Monday, October 09, 2006

ಉತ್ತರ ಭಾರತದ ಪ್ರವಾಸ ಕಥೆ

ಭಾಗ ೧: ಬೆಂಗಳೂರಿನಿಂದ ದೆಹಲಿಗೆ.

ಫೆಬ್ರವರಿ ೧೯೯೮

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಓದು ಮುಗಿದಿತ್ತು. ದೇಶ ಸುತ್ತುವ ಆಸೆ. ಮನೆಯವರನ್ನು ಕೇಳಿದೆ. ಅಮ್ಮ ಮಗನಿಗಾಗಿ 'ಹೂಂ' ಅಂದರೂ ಅಣ್ಣ (ನಮ್ಮ ತಂದೆ) ಸುತಾರಾಂ ಒಲ್ಲೆ ಅಂದುಬಿಟ್ಟರು. ಸ್ನೇಹಿತರನ್ನು, ಬಂಧು ಬಾಂಧವರನ್ನು ಕೇಳಿದೆ. ಎಲ್ಲರೂ ಈಗಲ್ಲ, ನೋಡಬೇಕು, ಮುಂದಿನ ವರ್ಷ, ಹೀಗೆ ತೇಲಿಸಿದರೇ ಹೊರತು ಯಾರೂ ನನ್ನೊಡನೆ ಬರಲು ಒಪ್ಪಲಿಲ್ಲ. ನಾನೋ, ಮುಂದಿನ ವರ್ಷ ಎಲ್ಲಿ ಇರುವೆನೋ ಎಂದುಕೊಂಡು ಭಂಡತನ ಮಾಡಿ ಏಶಿಯನ್ ಟ್ರಾವಲ್ಸ್‌ನಲ್ಲಿ ಒಂದು ಉತ್ತರ ಭಾರತದ ಪ್ರವಾಸ ಕಾದಿರಿಸಿದೆ. ಕೆಲಸದಿಂದ ಒಂದು ತಿಂಗಳು ರಜ ಪಡೆದೆ. ಅಣ್ಣ ಅಂತು ನಾನು ಕೊನೆ ಘಳಿಗೆಯಲ್ಲಿ ಹಿಂಜರಿಯುತ್ತೇನೆ ಅಂದುಕೊಂಡಿದ್ದರು. ಅಂತೂ ಹೊರಡೊ ದಿನ ಬಂದೇಬಿಟ್ಟಿತು.

೨೯ ಏಪ್ರಿಲ್ ೧೯೯೮

ಅಮ್ಮ ಅಣ್ಣ ಹಾಗು ನಾನು ಸಂಜೆ ಸುಮಾರು ೫:೦೦ ಘಂಟೆಗೆ ಮನೆಯಿಂದ ಹೊರಟೆವು. ಸುಮಾರು ೫:೩೦ ಗೆ ರೈಲು ನಿಲ್ದಾಣ ತಲುಪಿದೆವು. ನಾನೇ ಎಲ್ಲರಿಗಿಂತ ಕೊನೆಗೆ ಬಂದವನು. ಉಳಿದ ಗುಂಪು ಆಗಲೇ ಬಂದಿತ್ತು. ಅಣ್ಣ (ನನ್ನ ಬಳಿ ಇದ್ದರೂ) ನನಗೆ ಒಂದಿಷ್ಟು ದುಡ್ಡು ಕೊಟ್ಟರು. ಒಂದು ೨ ಲೀಟರ್ ಸೀಸಿ ಬಿಸ್ಲೇರಿ ನೀರೂ ತಂದು ಕೊಟ್ಟರು.

ಬೆಂಗಳೂರಿನಿಂದ ನಿಶ್ಚಿತ ಸಮಯವಾದ ಸಂಜೆ ೬:೨೫ಕ್ಕೆ ಹೊರಟೆವು. ರೈಲುಗಾಡಿ - ಕರ್ನಾಟಕ ಎಕ್ಸ್‌ಪ್ರೆಸ್ಸ್. ಶುರುವಲ್ಲಿ ಲೆವೆಲ್ ಕ್ರಾಸಿಂಗ್‌ಗಳ ಕಾರಣ ನಿಧಾನವಾದರೂ, ರಾತ್ರಿ ೮:೦೦ ಘಂಟೆ ಹೊತ್ತಿಗೆ ಸಾಕಷ್ಟು ವೇಗವಾಗಿ ಓಡಲು ಶುರು ಮಾಡಿತ್ತು. "ಪಕೋಡ", "ಚಹ", ಇತ್ಯಾದಿ ಕೂಗಿಕೊಂಡು ಮಾರುವವರು ಆಗಲೇ ಓಡಾಡುತ್ತಿದ್ದರು.

ಪ್ರವಾಸ ಕರ್ತ (ಟ್ರಾವಲ್ ಏಜೆಂಟ್) ಪ್ರವಾಸದಲ್ಲಿ ಊಟದ ಭಾರ ಹೊತ್ತಿದ್ದರೂ, ರೈಲು ಪ್ರವಾಸದ ಸಮಯಕ್ಕೆ ಯಾವ ಭರವಸೆಯನ್ನೂ ಕೊಟ್ಟಿರಲಿಲ್ಲ. ಆದರೂ ಎಲ್ಲರಿಗೂ ವಾಂಗಿಭಾತ್ ಮತ್ತು ಮೊಸರನ್ನದ ಪೊಟ್ಟಣಗಳನ್ನು ಕೊಟ್ಟ. ಜೊತೆಗೆ ಒಂದು ಅಚ್ಚು ಮೈಸೂರು ಪಾಕ್ ಸಹ. ಚೆನ್ನಾಗಿಯೇ ಇತ್ತು ಊಟ. ಇನ್ನೇನು ಪ್ರವಾಸಾದ್ಯಂತ ತೊಂದರೆಯಿಲ್ಲವೆಂದುಕೊಂಡು ಮಲಗಿದೆ. ಆದರೆ ಬರುವ ಎರಡು ದಿನಗಳ ಊಹೆ ನನಗಾಗಿರಲಿಲ್ಲ.

೩೦ ಏಪ್ರಿಲ್ ೧೯೯೮

ಮಾರನೆ ದಿನ ಬೆಳಗ್ಗೆ ೫:೩೦ಕ್ಕೆ (ಎಲ್ಲರಿಗಿಂತ ಮುಂಚೆ) ಎದ್ದು ಬಾತ್‌ರೂಂ ಕೆಲಸಗಳನ್ನು ಮುಗಿಸಿಕೊಂಡೆ. ಆಮೇಲೆ ಒಂದಿಷ್ಟು ಹೊತ್ತು (ಎಲ್ಲರೂ ಏಳುವವರೆಗೆ) ಬಾಗಿಲ ಬಳಿ ನಿಂತಿದ್ದೆ. ನಂತರ ಕೂತು ಪ್ರವಾಸ ಮಾರ್ಗದರ್ಶಕ "ಹರಿಯಪ್ಪ"ನ ಜೊತೆ ಕೊಂಚ ಮಾತನಾಡಿದೆ. ಇಷ್ಟು ಹೊತ್ತಿಗೆ ಗುಲ್ಬರ್ಗ ದಾಟಿದ್ದೆವು. ರೈಲು ೨೦ ನಿಮಿಷ ತಡವಾಗಿ ಓಡುತ್ತಿದ್ದರೂ ಬರುವ ರಾತ್ರಿ ಸರಿಪಡಿಸಲಾಗಬಹುದೆಂದು ತಿಳಿಯಿತು. ಸುಮಾರು ೭:೦೦ ಘಂಟೆಗೆ ಗುಡ್‌ಗಾಂ ಅನ್ನುವ ಒಂದು ಊರು ಹಾಯ್ದು ಹೋದೆವು. ಇದು ಕರ್ನಾಟಕದ ಕೊನೆಯ ಊರು. ೭:೧೦ಕ್ಕೆ "ದುಧಾನಿ" ಅನ್ನುವ ಊರಿಗೆ ಹೋದೆವು. ದುಧಾನಿ ಮಹಾರಾಷ್ಟ್ರದಲ್ಲಿದೆ.

ಸ್ವಲ್ಪ ಹೊತ್ತಿನ ನಂತರ ಸೋಲಾಪುರ ತಲುಪಿದೆವು. ಇದೊಂದು ಭಾರೀ ಗಲೀಜು ನಿಲ್ದಾಣ. ಬಲು ರೇಗಿಸುವ ಪ್ರಯಾಣಿಕರು ಹತ್ತಿದರು ಇಲ್ಲಿ. ನಿಲ್ದಾಣದ ತುಂಬ ದುರ್ವಾಸನೆ. ಶೆಕೆ ಬೇರೆ. ಜನರು ತಮ್ಮ ಕುಡಿಯುವ ನೀರಿನ ಪಾತ್ರೆಗಳನ್ನು ಇಲ್ಲಿ ತುಂಬಿಸಿಕೊಳ್ಳುವುದು ನೋಡಿದರೆ ಅಸಹ್ಯವಾಯಿತು. ನಾನು ಕ್ಯಾಂಟೀನ್ ಹುಡುಕಿದೆ. ತಿನ್ನಲು ಲಾಯಕ್ಕಾದ ಜಾಗ ಯಾವುದೂ ಕಾಣಲಿಲ್ಲ. ಅಷ್ಟರಲ್ಲಿ ರೈಲು ಹೊರಟಿತು, ಸಧ್ಯ ಸೋಲಾಪುರದಿಂದ ಬಿಡುಗಡೆಯಾಯಿತು ಎಂದುಕೊಂಡೆ.

ಸೋಲಾಪುರ ಬಿಟ್ಟ ನಂತರ ಇಂಡಿಯನ್ ರೈಲ್ವೇಸ್‌ನ ತಿಂಡಿ ಮಾರುವವ ಒಬ್ಬ "ಬ್ರೆಡ್ ಆಂಲೆಟ್", "ಉಪ್ಮ-ವಡ" ಮಾರುತ್ತಾ ಬಂದ. ನಾನು ಉಪ್ಮ-ವಡ ತೊಗೊಂಡೆ. ರುಚಿಹೀನವಾದರೂ ಬಿಸಿಯಾಗಿತ್ತು. ತಿಂದು ನೀರು ಕುಡಿದ ನಂತರ ಹಸಿವು ಇಂಗಿತು. ಆದರೆ ಇನ್ನೆರಡು ದಿನ ಈ ರೈಲಿನಲ್ಲಿ ಹೇಗೆ ಕಳೆಯುವುದೆಂದು ಯೋಚಿಸ ತೊಡಗಿದೆ.

ಸಮಯ ೯:೦೦ ಘಂಟೆಯಾಗಿತ್ತು. ಕಿಟಕಿಯಿಂದ ಬಿಸಿಲು ಹೊಡೆಯುತ್ತಿತ್ತು. ಒಳಗೆ ಹಲವಾರು ಫ್ಯಾನುಗಳು ಓಡುತ್ತಿದ್ದರೂ ಸಿಕ್ಕಾಪಟ್ಟೆ ಶಕೆಯಾಗುತ್ತಿತ್ತು. ರೈಲು ಮಧ್ಯೆ ಲೆವೆಲ್ ಕ್ರಾಸಿಂಗ್, ಇತ್ಯಾದಿ ಎಂದು ಒಂದೆರಡು ಬಾರಿ ಬಿಕ್ಕಳಿಸಿದರೂ ಅಷ್ಟು ಹೊತ್ತಿಗೆ ವೇಗವಾಗಿ ಸಾಗುತ್ತಿತ್ತು. ಸುತ್ತ ಎಲ್ಲಿ ನೋಡಿದರೂ ಕರೀ ನೆಲ. ಮೈಲಿಗತ್ತಲೆ ಹಸಿರೇ ಕಾಣಿಸುತ್ತಿರಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ರೈತರುಗಳು ಕಾಣಿಸುತ್ತಿದ್ದರು - ಮಳೆಯ ಮುನ್ನ ನೆಲ ಊಳುತ್ತ. ಅಲ್ಲೊಂದು ಇಲ್ಲೊಂದು ಪ್ರಾಣಿಗಳು ಮೇಯುತ್ತಿದ್ದವು. ಏನನ್ನು ಮೇಯುತ್ತಿರಬಹುದೆಂದು ಅಚ್ಚರಿ ಪಟ್ಟೆ - ಹುಲ್ಲಿನ ಒಂದು ದಳವೂ ಕಾಣಿಸುತ್ತಿರಲಿಲ್ಲ.

ರೈಲು ಹಳಿಯ ಎರಡೂ ಕಡೆ ಗೂಡ್ಸ್ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವುಗಳಿಗೇನಾಗಿರಬಹುದೆಂದು ಯೋಚಿಸ ತೊಡಗಿದೆ. ಹಾಗೆಯೇ ಎಣ್ಣೆಯ ಟ್ಯಾಂಕರ್‌ಗಳೂ ಬಿದ್ದಿದ್ದವು. ಆ ಅಪಘಾತವು ಹೇಗಾಗಿರಬಹುದೆಂದು ಯೋಚಿಸಿ ಸ್ವಲ್ಪ ನಡುಕ ಹುಟ್ಟಿತು. ಬಹಳ ಬಾಯಾರಿಕೆಯಾಯಿತು, ನೀರು ಕುಡಿದೆ. ಸೂರ್ಯ ನೆತ್ತಿಗೇರಿದಂತೆ ಕಿಟಕಿಯಿಂದ ಬರುವ ಬಿಸಿಲು ಕಡಿಮೆಯಾಗುತ್ತಿತ್ತು. ಸಧ್ಯ!

೧೦:೨೦. ಇಳಿದು ನಡೆದು ಹೋಗುವದಕ್ಕಿಂತ ನಿಧಾನವಾಗಿ ರೈಲು ಓಡುತ್ತಿತ್ತು. ಹಳಿಯ ಮೇಲೆ ಏನೋ ರಿಪೇರಿ ಕೆಲಸ ನಡೆಸುತ್ತಿರುವಂತಿತ್ತು. ಒಂದು ದೊಡ್ಡ ನದಿಯ ಸೇತುವೆಯ ಮೇಲೆ ಹಾಯ್ದು ಬಂದೆವು. ಈ ಬೆಟ್ಟ ಬೇಸಿಗೆಯಲ್ಲೂ ಸಾಕಷ್ಟು ನೀರಿರುವ ನದಿ. ತಂಗಾಳಿ ಬೀಸುತ್ತಿತ್ತು - ಆ ನದಿಯು ನನ್ನನ್ನು ಈಜಲು ಆಹ್ವಾನಿಸಿದಂತೆ ಭಾಸವಾಯಿತು. ನೆಲದ ಮೇಲೆ ಸ್ವಲ್ಪ ಹಸಿರು ಕಾಣಿಸತೊಡಗಿತ್ತು. ಇದು ಗೋದಾವರಿ ನದಿಯೆಂದು ನಂತರ ತಿಳಿಯಿತು. ಇಂತಹ ಮಹಾನದಿಯನ್ನು ವೇದಮಂತ್ರಗಳಲ್ಲಿ ಹೇಳುವುದರಲ್ಲಿ ಆಶ್ಚರ್ಯವೇ ಇಲ್ಲವೆಂದುಕೊಂಡೆ.

ರೈಲು ಮತ್ತೆ ವಿನಃ ಕಾರಣ ನಿಂತಿತು. ತಂಗಾಳಿ ಇನ್ನೂ ಬೀಸುತ್ತಿತ್ತು, ಆದರೆ ಇಲ್ಲೊಬ್ಬ ಯಾತ್ರಿ ರೈಲಿನ ಒಳಗೇ ಮತ್ತೊಮ್ಮೆ ಸಿಗರೇಟ್ ಸೇದಲು ಹೊರಟ. ಕೋಪದಿಂದ ಅವನ ಮೇಲೆ ಕೂಗಿದೆ. ಜೊತೆಗೆ ನಮ್ಮ ಸಹ-ಪ್ರಯಾಣಿಕರೂ ಸೇರಿಕೊಂಡರು. 'ಟಿಸಿ'ಯನ್ನು ಕರೆದು ದೂರು ಕೊಡುವುದಾಗಿ ಹೇಳಿದೆ. ಅದರಿಂದಲೋ ಅಥವಾ ರೈಲಿನಲ್ಲಿ ನನ್ನ ಹಿರಿಯತನದ ಕಾರಣದಿಂದಲೋ, ಬೈದುಕೊಂಡಾದರೂ ಸರಿ, ಅವನು ಆ ಸಿಗರೇಟ್ ಎಸೆದ. ಇಷ್ಟು ಹೊತ್ತಿಗೆ ಮತ್ತೆ ರೈಲು ಹೊರಟಿತು - ಏನು ಸಾಧಿಸಿಕೊಂಡೋ ಆ ಪರಮಾತ್ಮನಿಗೇ ಗೊತ್ತು!

೧೧:೧೦ಕ್ಕೆ ದೌಂಡ್ ಜಂಕ್ಷನ್ ತಲುಪಿದೆವು. ಮಹಾರಾಷ್ಟ್ರ ರಾಜ್ಯದ ಮಧ್ಯದಲ್ಲಿ. ಇಲ್ಲಿ ಭೇದದರ್ಶಕ ಜನರು 'ಪಾನ್' ತಿಂದುಕೊಂಡು ಅಲ್ಲೇ ಉಗಿದುಕೊಂಡು ಓಡಾಡುತ್ತಿದ್ದರು. ಇಡಿ ನಿಲ್ದಾಣವೆ ದುರ್ವಾಸನೆಯಿಂದ ತುಂಬಿತ್ತು. ೨೦ ನಿಮಿಷಗಳ ನಿಲುವಿನ ನಂತರ ರೈಲು ಮತ್ತೆ ಹೊರಟಿತು. ಹೀಗೆ ಒಂದಾದ ಮೇಲೊಂದು ಊರುಗಳು ಉರುಳಿದವು. ಅಹ್ಮದ್‌ನಗರ, ಪರಗಾಂವ್, ಇತ್ಯಾದಿ.

ಮಧ್ಯಾಹ್ನದ ಹೊತ್ತಿಗೆ ಬಿಸಿಲು ಹೆಚ್ಚಾಗಿ ಕಿಟಕಿಯಿಂದ ಬರುವ ಗಾಳಿ, ಕುಲುಮೆಯಿಂದ ಬರುವ ಗಾಳಿಯಷ್ಟು ಬಿಸಿಯಾಗಿತ್ತು. ಆಚೆ, ತಗ್ಗು ದಿಣ್ಣೆಗಳಿಂದ ಕೂಡಿದ ಒಣ ನೆಲ. ಒಂದು ಪರ್ವತ ಶ್ರೇಣಿಯೊಳಗಿಂದ ರೈಲು ಹಾಯ್ದು ಹೋಯಿತು. ಇದು ವಿಂಧ್ಯಾ ಪರ್ವತಗಳಿರಬಹುದೇ ಎಂದುಕೊಂಡೆ. ಆದರೆ ವಿಂಧ್ಯಾ ಇಷ್ಟು ಬೇಗನೆ ಬರಲಾರದೆಂದು ಅರಿತೆ. ಮಧ್ಯಾಹ್ನವಿಡಿ ರೈಲು ಹೆಚ್ಚು ವೇಗದಿಂದ ಹೋಗಲಿಲ್ಲ. ಶುಚಿಯ ಕೊರತೆಯಿಂದ ಊಟಮಾಡಲು ಭಯವಾಗಿ ಉಪವಾಸವೇ ಇದ್ದೆ. ಹೊತ್ತು ಕಳೆಯಲು ಒಂದು ನಿದ್ದೆ ತೆಗೆದೆ.

೧೫:೪೫ಕ್ಕೆ ಮನ್‌ಮಾಡ್ ಅನ್ನುವ ಊರಿನಲ್ಲಿ ಬಂದು ನಿಂತೆವು. ಇದೊಂದು ಸುಮಾರು ದೊಡ್ಡ ಊರೆಂದು ಭಾವಿಸಿದೆ. ಆದರೆ ಅದೇ ಗಬ್ಬು ವಾಸನೆ, ಅದೇ ಗಲೀಜು. ಹೊಟ್ಟೆ ಹಸಿವಾದ್ದರಿಂದ ನಾನು ಆಚೆ ಹೋಗಿ ಒಂದು ಕೋಕ್ ಕುಡಿದು ಬಂದೆ. ಬಂದು ನೋಡಿದರೆ ನನ್ನ ಜಾಗದಲ್ಲಿ ಯಾರೋ ಕೂತುಬಿಟ್ಟಿದ್ದಾರೆ! ನಮ್ಮ ಗುಂಪಿನ ಉಳಿದವರಿಗೂ ಹಾಗೇ ಆಗಿತ್ತು. ಜಗಳವಾಡಿ ಎಬ್ಬಿಸಿದೆ. ಅವರಿಗೆ ಇವು ಕಾದಿರಿಸಿದ ಜಾಗಗಳೆಂದು ವಿವರಿಸಿದೆವು. ಅಷ್ಟರಲ್ಲಿ ನಮ್ಮ ಹರಿಯಪ್ಪ ಬಂದರು. ಅರಚಿ-ಕಿರುಚಿ ಅವರನ್ನು ಓಡಿಸಿದರು. ರೈಲು ಮನ್‌ಮಾಡ್ ಬಿಟ್ಟಿತು, ನಾವೆಲ್ಲ ನಿಟ್ಟುಸಿರು ಬಿಟ್ಟೆವು.

ಮತ್ತೆ ಊರುಗಳು ಮಿಂಚತೊಡಗಿದವು. ಪಿಂಪರ್‌ಖೇಡ್, ನಾಯ್ದೊಂಗಿ, ಜಲಗಾಂವ್, ಭಾಡ್ಲಿ, ಇತ್ಯಾದಿ. ಸಂಜೆಯಾದರೂ ಶೆಕೆ ತಡೆಯಲಾಗದು! ನನ್ನ (ಬೆಂಗಳೂರಿನ ಬಿಸ್ಲೇರಿ) ನೀರು ಸಹ ೪೦ ಡಿಗ್ರಿ ಬಿಸಿಯಾಗಿತ್ತು, ಮುಗಿಯುತ್ತಲೂ ಇತ್ತು. ಸಂಜೆ ೬:೩೦ಕ್ಕೆ ರೈಲು ಭೂಸಾವಲ್ ಅನ್ನುವ ಊರಿಗೆ ಬಂದು ನಿಂತಿತು. ದೊಡ್ಡ ನಿಲ್ಡಾಣ, ಆಧುನಿಕ ಸವಲತ್ತು ಕಾಣಿಸುತ್ತಿದ್ದವು. ಹೊಟ್ಟೆ ಹಸಿವಾಗಿದ್ದರೂ ಏನನ್ನೂ ತಿನ್ನದೆ, ಕುಡಿಯದೆ ಮುಖ ಕೈಕಾಲು ತೊಳೆದು ಬಂದೆ. ತೊಳೆದ ನೀರಿನಲ್ಲಂತೂ ಮಸಿ, ಕೊಳೆ. ಇಡೀ ದಿನ ರೈಲಿನಲ್ಲಿ ಕಳೆದ ಲಕ್ಷಣಗಳು. ತಣ್ಣದಾದ ಮಿನರಲ್‌ವಾಟರ್ ಹುಡುಕಿದೆ, ಸಿಗಲಿಲ್ಲ. ರೈಲಿಗೆ ನೀರು ತುಂಬುತ್ತಿದಾರೆಂದು ಹಾಗು ಎಂಜಿನ್ ಬದಲಿಸುತ್ತಿದ್ದಾರೆಂದೂ ತಿಳಿಯಿತು.

ಸಂಜೆ ೭:೦೦ ಘಂಟೆಯಾದರೂ ಇನ್ನು ಕತ್ತಲಾಗಿರಲ್ಲ. ಮತ್ತೆ ಊರುಗಳ ಶ್ರೇಣಿ - ರಾವರ್, ಬುರ್‌ಹಾನ್‌ಪುರ್, ಇತ್ಯಾದಿ. ಸುಮಾರು ೭:೩೦ ಗೆ ಕತ್ತಲೆಯಾಯಿತು. ಮಹಾರಾಷ್ಟ್ರವನ್ನು ಬಿಟ್ಟು ಮಧ್ಯ ಪ್ರದೇಶ ಪ್ರವೇಶಿಸಿದೆವು. ಮಧಾಹ್ನ ಏನನ್ನೂ ತಿಂದಿಲ್ಲವೆಂದು ಕೇಳಿ ನನ್ನ ಸಹಪ್ರಯಾಣಿಕರು ಕಣ್ಣು ಕಣ್ಣು ಬಿಟ್ಟರು. ರಾತ್ರಿ ಊಟವನ್ನೂ ಹಾರಿಸುವ ಯೋಚನೆಯಲ್ಲಿದೆ. ಖಾಣ್ಡ್‌ವಾ ಅನ್ನುವ ಊರಿನಲ್ಲಿ ಕೊಳ್ಳಲು ನೀರು (ಮಿನರಲ್ ವಾಟರ್) ಹುಡುಕಿಕೊಂಡು ಹೋದೆ. ನೀರು ಸಿಗದಿದ್ದರೂ "ಮಧ್ಯ ಪ್ರದೇಶ್ ದುಗ್ಧ್ ಮಹಾಸಂಘ್" ದ ಒಂದು ಅಂಗಡಿ ಸಿಕ್ಕಿತು. "ಠಂಡಾ ಮೀಠಾ ಸುಗಂಧಿತ್ ದುಗ್ಧ್" ಅನ್ನುವ ಪೊಟ್ನದಲ್ಲಿದ್ದ ಹಾಲು ಅಲ್ಲಿತ್ತು. ನಮ್ಮ ನಂದಿನಿ ಹಾಲಿನ ತರಹ ಎಂದು ಪೊಟ್ನದಲ್ಲಿದ್ದರಿಂದ ಕ್ಷೇಮವೆಂದು ಎರಡು ಪೊಟ್ನ ಕುಡಿದೆ. ರೈಲಿಗೆ ಹಿಂತಿರುಗಿದ ಮೇಲೆ ನಮ್ಮ ಗುಂಪಿನ ಒಬ್ಬರು ( ಕೆ.ಇ.ಬಿ ಮಾಧವೇಶ್ವರ್, ಅವರ ಪತ್ನಿ ಹಾಗು ಅತ್ತೆ) ಎರಡು ಚಪಾತಿ ಕೊಟ್ಟರು. ಖುಷಿಯಾಗಿ ತಿಂದೆ. ನಂತರ ನೀರು ಕೊಳ್ಳಲು ರೈಲಿನ ಕ್ಯಾಂಟೀನ್‌ಗೆ ಹೋದೆ. ಅಲ್ಲಿ ರಾತ್ರಿಯ ಊಟ ತಿನ್ನದಿದ್ದದ್ದು ಪುಣ್ಯವೆಂದುಕೊಂಡು ಬಂದು ಮಲಗಿದೆ.

೧ ಮೇ ೧೯೯೮

ಎರಡನೇ ದಿನ ಸ್ವಲ್ಪ ತಡವಾಗಿ ಎದ್ದೆ. ಹಿಂದಿನ ರಾತ್ರಿಗಿಂತ ಸುಖಕರವಾಗಿ ಕಳೆದಿತ್ತು ಅಂದು - ಮಧ್ಯರಾತ್ರಿ ಬರಿ ೩-೪ ಬಾರಿ ಎದ್ದಿದ್ದೆ. ಹಾಗೆ ಒಮ್ಮೆ ಎದ್ದಾಗ ಜೇಬು ನೋಡಿಕೊಂಡರೆ ನನ್ನ ಹಣದ ಸಂಚಿಯೇ ಇಲ್ಲ. ಬಲು ಉದ್ವೇಗವಾಯಿತು. ನನ್ನ ಹಣವೆಲ್ಲ ಅದರಲ್ಲಿತ್ತು. ಯಾರೊ ಹೊಡೆದಿರಬೇಕೆಂದುಕೊಂಡೆ. ಶಾಂತವಾಗಲು ನೀರು ಕುಡಿದು ಸುತ್ತ ಮುತ್ತ ನೋಡಿದೆ. ಕೆಳಗಿನ ಬರ್ತ್ ಮೇಲೆ ಬಿದ್ದಿತ್ತು. ಕೆಳಗಿಳಿದು ತೆಗೆದುಕೊಂಡು ಸಧ್ಯ ಭಗವಂತ! ಎಂದು ಜೇಬಿಗೆ ಇಟ್ಟುಕೊಂಡು ಬಾಗಿಲ ಬಳಿ ಹೋಗಿ ನಿಂತೆ - ತಣ್ಣಗಾಗಲು. ಹೊತ್ತು ನೋಡಿಕೊಂಡರೆ ನನ್ನ ಕೈ ಗಡಿಯಾರವಿಲ್ಲ! ಹಿಂತಿರುಗಿ ನನ್ನ ಸ್ಥಳಕ್ಕೆ ಓಡಿದೆ. ಸಧ್ಯ ಅದು ನನ್ನ ದಿಂಬಿನ ಕೆಳಗೆ ಬಿದ್ದಿತ್ತು. ತೆಗೆದುಕೊಂಡು ಎರಡನ್ನೂ ಜೋಪಾನ ಮಾಡಿ, ತಕ್ಷಣ ಬರ್ತ್ ಹತ್ತಿ ಮಲಗಿದೆ.

೦೬:೨೫ಕ್ಕೆ ಇನ್ನೂ ಮಧ್ಯ ಪ್ರದೇಶದಲ್ಲಿದ್ದೆವು. ನಿನ್ನೆಗಿಂತ ಹಸಿರಾದ ನೆಲ ಸುತ್ತಲು. ಅಲ್ಲಲ್ಲಿ ನೀರು ಸಹ ಕಾಣಿಸುತ್ತಿತ್ತು - ಈಗಷ್ಟೇ ಮಳೆ ಬಂದಂತೆ. ಸುತ್ತಲೂ ನೆಲ ಬಹಳ ಸಮವಾಗಿತ್ತು - ಮೈಲಿಗಟ್ಟಲೆ ತಗ್ಗಿಲ್ಲ ದಿಣ್ಣೆಯಿಲ್ಲ. ಚಪ್ಪಟ್ಟೆಯಾಗಿಯೇ ಕ್ಷಿತಿಜದಲ್ಲಿ ಕುಂದುತ್ತಿತ್ತು. ಸ್ವಲ್ಪ ಹೊತ್ತಿಗೆ ಒಂದು ಕ್ರಿಕೆಟ್ ಸ್ಟೇಡಿಯಂ ಇರುವ ಊರಿಗೆ ಬಂದೆವು. ಇದು ಗ್ವಾಲಿಯರ್ ಆಗಿತ್ತು. ಮರಾಠ ಪೇಶ್ವಾ ಸಿಂಧಿಯಾರ ಊರು. ನಿಲ್ದಾಣವೇನು ಅದ್ಭುತವಾಗಿ ಕಾಣಿಸಲಿಲ್ಲ. ಊರು ಬಿಟ್ಟ ನಂತರ ಒಂದೆರಡು ಇಟ್ಟಿಗೆ ಗೂಡುಗಳು ಕಂಡವು. ನಮ್ಮ ಕಡೆಯ ಇಟ್ಟಿಗೆ ಹೂಡುಗಳ ತರಹ ಇಲ್ಲದೆ, ಇವು ಕೋನಾಕಾರವಾಗಿದ್ದವು. ಸುತ್ತಲೂ ಬೆಂಕಿಗೆ ಒಲೆಗಳು.

ಸ್ವಲ್ಪ ಹೊತ್ತಿನಲ್ಲಿ ಒಂದು ಬೆಟ್ಟಗುಡ್ಡದ ಭೂಭಾಗವನ್ನು ಹಾಯ್ದು ಬಂದೆವು. ಬಹಳ ಆಳವಿಲ್ಲದಿದ್ದರೂ ಆ ಜಾಗವು ನನಗೆ ನಾನು ನೋಡಿದ್ದ 'ಗ್ರ್ಯಾಂಡ್ ಕ್ಯಾನ್ಯನ್'ದ ಚಿತ್ರಗಳನ್ನು ನೆನಪಿಗೆ ತಂದಿತು. ಹರಿಯಪ್ಪ ಬಂದು ಇದು ಚಂಬಲ್ ಕಣಿವೆ ಎಂದು ಹೇಳಿದರು. ಡಕಾಯಿತೆ ಫೂಲನ್ ದೇವಿ ಆಳುತ್ತಿದ್ದ ಜಾಗ! ಡಕಾಯಿತರಿಗೆ ಹೇಳಿ ಮಾಡಿಸಿದಂತಹ ಪ್ರದೇಶವೆಂದುಕೊಂಡೆ. ಒಂದು ಕಾಲದಲ್ಲಿ ಈ ಕಣಿವೆಯು ಡಕಾಯಿತರಿಗೆ ಅವಿತುಕೊಳ್ಳುವ ಜಾಗವಾಗಿತ್ತು. ಅಂದಹಾಗೆ ಇಷ್ಟು ಹೊತ್ತಿಗೆ ಉತ್ತರ ಪ್ರದೇಶದಲ್ಲಿದ್ದೆವು.

೦೮:೧೫ದಕ್ಕೆ ಆಗ್ರಾ ತಲುಪಿದೆವು. ರೈಲ್ವೇ ನಿಲ್ದಾಣವಂತೂ ಎಲ್ಲಿಲ್ಲದ ಗಲೀಜಿನ ಜಾಗ. ಇಲ್ಲಿನ ನೀರೂ ಸಹ ದುರ್ಗಂಧದಿಂದ ಕೂಡಿದಹಾಗಿತ್ತು. ಯಮುನೆ (ನದಿ) ಅಷ್ಟು ಮಲಿನಳೇ ಎಂದು ಯೋಚಿಸ ತೊಡಗಿದೆ. ಆಚೆ ಗಲೀಜು ಎಲ್ಲೆಡೆ ತುಂಬಿತ್ತು. ಇದೇ ಗಲೀಜಿನಲ್ಲಿ ಪೂರಿಗಳನ್ನು ಮಾರುತ್ತಿದ್ದರು. ಜನರು ಇದನ್ನು ತಿನ್ನುತ್ತಲೂ ಇದ್ದರು. ಕ್ಷಿಪ್ತ ಉಕ್ಕಿನ ಹೊಟ್ಟೆ ಇವರದು ಎಂದುಕೊಂಡೆ. ಬಿಸಿಲು ಹೆಚ್ಚಾದ ಹಾಗೆ ಶೆಕೆ ತಡೆಯಲಾಗುತ್ತಿರಲಿಲ್ಲ. ಪ್ರವಾಸ ಮುಂದುವರಿದಂತೆ ಇಲ್ಲಿಗೆ ಮತ್ತೆ ಬರುತ್ತೇವೆ ಎಂದುಕೊಳ್ಳುತ್ತಿದ್ದಂತೆ ರೈಲು ಹೊರಟಿತು. ನಮ್ಮ ಜೊತೆ ಇದೇ ರೈಲಿನಲ್ಲಿ ಬಂಗಳೂರಿನಿಂದ ಬಂದ ಬೇರೆ ಗುಂಪುಗಳು ಇಲ್ಲೇ ಇಳಿಯುವುದೆಂದು ತಿಳಿಯಿತು. ಅವರುಗಳು ಅವರ ಪ್ರವಾಸವನ್ನು ಆಗ್ರಾದಿಂದ ಶುರು ಮಾಡಲಿದ್ದರು.

ಹೊತ್ತು ಕಳೆದಂತೆ ಊರುಗಳು ಹೋಗುತ್ತಿದ್ದವು - ಮಥುರ, ಫರೀದಾಬಾದ್, ನಿಜಾಮುದ್ದೀನ್ ಮುಗಿದವು. ಮುಂದಿನ ನಿಲುಗಡೆ ದೆಹಲಿಯಾಗಿತ್ತು.



ಭಾಗ ೨: ದೆಹಲಿ.

ಹೆಚ್ಚು ಕಡಿಮೆ ನಿಯುಕ್ತ ಸಮಯವಾದ ೧೨:೧೫ಕ್ಕೆ ದೆಹಲಿ ತಲುಪಿ, ನವದೆಹಲಿ ರೈಲು ನಿಲ್ದಾಣದಲ್ಲಿ ಇಳಿದೆವು. ಆದರೆ ಹರಿಯಪ್ಪ ಅಡಿಗೆ ಸಾಮಾನು, ಪಾತ್ರೆ-ಪರಟಿ ಇಳಿಸಿಕೊಳ್ಳುವ ಹಾಗೂ ನಮ್ಮ ತಂಗುವ ಜಾಗಕ್ಕೆ ಸವಾರಿ ಸಿದ್ಧ ಪಡಿಸುವ ನೆವ ಮಾಡಿ ತಪ್ಪಿಸಿಕೊಂಡುಬಿಟ್ಟರು. ಒಂದು ಘಂಟೆಯ ನಂತರ ನಮ್ಮನ್ನು ಇಂದು ಇರುವ ತಾಣಕ್ಕೆ ಕರೆದೊಯ್ಯುವ ಬಸ್ ತಯಾರು ಎನ್ನುವ ಸಮಾಚಾರದೊಂದಿಗೆ ಬಂದರು. ಅಷ್ಟು ಹೊತ್ತಿಗೆ ನಾನು ಒಂದು ಬಿಸ್ಲೇರಿ ಕೊಂಡು, ಇಷ್ಟವಿಲ್ಲದಿದ್ದರೂ ಎರಡು ಮಿರಿಂಡ (ಕಿತ್ತಳೆ ಸೋಡ) ಕುಡಿದಿದ್ದೆ. ಬೆಳಗ್ಗಿನಿಂದ ಅಶಾಂತವಾಗಿದ್ದ ನನ್ನ ಹೊಟ್ಟೆ ಅಷ್ಟು ಹೊತ್ತಿಗೆ ಶಾಂತವಾಗಿತ್ತು.

ಆಜ್ಮೇರಿ ಗೇಟ್‌ಗೆ ನಡೆದು ಹೋಗಬೇಕಿತ್ತು. ದೂರವಾದ್ದರಿಂದಲೋ, ಹೊಟ್ಟೆ ಖಾಲಿಯಿದ್ದರಿಂದಲೋ, ಅಥವ ಶಕೆಯಿಂದಲೋ, ನಾನು ನನ್ನ ಹೊರೆ ಹೊತ್ತು ಅಲ್ಲಿಗೆ ಹೋಗುವಷ್ಟರಲ್ಲಿ ಹೆಚ್ಚು ಕಡಿಮೆ ಕುಸಿದೇ ಹೋಗಿದ್ದೆ. ಹೊಸದಾದ ನೀರನ್ನು ಪೂರ್ತಿ ಕುಡಿದು ಮುಗಿಸಿ ಸ್ವಲ್ಪ ಸುಧಾರಿಸಿಕೊಂಡ ನಂತರ ಮತ್ತೆ ಜೀವ ಬಂತು.

ಬಸ್ ನಮ್ಮನ್ನು ಅಂದಿನ ತಾಣಕ್ಕೆ ಕರೆದೊಯ್ಯಿತು. ಒಂದು ದೊಡ್ಡ ಕೋಣೆ (ಬರಿ ಮಧ್ಯಾಹ್ನಕ್ಕೆ) ಹಾಗು ಹಲವಾರು ಬಾತ್‌ರೂಂಗಳಿದ್ದವು. ಇಲ್ಲಿ ನಾನು ೨ ದಿನದಲ್ಲಿ ಮೊದಲ ಸ್ನಾನ ಮಾಡಿದೆ. ಉದ್ಬುದ್ಧವಾದರೂ ಇನ್ನು ಹಸಿವಾಗುತ್ತಿತ್ತು. ಊಟವನ್ನು ಕಾಯ್ದು ಕುಳಿತೆ. ಇನ್ನೂ ಅರ್ಧ ಮುಕ್ಕಾಲು ಘಂಟೆಯಾಗುವುದೆಂದು ತಿಳಿಯಿತು. ಹಲವರು ಬಟ್ಟೆ ಒಗೆಯಲು ಹೋದರು. ನಾನು ನಾಳೆ ಗಂಗಾ ನದಿಯಲ್ಲಿ ಒಗೆಯುವೆ ಎಂದು ಸುಮ್ಮನಾದೆ.

ಇಷ್ಟು ಹೊತ್ತಿಗೆ, ರೈಲಿನಲ್ಲಿ ನಮ್ಮೊಡನೆ ಬಂದ ಗುಂಪಿನ ಜೊತೆಗೆ ಎರಡು ಸಣ್ಣ ಗುಂಪುಗಳು ಸೇರಿದ್ದವು. ಈಗ ನಮ್ಮ ಗುಂಪಿನಲ್ಲಿದ್ದವರು ಹೀಗಿದ್ದರು:

ಮಾಧವೇಶ್ವರ (ಕೆ.ಇ.ಬಿ, ಬೆಂಗಳೂರು) ಅವರ ಪತ್ನಿ ಹಾಗೂ ಅತ್ತೆ
ನವೀನ್ ಕುಮಾರ್ (ಕೆನರಾ ಬ್ಯಾಂಕ್, ಬೆಂಗಳೂರು) ಇವರ ಪತ್ನಿ, ಮಗು ಹಾಗು ತಂದೆ, ತಾಯಿ.
ದೇಶ್‌ಪಾಂಡೆ ಕುಟುಂಬ - ಇಬ್ಬರು ಅಣ್ಣ ತಮ್ಮಂದಿರು,
ಪಿ.ವಿ ದೇಶಪಾಂಡೆ (ಬ್ಯಾಂಕ್ ಆಫ್ ಮಹಾರಾಷ್ಟ್ರ, ಗುಲ್ಬರ್ಗ) - ಇವರ ಪತ್ನಿ
ಆರ್.ಎನ್ ದೇಶಪಾಂಡೆ (ಮುಂಬೈ ಪೊರ್ಟ್ ಟ್ರಸ್ಟ್, ಮುಂಬೈ) ಇವರ ಪತ್ನಿ ಹಾಗು ಇಬ್ಬರು ಮಕ್ಕಳು
ಎಂ.ಬಿ ಗುದ್ದಡ್ - (ಮುಂಬೈ) ಆರ್ ಎನ್ ದೇಶಪಾಂಡೆ ಅವರ ಪತ್ನಿಯ ಸಹೋದ್ಯೋಗಿ
ಕೋದಂಡರಾಮ (ವೈಶ್ಯ ಬ್ಯಾಂಕ್, ಬೆಂಗಳೂರು) ಇವರ ಪತ್ನಿ ಹಾಗು ಇಬ್ಬರು ಮಕ್ಕಳು
ಪ್ರಕಾಶ್ ಗುಪ್ತ (ಮಾರುತಿ ಮೆಡಿಕಲ್ಸ್, ಬೆಂಗಳೂರು) ಮತ್ತು ಇವರ ಪತ್ನಿ (ಕೋದಂಡರಾಮರಿಗೆ ಹೇಗೋ ಸಂಬಂಧ)
ಪ್ರಭಾಕರ (ಆದಿತ್ಯ ಮೆಡಿಕಲ್ಸ್, ಮದನಪಲ್ಲೆ) ಇವರ ಪತ್ನಿ ಹಾಗು ಇಬ್ಬರು ಮಕ್ಕಳು.
ಬೆಳವಾಡಿ ಗ್ರಾಮದ ಒಂದು ತಂಡ (ವೆಂಕಟನಾರಾಯಣಪ್ಪ, ಶಂಕರ, ಶ್ರೀನಿವಾಸಮೂರ್ತಿ ಇತರರು, ಒಟ್ಟು ೮ ಮಂದಿ)
ಹರಿಯಪ್ಪ, ಅಡಿಗೆಯಾತ (ಹೆಸರು ಗೊತ್ತಿಲ್ಲ), ಅಡಿಗೆ ಸಹಾಯಕ - ರಾಮು
ನಾನು

ಈ ಸಮಯದಲ್ಲಿ ನನಗೆ ಯಾರಲ್ಲೂ ಆಸಕ್ತಿ ಇರಲಿಲ್ಲ. ಎರಡು ದಿನದಿಂದ ಸರಿಯಾದ ಊಟವೇ ಕಾಣದ ನನಗೆ ಅದರ ಮೇಲೇ ಧ್ಯಾನ. ಪ್ರವಾಸ ಹೊರಡುವ ಮುನ್ನ ನಮಗೆಲ್ಲರಿಗೂ ತಟ್ಟೆ-ಲೋಟಗಳನ್ನು ತರಲು ಹೇಳಲಾಗಿತ್ತು. ನಾನು ಅದನ್ನು ಬೇರೆ ಮರೆತಿದ್ದೆ. ಸರಿ ಏನು ಮಾಡುವುದು? ಅಡಿಗೆಯಾತನ ಬಳಿ ಒಂದು ತಟ್ಟೆ ಲೇಣೆ ತೆಗೆದುಕೊಂಡೆ. ಅನ್ನ-ಸಾರು-ಸಾಂಬಾರು-ಕೋಸಿನಪಲ್ಯ-ಮೊಸರನ್ನ-ನಿಂಬೆ ಉಪ್ಪಿನಕಾಯಿಯ ಊಟ ಬಡಿಸಿದರು. ಅದೇ ಅಮೃತಾನ್ನದಂತಿತ್ತು. ಊಟದ ನಂತರ ಎಲ್ಲರೂ ನಿದ್ರಿಸಿದರು. ನಾನು ಹರಿಯಪ್ಪನ ಜೊತೆ ಪೇಟೆಗೆ ಹೋಗಲು ಸಿದ್ಧನಾದೆ. ತಟ್ಟೆ-ಲೋಟಗಳನ್ನು ತರುವ ಕೆಲಸವಿತ್ತು. ಜೊತೆಗೆ ಬಟ್ಟೆ ಒಗೆಯಲು ಸಾಬೂನು ಹಾಗು ಬ್ರಶ್ ಸಹ ತರಬೇಕಿತ್ತು. ಉಳಿದವರು ಹತ್ತಿರವೇ ಇದ್ದ ದೆಹಲಿಯ ಬಿರ್ಲಾ ದೇವಾಲಯಕ್ಕೆ ಹೋಗುವವರಾದರು.

