ದೇವಿಯ ಪತನ (ಮೂಲ ರಿಚ್ಮಲ್ ಕ್ರಾಂಪ್ಟನ್ - ಜಸ್ಟ್ ವಿಲಿಯಂ)
Language: Kannada
Category: Humor
Abstract: This is a humorous story about a young boy, his obsession with his teacher, and the funny events that fall out of this situation. The story is based on 'Fall of the Idol' from the William series by Richmal Crompton.
Keywords: kannada, richmal crompton, william, valleesha, fall of the idol, humor, humour, hasya, haasya
ಹಿನ್ನೆಲೆ: ವಲ್ಲೀಶ ೧೦ ವರ್ಷದ ಒಡ್ಡ, ಮೊಂಡ ಹುಡುಗ. ಛೇಷ್ಟೆ, ತುಂಟತನ ಬಹಳವಾದರೂ, ಎದೆಯಲ್ಲಿ ಆಗಾಗ ಕರಗುವ ಹೃದಯ. ದೊಡ್ಡವರೊಂದಿಗೆ ಸದಾ ಇವನ ಕದನ. ಇವನಿಗೊಬ್ಬಳು ಅಕ್ಕ, ಒಬ್ಬ ಅಣ್ಣ (ಇಬ್ಬರೂ ದೊಡ್ಡವರು). ಇವನ ಪ್ರಾಣ ಸ್ನೇಹಿತ ಜಗ್ಗು. ವಲ್ಲೀಶ, ಜಗ್ಗು, ಹನ್ಮು, ಡೊಳ್ಳು - ಈ ನಾಲ್ಕು ಮಂದಿ ಗಡಿಪಾರಕರೆಂದೇ ಪ್ರಸಿದ್ಧರಾದ ಗುಂಪು.
ದೇವಿಯ ಪತನ
ವಲ್ಲೀಶನಿಗೆ ಬೇಸರವಾಗಿತ್ತು. ಇಷ್ಟವಿಲ್ಲದಿದ್ದರೂ ಹಿರಿಯರ ಜಬರದಸ್ತಿಯ ಕಾರಣ ತನ್ನ ಕುರ್ಚಿಯಲ್ಲಿ ಕುಳಿತು ಬೋರ್ಡಿನ ಮೇಲೆ ಬರೆದ ಅಕ್ಷರಗಳನ್ನು ನೋಡುತ್ತಿದ್ದ.
"ಇದಕ್ಕೆ ಅರ್ಥವೇ ಇಲ್ಲ" ಧಿಕ್ಕಾರಾತ್ಮಕ ಧ್ವನಿಯಲ್ಲಿ ಗೊಣಗಿದ.
ಭಾನು "ಮಿಸ್‌ಗೂ ಬೇಸರವಾಗಿತ್ತು. ಆದರೆ ವಲ್ಲೀಶನಂತೆ ಅದನ್ನು ತೋರ್ಪಡಿಸುವವರಾಗಿರಲಿಲ್ಲ.
"ನೂರು ರೂಪಾಯಿಗಳಿಗೆ ಒಂದು ವರ್ಷಕ್ಕೆ ಐದು ರೂಪಾಯಿ ಬಡ್ಡಿಯಾದರೆ", ಬೇಸರದಿಂದ ನುಡಿದು, ನಂತರ, "ವಲ್ಲೀಶ, ಸರಿಯಾಗಿ ಕೂತ್ಕೋ - ಪೆದ್ದನ ಹಾಗೆ ಕಾಣಸ್ತಿದ್ದೀಯ" ಎಂದರು.
ವಲ್ಲೀಶ ಮೇಜಿನ ಒಂದು ಬದಿಯಿಂದ ಮತ್ತೊಂದು ಬದಿಗೆ ವಾಲಿಕೊಂಡು ತನ್ನ ಬೇಸರವನ್ನು ಸಮರ್ಥಿಸ ತೊಡಗಿದ.
"ನನಗಂತೂ ಏನೂ ಅರ್ಥವಾಗ್ತಿಲ್ಲ. ಏನೂ ಅರ್ಥವಾಗ್ಲಿಲ್ಲ ಅಂದ್ರೆ ಪೆದ್ದನ ತರಹನೇ ಕಾಣ್ಸೋದು. ಜನ ಯಾಕೆ ತುಂಬ ದುಡ್ಡು ಕೊಟ್ಟು ಸೊಲ್ಪ್ ಸೊಲ್ಪೇ ವಾಪಸ್ ಇಸ್ಕೊತಾರೆ ಅಂತ ನನಗಂತೂ ಗೊತ್ತಾಗ್ತಿಲ್ಲ. ನೂರು ರುಪಾಯಿ ಕೊಟ್ಟು ಐದ್ ರುಪಾಯಿ ಇಸ್ಕೊಂಡ್ರೆ ಕೊಟ್ಟ ಕೋಡಂಗಿ ಪೆದ್ದ. ಇಸ್ಕೊಂಡ್ ಈರ್ಭದ್ರ ಆ ನೂರ್ ರುಪಾಯಿ ಯಾವಾಗ್ಲೋ ವಾಪಸ್ ಕೊಡ್ತಾನೆ ಅಂತ ನಂಬೋದ್ ಹೇಗೆ?" ಅಷರಲ್ಲೆ ಮತ್ತೊಂದು ಯೋಚನೆ ಬಂದು "ನೂರ್ ರುಪಾಯಿ ಹೋಗ್ಲಿ ಆ ಐದ್ ರುಪಾಯೇ ಕೊಡ್ತಾನೆ ಅನ್ನೋ ಗ್ಯಾರಂಟೀ ಏನು?"
ಭಾನೂ ಮಿಸ್ ಕೈ ಎತ್ತಿ ಅವನ ಮಾತಿನ ನೆರೆ ನಿಲ್ಲಿಸಿದರು.
"ವಲ್ಲೀಶ," ಸಹನೆಯಿಂದ ನುಡಿಯುತ್ತ "ನನ್ನ ಮಾತು ಕೇಳು. ಈಗ.." ಕಣ್ಣು ಕೋಣೆಯ ಸುತ್ತ ಸುತ್ತುತ್ತ ಒಬ್ಬ ಪುಟ್ಟ ಆಕಾರದ ಹುಡುಗನ ಮೇಲೆ ನಿಂತವು. "ಆ ವಾಸುಗೆ ನೂರು ರೂಪಾಯಿ ಬೇಕಾಗಿತ್ತು, ಅದನ್ನ ನೀನು ಅವನಿಗೆ ಕೊಟ್ಟೆ ಅಂತಿಟ್ಕೋ..."
"ವಾಸುಗೆ ನಾನು ನೂರು ರುಪಾಯಿ ಖಂಡಿತ ಕೊಡಲ್ಲ" ವಲ್ಲೀಶ ಕಠಿಣ ಧ್ವನಿಯಲ್ಲಿ ಹೇಳಿದ "ನನ್ನ ಹತ್ರ ನೂರು ರುಪಾಯಿ ಇಲ್ವೂ ಇಲ್ಲ. ನನ್ನ ಹತ್ತ್ರ ಬರೀ ಮೂರು ರುಪಾಯಿ ಎಪ್ಪತ್ತೈದು ಪೈಸ ಇದೆ, ಅದನ್ನ ನಾನೇನೇ ಕಾರ್ಣಕ್ಕು ವಾಸುಗೆ ಕೊಡೋದಿಲ್ಲ. ನಾನಂಥ ಕೋಡಂಗಿ ಅಲ್ಲ. ಒಂದ್ಸರ್ತಿ ಔನ್ಗೆ ನನ್ನ ಶಿಲ್ಪಿ ಕೊಟ್ಟು ಅದನ್ನ ಕಾಚ್ಚಿ ತಿಂದ್ಬಿಟ್ಟಿದ್ದ, ಆಮೇಲೆ..."
ಭಾನು ಮಿಸ್ಸು ಸ್ವಲ್ಪ ಖಾರವಾಗೇ ಅವನನ್ನು ತಡೆಹಿಡಿದರು. ಮಧ್ಯಾಹ್ನದಲ್ಲಿ ಶಕೆಯಿರುವಾಗ ಪಾಠ ಹೇಳಿಕೊಡುವುದು ಕಠಿಣ.
"ಶಾಲೆ ಮುಗಿದ ಮೇಲೆ ಹಿಂದುಳಿದುಕೋ, ವಲ್ಲೀಶ. ಆಗ ನಾನು ನಿನಗೆ ಹೇಳಿಕೊಡ್ತೀನಿ"
ವಲ್ಲೀಶ ಗಂಟು ಮುಖ ಹಾಕಿಕೊಂಡು ತಾತ್ಸಾರದಿಂದ 'ಹೋ' ಎಂದು ಗೊಣಗಿ ಸಧ್ಯಕ್ಕೆ ತನ್ನ ಬೇಸರದೆಡೆ ಹಿಂತಿರುಗುದ.
ನಂತರ, ಶಾಲೆಗೆ ಬರುವಾಗ ದಾರಿಯಲ್ಲಿ ತಾನು ಹಿಡಿದ ಹೋತಿಕೇತವನ್ನು ನೆನಪಿಸಿಕೊಂಡು ಅದರ ಗುಟ್ಟು ಸ್ಥಳವಾದ ಅವನ ಜೇಬಿನಿಂದ ಹೊರತೆಗೆದ. ಆದರೆ ಆ ಹೋತಿಕೇತ ವಲ್ಲೀಶನ ಜೇಬಿನ ಇತರ ನಿವಾಸಿಗಳಾದ ಕಲ್ಲು, ಕಡ್ಡಿ, ಕಸಗಳೊಡನೆ ತನ್ನ ಜೀವಕ್ಕಾಗಿ ಹೋರಾಡಲಾಗದೆ ಸೋಲನ್ನೊಪ್ಪಿತ್ತು.
ವಲ್ಲೀಶನ ಬೇಸರ ಭೀಭತ್ಸಕ್ಕೆ ತಿರುಗಿ ಅವನು ತನ್ನ ಪೆನ್ನಿನಿಂದ ಪಕ್ಕದವನ ಮೇಲೆ ಇಂಕನ್ನು ಎರಚಿದ. ಪಕ್ಕದವ ತಕರಾರು ತೆಗೆದು ಚೈತನ್ಯ ಭರಿತ ಗುದ್ದಾಟ ನಡೆಯಿತು.
