Monday, January 15, 2007
ದ ದಶಾವತಾರ ಕೋಡ್
ದ ದಶಾವತಾರ ಕೋಡ್ (a la The da Vinci Code)2007 KKNC ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೊದಲ ಬಹುಮಾನ ಬಂದಿದೆ.
2007 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.
The Dashavatara Code
Language: Kannada
Category: Suspense-Thriller, Mystery
Abstract: This is a story based in part on Dan Brown's best seller The da Vinci Code.
Keywords: da vinci code, dashavatara, kannada, buddha, halayudha, balarama, fiction, thriller, buddhism, suspense
Disclaimer: This story has no resemblance to any person or organization past or present, nor does it make claims to historical accuracy , although many facts do indeed have a historical basis. This is a work of fiction, of course, based loosely on the bestseller/blockbuster The da Vinci Code. The plot, characters and situations have been modified beyond recognition.
ಪ್ರೊಫೆಸರ್ ನಾಗಾನಂದನಿಗೆ ಏನೂ ತೋಚುವಂತಿರಲಿಲ್ಲ. ಪಕ್ಕದಲ್ಲೊಬ್ಬ ವಿಚಿತ್ರ ಪೋಷಾಕು ಧರಿಸಿ, ತಲೆಗೆ ರಿವಾಲ್ವರ್ ಹಿಡಿದು ನಿಂತಿದ್ದರೆ ಯಾರಿಗೆ ತಾನೆ ಏನಾದರೂ ತೋಚೀಯಾತು?
ನಾಗಾನಂದ ಚೆನ್ನೈ ವಿಶ್ವವಿದ್ಯಾಲಯದಲ್ಲಿ ಧರ್ಮ-ಇತಿಹಾಸ ವಿಭಾಗದಲ್ಲೊಬ್ಬ ಪ್ರೊಫೆಸರ್. ಸ್ವಲ್ಪವೇ ಹೊತ್ತಿನ ಮುಂಚೆ ಎಂದಿನಂತೆ ಕಾಲೇಜಿನಿಂದ ಹಿಂತಿರುಗಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಬಾಗಿಲ ಘಂಟೆ ಬಾರಿಸಿತು. ತೆರೆದು ನೋಡಿದರೆ ರಕ್ತ-ಕೆಂಪು ವರ್ಣದ ಫಾದ್ರಿ ನಿಲುವಂಗಿಯಂತಹ ವಸ್ತ್ರ ಧರಿಸಿದ್ದ ವ್ಯಕ್ತಿ. ಬೆರಳಲ್ಲಿ ಕಮಲಹೂವಿನಾಕಾರದ ವಿಚಿತ್ರ ಉಂಗುರ. ಮಿಡಿಯುವುದರೊಳಗೆ ಆ ವ್ಯಕ್ತಿ ರಿವಾಲ್ವರ್ ತೋರಿಸಿ ಮನೆಯೊಳಗೆ ನುಗ್ಗಿದ್ದ.
ನಾಗಾನಂದ ಅವಿವಾಹಿತ -ಮನೆಯಲ್ಲಿ ಒಬ್ಬನೇ, ಹಾಗಾಗಿ ಯಾರೂ ಅವನ ಸಹಾಯಕ್ಕೆ ಇರಲಿಲ್ಲ. ಈಗ ಆ ಭಿಕ್ಕು "ನೀನು ಒಗ್ಗೂಡಿಸಿದ ಪುರಾವೆಗಳು ಯಾವುವು ಹೇಳು, ಪ್ರೊಫೆಸರ್; ಇಲ್ಲವಾದರೆ.." ಎಂದು ಬೆದರಿಸಿದ. ಆ ಭಿಕ್ಕುವಿನ ವೇಷ-ಭೂಷಣ ಕಂಡ ನಾಗಾನಂದನಿಗೆ ಆತ ಕೇಳುತ್ತಿರುವುದೇನೆಂದು ಬಿಡಿಸಿ ಹೇಳುವ ಅವಶ್ಯಕೆತೆ ಇರಲಿಲ್ಲ.
"ನೀವುಗಳು ಹೇಳಿದಂತೆ ಕೇಳಿಕೊಂಡು ಬಿದ್ದಿದ್ದೇನಲ್ಲ. ನಿಮಗಿನ್ನೇನು ತೊಂದರೆ? ಆ ಪುರಾವೆಗಳನ್ನಿಟ್ಟುಕೊಂಡು ಏನು ಮಾಡುತ್ತೀರ? ನನ್ನನ್ನು ಬಿಟ್ಟುಬಿಡಿಯೆಂದು ಪರಿಪರಿಯಾಗಿ ಬೇಡಿಕೊಂಡರೂ ಬೆನ್ನು ಹತ್ತಿದ ಬೇತಾಳದಂತೆ ನನ್ನನ್ನೇಕೆ ಕಾಡುತ್ತಿರುತ್ತೀರಿ?" ನಾಗಾನಂದನ ಧ್ವನಿಯಲ್ಲಿ ಅವನ ಕೋಪ, ಕಾರ್ಪಣ್ಯ ಬಿಂಬಿಸುತ್ತಿದ್ದವು.
"ನಿನ್ನ ಪುರಾವೆಗಳ ಮೂಲಗಳನ್ನೇ ನಾಶ ಮಾಡಿದರೆ ಉಸಿರೂ ಇರುವುದಿಲ್ಲ, ಕೊಳಲೂ ನುಡಿಸಲಾಗುವುದಿಲ್ಲ" ಹಂಗಿಸುವ ಧ್ವನಿಯಲ್ಲಿ ಭಿಕ್ಕು ಹೇಳಿದ. "ನಮ್ಮ ನಿಲುಕು ಎಷ್ಟರ ಮಟ್ಟಿಗಿದೆ ನಿನಗೆ ಗೊತ್ತೇ ಇದೆ, ಪ್ರೊಫೆಸರ್. ನೀನು ಪ್ರೂಫ್‌ಗಳು ಯಾವುವೆಂದು ಹೇಳಿದರೆ ಸಾಕು"
ನಾಗಾನಂದನಿಗೆ ತನ್ನ ಬಳಿ ಇದ್ದ ಮಾಹಿತಿ ಆ ಭಿಕ್ಕುವಿನ ಕಡೆಯವರಿಗೆ ನೇತುಹಾಕಿದ್ದ ಕತ್ತಿಯಂತೆ ಎಂದು ತಿಳಿದಿತ್ತು. ಆ ಮಾಹಿತಿ ಈ ಭಿಕ್ಕುವಿನ ಕೈಸೇರಿ ಮೂಲಗಳ ನಾಶನವಾದರೆ, ತನಗೆ ಉಳಿಗಾಲವಿಲ್ಲವೆಂಬುದೂ ಅರಿವಾಯಿತು. ಮನದಲ್ಲೇ ಧೃಡ ನಿರ್ಧಾರಕ್ಕೆ ಬಂದು ನಡುಗುವ ಮರ್ಮರ ಧ್ವನಿಯಲ್ಲಿ "ಹೂಂ, ಸರಿ, ಅಲ್ಲಿ ನನ್ನ ಕಂಪ್ಯೂಟರ್ ಟೇಬಲ್ ನಲ್ಲಿರುವ ಡ್ರಾನಲ್ಲಿ ಪಟ್ಟಿ ಇದೆ" ಎಂದ. ಡ್ರಾ ಒಳಗಿದ್ದದ್ದು ನಾಗಾನಂದನ ತಲಗೆ ತಾನು ಭಿಕ್ಕುವಿನ ವಿರುದ್ಧ ಉಪಯೋಗಿಸಲು ಯೋಗ್ಯವೆಂದು ಹೊಳೆದ ಏಕೈಕ ಆಯುಧ -ತನ್ನ ಪಿಸ್ತೂಲು.
"ನಿಧಾನವಾಗಿ ತೆಗೆದು ನನ್ನ ಕೈಗೆ ಕೊಡು. ಏನಾದರು ಹೆಚ್ಚು-ಕಡಿಮೆ ಪ್ರಯತ್ನಿಸಿದರೆ..." ಭಿಕ್ಕು ಬೆದರಿಕೆ ಹಾಕಿದಾಗ ನಾಗಾನಂದ ಟೇಬಲ್ ಕಡೆಗೆ ನಿಧಾನವಾಗಿ ಚಲಿಸ ತೊಡಗಿದ.
ನಾಗಾನಂದ ಡ್ರಾ ಒಳಗಿದ್ದ ಬಂದೂಕು ಹೊರತೆಗೆದು ಭಿಕ್ಕುವಿನಮೇಲೆ ಮರುಪ್ರಹಾರ ನಡೆಸುವ ಪ್ರಯತ್ನ ಮಾಡಿದಾಗ ಅಚ್ಚರಿಗೊಂಡ ಭಿಕ್ಕುವಿನ ಕೈಯಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಚಲಿಸಿತು. ಗುಂಡು ನೇರವಾಗಿ ನಾಗಾನಂದನ ಎದೆ ತಾಕಿದಾಗ ಕೆಂಪಗೆ ಕಾಯಿಸಿದ ಕಬ್ಬಿಣದ ಸಲಾಕೆಯಿಂದಿರಿದಂತಾಗಿ ನಾಗಾನಂದ ನೆಲಕ್ಕುರುಳಿದ. ಹತನಾಗಿ ಬಿದ್ದ ತನ್ನ ಬಲಿಪಶುವನ್ನು ಕಂಡ ಭಿಕ್ಕು ಸಂದಿಗ್ಧನಾಗಿ ಅಲ್ಲಿನಿಂದ ಪರಾರಿಯಾದ.
ಕೆಲ ನಿಮಿಷಗಳ ನಂತರ ನಾಗಾನಂದನಿಗೆ ಪುನಃ ಎಚ್ಚರವಾಯಿತು. 'ನಾನಿನ್ನೂ ಬದುಕಿದ್ದೇನೆಯೇ?' ಎಂದು ಯೋಚಿಸುತ್ತ, ಏದುಸಿರು ಏಳೆಯುತ್ತ ಮೇಲೆದ್ದ. ಆದರೆ ಅವನಿಗೆ ತಾನಿನ್ನು ಉಳಿಯುವುದಿಲ್ಲವೆಂಬುದು ಖಚಿತವಾಗಿತ್ತು. ಬಹಳಷ್ಟು ಕೆಲಸ ಬಾಕಿಯಿತ್ತು. ಮೊದಲಿಗೆ ಕಂಪ್ಯೂಟರ್ ಮುಂದೆ ಕುಳಿತು ಕೇಬೋರ್ಡಿನ ಮೇಲೆ ಏನೋ ಟೈಪ್ ಮಾಡಿದ. ನಂತರ ಹೊರಗಿನ ಕೋಣೆಗೆ ಹೋಗಿ ತನ್ನ ಮೇಜಿನ ಮೇಲಿದ್ದ ಪ್ಯಾಡಿನ ಮೇಲೆ ಬರೆಯಲಾರಂಭಿಸಿದ.
*****
"ಕಿಳಗಿಳಗಿಳಗಿಳ" ದಿನಕರನ ಮೋಬೈಲ್ ಕರೆ ಕೊಟ್ಟಿತು.
ದಿನಕರ ಅಮೇರಿಕಾದಲ್ಲಿ ವಾಸವಾಗಿದ್ದವ. ಮೂರು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ. ಇಂದು ಬೆಳಗ್ಗೆ ಚೆನ್ನೈಗೆ ಬಂದು ಅಮೇರಿಕನ್ ಎಂಬಸಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡಿದ್ದ. ಸ್ವಲ್ಪವೇ ಹೊತ್ತಿನಲ್ಲಿ ತನ್ನ ಹಳೆಯ ಸ್ನೇಹಿತ ನಾಗಾನಂದನ ಮನೆಗೆ ಹೋಗುವುದಿತ್ತು. ನಾಗಾನಂದನನ್ನು ಕಂಡು ಹಲವಾರು ವರ್ಷಗಳಾಗಿದ್ದವು. ಸಧ್ಯಕ್ಕೆ ರೆಸ್ಟೋರಾಂಟ್‌ನಲ್ಲಿ ತಿಂಡಿ ಮುಗಿಸಿ ಕಾಫಿ ಕುಡಿಯುತ್ತ ಕುಳಿತಿದ್ದ. ಫೋನ್ ಮೇಲೆ ಕಾಲರ್ ಐ.ಡಿ ನೋಡಿ ನಾಗಾನಂದನ ಮನೆ ಎಂದರಿವಾಯಿತು.
"ಹಲೋ..." ಫೋನ್ ಕೈಗೆತ್ತಿಕೊಂಡು ಮಾತನಾಡಿದ.
"ಮಿ. ದಿನಕರ್?" ನಾಗಾನಂದನ ಧ್ವನಿಯಲ್ಲ ಯಾರೋ ಬೇರೆ.
"ಹೌದು. ಯಾರು ಮಾತನಾಡುತ್ತಿರುವುದು?"
"ನಾನು ಇನ್ಸ್‌ಪೆಕ್ಟರ್ ಬ್ರಹ್ಮಾವರ್. ಪ್ರೊಫೆಸರ್ ನಾಗಾನಂದ್ ಮನೆಯಿಂದ. ನೀವು ಇಂದು ಪ್ರೊಫೆಸರ್ ಜೊತೆ ಭೇಟಿ ಮಾಡುವುದಿತ್ತಲ್ಲವೇ?"
"ಹೌದು. ಆ..."
"ತಕ್ಷಣ ಹೊರಟು ನಾಗಾನಂದ್ ಮನೆಗೆ ಬನ್ನಿ" ದಿನಕರನಿಗೆ ಮಾತನಾಡಲು ಅವಕಾಶ ಕೊಡದೆ ಫೋನಿನಿಂದ ಧ್ವನಿ ಬಂತು.
"ನೀ.." ಎನ್ನುವಷ್ಟರಲ್ಲಿ ಫೋನ್ ಲೈನ್ ಕತ್ತರಿಸಿ ಹೋಗಿತ್ತು. ಫೋನ್ ನಾಗಾನಂದನ ಮನೆಯಿಂದಲೇ ಬಂದಿತ್ತೆಂದು ಕಾಲರ್ ಐ.ಡಿ. ಇಂದ ಖಾತ್ರಿಯಾಗಿತ್ತು. ಹೇಗಿದ್ದರೂ ಹೋಗಲೇ ಬೇಕೆಂದು ಯೋಚಿಸಿ, ದಿನಕರ ಆಟೋರಿಕ್ಷಾ ಹಿಡಿದು ನಾಗಾನಂದನ ಮನೆಗೆ ಬಂದಿಳಿದ.
ಬಾಗಿಲಲ್ಲೇ ಇನ್ಸ್‌ಪೆಕ್ಟರ್ ಬ್ರಹ್ಮಾವರ್ ಕಾಯುತ್ತಿದ್ದ. ಗೇಟಿನಲ್ಲಿ ಕಾನ್ಸ್‌ಟೇಬಲ್ ಒಬ್ಬ ಕಾವಲು ನಿಂತಿದ್ದ. "ಮಿ. ದಿನಕರ್, ಪ್ರೊ. ನಾಗಾನಂದ್ ಮೃತರಾಗಿದ್ದಾರೆ" ಪೀಠಿಕೆ ಇಲ್ಲದೆ ಹೇಳಿದ. "ಒಳಗೆ ಬನ್ನಿ".
ತನ್ನ ಮಿತ್ರ ಇನ್ನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳುವುದರಲ್ಲಿ ಬ್ರಹ್ಮಾವರ್ ಜೊತೆ ಹೊರಗಿನ ಕೋಣೆಯಿಂದ ಹಾಯ್ದು ಒಳಗಿನ ಕೋಣೆಗೆ ತಲುಪಿದ್ದ. ಅಲ್ಲಿ ಒಂದು ವಿಚಿತ್ರ ದೃಷ್ಯ ಕಾದಿತ್ತು. ಕೋಣೆಯೊಳಗೊಂದು ಮರದ ನೇಗಿಲಿತ್ತು. ನೇಗಿಲಿಗೆ ಎರಡು ಬೆಳ್ಟ್‌ಗಳಿಂದ ಭಿಗಿಯಾಗಿ ಕಟ್ಟಿಕೊಂಡು ನೇಗಿಲು ಹೊತ್ತ ರೈತನಂತೆ ನೆಟ್ಟಗೆ ನಿಂತ ಶವ. ಕಣ್ಣುಗಳು ತೆರೆದೇ ಇದ್ದವು. ದಿನಕರ ಶವವನ್ನು ನಾಗಾನಂದನೇ ಎಂದು ಗುರುತಿಸಿದ.
