಮೇಲೆ ಹಳದಿ ಬಣ್ಣದ ಹೂ-ಬಳ್ಳಿಗಳ ವಿನ್ಯಾಸ. ಈ ವಸ್ತ್ರಕ್ಕೆ ಎಲ್ಲಿಯೂ ಹೊಲಿಗೆಗಳಿರಲಿಲ್ಲ. ಹಣೆ ಹಾಗು ತೋಳಿನ ಮೇಲೆ ಬಂಗಾರದ ಪದಕ ಹಾಗು ಆನೆಯ ದಂತದ ಮಣಿಗಳುಳ್ಳ ಆಭರಣಗಳನ್ನು ಧರಿಸಿದ್ದರು.

ಆ ರೀತಿಯ ವಸ್ತ್ರಗಳನ್ನು ಇತರರು ಧರಿಸುವಂತಿರಲಿಲ್ಲ. ನನಗಾಗಿ ಸಾಮಾನ್ಯ ಜನರು ಧರಿಸುವಂತಹ ವಸ್ತ್ರಗಳನ್ನು ತರಿಸಿ ಕೊಟ್ಟರು. ಇವೂ ಸಹ ಅದೇ ರೀತಿ ಎಡ ಹೆಗಲಿನ ಮೇಲಿನಿಂದ ಬಲ ಹೆಗಲಿನ ಕೆಳಕ್ಕೆ ಧರಿಸುವಂಥದ್ದಾದರೂ ಇದು ಅಷ್ಟು ಒಳ್ಳೆಯ ಗುಣಮಟ್ಟದ ಬಟ್ಟೆಯಾಗಿರಲಿಲ್ಲ. ಮೇಲಾಗಿ ಇದು ಋತ್ವಿಕರು ಉಟ್ಟಂತಹ ಹೊಲಿಗೆಯಿಲ್ಲದ ವಸ್ತ್ರವಾಗಿರಲಿಲ್ಲ. ಇದನ್ನು ಆ ಆಕಾರದಲ್ಲಿ ಹೊಲಿಯಲಾಗಿತ್ತು. ತಲೆಯ ಮೇಲೆ ಕಟ್ಟಿಕೊಳ್ಳಲು ಮತ್ತೊಂದು ತುಣುಕು ವಸ್ತ್ರವೂ ಇತ್ತು. ತೋಳಿನ ಮೇಲೆ ಮಣಿಗಳ ಒಂದು ಕಟ್ಟು ಆಭರಣ.

ನನ್ನ ಪಂಚೆ ಈಗ ನನ್ನ ದಾಖಲೆ ಪುಸ್ತಕವಾಗಲು ಯಾವ ಅಡ್ಡಿಯೂ ಇರಲಿಲ್ಲ. 'ಹೊಸ' ವಸ್ತ್ರಗಳನ್ನು ತೊಟ್ಟು ಬೀದಿಗೆ ಹೋದೆ. ದಾಖಲೆ ಮಾಡಲು ಎಷ್ಟೊಂದು ವಿಚಾರಗಳು. ಎಲ್ಲಿ ಆರಂಭಿಸಲಿ? ಇಲ್ಲಿ ಮೊದಲಿಗೆ ಕಾಣಿಸುವಂತಹ ವಸ್ತ್ರ ವಿನ್ಯಾಸದ ವಿಚಾರ ಹೇಳುವುದೇ ಸೂಕ್ತವೆನಿಸಿತು. ಪುರುಷರ ವಸ್ತ್ರಗಳನ್ನು ಮೇಲಾಗಲೇ ಹೇಳಿರುವೆ - ಅಂದರೆ ನನ್ನ ವಸ್ತ್ರಗಳಂತೆ ಪುರುಷರ ವಸ್ತ್ರಗಳು. ಜೊತೆಗೆ ಗಡ್ಡ ಮೀಸೆಗಳನ್ನು ಆಗಾಗ ಕತ್ತರಿಸಿಕೊಂಡು ಹದದಲ್ಲಿಟ್ಟುಕೊಳ್ಳುತ್ತಿದ್ದದ್ದೂ ತೋರುತ್ತಿತ್ತು. ತಲೆಗೂದಲನ್ನೂ ಆಗಾಗ ಕತ್ತರಿಸಿಕೊಂಡಿರುವುದು ಕಂಡು ಬರುತ್ತಿತ್ತು. ಉದ್ದವಾದ ಜಟೆಗಳನ್ನು ತಲೆಯ ಹಿಂದೆ ಗಂಟಿನಾಕಾರದಲ್ಲಿ ಕಟ್ಟಿಕೊಳ್ಳುತ್ತಿದ್ದರು. ಮೇಲಾಗಿ ವಸ್ತ್ರಗಳು ಕೇವಲ ಕಂದು ಬಣ್ಣಕ್ಕೆ ಸೀಮಿತವಾಗಿರಲಿಲ್ಲ. ಕಂದು, ಬಿಳಿ, ಹಳದಿ, ಕೆಂಪು, ಹಸಿರು ಹಾಗು ನೀಲಿ ಬಣ್ಣಗಳ ಬಟ್ಟೆಗಳು ಎಲ್ಲೆಲ್ಲೂ ಕಾಣಿಸುತ್ತಿದ್ದವು.

ಮಹಿಳೆಯರ ವಸ್ತ್ರ ವಿನ್ಯಾಸ ಸ್ವಲ್ಪ ವಿಭಿನ್ನವಾಗಿತ್ತು. ಕೆಳಗೆ ಲಂಗದಂತಹ ಒಂದು ವಸ್ತ್ರ. ಬರಿದಾದ ಸೊಂಟ, ಮೇಲೆ ಎರಡೂ ಹೆಗಲು ಮುಚ್ಚುವಂತಹ ಕುಪ್ಪಸ. ಮಹಿಳೆಯರಲ್ಲಿ ಈಗಿನಂತೆ ಆಗಲೂ ಆಭರಣಗಳು ಬಹು ಪ್ರಚಲಿತ. ಕೆಂಪು ಹಾಗು ಕಪ್ಪು ಚಿತ್ರಾಕಾರಗಳ ವಿನ್ಯಾಸ ಮಣ್ಣಿನ ಬಳೆಗಳು, ಉದ್ದನೆಯ ಕಂಬಿಯನ್ನು ಚಕ್ರಾಕಾರದಲ್ಲಿ ಬಗ್ಗಿಸಿ ಮಾಡಿದ ತಾಮ್ರದ ಬಳೆಗಳು, ಚಿನ್ನ, ಬೆಳ್ಳಿ, ಹಾಗು ಹರಳು-ಮಣಿಗಳುಳ್ಳ ಹಣೆಪಟ್ಟಿಗಳು, ಬಳೆಗಳು, ಓಲೆಗಳು, ಕುತ್ತಿಗೆ-ಹಾರಗಳು, ಕಾಲ್ಬಳೆಗಳು, ಚೂಡಾಮಣಿಗಳು, ಸೊಂಟದ ಪಟ್ಟಿಗಳು ಹೀಗೆ. ಇಲ್ಲಿಯ ಮತ್ತೊಂದು ವಿಶಿಷ್ಟತೆ ಶಂಕದ ಬಳೆಗಳು.

ಮಣ್ಣಿನ ಬಳೆಗಳನ್ನು ನಮ್ಮ ಕಾಲದಲ್ಲಿ ಗಾಜಿನ ಬಳೆಗಳನ್ನು ಬಳಸುವ ರೀತಿಯಲ್ಲಿ ಬಳಸುತ್ತಿದ್ದರು. ಉಪಯೋಗಿಸುವುದು, ಒಡೆದರೆ ಅಲ್ಲೇ ಬಿಸಾಡುವುದು! ಈ ತುಣುಕುಗಳೇ ನಮಗೆ ಶೋಧನೆ ಮಾಡುವ ಸಮಯದಲ್ಲಿ ಸಿಗುತ್ತಿದ್ದವೆಂದು ಅರ್ಥವಾಯಿತು. ಇವರುಗಳು ಆಭರಣಗಳನ್ನು ಮಾಡುವುದರಲ್ಲಿ ಬಹು ತೀಕ್ಷ್ಣ ಕುಶಲಕರ್ಮಿಗಳು. ಚಿನ್ನದ ತಗಡನ್ನು ತಟ್ಟಿ ಆಭರಣಗಳನ್ನು ಮಾಡುತ್ತಿದ್ದರು. ಚಿನ್ನದ ಕಟ್ಟಿನಲ್ಲಿ ನಾನಾರೀತಿಯ ಅಮೂಲ್ಯವಾದ ಕಲ್ಲುಗಳನ್ನು ಕೂರಿಸಿ ಹಲವಾರು ಆಭರಣಗಳನ್ನು ತಯಾರಿಸುತ್ತಿದ್ದರು.

ಋತ್ವಿಕರ ಮನೆಯಲ್ಲಿದ್ದ ಒಂದು ಆಭರಣ ಹತ್ತಿರದಿಂದ ನೋಡಿ ಪರಿಶೀಲಿಸುವ ಅವಕಾಶ ಒಮ್ಮೆ ದೊರಕಿತು: ಬಹು ಸುಂದರವಾದ ಹಾರ ಅದು. ಚಿನ್ನ ಹಾಗು ನೀಲ ಮಣಿಗಳನ್ನು ದಾರದಲ್ಲಿ ಪೋಣಿಸಲಾಗಿತ್ತು. ಪದಕವಾಗಿ ಮೂರು ಮಣಿಗಳು - ಮಧ್ಯೆ ದೊಡ್ಡ ನೀಲ ಮಣಿ, ಎರಡೂ ಬದಿಯಲ್ಲಿ ಆನೆಯ ದಂತದ ಮಣಿಗಳು. ನಮ್ಮ ಕಾಲದಲ್ಲೂ ಇದು ಫ್ಯಾಶನ್ ಸ್ಟೇಟ್ಮೆಂಟ್ ಆಗಬಹುದೆಂದುಕೊಂಡೆ. ಕಳ್ಳತನ ಜಗದ ಅತ್ಯಂತ ಹಳೆಯ ವೃತ್ತಿಗಳಲ್ಲೊಂದು ಎನ್ನುವುದು ಸತ್ಯ. ಈ ಕಾಲದಲ್ಲೂ ಕಳ್ಳ ಕಾಕರ ಭಯವಿರುತ್ತಿತ್ತು. ಹಾಗಾಗಿ ಇಂತಹ ಬೆಲೆ ಬಾಳುವ ಒಡವೆಗಳನ್ನು ಮಾಲಿಕರು ನೆಲದಲ್ಲು ಹುಗಿದಿಟ್ಟಿರುತ್ತಿದ್ದರು!

ಕಾರ್ಪಸ! ಇಷ್ಟು ಹಿಂದಿನ ಜನಾಂಗಗಳಲ್ಲಿ ನೇಯ್ದ ಬಟ್ಟೆ ಕಾಣುವುದೇ ವಿರಳ - ಪ್ರಾಣಿ ಚರ್ಮಗಳನ್ನು ತೊಡುತ್ತಿದ್ದವರೇ ಹೆಚ್ಚು. ಆದರೆ ಈ ಜನಾಂಗ ತೆಳ್ಳನೆಯ ಕಾರ್ಪಸ ಬಟ್ಟೆಯನ್ನು ನೇಯುತ್ತಿದ್ದರು. ಅನೇಕ ಬೆಳೆಗಳೊಂದಿಗೆ ಹತ್ತಿಯನ್ನೂ ಬೆಳೆಯುತ್ತಿದ್ದರು. ಈ ಹತ್ತಿಯಿಂದ ನೂಲು ತೆಗೆದು, ಆ ನೂಲಿನಿಂದ ಬಟ್ಟೆ ನೇಯ್ಯುವ ವಿಧಾನವನ್ನೂ ಅರಿತಿದ್ದರು. ಅರೆಯುಳ್ಳ ಗಾಲಿಯನ್ನರಿತಿದ್ದ ಇವರು, ಪ್ರಾಚೀನ ಚರಕಗಳ ಸಹಾಯದಿಂದ ನೂಲು ತೆಗೆಯುತ್ತಿದ್ದರು. ಈ ನೂಲನ್ನು ಮಣ್ಣಿನ ಲಾಳಿಯಲ್ಲಿ ಸುತ್ತಿ ನಂತರ ನೆಯ್ಗೆ ಯಂತ್ರದಲ್ಲಿ ಬಟ್ಟೆಯಾಗಿ ನೇಯ್ಯುತ್ತಿದ್ದರು. ಎಲುಬು, ಅಥವ ತಾಮ್ರದ ಸೂಜಿಯಿಂದ ಹೊಲಿಯುವುದನ್ನೂ ಅರಿತಿದ್ದರು.