ಕೊನೆಗೆ ಸತ್ತ ಹೋತಿಕೆತವನ್ನು ವಲ್ಲೀಶನ ಸಧೃಡ ವೈರಿಯ ಅಂಗಿಯೊಳಗೆ ನಿಧಾನವಾಗಿ ಇಳಿಸಿ, ಗೆಳೆಯರ ಮೂಲಕ ಹೊರತೆಗೆದು ಹಿಂಪಡೆಯಲಾಯಿತು. ಸೇಡಿನ ಬೆದರಿಕೆಗಳು ಅದರ ಹಿಂದೆಯೇ ಬಂದವು. ಭಾನು ಮಿಸ್ ಬಡ್ಡಿ - ಚಕ್ರಬಡ್ಡಿಗಳನ್ನು ಮುಂದಿನ ಬೆಂಚುಗಳ ಮೇಲೆ ಕುಳಿತ ಅವರ ಮೆಚ್ಚಿನ ಹುಡುಗರಿಗೆ ಪಾಠ ಹೇಳುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕುಳಿತ ವಲ್ಲೀಶ ಕಷ್ಟ ಪಟ್ಟು ಕಾಲ ಹಾಕುತಲಿದ್ದ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ ಇವನಿಗೂ ಕಾಲ ಬಂದಿತ್ತು.
ಶಾಲೆ ಮುಗಿದು ಹುಡುಗರೆಲ್ಲ ಕೋಣೆ ಬಿಟ್ಟು ಹೊರಹೋದರು; ವಲ್ಲೀಶ ಕಾಗದದ ಉಂಡೆಯೊಂದನ್ನು ಅಗಿಯುತ್ತ, ಭಾನು ಮಿಸ್ಸನ್ನು ದುರ್ಗುಟ್ಟುತ್ತ ಉದಾಸೀನದಿಂದ ಕುಳಿತೇ ಇದ್ದ.
"ಈಗ ಹೇಳು, ವಲ್ಲೀಶ" ಭಾನು ಮಿಸ್ ತೀವ್ರ ಶಾಂತತೆಯಿಂದ ಹೇಳಿದರು.
"ಯಾರಾದ್ರು ಮತ್ತೊಬ್ಬರಿಂದ ನೂರು ರೂಪಾಯಿಗಳ ಸಾಲ ಪಡೆದರೆ..."
ತಮ್ಮ ತಲೆ ಬಗ್ಗಿಸಿ ಮೇಜಿನ ಮೇಲಿದ್ದ ಹಾಳೆಯಮೇಲೆ ಬರೆಯಲಾರಂಭಿಸಿದರು. ಹೊರಗಿನಿಂದ ಮಧ್ಯಾಹ್ನದ ಬಿಸಿಲು ಒಳಬರುತ್ತ ಅವರ ಉದ್ದವಾದ ಜಡೆಯಮೇಲೆ ಬೀಳುತ್ತಿತ್ತು. ಅವರು ತಮ್ಮ ತೀವ್ರ ದೃಷ್ಟಿಯನ್ನು ವಲ್ಲೀಶನ ಕಡೆ ಹರಿಸಿದರೂ ಅವು ಉದ್ದನೆ ಕಣ್ಣುರೆಪ್ಪೆಯುಳ್ಳ ಬಟ್ಟಲುಗಣ್ಣುಗಳಾಗಿದ್ದವು.
"ಅರ್ಥವಾಗ್ತಿದೆಯೇ, ವಲ್ಲೀಶ" ಎಂದು ನುಡಿದರು.
ಅವರ ಸುತ್ತ ಅವರು ಬೆಳಗ್ಗೆ ಮುಡಿದಿದ್ದ - ಈಗ ಬಾಡಿಹೋದ ಮಲ್ಲಿಗೆ ಹೂಗಳ ಸೊರಗಿದ ಸುಗಂಧ ತುಂಬಿತ್ತು. ನಮ್ಮ ನಾಯಕ ವಲ್ಲೀಶ - ಕಳ್ಳ, ಡಕಾಯಿತ, ಕಾಡು ಮನುಷ್ಯ, ಹೆಣ್ಣೆಂದರೆ ತೃಣೀಕರಿಸುವವ - ಕಾಮನ ಬಾಣದ ಪ್ರಹಾರವನ್ನು ಅನುಭವಿಸಿದ. ನಾಚಿ, ಮುಖ ಕೆಂಪಾಗಿ ಹಲ್ಲುಕಿಸಿದ.
"ಈಗ ಎಲ್ಲ ಅರ್ಥವಾಗ್ತಿದೆ. ನೀವು ಎಲ್ಲ ಸರಿಯಾಗಿ ಸುಲಭವಾಗಿ ಹೇಳಿಕೊಟ್ಟಿದ್ದೀರ. ಮೊದ್ಲು ನನಗರ್ಥವಾಗಿರ್ಲಿಲ್ಲ."
"ಮೊದಲು ನೀನು ಸತ್ತ ಹಲ್ಲಿಗಳು, ಪೆನ್ನು ಇಂಕುಗಳ ಜೊತೆ ಆಟವಾಡದಿದ್ದರೆ, ಆಗಲೇ ಅರ್ಥವಾಗಿರುತ್ತಿತ್ತು" ಬೇಸತ್ತ ಧ್ವನಿಯಲ್ಲಿ ಪುಸ್ತಕಗಳನ್ನು ಮುಚ್ಚುತ್ತ ನುಡಿದರು.
ವಲ್ಲೀಶ ಉಸಿರೆಳೆದ.
ಭಾನು ಮಿಸ್ ಶರಣಾಗತನಾಗಿ, ಅವರ ಕಾಲಾಳಾಗಿ ಮನಗೆ ಹೋದ. ಶಾಲೆಯ ಕೆಲವು ಹುಡುಗರು ಭಾನು ಮಿಸ್‌ಗೆ ಆಗಾಗ ಮುಡಿಯಲು ಹೂವು, ಹೂವಿನ ಗುಚ್ಛಗಳನ್ನು ತಂದು ಕೊಡುವುದು ವಾಡಿಕೆಯಾಗಿತ್ತು. ತಾನು ಎಲ್ಲರಿಗಿಂತ ಹೆಚ್ಚು ಯೋಗ್ಯ ಎಂದು ತೋರಿಸುವ ಹಂಬಲ. ಮಾರನೆ ದಿನ ಶಾಲೆಗೆ ಹೊರಡುವ ಮುನ್ನ ಒಂದು ದೊಡ್ಡ ಬುಟ್ಟಿ ಹಾಗು ಕತ್ತರಿ ಹಿಡಿದು ಹೂದೋಟಕ್ಕೆ ಹೋದ.
ಸುತ್ತ ಯಾರೂ ಇರಲಿಲ್ಲ. ಮೊದಲಿಗೆ ಗುಲಾಬಿ ಗಿಡಗಳಿದ್ದೆಡೆಗೆ ಹೋದ. ನಾನಾ ಬಣ್ಣಗಳ ಗುಲಾಬು ಹೂಗಳು ಅರಳಿದ್ದವು. ಕೂಲಂಕುಷವಾಗಿ ಏಕಾಗ್ರತೆಯಿಮ್ದ ಕೆಲಸ ಮಾಡಿ ತುಂಬಿದ ಬುಟ್ಟ್ಯನ್ನು ಹಿಡಿದು ಗುಲಾಬಿ ತೋಟದಿಂದ ನಡೆದ. ಗುಲಾಬಿ ತೋಟ ಬೋಡಾಗಿ ಪಾಳುಬಿದ್ದಿತ್ತು.
ಬಾಗಿಲು ತೆರೆಯುವ ಶಬ್ಧ ಕೇಳಿ ತಡಮಾಡದೆ ಶಾಲೆಗೆ ಹೊರಟ. ಆದಷ್ಟು ಯಾರ ಗಮನವೂ ಅವನ ಮೇಲೆ ಬೀಳದಂತೆ ನಡೆದು ಶಾಲೆ ಸೇರಿದ.
ಭಾನು ಮಿಸ್ ತಮ್ಮ ಕ್ಲಾಸ್ ಒಳಬರುತ್ತ ಸಾಮಾನ್ಯವಾಗಿ ತಮ್ಮ ಮೇಜಿನ ಮೇಲೆ ಇರುತ್ತಿದ್ದ ಮಲ್ಲಿಗೆ, ಸ್ಪಟೀಕ ಹೂಗಳ ಬದಲಿಗೆ ಆಗಲೆ ಬಾಡುತ್ತಿದ್ದ ಗುಲಾಬಿ ಹೂಗಳ ರಾಶಿ ನೋಡಿ ಬೆರಗಾದರು.
ವಲ್ಲೀಶ ಎಂದೂ ಅರ್ಧಂಬರ್ದ ಕೆಲಸ ಮಾಡಿದವನಲ್ಲ.
"ಅಯ್ಯೋ ದೇವರೆ!" ಎಂದರು ದಿಗ್ಭ್ರಾಂತಿಯಿಂದ
ವಲ್ಲೀಶನ ಮುಖ ಸಂತೋಶದಿಂದ ಕೆಂಪಾಯಿತು.
ಅಂದು ತನ್ನ ಬೆಂಚನ್ನು ಬದಲಾಯಿಸಿ ಮುಂದಿನ ಬೆಂಚಲ್ಲೇ ಕುಳಿತ. ದಿನವಿಡೀ ಭಾನು ಮಿಸ್ ಮುಖದಿಂದ ಕಣ್ಣು ಕೀಳದೆ ಅವರನ್ನೇ ದಿಟ್ಟಿಸಿ ನೋಡುತ್ತ, ಅವರನ್ನು ಕಳ್ಳ-ಕಾಕರಿಂದ ತಾನು ಬಚಾಯಿಸುತ್ತಿರುವುದನ್ನು (ಇಲ್ಲಿ ತಾನೇ ಕಳ್ಳ, ಖದೀಮರ ಪಾತ್ರ ಧಾರಿಯಾಗಿ ಸ್ವಲ್ಪ ಗೊಂದಲಬ್ವುಂಟಾಯಿತು), ಭಾನು ಮಿಸನ್ನು ತನ್ನ ತೋಳುಗಳಲ್ಲೆತ್ತಿಕೊಂಡು ಹೋಗುವುದನ್ನು ಕನಸು ಕಾಣುತ್ತ ಕುಳಿತ. ಭಾನು ಮಿಸ್ಸ್ ವಲ್ಲೀಶನನ್ನು ಪ್ರೀತಿ-ಕೃತಜ್~ಜತೆಗಳಿಂದ ಅವನನ್ನು ಆಲಿಂಗಿಸುತ್ತಿದ್ದಂತೆ ಕೋಟೆ ವೆಂಕಟರಮಣನ ಸನ್ನಿಧಾನದಲ್ಲಿ ಅವರಿಬ್ಬರ ವಿವಾಹವಾಯಿತು.