"ಇದು ಕೊಲೆಗಾರನ ಕೆಲಸವಲ್ಲ" ಇನ್ಸ್‌ಪೆಕ್ಟರ್ ಹೇಳತೊಡಗಿದ. "ಬಾಗಿಲು ಒಳಗಿನಿಂದ ಬೀಗ ಹಾಕಿತ್ತು. ಗುಂಡು ಹಾರಿಸಿದ್ದು ಹೊರಗಿನ ಕೋಣೆಯಲ್ಲಿ -ಗೋಡೆಯ ಮೇಲೆ ರಕ್ತ ಚೆಲ್ಲಿರುವುದು ನೋಡಿದರೆ ತಿಳಿಯುತ್ತದೆ. ಗುಂಡು ತಿಂದ ನಂತರ ಇಲ್ಲಿ ಒಳಗೆ ಬಂದು ಕಂಪ್ಯೂಟರ್ ಮೇಲೆ ಕೆಲಸ ಮಾಡಿದ್ದಾರೆ -ಕೀಬೋರ್ಡ್ ಮೇಲೆ ರಕ್ತದ ಬೆರಳಚ್ಚುಗಳಿವೆ. ಹೊರಗಿನ ಕೋಣೆಯಲ್ಲಿ ತಮ್ಮೆ ಕೊನೆ ಸಂದೇಶವನ್ನೂ ತಮ್ಮ ಕೈಬರಹದಲ್ಲೇ ಬರೆದಿದ್ದಾರೆ -ಆ ಹಾಳೆ ಹಾಗು ಪೆನ್ ಮೇಲೂ ರಕ್ತದ ಬೆರಳಚ್ಚುಗಳಿವೆ. ನಂತರ ಬಂದು ಈರೀತಿ ನೇಗಿಲಿಗೆ ತಮ್ಮನ್ನೇ ತಾವು ಕಟ್ಟಿಕೊಂಡಿದ್ದಾರೆ. ನೀವು ನಾಗಾನಂದರನ್ನು ಭೇಟಿ ಮಾಡಲು ಬರುವವರಿದ್ದಿರಿ ಎಂದು ಅವರ ಡೈರಿಯಿಂದ ತಿಳಿಯಿತು, ಅಲ್ಲೇ ನಿಮ್ಮ ಫೋನ್ ನಂಬರ್ ಹಾಗು ಅಡ್ರಸ್ ಸಿಕ್ಕಿದ್ದು" ದಿನಕರನಿಗೆ ಯೋಚಿಸುವ ಸಮಯ ಕೊಡದೆ ಹೇಳಿದ ಬ್ರಹ್ಮಾವರ್. "ಇದರ ಅರ್ಥ ಏನೆಂದು ತಿಳಿದಿದೆಯೇ?" ಎಂದು ಮುಂದುವರಿಸಿದ.
ಗರ್ಭಿತ ಮೌನ ಆವರಿಸಿತು. ಭ್ರಾಂತಿಯಿಂದ ತಲೆಯಾಡಿಸುತ್ತ ದಿನಕರ ಇನ್ಸ್‌ಪೆಕ್ಟರ್ ಕಡೆ ನೋಡಿದ.
ಇನ್ಸ್‌ಪೆಕ್ಟರ್ ಹೊರಗಿನ ಕೋಣೆಗೆ ಹೋಗುತ್ತ "ದಿಸ್ ವೇ. ನಾಗಾನಂದರ ಕೊನೆ ಸಂದೇಶ ನೋಡುವಿರಂತೆ" ಎಂದ
ಭ್ರಮಿಷ್ಟನಂತೆ ಮಾತಾನಾಡದೆ ದಿನಕರ ಇನ್ಸ್‌ಪೆಕ್ಟರ್ ಹಿಂದೆ ನಡೆದ. ಟೇಬಲ್ ಮೇಲೆ ಒಂದು ಸ್ಕ್ರಾಚ್‌ಪ್ಯಾಡ್ ಇತ್ತು. ಪ್ಯಾಡಿನ ಮೇಲುಭಾಗ ಪುಸ್ತಕವೊಂದರಿಂದ ಮುಚ್ಚಿತ್ತು. ರಕ್ತದ ಕಲೆಗಳ ಮಧ್ಯೆ ದಿನಕರ ಓದಿದ:
BXL.234.102W
ಅರಮನೆಯಲ್ಲಿ ಶಾರದೆಯ ಪೀಠ
ಪೀಠದಲ್ಲಿ ಜ್ಞಾನ-ಬೊಕ್ಕಸ
ಬೊಕ್ಕಸದಲ್ಲಿ ದಹನ ವಾಣಿ
204.WB.X002
ಭದ್ರಕಾಳಿಯ ತವರೂರು
ತವರೂರಿನಲ್ಲಿ ವರ್ತಮಾನ-ಕೇಂದ್ರ
ಕೇಂದ್ರದಲ್ಲಿ ವೃಷಭನ ವೃತ್ತಾಂತ
ತಬ್ಬಿಬ್ಬಾದ ಮುಖಭಾವ ತೋರುತ್ತ ಪ್ಯಾಡ್ ಮೇಲಿದ್ದ ಪುಸ್ತಕ ಸರಿಸಲು ಕೈಚಾಚಿದ.
"ನೋ ಮಿ. ದಿನಕರ್. ಕ್ರೈಂ ಸೀನ್‌ನಲ್ಲಿ ಏನೂ ಬದಲಾಯಿಸುವಹಾಗಿಲ್ಲ" ಬ್ರಹ್ಮಾವರ್ ಹೇಳಿದ. "ಸಾಯುತ್ತಿರುವ ಮನುಷ್ಯ ಯಾವ ವಿಚಾರ ಕುರಿತು ಬರೆಯುತ್ತಿದ್ದಿರಬಹುದು?"
"ನಾ...ಊ... ತನ್ನ ಕೊಲೆಗಾರನ ಹೆಸರು ಹೇಳುವ ಪ್ರಯತ್ನ ಮಾಡುತ್ತಿರಬಹುದು... ಇಲ್ಲವೇ..." ತಡವರಿಸಿದ ದಿನಕರ.
"ಎಕ್ಸಾಕ್ಟ್‌ಲಿ, ಮಿ. ದಿನಕರ್, ಎಕ್ಸಾಕ್ಟ್‌ಲಿ. ಈಗ ಪ್ಯಾಡ್ ಮೇಲಿರುವ ಪುಸ್ತಕವನ್ನು ತೆಗೆಯುವೆ ನೋಡಿ" ಎಂದು ಪ್ಯಾಡಿನ ಮೇಲುಭಾಗವನ್ನು ಮುಚ್ಚಿದ್ದ ಪುಸ್ತಕವನ್ನು ಇನ್ಸ್‌ಪೆಕ್ಟರ್ ಕೈಗೆತ್ತಿಕೊಂಡ.
ದಿನಕರನ ಹೊಟ್ಟೆ ಪಾತಾಳಕ್ಕಿಳಿಯಿತು. ನಾಗಾನಂದ ಬರೆದಿದ್ದ ಮೊದಲ ಸಾಲಿನಲ್ಲಿ ದಿನಕರನ ಹೆಸರಿತ್ತು. ಇದರ ಅರ್ಥ ದಿನಕರನ ಮನಸ್ಸಿಗೆ ಒಸರಿಸುವ ಮುಂಚೆ ಬ್ರಹ್ಮಾವರ್ "ಮಿ. ದಿನಕರ್, ಪ್ರೊಫೆಸರ್ ನಾಗಾನಂದ್‌ಅವರ ಕೊಲೆ ಆಪಾದನೆ ಮೇಲೆ ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇನೆ. ಓಡುವ ಪ್ರಯತ್ನ ಮಾಡಬೇಡಿ, ಹ್ಯಾಂಡ್‌ಕಫ್ ತರುತ್ತೇನೆ" ಎನ್ನುತ್ತ ಒಳಗಿನ ಕೋಣೆಗೆ ಹೋದ.
ಆ ಕ್ಷಣಕ್ಕೆ ಸರಿಯಾಗಿ ತರುಣಿಯೊಬ್ಬಳು "ನಾನು ಚೆನ್ನೈ-ಹೆರಾಳ್ಡ್ ರಿಪೋರ್ಟರ್. ಏನೋ ಇನ್ಸಿಡೆಂಟ್ ನಡೆದಿದೆಯೆಂದು ನಮಗೆ ಫೋನ್ ಬಂದಿತ್ತು. ಈ ಅಡ್ರಸ್ ಕೊಡಲಾಗಿತ್ತು. ನೋಡಿ ಹೋಗೋಣವೆಂದು ಬಂದೆ" ಎನ್ನುತ್ತ ಬಾಗಿಲನ್ನು ಹಾಯ್ದು ಹೊರಗಿನ ಕೋಣೆಗೆ ಬಂದಳು. ಕತ್ತಿಗೆ ತನ್ನ ಫೋಟೋ ಹೊಂದಿದ್ದ ಚೆನ್ನೈ-ಹೆರಾಳ್ಡ್‌ನ ಬ್ಯಾಡ್ಜ್ ಒಂದನ್ನು ನೇತುಹಾಕಿಕೊಂಡಿದ್ದಳು. ಅದು ಅವಳ ಹೆಸರು ಪೂಜಾ ಎಂದು ಸಾರುತ್ತಿತ್ತು. ಕೈಬೆರಳಲ್ಲಿ ಬೀಗದ-ಕೈಯೊಂದನ್ನು ಸಿಕ್ಕಿಸಿಕೊಂಡಿದ್ದಳು.
ಟೇಬಲ್ ಕಡೆ ಹೊರಟಿದ್ದ ಬ್ರಹ್ಮಾವರ್ ತಿರುಗಿ ನೋಡಿದ. ಅವನ ಮುಖದಲ್ಲಿ ಸಿಟ್ಟು ಖನಗುತ್ತಿತ್ತು. ಮುಖ ಗಂಟು ಹಾಕಿ "ನೀನ್... ನೀವು ಒಳಗೆ ಹೇಗೆ ಬಂದಿರಿ. ಹೊರಗಿದ್ದ ಕಾನ್ಸ್‌ಟೇಬಲ್ ನಿಮ್ಮನ್ನು ತಡೆಯಲಿಲ್ಲವೇ?" ಎಂದು ರೇಗಿದ.
"ಕಾನ್ಸ್‌ಟೇಬಲ್? ಮೂಲೆ ಪೆಟ್ಟಿಗೆ ಅಂಗಡಿಯಲ್ಲಿ ಯಾರೋ ಒಬ್ಬ ಬೀಡಿ ಸೇದುತ್ತಿದ್ದ, ಅವನೇ ಇರಬೇಕು -ತಡೆಯಲಿಲ್ಲ" ಹಗುರವಾಗಿ ಹೇಳಿದಳು. ಅವಳು ಇನ್ಸ್‌ಪೆಕ್ಟರ್ ಕಡೆ ತಿರುಗಿದ್ದರಿಂದ ದಿನಕರನಿಗೆ ಬೆನ್ನು ಕೊಟ್ಟು ನಿಂತಿದ್ದಳು.
ಬ್ರಹ್ಮಾವರ್ ಪುನಃ ಟೇಬಲ್ ಕಡೆ ತಿರುಗಿ ಹೊರಟಾಗ ದಿನಕರ ಆತುರದಲ್ಲಿ ತನಗೆ ತೋರಿದ ಏಕೈಕ ಮಾರ್ಗವನ್ನಪ್ಪಿದ. ಥಟ್ಟನೆ ಓಡಿ ಎರಡು ಕೋಣೆಗಳ ಮಧ್ಯೆ ಇದ್ದ ಬಾಗಿಲನ್ನು ಜೋರಾಗಿ ಬಡಿದು ಬೋಲ್ಟ್ ಹಾಕಿದ. ಪೂಜಾ ತಿರುಗುವಷ್ಟರಲ್ಲಿ ಎರಡು ಬೆರಳನ್ನು ಅವಳ ಬೆನ್ನಿಗೆ ತಿವಿದು "ನನ್ನ ಕೈಯಲ್ಲಿ ಗನ್ ಇದೆ. ನಡಿ ಹೋಗುವ. ನಿನ್ನ ಬಳಿ ಏನೋ ವೆಹಿಕಲ್ ಇದೆ ಅಲ್ಲವೇ?" ಎನ್ನುತ್ತ ನಾಗಾನಂದನ ಅಂತಿಮ ಸಂದೇಶವಿದ್ದ ಹಾಳೆ ಹರಿದು ಜೇಬಿನಲ್ಲಿರಿಸಿಕೊಂಡ.
ಆಕೆ 'ಹೂಂ' ಎಂದು ತಲೆಯಾಡಿಸಿದಳು. "ಹಿಂದೆ ತಿರುಗಬೇಡ. ನಾನು ಹೇಳಿದಂತೆ ಕೇಳಿದರೆ ನಿನಗೇನು ತೊಂದರೆಯಾಗುವುದಿಲ್ಲ" ಎಂದ. ಇಷ್ಟು ಹೊತ್ತಿಗೆ ಇನ್ಸ್‌ಪೆಕ್ಟರ್ ಬಾಗಿಲು ಬಡಿಯಲಾರಂಭಿಸಿದ್ದ. ಮನೆಯ ಹೊರಬಿದ್ದು ಪೂಜಾಳ ಟೂವೀಲರ್ ಹತ್ತಿ ಹಿಂದೆ ಸವಾರಿ ಮಾಡುತ್ತ ದಿನಕರ ಕೊಲೆಯ ರಂಗದಿಂದ ಪರಾರಿಯಾದ.
ಹಿಂದೆ ಕೂತು ಸ್ವಗತವೆಂಬಂತೆ ಮಾತನಾಡುತ್ತ ತಾನು ಬಿದ್ದಿದ್ದ ಹಳ್ಳದ ಆಳವನ್ನು ಅಳೆಯಲಾರಂಭಿಸುತ್ತಿದ್ದ ದಿನಕರನ ಮಾತುಗಳು ವಾಹನ ಚಲಿಸುತ್ತಿದ್ದ ಪೂಜಾಳ ಕಿವಿಗೂ ಬಿದ್ದವು. ಕೆಲವೇ ಕ್ಷಣಗಳಲ್ಲಿ ಅವಳಿಗೆ ಪರಿಸ್ಥಿತಿಯ ಅರಿವಾಯಿತು. ತನ್ನ ಸ್ವಂತ ಲೋಕದಲ್ಲಿ ಕಳೆದು ಹೋಗಿದ್ದ ದಿನಕರನನ್ನು ಹಿಂದೆ ತಿರುಗಿ ನೋಡಿದಾಗ ಆತನ ಕೈಯಲ್ಲಿ ಗನ್ ಇಲ್ಲವೆಂಬುದು ಅರ್ಥವಾಯಿತು. ವಾಹನ ನಿಲ್ಲಿಸಿ, ಕೆಳಗಿಳಿದು ಧೈರ್ಯವಾಗಿ ದಿನಕರನನ್ನೆದುರಿಸಿ ನಿಂತಳು.
"ಗನ್..." ಕೈ ನೋಡಿಕೊಳ್ಳುತ್ತ ದಿನಕರ ಗೊಣಗಿದ.
"ನಿಮ್ಮ ಬಳಿ ಇಲ್ಲವೆಂದು ತಿಳಿದಿದೆ. ನೀವು ಕೊಲೆಗಾರರಲ್ಲವೆಂಬುದೂ ನನಗೆ ಅರಿವಾಗಿದೆ. ಆದರೆ ಪೋಲೀಸರು ಇದನ್ನು ಬೇರೆ ರೀತಿ ನೋಡುತ್ತಾರೆ. ನೀವೊಬ್ಬರೇ ಅಲ್ಲ ನಿಮ್ಮನ್ನು ಪರಾರಿ ಮಾಡಿದ ನಾನೂ ಕೂಡ ಮರ್ಡರ್ ಸಸ್ಪೆಕ್ಟ್" ಪರಿಸ್ಥಿತಿಯಲ್ಲಿ 'ಎಕ್ಸ್‌ಕ್ಲೂಸಿವ್ ಸ್ಟೋರಿ'ಒಂದನ್ನು ಕಾಣುತ್ತಿದ್ದ ರಿಪೋರ್ಟರ್ ಪೂಜಾ ಬುರುಡೆ ಬಿಟ್ಟಳು. "ಬೈ ದ ವೇ, ನೀವು?"
"ಓಹ್! ದಿನಕರ ಶಾಸ್ತ್ರಿ. ಡಾಕ್ಟರ್ ದಿನಕರ ಶಾಸ್ತ್ರಿ" ಎನ್ನುತ್ತ ಆಕೆಯ ಕೈ ಕುಲುಕಿದ.
ದಿನಕರ ಹೊಸ ಮಾಹಿತಿಯನ್ನು ತಲೆಯಲ್ಲಿ ಮೆಲುಕು ಹಾಕುವುದರೊಳಗೆ ಪುನಃ "ಮುಂದೆ? ಏನು ಮಾಡುವುದು?"
