ಈ ಲೇಖನವು ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟ ಡೊಮಿಂಗೊಸ್ ಪಯಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ ಬರೆದ ಘಟನೆಗಳ ಮೇಲೆ ಆಧಾರಿತವಾಗಿದೆ. ಪಯಸ್‌ಗೆ ಅರ್ಥವಾಗದ ಕೆಲವು ಮಾಹಿತಿಯನ್ನು ನಾನು ಸೇರಿಸುವ ಯತ್ನ ಮಾಡಿರುವೆ.
ಅಂದು ಆಶ್ವೇಯುಜ ಮಾಸ ಶುಕ್ಲ ಪಕ್ಷದ ನವಮಿ. ಪ್ರತಿಪದಿಯಿಂದ ಅಷ್ಟಮಿಯವರೆಗು ಎಂಟು ದಿನಗಳ ಕಾಲ ನಾ ನಾ ರೀತಿಯ ಹಬ್ಬ, ಪೂಜೆ ಪುನಸ್ಕಾರ ಧರ್ಮಾಚರಣೆಗಳು ನಡೆದಿದ್ದವು. ವಿಜೃಂಭಣೆಯಿಂದ ಕೂಡಿದ ಆ ಎಂಟು ದಿನಗಳ ನಂತರ ನವಮಿ ಬಂದಿತ್ತು. ರಾಜ ಕೃಷ್ಣದೇವರಾಯ, ಮಂತ್ರಿ ಸಳುವ ತಿಮ್ಮ, ಸಾಮಂತರು, ಹಾಗು ಪ್ರಜೆಗೆಳೆಲ್ಲರೂ ಅದ್ದೂರಿಯ ಮಹಾನವಮಿ ಹಬ್ಬಕ್ಕೆ ಕಾದಿದ್ದೆವು.
ಜನರೆಲ್ಲರೂ ವಿಜಯನಗರ ರಾಜಧಾನಿಯಲ್ಲಿ ನೆರೆದಿದ್ದೆವು. ಬೆಳಗಿನ ಮೊದಲ ಪೆಹರೆಯಲ್ಲಿ ಮಹಾರಾಜನು ನಾಗಲಾಪುರದಿಂದ ವಿಜಯನಗರಕ್ಕೆ ತನ್ನ ಪರಿವಾರ ಹಾಗು ಸೇವಕತಂಡದೊಡನೆ ಬಂದನು. ಮಹಾರಾಜನು ನಾಗಲಾಪುರಕ್ಕೆ ವಲಸೆ ಹೋಗಿದ್ದರೂ ಮಹಾನವಮಿಯ ಆಚರಣೆ ಈ ವಿಜಯನಗರದಲ್ಲೇ ನಡೆದಿತ್ತು. ರಾಜ್ಯದಾದ್ಯಂತದಿಂದ ನರ್ತಕಿಯರು, ದಳಪತಿಗಳು, ಸಾಮಂತರಾಜರು, ಹಾಗು ಪ್ರಜೆಗಳೆಲ್ಲರೂ ಬಂದು ನೆರೆದಿದ್ದರು.