೨ ದಿನಗಳಿಂದ ಕಾಫಿಯೇ ಮರೆತು ಹೋಗಿತ್ತು. ಈಗ ಕಾಫಿ ಹೇಗೆ ಬರುತ್ತಿದೆಯೆಂದು ನೋಡಲು ಅಡಿಗೆ ಮೂಲೆಗೆ ಹೋದೆ. ಕುಡಿದ ನಂತರ ಹರಿಯಪ್ಪ ಹಾಗೂ ಮದನಪಲ್ಲೆ ಕುಟುಂಬದ ಜೊತೆ ಆಟೋ ಹತ್ತಿ ಕರೋಲ್ ಬಾಗ್‌ಗೆ ಹೋದೆ. ಆಲ್ಲಿ ಮದನಪಲ್ಲೆ ಗುಂಪನ್ನು ಹರಿಯಪ್ಪ ಕೋದಂಡರಾಮರಿಗೆ ತಗುಲಿ ಹಾಕಿ ನನ್ನನ್ನು ಎಳೆದುಕೊಂಡು ಓಡಿದರು. ಅಡಿಗೆಯವರಿಗೆ ಮಿಕ್ಸರ್ ಕೊಂಡು ಹರಿಯಪ್ಪ ಹಾಗು ನಾನು ತಟ್ಟೆ ಲೋಟಗಳನ್ನು ಹುಡುಕಲಾರಂಭಿಸಿದೆವು. ಎಲ್ಲೆಲ್ಲೂ ಇಲ್ಲ. ಒಡವೆ, ಆಭರಣ, ವಸ್ತ್ರ, ಕಾರಿಗೆ ಉಪಸ್ಕರಗಳು, ಏನು ಕೇಳಿ ಇದೆ, ಆದರೆ ತಟ್ಟೆ ಲೋಟ ಮಾತ್ರ ಇಲ್ಲ.

ಖಾಲೀ ಕೈಯಲ್ಲೆ ಹಿಂದಿರುಗಿದೆವು. ಬಾಗಿಲಲ್ಲಿ ಐಸ್ ಹುಡುಕಿಕೊಂಡು ಹೊರಟ ಮಾಧವೇಶ್ವರ್ ಸಿಕ್ಕಿದರು. ಸರಿ, ಮಿಕ್ಸರ್ ಅಡಿಗೆಯವರಿಗೆ ಕೊಟ್ಟು, ನಾವು ಮೂವರು ಮಂದಿ ಮತ್ತೆ ಹೊರಟೆವು - ಈ ಬಾರಿ ಹತ್ತಿರವಿದ್ದ ಗೋಲ್ ಮಾರ್ಕೆಟ್‌ಗೆ. ಸುಮಾರು ಹುಡುಕಿದ ನಂತರ ತಟ್ಟೆ ಲೋಟಗಳಿದ್ದ ಒಂದು ಅಂಗಡಿ ಸಿಕ್ಕಿತು, ಬೇರೊಂದಿಲ್ಲ. ರೂ. ೪೫ ಕೊಟ್ಟು ಒಂದು ತಟ್ಟೆ ಹಾಗು ಒಂದು ಲೋಟ ಕೊಂಡೆ. ಹರಿಯಪ್ಪ ಸಹ ೨ ತಟ್ಟೆ ಕೊಂಡರು. ಐಸ್ ಸಹ ಸಿಕ್ಕಿತು. ಹಿಂದಿರುಗುತ್ತ, ಮನೆಗೊಮ್ಮೆ ಫೋನ್ ಮಾಡಿ ಬಂದೆ.

೨ ದಿನದ ಸ್ನಾನ ತಪ್ಪಿದ್ದರಿಂದಲೋ ಏನೋ ಇನ್ನೊಮ್ಮೆ ಸ್ನಾನ ಮಾಡುವಾಸೆಯಾಯಿತು. ಸರಿ ತೊಂದರೆ ಏನು? ಇನ್ನೊಮ್ಮೆ ಸ್ನಾನ ಮಾಡಿದೆ. ನಂತರ ಬಂದು ಸಹಪ್ರಯಾಣಿಕರೊಂದಿಗೆ ಮಾತನಾಡತೊಡಗಿದೆ. ಆಗಲೆ, ನಾನು ಅವರುಗಳ ಬಗ್ಗೆ ಮೇಲೆ ಬರೆದ ವಿವರಗಳು ಪ್ರಕಟವಾದದ್ದು. ಊಟದ ಮೂಲೆಗೆ ಹೋಗಿ ಕಾಲು ಘಂಟೆಯಲ್ಲಿ ಊಟ ತಯಾರಾಗುವುದೆಂದು ತಿಳಿದುಕೊಂಡೆ. ಊಟದ ನಂತರ ಹೊರಡುವ ಸಮಯವಾಯಿತು. ರಾತ್ರಿ ಹೊರಟು ಬಸ್‌ನಲ್ಲಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಮುಂಜಾವಿಗೆ ಹರಿದ್ವಾರ ತಲುಪುವ ಕಾರ್ಯಕ್ರಮವಿತ್ತು. ಹೊರಡಲು ಸ್ವಲ್ಪ ತಡ ಮಾಡಿದರು. ರಾತ್ರಿ ೧೨:೦೦ ಘಂಟೆಯ ನಂತರ ದೆಹಲಿ ಇಂದ ಉತ್ತರ ಪ್ರದೇಶ ಪ್ರವೇಶಿಸಿದರೆ ಯಾವುದೋ ತೆರಿಗೆ ಕಡಿಮೆಯಾಗುವುದೆಂದು ಹೊರಡುವುದನ್ನು ನಿಧಾನ ಮಾಡುತ್ತಿದ್ದಾರೆಂದು ಕೇಳಿ ಬಂತು. ನಮ್ಮ ಪ್ರವಾಸದ ಗುಂಪನ್ನು ಏಕೋ ಏನೋ ಎರಡು ವಾಹನಗಳಲ್ಲಿ, ಎರಡು ಗುಂಪಿನಲ್ಲಿ ಹರಿದ್ವಾರಕ್ಕೆ ಹೊರಡಿಸಿದ್ದರು. ನಮ್ಮ ಬಸ್ ಹೊರಟಿತು, ತಂಗಾಳಿ ಬೀಸಹತ್ತಿತ್ತು, ನಾನೂ ಸುಸ್ತಾಗಿ ನಿದ್ದೆ ಮಾಡಿದೆ.


ಭಾಗ ೩: ಹರಿದ್ವಾರ

೨ ಮೇ ೧೯೯೮

ಬೆಳಿಗ್ಗೆ ೫:೧೫ಕ್ಕೆ ಹರಿದ್ವಾರ ತಲುಪಿದೆವು. ಹರಿದ್ವಾರ, ಈ ಬೆಟ್ಟ ಬೇಸಿಗೆಯಲ್ಲೂ, ತಂಪಗೆ - ಚಳಿ ಎನ್ನುವಷ್ಟು ತಣ್ಣಗೇ ಇತ್ತು. ನಾನು ಕೊಂಚ ನಡುಗ ತೊಡಗಿದೆ. ನಮ್ಮನ್ನು ಒಂದು ಯಾತ್ರಿ ನಿವಾಸದಲ್ಲಿ ತಂಗಿಸಲಾಯಿತು. ಇಲ್ಲಿ ಕನ್ನಡಿಗರೇ ಹೆಚ್ಚು ಇದ್ದು, ಈ ಜಾಗ ಕರ್ನಾಟಕದಾಚೆ ಎನಿಸಲೇ ಇಲ್ಲ. ಮಾಧವೇಶ್ವರ್ ತಂಡ ಹಾಗು ನಾನು ಮಹಡಿ ಮೇಲಿನ ಒಂದು ಕೋಣೆ ಹಿಡಿದೆವು. ಪೀಠೋಪಕರಣಗಳಿಲ್ಲದಿದ್ದರೂ, ತಂಪಗೆ, ಸಾಕಷ್ಟು ದೊಡ್ಡದಾಗಿತ್ತು. ನವೀನ್ ಕುಮಾರ್ ತಂಡ ಹಾಗೂ ಬೆಳವಾಡಿ ತಂಡ ಕೆಳಗಿನ ಒಂದು ಕೋಣೆಯಲ್ಲಿ ಇಳಿದರು (ಅವರವರ ತಂಡಗಳಲ್ಲಿ ವಯಸ್ಸಾದವರಿದ್ದದ್ದರಿಂದ). ಉಳಿದವರು (ಮತ್ತೊಂದು ಬಸ್ ಜನ) ಏಕೋ ಇನ್ನೂ ಬಂದಿರಲಿಲ್ಲ. ನಾನು ಕೆಳಗೆ ಹೋಗಿ ಕಾಫಿಗಾಗಿ ಲೋಟ ತೊಳೆದುಕೊಂಡು ಕೆಳಗಿನವರ ಜೊತೆಗೆ ಸ್ವಲ್ಪ ಹೊತ್ತು ಮಾತನಾಡಿದೆ.

ಹರಿದ್ವಾರವು ಹಿಮಾಲಯ ಪರ್ವತಗಳ ಶಿವಾಲಿಕ ಪರ್ವತ ಶ್ರೇಣಿಯ ಬುಡದಲ್ಲಿದೆ. ಈ ಜಾಗವು ಗಂಗಾನದಿಯು ಗುಡ್ಡಗಾಡಿನ ಪ್ರದೇಶ ಬಿಟ್ಟು ಬಯಲುಸೀಮೆ ಪ್ರದೇಶ ಸೇರುವ ಸ್ಥಳ. ಈ ಪವಿತ್ರ ತೀರ್ಥವನ್ನು ಯುಗಯುಗಾಂತರಗಳಿಂದ ನಮ್ಮ ಜನ ಆದರಣೀಯವೆಂದು ಎಣಿಸಿದ್ದಾರೆ. ಮೊದಲ ಶತಮಾನದಲ್ಲಿ ಬಂದ ಚೀನೀ ಪ್ರವಾಸಿ ವೆನ್ ಸಾಂಗ್ ಕೂಡ ಈ ತೀರ್ಥವನ್ನು ಮಾಯಾಪುರಿಯೆಂಬ ಇದರ ಪ್ರಾಚೀನ ಹೆಸರಿನಿಂದ ವರ್ಣಿಸಿದ್ದಾನೆ. ಭಗೀರಥನು ತನ್ನ ಪೂರ್ವಿಕರ ಶಾಪ ವಿಮೋಚನೆಗೊಳಿಸಲು ಕರೆತಂದ ಗಂಗೆಯು, ಅವರುಗಳ ಅಸ್ಥಿಗಳ ಮೇಲೆ ಹರಿದದ್ದು ಇಲ್ಲೇಯಂತೆ. ಊರ ತುಂಬ ಹಲವಾರು ಆಶ್ರಮಗಳು, ದೇವಾಲಯಗಳು ಹಾಗು ಇತರ ಪವಿತ್ರ ಸ್ಥಳಗಳಿವೆ.

ಹರಿದ್ವಾರವನ್ನು ಹಿಂದೂಗಳು ಹಾಗು ಸಿಖ್ಖರು ಸಮಾನವಾಗಿ ಆದರಿಸುತ್ತಾರೆ. ಇದನ್ನು ಹಲವರು ಹರಿದ್ವಾರವೆಂದು ಕರೆದರೆ ಇನ್ನು ಹಲವರು ಹರ್‌ದ್ವಾರವೆಂದು ಕೂಗುತ್ತಾರೆ. ಹರಿದ್ವಾರವು ಬದರೀನಾಥ ಹಾಗೂ ಕೇದಾರನಾಥ ಎರಡು ತೀರ್ಥಗಳಿಗೂ ಹೆಬ್ಬಾಗಿಲು. ಬದರೀನಾಥ ವಿಷ್ಣುವಿನ (ಹರಿಯ) ಸ್ಥಳವಾದರೆ, ಕೇದಾರನಾಥ ಶಿವನ (ಹರನ) ಸ್ಥಾನ. ಹಾಗಾಗಿ ಈ ಎರಡು ಹೆಸರುಗಳು. ನಾನು ಸರಳತೆಗಾಗಿ ಎಲ್ಲೆಡೆ ಹರಿದ್ವಾರವೆಂದಿದ್ದೇನೆ.

ಕಾಫಿ ಮುಗಿಸುವಷ್ಟು ಹೊತ್ತಿಗೆ ಇನ್ನೊಂದು ಬಸ್ ಜನರು ಬಂದು ಇನ್ನೊಂದೆರಡು ಕೋಣೆಗಳಲ್ಲಿ ಪಡಾವು ಊರಿದ್ದರು. ಸ್ನಾನಕ್ಕೆ ಗಂಗಾನದಿಗೆ ಹೋದೆವು. ಸ್ನಾನ ಘಟ್ಟಕ್ಕೆ ಹೋಗಿ ನೀರನ್ನು ಮುಟ್ಟಿದೆ. ಕೊರೆಯುವ ನೀರು! ಹಿಮಾಲಯದಿಂದ ಮಂಜು ಕರಗಿ ಹರಿದು ಬರುವ ನೀರು - ಹರಿದ್ವಾರದಲ್ಲಂತೂ ವರ್ಷವಿಡೀ ಕೊರೆಯುತ್ತಿರುತ್ತದೆ. ನೀರು ಅಷ್ಟು ಕೊರೆಯುತ್ತಿದ್ದರೂ ನನಗೆ ನಾನು ಹಿಂದಿನ ಬಾರಿ ಬಂದಾಗ ಇದ್ದಷ್ಟು ತಣ್ಣಗಿಲ್ಲವೆನಿಸಿತು (ನಾನು ಹಿಂದೊಮ್ಮೆ ೧೯೮೬ರಲ್ಲಿ ಹರಿದ್ವಾರಕ್ಕೆ ಹೋಗಿದ್ದೆ). ಬಹುಶಃ ನಾನು ಆಗ ಚಿಕ್ಕ ಹುಡುಗನಾಗಿದ್ದರಿಂದ ತಂಡಿ ಹೆಚ್ಚೆನಿಸಿರಬಹುದೇ? ಎಂದುಕೊಂಡೆ. ಹಿಂದಿನ ದಿನದ ಕೊಳೆಯ ಬಟ್ಟೆಗಳನ್ನು ಒಗೆದು ಸ್ನಾನ ಮಾಡಿಕೊಂಡೆ. ಸ್ನಾನವು ದಣಿವಾರಿಸಿ ತಂಪುಮಾಡಿದರೂ, ನಂತರ ಸ್ವಲ್ಪ ಹೊತ್ತು ನನ್ನ ಕೈಕಾಲುಗಳು ಮರವೆಂಬಂತೆ ಭಾಸವಾಯಿತು - ತಣ್ಣದಾದ ನೀರಿನಿಂದ.

ಸ್ನಾನ ಮುಗಿಸಿ, ಬಟ್ಟೆಬರೆಗಳನ್ನು ಕೋಣೆಯಲ್ಲಿ ಬಿಟ್ಟು, ಮಾನಸಾದೇವಿ ದೇವಾಲಯಕ್ಕೆ ಹೊರಟೆವು. ಮಾನಸಾದೇವಿ ದೇವಾಲಯ ಬಿಲ್ವ ಪರ್ವತವೆಂಬ ಬೆಟ್ಟದಮೇಲಿದೆ. ಅಲ್ಲಿಗೆ ಹೋಗಲು ಒಂದು ಹಗ್ಗದಾರಿ (ರೋಪ್ ವೇ) ಇದೆ. ನಾವು ಈ ಹಗ್ಗದಾರಿಗೆ ಟಿಕೇಟು ಕೊಂಡು ಸಾಲಿನಲ್ಲಿ ನಿಂತೆವು. ಹಗ್ಗದಾರಿಯಲ್ಲಿ ಹೋಗುವುದು ಹೆಚ್ಚು ಪುಳಕಿತವಾಗಿಲ್ಲದಿದ್ದರೂ, ಮೇಲಿನಿಂದ ಕಾಣಿಸುವ ದೃಶ್ಯವು ರೋಮಾಂಚಕವಾಗಿದೆ.

ಗಂಗಾನದಿಯು ಉತ್ತರ ದಿಕ್ಕಿನಿಂದ ಹರಿದ್ವಾರಕ್ಕೆ ಅನಿಯಮಿತವಾಗಿ ಹರಿದು ಬರುತ್ತದೆ. ಹರಿದ್ವಾರದ ಸ್ವಲ್ಪ ಹಿಂದೆ ಕವಲೊಡೆದು, ಒಂದು ಕವಲು, ಮನುಷ್ಯ ಮಾಡಿದ ಕಾಲುವೆಯಾಗಿ ಊರಿಗೆ ಬರುತ್ತದೆ. ನಾವು ಹೆಚ್ಚಾಗಿ ನೋಡುವುದು ಹಾಗು ಮುಂಜಾವಿನಲ್ಲಿ ನಾವು ಸ್ನಾನ ಮಾಡಿದ್ದು ಈ ಕಾಲುವೆಯಲ್ಲೇ. ಇನ್ನೊಂದು ಕವಲು ಹಾಗೆಯೇ ಅನಿಯಮಿತವಾಗಿ ಊರಾಚೆ ಮುಂದುವರೆಯುತ್ತದೆ. ಹರಿದ್ವಾರ ಊರು ಮುಗಿದ ನಂತರ ಎರಡೂ ಕವಲುಗಳು ಸೇರಿಕೊಳ್ಳುತ್ತವೆ. ಇಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ ಸೇತುವೆಗಳು. ನದಿಯ ಎರಡೂ ಕವಲುಗಳನ್ನು ದಾಟಲು ಅಲ್ಲಲ್ಲೆ ಹತ್ತಾರು ಸೇತುವೆಗಳು ಕಾಣಿಸುತ್ತವೆ. ನಾನು ಬೆಟ್ಟದ ಮೇಲಿಂದ ಒಂದೆರಡು ಫೋಟೋಗಳನ್ನು ತೆಗೆದೆ.

ಮಾನಸಾದೇವಿ ನಾಗರಾಜನಾದ ವಾಸುಕಿಯ ಪತ್ನಿಯೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಮಾತೆ ಶಕ್ತಿಯ ರೂಪವೆಂದು ಹೇಳುತ್ತಾರೆ. ಮಾನಸಾದೇವಿಯು ಮನದಾಸೆಗಳನ್ನು ನೆರವೇರಿಸುವಳಂತೆ. ಹರಕೆ ಹೊತ್ತವರು ದೇವಾಲಯದಲ್ಲಿ ದಾರವೊಂದನ್ನು ಕಟ್ಟಿ, ಇಷ್ಟಾರ್ಥ ಈಡೇರಿದ ನಂತರ ಆ ದಾರವನ್ನು ಬಿಚ್ಚುತ್ತಾರಂತೆ. ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿಕೊಂಡೆವು. ಅಲ್ಲಿನ ಪದ್ಧತಿಯಂತೆ 'ಚುನರಿ' ಅರ್ಪಿಸಿ ಕೈ ಮುಗಿದು ಹಗ್ಗದಾರಿ ಮೂಲಕ ಕೆಳಗಿಳಿದೆವು.

ಕೆಳಗೆ ಬಂದು ಪೇಟೆ ಬೀದಿಗೆ ಹೋದೆವು. ಶಾಲು, ಸ್ವೆಟರ್‌ರು, ಕಾಲುಚೀಲ, ಬೇಕರಿ ಪದಾರ್ಥ ಇತ್ಯಾದಿಗಳನ್ನು ಕೊಳ್ಳುವುದಿತ್ತು - ಹರಿಯಪ್ಪ ಹೇಳಿದಂತೆ ಬದರಿ-ಕೇದಾರ ಪ್ರಯಾಣದ ತಯಾರಿಗಾಗಿ. ನಾನು ಒಂದು ಶಾಲ್ ಕೊಂಡೆ. "ಜಯ್ ಶ್ರೀ ರಾಮ್" ಎಂದು ಬರೆದಿರುವ ಹಳದಿ ಶಲ್ಯಗಳನ್ನು ತರಲು ಅಣ್ಣ ಹೇಳಿದ್ದರು. ಅದನ್ನು ಹುಡುಕಿ ಕೊಂಡು ಹೋದೆ. ಮುಂದೆ ಪಂಚಮುಖೀ ರುದ್ರಾಕ್ಷಿ ಹಾಗೂ ನವರತ್ನ ಮಾಲೆಗಳನ್ನು ಖರೀದಿಸಿದೆ. ಕಾಲುಚೀಲ ಸಂಜೆಗೆ ಮುಂದೂಡಿದೆ. ಬೇಕರಿ ಪದಾರ್ಥ ಹಾರಿಸಿದೆ - ಹೊಟ್ಟೆ ಕೆಟ್ಟು ಹುಷಾರು ತಪ್ಪುವುದಕ್ಕಿಂತ ಹಸಿದಿರುವುದು ಲೇಸೆಂದು. ಎಲ್ಲರೂ ಮತ್ತೆ ಗುಂಪು ಸೇರಿ, ಕೋಣೆಗೆ ಹಿಂದಿರುಗಿ ಊಟ ಮಾಡಿದೆವು.

ಸ್ವಲ್ಪ ಹೊತ್ತು ಮಲಗೆದ್ದು ಮತ್ತೆ ನದಿಗೆ ಸ್ನಾನಕ್ಕೆ ಹೋದೆ. ನದಿಯಿಂದ ಕುಡಿಯಲು ನೀರು ತಂದು ನೋಡಿದರೆ ನೀರಿನಲ್ಲಿ ಸಿಕ್ಕಾಪಟ್ಟೆ ಕೊಳೆ. ಸಸ್ಪೆಂಡೆಡ್ ಇಂಪ್ಯೂರಿಟೀಸ್ - ಕಣ್ಣಿಗೆ ಕಾಣಿಸುವ ಕೊಳೆ. ನಂತರ ತಿಳಿಯಿತು ನಲ್ಲಿ ನೀರು ಕುಡಿಯಬಹುದು, ಆದರೆ ನದಿಯ ನೀರಲ್ಲವೆಂದು. ನಾನು 'ಹರಿಯುವ ನೀರು ಶುದ್ಧ, ಕುಡಿಯಬಹುದು' ಎಂದುಕೊಂಡಿದ್ದು ಅಂದಿಗೆ ಮುಕ್ತಾಯವಾಯಿತು.

ಸಂಜೆ 'ಹರ್ ಕೀ ಪೌಡಿ' ಅನ್ನುವ ದೀಪಾರಾಧನೆ ಧರ್ಮಾಚರಣೆ ನೋಡಲು ಹೋದೆವು. ಹರ್ ಕೀ ಪೌಡಿ ಎಂದರೆ 'ಶಿವನ ಪಾದ' ಎಂದು. ಇದನ್ನು ಗಂಗಾ ನದಿ ತೀರದಲ್ಲಿ 'ಬ್ರಹ್ಮ ಕುಂಡ್' ಎನ್ನುವ ಸ್ಥಳದಿಂದ ನೋಡಬಹುದು. ಈ ಪುರಾತನ ಕಾಲದ ದೀಪಾರಾಧನೆಯು ದಿನನಿತ್ಯವೂ ನಡೆಯುತ್ತದೆ. ಜನರು ಪೂಜೆ ಮಾಡಿ ಹೂವು ಹಾಗು ಮಣ್ಣಿನ ದೀಪಗಳನ್ನು ಗಂಗೆಗೆ ಅರ್ಪಿಸುತ್ತಾರೆ (ಹೊತ್ತಿಸಿದ ದೀಪಗಳನ್ನು ಗಂಗೆಯಲ್ಲಿ ತೇಲಿಬಿಡುತ್ತಾರೆ). ವೇದ ಮಂತ್ರ ಗೋಷ್ಠಿ ಗಗನಕ್ಕೇರುತ್ತದೆ. ಹೂವು ಹಾಗು ದೀಪಗಳಿಂದ ಕೂಡಿದ ಈ ನದಿಯ ದೃಶ್ಯ ಅವಿಸ್ಮರಣೀಯ. ಈ ಜಾಗದಲ್ಲಿ ಶ್ರೀ ವಿಷ್ಣುವಿನ ಪಾದವನ್ನು ಕೂಡ ಕಾಣಬಹುದು.

ಈ ದೀಪಾರಾಧನೆ ಮುಗಿಸಿ ನಾನು ಮತ್ತೆ ಪೇಟೆಗೆ ಹೋದೆ. ಒಂದಿಷ್ಟು ಸಾಮಾನು (ಮುಖ್ಯವಾಗಿ ಕಾಲುಚೀಲ) ಕೊಂಡು ಯಾತ್ರಿ ನಿವಾಸಕ್ಕೆ ಹಿಂತಿರುಗಿದೆ. ಹಸಿದು ಊಟಕ್ಕೆ ಕಾಯ್ದು ಕುಳಿತಾಗ, ಎಲ್ಲ ತಂಡಗಳು ತಮ್ಮಷ್ಟಕ್ಕೆ ತಾವೇ ಇರುತ್ತಾರೆ ಎಂದು ಯೋಚಿಸ ತೊಡಗಿದೆ. ಈಗ ಯೋಚಿಸಿದರೆ ಹಾಗಿದ್ದೆವೇ ಎನ್ನಿಸುತ್ತದೆ. ಊಟದ ನಂತರ ನಿದ್ದೆ. ಮಾರನೆಯ ದಿನ ಬೆಳಗ್ಗೆ ಬೇಗನೆ ಹೊರಡುವ ಕಾರ್ಯಕ್ರಮವಿತ್ತು.

ಭಾಗ ೪: ಹರಿದ್ವಾರದಿಂದ ಗೌರೀಕುಂಡಕ್ಕೆ

೩ ಮೇ ೧೯೯೮

ಬೆಳಗ್ಗೆ ಬಲು ಬೇಗನೆ ಎದ್ದೆವು. ೪:೪೫ ಘಂಟೆಗೆ ನದಿಗೆ ಸ್ನಾನಕ್ಕೆ ಹೋದೆವು. ಏನು ಸ್ನಾನವದು! ಆ ಚಳಿ, ಮುಂಜಾವಿನ ಅರೆ ನಿದ್ದೆ, ಕೊರೆಯುವ ನೀರು, ರಭಸದಿಂದ ಹರಿಯುವ ನದಿ. ಅಬ್ಬಾ! ಕಾಫಿ ಕುಡಿದಮೇಲೆ ಜೀವ ಬಂತು. ಬಸ್ಸನ್ನು ಕಾಯಹತ್ತಿದೆವು. ಆ ಸಮಯದಲ್ಲಿ ನಾನು ಗುಲ್ಬರ್ಗ ತಂಡದ ಜೊತೆ ಮಾತನಾಡತೊಡಗಿದೆ. ನಾನು ಹುಬ್ಬಳ್ಳಿ ಹಾಗೂ ಬೆಳಗಾಂವ್‌ಗಳಲ್ಲಿ ಒಟ್ಟು ಆರು ವರ್ಷ ಕಳೆದಿದ್ದರಿಂದ ನಿರಾಯಾಸವಾಗಿ ಅವರೊಡನೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡತೊಡಗಿದೆ. ಇದು ಮಂಜುಗಡ್ಡೆ ಒಡೆಯಲು ಸಹಕರಿಸಿದ್ದಿರಬಹುದು.

ಬಸ್ ಕೊನೆಗೂ ಬಂತು. ನಮ್ಮ ದೊಡ್ಡ ದೊಡ್ಡ ಸೂಟ್‌ಕೇಸ್‌ಗಳನ್ನು ಹರಿದ್ವಾರದಲ್ಲಿ ಒಂದು ಕೋಣೆಯ ಬಾಡಿಗೆ ಪಡೆದು ಅಲ್ಲೇ ಇರಿಸಿದೆವು. ಬೇಕಾಗುವಷ್ಟು ಸಾಮಾನು ಮಾತ್ರ ತೆಗೆದುಕೊಂಡು ಹೊರಟೆವು. ನಾನು ಎಲ್ಲರ ಸಾಮಾನು ಬಸ್ ಮೇಲೆ ಏರಿಸಿದೆ. ಎಲ್ಲರೂ ಹತ್ತಿದನಂತರ ಬಸ್ ಹೊರಟಿತು. ಡೀಸಲ್ ತುಂಬಿಸಿಕೊಳ್ಳಲೊಮ್ಮೆ ನಿಂತು ನಂತರ ಹೃಷೀಕೇಶದಲ್ಲಿ ಕಾಗದಪತ್ರಗಳ ದಾಖಲೆಗಾಗಿ ಮತ್ತೂಮ್ಮೆ ನಿಂತಿತು. ಇವೆಲ್ಲ ಮುಗಿದ ನಂತರ ನಮ್ಮ ನಿಜವಾದ ಪ್ರಯಾಣ ಶುರುವಾಯಿತು.

ಹರಿದ್ವಾರದಿಂದ ಗೌರೀಕುಂಡಕ್ಕೆ ಸುಮಾರು ೨೩೦ ಕಿಲೋಮೀಟರ್‌ಗಳ ಅಂತರ. ಏನು ಪ್ರಯಾಣ ಅಂತೀರಾ! ಹೃಷೀಕೇಶದಿಂದ ಗಂಗಾನದಿಯ ಪಕ್ಕದಲ್ಲಿ ಹೊರಟೆವು. ಸ್ವಲ್ಪವೇ ಹೊತ್ತಿಗೆ ಬೆಳಗಿನ ತಿಂಡಿ ತಿನ್ನಲು ನಿಂತೆವು. ಒಂದು ಕಡೆ ಮಹಾನ್ ಗಂಗಾ ನದಿ. ಇನ್ನೊಂದು ಕಡೆ ಅಪಾರ ಪರ್ವತರಾಶಿ. ಪಕ್ಕದಲ್ಲಿ ಒಂದು ಸಣ್ಣ ತೊರೆ ಹರಿದು ಹೊರಟಿತ್ತು. ಇದು ತಿಂಡಿಗೆ ಬೇಕಾದ ನೀರಿನ ಅಗತ್ಯಗಳನ್ನು ಪೂರ್ಣ ಮಾಡಿತು. ಎದ್ದು ಸುಮಾರು ಹೊತ್ತು ಆಗಿದ್ದರಿಂದ ಅತಿಯಾಗಿ ಹೊಟ್ಟೆ ಹಸಿವಾಗಿತ್ತು. ತಿಂಡಿ ತಿನ್ನುತ್ತಿದ್ದಂತೆ ಒಬ್ಬ ಸನ್ಯಾಸಿ ಬಂದರು. ನಾವು ಕನ್ನಡ ಮಾತನಾಡುತ್ತಿರುವುದನ್ನು ಕೇಳಿ ತಾವು ಬಿಜಾಪುರದವರೆಂದು ಹೇಳಿಕೊಂಡು ಕನ್ನಡದಲ್ಲೇ ಮಾತನಾಡುತ್ತ, ತಾವು ಬದರೀನಾಥಕ್ಕೆ ಹೊರಟಿರುವುದಾಗಿ ಹೇಳಿದರು. ಹರಿಯಪ್ಪ ಅವರನ್ನು ತಿಂಡಿಗೆ ಸೇರಿಸಿಕೊಂಡರೂ ಅವರು ಬದರೀನಾಥಕ್ಕೆ ಬಸ್‌ನಲ್ಲಿ ಬರಲು ಅನುಮತಿ ಕೇಳಿದಾಗ ಸುತಾರಾಮ್ ಬೇಡವೆಂದರು. ನಾನು ಅವರಿಗೆ ರೂ.೧೦ ಕೊಟ್ಟೆ - ದೇವಸ್ಥಾನಕ್ಕೆ ಹಾಕಲೆಂದು.

ತಿಂಡಿ ಮುಗಿಸಿ ಮತ್ತೆ ಹೊರಟೆವು. ಒಂದು ಕಡೆ ಕಡಿದಾದ ಪರ್ವತ ಮುಖ ಇನ್ನೊಂದು ಕಡೆ ಪಾತಾಳದಲ್ಲಿ ಗಂಗೆ. ನೀರು ಹರಿಯುವ ಹಾದಿಯೇ ಬೆಟ್ಟಗಳೊಳಗೆ ಸರಳವಾದ ಹಾದಿ. ರಸ್ತೆಯ ಗುರಿಯೂ ಸಹ ನದಿಯ ಉಗಮಸ್ಥಾನವೇ (ನಾ ನಾ ತೀರ್ಥಗಳೇ) ಆದ್ದರಿಂದ ರಸ್ತೆಯನ್ನು ನದಿಯ ಸಮಾನಾಂತರದಲ್ಲಿ ಕಟ್ಟಲಾಗಿದೆ. ಗಂಗೆಯು, ಉದ್ದಕ್ಕೂ ತನ್ನ ಮನೋಭಾವಗಳನ್ನು ಸುತ್ತಮುತ್ತಲಿನ ನಳನಳಿಸುವ ಪ್ರಕೃತಿ ದೃಶ್ಯದೊಡನೆ ಪೈಪೋಟಿಯಲ್ಲಿ ಬದಲಿಸುತ್ತಿರುತ್ತಾಳೆ. ಹಲವಾರು ಬಾರಿ ನಾವು ಒಂದು ಗುಡ್ಡ ಹತ್ತಿ ಮೈಲಿಗಟ್ಟಲೆ ಪರ್ವತಗಳ ಮಧ್ಯೆ ಗಂಗೆ ಹರಿದುಬರುವುದು ಕಾಣಿಸುತ್ತಿತ್ತು. ಆ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಹಾಗಿವೆ. ಒಂದು ಕಡೆಯಂತೂ ನದಿಯು ೩೬೦ ಡಿಗ್ರಿ ತಿರುಗುತ್ತದೆ. ಮಧ್ಯೆ ಒಂದು ಬೆಟ್ಟ, ಅದರ ಸುತ್ತ ೩-೪ ಸಣ್ಣ ಸಣ್ಣ ಗುಡ್ಡಗಳು. ಇವುಗಳಿಂದ ರೂಪಿಸಿದ 'ಯು' ಕೊಂಡಿಯಲ್ಲಿ ನದಿ ಹರಿದು ಈ ಅನುಪಮ ಲಕ್ಷಣವು ಸಂಭವಿಸುತ್ತದೆ.

ಆಗಾಗ್ಗೆ ಗಂಗೆ ನಮ್ಮಿಂದ ಕಣ್ಮರೆಯಾಗುತ್ತಿದ್ದಳು. ಒಂದು ಸಣ್ಣ ಬೆಟ್ಟ ಸುತ್ತಿ, ಯಾವುದಾದರೂ ಒಂದು ಉಪನದಿಯ ಸಂಗಮ ವೀಕ್ಷಿಸಿ, ಅದರ ಸೇತುವೆ ದಾಟಿ ಮತ್ತೆ ಗಂಗೆಯ ಸಾನ್ನಿಧ್ಯಕ್ಕೆ ಹಿಂತಿರುಗುತ್ತಿದ್ದೆವು. ಉಪನದಿಗಳು ನೂರಾರು - ಝರಿಗಳು, ತೊರೆಗಳು, ಸಣ್ಣ ಹೊಳೆಗಳು, ದೊಡ್ಡ ನದಿಗಳು, ಹೀಗೆ ಎಲ್ಲವೂ ಬಂದು ಮಹಾನದಿ ಗಂಗೆಗೆ ಸೇರುತ್ತಿದ್ದವು.

ಹೀಗೆ ಸಾಗುತ್ತ ದಿನ ಮಧ್ಯದಲ್ಲಿ (ಮಧಾಹ್ನದ ಊಟದ ಮುಂಚೆ) ದೇವಪ್ರಯಾಗವೆಂಬ ಸಣ್ಣ ಊರೊಂದನ್ನು ಹಾಯ್ದು ಹೋದೆವು. ಈ ಪ್ರಯಾಗಗಳೆಲ್ಲಾ ನದಿಗಳ ಸಂಗಮ ಸ್ಥಾನಗಳು. ದೇವಪ್ರಯಾಗದಲ್ಲಿ ನಾವು ಗಂಗೆ ಹಾಗು ಅಲಕ್‌ನಂದಾ ನದಿಗಳ ಸಂಗಮವನ್ನು ಕಂಡೆವು. ಉತ್ತರ-ಪೂರ್ವದಿಂದ ಅಲಕ್‌ನಂದಾ ನದಿ ಹರಿದು ಬರುತ್ತದೆ. ಉತ್ತರ ಪಶ್ಚಿಮದಿಂದ ಭಾಗೀರಥಿ ನದಿ ಹರಿದು ಬರುತ್ತದೆ. ದೇವಪ್ರಯಾಗದಲ್ಲಿ ಇವೆರಡರ ಸಮಾಗಮವಾಗಿ ಒಂದೇ ನದಿ ಭಾಗೀರಥಿ (ಗಂಗೆ) ಹರಿದು ಹೋಗುತ್ತದೆ. ಎರಡು ಪವಿತ್ರ, ದಿವ್ಯಜನ್ಮ ನದಿಗಳ ಸಂಗಮ ಕಂಡು ಸಂತುಷ್ಟಗೊಂಡ ನನಗೆ ಮುಂದೆ ಬರಲಿರುವ ಪವಿತ್ರ ಸ್ಥಳಗಳ ಏಣಿಕೆ ಆಗಿರಲಿಲ್ಲ.

ದೇವಪ್ರಯಾಗವನ್ನು ಹಿಂದೆ ಬಿಟ್ಟು ಮತ್ತೆ ಉತ್ತರ-ಪೂರ್ವ ದಿಕ್ಕಿನಲ್ಲಿ (ಹರಿದ್ವಾರ-ಬದರೀನಾಥ ರಸ್ತೆಯಲ್ಲಿ) ಅಲಕ್‌ನಂದಾ ನದಿಯನ್ನು ಅನುಸರಿಸಿಕೊಂಡು ಮುನ್ನಡೆದೆವು. ಸ್ವಲ್ಪವೇ ದೂರದಲ್ಲಿ ಸಿಗುವುದು ಈ ಪ್ರದೇಶದ ಒಂದು ದೊಡ್ಡ ಊರು ಶ್ರೀನಗರ. ಇದು ಕಾಶ್ಮೀರದ ಸುಪ್ರಸಿದ್ಧ ಶ್ರೀನಗರವಲ್ಲ. ಉತ್ತರ ಪ್ರದೇಶದ ಗಡ್‌ವಾಲ್ ಇಲಾಖೆಯ ಶ್ರೀನಗರ (ಈಗ ಉತ್ತರಾಂಚಲ್ ರಾಜ್ಯದಲ್ಲಿದೆ, ಆಗ ಉತ್ತರ ಪ್ರದೇಶದಲ್ಲಿತ್ತು). ಇಲ್ಲಿ ನಮ್ಮ ಬಸ್ ಚಾಲಕ ಬಸ್ ನಿಲ್ಲಿಸಿಬಿಟ್ಟ - ಅವನ ಮಧ್ಯಾಹ್ನದ ಊಟಕ್ಕಿರಬಹುದೆಂದು ಊಹಿಸಿದೆವು. ಪಾಪ ಅವನು ಇಲ್ಲಿಯವ. ಬೆಳಗ್ಗೆ ನಮ್ಮ ಜೊತೆ ಉಪ್ಪಿಟ್ಟು ತಿಂದು ಏನನ್ನಿಸಿತ್ತೋ ಏನೋ, ಇವರ ಸಹವಾಸ ಬೇಡವೆಂದು ತಾನು ಕಂಡಿರುವ ಊಟ ಮಾಡಲು ನಿಲ್ಲಿಸಿರಬೇಕೆಂದುಕೊಂಡೆ. ಈ ಅರ್ಧ ಮುಕ್ಕಾಲು ಘಂಟೆಯ ನಿಲುಗಡೆ ಕೊನೆಯಲ್ಲಿ ಬಹಳ ದುಬಾರಿಯಾಯಿತು, ಆದರೆ ಅದು ಇನ್ನೊಂದು ಕಥೆ. ಅದರ ಸರದಿ ಬಂದಾಗ ಹೇಳುವೆ.

ಈ ಶ್ರೀನಗರ ಅಲಕ್‌ನಂದಾ ತೀರದಲ್ಲಿದೆ. ಹರಿದ್ವಾರ-ಬದರೀನಾಥ ಹೆದ್ದಾರಿಯು ಉದ್ದಕ್ಕೂ ನದಿಯ ಪಕ್ಕದಲ್ಲೆ ನದಿಯ ಸಮಾನಾಂತರದಲ್ಲಿ ಹೋಗುತ್ತದೆ. ಚಾಲಕ ಊಟಮಾಡುವಷ್ಟರಲ್ಲಿ ನಾವು ಕೆಲವರು ಹೋಗಿ ನದಿಗೆ ಇಳಿದು ಆಟವಾಡಿದೆವು. ಬೆಳಿಗ್ಗೆ ಗಂಗೆ ಸ್ನಾನ, ಮಧ್ಯಾಹ್ನ ಅಲಕ್‌ನಂದಾ ಸ್ನಾನ. ಸ್ವಲ್ಪ ಹೊತ್ತಿಗೆ ಮತ್ತೆ ಹೊರಟು ಊರಾಚೆ ನದಿಯ ತೀರದಲ್ಲಿ ಮಧ್ಯಾಹ್ನದ ಊಟಕ್ಕೆ ನಿಂತೆವು. ಎಲ್ಲೆಡೆ ನಿಶ್ಯಬ್ಧ, ಎಲ್ಲವೂ ಶಾಂತ. ಎಲ್ಲೋ ಪ್ರಪಂಚದ ತುದಿಗೆ ಬಂದಂತೆ ಭಾಸವಾಯಿತು. ಹತ್ತಿರ ಒಂದು ಸಣ್ಣ ಗೂಡು ತರಹದ ಪೆಟ್ಟಿಗೆ ಅಂಗಡಿ ಬಿಟ್ಟು ಜನಸಂಚಾರದ ಬೇರಾವ ಗುರುತೂ ಇಲ್ಲ. ಹೊಟ್ಟೆ ಹಸಿದಿತ್ತು, ಹೊತ್ತಾಗಿತ್ತು, ಎಲ್ಲರೂ ಭರ್ಜರಿ ಊಟ ಮಾಡಿದೆವು. ಊಟ ಮುಗಿದ ಮೇಲೆ ನಾನು ಆ ಪೆಟ್ಟಿಗೆ ಅಂಗಡಿಗೆ ಚಹ ಕುಡಿಯಲು ಹೋದೆ. ಆ ಮನುಷ್ಯ ಕಟ್ಟಾ ಉತ್ತರಪ್ರದೇಶದ ಬ್ರಾಹ್ಮಣ. ರಾಜಕೀಯದ ಬಗ್ಗೆ ಮಾತನಾಡುತ್ತ ಆತ ಮುಲಾಯಂ ಸಿಂಗ್ ಹಾಗೂ ಮಾಯಾವತಿಯರನ್ನು ಸಿಕ್ಕಾಪಟ್ಟೆ ಬೈದ. ಕಾಂಗ್ರೆಸ್ ಸರಕಾರ ಅವರುಗಳನ್ನು ರೇಗಿಸಿದ ಕಾರಣ ಅವರುಗಳು ಕಾಂಗ್ರೆಸ್‌ಗೆ ಒಂದು ಓಟೂ ಕೊಡಲಿಲ್ಲವೆಂದು ಹೇಳಿಕೊಂಡ - "ಕಾಂಗ್ರೆಸ್ ಕೊ ಏಕ್ ಭೀ ವೋಟ್ ನಹಿ ದಿಯಾ; ಅಮೇಠಿ, ಜಹಾ ಸೆ ಪ್ರೈಮ್ ಮಿನಿಸ್ಟರ್ ಚುನಾ ಜಾತಾ ಥಾ" ಎಂದ. ಊಟದ ನಂತರ ಮತ್ತೆ ಪಯಣ ಶುರುವಾಯಿತು.

ಹಲವು ಮೈಲಿಗಳು ಉರುಳಿದ ನಂತರ ರುದ್ರಪ್ರಯಾಗ ಎಂಬ ಮತ್ತೊಂದು ಸಣ್ಣ ಊರಿಗೆ ಬಂದೆವು. ನಿಮ್ಮ ಊಹೆ ಸರಿ! ಇದು ಇನ್ನೆರಡು ನದಿಗಳ ಸಂಗಮದ ಸ್ಥಳ. ಇಲ್ಲಿ ಉತ್ತರ ಪೂರ್ವದಿಂದ - ಬದರೀ ಕಡೆಯಿಂದ - ಅಲಕ್‌ನಂದಾ ನದಿ ಹರಿದು ಬರುತ್ತದೆ. ಉತ್ತರ-ಪಶ್ಚಿಮದಿಂದ - ಕೇದಾರದ ಕಡೆಯಿಂದ - ಮಂದಾಕಿನಿ ನದಿ ಹರಿದು ಬರುತ್ತದೆ. ಎರಡೂ ನದಿಗಳು ಸೇರಿ ಅಲಕ್‌ನಂದಾ ನದಿಯಾಗಿ ಮುಂದೆ ಹರಿದು ಹೋಗುತ್ತವೆ. ಈ ಊರಿನಲ್ಲಿ ನಾವು ಹರಿದ್ವಾರ-ಬದರೀನಾಥ ಹೆದ್ದಾರಿಯನ್ನು ಬಿಟ್ಟು, ಮಂದಾಕಿನಿ ನದಿಯನ್ನು ಅನುಸರಿಸಿ ಹೋಗಲು ಗೌರೀಕುಂಡದ ಕಡೆ ತಿರುಗಿದೆವು. ಇಲ್ಲಿ ಕೊನೆಗೆ ನಾವು ತಲುಪಬೇಕಾದ ಸ್ಥಳದ ಫಲಕವೊಂದನ್ನು ಕಂಡೆವು:
ಗುಪ್ರಕಾಶಿ: ೪೨ ಕಿ.ಮೀ.
ಗೌರಿಕುಂಡ್: ೭೬ ಕಿ.ಮೀ.

ಸರಿ, ಗಂಗೆಯನ್ನಾಲಿಸಿ ಬಂದದ್ದಾಯಿತು, ಅಲಕ್‌ನಂದಾ ಮುಗಿಯಿತು, ಇನ್ನು ಮುಂದೆ ಮಂದಾಕಿನಿಯನ್ನಾಲಿಸಿ ಹೊರಟೆವು. ಪ್ರಕೃತಿ ದೃಶ್ಯಗಳು ಹಾಗೆಯೇ ಇದ್ದವು. ಎಡಗಡೆ ಪಾತಾಳಗರಡಿಯಲ್ಲಿ ಮಂದಾಕಿನಿ, ಬಲಗಡೆ ಎದೆ 'ಢಘ್' ಎನ್ನಿಸುವ ಗಾತ್ರದ ಪರ್ವತಗಳು. ಮಧ್ಯದಲ್ಲಿ ಅತೀ ಚಿಕ್ಕದಾದ, ನೂರಾರು ತಿರುವುಗಳ ಒಂದು ರಸ್ತೆ. ಈ ತಿರುವುಗಳ ರಸ್ತೆಯಲ್ಲಿ ನಮ್ಮ ದೊಡ್ಡ ಬಸ್ ತಿರುಗಬೇಕಾದರೆ ಒಂದು ಗಾಲಿಯಂತೂ ಬೆಟ್ಟದ ಅಂಚಿನಿಂದಾಚೆ ಹೋಗಿ ಗಾಳಿಯಲ್ಲಿ ತೇಲುತ್ತಿರುತ್ತಿತ್ತು. ಅಂದು ಆ ಮಹಾನದಿಯನ್ನು ನಾನು ಮಗುವಾಗಿ, ಮಗುವಿನಿಂದ ಸಣ್ಣ ಹುಡುಗಿಯಾಗಿ, ಹುಡುಗಿಯಿಂದ ಕಾಮಿನಿಯಾಗಿ ಬೆಳೆಯುವುದನ್ನು ಕಂಡಂತೆ ಭಾಸವಾಯಿತು. ಈ ಕಾಮಿನಿಯನ್ನು ಹಲವಾರು ಮನೋಭಾವಗಳಲ್ಲಿಯೂ ನೋಡಿದಂತೆನಿಸಿತು - ಒಮ್ಮೆ ಸೌಮ್ಯವಾಗಿ, ಇನ್ನೊಮ್ಮೆ ಪ್ರಫುಲ್ಲೆಯಾಗಿ, ಮತ್ತೊಮ್ಮೆ ರೌದ್ರರೂಪಿಯಾಗಿ...