"ಗೊತ್ತಿಲ್ಲ! ಜೊತೆಗೆ ನನ್ನ ಹೆಸರು ಅಲ್ಲಿ ಏಕಿತ್ತು ಎನ್ನುವುದೂ ಅರ್ಥವಾಗುತ್ತಿಲ್ಲ. ಯೋಚಿಸಲೊಂದು ತಾಣ ಬೇಕು. ನನಗೆ ಈ ಊರಿನಲ್ಲಿ ನಾಗಾನಂದ ಒಬ್ಬನೇ ಪರಿಚಿತ. ಇಲ್ಲ ತಾಳು -ಜೀತ್ -ನಮ್ಮ ಜೊತೆ ಓದುತ್ತಿದ್ದ ಜೀತೇಂದ್ರ ಕೂಡ ಇಲ್ಲಿಯೇ ಇದ್ದಾನೆ. ನಾಗಾನಂದ ಹಾಗು ಜೀತ್ ಒಟ್ಟಿಗೆ ಕೆಲಸ ಮಾಡಿದ್ದರು. ಅವನ ಮನೆಯೇ ಸುರಕ್ಷಿತ ಸ್ಥಳ. ಜೊತೆಗೆ ನಾಗಾನಂದನ ವಿಚಾರ ಅವನಿಗೇನಾದರೂ ಗೊತ್ತಿರಬಹುದು"
"ನಡೆಯಿರಿ ಹಾಗಿದರೆ. ಅಡ್ರಸ್ ಹೇಳುವಿರಾ?" ಟೂವೀಲರ್ ಪುನಃ ಹತ್ತುತ್ತ ಕೇಳಿದಳು ಪೂಜಾ
*****
"ಹಂಂ... ನಾಗಾನಂದ್, ನಾನು ಜೊತೆಗೆ ಕೆಲಸ ಮಾಡುವುದು ಬಿಟ್ಟು ಹಲವು ವರ್ಷಗಳಾಗಿದ್ದವು. ಇತ್ತೀಚೆಗೆ ಹೆಚ್ಚು ಸಂಧಿಸಿಯೂ ಇರಲಿಲ್ಲ. ಆದರೆ ಈರೀತಿ ಅವನ ಕೊಲೆಯಾಗಿದೆಯೆಂದು ಕೇಳಿ ಬೇಸರವಾಗುತ್ತಿದೆ" ಜೀತ್ ಹೇಳಿದ. ದಿನಕರ ಹಾಗು ಪೂಜಾ ಜೀತ್ ಮನೆಗೆ ಬಂದಿದ್ದರು. ಜೀತ್‌ಗೆ ದಿನಕರ ತಕ್ಷಣ ಗುರುತು ಸಿಗದಿದ್ದರೂ ಹೆಸರು ಹೇಳಿದ ನಂತರ ಸ್ವಾಗತಿಸಿದ್ದ. ಡಿವೋರ್ಸ್ ಮಾಡಿಕೊಂಡಿದ್ದ ಜೀತ್ ಮನೆಯಲ್ಲಿ ಒಬ್ಬನೇ ಇದ್ದ. ಕಾಫಿ ಕುಡಿಯುತ್ತ ನಡೆದ ಸಂಗತಿಯನ್ನು -ನಾಗಾನಂದನ ಸಂದೇಶ, ತನ್ನ ಮೇಲಿನ ಆರೋಪಗಳನ್ನು ಬಿಟ್ಟು -ದಿನಕರ ವಿವರಿಸಿದ್ದ. ಇಷ್ಟು ಹೊತ್ತಿಗೆ ಘಂಟೆ ರಾತ್ರಿ ಹನ್ನೊಂದಾಗಿತ್ತು.
ಪೂಜಾ ಕೇಳಿದಳು "ನೇಗಿಲು! ಅದೇನು ವಿಚಿತ್ರ? ಏನಿದ್ದಿರಬಹುದು ಅದರ ಹಿಂದೆ?"
"ಓಹ್! ಹಲಾಯುಧ" ಜೀತ್ ಆರಾಮವಾಗಿ ಹೇಳಿದ
ಪೂಜಾಳ ಮೂಖ ಖಾಲಿಯಾಗಿತ್ತು. ದಿನಕರನ ಮುಖದಲ್ಲಿ ಸಂದೇಹ. "ಏನೂ? ನಿನಗೆ ಗೊತ್ತಿಲ್ಲವೇ? ದಿನಕರ್ ನಿನಗಂತೂ ಗೊತ್ತಿರಬೇಕು" ಎನ್ನುತ್ತ ಜೀತ್ ಎದ್ದ. ಪೂಜಾಳ ಕಡೆ ಬೆರಳು ಮಾಡಿ "ಬಾ ಇಲ್ಲಿ" ಎನ್ನುತ್ತ ಮನೆಯೊಳಗೆ ಹೋದ.
ಎರಡು ಅಡಿ ಎತ್ತರ ಹಾಗು ಸುಮಾರು ಹತ್ತು ಅಡಿ ಅಗಲವಾದ ದಶಾವತಾರ ವಿಗ್ರಹ ಸರಣಿ ಶೋಕೇಸಿನೊಳಗಿತ್ತು. "ಅದನ್ನು ನೋಡದೆ ದಶಾವತಾರಗಳು ಯಾವುವು ಹೇಳು ನೋಡೋಣ" ಜೀತ್ ಪೂಜಾಳಿಗೆ ಹೇಳಿದ.
"ಮತ್ಸ್ಯ, ಕೂರ್ಮ, ವರಾಹ, ರಾಮ, ಕೃಷ್ಣ, ಬುದ್ಧ, ಆಮೇಲೆ...ಹೂಂ ನಾರಸಿಂಹ... ಕಲ್ಕಿ.." ಎಂದು ತಡವರಿಸಿದಳು ಪೂಜ.
"ಈಗ ತಿರುಗಿ ನೋಡಿ ಹೇಳು"
"ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಷುರಾಮ" ಮುಂದಿನ ಅವತಾರ ಕಂಡು ಪೂಜಾ ಜೀತ್ ಕಡೆ ತಿರುಗಿದಳು.
"ಹಲಾಯುಧ, ಹೂಂ ಮುಂದೆ" ಜೀತ್ ಸೇರಿಸಿದ
"ರಾಮ, ಕೃಷ್ಣ, ಕಲ್ಕಿ" ಮುಗಿಸಿದಳು ಪೂಜಾ. "ಅರೆ! ಬುದ್ಧ ಇಲ್ಲವೇ ಇಲ್ಲ...?"
"ಕರಕ್ಟ್! ಬುದ್ಧ ಇಲ್ಲ. ಹಲಾಯುಧ, ಜೊತೆಗೆ ಸ್ಥಳಗಳು ಸ್ವಲ್ಪ ಹೆಚ್ಚು ಕಡಿಮೆ"
"ಹಲಾಯುಧ? ಅಂದರೆ ಬಲರಾಮ?" ಸಂಪೂರ್ಣ ಗೊಂದಲದಲ್ಲಿ ಕೇಳಿದಳು ಪೂಜಾ
"ಮಣ್ಣಂಗಟ್ಟಿ. ಎಲ್ಲ ಬುದ್ಧನನ್ನು ಸೇರಿಸಲು ಮಾಡಿದ ತರಲೆ" ಜೀತ್ ಸಿಟ್ಟಿನಿಂದ ಹೇಳಿದ.
"ಆದರೆ, ಆದರೆ..."
"ಬುದ್ಧನಿಗೆ ಹಿಂದೂ ಧರ್ಮಕ್ಕೆ ಯಾವ ಸಂಬಂಧವೂ ಈಲ್ಲ. ಯೋಚಿಸು -ಎಲ್ಲ ಅವತಾರಗಳಿಗೆ ಒಂದು ಗುರಿ, ಧ್ಯೇಯ ಇದೆ. ಮತ್ಸ್ಯ ಪ್ರಳಯದಲ್ಲಿ ಸಪ್ತ-ಋಷಿಗಳಿಗೆ ದಾರಿ ತೋರಿಸಿ, ಕೂರ್ಮ ಸಮುದ್ರ ಮಥನದಲ್ಲಿ ಮಂದಾರಪರ್ವತವನ್ನು ಎತ್ತಿ ಹಿಡಿದು, ವರಾಹ ಹಿರಣ್ಯಾಕ್ಷನನ್ನು ಕೊಂದು, ಭೂದೇವಿಯನ್ನು ರಕ್ಷಿಸಿ, ನರಸಿಂಹನು ಹಿರಣ್ಯಕಷಿಪುವನ್ನು ಕೊಂದು, ಪ್ರಹ್ಲಾದನನ್ನು ರಕ್ಷಿಸಿ, ಪರಷುರಾಮ ಧರ್ಮಭ್ರಷ್ಟರಾದ ಕ್ಷತ್ರಿಯರನ್ನು ಸಂಹರಿಸಿ, ರಾಮನು ತಾಟಕಿ, ರಾವಣಾಸುರ-ಕುಂಭಕರ್ಣರನ್ನು ವಧಿಸಿ, ಕೃಷ್ಣನು ಕಂಸನನ್ನು ಕೊಂದು, ಗೀತೆಯನ್ನು ಬೋಧಿಸಿ, ಕುರುಕ್ಷೇತ್ರದಲ್ಲಿ ಧರ್ಮವನ್ನು ಎತ್ತಿ ಹಿಡಿದು ಹೀಗೆ ಎಲ್ಲಾ ಅವತಾರಗಳು ಗುರಿಗಳನ್ನು ಸಾಧಿಸಿವೆ. ಬುದ್ಧ ಸಾಧಿಸಿರುವುದೇನನ್ನು?"
"ಬೌದ್ಧ ಧರ್ಮ ಸ್ಥಾಪನೆ ಮಾ..."
"ಹೂಂ ಬೌದ್ಧ ಧರ್ಮ! ವೇದದ ಮಹತ್ತನ್ನೇ ಪರಿತ್ಯಜಿಸಿದ ಬೌದ್ಧ ಧರ್ಮ ಎಂದಿಗೂ ಹಿಂದೂ ದೇವತೆಯ ಸ್ಥಾಪನೆಯಾಗಿರಲಾರದು. ಬುದ್ಧ ಹಿಂದೂ ದೇವತೆಯೇ ಆಗಿದ್ದರೆ ಆದಿ ಶಂಕರಾಚಾರ್ಯ, ಕುಮಾರಿಲಭಟ್ಟರಂತಹ ಮಹಾನ್ ಪುಣ್ಯಪುರುಷರು ಏಕೆ ಬೌದ್ಧ ಧರ್ಮವನ್ನು ನಿರ್ಮೂಲ ಮಾಡಲು ಶ್ರಮಿಸಿದ್ದಾರೆ? ಶಂಕರಾಚಾರ್ಯರು ಬೌದ್ಧ ಪಂಡಿತರನ್ನು ತರ್ಕದಲ್ಲಿ ಸೋಲಿಸಿದ ನಂತರ ಅವರ ಅತ್ಯಂತ ಶ್ರೇಷ್ಠ ಮಹಾಬೋಧಿ ದೇವಸ್ಥಾನ ಶಂಕರ ಮಠದ ಆಧೀನದಲ್ಲಿತ್ತು. ಅಲ್ಲೊಂದು ಈಶ್ವರನ ಲಿಂಗವೂ ಸ್ಥಾಪನೆಯಾಗಿದೆ ಗೊತ್ತೇ?"
"ದಾನವರನ್ನು, ಅಧರ್ಮಿಗಳನ್ನು ಅಡ್ಡಹಾದಿಗೆಳೆಯಲು ಹಿಂದೂ ಧರ್ಮದಿಂದ ಪ್ರಾಪ್ತವಾಗುವ ಪುಣ್ಯದಿಂದ ವಂಚಿಸಲು ಸುಳ್ಳು ಧರ್ಮ ಬೋಧನೆ..." ಮಧ್ಯೆ ದಿನಕರ ಸೇರಿಸಿದ.
"ಯಾಹ್ ರೈಟ್! ಬೌದ್ಧ ಧರ್ಮದ ಖ್ಯಾತ ಪಂಡಿತರಾರು? ನಾಗಾರ್ಜುನ, ದಿಗನಾಗ, ಧರ್ಮಕೀರ್ತಿ, ಅಸಂಗ, ವಸುಬಂದು ಇವರೆಲ್ಲ ಹುಟ್ಟು ಬ್ರಾಹ್ಮಣರೇ. ಇವರೆಲ್ಲ ದಾನವರೆನ್ನುತ್ತೀಯಾ? ಹೋಗಲಿ ಬುದ್ಧಿಸಂ ಇಂಡಿಯಾಲಿ ಸುಮಾರು ೮-೯ನೇ ಶತಮಾನದಲ್ಲಿ ಮಾಯವಾಯ್ತು. ಎಲ್ಲರೂ ಪುನಃ ಹಿಂದೂಗಳಾಗಿ ರೀಕನ್ವರ್ಟ್ ಆದರು. ಏನಾಯಿತು ನಿನ್ನ ದಾನವ, ಸುಳ್ಳು ಧರ್ಮ?"
"ಇನ್ನೂ ಇದೆ ಕೇಳಿ. ಪುರಾಣಗಳ ಪ್ರಕಾರ ಹತ್ತು ಅವತಾರಗಳಲ್ಲಿ ನಾಲ್ಕು ಕೃತ ಯುಗದಲ್ಲಿ, ಮೂರು ತ್ರೇತಾಯುಗದಲ್ಲಿ, ಎರಡು ದ್ವಾಪರ ಯುಗದಲ್ಲಿ ಹಾಗು ಒಂದು ಕಲಿಯುಗದಲ್ಲಿ ಮೂಡಬೇಕು. ಬುದ್ಧನ ಕಾಲ ಯಾವುದು?"
"ಎರಡುವರೆ-ಸಾವಿರ ವರ್ಷ, ಸುಮಾರು ೫೦೦ ಬಿ.ಸಿ." ಸಂಭಾಷಣೆ ಎತ್ತ ಹೋಗುತ್ತಿದೆಯೆಂದರಿತು ಪಿಸುಗುಟ್ಟಿದ ದಿನಕರ.
"ಹೂಂ. ಮಹಾಭರತದಲ್ಲಿ ಬರುವ ಇರ್ರೆಫ್ಯೂಟೆಬಲ್ ಆಸ್ಟ್ರೋನಾಮಿಕಲ್ ಎವಿಡೆನ್ಸ್ ಪ್ರಕಾರ ಮಹಾಭಾರತ ಯುದ್ಧವಾಗಿದ್ದು ೩೧೩೮ ಬಿ.ಸಿ, ಕೃಷ್ಣನ ಅಂತ್ಯವಾಗಿ ಕಲಿಯುಗ ಆರಂಭವಾಗಿದ್ದು ೩೧೦೨ ಬಿ.ಸಿ. ಎಂದು ಹಲವಾರು ಸ್ಕಾಲರ್ಸ್ ನಿರ್ಧರಿಸಿದ್ದಾರೆ. ಐಹೊಳೆ ಶಾಸನವೂ ಇದೇ ಹೇಳುತ್ತದೆ. ಕೆಲವರು ಬುದ್ಧನ ಕಾಲವನ್ನು ಸುಮಾರು ೧೮೦೦ ಬಿ.ಸಿ. ವರೆಗು ಎಳೆಯುತ್ತಾರೆ. ಆದರೂ, ಕ್ಲಿಯರ್ಲಿ, ಇದು ಕಲಿಯುಗದಲ್ಲಿ ಬಂದಿದೆ. ಅರ್ಥಾತ್, ೯ನೇ ಅವತಾರ ಬುದ್ಧನಲ್ಲ"
"ಹಾಗಿದ್ದರೆ ಹಳೇ ಕಾಲದ ದೇವಸ್ಥಾನಗಳು..." ಪೂಜಾ ನಿತ್ರಾಣ ಧ್ವನಿಯಲ್ಲಿ
"ಹಿಂದೂ ಧರ್ಮದಲ್ಲಿ ಆ ರೀತಿ ದೇವಾಲಯಗಳನ್ನು ಕಟ್ಟುವ ಸಂಪ್ರದಾಯವಿರಲಿಲ್ಲ. ಕರ್ಮಕಾಂಡ ಹಿಂದೂ ಧರ್ಮದ ಡೆಫಿನಿಶನ್ ಆಗಿತ್ತು. ದಶಾವತಾರ ಕೆತ್ತನೆ ಇರುವ ಅತೀ ಹಳೆ ಹಿಂದೂ ದೇವಸ್ಥಾನ ೯-೧೦ನೇ ಶತಮಾನದ್ದು. ಅಷ್ಟು ಹೊತ್ತಿಗೆ ಎಡವಟ್ಟಾಗಿಹೋಗಿತ್ತು"
"ಅಂದರೆ..."
"ಹುಟ್ಟುತ್ತಿದ್ದ ಬೌದ್ಧ ಧರ್ಮಕ್ಕೆ ಸ್ವಪರಿಚಯವಿರಲಿಲ್ಲ. ಹಿಂದೂ ದಂತಕತೆ-ಪುರಾಣಗಳಲ್ಲಿ ವಿಷ್ಣುವನ್ನು ತಗೆದು ಬುದ್ಧನನ್ನು ಹಾಕಿ ಅವುಗಳನ್ನು ತಮ್ಮದಾಗಿಸಿಕೊಂಡರು. ಸ್ತೂಪಾಗಳನ್ನು ಕಟ್ಟುವಾಗ ಈ ಕತೆಗಳನ್ನು ಆ ಸ್ತೂಪಾಗಳ ಮೇಲೆ ಕೆತ್ತಿಸಿದರು. ನಂತರ ಉಂಟಾದ ಕನ್‌ಫ್ಯೂಶನ್‌ನಲ್ಲಿ ಅದೇ ಸ್ಥಪತಿಗಳು ಹಿಂದೂ ದೇವಸ್ಥಾನಗಳನ್ನು ಕೆತ್ತುವಾಗ ಬುದ್ಧನನ್ನು ಅಲ್ಲಲ್ಲಿ ಕೆತ್ತಿರಬೇಕು. ಅಲ್ಲಿಂದ ಶುರುವಾಯಿತು ಎಲ್ಲಾ ತರಲೆ. ಅಂಥದ್ದರಲ್ಲೂ ಬಹಳಷ್ಟು ಕಡೆ ಹಲಾಯುಧನನ್ನು ಕೆತ್ತಲಾಗಿದೆ -ಹೆಚ್ಚಾಗಿ ದಕ್ಷಿಣದಲ್ಲಿ" ವಿವರಿಸಿದ ಜೀತ್.