ಅರಮನೆಯ ಹೆಬ್ಬಾಗಿಲಲ್ಲಿ ಬಡಿಗೆ-ಚಾವಟಿಗಳನ್ನು ಹಿಡಿದ ದ್ವಾರಪಾಲಕರು ನಿಂತಿದ್ದರು. ಸಾಮಂತರು, ಹಾಗು ಇತರ ಶ್ರೀಮಂತವರ್ಗದವರನ್ನು ಬಿಟ್ಟರೆ ಉಳಿದವರಾರನ್ನೂ ದ್ವಾರಪಾಲಕರು ಒಳಗೆ ಸೇರಿಸುತ್ತಿರಲಿಲ್ಲ. ಹೆಬ್ಬಾಗಿಲ ಒಳಗೆ ಒಂದು ಅಂಗಳವಿದೆ, ಅಂಗಳದಾಚೆ ಮತ್ತೊಂದು ದ್ವಾರಪಾಲಕರುಳ್ಳ ಬಾಗಿಲು. ಈ ಎರಡನೆಯ ಬಾಗಿಲೊಳಗೆ ಹೊಕ್ಕರೆ ಮತ್ತೊಂದು ವಿಶಾಲವಾದ ಅಂಗಳ. ಈ ಅಂಗಳದ ಒಂದು ಕಡೆಯಲ್ಲಿ ಸಾಮಂತರು, ಇತರ ಅತಿಥಿಗಳು ಕುಳಿತುಕೊಳ್ಳುವ ಆಸನಗಳಿದ್ದರೆ, ಅಂಗಳದ ಬಲಗಡೆ ಮಹಾರಾಜನು ಓರ್ಯ ದೇಶದ ಮೇಲೆ ಸಾಧಿಸಿದ್ದ ಜಯಕ್ಕೆ ಸ್ಮಾರಕವಾದ ಮಹಾನವಮಿಯ ದಿಬ್ಬ. ಈ ದಿಬ್ಬವು ಆನೆಯಾಕಾರದ ಕಂಬಗಳ ಮೇಲೆ ನಿಂತಿದೆ, ದಿಬ್ಬವನ್ನು ಹತ್ತಲು ಮೆಟ್ಟಲುಗಳು ಇವೆ, ಹಾಗು ಸುತ್ತಲೂ ನೆಲದ ಮೇಲೆ ಸುಂದರ ಕಲ್ಲುಹಾಸು. ಎಲ್ಲೆಡೆ ಕಾರ್ಯಕ್ರಮವನ್ನು ನೋಡಲು ಜನರು ನೆರೆದಿದ್ದರು.
ಅಂಗಳದ ಎಡಭಾಗದಲ್ಲಿ ಎತ್ತರದ ಮರದ ಸಾರುವೆ, ಈ ಸಾರುವೆಯನ್ನು ಮೃದುವಾದ ಕೆಂಪು ಹಾಗು ಹಸಿರು ಬಣ್ಣದ ಮಕಮಲ್ಲು ಹಾಸುಗಳಿಂದ ಅಲಂಕರಿಸಲಾಗಿತ್ತು. ಮಹಾನವಮಿಯ ದಿಬ್ಬದ ಒಂದು ಬದಿಯಲ್ಲಿ ಒಂದು ರೇಷ್ಮೆ ವಸ್ತ್ರಗಳಿಂದ ಅಲಂಕೃತವಾದ ಮಂಟಪದಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಹಬ್ಬದ ಪ್ರಾರಂಭದಲ್ಲಿಯೇ ಸ್ಥಾಪಿಸಲಾಗಿತ್ತು. ದಿಬ್ಬದ ಮಧ್ಯದಲ್ಲಿ ಒಂದು ರತ್ನ-ಸಿಂಹಾಸನವನ್ನು ಇರಿಸಲಾಗಿತ್ತು. ರೇಷ್ಮೆ ವಸ್ತ್ರಗಳಿಂದ ಹೊದಿಸಲ್ಪಟ್ಟ ಈ ಆಸನವು ಮುತ್ತು-ರತ್ನಗಳಿಂದ ಅಲಂಕೃತವಾಗಿ, ಹೊನ್ನಿನ ಸಿಂಹ ಹಾಗು ಇತರ ಪ್ರತಿಮೆಗಳನ್ನು ಹೊಂದಿತ್ತು. ಈ ಆಸನದಲ್ಲೂ ದೇವಿಯ ಹೊನ್ನಿನ ಉತ್ಸವಮೂರ್ತಿಯನ್ನಿರಿಸಿ ಹೋವುಗಳಿಂದ ಪೂಜಿಸಲಾಗಿತ್ತು. ಈ ರತ್ನ-ಸಿಂಹಾಸನದ ಮುಂಭಾಗದಲ್ಲಿ ತಕ್ಕೆಗಳಿಂದ ಮಾಡಿದ ರಾಜಾಸನವಿತ್ತು. ಇದು ಹಬ್ಬ ವೈಭವದ ವೀಕ್ಷಣೆಗಾಗಿ ಮಹಾರಾಜನಿಗೆ ಆಸನ.