ಜೊತೆಗೆ ಬಣ್ಣಗಳು. ಬಟ್ಟೆಗಳಿಗೆ ಬಣ್ಣ ಹಚ್ಚುವುದನ್ನು ಹೇಗೆ ಕಲಿತಿದ್ದರೆಂದು ಯಾರಿಗೂ ತಿಳಿಯದು. ಬಹುಶಃ ಅದು ಕಾಕತಾಳೀಯವಾಗಾದದ್ದು. ಆದರೆ ಇವರು ಬಟ್ಟೆಗಳಿಗೆ ಅನೇಕ ಬಣ್ಣಗಳನ್ನು ಹಾಕುತ್ತಿದ್ದರು. ಭಾರತದ ಪ್ರಸಿದ್ಧ ವಜ್ರನೀಲಿ, ಅರಗಿನಿಂದ ಕೆಂಪು, ಅರಿಶಿನದಿಂದ ಹಳದಿ, ಹಾಗು ಮಸಿಯಿಂದ ಕಪ್ಪು ಹೀಗೆ ಪ್ರಥಮ ಬಣ್ಣಗಳು. ಇವುಗಳನ್ನು ಬೆರೆಸಿ ಯಾವ ಬಣ್ಣ ಬೇಕಾದರೂ ಮಾಡುವ ಸಾಧ್ಯತೆ ಇತ್ತು.

ಕಾಲ ಕ್ರಮೇಣ ನನ್ನ ಎರಡು ಮಡಿಕೆಯ ಪಂಚೆಯಮೇಲೆ ರೇಖೆಗಳೆಳೆದು ಅದನ್ನು ವಿಭಾಗಿಸಿಕೊಂಡೆ. ಒಂದೊಂದು ವಿಭಾಗಕ್ಕೂ ಓಡು-ಸಂಖ್ಯೆಗಳನ್ನು ಕೊಟ್ಟು ಕಾಗದ ಹಾಳೆಗಳಂತೆ ಬಳಸುತ್ತಿದ್ದೆ. ಪೆನ್ನು ಹೊಸದಾಗಿತ್ತು, ಸಾಕಷ್ಟು ಬರೆಯುವ ಸಾಧ್ಯತೆ ಇತ್ತು, ಆದರೆ ಅದು ಮುಗಿದರೆ ಬೇರೆಯಿರಲಿಲ್ಲ, ಸಿಗುವಹಾಗಿರಲಿಲ್ಲ. ಹಾಗಾಗಿ ನನ್ನದೇ ಆದ ಒಂದು ತುಣುಕು ಭಾಷೆ ಮಾಡಿಕೊಂಡು ಅದರಲ್ಲಿ ನನಗರ್ಥವಾಗುವ ಹಾಗೆ ಚಿಕ್ಕ ಅಕ್ಷರಗಳಲ್ಲಿ ನನ್ನ ಅನುಭವ ಹಾಗು ಅವಲೋಕನಗಳನ್ನು ಬರೆಯಲಾರಂಭಿಸಿದೆ.

*****

ನಾನು ಹಿಂದೆ ಹೇಳಿರುವ ವಸ್ತ್ರಾಭರಣಗಳ ವಿಚಾರಗಳನ್ನು ದಾಖಲೆ ಮಾಡಿದ್ದು ಬಹು ದಿನಗಳ ನಂತರ - ನಾನು ವಸ್ತ್ರ ತಯಾರಿಕೆ ಕೆಲಸದಲ್ಲಿ ವ್ಯಸ್ಥನಾದಮೇಲೆ. ಅದು ಅಲ್ಲಿ ಹೇಳಲು ಸೂಕ್ತವಾಗಿದ್ದರೂ ನನ್ನ ಕತೆಯಲ್ಲಿ ಕಾಲ ಕ್ರಮ ತಪ್ಪಿ ಹೋಗಿದೆ. ನಾನು ಗುಣವಾದ ದಿನಗಳಿಗೆ 'ರಿವೈಂಡ್' ಮಾಡಿಕೊಳ್ಳೋಣ.

ಹೊರಗೆ ಕಾಲಿಟ್ಟಿದ್ದಾಯಿತು. ಮುಂದೇನು ಮಾಡುವುದು? ನನ್ನ ಕಾಲದಲ್ಲಿ ಭೂಶೋಧನೆ ನಡೆಸುತ್ತಿದ್ದದ್ದು ಇದೇ ಊರಿನಲ್ಲಿ ಎಂಬುದು ನನಗೀಗ ಖಚಿತವಾಗಿತ್ತು, ಹಾಗಾಗಿ ಈ ಊರಿನ ರಸ್ತೆ-ಮಾರ್ಗಗಳು ಸುಮಾರಾಗಿ ಗೊತ್ತಿದ್ದವು. ಆದರೆ ಎಲ್ಲಿ ಹೋಗಲಿ? ಯಾರನ್ನು ಮಾತನಾಡಿಸಲಿ? ನೋಡಬೇಕಾದ್ದನ್ನು ತೋರಿಸುವವರಾರು? ಇಲ್ಲಿಯ ವಿಚಾರಗಳನ್ನು ಹೇಳುವರಾರು? ನನ್ನೊಡನೆ ಮಾತನಾಡಿ ಅರ್ಥಮಾಡಿಕೊಳ್ಳುವವರಿದ್ದದ್ದು ಒಬ್ಬರೆ - ಋತ್ವಿಕರು. ಅದಕ್ಕೂ ಮುಂಚೆ ಮತ್ತೊಂದು ವಿಚಾರ ವಿನಿಮಯ ಮಾಡಿಕೊಳ್ಳಬೇಕಾಗಿತ್ತು. ಅವರನ್ನು ಹೋಗಿ ಕೇಳಿದೆ:

"ನನಗೆ ಈ ಊರಿನಲ್ಲಿ ಯಾರೂ ಗೊತ್ತಿಲ್ಲ. ಇಷ್ಟು ದಿನಗಳ ಕಾಲ ನಿಮ್ಮ ಮನೆಯಲ್ಲಿಟ್ಟುಕೊಂಡು ನಾನು ಅಸ್ವಸ್ಥನಾಗಿದ್ದಾಗ ನನ್ನ ಸುಶ್ರೂಷೆ ಮಾಡಿದ್ದೀರಿ. ನಿಮ್ಮ ಆತ್ಮೀಯತೆಗೆ ಬೆಲೆ ಕಟ್ಟಬೇಕೆಂದಲ್ಲ - ಹಾಗೆ ಮಾಡಲಾರೆನು, ಆದರೆ ನಿಮ್ಮ ಆತಿಥ್ಯಕ್ಕೆ ಪ್ರತಿಯಾಗಿ ಕೊಡಲು ನನ್ನ ಬಳಿ ಏನೂ ಇಲ್ಲ. ಮೇಲಾಗಿ ನನ್ನ ಮುಂದಿನ ಜೀವನಕ್ಕೆ ಹೇಗಾದರೂ ಒಂದು ದಾರಿ ಮಾಡಿ ಕೊಡಿ" ಎಂದು ಕೇಳಿದೆ.

ಅವರು ನನ್ನನ್ನು ಮೇಲೆ-ಕೆಳಗೆ ನೋಡಿ "ಯಾವುದಕ್ಕೆ ಬೆಲೆ? ನನಗರ್ಥವಾಗಲಿಲ್ಲ. ನೀನು ನನ್ನ ಮನೆಯಲ್ಲಿದ್ದದ್ದಕ್ಕೆ ಯಾವ ಬೆಲೆಯೂ ಕೊಡುವ ಅಗತ್ಯವಿಲ್ಲ. ಆದರೆ ಹೀಗೆ ಹೆಚ್ಚು ದಿನಗಳ ಕಾಲ ಬದುಕುವ ಹಾಗೂ ಇಲ್ಲ. ಏನಾದರೂ ಕಾರ್ಯ ಮಾಡುವುದು ಅನಿವಾರ್ಯ. ನೀನೇನು ಮಾಡಬಲ್ಲೆ?" ಎಂದರು.

"ನಾನು ಆರ್ಕಿಯಾಲಜಿಸ್ಟ್" ಎಂದು ಹೇಳಲು ಹೊರಟಿದ್ದೆ. ಅಷ್ಟರಲ್ಲಿ ನಾಲಿಗೆ ಹಿಡಿದೆ. ಈ ಕಾಲದಲ್ಲಿ ನನ್ನ ವೃತ್ತಿಬಾಂಧವರಿಗೆ ಏನು ಕಾರ್ಯವಿದ್ದೀತು? "ಏನು ಕಾರ್ಯ ಬೇಕಾದರೂ ಮಾಡಲು ಸಿದ್ಧ."

ಅವರು ಸ್ವಲ್ಪ ಹೊತ್ತು ಯೋಚಿಸಿ "ಸಧ್ಯಕ್ಕೆ ಮನೆಯಲ್ಲಿ ಸಹಾಯ ಮಾಡು - ನಿನ್ನ ವಸ್ತ್ರಾಹಾರಗಳಿಗೆ ಅಡ್ಡಿಯಿಲ್ಲ. ನಿನ್ನ ನಿಷ್ಠೆ, ಯೋಗ್ಯತೆ ನೋಡಿ, ಸಾಧ್ಯವಾದರೆ ಏನಾದರೂ ವ್ಯಾಪಾರ ಒದಗಿಸುತ್ತೇನೆ" ಎಂದರು.

ನಾನು ಕೊನೆಗೆ ಋತ್ವಿಕರ ಮನೆಯಾಳಾದೆ. ಕೆಲಸ ಕಷ್ಟಕರವಾದರೂ ಅಸಾಧ್ಯವಾಗಿರಲಿಲ್ಲ. ಮನೆಯ ಕೆಲಸ, ಜೊತೆಗೆ ನಾನು ಮೊದಲೇ ಹೇಳಿರುವ ವಸ್ತ್ರ ತಯಾರಿಕೆಯ ಕೆಲಸಕ್ಕೂ ಕೈಹಾಕಿದೆ. ಸ್ವಲ್ಪವೇ ದಿನಗಳಲ್ಲಿ ಋತ್ವಿಕರ ಪ್ರೀತಿಯೊಂದಿಗೆ ನಂಬಿಕೆಗೂ ಪಾತ್ರನಾದೆ. ಋತ್ವಿಕರಿಗಂತು ಮಕ್ಕಳಿರಲಿಲ್ಲ - ಇದ್ದರೆ ಇವರೊಂದಿಗೆ ಇರಲಿಲ್ಲ - ಇವರನ್ನು ನೋಡಲು ಬಂದಿರಲಿಲ್ಲ. ನನ್ನನ್ನು ಮಗನಂತೇ ನೋಡ ತೊಡಗಿದರು.

ಕೊಂಚ ದಿನಗಳನಂತರ, "ನಾನು ಮೊದಲೇ ಹೇಳಿದಂತೆ ದಕ್ಷಿಣ ದೇಶದಿಂದ ಬಂದಿರುವವನು. ನಾನು ಬಂದ ಊರು ನಿಮ್ಮ ಊರಿನ ಹಾಗಿಲ್ಲ. ನಿಮ್ಮ ಊರು ಬಹು ಸೊಗಸಾಗಿದೆ. ಒಮ್ಮೆ ನನಗೆ ಈ ಊರಿನ ದರ್ಶನ ಮಾಡಿಸುವಿರಾ?" ಎಂದು ಕೇಳಿಕೊಂಡೆ.

ಋತ್ವೀಕರು "ಆಗಲಿ" ಎಂದು, ಊರು ತೋರಿಸಲು ನನ್ನನ್ನು ಕರೆದೊಯ್ದರು.