ಇಬ್ಬರ ಶಂಕಾಮುಖಭಾವ ನೋಡಿ "ಲುಕ್, ಚೀನೀ-ಪ್ರಯಾಣಿಕರಾದ ಫಾ ಹಿಯಾನ್, ವೆನ್ ಸಾಂಗ್ ಇವರುಗಳು ಬುದ್ಧನ ಅವತಾರದ ಸ್ಟ್ಯಾಟಸ್ ಬಗ್ಗೆ ಯಾವ ಪುರಾವೆಗಳೂ ಬಿಟ್ಟಿಲ್ಲ. ಅದರಲ್ಲೂ ವೆನ್ ಸಾಂಗ್ -ಮಹಾನ್ ಅಹಂಕಾರಿ -ಬುದ್ಧ ಹಾಗು ಬೌದ್ಧ ಧರ್ಮದ ಒಂದೊಂದು ಸಣ್ಣ ಸಣ್ಣ ವಿಚಾರಗಳನ್ನೂ ಸವಿಸ್ತಾರವಾಗಿ ಬರೆದಿದ್ದಾನೆ. ಆದರೆ ಬುದ್ಧನ ಅವತಾರದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ನನ್ನ ಪ್ರಕಾರ ಕನ್‌ಕ್ಲೂಸಿವ್ ಪ್ರೂಫ್"
"ನಾಗಾನಂದ ನನ್ನ ಹೆಸರು ಬರೆದು ಒಂದು ಸಂದೇಶ ಬಿಟ್ಟು ಹೋಗಿದ್ದಾನೆ" ದಿನಕರನಿಗೆ ಅರಿವೆ ಗೋಚರವಾಗುತ್ತ ನಾಗಾನಂದನ ಚೀಟಿಯನ್ನು ತೆಗೆದು ಮೊದಲ ತ್ರಿಪದಿ ಓದಿದ.
ಜೀತ್ ಹಿಂದಕ್ಕೊರಗಿ ಆಲೋಚಿಸ ತೊಡಗಿದ. ಅಷ್ಟರಲ್ಲಿ ಫೋನ್ ಮೊಳಗಿತು.
"ಬಂದೆ ಒಂದು ನಿಮಿಷ" ಫೋನ್ ಕೈಗೆತ್ತಿಕೊಂಡು "ಹಲೋ..." ಎನ್ನುತ್ತ ಜೀತ್ ಒಳಗೆ ಹೋದ.
ಕೆಲ ನಿಮಿಷಗಳ ನಂತರ ಇನ್ನೂ ಫೋನ್ ಕೈಯ್ಯಲ್ಲೇ ಹಿಡಿದು ಹೊರಬಂದಾಗ ಪೂಜಾ ಕೇಳಿದಳು.
"ಸರಿ ಹಾಗಿದ್ದರೆ ಬುದ್ಧ ಅವತಾರವಾದರೆ ಫೈಲ್ಯುರ್, ಪ್ರಾಬಬ್ಲಿ ಅವತಾರವೇ ಅಲ್ಲವೆಂದು ತಿಳೀತು. ಹಾಗಾದರೆ ಹಲಾಯುಧ?"
"ದೇರ್ ಯು ಗೋ" ಜೀತ್ ಧ್ವನಿ ಹಗುರವಾಗಿತ್ತು. "ಹಲಾಯುಧ ಈಸ್ ದ ಸೆವೆನ್‌ತ್ ಅವತಾರ. ಪರಷುರಾಮ ಮತ್ತು ಕೃಷ್ಣರ ಮಧ್ಯೆ. ಹಲಾಯುಧನ ಕತೆಗಳು ಬೇಕಾದರೆ ಬಲರಾಮನ ಕತೆಗಳನ್ನು ನೋಡಬೇಕು. ಬಲರಾಮನ ರೈವತ-ರೇವತಿಯರ ಕತೆ, ಭೂಮಿಯಲ್ಲಿ ಬರ ಬಂದಾಗ ಹಲಪ್ರಹಾರದಿಂದ ಯಮುನೆಯ ದಿಕ್ಕು ಬದಲಾಯಿಸಿದ ಕತೆ ಇವೆಲ್ಲವೂ ಬಲರಾಮನಿಗೆ ಸ್ವಲ್ಪ ಔಟ್-ಆಫ್-ಪ್ಲೇಸ್ ಆಗಿ ಕಾಣುತ್ತವೆ. ಇವೆಲ್ಲ ಪ್ರಾಬಬ್ಲಿ ಈ ಹಲಾಯುಧನ ಕತೆಗಳಾಗಿದ್ದಿರಬೇಕು. ನಂತರ ಬುದ್ಧ ಸೀನ್‌ಗೆ ಬಂದಾಗ ಹಲಾಯುಧನನ್ನು ಕತ್ತರಿಸಿ, ಬುದ್ಧನನ್ನು ಕೊನೆಗೆ ಸೇರಿಸಿ, ಹಲಾಯುಧನ ಕತೆಗಳನ್ನು ಬಲರಾಮನಿಗೆ ಸೇರಿಸಿರಬೇಕು. ಇದಕ್ಕೇ ಪ್ರೂಪ್ ಹುಡುಕುತ್ತಿದ್ದ ನಮ್ಮ ನಾಗನಂದ್. ಅದನ್ನೇ ಅರ್ಥ ಮಾಡಿಸಲು ಹಲವನ್ನು ಹಿಡಿದಿದ್ದಿರಬೇಕು"
"ಇನ್ನೂ ಒಂದು ಆರ್ಗ್ಯೂಮೆಂಟ್ ಇದೆ. ದಶಾವತಾರದಲ್ಲಿ ಅನೇಕರು ಡಾರ್ವಿನ್‌ನ ಥಿಯರಿ ಆಫ್ ಎವಲ್ಯೂಶನ್ ಕಂಡಿದ್ದಾರೆ. ಮತ್ಸ್ಯ -ಲೈಫ್ ಒರಿಗಿನೇಟೆಡ್ ಇನ್ ದ ಓಶನ್, ನಂತರ ಕೂರ್ಮ -ಕೋಲ್ಡ್ ಬ್ಲಡೆಡ್, ಆಮ್‌ಫೀಬಿಯಸ್, ವರಾಹ -ಮ್ಯಾಮಲ್ ಆದರೂ ಕೊಳಚೆ ಪ್ರದೇಶದಲ್ಲಿರುತ್ತದೆ, ನರಸಿಂಹ -ಅರ್ಧ ಮಾನವ ಅರ್ಧ ಪ್ರಾಣಿ, ವಾಮನ -ಕುಬ್ಜ ಮನುಷ್ಯ: ಪ್ರಿ-ಹಿಸ್ಟೋರಿಕ್ ಮ್ಯಾನ್, ಪರಶುರಾಮ -ಕೊಡಲಿ ಹಿಡಿದ ಹಂಟರ್-ಗ್ಯಾದರರ್, ಈಗ ತೊಂದರೆ ಶುರು. ರಾಮ, ಕೃಷ್ಣ, ಬುದ್ಧ, ಕಲ್ಕಿ ತೊಗೊಂಡರೆ ರಾಮ -ರಾಜ್ಯ, ರಾಷ್ಟ್ರಗಳಾಗಿ ಜನ ಒಗ್ಗೂಡಿದ ಸಂಕೇತ, ಕೃಷ್ಣ -ನಿರತಿಶಯ ಮಾನವ, ಪರ್ಫೆಕ್ಟ್ ಬೀಯಿಂಗ್, ಬುದ್ಧ -ಜ್ಞಾನೋದಯವಾದ ಮಾನವ, ಕಲ್ಕಿ -ಬೇಕಾದರೆ ವಿನಾಶವೆನ್ನು ಇಲ್ಲವೇ ಸೂಪರ್ಮ್ಯಾನ್ ಅನ್ನು. ಆದರೆ ಇಲ್ಲಿ ಸ್ವಲ್ಪ ಸರಿಯಿಲ್ಲ: ನಿರತಿಶಯ ಮಾನವನಾದ ಮೇಲೆ ಜ್ಞಾನೋದಯವೇ? ವಿಚಿತ್ರವೆನಿಸುವುದಿಲ್ಲವೇ? ಇದರ ಬದಲು ಪರಶುರಾಮನ ನಂತರ ಹಲಾಯುಧನನ್ನು ಹಾಕಿದರೆ? ಹಲಾಯುಧ -ಜನರು ನೆಲೆಸಿ ವ್ಯವಸಾಯ ಶುರು ಮಾಡಿದ ಸಂಕೇತ, ನಂತರ ರಾಮ -ನೇಶನ್ ಬಿಲ್ಡಿಂಗ್, ಕೃಷ್ಣ -ಪರ್ಫೆಕ್ಟ್ ಬೀಯಿಂಗ್, ಕಲಿಕಿ -ಸೂಪರ್ ಮ್ಯಾನ್. ಈಗ ನೋಡು ಲಿಂಕು ಸರಿಯಾಗಿದೆ"
"ನೀವು ಹೇಳುತ್ತಿರುವುದರಲ್ಲೂ ಸ್ವಲ್ಪ ಅರ್ಥವಿದೆ" ಒಪ್ಪಿಕೊಂಡಳು ಪೂಜಾ.
"ನಾನು ಹೇಳುತ್ತಿರುವುದರಲ್ಲೇ ಅರ್ಥವಿರೋದು, ಮಗೂ, ನೀನು ತಿಳಿದುಕೊಂಡಿರುವುದರಲ್ಲಿ ಅರ್ಥವಿಲ್ಲ" ಜೀತ್ ಮುಗಿಸಿದ. "ದಿನಕರ್, ನಾಗಾನಂದ್ ಹತ್ತು ವರ್ಷಗಳಿಂದ ಈ ದಶಾವತಾರದ ವಿಷಯದಲ್ಲೇ ಕೆಲಸ ಮಾಡುತ್ತಿದ್ದ. ಪುರಾಣಗಳು ಹೇಗೆ ಬದಲಾದವು, ಬುದ್ಧ ಹೇಗೆ ಅವತಾರನಾದ, ಏಕೆ ಬುದ್ಧ ತಪ್ಪು, ಹಲಾಯುಧ ಸರಿ ಎಂದು ಸಿದ್ಧಪಡಿಸಲು ಪ್ರೂಫ್ ಒಗ್ಗೂಡಿಸುತ್ತಿದ್ದ. ಅವನಿಗೆ ಯಾರಮೇಲೂ ಹೆಚ್ಚು ನಂಬಿಕೆಯಿರಲಿಲ್ಲ. ತನ್ನ ಕೆಲಸದಲ್ಲಿ ಸೀಕ್ರೆಸಿ ಮೈನ್‌ಟೈನ್ ಮಾಡುತ್ತಿದ್ದ. ಅದಕ್ಕೇ ಕೇವಲ ನಿನಗರ್ಥವಾಗುವಂತೆ ತನ್ನ ರಿಸರ್ಚ್ ಬಗ್ಗೆ ಏನಾದರೂ ಕ್ಲೂ ಬಿಟ್ಟಿರಬೇಕು. ಎಲ್ಲಿ ಮತ್ತೊಮ್ಮೆ ಓದು"
ದಿನಕರ ಪುನಃ ಓದಿದ
"ಶಾರದೆಯ ಪೀಠ -ಅದಂತೂ ಶ್ರೂಂಗೇರಿಯೇ ಇರಬೇಕು. ಅಲ್ಲಿ ದಹನವಾಣಿಯೇ?"
"ಓಹ್! ಮೊದಲಿಗೆ ಏನೋ ಸಂಖ್ಯೆಗಳಿವೆ -BXL.234.102W"
"ಲೈಬ್ರರಿ" ಪೂಜಾ ಹೇಳಿದಳು
"ಆಂ?.."
"ಅದು ಲೈಬ್ರರಿ ಪುಸ್ತಕದ ಕಾಲ್-ನಂಬರ್. ನ..." ಅರ್ಧದಲ್ಲೇ ಪೂಜಾಳ ಧ್ವನಿ ಕತ್ತರಿಸಿ ಹೋಯಿತು. ರಕ್ತ-ಕೆಂಪು ನಿಲುವಂಗಿ ಧರಿಸಿದ್ದ ವ್ಯಕ್ತಿ ಪೂಜಾಳ ಕತ್ತಿಗೆ ಚಾಕುವೊಂದನ್ನು ಹಿಡಿದು ನಿಂತಿದ್ದ.
"ಆ ಚೀಟಿ ನನಗೆ ಕೊಟ್ಟುಬಿಡಿ. ಇಲ್ಲದಿದ್ದರೇ ಇವಳ ಕತ್ತು..."
"ಇಲ್ಲಿದೆ ಚೀಟಿ" ದಿನಕರ ಜೇಬಿನಲ್ಲಿಟ್ಟುಕೊಂಡಿದ್ದ ಚೀಟಿಯನ್ನು ನಿಧಾನವಾಗಿ ತೆಗೆದು ಕೈಯಲ್ಲಿ ಹಿಡಿದು ಕೈನೀಡಿ ಭಿಕ್ಕುವಿನ ಕಡೆ ಹೊರಟ. ಆ ಕ್ಷಣದಲ್ಲಿ ಚೂಪಾದ ಹೀಲ್ಸ್ ಉಳ್ಳ ಶೂ ಧರಿಸಿದ್ದ ಪೂಜಾ ಹಿಮ್ಮಡಿಯಿಂದ ಭಿಕ್ಕುವಿನ ಕಾಲನ್ನು ಬಲವಾಗಿ ತುಳಿದಳು. ಜೊತೆಗೇ ತನ್ನ ಮೊಣಕೈಯಿಂದ ಅವನ ಪಕ್ಕೆಗೆ ಗುದ್ದಿದಳು. ನೋವಿನಿಂದ ಕೆಳಬಗ್ಗಿದ್ದ ಭಿಕ್ಕುವನ್ನು ಜೀತ್ ಬಲವಾಗಿ ಚೆಚ್ಚಿದ. ಜ್ಞಾನ ತಪ್ಪಿ ಭಿಕ್ಕು ಕೆಳಗೆಬಿದ್ದ. ತಕ್ಷಣ ಜೀತ್, ದಿನಕರ ಇಬ್ಬರೂ ಸೇರಿ ಅವನನ್ನು ಕಟ್ಟಿ ಹಾಕಿದರು.
"ಆವತಂಶಕ!" ಜೀತ್ ಉದ್ಗಾರ ತೆಗೆದ
"ಹ್ಞಾ..?"
"ಈತ. ಆವತಂಶಕ ಸಂಘದವ. ಇವನ ಕೆಂಪು ಗೌನು, ಬೆರಳಲ್ಲಿರುವ ಲೋಟಸ್-ಸ್ಟ್ಯಾಂಪ್ ಉಂಗುರ ನೋಡು"
ಪೂಜಾ, ದಿನಕರ ಕಕ್ಕಾಬಿಕ್ಕಿ ಒಬ್ಬರನ್ನೊಬ್ಬರು ನೋಡಿದರು.
"ಆವತಂಶಕ ಎಂದರೆ ಒಂದು ಊಂ... ಹಿಂದೂನೂ ಅಲ್ಲ, ಬುದ್ಧಿಸ್ಟೂ ಅಲ್ಲ -ಎರಡರ ಮಧ್ಯದ ಒಂದು ನೆಬ್ಯುಲಸ್ ಆರ್ಗನೈಸೇಶನ್. ಅತ್ತ ಪರದೇಶಗಳಿಂದ ಬರುವ ಬುದ್ಧಿಸ್ಟ್ ಗ್ರಾಂಟ್‌ಗಳನ್ನೂ ಹೊಡೆಯುತ್ತಾರೆ, ಇತ್ತ ಬೌದ್ಧಾವತಾರ ಅದು ಇದು ಹೇಳುಕೊಂಡು ಹಿಂದೂಗಳ ದುಡ್ಡೂ ಹೊಡೆಯುತ್ತಾರೆ. ಒಟ್ಟಿನಲ್ಲಿ ಕಳೆದ ಐದೇ ವರ್ಷಗಳಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸ್ ಗಗನಕ್ಕೇರಿದೆ. ಇವರ ಫಾಲೋಅರ್ಸ್ ಎಲ್ಲೆಲ್ಲೂ ಇದ್ದಾರೆ. ಬಿಸಿನೆಸ್‌ಮೆನ್, ಬ್ಯಾಂಕರ್ಸ್, ಲಾಯರ್ಸ್, ಪಾಲಿಟಿಶ್ಯನ್ಸ್, ಹೀಗೆ. ಸಮಾಜದಲ್ಲಿ ತುಂಬಾ ಇನ್‌ಫ್ಲೂನ್ಸ್ ಇಟ್ಟಿದ್ದಾರೆ. ಎಷ್ಟರ ಮಟ್ಟಿಗೆಂದರೆ ೧೯೯೯ರಲ್ಲಿ ಕಾಂಚಿ-ಕಾಮಕೋಟಿ ಜಗದ್ಗುರು ಜಯೇಂದ್ರ ಸರಸ್ವತಿ ಹಾಗು ಮಹಾಬೋಧಿ ವಿಪಾಸನಾಚಾರ್ಯ ಸತ್ಯನಾರಾಯಣ ಗೊಯಂಕಾಜಿ ನಡುವೆ ಮಾತು-ಕತೆ ನಡೆದು ಇಬ್ಬರೂ ಸೇರಿ 'ಬೌದ್ಧಾವತಾರ ಒಂದು ಮಿಸ್‌ಕಾನ್ಸೆಪ್ಷನ್; ಇದು ನಿಜವಲ್ಲ, ಇದನ್ನು ಮುಂದುವರೆಸಬಾರದು' ಎಂದು ಒಂದು ಪ್ರೆಸ್ ರಿಲೀಸ್ ಕೊಟ್ಟರು. ಆಮೇಲೆ ಜಯೇಂದ್ರ ಸರಸ್ವತಿಗೆ ಏನಾಯಿತು ಎಲ್ಲಾರಿಗೂ ತಿಳಿದಿದೆ. ಕೇಸ್ ಆಫೀಸರ್ ಈ ಆವತಂಶಕ ಸಂಘದವನೆಂದು ನಂತರ ತಿಳಿದುಬಂತು. ಬಹಳ ಡೇಂಜರ್ ಜನ ಇವರು" ಜೀತ್ ವಿವರಿಸಿದ.