ಈ ದೃಶ್ಯದ ಮುನ್ನೆಲೆಯಲ್ಲಿ ನದಿಯು ಆಗಾಗ್ಗೆ ಸುಲಭಸಾಧ್ಯವಾಗಿ ಕೈಗೆ ಸಿಗುವಂತೆ ತೋರುತ್ತಿತ್ತು. ಹಲವಾರು ಕಡೆ ಒಂದು ೧೫-೨೦ ಅಡಿ ಅಗಲವಿದ್ದರೆ ಇನ್ನು ಕೆಲವು ಕಡೆ ಎರಡು ಅಡಿಗಿಂತ ಹೆಚ್ಚು ಆಳ ಇಲ್ಲವೆಂಬಂತೆ ಕಾಣಿಸುತ್ತಿತ್ತು. ಹೀಗೆಯೇ ಒಂದು ತಿರುವಿನಲ್ಲಿ ದೂರದೂರದವರೆಗೂ ಹಿಮಾಲಯ ಪರ್ವತ ಶ್ರೇಣಿ ಕಾಣಿಸಿತು. ಮೊತ್ತ ಮೊದಲ ಬಾರಿಗೆ ನಾನು ಕಣ್ಣಾರೆ ಯಾವುದಾದರೊಂದು ಮಂಜಾವೃತ್ತ ಪರ್ವತ ಶಿಖರವನ್ನು ನೋಡಿದೆ. ಬಲು ರಮ್ಯವಾದ ನೋಟವಾಗಿತ್ತು. ಮಂಜು ಸ್ವಲ್ಪ ಕರಗಿದ್ದು, ದೂರದ ಶಿಖರದ ಕರಿ ಭಾಗಗಳು ಕಾಣುತ್ತಿದ್ದವು. ಸಂಜೆಯ ಸೂರ್ಯನ ಬೆಳಕು ಮಂಜಿನ ಮೇಲೆ ಬಿದ್ದು ಇಡೀ ಪರ್ವತವೇ ಸುವರ್ಣಮಯವಾಗಿತ್ತು.

ನೋಡುತ್ತಿದ್ದಂತೆಯೇ ಬಸ್ ಬೆಟ್ಟಗಳನ್ನು ಹತ್ತಲಾರಂಭಿಸಿತು. ಪಕ್ಕದ ನದಿ ಇನ್ನೂ ಕೆಳಗೆ ಹೋಗಲಾರಂಭಿಸಿತು. ಅಲ್ಲಲ್ಲೆ ಮೇಲಿನಿಂದ ನೆಲ ಕುಸಿದು ಮಣ್ಣು ಹಾಗು ಸಣ್ಣ ಕಲ್ಲುಗಳು ರಸ್ತೆಗೆ ಉರುಳಿದ್ದವು. ಇದೊಂದು ದೊಡ್ಡ ಪಜಿತಿಯಂತೆ ಇಲ್ಲಿ. ಮುಂದೆ ನೆಲ ಕುಸಿದು ದೊಡ್ಡ ಬಂಡೆಯಾವುದಾದರೂ ರಸ್ತೆಗೆ ಅಡ್ಡವಾದರೆ ಇನ್ನು ಮುಂದೆ ಹೋಗುವಂತಿಲ್ಲ. ಹಿಂದೆ ರಸ್ತೆ ಬಂದಾದರೆ ಹಿಂತಿರುಗಿ ಹೋಗುವಂತಿಲ್ಲ. ಎರಡೂ ಕಡೆ (ಹಿಂದೆ, ಮುಂದೆ) ರಸ್ತೆ ಅಡ್ಡವಾದರೆ, ಅಲ್ಲಿಯೇ ಕಚ್ಚಿಕೊಂಡಂತೆ - ಯಾರಾದರೂ ಬಂದು ಬಿಡಿಸುವವರೆಗು! ಇದರ ಅನುಭವ ನಮ್ಮ ಹರಿಯಪ್ಪನಿಗಾಗಿಯೇ ಅವರು ಹರಿದ್ವಾರದಲ್ಲಿ ಬೇಕರಿ ಪದಾರ್ಥಗಳನ್ನು ಕೊಳ್ಳಲು ಹೇಳಿದ್ದಂತೆ. ಸಧ್ಯ ನಮಗೆ ಈ ತೊಂದರೆಗಳು ಬರಲಿಲ್ಲ.

ಸ್ವಲ್ಪದಲ್ಲಿಯೇ ನಾವು ನೂರಾರು ಅಡಿ ಮೇಲೇರಿ ಕೆಳಗಿನ ನದಿ ಪಾತಾಳಗರಡಿಯಲ್ಲೊಂದು ಕಣವಾಯಿತು. ರಸ್ತೆ ನಮ್ಮನ್ನು ಗುಪ್ತಕಾಶಿಗೆ ಕರೆದೊಯ್ಯಿತು. ನಾನೇನೋ ಹೆಸರು ನೋಡಿ ಕಾಶಿಯಂತೆ ಒಂದು ದೊಡ್ಡ ಊರಿರಬಹುದೆಂದುಕೊಂಡಿದ್ದೆ. ಆದರೆ ಅದು ಒಂದು ಸಣ್ಣ ಹಳ್ಳಿಯಾಗಿತ್ತು. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಂತೆ - ಈ ಊರಿನ ಮಹತ್ವ ಬಹಳವಂತೆ. ಇಲ್ಲಿ ಪ್ರಾಚೀನ ವಿಶ್ವನಾಥ ಹಾಗೂ ಅರ್ಧನಾರೀಶ್ವರ ದೇವಾಲಯಗಳಿವೆ. ಒಂದು ಮಣಿಕರ್ಣಿಕ ಕುಂಡವೂ ಇದೆ. ಒಂದು ಬೌದ್ಧಿಕ ಸ್ತೂಪವೂ ಇದೆಯಂತೆ.

ಗುಪ್ತಕಾಶಿ ಬಿಟ್ಟಮೇಲೆ ಗೌರೀಕುಂಡಕ್ಕೆ ಇನ್ನು ಸುಮಾರು ೩೦ಕ್ಕೂ ಹೆಚ್ಚು ಕಿಲೋಮೀಟರ್‌ಗಳಿದ್ದವು. ಇಷ್ಟು ಹೊತ್ತಿಗೆ ಕತ್ತಲೆಯಾಗಹತ್ತಿತ್ತು. ಇನ್ನೇನು ಗೌರೀಕುಂಡ ಸುಮಾರು ೫ ಕಿಲೋಮೀಟರ್ ಇರುವಷ್ಟರಲ್ಲಿ ಮಳೆ ಹನಿಯಲಾರಂಭಿಸಿತು. ಎಲ್ಲರಿಗೂ ಆತಂಕದ 'ಪುಕ-ಪುಕ'. ಸ್ವಲ್ಪ ದೂರ ಹೋಗಿ ಗೌರೀಕುಂಡದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬಸ್ ಪೂರ್ಣ ನಿಂತೇಬಿಟ್ಟಿತು. ನೋಡಿದರೆ ಟ್ರಾಫಿಕ್ ಜಾಮ್.

ಮೊದಲೇ ಹೇಳಿದಂತೆ ಇವು ಸಣ್ಣ ರಸ್ತೆಗಳು - ಒಂದು ಬಸ್‌ಗೆ - ಅದೂ ಮಿನಿ ಬಸ್‌ಗೆ (ಇಲ್ಲಿ ದೊಡ್ಡ ಬಸ್‌ಗಳು ಓಡಾಡುವಹಾಗಿಲ್ಲ) ಸಾಕಷ್ಟು ಅಡ್ಡಳತೆ ಇರುತ್ತದೆ. ವೇಗ ನಿಯಮ ಸುಮಾರು ೨೦-೨೫ ಕಿಲೋಮೀಟರ್ ಪ್ರತಿ ಘಂಟೆ. ಇಂತಹ ರಸ್ತೆಯಲ್ಲಿ ಮಳೆ ಹನಿಯುತ್ತಿದೆ, ಒಂದು ಸಣ್ಣ ವೃತ್ತ ಆಕಾಶ ಕಾಣಿಸಿಕೊಳ್ಳುತ್ತಿದೆ (ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದ್ದೆವು), ಪಕ್ಕದಲ್ಲಿ ಆಳದಲ್ಲಿ ಕೊರೆಯುವ ಮಂದಾಕಿನಿ ಹರಿಯುತ್ತಿದೆ, ತಾಪಮಾನ ಸುಮಾರು ೫ ಡಿಗ್ರೀ ಇದೆ. ಇಂತಹ ಪರಿಸ್ಥಿತಿಯಲ್ಲಿ ಟ್ರಾಫಿಕ್ ಜಾಮ್ ಮಾಡಿಸುವಷ್ಟು ವಾಹನಗಳು ಎಲ್ಲಿಂದ ಬಂದವೆಂದು ಯೋಚಿಸತೊಡಗಿದೆ.

ಆಗಿದ್ದು ಆಗಿಹೋಯಿತು. ಹರಿಯಪ್ಪನವರು ಪರಿಶೋಧಿಸಲು ಹೋದರು. ಅವರು ಕೆಲ ಸಮಯ ಹಿಂತಿರುಗದಿದ್ದರಿಂದ ನಾನು ಹಾಗೂ ಮಾಧವೇಶ್ವರರು ಬಸ್‌ನಿಂದ ಕೆಳಗಿಳಿದು ಹೊರಟೆವು. ಆಚೆ ಕೊರೆಯುವ ಚಳಿ. ಮಾಧವೇಶ್ವರ್ ಚಳಿ ತಡೆಯಲಾರದೆ ಬಸ್‌ಗೆ ಹಿಂತಿರುಗಿ ಓಡಿದರು. ನಾನೋ ಸತ್ವ ಸಾಹಸಿ, ಈ ಜಾಮ್‌ನ ಮೂಲ ಹಾಗೂ ವಾಹನಗಳ ಸರಣಿಯ ಕೊನೆ ಕಂಡುಹಿಡಿಯಲು ಹೋದೆ. ಎರಡೂ ಸಿಗಲಿಲ್ಲ, ಆದರೆ ಹಿಂತಿರುಗುತ್ತ ಹರಿಯಪ್ಪ ಸಿಕ್ಕರು. ಈ ಜಾಮ್ ಇಂದು ಮುಗಿಯುವುದಿಲ್ಲವೆಂದುಕೊಂಡು ಬಸ್‌ಗೆ ಹಿಂತಿರುಗಿದೆವು. ಗೌರೀಕುಂಡ ಇನ್ನು ಒಂದು ಕಿಲೋಮೀಟರ್ ದೂರದಲ್ಲಿದೆಯೆಂದು ತಿಳಿದುಬಂತು - ನಡಿಗೆಯಲ್ಲಿ ಕೇವಲ ಹತ್ತು ನಿಮಿಷದ ದಾರಿ.

ಹರಿಯಪ್ಪ ತಮ್ಮ ಸ್ವೆಟರ್ ತೊಟ್ಟರು. ನಾನು ಹಾಗೇ ಹೊರಟೆ - ನಡೆದು ಹೋಗಿ ರಾತ್ರಿ ತಂಗಲು ಕೋಣೆಗಳ ಏರ್ಪಾಡು ಮಾಡಲು - ಇನ್ನು ತಡವಾದರೆ ರಾತ್ರಿ ಇರಲು ಕೋಣೆಗಳು ಸಿಗದಿರಬಹುದೆಂದು. ಗೌರೀಕುಂಡದಲ್ಲಿ ಹುಚ್ಚು ನೂಕು ನುಗ್ಗಲು. ಅಂದು ಭಾನುವಾರವಾದ್ದರಿಂದ ಬಹಳಷ್ಟು ವಾಹನಗಳಿದ್ದವು. ಇವುಗಳೆಲ್ಲ ಒಟ್ಟಿಗೆ ಬಿಟ್ಟು ಹೊರಟ ಕಾರಣ ಜಾಮ್ ಸಂಭವಿಸಿತ್ತು. ಇವುಗಳ ಜೊತೆಗೆ ಗೌರೀಕುಂಡಕ್ಕೆ ಬರುವ ವಾಹನಗಳು ಬೇರೆ. ಎಲ್ಲವೂ ಸೇರಿ ರಾತ್ರಿ ತಂಗುವ ಜಾಗದ ಬಗ್ಗೆ ಹರಿಯಪ್ಪರ ಚಿಂತೆ ಹೆಚ್ಚಾಯಿತು.

ಊರಿಗೆ ಹರಿಯಪ್ಪ ಒಬ್ಬರೇ ಹೋದರು. ನಾನು, ಮಾಧವೇಶ್ವರ, ಹಾಗು ನವೀನ್ ಕುಮಾರ್ ಮತ್ತೆ ಹೊರ ಹೋದೆವು - ಕಾಲ ಕಳೆಯಲು. ಜಾಮ್ ನಡೆಸಿದ ಚಾಲಕರ ಜೊತೆ ಮಾತನಾಡಿದೆವು. ಅಷ್ಟರಲ್ಲೆ ಉತ್ತರ ಪ್ರದೇಶದ ಟ್ರಾಫಿಕ್ ಪೋಲೀಸ್ ಬಂದು ಜಾಮ್ ಹೋಗಲಾಡಿಸಲಾರಂಭಿಸಿದರು. ಇದ್ದುದರಲ್ಲಿ ಒಂದು ಮಟ್ಟಿಗೆ ಸಫಲರಾದರು. ನಾವೂ ಹೋಗಿ ಹಲವಾರು ವಾಹನಗಳನ್ನು "ಚಲೊ ಚಲೊ ಏ ಚಲೋ" (ನಮ್ಮ ಕಂಡಕ್ಟರ್‌ಗಳ "ರೈಟ್‌ರೈಟ್" ಇದ್ದ ಹಾಗೆ) ಎಂಬ ಕೂಗುಗಳಿಂದ ಕಳಿಸಿಕೊಟ್ಟೆವು. ಆದರೂ ಯಾವುದೋ ಒಂದು ವಾಹನ ಎಲ್ಲೋ ಸಿಕ್ಕಿ ಮುನ್ನಡೆ ಮತ್ತೆ ನಿಧಾನವಾಯಿತು. ಅಷ್ಟು ಹೊತ್ತೂ ಮಳೆ ಹನಿಯುತ್ತಲೇ ಇತ್ತು ಆದರೆ ಕೊನೆಗೊಮ್ಮೆ ಜೋರಾಗಿ ಮಳೆ ಬಂದು ನಾವು ಕುಗ್ಗಿದ ಉತ್ಸಾಹದಿಂದ ಬಸ್‌ಗೆ ಹಿಂತಿರುಗಿದೆವು.

ರಾತ್ರಿ ತಂಗಲು ಕೋಣೆಗಳು ಏರ್ಪಾಡಾಗಿವೆ ಎಂಬ ಸಮಾಚಾರದೊಂದಿಗೆ ಹರಿಯಪ್ಪ ಹಿಂತಿರುಗಿದರು. ಅವರು ಊರಿನಲ್ಲಿ ಹುಚ್ಚು ನೂಕು ನುಗ್ಗಲಿರುವುದೆಂದೂ ಹೇಳಿದರು (ಅವರೇ ಹೇಳಿದ ಹಾಗೆ "ಕಿಚ ಕಿಚಾ ಅಂತ ಐತೆ"). ಎಲ್ಲ ಕೋಣೆಗಳಿಗೂ ಜೋಡಿಸಿದ ಬಚ್ಚಲು ಮನೆಗಳಿದ್ದರೂ, ಕೋಣೆಗಳು ೪-೫ನೇ ಮಹಡಿಗಳಮೇಲೆಂದು ಹೇಳಿದರು. ವಯಸ್ಸಾದವರು ಪಾಪ ಈ ಸಮಾಚಾರ ಕೇಳಿಯೇ "ಉಷ್, ಅಯ್ಯಪ್ಪ" ಎಂದು ನರಳಿದರು. ನಾವು ಆ ಕೋಣೆಗಳನ್ನು ಬೇಗನೆ ಹೋಗಿ ವಶ ಪಡಿಸಿಕೊಳ್ಳದಿದ್ದರೆ ಅವೂ ಸಿಗುವುದಿಲ್ಲವೆಂದು ಹೇಳಿದರು. ಟ್ರಾಫಿಕ್ ಜಾಮ್‌ಬಗ್ಗೆ ಏನೂ ಹೇಳಲಾಗುವುದಿಲ್ಲವೆಂದು ಅರಿತು ಎಲ್ಲ ತಂಡಗಳಿಂದ ಒಬ್ಬೊಬ್ಬರು ಹೋಗಿ ಕೋಣೆ ವಶಪಡಿಸಿಕೊಳ್ಳುವುದಾಗಿ ನಿರ್ಧಾರ ಮಾಡಲಾಯಿತು. ನಮ್ಮ ತಂಡದಿಂದ ನಾನು ಹೊರಟೆ. ಹಾಗೆಯೆ ಒಬ್ಬರು ದೇಶಪಾಂಡೆ, ಪ್ರಭಾಕರ್, ನವೀನ್ ಕುಮಾರ್, ಶ್ರೀನಿವಾಸಮೂರ್ತಿ ಹಾಗು ಅಡಿಗೆಯಾತ ಎಲ್ಲರೂ ಹೊರಟರು.

ಆ "ಕಿಚ ಕಿಚ"ದೊಳಗೆ ನಡೆದು ಗೌರೀಕುಂಡಕ್ಕೆ ಹೋದೆವು. ಕಂಡ ನೋಟ ನಮ್ಮ ನಿರೀಕ್ಷೆಗಳನ್ನು ಒಡೆದು ಬಿಟ್ಟಿತು. ಗೌರೀಕುಂಡ ತಿರುಮಲ ಅಥವ ಶೃಂಗೇರಿಯ ತರಹ ಊರಲ್ಲ. ಇದು ಬಹಳ ಸಣ್ಣದಾದ ಬಹಳ ಹಿಂದುಳಿದ ಊರು. ಬಹುಶಃ ಇದು ಎಷ್ಟು ದೂರವೆಂದರೆ ಈ ಊರಿಗೆ ಆ ರೀತಿ ಬೆಳೆಯಲು ಅವಕಾಶವೇ ಸಿಕ್ಕಿರಲಿಕಿಲ್ಲ. ಸಣ್ಣ ಸಣ್ಣ ಗಲ್ಲಿಗಳಲ್ಲಿ (ಸ್ಕೂಟರ್ ಓಡಿಸುವಷ್ಟು ಅಗಲ - ಒಂದು ೩-೪ ಅಡಿ) ಸುಮಾರು ದೂರ ನಡೆದು ಹೋದೆವು. "ಭಾರತ್ ಪ್ರವಾಸಿ ಮಂದಿರ" (ಅಥವ ಅಂತಹ ಹೆಸರಿನ) ಒಂದು ಕಛೇರಿಗೆ ಹೋಗಿ ಬೀಗದ ಕೈಗಳನ್ನು ಪಡೆದುಕೊಂಡೆವು. ನಂತರ ೪-೫ ಮಹಡಿ ಹತ್ತಿ ಹೋಗಿ ಕೋಣೆ ಸೇರಿದೆವು.

ಈ ಕೋಣೆಗಳು ನನ್ನ ನಿರೀಕ್ಷೆ ಮೀರಿಸಿದವು. ಊರು ಕಂಡ ಮೇಲೆ ನಾನು ಸಣ್ಣ ಗಲೀಜು ಕತ್ತಲೆ ಕೋಣೆಗಳನ್ನು ನಿರೀಕ್ಷಿಸಿದ್ದೆ. ಆದರೆ ಇವು ಸಾಕಷ್ಟು ದೊಡ್ಡವಾಗಿದ್ದು, ಮಂಚ ಹಾಸಿಗೆ ಹಾಗು ರಜಾಯ್‌ಗಳಿಂದ ಕೂಡಿದ್ದವು. ಮಂಚದಮೇಲೆ ಮೂರು ಜನರಿಗೆ ಜಾಗವಿತ್ತು. ನಾನು ಅದನ್ನು ಆ ಮೂವರಿಗೆ (ಮಾಧವೇಶ್ವರ್ ತಂಡ) ಬಿಟ್ಟುಕೊಟ್ಟು ನೆಲದಲ್ಲಿ ಮಲಗುವ ನಿರ್ಧಾರ ಮಾಡಿದೆ. ಮೂರು ರಜಾಯ್‌ಗಳಿದ್ದವು. ಒಂದು ತೆಗೆದುಕೊಂಡು ಹಾಸಿಗೆ ಮಾಡಿಕೊಂಡೆ. ನನ್ನ ಜಮಖಾನೆ ಅದರ ಮೇಲೆ ಹಾಸಿಕೊಂಡು, ನನ್ನ ಗಾಳಿಯ ದಿಂಬಿಟ್ಟುಕೊಂಡು ಮಲಗುವೆನೆಂಬ ತೀರ್ಮಾನ ಮಾಡಿಕೊಂಡೆ. ನಂತರ ಹೀಗೆ ನಡೆದದ್ದು.

ಸ್ವಲ್ಪ ಹೊತ್ತಿನ ಬಳಿಕ ಬಸ್ ಬಂದ ಸುದ್ಧಿ ಬಂತು. ಎಲ್ಲರೂ ಗಲ್ಲಿಗಳೊಳಗಿಂದ ನಡೆದು ಬಸ್ ನಿಂತಿದ್ದ ಕಡೆ ಹೋದೆವು - ಸಾಮಾನು ತರಲು. ಬಸ್ ಮೇಲೆ ಹತ್ತಿ ಎಲ್ಲರ ಸಾಮಾನು ನಾನೇ ಇಳಿಸಿಕೊಟ್ಟೆ. ಮೇಲೆ ಮಳೆ ಬಿದ್ದು ಬಹಳ ಜಾರುತ್ತಿತ್ತು - ಬಿದ್ದು ಏಟು ಮಾಡಿಕೊಂಡರೆ ಎಂದು ಬಹಳ ಚಿಂತೆಯಾಗಿತ್ತು. ಹುಷಾರಾಗಿ ಅಪಘಾತವಿಲ್ಲದೆ ಎಲ್ಲವನ್ನೂ ಇಳಿಸಿದೆ. ನಮ್ಮ ಮಾಧವೇಶ್ವರ್ ಕೂಲಿಯನ್ನು ಕರೆದರು, ವಯಸ್ಸಾದವರು (ಬೆಳವಾಡಿಯ ತಂಡ) ತಾವೇ ಹೊರೆ ಹೊತ್ತು ಹೊರಟರು. ಮುನ್ನಡೆ ನಿಧಾನವಾಗಿತ್ತು - ಹೆಂಗಸರ ಅಸಹಕಾರದಿಂದ. ಆದರೆ ಅವರನ್ನು ದೂರಲಾರೆ, ಪಾಪ! ಹೋಗುತ್ತ ಹತ್ತಾರು ಸಣ್ಣ ಅಂಗಡಿಗಳನ್ನು ನೋಡಿದೆ - ಸ್ವೆಟರ್, ಕಂಬಳಿಯಿಂದ ತಿಂಡಿ-ಊಟದವರೆಗೆ ಎಲ್ಲವನ್ನೂ ಮಾರುತ್ತಿದ್ದವು. ಅಡಿಗೆಯಾತ ಇಂದು ಏನೂ ಮಾಡಲಾರ ಎಂದು ನಿರ್ಧರಿಸಿ 'ಸೂಖೀ ರೋಟೀ' (ಒಣ ಚಪಾತಿ) ಹಾಗೂ 'ಪ್ಯಾಲಿ ಚಾಯ್' (ಲೋಟ ಚಹ) ಕುಡಿಯುವ ಯೋಚನೆ ಮಾಡಿದ್ದೆ. ನಂತರ ಇದು ಸುಳ್ಳಾಯಿತು - ಅಡಿಗೆಯಾತ ಅಡಿಗೆ ಮಾಡಿದ್ದ.

ಬೆಳವಾಡಿ ತಂಡ (ಎಲ್ಲಾ ವಯಸ್ಸಾದವರು - ಮೂರ್ತಿ ಬಿಟ್ಟು ಬೇರೆ ಗಂಡಸರಿಗೆ ಕೈಯಲ್ಲಿ ಹರಿಯುತ್ತಿರಲಿಲ್ಲ ಹೆಂಗಸರ ಮೇಲೆ ಕೂಗುತ್ತಿದ್ದರು) ಅಷ್ಟರಲ್ಲೆ ಸುಸ್ತಾಗಿ ಕೂತರು. ಸಾಮಾನಿನ ಹೊರೆ ಹೊತ್ತು ಹೋಗಲಾಗಲಿಲ್ಲ ಅವರಿಗೆ. ಪಾಪ ಆ ಹೆಂಗಸರು! ಹಿರಿಯರು, ದೂರದ ಪ್ರಯಾಣ, ಊಟವಿಲ್ಲ, ಎಂದು ನಾನೊಂದೆರಡು ಸಾಮಾನು ಅವರುಗಳಿಂದ ತೆಗೆದುಕೊಂಡೆ. ಎಲ್ಲರನ್ನೂ ಅವರವರ ಕೋಣೆಗೆ ತಲುಪಿಸಿ, ನಂತರ ನಮ್ಮ ಕೋಣೆಗೆ ಹೋದೆ. ಸ್ವಚ್ಛ ಬಚ್ಚಲುಮನೆ, ಬೆಚ್ಚಗಿನ ರಜಾಯಿ ಹೊರಗೆ ಧುಮ್ಮಿಕ್ಕುತ್ತಿದ್ದ ಮಂದಾಕಿನಿ ಎಲ್ಲವೂ ನನ್ನನ್ನು ಇನ್ನೊಮ್ಮೆ ಹರ್ಷಗೊಳಿಸಿತು.

ಸ್ವಲ್ಪ ಹೊತ್ತಿನ ನಂತರ ಮೂರ್ತಿ ಬಂದು "ಚಪಾತಿ" ಹಾಗು "ಕಾಫಿ" ಕೊಳ್ಳಲು ಸಹಾಯ ಕೇಳಿದರು. ಇವರನ್ನು ಸರಿಪಡಿಸದಿದ್ದರೂ ಮತ್ತೆ ಗಲ್ಲಿಗಳ ಚಕ್ರವ್ಯೂಹವನ್ನು ಇಬ್ಬರೂ ಹೊಕ್ಕೆವು. ನಾನು ಇಲ್ಲಿ ಕಾಫಿ ಸಿಗುವುದಿಲ್ಲ ಬರೆ ಚಹ ಅಂದುಕೊಂಡಿದ್ದೆ. ಆದರೆ ಕಾಫಿ ಸಿಕ್ಕೇಬಿಟ್ಟಿತು. ಇಲ್ಲಿ ರೋಟಿ ನಿಜವಾದ ತಂದೂರಿ ರೋಟಿ. ತಂದೂರ್ ಎಂದರೆ ಒಂದು ತಳವಿಲ್ಲದ ಕೊಳತಪ್ಪಲೆಯಂತೆ. ಅದನ್ನು ಒಂದು ಕೆಂಡಗಳಿರುವ ಗುಂಡಿಯಲ್ಲಿರಿಸುತ್ತಾರೆ. ನಂತರ ಗೋಧಿಯ ರೊಟ್ಟಿಗಳನ್ನು ಕೈಯಲ್ಲೇ ತಟ್ಟಿ ಒಂದು ಪುಟ್ಟ ದಿಂಬಿನ ಸಹಾಯದಿಂದ ಆ ತಂದೂರ್‌ಗೆ ಒಳಗಿನಿಂದ ಅಂಟಿಸುತ್ತಾರೆ. ಅದು ಬೆಂದ ಮೇಲೆ ಒಂದು ಕಡ್ಡಿಯಿಂದ ಹೊರಗೆ ತೆಗೆಯುತ್ತಾರೆ. ಎಣ್ಣೆಯಿಲ್ಲ ಏನಿಲ್ಲ. ಯಾವುದಾದರೂ ಪಲ್ಯದ ಜೊತೆ ತಿನ್ನಬಹುದು. ಕಾಫಿ ರೋಟಿಗಳನ್ನು ಕೊಂಡು ಹಿಂತಿರುಗಿದೆವು. ಆಗ ನಮ್ಮ ಅಡಿಗೆಯವನೇ ಊಟ ತಯಾರ್ ಮಾಡಿರುವನೆಂದು ತಿಳಿದು ಖುಷಿಯಾಯಿತು.

ಮಾಧವೇಶ್ವರ್ ಹಾಗು ಪ್ರಭಾಕರ್ ಚಹಾ ಕುಡಿಯಲು ಕೂಗಿದರು. ಇಲ್ಲವೆನ್ನಲಾರದೆ ಮತ್ತೆ ಅವರೊಂದಿಗೆ ಚಹಾಗೆ ಹೋದೆ. ಹಿಂತಿರುಗುವಾಗ ಪ್ರವಾಸಿ ಮಂದಿರದ ಕಛೇರಿಗೆ ಹೋದೆವು - ನಾಳಿನ ಯಾತ್ರೆಗೆ ಪಾಲ್ಕಿ (ಪಲ್ಲಕ್ಕಿ) ಅಥವಾ ಘೋಡ (ಕುದುರೆ) ಸವಾರಿಗಳನ್ನು ನಿರ್ಧರಿಸಲು. ಅಲ್ಲಿಗೆ ಗುಂಪಿನ ಉಳಿದವರೂ ಬಂದಿದ್ದರು. ಇವೆಲ್ಲ ಮುಗಿಸಿ ರಾತ್ರಿ ೧೦:೩೦ ಘಂಟೆಗೆ ಊಟಕ್ಕೆ ಕುಳಿತೆವು. ನಂತರ ನಲ್ಲಿಯ ನೀರಿನ ತಣ್ಣತನದ ಬಗ್ಗೆ ಮಾತನಾಡುತ್ತ ಸುಸ್ತಾಗಿ ಹಾಸಿಗೆಗಳಲ್ಲಿ ಬಿದ್ದೆವು. ದೀಪ ಹಾಕಿಯೇ ಮಲಗಿದ್ದರಿಂದ ನಾನು ನನ್ನ ನೆನಪುಗಳನ್ನು (ಡೈರಿ) ಬರೆಯಲು ಹೊರಟೆ. ಸ್ವಲ್ಪ ಹೊತ್ತಿಗೆ ದೀಪ ಆರಿ ಹೋಯಿತು. ಆ ಊರಿನಲ್ಲಿ ವಿದ್ಯುತ್ ಇಲ್ಲವಂತೆ. ಜನರೇಟರ್‌ಗಳಿಂದ ದೀಪಗಳು ಓಡುತ್ತವಂತೆ. ರಾತ್ರಿ ೧೧:೩೦ಕ್ಕೆ ಜನರೇಟರ್ ಆರಿಸಿದರಿಂದ ದೀಪ ಆರಿಹೋಯಿತು. ಪುಸ್ತಕ ಕೆಳಗಿಟ್ಟು, ಕನ್ನಡಕ ತೆಗೆದಿಟ್ಟು ಮಲಗಿದೆ.

ಮಧ್ಯರಾತ್ರಿ ೧:೩೦ಕ್ಕೆ ಚಳಿಯಿಂದ ಎಚ್ಚರವಾಯಿತು. ಒಂದೇ ಶಾಲ್ ಹೊದ್ದು ಮಲಗಿದ್ದೆ. ಕತ್ತಲೆಯಲ್ಲೇ ನನ್ನ ಚೀಲದಲ್ಲಿದ್ದ ಹೊಸ ಶಾಲ್ ಹುಡುಕಿಕೊಂಡು ಎರಡೂ ಸೇರಿಸಿ ಹೊದ್ದು ಮಲಗಿದೆ.


ಭಾಗ ೫: ಕೇದಾರನಾಥ

೪ ಮೇ ೧೯೯೮

ಮಾರನೆಯ ದಿನ (ಸೋಮವಾರ - ಈಶ್ವರನ ಮೆಚ್ಚಿನ ದಿನ) ಮುಂಜಾವು ೪:೩೦ಗೆ ಎದ್ದೆ. ಬಾತ್‌ರೂಂ ಕೆಲಸಗಳನ್ನು ಮುಗಿಸಿ ಈಚೆ ಬಂದೆ. ಮೈಕೊರೆಯುವ ಚಳಿ - ಸುಮಾರು ೨-೩ ಡಿಗ್ರೀ ಇದ್ದಿರಬಹುದು. ನಮ್ಮ ತಂಡದವರು ಕೆಳಗಿನಿಂದ (ತಪ್ತ ಕುಂಡದಿಂದ) ಬಿಸಿ ನೀರು ತರೆಸಿಕೊಂಡು ಸ್ನಾನ ಮಾಡಲು ನಿರ್ಧರಿಸಿದರು. ನಾನು ಎಂದೂ ಅರ್ಧಂಬರ್ಧ ಕೆಲಸ ಮಾಡಿದವನಲ್ಲ! ಚಳಿಯಲ್ಲೇ ನಾಲ್ಕು ಮಹಡಿ ಇಳಿದು ಹೊರಟೆ - ತಪ್ತ ಕುಂಡಕ್ಕೆ. ಅಲ್ಲಿಗೆ ಹೋಗಲು ನಮ್ಮ ಕೋಣೆಯಿಂದ ಗಲ್ಲಿಗಳಲ್ಲಿ ಕೊಂಚ ದೂರ ನಡೆದು ಹೋಗಬೇಕಿತ್ತು. ನನಗೋ ನಿದ್ದೆಗಣ್ಣು, ದಾರಿ ಗೊತ್ತಿಲ್ಲ, ಕತ್ತಲೆ ಬೇರೆ - ನಮ್ಮ ಹರಿಯಪ್ಪ ಹೇಳಿದಂತೆ "ಕಿಚ ಕಿಚ" ಹಾಗೆಯೇ ಇತ್ತು. ಹೇಗೋ ಅಂತು ಜನರನ್ನು ಹಿಂಬಾಲಿಸಿ ಹೋಗಿ ತಪ್ತ ಕುಂಡ ತಲುಪಿದೆ.

ತಪ್ತ ಕುಂಡವೆಂದರೆ ಬಿಸಿ ನೀರಿನ ಕುಂಡ. ನೆಲದಲ್ಲಿ ಗಂಧಕದ (ಸಲ್‌ಫರ್) ಹಾಗೂ ಭೂಮಿಯ ಶಾಖದ ಪ್ರಭಾವದಿಂದ ನೀರು ಬಿಸಿಯಾಗಿ ಚಿಲುಮೆಯಾಗಿ ನೆಲದಿಂದ ಉಕ್ಕಿ ಬರುತ್ತದೆ. ಇದಕ್ಕೆ ಒಂದು ಸಣ್ಣ ಕುಂಡ ಮಾಡಿ ನೀರಿನ ಚಿಲುಮೆ ಈ ಕುಂಡದೊಳಗೆ ಹರಿಯುವ ಹಾಗೆ ಮಾಡಿದ್ದಾರೆ. ಜ್ವಾಲಮುಖಿಗಳು ಹಾಗು ಈ ಬಿಸಿನೀರಿನ ಚಿಲುಮೆಗಳು ಹತ್ತಿರದ ಸಂಬಂಧಿಗಳು. ಚಳಿ ಪ್ರದೇಶದಲ್ಲಿ ತಮ್ಮ ಶಿಷ್ಯರಿಗೆ ಸ್ನಾನಮಾಡುವುದು ಸುಗಮವಾಗಬೇಕೆಂದು ಶಂಕರಾಚಾರ್ಯರು ಈ ಚಿಲುಮೆಗಳನ್ನು ರೂಪಿಸಿದರೆಂದು ಹೇಳಲಾಗುತ್ತದೆ. ಅದೇನೋ ಕಾಣೆ, ಅದರೂ ಕೊನೆ ಪಕ್ಷ ಸ್ನಾನ ಸುಗಮವಾಗಬೇಕೆಂದು ದೇವಾಲಯವನ್ನು ಈ ಚಿಲುಮೆಯ ಹತ್ತಿರ ನಿರ್ಮಿಸಿರಬಹುದು.

ಕೇದಾರೇಶ್ವರ ದೇವಾಲಯಕ್ಕೆ ಹೋಗುವ ಮುನ್ನ, ಈ ತಪ್ತ ಕುಂಡದಲ್ಲಿ ಮಿಂದು ಹೋಗುವುದು ವಾಡಿಕೆ. ನಾನೂ ಕಷ್ಟ ಪಟ್ಟು ಚಳಿಯಲ್ಲಿ ಸ್ನಾನದ ವಸ್ತ್ರ ಧರಿಸಿ ತಪ್ತ ಕುಂಡಕ್ಕೆ ಇಳಿದೇ ಬಿಟ್ಟೆ. ಕುಂಡ ಚಿಕ್ಕದು, ಜನರು ಹಲವಾರು - ಇಕ್ಕಟ್ಟಿನ ಪರಿಸ್ಥಿತಿ. ಹರಿದು ಬರುತ್ತಿದ್ದ ಚಿಲುಮೆಯ ನೀರನ್ನು ಚೊಂಬಿನಲ್ಲಿ ಹಿಡಿದು ತಲೆಯ ಮೇಲೆ ಹಾಕಿಕೊಂಡೆ. ನೀರು ಸುಡುತ್ತಿರಲಿಲ್ಲವಾದರೂ ಸಾಕಷ್ಟು (ಚಳಿ ಹೋಗಿಸಿಕೊಳ್ಳುವಷ್ಟು) ಬಿಸಿಯಾಗಿತ್ತು. ಗಂಧಕದ ನೀರಿನಲ್ಲಿ ಹೆಚ್ಚು ಹೊತ್ತು ಕಳೆಯುವುದು ಕ್ಷೇಮವಲ್ಲವೆಂದು ಕೇಳಿದ್ದೆ - ಜನ ಮೂರ್ಛೆ ಬೀಳುತ್ತಾರಂತೆ. ಆದ್ದರಿಂದ ಒಂದು ೩-೪ ನಿಮಿಷಗಳು ಮಾತ್ರ ನೀರಿನಲ್ಲಿದ್ದು ಈಚೆ ಬಂದೆ. ಕತ್ತಲೆಯಾದ್ದರಿಂದ ಏನೂ ಹೆಚ್ಚು ಕಾಣಿಸುತ್ತಿರಲಿಲ್ಲ. ಮಧ್ಯಾಹ್ನ ಬಂದು ನೋಡಿದ ನಂತರ ತಿಳಿಯಿತು ಈ ಜಾಗ ಅಷ್ಟು ಸ್ವಚ್ಚವಿಲ್ಲವೆಂದು. ಆದರೂ ಪುಣ್ಯ ಕ್ಷೇತ್ರಗಳಲ್ಲಿ ಇದೆಲ್ಲ ಯೋಚಿಸಬಾರದೆಂದು ಸುಮ್ಮನಾದೆ.

ಸ್ನಾನ ಮುಗಿಸಿ ಗಲ್ಲಿಗಳನ್ನು ಹಿಡಿದು ಕೋಣೆಗೆ ಹಿಂತಿರುಗಿದೆ - ಹೌದು ಮತ್ತೆ ೪ ಮಹಡಿ ಹತ್ತಬೇಕಾಯಿತು! ಬೆಚ್ಚಗಿನ ಬಟ್ಟೆ ಧರಿಸಿದೆ. ನನ್ನ ಬಳಿ ಸ್ವೆಟರ್ ಇರಲಿಲ್ಲ - ಒಂದು ಪೂರ್ಣಕೈಯಿನ ಅಂಗಿ ಧರಿಸಿ, ನನ್ನ ಎರಡು ಶಾಲ್ ತೆಗೆದುಕೊಂಡೆ. ಕ್ಯಾಮೆರ ಹಿಡಿದು ಎಲ್ಲವನ್ನೂ ನನ್ನ ಬೆನ್ನುಚೀಲಕ್ಕೆ (ಬ್ಯಾಕ್‌ಪ್ಯಾಕ್) ಹಾಕಿಕೊಂಡೆ. ಉಳಿದವರಿಗೆ ಕಾಯುತ್ತಾ ಕುಳಿತರೆ ಕೊನೆಯೇ ಇಲ್ಲವೆಂದು ಒಬ್ಬನೇ ಹೊರಟೇಬಿಟ್ಟೆ - ಗೌರೀಕುಂಡದಿಂದ ಕೇದಾರನಾಥ ದೇವಾಲಯಕ್ಕೆ.

ಗೌರೀಕುಂಡದಿಂದ ಕೇದಾರೇಶ್ವರ ದೇವಾಲಯಕ್ಕೆ ೧೪ ಕಿಲೋಮೀಟರ್‌ಗಳ ಅಂತರವಿದೆ. ದಾರಿಯು ಸುಮಾರು ಹತ್ತು ಅಡಿ ಅಗಲವಿದ್ದು, ಚಪ್ಪಟ್ಟೆ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಈ ಕಲ್ಲುಗಳನ್ನು ಸೇರಿಸಿ ಹಿಡಿಯಲು ಸಿಮೆಂಟ್ ಬಳಸಲಾಗಿದೆ. ಹಲವಾರು ಕಡೆ ಈ ಸಿಮೆಂಟ್ ಕಿತ್ತು ಹೋಗಿ, ಅಲ್ಲಲ್ಲೆ ಕಲ್ಲುಗಳು ನಾಪತ್ತೆಯಾಗಿ ದಾರಿಯು ಬರೀ ಮಣ್ಣಿನದಾಗಿದೆ. ಈ ಮಣ್ಣು ಮಳೆ ಹಾಗು ಕರಗಿದ ಮಂಜುಗಡ್ಡೆಗಳಿಂದ ಕೂಡಿ ಕೆಸರಾಗುತ್ತದೆ. ಈ ಕೆಸರು ಜಾರುವುದರಿಂದ ಈ ಸಣ್ಣ ಕಾಲುದಾರಿ ಅಪಾಯಕಾರಿಯಾಗುತ್ತದೆ.

ಅಲ್ಲಲ್ಲೆ ಮೇಲಿನಿಂದ ನೆಲಕುಸಿತವಾಗಿ ದೊಡ್ಡ ಬಂಡೆಗಳು ರಸ್ತೆಯಲ್ಲೇ ಬಿದ್ದಿದ್ದವು. ಇದಂತೂ ಇಲ್ಲಿಯ ಸಾಮಾನ್ಯ ಸಂಗತಿ. ನೀರು ಹಾಗು ಮಂಜಿನಿಂದ ಕೂಡಿ, ಬೆಟ್ಟವು ಭಾರವಾಗಿ, ಉರುಳಲಾರಂಭಿಸುತ್ತದೆ. ಇದು ಕೆಳಗೆ ಉರುಳಿ ಬರುತ್ತಿದ್ದಂತೆ ಇದರ ಜೊತೆಗೆ ಸಡಿಲವಾದ ಬೆಟ್ಟಭಾಗಗಳು ಸೇರಿ ಇನ್ನಷ್ಟು ಭಾರಿಯಾಗಿ ಕೆಳಗುರುಳುತ್ತದೆ. ಇದರ ದಾರಿಯಲ್ಲಿ ಆ ಸಣ್ಣ ರಸ್ತೆ ಸಿಕ್ಕಿದರೆ ಒಂದಿಷ್ಟು ಸರಕನ್ನು ರಸ್ತೆಯಮೇಲೆ ಹಾಕಿ ಈ ಕುಸಿತವು ಮುನ್ನಡೆಯುತ್ತದೆ. ಹೀಗೆ ರಸ್ತೆಗೆ ಬಂದ ಸರಕು ಕೆಲವೊಮ್ಮೆ ದೊಡ್ಡ ಬಂಡೆಗಳಾಗಿ ಆ ಸಣ್ಣ ರಸ್ತೆಯನ್ನೇ ಅಡ್ಡಿಪಡಿಸಿಬಿಡುತ್ತವೆ. ಇದರಿಂದ ರಸ್ತೆಯು ಇನ್ನಷ್ಟು ಇಕ್ಕಟ್ಟಾಗಿ ಹೆಚ್ಚು ಅಪಾಯಕಾರಿಯಾಗುತ್ತದೆ.