ರಾಜನು ಈ ಸಭಾಂಗಣಕ್ಕೆ ಬಂದೊಡನೆ ರಾಜಗುರುಗಳು ಮತ್ತಿತರ ಬ್ರಾಹ್ಮಣರ ರೇಷ್ಮೆ-ಮಂಟಪದಲ್ಲಿ ದೇವಿಯ ಪೂಜೆ ಮಾಡಿಸಿದರು. ಈ ಸಮಯದಲ್ಲಿ ಅವನ ಪರಿವಾರದವರು ಅಲ್ಲೇ ನೆರೆದಿದ್ದು, ಪೂಜೆಯ ಕೊನೆಯಲ್ಲಿ ಹೆಂಗಳೆಯರು ಗೀತೆ-ನೃತ್ಯಗಳನ್ನು ದೇವಿಗೆ ಸಮರ್ಪಿಸಿದರು. ದಿಬ್ಬದ ಮಗ್ಗುಲಿನಲ್ಲಿ ರಾಜ ಮರ್ಯಾದೆಗೆ ತಕ್ಕಂತೆ ರಾಜ್ಯ ಲಾಂಛನ-ಪತಾಕೆಗಳಿಂದ ಅಲಂಕೃತವಾದ ಹನ್ನೊಂದು ರಾಜಾಶ್ವಗಳು ಹಾಗು ನಾಲ್ಕು ರಾಜಾನೆಗಳು ಕಾದಿದ್ದವು. ದೇವಿಯ ಪೂಜೆಯ ನಂತರ ಮಹಾರಾಜ ಹಾಗು ರಾಜಗುರುಗಳು ಹೊರಬಂದರು. ರಾಜಗುರುಗಳು ಹಿಡಿದ ಹೂಬುಟ್ಟಿಯಿಂದ ಹೂವುಗಳನ್ನು ಅಶ್ವ-ಆನೆಗಳಿಗೆ ಅರ್ಪಿಸಿ, ಮಹಾರಾಜನು ಅವುಗಳಿಗೆ ಸುಗಂಧ ಪರಿಮಳ ಸತ್ಕಾರವನ್ನು ಮಾಡಿದನು. ನಂತರ ರಾಜನು ತನ್ನ ಆಸನದಮೇಲೆ ಕುಳಿತು ದೇವಿಗೆ ಎಮ್ಮೆ ಹಾಗು ಮೇಕೆಗಳ ಬಲಿ ಕೊಡುವುದನ್ನು ನೋಡಿ, ಸಭಾಂಗಣದ ಪ್ರದಕ್ಷಿಣೆ ಮಾಡಿ ಪುನಃ ದೇವಿಗೆ ದೀರ್ಘದಂಡ ನಮಸ್ಕಾರವನ್ನು ಸಲ್ಲಿಸಿದನು. ಈ ಸಮಯದಲ್ಲಿ ಬ್ರಾಹ್ಮಣರು ಮಹಾರಾಜನಿಗೆ ಕರ್ತೃ ಪೂಜೆಯನ್ನು ಸಲ್ಲಿಸುತ್ತಿದ್ದರು, ನಂತರ ಮಹಾರಾಜನು ನೆರೆದಿದ್ದ ಸಭೆಗೆ ಸಭಾಪೂಜೆಯನ್ನು ಸಲ್ಲಿಸಿದನು.
ಆನಂತರ ಮಂಟಪದ ಒಳಗೆ ಹೋಗಿ ರಾಜನು ನವಗ್ರಹ ಹೋಮವನ್ನು ಆಚರಿಸಿದನು. ಹೋಮಕ್ಕೆ ಮುತ್ತು-ರತ್ನಗಳ, ದಿವ್ಯ-ಪರಿಮಳಗಳ ಪೂರ್ಣಾಹುತಿಯನ್ನು ಸಲ್ಲಿಸಿದನು. ಹೋಮದ ನಂತರ ವರ ಪ್ರಸಾದವನ್ನು ಪಡೆದು ಮಹಾರಾಜನು ಪುನಃ ತನ್ನ ಆಸನವನ್ನೇರಿದನು. ಸಾಮಂತರೆಲ್ಲರೂ ಬಂದು ರಾಜನಿಗೆ ಕಾಣಿಕೆಗಳನ್ನು ಸಲ್ಲಿಸುತ್ತಾ ಆದರ ತೋರಿ ತಮ್ಮ ತಮ್ಮ ಆಸನಗಳಲ್ಲಿ ವಿರಾಜಿಸಿದರು. ಸ್ವಲ್ಪ ಕಾಲ ನೃತ್ಯವನ್ನು ನೋಡಿ ರಾಜನು ತನ್ನ ಅರಮನೆಗೆ ತೆರಳಿದನು. ಈದೇ ರೀತಿ ಕಳೆದ ಎಂಟು ದಿನಗಳ ಬೆಳಗಿನ ಪೂಜೆ ದಿನ-ದಿನಕ್ಕೂ ಹೆಚ್ಚು ಅದ್ದೂರಿಯಂಬಂತೆ ಆಚರಿಸಲಾಗಿತ್ತು.