"ಹೂಂ -ಕಾಂಚಿ ಜಗದ್ಗುರು ಮರ್ಡರ್ ಕೇಸ್‌ನಲ್ಲಿ ಸಿಕ್ಕಿಬಿದ್ದರು -ನಾನೇ ಆ ಸ್ಟೋರಿ ಕವರ್ ಮಾಡಿದ್ದೆ. ಆದರೆ, ಈತ? ಇಲ್ಲಿ ಏಕೆ? ಪ್ರೊಫೆಸರ್ ನಾಗಾನಂದ್ ಸಂದೇಶಕ್ಕೂ ಇವನಿಗೂ ಏನು ಸಂಬಂಧ? ಅದನ್ನೇಕೆ ಕೇಳುತ್ತಿದ್ದ?" ಪೂಜಾ ಪ್ರಶ್ನಿಸಿದಳು.
"ನಾಗಾನಂದನ ರಿಸರ್ಚ್ ಬೌದ್ಧಾವತಾರ ಸುಳ್ಳೆಂದು ಕಡಾಖಂಡಿತವಾಗಿ ಸ್ಥಾಪಿಸಿದರೆ, ಆವತಂಶಕ ತೊಂದರೆಗೆ ಬಿದ್ದೀತು. ಅವರಿಗೆ ಬರುವ ಕೋಟ್ಯಾಂತರ ರೂಪಾಯಿ ಚಂದಾ-ಧಾರೆ ಒಣಗಿ ಹೋದೀತು. ಚೀಟಿಯನ್ನು ಕಸಿದು ಮೂಲಗಳನ್ನೇ ನಾಶ ಮಾಡಲು ಬಂದಿರಬೇಕು" ಜೀತ್ ಊಹಿಸಿದ.
"ಆದರೆ ಅವರಿಗೆ ಇಂತಹ ಸಂದೇಶವಿದೆ, ಅದೂ ಡಾ. ದಿನಕರ್ ಬಳಿ ಇದೆಯೆಂದು ತಿಳಿಯುವುದು ಹೇಗೆ ಸಾಧ್ಯ?"
"ಬ್ರಹ್ಮಾವರ್..." ದಿನಕರ ಉಸುರಿದ. ಜೀತ್, ಪೂಜಾ ಅವನಕಡೆ ತಿರುಗಿದರು.
"ಬ್ರಹ್ಮಾವರ್?"
"ನಾಗಾನಂದನ ಕೊಲೆ ಇನ್ವೆಸ್ಟಿಗೇಟ್ ಮಾಡಲು ಬಂದಿದ್ದ ಪೋಲೀಸ್ ಆಫೀಸರ್ -ನನ್ನನ್ನು ಕೊಲೆ ಆಪಾದನೆ ಮೇಲೆ ಅರೆಸ್ಟ ಮಾಡಲು ಹೊರಟಿದ್ದವ -ಅವನ ಬೆರಳಲ್ಲೂ ಇದೇ ರೀತಿ ಕಮಲದುಂಗುರವಿತ್ತು" ದಿನಕರ ವಿವರಿಸಿದ.
"ನಿನ್ನನ್ನು ಅರೆಸ್ಟ್...? ನಾಗಾನಂದನ ಕೊಲೆ ಆಪಾದನೆ ಮೇಲೆ?" ಕೋಪ, ಆಶ್ಚರ್ಯಗಳಿಂದ ಕೂಡಿದ ಜೀತ್ ಧ್ವನಿ.
"ನಾ..." ಮಾತನಾಡಲು ಹೊರಟ ದಿನಕರ ಬಾಯಿ ಮುಚ್ಚಿದ.
"ನಿಮ್ಮ ಸಹವಾಸವೇ ಬೇಡ. ಮರ್ಡರ್ ಸಸ್ಪೆಕ್ಟ್‌ಗಳಿಬ್ಬರಿಗೆ ಆಶ್ರಯ ಕೊಟ್ಟಿರುವುದಲ್ಲದೆ ಮನೆಯಲ್ಲೆಲ್ಲ ಖದೀಮರು, ದರೋಡೆಕೋರರು! ಈಗಲೇ ಪೋಲೀಸ್‌ಗೆ ಫೋನ್ ಮಾಡುವೆ!" ಎನ್ನುತ್ತ ಜೀತ್ ಫೋನ್ ಕಿವಿಗೇರಿಸಿದ.
"ಜೀತ್, ಜೀತ್ -ಇಲ್ಲಿ ನೋಡು ಇನ್ನೂ ಕ್ಲೂಗಳಿವೆ" ಹಾಳೆಯನ್ನು ತೋರಿಸುತ್ತ ಹೇಳಿದ ದಿನಕರ "ನಿನಗೂ ನಾಗಾನಂದ ಕಂಡ ಪ್ರೂಫ್ ಬೇಕಾ? ನಡಿ ಶೃಂಗೇರಿಗೆ ಹೋಗಿ ಒಟ್ಟಿಗೆ ಏನೆಂದು ನೋಡೋಣ"
ಜೀತ್ ಪೋನ್ ಕಿವಿಯಿಂದಿಳಿಸಿದ.
ವಿಚಾರಮಗ್ನ ಧ್ವನಿಯಲ್ಲಿ ದಿನಕರ ಮುಂದುವರೆಸಿದ "ಈ ಆವತಂಶಕ ಸಂಘದವರೇ ಬಹುಶಃ ನಾಗಾನಂದನ ಕೊಲೆಯ ಸಂಚು ಹೂಡಿರಬಹುದು -ಬ್ರಹ್ಮಾವರ, ಈ ಭಿಕ್ಕು, ಈ ನಿಗೂಢ-ರಹಸ್ಯದ ಎಲ್ಲ ತುಣುಕುಗಳು ಸ್ವಸ್ಥಾನಕ್ಕೆ ಸೇರುತ್ತಿವೆ" ಕೊಂಚ ಮೌನದ ನಂತರ "ನಮ್ಮ ಮಿತ್ರ ನಾಗಾನಂದನ ಕೊಲೆಯ ಸಂಚು ಹೊರತರಬೇಕಾದರೆ ಇದೊಂದೇ ದಾರಿ, ಜೀತ್, ಪ್ಲೀಸ್"
*****
"ಈ ಹಲಾಯುಧ-ಬುದ್ಧ ಎಕ್ಸ್‌ಚೇಂಜ್ ಹೇಗಾಯಿತು" ಕಾರಿನಲ್ಲಿ ಮುಂದೆ ಜೀತ್ ಪಕ್ಕ ಕುಳಿತಿದ್ದ ಪೂಜಾ ಕೇಳಿದಳು.
ದಿನಕರನ ಆಕ್ಷೋಭ ಮನವಿಯ ನಂತರ ಜೀತ್ ಸೌಮ್ಯವಾಗಿ, ಶೃಂಗೇರಿಗೆ ಹೋಗಲೊಪ್ಪಿದ್ದ. ಭಿಕ್ಕುವನ್ನು ಬಿಟ್ಟು ಹೋಗುವುದೂ ಕಷ್ಟ, ಪೋಲೀಸರಿಗೊಪ್ಪಿಸುವುದೂ ತೊಂದರೆಯೆಂದು ನಿರ್ಧರಿಸಿ, ಅವನನ್ನೂ ಕಟ್ಟಿ ಹಾಕಿದ್ದಂತೆಯೇ ಜೀತ್ ಕಾರಿನಲ್ಲಿ ದಿನಕರನೊಡನೆ ಹಿಂದಿನ ಸೀಟಿನಲ್ಲಿ ಕೂರಿಸಿ, ಜೀತ್ ಹಾಗೂ ಪೂಜಾ ಮುಂದೆ ಕುಳಿತು ಶೃಂಗೇರಿ ಕಡೆ ಸಾಗುತ್ತಿದ್ದರು. ರಸ್ತೆಗಳ ಮೇಲೆ ಹೆಚ್ಚು ವಾಹನಗಳಿಲ್ಲವಾಗಿ ವೇಗದಿಂದ ಸಾಗಿ ಬೆಳಗಾಗುವಷ್ಟರಲ್ಲಿ ಶೃಂಗೇರಿ ತಲುಪುವ ಹಾಗೆ ಕಾಣಿಸುತ್ತಿತ್ತು. ಜ್ಞಾನ ತಪ್ಪಿ ಬಿದ್ದ ಭಿಕ್ಕು ಒಮ್ಮೆ ಎದ್ದು ತನ್ನ ಕಟ್ಟುಗಳೊಡನೆ ಸ್ವಲ್ಪ ಹೊತ್ತು ಹೋರಾಡಿ, 'ಸುಮ್ಮನಾಗದಿದ್ದರೆ ಪುನಃ ಚೆಚ್ಚಿ ಜ್ಞಾನ ತಪ್ಪಿಸುವೆ' ಎಂದು ಬೆದರಿಸಿದ ನಂತರ ಸುಮ್ಮನಾಗಿ ಮಲಗಿದ್ದ. ಸುಸ್ತಾಗಿದ್ದ ದಿನಕರ ಕೂಡ ಕುಳಿತಲ್ಲೇ ನಿದ್ದೆ ಮಾಡಿದ್ದ. ಪೂಜಾ, ಕಾರ್ ಚಲಿಸುತ್ತಿದ್ದ ಜೀತ್‌ಗೆ ಕಂಪನಿ ಕೊಡಲೆಂದು ಜೀತ್ ಜೊತೆ ಮಾತನಾಡುತ್ತಿದ್ದಳು.
"ಇದಕ್ಕೆ ಒಂದು ಸ್ಟ್ರೇಟ್ ಆನ್ಸರ್ ಇಲ್ಲ. ಬರೀ ಊಹೆಗಳಷ್ಟೆ. ಆಗಲೇ ಹೇಳಿದಂತೆ, ಸ್ಥಪತಿಗಳಿಂದ ಒತ್ತಾಯವಾಗಿ ಹಿಂದೂ ಕತೆಗಳಲ್ಲಿ ಬುದ್ಧನನ್ನು ಸೇರಿಸಿ ಆ ದೃಷ್ಯಗಳನ್ನು ಸ್ತೂಪಾಗಳ ಮೇಲೆ ಕೆತ್ತಿಸುತ್ತಿದ್ದರು. ಕಾಲ ಕ್ರಮೇಣ ಆ ಸ್ಥಪತಿಗಳನ್ನು ಫೋರ್ಸಿಬಲ್‌ಆಗಿ ಬುದ್ಧಿಸಂಗೆ ಕನ್ವರ್ಟ್ ಮಾಡಿದ್ದರೆಂದು ಕಂಡು ಬರುತ್ತದೆ. ಧರ್ಮ ಬದಲಾಯಿಸಿದ ಸ್ಥಪತಿಗಳು, ಈ ಬುದ್ಧನ ಐಕನೋಗ್ರಫಿಯನ್ನೇ ಅವರ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟಿರಬೇಕು. ನಂತರ, ಪ್ರಾಚೀನ ಭಾರತದಲ್ಲಿ ಬುದ್ಧಿಸಂ ಮಾಯವಾದ ಮೇಲೆ ಈ ಸ್ಥಪತಿಗಳೆಲ್ಲ ಪುನಃ ಹಿಂದೂಗಳಾದರು. ಹಿಂದೂಗಳೂ ದೇವತೆಗಳ ವಿಗ್ರಹಗಳುಳ್ಳ ದೇವಾಲಯಗಳನ್ನು ಕಟ್ಟಿಸಿದಾಗ, ಅದೇ ಸ್ಥಪತಿಗಳು ಅವರಿಗೆ ತಿಳಿದಿದ್ದ ಬುದ್ಧನಿರುವ ದೃಷ್ಯಗಳನ್ನು ಕೆತ್ತಿರಬೇಕು. ಕಾಲ ಕ್ರಮೇಣ, ಅದನ್ನೇ ನಿಜವಾದ ಪುರಾಣವೆಂದು ಜನರು ಭಾವಿಸಿರಬೇಕು. ಇದೇ ಕಾರಣ ಒರಿಜಿನಲ್ ದಶಾವತಾರದ ಕೆತ್ತನೆಗಳು ವಿರಳವಾಗಿರುವುದಕ್ಕೆ. ಒಂದು ಸುಳ್ಳನ್ನು ಮೇಲೆ ಮೇಲೆ ಹೇಳಿ ಅದನ್ನೇ ನಿಜವಾಗಿಸಿದ ಪ್ರಸಂಗ ಇದು" ಜೀತ್ ವಿವರಿಸಿದ ಎಲ್ಲ ಅಂಶಗಳನ್ನು ಪೂಜಾ ತನ್ನ ಮನಸ್ಸಿನಲ್ಲೇ ಅಚ್ಚು ಇಳಿಸಿಕೊಂಡಳು.
"ಪುರಾಣಗಳು... ಕೊನೆ ಪಕ್ಷ ಅವುಗಳಾದರೂ ಬುದ್ಧನನ್ನು ಬಿಟ್ಟು ಹಲಾಯುಧನನ್ನು ಹೇಳಬೇಕಲ್ಲವೇ? ಹಳೇ ಕಾಲದ ರೆಕಾರ್ಡ್ಸ್...?"
"ಪುರಾಣಗಳ ಅತೀ ಪ್ರಾಚೀನ ಕಾಪಿಗಳು ಎಲ್ಲೂ ದೊರಕಿಲ್ಲ -ದೊರಕುವುದಿಲ್ಲ. ಅವುಗಳೆಲ್ಲ ಬೆಂಕಿ, ರಾಜಾಕ್ರಮಣಗಳು, ಧಾರ್ಮಿಕ ಕಳವಳ, ಕಾಲ ಇತ್ಯಾದಿಗಳಿಂದ ನಷ್ಟವಾಗಿರುತ್ತವೆ. ಹಿಂದಿನ ಕಾಲದಲ್ಲಿ ಪುಸ್ತಕಗಳನ್ನ ಕೈಯಲ್ಲೇ ಕಾಪಿ ಮಾಡಬೇಕಾಗುತ್ತಿತ್ತು. ಈ ಮ್ಯಾನುಸ್ಕ್ರಿಪ್ಟ್ ಕಾಪಿಗಳು ಯಾವಾಗಲೂ ಎಕ್ಸಾಕ್ಟ್‌ಆಗಿರೋದಿಲ್ಲ. ಕಾಪಿ ಮಾಡುವವರು ಸಹಜವಾಗಿ ತಮ್ಮದೇ ಆದ ತಿದ್ದುವಿಕೆಗಳನ್ನು ಕಾಪಿಯಲ್ಲಿ ಮಾಡಿರುತ್ತಾರೆ. ಹೀಗೆ ಪುರಾಣಗಳ ಪ್ರತಿ ಮಾಡುವವರು ಅಲ್ಲಿ ಹಲಾಯುಧನನ್ನು ಕಂಡು, ಅದು ತಾವು ಕೇಳಿದ/ನೋಡಿದ ಕತೆಗೆ ಹೋಲುವುದಿಲ್ಲವೆಂದು ನಿರ್ಧರಿಸಿ, ಅವನನ್ನು ಕಿತ್ತು ಬುದ್ಧನನ್ನು ಸೇರಿಸಿರಬೇಕು. ನಮಗೆ ಸಿಕ್ಕಿರುವ ಗ್ರಂಥಗಳೆಲ್ಲ ಈ ರೀತಿ ಡಕ್ಟರ್ಡ್ ಕಾಪೀಸ್ ಮಾತ್ರ. ಹಾಗಾಗಿ ಪುರಾಣಾದಿ ದಂತ ಕತೆಗಳಲ್ಲಿ ಬುದ್ಧನೇ ಇದ್ದು ಹಲಾಯುಧ ಮಾಯವಾಗಿದ್ದಾನೆ" ಎಂದು ಜೀತ್ ತರ್ಕ ಹೇಳಿದ.
"ವಾವ್!" ಎಂದು ಉದ್ಗಾರ ತೆಗೆಯುತ್ತ "ಹಾಗಿದ್ದರೆ ಪ್ರೊಫೆಸರ್ ನಾಗಾನಂದರ ಪ್ರೂಫ್ ಏನಿರಬಹುದು?" ಪೂಜ ಕೇಳಿದಳು
"ಪುರಾಣಗಳ, ಯಾ ಸಿಮಿಲರ್ ಸೋರ್ಸಸ್‌ಗಳ ಒಂದಾದಮೇಲೊಂದು ಕಾಪಿಗಳು -ವಿತ್ ಗ್ರ್ಯಾಜುಅಲ್ ಚೇಂಜಸ್. ಉದಾಹರಣೆಗೆ, ಯಾವುದೋ ಒಂದು ಪುರಾಣ ಅಂದುಕೊ. ಅದರ ಫಸ್ಟ್ ಕಾಪಿ, ಸೆಕೆಂಡ್ ಕಾಪಿ, ತರ್ಡ್ ಕಾಪಿ. ಮೊದಲನೆಯದರಲ್ಲಿ ಒರೀಜಿನಲ್ ಕತೆ -ಹಲಾಯುಧ. ಎರಡನೇ ಕಾಪಿಯಲ್ಲಿ ಕತೆ ಸ್ವಲ್ಪ ಬದಲು, ಫೈನಲಿ, ಮೂರನೆಯದರಲ್ಲಿ ಬುದ್ಧನ ಕತೆ. ನಾವು ಲಕಿಯಾಗಿದ್ದರೆ ಕಾಪಿ ಮಾಡಿದ ಪಂಡಿತರು ತಮ್ಮ ಅನಿಸಿಕೆ, ಕತೆ ಬದಲಾಯಿಸುವುದಕ್ಕೆ ಕಾರಣಾಂತರಗಳನ್ನೂ ಬರೆದಿರಬಹುದು. ಆ ರೀತಿ ಮ್ಯಾನುಸ್ಕ್ರ್‍ಇಪ್ಟ್ಸ್ ಸಿಕ್ಕಿದರೆ ಕನ್ಕ್ಲೂಸಿವ್ ಪ್ರೂಫ್ ಅನ್ನಬಹುದು" ಜೀತ್ ವಿವರಿಸಿದ.