ಇಲ್ಲಿಯ ಇನ್ನೊಂದು ಸಮಸ್ಯೆ ಮಂಜು. ಅದು ಮೇ ತಿಂಗಳು, ಇನ್ನೂ ೪ನೇ ತಾರೀಕಾಗಿತ್ತು. ಕೇದಾರ-ಬದರಿ ತೆರೆದಿರುವುದೇ ಮೇಯಿಂದ ಅಕ್ಟೋಬರ್‌ವರೆಗೆ. ಕಾರಣ ನವೆಂಬರಿಂದ ಏಪ್ರಿಲ್‌ವರೆಗೆ ಇಲ್ಲಿ ಸಿಕ್ಕಾಪಟ್ಟೆ ಮಂಜು ಕಟ್ಟಿ, ರಸ್ತೆಗಳು ಹಾಯಲು ಲಾಯಕ್ಕಾಗಿರುವಿದಿಲ್ಲ. ಇನ್ನೂ ತೆಗೆದು ೨-೩ ದಿನಗಳಗಿದ್ದವು. ಮಂಜು ಎಲ್ಲೆಡೆ ಕರಗಿರಲಿಲ್ಲ. ಮೇಲಾಗಿ ರಸ್ತೆಯ ಉದ್ದಕ್ಕೂ ಬೆಟ್ಟದಿಂದ ಹರಿದು ಬರುವ ಸಣ್ಣ ಝರಿಗಳು ಜಲಪಾತಗಳಾಗಿ ಬೀಳುತ್ತವೆ. ಝರಿಗಳು ಕೆಲವೊಮ್ಮೆ ಹಾದಿಯ ಕೆಳಗೆ ಹರಿದರೆ ಇನ್ನು ಕೆಲವೊಮ್ಮೆ ಹಾದಿಯ ಮೇಲೇ ಹರಿದು ಹೋಗುತ್ತವೆ. ಜಲಪಾತಗಳಿಂದಲೂ ನೀರು ಹಾದಿಯಮೇಲೆ ಚಿಮ್ಮುತ್ತದೆ. ಬೆಟ್ಟ ಹತ್ತಿದಂತೆ ತಾಪಮಾನ ಕಡಿಮೆಯಾಗುತ್ತದೆ. ತಾಪಮಾನ ಸಾಕಷ್ಟು ಕಡಿಮೆಯಾದರೆ ನೀರು ಮಂಜಾಗುತ್ತದೆ. ಹಾದಿಯ ಮೇಲಿನ ಮಂಜು ಜಾರುತ್ತದೆ. ಜಾರಿ ಬಿದ್ದರೆ ಪಾತಾಳಗರಡಿ! ಮೇಲೆ ಹೋಗುತ್ತಿದ್ದಂತೆ ಇಡೀ ಜಲಪಾತಗಳೇ ಮಂಜುಗಟ್ಟಿಬಿಡುತ್ತವೆ. ಈ ರೀತಿ ಮಂಜುಕಟ್ಟಿದ ಜಲಪಾತದ ಮೇಲಿನ ಭಾಗ ಭಾರವಾಗಿ ಮುರಿದು ನೆಲಕ್ಕುರುಳುತ್ತದೆ. ಉರುಳಿ ಆ ಕಾಲುದಾರಿಯ ಮೇಲೆ ಬಿದ್ದರೆ ಮತ್ತೆ ಹಾದಿಯಲ್ಲಿ ಇಕ್ಕಟ್ಟು.

ಈ ಮೇಲೆ ಕಂಡ ಕಾರಣಗಳಿಂದ ಆ ಸಣ್ಣ ರಸ್ತೆಯ ಮೇಲೆ ನಡೆಯುವುದು ಆಪತ್ತಿನ ಕೆಲಸ. ಮೇಲಾಗಿ ಈ ಕಡಿಮೆ ಅಗಲದ ಹಾದಿ, ಬೆಟ್ಟದ ದಾರಿ ಬೇರೆ. ನೂರಾರು ತಿರುವುಗಳು ಹಾಗು ಹೇರ್‌ಪಿನ್ ಬೆಂಡ್‌ಗಳು. ಈ ತಿರುವುಗಳಲ್ಲಿ ಬಿದ್ದರೆ, ಕೊನೆ ನೂರಾರು ಅಡಿ ಕೆಳಗೆ ರಭಸದಿಂದ ಹರಿಯುತ್ತಿದ್ದ, ಕಣಿವೆಯಲ್ಲಿ ಅಡಗಿದ್ದ, ನೊರೆ ನೊರೆಯಾದ ಪ್ರಪಾತದಲ್ಲಿ. ಈ ಪ್ರಪಾತ ಕೆಲವೊಮ್ಮೆ ಕಾಣದಿರುವಷ್ಟು ಕೆಳಗೆ ಹರಿಯುತ್ತದೆ. ನೀರಿನ ರಭಸದ ಶಬ್ಧವೊಂದೇ ಅದನ್ನು ನೆನಪಿಸುವುದು.

ಗೌರೀಕುಂಡದಿಂದ ಕೇದಾರಕ್ಕೆ ಹೋಗಲು ನಾಲ್ಕೈದು ವ್ಯವಸ್ಥೆಗಳಿವೆ. ಒಂದು ಬುಟ್ಟಿಯಲ್ಲಿ ಕುಳಿತು ಹೋಗುವುದು. ಒಬ್ಬ ಮನುಷ್ಯ ಈ ಬುಟ್ಟಿಯನ್ನು ತನ್ನ ಬೆನ್ನಿನ ಮೇಲೇರಿಸಿ ಕೇದಾರಕ್ಕೆ ನಡೆದೇ ಕರೆದೊಯ್ಯುತ್ತಾನೆ. ಇದಕ್ಕೆ 'ಕಂಧಿ' ಎಂದು ಹೆಸರು. ಇದು ಹೆಚ್ಚಾಗಿ ವಯಸ್ಸಾದ (ಸಣ್ಣಗಿರುವ) ಹೆಂಗಸರು ಅಥವಾ ಮಕ್ಕಳಿಗೆ ಮಾತ್ರ. ಎರಡನೆಯದು ಒಂದು ಪಲ್ಲಕ್ಕಿಯಲ್ಲಿ ಕೂತು ಹೋಗುವುದು. ಒಂದು ದೋಣಿಯಾಕಾರದ ಸಣ್ಣ ಪಲ್ಲಕ್ಕಿಯಲ್ಲಿ ಕೂರಿಸುತ್ತಾರೆ. ಅದನ್ನು ನಾಲ್ಕು ಮಂದಿ ಎತ್ತಿ ಕರೆದೊಯ್ಯುತ್ತಾರೆ. ಇದು ಭಾರಿಯಾಗಿದ್ದು ಕೈಯಲ್ಲಾಗದವರಿಗೆ. ಇದಕ್ಕೆ 'ಪಾಲ್ಕಿ' ಎಂದು ಹೆಸರು. ಮೂರನೆಯದು ಕುದುರೆ ಏರಿ ಹೋಗುವುದು. ಈ ಕುದುರೆ ಅರ್ಧ ಕತ್ತೆ ಅರ್ಧ ಕುದುರೆ. ಇದನ್ನು ಹಿಡಿತದಲ್ಲಿಡಲು ಒಬ್ಬ ಮನುಷ್ಯ ಜೊತೆಗೆ ನಡೆದು ಬರುತ್ತಾನೆ. ಇದು ಹಟ್ಟಕಟ್ಟಾಗಿರುವವರಿಗೆ. ಇದನ್ನು 'ಘೋಡ' ಎಂದು ಕರೆಯುತ್ತಾರೆ. ಕೊನೆಯದು ನಟರಾಜಾ ಸರ್ವೀಸ್ - ನಡೆದೇ ಹೋಗುವುದು. ಕಳೆದ ರಾತ್ರಿ, ಇದನ್ನು ತೀರ್ಮಾನಿಸಲೆಂದೇ ನಾವು ಪ್ರವಾಸಿ ಮಂದಿರದ ಕಛೇರಿಗೆ ಹೋದದ್ದು.

ಸರಿ ನಮ್ಮ ಗುಂಪಿನವರು ಅವರವರ ದೇಹಸ್ಥಿತಿಗೆ ತಕ್ಕಂತೆ ಪಾಲ್ಕಿ ಅಥವ ಘೋಡ ಏರ್ಪಾಡು ಮಾಡಿಕೊಂಡರು. ನಾನಾದರೋ ಸಾಹಸಿ. ನಡೆದೇ ಹೋಗುವೆನೆಂದು ಹೊರಟೆ. ಪ್ರಕೃತಿ ದೃಶ್ಯವು ಬಲು ರಮಣೀಯವಾಗಿತ್ತು. ಇನ್ನೂ ಮುಂಜಾವಾಗಿದ್ದರೂ ಸಾಕಷ್ಟು ಬೆಳಕಿತ್ತು. ಪಕ್ಕದಲ್ಲಿ ಮಂದಾಕಿನಿ ಅತೀವೇಗದಿಂದ, ಅದಕ್ಕೆ ತಕ್ಕಂತೆ ಧ್ವನಿಯಿಂದೊಡಗೂಡಿ ಹರಿಯುತ್ತಿದ್ದಳು. ಸುತ್ತಲಿನ ಬೆಟ್ಟಗಳಿಂದ ಜಲಪಾತಗಳು ಕೆಳಗಿನ ಕಣಿವೆಗೆ ಧುಮ್ಮಿಕ್ಕುತ್ತಿದ್ದವು. ಹಾದಿಯು ಮಂದಾಕಿನಿ ನದಿಯನ್ನನುಸರಿಸಿ ಹೊರಟಿತು.

ದಾರಿಯಲ್ಲಿ ನಾನು ಒಂದು 'ಲಾಠೀ' - ಒಂದು ಉದ್ದದ ಬಂಬಿನ ಬಡಿಗೆ - ಕೊಂಡೆ, ಆಧಾರಕ್ಕಾಗಿ. ಗೌರೀಕುಂಡ ಊರಿನ ಪೇಟೆ ಬೀದಿ ಹಾಯ್ದು ಹೋದೆ. ಅಲ್ಲಿ ಕಂಧಿ, ಘೋಡ ಹಾಗು ಪಾಲ್ಕಿ ಬಾಡಿಗೆಯವರ ಅಂಗಡಿಗಳಿದ್ದವು. ಊರು ಮುಗಿದಂತೆ ಹಾದಿಯ ಮೇಲೆ ಒಂದು ಸಣ್ಣ ಗೇಟ್ ಇರಿಸಲಾಗಿದೆ - ಬಹುಶ: ರಸ್ತೆ ಯಾವಾಗ ತೆರೆದಿರುತ್ತದೆ, ಯಾವಾಗ ಮುಚ್ಚಿರುತ್ತದೆ ಎಂದು ಸೂಚಿಸಲು. ಈ ಗೇಟು ತೆರೆದಿತ್ತು. ನಾನು ಅದನ್ನು ಹಾಯ್ದು ಮುಂದೆಬಿದ್ದೆ. ನನ್ನ ಅಂಗಿಯ ಮೇಲೆ ಯಾವ ಶಾಲೂ ಬೇಕೆನಿಸಲಿಲ್ಲ. ನನ್ನ ಬಡಿಗೆ ನೆಲಕ್ಕೆ ಕುಕ್ಕುತ್ತ ಉತ್ಸಾಹದಿಂದ ನಡೆದೆ. ಹಲವಾರು ಜನರು ನನ್ನಂತೆ ಹೊರಟಿದ್ದರು. ಆದರೆ ನನ್ನ ಸಖಿ ಮಂದಾಕಿನಿಯಾಗಿದ್ದಳು. ಆಕೆಯ ಝೇಂಕಾರ ಕೇಳುತ್ತ ಮುಂಜಾವಿನ ಮಬ್ಬಿನಲ್ಲಿ ಪರ್ವತಗಳ ಆಕಾರಗಳನ್ನು ಗ್ರಹಿಸಲು ಯತ್ನಿಸುತ್ತಾ ಮುಂದೆ ಸಾಗಿದೆ.

ಸುಮಾರು ೨೦ ನಿಮಿಷಗಳಾಗಿದ್ದಿರಬಹುದು. ಒಂದು ಮೈಲಿಗಲ್ಲು ಕಂಡೆ - ಕೇದಾರನಾಥ: ೧೩ ಕಿ.ಮೀ. ಎಂದು. ಈ ಇಪ್ಪತ್ತು ನಿಮಿಷಗಳಲ್ಲಿ ಬರಿ ಒಂದು ಕಿಲೋಮೀಟರ್ ಬಂದಿದ್ದೆ! ಸರಿ ಅಲ್ಲೇ ಝರಿಯಲ್ಲಿ ಸ್ವಲ್ಪ ನೀರು ಕುಡಿದು ಮತ್ತೆ ನಡೆಯಲಾರಂಭಿಸಿದೆ. ಈಗ ಇನ್ನೂ ಸ್ವಲ್ಪ ಬೆಳಕಾಗಿತ್ತು. ದೂರದಲ್ಲಿ ಮಂಜಾವೃತ್ತ ಶಿಖರಗಳು ಕಾಣಿಸುತ್ತಿದ್ದವು. ಇನ್ನೂ ಸೂರ್ಯೋದಯವಾದಂತೆ ಕಾಣಿಸಲಿಲ್ಲ. ಮತ್ತೆರಡು ಕಿಲೋಮೀಟರ್ ಉರುಳಿದವು.

ರಸ್ತೆಯ ಬದಿಯಲ್ಲಿ ಸಣ್ಣ ಸಣ್ಣ ಊರುಗಳು ಸಿಗುತ್ತವೆ. ನೂರಾರು ಪುಟಾಣಿ ಅಂಗಡಿಗಳೂ ಇವೆ. ಈ ಅಂಗಡಿಗಳಲ್ಲಿ ಚಹ, ಬಿಸ್ಕೆಟ್, ತಿಂಡಿ ಇತರೆ ಇಂತಹ ಸಾಮಾಗ್ರಿಗಳನ್ನು ಮಾರುತ್ತಾರೆ. ಏರಿನ ದಾರಿ, ಎತ್ತರದ ಪ್ರದೇಶ ಬೇರೆ - ಹವೆ ತಿಳಿಯಾಗಿದ್ದು ಆಮ್ಲಜನಕದ (ಆಕ್ಸಿಜನ್) ಅವಧಾನ ಕಡಿಮೆಯಿರುತ್ತದೆ; ಆಗಲೇ ಸುಸ್ತಾಗಹತ್ತಿತ್ತು, ಇಂತಹ ಒಂದು ಅಂಗಡಿಗೆ ಹೋಗಿ ನಾನೂ ಚಹ ಕುಡಿದು ಬಿಸ್ಕೆಟ್ ಪೊಟ್ಟಣವೊಂದನ್ನು ಕೊಂಡೆ. ಅಲ್ಲಲ್ಲೆ ಚಹ ಕುಡಿಯುತ್ತ ನಡೆದರೆ ಸುಸ್ತಾಗುವುದಿಲ್ಲವೆಂದು ಹೇಳುತ್ತಾರೆ. ಏನು ನಿಜವೋ ಸುಳ್ಳೋ, ಇನ್ನಷ್ಟು ದೂರ ನಡೆದಮೇಲೆ ಕಡಿದಾದ ಹಾದಿ ನೋಡಿ ಇನ್ನು ಮುಂದೆ ಹೋಗಲಾರೆ ಎನಿಸಿತು. ಇಷ್ಟು ಹೊತ್ತಿಗೆ ಸುಮಾರು ನಾಲ್ಕೂವರೆ-ಐದು ಕಿಲೋಮೀಟರ್ ಬಂದಿದ್ದಿರಬಹುದು.

ಏನು ಮಾಡುವುದು? ಅಲ್ಲೆ ಹೋಗುತ್ತಿದ್ದ ಇಬ್ಬರು ಘೋಡಾವಾಲಾರನ್ನು (ಕುದುರೆಯವರು) ಮೇಲೆ ಕರೆದೊಯ್ಯಲು ಕೇಳಿಕೊಂಡೆ. ಇಬ್ಬರೂ ಒಲ್ಲೆಯೆಂದರು. ಮೂರನೆಯವ ಒಪ್ಪಿಕೊಂಡ. ಕಳೆದ ಎರಡು-ಮೂರು ದಿನಗಳಲ್ಲಿ ನನ್ನ ಹಿಂದಿ ಖರವಾಗಿತ್ತು. ರೂ. ೩೦೦ರಿಗೆ ಮಾತನಾಡಿದ್ದೆ. ೨೦೦ ಮೇಲೆ ಹೋಗಲು, ೧೦೦ ಕೆಳಗೆ ಬರಲು. ಕುದುರೆ ಹತ್ತಿ ಹೊರಟೆ.

ಕುದುರೆ ಸವಾರಿ ತಮಾಷೆಯಲ್ಲ. ಚಲನಚಿತ್ರಗಳಲ್ಲಿ ತೋರಿಸುವಷ್ಟು ರೋಮಾಂಚಕವೂ ಅಲ್ಲ. ಮಾಡಿರುವವರು ಹೇಳುತ್ತಾರೆ! ಜೀನು, ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಕುದುರೆಯವ ಒಂದು ದಪ್ಪವಾದ ಬಟ್ಟೆಯಿಂದ ಅದನ್ನು ಮೆತ್ತಗೆ ಮಾಡಲು ಪ್ರಯತ್ನಿಸಿದರೂ ಕೂಡ ಸವಾರಿ ಮಾಡುವುದು ಬಲು ನೋವಿನ ಕೆಲಸ. ಸೊಂಟ ಹಾಗೂ ತೊಡೆ ರಾತ್ರಿಯಿಡೀ ನೋಯುತ್ತಿದ್ದವು. ಅದೇ ರೀತಿ ಕೂರುವುದೂ ಸಹ ಬಹಳ ಭಯಕರ ಕಾರ್ಯ. ಹಿಡಿಯಲು ಏನೂ ಇರುವುದಿಲ್ಲ. ಜೀನನ್ನೇ ಹಿಡಿದು ಸಾಗಬೇಕು. ನಾನೋ ೬ ಅಡಿ ಎತ್ತರ. ಒಂದು ತರಹ ಅಸ್ಥಿರ (ಇಂಬ್ಯಾಲೆನ್ಸ್) ಭಾವನೆ - ಇಳಿತದಲ್ಲಿ ಮುಗ್ಗರಿಸುವ ಅನಿಸಿಕೆ. ಏರಲ್ಲಿ ಹಿಂದೆ ಬೀಳುವ ಅನಿಸಿಕೆ. ಕುದುರೆಯವ ಜೊತೆಯಲ್ಲಿ, ಪಕ್ಕದಲ್ಲೇ ನಡೆಯುತ್ತ ಧೈರ್ಯ ಕೊಡುತ್ತಿದ್ದ.

ಹೀಗೆ ಮುಂದೆ ಸಾಗಿದೆವು. ಒಮ್ಮೊಮ್ಮೆ ಕುದುರೆಯವನ ಜೊತೆ ಮಾತನಾಡುತ್ತ, ಬೇರೆ ಸಮಯಗಳಲ್ಲಿ ಪ್ರಕೃತಿ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತ. ನೂರಾರು ತೊರೆಗಳು, ನೂರಾರು ಜಲಪಾತಗಳು - ಸಣ್ಣವು ದೊಡ್ಡವು, ಎತ್ತರದವು ಗಿಡ್ಡವಾಗಿದ್ದವು... ನನ್ನ ಕ್ಯಾಮೆರಾ ನನ್ನ ಬೆನ್ನುಚೀಲದಲ್ಲಿತ್ತು. ಆದರೆ ಅದನ್ನು ಆಚೆ ತೆಗೆದು ಫೋಟೋ ಹಿಡಿಯಲು ಧೈರ್ಯವಿರಲಿಲ್ಲ - ಎಲ್ಲಿ ಬಿದ್ದುಹೋಗುವೆನೋ ಎಂದು!

ಸ್ವಲ್ಪ ಹೊತ್ತಿನ ಮೇಲೆ ಒಂದು ಸಣ್ಣ ಹಳ್ಳಿಗೆ ಬಂದೆವು. ಒಂದು ಸಾಲು ಅಂಗಡಿಗಳಲ್ಲಿದ್ದವು. ನಾನೇ ಚಹಾ ಕುಡಿಯವ ಪ್ರಸ್ತಾಪವಿಟ್ಟೆ - ಮುಖ್ಯವಾಗಿ ನನ್ನ ಕಷ್ಟದ ಸ್ಥಾನದಿಂದ ಸ್ವಲ್ಪಹೊತ್ತಾದರೂ ತಪ್ಪಿಸಿಕೊಳ್ಳಲು. ಕುದುರೆಯಿಂದಿಳಿಯಲು ಒಂದು ಸಣ್ಣ ಮೇಜಿತ್ತು. ಕುದುರೆ ನಿಂತಂತೆ ಅದರ ಮೇಲಿಂದ ಮೇಜಿನ ಮೇಲೆ ಇಳಿದುಕೊಂಡೆ. ನಾವು ಚಹ ಕುಡಿದೆವು. ಕುದುರೆಯವ ಕುದುರೆಗೆ ಏನೋ ಆಹಾರ ಕೊಟ್ಟ - ದೊಡ್ಡದಾದ ಕಂದು ಬಣ್ಣದ ವಸ್ತುಗಳು - ಅದನ್ನು ಇದಕ್ಕಿಂತ ಹೆಚ್ಚು ವರ್ಣಿಸಲಾರೆ. ಬಹುಶಃ ಹುರಳಿ ಯ ಭೂಸಾ ಇದ್ದಿರಬಹುದು. ಚಹ ಮತ್ತು ಕುದುರೆಯ ಆಹಾರಕ್ಕೆ ಬೆಲೆ ನಾನೇ ಕೊಟ್ಟೆ - ಅದೇ ಇಲ್ಲಿಯ ಪದ್ಧತಿ. ಆ ಚಹಾದ ಅಂಗಡಿಯಲ್ಲಿ ನಮ್ಮ ಅಡಿಗೆಯಾತನ ಸಹಾಯಕ ರಾಮೂವನ್ನು ಭೇಟಿಮಾಡಿದೆ. ಹಿಂತಿರುಗುತ್ತ ಇಬ್ಬರೂ ಜೊತೆಯಾಗಿ ನಡೆದೇ ಬರುವ ಯೋಜನೆ ಹೂಡಿದೆವು. ಕುದುರೆಯವನಿಗೆ ನಾನು ಹಿಂತಿರುಗುತ್ತ ನಡೆದುಬರುವುದಾಗಿ, ಅವನಿಗೆ ಮೇಲೆ ಹೋಗುವುದರ ಬೆಲೆ ಮಾತ್ರ ಕೊಡುವುದಾಗಿ ಹೇಳಿದೆ. ಅವನು ಕಮಕ್-ಕಿಮಕ್ ಅನ್ನದೆ ಒಪ್ಪಿಕೊಂಡಿದ್ದು ಕಂಡು ನನಗೆ ಆಶ್ಚರ್ಯವೇ ಆಯಿತು.

ಕೂಡಲೆ ನಾನು ಹತ್ತಿರದಿಂದ ಮಂಜು ನೋಡುವ ಅವಕಾಶ ಸಂಭವಿಸಿತು. ಮಂಜುಗಡ್ಡೆಯ ಮೇಲೆ ನೆಲಪಾತವಾಗಿ, ಅದರ ಮೇಲೆ ಮಣ್ಣು ಉದುರಿತ್ತು. ಅದರಿಂದ ಅದು ಮಂಜಿನ ತರಹ ಕಾಣಿಸದೆ ಯಾವುದೋ ಸುಣ್ಣದಬಂಡೆಯ ಹಾಗಿತ್ತು. ನನಗಾಗ ಅದು ಮಂಜು ಎಂದು ತಿಳಿದಿರಲಿಲ್ಲ. ಮತ್ತೊಂದು ಬಾರಿ ಇದೇ ರೀತಿ ಬಿದ್ದಿದ್ದಾಗ ಕುದುರೆಯವನನ್ನು ಕೇಳಿದೆ. ಅವನು ಇದು ಮಂಜೇ ಎಂದು ಹೇಳಿ ಅದನ್ನು ರುಜುವಾತು ಮಾಡಲು ಒಂದು ಹಿಡಿ ಮಂಜು ಕೈಗಿಟ್ಟ!

ಆ ಸಮಯಕ್ಕೆ ಸೂರ್ಯನ ಕಿರಣಗಳು ಪರ್ವತ ಶಿಖರಗಳನ್ನು ಚುಂಬಿಸುತ್ತಿದ್ದವು. ಅದೆಂತಹ ದೃಶ್ಯ! ಬಿಳಿಯ ಮಂಜು ಸೂರ್ಯನ ಆ ಪ್ರಥಮ ಕಿರಣಗಳಿಂದ ಹೊನ್ನಿನ ಬಣ್ಣಕ್ಕೆ ತಿರುಗಿ ಸುವರ್ಣ ಪರ್ವತಗಳಂತೆ ಕಾಣಿಸುತ್ತಿದ್ದವು. ಇಂದಿಗೂ ಆ ದೃಶ್ಯಗಳು ಕಣ್ಣಿಗೆ ಕಟ್ಟಿದಹಾಗಿವೆ! ಪ್ರಕೃತಿಯ ಚೆಲುವು ಇಲ್ಲಿ ಸೊಂಪಾಗಿದೆ - ಸೌಂದರ್ಯ ಸರಸ್ವತಿಯೇ ಧರೆಗಿಳಿದುಬಂದಂತೆ. ಇದನ್ನು ನೋಡುತ್ತ ಅದೇನೋ ಒಂದು ತರಹದ ಶಾಂತಿ, ಸಮಾಧಾನದ ಮನೋಭಾವ! ಇಂತಹ ಕ್ಷಣಗಳು, ಇಂತಾಹ ಭಾವ ಜೀವನದಲ್ಲಿ ಕೇವಲ ಒಮ್ಮೆ ಮಾತ್ರ ಬರುವುದು.

ಮುಂದೆ ಚಲಿಸುತ್ತಿದ್ದಂತೆ ಮಂಜುಗಡ್ಡೆ ಹೆಚ್ಚಾಗುತ್ತಾ ಹೋಯಿತು. ಸ್ವಲ್ಪ ಹೊತ್ತಿನ ಬಳಿಕ ನಾವು ಪೂರ್ಣ ಮಂಜುಪ್ರದೇಶದಲ್ಲಿದ್ದೆವು. ಹಾದಿಯೆಲ್ಲ ಮಂಜುಪುಡಿಯಿಂದ (ಗಡ್ಡೆಯಾಗಿರಲಿಲ್ಲ, ಪುಡಿಯಾಗಿತ್ತು) ತುಂಬಿತ್ತು. ಪರ್ವತಗಳ ಮೇಲೆಲ್ಲ ಹೀಗೆಯೇ ಮಂಜು. ಒಮ್ಮೆಯಂತೂ ರಸ್ತೆ ಒಂದು ಸಣ್ಣ ಮಂಜಿನ ಗೋಪುರದಿಂದ ಮುಚ್ಚಿಹೋಗಿತ್ತು. ಈ ಗೋಪುರದಲ್ಲಿ ಒಂದು ಸಣ್ಣ ಕಿಂಡಿ ಕೆತ್ತಿದ್ದರು. ಈ ಕಿಂಡಿಯಲ್ಲಿ ಹಾಯ್ದು ಹೋದೆವು. ಮಂದಾಕಿನಿಯೂ ಸಹ ಈ ಮಂಜುಪ್ರದೇಶದಲ್ಲಿ ಹೆಪ್ಪುಗಟ್ಟಿಬಿಟ್ಟಿದ್ದಳು. ಮೇಲೆ ಹೆಪ್ಪುಗಟ್ಟಿದ್ದರೂ ನದಿ ಕೆಳಗೆ ಹರಿಯುತ್ತಿರುತ್ತದೆ. ಇದಕ್ಕೆ ಆಧಾರವಾಗಿ, ಹೀಗೆ ಹೆಪ್ಪುಗಟ್ಟಿದ ನದಿಯ ಮಂಜಿನ ಮೇಲಿನ ಭಾಗ ಅಲ್ಲಲ್ಲೆ ಕರಗಿ, ಈ ಕಿಂಡಿಗಳ ಕೆಳಗೆ ನೀರು ಹರಿಯುತ್ತಿರುವುದು ಕಾಣಿಸುತ್ತಿತ್ತು. ಕುದುರೆಯವ, ನನ್ನ ಉತ್ಸುಕತೆ ನೋಡಿಯೋ ಏನೋ, ಮತ್ತೆ ಒಂದು ಬೊಗಸೆ ಮಂಜುಪುಡಿ ತೆಗೆದು ನನ್ನ ಕೈಗಿತ್ತ. ಕೊರೆಯುತ್ತಿದ್ದರೂ ಎಂದೂ ಕಾಣದ ಆ ಮಂಜನ್ನು ಹಿಡಿಯಲು ಅದೇನೋ ಆಸೆ.

ಶುರುವಿನಿಂದ ಸುಮಾರು ೩ ಘಂಟೆಗಳ ನಂತರ ನಮ್ಮ ಪ್ರಯಾಣದ ಕೊನೆಗೆ ಬಂದೆವು. ಮತ್ತೆ ಅಂಗಡಿ ಹೊಕ್ಕಿ ಚಹ ಕುಡಿದು, ಬಿಸ್ಕೆಟ್ ತಿಂದೆವು. ಕುದುರೆಯವನನ್ನು ಬೀಳ್ಕೊಡುತ್ತ ಅವನೊಂದಿಗೆ ಹಾಗೂ ಕುದುರೆಯೊಂದಿಗೆ ಫೋಟೋ ತಗೆಸಿಕೊಂಡೆ. ಅವನಿಗೆ ಹಣ ಕೊಟ್ಟು ಫೋಟೋ ಕಳಿಸುವುದಾಗಿ ಹೇಳಿದ ಮೇಲೆ ನಮ್ಮ ನಮ್ಮ ದಾರಿ ಹಿಡಿದೆವು.

ಕೇದಾರನಾಥ ಊರು ಹಾಗೂ ಕೇದಾರೇಶ್ವರ ದೇವಾಲಯಕ್ಕೆ ಇನ್ನೂ ಸುಮಾರು ಒಂದು ಕಿಲೋಮೀಟರ್ ಅಂತರ ಉಳಿದಿತ್ತು. ಮತ್ತೆ ನಡೆದೇ ಹೊರಟೆ. ಅಪಾರವಾದ ಮಂಜುಗಡ್ಡೆಗಳು ರಸ್ತೆಯನ್ನು ಅಡ್ಡಗಟ್ಟಿದ್ದವು. ಅವುಗಳನ್ನು ಕೊರೆದು ಜನರಿಗೆ ನಡೆದುಹೋಗಲು ಹಾದಿಮಾಡಲಾಗಿತ್ತು. ಕೊನೆಗೂ ದೇವಾಲಯದ ಬೀದಿಗೆ ಬಂದೇಬಿಟ್ಟೆ.

ಇನ್ನು ಕೇದಾರೇಶ್ವರದ ಬಗ್ಗೆ ಸ್ವಲ್ಪ ಮಾಹಿತಿ: ಕೇದಾರೇಶ್ವರ ಗಡ್‌ವಾಲ್ ಹಿಮಾಲಯದಲ್ಲಿ ಸಮುದ್ರಮಟ್ಟಕ್ಕಿಂತ ಸುಮಾರು ಹನ್ನೊಂದು ಸಾವಿರ ಅಡಿ ಎತ್ತರದಲ್ಲಿದೆ. ಇದು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ದೇವಾಲಯವದ ಮಹತ್ವವನ್ನು ಪುರಾಣ, ಇತಿಹಾಸ ಹಾಗೂ ಮಹಾಕಥೆಗಳಲ್ಲಿ ಹಾಡಿ ಹೊಗಳಿದ್ದಾರೆ. ಮಂದಾಕಿನಿ ನದಿಯ ಉಗಮಸ್ಥಾನದಲ್ಲಿದ್ದು, ಮಂಜು ಕವಿದ ಪರ್ವತ ಶಿಖರಗಳಿಂದ ಸುತ್ತುವರಿಯಲ್ಪಟ್ಟಿದೆ.

ಪುರಾಣಗಳ ಪ್ರಕಾರ ಪಾಂಡವರು ಕೌರವರನ್ನು ಕೊಂದ ಪಾಪ ವಿಮೋಚನೆಗಾಗಿ ಈಶ್ವರನನ್ನು ಪ್ರಾರ್ಥಿಸುತ್ತಿದ್ದರಂತೆ. ಸ್ವಾಮಿಯು ಅವರಿಂದ ತಪ್ಪಿಸಿಕೊಳ್ಳಲು ವೃಷಭ ರೂಪ ತಾಳಿ ಕೇದಾರ ಕಣಿವೆಯಲ್ಲಿ ಮೇಯುತ್ತಿದ್ದನಂತೆ. ಪಾಂಡವರು ಸ್ವಾಮಿಯ ಅನುಗ್ರಹ ಪಡೆಯಲೇಬೇಕೆಂದು ಅವನನ್ನು ಅಟ್ಟಿಸಿಕೊಂಡು ಕೇದಾರೇಶ್ವರಕ್ಕೆ ಬಂದರಂತೆ. ಓಡಲು ಜಾಗವಿಲ್ಲದೆ ಆ ವೃಷಭವು ನೆಲದೊಳಗೆ ಹೊಕ್ಕಿಕೊಳ್ಳಲು ಪ್ರಯತ್ನಿಸಿತಂತೆ. ಭೀಮನೂ, ಬಿಡದೆ ಆ ವೃಷಭದ ಬಾಲ ಹಿಡಿದು ಏಳೆದನಂತೆ. ಆದ್ದರಿಂದ ಆ ವೃಷಭದ ಬೆನ್ನು ಭಾಗ ಇಲ್ಲಿ ಉಳಿಯಿತಂತೆ. ಉಳಿದ ಭಾಗಗಳು ಬೇರೆ ಬೇರೆ ತೀರ್ಥ ಸ್ಥಳಗಳಲ್ಲಿ - ಕೈಗಳು ತುಂಗಾನಾಥದಲ್ಲಿ, ಮುಖ ರುದ್ರನಾಥದಲ್ಲಿ, ಹೊಟ್ಟೆ ಮದಮಹೇಶ್ವರದಲ್ಲಿ, ಹಾಗೂ ತಲೆ ಮತ್ತು ಕೂದಲು ಕಪಾಲೇಶ್ವರದಲ್ಲಿ - ಉದ್ಭವಿಸಿದವಂತೆ. ಈ ಐದು ತೀರ್ಥ ಸ್ಥಳಗಳಿಗೆ ಪಂಚಕೇದಾರ ಎಂದು ಪೂಜಿಸುತ್ತಾರೆ. ಇವುಗಳಲ್ಲಿ ಕೇದಾರೇಶ್ವರ ಬೇರೆ ತೀರ್ಥಗಳಿಗಿಂತ ಶ್ರೇಷ್ಠ.

ಕೇದಾರನಾಥ ದೇವಾಲಯದಲ್ಲಿ ಪೂಜಿಸಲ್ಪಡುವ ಜ್ಯೋತಿರ್ಲಿಂಗವು ಸುಮಾರು ಐದು ಅಡಿ ಅಗಲ ನಾಲ್ಕು ಅಡಿ ಉದ್ದವಿರುವ ಈ ವೃಷಭದ ಬೆನ್ನು ಭಾಗ. ಮೂಲ ದೇವಾಲಯ ೧೨ ಜ್ಯೋತಿರ್ಲಿಂಗಗಳಿಂದೊಡಗೂಡಿ ಪ್ರಾಚೀನ ಕಾಲದಲ್ಲಿ ಪಾಂಡವರಿಂದ ಕಟ್ಟಲ್ಪಟ್ಟಿತ್ತಂತೆ. ನಂತರ ಆದಿಶಂಕರಾಚಾರ್ಯರು ಆ ದೇವಾಲಯವನ್ನು ನವೀಕೃತಗೊಳಿಸಿ ಈಗಿರುವ ದೇವಾಲಯವನ್ನು ನಿರ್ಮಿಸಿದರಂತೆ.

ಪುರಾಣಗಳು ಏನೇ ಆಗಿರಲಿ, ಕೇದಾರೇಶ್ವರ ದೇವಾಲಯವು ಮನಮೋಹಕ ವಾತಾವರಣದಲ್ಲಿದೆ. ಹಿನ್ನೆಲೆಯಲ್ಲಿ ವರ್ಷವಿಡೀ ಮಂಜು ತುಂಬಿದ ಕೇದಾರೇಶ್ವರ ಪರ್ವತಗಳು ದೇವಾಲಯವನ್ನು ಕಾಯ್ದು ನಿಂತಿವೆ. ಪಕ್ಕದಲ್ಲಿಯೇ ಮಂದಾಕಿನಿ ನದಿಯ ಉಗಮ ಸ್ಥಾನ. ದೂರದೂರದವರೆಗೂ ಕಾಣುವ ಈ ದೃಶ್ಯ ಬಲು ರಮ್ಯವಾಗಿದೆ.

ದೇವಾಲಯವು ಕ್ರಮಬದ್ಧವಾಗಿದೆ - ಮುಂದಿನ ಅಂಗಳ, ಒಳಗೆ ಒಂದು ಸಭಾ ಮಂಟಪ, ಅದರ ಹಿಂದೆ ಗರ್ಭಗುಡಿ ಹಾಗೂ ಗರ್ಭಗುಡಿಯ ಮೇಲೆ ಗೋಪುರ. ದೇವಾಲಯದ ಮಹಾದ್ವಾರವನ್ನು ನೋಡುತ್ತ ನಂದೀಶ ಕುಳಿತಿದ್ದಾನೆ. ಒಳಗೆ ಚತುಷ್ಕೋನದಲ್ಲಿ ಗೂಡುಗಳಿವೆ. ಈ ಗೂಡುಗಳಲ್ಲಿ ಕೇದಾರಗೌರಿ, ಕೃಷ್ಣ, ಪಂಚ ಪಾಂಡವರು, ದ್ರೌಪದಿ, ಕಾರ್ತಿಕೇಯ, ಲಕ್ಷ್ಮಿ, ಹಾಗೂ ನಾರದರ ಸುಂದರ ಪ್ರತಿಮೆಗಳಿವೆ. ಒಂದು ಸಣ್ಣ ಕಮಾನು ಹಾಯ್ದು ಒಂದು ನಾಲ್ಕು ಮೆಟ್ಟಲು ಇಳಿದರೆ, ಗರ್ಭಗುಡಿಯಲ್ಲಿರುತ್ತೇವೆ. ಈ ಗರ್ಭಗುಡಿಯು ಸುಮಾರು ಹದಿನೈದು ಅಡಿ ಸಮಚತುಷ್ಕೋನವಾಗಿದೆ. ಇದು ಕರಗುವ ಮಂಜಿನಿಂದ ಒದ್ದೆಯಾಗಿ ತಣ್ಣಗಿರುತ್ತದೆ. ಗರ್ಭಗುಡಿಯ ಮಧ್ಯದಲ್ಲಿ ವೃಷಭದ ಬೆನ್ನಿನ ಜ್ಯೋತಿರ್ಲಿಂಗವಿದೆ. ಇದರ ಸುತ್ತಲೂ ನಡೆಯಬಹುದು.

ದೇವಾಲಯದ ಈಶಾನ್ಯ ಮೂಲೆಯಲ್ಲಿ ಈಶಾನ್ಯೇಶ್ವರ ಮಹಾದೇವನ ಗುಡಿಯಿದೆ, ದಕ್ಷಿಣ ಭಾಗದಲ್ಲಿ ಭೈರವನಾಥ ಗುಡಿ ಇದೆ. ಭೈರವನು ಚಳಿಗಾಲದಲ್ಲಿ (ಗುಡಿ ಮುಚ್ಚಿದ್ದಾಗ) ಗುಡಿಯನ್ನು ಕಾಯುತ್ತಾನಂತೆ. ಮೊದಲೇ ಹೇಳಿದಂತೆ, ಚಳಿಗಾಲದಲ್ಲಿ ಮಂಜುಗಡ್ಡೆಗಳು ಕೇದಾರನಾಥ ಊರನ್ನು ಆವರಿಸಿ, ಜನಸಂಚಾರ ಅಗಮ್ಯವಾಗಿದ್ದು, ಮಂದಿರವು ಮುಚ್ಚಿರುತ್ತದೆ. ಆ ಕಾಲದಲ್ಲಿ ದೇವರ ಪ್ರತಿಮೆಯನ್ನು ಊಖಿಮಠಕ್ಕೆ ಒಯ್ಯುತ್ತಾರೆ. ಈ ಊಖಿಮಠವು ಸ್ವಲ್ಪ ತಗ್ಗಿನಲ್ಲಿದ್ದು (ಸಮುದ್ರಮಟ್ಟಕ್ಕಿಂತ ಸುಮಾರು ಸುಮಾರು ೪೦೦೦ ಅಡಿ ಎತ್ತರ) ಚಳಿಗಾಲದಲ್ಲಿ ಜನಸಂಚಾರ ಸಾಧ್ಯವಾಗಿರುತ್ತದೆ. ಬೇಸಿಗೆಯಲ್ಲಿ ಕೇದಾರೇಶ್ವರ ತೆರೆದಮೇಲೆ, ಪ್ರತಿಮೆಯನ್ನು ಕೇದಾರದಲ್ಲಿ ಪುನಃ ಸ್ಥಾಪಿಸುತ್ತಾರೆ.

ಶಂಕರಾಚಾರ್ಯರು ಈ ದೇವಾಲಯದ ಸ್ಥಳದಲ್ಲಿ, ಮಂದಾಕಿನಿ ತೀರದಲ್ಲಿ ಮಹಾಸಮಾಧಿ ತೆಗೆದುಕೊಂಡರಂತೆ. ಪ್ರಮುಖ ದೇವಾಲಯದ ಹಿಂದೆ ಒಂದು ಸಣ್ಣ ಗುಡಿಯಲ್ಲಿ ಆಚಾರ್ಯರ ಪ್ರತಿಮೆ ಹಾಗು ಅವರು ಪೂಜಿಸುತ್ತಿದ್ದ ಶಿವಲಿಂಗ ಇವೆ. ಒಂದು ಅಮೃತ ಶಿಲೆಯ ಗೋಡೆ - ಆಚಾರ್ಯರ ಸಾನಿಧ್ಯದ ಸಂಕೇತವಾಗಿ ಕೈಯಲ್ಲಿ ಸನ್ಯಾಸಿಯ ದಂಡ ಹಿಡಿದು - ಎರಡೂ ದೇಗುಲಗಳನ್ನು ಬೇರ್ಪಡಿಸುತ್ತದೆ.

ನಾನು ಅಲ್ಲೇ ಇದ್ದ ಒಂದು ಅಂಗಡಿಯಲ್ಲಿ ಪೂಜೆ ಸಾಮಗ್ರಿಗಳನ್ನು ಕೊಂಡೆ. ಅಕ್ಕಿ, ಬೇಳೆ, ಭತ್ತಾಸು, ಎರಡು ಬಟ್ಟೆಗಳು ಹಾಗೂ ಯಜ್ಞೋಪವೀತ (ಜನಿವಾರ)ಗಳಿದ್ದ ಒಂದು ತಟ್ಟೆ. ಚಪ್ಪಲಿ ಹಾಗೂ ನನ್ನ ದಂಡವನ್ನು ಅಲ್ಲೇ ಬಿಟ್ಟು, ಕಾಲು ತೊಳೆದು, ದೇವಾಲಯಕ್ಕೆ ಹೋದೆ. ಒಂದು ಸಣ್ಣ ಸಾಲಿತ್ತು. ಆದರೂ ಒಡನೆಯೇ ದೇವಾಲಯದೊಳಕ್ಕೆ ಹೋದೆ. ಪಾಂಡವರ ಮತ್ತಿತರ ಪ್ರತಿಮೆಗಳನ್ನು ಕಂಡು, ಗ್ರಹಿಸಿ, ಮೆಚ್ಚಿ ಕ್ರಮವಾಗಿ ಗರ್ಭಗುಡಿಗೆ ಬಂದೆ. ಮಂಜುಕರಗಿದ ನೀರಿನಿಂದ ಜ್ಯೋತಿರ್ಲಿಂಗಕ್ಕೆ ಪ್ರಾಕೃತಿಕ ಅಭಿಷೇಕವಾಗುತ್ತಿತ್ತು.

ಉತ್ತರ ಭಾರತದಲ್ಲಿ ಶಿವನ ದೇಗುಲಗಳಲ್ಲಿ ಪುರೋಹಿತರಿರುವುದಿಲ್ಲ. ಭಕ್ತರು ತಾವೇ ಪೂಜೆ ಮಾಡುತ್ತಾರೆ. ಜ್ಯೋತಿರ್ಲಿಂಗದ ಸುತ್ತ ಸುಮಾರು ೬ ಅಡಿ ಸಮಚತುಷ್ಕೋನದ ಒಂದು ಕಟಕಟೆ ಇದೆ. ಇದರ ಸುತ್ತ ಹೋಗಿ ಭಕ್ತರು ತಮ್ಮ ಪೂಜೆ ಸಾಮಗ್ರಿಗಳನ್ನು ಭಗವಂತನಿಗೆ ಅರ್ಪಿಸುತ್ತಾರೆ. ದೇವರ ಸುತ್ತ ಹೋಗಿ ಭಗವಂತನಿಗೆ ನಮಸ್ಕರಿಸಿ, ಬದಿಯ ಬಾಗಿಲಿನಿಂದ ಆಚೆಹೋಗುತ್ತಾರೆ. ನಾನೂ ಖುದ್ದಾಗಿ ಅಭಿಷೇಕ ಮಾಡಿ, ಪ್ರಾರ್ಥನೆ ಮುಗಿಸಿದ ನಂತರ ಈ ಬದಿಯ ಬಾಗಿಲಿನಿಂದ ದೂಡಲ್ಪಟ್ಟೆ.

ಆಚೆ ಬಂದ ನಂತರ ಒಬ್ಬ ಕನ್ನಡಿಗ ಕುಟುಂಬದವರು ಸಿಕ್ಕರು. ಅವರೊಡನೆ ಸ್ವಲ್ಪ ಮಾತನಾಡಿ ಮುನ್ನಡೆದೆ. ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು (ಅಲ್ಲಿದ್ದ ಒಬ್ಬ ಛಾಯಾಚಿತ್ರಗಾರನ ಸಹಾಯದಿಂದ ನಾನೂ ಫೋಟೋದಲ್ಲಿ ಬರುವ ಹಾಗಾಯಿತು), ನನ್ನ ಚಪ್ಪಲಿ ಹಾಗೂ ಬಡಿಗೆಗಳನ್ನು ಹಿಂದೆ ಪಡೆದು ಪೂಜಾಸಾಮಾಗ್ರಿಗಳ ವೆಚ್ಚ ಕೊಡಲು ಅಂಗಡಿಗೆ ಹೋದೆ. ನಾನು ನೂರು ರೂಪಾಯಿಗಳನ್ನು ಕೊಟ್ಟರೆ, ಅಂಗಡಿಯಾತ ನನಗೆ ಐದುನೂರು ರುಪಾಯಿಗಳ ಪುಡಿಗಾಸು (ಚೇಂಜ್) ಕೊಟ್ಟನು. ನಾನು ನೂರು ರೂಪಾಯಿ ಕೊಟ್ಟೆನೆಂದರೂ ಇಲ್ಲವೆಂದು ಒತ್ತಾಯ ಪಡಿಸಿದನು. ಒಂದು ಘಳಿಗೆ ಯೋಚಿಸಿ ಅವನಿಗೆ ಆ ಹಣ ಹಿಂತಿರುಗಿಸಿ ನನ್ನ ಸರಿಯಾದ ಪುಡಿಗಾಸು ಪಡೆದೆ. ನಂತರ ಮತ್ತೊಂದು ಅಂಗಡಿಗೆ ಹೋಗಿ ಕೇದಾರದ ನೆನಪಿಗಾಗಿ ಒಂದೆರಡು ಫೋಟೋಗಳನ್ನು ಕೊಂಡೆ.