ಮಧ್ಯಾಹ್ನ ಮೂರನೆಯ ಪಹರೆಯಲ್ಲೆ ಮಹಾರಾಜ, ಸಾಮಂತರು ಹಾಗು ಪ್ರಜೆಗಳೆಲ್ಲರೂ ಪುನಃ ಅರಮನೆಯ ಅಂಗಳದಲ್ಲಿ ನೆರೆದಿದ್ದರು. ಕುಸ್ತಿ ಮಲ್ಲರು, ನರ್ತಕಿಯರು ಹಾಗು ರಾಜ-ಮರ್ಯಾದೆಗೆ ತಕ್ಕಂತೆ ಅಲಂಕೃತ ಆನೆಗಳನ್ನು ಒಂದು ಅಂಗಳದಲ್ಲಿ ಸೇರಿಸಿದರು. ಮಂತ್ರಿವರ್ಗದ ಪರಿವಾರದವರು, ಉಚ್ಛ ಬ್ರಾಹ್ಮಣರು ಹಾಗು ಇತರ ಶ್ರೀಮಂತರು ಇನ್ನೊಂದು ಭಾಗದಲ್ಲಿ ನೆರೆದಿದ್ದರೆ, ಸಾಮಾನ್ಯ ಪ್ರಜೆಗಳಿಗೇ ಮತ್ತೊಂದು ಭಾಗ.
ಮಹಾರಾಜನ ಪಿತೃರೂಪಿ, ಮಹಾಮಂತ್ರಿ ಸಲುವತಿಮ್ಮನವರು ಕಾರ್ಯಕ್ರಮದ ಪರಿವೀಕ್ಷಣೆ ಹೊತ್ತಿದ್ದರು. ಎಲ್ಲರೂ ನೆರೆದ ನಂತರ ಮಹಾರಾಜನು ಹೋಗಿ ತನ್ನ ಆಸನವನ್ನು ಏರಿದಾಗ ಪ್ರಜೆಗಳು ಅವನಿಗೆ ತಲೆಬಾಗಿ ಆದರ ತೋರಿದರು. ಮಹಾರಾಜ ಕುಳಿತರೂ ಮಲ್ಲರನ್ನು ಬಿಟ್ಟು ಯಾರೂ ಕೂರುವಂತಿರಲಿಲ್ಲ. ಮಹಾರಾಜನು ತನಗೆ ಹೆಣ್ಣು ಕೊಟ್ಟ ಶ್ವಶುರು ಹಾಗು ಅನ್ಯ ಸಾಮಂತರನ್ನು ತನ್ನೊಡನೆ ಕುಳಿತು ಹಬ್ಬದ ವೈಭವವನ್ನು ನೋಡುವ ನಿಮಂತ್ರಣ ನೀಡಿದನು. ಅಂತೆಯೇ ಶ್ರೀರಂಗಪಟ್ಟಣದ ಅರಸ ಬೆಟ್ಟದ ಚಾಮರಾಯ, ಮಲಬಾರಿನ ಸಾಮಂತ ಕುಮಾರವೀರಯ್ಯ ಮತ್ತಿತರರು ಮಹಾರಾಜನ ಬಳಿ ಕುಳಿತರು.