"ಇದಕ್ಕೆ ಕನೆಕ್ಟೆಡ್ ಇನ್ನೊಂದು ಪ್ರಶ್ನೆ"
"ಕೇಳು"
"ಕೆಲವೊಮ್ಮೆ ಕೃಷ್ಣನ ಅಣ್ಣ ಬಲರಾಮ ಒಂದು ಅವತಾರವೆಂದು ಕೇಳಿದ್ದೇನೆ, ಅದರ ಎಕ್ಸ್‌ಪ್ಲನೇಶನ್ ಏನು?"
"ಇದು ವೈಷ್ಣವ/ಹರೆ ಕೃಷ್ಣ/ಇಸ್ಕಾನ್‌ನವರ ಇಂಟರ್‌ಪ್ರಿಟೇಶನ್. ಮಾಯವಾದ ಹಲಾಯುಧನ ಕತೆಗಳು ಬಲರಾಮನಿಗೆ ಕಟ್ಟಿದ್ದಿರಬೇಕು. ಆಗಲೇ ಎರಡು ಕತೆ ಹೇಳಿದೆನಲ್ಲ. ಇನ್ನೂ ಹಲವಾರಿವೆ. ಈ ಕತೆಗಳಿಂದಲೇ ಬಲರಾಮನಿಗೂ ನೇಗಿಲೇ ಅತೀ ಪ್ರಿಯ ಆಯುಧವೆಂಬ ಪ್ರತೀತಿ ಬಂದಿರಬೇಕು, ಅಷ್ಟೇ ಏಕೆ ಹಲಾಯುಧನೆಂಬ ನಾಮಾಂಕಣವೂ ಬಂದಿದೆ. ಆಕ್ಚುಅಲಿ, ಬಲರಾಮನ ಪ್ರಿಯ ಆಯುಧ ಗದೆ -ಭೀಮ, ದುರ್ಯೋಧನರಿಗೆ ಗುರು ಅಲ್ಲವೇ ಬಲರಾಮ?. ಅದು ಹಾಗಿರಲಿ, ಬಲರಾಮನು ಅವತಾರವೆನ್ನುವವರೂ ಬುದ್ಧ ಅವತಾರವಲ್ಲವೆಂದು ಗುರುತಿಸಿದ್ದಾರೆ. ಆದರೆ ಬುದ್ಧನನ್ನು ಕಿತ್ತು ಹಲಾಯುಧ -ಕನ್‌ಫ್ಯೂಸ್ಡ್ ವಿತ್ ಬಲರಾಮನನ್ನು -೯ನೇ ಅವತಾರ ಮಾಡಿದ್ದಾರೆ. ಇದೂ ಸರಿಯಲ್ಲವೆಂದು ಆಗಲೇ ಹೇಳಿದ್ದೇನೆ. ಸೋ, ಬಲರಾಮ ರಾಂಗ್, ಒಂಬತ್ತೆನೇ ಅವತಾರ ರಾಂಗ್" ಜೀತ್ ಸ್ಪಷ್ಟೀಕರಿಸಿದ
"ಫೈನಲಿ, ಜಸ್ಟ್ ಫಾರ್ ದ ಸೇಕ್ ಆಫ್ ಕಂಪ್ಲೀಟ್‌ನೆಸ್, ಈ ಚೇಂಜ್ ಯಾವ ಕಾಲದಲ್ಲಿ ಆಗಿರಬಹುದು?" ಪೂಜಾಳ ಕುತೂಹಲಕ್ಕೆ ಕೊನೆಯೇ ಕಾಣಿಸುತ್ತಿರಲಿಲ್ಲ.
"ಆಗಲೇ ಹೇಳಿದಂತೆ ವೆನ್ ಸಾಂಗ್ -ಹ್ಯೂಯನ್ ತ್ಸಾಂಗ್ ಅಲ್ಲ" ಎಂದು ನಕ್ಕು "ವೆನ್ ಸಾಂಗ್ ಎಲ್ಲೂ ಬುದ್ಧಾವತಾರದ ಬಗ್ಗೆ ಹೇಳಿಲ್ಲ. ಕಡಾಖಂಡಿತವಾಗಿ ೭೫೦ ಎ.ಡಿ.ಯಲ್ಲಿ ಈ ಕತೆ ಪ್ರತೀತಿಯಲ್ಲಿರಲಿಲ್ಲ. ಲೈಕ್‌ವೈಸ್, ಶಂಕರಾಚಾರ್ಯರ ಕಾಲದಲ್ಲೂ ಇದು ಪ್ರತೀತಿಯಲ್ಲಿರಲಿಲ್ಲ -ದಿಸ್ ವಾಸ್ ೮೨೦ ಎ.ಡಿ. ಒಟ್ಟಿನಲ್ಲಿ ಒರಿಯಾ ಕವಿ ಜಯದೇವನ ಪ್ರಸಿದ್ಧ ಸಂಸ್ಕೃತ ಕಾವ್ಯ 'ಗೀತ ಗೋವಿಂದ'ದಲ್ಲಿ ಬೌದ್ಧಾವತಾರ ಧೃಡವಾದಂತೆ ಕಾಣಿಸುತ್ತದೆ. ಆದರೂ, ೧೫ನೇ ಶತಮಾನದಲ್ಲೂ ಕನಿಷ್ಠ ದಕ್ಷಿಣದಲ್ಲಿ ಬೌದ್ಧಾವತಾರ ಪ್ರಚಲಿತವಾಗಿರಲಿಲ್ಲವೆಂದು ತೋರುತ್ತದೆ. ಫಾರ್ ಎಕ್ಸಾಂಪಲ್, ಹರಿದಾಸರು ದಶಾವತಾರ ಹಾಡೋವಾಗ 'ಬತ್ತಲೆ ನಿಂತವ, ಬೌದ್ಧಾವತಾರ' ಎಂದು ಹಾಡಿದ್ದಾರೆ. ಬುದ್ಧ ಎಂದೂ ಬತ್ತಲೆ ನಿಂತವನಲ್ಲವೇ ಅಲ್ಲ. ಬತ್ತಲೆ ನಿಂತವ ಜೈನ ತೀರ್ಥಂಕರ ಮಹಾವೀರ -ಜೈನ ದಿಗಂಬರರು. ಹರಿದಾಸರು ಪರೋಕ್ಷ ಜ್ಞಾನಿಗಳೆನಿಸಿದ್ದಾರೆ. ಬೇರೆ ಎಲ್ಲೂ ಇಂತಹ ತಪ್ಪು ಇಲ್ಲ. ಹಾಗಿದ್ದ ಮೇಲೆ ಅವತಾರ ಪುರುಷ ಬುದ್ಧನೋ ಅಥವ ಅವನಂತೆ ಮತ್ತೊಬ್ಬ ವ್ಯಕ್ತಿಯಾದ ಮಹಾವೀರನೋ ಎನ್ನುವ ಕನ್‌ಫ್ಯೂಶನ್ ಯಾಕೆ? ಒಂದೇ ಕಾರಣ -ದಕ್ಷಿಣದಲ್ಲಿ ೧೫ನೇ ಶತಮಾನದಲ್ಲೂ ಬೌದ್ಧಾವತಾರದ ಕತೆ ಇನ್ನೂ ಸಾಲಿಡ್ ಆಗಿರಲಿಲ್ಲ. ಅಂದರೆ -ಕ್ಲಿಯರ್ಲಿ -ಇದು ಸ್ವಲ್ಪ ಅಡ್‌ಜಸ್ಟ್ ಮಾಡಿರೋ ಕತೆ. ಇದಕ್ಕೆ ಇನ್ನೊಂದು ಆಧಾರ ಸೌತ್ ಇಂಡಿಯಾದ ೧೨ರಿಂದ ೧೫ನೇ ಶತಮಾನದ ದೇವಸ್ಥಾನಗಳಲ್ಲಿ ಕೆಲವೆಡೆ ಹಲಾಯುಧನಿದ್ದರೆ, ಇನ್ನು ಕೆಲವೆಡೆ ಬುದ್ಧನಿದ್ದಾನೆ" ಎಂದು ಜೀತ್ ಹೇಳಿದಾಗ ಪೂಜಾಳ ತಲೆ ಸುತ್ತುತ್ತಿತ್ತು.
ಸ್ವಲ್ಪ ಹೊತ್ತಿನ ಬಳಿಕ ದಿನಕರ ಎದ್ದು, ಮುಂದೆ ಬಂದು, ಡ್ರಿವ್ ಮಾಡ ತೊಡಗಿದ. ಜೀತ್ ಹಿಂದಿನ ಸೀಟಿಗೆ ಹೋಗಿ ಹಿಂದಕ್ಕೊರಗಿ ಕಣ್ಣುಮುಚ್ಚಿಕೊಂಡ. ಪೂಜಾ ಈಗ ದಿನಕರನನ್ನು ಕೇಳಿದಳು. "ನಿಮಗೆ ಈ ಕತೆ ಎಷ್ಟು ಗೊತ್ತಿತ್ತು, ಡಕ್ಟರ್?"
"ಹಿಂದೆ ಕೇಳಿದ್ದೆ. ನಾಗಾನಂದ ಆಗಾಗ ಹೇಳುತ್ತಿದ್ದ. ಆದರೆ ಇದು ಕೊಲೆ-ದರೋಡೆಗಳವರೆಗೆ ಹೋಗಬಹುದೆಂದು ಗೊತ್ತಿರಲಿಲ್ಲ" ದಿನಕರ ಹೇಳಿದ. "ನೀನಿನ್ನು ಮಲಗಿ ನಿದ್ದೆ ಮಾಡು. ಬೆಳಗ್ಗೆ ಎದ್ದು ಏನು ಕಾದಿದೆಯೋ".
*****
ಬೆಳಗ್ಗೆ ಸುಮಾರು ೯:೦೦ ಘಂಟೆಗೆ ಶೃಂಗೇರಿ ತಲುಪಿದರು. ಮಳೆಗಾಲವಾಗಿತ್ತು, ಹಾಗಾಗಿ ಊರಿನಲ್ಲಿ ಹೆಚ್ಚಾಗಿ ಯಾತ್ರಿಕರಿರಲಿಲ್ಲ. ಮಲೆನಾಡಿನ ಮಳೆ ಬೇರೆ. ಊರಿನ ಸಣ್ಣ ಸಣ್ಣ ರಸ್ತೆಗಳ ಮೇಲೆ ಕೊಚ್ಚೆ ನೀರು ನಿಂತಿತ್ತು. ನೇರವಾಗಿ ದೇವಸ್ಥಾನದ ಬೀದಿಗೆ ಹೋದರು. ದೇವಸ್ಥಾನದ ಮುಂಭಾಗದಲ್ಲಿ ಇರುವ ರಿಸೆಪ್ಶನ್/ಇನ್ಫರ್‌ಮೇಶನ್ ಕಛೇರಿಗೆ ಹೋಗಿ ವಿಚಾರಿಸಿದರು.
"ನಮಸ್ಕಾರ ಸಾರ್. ರೂಂ ಬೇಕಾ?" ಕುಳಿತಿದ್ದ ಗುಮಾಸ್ತ ಕೇಳಿದ
"ಬೇಡ ತ್ಯಾಂಕ್ಸ್" ಜೀತ್ ಉತ್ತರಿಸಿದ. "ನಮಗೆ ಶೃಂಗೇರಿಯಲ್ಲಿರುವ ಲೈಬ್ರರಿಗಳ ಬಗ್ಗೆ ಮಾಹಿತಿ ಬೇಕು"
"ಒಹ್?" ಗುಮಾಸ್ತ ಜೀತ್, ದಿನಕರ ಹಾಗು ಪೂಜಾರನ್ನು ವಿಚಿತ್ರವಾಗಿ ನೋಡಿದ. "ಶಾರದಾ ಪೀಠದ ಲೈಬ್ರರಿಗೆ 'ಸರಸ್ವತಿ ಭಂಡಾರ' ಎಂದು ಹೆಸರು. ಇದು ಚಿಕ್ಕಮಗಳೂರು ಜಿಲ್ಲೆಯಲ್ಲೇ ಏಕೆ, ಬಹುಶಃ ಇಡೀ ಕರ್ನಾಟಕದಲ್ಲೇ ಅತೀ ಹಳೆಯ ಲೈಬ್ರರಿ. ಪ್ರಾಚೀನ ಕಾಲದಿಂದ ಇಲ್ಲಿ ಧರ್ಮ, ವೇದಾಂತ, ಜ್ಯೋತಿಶ್ಯ ಶಾಸ್ತ್ರಗಳ ತಾಳೆಗರಿ ಪುಸ್ತಕಗಳಿದ್ದರೂ, ೧೪-೧೫ನೇ ಶತಮಾನದಲ್ಲಿ ನರಸಿಂಹ ಭಾರತಿ ಸ್ವಾಮಿಗಳು ಈ ಪುಸ್ತಕಗಳ ಮಹತ್ವವನ್ನರಿತು ಒಂದು ಪುಸ್ತಕ ಭಂಡಾರವನ್ನು ಸ್ಥಾಪಿಸಿದರು. ಆದರೆ.."
"ಏನು?"
"ಅಲ್ಲಿಗೆ ಹೋಗಲು ವಿಶೇಷ ಅನುಮತಿ ಪಡೆದುಕೋಳ್ಳಬೇಕು. ಇವತ್ತು ಆಗೋದಿಲ್ಲ"
"ನಾ.."
"ನಾನೊಬ್ಬ ರಿಪೋರ್ಟರ್" ಜೀತ್‌ಗೆ ಮಾತನಾಡಲು ಅವಕಾಶ ಕೊಡದೆ ಪೂಜಾ ಮುಂದೆ ಬಂದಳು. "ನನಗೆ ಪ್ರೆಸ್ ಆಕ್ಸೆಸ್ ಕ್ಲಿಯರೆನ್ಸ್ ಇದೆ. ಇಗೋ ನನ್ನ ಕಾರ್ಡ್. ಬೇಕಿದ್ದರೆ ನನ್ನ ಪೇಪರ್‌ಗೆ ಫೋನ್ ಮಾಡಿ ಕೇಳಿ"
"ನಂಗೊತ್ತಿಲ್ಲ..." ಸಂದೇಹದಿಂದ ತಲೆಕೆರೆಯುತ್ತ ಹೇಳಿದ ಗುಮಾಸ್ಥ "ನೀವು ಲೈಬ್ರರಿಯನ್‌ನೇ ಕೇಳಬೇಕು. ಪಕ್ಕದ ಗೇಟ್ ಒಳಗಿಂದ ಹೋಗಿ. ಶಾರದಾ ದೇವಸ್ಥಾನದ ಎರಡನೇ ಮಹಡಿ ಮೇಲೆ ಲೈಬ್ರರಿ ಇದೆ"
ದೇವಸ್ಥಾನದ ಹೆಬ್ಬಾಗಿಲಿನಿಂದ ಹಾಯ್ದು ಲೈಬ್ರರಿ ತಲುಪಿದರು. ಪೂಜಾಳ ಪ್ರೆಸ್ ಕ್ಲಿಯರನ್ಸ್ ಮಾಟದಂತೆ ಕೆಲಸ ಮಾಡಿತು. ಮೂವರೂ ಮಂದಿ ಕ್ಯಾಟಲಾಗ್ ಹಿಡಿದು ಕಾಲ್-ನಂಬರ್‌ಗಳನ್ನು ನೋಡತೊಡಗಿದರು.
ಮಧ್ಯಾಹ್ನ ಊಟದ ಸಮಯವಾಯಿತು. ನಾಗಾನಂದ ಬರೆದಿದ್ದ ಕಾಲ್-ನಂಬರ್ ಎಲ್ಲೂ ಕಾಣಿಸಲಿಲ್ಲ. ಕೊನೆಗೆ, ಜೀತ್ ಸೋತು ಕೈಬಿಟ್ಟ. "ಇಲ್ಲ. ಇಲ್ಲಂತೂ ಇಲ್ಲ. ನಾನೊಮ್ಮೆ ಹೋಗಿ ನಮ್ಮ ಬಂಧಿ ಹೇಗಿದ್ದಾನೆ ನೋಡಿ ಬರುತ್ತೇನೆ. ಹಿಂದೆ ಹಾಕಿ 'ಅಲುಗಾಡಿದರೆ ನನ್ನ ಮನೆಗೆ ನುಗ್ಗಿದ ದರೋಡೇಕೋರನೆಂದು ಪೋಲೀಸರಿಗೊಪ್ಪಿಸುವೆ' ಎಂದು ಹೇಳಿ ಬಂದಿದ್ದೆ. ಅವನಿಗೇನು ಬೇಕೋ ನೋಡಿಬರ್ತೀನಿ"
ಕೆಲವು ನಿಮಿಷಗಳ ನಂತರ ದಿನಕರ, ಪೂಜಾ ಇಬ್ಬರೂ ದೂರ, ಜನಸಂಚಾರವಿಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದ ಜೀತ್ ಕಾರ್ ಕಡೆ ಹೊರಟರು. ಅಲ್ಲಿ ನೋಡಿದರೆ ಭಿಕ್ಕು ಹೇಗೋ ತಪ್ಪಿಸಿಕೊಂಡು ರಿವಾಲ್ವರ್‌ವೊಂದನ್ನು ಜೀತ್ ತಲೆಗೆ ಹಿಡಿದು ನಿಂತಿದ್ದಾನೆ.