ವಲ್ಲೀಶ ಅರ್ಧ ಕೆಲಸವನ್ನು ಮಾಡುವಂಥವನಲ್ಲ. ಇವರ ಮದುವೆ ಇಲ್ಲವೇ ಕೋಟೆ ವೆಂಕಟರಮಣನ ಸನ್ನಿಧಾನದಲ್ಲಿ, ತಪ್ಪಿದರೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ. ಮದುವೆಯಲ್ಲಿ ತನ್ನಬಳಿ ಇದ್ದ ಖದೀಮನ ವೇಷ ಧರಿಸುವುದಾಗಿ ಯೋಚಿಸಿದ. ಉಹೂಂ - ಅದು ಎಂದೂ ಆಗದು...
"ಇಷ್ಟು ಹೊತ್ತೂ ನಾನೇನು ಹೇಳುತ್ತಿದ್ದೆ, ವಲ್ಲೀಶ? ಭಾನು ಮಿಸ್ ಅವನ ಕನಸಿನೊಳಗೆ ಪ್ರತ್ಯಕ್ಷ ಪ್ರವೇಶಿಸಿದರು.
ವಲ್ಲೀಶ ಒಮ್ಮೆ ಕೆಮ್ಮಿ, ಗಂಟಲು ಸರಿಪಡಿಸಿಕೊಂಡು ಭಾವಮಯವಾಗಿ ಅವರನ್ನು ನೋಡಿದ.
"ಅದೇ... ಸಾಲ ತೊಗೊಳ್ಳೋದು, ಕೊಡೋದು..." ಆಶೆಯಿಂದ ಹೇಳಿದ.
"ವಲ್ಲೀಶ!" ಕೋಪದಿಂದ ಹೇಳಿದರು ಭಾನು ಮಿಸ್ "ಇದು ಗಣಿತದ ಪಾಠವಲ್ಲ. ನಾನು ಸ್ವಾತಂತ್ರ್ಯ ಹೋರಾಟದ ಬಗ್ಗೆ ಪಾಠ ಮಾಡ್ತಿದ್ದೆ"
"ಒಹ್ ಅದಾ.." ಜ್~ಜಾನೋದಯವಾದವನಂತೆ ನಿರಾತಂಕದಿಂದ ಹೇಳಿದ "ಹೂ.. ಹೌದು ಹೌದು"
"ಸರಿ ಹಾಗಿದ್ರೆ, ಅದರ ಬಗ್ಗೆ ಏನಾದ್ರು ಹೇಳು"
"ಅದರ್ ಬಗ್ಗೆ ನಂಏನು ಗೊತ್ತಿಲ್ಲ... ಇನ್ನೂವೆ.."
"ಅಷ್ಟ್‌ಹೊತ್ತ್‌ನಿಂದ ಹೇಳ್ತಿದ್ದೀನಿ. ಕೇಳಿಸ್ಕೊಂಡ್ರೆ ತಾನೆ" ಹೀಯಾಳಿಸಿದರು ಭಾನು ಮಿಸ್.
ವಲ್ಲೀಶನ ಉತ್ಸಾಹ ಕುಗ್ಗದಿದ್ದರೂ, ಸಧ್ಯಕ್ಕೆ ತನ್ನ ಮೌನ ಕನಸಿನ ಲೋಕಕ್ಕೆ ಹಿಂತಿರುಗಿದ.
ಸಂಜೆ ಮನೆ ತಲುಪಿದಾಗ ಮನೆಯ ತೋಟದಲ್ಲಿ ತುಮುಲ ಚಟುವಟಿಕೆಗಳನ್ನು ಗಮನಿಸಿದ. ಪೋಲೀಸ್ ಪೇದೆಯೊಬ್ಬ ನೆಲದಲ್ಲಿದ್ದ ಹೆಜ್ಜೆ ಗುರುತನ್ನು, ಪಕ್ಕದಲ್ಲಿದ್ದ ಕಿಟಕಿಯನ್ನು ಅಳಿಯುತ್ತಿದ್ದ. ಮತ್ತೊಬ್ಬ ಅತ್ತಿತ್ತ ಠಳಾಯಿಸುತ್ತಿದ್ದ. ವಲ್ಲೀಶನ ೧೮ ವರ್ಷ ವಯಸ್ಸಿನ ಅಕ್ಕ ಈಶ್ವರಿ, ಬಾಗಿಲ ಬಳಿ ನಿಂತಿದ್ದಳು.
"ಯಾರೋ ತೋಟದೊಳ್ಗಿಂದ ಒಂದೊಂದು ಗುಲಾಬಿನೂ ಕದ್ದ್ಕೊಂಡ್ ಹೋಗಿದ್ದಾರೆ ಇವತ್ತು ಬೆಳಗ್ಗೆ" ಉದ್ರೇಕದಿಂದ ಹೇಳಿದಳು. "ಈಗಷ್ಟೇ ಪೋಲೀಸರು ಬಂದಿದ್ದಾರೆ. ವಲ್ಲೀಶ ನೀನೇನಾದ್ರೂ ನೋಡಿದ್ಯೇನೋ ಬೆಳಗ್ಗೆ ಶಾಲೆಗೆ ಹೋಗ್ತಾ?"
ವಲ್ಲೀಶ ಆಳವಗಿ ಯೋಚಿಸಿದ. ಮುಗ್ಧ ಭಾವ ಅವನ ಮುಖವನ್ನು ಆವರಿಸಿತು.
"ಇಲ್ಲ" ಕೊನೆಗೆ ಹೇಳಿದ. "ಇಲ್ವೆ ಅಕ್ಕ, ನಾನ್ಯಾರನ್ನೂ ನೋಡ್ಲಿಲ್ಲ"
ಒಮ್ಮೆ ಕೆಮ್ಮಿ, ಗಂಟಲು ಸರಿಪಡಿಸಿಕೊಂಡು ಸದ್ದಿಲ್ಲದೆ ಮಾಯವಾದ.
ಅಂದು ಸಂಜೆ ತನ್ನ ಕೋಣೆಯಲ್ಲಿ ಪುಸ್ತಕಗಳನ್ನೆಲ್ಲ ಹರಡಿಕೊಂಡು, ಮುಖಕ್ಕೆ ನಿರ್ಣಾಯಕ ಗಂಟಿಕ್ಕಿ ಓದಲು ಕುಳಿತ.
ವಲ್ಲೀಶನ ಅಪ್ಪ ಹೊರಗೆ ವರಾಂಡಾದಲ್ಲಿ ಕಿಟಕಿಯ ಬಳಿ ತಂಗಾಳಿ ಸೇವಿಸುತ್ತ ಸಂಜೆಯ ಪತ್ರಿಕೆಯನ್ನು ಓದುತ್ತ ಕುಳಿತಿದ್ದರು.
"ಅಪ್ಪ" ಧಿಡೀರನೆ ವಲ್ಲೀಶನ ಕರ್ಕಶ ಧ್ವನಿ ಸಂಜೆಯ ಶಾಂತಿಯನ್ನು ಭೇದಿಸಿ ಬಂತು "ನಾನ್ ನಿಮ್ಮ್ ಹತ್ರ ಬಂದು ನನ್ಗೆ ನೂರ್ ರುಪಾಯ್ ಕೊಡಿ, ನಾನ್ ಮುಂದಿನ್ ವರ್ಷ ನಿಮ್ಗೆ ಐದ್ ರುಪಾಯ್, ಅದ್ರ್ ಮುಂದಿನ್ ವರ್ಷ ಐದ್ ರುಪಾಯ್ ಹಾಗೇ ಕೊಡ್ತಿರ್ತೀನಿ ಅಂದ್ರೆ ನೂರ್ ರುಪಾಯ್ ಕೊಡ್ತೀರ?"
"ಕೊಡೋದಿಲ್ಲ, ನನ್ನ ಕುಮಾರ ಕಂಠೀರವನೆ" ಧೃಡವಾಗಿ ಹೇಳಿದರು ಅವರಪ್ಪ. ವಲ್ಲಿಶ ಉದ್ಗಾರದ ಉಸಿರೆಳೆದ.
"ಏನೋ ಎಡವಟ್ಟಿದೆ ಇದ್ರಲ್ಲಿ ಅಂತ ಗೊತ್ತೇ ಇತ್ತು" ಎಂದ
"ಅಪ್ಪಾ, ಸ್ವಾತಂತ್ರ್ಯ ಹೋರಾಟ ಯಾವಾಗ್ ಆಯ್ತು?"
"ಅಯ್ಯೋ ರಾಮ! ನನಗ್ಗೊತ್ತಿಲ್ಲ ಹೋಗೋ. ನಾನಿರ್ಲಿಲ್ಲ. ಪೇಪರ್ ಓದಕ್ಕ್ ಬಿಡು ನನ್ನ"
ವಲ್ಲೀಶ ಮತ್ತೊಂದು ನಿಟ್ಟುಸಿರನ್ನು ತೆಗೆದ.
"ಹೋರಾಟ ಯಾವಾಗ್ ಆಯ್ತು, ಸ್ವಾತಂತ್ರ್ಯ ಯಾವಗ್ ಬಂತು ಅಂತ ತಿಳ್ಕೊಳಕ್ ಪ್ರಯತ್ನ ಪಡ್ತಿದೀನಿ"
ಅಪ್ಪ ತಮ್ಮ ಪತ್ರಿಕೆಯನ್ನೆತ್ತಿಕೊಂಡು ಮನೆಯೊಳಗೆ ಮಾಯವಾದರು.
ಇನ್ನೇನು ಮುಖ ಪುಟ ಓದಿ ಮುಗಿಸಿದ್ದರು ಅಷ್ಟು ಹೊತ್ತಿಗೆ ವಲ್ಲೀಶ ಸದ್ದಿಲ್ಲದೆ ತನ್ನ ಪುಸ್ತಕಗಳನ್ನೆತ್ತಿಕೊಂಡು ಬಂದು ಅವರ ಬಳಿ ಕುಳಿತ.
"ಅಪ್ಪ, 'ನನ್ನ ಅತ್ತೆ ಹೂದೋಟದಲ್ಲಿ ನಡೆಯುತ್ತಿದ್ದಾರೆ' ಅನ್ನಕ್ ಹಿಂದೀಲಿ ಏನಪ್ಪ?
"ಏನ್ ಮಾಡ್ತಿದ್ದೀಯೋ ನೀನು" ಕಿಡಿಕಿಡಿಯಾದರು ಅಪ್ಪ.