ಅದೆಂಥಹ ಯಾತ್ರೆ, ಅದೆಂಥಹ ಊರು! ಅಮೇರಿಕ ಅಥವ ಯೂರೋಪಿನ ಯಾವ ಆಧುನಿಕ ನಗರಕ್ಕೂ ಕಡಿಮೆಯಿಲ್ಲದಂಥಹ ಊರು! ದೂರದಿಂದ ಬಂದರೆ ಮೊದಲಿಗೆ ಕಾಣಿಸುತ್ತಿದ್ದದ್ದು ಊರಿನ ಕೋಟೆಯ ಎತ್ತರವಾದ ಧೃಡ ಗೋಡೆಗಳು. ಈ ಧೃಡಗೋಡೆಗಳ ಮಧ್ಯೆ ಕೂಲಂಕುಶವಾಗಿ ವಿನ್ಯಾಸ ಮಾಡಿದ ಒಂದು ಸುಂದರ ನಗರ. ಈ ಕೋಟೆಯು ಎತ್ತರಿಸಿದ ಅಟ್ಟಣಿಗೆಯ ಮೇಲೆ ನಿಂತಿತ್ತು. ಈ ಕೋಟೆಯೊಳಗೆ ಅಚ್ಚುಕಟ್ಟಾಗಿ ಕಡಿದ ಕಲ್ಲುಗಳಿಂದ ಕಟ್ಟಿದ ಹಲವಾರು ಕಟ್ಟಡಗಳು. ಜೊತೆಗೆ ಜಾಗರೂಕವಾಗಿ ಸಂಯೋಜಿಸಿದ ಚರಂಡಿ ವ್ಯವಸ್ಥೆ ಹಾಗು ಒಂದು ಅಪಾರ ಬಾವಿ. ಈ ಕೋಟೆಯೊಳಗಿನ ಕಟ್ಟಡಗಳಿಂದ ಈ ಊರಿನ ಆಡಳಿತ ನಡೆಯುತ್ತಿತ್ತು. ಆಡಳಿತಕಾರರು, ಹಾಗು ಇತರ ಮಾನ್ಯರು ಈ ಕೋಟೆಯೊಳಗೆ ವಾಸ ಮಾಡುತ್ತಿದ್ದರು. ಜೊತೆಗೆ ಧಾರ್ಮಿಕ ಕಾರ್ಯಗಳೂ ಈ ಕೋಟೆಯಲ್ಲಿನ ಕಟ್ಟಡಗಳಲ್ಲೇ ನಡೆಯುತ್ತಿದ್ದವು. ಈ ಕೋಟೆಯ ಮೂರು ದಿಕ್ಕುಗಳಲ್ಲಿ - ಉತ್ತರ, ಪೂರ್ವ ಹಾಗು ಪಶ್ಚಿಮ - ಹೆಬ್ಬಾಗಿಲುಗಳಿದ್ದವು. ಹೆಬ್ಬಾಗಿಲ ಎರಡೂ ಬದಿಯಲ್ಲಿ ಕಲ್ಲಿನ ಕಂಬಗಳು, ಕಂಬಗಳ ಮೇಲೊ ನಿಂತ ಒಂದು ಕೈಸಾಲೆ. ಬಾಗಿಲಿಗೊಂದು ತೋರಣ, ಬಾಗಿಲ ಮೇಲೊಂದು ಫಲಕ, ಫಲಕದ ಮೇಲೆ ಏನೋ ಬರೆದ ಅಕ್ಷರಗಳು. ಅದೇನೆಂದು ಕೇಳಿದಾಗ ಋತ್ವಿಕರು "ಅದು ಊರಿನ ಹೆಸರು" ಎಂದರು. ಆ ಅಕ್ಷರಗಳನ್ನು ಹೆಚ್ಚಾಗಿ ಗಮನಿಸುವ ಅವಕಾಶ ಸಿಗಲಿಲ್ಲ.

ಕೋಟೆಯ ಉತ್ತರ ಭಾಗದಲ್ಲಿ ಊರಿನ 'ಮಧ್ಯ-ಭಾಗ'ವಿತ್ತು. ಇದರ ಸುತ್ತಲೂ ಕೋಟೆಗಿಂತ ಸ್ವಲ್ಪ ಕಿರಿದಾದ ಕಲ್ಲಿನ ಗೋಡೆಗಳಿದ್ದವು. ಇಲ್ಲಿಯ ರಸ್ತೆಗಳನ್ನು ಆಧುನಿಕ ಪಟ್ಟಣಗಳಂತೆ 'ಗ್ರಿಡ್' ಆಕಾರ ನಿರ್ಮಿಸಲಾಗಿತ್ತು. ಇಲ್ಲಿ ಒಂದು ಹಾಗು ಎರಡು ಅಂತಸ್ತಿನ ಮನೆಗಳನ್ನು ಕಟ್ಟಲಾಗಿತ್ತು. ಊರಿನ ಶ್ರೀಮಂತರು ವಾಸವಾಗಿದ್ದ ಭಾಗ ಇದು. ಋತ್ವಿಕರ ಮನೆಯೂ ಇದೇ ಭಾಗದಲ್ಲಿತ್ತು. 'ಮಧ್ಯ-ಭಾಗ'ದ ನಡುವೆ ನಾಲ್ಕೂ ದಿಕ್ಕಿನಲ್ಲಿ + ಆಕಾರದಲ್ಲಿ ಬಹು ಅಗಲವಾದ 'ಮುಖ್ಯ ರಸ್ತೆ'ಗಳಿದ್ದವು. ರಸ್ತೆಗಳ ಬದಿಗಳಲ್ಲಿ ನೆರಳಿಗಾಗಿ ಮರಗಳನ್ನು ನೆಡಲಾಗಿತ್ತು.

ಮಧ್ಯ ಭಾಗದ ಆಚೆ ಇದ್ದ ಊರಿನ ಮೂರನೆಯ ಬಾಗ 'ತಗ್ಗು' ಅತವ 'ಕೀಳು-ಬಾಗ'. ಇಲ್ಲಿಯೂ 'ಗ್ರಿಡ್' ಆಕಾರದ ರಸ್ತೆಗಳಿದ್ದರೂ, ಈ ಭಾಗಕ್ಕೆ ಸುರಕ್ಷಾ ಗೋಡೆಗಳನ್ನು ಕಟ್ಟಿರಲಿಲ್ಲ. ವ್ಯವಸಾಯ ಮಾಡುವವರು, ಮಣಿ-ಹರಳುಗಳನ್ನು ಮಾಡುವವರು, ಶಿಲ್ಪಿಗಳು, ನೇಯ್ಗೆದಾರರು, ಕಾರ್ಮಿಕರು, ಇತರೆ ಸಾರವಜನಿಕರು ವಾಸವಾಗಿದ್ದ ಭಾಗ ಇದು. ಇದರ ಆಚೆ ವ್ಯವಸಾಯ ನಡೆಸುವ ಹೊಲ-ಗದ್ದೆಗಳಿದ್ದವು. ಹೊಲಗದ್ದೆಗಳಾಚೆಯೂ ಕೆಲವು ಮನೆ-ಶಿಬಿರಗಳಿದ್ದವು. ಹೊರದೇಶಗಳಿಂದ ಬಂದ ವ್ಯಾಪಾರಿಗಳು ಇಲ್ಲಿ ತಳವೂರಿ, ಊರಿನವರ ಜೊತೆ ವ್ಯಾಪಾರ-ವ್ಯವಹಾರಗಳನ್ನು ನಡೆಸುತ್ತಿದ್ದರು.

ಊರಿನ ಮೂರು ಭಾಗಗಳ ಮಧ್ಯೆ ಸಾಕಷ್ಟು ಬಯಲು ಪ್ರದೇಶಗಳನ್ನು ಬಿಡಲಾಗಿತ್ತು - ಬೇಕಿದ್ದರೆ ಆಯಾ ಭಾಗಗಳನ್ನು ವಿಸ್ತರಿಸಲೆಂದು. ಕೋಟೆ ಹಾಗು ಮಧ್ಯ-ಭಾಗಗಳ ನಡುವೆ ಒಂದು ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಇಲ್ಲಿ ಎಲ್ಲಾ ರೀತಿಯ ಸಾರ್ವಜನಿಕ ಸಮಾರಂಭಗಳು ನಡೆಯುತ್ತಿದ್ದವು - ಆಟಗಳು, ಹಬ್ಬ ಹಾಗು ಇತರ ಧಾರ್ಮಿಕ ಸಮಾರಂಭಗಳು, ಜಾತ್ರೆಗಳು, ಇತ್ಯಾದಿ.

ಊರು ಸರಸ್ವತೀ ನದಿಯ ತೀರದಲ್ಲಿತ್ತು. ನಮ್ಮ ಕಾಲದಲ್ಲಿ ಈ ನದಿಗೆ 'ಘಗ್ಗರ್' ಎಂದು ಹೆಸರು. ಊರು ನದಿಯ ದಡದಿಂದ ಸ್ವಲ್ಪ ದೂರದಲ್ಲಿದ್ದ ಕಾರಣ ನದಿಯ ನೀರನ್ನು ಊರಿಗೆ ತರಲು ಜಾಗ್ರತೆ ವಹಿಸಲಾಗಿತ್ತು. ನೀರನ್ನು ಊರಿನ ಬಳಿ ಇರಿಸಲು ಎರಡು ಅಪಾರ ಕೊಂಡಗಳನ್ನು, ಹಾಗು ಸ್ನಾನ ಇತರ ಕಾರ್ಯಗಳಿಗೆಂದು ಒಂದು ಪುಟ್ಟ ಕೊಂಡವನ್ನೂ ಸೂಕ್ಷ್ಮವಾಗಿ ಕಡಿದ ಕಲ್ಲುಗಳನ್ನು ಜೋಡಿಸಿ ಕಟ್ಟಲಾಗಿತ್ತು. ನದಿಯಿಂದ ಊರಿನವರೆಗು ಕೊರೆದಿದ್ದ ದೈತ್ಯ ಕಾಲುವೆಗಳು ಈ ಕೊಂಡಗಳನ್ನು ತುಂಬಿಸುತ್ತಿದ್ದವು. ಕೊಂಡಗಳು ತುಂಬಿದ ನಂತರ ಹೆಚ್ಚಿನ ನೀರು ಹೊರ ಹೋಗಿ ಪುನಃ ನದಿಯನ್ನು ಸೇರಲು ಮತ್ತೊಂದು ಬದಿಯಿಂದ ಕಾಲುವಗಳಿದ್ದವು. ಇದಲ್ಲದೆ ಊರಿನಲ್ಲಿ ಹಲವಾರು ಮನೆಗಳಲ್ಲಿ ಸಣ್ಣ ನೀರಿನ ತೊಟ್ಟಿಗಳು ಅಥವ ಬಾವಿಗಳನ್ನು ತೋಡಲಾಗಿತ್ತು. ಹೀಗಾಗಿ ಯಾವ ಮನೆಯಲ್ಲೂ ನೀರಿನ ತೊಂದರೆಯಿರಲಿಲ್ಲ.

ಊರಿನ ಪಶ್ಚಿಮ ಭಾಗದಲ್ಲಿ ಹತರನ್ನು ಭೂಗತ ಮಾಡಲು ಸ್ಮಶಾನವೊಂದಿತ್ತು. ಈ ಜನಾಂಗವು ನಮ್ಮ ಕಾಲದಂತೆಯೇ ಹತರನ್ನು ಎರಡು ರೀತಿಗಳಲ್ಲಿ ವಿಸರ್ಜಿಸುತ್ತಿದ್ದರು - ಒಂದು ಶವವನ್ನು ಹೂಳುವುದು (ಜೊತೆಗೆ ವಸ್ತ್ರಾಭರಣಗಳನ್ನೂ ಹುಗಿಯುತ್ತಿದ್ದರು), ಮತ್ತೊಂದು ದಹನಕ್ರಿಯೆ. ಕೋಟೆ ಹಾಗು ಮಧ್ಯಭಾಗಗಳಲ್ಲಿ ವಾಸವಾಗಿದ್ದ ಜನರು ಹೆಚ್ಚಾಗಿ ದಹಿಸುವರು, ಕೀಳು-ಭಾಗದಲ್ಲಿದ್ದ ಜನರು ಹೆಚ್ಚಾಗಿ ಹುಗಿಯುವರು ಎಂದು ತಿಳಿದು ಬಂದಿತ್ತು.