"ಪ್ರೊಫೆಸರ್ ನಾಗಾನಂದ್ ಬರೆದಿಟ್ಟ ಚೀಟಿ ನನ್ನ ಕೈಗೆ ಕೊಟ್ಟುಬಿಡಿ. ಇಲ್ಲವೇ..." ಎನ್ನುತ್ತ ಜೀತ್ ತಲೆಗೆ ರಿವಾಲ್ವರ್ ಒತ್ತಿದ.
ದಿನಕರನಿಗೆ ಬೇರೆ ದಾರಿ ಕಾಣಲಿಲ್ಲ. ಚೀಟಿಯನ್ನು ಭಿಕ್ಕುವಿನ ಕೈಗೆ ಕೊಟ್ಟ ನಂತರ ಭಿಕ್ಕು ಗನ್‌ನಿಂದ ಜೀತ್ ತಲೆ ಚೆಚ್ಚಿದ. ಜೀತ್‌ನ ಕಣ್ಣುಗಳು ಮುಚ್ಚಿದವು. ಜೀತ್‌ನನ್ನು ಅವನ ಕಾರಿನ ಡಿಕ್ಕಿಯಲ್ಲೇ ಹಾಕಿ ಮುಚ್ಚಿದ.
"ಈತನನ್ನು ಕಿಡ್ನಾಪ್ ಮಾಡುತ್ತಿರುವೆ -ಚೀಟಿ ಓದಲು ಇವನ ಸಹಾಯ ಬೇಕಾಗಬಹುದು. ಇನ್ನು ನೀವಿಬ್ಬರು -ಸಾರಿ" ಎಂದು ಗುಂಡು ಹಾರಿಸಲು ರಿವಾಲ್ವರ್ ಎತ್ತಿದ. ಆ ಹೊತ್ತಿಗೆ ಸರಿಯಾಗಿ ಮೇಲೆ ಹಾರುತ್ತಿದ್ದ ಪಾರಿವಾಳವೊಂದು ಭಿಕ್ಕುವಿನ ಕೈಮೇಲೆ ಹಿಕ್ಕೆ ಹಾಕಿತು. ಅವನ ಗಮನ ತಿರುಗಿದ್ದನ್ನು ನೋಡಿ ದಿನಕರ, ಪೂಜಾ ಅಲ್ಲಿಂದ ಓಡಿದರು. ಭಿಕ್ಕು ಏನಾಗುತ್ತಿದೆ ಎಂದು ಅರ್ಥ ಮಾಡಿಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸುವಷ್ಟು ಹೊತ್ತಿಗೆ ಇಬ್ಬರೂ ಜನ ಸಂಚಾರವಿರುವ ಕಡೆಗೆ ಓಡತೊಡಗಿದರು.
ಕೆಲ ನಿಮಿಶಗಳ ನಂತರ ಏದುಸಿರು ಎಳೆಯುತ್ತ ದಿನಕರ, ಪೂಜಾ ದಣಿವಾರಿಸಿಕೊಳ್ಳಲು ನಿಂತರು. ಭಿಕ್ಕು ಅವರನ್ನು ಹಿಂಬಾಲಿಸುತ್ತಿಲ್ಲವೆಂಬುದು ಖಚಿತವಾಗಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ಹತ್ತಿರವಿದ್ದ ರೆಸ್ಟೋರಾಂಟ್‌ಗೆ ಹೋದರು.
"ಈಗೇನು?" ಪೂಜಾ ಕೇಳಿದಳು.
"ಜೀತ್ ಜೀವಕ್ಕೇನೂ ಅಪಾಯವಿಲ್ಲ. ಆ ಒಗಟು ಬಿಡಿಸುವವರೆಗೂ ಅವರಿಗೆ ಜೀತ್ ಬೇಕು" ದಿನಕರ ಉತ್ತರಿಸಿದ.
"ಬಿಡಿಸಿಯಾದಮೇಲೆ?"
"ನಾವು ಅವರಿಗಿಂತ ಮುಂಚೆ ಆ ಒಗಟು ಬಿಡಿಸೋಣ" ಎನ್ನುತ್ತ ತನ್ನ ಫೋನ್ ಹೊರತೆಗೆದ.
"ಏನು ಮಾಡುತ್ತಿದ್ದೀರ?"
"ಶಾರದೆ ಹೆಸರುಳ್ಳ ಲೈಬ್ರರಿ ಬೇರೆಲ್ಲಿ ಇದೆ ಗೂಗಲಿಸುತ್ತಿದ್ದೀನಿ -ನನ್ನ ಫೋನ್‌ನಲ್ಲಿ ಇಂಟರ್‌ನೆಟ್ ಇದೆ... ಅರೆರೆ ಇದೇನು ನನ್ನ ಇಮೈಲ್ ಡೌನ್ ಆಗಿದೆಯೇ?" ಎರಡು ನಿಮಿಷಗಳು ನೋಡಿ "ಚೇ! ಇಷ್ಟು ದೂರ ಬಂದಿದ್ದು ದಂಡವಾಯಿತೇ? ನನಗೇಕೆ ಇದು ಮೊದಲೇ ಹೊಳೆಯಲಿಲ್ಲ?" ಎನ್ನುತ್ತ ಟೇಬಲ್ ಮೇಲೆ ಸ್ವಲ್ಪ ಹಣ ಹಾಕಿ ತರಿಸಿದ್ದ ತಿಂಡಿ ಹಾಗೇ ಬಿಟ್ಟು ಓಡಿ ಹೊರಟ.
"ಡಕ್ಟರ್? ಏನ್..?" ಪೂಜಾಳೂ ಅವನ ಹಿಂದೆಯೇ ಹೊರಟಳು.
ಮಧ್ಯಾಹ್ನ ಸಮಯ ೨:೦೦ ಘಂಟೆಯಾಗಿತ್ತು. ದಿನಕರ ನೇರವಾಗಿ ಟ್ಯಾಕ್ಸಿ ಬಾಡಿಗೆಗೆ ಸಿಗುವಲ್ಲಿಗೆ ನುಗ್ಗಿದ. ಕೆಲವೇ ನಿಮಿಷಗಳಲ್ಲಿ ಹೊರಬಂದು ಪೂಜಾಳ ಮೊಣಕೈ ಹಿಡಿದು ಅವಳನ್ನು ಟ್ಯಾಕ್ಸಿಯೊಂದಕ್ಕೆ ತಳ್ಳಿ ತಾನೂ ಹತ್ತಿದ. "ನಡೆಯಪ್ಪ" ಡ್ರೈವರ್‌ಗೆ ಹೇಳಿದ.
"ಏನಾಗುತ್ತಿದೆ ಹೇಳುತ್ತೀರ, ಡಾಕ್ಟರ್?" ಪೂಜಾ ಕೇಳಿದಾಗ ದಿನಕರ ತನ್ನ ಫೋನ್ ಎತ್ತಿ ಹಿಡಿದ.
"ಸರಸ್ವತಿ ಮಹಲ್ ಲೈಬ್ರರಿ, ತಂಜಾವುರ್" ಪೂಜಾ ಓದಿದಳು.
*****
ಸರ್ಫೋಜಿ ಸರಸ್ವತಿ ಮಹಲ್ ಲೈಬ್ರರಿ ತಂಜಾವೂರಿನ ಅರಮನೆ ಆವರಣದಲ್ಲಿದೆ. ದುರ್ಲಭ ಪ್ರಾಚೀನ ಗ್ರಂಥಗಳ ಭಂಡಾರಗಳಲ್ಲಿ ಇದೊಂದು. ತಂಜಾವೂರಿನ ತೆಲುಗು ನಾಯಕ ವಂಶದ ಮಹಾರಾಜರ ಕಾಲದಲ್ಲಿ (೧೬-೧೭ನೇ ಶತಮಾನ) ಇದು ಸರಸ್ವತಿ ಭಂಡಾರವೆಂಬ ಹೆಸರಿನಿಂದ ಪ್ರಾರಂಭವಾಯಿತು. ಮರಾಠರು ತಂಜಾವೂರನ್ನು ಸ್ವಾಧೀನ ಮಾಡಿಕೊಂಡ ನಂತರ ಸರಸ್ವತಿ ಭಂಡಾರವೂ ಅವರ ಅಧೀನಕ್ಕೆ ಬಂದಿತು. ಮರಾಠಾ ಮಹಾರಾಜ ಸರ್ಫೋಜಿ ೧೮೨೦ರಲ್ಲಿ ಕಾಶಿಗೆ ಯಾತ್ರೆ ಮಾಡಿದಾಗ ಈ ಭಂಡಾರಕ್ಕೆ ಬಹಳಷ್ಟು ಗ್ರಂಥಗಳ ಸೇರ್ಪಡೆಯಾಯಿತು. ಇದಾದ ನಂತರವೇ ಸರ್ಫೋಜೆಯ ಹೆಸರು ಈ ಗ್ರಂಥ ಭಂಡಾರಕ್ಕೆ ಸೇರಿಕೊಂಡಿತು. ಕನಿಷ್ಠ ಹನ್ನೊಂದು ಲಿಪಿಗಳಲ್ಲಿ, ೩೦೦೦೦ಕ್ಕೂ ಹೆಚ್ಚು ತಾಳೇಗರಿ, ತಾಮ್ರ ಹಾಗು ಕಾಗದದ ಮೇಲಿನ ಹಸ್ತಪ್ರತಿಗಳಿವೆ. ಸಂಸ್ಕೃತವೊಂದೇ ಅಲ್ಲದೆ ಕನ್ನಡ, ತಮಿಳು, ತೆಲುಗು, ಮರಾಠಿ ಭಾಷೆಗಳ ಪುಸ್ತಕಗಳು ಇಲ್ಲಿ ಲಭ್ಯವಿದೆ.
ದಿನಕರ, ಪೂಜಾ ಟ್ಯಾಕ್ಸಿಯನ್ನು ನೇರವಾಗಿ ತಂಜಾವೂರಿನ ಅರಮನೆ ಆವರಣದಲ್ಲಿ ತಂದು ನಿಲ್ಲಿಸಿದರು. ಆವರಣದಲ್ಲಿ ಲೈಬ್ರರಿ ಹುಡಿಕಿ, ಒಳಗೆ ಹೋದರು. ತಮ್ಮ ಬಳಿ ಇದ್ದ ಕಾಲ್-ನಂಬರ್ ವಿಚಾರವಾಗಿ ಕೇಳಿದ ನಂತರ, ಅಲ್ಲಿದ್ದ ಗುಮಾಸ್ತ ಅವರನ್ನು ಲೈಬ್ರರಿಯ ವಿಶಯಪಟ್ಟಿಯ ಕಡೆ ತಿರುಗಿಸಿದ.
"ಯಾವ ಸೆಕ್ಷನ್‌ನಲ್ಲಿ ಇರಬಹುದು, ಡಾಕ್ಟರ್? ವೇದ-ಸಂಹಿತ, ವೇದ-ಬ್ರಹ್ಮಣ, ಉಪನಿಷತ್ತು, ವೇದಾಂಗ, ಭಾಷ್ಯ-ಪ್ರಯೋಗ, ಧರ್ಮಶಾಸ್ತ್ರ, ಇತಿಹಾಸ, ಪುರಾಣ -ಈ ಎಲ್ಲ ಸೆಕ್ಷನ್‌ಗಳಿವೆ" ಪೂಜಾ ಹೇಳಿದಳು.
"ಪುರಾಣ. ಡಿಸೈಡೆಡ್ಲಿ ಪುರಾಣ. ಜೀತ್ ಪುರಾಣಗಳಲ್ಲೇ ಇರುವ ಚಾನ್ಸ್ ಹೆಚ್ಚು ಎಂದು ಹೇಳಿದ್ದ" ದಿನಕರ ಹೇಳಿದ.
ಸುಮಾರು ಹೊತ್ತು ಇಬ್ಬರೂ ಕ್ಯಾಟಲಾಗ್ ನೋಡುತ್ತಿದ್ದರು. ಕೊನೆಗೊಮ್ಮೆ "ಗಾಟ್ ಇಟ್" ಪೂಜಾ ಉಲ್ಲಾಸದಿಂದ ಕೂಗಿದಳು. "ಇಲ್ಲಿದೆ ನೋಡಿ -'ಅಗ್ನಿಪುರಾಣ', ೧೨ನೇ ಶತಮಾನ, ತಾಳೆಗರಿ ಪತ್ರ, ಕಲ್ಪ-ಪುರಾಣ ಸೆಕ್ಷನ್, ಮಹಾಪುರಾಣ ಸಬ್-ಸೆಕ್ಷನ್. ರೋ-ನಂಬರ್ ೮೭, ಶೆಲ್ಫ್-ನಾಂಬರ್ ೧೧, ರೆಫರೆನ್ಸ್ ಓನ್ಲಿ"
ಇಬ್ಬರೂ ೮೭ನೇ ಸಾಲನ್ನು ಹುಡುಕಿಕೊಂಡು ಹೊರಟರು. "'ರೆಫರೆನ್ಸ್ ಓನ್ಲಿ' ಎಂದರೆ ಪುಸ್ತಕ ಲೈಬ್ರರಿಯಿಂದ ಹೊರತೆಗೆಯುವ ಹಾಗಿಲ್ಲ. ಇಲ್ಲೇ ಆ ಪುಸ್ತಕ ಸುರಕ್ಷಿತವಾಗಿರುತ್ತೆ" ದಿನಕರ ತನ್ನ ಆಲೋಚನೆ ಹೇಳಿದ.
"ಆದರೆ ಆವತಂಶಕದ ನಿಲಿಕು ನೋಡಿದರೆ ಇದೂ ಸೇಫ್‌ಆಗಿರದಿರಬಹುದು. ಇಲ್ಲಿಂದಲೂ ಅದನ್ನು ಮಾಯ ಮಾಡಿದರೆ..." ಪೂಜಾ ತಿಳಿಸಿದಳು.
"ಹಾಗಿದ್ದರೆ ನಮಗೊಂದೇ ದಾರಿ. ಆ ಪುಸ್ತಕ ನಾವೇ ಕದಿಯಬೇಕು"
"ಹೂಂ..." ಪೂಜಾ ಆಶ್ಚರ್ಯವೇನೂ ವ್ಯಕ್ತ ಪಡಿಸಲಿಲ್ಲ.
ಪ್ರಸ್ತುತ ಅಗ್ನಿಪುರಾಣವಿದ್ದ ಸಾಲಿಗೆ ಹೋಗಿ ಅದನ್ನು ಹುಡುಕಿ ಕೈಗೆತ್ತಿಕೊಂಡರು.
"ಇಲ್ಲಿ ಕೊಡಿ ಅದನ್ನು" ಹಿಂದಿನಿಂದ ಪರಿಚಿತ ಧ್ವನಿ ಬಂತು
"ಜೀತ್? ನೀನು? ಆ ಭಿಕ್ಕು? ಹೇಗೆ..." ದಿನಕರ ಅಸಂಬದ್ಧಪ್ರಲಾಪ ಮಾಡಿದ
"ಅವನೇ? ಅವನಿಗೆ... ನನ್ನ ರಿವಾಲ್ವರ್ ಬುಲೆಟ್ಟಿನ ಜೊತೆ ಭೇಟಿ ಮಾಡುವುದಿತ್ತು"
"ನಾ...ಹಾ.." ಅತ್ತ ಜೀತ್ ತಪ್ಪಿಸಿಕೊಂಡನೆಂದು ಹರ್ಷವಾದರೆ ಇತ್ತ ತನಗೆ ಬಂದೂಕು ತೋರಿಸುತ್ತಿದ್ದಾನೆಂಬ ಆತಂಕ ದಿನಕರನಿಗೆ.
"ನನಗೆ ಅವನೊಬ್ಬ ಕೈಗೊಂಬೆಯಷ್ಟೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು ಅನ್ನೋಹಾಗೆ ನೀನು ಕೈಯಲ್ಲಿ ಹಿಡಿದಿರೋ ಸತ್ಯ ಹೊರತೆಗೆಯೋದಕ್ಕೆ ಅವನನ್ನು ಅವನ ಸಂಘವನ್ನೇ ಉಪಯೋಗಿಸಿಕೊಂಡೆ ಅಷ್ಟೆ" ಜೀತ್ ಹೇಳಿದ.
ಧಗ್ಗನೆ ದಿನಕರನಿಗೆ ಇದರ ಪರಮಾರ್ಥ ತಿಳಿಯಿತು. "ಹಾಗಾದರೆ... ನಾಗಾನಂದ?"