ಮಹಾರಾಜನು ಬಂಗಾರದ ಝರಿಯ ಪಾಟಲ ಪುಷ್ಪ ಬೂಟಗಳನ್ನು ಹೊಂದಿದ್ದ ಶ್ವೇತವರ್ಣದ ರೇಷ್ಮೆ ವಸ್ತ್ರಗಳನ್ನು ಧರಿಸಿದ್ದು ರಾಜಮರ್ಯಾದೆಗೆ ತಕ್ಕಂತೆ ಒಡವೆಗಳನ್ನು ತೊಟ್ಟಿದ್ದನು. ಅವನ ಸುತ್ತ ಅವನ ನಾಗವಲ್ಲಿ ಎಲೆಗಳನ್ನು, ಅವನ ಖಡ್ಗವನ್ನು, ವಿಜಯನಗರದ ವರಾಹ ಲಾಂಛನವನ್ನು, ಧ್ವಜ-ಪತಾಕೆ-ಛತ್ರಗಳನ್ನೂ ಹೊತ್ತು ಅವನ ಸೇವಕರು ನೆರೆದಿದ್ದರು. ದೇವಿಯ ಉತ್ಸವ ಮೂರ್ತಿಗೆ ಬ್ರಾಹ್ಮಣರು ಮುತ್ತು-ರತ್ನಗಳಿಂದ ಕೂಡಿದ ಹೊನ್ನಿನ ಹಿಡಿಗಳುಳ್ಳ ಛತ್ರ-ಛಾಮರಗಳ ಸೇವೆ, ಹಾಗು ಸಕಲ ರಾಜೋಪಚಾರಗಳನ್ನು ಸಮರ್ಪಿಸುತ್ತಲೇಯಿದ್ದರು.
ಮಹಾರಾಜನು ಆಸನ ವಿರಾಜಿತನಾದ ಕೂಡಲೆ ಅಲ್ಲಿ ನೆರೆದಿದ್ದ ಮಂತ್ರಿವರ್ಗದವರು ಹಾಗು ಸಾಮಂತರು ಒಬ್ಬೊಬ್ಬರಾಗಿ ಬಂದು ಅವನಿಗೆ ವಂದಿಸಿ ಅಂಗಳದ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಇವರುಗಳು ನೆಲೆಸಿದ ನಂತರ ಈಟಿ-ಗುರಾಣಿಗಳನ್ನು ಹೊತ್ತ ಕುಂತಲಧರ ಸೇನೆಯ ಪ್ರತಿನಿಧಿಗಳು ತಮ್ಮ ದಳಪತಿಯ ನೇತೃತ್ವದಲ್ಲಿ ಬಂದರು, ಬಳಿಕ ಶರ-ಧನಸ್ಸುಗಳನ್ನು ಹೊತ್ತ ಧನುರ್ಧರಸೇನೆಯ ಪ್ರತಿನಿಧಿಗಳು ಅವರ ದಂಡನಾಯಕರು ಆಗಮಿಸಿದರು. ಇವರೆಲ್ಲರೂ ರಾಜನ ಕಾವಲಿಗಾಗಿ ಆನೆಗಳ ಮುಂದೆ ನಿಂತರು.
ಸೇನಾಧಿಪತಿಗಳು ತಮ್ಮ ಸ್ಥಾನಗಳನ್ನು ಗ್ರಹಿಸಿದ ಮೇಲೆ ನರ್ತಕಿಯರ ನರ್ತನ ಆರಂಭವಾಯಿತು. ಈ ನರ್ತಕಿಯರ ಅದ್ದೂರಿಯಂತೂ ಹೇಳಿಯೇ ಮುಗಿಯದು! ಕೊರಳಿನಲ್ಲಿ ವಜ್ರ-ವೈಡೂರ್ಯ-ಮುತ್ತುಗಳಿಂದ ಕೂಡಿದ ಕಂಠಹಾರಗಳು, ಕೈಹದಡಿನಲ್ಲಿ ಕಂಕಣಗಳು, ತೋಳಿನಲ್ಲಿ ತೋಳುಬಂಧಿಗಳು, ಉಡಿಯಲ್ಲಿ ಸೊಂಟಪಟ್ಟಿಗಳು, ಕಾಲಿನಲ್ಲಿ ನೂಪುರಗಳು - ಎಲ್ಲವೂ ಬಂಗಾರ. ಈ ನರ್ತಕಿ ಕಾಯಕದವರಿಗೆ ಇಂತಹ ಸೊಬಗು ಸಾಧ್ಯವೇ ಎಂಬ ಸಂದೇಹ ಬರುವಂತಹ ವೈಭವ!