"ಶಲೆಲ್ ಕೊಟ್ಟ ಮನೆ ಕೆಲ್ಸ ಮಾಡ್ತಿದೀನಿ" ಸದ್ಗುಣಿಯಂತೆ ನುಡಿದ ವಲ್ಲೀಶ.
"ಮನೆ ಕೆಲಸ ಬೇರೆ ಇರತ್ತೆ ನಿನಗೆ ಅಂತ ಗೊತ್ತೇ ಇರ್ಲಿಲ್ಲ"
"ಉಹೂಂ" ಮೆಲ್ಲಗೆ ಉಸುರಿದ ವಲ್ಲೀಶ "ದಿನಾಗ್ಲು ನಾನ್ ತುಂಬ ಕಷ್ಟ ಪಡಲ್ಲ ಮನೆ ಕೆಲ್ಸಕ್ಕೆ. ಆದ್ರೆ ಇನ್ಮೇಲಿಂದ ಮಾಡ್ತೀನಿ... ಯಾಕೇಂದ್ರೆ ಭಾನು ಮಿಸ್" ಮುಖ ಕೆಂಪಾಗಿ ತಡವರಿಸಿದ "ಯಾಕೇಂದ್ರೆ ಭಾನು ಮಿಸ್" ಮುಖ ಮತ್ತಷ್ಟು ಕೆಂಪಾಗಿ, ನಾಚಿ ತೊದಲ ತೊಡಗಿದ "ಯಾ - ಯಾಕೇಮ್ದ್ರೆ ಬ್- ಬ- ಭಾನು ಮಿಸ್" ಕೊನೆಗೆ ನಡುಗಿ ಮೂರ್ಛೆ ಬೀಳುವುದೊಂದು ಬಾಕಿ.
ಅಪ್ಪ ತಮ್ಮ ಪತ್ರಿಕೆಯನ್ನು ಕೈಗೆತ್ತಿಕೊಂಡು ಅಡುಗೆ ಮನೆಗೆ ಹೋದರು. ಅಲ್ಲಿ ಅವರ ಪತ್ನಿ ಅಡುಗೆ ಮಾಡುತ್ತಿದ್ದರು.
"ವಲ್ಲೀಶನಿಗೆ ತಲೆ ಪೂರ್ತಿ ಕೆಟ್ಟು ಹುಚ್ಚ ಆಗಿದ್ದಾನೆ" ವಿನೋದದಿಂದ ಹೇಳಿದರು ಕುಳಿತುಕೊಳ್ಳುತ್ತ. "ಏನೋ ವಿದ್ಯೆ ಕಂಡ್ರೆ ಎಲ್ಲಿಲ್ಲದ್ ಪ್ರೀತಿ, ಯಾರೋ ಭಾನುನೋ ಮೋನುನೋ ಯಾರೋ ಮಿಸ್ ಬಗ್ಗೆ ಗೊಣಗ್ತಾ ಇದಾನೆ. ಅವನಷ್ಟಕ್ಕೆ ಅವನನ್ನೇ ಬಿಟ್ರೆ ಒಳ್ಳೇದು"
ವಲ್ಲೀಶನ ಅಮ್ಮ ಮುಗುಳ್ನಕ್ಕು ಕೆಲಸ ಮುಂದುವರೆಸಿದರು.
ಇನ್ನೇನು ಒಂದು ಪುಟ ಮುಗಿಸಿ ಮುಂದಿನ ಪುಟಕ್ಕೆ ಹೋಗ ಬೇಕು ಅಷ್ಟು ಹೊತ್ತಿಗೆ ವಲ್ಲೀಶ ಪುನಃ ಮುಖಕ್ಕೆ ಗಂಟಿಕ್ಕೆ ಕಡಾಕಡಿಯಾಗಿ ಬಾಗಿಲಲ್ಲಿ ನಿಂತು ಕೇಳಿದ
"ಅಪ್ಪ, ಹಾಲೆಂಡ್ ದೇಶದ ರಾಜಧಾನಿ ಯಾವುದು?"
"ಅಯ್ಯೋ ದೇವರೆ!" ಅಪ್ಪ ಗಟ್ಟಿಯಾಗಿ ಹೇಳಿದರು. "ಅವನಿಗೆ ಪುಸ್ತಕಗಳೋ ಏನಾದ್ರು ಕೊಡಿಸು. ಏನಾದ್ರು! ಏನುಬೇಕಾದ್ರು! ನನ್ನನೇನ್ ಅಂದ್ಕೊಂಡಿದಾನೆ ಅವ್ನು? ನಾನೇನ್..."
"ಇನ್ಮೇಲೆ ಅವನ ಓದಿಗೆ ಅಂತಲೇ ಒಂದು ಬೇರೆ ಕೋಣೆ ಮಾಡಿದ್ರಾಯಿತು" ಅಮ್ಮ ಸಮಜಾಯಿಷಿ ಹೇಳುತ್ತ ನುಡಿದರು. "ಅವನು ಓದಿನಲ್ಲಿ ಇಷ್ಟೊಂದು ಅಭಿರುಚಿ ತೋರಿಸ್ತಿದ್ದಾನೆ ಅಂದ್ಮೇಲೆ"
"ಕೋಣೆ!" ಅಪ್ಪ ಕಟುವಾಗಿ ಪ್ರತಿಧ್ವನಿಸಿದರು "ಕೋಣೆಯಲ್ಲ ಅವನಿಗೆ ಇಡೀ ಮನೇನೆ ಬೇಕು"
ಮಾರನೆಯ ದಿನ ಕ್ಲಾಸಿನಲ್ಲಿ ವಲ್ಲೀಶನ ಗಮನ ಹಾಗು ಮುತುವರ್ಜಿಗಳನ್ನು ನೋಡಿ ಭಾನು ಮಿಸ್‌ಗೆ ಆಶ್ಚರ್ಯ ಹಾಗು ಸಹಾನುಭೂತಿ ಭಾವನೆಗಳುಂಟಾದವು. ಶಾಲೆ ಮುಗಿದ ನಂತರ ವಲ್ಲೀಶ ಪ್ರೀತಿಯಿಂದ ಅವರ ಪುಸ್ತಕಗಳನ್ನು ಅವರ ಮನೆಯವರೆಗೆ ಎತ್ತಿಕೊಂಡು ಹೋಗುವ ನಿವೇದನೆ ಮಾಡಿದನು. ಅವರು ಬೇಡವೆಂದರೂ ಕೇಳಲಿಲ್ಲ. ರಮಣೀಯವಾಗಿ ವಾರ್ತಾಲಾಪ ಮಾಡುತ್ತ, ಅವನ ಹುಡುಗು ಮುಖದಲ್ಲಿ ಸಂತೋಷದ ಛದ್ಮ ಧರಿಸಿ ಅವರ ಪಕ್ಕದಲ್ಲೇ ನಡೆದು ಅವರ ಮನೆ ಕಡೆಗೆ ಹೊರಟ.
"ನನಗೆ ಕೇಡಿಗರು ಅಂದ್ರೆ ತುಂಬ ಇಷ್ಟ, ನಿಮಗೆ ಮಿಸ್? ಕೇಡಿಗರು, ಕಳ್ಳರು ಅಂಥವರು? ಮಿಸ್ ನೀವು ಒಬ್ಬ ಕಳ್ಳನ್ನ ಮದ್ವೆ ಮಾಡ್ಕೊತೀರಾ?"
ಕಳ್ಳನಾಗುವ ತನ್ನ ಹಳೆ ಕನಸಿನೊಂದಿಗೆ ಭಾನು ಮಿಸ್ ಪತಿಯಾಗುವ ತನ್ನ ಹೊಚ್ಚ ಹೊಸ ಕನಸನ್ನು ಮಿಶ್ರಣ ಮಾಡಲು ಪ್ರಯತ್ನಿಸುತ್ತಿದ್ದ.
"ಇಲ್ಲ" ಧೃಡವಾಗಿ ನುಡಿದರು ಭಾನು ಮಿಸ್.
ವಲ್ಲೀಶನ ಉತ್ಸಾಹ ಕುಗ್ಗಿ ಠುಸ್ಸಾಯಿತು.
"ಕೇಡಿಗನ್ ಜೊತೆ?" ದುಃಖದಿಂದ ನುಡಿದ.
"ಇಲ್ಲ"
"ಡಕಾಯಿತ್ರು ಒಳ್ಳೆಯವ್ರೇ..." ಅವರಿಗೆ ಧೈರ್ಯ ಕೊಡಲು ಯತ್ನಿಸಿದ.