"ಆಕ್ಸಿಡೆಂಟ್... ಬಟ್ ವೆಲ್ ಡಿಸರ್ವ್ಡ್. ಆ ಆವತಂಶಕ ಸಂಘದವರು ಅವನನ್ನು ಹೆದರಿಸಿ, ಬೆದರಿಸಿ ಈ ಪ್ರೂಫ್ ಪಬ್ಲಿಶ್ ಮಾಡಬೇಡವೆಂದು ಹೇಳಿದರೆ ಇವನು ಮಹಾಧೀರ, ಕೇಳಿಕೊಂಡು, ಬಾಲ ಮುದುರಿಕೊಂಡು ಸುಮ್ಮನಿದ್ದ" ಜೀತ್ ಕೋಪದಿಂದ ಹೇಳಿದ.
"ಆಕ್ಸಿಡೆಂಟ್?" ದಿನಕರನ ದಿಗಿಲು ಗೋಚರವಾಗಿತ್ತು.
"ಯಾಹ್! ಆ ಮುಠ್ಠಾಳ ಭಿಕ್ಕು ಕೆಲಸ. ಪ್ರೂಫ್ ಕೇಳಕ್ಕೆ ಹೋದಾಗ ಆ ಪುಸುಕಲ ನಾಗಾನಂದ ಗನ್ ತೋರಿಸಿದನಂತೆ. ಹೆದರಿ ಇವನು ಶೂಟ್ ಮಾಡಿದನಂತೆ. ಇನ್ಕಾಂಪಿಟೆಂಟ್ ಫೂಲ್! ನಾಗಾನಂದ ಸತ್ತ ಮೇಲೆ ಆ ಪ್ರೂಫ್ ಕೂಡ ಸತ್ತು ಹೋಯಿತೆಂದುಕೊಂಡಿದ್ದೆ. ಆಗ ತಂಗಾಳಿ ಬಂದ ಹಾಗೆನೀವಿಬ್ಬರೂ ನೀವಾಗಿಯೇ ನನ್ನ ಬಳಿ ಬಂದಿರಿ. ನಾವು ಮಾತನಾಡುತ್ತಿದ್ದಾಗ ಬಂದ ಫೋನ್ ನೆನಪಿದೆಯಾ? ಭಿಕ್ಕುವನ್ನು ಮನೆಯೊಳಗೆ ಬರಹೇಳಿ ನಾಗಾನಂದನ ಒಗಟಿನ ಚೀಟಿ ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದು ನಾನೇ, ನಿನ್ನ ಇನ್ಸ್‌ಪೆಕ್ಟರ್ ಅಲ್ಲ" ಪೂಜಾಳ ಕಡೆ ನೋಡುತ್ತ "ನಿನ್ನ ಕೈಚಳಕದಿಂದ ಅಲ್ಲೂ ಫೇಲ್ ಆದ. ನಂತರ ಅವನನ್ನು ಪೋಲೀಸರಿಗೆ ಒಪ್ಪಿಸದೆ ನಮ್ಮ ಜೊತೆಯೇ ಕರೆದೊಯ್ಯುವ ಹಾಗೆ ಮ್ಯಾನಿಪ್ಯುಲೇಟ್ ಮಾಡಿದೆ. ನಂತರ ಶೃಂಗೇರಿಯಲ್ಲಿ ಹುಡುಕಾಟ ಫೇಲ್ ಆದ ತಕ್ಷಣ ನನಗೆ ನಾಗಾನಂದನ ಶಾರದಾ ಪೀಠ ಇದೆಂದು ಅರ್ಥವಾಯಿತು. ಅವನ ಕಟ್ಟು ಬಿಚ್ಚಿ ಬಂಧನದಿಂದ ಬಿಡಿಸಿ ನನ್ನನ್ನು 'ಕಿಡ್ನಾಪ್' ಮಾಡಿ ನಿಮ್ಮಿಬ್ಬರನ್ನು ಮುಗಿಸಲು ಹೇಳಿದೆ. ನೀವಿಬ್ಬರೂ ತಪ್ಪಿಸಿಕೊಂಡಿರಿ, ಮತ್ತೆ ವಿಫಲನಾದ. ಸರಿ ಶೃಂಗೇರಿಯಿಂದ ಇಲ್ಲಿಗೆ ರವಾನೆಯಾದಮೇಲೆ ದಾರಿಯಲ್ಲಿ ಅವನನ್ನು ಮುಗಿಸಿದೆ. ನಂತರ ಇಲ್ಲಿಗೆ ಬಂದರೆ ನೀವಿಬ್ಬರೂ ಇಲ್ಲೇ ಸಿಕ್ಕಿದ್ದಿರಿ"
"ಹಾಗಾದರೆ...ಹಾಗಾದರೆ... ಆವತಂಶಕ?" ಪೂಜಾ ಕೇಳಿದಳು
"ಓಹ್! ಆ ಭಿಕ್ಕು ನಿಜವಾಗಿ ಆವತಂಶಕದವನೇ. ನಾಗಾನಂದನ ಪ್ರೂಫ್ ಹೊರತರುವ ಸಲುವಾಗಿ ನಾನು ಅನಾನಿಮಸ್‌ಆಗಿ ಆವತಂಶಕದೊಂದಿಗೆ ಸಂಪರ್ಕ ಮಾಡಿ ಪ್ರೂಫ್‌ಗಳನ್ನು ನಾಶ ಮಾಡದಿದ್ದರೆ ಅವರಿಗೆ ಉಳಿಗಾಲವಿಲ್ಲವೆನ್ನುವುದನ್ನು ತೋರಿಸಿದೆ. ಅವರು ನಾನು ತೋಡಿದ ಹಳ್ಳಕ್ಕೆ ಬಿದ್ದರು -ನಾಗಾನಂದನಿಂದ ಆ ಪ್ರೂಫ್‌ಗಳನ್ನು ಪಡೆಯುವದಕ್ಕಾಗಿ ಅವರ ಆ ಭಿಕ್ಕುವನ್ನು ನನ್ನ ನಿಗ್ರಹಕ್ಕೆ ಒಪ್ಪಿಸಿದರು. ಆ ಭಿಕ್ಕು ನಾನು ಹೇಳಿದಂತೆ ಆಡುತ್ತಿದ್ದ" ಜೀತ್ ವಿಶದಪಡಿಸಿದ. "ಪ್ರೂಫ್ ಕೈಗೆ ಸಿಕ್ಕಮೇಲೆ ಆ ಭಿಕ್ಕು ಅವನ್ನು ನನಗೆ ತಲುಪಿಸುವವನಿದ್ದ. ನಂತರ ನಾನು ಆವತಂಶಕದವರನ್ನೂ ಡಬಲ್-ಕ್ರಾಸ್ ಮಾಡುವವನಿದ್ದೆ. ಆ ಪ್ರೂಫ್‌ಗಳನ್ನು ಪಬ್ಲಿಶ್ ಮಾಡಿ, ಬುದ್ಧಾವತಾರದ ಸುಳ್ಳನ್ನು ಜಗತ್ತಿನ ಮುಂದೆ ಇಡುವುದೇ ನನ್ನ ಧ್ಯೇಯ"
"ಪೋಲೀಸ್! ಗನ್ ಕೆಳಗೆ ಬಿಸಾಡಿ!" ಹಿಂದಿನಿಂದ ಕೂಗು ಬಂತು.
ಜೀತ್ ದಿಕ್ಕಾಪಾಲಾಗಿ ಅತ್ತಿತ್ತ ನೋಡಹತ್ತಿದ.
"ಬಿಸಾಡಿ! ಈಗ!" ಪುನಃ ಕರೆ ಬಂತು. ಹತ್ತಾರು ಮಂದಿ ಪೋಲೀಸರು ನುಗ್ಗಿ ಜೀತ್, ಪೂಜಾ, ದಿನಕರರನ್ನು ಸುತ್ತುವರಿದು ನಿಂತರು.
"ಆತ! ಅವನನ್ನು ಅರೆಸ್ಟ್ ಮಾಡಿ" ಜೀತ್‌ನನ್ನು ತೋರಿಸಿ ಇನ್ಸ್ಪೆಕ್ಟರ್ ಬ್ರಹ್ಮಾವರ್ ಮುಂಬರುತ್ತ ಹೇಳಿದ. ದಿನಕರನ ಕಡೆ ತಿರುಗಿ. "ಐ ಆಮ್ ಸಾರಿ ಮಿ. ದಿನಕರ್. ನಿಮಗೆ ತೊಂದರೆ ಕೊಡಬೇಕಾಯಿತು. ಕ್ಷಮಿಸಿ" ಎಂದ. ನಂತರ ಜೀತ್‌ನನ್ನು ನೋಡಿಕೊಂಡು "ಮಿ. ಜೀತೇಂದ್ರ, ನಿಮ್ಮ ಆ ಭಿಕ್ಕು-ವೇಷಧಾರಿಯನ್ನು ನೀವು ಬಳುವಳಿಯಾಗಿ ಕೊಟ್ಟ ಗುಂಡು ಕೊಲ್ಲಲಿಲ್ಲ. ಈಗ ನಮ್ಮ ನಿಗ್ರಹದಲ್ಲಿದ್ದಾನೆ; ಕೋಗಿಲೆಯಂತೆ ಹಾಡುತ್ತಿದ್ದಾನೆ. ನಿಮ್ಮ ಸಂಪೂರ್ಣ ಜಾತಕವನ್ನು ಆಗಲೇ ಒದರಿದ್ದಾನೆ. ನಿಮ್ಮನ್ನು ಕೊಲೆ ಆಪಾದನೆ ಮೇಲೆ ಅರೆಸ್ಟ್ ಮಾಡಲಾಗುತ್ತಿದೆ" ಎಂದ. "ಕರೆದೊಯ್ಯಿರಿ ಇವನನ್ನು" ಉಳಿದ ಪೋಲೀಸರಿಗೆ ಹೇಳಿದ.
"ಆವತಂಶಕ..." ದಿನಕರ ಇನ್ಸ್‌ಪೆಕ್ಟರ್ ಬೆರಳಿನಲ್ಲಿದ್ದ ಉಂಗುರ ನೋಡುತ್ತ ಉಸುರಿದ.
"ನೋ ಮಿ. ದಿನಕರ್" ಇನ್ಸ್‌ಪೆಕ್ಟರ್ ಮೆಲ್ಲಗೆ ದಿನಕರನಿಗೆ ಹೇಳಿದ. "ನನ್ನ ನಿಷ್ಠೆ ನನ್ನ ಕರ್ತವ್ಯದಲ್ಲಿ. ಕೊಲೆಗಾರನನ್ನು ಪತ್ತೆಹಚ್ಚುವುದು ನನ್ನ ಗುರಿಯಾಗಿತ್ತು. ಯು ಆರ್ ಫ್ರೀ"
ಗಡಿಬಿಡಿಯಲ್ಲಿ ದಿನಕರ ಮತ್ತು ಪೂಜ ಕೈಯಲ್ಲಿದ್ದ ಅಗ್ನಿಪುರಾಣವನ್ನು ಲೈಬ್ರರಿಯಿಂದ 'ಬಾಡಿಗೆ' ತೆಗೆದುಕೊಂಡು ಹೊರಬಿದ್ದರು.
*****
ಮಾರನೆಯ ದಿನ ಸಂಜೆ ರೆಸ್ಟೋರಾಂಟ್‌ನಲ್ಲಿ ಕುಳಿತು ದಿನಕರ ಹಾಗು ಪೂಜಾ ಡಿನ್ನರ್ ಮಾಡುತ್ತಿದ್ದರು.
"ಆ ಅಗ್ನಿಪುರಾಣದಲ್ಲಿ ಜೀತ್ ಹುಡುಕುತ್ತಿದ್ದ ಎಲ್ಲ ಪ್ರೂಫ್‌ಗಳೂ ಇವೆ. ಹಸ್ತಪ್ರತಿ ಮಾಡುವವ ಇನ್ನೂ ಹಿಂದಿನ ಕಾಲದ ಗ್ರಂಥವನ್ನು ಆಧಾರ ಮಾಡಿಕೊಂಡು ಬರೆದಿದ್ದಾನೆ. ಅದರಲ್ಲಿ ಹಲಾಯುಧ ಇರುವುದು, ತಾನು ತಿಳಿದಿರುವ ಬುದ್ಧನನ್ನು ಅದಲಿ ಬದಲಿ ಮಾಡುತ್ತಿರುವುದು ಎಲ್ಲವೂ ವಿಸ್ತಾರವಾಗಿ ಬರೆದಿದ್ದಾನೆ" ದಿನಕರ ಪೂಜಾಳಿಗೆ ಹೇಳುತ್ತಿದ್ದ. ಸ್ವಲ್ಪ ಮೌನದ ನಂತರ "ಬುದ್ಧ ವಾಸ್ ಎ ಗ್ರೇಟ್ ಮ್ಯಾನ್ ವಿಥೌಟ್ ಬೀಇಂಗ್ ಆನ್ ಅವತಾರ... ಅಂದಹಾಗೆ, ಎರಡನೇ ಕ್ಲೂ ಭದ್ರಕಾಳಿಯ ತವರೂರು, ಕೊಲ್ಕತ್ತಾ"
"ಓಹ್, ವಾವ್!" ಪೂಜಾಳ ಉದ್ಗಾರ.
"ಅಷ್ಟೇ ಅಲ್ಲ, ನನ್ನ ಈಮೈಲ್ ಪುನಃ ಅಪ್ ಆಗಿದೆ. ನಾಗಾನಂದ ತನ್ನ ರೆಸರ್ಚ್ ಮೆಟೀರಿಯಲ್ ಅಟ್ಯಾಚ್‌ಮೆಂಟ್‌ಆಗಿ ನನಗೆ ಈಮೈಲ್ ಕಳಿಸಿದ್ದಾನೆ. ಆದರಲ್ಲಿ ಇನ್ನೂ ಹಲವಾರು ಇದೇ ರೀತಿ ವಿವರಗಳಿವೆ. ಒಟ್ಟಿನಲ್ಲಿ ಜೀತ್ ಹೇಳುತ್ತಿದ್ದ, ಮುಖ್ಯವಾಗಿ ನನ್ನ ಮಿತ್ರ ನಾಗಾನಂದ ರಿಸರ್ಚ್ ಮಾಡುತ್ತಿದ್ದ ಹಲಾಯುಧನೇ ಮೂಲ ಅವತಾರ, ಬುದ್ಧ ನಂತರ ಸೇರಿಸಿದ ಅವತಾರವೆಂದು ಕನ್‌ಕ್ಲೂಸಿವ್‌ಆಗಿ ಪ್ರೂವ್ ಮಾಡುತ್ತದೆ" ದಿನಕರ ಮುಂದುವರೆಸಿದ.
"ಮುಂದೇನು, ಡಾಕ್ಟರ್? ನೀವು ಇದನ್ನು ಪಬ್ಲಿಶ್ ಮಾಡುವಿರಾ?" ಪೂಜಾ ಕೇಳಿದಳು. ನಾಗಾನಂದ ತಲೆಯಾಡಿಸಿದಾಗ "ಮತ್ತೆ ಆವತಂಶಕ?"
"ಆವತಂಶಕ ಬಿ ಡ್ಯಾಮ್ಡ್. ನನ್ನ ಮಿತ್ರ ನಾಗಾನಂದನಿಗೆ ಶ್ರದ್ಧಾಂಜಲಿಯಾಗಿ ಈ ಪುಸ್ತಕ ಖಂಡಿತವಾಗಿ ಪಬ್ಲಿಶ್ ಮಾಡಿಸುವೆ. ಇಲ್ಲಲ್ಲದಿದ್ದರೆ ಅಮೇರಿಕಾದಲ್ಲಿ" ದಿನಕರ ಢೃಡವಾಗಿ ಹೇಳಿದ. "ನೀನು? ನಿನ್ನ ಸ್ಟೋರಿ ಸಿಕ್ಕಿತೇ? ಇನ್ನೂ ಹೆಚ್ಚು ಸಿಕ್ಕಿತೇ?"
"ನಾನು? ನಾನು ಇನ್ನು ಮೇಲೆ ಸ್ಟೋರಿಯಲ್ಲ ಫಿಕ್ಷನ್-ಥ್ರಿಲ್ಲರ್ಸ್ ಬರೆಯೋಣವೆಂದು ನಿರ್ಧಾರ ಮಾಡಿದ್ದೇನೆ. ಮೊದಲ ಕತೆಗೆ ಸಾಕಷ್ಟು ಮೆಟೀರಿಯಲ್ ಸಿಕ್ಕಿದೆ" ಎಂದು ನಕ್ಕಳು.
*****
Labels:
balarama. halayudha,
buddha,
da vinci code,
dashavatara,
fiction,
kannada,
thriller
Subscribe to:
Post Comments (Atom)
1 comment:
ರವಿ,
'ದ ದಶಾವತಾರ ಕೋಡ್ ' ಅದ್ಬುತವಾಗಿ ಮೂಡಿ ಬಂದಿದೆ!
ರಾಬರ್ಟ್ ಲ್ಯಾಂಗಡನ್, ಸೋಫಿಯಾ, ಪ್ರಿಯರ್ ಡೀ ಸಿಯಾನ್...ಎಲ್ಲವನ್ನು ನಮ್ಮ ದೇಶಿ ಸೊಗಡಿನಲ್ಲಿ ತುಂಬಾ ಚೆನ್ನಾಗಿ ಹೊರತಂದಿದಿರಾ..
ಶೃಂಗೇರಿಯಿಂದ ತಂಜಾವೂರು...ಗ್ರಂಥಾಲಯ..ವಾವ್ !
ತುಂಬಾ ಇಷ್ಟ ಆಯ್ತು..ಹೀಗೆ ಬರೀತಾ ಇರೀ
Post a Comment