ಕೋಟೆ, ರಕ್ಷಾಗೋಡೆಗಳು ಕಲ್ಲಿನವಾದರೆ ಮನೆಗಳನ್ನು ಇಟ್ಟಿಗೆಗಳಿಂದ ಕಟ್ಟಲಾಗಿತ್ತು. ಜೇಡಿ ಮಣ್ಣಿನ ಚೌಕಾಕಾರದ ಅಚ್ಚುಗಳನ್ನು ಮಾಡಿ, ಅವುಗಳನ್ನು ದೈತ್ಯಾಕಾರದ ಒಲೆಗಳಲ್ಲಿ ಸುಟ್ಟು ಇಟ್ಟಿಗೆಗಳನ್ನು ಮಾಡುವುದು ಈ ಜನರು ಅರಿತಿದ್ದರು. ಇಟ್ಟಿಗೆಗಳನ್ನು ೪:೨:೧ ಉದ್ದ:ಅಗಲ:ದಪ್ಪ ಗಾತ್ರದಲ್ಲಿ ಮಾಡುತ್ತಿದ್ದರು. ಇವುಗಳನ್ನು ಒಗ್ಗೂಡಿಸಿ ಮಣ್ಣಿನಿಂದ ಗೂಡನ್ನು ಕಟ್ಟಿ, ಹುಲ್ಲು, ಮರ ಇತ್ಯಾದಿ ಉರಿಯುವ ಸಾಮಗ್ರಿಗಳನ್ನು ಬಳಸಿ ಗೂಡಿನ ತಳಕ್ಕೆ ಬೆಂಕಿ ಹಚ್ಚುತ್ತಿದ್ದರು. ಬೆಂಕಿ ಉರಿದು ಆರಿದ ನಂತರ ಗೂಡನ್ನು ಮುರಿದು ಇಟ್ಟಿಗೆ ಅಚ್ಚುಗಳನ್ನು ಹೊರತೆಗೆಯುತ್ತಿದ್ದರು. ಇವು ನಮ್ಮ ಕಾಲದ ಇಟ್ಟಿಗೆಗಳಿಗಿಂತ ಏನೂ ಕಡಿಮೆಯಿರಲಿಲ್ಲ.

ಮನೆಗಳು ಒಂದು ಅಥವ ಎರಡು ಅಂತಸ್ತಿನವಾಗಿದ್ದವು. ಮನೆಯ ಸುತ್ತ ಅಂಗಳ, ಹಾಗು ರಸ್ತೆಯಿಂದ ದೂರದಲ್ಲಿ ಒಳಗೆ ಬರುವ ಬಾಗಿಲು. ಮುಂಬಾಗಿಲು ಪೂರ್ವ ಅಥವ ಉತ್ತರಕ್ಕೆ ತೆರೆಯುತ್ತಿದ್ದವು. ಮನೆಯಲ್ಲಿ ಹಲವಾರು ಕೋಣೆಗಳು, ಪ್ರತ್ಯೇಕವಾದ ಅಡಿಗೆಮನೆ, ಹಾಗು ಸ್ನಾನ-ಶೌಚಗಳ ಕೋಣೆಗಳು. ಅಡಿಗೆ ಮನೆಯಲ್ಲಿ ಒಲೆಗುಂಡಕ್ಕೊಂದು ಮೂಲೆ, ಹೊಗೆ ಹೋಗಲು ಕಿಂಡಿಗಳು. ಸ್ನಾನಕ್ಕೆ ಬಚ್ಚಲು, ಸ್ನಾನದ ಕೊಳೆ ನೀರು ಹರಿದು ಹೋಗಲು ಮಣ್ಣಿನ ಕೊಳವೆಗಳಿರುತ್ತಿದ್ದವು. ಎಲ್ಲಕ್ಕಿಂತ ಅತೀ ಕುತೂಹಲಕಾರಿಯಾಗಿದ್ದದ್ದು ಶೌಚಾಲಯ. ನಮ್ಮ ಕಾಲದ ಯಾವ ಪಾಶ್ಚಾತ್ಯ ಟಾಯ್ಲೆಟ್ಟಿಗೂ ಕಡಿಮೆಯನಿಸದ ಶೌಚಾಲಯ!

ಶೌಚ ಕೋಣೆಯ ಗೋಡೆಗೆ ಸೇರಿದಂತೆ ನೆಟ್ಟಗೆ ನಿಂತ ಎರಡು ಮೋಟು ಗೋಡೆಗಳು. ಆ ಮೋಟು ಗೋಡೆಗಳ ಮೇಲೆ ಇರಿಸಿದ ಮರದ ಒಂದು ಮಣೆಯ ಮೇಲೆ ಕೂಳಿತುಕೊಳ್ಳತಕ್ಕದ್ದು. ಮಣೆಯಲ್ಲಿ ಒಂದು ದೊಡ್ಡ ಕಿಂಡಿ. ಕೆಳಗೆ ನೀರನ್ನು ಸಾಗಿಸಲು ಮಣ್ಣಿನ ಕೊಳವೆಗಳು. ಕೊಳವೆಗಳು ಸ್ನಾನ ಹಾಗು ಶೌಚಗಳ ನೀರನ್ನು ರಸ್ತೆಯ ಬದಿಯಲ್ಲಿ ಇದ್ದ ಚರಂಡಿಗೆ ಸಾಗಿಸುತ್ತಿದ್ದವು. ಈ ಚರಂಡಿಗಳೋ ನೆಲದ ಕೆಳಗೆ ಸುಮಾರು ೧ ಮೀಟರ್ ಅಗಲ, ೨ ಮೀಟರ್ ಆಳವಾಗಿದ್ದು ಸುಟ್ಟ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು. ಈ ನೀರನ್ನು ನದಿಗೆ ಹರಿಯಲು ಬಿಡುತ್ತಿರಲಿಲ್ಲ. ಅಲ್ಲಲ್ಲೇ ಅಪಾರ 'ಸೆಪ್ಟಿಕ್' ಗುಂಡಿಗಳಿದ್ದು ಈ ಕೊಳಚೆ ನೀರು ಅವುಗಳೊಳಗೆ ಇಂಗಿಕೊಳ್ಳುತ್ತಿದ್ದವು. ಆ 'ಸೆಪ್ಟಿಕ್' ಗುಂಡಿಗಳಿಗೆ ಮರ ಅಥವ ಕಲ್ಲಿನಿಂದ ಮಾಡಿದ ಮುಚ್ಚಳಗಳು.

ಇವುಗಳಲ್ಲದೆ ಮಳೆ ನೀರನ್ನು ಹಿಡಿದು ಹೋಗಲಾಡಿಸಲು ಬೇರೆ ಚರಂಡಿಗಳಿದ್ದವು. ಇವೂ ಕೂಡ ಅಪಾರ ಗಾತ್ರವಿದ್ದು, ಕಲ್ಲಿನ ಅಚ್ಚುಗಳಿಂದ ಕಟ್ಟಲ್ಪಟ್ಟಿದ್ದವು. ಮಳೆಗಾಲದಲ್ಲಿ ಮಳೆಯ ನೀರನ್ನು ಎಲ್ಲೆಡೆಯಿಂದ ಹಿಡಿದು ಈ ಚರಂಡಿಗಳ ಮೂಲಕ ನದಿಗೆ ತಲುಪಿಸಲಾಗುತ್ತಿತ್ತು. ಈ ರೀತಿ ಕೊಳಚೆ ನೀರು ಹಾಗು ಮಳೆ ನೀರುಗಳನ್ನು ಬೇರ್ಪಡಿಸಿ ಶುಚಿ ಹಾಗು ಸ್ವಾಸ್ಥ್ಯ ಪರಿಪಾಲನೆಯ ಉನ್ನತ ಮಟ್ಟವನ್ನು ಕಾಪಾಡಿಕೊಂಡಿದ್ದರು.

ಈ ಊರಿನ ಮತ್ತೊಂದು ವಿಶಿಷ್ಟತೆ ಇಲ್ಲಿಯ ವಿಶಾಲ ಉಗ್ರಾಣ. ಇಟ್ಟಿಗೆಯ ಅಟ್ಟಣಿಗೆಯ ಮೇಲೆ ಕಟ್ಟಲ್ಪಟ್ಟ ಈ ಉಗ್ರಾಣವು ಸುಮಾರು ೫೦ ಮೀಟರ್ ಅಗಲ ೨೫ ಮೀಟರ್ ಉದ್ದವಾಗಿದ್ದು ಇಟ್ಟಿಗೆಗಳ ಅಡಿಪಾಯ ಹೊಂದಿತ್ತು. ಉಗ್ರಾಣದ ಒಳಗೆ ೨೭ ಸಣ್ಣ ಖಾನೆಗಳು ಹಾಗೂ ಈ ಖಾನೆಗಳಿಗೆ ಹೋಗಲು ಸಣ್ಣ ಪಡಸಾಲೆಗಳನು ಮಾಡಲಾಗಿತ್ತು. ಗೋಡೆಗಳಲ್ಲಿ ಕಿಂಡಿಗಳನ್ನು ಮಾಡಿ ಮರದ ತೊಲೆಗಳನ್ನು ಇರಿಸಿ, ಆ ತೊಲೆಗಳ ಮೇಲೆ ಮರದ ಹಲಿಗೆಗಳಿಂದ ಮಾಡಿದ ಛಾವಣಿಯನ್ನು ಇರಿಸಲಾಗಿತ್ತು. ಅಟ್ಟದ ಮೇಲೆ ಹತ್ತಲು ಮೆಟ್ಟಲು, ಒಳಗೇ ಒಂದು ಬಾವಿ, ಹಾಗು ಸ್ನಾನದ ಘಟ್ಟಗಳನ್ನು ಕಟ್ಟಲಾಗಿತ್ತು. ಈ ಉಗ್ರಾಣವು ನೀರಿನ ಕೊಂಡಗಳ ಪಕ್ಕದಲ್ಲಿಯೇ ಇತ್ತು. ಕೊಂಡದ ಪಕ್ಕದಲ್ಲಿ ಸರಕನ್ನು ದೋಣಿಗಳಿಗೆ ಹತ್ತಿಸಲು ಅಥವ ಇಳಿಸಲು ಒಂದು ಕಟ್ಟೆಯನ್ನು ಕಟ್ಟಲಾಗಿತ್ತು. ನದಿಯಿಂದ ಕಾಲುವೆ ಮಾರ್ಗವಾಗಿ ಕೊಂಡದೊಳಕ್ಕೆ ಬಂದ ದೋಣಿಗಳಿಂದ ಸರಕನ್ನು ಹತ್ತಿಸಿದ ಯಾ ಇಳಿಸಿಕೊಂಡ ನಂತರ ದೋಣಿಗಳು ಪುನಃ ಕಾಲುವೆ ಮಾರ್ಗವಾಗಿ ನದಿಗೆ ಹಿಂತಿರುಗುತ್ತಿದ್ದವು. ಈ ಉಗ್ರಾಣದಲ್ಲಿ ವ್ಯವಸಾಯದ ಸರಕಷ್ಟೇ ಅಲ್ಲ, ಬಣ್ಣ ಹಾಕಿದ ಕಾರ್ಪಸ ಬಟ್ಟೆ, ಹಾಗು ವ್ಯಾಪಾರಕ್ಕೆ ಬಳಸುವ ಇತರ ಸರಕನ್ನೂ ಇರಿಸಲಾಗುತ್ತಿತ್ತು.