ಇಷ್ಟು ಹೊತ್ತಿಗೆ ನಮ್ಮ ಗುಂಪಿನವರು ಬರಹತ್ತಿದ್ದರು. ಮಾಧವೇಶ್ವರರು, ಕೋದಂಡರಾಮರು ಹಾಗೂ ರಾಮು ಸಿಕ್ಕಿದ್ದರು. ರಾಮುಗೆ 'ಮಂದಾಕಿನಿ ತೀರದಲ್ಲಿ ಸಿಗುವ' ಎಂದು ಹೇಳಿದ್ದೆ. ಈಗ ಊರು ಬಿಟ್ಟು ಮಂದಾಕಿನಿಯ ಸೇತುವೆಯ ಬಳಿ ಕಾಯುತ್ತ ಕುಳಿತೆ. ಸ್ವಲ್ಪ ಕಾಲದಲ್ಲಿ ರಾಮು ಹಿಂತಿರುಗಿದ. ಒಂದೈದು ನಿಮಿಷ ಕೂತಿದ್ದು ಇಬ್ಬರೂ ಗೌರೀಕುಂಡಕ್ಕೆ ಹಿಂತಿರುಗಲು ದೂರದ ಪಯಣಕ್ಕೆ ಸಿದ್ಧರಾದೆವು - ಈ ಬಾರಿ ಕಾಲ್ನಡಿಗೆಯಲ್ಲಿ. ರಾಮುವಿನ ಜೊತೆಯಿದ್ದರಿಂದ ಈ ಬಾರಿ ಸಫಲನಾಗುವೆ ಎಂಬ ಭರವಸೆ ಇತ್ತು. ಜೊತೆಗೆ ಇಳಿತ ಬೇರೆ, ಹತ್ತುವುದಿರಲಿಲ್ಲ!

ಇಷ್ಟು ಹೊತ್ತಿಗೆ ಸುಮಾರು ೧೨:೦೦ ಮಧ್ಯಾಹ್ನವಾಗಿದ್ದಿರಬಹುದು. ರಾಮು ಮತ್ತು ನಾನು ಇಬ್ಬರೂ ಕೇದಾರದಲ್ಲಿ ಒಂದು ಫೋಟೋ ತೆಗೆಸಿಕೊಂಡೆವು. ಹಿಂತಿರುಗುತ್ತಾ ಇನ್ನು ಹತ್ತುತ್ತಿದ್ದ ನಮ್ಮ ಗುಂಪಿನವರನ್ನು ಕಂಡೆವು. ಅವರುಗಳು ತಮ್ಮ ತಮ್ಮ ತಂಡದ ಇನ್ನೂ ಬಾರದ ಜನರು ನಮಗೆ ದಾರಿಯಲ್ಲಿ ಸಿಕ್ಕರೆ ಅವರ ಸಮಾಚಾರಗಳನ್ನು ತಿಳಿಸಲು ಹೇಳಿದರು. ನಾವು ಇನ್ನು ಬರಬೇಕಿದ್ದ ಎಲ್ಲರನ್ನೂ ದಾರಿಯಲ್ಲಿ ಕಂಡೆವು. ಸುಮಾರು ೪ ಕಿಲೋಮೀಟರ್ ಹೋದ ನಂತರ ದೇಶಪಾಂಡೆ ತಂಡದವರು ಸಿಕ್ಕರು. ಅವರು ನಡೆದೇ ಬರುತ್ತಿದ್ದರು. ಇವರೊಂದಿಗೆ ಕೊಂಚ ಮಾತನಾಡಿ ಪುನಃ ಹೊರಟೆವು. ನಂತರ ತಿಳಿಯಿತು ಅವರು ಸುಮಾರು ೩:೦೦ ಘಂಟೆಗೆ ತಲುಪಿದರೆಂದು - ರಾತ್ರಿ ಸುಮಾರು ೮:೦೦ ಘಂಟೆ (ಹಾಗೂ ಹರಿಯಪ್ಪರಿಗೆ ಚಿಂತೆ) ಯಾಗಿತ್ತು ಅವರು ಬರುವ ಹೊತ್ತಿಗೆ.

ನಡೆದು ಬರಲು ಆ ಹಾದಿಯಲ್ಲಿ ಹಲವಾರು ಸೀಳುದಾರಿಗಳಿವೆ (ಶಾರ್ಟ್ ಕಟ್). ಇವುಗಳಲ್ಲಿ ಹೋದರೆ ಬಹುಶಃ ೧೪ ಕಿಲೋಮೀಟರ್‌ಗಳ ಅಂತರ ಸ್ವಲ್ಪ ಕಡಿಮೆಯಾದೀತಾದರೂ ಸುಸ್ತು ಹೆಚ್ಚಾಗುತ್ತದೆ. ನಾವು ನಡೆಯುತ್ತಾ ಬಂದೆವು. ಹೋಗುತ್ತಾ ಸಿಕ್ಕ ದೃಶ್ಯಗಳ ಸರಣಿಯ ವಿಲೋಮ ಸರಣಿ. ಮೊದಲು ಮಂಜು ಪ್ರದೇಶ, ನಂತರ ಜಲಪಾತಗಳು, ಕೊನೆಗೆ ಭೋರ್ಗರೆಯುವ ಮಂದಾಕಿನಿ. ಅಲ್ಲಲ್ಲೆ ನಿಂತು ಫೋಟೋ ತೆಗೆದುಕೊಂಡೆವು. ಉದ್ದಕ್ಕೂ ಸುಂದರವಾದ ದೃಶ್ಯಗಳು - ಹೋಗುವ ಸಮಯ ನೋಡಲಾಗದ ದೃಶ್ಯಗಳು. ಬೆಳಕು ಸಹ ಹೆಚ್ಚಿದ್ದರಿಂದ ಇನ್ನೂ ಹೆಚ್ಚು ಗುಣಗ್ರಹಿಸಲು ಸಾಧ್ಯವಾಯಿತು.

ಬರುತ್ತಾ ದಾರಿಯಲ್ಲಿ ಒಂದೆರಡು ಕಡೆ ಚಹ ಕುಡಿಯಲು ನಿಂತಿದ್ದೆವು. ಆದರೆ ಸುಮಾರು ಮೂರರಲ್ಲಿ ಎರಡು ಭಾಗ ಬರುವಷ್ಟರಲ್ಲಿ ಹೊಟ್ಟೆ ಹಸಿವಾಗಿತ್ತು. ಈಗ ಗಲೀಜು, ಇತ್ಯಾದಿ ಏನೂ ತಿಳಿಯಲಾಗದಾಗಿತ್ತು. ಬೆಳಗ್ಗಿನಿಂದ (ಸರಿಯಾಗಿ) ಏನನ್ನೂ ತಿಂದಿರಲಿಲ್ಲ. ಒಂದು ಚಹಾದ ಅಂಗಡಿ ಹೊಕ್ಕೆವು. ರೋಟೀ ಕೇಳೀದರೆ ಇರಲಿಲ್ಲ. ಪರಾಠ ಇತ್ತು. ನನಗೇನೂ ವ್ಯತ್ಯಾಸ ಕಾಣಲಿಲ್ಲ. ಪರಾಠಾ ತೆಗೆದುಕೊಂಡೆವು; ತಿಂದು, ಚಹಾ ಕುಡಿದ ನಂತರ ಉದ್ಬುದ್ಧರಾದೆವು. ಮತ್ತೆ ಹೊರಟು ನಡೆಯಲಾರಂಭಿಸಿದೆವು. ಕೊನೆಯ ಸುಮಾರು ಎರಡು ಕಿಲೋಮೀಟರ್‌ಗಳು ಬಹಳ ಸುಸ್ತು ಮಾಡಿಸಿದವು.

ರಾಮು ಬಂದ ತಕ್ಷಣ ಕೆಲಸ ಶುರುಮಾಡಬೇಕಿತ್ತು, ಪಾಪ. ನಾನು ಅಡಿಗೆಮನೆಯಲ್ಲಿ ಕೂತು ನೆನ್ನೆ ಆರಿದ ದೀಪದಿಂದ ಅರ್ಧಕ್ಕೆ ನಿಂತ ಸ್ಮರಣೆಗಳನ್ನು (ಡೈರಿ) ಬರೆಯಹತ್ತಿದೆ. ಸಂಜೆ ಸುಮಾರು ೬:೧೫ಕ್ಕೆ ಈ ಕೆಲಸವೂ ಮುಗಿಸಿದೆ. ಕೋಣೆಗೆ ಹೋಗಿ ನೋಡಿದರೆ ಇನ್ನೂ ನಮ್ಮ ತಂಡದವರು ಹಿಂತಿರುಗಿರಲಿಲ್ಲ. ಅವರುಗಳು ಬಂದ ಮೇಲೆ ಇನ್ನೊಮ್ಮೆ ಗೌರೀಕುಂಡ ಊರಿಗೆ ಹೆಸರು ಕೊಡುವ ನಿಜವಾದ ಗೌರೀ ಕುಂಡವನ್ನು ಹಾಗು ತಪ್ತ ಕುಂಡವನ್ನೂ ಇನ್ನೊಮ್ಮೆ ನೋಡಿ ಬಂದೆವು. ನಂತರ ಎಲ್ಲರೂ ಸೇರಿ ನಮ್ಮ ನಮ್ಮ ಅನುಭವಗಳನ್ನು ಚರ್ಚಿಸತೊಡಗಿದೆವು. ಇಷ್ಟು ಹೊತ್ತಿಗೆ ಸುಮಾರು ೭:೦೦ ಘಂಟೆಯಾಗಿತ್ತು. ಎಲ್ಲರೂ ಊಟ ಮಾಡಿದೆವು - ಬಲು ಸಾಧಾರಣ ಅಡಿಗೆ ಬರೇ ಅನ್ನ ಸಾರು - ಆದರೆ ಅದೇ ಅಂದಿಗೆ ಅಮೃತಾನ್ನವಾಗಿತ್ತು. ಎಲ್ಲರೂ ತಿಂದು ಬೇಗನೆ ಮಲಗಿದೆವು. ರಾತ್ರಿ ಕಳೆದಿದ್ದೇ ತಿಳಿಯದು!


ಭಾಗ ೬: ಗೌರೀಕುಂಡದಿಂದ ಬದರೀನಾಥಕ್ಕೆ.

೬ ಮೇ ೧೯೯೮

ಮಾರನೆ ದಿನ ಎದ್ದು ಬೇಗನೆ ಗೌರೀಕುಂಡದಿಂದ ಹೊರಟೆವು. ಇಲ್ಲಿನ ನಿರಂತರ ಟ್ರಾಫಿಕ್ ಜಾಮ್ ಒಳಗೆ ಮತ್ತೆ ಸಿಕ್ಕಿ ಹಾಕಿಕೊಂಡರೂ, ಕೊನೆಗೊಮ್ಮೆ (ಒಂದು ಅರ್ಧ ಘಂಟೆಯ ತಡದ ನಂತರ) ಅದರಿಂದ ಬಿಡಿಸಿಕೊಂಡು ಹೊರಟಿದ್ದಾಯಿತು. ಗೌರೀಕುಂಡದಿಂದ ಬದರೀನಾಥದ ಅಂತರ ಸುಮಾರು ೨೩೩ ಕಿಲೋಮೀಟರ್. ಮತ್ತೆ ರುದ್ರಪ್ರಯಾಗವನ್ನು ಮುಟ್ಟಿ ಅಲ್ಲಿನಿಂದ ನಮ್ಮ ಹಳೆಯ ದೋಸ್ತಾದ ಹರಿದ್ವಾರ-ಬದರೀನಾಥ ಹೆದ್ದಾರಿಯನ್ನು ಹಿಡಿಯಬೇಕಿತ್ತು. ಗೌರೀಕುಂಡವು ಸಮುದ್ರ ಮಟ್ಟಕಿಂತ ಸುಮಾರು ೬೫೦೦ ಅಡಿ ಎತ್ತರದಲ್ಲಿದೆ. ರುದ್ರಪ್ರಯಾಗ ಸುಮಾರು ೨೦೦೦ ಅಡಿ ಎತ್ತರ. ಸರಿ, ಗುಡ್ಡ ಪ್ರದೇಶವನ್ನು ಇಳಿದು ವೇಗವಾಗಿ ಹೋದೆವು. ದಾರಿಯಲ್ಲಿ ತಿಂಡಿ ತಿನ್ನಲು (ಅಡಿಗೆಯಾತ ಮಾಡಿತರುತ್ತಿದ್ದ) ಒಂದು ನಿಲುವು ಹಾಗು ಪ್ರಸಂಗರಹಿತ ಪ್ರಯಾಣದ ನಂತರ ರುದ್ರಪ್ರಯಾಗವನ್ನು ಸೇರಿದೆವು.

ಮೋದಲೇ ಹೇಳಿದಂತೆ ರುದ್ರಪ್ರಯಾಗ ಅಲಕ್‌ನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮ ಸ್ಥಾನ. ಗೌರೀಕುಂಡದಿಂದ ಮಂದಾಕಿನಿಯನ್ನಾಲಿಸಿ ಬಂದಿದ್ದೆವು, ಈಗ ಹರಿದ್ವಾರ-ಬದರೀನಾಥ ಹೆದ್ದಾರಿಗೆ ತಿರುಗಿ ಅಲಕ್‌ನಂದಾ ನದಿಯನ್ನಾಲಿಸಿ ಹೊರಟೆವು. ಇಂದಿನ ಕತೆಯೂ ಹಿಂದಿನ ಬಸ್ ಪ್ರಯಾಣದ ಕತೆಯಂತೆ ಉಕ್ಕಿ, ಚಿಮ್ಮಿ, ಹರಿದುಹೋಗುವ ಅಲಕ್‌ನಂದಾ ನದಿ, ಎಲ್ಲೆಡೆ ಗಗನಕ್ಕೇರಿದ ಬೃಹತ್ ಪರ್ವತಗಳು, ಹಾಗು ಮನಮಿಡಿಯುವ ಪ್ರಕೃತಿ ಸೌಂದರ್ಯದ ದೃಶ್ಯಗಳ ಕತೆಯಾಗಿತ್ತು.

ರಸ್ತೆಯುದ್ದಕ್ಕೂ ಭೂಕುಸಿತ ಹಾಗು ನೆಲಪಾತಗಳಾಗಿದ್ದ ಸೂಚನೆಗಳು ಕಂಡು ಬಂದವು. ರಾಕ್ಷಸ ಪರ್ವತಗಳ ಇಡೀ ಖಂಡಗಳೇ ಕುಸಿದು ಹೋಗಿದ್ದವು. ಅದೃಷ್ಟವಶಾತ್ ಇವೆಲ್ಲ ರಸ್ತೆಯಿಂದ ಹಿಂದೂಡಲ್ಪಟ್ಟಿದ್ದರಿಂದ ರಸ್ತೆಯು ಸಂಚಾರ ಯೋಗ್ಯವಾಗಿತ್ತು. ರಸ್ತೆಯು ಹೆಚ್ಚಾಗಿ ಬೆಟ್ಟಗಳೊಳಗಿಂದ ನದಿಯನ್ನಾಲಿಸಿ ಹೋಗುತ್ತಿದ್ದರೂ ಎಲ್ಲೆಡೆ ಈ ಸೌಲಭ್ಯವಿರಲಿಲ್ಲ. ಹಲವಾರು ಕಡೆ ಅಪಾರ ಪರ್ವತಗಳನ್ನು ಒಂದು ಕಡೆಯಿಂದ ಹತ್ತಿ ಹೋಗಿ ಇನ್ನೊಂದು ಕಡೆಯಿಂದ ಇಳಿಯಬೇಕಾಗಿತ್ತು. ಎಂಥವರಿಗೂ ಆತಂಕ ತರಿಸುವ ಸಾಹಸ ಅದು. ಪ್ರಪಂಚದ ಕೊನೆಗೆ ಹೋದ ಹಾಗಿತ್ತು - ಮೈಲಿಗಟ್ಟಲೆ ಜನಸಂಚಾರವಿಲ್ಲ, ಬೃಹತ್ ಪರ್ವತಗಳ ಹಾಗೂ ರೌದ್ರ ನದಿಯ ಮಧ್ಯೆ ಸಿಕ್ಕ ಅತೀ ಸಣ್ಣದಾದ ಒಂದು ರಸ್ತೆ, ಆ ರಸ್ತೆಯ ಮೇಲೆ ಒಂದು ಪುಟ್ಟ ಬಸ್. ಬಸ್ ಒಳಾಗಿನ ಜನ ನಾವು. ಲೋಕದ ಅಪಾರತೆ ತಿಳಿಯಬೇಕಾದರೆ, ಅನುಭವಿಸಬೇಕಾದರೆ ಅಲ್ಲೊಮ್ಮೆ ಹೋಗಬೆಕು.

ಬದರೀನಾಥವು ಭಾರತ ಮತ್ತು ಚೈನಾ ದೇಶಗಳ ಗಡಿಪ್ರದೇಶದಲ್ಲಿರುವುದರಿಂದ ಹಾಗು ಜೋಶೀಮಠದಿಂದ ಬದರೀನಾಥದ ರಸ್ತೆ ಅತೀ ಚಿಕ್ಕದಾದ್ದರಿಂದ ಇಲ್ಲಿಯ ವಾಹನಗಳ ಓಡಾಟದ ನಿಯಂತ್ರಣ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿ.ಎಸ್.ಎಫ್) ಕೈಯಲ್ಲಿ ಕೊಡಲಾಗಿದೆ. ಬಿ.ಎಸ್.ಎಫ್ ಒಂದು ಗೇಟ್ ಪದ್ಧತಿಯ ವ್ಯವಸ್ಥೆ ಮಾಡಿದ್ದಾರೆ. ದಿನಕ್ಕೆ ಎರಡು ಬಾರಿ ಸಣ್ಣ ಸಮಯ-ಕಿಟಕಿಯಲ್ಲಿ ಕೆಳಗಿನಿಂದ ಮೇಲಕ್ಕೆ ವಾಹನಗಳನ್ನು ಬಿಡುತ್ತಾರೆ. ವಾಹನಗಳು ಹೋದ ನಂತರ ಗೇಟ್ ಮುಚ್ಚುತ್ತಾರೆ. ಈ ಸಮಯದಲ್ಲಿ ಮೇಲಿನ ಗೇಟ್‌ಸಹ ಮುಚ್ಚಲಾಗಿರುತ್ತದೆ, ರಸ್ತೆಯ ಮೇಲೆ ಕೇವಲ ಕೆಳಗಿನಿಂದ ಮೇಲೆ ಹೋಗುವ ವಾಹನಗಳು ಓಡುತ್ತವೆ. ಎಲ್ಲ ವಾಹನಗಳು ಮೇಲೆ ಬದರೀನಾಥವನ್ನು ತಲುಪಿದ ನಂತರ ಮೇಲಿನ ಗೇಟ್ ತೆಗೆಯುತ್ತಾರೆ. ಆಗ ವಾಹನಗಳು ಮೇಲಿನಿಂದ ಕೆಳಕ್ಕೆ ಮಾತ್ರ ಬರುತ್ತವೆ. ಎದುರು ಬರುವ ವಾಹನಗಳೆಲ್ಲ ಕೆಳಗೇ ನಿಂತಿರಬೇಕು. ಒಂದು ಗೇಟ್ ತಪ್ಪಿದರೆ ಮುಂದಿನ ಗೇಟ್‌ಗೆ ಕಾಯಬೇಕು. ಮೇಲೆ ಹಾಗು ಕೆಳಗೆ ಎರಡೂ ಕಡೆಗಳಿಂದ ದಿನಕ್ಕೆ ಎರಡು ಬಾರಿ ಗೇಟ್ ತೆಗೆಯುತ್ತಾರೆ.

ನಮ್ಮ ಗುರಿ ಜೋಶೀಮಠವನ್ನು (ಜ್ಯೋತಿರ್ಮಠ) ಕೊನೆಯ ಗೇಟ್ ಮುಚ್ಚುವ ಮುನ್ನ ಸೇರುವುದಾಗಿತ್ತು. ಮಧ್ಯಾಹ್ನ ಊಟಕ್ಕೊಂದು ಕಡಿಮೆ ಸಮಯದ ನಿಲುವಿನ ನಂತರ ಮತ್ತೆ ಸಾಗಿದೆವು. ಗೇಟ್ ತೆರೆಯುವ ಸ್ವಲ್ಪ ಮುಂಚೆ ಜೋಶೀಮಠವನ್ನು ಸೇರಿ ಕಾಯ್ದು ಕುಳಿತೆವು. ನಾಲ್ಕು ಘಂಟೆಯ ಗೇಟ್ ಸಿಕ್ಕಿತು. ಇನ್ನು ಬದರೀನಾಥಕ್ಕೆ ಸುಮಾರು ೪೫ ಕಿಲೋಮೀಟರ್‌ಗಳಿದ್ದವು. ನಾವು ಮುಂದುವರಿದಂತೆ ರಸ್ತೆ ಇನ್ನು ಹೆಚ್ಚು ಅಪಾಯಕಾರಿಯಾಗಿ ಕಾಣಹತ್ತಿತು. ದೊಡ್ಡ ದೊಡ್ಡ ಮಂಜುಗಡ್ಡೆಗಳು ರಸ್ತೆಯ ಮೇಲೇ ಬಿದ್ದಿದ್ದವು. ಸಣ್ಣ ತೊರೆಗಳು ರಸ್ತೆಯ ಮೇಲೇ ಹರಿದು ಹೋಗುತ್ತಿದ್ದವು. ಅಲ್ಲಲ್ಲೆ ಅಲಕ್‌ನಂದಾ ನದಿಯು ಪೂರ್ಣ ಹೆಪ್ಪುಗಟ್ಟಿತ್ತು. ಮೇಲೆ ಮಂಜುಗಡ್ಡೆಗಳಿಂದ ಮುಚ್ಚಿಹೋಗಿದ್ದರೂ, ಅಲ್ಲಲ್ಲೆ ಒಡೆದು/ಕರಗಿ ಹೋದ ಮಂಜಿನ ಮಧ್ಯೆ ನೀರು ಹರಿಯುತ್ತಿರುವುದು ಕಾಣಿಸುತ್ತಿತ್ತು. ನೋಟಗಳು ಒಟ್ಟಿಗೆ ಹೃದಯಸ್ಪರ್ಶಿ ಹಾಗು ಭಯಂಕರವಾಗಿದ್ದವು. ಕೊನೆಗೆ ಕುಂದುತ್ತಿದ್ದ ದಿನದ ಬೆಳಕಲ್ಲಿ ಬದರೀನಾಥ ಊರನ್ನು ತಲುಪಿದೆವು. ವಿಳಂಬವಿಲ್ಲದೆ, ಹರಿಯಪ್ಪನವರು ತಂಗುವ ಜಾಗ ಏರ್ಪಾಡು ಮಾಡಲು ಹೊರಟುಹೋದರು.

ಹರಿಯಪ್ಪ ಹೋಗಿದ್ದಾಗ ನಾವು ಒಂದಿಷ್ಟು ಮಂದಿ ಚಹ ಕುಡಿಯಲು ಅಲ್ಲೇ ಇದ್ದ ಒಂದು ಅಂಗಡಿ ಹೊಕ್ಕೆವು. ಚಹ ಕುಡಿದು ಆಚೆ ಬಂದು ಚಳಿ ಹಾಗು ಮಂಜುಗಡ್ಡೆಗಳಲ್ಲಿ ಆಡಿದೆವು. ಆಚೆ ಮೈಕೊರೆಯುವ ಚಳಿ. ೦ ಡಿಗ್ರೀಗಿಂತ ಕಡಿಮೆಯಿದ್ದಿರಬೇಕು. ನಾನೆಂದೂ (ಆ ಸಮಯದಲ್ಲಿ) ಅಂತಹ ಚಳಿ ಕಂಡಿರಲಿಲ್ಲ. ಶಾಲು, ಸ್ವೆಟರ್‌ರು ಏನು ಹೊದ್ದರೂ ಹೋಗದ ಚಳಿ. ಹರಿಯಪ್ಪ ನಿವಾಸ ತಯಾರು ಎನ್ನುವ ಸುದ್ದಿಯೊಂದಿಗೆ ಹಿಂತಿರುಗಿದಾಗ ಎಲ್ಲರೂ ಬಸ್ ಒಳಗೆ ಮತ್ತೆ ಕೂತು ತಂಗುವ ತಾಣಕ್ಕೆ ಹೋದೆವು.

ಆಂಧ್ರಪ್ರದೇಶ ಸರಕಾರದ ಶ್ರೀ ಶ್ರೀನಿವಾಸ ಆಲಯಂ ಛತ್ರದಲ್ಲಿ ನಮ್ಮ ವಿರಾಮದ ಏರ್ಪಾಡು ಮಾಡಲಾಗಿತ್ತು. ಈ ಸ್ಥಳ ಅಲಕ್‌ನಂದಾ ತೀರದಲ್ಲಿತ್ತು. ಬಾಗಿಲಾಚೆ ಸುಮಾರು ೨೦ ಅಡಿ ಎತ್ತರದ ಮಂಜುಗಡ್ಡೆಯ ಗೋಪುರಗಳು. ಹಿಂದೆಯೇ ಅಲಕ್‌ನಂದಾ ನದಿಯನ್ನು ದಾಟಲು ಒಂದು ನೇತಾಡುವ ಲೋಹದ ಹಗ್ಗದ ಸೇತುವೆ (ಮುಂದೆ ಇಂತಹ ಸೇತುವೆಗಳ ವರ್ಣನೆ ಬರಲಿದೆ). ಎಲ್ಲರಿಗೂ ಸೇರಿ ಒಂದೇ ದೊಡ್ಡ ಕೋಣೆ ಇತ್ತು. ಒಳಗಡೆ ಅಲಕ್‌ನಂದೆಯ ಝೇಂಕಾರ ಕೇಳಿಸುತ್ತಿತ್ತು. ಆದರೆ ಬಚ್ಚಲು ಮನೆಗಳೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಒಂದು, ಅವು ಕೋಣೆಯಿಂದ ಸುಮಾರು ದೂರದಲ್ಲಿದ್ದವು - ಆಚೆ ಚಳಿಯಲ್ಲಿ ನಡೆದು ಹೋಗಬೇಕಿತ್ತು. ಇನ್ನೊಂದು, ಅತ್ಯಂತ ತಂಡಿ. ನಲ್ಲಿ, ಬಚ್ಚಲು ಎಲ್ಲವೂ ಮಂಜುಗಟ್ಟಿ ಹೋಗಿದ್ದವು - ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ. ಚೆಲ್ಲಿದರೆ ಬಚ್ಚಲಲ್ಲಿ ಹೋಗುತ್ತಿರಲಿಲ್ಲ. ಪಾಯಖಾನೆಗಳಲ್ಲಿ ಇದರ ಪರಿಣಾಮವೇನೆಂದು ನಾಹೇಳಬೇಕಾಗಿಲ್ಲ.

ಮೈಕೊರೆಯುವ ಚಳಿಯೇ ಮತ್ತೊಂದು ಸಮಸ್ಯೆಯಾಗಿತ್ತು. ಅಲ್ಲಿ (ಅಮೇರಿಕಾದ ತರಹ) ಮನೆಯೊಳಗೆ ಬಿಸಿಮಾಡಲು ಹೀಟರ್‌ಗಳಿರುವುದಿಲ್ಲ. ಆಚೆಯ ಚಳಿಯೇ ಒಳಗಡೆಯೂ. ಚಳಿಯ ನೂತನತೆ ಸವೆದುಹೋದಮೇಲೆ ತಾಳಲಾರದಾಗಿತ್ತು. ನಾನು ಪ್ರವಾಸದಲ್ಲಿ ಇಲ್ಲಿಯವರೆಗೆ (ಕೇದಾರದಲ್ಲೂ) ಸ್ವೆಟರ್‌ಸಹ ಧರಿಸಿರಲಿಲ್ಲ. ಈಗ ಮೂರು ಶಾಲ್‌ಗಳನ್ನು ಹೊದ್ದು ಕೂತರೂ ಮೆಲ್ಲಗೆ ಬಂದು ಮೂಳೆಗಳನ್ನು 'ಝುಂ' ಎನ್ನಿಸುವ ಚಳಿ.

ಬದರೀನಾಥ ತೆರೆದು ಒಂದೆರಡು-ಮೂರು ದಿನಗಳಾಗಿದ್ದವಷ್ಟೆ. ಚಳಿಗಾಲದಲ್ಲಿ ಮಂಜುಗಡ್ಡೆಗಳಿಂದ ಬಿದ್ದು ಹೋದ ವಿದ್ಯುತ್ ತಂತಿಗಳು ಇನ್ನೂ ರಿಪೇರಿಯಾಗಿರಲಿಲ್ಲ. ಆದ್ದರಿಂದ ಊರಲ್ಲಿ ಇನ್ನೂ ವಿದ್ಯುತ್ ಇರಲಿಲ್ಲ. ದೀಪದ ಬೆಳಕಲ್ಲೇ ರಾತ್ರಿ ಕಳೆದೆವು. ಊಟವನ್ನು ಕಾಯ್ದು ಕುಳಿತರೆ ಅವಲಕ್ಕಿ ಮಾಡಿ ಬಡಿಸಿದರು. ಹೊಟ್ಟೆಯ ಕುಲುಮೆ ಓಡಿಸಿ ಬಿಸಿಮಾಡಿಕೊಳ್ಳೋಣವೆಂದರೆ ಹೊಟ್ಟೆ ಸಹ ತುಂಬಲಿಲ್ಲ - ಇನ್ನು ಕುಲುಮೆ ದೂರ. ಸಧ್ಯ, ಹರಿಯಪ್ಪ ಎಲ್ಲರಿಗು ರಜಾಯ್‌ಗಳ ವ್ಯವಸ್ಥೆ ಮಾಡಿದ್ದರು - ಮೇಲೆ ಹಣ ಕೊಡಬೇಕಾದರೂ ಎಲ್ಲರೂ ಎರಡೆರಡು ರಜಾಯ್‌ಗಳ ಬಾಡಿಗೆ ಕೊಟ್ಟರು - ಒಂದು ಹಾಸಲು, ಒಂದು ಹೊದೆಯಲು - ವಿಧಿಯೇಯಿರಲಿಲ್ಲ! ಚಳಿಯಲ್ಲಿ ಚಡಪಡಿಸಿಕೊಂಡು ಎಲ್ಲರೂ ಮಲಗಿದೆವು.


ಭಾಗ ೭: ಬದರೀನಾಥ.

೭ ಮೇ ೧೯೯೮

ರಾತ್ರಿ ನಿಧಾನವಾಗಿ ಕಣ್ಣು ಹತ್ತಿರಬೇಕು, ಮಾರನೆಯ ದಿನ ಮಾಮೂಲಿನಂತೆ ಎಲ್ಲರಿಗಿಂತ ಮೊದಲು ಏಳಲಾಗಲಿಲ್ಲ. ನಾನು ಎದ್ದಾಗ ಸುಮಾರು ಮಂದಿ ಆಗಲೇ ಎದ್ದಿದ್ದರು. ಬಚ್ಚಲುಮನೆಗಳು ಹೋಗಲಾಯಕ್ಕಾಗಿಲ್ಲವೆಂದು ಹೋಗಿಬಂದವರು ಹೇಳಿದರು. ನಾನು ಸ್ವಲ್ಪ ಹೊತ್ತು ಹಿಂದೆ ಮುಂದೆ ನೋಡಿದರೂ ನೆನ್ನೆ ಮೊದಲಿಗೆ ಬಚ್ಚಲುಮನೆಗಳನ್ನು ನೋಡಿದಾಗಲೇ ತಲೆಗೆ ಬಂದಿದ್ದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ.

ಅದರಂತೆ ಒಂದಿಷ್ಟು ಮೆಟ್ಟಲಿಳಿದು ಬಂಡೆಗಳನ್ನು ಹತ್ತಿ ಅಲಕ್‌ನಂದೆಯ ಬಳಿ ಹೋದೆ. ನೀರಿನ ಮೇಲಿದ್ದ ಅಲ್ಲೊಂದು ಬಂಡೆಯ ಮೇಲೆ ಕಾಲಿಟ್ಟು ಹಲ್ಲುಜ್ಜಲು ತೊಡಗಿದೆ. ರಭಸದಿಂದ ಹರಿಯುತ್ತಿದ್ದ ನದಿಯ ಒಂದು ಸಣ್ಣ ಅಲೆ ನನ್ನ ಕಾಲಿಗೆ ಸಿಡಿಯಿತು. ಬಹಳ ಚಳಿಯಾದಂತಾಯಿತು ಆದರೆ ನಾನದಕ್ಕಷ್ಟು ಗಮನ ಕೊಡಲಿಲ್ಲ. ನೀರಿನಿಂದ ಆಚೆ ಬಂದ ಮೇಲೆ ಚಪ್ಪಲಿಗೆ ಕಾಲುಹಾಕಲು ನೋಡುತ್ತೇನೆ, ಕಾಲಿಗೆ ಚಲನವಲನವೇ ಇಲ್ಲದಂತಾಗಿದೆ. ಹಾರಿದ ನೀರು ಕಾಲನ್ನು ಜಡಗಟ್ಟಿಸಿ ಬಿಟ್ಟಿತ್ತು. ಅದೇ ಕಾರಣದಿಂದ ನನಗೆ ಮುಂಚೆ ಕೊರೆಯುವ ನೀರು ಹಾರಿದ್ದ ಸಂವೇದನೆಯೂ ಇರಲಿಲ್ಲ.

ಸರಿ ಈ ಕೆಲಸಗಳನ್ನು ಮುಗಿಸಿಕೊಂಡು, ಸ್ನಾನ ಮಾಡಲು ಹೊರಟೆ. ಬದರೀನಾಥದಲ್ಲಿಯೂ ಗೌರೀಕುಂಡದಂತೆ ಗಂಧಕದ ಹಾಗು ಭೂಶಾಖಗಳ ಪ್ರಭಾವದ ಬಿಸಿನೀರಿನ ಕುಂಡಗಳಿವೆ. ತಪ್ತ ಕುಂಡ್, ನಾರದ ಕುಂಡ್ ಹಾಗು ಸುರ್ಯ ಕುಂಡ್ ಎಂಬ ಮೂರು ಬಿಸಿನೀರು ಕುಂಡಗಳಿವೆ. ಈ ತಪ್ತ ಕುಂಡಗಳ ತಾಪಮಾನ ಸುಮಾರು ೫೫ ಡಿಗ್ರೀ (ಸೆಲ್ಶಿಯಸ್) ಇರುತ್ತದೆ. ಸುತ್ತಮುತ್ತಲಿನ ತಾಪಮಾನ ೩-೪ ಡಿಗ್ರಿ ಇದ್ದಿರಬಹುದು. ಅಲಕ್‌ನಂದ ೦ ಡಿಗ್ರಿಗಿಂತ ಕಡಿಮೆ ಇರುವುದಂತೆ. ಅದು ಹರಿಯುತ್ತಿರುವ ಕಾರಣ ಹೆಪ್ಪುಗಟ್ಟುವುದಿಲ್ಲ. ನಾನು ತಪ್ತ ಕುಂಡದೊಳಗೆ ಮಿಂದು ದೇವರಿಗರ್ಪಿಸಲು ಒಂದು ತಟ್ಟೆ ಪೂಜೆ ಸಾಮಗ್ರಿಗಳನ್ನು ತೆಗೆದುಕೊಂಡು ದರ್ಶನಕ್ಕೆ ಸಾಲಿನಲ್ಲಿ ನಿಂತೆ.

ಇನ್ನು ಬದರೀನಾಥ ಊರು ಹಾಗು ದೇವಾಲಯದ ಬಗ್ಗೆ ಮಾಹಿತಿ: ಬದರೀಕ್ಷೇತ್ರವು ಸನಾತನ ಧರ್ಮಕ್ಕೆ (ಹಿಂದೂ) ಅತ್ಯಂತ ಮಂಗಳ ಹಾಗೂ ಆದರಣೀಯ ತೀರ್ಥಗಳಲ್ಲಿ ಒಂದು. ಇದು ಭೂಮಿಯಮೇಲೆ ಶ್ರೀ ಮಹಾವಿಷ್ಣುವಿನ ನಿವಾಸವೆಂದು ಹೇಳಲಾಗುತ್ತದೆ. ಈ ಕ್ಷೇತ್ರವನ್ನು ನಮ್ಮ ಜನ ಪ್ರಾಚೀನ ವೈದಿಕ ಕಾಲದಿಂದಲೂ ಆದರಿಸುತ್ತಾ ಬಂದಿದ್ದಾರೆಂದು ಹೇಳಲಾಗುತ್ತದೆ. ಇದನ್ನು ತಪೋಭೂಮಿಯೆಂದು, ಭೂವೈಕುಂಠವೆಂದೂ ಕರೆಯುತ್ತಾರೆ.

ಪೌರಾಣಿಕ ಕಾಲದಲ್ಲಿ ಶ್ರೀ ಮಹಾವಿಷ್ಣುವು ತಪಸ್ಸು ಮಾಡಲು ಭೂಮಿಗಿಳಿದು, ಈ ಪ್ರದೇಶವನ್ನು ಆಯ್ದುಕೊಂಡನೆಂದು ಹೇಳಲಾಗಿದೆ. ಭಗವಂತನನ್ನು ಋತುಮಾನಗಳಿಂದ ಕಾಪಾಡಲು ಮಹಾಲಕ್ಷ್ಮಿಯು ಒಂದು ಬದರೀ ಮರದ ರೂಪ ತಾಳಿ ಸ್ವಾಮಿಗೆ ರಕ್ಷಣೆ ಕೊಟ್ಟಳಂತೆ. ಪ್ರಸನ್ನನಾದ ಸ್ವಾಮಿಯು ಮಹಾಲಕ್ಷ್ಮಿಗೆ ಈ ತೀರ್ಥವನ್ನು ಬದರೀ ತೀರ್ಥವೆಂದು ಕರೆಯಲಾಗುವುದೆಂದು ವರಕೊಟ್ಟನಂತೆ . "ಸ್ವರ್ಗ ಪೃಥ್ವಿ ಪಾತಾಳ ಲೋಕಗಳಲ್ಲಿ ನೂರಾರು ತೀರ್ಥಸ್ಥಾನಗಳಿದ್ದರೂ ಬದರೀತೀರ್ಥಕ್ಕೆ ಸಮಾನ ಬೇರಾವುದೂ ಇದ್ದಿಲ್ಲ, ಇಲ್ಲ, ಇರುವುದೂ ಇಲ್ಲ" ಎಂಬ ಪ್ರಸಿದ್ಧ ಸೂಕ್ತಿಯಿಂದ ಬದರೀನಾಥ ತೀರ್ಥದ ಮಹತ್ವವನ್ನು ಅರಿಯಬಹುದು.

ಈ ಉತ್ತಮ ತೀರ್ಥಸ್ಥಳದ ಲಾಭ ಪಡೆಯಲು ಮಾನವರು ಹಾಗು ದೇವತೆಗಳೆಲ್ಲರೂ ಬಂದು ನೂಕುನುಗ್ಗುಲಾಯಿತಂತೆ. ಇದಕ್ಕೆ ಉಪಾಯವಾಗಿ ಈ ತೀರ್ಥವು ಬೇಸಿಗೆಯಲ್ಲಿ ಮಾನವರಿಗೆ ಹಾಗು ಚಳಿಗಾಲದಲ್ಲಿ ದೇವತೆಗಳಿಗೆ ಕಾದಿರಿಸಲಾಗಿದೆಯಂತೆ. ಅಂತೆಯೇ ದೇವಾಲಯವು ವರ್ಷದ ಆರು ತಿಂಗಳು ಮೇ ಇಂದ ಅಕ್ಟೋಬರ್ ವರೆಗೆ ತೆರೆದಿರುತ್ತದೆ. ಚಳಿಗಾಲದ ಉಳಿದಾರು ತಿಂಗಳು ಭಗವಂತನನ್ನು ಜೋಶೀಮಠದಲ್ಲಿ ಪೂಜಿಸಲಾಗುವುದು. ಚಳಿಗಾಲಕ್ಕೆ ದೇವಾಲಯ ಮುಚ್ಚುವ ಮುನ್ನ ತುಪ್ಪದ ದೀಪಗಳನ್ನು ಹತ್ತಿಸುವರಂತೆ. ಈ ದೀಪಗಳು ಆರು ತಿಂಗಳ ನಂತರ ದೇವಾಲಯ ಪುನಃ ತೆರೆದಾಗ ಇನ್ನೂ ಉರಿಯುತ್ತಿರುತ್ತವಂತೆ. ನಾರದ ಮುನಿಯೇ ಚಳಿಗಾಲದಲ್ಲಿ ಬಂದು ಪೂಜಿಸುತ್ತಿದ್ದರೆಂದು ಹೇಳಲಾಗುತ್ತದೆ. ನಾರದ ಮುನಿಗಳು ಈ ಕ್ಷೇತ್ರದಲ್ಲಿ ಕೇವಲ ಐದು ದಿನಗಳಲ್ಲಿ ಮುಕ್ತಿ ಪಡೆದರೆಂದು ಹೇಳಲಾಗುತ್ತದೆ. ಆ ಕಾರಣದಿಂದ ಈ ಸ್ಥಳಕ್ಕೆ ನಾರದಕ್ಷೇತ್ರವೆಂದೂ ಕರೆಯುತ್ತಾರೆ. ಗೌತಮ ಕಪಿಲ ಕಾಶ್ಯಪಾದಿ ಮಹಾಋಷಿಗಳೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗುತ್ತದೆ.

ಬದರೀಕ್ಷೇತ್ರವು ಉತ್ತರ ಪ್ರದೇಶದ (ಈಗ ಉತ್ತರಾಂಚಲ್) ಚಮೋಲಿ ಜಿಲ್ಲೆಯ ಗಡ್‌ವಾಲ್ ಪ್ರದೇಶದಲ್ಲಿ ಅಲಕ್‌ನಂದಾ ನದಿಯ ತೀರದಲ್ಲಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಸುಮಾರು ೧೦೩೦೦ ಅಡಿ ಎತ್ತರದಲ್ಲಿದ್ದು, ಊರು ಹಾಗೂ ದೇವಾಲಯದವರೆಗೂ ವಾಹನ ಚಲಿಸುವ ರಸ್ತೆಯಿದೆ. ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳು ಈ ಕಣಿವೆ ಪ್ರದೇಶದ ಕಾವಲುಗಾರರಂತೆ ನಿಂತಿವೆ. ಹಿನ್ನೆಲೆಯಲ್ಲಿ ೨೧೫೦೦ ಅಡಿ ಎತ್ತರದ ಘನಗಾಂಭೀರ್ಯ ನೀಲಕಂಠ ಪರ್ವತ ತನ್ನ ತಲೆ ಮೋಡಗಳಲ್ಲಿ ಮುಚ್ಚಿಕೊಂಡು ನಿಂತಿದೆ. ದೇವಾಲಯದ ಮುಂದೆ ಕೊರೆಯುವ ಅಲಕ್‌ನಂದ ಹರೆಯುತ್ತಿದ್ದರೆ ಪಕ್ಕದಲ್ಲೆ ಬಿಸಿನೀರಿನ ಕುಂಡಗಳಿವೆ. ಇವುಗಳಲ್ಲಿ ಒಂದಾದ ತಪ್ತ ಕುಂಡಕ್ಕೆ ರೋಗ ನಿರ್ಮೂಲನಾ ಶಕ್ತಿಯಿರುವುದೆಂದು ಹೇಳಲಾಗುತ್ತದೆ. ಇದು ಅಗ್ನಿದೇವನ ನೆಲೆಯಂತೆ. ಮೊದಲೇ ಹೇಳಿದಂತೆ ಈ ಕುಂಡದ ನೀರಿನ ತಾಪಮಾನ ಸುಮಾರು ೫೫ ಡಿಗ್ರೀ. ಸೂರ್ಯ ಕುಂಡ ಹಾಗು ನಾರದ ಕುಂಡ ಇಲ್ಲಿಯ ಉಳಿದ ಬಿಸಿನೀರಿನ ಕುಂಡಗಳು.

ಬದರೀನಾಥ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದರೂ ಅದನ್ನು ಹಲವಾರು ಬಾರಿ ನವೀಕರಣಗೊಳಿಸಬೇಕಾಗಿದೆ. ಬೌದ್ಧರು ಪ್ರಬಲವಾಗಿದ್ದ ಕಾಲದಲ್ಲಿ ಬೌದ್ಧ ಭಿಕ್ಕುಗಳು ಬದರೀನಾರಾಯಣನ ಪ್ರತಿಮೆಯನ್ನು ಅಲಕ್‌ನಂದಾ ನದಿಯೊಳಗೆ ಒಗೆದಿದ್ದರಂತೆ (ನಾರದ ಕುಂಡದೊಳಗೆಸೆದಿದ್ದರೆಂದು ಇನ್ನು ಹಲವು ದಂತಕತೆಗಳು ಹೇಳುತ್ತವೆ). ಆದಿಶಂಕರಾಚಾರ್ಯರು ಈ ತೀರ್ಥವನ್ನು ಸಂದರ್ಶಿಸಿದಾಗ ದೇವರ ಪ್ರತಿಮಯನ್ನು ಹುಡುಕಿ ತೆಗೆದು ಪುನಃ ಪ್ರತಿಷ್ಠಾಪಿಸಿದರಂತೆ. ಕ್ರಮವಾಗಿ ರಾಮಾನುಜಾಚಾರ್ಯರು, ಹಾಗು ಮಧ್ವಾಚಾರ್ಯರು ಈ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರಂತೆ.

ಈಗಿನ ದೇವಾಲಯವು ಸುಮಾರು ೪೦೦ ವರ್ಷ ಹಳೆಯದೆಂದು ಹೇಳಲಾಗುತ್ತದೆ. ಇದನ್ನು ಗಡ್‌ವಾಲ್ ರಾಜರು ಕಟ್ಟಿಸಿದರಂತೆ. ದೇವಾಲಯಕ್ಕೆ ಮೂರು ಭಾಗಗಳಿವೆ - ಸಭಾ ಮಂಟಪ, ದರ್ಶನ ಮಂಟಪ ಹಾಗೂ ಗರ್ಭ ಗೃಹ. ಸಭಾ ಮಂಟಪ ಜನರು ಸೇರಲು ಜಾಗ, ದರ್ಶನ ಮಂಟಪಕ್ಕೆ ಹೋಗಿ ದರ್ಶನ ಮಾಡಿಕೊಳ್ಳಬಹುದು. ಗರ್ಭಗುಡಿಯು ಬದರೀನಾರಾಯಣ ಸ್ವಾಮಿ, ಕುಬೇರ, ಉದ್ಧವ ಗರುಡ, ನಾರದ ಮುನಿಗಳು, ನರ-ನಾರಾಯಣರ ಪ್ರತಿಮೆಗಳಿವೆ. ಈ ದೇವಾಲಯದಲ್ಲಿ ಮಹಾಲಕ್ಷ್ಮಿ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಹಾಗೂ ದೇಶಿಕಾಚಾರ್ಯರ ಪ್ರತಿಮೆಗಳೂ ಇವೆ.