ನರ್ತನದ ನಂತರದ ಕಾರ್ಯಕ್ರಮ ಮಲ್ಲರ ಯುದ್ಧ. ಈ ತೈಲ ಸವರಿಕೊಂಡ ಭಾರೀ ಜಟ್ಟಿಗಳಾದರೋ ಬಹು ಶಕ್ತಿಶಾಲಿಗಳು. ಒಬ್ಬರನ್ನೊಬ್ಬರು ಎತ್ತಿಹಾಕುವುದೇನು, ಅವರ ಕುಸ್ತಿಯೇನು! ಹಲವರು ಏಟು ತಿಂದು ಹಲ್ಲು ಮುರಿಸಿಕೊಂಡರು, ಇನ್ನು ಹಲವರ ಕಣ್ಣುಗಳೇ ಗಾಯಗೊಂಡವು, ಮತ್ತು ಹಲವರು ಮೂರ್ಛೆಗೊಂಡು ಅವರನ್ನು ಎತ್ತಿಕೊಂಡು ಹೋಗಬೇಕಾಯಿತು. ನೆರೆದ ದಳಪತಿಗಳೇ ಈ ಮಲ್ಲಯುದ್ಧದ ತೀರ್ಪುಗಾರರಾಗಿದ್ದು, ಗೆದ್ದ ಮಲ್ಲರಿಗೆ ಸನ್ಮಾನ ನಡೆಯಿತು.
ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದಂತೆಯೇ ನೂರಾರು ಪಂಜು-ದೀವಟಿಗೆಗಳನ್ನು ಹೊತ್ತಿಸಿ ಎಲ್ಲೆಡೆ ಇರಿಸಿ ಮಹಾನವಮಿಯ ದಿಬ್ಬವನ್ನು ಹಗಲಿನಂತೆ ಬೆಳಗಿಸಲಾಯಿತು. ಈ ದೀಪಗಳ ಬೆಳಕಿನಲ್ಲಿ ನಾ ನಾ ತರಹದ ಮೌನ ಭಾವುಕ ನಾಟ್ಯ ಪ್ರದರ್ಶನಗಳನ್ನು ತೋರಿಸಲಾಯಿತು. ಇವು ಹೆಚ್ಚು ಕಾಲ ನಿಲ್ಲದೆ ಬಹುಬೇಗ ನಡೆದುಹೋದವು. ನಂತರ ಕುದುರೆ ಸವಾರರು ತಮ್ಮ ಸಾಹಸ ಕೃತ್ಯಗಳನ್ನು ಪ್ರದರ್ಶಿಸಿದರು, ಬಳಿಕ ಆನೆಗಳ ಸಾಹಸ ಕೃತ್ಯಗಳು.
ಇಷ್ಟು ಹೊತ್ತಿಗೆ ಪೂರ್ಣ ಕತ್ತಲೆಯಾಗಿತ್ತು. ಅಗ್ನಿ ಪ್ರದರ್ಶನವು ಬಹು ಜೋರಿನ ಸದ್ದಿನೊಂದಿಗೆ ಕೂಡಿದ ಪಟಾಕಿಗಳ ಹೊಡೆತಗಳಿಂದ ಆರಂಭವಾಯಿತು. ನಂತರ ವಿವಿಧ ಜ್ವಾಲೆ ಕೂಡಿದ ಅಸ್ತ್ರಗಳನ್ನು ಸಾಹಸಿಗಳು ಕೈಯಲ್ಲೇ ಹಿಡಿದು ಹಾರಿಸಿ ತೋರಿಸಿದರು. ಕೊನೆಗೆ ಆಕಾಶಬಾಣಗಳ ಸಂಯೋಜನೆಯೊಂದಿಗೆ ಅಗ್ನಿ ಪ್ರದರ್ಶನವು ಸಂಪೂರ್ಣವಾಯಿತು.