ಇಷ್ಟೆಲ್ಲ ತಾಂತ್ರಿಕತೆ ಕಂಡು ನನ್ನ ತಲೆ ತಿರುಗುತ್ತಿತ್ತು. ಮರೆಯುವ ಮುನ್ನ ಎಲ್ಲವನ್ನೂ ನನ್ನ 'ಪುಸ್ತಕ'ದಲ್ಲಿ ದಾಖಲೆ ಮಾಡುವ ಹಂಬಲ. ಆದರೆ ಯಾವಾಗ? ಹೇಗೆ? ಎಲ್ಲರೂ ನೋಡುತ್ತಿರುವಂತೆ ದಾಖಲೆ ಮಾಡುವಹಾಗಿಲ್ಲ. ಹುಣ್ಣಿಮೆ ಕಳೆದು ಎರಡು-ಮೂರು ದಿನಗಳಾಗಿದ್ದವು. ಈ ಕಾಲದಲ್ಲೇ ಹೀಗೋ ಅಥವ ನನ್ನ ಕಣ್ಣಿಗೆ ಚಂದ್ರ ಹೆಚ್ಚು ಪ್ರಕಾಶಮಯಿಯಾಗಿ ಕಾಣಿಸುತ್ತಿದ್ದನೋ ಅರಿಯೆ. ಅಂತೂ ಪೆನ್ನು, ಪಂಚೆ ಹಿಡಿದು ಮನೆಯ ಹೊರ ಹೋದೆ. ಒಂದು ಸಣ್ಣ ಬಯಲಿನಲ್ಲಿ ಕುಳಿತು ಎಲ್ಲವನ್ನೂ ಬರೆದುಕೊಂಡೆ. ನಂತರ ಮನೆಗೆ ಹಿಂತಿರುಗಿ ಪಂಚೆಯನ್ನು ಯಾರಿಗೂ ಕಾಣಿಸದ ಹಾಗೆ ಅಟ್ಟಣಿಗೆಯ ಮೇಲಿಟ್ಟು ಮಲಗಿದೆ.

*****

ನನ್ನ ಮುಂದಿನ ದೃಷ್ಟಿ ವ್ಯವಸಾಯ ಹಾಗು ವ್ಯಾಪಾರಗಳತ್ತ ಹರಿಸಿದೆ. ಹಿಮಾಲಯ ಪರ್ವತಗಳಿಂದ ಮಂಜು ಕರಗಿ ಬರುವ ನೀರಿನ ಜೊತೆಗೆ ಮಳೆಗಾಲದ ಮಳೆ ಸೇರಿ ಈ ಸ್ಥಳವನ್ನು ಸಮೃದ್ಧ ನೆಲವಾಗಿಸಿತ್ತು. ಈ ಸಮೃದ್ಧ ನೆಲವು ಈ ಜನಾಂಗದಂತಹ ವಿಶಾಲ ಜನತೆಗೆ ಬೇಕಾಗುವ ಕೃಷಿ-ವ್ಯವಸಾಯ, ತೋಟಗಾರಿಕೆ, ಹುಲ್ಲುಗಾವಲುಗಳು, ಜಲ ಹಾಗು ವನ್ಯ ಪ್ರಾಣಿಗಳಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು ದೊರಕಿಸುತ್ತಿತ್ತು. ಈ ಜನರು ನೀರಾವರಿ ಯೋಜನೆ ಹಾಗು ನೆರೆಯಿಂದ ಬರುವ ಸಮೃದ್ಧ ಕೆಸರುಗಳ ಮೇಲೆ ಆಧಾರಿತ ವ್ಯವಸಾಯದಿಂದ ಅಭ್ಯುದಯ ಹೊಂದಿದ್ದರು. ಅಕ್ಕಿ, ಗೋಧಿ, ಹೆಸರು ಬೇಳೆ ಹಾಗು ಜೋಳ ಇವರ ಮುಖ್ಯ ಬೆಳೆಗಳಾಗಿದ್ದವು. ಜೊತೆಗೆ ಎಣ್ಣೆ ಕಾಳುಗಳಾದ ಸಾಸುವೆ, ಎಳ್ಳು ಹಾಗು ಇತರ ಬೆಳೆಗಳನ್ನೂ, ಬಟಾಣಿ, ಬದನೇಕಾಯಿ ತರಕಾರಿಗಳನ್ನೂ ಬೆಳೆಯುತ್ತಿದ್ದರು. ತಿನಿಸುಗಳನ್ನು ಬಿಟ್ಟರೆ ಮತ್ತೊಂದು ಬಹುಮುಖ್ಯ ಬೆಳೆ ಹತ್ತಿ.

ವ್ಯವಸಾಯ ಕಾಯಕವು ಸಾಕಷ್ಟು ಫಲದಾಯಕವಾಗಿತ್ತು. ಹಾಗಾಗಿ ಕೃಷಿಯಲ್ಲಿ ನಿರತರಾದವರು ವ್ಯಾಪಾರಿಗಳು, ಕುಶಲಕಾರ್ಮಿಕರು, ಮತ್ತಿತರ ಕಾಯಕಗಳಲ್ಲಿ ವ್ಯಸ್ಥರಾದವರಿಗೂ ಸಾಕಾಗುವಷ್ಟು ಧಾನ್ಯಗಳನ್ನು ಬೆಳೆಯುವುದಲ್ಲದೆ ಬರ-ಕ್ಷಾಮ ಕಾಲಗಳಿಗೆ ಧಾನ್ಯಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಇಷ್ಟೆಲ್ಲ ಸಾಧ್ಯವಾದದ್ದು ತಾಂತ್ರಿಕ ಉನ್ನತಿಯಿಂದ. ನೀರಾವರಿ ಯೋಜನೆಯ ಜೊತೆಗೆ ಇವರು ನೇಗಿಲನ್ನೂ ಅರಿತಿದ್ದರು. ಬೆಳೆಗಳನ್ನು ಪ್ರತಿ ವರ್ಷವೂ ಬದಲಾಯಿಸುವುದನ್ನೂ ಅರಿತಿದ್ದರು. ಜೊತೆಗೆ ಎತ್ತಿನ ಗಾಡಿಗಳನ್ನು ಉಪಯೋಗಿಸುತಿದ್ದರು.

ರೈತರು ಬೆಳೆದ ಪ್ರತಿಯೊಂದು ಫಸಲಿನಿಂದಲೂ ಒಂದು ಭಾಗವನ್ನು ಸಾರ್ವಕನಿಕ ಉಗ್ರಾಣಗಳಿಗೆ ಪಾವತಿ ಮಾಡಬೇಕಾಗಿತ್ತು. ಎತ್ತಿನ ಗಾಡಿಗಳಲ್ಲಿ ಪಾವತಿ ಮಾಡಬೇಕಾದ ಧಾನ್ಯಗಳನ್ನು ತುಂಬಿಕೊಂಡು ಬಂದು ಅದನ್ನು ಉಗ್ರಾಣದಲ್ಲಿ ಇಳಿಸಲಾಗುತ್ತಿತ್ತು. ಇದು ನಮ್ಮ ಕಾಲದ ಬ್ಯಾಂಕಿಗೆ ಸಮಾನವಾದ ಒಂದು ಸಂಸ್ಥೆ. ನಾನು ಸೇರಿದ್ದ ಊರು ಒಂದು ಕೇಂದ್ರವಾಗಿತ್ತು. ಸುತ್ತ ಮುತ್ತಲಿನ ಹಳ್ಳಿ, ಸಣ್ಣ ಊರುಗಳಿಂದ ನಾನಿದ್ದ ಊರಿನ ಉಗ್ರಾಣಕ್ಕೆ ದೋಣಿಗಳಲ್ಲಿ ಧಾನ್ಯಗಳ ಠೇವಣಿ ಬರುತ್ತಿತ್ತು. ಅದಕ್ಕೆ ಬದಲಾಗಿ ನಮ್ಮ ಊರಿನಿಂದ ಸುತ್ತ ಮುತ್ತಲಿನ ಹಳ್ಳಿಗಳಿಗೆ ಸೈನಿಕರು, ಇತರ ಆರಕ್ಷಕರನ್ನು, ಲೋಹ ಹಾಗು ಮಣ್ಣಿನ ಪದಾರ್ಥಗಳನ್ನು ಕಳುಹಿಸಲಾಗುತ್ತಿತ್ತು.

'ಪಟ್ಟಣಗಳು ಅಸ್ಥಿತ್ವಕ್ಕೆ ಬರಲು ವ್ಯವಸಾಯವೇ ಕಾರಣ, ವ್ಯವಸಾಯ ಸುಗಮವಾಗಾಗಬೇಕಾದರೆ ದಬ್ಬಾಳಿಕೆಯಿಂದ ಜನರನ್ನು ಆಳುಗಳಾಗಿಸಿ ನೀರಾವರಿ ಯೋಜನೆ ಕಟ್ಟಿದ ನಂತರ ಪಟ್ಟಣಗಳ ಅಸ್ಥಿತ್ವ ಸಾಧ್ಯ' ಎಂದು ಕೆಲವು ಸಿದ್ಧಾಂತಗಳು ಹೇಳುತ್ತವೆ. ಆದರೆ ಇದು ನಿಜವಲ್ಲ ಎಂದು ಈ ಜನಾಂಗ ತೊರ್ಪಡಿಸುತ್ತಿದ್ದರು. ಇಲ್ಲಿ ಯಾವ ದಬ್ಬಾಳಿಕೆಯ ಸುಳಿವೂ ಇರಲಿಲ್ಲ. ದೈತ್ಯ ಅಣೇಕಟ್ಟುಗಳನ್ನೂ ಕಟ್ಟಲಾಗಿರಲಿಲ್ಲ. ನದಿಯಿಂದ ಸಣ್ಣ ಕಾಲುವೆಗಳನ್ನು ಕೊರೆದು ವ್ಯವಸಾಯಕ್ಕೆ ಅನುಕೂಲ ಮಾಡಿಕೊಳ್ಳಲಾಗಿತ್ತು. ಈ ರೀತಿಯಲ್ಲಿ ದಬ್ಬಾಳಿಕೆಯಿಲ್ಲದ ಉತ್ಕರ್ಷ ವ್ಯವಸಾಯ, ಹಾಗೂ ಅದರಿಂದ ಪಟ್ಟಣಗಳ ಅಸ್ಥಿತ್ವ ಸಾಧ್ಯವಾಗಿತ್ತು.

ಈ ಜನರು ಹಲವಾರು ಪ್ರಾಣಿಗಳನ್ನು ಸಾಕುವುದು ಕಲಿತಿದ್ದರು. ಹಸು, ಎಮ್ಮೆ, ಎತ್ತು, ಗೂಳಿ, ನಾಯಿ, ಬೆಕ್ಕು, ಕೆಲವೆಡೆ ಕತ್ತೆ, ಕುದುರೆ, ಹಂದಿ, ಹಾಗು ಒಂಟೆಗಳನ್ನು ಸಾಕುತ್ತಿದ್ದರು. ಇನ್ನು ಕೆಲವು ಊರುಗಳಲ್ಲಿ ಆನೆಗಳನ್ನು ಪದಾರ್ಥ ಸಾಗಾಣಿಕೆಯಲ್ಲಿ ಉಪಯೋಗಿಸುತ್ತಾರೆಂದು ಕೇಳಿದ್ದೆ - ನೋಡಿರಲಿಲ್ಲ. ಆನೆಯ ದಂತವನ್ನಂತು ಕುಶಲಕರ್ಮಗಳಲ್ಲಿ ಉಪಯೋಗಿಸುತ್ತಿದ್ದರು. ಗಾಳ ಅಥವ ಬಲೆ ಬೀಸಿ ಮೀನು ಹಿಡಿಯುವುದು, ಆಹಾರ ಹಾಗು ಕ್ರೀಡೆಗಾಗಿ ವನ್ಯ ಪ್ರಾಣಿಗಳನ್ನು ಬೇಟೆಯಾಡುವುದು ಎಲ್ಲವೂ ಈ ಕಾಲದಲ್ಲಿ ಪ್ರಚಲಿತವಾಗಿತ್ತು.