ಸುಮಾರು ೨ ಅಡಿ ಎತ್ತರವಿರುವ ಸಾಲಿಗ್ರಾಮ ಶಿಲೆಯ ಬದರೀನಾರಾಯಣನ ಮೂರ್ತಿಯು ಉದ್ಭವ ಮೂರ್ತಿಯಂತೆ. ಸ್ವಾಮಿಯು ಪದ್ಮಾಸನದಲ್ಲಿ ಕುಳಿತು ಎರಡು ಕೈಗಳಲ್ಲಿ ಶಂಖ ಚಕ್ರಗಳನ್ನು ಹಿಡಿದಿದ್ದಾನೆ. ಇನ್ನೆರಡು ಕೈಗಳು ಯೋಗಮುದ್ರೆಯಲ್ಲಿವೆ. ಸ್ವಾಮಿಯ ಬಲಭಾಗದಲ್ಲಿ ಉದ್ಧವನ ಮೂರ್ತಿ ಇದೆ. ಉದ್ಧವನ ಬಲಭಾಗದಲ್ಲಿ ನರ-ನಾರಾಯಣರ ಪ್ರತಿಮೆಗಳಿವೆ. ಬಲಭಾಗದಲ್ಲಿಯೇ ಮುಂದೆ ನಾರದ ಮುನಿಗಳು ನಮಿಸಿ ಕುಳಿತಿದ್ದಾರೆ. ಎಡ ಭಾಗದಲ್ಲಿ ಕುಬೇರ, ಹಾಗು ಬೆಳ್ಳಿಯ ಗಣೇಶನ ಪ್ರತಿಮೆಗಳಿವೆ. ಎಡಭಾಗದಲ್ಲಿ ಮುಂದೆ ಗರುಡ ನಮಿಸಿ ಕುಳಿತಿದ್ದಾನೆ. ದೇವತೆಗಳ ಮೇಲೆ ಒಂದು ಅಪ್ಪಟ ಚಿನ್ನದ ಛವಣಿ ಇದೆ. ಕೇದಾರದಂತೆ ಭಕ್ತರಿಗೆ ಗರ್ಭ ಗುಡಿಯೊಳಗೆ ಹೋಗುವ ಅವಕಾಶವಿಲ್ಲ.

ದೇವಾಲಯದ ಹಿಂಭಾಗದಲ್ಲಿ ಲಕ್ಷ್ಮೀನೃಸಿಂಹ, ರಾಮಾನುಜಾಚಾರ್ಯ ಹಾಗು ದೇಶಿಕಾಚಾರ್ಯರ ಗುಡಿಗಳಿವೆ. ದೇವಾಲಯದ ಅಂಗಳದಲ್ಲಿಯೇ ಗರ್ಭಗೃಹದ ಎಡಭಾಗಕ್ಕೆ ಲಕ್ಷ್ಮೀದೇವಿಯ ಗುಡಿಯಿದೆ. ಈ ಗುಡಿಯ ಹೊರಗೆ ಆದಿಶಂಕರಾಚಾರ್ಯರ ಗದ್ದಿ (ಕೂರುವ ಸ್ಥಳ) ಇದೆ. ಇದು ಅವರು ಬದರೀ ಕ್ಷೇತ್ರದಲ್ಲಿದ್ದಾಗ ಕೂರುತ್ತಿದ್ದ ಆಸನವಂತೆ. ಇಂದಿಗೂ, ಆದಿಶಂಕರಾಚಾರ್ಯರ ಪಂಥದವರೇ ಆದ ಕೇರಳದ ನಂಬೂದರೀ ಬ್ರಾಹ್ಮಣರೇ ಈ ದೇವಾಲಯದ ಅರ್ಚಕರು. ಪ್ರಮುಖ ಅರ್ಚಕರಿಗೆ 'ರಾವಲ್' ಎಂದು ಹೆಸರು. ವರ್ಷಕ್ಕೆ ಸುಮಾರು ೨೫೦,೦೦೦ ಜನರು ಬದರೀನಾರಾಯಣನ ದರ್ಶನ ಪಡೆಯಲು ಬರುತ್ತಾರಂತೆ. "ಬೋಲೋ ಬದರಿ ವಿಶಾಲ್ ಕೀ ಜೈ, ಬೊಲೊ ಬದ್ರಿ ನಾರಾಯಣ್ ಕೀ ಜೈ" ಎಂಬ ಕೂಗಿನೊಡನೆ ಭಕ್ತರು ಬದರೀಕ್ಷೇತ್ರಕ್ಕೆ ಹೋಗುತ್ತಾರೆ.

ಬದರೀಕ್ಷೇತ್ರಕ್ಕೆ ಬರುವ ದಾರಿಯುದ್ದಕ್ಕೂ ಅನೇಕಾನೇಕ ಪುಣ್ಯ ಕ್ಷೇತ್ರಗಳಿವೆ. ಪಂಚ ಪ್ರಯಾಗಗಳು - ದೇವಪ್ರಯಾಗ - ಅಲಕ್‌ನಂದಾ ಮತ್ತು ಭಾಗೀರಥಿಯರ ಸಂಗಮ, ರುದ್ರಪ್ರಯಾಗ - ಅಲಕ್‌ನಂದಾ ಮತ್ತು ಮಂದಾಕಿನಿಯರ ಸಂಗಮ, ಕರ್ಣಪ್ರಯಾಗ - ಪಿಂಡರೀ ಹಾಗು ಅಲಕ್‌ನಂದಾ ನದಿಗಳ ಸಂಗಮ, ನಂದಪ್ರಯಾಗ - ಅಲಕ್‌ನಂದಾ ಹಾಗು ಮಂದಾಕಿನಿ (ಬೇರೆ ಕವಲು) ನದಿಗಳ ಸಂಗಮ, ವಿಷ್ಣುಪ್ರಯಾಗ - ಅಲಕ್‌ನಂದ (ಇಲ್ಲಿಯವರೆಗು ಅಲಕ್‌ನಂದ ನದಿಗೆ ವಿಷ್ಣುಗಂಗಾ ಎಂದು ಹೆಸರು) ಹಾಗು ಧೌಳಿಗಂಗಾ ನದಿಗಳ ಸಂಗಮ, ಪಾಂಡುಕೇಶ್ವರ - ಪಾಂಡವರು ಇಲ್ಲಿ ಹುಟ್ಟಿದ್ದಂತೆ, ಹನುಮಂತ ಹಾಗೂ ಭೀಮ ಭೆಟ್ಟಿಯಾದ ಸ್ಥಳ, ಶೇಷನೇತ್ರ (ಆದಿಶೇಷನ ಅಚ್ಚುಳ್ಳ ಬಂಡೆ), ಚರಣಪಾದುಕ (ಮಹಾವಿಷ್ಣುವಿನ ಪಾದದಚ್ಚು), ಹೀಗೆ. ಪಂಚ ಕೇದಾರಗಳ ಹಾಗೆ ಪಂಚ ಬದರಿಗಳೂ ಇವೆ. ಅವು ಬದರೀಕ್ಷೇತ್ರ, ಆದಿ ಬದರಿ (ಕರ್ಣಪ್ರಯಾಗದ ಬಳಿ), ಭವಿಷ್ಯ ಬದರಿ, ಬೃಧ ಬದರಿ (ಎರಡೂ ಜೋಶೀಮಠದ ಬಳಿ) ಹಾಗು ಯೋಗೋಧ್ಯಾನ ಬದರಿ (ಪಾಂಡುಕೇಶ್ವರದ ಹತ್ತಿರ).

ನಾನು ಸಾಲಿನಲ್ಲಿ ಹೋಗಿ ದೇವರ ದರ್ಶನ ಮಾಡಿಕೊಂಡೆ. ನಿಧಾನವಾಗಿ ಬಂದ ನಮ್ಮ ಗುಂಪಿನವರು ಸಾಲಿನ ಮಧ್ಯಕ್ಕೆ ನನ್ನೊಡನೆ ಸೇರಿಕೊಂಡರು. ಖೀರ್ ಭೋಗ್ - ಪಾಯಸದ ಭೋಗ ಸೇವೆ ಸ್ವಾಮಿಗೆ ಮಾಡಲು ಹೇಳಿದ್ದೆ. ಪ್ರಸಾದ ಕೊಡಲು ಸ್ವಲ್ಪ ಹೊತ್ತಾಗುವುದೆಂದು ಕೇಳಿ ಅಲ್ಲೇ ದೇವಸ್ಥಾನದ ಜಗುಲಿಯ ಮೇಲೆ ಕುಳಿತಿದ್ದೆ. ಪ್ರಸಾದಕ್ಕೆ ಒಂದು ಪಾತ್ರೆ ಬೇಕಾಗಿತ್ತು. ಸರಿ ಆಚೆ ಹೋಗಿ ನನ್ನ ತಟ್ಟೆ ಹಿಂತಿರುಗಿಸಿದೆ. ದೇವಸ್ಥಾನದಾಚೆ ಭಿಕ್ಷುಕರಿದ್ದರು. ಅವರಿಗೆ ಕೊಡಲು ಪುಡಿಗಾಸು ಪಡೆದೆ - ರೂ.೧೦ಕ್ಕೆ ಕೇವಲ ರೂ.೮ರ ಪುಡಿಗಾಸು ಕೊಟ್ಟರು. ಎಲ್ಲವನ್ನೂ ಭಿಕ್ಷುಕರಿಗೆ ಕೊಟ್ಟು ಅಲ್ಲಿದ್ದ ಒಂದು ಸಣ್ಣ ಪೇಟೆಗೆ ಹೋದೆ. ಒಂದು ಸಣ್ಣ ಬೋಸಿ ಖರೀದಿಸಿ ದೇವಾಲಯಕ್ಕೆ ಹಿಂತಿರುಗಿದೆ. ಅದರಲ್ಲಿ ಖೀರ್ ತುಂಬಿಕೊಟ್ಟರು. ದೇವರಿಗಿನೊಮ್ಮೆ ಕೈ ಮುಗಿದು ನಮ್ಮ ತಾಣಕ್ಕೆ ಹಿಂತಿರುಗಿದೆ.

ಬದರೀನಾಥದ ಹತ್ತಿರ ನಮ್ಮ ತೀರ್ಥಗಳಲ್ಲದೆ ಸಿಖ್ಖರ ಒಂದು ಪುಣ್ಯಕ್ಷೇತ್ರವಿದೆ. ಇದು "ಹೇಮ್‌ಕುಂಡ್ ಸಾಹಿಬ್". ಇದರ ದರ್ಶನಕ್ಕೆ ಹಿಂದೂಗಳೂ ಹೋಗುತ್ತಾರಂತೆ. ಸಪ್ತ ಋಷಿ ಶಿಖರಗಳಿಂದ ಹಿಮನದಿಗಳು ಹರಿದುಬಂದು ಸಮುದ್ರ ಮಟ್ಟದಿಂದ ೧೦೦೦೦ ಅಡಿ ಎತ್ತರದಲ್ಲಿ ಒಂದು ದೊಡ್ಡ ಸರೋವರವಾಗಿದೆ. ಇದೇ ಹೇಮಕುಂಡ. ಇದರಿಂದ ಆಚೆ ಹೋಗುವ ನದಿಗೆ ಹಿಮಗಂಗೆಯೆಂದು ಹೆಸರು. ಸೀಖ ಗುರು ಗೋಬಿಂದ್ ಸಿಂಗ್ ಇಲ್ಲಿ ತಪಸ್ಸು ಮಾಡಿದ್ದರಂತೆ. ಲಂಕೆಯಲ್ಲಿ ಲಕ್ಷ್ಮಣ ಮೂರ್ಛೆ ಬಿದ್ದಾಗ ಹನುಮಂತ ಇಲ್ಲಿಂದಲೇ ಸಂಜೀವಿನಿ ತೆಗೆದೊಯ್ದದ್ದಂತೆ. ಅದಕ್ಕೆ ಇಲ್ಲಿಯ ಜನ ಹನುಮಂತನನ್ನು ಪೂಜಿಸುವುದಿಲ್ಲವಂತೆ. (ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಪರ್ವತವನ್ನು ಹಿಮಾಲಯಕ್ಕೆ ಹಿಂತಿರುಗಿಸಲಿಲ್ಲವೆ?). ಈ ಪ್ರದೇಶದ ಇನ್ನೊಂದು ಅನುಪಮ ದೃಶ್ಯವೆಂದರೆ ಹೂಗಳ ಕಣಿವೆ (ವ್ಯಾಲಿ ಆಫ್ ಫ್ಲವರ್ಸ್). ಇಲ್ಲಿಗೆ ಹೋಗಲು ಗೋಬಿಂದ್‌ಘಾಟ್ ಎಂಬ ರಸ್ತೆಯಿರುವ ಊರಿಂದ ಸುಮಾರು ೧೯ ಕಿಲೋಮೀಟರ್ ನಡೆದು ಹೋಗಬೇಕು. ಸ್ಮಿತ್ ಹಾಗು ಹೋಲ್ಡ್‌ಸ್ವರ್ತ್ (ಬ್ರಿಟೀಷರು) ಈ ಕಣಿವೆಯನ್ನು ೧೯೩೧ನೇ ಇಸವಿಯಲ್ಲಿ ಹುಡುಕಿದ್ದರಂತೆ. ಇಲ್ಲಿ ಮೈಲಿಗಟ್ಟಲೆ ತರಾವರಿ ಬಣ್ಣಬಣ್ಣದ ಹೂವುಗಳು ಹಾಗು ಇತರ ಅಪೂರ್ವ ಗಿಡಮೂಲಿಕೆಗಳು ಬೆಳೆಯುತ್ತವಂತೆ. ನೂರಾರು ಮೀಟರ್ ಒಂದೇ ಬಣ್ಣದ ಹೂಗಳು ಬೆಳೆದು ರತ್ನಗಂಬಳಿ ಹಾಸಿದ ಹಾಗೆ ಕಾಣಿಸುತ್ತದೆಯಂತೆ. ಈ ಕಣಿವೆಯ ನೋಟ ಮನಮೋಹಕವೆಂದು ಹೇಳುತ್ತಾರೆ. ದುರದೃಷ್ಟವಶಾತ್ ನಮಗೆ ಈ ಸ್ಥಳಗಳನ್ನು ನೋಡುವ ಅವಕಾಶ ಲಭಿಸಲಿಲ್ಲ.

ನಮ್ಮ ಛತ್ರಕ್ಕೆ ಹಿಂತಿರುಗಿದ ಮೇಲೆ, ಹಾಗೆಯೇ ಎಲ್ಲರು ಬರುವವರೆಗೆ ಸ್ವಲ್ಪ ಕಾಲ ಹಾಕಿದೆ. ಮಧ್ಯದಲ್ಲಿ ನವೀನ್ ಕುಮಾರವರ ಕಿರುಚಿ ಕೂಗಾಡುತ್ತಿದ್ದ (೩-೪ ವರ್ಷದ) ಮಗನನ್ನು ಸಮಾಧಾನ ಗೊಳಿಸಿದೆ. ಊಟದ ಸಮಯವಾಯಿತು. ಅಂದು ವಿಶೇಷವಾದ ಊಟವಾಗಿತ್ತು - ೨ ಸಿಹಿ, ಜೊತೆಗೆ ನಾನು ತಂದ ಖೀರ್, ಇತ್ಯಾದಿ. ಆಡಿಗೆಭಟ್ಟ ಗಂಧಕದಿಂದ ಏನೂ ರುಚಿಯಿಲ್ಲವೆಂದು ಪೇಚಾಡಿಕೊಳ್ಳುತ್ತಿದ್ದರು. ಊಟವಾದನಂತರ ಹೊರಡುವ ಸಮಯವಾಗಿತ್ತು. ಎಲ್ಲರೂ ಸಾಮಾನು ಜೋಡಿಸಿಕೊಂಡು ಬಸ್ ಕಡೆಗೆ ನಡೆದೆವು. ಕೂಡಲೆ ಸಾಮಾನು ಎಲ್ಲವನ್ನೂ ಬಸ್ ಮೇಲೆ ಹಾಕಿ ಹೊರಡಲು ತಯಾರಾದೆವು. ಹೊರಡಲು ಇನ್ನು ಸ್ವಲ್ಪ ಸಮಯವಿತ್ತು - ಗೇಟ್ ಇನ್ನೂ ತೆರೆದಿರಲಿಲ್ಲ. ಆದರೆ ಆಚೆ ಹೋಗಿ ಏನಾದರು ಮಾಡುವ ಆಸಕ್ತಿ ಯಾರಿಗೂ ಇರಲಿಲ್ಲ. ಎಲ್ಲರೂ ಬಸ್ ಒಳಗೇ ಕೂತಿದ್ದೆವು. ಸ್ವಲ್ಪ ಕಾಲದ ನಂತರ ಗೇಟ್ ತೆರೆಯಿತು, ನಾವು ಬದರೀಕ್ಷೇತ್ರವನ್ನು ಬಿಟ್ಟು ಹೊರಟೆವು. ಪ್ರಕೃತಿ ದೃಶ್ಯಗಳು ಅದ್ಭುತವಾಗಿದ್ದರೂ ಆಚೆ ಬಹಳ ಚಳಿಯಿತ್ತು, ಮಳೆ ಬರುವಹಾಗೆ ಬೇರೆ ಇತ್ತು. ಆಚೆ ನೋಡುವ ಉತ್ಸಾಹವೇ ಇರಲಿಲ್ಲ. ಸಧ್ಯ ಅಂದು ಮಳೆ ಬರಲಿಲ್ಲ. ಎರಡು ದಿನ ನಿದ್ದೆ ಕೆಟ್ಟಿದ್ದರಿಂದಲೋ ಏನೋ ನಾನು ಇಡೀ ಮಧ್ಯಾಹ್ನ ಮಲಗಿಬಿಟ್ಟೆ.

ಏಳುವಷ್ಟರಲ್ಲಿ ಪೀಪಲ್‌ಕೋಟಿ ಅನ್ನುವ ಊರಿಗೆ ಹೋಗಿ ಸೇರಿದ್ದೆವು. ಈ ಗುಡ್ಡ ಪ್ರದೇಶದಲ್ಲಿ ಕತ್ತಲಾದ ನಂತರ ವಾಹನಗಳು ಚಲಿಸುವಂತಿಲ್ಲ - ಬಹಳ ಅಪಾಯಕಾರಿಯೆಂದು ನಿಷೇಧಿಸಲಾಗಿದೆ. ಆದ್ದರಿಂದ ಅಂದು ಪೀಪಲ್‌ಕೋಟಿಯಲ್ಲೇ ತಂಗಬೇಕಾಗಿತ್ತು. ತಂಗಲು ಜಾಗ ಚೆನ್ನಾಗಿಲ್ಲದಿದ್ದರೂ ಕೆಟ್ಟದಾಗಿರಲಿಲ್ಲ. ಆಚೆ ಊರು ನೋಡಲು ಹೋದೆ. ಐದೇ ನಿಮಿಷಗಳಲ್ಲಿ ಊರು ಮುಗಿದುಹೋಯಿತು! ಅಂತಹಾ ಸಣ್ಣ ಊರು ಅದು. ಯಾವುದಾದರೂ ಬೇರೊಂದು ಕೋಣೆ ಸಿಕ್ಕೀತೆ ಎಂದು ನೋಡಿದೆ, ಯಾವುದೂ ಸಿಗಲಿಲ್ಲ. ಸರಿ ಇನ್ನೇನು ಮಾಡುವುದು, ಹರಿಯಪ್ಪ ಮಾಡಿದ ಕೋಣೆಯಲ್ಲೇ ರಾತ್ರಿ ಕಳೆಯಲು ಸಿದ್ಧನಾದೆ. ಹೊಟ್ಟೆ ಹಸಿವಾಗಿತ್ತು, ಊಟಕ್ಕಿನ್ನೂ ಸಮಯವಿತ್ತು. ಒಂದು ಸಣ್ಣ ಹೋಟಲ್‌ಗೆ ಹೋಗಿ ರೋಟಿ ಹಾಗು ಮಟರ್-ಪನೀರ್ ತಿಂದೆ. ಆ ಹೋಟಲ್‌ನಲ್ಲಿ ದೋಸೆ ಇಡ್ಲಿಗಳೂ ಸಿಗುವುದನ್ನು ನೋಡಿ ಆಶ್ಚರ್ಯ ಪಟ್ಟೆ. ಇವರ ಅಡಿಗೆಯಾದ ರೋಟೀ ಮಟರ್-ಪನೀರೇ ಈ ಚಂದವಾದರೆ ಇನ್ನು ದೋಸೆ ಇಡ್ಲೆಗಳ ಗತಿಯೇನು ಎಂದುಕೊಂಡೆ.

ಹಿಂತಿರುಗುತ್ತಿದ್ದಾಗ ನಮ್ಮ ಮಾಧವೇಶ್ವರ್ ಎಲ್ಲೋ ಹೊರಟಿದ್ದರು (ಅವರೊಂದು ಬೇರೆ ಕೋಣೆ ಮಾಡಿದ್ದರು, ಅವರು ಕರೆದರೂ ನಾನು ಹೋಗಲಿಲ್ಲ). ಅವರೊಡನೆ ಹೋಗಿ ಅಲ್ಲಿದ್ದ ಒಂದು ಗುಡಿ ನೋಡಿ ಬಂದೆವು. ಬರುವಷ್ಟು ಹೊತ್ತಿಗೆ ಊಟ ತಯಾರಾಗಿತ್ತು. ಊಟ ನಡೆದಿದ್ದಂತೆ ಹರಿಯಪ್ಪ ಮಾರನೆಯ ದಿನ ಬೆಳಿಗ್ಗೆ ೫:೦೦ ಘಂಟೆಗೆ ಹೊರಡಬೇಕೆಂದು ಹೇಳಿದರು. ಸ್ವಲ್ಪ ಹೊತ್ತು ಮಾತನಾಡಿ ಎಲ್ಲರೂ ನಿದ್ದೆ ಮಾಡಿದೆವು.


ಭಾಗ ೮: ಮರಳಿ ಬಯಲುಸೀಮೆಗೆ

೮ ಮೇ ೧೯೯೮

ಬಚ್ಚಲು ಮನೆಯ ಅವಕಾಶ ಮಿತವಾಗಿದ್ದರಿಂದ ನಾನು ೩:೦೦ ಘಂಟೆಗೇ ಎದ್ದುಬಿಟ್ಟೆ. ಮೊದಲು ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಮತ್ತೆ ಮಲಗಿದ್ದೆ. ಆನಂತರ ನನ್ನ ಸುತ್ತ ಬೆಳವಾಡಿ ತಂಡದವರು ಎದ್ದು ತಯಾರಾಗತೊಡಗಿದರು. ಈ ಸಮಯದಲ್ಲಿ ಬೆಳವಾಡಿ ತಂಡದವರನ್ನು ಸಮೀಪದಿಂದ ಪರಿಚಯ ಮಾಡಿಕೊಳ್ಳುವ ಅವಕಾಶ ದೊರಕಿತು. ಅವರುಗಳು ತಯಾರಾಗುತ್ತಾ ನಾವೆಲ್ಲರೂ ಕಾಫಿ ಕುಡಿಯುತ್ತಿದ್ದಾಗ ಅವರೊಂದಿಗೆ ಮಾತನಾಡತೊಡಗಿದೆ. ಮಾತು ಮಾತಿನಲ್ಲೇ ನನಗೆ ತಿಳಿಯದ ಹಾಗೆ ಅವರು ನನ್ನ ಕುಲ, ಗೋತ್ರ, ಊರು, ಕೆಲಸ, ವೇತನ, ಎಲ್ಲವನ್ನೂ ವಿಚಾರಿಸಿದರು. ನಂತರ ಅವರೂರಿನ ಹುಡುಗಿಯರನ್ನು ಚರ್ಚಿಸ ತೊಡಗಿದರು - ಅವಳು ಆಗುವುದಿಲ್ಲ - ಓದಿಲ್ಲ, ಇವಳು ಆಗುವುದಿಲ್ಲ - ಕುಳ್ಳಿ, ಸೊಂಟಕ್ಕೆ ಬರುತ್ತಾಳೆ ಹೀಗೆ. ನನಗೋ ನಾಚಿಕೆ, ಇವರುಗಳ ಕೈಯಲ್ಲಿ ಸಿಕ್ಕಿ ತಪ್ಪಿಸಿಕೊಳ್ಳುವಹಾಗಿಲ್ಲ. ಏನೂ ತೋಚದಾಗಿತ್ತು.

ಅಷ್ಟರಲ್ಲಿ ಪುಣ್ಯಾತ್ಮ ಹರಿಯಪ್ಪ ಬಂದು ಎಲ್ಲರನ್ನೂ ಎಬ್ಬಿಸಿದರು. ಸಧ್ಯ ಬಚಾವಾದೆ! ಕೂಡಲೇ ಸಾಮಾನುಗಳನ್ನೆಲ್ಲ ಬಸ್‌ಮೇಲೆ ತುಂಬಿಕೊಂಡು ಹೊರಟೆವು. ಹಿಂದಿನ ದಿನದಿಂದಲೆ ಮಳೆಯು, ಸುರಿಯುವ ಬೆದರಿಕೆ ಹಾಕುತ್ತಿತ್ತು. ಅಂದು ಸುರಿಯಲಾರಂಭಿಸಿತು. ಇನ್ನು ಕತ್ತಲೆಯಾಗಿತ್ತು, ಸುರಿಯವ ಮಳೆ, ಮೊದಲೇ ಹೇಳಿದಂತೆ ಅಪಘಾತಕಾರಿ ರಸ್ತೆ. ಎಲ್ಲವೂ ಸೇರಿ ಆತಂಕದ ಪ್ರಯಾಣವಾಗಿತ್ತು. ನಾನು ಕಿಟಕಿಯಬಳಿ ಕುಳಿತಿದ್ದೆ. ಮಳೆ ಕಿಟಕಿಯಿಂದ ಒಳಬಂದು ನನ್ನನ್ನು ಒದ್ದೆ ಮಾಡಹತ್ತಿತ್ತು. ಕೊನೆಗೆ ಬಸ್ಸಿನ ಹಿಂಭಾಗಕ್ಕೆ ತಪ್ಪಿಸಿಕೊಂಡು ಹೋಗಿ, ಸರಿಯಾದ ನಿದ್ದೆ ತೆಗೆದೆ. ತಿಂಡಿಗೆ ನಿಂತಾಗಲೂ ನನಗೆಚ್ಚರವೇ ಇಲ್ಲ.

ರಸ್ತೆಯ ಕತೆ ಮೊದಲಿನಂತೆ ಇತ್ತು - ಬೆಟ್ಟ ಗುಡ್ಡಗಳು, ತೀಕ್ಷ್ಣ ತಿರುವುಗಳು, ಪಕ್ಕದಲ್ಲಿ ರಭಸದಿಂದ ಹರಿಯುವ ನದಿ. ಮಳೆ ಬರುತ್ತಿದ್ದರಿಂದ ಮಬ್ಬುಗತ್ತಲೆ ಬೇರೆ. ನಾವು ಹೋದಾಗ ಸಿಕ್ಕ ವಿರುದ್ದ ಕ್ರಮದಲ್ಲಿ ಊರುಗಳು ಉರುಳಿದವು. ರುದ್ರಪ್ರಯಾಗ, ಶ್ರೀನಗರ, ದೇವಪ್ರಯಾಗ ಇತ್ಯಾದಿ. ಮಧ್ಯಾಹ್ನ ಸುಮಾರು ೧:೦೦ ಘಂಟೆಗೆ ಬ್ಯಾಸಿ ಅನ್ನುವ ಊರು ತಲುಪಿದೆವು. ಇಲ್ಲಿ ಊಟದ ನಿಲುವು. ಇಲ್ಲಿಗೆ ನಮ್ಮಂತೆಯೇ ಇನ್ನು ಅನೇಕ ಬಸ್‌ಗಳು ಬಂದು ನಿಂತಿದ್ದವು. ನಮ್ಮನ್ನು ಬಿಟ್ಟು ಹಲವಾರು ಕನ್ನಡಿಗರೂ ಇದ್ದರು. ಹೀಗೆ ಒಬ್ಬರು ದಾರಿಯಲ್ಲಿ ಒಂದು ಬಸ್ ಅಪಘಾತವಾಗಿ ಅಲಕ್‌ನಂದಾ ನದಿಗೆ ಬಿದ್ದು ೨೯ ಜನರ ಸಾವು ಸಂಭವಿಸಿತೆಂದು ಹೇಳಿದರು. ಕೇಳಿ ಬಹಳ ದುಃಖವಾಯಿತು. ಎರಡು ಮೂರು ದಿನಗಳ ನಂತರ ಮತ್ತೊಂದು ಬಸ್ ಕೇದಾರದ ದಾರಿಯಲ್ಲಿ ಮಂದಾಕಿನಿಗೆ ಬಿತ್ತೆಂಬುದೂ ನಂತರ ತಿಳಿದು ಬಂತು. ತುಂಬು ಹೃದಯದಿಂದ ಬ್ಯಾಸಿ ಬಿಟ್ಟು ಹೊರಟೆವು. ಸಾಗುತ್ತ ಮಧ್ಯಾಹ್ನ ಸುಮಾರು ೨:೩೦ ಘಂಟೆಗೆ ಹೃಷೀಕೇಶವನ್ನು ತಲುಪಿದೆವು.

ಹೃಷೀಕೇಶವು ಹರಿದ್ವಾರದಿಂದ ಕೇವಲ ೨೪ ಕಿಲೋಮೀಟರ್‌ಗಳ ದೂರದಲ್ಲಿ, ಸಮುದ್ರಮಟ್ಟಕ್ಕಿಂತ ಸುಮಾರು ೧೩೬೦ ಅಡಿ ಎತ್ತರದಲ್ಲಿದೆ. ಹಿಮಾಲಯ ಪರ್ವತಗಳ ತಪ್ಪಲಿನಲ್ಲಿದ್ದು, ಚಾರ್ ಧಾಮ್ (ನಾಲ್ಕು ಧಾಮಗಳು - ಕೇದಾರ, ಬದರಿ, ಗಂಗೋತ್ರಿ ಮತ್ತು ಯಮುನೋತ್ರಿ) ಗಳಿಗೆ ಬಾಗಿಲೆಂದು ಕರೆಸಿಕೊಳ್ಳುತ್ತದೆ. ಮೂರು ಕಡೆಗಳಿಂದ ಪರ್ವತಾವೃತ್ತವಾಗಿದ್ದು ಮಧ್ಯೆ ಗಂಗಾ ನದಿ ಹರಿದುಹೋಗುವ ಈ ತೀರ್ಥವು ನಿಸರ್ಗದ ರಮ್ಯತೆ ಹಾಗು ಶಾಂತತೆಗೆ ಪ್ರಸಿದ್ಧವಾಗಿದೆ. ಲಕ್ಷ್ಮಣ ಜೂಲ್ಹಾದ ಮೇಲೆ ಹೋಗುತ್ತ ಬೆಟ್ಟಗಳಿಂದಿಳಿದು ಕೆಳಗೆ ಹರಿಯುವ ಗಂಗೆಯನ್ನು ನೋಡಿದ ದೃಶ್ಯ ಎಂದಿಗೂ ಮರೆಯದು.

ಹೃಷೀಕೇಶವು ಶ್ರೀ ಮಹಾವಿಷ್ಣುವು ಮದಾಸುರನನ್ನು(?) ಕೊಂದ ಸ್ಥಳದ ಸಂಕೇತ. ಇಡೀ ಕ್ಷೇತ್ರವೇ ಪುನೀತವೆಂದು, ಈ ತೀರ್ಥದಲ್ಲಿ ತಪಸ್ಸು ಮಾಡುವುದು ಮುಕ್ತಿ ಪಡೆಯುವ ಹಾದಿ ಎಂದು ಪ್ರಸಿದ್ಧವಾಗಿದೆ. ಊರುದ್ದಕ್ಕೂ ನೂರಾರು ದೇವಾಲಯಗಳು, ಗುಡಿಗಳು, ತಪೋವನಗಳು ಹಾಗು ಆಶ್ರಮಗಳಿವೆ. ಋಶಿ ಸಾಧು ಸಂತರು ಅಲ್ಲಲ್ಲೇ ತಪೋವನಗಳಲ್ಲಿ ಧ್ಯಾನಮುಗ್ಧರಾಗಿರುವುದು ಕಾಣಬಹುದು.

ಇಂದಿನ ತಾರೀಖಿನಲ್ಲಿ ಹೃಷಿಕೇಶ ಕೇವಲ ರಾಮಾಯಣಕ್ಕೆ ಸಂಬಂಧಿಸಿದ ತೀರ್ಥವಾಗಿ ಉಳಿದಿಲ್ಲ. ಸನಾತನ ಧರ್ಮದ ಧಾರ್ಮಿಕ ಹಾಗು ಆಧ್ಯಾತ್ಮಿಕ ವಿಚಾರಗಳ ಕೇಂದ್ರ ಬಿಂದುವೂ ಆಗಿದೆ. ಯೋಗಾಭ್ಯಾಸ ಇಲ್ಲಿಯ ಇನ್ನೊಂದು ವಿಶಿಷ್ಟತೆ. ವಸ್ತುತಃ ಇದನ್ನು ಪ್ರಪಂಚದ ಯೋಗಾ ರಾಜಧಾನಿಯೆಂದು ಕರೆಯಲಾಗುತ್ತದೆ. ಇತ್ತೀಚೆಗೆ ಇದು ರಭಸ ನದಿ ಉಡುಪಾಟಕ್ಕೂ (ವೈಟ್ ವಾಟರ್ ರ್ಯಾಫ಼್ಟಿಂಗ್) ಪ್ರಸಿದ್ಧವಾಗಿದೆ. ಹೃಷೀಕೇಶದಲ್ಲಿ ನಾವು ಹಲವಾರು ವಿದೇಶಿಯರನ್ನೂ ಕಂಡೆವು. ಅವರುಗಳೂ ಇಲ್ಲಿಗೆ ಆಕರ್ಷಿತವಾಗಿ ಬರುತ್ತಾರಂತೆ.

ಲಕ್ಷ್ಮಣ ಜೂಲ್ಹಾ ಸೇತುವೆಯ ಊರ್ಜಿತ ದಾಟುವಿಕೆಯೊಂದಿಗೆ ಹೃಷೀಕೇಶದ ಯಾತ್ರೆಯನ್ನು ಆರಂಭಿಸಿದೆವು. ಲಕ್ಷ್ಮಣ ಜೂಲ್ಹಾ (ಜೂಲ್ಹ ಎಂದರೆ ಉಯ್ಯಾಲೆ) ಲೋಹದ ಹಗ್ಗಗಳಿಂದ ಮಾಡಿದ ಒಂದು ಸೇತುವೆ. ಇದನ್ನು ಎತ್ತಿ ಹಿಡಿಯಲು ನದಿಯೊಳಗಿಂದ ಕಂಬಗಳಿಲ್ಲ. ಎರಡೂ ತೀರಗಳಲ್ಲಿರುವ ಕಂಬಗಳಿಂದ ನೇತುಹಾಕಿದ ಹಗ್ಗಗಳ ಮೇಲೆ ಒಂದು ಪುಟ್ಟ ರಸ್ತೆ ಇದೆ. ಅದರ ಮೇಲೆ ನಡೆದು ಹೋಗಬಹುದು. ನಡೆದು ಹೋಗುವಾಗ ಉಯ್ಯಾಲೆ ತೂಗಿದ ಭಾವ. ಈ ಸೇತುವೆ ಸುಮಾರು ೪೫೦ ಅಡಿ ಉದ್ದವಿದ್ದು ೧೯೩೯ ಇಸವಿಯಲ್ಲಿ ಕಟ್ಟಲ್ಪಟ್ಟಿತಂತೆ. ಈ ಸೇತುವೆ ರಾಮಾಯಣದ ಲಕ್ಷ್ಮಣನ ನೆನಪಿಗೆ ಸಮರ್ಪಿತವಂತೆ. ಲಕ್ಷ್ಮಣನು ಇದೇ ಜಾಗದಲ್ಲಿ ಒಂದು ಗೋಣೀಹಗ್ಗದ ಸೇತುವೆಯ ಮೇಲೆ ಗಂಗಾನದಿಯನ್ನು ದಾಟಿದ್ದನಂತೆ. ಇದಕ್ಕೆ ರುಜುವಾತಾಗಿ ಈ ಸ್ಥಳದಲ್ಲಿ ಒಂದು ಲಕ್ಷ್ಮಣನ ಗುಡಿಯೂ ಇದೆ.

ಈ ಸೇತುವೆಯಿಂದ ಸ್ವಲ್ಪವೇದೂರದಲ್ಲಿ ಇದೇ ತರಹದ (ಲೋಹದ ಹಗ್ಗದ) ಮತ್ತೊಂದು ಸೇತುವೆ ಇದೆ. ಅದರ ಹೆಸರು ರಾಮ್ ಜೂಲ್ಹಾ. ರಾಮ್ ಜೂಲ್ಹಾ ಸೇತುವೆಯ ಎರಡೂ ಕಡೆಗಳಲ್ಲಿ ಶಿವಾನಂದಾಶ್ರಮ ಹಾಗು ಸ್ವರ್ಗಾಶ್ರಮವೆಂಬ ಎರಡು ಆಶ್ರಮಗಳಿವೆ.

ಮೊದಲಿಗೆ ಲಕ್ಷ್ಮಣನ ಗುಡಿಗೆ ಹೋದೆವು. ನಂತರ ಒಂದು (ಆಧುನಿಕ) ದೊಡ್ಡ ಶಿವಲಿಂಗಕ್ಕೆ ನಮಿಸಿ ದಶಾವತಾರ ದೇವಾಲಯಕ್ಕೆ ಹೋದೆವು. ಇಲ್ಲಿಯ ದಶಾವತಾರ ಪ್ರತಿಮೆಗಳನ್ನು ನೋಡಿ, ಲಕ್ಷ್ಮಣ ಜೂಲ್ಹಾ ದಾಟಿ ಮುನ್ನಡೆದೆವು. ಹೃಷೀಕೇಶದಲ್ಲಿ ಹಸುಗಳು, ಗೂಳಿಗಳು ನಿರಂಕುಶವಾಗಿ ಓಡಾಡುತ್ತವೆ. ನಮ್ಮ ಗುಂಪಿನ ದೇಶಪಾಂಡೆಯವರು ಬಾಳೇಹಣ್ಣು ಹಿಡಿದಿದ್ದನ್ನು ನೋಡಿ ಒಂದು ಗೂಳಿ ಅವರಿಗೆ ಹಾಯಲು ಬಂತಂತೆ. ಅವರು ಹೆಚ್ಚು ಪೆಟ್ಟಾಗದೆ ತಪ್ಪಿಸಿಕೊಂಡರೂ ನಮ್ಮ ಬೆಳವಾಡಿಯ ಮೂರ್ತಿ ಹೀಗೆ ಒಂದು ಅಪಘಾತದಲ್ಲಿ ಸಿಕ್ಕಿ ಅವರಿಗೆ ಸ್ವಲ್ಪ ಗಾಯವಾಯಿತು. ನಂತರ ಸಂಜೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕಾಯಿತು.

ಲಕ್ಷ್ಮಣ ಜೂಲ್ಹಾ ದಾಟಿಹೋದ ನಂತರ ಸ್ವರ್ಗಾಶ್ರಮವೆಂಬ ಒಂದು ಆಶ್ರಮಕ್ಕೆ ಹೋದೆವು. ಇಲ್ಲಿ ಕಣ್‌ಮನ ತಣಿಸುವ ದೇವರ ಪ್ರತಿಮೆಗಳಿವೆ. ತಿಂಡಿ ತಿನಿಸುಗಳ ಅಂಗಡಿಗಳಲ್ಲದೆ ಬೇರೆ ಖರೀದಿಗಳಿಗೆ ಅಂಗಡಿಗಳೂ ಇವೆ. ಹಲವಾರು ಸಣ್ಣ ಗುಡಿಗಳೂ ಇವೆ. ನೀಲಕಂಠ ಮಹಾದೇವ ಮೇಳವೆಂಬ ಒಂದು ಪ್ರಸಿದ್ಧ ಹಾಗು ಪವಿತ್ರ ದೇವಾಲಯವು ಇಲ್ಲಿ ಒಂದು ಗುಡ್ಡದ ಮೇಲೆ ಇದೆ. ನಂತರ ಗೀತ ಭವನವೆಂಬ ಆಧುನಿಕ ಕಟ್ಟಡ ಒಂದಕ್ಕೆ ಹೋದೆವು. ಇಲ್ಲಿ ಸುಂದರ ಪ್ರತಿಮೆಗಳು ಹಾಗು ವರ್ಣಚಿತ್ರಗಳೂ ಇವೆ.

ಮುಂದೆ ಉತ್ತರ ಪ್ರದೇಶ ಸರಕಾರದ ರತ್ನ-ಕಲ್ಲು-ಮಣಿಗಳು ಮಾರುವ ಒಂದು ಅಂಗಡಿಗೆ ಹೋದೆವು. ನಮ್ಮ ಗುಂಪಿನವರು ಅಲ್ಲಿ ಸ್ಪಟೀಕಾ ಮಾಲೆ, ರುದ್ರಾಕ್ಷಿ ಮಾಲೆ, ನವರತ್ನ ಮಾಲೆ, ಸ್ಪಟಿಕಾ ಶಿವಲಿಂಗ, ಇತ್ಯಾದಿಗಳನ್ನು ಕೊಂಡರು. ಇದಾದಮೇಲೆ ಒಂದು ಜೀಪ್ ವಾಹನದಲ್ಲಿ ಕುಳಿತು ರಾಮ್ ಜೂಲ್ಹಾಗೆ ಹೋದೆವು. ಇಲ್ಲಿ ಒಂದು "ಕಾಲಿ ಕಮ್ಲಿ ಬಾಬಾ" ಆಶ್ರಮವೆಂಬ ಒಂದು ಆಶ್ರಮವನ್ನು ನೋಡಿದೆವು. ಈ ಸ್ಥಳದಲ್ಲಿ ಕೇದಾರಕ್ಕೆ ಹೊರಟ ಪಾಂಡವರು ವಿಶ್ರಮಿಸಿಕೊಂಡಿದ್ದರಂತೆ. ಹೃಷೀಕೇಶದಲ್ಲಿ ದಿನನಿತ್ಯವೂ ಸುಮಾರು ನಾಲ್ಕು ಸಾವಿರ ಸಾಧು ಸನ್ಯಾಸಿಗಳಿಗೆ ಇಲ್ಲಿಯ ಅನೇಕ ಧರ್ಮಶಾಲೆಗಳಲ್ಲಿ ಉಚಿತವಾಗಿ ಊಟ ಹಾಕುತ್ತಾರಂತೆ. ಮುಂದೆ ಸಾಗುತ್ತ ಶೇಷಶಯನನಾದ ಮಹಾವಿಷ್ಣುವಿನ ಒಂದು ದೊಡ್ಡದಾದ ಸುಂದರ ಪ್ರತಿಮೆಯನ್ನು ಕಂಡೆವು.

ಇದಾದ ಮೇಲೆ ಹಲವರು ಮತ್ತೆ ಒಂದಿಷ್ಟು ಖರೀದಿ (ಶಾಪಿಂಗ್) ಮಾಡಲು ಮತ್ತೆ ಪೇಟೆ ಬೀದಿಗೆ ಹೋದರು. ನಾನು ಹಾಗು ನವೀನ್‌ಕುಮಾರ್ ತಂಡ ಗಂಗಾ ತೀರಕ್ಕೆ ಹಿಂತಿರುಗಿದೆವು. ಇಲ್ಲಿ ತ್ರಿವೇಣಿ ಘಟ್ಟವೆಂಬ ಸ್ನಾನದ ಘಟ್ಟ ನೋಡಿದೆವು. ಈ ತ್ರಿವೇಣೀ ಘಟ್ಟ ಗಂಗಾಸ್ನಾನಕ್ಕೆ ವಿಶೇಷ ಘಟ್ಟವಂತೆ. ಹಳೆಯ ಕಾಲದ ತ್ರಿವೇಣೀ ಸಂಗಮ (ಗಂಗಾ, ಯಮುನಾ ಹಾಗು ಸರಸ್ವತಿ ನದಿಗಳ ಸಂಗಮ) ಇಲ್ಲಿತ್ತಂತೆ. ಈ ಘಟ್ಟದಲ್ಲಿಯೂ ದಿನನಿತ್ಯ ಸಂಜೆಯ (ಹರಿದ್ವಾರದ ಹರ್ ಕೀ ಪೌಡಿಯ ಹಾಗೆ) ಆರತಿ ಹಾಗು ದೀಪಾರಾಧನೆ ನಡೆಯುತ್ತದೆಯಂತೆ. ಆ ನೋಟವೂ ಬಲು ರಮ್ಯವಾದುದೆಂದು ಕೇಳಿದೆವು. ನಮ್ಮ ಬಸ್‌ಗೆ ಹಿಂತಿರುಗಲು ಮತ್ತೆ ಗಂಗೆಯನ್ನು ದಾಟಬೇಕಿತ್ತು. ರಾಮಾಯಣದಲ್ಲಿ ರಾಮನು ಗುಹನ ಸಹಾಯದಿಂದ ಗಂಗಾನದಿ ದಾಟಿದ ಸ್ಥಳದಲ್ಲಿ ನಾವೂ ದೋಣಿಯಲ್ಲಿ ಕುಳಿತು ಗಂಗೆಯನ್ನು ದಾಟಿದೆವು.