"ಸಧ್ಯ ಸುಮ್ಮನಿರು"
"ಸರಿ," ರಾಜಿ ಮಾಡಿಕೊಳ್ಳುವನಂತೆ ಹೇಳಿದ "ಹಾಗಿದ್ರೆ ನವು ಕಾಡ್ ಪ್ರಾಣಿಗ್ಳನ್ನ, ಪಕ್ಷಿಗ್ಳನ್ನ ಬೇಟೆ ಆಡ್ಬೇಕಷ್ಟೆ. ಪರ್ವಾಗಿಲ್ಲ ಬಿಡಿ"
"ಯಾರು" ವಿಭ್ರಾಂತರಾದರು ಭಾನು ಮಿಸ್
"ಕಾಯ್ದ್ ನೋಡಿ ನೀವು" ನಿಗೂಢವಾಗಿ ನುಡಿದ
ನಂತರ "ನೀವು ಕೋಟೆ ವೆಂಕಟರಮಣ ದೇವಸ್ಥಾನ್ದಲ್ಲಿ ಮದ್ವೆ ಮಾಡ್ಕೊತೀರೋ ಇಲ್ಲ ತಿರುಪತಿ ತಿಮ್ಮಪ್ಪನ್ ದೇವಸ್ಥಾನ್ದಲ್ಲೋ"
"ಕೋಟೆ ವೆಂಕಟರಮಣನೇ ಸಾಕು ಅನ್ನಿಸುತ್ತೆ" ಗಂಭೀರವಾಗಿ ನುಡಿದರು. ಅವನು "ಹೂಂ" ಎನ್ನುವಂತೆ ತಲೆದೂಗಿದನು
"ಸರಿ ಹಾಗಿದ್ರೆ"
ಭಾನು ಮಿಸ್‌ಗೆ ವಿನೋದಾಭಾಸವಾಯಿತು. ಆದರೆ ಮಾರನೆಯ ದಿನ ಆ ವಿನೋದಾಭಾಸ ಕಡಿಮೆಯಾಗಿತ್ತು. ಭಾನು ಮಿಸ್ ಅತ್ತೆ ಮಗ ಒಬ್ಬರಿದ್ದರು. ಅವರೊಂದಿಗೆ ಭಾನು ಮಿಸ್ ಆಗಾಗ ಸಂಜೆ ಹೊತ್ತಿನಲ್ಲಿ 'ವಾಕಿಂಗ್' ಹೋಗುತ್ತಿದ್ದರು. ಇಂದು ಸಂಜೆ ಅಕಸ್ಮಾತ್ ಅವರು ವಲ್ಲೀಶನ ಮನೆಯ ಮುಂದೆ ನಡೆದು ಹೋದರು. ಆಚೆ ಅಂಗಳದಲ್ಲಿ ಆಡುತ್ತಿದ್ದ ವಲ್ಲೀಶ ತನ್ನ ಖದೀಮನ ಪಾತ್ರವನ್ನು ಪಕ್ಕಕ್ಕೆಸೆದು, ಹರ್ಷದಿಂದ ಭಾನು ಮಿಸ್ ಮತ್ತೊಂದು ಪಕ್ಕದಲ್ಲಿ ನಡೆದು ಹೊರಟ. ಚರ್ಚೆಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ. ಅತ್ತೆ ಮಗ ಯಾಕೋ ವಲ್ಲೀಶನಿಗೆ ಕುಮ್ಮಕ್ಕು ಕೊಡುತ್ತಿರುವುದನ್ನು ನೋಡಿ ಭಾನು ಮಿಸ್‌ಗೆ ಮತ್ತಷ್ಟು ಕೋಪ ಬಂತು. ಭಾನು ಮಿಸ್ ಒತ್ತೊತ್ತಿ ತೋರಿದ ಸಂಕೇತಗಳನ್ನು ಕಡೆಗಾಣಿಸಿ ಹೋಗುತಲಿದ್ದ, ವಲ್ಲೀಶ. ಮಾತನಾಡಲು ಬಹಳಷ್ಟು ವಿಚಾರಗಳನ್ನಿಟ್ಟುಕೊಂಡಿದ್ದ. ಕೇಳಿಸಿಕೊಳ್ಳುವವರು ವಿಸ್ಮೃತರಾಗಿ ಇವನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದಾರೆಂಬುವಂತೆ ವಿಚಾರಧಾರೆ ಹರಿಸ ತೊಡಗಿದ. ನೆನ್ನೆಯ ದಿನ ಸತ್ತ ಇಲಿಯೊಂದು ಕೈಗೆ ಸಿಕ್ಕಿತ್ತು. ಅದನ್ನು ತನ್ನ ನಾಯಿಗೆ ಕೊಟ್ಟಿದ್ದ. ನಾಯಿಗೆ ಅದು ಹಿಡಿಸಲಿಲ್ಲ - ಪಕ್ಕದ ಮನೆ ಬೆಕ್ಕೂ ಅದನ್ನು ಮೂಸಲಿಲ್ಲ, ಕೊನೆಗೆ ಅದನ್ನು ಹುಗಿದುಬಿಟ್ಟ. ಭಾನು ಮಿಸ್‌ಗೆ ತಾನು ತಂದು ಕೊಟ್ಟ ಹೂಗಳು ಇಷ್ಟವಾದವೆ? ಸಧ್ಯಕ್ಕೆ ಪುನಃ ಅದೇ ರೀತಿ ಹೂವುಗಳನ್ನು ತರಲಾರ. ಕಡಲ್ಗಳ್ಳರು ಈಗಿನ ಕಾಲದಲ್ಲೂ ಇದ್ದರ್ಯೆ? ಅಕಸ್ಮಾತ್ ಕಡಲ್ಗಳ್ಳರರಿದ್ದರೆ ಜನ ಏನು ಮಾಡಿಯಾರು? ಈ ಕಾಲದಲ್ಲಿ ಏಕಿರಬಾರದು? ತಾನೇ ಒಬ್ಬ ಕಡಲ್ಗಳ್ಳನಾಗಿ ಪುನಃ ಆ ವೃತ್ತಿಯನ್ನು ಆರಂಭಿಸುವನು. ಒಂದು ದಿನ ಹುಲಿಯ ಬೇಟೆ ಆಡುವವನು ತಾನು. ಭಾನು ಮಿಸ್‌ಗೆ ಇಷ್ಟವಿದ್ದರೆ ಅದರ ಚರ್ಮ ತಂದು ಕೊಡುವುದಾಗಿ ಹೇಳಿದ. ನಂತರ ಸ್ವಲ್ಪ ದುಡುಕು ಉದಾರತನ ಹೆಚ್ಚಾಯಿತು. ಹತ್ತಾರು ಪ್ರಾಣಿಗಳ ಚರ್ಮವನ್ನು ಮನೆಗೆ ತಂದು ಭಾನು ಮಿಸ್‌ಗೆ ಕೋಡುವುದಾಗಿ ಹೇಳಿದ.
"ನೀನು ಮನೆಗೆ ಹೋಗುವ ಸಮಯ ಆಗ್ಲಿವೇ, ವಲ್ಲೀಶ?" ಭಾನು ಮಿಸ್ ಸ್ವಲ್ಪ ಕಿಡಿಕಿಡಿಯಾಗಿ ಕೇಳಿದರು.
ವಲ್ಲೀಶ ಠಕ್ಕನೆ ಅವರ ಭೀತಿ ನಿವಾರಿಸಿದ "ಓಹ್! ನನಗೇನೂ ಅರ್ಜೆಂಟಿಲ್ಲ. ಎಷ್ಟೊತ್ತಿಗ್ ಹೋದ್ರೂ ಪರ್ವಾಗಿಲ್ಲ"
ಅತ್ತೆ ಮಗ ಯಾಕೋ ಅವನಿಗೆ ಇನ್ನೂ ಕುಮ್ಮಕ್ಕು ಕೊಡುವಂತೆ ಕಾಣಿಸಿತು.
"ನೀನು ಮಲಗೋ ಸಮಯವಾಗಿಲ್ವೇ?"
"ಓಹ್! ಇಲ್ಲ... ಇನ್ನೂ ಇಲ್ಲ... ಇನ್ನೂ ಸುಮಾರ್ ಹೊತ್ತಿದೆ ನಾನ್ ಮಲಗಕ್ಕೆ"
"ಭಾನು ಮಿಸ್ ಶಾಲೆಲಿ ನಿನಗೇನ್ ಹೇಳ್ಕೊಡ್ತಾರೆ, ವಲ್ಲೀಶ?" ಅತ್ತೆ ಮಗ ಕೇಳಿದರು.
"ಓ-ಓಹ್ ಏನೇನೋ ಹೇಳ್ಕೊಡ್ತಾರೆ. ಸ್ವಾತಂತ್ರ್ಯ ಅಂತೆ, ನೂರ್ ರುಪಾಯ್ ಸಾಲ ಅಂತೆ. ಅದಂತೂ ಸಕತ್ ಪೆದ್ದ್‌ತನ. ನನಗರ್ಥ ಆಗಿದೆ" ಅಷ್ಟರಲ್ಲೆ ಸಮಾಧಾನ ಹೇಳಿದ. "ಆದ್ರೆ ನಿಜ್ವಾಗ್ಲೂ ಪೆದ್ದ್‌ತನನೇ. ನಮ್ಮಪ್ಪನೂ ಹಾಗೇ ಅಂದ್ರು - ಅವ್ರಿಗೆ ಗೊತ್ತಿರತ್ತೆ - ಫಾರಿನ್‌ಗೆಲ್ಲ ಹೋಗ್ಬಂದಿದಾರೆ. ಒಂದ್ ಸರ್ತಿ ಗೂಳಿ ಅಟ್ಟಿಸ್ಕೊಂಡ್ ಬಂದಿತ್ತಂತೆ ನಮ್ಮಪ್ಪನ್ನ..."
ವಲ್ಲೀಶ ತನ್ನ ಗಟ್ಟಿ ಧ್ವನಿಯಲ್ಲಿ ಭಾಷಣ ಭಿಗಿಯುತ್ತಾ ಭಾನು ಮಿಸ್ ಮನೆಯ ಬಳಿ ಬರುವಷ್ಟು ಹೊತ್ತಿಗೆ ಕತ್ತಲಾಗುತ್ತಿತ್ತು. ಅವನಿಗೆ ಸಾಧನೆಯ ಮದವೇರಿತ್ತು. ಆರಾಧ್ಯ ದೇವಿಯ ಮೌನವನ್ನು ಆಕೆಗೆ ಇವನಲ್ಲಿ ಇರುವ ಮೆಚ್ಚಿಕೆಯಾಗಿ ಕಂಡ.
ಭಾನು ಮಿಸ್ ಮತ್ತು ಅತ್ತೆ ಮಗನೊಡನೆ ಇನ್ನೇನು ಭಾನು ಮಿಸ್ ಮನೆಯೊಳಗೆ ಹೋಗಬೇಕಿತ್ತು ಅಷ್ಟರಲ್ಲಿ ಭಾನು ಮಿಸ್ ಅವನನ್ನು ತಡೆಗಟ್ಟಿ "ಇನ್ನು ನೀನು ಮನೆಗೆ ಹೋಗು, ವಲ್ಲೀಶ" ಎಂದು ಹೇಳಿ ಬಾಗಿಲನ್ನು ಮುಚ್ಚಿದರು.
ವಲ್ಲೀಶ ಕೊಂಚ ತಬ್ಬಿಬ್ಬಾದ.
"ನಾನೂ ಒಳಗ್ ಬರ್ತೀನಿ" ಎಂದ "ನನಗೇನು ಬೇಜಾರಿಲ್ಲ, ಸುಸ್ತೂ ಆಗಿಲ್ಲ"
ಆದರೆ ಭಾನು ಮಿಸ್ ಮತ್ತು ಅತ್ತೆ ಮಗ ಮನೆಯೊಳಗೆ ಮಾಯವಾಗಿದ್ದರು.
ವಲ್ಲೀಶ ಮನೆ ಕಡೆ ಹೆಜ್ಜೆ ಹಾಕಿದ. ಬಾಗಿಲಲ್ಲಿ ಅಕ್ಕ ಈಶ್ವರಿಯನ್ನು ಕಂಡ.