ಈ ಜನಾಂಗದ ಆರ್ಥಿಕ ವ್ಯವಸ್ಥೆಯು ವ್ಯವಸಾಯದೊಂದಿಗೆ ವ್ಯಾಪಾರ ಹಾಗೂ ವಾಣಿಜ್ಯಗಳಮೇಲೆ ನಿರ್ಭರವಾಗಿತ್ತು. ನಾನೊಮ್ಮೆ ಋತ್ವಿಕರ ಪರವಾಗಿ ವ್ಯಾಪಾರಕ್ಕೆಂದು ಹೋಗಿದ್ದಾಗ ಈ ವ್ಯವಸ್ಥೆಯನ್ನು ಅವಲೋಕಿಸುವ ಅವಕಾಶ ದೊರಕಿತು. ದೂರ-ದೂರದ ಪ್ರದೇಶಗಳು ನೆಲ ಹಾಗು ಜಲ ಮಾರ್ಗಗಳಿಂದ ಸಂಪರ್ಕ ಹೊಂದಿದ್ದವು. ಹಳ್ಳಿ ಹಾಗು ಸಣ್ಣ ಊರಿಗಳಿಂದ ಧಾನ್ಯಗಳು, ಪ್ರಾಣಿಗಳು, ಮರ, ಇತ್ಯಾದಿ ಬಂದರೆ ದೊಡ್ಡ ಊರುಗಳಿಂದ ಲೋಹದ ಆಯುಧಗಳು, ಮಡಿಕೆಗಳು, ಕಾರ್ಪಸ, ಮತ್ತಿತರ ಸಂಪನ್ಮೂಲಗಳು ಹೋಗುತ್ತಿದ್ದವು. ಕತ್ತೆ, ಕುದುರೆ, ಇತರ ಭಾರ ಹೊರುವ ಪ್ರಣಿಗಳು, ಎತ್ತಿನ ಗಾಡಿಗಳು ಭೂಮಾರ್ಗವಾಗಿ ಸಂಚರಿಸಿದರೆ, ನಾನಾರೀತಿ ದೋಣಿಗಳು ಜಲಮಾರ್ಗವಾಗಿ ಸಂಚರಿಸುತ್ತಿದ್ದವು.

ಎತ್ತಿನ ಗಾಡಿಗಳಿಗೆ ಒಂದು ಚತುರಸ್ರ ಮರದ ಕಟ್ಟಡವಿದ್ದು, ಗಾಲಿಗಳಿಗೆ ಬಂಡಿಯ ಕೆಳಗೊಂದು ಅಚ್ಚನ್ನು ಇರಿಸಲಾಗುತ್ತಿತ್ತು. ಅಚ್ಚಿನ ಎರಡೂ ತುದಿಗಳಲ್ಲಿ ಮರದ ಜರೆರಹಿತ ಗಾಲಿಗಳು, ಗಾಲಿಗಳನ್ನು ಹಿಡಿಯಲು ಕಡಾಣಿಗಳು. ಚತ್ರುರಸ್ರ ಕಟ್ಟಡದ ಮಧ್ಯಬಾಗದಿಂದ ಅಚ್ಚಿಗೆ ಊರ್ಧ್ವವಾಗಿ ಮತ್ತೊಂದು ಮರದ ಬಡಿಗೆ. ಈ ಬಡಿಗೆ ತುದಿಗೆ ಎತ್ತುಗಳನ್ನು ಕಟ್ಟಲು ಏರು. ಚತುರಸ್ರ ಕಟ್ಟಡದ ಮೇಲೆ ಕಾರ್ಯಕ್ಕೆ ತಕ್ಕಂತೆ ನಿರ್ಮಾಣ. ಸರಕು ಸಾಗಿಸಲು ಕಟ್ಟಡದ ಸುತ್ತ ನೆಲಕ್ಕೆ ಊರ್ಧ್ವವಾಗಿ ಬಡಿಗೆಗಳು, ಜನರನ್ನು ಸಾಗಿಸಲು ನೆರಳು ನೀಡಲೊಂದು ಛಾವಣಿ. ಇಂತಹ ವಾಹನಗಳು ನೆಲದಮೇಲೆ ಚಲಿಸಿದರೆ, ನೀರಿನಲ್ಲಿ ಚಲಿಸಲು ಪ್ರಸ್ತಾರ ತಳವುಳ್ಳ ದೋಣಿಗಳನ್ನು ಬಳಸಲಾಗುತ್ತಿತ್ತು. ದೋಣಿಯ ಮಧ್ಯದಲ್ಲಿ ಒಂದು ಸಣ್ಣ ಗುಡಿಸಿಲು, ದೋಣಿಯ ನಿಯಂತ್ರಣಕ್ಕೆ ಎರಡು ಚುಕ್ಕಾಣಿಗಳು.

ತೂಕಕ್ಕೆ ಘನಾಕಾರದ ಪ್ರಮಾಣಬದ್ಧ ತೂಕದ ಬಟ್ಟುಗಳನ್ನು ಬಳಸಲಾಗುತ್ತಿತ್ತು. ಅತೀ ಸಣ್ಣ ಬಟ್ಟು ಹೆಚ್ಚು-ಕಡಿಮೆ ನಮ್ಮ ಕಾಲದ ೧ ಗ್ರಾಂ ಇದ್ದರೆ, ಅದರ ಮುಂದಿನ ಬಟ್ಟು ಅದರ ೧೬ ಪಟ್ಟು. ಹೀಗೆ ೧೬ ಪಟ್ಟು ಹೆಚ್ಚುತ್ತ ಅತೀ ತೂಕವಾದ ವಸ್ತುಗಳನ್ನು ತೂಗುವ ಬಟ್ಟುಗಳನ್ನೂ ಕಾಣಬಹುದಾಗಿತ್ತು. ಬಟ್ಟುಗಳನ್ನು ಬಳಸುತ್ತಿದ್ದವರು ತೂಗಲು ತಕ್ಕಡಿಗಳನ್ನು ಬಳಸುತ್ತಿದ್ದರು ಎಂದು ಹೇಳುವ ಅವಶ್ಯಕತೆಯಿಲ್ಲ.

ದೂರ ದೂರ ಪ್ರದೇಶಗಳೊಂದಿಗೂ ವ್ಯಾಪಾರ-ವ್ಯವಹಾರಗಳನ್ನು ಇಲ್ಲಿಯ ಜನ ನಡೆಸುತ್ತಿದ್ದರು. 'ಸಾಗರ ದಾಟಿ ವ್ಯಾಪಾರ' ಎಂದು ಮಾತ್ರ ಕೇಳಿಬರುತ್ತಿತ್ತು. ಆದರೆ ನನ್ನ ಕಾಲದಲ್ಲಿಯೇ ಇವರು ಮಧ್ಯ ಏಶಿಯಾ, ಪರ್ಶಿಯನ್ ಗಲ್ಫ್, ಇರಾಕ್ ದೇಶಗಳೊಂದಿಗೆ ವ್ಯಾಪಾರ-ಸಂಬಂಧಗಳನ್ನಿಟ್ಟುಕೊಂಡಿದ್ದರೆಂಬುದಕ್ಕೆ ಸಿಕ್ಕಿದ್ದ ಪುರಾವೆಗಳನ್ನು ನಾನೇ ಪರಿಶೀಲಿಸಿದ್ದೆ.

ಈ ಜನರ ಧರ್ಮಾಚರಣೆಗಳ ಬಗ್ಗೆ ಆಗಲೇ ಹೇಳಿರುವೆ. ಇವರುಗಳ ಧರ್ಮ ನಮ್ಮ ಹಿಂದೂ ಧರ್ಮಕ್ಕೆ ಬಹು ಸಮೀಪವಾದದ್ದು. ಔಪಚಾರಿಕ ಸಂಸ್ಕೃತವನ್ನರಿತವರು ಇವರು. ಋಗ್ವೇದವನ್ನು 'ಋಗ್ವೇದ' ಎಂದು ಕರೆಯದಿದ್ದರೂ, ಅದನ್ನು ಮಂಡಲಗಳಾಗಿ ವಿಂಗಡಿಸದಿದ್ದರೂ 'ವೇದ'ವನ್ನು ೧೦೨೮ ಸೂಕ್ತಗಳಾಗಿ, ೧೦೧೭೦ ಶ್ಲೋಕಗಳಾಗಿ ವಿಂಗಡಿಸಿದ್ದರು. ಋಗ್ವೇದದ ಜೊತೆಗೆ ಯಜುರ್ವೇದದ ಹಲವು ಶ್ಲೂಕಗಳನ್ನು ಪಠಿಸುವವರಾದರೂ ಇವರು ಅರಿತಿದ್ದು ಒಂದೇ ವೇದವನ್ನು. 'ಪಶುಪತಿ', ಮತ್ತು 'ದೇವಿ' ಸಾಮಾನ್ಯ ಜನರು ಪೂಜಿಸುವ ದೇವತೆಗಳಾದರೆ, ಔಪಚಾರಿಕವಾಗಿ ವೇದಮಂತ್ರಗಳೊಡಗೂಡಿ ಇಂದ್ರ, ಅಗ್ನಿ, ಸೂರ್ಯ, ವಾಯು, ವರುಣ, ಮಾರುತ, ರುದ್ರ, ವಿಶ್ವಕರ್ಮ, ಯಮ, ಪ್ರಜಾಪತಿ ಮತ್ತಿತರ ದೇವತೆಗಳನ್ನು ಪೂಜಿಸುತ್ತಿದ್ದರು.

ಈ ಜನಾಂಗದ ಧರ್ಮದ ಮತ್ತೊಂದು ಮುಖ್ಯ ವೈಶಿಷ್ಟ್ಯ ಅಗ್ನಿ ಕರ್ಮಗಳು ಹಾಗು ಅಗ್ನಿ ಆಹುತಿ. ಹೋಮ ಕುಂಡಗಳನ್ನು ರಚಿಸಲು ಖಗೋಳಶಾಸ್ತ್ರದೊಡನೆ ರೇಖಾಗಣಿತದ ಜ್ಞಾನವನ್ನೂ ಉಪಯೋಗಿಸಿಕೊಳ್ಳುತ್ತಿದ್ದರು. ಈ ಜ್ಞಾನವನ್ನು ಮುಂದಿನ ಪೀಳಿಗೆಗಳಿಗೆ ಉಳಿಸಲು ಯಜ್ಞಕುಂಡಗಳನ್ನು ನಿರ್ಮಿಸುವ ಬಗೆಯನ್ನು ಶ್ಲೋಕಗಳಾಗಿಸಿ ಪಠಿಸುತ್ತಿದ್ದರು. ಇವುಗಳನ್ನು ನೋಡುತ್ತಿದ್ದಂತೆ ನನಗೆ ನಮ್ಮ ಧರ್ಮ ಹುಟ್ಟಿ ಬೆಳೆದದ್ದು ಹೇಗೆಂದು ಅರ್ಥವಾಯಿತು. ಆರ್ಯನ್ ಆಕ್ರಮಣ ಸಿದ್ಧಾಂತ ಕಡಾಖಂಡಿತವಾಗಿ ಸುಳ್ಳೆಂದು ಖಚಿತವಾಯಿತು.

*****

ಕಾಲ ಕಳೆಯುತ್ತಿದ್ದಂತೆ ನನಗೂ ಸ್ವಲ್ಪ ಬೇಸರವಾಗ ತೊಡಗಿತು. ಇಲ್ಲಿ ನೋಡಲು ಕಲಿಯಲು ಬಹಳಷ್ಟಿತ್ತು. ಆದರೆ ಇದನ್ನು ನನ್ನ ಕಾಲದಲ್ಲಿ ಹೇಳಿದರೆ ಅಲ್ಲವೆ ಇದಕ್ಕೆ ಬೆಲೆ? ಜೊತೆಗೆ ನನ್ನ ಮನೆ, ಮಠ, ಬಂಧು, ಬಳಗಗಳ ನೆನಪುಗಳು ನನ್ನನ್ನು ಕಾಡತೊಡಗಿದವು. ಹಿಂತಿರುಗುವುದಾದರೂ ಹೇಗೆ? ಇದರ ಯೋಚನೆಯಲ್ಲೇ ಕಾಲವೆಲ್ಲ ಕಳೆಯುವಂತಾಗಿತ್ತು. ಯೋಚಿಸಿದಷ್ಟೂ ನನಗೆ ನನ್ನ ಕಾಲಕ್ಕೆ ಹಿಂತಿರುಗುವ ಲಕ್ಷಣ, ವಿಧಾನಗಳು ಕಾಣಿಸಲೊಲ್ಲವಾದವು.