ಬಸ್ ನಿಲ್ಲುವ ಸ್ಥಳಕ್ಕೆ ಹೋದರೆ ಉಳಿದವರು ಇನ್ನೂ ಬಂದಿರಲಿಲ್ಲ. ಸ್ವಲ್ಪ ಸಮಯವಿದ್ದಿದ್ದರಿಂದ ನಾನು ನದಿಯ ಬಳಿ ಹೋಗಿ ಬಂಡೆಯ ಮೇಲೆ ಬಟ್ಟೆ ಒಗೆದುಕೊಳ್ಳಲಾರಂಭಿಸಿದೆ. ಒಗೆದು ಮುಗಿಯುವ ಮುನ್ನವೇ ಉಳಿದವರೆಲ್ಲ ಬಂದುಬಿಟ್ಟರು. ಎಲ್ಲರೂ ಬಸ್ ಏರಿ ಪ್ರಸಂಗರಹಿತವಾಗಿ ಹರಿದ್ವಾರವನ್ನು ತಲುಪಿದೆವು. ಇಲ್ಲಿಗೆ ನಮ್ಮ "ದೋ ಧಾಮ್" (ಎರಡು ಧಾಮಗಳ) ಯಾತ್ರೆಯು ಮುಗಿದಿತ್ತು. (ಹಲವರು "ಚಾರ್ ಧಾಮ್" (ನಾಲ್ಕು ಧಾಮಗಳ) ಯಾತ್ರೆಗೆ ಹೋಗುತ್ತಾರೆ - ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿ. ನಮ್ಮದು ಎರಡು ಧಾಮಗಳ ಯಾತ್ರೆಯಾಗಿತ್ತು.)

ಹರಿದ್ವಾರದಲ್ಲಿ, ನಾವು ಮೊದಲಿದ್ದ ಪ್ರವಾಸಿ ಮಂದಿರದಲ್ಲೆ ಮತ್ತೆ ತಂಗಿದೆವು. ನಾನು ತಾತ್ಕಾಲಿಕವಾಗಿ ಬಟ್ಟೆ ಒಗೆದು ಮುಗಿಸಲು ಹಾಗು ಸ್ನಾನ ಮಾಡಲು ನದಿಗೆ ಹೋದೆ. ಮುಗಿದ ಮೇಲೆ ಕೋಣೆಗೆ ಹಿಂತಿರುಗಿ ಬಟ್ಟೆಗಳನ್ನು ಒಣಹಾಕಿದೆ. ಮತ್ತೆ ನದಿ ತೀರಕ್ಕೆ ಹೋಗಿ ಹರ್ ಕೀ ಪೌಡಿ ಆರತಿಯನ್ನು ನೋಡಿ ಉತ್ತೇಜನ ಪಡೆದೆ. ನಂತರ ಪೇಟೆ ಬೀದಿಗೆ ಹೋಗಿ ಒಂದೆರಡು ಸಣ್ಣ ಖರೀದಿಗಳನ್ನು - ಮತ್ತೊಂದು ರುದ್ರಾಕ್ಷಿ ಮಾಲೆ, ಸ್ವಲ್ಪ ಧೂಪ್ (ಅಗರಬತ್ತಿಯ ತರಹ), ಬೆನ್ನು ನೋವಿನ ಆಯುರ್ವೇದ ಔಷಧಿ - ನಮ್ಮ ತಂದೆಗೆ, ಇತ್ಯಾದಿ - ಮಾಡಿ ಕೋಣೆಗೆ ಹಿಂತಿರುಗಿದೆ. ಬೆಳವಾಡಿ ತಂಡದವರು, ಮೂರ್ತಿ ಹೃಷೀಕೇಶದಲ್ಲಿ ಗಾಯಗೊಂಡು ಅಸ್ವಸ್ಥರಾಗಿದ್ದರಿಂದ, ನನ್ನ ಬಳಿ ಬಂದು ಹಣ್ಣು ತಂದು ಕೊಡಲು ಕೇಳಿಕೊಂಡರು. ಸರಿ ಮತ್ತೆ ಪೇಟೆ ಬೀದಿಗೆ ಹೋಗಿ ಅವರಿಗೆ ಬೇಕಾದ ಹಣ್ಣು-ಹಂಪಲುಗಳನ್ನು ತಂದು ಕೊಟ್ಟೆ.

ಚಪಾತಿ-ಸಾಗು ಅನ್ನ-ಸಾರು ಇತ್ಯಾದಿ ಊಟ ಮಾಡಿದೆವು. ಬಹಳ ದಿನಗಳಿಂದ ಕಾಣದ ಊಟವೆನಿಸಿತು. ಇನ್ನು ನಾಲ್ಕಾರು ಗುಂಪು ಕನ್ನಡಿಗರು ಆ ಪ್ರವಾಸಿ ಮಂದಿರಕ್ಕೆ ಬಂದಿದ್ದರು. ನಾನು ಸ್ವಲ್ಪ ಹೊತ್ತು ಅವರುಗಳೊಡನೆ ಮಾತನಾಡಿ, ಎಲ್ಲರೂ ನಮ್ಮ ನಮ್ಮ ಅನುಭವಗಳ ವಿನಿಮಯ ಮಾಡಿಕೊಂಡೆವು. ಅವರಲ್ಲೊಬ್ಬರು ಬದರೀನಾಥದಿಂದ ಬರುವ ದಾರಿಯಲ್ಲಿ ಬಿದ್ದ ಬಸ್ ಮುಂದೆಯೇ ಇದ್ದರಂತೆ. ಪಾಪ ಸ್ವಲ್ಪ ದಿಗಿಲಾಗಿದ್ದರು. ಎಲ್ಲ ಮುಗಿಯುವಷ್ಟು ಹೊತ್ತಿಗೆ ಸಮಯವಾಗಿತ್ತು. ಮಲಗಿ ನಿದ್ದೆ ಮಾಡಿದೆ.


ಭಾಗ ೯: ಅಯೋಧ್ಯೆ

೯ ಮೇ ೧೯೯೮

ಅಂದು ಬೆಳಿಗ್ಗೆ ೫:೦೦ ಘಂಟೆಗೆ ಎದ್ದು, ಹಲ್ಲು ತಿಕ್ಕಿ, ಕಾಫಿ ಕುಡಿದು ಮತ್ತೆ ಗಂಗಾ ಸ್ನಾನಕ್ಕೆ ಹೋದೆವು. ಹಿಂತಿರುಗಿ ಸಿಹಿ ಅವಲಕ್ಕಿಯ ತಿಂಡಿ ತಿಂದೆವು. ಇಷ್ಟು ಹೊತ್ತಿಗೆ ಜೋರು ಮಳೆ ಚೆಚ್ಚಲಾರಂಭಿಸಿತ್ತು. ಮಳೆ ನಿಂತ ನಂತರ ನಮ್ಮ ಉಳಿದ ಪ್ರವಾಸಕ್ಕೆ ಏರ್ಪಡಿಸಿದ್ದ ಬಸ್ ಬಂತು. ಇದು ನಮ್ಮ ಹಿಮಾಲಯ ಪ್ರವಾಸದ ಬಸ್ಸಿನಂತೆ ಸಣ್ಣದಾಗಿಲ್ಲದೆ ಸಾಕಷ್ಟು ವಿಶಾಲವಾಗಿದ್ದು, ಸುಖಕರ ಕುರ್ಚಿಗಳಿಂದ ಕೂಡಿತ್ತು. ನಮ್ಮೆಲ್ಲರ ಸಾಮಾನುಗಳನ್ನು ಬಸ್ಸಿನೊಳಗೆ/ಮೇಲೆ ಹಾಕಿ ಹೊರಟೆವು.

ನಮ್ಮನ್ನು ಕಾದಿದ್ದು ಒಂದು ದೊಡ್ಡ ಪ್ರಯಾಣ. ಗಂಗೆಯ ಬಯಲು ಸೀಮೆ (ಗ್ಯಾಂಜೆಟಿಕ್ ಪ್ಲೈನ್) ಪ್ರದೇಶದಲ್ಲಿ ಉತ್ತರ ಪ್ರದೇಶದ ಉತ್ತರ ಭಾಗದಿಂದ ದಕ್ಷಿಣ-ಪೂರ್ವ ಭಾಗಕ್ಕೆ ಹೋಗಬೇಕಿತ್ತು. ಹದಿನೇಳು ಘಂಟೆಗಳ ಈ ಪಯಣ ಬಹಳ ದಣಿವುಕಾರಿಯಾಗಿತ್ತು. ಹೆಚ್ಚು ಕಡಿಮೆ ಉತ್ತರ ಪ್ರದೇಶದ ಎಲ್ಲ ಚಿರಪರಿಚಿತ ಊರುಗಳನ್ನು ಹಾಯ್ದು ಹೋದೆವು. ಬರೇಲಿ, ಶಹಜಹಾನ್‌ಪುರ, ಸೀತಾಪುರ, ಲಖ್‌ನೌ, ಫೈಜ಼ಾಬಾದ್ ಹೀಗೆ. ಆಚೆ ನೋಡಿದರೆ ಸಮ ಮಟ್ಟದ ಭೂಮಿ. ನಮಗಂತೂ (ದಾಖನ್ ಪ್ರದೇಶದಲ್ಲಿರುವವರಿಗೆ) ಇದೊಂದು ವಿನೂತನ ಅನುಭವ. ಎಲ್ಲ ದಿಕ್ಕಿನಲ್ಲೂ ಸಮಮಟ್ಟದ ನೆಲ ಕ್ಷಿತಿಜದಲ್ಲಿ ಕುಂದುತ್ತದೆ. ಬೆಟ್ಟ-ಗುಡ್ಡಗಳ ಸುಳಿವೇ ಇಲ್ಲ. ಇನ್ನು ಝರಿ, ನದಿಗಳ ಎಡೆ ಬಿಟ್ಟು ಬಂದಿದ್ದೆವು. ದಾರಿಯಲ್ಲಿ ಸಿಕ್ಕ ನಾಳಬಾವಿ (ಬೋರ್‌ವೆಲ್) ಬಳಿ ನಿಂತು ಊಟ ಮಾಡಿದೆವು.

ರಾತ್ರಿಯ ಊಟವೇನಾಯಿತೋ ನೆನಪೇ ಇಲ್ಲ. ಕೊನೆಗೆ ಅಯೋಧ್ಯೆ ಸೇರುವಷ್ಟು ಹೊತ್ತಿಗೆ ರಾತ್ರಿ (ಅಥವ ಮುಂಜಾವು) ಘಂಟೆ ೧:೦೦ ಆಗಿತ್ತು. ನಾವು ತಂಗಬೇಕಿದ್ದ ಪ್ರವಾಸಿ ಮಂದಿರದ ಗೇಟ್ ಮುಚ್ಚಿ ಬೀಗ ಹಾಕಲಾಗಿತ್ತು. ಹರಿಯಪ್ಪ ಗೇಟ್ ಹಾರಿ ಗುಮಾಸ್ತನನ್ನು ಎಬ್ಬಿಸಿ ಬಾಗಿಲು ತೆಗೆಸುವಷ್ಟು ಹೊತ್ತಿಗೆ ಇನ್ನಷ್ಟು ತಡವಾಗಿತ್ತು. ದೀರ್ಘ ಪ್ರಯಾಣದಿಂದ ಎಲ್ಲರಿಗೂ ಬಹಳಷ್ಟು ಸುಸ್ತಾಗಿತ್ತು. ಕೊನೆಗೆ ಮಲಗುವಷ್ಟು ಹೊತ್ತಿಗೆ ೨:೦೦ ಘಂಟೆಯೇ ಹೊಡೆದಿತ್ತು.

೧೦ ಮೇ ೧೯೯೮

ಬಾತ್‌ರೂಮ್ ಮಿತಿಗಳಿದ್ದರಿಂದ ನಾನು ೫:೩೦ ಘಂಟೆಗೇ ಎದ್ದುಬಿಟ್ಟೆ. ಬೆಳಗಿನ ಕಾರ್ಯಗಳನ್ನು ಮುಗಿಸಿ ಎಲ್ಲರೂ ತಯಾರಾಗುವುದನ್ನು ಕಾಯಹತ್ತಿದೆ. ನಂತರ ತಿಂಡಿ ಬಡಿಸಲಾಯಿತು. ತಿಂಡಿ ಮುಗಿಸಿ ಅಯೋಧ್ಯೆ ನೋಡಲು ಹೊರಟೆವು.

ಅಯೋಧ್ಯೆ ಇಂದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿ, ಸರಯೂ ನದಿ ತೀರದಲ್ಲಿ, ಲಖ್‌ನೌನಿಂದ ಸುಮಾರು ೧೩೫ ಕಿಲೋಮೀಟರ್ ಹಾಗು ಫೈಜಾಬಾದಿನಿಂದ ೪-೫ ಕಿಲೋಮೀಟರ್‌ಗಳ ದೂರದಲ್ಲಿದೆ. ಅಯೋಧ್ಯ ಎಂದರೆ "ಯುದ್ಧ ಮಾಡಬಾರದಂತಹ" ಅಥವಾ "ಯುದ್ಧ ಮಾಡಲಾಗದಂತಹ" ಎಂಬ ಅರ್ಥ ಬರುತ್ತದೆ. ಹಿಂದಿನ ಕಾಲದಲ್ಲಿ ಅಯೋಧ್ಯೆ ಭಾರತದೇಶದ ಅತ್ಯಂತ ದೊಡ್ಡ ಹಾಗೂ ಘನವಾದ ಊರುಗಳಲ್ಲೊಂದಾಗಿತ್ತೆಂದು ಹೇಳಲಾಗುತ್ತದೆ. ಇದೇ ಊರಿನಲ್ಲಿ ಭಗವಂತನ (ವಿಷ್ಣುವಿನ) ಅವತಾರನಾದ ಶ್ರೀರಾಮ ಜನಿಸಿದ್ದೆಂದು ಹೇಳಲಾಗುತ್ತದೆ.

ಹಲವಾರು ಶತಮಾನಗಳ ಕಾಲ ಅಯೋಧ್ಯೆಯು ಸೂರ್ಯವಂಶದ ಇಕ್ಷವಾಕು ರಾಜರ ರಾಜ್ಯವಾದ ಕೋಸಲ ದೇಶದ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಈ ವಂಶದ ರಾಜರಲ್ಲಿ ಪ್ರಸಿದ್ಧ ಹೆಸರುಗಳೆಂದರೆ ಮನುವಿನ ಮಗನಾದ ಇಕ್ಷವಾಕು, ಸತ್ಯಕ್ಕೇ ಪ್ರತೀಕನಾದ ರಾಜ ಹರಿಶ್ಚಂದ್ರ, ಅಶ್ವಮೇಧ ಯಾಗ ಮಾಡಿದ ರಾಜ ಸಗರ, ಗಂಗೆಯನ್ನು ಭೂಲೋಕಕ್ಕೆ ಕರೆದು ತಂದ ಭಗೀರಥ, ವಂಶಕ್ಕೆ 'ರಘುವಂಶ'ವೆಂದು ಹೆಸರು ಕೊಟ್ಟ ರಾಜ ರಘು, ರಾಜ ದಶರಥ, ಹಾಗು ದಶರಥನ ಮಗ ಭಗವಂತನ ಅವತಾರನಾದ ಶ್ರೀರಾಮ. ಮಹಾಭಾರತದ ಕಾಲದಲ್ಲಿ ಅಯೋಧ್ಯೆಯ ರಾಜನಾಗಿದ್ದ ಬೃಹದ್ಬಲ (ರಾಮನಿಂದ ೩೦ನೇ ಪೀಳಿಗೆಯಂತೆ!) ಆ ಮಹಾಯುದ್ಧದಲ್ಲಿ ಮರಣ ಹೊಂದಿದನೆಂದು ಭಾರತಕಥನದಲ್ಲಿ ಹೇಳಲಾಗಿದೆ.

ಅಥರ್ವಣ ವೇದವು, ಅಯೋಧ್ಯಾ ನಗರಿಯು ದೇವತೆಗಳಿಂದ ಕಟ್ಟಲ್ಪಟ್ಟಿತೆಂದೂ ಹಾಗೂ ಸ್ವರ್ಗದಷ್ಟೇ ಸಮೃದ್ಧವಾಗಿತ್ತೆಂದೂ ಹೇಳುತ್ತದೆಯಂತೆ. ಸ್ಕಾಂದ ಪುರಾಣವು ಅಯೋಧ್ಯೆಯನ್ನು ಭಾರತೆದೇಶದ ಏಳು ಅತ್ಯಂತ ಪುನೀತ ಕ್ಷೇತ್ರಗಳಲ್ಲೊಂದೆಂದು ಎಣಿಸುತ್ತದೆ. ಅಯೋಧ್ಯೆಯನ್ನು ವೈಕುಂಠದ ಒಂದು ಭಾಗವೆಂದು ಹೇಳುತ್ತಾರೆ. ಭಗವಾನ್ ವಿಷ್ಣುವು ಇದನ್ನು ಸರಯೂ ನದಿಯ ತೀರದಲ್ಲಿಟ್ಟು ಧರ್ಮಶಾಸ್ತ್ರಗಳನ್ನು ರಚಿಸಿದ ವೈವಸ್ವತ ಮನುವಿಗೆ ಕೊಟ್ಟನೆಂದು ಪುರಾಣಗಳು ಹೇಳುತ್ತವೆ. ತುಳಸೀದಾಸರೂ ತಮ್ಮ ಮಹಾಕಾವ್ಯವಾದ 'ರಾಮಚರಿತಮಾನಸ'ವನ್ನು ಈ ಊರಿನಲ್ಲೇ ರಚಿಸಿದ್ದು ಎಂದು ಹೇಳಲಾಗುತ್ತದೆ.

ಜೈನರು ಅಯೋಧ್ಯೆಯನ್ನು ವೃಷಭದೇವಾದಿ ಐದು ತೀರ್ಥಂಕರರ ಜನ್ಮಸ್ಥಳವೆಂದು ಹೇಳುತ್ತಾರೆ. ವೃಷಭದೇವನನ್ನು ಜೈನ ಧರ್ಮದ ವ್ಯವಸ್ಥಾಪಕನೆಂದು ಕರೆಯಲಾಗಿದೆ. ೫ನೇ ಶತಮಾನದ ಚೀನೀ ಪ್ರವಾಸಿ ಫಾ ಹಿಯಾನ್ ಅಯೋಧ್ಯೆಯನ್ನು ಸಂದರ್ಶಿಸಿ, ಆಗ ಅದು ಬೌಧ್ಧ ಧರ್ಮದ ಕೇಂದ್ರವಾಗಿತ್ತು ಎಂದು ಹೇಳಿದ್ದಾನೆ. ೭ನೇ ಶತಮಾನದ ವೆನ್ ಸಾಂಗ್‌ನೂ ಅಯೋಧ್ಯೆಗೆ ಭೇಟಿ ಕೊಟ್ಟು ಅಲ್ಲಿ ಮೂರು ಸಾವಿರ ಬೌಧ್ಧ ಭಿಕ್ಕುಗಳಿದ್ದರೆಂದು ಹೇಳಿದ್ದಾನೆ. ಆಗಿನ ಕಾಲದಲ್ಲಿ ಆ ಊರಿನಲ್ಲಿ ನೂರಕ್ಕೂ ಹೆಚ್ಚು ಬೌದ್ಧ ಸ್ತೂಪಾಗಳಿದ್ದವೆಂದೂ ಹೇಳಿದ್ದಾನೆ.

ಮುಘಲರ ಸಾಮ್ರಾಜ್ಯದ ವ್ಯವಸ್ಥಾಪಕನಾದ ಬಾಬರ್‌ನ ಕಾಲದಲ್ಲಿ (ಮುಘಲರ ಕಾಲಕ್ಕಿಂತ ಸ್ವಲ್ಪ ಮುಂಚೆಯೆಂದೂ ಕೆಲವೊಮ್ಮೆ ಹೇಳಲಾಗುತ್ತದೆ), ಈ ಊರು ಹಾಗು ಪ್ರದೇಶವು ಮುಸಲ್ಮಾನರ ಆಡಳಿತಕ್ಕೆ ಬಂದಿತು. ಅವರು ಇದನ್ನು ಇದರ ಪ್ರಾಕೃತ ಹೆಸರಾದ 'ಅವಧ್' ಅಥವಾ 'ಔಧ್' ಎಂಬ ಹೆಸರಿನಿಂದ ಕೂಗಿ, ಇಲ್ಲಿನಿಂದ ನವಾಬರು ಮುಘಲರ ಹೆಸರಲ್ಲಿ ಆಡಳಿತ ನಡೆಸುತ್ತಿದ್ದರು. ಮುಸಲ್ಮಾನರೂ ಅಯೋಧ್ಯೆಯನ್ನು ವಿಶೇಷವೆಂದು ಭಾವಿಸಿ ಇದನ್ನು 'ಖುರ್ದ್' ಮೆಕ್ಕಾ ಅತವ ಸಣ್ಣ ಮೆಕ್ಕಾ ಎಂದು ಕರೆಯುತ್ತಾರಂತೆ.

ಇಂದು ಅಯೋಧ್ಯೆ ಮಹಾಕತೆಯಾದ ರಾಮಾಯಣಕ್ಕೆ ಸಂಬಂಧಿಸಿದ ಊರೆಂದು ಹಾಗು ಶ್ರೀರಾಮನ ಜನ್ಮಸ್ಥಾನವೆಂದೇ ಪ್ರಸಿದ್ಧವಾಗಿದೆ. ಇತಿಹಾಸ ಪುರಾಣಗಳಲ್ಲಿ ಎಷ್ಟೆಷ್ಟೋ ಪ್ರಸಂಗಗಳ ಕೆಂದ್ರ ಬಿಂದುವಾಗಿದ್ದು ಇಂದು ವರ್ಷಾದ್ಯಂತ ಅಸಂಖ್ಯಾತ ಭಕ್ತರು ಯಾತ್ರೆ ಬರುವ ತೀರ್ಥಸ್ಥಳವಾಗಿದೆ. ಚೈತ್ರ ಮಾಸದಲ್ಲಿ ರಾಮನವಮಿಯ ದಿನ ಅಪರಿಮಿತ ಭಕ್ತರು ಇಲ್ಲಿಗೆ ಯಾತ್ರೆ ಬರುತ್ತಾರೆ. ಈ ಊರು ಹಿಂದೂ ದೇಗುಲಗಳಿಗೇ ಪ್ರಸಿದ್ಧವಾಗಿದ್ದರೂ ಇಲ್ಲಿ ಬೇರೆ ಧರ್ಮಗಳ ಉಪಾಸನೆ-ಸ್ಥಳಗಳೂ ಇವೆ. ಹಲವಾರು ಧರ್ಮಗಳು ಈ ಊರಿನಲ್ಲಿ ಬೆಳೆದು ಸಮೃದ್ಧಗೊಂಡಿವೆ. ಹಿಂದೂ, ಜೈನ, ಬೌದ್ಧ, ಸೀಖ ಹಾಗು ಇಸ್ಲಾಂ ಧರ್ಮಗಳ ಉಳಿಕೆಗಳನ್ನು ಇಂದಿಗೂ ಅಯೋಧ್ಯೆಯಲ್ಲಿ ಕಾಣಬಹುದು.

ಒಬ್ಬ ಸ್ಥಳೀಯ ಮಾರ್ಗದರ್ಶಕನನ್ನು ನಮ್ಮೊಡನೆ ಕರೆದುಕೊಂದು ಹೊರಟೆವು. ನಾವು ಮೊದಲು ಹೋದದ್ದು 'ತ್ರೇತಾ ಕೆ ಠಾಕುರ್' ಎಂಬ ದೇವಾಲಯಕ್ಕೆ. ಶ್ರೀರಾಮನು ಅಶ್ವಮೇಧಯಾಗವನ್ನು ಈ ಸ್ಥಳದಲ್ಲಿ ನಡೆಸಿದನೆಂದು ಹೇಳಲಾಗಿದೆ. ಸುಮಾರು ೩೦೦ ವರ್ಷಗಳ ಹಿಂದೆ ಕುಲು (ಕುಲು-ಮನಾಲಿ) ರಾಜನು ಹಳೆಯ ದೇವಸ್ಥಾನದ ಸ್ಥಳದಲ್ಲಿ ಹೊಸ ದೇಗುಲವನ್ನು ನಿರ್ಮಿಸಿದನೆಂದು ಹೇಳುತ್ತಾರೆ. ಆ ದೇಗುಲವನ್ನು ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ ನವೀಕೃತಗೊಳಿಸಿ ಸ್ನಾನ ಘಟ್ಟಗಳನ್ನು ಕಟ್ಟಿಸಿದಳಂತೆ. ಕೋಮುಗಲಭೆಯಲ್ಲಿ ಕಳೆದುಹೋದ ಕಪ್ಪು ಬಳಪದಕಲ್ಲಿನ ಪ್ರತಿಮೆಗಳು ಸರಯೂ ನದಿಯಲ್ಲಿ ಸಿಕ್ಕಿ ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟವೆಂದು ಹೇಳಲಾಗಿದೆ.

ನಂತರ ನಾಗೇಶ್ವರನಾಥ ದೇವಸ್ಥಾನಕ್ಕೆ ಹೋದೆವು. ನಾಗೇಶ್ವರನಾಥ ಅಯೋಧ್ಯೆಯ ನಗರದೇವತೆಯಂತೆ. ಶ್ರೀರಾಮನ ಮಗನಾದ ಕುಶನು ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ಕಳೆದುಕೊಂಡ ತೋಳುಬಂಧಿ ಓರ್ವ ನಾಗಕನ್ನಿಕೆಗೆ ಸಿಕ್ಕಿ ಆಕೆ ಕುಶನನ್ನು ಪ್ರೇಮಿಸಲಾರಂಭಿಸಿದಳಂತೆ. ಈಶ್ವರನ ಭಕ್ತೆಯಾದ ಆಕೆಯ ಸಲುವಾಗಿ ಕುಶನು ಈ ದೇವಾಲಯವನ್ನು ನಿರ್ಮಿಸಿದನಂತೆ. ಗುಪ್ತ ವಂಶದ ರಾಜನಾದ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ ಈ ಪ್ರದೇಶವು ಗಿಡ-ಮರಗಳಿಂದ ಕವಿದುಹೋದ ಕಾಡಾಗಿತ್ತಂತೆ. ವಿಕ್ರಮಾದಿತ್ಯನು ಅಯೋಧ್ಯೆಯನ್ನು ಪರಿಶೋಧಿಸಿ ಇಲ್ಲಿಯ ಪವಿತ್ರ ಸ್ಥಳಗಳನ್ನು ಗುರುತಿಸಿ ಈ ದೇವಾಲಯವನ್ನು ನವೀಕೃತಗೊಳಿಸಿದನಂತೆ. ಪಾಳುಬಿದ್ದ ಈ ದೇವಾಲಯವನ್ನು ೧೭೫೦ನೇ ಇಸುವಿಯಲ್ಲಿ ಮುಘಲ್ ಆಡಳಿತದ ಒಬ್ಬ ಹಿಂದೂ ಮಂತ್ರಿಯು ಮತ್ತೆ ಕಟ್ಟಿಸಿದನಂತೆ. ಈ ದೇವಾಲಯವು ಸರಯೂ ತಟದಲ್ಲಿದ್ದು, ಇದರ ಸುತ್ತಲಿನ ಪ್ರದೇಶಕ್ಕೆ 'ಸ್ವರ್ಗದ್ವಾರ'ವೆಂದು ಕರೆಯುತ್ತಾರೆ. ಇಲ್ಲಿಯೂ ಸರಯೂ ನದಿಯಲ್ಲಿ ದೀಪಾರಾಧನೆ ನಡೆಯುತ್ತದೆಯೆಂದು ನಮ್ಮ ಮಾರ್ಗದರ್ಶಕ ಹೇಳಿದನು.

ಇದನ್ನು ಬಿಟ್ಟು ನಾವು ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಹೋದೆವು. ಈ ದೇವಾಲಯವನ್ನೂ ವಿಕ್ರಮಾದಿತ್ಯನೇ ಪರಿಶೊಧಿಸಿದನೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ರಾಮಜನ್ಮಭೂಮಿ ದೇವಾಲಯವಿತ್ತು ಎಂದು ಹೇಳುತ್ತಾರೆ. ಮುಘಲ್ ಸಾಮ್ರಾಜ್ಯದ ವ್ಯವಸ್ಥಾಪಕನಾದ ಬಾಬರನ ದಳಪತಿಯೊಬ್ಬ 'ಮೀರ್ ಬಾಕಿ' ಎಂಬಾತ ಬಾಬರನ ಆಜ್ಞೆಯ ಪ್ರಕಾರ ೧೫೨೮-೧೫೩೦ ಇಸವಿಗಳ ನಡುವೆ ಈ ಸ್ಥಳದಲ್ಲಿ ಮಸೀದಿಯನ್ನು (ಬಾಬರೀ ಮಸೀದಿ) ನಿರ್ಮಿಸಿದನೆಂದು ಸೂಚಿಸಲು ಮಸೀದಿಯೊಳಗೆ ಶಾಸನಗಳು ದೊರಕಿವೆ. ೧೯೪೯ ಇಸವಿಯಿಂದ ಇದು ಮುಸಲ್ಮಾನ ಕಟ್ಟಡವಾದರೂ, ಪೂಜೆಯಿಂದ ಹಿಂದೂ ದೇವಾಲಯವಾಗಿತ್ತು ಎಂದು ಹೇಳಲಾಗಿದೆ. ಆ ವರ್ಷದಲ್ಲಿ ಆ ಕಟ್ಟಡದೊಳಗೆ ರಾಮನ ಪ್ರತಿಮೆ ಇರಿಸಲಾಗಿತ್ತು. ೧೯೯೨ ಡಿಸಂಬರ್‌ನಲ್ಲಿ ಹಿಂದೂ ಜನರು ಈ ಮಸೀದಿಯು ಹಿಂದೂ ದೇವಾಲಯವನ್ನು ಕೆಡವಿ ಕಟ್ಟಿದ ಕಟ್ಟಡ ಎಂದು ಹೇಳಿ ಇದನ್ನು ಒಡೆದು ಬೀಳಿಸಿದರು. ಅಂದಿನಿಂದ ಇಂದಿನವರೆಗು ಹಲವಾರು ಸಾಕ್ಷಿ ಪುರಾವೆಗಳನ್ನು ಪರೀಕ್ಷಿಸಿಯೂ ಯಾವುದೂ ರುಜುವಾತಾಗಿಲ್ಲ. ಇದು ನಿಜವಾಗಿ ಹಿಂದೂ ದೇವಾಲಯವಾಗಿತ್ತು ಎಂದು ಸೂಚಿಸಲು ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯ ನಡೆಸಿದ ಪರಿಶೋಧನೆ ಹೇಳಿದರೂ, ಬಾಬರಿ ಮಸ್ಜಿದ್ ಆಕ್ಶನ್ ಕಮಿಟಿ ಎಂಬ ಮುಸಲ್ಮಾನ ಸಂಸ್ಥೆಯು ಇದರ ವಿರುದ್ಧ ಕೋರ್ಟಿನಲ್ಲಿ ಹೋರಾಡುತ್ತಿದೆ. ಈ ಸಮಸ್ಯೆಯ ಬಗ್ಗೆ ಇಲ್ಲಿ ಕೊಟ್ಟಿರುವ ಮಾಹಿತಿ ಸರಿ ಇಲ್ಲದಿರಬಹುದಾದ ಕಾರಣ, ಓದುಗರು ಎಲ್ಲ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಓದಿ ತಿಳಿದು ತಮ್ಮ ನಿರ್ಧಾರಗಳನ್ನು ಮಾಡುವುದಾಗಿ ವಿನಂತಿ.

ಈ ಕಟ್ಟಡ ಸಮೂಹದಲ್ಲಿ ನಾವು ಮೊದಲಿಗೆ "ಸೀತಾ ಕಿ ರಸೋಯಿ" (ಸೀತೆಯ ಅಡುಗೆಮನೆ) ಎಂಬ ಸ್ಥಳವನ್ನು ನೋಡಿದೆವು. ಇದು ಒಂದು ದೊಡ್ಡ ಅಡಿಗೆ ಮನೆಯ ಆಕಾರದಲ್ಲಿದೆ - ಒಲೆ, ಇತ್ಯಾದಿಗಳು. ಇಲ್ಲಿ ನಿಜವಾಗಿ ಸೀತೆ ಅಡಿಗೆ ಮಾಡುತ್ತಿದ್ದಳೆ? ಈ ಸ್ಥಳದಲ್ಲಿ ನಮ್ಮ ಮಾರ್ಗದರ್ಶಕ ಓರ್ವ ಸ್ವಾಮೀಜಿಯ ಜೊತೆ ಸಂದರ್ಶನ ಮಾಡಿಸಿದ.

ನಂತರ ರಾಮಜನ್ಮಭೂಮಿ ದೇವಸ್ಥಾನಕ್ಕೆ ಹೋದೆವು. ಇಲ್ಲಿ ಭಾರೀ ಮಿಲಿಟರಿ ನಿಯಂತ್ರಣೆ. ವಿಮಾನ ಪ್ರಯಾಣದ ಮುನ್ನ ಮಾಡುವಂತಹ ಭದ್ರತಾ ನಿಗ್ರಹ ಎಲ್ಲ ಭಕ್ತರಿಗೂ. ಹತ್ತಾರು ಸಾಲುಗಳು, ನಿಲ್ಲಲು ತೆರೆದ ಜಾಗಗಳಿಲ್ಲ - ಎಲ್ಲೆಡೆ ಪಂಜರದಂತಹ ಬೋನುಗಳು. ನಮ್ಮ ಮಾರ್ಗದರ್ಶಕ ಹೆಮ್ಮೆಯಿಂದ "ಚಾರ್ ಘಂಟೆ ಮೆ ಬಾಬರೀ ಮಸ್ಜಿದ್ ಕಾ ಕಾಮ್ ತಮಾಮ್ ಕರ್ ದಿಯಾ" (ನಾಲ್ಕು ಘಂಟೆಗಳಲ್ಲಿ ಬಾಬರೀ ಮಸೀದಿಯನ್ನು ಕೆಡವಿದೆವು) ಎಂದು ಹೇಳಿಕೊಂಡ. ಕೊನೆಗೊಮ್ಮೆ ದರ್ಶನದ ಸಮಯವಾಯಿತು. ಇನ್ನೂ ಯಾವುದೇ ಕಟ್ಟಡವಿರಲಿಲ್ಲ. ಒಂದು ಗುಡಾರದೊಳಗೆ 'ರಾಮ್‌ಲಲ್ಲ' ಮೂರ್ತಿ (ವ್ಯಾಜ್ಯ ಕಟ್ಟಡದೊಳಗಿದ್ದ ಮೂರ್ತಿ) ಇರಿಸಲಾಗಿತ್ತು. ಸುಮಾರು ೨೦ ಮೀಟರ್ ದೂರದಿಂದ ಒಂದು ೫-೮ ಸೆಕೆಂಡುಗಳ ದರ್ಶನದ ಸಮಯವಿತ್ತು. ಅಷ್ಟು ಹೊತ್ತಿಗೆ ಸಾಲು ಮುಂದೆ ಹೋಗಿತ್ತು. ನಿಯಂತ್ರಣಾಧಿಕಾರಿಗಳು ನಿಲ್ಲುವ ಸಮಯ ಕೊಡಲಿಲ್ಲ.

ಇದು ಮುಗಿಸಿ ಮಾರ್ಗದರ್ಶಕ ನಮ್ಮನ್ನು ಒಂದು ದಶರಥ ದೇವಾಲಯಕ್ಕೆ ಕರೆದೊಯ್ದ. ಇಲ್ಲಿ ಏನೋ ಕಾರಣ ಹೇಳಿ ನಮ್ಮೆಲ್ಲರ ಕೈಯಲ್ಲಿ ರೂ. ೧೦೦ರ ದಾನ ಕಿತ್ತರು. ಇದು ಯಾಕೋ ವ್ಯಾವಹಾರಿಕವಾಗಿ ಕಾಣಿಸಿತು. ಇದಾದ ನಂತರ ಸ್ವಲ್ಪ ದೂರದಲ್ಲಿದ್ದ ದಶರಥ ಭವನಕ್ಕೆ ನಡೆದೇ ಹೋದೆವು. ಇಲ್ಲಿ ಬಾಬರೀ ಮಸೀದಿಯಲ್ಲಿದ್ದ ಉಳಿದ ಮೂರ್ತಿಗಳನ್ನು ಇರಿಸಲಾಗಿದೆ. ರಾಮ ಲಕ್ಷ್ಮಣ, ಭರತ, ಶತ್ರುಘ್ನ ಅವರವರ ಪತ್ನಿಯರು, ದಶರಥ, ವಸಿಷ್ಠ, ಇತ್ಯಾದಿ ಮೂರ್ತಿಗಳಿವೆ. ಇವನ್ನು ರಾಮ ಜನ್ಮಭೂಮಿ ದೇವಾಲಯ ಕಟ್ಟಿದ ನಂತರ ಅಲ್ಲಿರಿಸುತ್ತಾರಂತೆ.

ಪಕ್ಕದಲ್ಲೇ ಒಂದು ಪುಸ್ತಕದ ಅಂಗಡಿಗೆ ಹೋದೆ. ಅಲ್ಲಿ ರೂ. ೫೦ರ ಕಾಣಿಕೆ ಕೊಟ್ಟರೆ ರಾಮಾಯಣದ ಪುಸ್ತಕಗಳನ್ನು ಕಳುಹಿಸುವುದಾಗಿ ಹೇಳಿದರು. ನಾನು ರೂ.೫೦ ಕೊಟ್ಟೆ, ಆದರೆ ಎಂದೂ, ಯಾವ ಪುಸ್ತಕವನ್ನೂ ಕಾಣಲಿಲ್ಲ. ಮತ್ತೆ ಬಸ್ ಹತ್ತಿ ಸರಯೂ ತಟಕ್ಕೆ ಹೋದೆವು. ಇಂದು ಬೆಳಗ್ಗೆ ಇಲ್ಲಿ ಸ್ನಾನ ಮಾಡುವ ಕಾರ್ಯಕ್ರಮವಿತ್ತು. ಆದರೆ ಹಿಂದಿನ ದಿನದ ಮಳೆಯ ಕಾರಣ ನದಿ ಕೊಳೆಯಾಗಿದ್ದರಿಂದ ಹೋಗಲಾಗಲಿಲ್ಲ ಎಂದು ಹರಿಯಪ್ಪ ಹೇಳಿದರು. ವೈದ್ಯರು ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು ಅನ್ನ ಎಂದುಕೊಂಡೆ.

ನಮ್ಮ ಛತ್ರಕ್ಕೆ ಹಿಂತಿರುಗುತ್ತ ಹನುಮಾನ್ ಗದ್ದಿ (ಹನುಮಂತನ ಗುಡ್ಡ) ಎಂಬ ಒಂದು ಸ್ಥಳವನ್ನು ನೋಡಹೋದೆವು. ಊರ ಮಧ್ಯದಲ್ಲಿರುವ ಈ ದೇವಾಲಯವಕ್ಕೆ ೭೨ ಮೆಟ್ಟಲುಗಳನ್ನು ಹತ್ತಿ ಹೋಗಬೇಕು. ಹನುಮಂತನು ಈ ದಿಬ್ಬದ ಮೇಲೆ ಒಂದು ಗುಹೆಯಲ್ಲಿದ್ದು ರಾಮರಾಜ್ಯವನ್ನು ಕಾಯುತ್ತಿದ್ದನೆಂದು ದಂತಕಥೆಗಳು ಹೇಳುತ್ತವೆ. ಈಗಿರುವ ದೇವಾಲಯವು ಸುಮಾರು ೧೦೦೦ ವರ್ಷ ಹಳೆಯದೆಂದು ಹೇಳಲಾಗಿದೆ. ಒಳಗೆ ಹನುಮಂತನ ಪ್ರತಿಮೆ ಇರಿಸಲಾಗಿದೆ.

ಕೋಣೆಗೆ ಹಿಂತಿರುಗಿ ಊಟ ಮಾಡಿದೆವು. ನಂತರ ಬಸ್ ಹತ್ತಿ ಮತ್ತೆ ಪಯಣ ಪ್ರಾರಂಭ ಮಾಡಿದೆವು. ನಮ್ಮ ಗುರಿ ವಾರಣಾಸಿ (ಕಾಶಿ) ಆಗಿತ್ತು. ಇದು ಸುಮಾರು ೧೬೦ ಕಿಲೋಮೀಟರ್‌ಗಳ ಅಂತರ. ಸಂಜೆ ೬:೦೦ ಘಂಟೆಗೇ ವಾರಣಾಸಿ ಮುಟ್ಟಿದರೂ ಸಹ ಟ್ರಾಫಿಕ್ ಜಾಮ್ ಹಾಗು ಸುತ್ತಿ ಬಳಸಿ ಹೋಗಬೇಕಾದ ರಸ್ತೆಗಳ ಕಾರಣ ಛತ್ರ ಸೇರುವಷ್ಟು ಹೊತ್ತಿಗೆ ಘಂಟೆ ಸಂಜೆ ೭:೩೦ ಆಗಿತ್ತು. ನಿರ್ಮಲಾನಂದ ಆಶ್ರಮದಲ್ಲಿ ತಂಗಿದೆವು. ನವೀನ್‌ಕುಮಾರ್ ಅವರ ಕನ್ನಡಕಕ್ಕೆ ಸ್ವಲ್ಪ ತೊಂದರೆಯಾಗಿ ಎರಡು ಬಾರಿ ನಾವಿಬ್ಬರೂ (ಅವರನ್ನು ಬಿಟ್ಟು ಕನ್ನಡಕ ಹಾಕಿಕೊಳ್ಳುವವ ನಾನೊಬ್ಬನೇ ಆದ್ದರಿಂದ) ಕನ್ನಡಕದ ಅಂಗಡಿಗೆ ಹೋಗಬೇಕಾಯಿತು. ಎರಡನೆ ಬಾರಿ ಸೈಕಲ್ ರಿಕ್ಷಾ ಹತ್ತಿ ಬಂದೆವು. ಪಾನ್ (ಎಲೆ ಅಡಿಕೆ) ಬಿಟ್ಟರೆ ಇಲ್ಲಿಯ ವಿಶಿಷ್ಟತೆ ಸೈಕಲ್ ರಿಕ್ಷಾ. ಹಗುರ ಊಟದ ನಂತರ ನಿದ್ದೆ ಮಾಡಿದೆವು.


ಭಾಗ ೧೦: ಕಾಶಿ

೧೧ ಮೇ ೧೯೯೮.

ಮತ್ತೆ ಸೋಮವಾರವಾಗಿತ್ತು - ವಿಶ್ವೇಶ್ವರನ ಮೆಚ್ಚಿನ ದಿನ. ಕಳೆದ ಸೋಮವಾರ ಕೇದಾರ ಇಂದು ಕಾಶಿಯೆಂದುಕೊಂಡೆ. ಬೆಳಿಗ್ಗೆ ಸುಮಾರು ೫:೩೦-೬:೦೦ ಘಂಟೆಗೆ ಎದ್ದು, ಸ್ನಾನ ಬಿಟ್ಟು ಬೇರೆಲ್ಲ ಕೆಲಸಗಳನ್ನು ಮುಗಿಸಿಕೊಂಡೆವು. ಮತ್ತೆ ಶೇಖರ ಎಂಬ ಸ್ಥಳೀಯ ಮಾರ್ಗದರ್ಶಕನೊಬ್ಬನನ್ನು ಹರಿಯಪ್ಪ ಗೊತ್ತುಮಾಡಿದರು. ಆಶ್ಚರ್ಯಕರವಾಗಿ ಈತ ಕನ್ನಡ (ಹಿಂದಿಯವರಂತಾದರೂ, ಸ್ವಚ್ಛವಾಗಿ) ಮಾತನಾಡುತ್ತಿದ್ದ. ಕಾಶಿ ಊರ ತುಂಬಾ ಸಣ್ಣ ಸಣ್ಣ ಗಲ್ಲಿಗಳು. ಈ ಗಲ್ಲಿಗಳು ಸುಮಾರು ೪-೫ ಅಡಿ ಅಗಲವಿರುತ್ತವೆ. ಎರಡೂ ಕಡೆ ಚರಂಡಿಗಳು ಸುಮಾರು ಒಂದು ಅಡಿ. ಉಳಿಯುವುದು ೩-೪ ಅಡಿ ಮಾತ್ರ. ಎಮ್ಮೆ ಹಸುಗಳು ತಮಗೆ ಬೇಕಾದ ಹಾಗೆ ಈ ಗಲ್ಲಿಗಳಲ್ಲಿ ಮಲಗಿರುತ್ತವೆ. ಕಾಶಿಯಲ್ಲಿ ಹಸು ಎಮ್ಮೆಗಳನ್ನು ಯಾರೂ ಓಡಿಸುವಂತಿಲ್ಲ. ಸೈಕಲ್‌ಗಳು, ದ್ವಿಚಕ್ರ ವಾಹನಗಳು, ಕೆಲವೊಮ್ಮೆ ಸ್ವಲ್ಪ ಅಗಲವಿದ್ದಲ್ಲಿ ಕಾರ್‌ಗಳೂ ಸಹ ಈ ಗಲ್ಲಿಗಳಲ್ಲಿ ಓಡುತ್ತವೆ. ಆದರೆ ಈ ಗಲ್ಲಿಗಳ ರಾಜ ಸೈಕಲ್‌ರಿಕ್ಷಾಗಳು.

ಇಂತಹ ಗಲ್ಲಿಗಳನ್ನು ಹಿಡಿದು ನಾವು ಕಂಗಾಲು ಮನುಷ್ಯರು, ಶೇಖರನ ಸಹಾಯದೊಂದಿಗೆ ನಡೆದುಕೊಂಡೇ ಹೋಗಿ ನದಿಯ ತೀರದಲ್ಲಿದ್ದ ಕ್ಷೇಮೇಶ್ವರ ಘಟ್ಟ ತಲುಪಿದೆವು. ಊರ ಉದ್ದಕ್ಕೂ ನದಿಯ ತೀರದಲ್ಲಿ ಸ್ನಾನಕ್ಕೆ ಘಟ್ಟಗಳನ್ನು ಮಾಡಿದ್ದಾರೆ. ಒಂದೊಂದು ಕಡೆ ಇವಕ್ಕೆ ಒಂದೊಂದು ಹೆಸರು. ನಾವು ಹೋದ ಕ್ಷೇಮೇಶ್ವರ ಘಟ್ಟ ಅತೀ ಸ್ವಚ್ಛವಂತೆ. ಆದರೆ ಹಿಮಾಲಯದಲ್ಲಿ ಸ್ವಚ್ಛ ಗಂಗೆಯನ್ನು ನೋಡಿಬಂದ ನಮಗೆ ಇಲ್ಲಿ ಗಂಗೆಯು ತುಂಬಾ ಮಲಿನಳಾಗಿ ಕಂಡಳು. ಎಲ್ಲರೂ ಸ್ನಾನ ಮಾಡಿದೆವು. ನಾನು ಗಂಗೆ ತೀರದಲ್ಲೇ ಸಂಧ್ಯಾವಂದನೆ ಮಾಡಿ, ಕಾಶಿಯಾತ್ರೆಯ ಸಂಕಲ್ಪ ಮಾಡಿಕೊಂಡೆ. ನಂತರ ಒಂದು ದೋಣಿಯಲ್ಲಿ ಕುಳಿತು ಹತ್ತಾರು ಘಟ್ಟಗಳ ದರ್ಶನ ಮಾಡಿಕೊಂಡು ಇಂತಹ ಒಂದು ಘಟ್ಟದಲ್ಲಿ (ಘಟ್ಟದ ಹೆಸರು ಮರೆತುಬಿಟ್ಟೆ) ಇಳಿದೆವು - ದೇವಸ್ಥಾನಗಳನ್ನು ನೋಡಲು.