"ಎಲ್ಲಿಗ್ಹೋಗಿದ್ಯೋ, ವಲ್ಲೀಶ? ಎಷ್ಟ್ಹೊತ್ತಿಂದ ನಿನ್ನ ಹುಡ್ಕ್ತಾ ಇದೀನಿ. ಹೋಗ್ ಮಲಕ್ಕೋ - ನೀನ್ ಮಲ್ಗೋ ಟೈಮ್‌ಆಗಿ ಎಷ್ಟೋ ಹೊತ್ತಾಯ್ತು"
"ಭಾನು ಮಿಸ್ ಜೊತೆ ವಾಕಿಂಗ್ ಹೋಗಿದ್ದೆ"
"ಸರಿ, ಅದಕ್ಕೆ? ಮಲ್ಗೋ ಟೈಮ್ ಆದಾಗ್ ಮನೆಗ್ ಬರ್ಬೇಕು"
"ಅವರ್ಗೆ ನಾನ್ ಬರೋದ್ ಇಷ್ಟ ಇರ್ಲಿಲ್ಲ." ಘನತೆ ಹುಟ್ಟಿಸಿಕೊಂಡು ಹೇಳಿದ "ಹಾಗ್ ಬರೋದು ಸಭ್ಯರ ಲಕ್ಷಣ ಅಲ್ಲ" ಎಂದು ಒಂದು ತಿರುಗು ಬಾಣವನ್ನು ಬಿಟ್ಟ
ವಲ್ಲೀಶನ ಜೀವನದಲ್ಲಿ ಹೊಚ್ಚ ಹೊಸ ಗಾಂಭೀರ್ಯ ಪ್ರವೇಶಿಸಿತ್ತು. ಆದರೆ ಅದು ತನ್ನ ಜೊತೆಗೆ ಹಲವು ಅನಾನುಕೂಲಗಳನ್ನೂ ತಂದಿತ್ತು. ಶಾಲೆಯಲ್ಲಿನ ಪಾಠದ ವೇಳೆಯಲ್ಲಿ ಹೊತ್ತು ಕಳೆಯಲು ಹೂಡಿಕೊಂಡಿದ್ದ ಮನರಂಜನೆ ಕಾರ್ಯಕ್ರಮಗಳು ಕೈ ಬಿಡಲೊಲ್ಲಾದವು. ಭಾನು ಮಿಸ್‌ನ ಆರಾಧಕನಾಗಿದ್ದರೂ, ಕಳೆದ ಜನ್ಮದ ನಿರಾತಂಕ ಹುಮ್ಮಸ್ಸು ಅವನನ್ನು ಕೂಗಿ ಕರೆಯುತ್ತಿತ್ತು. ಆದರೂ ಕಷ್ಟ ಪಟ್ಟು ತನ್ನ ಮೊದಲ ಬೆಂಚ್‌ನ ಸ್ಥಳಕ್ಕಂಟಿಕೊಂಡು ಶ್ರದ್ಧಾತ್ಮಕ ವಿಧ್ಯಾರ್ಥಿಯ ಪಾತ್ರ ನಿರ್ವಹಿಸಲಾರಂಭಿಸಿದ್ದ. ಶಾಲೆಯ ನಂತರ ಮಾಡಬೇಕಾಗಿದ್ದ ಮನೆ-ಪಾಠಗಳು ಅವನ ಶಾಲೆಯ ನಂತರದ ಕಾರ್ಯಕರಮಗಳನ್ನು ಸೀಮಿತಗೊಳಿಸಿದ್ದವು. ಆದರೂ ಎಡಬಿಡದೆ ಕಚ್ಚಿಕೊಂಡಿದ್ದ. ಭಾನು ಮಿಸ್ ಪಾಠ ಕ್ಲಾಸಿನ ಮುಂದೆ ಕುಳಿತು ಮಾಡುತ್ತಿರಲು ವಲ್ಲೀಶನ ಭಾವಮಯ, ಏಕಾಗ್ರ ನೋಟ ಅವರಿಗೆ ಮುಜುಗರ ಉಂಟುಮಾಡಿಸಿದರೆ, ಅವನು ಕೇಳುತ್ತಿದ್ದ ಪ್ರಶ್ನೆಗಳು ಪೀಕಲಾಟಕ್ಕೆ ಸಿಕ್ಕಿಸುತ್ತಿದ್ದವು.
ಶಾಲೆಯಿಂದ ಹೀಗೆ ಹೊರಹೋಗುತ್ತಿದ್ದಾಗ ಭಾನು ಮಿಸ್ ಮತ್ತೊಬ್ಬ 'ಮಿಸ್' ಜೊತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ.
"ನನಗೆ ಮಲ್ಲಿಗೆ ಹೂವ್‌ಗಳನ್ ಕಂಡ್ರೆ ಬಹಳ ಇಷ್ಟ" ಎನ್ನುತ್ತಿದ್ದರು "ಅದರ ಘಮ ನೋಡ್ತಿದ್ರೆ ಆಹಾ..."
ಸರಿ ಮತ್ತೇನು? ವಲ್ಲೀಶ ಭಾನು ಮಿಸ್‌ಗೆ ಕೈತುಂಬ, ಬುಟ್ಟಿ ತುಂಬ ಮಲ್ಲಿಗೆ ಹೂಗಳನ್ನು ತರುವ ನಿರ್ಧಾರ ಮಾಡಿದ.
ನೇರವಾಗಿ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾಲಿಯ ಬಳಿ ಹೋದ.
"ಹಿಲ್ರ ಸಣ್‌ಬುದ್ದಿ - ನಮ್ ತೋಟ್ದಾಗ್ ಮಲ್ಗಿ ಊವ್ ಹಿಲ್ರ. ಹಲ್ಲಿ ಗುಲಾಬಿ ಗಿಡದ್ ಪಾತಿ ಮೇಲಿಂದ್ ಜರ್ಕಳಿ. ಹಿಲ್ರ ನಿಮ್ ಮನಿ ತೋಟ್ದಾಗ್ ಮಲ್ಗಿ ಊವ್ ಹಿಲ್ರ. ನನ್ಗೇನ್ ಗೊತ್ತೈತಿ? ನಿಮ್ ಹಮ್ಮನ್ ಕೇಳಿ. ಕೈ ಬಿಡಿ ಆ ನೀರಿನ್ ಪೈಪ, ಸಣ್ ಬುದ್ದಿ."
'ಹೋ' ತೃಣೀಕರಿಸುವ ಧ್ವನಿಯಲ್ಲಿ ಹೇಳುತ್ತ, ತಿರುಗಿ ಹೊರಟು ಹೋದ.
ಮನೆ ತೋಟದ ಸುತ್ತ ಹೋದ - ಮಾಲಿ ಹೇಳಿದ್ದು ನಿಜವೇ ಎಂದು ಗೊತ್ತಾಯಿತು. ಎಲ್ಲೆಲ್ಲೂ ಗುಲಾಬಿ ಹೂಗಳು ಕಂಡವು, ಆದರೆ ಮಲ್ಲಿಗೆ ಹೂವುಗಳ ಸುಳಿವೇ ಇರಲಿಲ್ಲ.
ಮೋಟು ಗೋಡೆ ಹತ್ತಿ ಪಕ್ಕದ ಮನೆ ಅಂಗಳ ನೋಡಿದ. ಅಲ್ಲಿಯೂ ಬರೀ ಗುಲಾಬೀ ಹೂಗಳೇ, ಮಲ್ಲಿಗೆ ಹೂಗಳಿರಲೇ ಇಲ್ಲ. ನೆಲದಲ್ಲೇನೋ ಎಡವಟ್ಟಿರಬೇಕೆಂದು ಕೊಂಡ.
ಮೆಲ್ಲಗೆ ನಡೆಯುತ್ತ, ಎಲ್ಲ ಮನೆಗಳ ಅಂಗಳಗಳನ್ನು ಇಣುಕಿ ನೋಡುತ್ತ ರಸ್ತೆಯುದ್ದಕ್ಕೂ ಹೋದ. ಎಲ್ಲೆಲ್ಲೂ ಗುಲಾಬಿಗಳೇ, ಮಲ್ಲಿಗೆ ಎಲ್ಲಿಯೂ ಇರಲಿಲ್ಲ.
ಇದ್ದಕ್ಕಿದ್ದಂತೆ ಒಮ್ಮೆಲೇ ನಿಂತ.
ರಸ್ತೆಯ ಮೂಲೆಯಲ್ಲಿದ್ದ ಒಂದು ಮನೆಯಲ್ಲಿ ಒಂದು ಸಣ್ಣ ಕುಂಡದಲ್ಲಿ ಬೆಳೆಸಿದ್ದ ಮಲ್ಲಿಗೆ ಗಿಡ ಕಿಟಕಿಯಿಂದ ಕಾಣಿಸುತ್ತಿತ್ತು. ಆ ಮನೆಯ ನಿವಾಸಿಗಳಾರೆಂದು ವಲ್ಲೀಶನಿಗೆ ಗೊತ್ತಿರಲಿಲ್ಲ. ಮೆಲ್ಲಗೆ ಗೇಟ್ ತೆಗೆದು ಅಂಗಳದಲ್ಲಿ ಹೊಕ್ಕ. ಸುತ್ತ ಯಾರೂ ಇದ್ದಂತೆ ಕಾಣಿಸಲಿಲ್ಲ.
ಬಾಗಿಲು ತೆರೆದೇ ಇತ್ತು. ಬಗ್ಗಿ ನೋಡಿದ, ನರಪಿಳ್ಳೆಯೂ ಇರಲಿಲ್ಲ.