ಈಗ ಮಳೆ ಕೂಡಿದ ಛಳಿಗಾಲ ಬಂದಿತ್ತು. ನಾನು ಈ ರೀತಿ ವ್ಯಾಕುಲನಾಗಿ ಒಂದು ದಿನ ಎಲ್ಲಿಂದಲೋ ಹಿಂತಿರುಗುತ್ತಿದ್ದಾಗ ಮಳೆ ಬಂದು ನನ್ನ ಬಟ್ಟೆಗಳು ತೋಯ್ದು ಹೋದವು. ರಾತ್ರಿಯಾಗಿತ್ತು, ಹಾಗಾಗಿ ಸದ್ದಿಲ್ಲದೆ ನಾನು ಋತ್ವಿಕರ ಮನೆಯಲ್ಲಿ ನನಗಾಗಿ ಇರಿಸಿದ್ದ ಮೂಲೆಯನ್ನು ಹೋಗಿ ಸೇರಿದೆ. ತೋಯ್ದ ಬಟ್ಟೆಗಳಲ್ಲಿ ಮಲಗುವುದೇ? ಸಾಧ್ಯವಿರಲಿಲ್ಲ. ಈ ಹೊತ್ತಿನಲ್ಲಿ ಮಲಗಿದ್ದ ಬೇರೆಯವರನ್ನು ಎಬ್ಬಿಸದೇ ಬೇರೆ ಬಟ್ಟೆಗಳು ಸಿಗುವಂತಿರಲಿಲ್ಲ. ಬೇರೆ ದಾರಿಯೇ ಕಾಣದೆ ನನ್ನ ಒದ್ದೆ ಬಟ್ಟೆಗಳನ್ನು ಒಣಗಲು ಹಾಕಿದೆ. ಧರಿಸಲು ಇದ್ದದ್ದು ನಾನು ಈ ಕಾಲಕ್ಕೆ ಬಂದಾಗ ಧರಿಸಿದ್ದ, ನಂತರ ನನ್ನ ದಾಖಲೆ ಪುಸ್ತಕವಾಗಿದ್ದ ಪಂಚೆ, ಅದರ ಜೊತೆಗಿನ ಶರ್ಟು. ವಿಧಿಯೇ ಇಲ್ಲದೆ ಅವುಗಳನ್ನು ಧರಿಸಿ ಮಲಗಿದೆ.

ನಿದ್ದೆ ಬರಲೊಲ್ಲದಾಯಿತು. ನಾನು ಬಂದು ಸುಮಾರು ಆರು ತಿಂಗಳಿಗೂ ಹೆಚ್ಚು ಸಮಯವಾಗಿತ್ತು. ನನ್ನ ಕಾಲದಲ್ಲಿ ಇಷ್ಟು ಹೊತ್ತಿಗೆ ನನ್ನ ಪುಟ್ಟ ಮಗಳ ಎರಡು ವರ್ಷದ ಹುಟ್ಟು ಹಬ್ಬ ಹತ್ತಿರವಾಗಿದೆ ಎಂದುಕೊಂದೆ. ಇದನ್ನು ಯೋಚಿಸಿದೊಡನೆ ವ್ಯಾಕುಲತೆ ಹೆಚ್ಚಾಯಿತು. ನನ್ನ ಕಾಲದಲ್ಲಿ ಸಮಯ ಇಲ್ಲಿಯ ಗತಿಯಲ್ಲೇ ಗತಿಸುವುದೇ? ನಾನೀಗ ಹಿಂತಿರುಗಿದರೆ ಯಾವ ಕಾಲಕ್ಕೆ ಹಿಂತಿರುಗುವೆ? ನಾನು ಬಿಟ್ಟು ಬಂದ ಸಮಯದಿಂದ ಆರು ತಿಂಗಳ ನಂತರವೋ? ಆರು ವರ್ಷದ ನಂತರವೋ? ನನ್ನ ಹೆಂಡತಿ, ಮಗು ಏನಾಗಿರಬಹುದು? ನನ್ನನ್ನು ಇಷ್ಟು ದಿನಗಳ ಕಾಲ ಕಾಣದೆ ಅವರೇನು ಯೋಚಿಸಿರಬಹುದು? ಏನು ಮಾಡಿರಬಹುದು? ಎಂದೆಲ್ಲ ಯೋಚನೆಗಳು ಬರತೊಡಗಿದವು.

ಕಷ್ಟ ಪಟ್ಟು ಆ ವಿಚಾರಗಳಿಂದ ನನ್ನ ಬುದ್ಧಿಯನ್ನು ಹೊರತೆಗೆದು, ಹಿಂತಿರುಗುವ ಬಗ್ಗೆ ಯೋಚಿಸಲಾರಂಭಿಸಿದೆ. ಹಲವಾರು ಕಥೆ-ಕಾದಂಬರಿ-ಸಿನಿಮಾಗಳ ನೆನಪಾಯಿತು. ನಾನೇನಾದರೂ ಪ್ರಯೋಗವನ್ನು ಮಾಡಿ ಈ ಕಾಲಕ್ಕೆ ಬಂದವನಾಗಿದ್ದರೆ, ಹಿಂತಿರುಗಲು ಅದಕ್ಕೆ ವಿರುದ್ಧವಾಗಿ ಏನಾದರೂ ಮಾಡಬಹುದಿತ್ತೇನೋ ಎನ್ನಿಸಿತು. ಪುನಃ ಅಂದಿನ ದಿನದ ಸ್ಮರಣೆ ಮಾಡಿಕೊಂಡೆ. ಯೋಚಿಸಿದಷ್ಟೂ, ನಾನು ಕೈಯಲ್ಲಿ ಹಿಡಿದ್ದ ಆ ಮೂರ್ತಿಯೇ ಇದರ ಪರಿಹಾರವಿರಬಹುದೆನಿಸಿತು. ಅದೆಲ್ಲಿರಬಹುದು ಎಂದು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆ ಕ್ಷಣಗಳು ಅದೇಕೋ ಮಬ್ಬಾಗಿದ್ದವು!

ಕೊನೆಗೆ ಹೊಳೆಯಿತು. ಅದನ್ನು ಹುಡುಕಲು ಸ್ನಾನದಮನೆಯ ತೊಟ್ಟಿಯಲ್ಲಿ ಮುಳುಗಿದವ ಎದ್ದಿದ್ದು ಬೇರೆಲ್ಲೋ ಎಂದು. ಹಾಗಾದರೆ ಆ ಮೂರ್ತಿ ನನ್ನೊಡನೆ ಈ ಕಾಲಕ್ಕೆ ಬಂದಿತ್ತೇ? ಬಂದಿದ್ದರೆ ಎಲ್ಲಿರಬಹುದು? ನಾನು ಎದ್ದ ಆ ಸಾರ್ವಜನಿಕ ಸ್ನಾನದ ಕೊಂಡದಲ್ಲಿಯೇ ಇರಬಹುದೇ? ಎಂದು ಯೋಚಿಸ ತೊಡಗಿದೆ. ಎಲ್ಲ ಮನೆಗಳ ಬಚ್ಚಲು ಮನೆ/ಶೌಚಖಾನೆಗಳಲ್ಲಿ ಕೊಳವೆಗಳ ಮೂಲಕ ಬರುವ ನೀರಿದ್ದ ಕಾರಣ ನಾನೆಂದೂ ಆ ಸಾರ್ವಜನಿಕ ಸ್ನಾನ ಕುಂಡಕ್ಕೆ ಹೋಗಿಯೇ ಇರಲಿಲ್ಲ. ಸರಿ, ಮೆಲ್ಲನೆ ಮೆಟ್ಟಿನಗಾಲುಗಳ ಮೇಲೆ ನಡೆದು ಮನೆಯಾಚೆ ಬಿದ್ದೆ. ಮಳೆ ಸ್ವಲ್ಪ ಕಡಿಮೆಯಾಗಿತ್ತಾದರೂ ಗುಡುಗು ಘರ್ಜಿಸುತ್ತಲೇ ಇತ್ತು. ಹೊಳೆವ ಮಿಂಚೇ ನನಗೆ ದಾರಿ ತೋರಿಸುವ ದೇಪಗಳಾದವು.

ಆ ಮೂರ್ತಿಯನ್ನು ಶಪಿಸುತ್ತ, ಅದು ನನ್ನ ಕೈಗೆ ಸಿಕ್ಕ ದಿನವೂ ಇದೇ ರೀತಿಯ ವಾತಾವರಣವಿತ್ತೆಂದು ಯೋಚಿಸುತ್ತ ಸ್ನಾನದ ಕುಂಡದ ಕಡೆಗೆ ನಡೆದೆ. ಅಲ್ಲಿಗೆ ಹೋಗಿ ನೋಡಿದರೆ ಅದೊಂದು ದೊಡ್ಡ ಕುಂಡ. ಅದರಲ್ಲಿ ನಾನೆದ್ದದ್ದೆಲ್ಲಿ ಎಂದು ಹೇಗೆ ನಿರ್ಧರಿಸುವುದು? ಮೂರ್ತಿಯನ್ನು ಎಲ್ಲಿ ಹುಡುಕಬೇಕೆಂಬುದನ್ನು ಯೋಚಿಸುತ್ತಿದ್ದಂತೆ, ಆ ದೈವ ನಿಯಂತ್ರಿತ ದಿನವನ್ನು ಸ್ಮರಿಸತೊಡಗಿದೆ. ಮಿಂಚೊಂದು ಹೊಳೆದಾಗ ದಂಡೆಯಲ್ಲಿ ಒಂದು ಸಣ್ಣ ಗುಡಿ ಕಾಣಿಸಿತು. ಋತ್ವಿಕರು ಆ ಗುಡಿಯಲ್ಲಿ ಏನೋ ಆಚರಣೆ ನಡೆಸುತ್ತಿದ್ದ ಚಿತ್ರಗಳು ನನ್ನ ತಲೆಯೆಲ್ಲಿ ಮೂಡಿದವು. ನಾನು ನಾಲ್ಕಾರು ಹೆಜ್ಜೆ ನಡೆದು ಅವರ ಬಳಿ ಬಂದು ಕುಸಿದಿದ್ದು ನೆನಪಾಯಿತು. ಆದರೆ "೬ ತಿಂಗಳಿಗೂ ಹೆಚ್ಚಿನ ಕಾಲ ಗತಿಸಿದೆ. ಮೇಲಾಗಿ ಕುಂಡದೊಳಗೆ ಹರಿಯುವ ನೀರು - ಅದರಿಂದ ಆ ಮೂರ್ತಿ ಅಲುಗಾಡಿ ಎಲ್ಲಿಯಾದರೂ ಬೇರೆಡೆಗೆ ಹೋಗಿದ್ದರೆ? ಈ ದೊಡ್ಡ ಕೊಳದಲ್ಲಿ ಅದನ್ನು ಹೇಗೆ ಹುಡುಕುವುದು? ಸಿಗದಿದ್ದರೆ?" ಎಂದೆಲ್ಲ ಯೋಚನೆಗಳು ಬಂದರೂ "ಒಮ್ಮೆ ಪ್ರಯತ್ನ ಮಾಡಿ ನೋಡಲೇಬೇಕು." ಎಂದು ನಿರ್ಧರಿಸಿದೆ.

ಸರಿ, ಗುಡಿಯ ಬಳಿ ಕೊಳಕ್ಕೆ ಇಳಿದು ಕೊಳದ ಮಧ್ಯಭಾಗಕ್ಕೆ ನಡೆಯ ತೊಡಗಿದೆ. ಕೊಳದ ನೆಲಕ್ಕೆ ಚಪ್ಪಟ್ಟೆ ಕಲ್ಲುಗಳನ್ನು ಕೂರಿಸಲಾಗಿತ್ತು. "ಓಹೋ, ಹೀಗಿದ್ದರೆ ಮೂರ್ತಿ ಇಲ್ಲೆಲ್ಲಾದರೂ ಇದ್ದರೆ ಸುಲಭವಾಗಿ ಸಿಕ್ಕೀತು" ಎಂದು ಯೋಚಿಸುತ್ತ ನಡೆದೆ. ಸೊಂಟದ ಮಟ್ಟಕ್ಕೆ ನೀರು, ಕತ್ತಲು ಬೇರೆ ಏನೂ ಕಾಣಿಸುವ ಹಾಗಿಲ್ಲ. ಹಾಗಾಗಿ ಜೋಪಾನವಾಗಿ ಕಾಲುಗಳನ್ನೇ ತಡವರಿಸುತ್ತ ಒಂದೊಂದೇ ಹೆಜ್ಜೆ ಇಡಲಾರಂಭಿಸಿದೆ. ಕಾಲಿಗೆ ಏನೋ ಹತ್ತಿದಂತಾಯಿತು. ನೀರಿನಲ್ಲಿ ಮುಳುಗಿ ಹೊರಗೆತ್ತಿ ನೋಡಿದರೆ ತಾಮ್ರದ ಪಾತ್ರೆಯೊಂದು. ಅದನ್ನು ತೆಗೆದು ದಡಕ್ಕೆಸೆದು, ಹುಡುಕಾಟವನ್ನು ಮುಂದುವರೆಸಿದೆ. ಹೀಗೆ ಅನೇಕ ವಸ್ತುಗಳು ಕೈಗೆ ಸಿಕ್ಕವು ಪಾತ್ರೆಗಳು, ಮಡಿಕೆಗಳು, ಇತ್ಯಾದಿ. ನನ್ನ ಉತ್ಸಾಹ ಸ್ವಲ್ಪ ಕುಗ್ಗ ತೊಡಗಿತು. ನರಿ ಹಾಗು ಹುಳಿ ದ್ರಾಕ್ಷಿಯ ಕತೆಯಂತೆ "ಅದು ಸಿಕ್ಕರೇನು? ಅದರಿಂದ ನಾನು ಹಿಂತಿರುಗಬಲ್ಲೆ ಎಂಬುದಕ್ಕೆ ಆಧಾರವೇನು?" ಎಂದು ಯೋಚಿಸುತ್ತ ಕೊನೆಯದಾಗಿ ಒಮ್ಮೆ ನೋಡಿ ಹಿಂತಿರುಗಿ ಬೇರೇನಾದರೂ ಮಾಡುವೆ ಎಂದು ನಿರ್ಧರಿಸಿದೆ.