ಅಗ್ನಿಪ್ರದರ್ಶನವಾದಮೇಲೆ ಸಾಮಂತರ ರಥಗಳ ಪ್ರದರ್ಶನ. ದೂರದ ಗಡಿಯಲ್ಲಿ ಯುದ್ಧದಲ್ಲಿ ತೊಡಗಿದ್ದ ಸಾಮಂತರೂ ಪ್ರತಿನಿಧಿಗಳೊಂದಿಗೆ ತಮ್ಮ ದಳಗಳ ರಥಗಳನ್ನು ಕಳುಹಿಸಿದ್ದರು. ಮೊದಲಿಗೆ ಮಹಾಮಂತ್ರಿ ಸಲುವ ತಿಮ್ಮನವರ ರಥ, ನಂತರ ಒಂದಾದಮೇಲೊಂದು ಉಳಿದವರ ರಥಗಳು. ಹಲವು ರಥಗಳು ಅದ್ದೂರಿಯ ಅಲಂಕಾರಗಳನ್ನು ಹೊಂದಿ ಮತ್ತು ಹಲವು ಕುಣಿಯುವ ಗೊಂಬೆಗಳ ಯಂತ್ರಗಳಿಂದ ಕೂಡಿದ್ದವು. ರಥಗಳ ನಂತರ ರಾಜಾಶ್ವಗಳ ಮೆರವಣಿಗೆ - ರಾಜ ಮರ್ಯಾದೆಗೆ ತಕ್ಕಂತೆ ಅಲಂಕರಿಸಿದ ಕುದುರೆಗಳು, ಮಕಮಲ್ಲು, ರೇಷ್ಮೆಯ ಹೊದಿಕೆಗಳು, ಛತ್ರ-ರಾಜ್ಯಲಾಂಛನಗಳಿಂದ ಕೂಡಿದ ಕುದುರೆಗಳನ್ನು ಭಟರು ಕರೆತಂದರು. ಇವು ಕೇವಲ ರಾಜನು ಏರುವಂತಹ ಕುದುರೆಗಳು. ಇದರಮೇಲೆ ಕುಳಿತೇ ರಾಜನ ಪಟ್ಟಾಭಿಶೇಖವಾಗುವುದು. ಈ ರೀತಿ ಕುದುರೆಗಳು ಅಂಗಳದ ಸುತ್ತ ಐದಾರು ಬಾರಿ ಸುತ್ತಿ, ಆನಂತರ ಅಂಗಳದ ಮಧ್ಯದಲ್ಲಿ ಸಾಲಾಗಿ ನಿಂತವು. ರಾಜಗುರುಗಳು ಮತ್ತಿಬ್ಬರು ಬ್ರಾಹ್ಮಣರೊಡನೆ ತೆಂಗಿನಕಾಯಿ, ಅಕ್ಕಿ ಹಾಗು ಹೂವುಗಳೊಂದಿಗೆ ಕೊಡದಲ್ಲಿ ನೀರನ್ನು ತಂದು, ಕುದುರೆಗಳಿಗೆ ಸನ್ಮಾನ ಮಾಡಿ ಹೋದರು.