ನಿಧಾನವಾಗಿ (ಅವನ ಲೆಕ್ಕದಲ್ಲಿ - ವಾಸ್ತವವಾಗಿ ಹೊಸ್ತಿಲಿಗೆ ಹಾಕಿದ್ದ ರಂಗೋಲಿ ಪಟ್ಟಿಯನ್ನು ಹರಿದು) ಮನೆಯೊಳಹೊಕ್ಕ. ಮಲ್ಲಿಗೆ ಹೂವುಗಳನ್ನು ಪಡೆಯಲೇಬೇಕೆಂಬ ಕಿಚ್ಚು. ಗಿಡವನ್ನು ಕುಂಡದಿಂದ ಬೇರು ಸಹಿತ ಎಳೆದ. ಬೇರಿಗಂಟಿದ್ದ ಮಣ್ಣು ನೆಲದಮೇಲೆ ಬೀಳುತ್ತಿದ್ದಂತೆ ಪರಾರಿಯಾಗುವ ಯೋಚನೆಯಲ್ಲಿದ್ದ. ಅಷ್ಟರಲ್ಲಿ ಓರ್ವ ದಪ್ಪಗಿದ್ದ ಹೆಂಗಸು ಒಳಗಿನಿಂದ ಹೊರಬಂದಳು. ವಲ್ಲೀಶನನ್ನು ಕಂಡು ಅವಳು ಅರಚಿದ ಕೂಗು ಅವನ ರಕ್ತವನ್ನೇ ಹೆಪ್ಪುಗಟ್ಟಿಸಿಬಿಟ್ಟಿತು. ಅವಳು ವಲ್ಲೀಶನ ಕಡೆ ಓಡುತ್ತಿದ್ದಂತೆ ಅವನು ಆತ್ಮರಕ್ಷಣೆಗೆಂದು ಕೋಣೆಯ ಮಧ್ಯದಲ್ಲಿರಿಸಿದ್ದ ಮೇಜೊಂದನ್ನು ಸುತ್ತುವರಿದು ಮನೆಯೊಳಗೋಡಿದ. ಹಿತ್ತಲ ಬಾಗಿಲು ತೆರೆದಿತ್ತು, ನೋಡದೆ ವಲ್ಲೀಶ ಅದನ್ನು ಹಾಯ್ದು ಹೊರಬಿದ್ದ. ಡುಮ್ಮಿ ಹೆಂಗಸು ಹಿಂಬಾಲಿಸಲಿಲ್ಲ. ಬಾಗಿಲಲ್ಲೇ ನಿಂತು ಕರ್ಕಶ ಧ್ವನಿಯಲ್ಲಿ ಅರಚುತ್ತಿದ್ದಳು.
"ಪೋಲೀಸ್! ಸಹಾಯ ಮಾಡಿ! ಕಾಪಾಡಿ! ಕಳ್ಳ! ಖದೀಮ! ಕೊಲೆಗಾರ!"
ಶಾಂತವಾಗಿದ್ದ ರಸ್ತೆಯಲ್ಲಿ ಅವಳ ಕೂಗುಗಳು ಪ್ರತಿಧ್ವನಿಸ ತೊಡಗಿದವು.
ವಲ್ಲೀಶನಿಗೆ ಭಯ ಕಿತ್ತುಕೊಳ್ಳಲಾರಂಬಿಸಿತು. ಹೊರ ಹೋಗುವ ದಾರಿಯೇ ಇಲ್ಲದ ಸಣ್ಣ ಹಿತ್ತಲ ಅಂಗಳದಲ್ಲಿ ಸಿಲುಕಿದ್ದ.
ಆ ಸಮಯದಲ್ಲಿ ಆ ಡೂಮ್ಮಿಯ ಕೂಗುಗಳು ಇನ್ನೂ ಹೆಚ್ಚಾದವು.
"ಕಾಪಾಡಿ, ಕಾಪಾಡಿ! ಸಹಾಯ ಮಾಡಿ!"
ಮುಂಬಾಗಿಲು ತೆರೆದ ಶಬ್ದ, ಯಾರೋ ಗಂಡಸರ ಮಾತುಗಳು.
"ಯಾಕೇ? ಯಾರು ಬಂದರು? ಏನಾಯಿತು?"
ವಲ್ಲೀಶ ಸುತ್ತ-ಮುತ್ತ ನೋಡಿದ. ಅಂಗಳದ ಮೂಲೆಯಲ್ಲಿ ಒಂದು ಸಣ್ಣ ಕೋಳಿ ಗೂಡಿತ್ತು. ಗೂಡಿನ ಬಾಗಿಲನ್ನು ತೆಗೆದು ಅದರೊಳಗೆ ಹೊಕ್ಕು ಕೋಳಿಗಳ ಮೇಲೆ ಬಿದ್ದ.
ತನ್ನ ಅತ್ಯಮೂಲ್ಯ ಮಲ್ಲಿಗೆ ಹೂಗಲನ್ನು ಕೈಯಲ್ಲಿ ಹಿಡಿದು, ಕೋಳಿ ಗೂಡಿನ ಮೂಲೆಯೊಂದರಲ್ಲಿ ಅಡಗಿ ಕುಳಿತ.
ಮೊದಲಿಗೆ ಏನೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ನಂತರ ಧ್ವನಿಗಳು ಹತ್ತಿರ ಬರುತ್ತಿದ್ದಂತೆ ಡುಮ್ಮಿ ಹೆಂಗಸಿನ ಮಾತು ಕೇಳಿಸತೊಡಗಿದವು.
"ಸಣ್ಣದಾಗ್ ಇದ್ದ ರೀ, ಆದ್ರಾ ಎಂಥಾ ಕ್ರೂರ್ ರೂಪ ಅಂತೀರಿ? ನಾ ಅವನ್ನ ಒಂದ ಸರ್ತಿ ನೋಡಿದ್ದು - ನಂತರ ಲಗ್-ಲಗೂನ ಓಡಿಹೋದ. ನಾ ಹಂಗ್ ಕೂಗಿದ್ದಲ್ಲಾಂದ್ರ ನನ್ನ ಅಲ್ಲೇ ಕೊಲಿ ಮಾಡ್ತಿದ್ದ ಅವ. ಅದೆಂಥ ಹೇಡಿ ಅಂತೀರಿ! ನಾನೋ ಪಾಪದ್ ಹೆಣ್ ಹೆಂಗ್ಸು. ಅಲ್ಲೆ ಭಾಂಡಿಗೂಳ್ ಅದಾವಲ್ರಿ ಅಲ್ಲ್ ನಿಂತಿದ್ದ. ತುಡುಗ್ ಮಾಡಾಕ್ ಹತ್ತಿದ್ದ ಆಗ ನಾ ಅವನ್ನ್ ನೋಡ್ಬಿಟ್ಟೆ. ನಂಗ್ ಭಾಳ್ ಅಶಾಂತಿ ಉಂಟಾಗ್ಯದ. ಇನ್ಮ್ಯಾಲ್ ರಾತ್ರೋ ರಾತ್ರಿ ನಿದ್ದಿ ಬರಂಗಿಲ್ಲ ನಂಗ. ಅವನ್ ಕೇಡಿಗ್, ಕೊಲಿಪಾತಕ ಮುಖನ ಕಾಣ್ಸ್ತದ. ನಾ ಪಾಪದ್ ಹೆಣ್ ಹೆಂಗ್ಸು.."
"ಇನ್ನೇನ್ ನೆನಪಿದೆ ನಿಮಗೆ?" ಗಂಡಸಿನ ಧ್ವನಿ "ಮತ್ತೊಮ್ಮೆ ಸಿಕ್ಕಿದ್ರೆ ಗುರ್ತಿಸ್ತೀರ?"
"ಎಲ್ಲ್ ಸಿಕ್ಕಿದ್ರೂ ಗುರ್ತಿಸ್ತೇನ್ರೀ." ಡುಮ್ಮಿ ಹೇಳಿದಳು "ಅದೆಂಥ ಕೇಡಿಗನ್ ಮಸಡಿ ಅಂತೀರಿ. ನನಗ್ ಎಷ್ಟ್ ಅಶಾಂತಿ ಉಂಟಾಗ್ಯದಂತ ನಿಮ್ಗ ಗೊತ್ತಾಗಂಗಿಲ್ಲ. ಕೂಗಾಕ್ಕ ಧೈರ್ಯ ಇದ್ದಿಲ್ಲ ಅಂದ್ರ ನಾನೀಗ್ ಸತ್ತ್ ಹೆಣ ಆಗಿರ್ತಿದ್ದ್‌ನ್ಯಲ್ರೀ"
"ಅವನ ಕಾಲ್ಗುರ್ತು ಅಳೀತಿದೀವಿ, ಅಮ್ಮ. ಮುಂದಿನ್ ಬಾಗ್ಲಿಂದ ಹೊರ್ಗ್‌ಹೋದ ಅಂದ್ರಾ?"
"ಹೂ.. ಮುಂದಿನ್ ಕದ ತಕ್ಕೊಂಡ ಹೋದ ರೀ ಅವ. ಅಲ್ಲೇ ಆಚಿ ಪೊದಿಯಾಗ್ ಅಡಗ್ಕೊಂಡಾನ ಅನ್ನಿಸ್ತದ ರೀ. ಎಂಥ ಪರಿ ಮೂತಿ ಅಂತೀರಿ? ನನ್ಗ ಮೈಯೆಲ್ಲ ಝುಂ ಅನ್ನಾಕ್ಹತ್ಯದ!
"ಪೊದೆಗ್ಳೊಳ್ಗೆ ಮತ್ತೆ ಹುಡ್ಕ್ತೀವಿ, ಅಮ್ಮ. ಆದ್ರೆ ಇಷ್ಟ್‌ಹೊತ್ತಿಗ್ ತಪ್ಪಿಸ್ಕೊಂಡಿರ್ಬೇಕು"
"ಕೇಡ್ಗ" ಡುಮ್ಮಿ ಹೇಳಿದಳು "ಆ ಕೊಲಿಪಾತ್ಕ, ಅವನ್ ಮೂತಿ ನೋಡ್ಬೇಕಿತ್ರೀ. ನಾ ಕೂಗೋ ಸಾಹಸ ಮಾಡಿದ್ದಿಲ್ಲ್ ಅಂದ್ರ..."
ಧ್ವನಿಗಳು ಕುಂದಿದವು. ವಲ್ಲೀಶ ಕೋಳಿಗೂಡಿನ ಮೂಲೆಯಲ್ಲಿ ಒಬ್ಬೊಂಟಿಗನಾಗಿ ಉಳಿದ.
ಬಿಳಿ ಕೋಳಿಯೊಂದು ಗೂಡಿನ ಬಾಗಿಲಿಗೆ ಬಂದು, ವಲ್ಲೀಶನನ್ನು ಕಂಡು ಕೋಪದಿಂದ ಕೂಗುತ್ತ ಓಡಿತು. ಜೀವಾವದಿ ಕಾರಾವಾಸ, ನೇಣುಗಂಬಕ್ಕೆ ತೂಗಿರುವ ದುಃಸ್ವಪ್ನಗಳು ವಲ್ಲೀಶನನ್ನು ಕಾಡಿಹೋದವು. ನೇಣು ಹಾಕಿದರೆ ಒಳಿತು - ಹೌದು ಒಟ್ಟಿಗೆ ನೇಣು ಹಾಕಿಬಿಡಲಿ ಎಂದುಕೊಂಡ.
ನಂತರ ಡುಮ್ಮಿ ಆ ಗಂಡಸರನ್ನು (ಪೋಲೀಸರು ಎಂದು ಎಣಿಸಿದ್ದ) ಬೀಳ್ಕೊಡುವುದು ಕೇಳಿಸಿತು. ಪುನಃ ಯಾರೋ ಪಕ್ಕದ ಮನೆಯವಳ ಜೊತೆ ಹಿತ್ತಲಿಗೆ ಹಿಂತಿರುಗಿದ ಡುಮ್ಮಿ ತನ್ನ ತಾಪತ್ರಯಗಳ ವಿವರಣೆ ಮುಂದುವರೆಸುವುದು ಕೇಳಿಸಿತು.