ಕೊನೆಗೆ, ಸುಮಾರು ೨-೩ ತಾಸುಗಳ ಕಾಲ ಹುಡುಕಿದ ನಂತರ ಸೋತು ಮನೆಗೆ ಹಿಂತಿರುಗಲು ದಡದೆಡೆಗೆ ನಡೆಯ ತೊಡಗಿದೆ. ಕಾಲಿಗೆ ಏನೋ ಸಿಕ್ಕಹಾಗಾಯಿತು. ಅಭ್ಯಾಸ ಬಲದಿಂದ ಅದೇನೆಂದು ನೋಡಲು ಬಗ್ಗಿದೆ. ನನ್ನ ಬೆರಳುಗಳು ಮೂರ್ತಿಯಾಕಾರದ ವಸ್ತುವನ್ನು ಸುತ್ತುವರಿದವು. ಆ ಕ್ಷಣದಲ್ಲಿ ಮಿಂಚೊಂದು ಹೊಳೆಯಿತು. ಬೆದರಿ ಕಾಲುಜಾರಿ ನೀರಿನಲ್ಲಿ ಬಿದ್ದವ ಎದ್ದು ನೋಡಿದರೆ ನನ್ನ ಕೋಣೆಯ ತೊಟ್ಟಿಯಲ್ಲಿ ಎದ್ದಿದ್ದೇನೆ. ಒಂದು ನಿಮಿಷ ಅರ್ಥವಾಗಲಿಲ್ಲ - ಪುನಃ ತಲೆ ಸುತ್ತುವಿಕೆ, ಮೂರ್ಛೆಬೀಳುವ ಆಭಾಸ. ಹೇಗೋ ಅಂತು ಸಂಭಾಳಿಸಿಕೊಂಡು ತೊಟ್ಟಿಯಿಂದ ಹೊರಗೆ ಇಳಿದುಕೊಂಡೆ. "ನಾನು ಯಾವ ಕಾಲಕ್ಕೆ ಬಂದಿರುವೆ; ಎಷ್ಟು ದಿನಗಳು ಗತಿಸಿವೆ" ಎಂಬ ಪ್ರಶ್ನೆಗಳು ಪುನಃ ಕಾಡ ತೊಡಗಿದವು.

ನೋಡಿದಾಗ ನನ್ನ ಟವಲ್ಲು ಆ ಬಚ್ಚಲು ಮನೆಯ ಕೊಕ್ಕೆಯ ಮೇಲೆ ಎಂದಿನಂತೆ ನೇತುಹಾಕಿತ್ತು. ನೀರಿನಲ್ಲಿ ನೆಂದ ಮೈಒರಸಿಕೊಳ್ಳಲು ಟವಲ್ಲನ್ನು ಕೈಗೆತ್ತಿಕೊಂಡಾಗ ಅದರ ಹಿಂದೆ ಸಿಕ್ಕಿಸಿದ್ದ ನನ್ನ ಕೈಗಡಿಯಾರ ಕಾಣಿಸಿತು. ಅದನ್ನು ಅಕಾಮ್ಯವಾಗಿ ಕೈಗೆ ಕಟ್ಟಿಕೊಂಡೆ. ಮೊದಲಿಗೆ ನನ್ನ ಕಣ್ಣು ಬಿದ್ದದ್ದು ವೇಳೆ ಹಾಗು ತಾರೀಖಿನ ಮೇಲೆ. ಅದರ ಪ್ರಕಾರ ಇನ್ನೇನು ಊಟದ ಸಮಯವಾಗಿತ್ತು, ತಾರೀಖು ನಾನು ಈ ಕಾಲವನ್ನು ಬಿಟ್ಟು ಆ ಕಾಲಕ್ಕೆ ಹೋದ ದಿನ. ಈ ವಿಚಾರ ತಲೆದಾಕಿದ್ದಕ್ಕೋ ಅಥವ ಕಾಲ ಪ್ರಯಾಣದ ಪರಿಣಾಮವೋ ತಿಳಿಯದು. ತಲೆ ಸುತ್ತಲಾರಂಭಿಸಿ ಬಚ್ಚಲು ಮನೆಯಲ್ಲೇ ಕುಳಿತೆ. ಏಳುವ ಹೊತ್ತಿಗೆ ನನ್ನ ತಲೆ ಸ್ವಲ್ಪ ನಿಯಂತ್ರಣಕ್ಕೆ ಬಂದು ಹೊರಗೆ ಕಾದಿದ್ದ ಸೈನಿಕರು, ಡೈನೋಸಾರ್​ಗಳ ನೆನಪಾಯಿತು. ಒದ್ದೆ ಬಟ್ಟೆಗಳನ್ನು ಬಿಚ್ಚಿ ಟವಲ್ಲನ್ನುಟ್ಟುಕೊಂಡೆ.

ಬಾಗಿಲಿಗೆ ಕಿವಿ ಕೊಟ್ಟು ಕೇಳಿದೆ. ಹೊರಗೆ ನಿಶ್ಯಬ್ಧವಾಗಿತ್ತು. ನಿಧಾನವಾಗಿ ಬಾಗಿಲನ್ನು ತೆಗೆದು ನೋಡಿದೆ. ಏನೂ ಅಲುಗಾಡುತ್ತಿರಲಿಲ್ಲ. ಹೊರಹೋಗಿ ನೋಡಿದೆ ಯಾರ ಸುಳಿವೂ ಕಾಣಿಸಲಿಲ್ಲ. ಪುನಃ ಗೊಂದಲ: ಕೈಯಲ್ಲೇ ಇದ್ದ ಮೂರ್ತಿಯನ್ನು ಮತ್ತೆ ಮೇಜಿನ ಮೇಲಿರಿಸಿದೆ. ನಿಧಾನವಾಗಿ ಬಾಗಿಲು ತೆಗೆದು ನೋಡಿದರೆ ದೈತ್ಯ ಹಲ್ಲಿಯೂ ಇಲ್ಲ, ಕಾಡೂ ಇಲ್ಲ. ಎಂದಿನಂತೆ ಪ್ರವಾಸಿ ಮಂದಿರದ ಮುಂದಿನ ಅಂಗಳ. ಮಳೆ ನಿಂತಿತ್ತು; ಮೋಡಗಳು ಸರಿದು ಚಂದ್ರ ತಾರೆಗಳು ಕಾಣಿಸುತ್ತಿದ್ದವು. ತಂಪಾದ ಗಾಳಿ ಬೀಸುತ್ತಿತ್ತು.

ಒಣಗಿದ್ದ ಬಟ್ಟೆ ಧರಿಸಿ ಬೆಚ್ಚಗೆ ಹೊದ್ದುಕೊಂಡು ಹಾಸಿಗೆಯಲ್ಲಿ ಮಲಗಿ ಇನ್ನೇನು ಒಂದು ನಿಮಿಷವೂ ಆಗಿರಲಿಲ್ಲ, ಬಾಗಿಲು ತಟ್ಟುವ ಶಬ್ಧ. ಪ್ರವಾಸಿ ಮಂದಿರದ ಮಾಣಿ ನನ್ನ ರಾತ್ರಿಯ ಊಟವನ್ನು ಹಿಡಿದು ಬಂದಿದ್ದ.

ಕಳೆದ ಆರು ತಿಂಗಳುಗಳು ಕಣ್ಣಿಗ ಕಟ್ಟಿದಹಾಗಿದ್ದವು - ಆದರೆ ೬ ತಿಂಗಳು ಗತಿಸಿಯೇ ಇಲ್ಲ. ಕೆಲವೇ ನಿಮಿಷಗಳು - ಇಲ್ಲವೇ ಕ್ಷಣಗಳು ನಾನು ಆ ತೊಟ್ಟಿಯಲ್ಲಿದ್ದದ್ದು. ಮೇಲಾಗಿ ಕಾಡು, ದೈತ್ಯ ಹಲ್ಲಿ, ಯುದ್ಧ, ದಂಗೆ, ಕೋಣೆಗೆ ಬಂದ ಬ್ರಿಟೀಷ್ ಸೈನಿಕರು - ಯಾರ ಸುಳಿವೂ ಇಲ್ಲ. ನಾನೇನೂ ಕನಸು ಕಂಡೆನೆ? ಎಂದು ಯೋಚಿಸಿದೆ. ಆದರೆ ಅಂತಹ ಕನಸು ಯಾರಾದರೂ ಕಾಣಲು ಸಾಧ್ಯವೇ? ನಾನು ಅಲ್ಲಿಗೆ ಹೋಗಿ ಬಂದದ್ದಕ್ಕೆ ಯಾವ ಸಾಕ್ಷಿಯೂ ಇಲ್ಲ... "ಓ! ನನ್ನ ದಾಖಲೆ ಪುಸ್ತಕ!" ಎಂದು ಯೋಚಿಸಿ ಬಚ್ಚಲು ಮನೆಕಡೆಗೋಡಿದೆ. "ಅಯ್ಯೋ ನೀರಲ್ಲಿ ನೆನೆಯಿತೇ. ಏನಾದರೂ ಇದ್ದರೆ ಅಳಿಸಿಹೋಗಿರಬೇಕು" ಎಂಬ ಉದ್ಗಾರ. ಆಚೆ ಮಾಣಿ ಇನ್ನೂ ಊಟ ಬಡಿಸುತ್ತಲೇ ಇದ್ದ.

ಬಚ್ಚಲು ಮನೆಯಲ್ಲಿದ್ದ ನನ್ನ ಒದ್ದೆ ಪಂಚೆಯನ್ನು ಹೊರತಂದು ನೆಲದ ಮೇಲೆ ಹರಡಿದೆ. ನನ್ನ ಚೆಕ್ ಸಹಿ ಮಾಡುವ ಪೆನ್ನಿನ ಚಮತ್ಕಾರವೋ ಏನೋ ಪಂಚೆಯ ಮೇಲೆ ಬರೆದಿದ್ದೆಲ್ಲವೂ ಹಾಗೆಯೇ ಇತ್ತು. ಹರ್ಷ, ಕಳೆ ನನ್ನ ಮನಸ್ಸಿಗೆ ಬರುತ್ತಿರುವಂತೆ ಮಾಣಿ "ಸಾಬ್ ಯೆ ಬಾಹರ್ ಸೋಫಾ ಮೆ ಚುಬಾ ಹುಆ ಥಾ" (ಸಾರ್ - ಇದು ಹೊರಗಡೆ ಸೋಫಾಗೆ ನಾಟಿತ್ತು) ಎಂದು ಹೇಳುತ್ತ ಒಂದು ಬಿದುರಿನ ಬಾಣವನ್ನು ಕೈಯಲ್ಲಿ ಹಿಡಿದು ಬಂದ.

1 comment:

ಶ್ರೀನಿಧಿ.ಡಿ.ಎಸ್ said...

ಆಹಾ!! ಅದ್ಭುತ!