ಅರಮನೆಯೊಳಗಿನಿಂದ ಸುಮಾರು ಐವತ್ತು ಹೆಂಗಳೆಯರು ನಗಾರಿಗಳನ್ನು ಬಡಿಯುತ್ತ, ಕಹಳೆಗಳನ್ನು ಊದುತ್ತ ಕೈಯಲ್ಲಿ ಬೆಳ್ಳಿಯ ಬೆತ್ತಗಳನ್ನು ಹಿಡಿದು ಬಂದರು. ರೇಷ್ಮೆಯ ವಸ್ತ್ರಗಳು, ಕಂಠಹಾರಗಳು, ಕುಲಾವಿಗಳು, ಹಾಗು ಮುತ್ತು-ರತ್ನಗಳಿಂದ ಕೂಡಿದ ಮತ್ತಿತರ ಒಡವೆಗಳನ್ನು ಧರಿಸಿ ದೀಪಗಳುಳ್ಳ ಬಂಗಾರದ ಕಲಶಗಳನ್ನು ಹೊತ್ತು ಬರುವ ಇವರ ಶೃಂಗಾರದ ವೈಭವಕ್ಕಾರು ಎಣೆ! ಇವರುಗಳೆಲ್ಲ ಆ ಕುದುರೆಗಳ ಸುತ್ತ ಮೂರು ಪ್ರದಕ್ಷಿಣೆಗಳನ್ನು ಮಾಡಿ ಅರಮನೆಗೆ ಹಿಂತಿರುಗಿದರು. ಇವರು ರಾಣಿಯರ ಸಖಿಯರಂತೆ. ನವರಾತ್ರಿಯ ಒಂದೊಂದು ರಾತ್ರಿಯೂ ಒಬ್ಬ ರಾಣಿಯ ಸಖಿಯರು ಬರುವುದು ವಾಡಿಕೆಯಂತೆ.
ಈ ಹೆಂಗಳೆಯರು ಅರಮನೆಗೆ ಹಿಂತಿರುಗಿದ ನಂತರ ಕುದುರೆಗಳು ಲಾಯಕ್ಕೆ ಹೋದವು. ನಂತರ ಆನೆಗಳ ಸರದಿ. ರಾಜೌಪಚಾರಕ್ಕೆಂದು ಅಲಂಕೃತ ಆನೆಗಳೆಲ್ಲ ಬಂದು ಮಹಾರಾಜನ ಅಂಗೀಕರಣದ ನಂತರ ಹೊರ ಹೋದವು. ಬಳಿಕ ರಾಜನು ದೇವಿಯ ರೇಷ್ಮೆಯ ಗುಡಿ ಹೊಕ್ಕಂತೆ ರಾಜಗುರುಗಳು ದೇವಿಯ ಉತ್ಸವಮೂರ್ತಿಯನ್ನು ಆ ಗುಡಿಯೊಳಕ್ಕೆ ಒಯ್ದರು. ಒಳಗೆ ದಿನದ ಅಂತಿಮ ಪೂಜೆ ಹಾಗು ಪ್ರಸಾದದ ನಂತರ ಮಹಾರಾಜನು ತನ್ನ ಉಪವಾಸವನ್ನು ಮುರಿಯಲು ಅರಮನೆಗೆ ತೆರಳಿದನು. ಈ ಹತ್ತು ದಿನಗಳು ಮಹಾರಾಜನು ಬೆಳಗಿನಿಂದ ಏನನ್ನೂ ತಿನ್ನುವಂತಿಲ್ಲ. ರಾತ್ರಿ ಎಲ್ಲವೂ ಮುಗಿದು ಅಂತಿಮ ಪೂಜೆಯ ನಂತರವೇ ಅವನ ಉಪವಾಸ ಮುರಿಯುವ ಸಮಯ. ಮಹಾರಾಜನ ಉಪಹಾರವಾಗುವವರೆಗು ನರ್ತಕಿಯರು ನೃತ್ಯ ಪ್ರದರ್ಶನ ಮಾಡುತ್ತಲೇ ಇದ್ದಂತೆ ನೆರೆದ ಜನರು ತಮ್ಮ ತಮ್ಮ ಮನೆಗಳನ್ನು ಸೇರಿದರು.
ಈ ರೀತಿ ಮಹಾನವಮಿಯ ಹಬ್ಬ ಮುಕ್ತಾಯವಾಯಿತು. ಮಾರನೆಯ ದಿನ - ವಿಜಯ ದಶಮಿಯಂದು ಮಹಾರಾಜನು ತನ್ನ ಸೇನಾಪಡೆಯ ಸಮೀಕ್ಷೆ ನಡೆಸುವನು. ಬನ್ನಿ ಮರದ ಎಲೆಗಳ ವಿನಿಮಯದೊಂದಿಗೆ ಈ ಹತ್ತು ದಿನಗಳ ದಸರಾ ಹಬ್ಬವು ಮುಕ್ತಾಯವಾಗುವುದು.
Monday, October 09, 2006
Subscribe to:
Post Comments (Atom)
No comments:
Post a Comment