"ಅಮ್ಯಾಲ್ ನನ್ನ್ ಮುಂದಾ ಓಡ್ಹೋದ್ನಲ್ರೀ. ಅವ ಸಣ್ಣಾಕಾರದವ, ಆದ್ರ ಎಂಥ ಕ್ರೂರ್ ಮುಖ ಅಂತೀರಿ"
ಮತ್ತೊಂದು ಕಪ್ಪು ಕೋಳಿ ಗೂಡಿನ ಬಾಗಿಲಲ್ಲಿ ಬಂದು, ವಲ್ಲೀಶನೆಡೆ ಕೋಪದ ಕೂಗು ಕೂಗಿ ಹೊರಟುಹೋಯಿತು.
"ನೀವೂ ಬಾಳ ಕಣ್ರೀ" ಅದೃಷ್ಯ ನೆರೆಯಾಕೆ ಹೇಳಿದಳು "ಅದೆಂಗೆ ಅಷ್ಟೊಂದ್ ಧೈರ್ಯ ಬಂತು ನಿಮ್ಗೆ?"
ಬಿಳಿ ಕೋಳಿ ಮತ್ತೊಮ್ಮೆ ಕರ್ಕಶ ಕೂಗು ಬೀರಿತು.
"ಒಳಗ್ ಬಂದು ಸೊಲ್ಪ ಹೊತ್ತ್ ಮಲ್ಕೊಳಿ"
"ಹೂ, ಸೊಲ್ಪ್ ಆರಾಮ್ ತೊಗೋತೀನಿ" ಎಂದಳು ಡುಮ್ಮಿ ಅಳಲಿದ ಧ್ವನಿಯಲ್ಲಿ "ನಾನು... ಅಲ್ಲಾಡಿಹೋದೆ..."
ಮಾತುಗಳು ನಿಂತು, ಬಾಗಿಲು ಮುಚ್ಚಿ ಎಲ್ಲವೂ ಶಾಂತವಾಯಿತು.
ನಿಧಾನವಾಗಿ, ಬಹಳ ನಿಧಾನವಾಗಿ ಬಟ್ಟೆ-ಕೂದಲುಗಳು ಅಡ್ಡಾದಿಡ್ಡಿ ಚದುರಿದ್ದ ವಲ್ಲೀಶ ಕೋಳಿ ಗೂಡಿನಿಂದ ಆಚೆ ಬಂದು, ಮೆಲ್ಲಗೆ ಮನೆಯ ಸುತ್ತ ತೆವಳುತ್ತ ಬೀಗ ಹಾಗಿದ್ದ ಗೇಟಿನ ಮೇಲೆ ಹಾರಿ ಸದ್ದಿಲ್ಲದೆ ರಸ್ತೆಗೆ ಹೊರಬಿದ್ದ.
ವಲ್ಲೀಶನ ಮನೆಯಲ್ಲಿ "ಇವತ್ತು ಸಂಜೆ ಎಲ್ಲಿದ್ದಾನೆ ವಲ್ಲೀಶ?" ಎಂದರು ಅವನ ಅಮ್ಮ "ಸಧ್ಯ ಮಲಗೋ ಹೊತ್ತಿಗೆ ಮನೆಗೆ ಬಂದರೆ ಸಾಕು".
"ಓ ಈಗಿನ್ನು ನೋಡ್ದೆ" ಎಂದಳು ಈಶ್ವರಿ "ಅವನ್ ರೂಮ್ಗೆ ಹೋಗ್ತಿದ್ದ. ಮೈಯ್ಯೆಲ್ಲ ಪುಕ್ಕ ಅಂಟಿಸ್ಕೊಂಡ್, ಕೈಯ್ಯಲ್ಲಿ ಮಲ್ಗೆ ಹೂವ್‌ಹಿಡ್ಕೊಂಡಿದ್ದ"
"ತಲೆಕೆಟ್ಟಿದೆ" ಅಪ್ಪ ಹೇಳಿದರು "ಪೂರ್ತಿ ಹುಚ್ಚ ಆಗ್ಹೋಗಿದಾನೆ"
ಮಾರನೆ ದಿನ ಬೆಳಗ್ಗೆ ವಲ್ಲೀಶ ಮಲ್ಲಿಗೆ ಹೂವಿನ ಗೊಂಚಲನ್ನು ಭಾನು ಮಿಸ್ ಮುಂದಿಟ್ಟ. ಮಲ್ಲಿಗೆ ಹೂವು ಭಾನು ಮಿಸ್‌ಗೆ ಕೊಡಲು ಅದೇನೋ ಒಂದು ಧೀರ ಹೆಮ್ಮೆ. ಮಲ್ಲಿಗೆ ಕಾಣುತ್ತಲೇ ಭಾನು ಮಿಸ್ ಹಿಂಜರಿದರು.
"ಮಲ್ಲಿಗೆ ಹೂವಾ? ಅಯ್ಯಪ್ಪ ನನಗೆ ಅದರ ವಾಸ್ನೆನೇ ಆಗಲ್ಲ"
ವಲ್ಲೀಶ ಅಚ್ಚರಿಯಿಂದ ಕೆಲ ಕ್ಷಣಗಳ ಕಾಲ ಅವರನ್ನು ನೋಡಿದ.
ನಂತರ: "ಆದ್ರೆ ನೀವೇ ಹೇಳಿದ್ರಲ್ಲ - ನೀವೇ ಹೇಳಿದ್ರಲ್ಲ... ನೀವೆ ಮಲ್ಲಿಗೆ ಹೂವ್ ಕಂಡ್ರೆ ತುಂಬ ಇಷ್ಟ. ಅದರ ಘಮ ನೋಡ್ತಿದ್ರೆ ಆಹಾ ಅಂತ ಅಂದಿದ್ರಲ್ಲಾ..."
"ಮಲ್ಲಿಗೆ ಅಂತ ಹೇಳಿದ್ನಾ?" ಸಂದಿಗ್ಧವಾಗಿ ನುಡಿದರು ಭಾನು ಮಿಸ್ "ನಾನು ಗುಲಾಬಿ ಅಂತ ಹೇಳಕ್ ಹೊರ್ಟಿದ್ದೆ"
ವಲ್ಲೀಶನ ನೋಟ ಕಠಿಣ ಉಪೇಕ್ಷೆ ಹೊತ್ತಿತ್ತು. ನಿಧಾನವಾಗಿ ಹಿಂದಿನ ಬೆಂಚಿನಲ್ಲಿದ್ದ ತನ್ನ ಹಳೆಯ ಸ್ಥಳಕ್ಕೆ ಹಿಂತಿರುಗಿದ.
ಅಂದು ಸಂಜೆ ಊರ ಹೊರಗಿನ ತೋಪಿನಲ್ಲಿ ಒಂದು ಬೆಂಕಿ ಹಾಕಿಕೊಂಡು ಗೆಳೆಯರ ಜೊತೆ ಗುಡ್ಡಗಾಡಿನ ಜನರ ಆಟವಾಡಿದ. ತನ್ನ ಹಳೇ ಜೀವನಕ್ಕಿ ಹಿಂತಿರುಗುವುದರಲ್ಲಿ ಏನೋ ಕಂಪನ.
ಮನೆಯ ಅಂಗಳದಲ್ಲಿ ಆಡುತ್ತಿದ್ದಾಗ ವಲ್ಲೀಶನ ಅಪ್ಪ ನೆಲದಲ್ಲಿ ತೆವಳುತ್ತಿದ್ದ ಅವನನ್ನು ಕಂಡು "ಏನೋ ವಲ್ಲೀಶ" ಎಂದರು "ಈಗ ಮನೇಲೂ ಓದ್ಕೋತಿದ್ಯಾ ಅಂದ್ಕೊಂಡಿದ್ದೆ"
ವಲ್ಲೀಶ ಎದ್ದು ನಿಂತ.
"ಇನ್ಮೇಲ್ ಅದಕ್ಕೆ ಅಷ್ಟ್ ತೊಂದ್ರೆ ತೊಗೊಳಲ್ಲ" ವಲ್ಲೀಶ ಹೇಳಿದ "ಭಾನು ಮಿಸ್ - ಅವರಿಗೆ ಸರಿಯಾಗಿ ಮಾತಾಡಕ್ಕೆ ಬರಲ್ಲ. ಏನ್ ಹೇಳ್ತಿದಾರೆ ಅಂತ ಅವ್ರಿಗೇ ಗೊತ್ತಿರಲ್ಲ"
"ಹೆಂಗಸರಲ್ಲಿ ಅದೇ ತೊಂದರೆ" ಒಪ್ಪಿದರು ಅಪ್ಪ. "ಅವನ್ ಆರಾಧ್ಯದೇವಿ ನಿಲುವು ಗಟ್ಟಿಯಿಲ್ಲ ಅಂತಿದಾನೆ ವಲ್ಲೀಶ" ಎಂದರು ಅಲ್ಲಿಗೆ ಬರುತ್ತಿದ್ದ ತಮ್ಮ ಪತ್ನಿಗೆ.
"ಗಟ್ಟಿಯಾಗ್ ನಿಲ್ತಾರೋ ಇಲ್ವೋ ಗೊತ್ತಿಲ್ಲ" ಎಂದ ವಲ್ಲೀಶ "ಅಂತು ನೆಟ್ಟಗ್ ಮಾತಾಡಕ್ ಬರಲ್ಲ ಅವ್ರಿಗೆ. ಎಲ್ಲಿಲ್ದಿರೊ ಕಷ್ಟ ಪಟ್ಟೆ, ಆದ್ರೆ ಏನ್ ಮಾತಾಡ್ತಿದಾರೆ ಅಂತ ಅವ್ರಿಗೇ ಗೊತ್ತಿರಲ್ಲ. ಸರಿಯಾಗೇನೋ ನಿಂತ್ಕೋತಾರೆ, ಸರಿಯಾಗ್ ನಡೀತಾರೆ. ಅದೂ ಅಲ್ದೇ ಗಟ್ಟಿಯಾಗ್ ನಿಲ್ದೆ ಹೋದ್ರೆ ಕುಸ್ದ್ ಬಿದ್ದು ಕೂತ್ಬಿಡ್ತಾರೆ ಅಷ್ಟೆ"

No comments:
Post a Comment