ಕಾಶಿಯ ಬಗ್ಗೆ ಮಾಹಿತಿ: ಕಾಶಿ ಅಥವಾ ವಾರಣಾಸಿ ಇಡೀ ಭಾರತದಲ್ಲೇ ಅತ್ಯಂತ ಶ್ರೇಷ್ಠ ತೀರ್ಥಕ್ಷೇತ್ರ ಎಂದು ಹೇಳಬಹುದು. ಇದು ಉತ್ತರ ಪ್ರದೇಶ ರಾಜ್ಯದ ದಕ್ಷಿಣ ಪೂರ್ವ ಭಾಗದಲ್ಲಿ ಗಂಗಾನದಿಯ ತಟದಲ್ಲಿದೆ. ಹಿಂದೂ, ಬೌದ್ಧ ಹಾಗು ಜೈನ ತೀರ್ಥಯಾತ್ರಿಕರು ತಮ್ಮ ತಮ್ಮ ಪಾಪವಿಮೋಚನೆಗಾಗಿ, ಅಥವಾ ಜನನ-ಮರಣದ ಅನಂತ ಚಕ್ರದಿಂದ ಮುಕ್ತಿಯನ್ನು ಅಭಿಲಾಷಿಸಿ ಇಲ್ಲಿಯ ಸ್ನಾನ ಘಟ್ಟಗಳಿಗೆ ಒಟ್ಟುಗೂಡಿ ಬರುತ್ತಾರೆ.

ಪುರಾಣಗಳ ಪ್ರಕಾರ ಬ್ರಹ್ಮ ಹಾಗು ವಿಷ್ಣುವಿನ ಮಧ್ಯೆ ವಾದ-ವಿವಾದ ನಡೆಯುತ್ತಿದ್ದಾಗ ಬ್ರಹ್ಮನು ತನ್ನ ಅಹಂಗಾಗಿ ಸುಳ್ಳು ನುಡಿದನಂತೆ. ಆಗ ಈಶ್ವರನು ಕಾಲ ಭೈರವನಾಗಿ ಬ್ರಹ್ಮನಿಗಿದ್ದ ಐದು ತಲೆಗಳಲ್ಲಿ ಒಂದನ್ನು ಕತ್ತರಿಸಿದನಂತೆ. ಬ್ರಹ್ಮನ ಆ ತಲೆಯು ಕಾಲಭೈರವನ ಕೈಗೆ ಅಂಟಿ, ಅವನು ಕಾಶಿಗೆ ಬಂದಾಗ ಮಾತ್ರ ಬಿಟ್ಟುಕೊಂಡಿತಂತೆ. ಕಾಶಿಯನ್ನು ಶಕ್ತಿ ಪೀಠಗಳಲ್ಲೊಂದೆಂದೂ ಕರೆಯಲಾಗುತ್ತದೆ. ದಕ್ಷಯಜ್ಞದ ನಂತರ ಸತಿಯ ಎಡಗೈ ಕಾಶಿಯಲ್ಲಿ ಬಿದ್ದಿತೆಂದು ಹೇಳಲಾಗಿದೆ. ಅನ್ನಪೂರ್ಣೆ ಯಾ ವಿಶಾಲಾಕ್ಷಿಯೇ ಈ ಸ್ಥಳದ ಶಕ್ತಿ ಪೀಠದ ಸಂಕೇತ.

ಕಾಶಿಯು ಯುಗಯುಗಾಂತರಗಳ ಸಂಪ್ರದಾಯ ಹೊಂದಿ, ಪಾಂಡಿತ್ಯ ಹಾಗು ಪ್ರೌಢಿಮೆಯ ಕೇಂದ್ರಬಿಂದುವಾಗಿದೆ. ಪ್ರಾಚೀನಕಾಲದಿಂದಲೂ ಇದು ತೀರ್ಥಸ್ಥಳವಾಗಿರುವ ಸಂಕೇತಗಳು ಕಂಡು ಬಂದಿವೆ. ಕಾಶಿಯನ್ನು ಬ್ರಾಹ್ಮಣ, ಉಪನಿಷತ್ತು, ಕಾವ್ಯ-ಪುರಾಣ ಇತ್ಯಾದಿ ಗ್ರಂಥಗಳಲ್ಲಿ ಪದೇ ಪದೇ ವರ್ಣಿಸಲಾಗಿದೆ. ಕ್ರಿಸ್ತಶಕ ಮೊದಲನೇ ಶತಮಾನದಲ್ಲಿ ರಚಿಸಿದ ತಮಿಳು ಭಾಷೆಯ ಸಂಗಮ ಸಾಹಿತ್ಯ-ಕವನಗಳಲ್ಲೂ ಕಾಶಿಯ ಬಗ್ಗೆ ಹೇಳಲಾಗಿದೆ. ಏಳನೇ ಶತಮಾನದ ಚೀನೀ ಪ್ರವಾಸಿ ವೆನ್ ಸಾಂಗ್‌ನೂ ಕಾಶಿಯ ಆಡಂಬರ ಹಾಗೂ ದೇವಾಲಯಗಳನ್ನು ವರ್ಣಿಸಿದ್ದಾನೆ. ಶಿವ-ಮಹೇಶ್ವರನ (ಲಿಂಗದ?) ೧೦೦ ಅಡಿ ಎತ್ತರ ಕಂಚಿನ ಪ್ರತಿಮೆಯು ಈ ಸ್ಥಳವನ್ನು ಶೃಂಗರಿಸುತ್ತಿತ್ತೆಂದೂ ಹೇಳಿದ್ದಾನೆ.

ಗಂಗಾನದಿಯು ಕಾಶಿಯಬಳಿ ಕೇವಲ ಆರು ಮೈಲಿಗಳ ಅಂತರದಲ್ಲಿ ಅಸಿ ಹಾಗು ವಾರಣ ಎಂಬ ಎರಡು ನದಿಗಳೋಡನೆ ಸಂಗಮಿಸುವ ಕಾರಣ ಈ ಸ್ಥಳದಲ್ಲಿ ನದಿಯು ಹೆಚ್ಚು ಊರ್ಜಿತ ಎಂದು ಎಣಿಸಲಾಗಿದೆ. ದಂತಕಥೆ ಹಾಗು ಸ್ತೋತ್ರಗಳು ಕಾಶಿಯ ಗಂಗೆಯನ್ನು ಶಿವನ ದಿವ್ಯ ಮೂಲತತ್ತ್ವದ ಮಾಧ್ಯಮ, ಹಾಗು ಕಾಶಿಯಲ್ಲಿ ಗಂಗೆಯ ಸ್ನಾನ ಜೀವನದ ಸರ್ವ ಪಾಪಗಳನ್ನು ತೊಳೆಯುತ್ತದೆ ಎಂದು ಹಾಡಿ ಹೊಗಳಿವೆ.

'ಕಾಶಿ'ಯೆಂದರೆ ಅನಂತ ಜ್ಯೋತಿ ಎಂದು ಅರ್ಥ. ಕಾಶಿಯು ದಿವ್ಯ ಜ್ಯೋತಿ ಬೆಳಗುವ ತೀರ್ಥವೇ ಆಗಿದೆ. ಬೇರೆ ಬೇರೆ ಕಾಲಗಳಲ್ಲಿ ಅವಿಮುಕ್ತ, ವಾರಣಾಸಿ, ಹಾಗು ಕಾಶಿ ಎಂಬ ಹೆಸರುಗಳನ್ನು ಹೊತ್ತ ಈ ಸ್ಥಳ ೩೦೦೦ ವರ್ಷಗಳಿಂದ ನಿರಂತರ ಜನರು ನೆಲೆಸಿರುವುದನ್ನು ಕಂಡು ಭಾರತದ ಧಾರ್ಮಿಕ ರಾಜಧಾನಿ ಎನಿಸಿದೆ. ಕಾಶಿಯಾತ್ರೆಯ ಪುಣ್ಯ ಉಳಿದ ಎಲ್ಲಾ ತೀರ್ಥಗಳ ಯಾತ್ರೆಗಿಂತ ಹೆಚ್ಚು ಎಂದು ಹೇಳಲಾಗುತ್ತದೆ. ಯಾರೇ ಆಗಲಿ ಜಾತಿ, ವರ್ಣಗಳ ಭೇದವಿಲ್ಲದೆ ಜೀವನದಲ್ಲಿ ಎಷ್ಟೇ ಪಾಪಗಳನ್ನು ಮಾಡಿದ್ದರೂ ಕಾಶಿಯಲ್ಲಿ ಮರಣ ಹೊಂದಿದರೆ ನೇರ ಸ್ವರ್ಗಕ್ಕೆ ಹೋಗುತ್ತಾರೆಂಬ ಪ್ರತೀತಿ ಇದೆ. ಕಾಶಿಯಲ್ಲಿ ಮಾಡಿದ ದಾನ-ಧರ್ಮ, ಪೂಜೆ ಪುನಸ್ಕಾರ, ಧ್ಯಾನ-ತಪಸ್ಸು ಎಲ್ಲವೂ ಅನಂತ ಫಲಕಾರಿಯಾಗುವುದೆಂದು ಹೇಳಲಾಗಿದೆ. ಸಾವಿರಾರು ಜನ್ಮಗಳ ಜೀವನ ಪರ್ಯಂತ ಸನ್ಯಾಸದ ಪುಣ್ಯ ಈ ಸ್ಥಳದಲ್ಲಿ ಮೂರು ರಾತ್ರಿಗಳ ಉಪವಾಸದ ಪುಣ್ಯಕ್ಕಿಂತ ಕಡಿಮೆಯಂತೆ.

ಇದು ಇಂದು ಜನ ಜಂಗುಳಿಯ, ಗಲಾಟೆಯ, ಗಲೀಜಿನ ಊರಾದರೂ ಹಿಂದಿನ ಕಾಲದಲ್ಲಿ ಕಾಶಿಯು ಸೂಕ್ಷ್ಮ ಏರಿಳಿತಗಳ, ಕಾಡು-ಉದ್ಯಾನವನಗಳ ಸುಂದರ ಸ್ಥಳವಾಗಿತ್ತಂತೆ. ಭಾರತ ದೇಶದ ಅತ್ಯಂತ ಗೌರವಿತ ಸಾಧು-ಸಂತರ ಆಶ್ರಮ-ತಾಣಗಳ ಸ್ಥಳ ಕಾಶಿ. ಪತಾಂಜಲಿ, ಮಹಾವೀರ, ಬುದ್ಧ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಸಂತ ಕಬೀರ, ಸಂತ ತುಳಸೀದಾಸ ಹೀಗೆ ಎಲ್ಲರೂ ಇಲ್ಲಿ ಧ್ಯಾನ ಮಾಡಿದ್ದಾರಂತೆ. ಶಂಕರಾಚರ್ಯರಿಗೆ ಅದ್ವೈತ ತತ್ತ್ವದ ಕೊನೆಯ ಪಾಠ ಇಲ್ಲೇ ದೊರಕಿದ್ದು ಎಂದು ಹೇಳಲಾಗುತ್ತದೆ. ಶಂಕರಾಚಾರ್ಯರು ಬೆಳಗಿನ ಜಾವದಲ್ಲಿ ಗಂಗೆಯಲ್ಲಿ ಮಿಂದು ದೇವಾಲಯಕ್ಕೆ ಹೊರಟಿದ್ದರಂತೆ. ಆಗ ಚಾಂಡಾಲನೊಬ್ಬನು ರಸ್ತೆಯ ಮಧ್ಯೆ ಮಲಗಿದ್ದನಂತೆ. ಅವರು ಅವನಿಗೆ ದಾರಿ ಬಿಡೆಂದು ಕೇಳಿದರಂತೆ. ಆಗ ಅವನು ತನ್ನ ಕಾಯವನು ಪಕ್ಕಕ್ಕೆ ಸರಿಸಬೇಕೋ ಅಥವ ತನ್ನ ಆತ್ಮವನ್ನೋ ಎಂದು ಕೇಳಿದಾಗ ಆಚಾರ್ಯರು ಈ ಚಂಡಾಲ ಆ ವಿಶ್ವೇಶ್ವರನೇ ಎಂದು ತಿಳಿದು ಅವನ ಕಾಲಿಗೆ ಬಿದ್ದು ಅವನ ಕ್ಷಮೆ ಬೇಡಿದರಂತೆ. ಆತ್ಮ-ಪರಮಾತ್ಮಗಳ ಐಕ್ಯದ ಪಾಠ ಅರಿತ ಆಚಾರ್ಯರ ಶಂಕೆ ಹೀಗೆ ಹೋಗಲಾಯಿತಂತೆ.

ಅಷ್ಟು ಪ್ರಾಚೀನ ಊರಾದರೂ, ಕಾಶಿಯಲ್ಲಿ ೧೬ನೇ ಶತಮಾನಕ್ಕಿಂತ ಹಳೆಯ ಕಟ್ಟಡಗಳು ಬಹಳ ವಿರಳ. ೧೧ನೇ ಶತಮಾನದಿಂದ ಜ್ಞಾನವೇ ಹಿಂದೂ ಧರ್ಮದ ಶಕ್ತಿಯೆಂದರಿತು ಮುಸಲ್ಮಾನ ಸೇನೆಗಳು ಜ್ಞಾನದ ಕೇಂದ್ರಬಿಂದುವಾದ ಕಾಶಿಯನ್ನು ಹತ್ತಾರು (ನೂರಾರು?) ಬಾರಿ ಆಕ್ರಮಣ ಮಾಡಿ ಅಲ್ಲಿಯ ದೇವಾಲಯಗಳನ್ನು ಧ್ವಂಸ ಮಾಡಿ ಅವುಗಳ ತಳಪಾಯದ ಮೇಲೆ ಮಸೀದಿಗಳನ್ನು ಕಟ್ಟಿದರೆಂದು ಇತಿಹಾಸ ಹೇಳುತ್ತದೆ. ಕ್ರಿ.ಶ ೧೧೯೪ರಲ್ಲಿ ಕುತುಬುದ್ದೀನ್ ಐಬಕನ ಸೈನ್ಯವು ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ಕೆಡವಿದರಂತೆ. ಮುಘಲ್ ಅಧಿಪತಿಯಾದ ಶಹಜಹಾನನು ಕ್ರಿ. ಶ ೧೬೩೨ರಲ್ಲಿ ಒಂದೇ ದಿನದಲ್ಲಿ ೭೬ ದೇವಾಲಯಗಳನ್ನು ಒಡೆಸಿದನಂತೆ. ಕ್ರಿ. ಶ. ೧೬೬೯ರಲ್ಲಿ ಆಗಿನ ಮುಘಲ್ ಅಧಿಪತಿ ಹಾಗೂ ಶಹಜಹಾನನ ಮಗನಾದ ಔರಂಗಜೇಬನು ಸರ್ವಶ್ರೇಷ್ಠವಾದ ಕಾಶೀ ವಿಶ್ವೇಶ್ವರ ದೇವಾಲಯವನ್ನು ಕೆಡವಿ ಅದರ ಸ್ಥಳದಲ್ಲೊಂದು ಮಸೀದಿ ಕಟ್ಟುವ ಆಜ್ಞೆ ಮಾಡಿದನಂತೆ. ಇಂದಿಗೂ ಆ ಮಸೀದಿ ಹಾಗೇ ನಿಂತಿದೆ - ಸಾಂಕೇತಿಕವಾಗಿ ಅದರ ಹೆಸರೂ ಹಿಂದೂ ಹೆಸರು - ಜ್ಞಾನ ವಾಪಿ ಮಸೀದಿ ಎಂದು. ಆ ಮಸೀದಿಯ ಗೋಡೆಗಳ ಮೇಲೆ ಹಿಂದೂ ಕೆತ್ತನೆಗಳು ಕಂಡು ಬರುತ್ತವೆ. ಹೀಗೆ ಧ್ವಂಸ ಮಾಡಲ್ಪಟ್ಟ ಇನ್ನೊಂದು ದೇವಾಲಯವೆಂದರೆ ಪ್ರಾಚೀನ ಬಿಂದು ಮಾಧವ ದೇವಾಲಯ. ಇಂದು ಆ ದೇವಾಲಯದ ಸ್ಥಳದಲ್ಲಿ ಆಲಂಗೀರ್ ಮಸೀದಿ ನಿಂತಿದೆ.

೧೬೬೯ರಲ್ಲಿ ಧ್ವಂಸ ಮಾಡಲ್ಪಟ್ಟ ವಿಶ್ವೇಶ್ವರ ದೇವಾಲಯವನ್ನು ಕ್ರಿ.ಶ. ೧೭೭೬-೧೭೮೦ರಲ್ಲಿ ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಮತ್ತೆ ಅದರ ಮೂಲ ಸ್ಥಳದ ಪಕ್ಕದಲ್ಲೇ (ಈಗ ರಸ್ತೆಯಲ್ಲಿ ಎದುರಿಗೆ) ಕಟ್ಟಿಸಿದಳಂತೆ. ಮೂಲ ದೇವಾಲಯದಲ್ಲಿದ್ದ ವಿಶ್ವೇಶ್ವರ ಸಾಲಿಗ್ರಾಮವನ್ನು ಇಲ್ಲಿ ಪುನ: ಸ್ಥಾಪಿಸಲಾಯಿತಂತೆ. ೧೭೮೫ರಲ್ಲಿ ಬ್ರಿಟೀಶ್ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್‌ನ ಆಜ್ಞೆಯ ಮೇಲೆ ದೇವಾಲಯದಲ್ಲಿ ಒಂದು ನಗಾರಿ ಖಾನೆ (ಡೋಲು ಖಾನೆ) ಕಟ್ಟಿಸಲಾಯಿತಂತೆ. ೧೮೩೯ರಲ್ಲಿ ದೇವಾಲಯದ ಮೂರು ಗೋಪುರಗಳಲ್ಲಿ ಎರಡನ್ನು ಪಂಜಾಬಿನ ಮಹಾರಾಜ ರಣಜೀತ್ ಸಿಂಗ್ ದಾನ ಕೊಟ್ಟ ಒಂದು ಟನ್ ಭಾರದ (೨೪ ಮಣ ಎಂದು ನಮ್ಮ ಶೇಖರ ಹೇಳಿದ) ಚಿನ್ನದ ತಗಡಿನಿಂದ ಹೊದಿಸಲಾಯಿತಂತೆ. ಸ್ವಾತಂತ್ರ್ಯದ ನಂತರ ಮೂರನೆಯ ಗೋಪುರವನ್ನು ಉತ್ತರ ಪ್ರದೇಶದ ಸರಕಾರ ಚಿನ್ನದ ತಗಡಿನಿಂದ ಹೊದಿಸಿತಂತೆ. ಜನವರಿ ೨೮ ೧೯೮೩ಯ ದಿನ ದೇವಾಲಯವು ಉತ್ತರ ಪ್ರದೇಶ ಸರಕಾರದ ನಿಯಂತ್ರಣಕ್ಕೆ ಹೋಯಿತಂತೆ.

ದೋಣಿಯಿಂದ ಒಂದು ಘಟ್ಟದಲ್ಲಿ ಇಳಿದು ಸಣ್ಣ ಓಣಿಗಳನ್ನು ಹಿಡಿದು ಹೊರಟೆವು. ಉದ್ದಕ್ಕೂ ಏರಿನ ರಸ್ತೆಯಿತ್ತು. ಮೊದಲು ನಾವು ಹೋದದ್ದು ಕಾಲಭೈರವನ ಗುಡಿಗೆ. ಇದೊಂದು ತಾಂತ್ರಿಕ ಸಂಪ್ರದಾಯದ ಕಾಲಭೈರವನ ಮೂರ್ತಿಯುಳ್ಳ ಗುಡಿ. ಇದಾದ ಮೇಲೆ ನಾವು ಕಾಶಿಯ ಪ್ರಮುಖ ದೇವಾಲಯವಾದ ಕಾಶೀ ವಿಶ್ವನಾಥ ದೇವಾಲಯಕ್ಕೆ ಹೋದೆವು.

ಕಾಶೀ ವಿಶ್ವೇಶ್ವರ ದೇವಾಲಯವು ವಾರಣಾಸಿಯ ಸಣ್ಣ ಓಣಿಗಳ ಮಧ್ಯೆ ನೆಲೆಸಿದೆ. ಈ ದೇವಾಲಯಕ್ಕೆ ಒಣಿಗಳಿಂದ ಹೋಗಲು ಹಲವಾರು ದಾರಿಗಳಿದ್ದರೂ ಪ್ರಮುಖ ದ್ವಾರ ವಿಶ್ವನಾಥ ಓಣಿಯಿಂದ. ದೇವಾಲಯದ ಅಂಗಳದೊಳಗೆ ಒಂದು ಸಣ್ಣ ಆವರಣವಿದೆ. ಮಧ್ಯೆ ವಿಶ್ವೇಶ್ವರ ದೇಗುಲವಿದ್ದು, ಆವರಣದ ಸುತ್ತ ಹಲವು ಸಣ್ಣ ಗುಡಿಗಳಿವೆ. ಮೂರು ಚಿನ್ನದ ಗೋಪುರಗಳಿರುವ (ಮಧ್ಯದ್ದು ೧೫.೫ ಮೀಟರ್ ಎತ್ತರವಿದೆ) ಈ ದೇವಾಲಯಕ್ಕೆ ಸುವರ್ಣ ದೇವಾಲಯವೆಂದೇ (ಗೊಲ್ಡನ್ ಟೆಂಪಲ್) ಎಂದೇ ಹೆಸರು. ಭದ್ರತೆಗಾಗಿ ದೇವಾಲಯದೊಳಗೆಲ್ಲ ಲೋಹ ಶೋಧಕಗಳನ್ನು (ಮೆಟಲ್ ಡೆಟೆಕ್ಟರ್) ಇರಿಸಲಾಗಿದೆ.

ದಕ್ಷಿಣದಿಂದ ದೇವಾಲಯದೊಳಗೆ ಹೋದರೆ ಎಡಭಾಗಕ್ಕೆ ವಿಷ್ಣು, ವಿರೂಪಾಕ್ಷ ಗೌರಿ, ಹಾಗು ಅವಿಮುಕ್ತ ವಿನಾಯಕರ ಮೂರು ಗುಡಿಗಳಿವೆ. ಅವಿಮುಕ್ತ ವಿನಾಯಕನ ಗುಡಿಯ ಪಕ್ಕ ಶನೈಶ್ಚರ ಹಾಗು ವಿರೂಪಾಕ್ಷರ ಗುಡಿಗಳಿವೆ. ಬಲಭಾಗದಲ್ಲಿ ಒಂದು ಗುಡಿಯಲ್ಲಿ ಅವಿಮುಕ್ತೇಶ್ವರ ಲಿಂಗವಿದೆ. ಅವಿಮುಕ್ತೇಶ್ವರನೇ ಕಾಶಿಯ ಮೊದಲ ಪ್ರಮುಖ ದೇವತೆಯೆಂದು ಹಲವರು ಹೇಳುತ್ತಾರಂತೆ. ನೀಲಕಂಠೇಶ್ವರನ ಗುಡಿಯಲ್ಲಿ ಐದು ಲಿಂಗಗಳನ್ನು ಇರಿಸಲಾಗಿದೆ.

ವಿಶ್ವನಾಥನ ದೇಗುಲದಲ್ಲಿ ಒಂದು ಮಂಟಪ ಹಾಗು ಗರ್ಭಗುಡಿಗಳಿವೆ. ಗರ್ಭಗುಡಿಯ ಮಧ್ಯದಲ್ಲಿ ಬೆಳ್ಳಿ ಕಟಕಟೆಯಲ್ಲಿ ವಿಶ್ವನಾಥಲಿಂಗವನ್ನು ಇರಿಸಿದ್ದಾರೆ. ಕರಿ ಕಗ್ಗಲ್ಲಿನ ಸಾಲಿಗ್ರಮವಾದ ಈ ಲಿಂಗವನ್ನು ಕಂಡರೇ ಸಾಕು ಆತ್ಮವು ಪರಿಶುದ್ಧವಾಗಿ ಜ್ಞಾನ ಹಾಗು ಭಕ್ತಿಯ ಮಾರ್ಗದರ್ಶನವಾಗುವುದಂತೆ. ಸಭಾ ಮಂಟಪದಲ್ಲಿ ಸೌಭಾಗ್ಯ ಗೌರಿ, ಶೃಂಗಾರ ಗೌರಿ, ಸಾವಿತ್ರಿ, ವಿಘ್ನೇಶ್ವರ, ವ್ಯಾಸೇಶ್ವರ, ಇತ್ಯಾದಿ ಪ್ರತಿಮೆಗಳಿವೆ. ದೇವಾಲಯದ ಒಳಭಾಗ ಅಮೃತ ಶಿಲೆಯದಾಗಿದ್ದು ಪ್ರಶಾಂತ ವಾತಾವರಣವೆನಿಸುತ್ತದೆ. ನಾನು ಹಿಂದೆ ಹೇಳಿರುವಂತೆ ಇಲ್ಲಿ ಪುರೋಹಿತರಿಲ್ಲವಾದ ಕಾರಣ, ದರ್ಶನ ಮಾಡಿ ನಾವೊಂದಿಬ್ಬರು ನಾವೇ ದೇವರಿಗೆ ಅಭಿಷೇಕ ಮಾಡಿದೆವು.

ಒಂದೈದು ನಿಮಿಷ ಅಲ್ಲೇ ಕೂತಿದ್ದು, ನಂತರ ಪಕ್ಕದ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋದೆವು. ಈ ದೇವಾಲಯವು ಬಹಳ ಸೊಗಸಾಗಿದೆ. ಅನ್ನಪೂರ್ಣೇಶ್ವರಿಯ ಬೆಳ್ಳಿ ಮುಖವಾಡ ಸುಂದರ ಹಾಗು ಭಕ್ತಿಪ್ರೇರಕವಾಗಿ ಕಾಣಿಸುತ್ತದೆ.

ಈ ಮೊದಲು ಹೇಳಿದ ಜ್ಞಾನ ವಾಪಿ ಮಸೀದಿಯ ಪಕ್ಕದಲ್ಲಿ ಒಂದು ಜ್ಞಾನ ವಾಪಿ ಬಾವಿಯಿದೆ. ಇದನ್ನು ವಿಶ್ವೇಶ್ವರನೇ ಕೊರೆದನೆಂದು ಹಾಗು ಇದರ ನೀರಲ್ಲಿ ಜ್ಞಾನದ ಜ್ಯೋತಿ ಇದೆಯೆಂದು ಹೇಳಲಾಗುತ್ತದೆ. ಇದರ ಹತ್ತಿರ ಒಂದು ದೇವಾಲಯಕ್ಕೆ ಹೋದೆವು. ಉದ್ಭವಲಿಂಗ ಒಂದಕ್ಕೆ ಇಲ್ಲಿ ಅರ್ಚಕರು ಪೂಜೆ ನಡೆಸುತ್ತಾರೆ. ಆದರೆ ಅದನ್ನು ಹತ್ತಿರದಿಂದ ನೋಡಲಾಗುವುದಿಲ್ಲ. ಮೇಲಿನಿಂದ ಒಂದು ಬಾವಿಯೊಳಗೆ ನೋಡುವಹಾಗೆ ನೋಡಬೇಕು. ಈ ಸ್ಥಳದಲ್ಲಿ ದೇವಾಲಯಕ್ಕೆ ಕೊಡಬೇಕೆಂದಿರುವ ಕಾಣಿಕೆ ಕೊಟ್ಟು ರಸೀದಿ ಹಾಗು ಪ್ರಸಾದಗಳನ್ನು ಪಡೆಯಬಹುದು. ಇಷ್ಟು ಹೊತ್ತು ಸಣ್ಣಗೆ ಹನಿಯುತ್ತಿದ್ದ ಮಳೆ ನಾವು ಈ ದೇವಸ್ಥಾನಕ್ಕೆ ಹೋದಾಗ ಜೋರಾಗಿ ಸುರಿಯಹತ್ತಿದ್ದರಿಂದ ಈ ದೇವಾಲಯದಲ್ಲಿ ಪೂಜೆ ನೋಡುತ್ತಾ ಸ್ವಲ್ಪ ಹೊತ್ತು ಕಳೆದೆವು.

ಕಾಶಿಯಲ್ಲಿ ಮುಕ್ಕೋಟಿ ದೇವಾಲಯಗಳಿವೆ ಎಂದು ಹೇಳುತ್ತಾರೆ. ಇವೆಲ್ಲವನ್ನೂ ನೋಡಲು ಜೀವನದ ಉಳಿದ ಸಮಯ ಬೇಕಾಗುವುದರಿಂದ ಕಾಶಿಗೊಮ್ಮೆ ಬಂದರೆ ಬಿಟ್ಟು ಹೋಗಲೇ ಬಾರದೆಂದು ಹೇಳುತ್ತಾರೆ. ಈ ಸಂಖ್ಯೆಯು ಸ್ವಲ್ಪ ಹೆಚ್ಚೆನಿಸಿದರೂ, ಕಾಶಿಯಲ್ಲಿ ನಿಜವಾಗಿ ಸಾವಿರಾರು ದೇವಾಲಯಗಳು, ಗುಡಿಗಳು ಇವೆ. ರಾಮೇಶ್ವರ, ದ್ವಾರಕೆ, ಜಗನ್ನಾಥ ಪುರಿ, ಕಾಂಚೀಪುರ ಹೀಗೆ ಎಲ್ಲ ತೀರ್ಥಗಳ ಹೆಸರುಳ್ಳ ದೇಗುಲಗಳಿವೆಯಂತೆ. ಅದಕ್ಕೆ ಕಾಶಿಗೊಮ್ಮೆ ಹೋದರೆ ಎಲ್ಲ ತೀರ್ಥಗಳ ದರ್ಶನ ಮಾಡಿದ ಪುಣ್ಯ ಬರುವುದಂತೆ. ಕಾಲಮಿತಿಗಳಿಂದ ನಾವು ಆ ಎಲ್ಲಾ ದೇವಾಲಯಗಳಿಗೆ ಹೋಗಲಾಗಲಿಲ್ಲ.

ಕಾಶಿಯ ಊರನ್ನು ಸುತ್ತುವರೆಯುವ ಒಂದು ಪುಣ್ಯ ರಸ್ತೆಗೆ "ಪಂಚಕ್ರೋಷಿ ಪರಿಕ್ರಮ" ಎಂದು ಹೆಸರು. ಇದರ ಸುತ್ತ ಹೋದರೆ ೧೦೮ ದೇಗುಲಗಳಿವೆಯಂತೆ. ಈ ಪರಿಕ್ರಮದ ಸುತ್ತ ನಡೆದು ಈ ೧೦೮ ದೇಗುಲಗಳನ್ನು ನೋಡುವುದು ಉತ್ತಮವಂತೆ. ಆಗದಿದ್ದಲ್ಲಿ ಪಂಚಕ್ರೋಷಿ ದೇಗುಲಕ್ಕೆ ಹೋಗಿ ಅದನ್ನು ಸುತ್ತುವರೆದರೆ ಆ ಪರಿಕ್ರಮವನ್ನು ಸುತ್ತಿದಂತೆ ಎಂದು ಹೇಳುತ್ತಾರೆ. ಹೀಗೆ ಇನ್ನೊಂದು ಪಥಕ್ಕೆ 'ನಾಗರ ಪ್ರದಕ್ಷಿಣೆ' ಎಂದು ಹೆಸರಂತೆ. ಇದರ ಸುತ್ತ ೭೨ ಗುಡಿಗಳಿವೆಯಂತೆ. ನಮಗೆ ಇವ್ಯಾವುದು ನೋಡಲು ಕಾಲಾವಕಾಶವಿರಲಿಲ್ಲ.

ಮಳೆ ನಿಂತ ನಂತರ ವಿಶಾಲಾಕ್ಷಿ ದೇವಾಲಯಕ್ಕೆ ಹೋದೆವು. ಅಲ್ಲಿ ದರ್ಶನ ಮಾಡಿಕೊಂಡು ಮತ್ತೆ ಗಲ್ಲಿಗಳನ್ನು ಹಿಡಿದು ದೋಣಿಗೆ ಹಿಂತಿರುಗಿದೆವು. ದೋಣಿ ಮತ್ತೆ ಸ್ನಾನ ಘಟ್ಟಗಳ ಮುಂದೆ ಹೊರಟಿತು. ಕಾಶಿಯಲ್ಲಿ ನೂರಕ್ಕೂ ಹೆಚ್ಚು ಇಂತಹ ಘಟ್ಟಗಳಿವೆ. ಇವುಗಳಲ್ಲಿ ಅತ್ಯುತ್ತಮವೆಂದರೆ ಮಣಿಕರ್ಣಿಕ ಘಟ್ಟ. ಶ್ರೀವಿಷ್ಣುವು ಸುದರ್ಶನ ಚಕ್ರದಿಂದ ಒಂದು ಗುಂಡಿ ತೆಗೆದನಂತೆ. ಆ ಗುಂಡಿಯು ಶಿವನ ತಪಸ್ಸಿನಿಂದ ಉದ್ಭವವಾದ ಬೆವರಿನಿಂದ ತುಂಬಹತ್ತಿತಂತೆ. ಶಿವನು ತನ್ನ ತಲೆಯಲ್ಲಾಡಿಸಿದಾಗ ಅವನ ಮಣಿಯುಕ್ತ ಕುಂಡಲವು ಆ ಗುಂಡಿಯೊಳಗೆ ಬಿದ್ದಿತಂತೆ. ಆದ್ದರಿಂದಲೇ ಮಣಿಕರ್ಣಿಕಾ ಎಂದು ಹೆಸರು. ಮಣಿಕರ್ಣಿಕಾ ಘಟ್ಟದಲ್ಲಿ ಮರಣ ಹೊಂದಿ ಅಲ್ಲಿ ದಹನವಾದರೆ ಮುಕ್ತಿ ಪಡೆದು ನೇರ ಸ್ವರ್ಗಕ್ಕೆ ಹೋಗುತ್ತಾರಂತೆ. ಕಾಶಿಯಲ್ಲಿ ದಾಹ ಸಂಸ್ಕಾರಗಳ ಬಹಳಷ್ಟು ವಿದ್ಯಮಾನಗಳಿದ್ದರೂ ನನ್ನ ಸಾಂಪ್ರದಾಯಿಕ ಹಾಗು ಧಾರ್ಮಿಕ ನಂಬಿಕೆಗಳ ಕಾರಣ ನಾನಿವಾವುದರ ಬಗ್ಗೆ ತಿಳಿಯಲು ಯತ್ನಿಸಲಿಲ್ಲ.

ಪೌರ್ಣಿಮೆಯ ದಿನ ದೋಣಿಯಲ್ಲಿ ಘಟ್ಟಗಳ ದರ್ಶನ ಯಾತ್ರೆ ಬಹಳ ಚಂದವೆಂದು ಕೇಳಿದ್ದೆ. ಆದರೆ ಅದರ ಅವಕಾಶವಿರಲಿಲ್ಲ. ನಮ್ಮ ದೋಣಿ ನಮ್ಮನ್ನು ಹನುಮಾನ್ ಘಟ್ಟದಲ್ಲಿ ಇಳಿಸಿತು. ಅಲ್ಲಿನಿಂದ ನಾವು ಬೇರ್ಪಟ್ಟೆವು. ನಮ್ಮ ಗುಂಪಿನವರೆಲ್ಲ ಅಲ್ಲಿಯ ಇತರ ಕಾರ್ಯಗಳಿಗೆ ಹೊರಟರು.

ದೋಣಿಯಿಂದಿಳಿದು ನಾನು ಎಲ್ಲರನ್ನೂ ಬಿಟ್ಟು ಹರಿಯಪ್ಪರ ಜೊತೆಗೆ ನಮ್ಮ ಛತ್ರಕ್ಕೆ ಹೊರಟೆ. ದಾರಿಯಲ್ಲಿ ಹರಿಯಪ್ಪ ಕಳಚಿಕೊಂಡರು. ನಾನು ಬಟ್ಟೆ ಒಗೆಯಲು ಸೋಪಿನ ಪುಡಿ ಖರೀದಿಸಿದೆ. ನೆನ್ನೆ ರಾತ್ರಿಯ ಊಟ ಸರಿಯಾಗಾಗಿರಲಿಲ್ಲ, ಇಂದು ಬೆಳಿಗ್ಗೆ ಏನೂ ತಿಂದಿರಲಿಲ್ಲ, ಊಟದ ಸಮಯ ಇನ್ನೂ ದೂರವಿತ್ತು. ಬೆಳಗ್ಗಿನಿಂದ ಓಡಾಡಿ ಬೇರೆ ಹೊಟ್ಟೆ ಹಸಿದಿತ್ತು. ಸರಿ ಒಂದು ಫಲಹಾರ ಮಂದಿರಕ್ಕೆ ನುಗ್ಗಿ, ರುಮಾಲಿ ರೋಟಿ ಹಾಗು ಆಲು ಗೋಭಿ ತಿಂದೆ - ಸುಮಾರಾಗಿ ಇತ್ತು. ಹೊಟ್ಟೆ ಸ್ವಲ್ಪ ತುಂಬಿ ಛತ್ರಕ್ಕೆ ಹಿಂತಿರುಗಿದೆ. ಆ ಛತ್ರ, ಮೊದಲೇ ಹೇಳಿದಂತೆ ಒಂದು ಆಶ್ರಮ. ಅಲ್ಲೆ ಒಂದು ೧೩೨ ಲಿಂಗಗಳ ಒಂದು ಗುಡಿಯಿತ್ತು. ಈ ಗುಡಿಯ ದರ್ಶನ ಮಾಡಿಕೊಂಡು ನಾನು ಬಟ್ಟೆ ಒಗೆಯಲು ಹೊರಟೆ. ಸಂಜೆ ಬಂದು ನೋಡಿದರೆ ನನ್ನ ಒಂದು ಪಂಚೆ ಒಣಹಾಕಿದ ಜಾಗದಲ್ಲಿ ಇರಲೇಯಿಲ್ಲ. ಯಾರೋ ಅಕಸ್ಮಾತ್ ತೆಗೆದುಕೊಂಡಿರಬೇಕು ಎಂದುಕೊಂಡೆ.

ಬಟ್ಟೆಯ ಕೆಲಸ ಮುಗಿದು ಸ್ವಲ್ಪ ಹೊತ್ತಿಗೆ ಒಬ್ಬೊಬ್ಬರಾಗಿ ಬಂದರು. ಇಂದು ವಿಶೇಷ ಊಟವಿತ್ತು. ನನಗೆ ಹೊಟ್ಟೆ ಸ್ವಲ್ಪ ತುಂಬಿದ ಕಾರಣ ನಾನು ಸ್ವಲ್ಪವೇ ಊಟ ಮಾಡಿದೆ. ನಂತರ, ಕಾರ್ಯಕ್ರಮದ ಪ್ರಕಾರ "ಅನ್ನಪೂರ್ಣ ಬನಾರಸ್ ಸ್ಯಾರೀ ಫ್ಯಾಕ್ಟರಿ"ಗೆ ಹೋದೆವು. ಇಲ್ಲಿ ಕನ್ನಡದಲ್ಲಿಯೂ ಒಂದು ಫಲಕವಿದೆ. ನಿರೀಕ್ಷಣೆಯಂತೆ ಸ್ವಲ್ಪ್ದಲ್ಲಿಯೆ ಅದೊಂದು ಹುಚ್ಚು ಸಂತೆಯಾಯಿತು. ಮಂಡಿಯೆತ್ತರ ಸೀರೆಗಳುರುಳಿದರೂ ಮಹಿಳೆಯರಿಗೆ ತೃಪ್ತಿಯಿಲ್ಲ. ಇನ್ನೂ ಹೆಚ್ಚು "ಡಿಜೈನು", "ಕಲ್ಲರ್ರು", ಬೆಲೆ ಇತ್ಯಾದಿಗಳು ಕೇಳುತ್ತಿದ್ದರು. ನಾನು ಪಕ್ಕ ಹೋಗಿ ಸದ್ದಿಲ್ಲದೆ ಒಂದೈದು ನಿಮಿಷಗಳಲ್ಲಿ ಎರಡು ಸೀರೆ ಖರೀದಿಸಿದೆ - ನಮ್ಮ ಅಮ್ಮ ಹಾಗು ಅಕ್ಕ ಇಬ್ಬರಿಗೂ ಒಂದೊಂದು. ಒಂದು ದೊಡ್ಡ ಕೆಲಸ ಮುಗಿಯಿತು. ಎಲ್ಲರೂ ಅವರವರ ಇಷ್ಟದ ಸಂಖ್ಯೆಗಳಲ್ಲಿ ಸೀರೆಗಳನ್ನು ಕೊಂಡಿದ್ದರು. ಕೋಣೆಗೆ ಹಿಂತಿರುಗಿ, ಕಾಫಿ ಕುಡಿದೆವು.

ಕಾಫಿಯ ನಂತರ ವಾರಣಾಸಿ ಊರು ನೋಡಲು ಹೊರಟೆವು. ಮೊದಲಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬನಾರಸ್ ಹಿಂದು ಯೂನಿವರ್ಸಿಟಿ) ನೋಡಲು ಹೋದೆವು. ಹಿಂದಿನಿಂದ ನನಗೆ ಈ ವಿಶ್ವವಿದ್ಯಾಲಯದಲ್ಲಿ ಓದುವಾಸೆಯಿತ್ತು. ಈಗೊಮ್ಮೆ ಕೊನೆ ಪಕ್ಷ ನೋಡಸಿಕ್ಕಿತು. ಇದು ಸ್ವಚ್ಚವಾಗಿದ್ದು ಬೇರೆ ಒಳ್ಳೆಯ ವಿಶ್ವವಿದ್ಯಾಲಯಗಳಂತೆ ಇದೆ. ನಂತರ ಬಿರ್ಲಾ ಮಂದಿರಕ್ಕೆ ಹೋದೆವು. ಎಲ್ಲಾ ಬಿರ್ಲಾ ಮಂದಿರಗಳಂತೆ ಇರುವ ಈ ದೇವಾಲಯವು ಕಾಶಿಯ ಪ್ರಮುಖ ದೇವನಾದ ವಿಶ್ವನಾಥನ ಮಂದಿರ. ಒಂದು ಶಿವನ ಪ್ರತಿಮೆ ಹಾಗು ಒಂದು ದುರ್ಗೆಯ ಪ್ರತಿಮೆ ಮಹಡಿ ಮೇಲೆ ಇದೆ. ಪ್ರಮುಖ ಶಿವಲಿಂಗವು ಕೆಳಗಡೆ ನೆಲ ಮಟ್ಟದಲ್ಲಿ ಇದೆ.

ಇದಾದ ಮೇಲೆ ಒಂದು "ಕೌಡೀಬಾಯಿ" ಗುಡಿಗೆ ಕರೆದೊಯ್ದರು. ಇದು ಶಿವನ ಸಹೋದರಿಯಂತೆ (!?) ಹಾಗು ದೇವಿಯ ದರ್ಶನ ಮಾಡಿ ಒಂದು ಕವಡೆ ಹಾಕಿದರೆ ಕಾಶಿಯಾತ್ರೆಯ ಮುಕ್ತಾಯವಾದಂತೆ ಎಂದು ಹೇಳಿದರು. ಸರಿ ನಾವೂ ಕವಡೆ ಹಾಕಿ ನಂತರ ಒಂದು ಆಧುನಿಕ ದುರ್ಗೆಯ ದೇವಾಲಯಕ್ಕೆ ಹೋದೆವು. ಅಮೃತ ಶಿಲೆಯ ನೆಲ ಹಾಗು ಹೋಡೆಗಳುಳ್ಳ ಈ ದೇವಾಲಯವು ಬಹಳ ಚನ್ನಾಗಿದೆ. ಕೊನೆಗೆ ತುಳಸೀ ಮಾನಸ ಮಂದಿರಕ್ಕೆ ಹೋದೆವು. ಇಲ್ಲಿ ಪುರಾಣ-ಮಹಾಕಥೆಗಳ ದೃಶ್ಯಗಳನ್ನು ತೋರಿಸುತ್ತಾರೆ. ಇದೂ ಸಹ ಬಹಳ ಚೆನ್ನಾಗಿದೆ.

ಎಲ್ಲವೂ ಮುಗಿಸಿ ಹನುಮಾನ್ ಘಟ್ಟಕ್ಕೆ ಹಿಂತಿರುಗಿದೆವು. ಕೆಲವರು ದೇವಾಲಯಕ್ಕೆ ಹೋದರು, ನಾವು ಕೆಲವರು (ದೇಶಪಾಂಡೆ, ಬೆಳವಾಡಿ ತಂಡಗಳು, ನಾನು) ಗಂಗೆಸ್ಥಾಲಿ, ಇತ್ಯಾದಿ ಕಾಶಿಯ ಪೂಜೆ ಸಾಮಗ್ರಿಗಳನ್ನು ಕೊಳ್ಳಲು ಹೋದೆವು - ಒಂದು ಮನೆಯಲ್ಲಿ. ನಾನು ಖಾಲಿ ಗಂಗೆ ಸ್ಥಾಲಿಗಳು (ಪ್ರಯಾಗದಲ್ಲಿ ತುಂಬಿಸಿಕೊಳ್ಳಲು), ಗೌರೀ ವಿಗ್ರಹಗಳು, ವಿಷ್ಣು ಪಾದಗಳನ್ನು ಖರೀದಿಸಿದೆ. ಎಲ್ಲರೂ ಹೀಗೇ ಕೊಳ್ಳುತ್ತ ಬಹಳ ಸಮಯವಾಯಿತು. ಹರಿಯಪ್ಪ ಅಂತು ಹುಡುಕಿಕೊಂಡು ಬಂದರು. ಇನ್ನೂ ಕೊಳ್ಳುವಿಕೆ ನಡೆಯುತ್ತಿರುವುದು ನೋಡಿ ಮತ್ತೆ ನಾಪತ್ತೆಯಾದರು. ಸರಿ ಎಲ್ಲವೂ ಮುಗುಸಿ ಕೊನೆಗೊಮ್ಮೆ ಹೊರಟೆವು - ದೇಶಪಾಂಡೆಯವರು, ಹಾಗು ನಾನು ದಾರಿ ಹುಡುಕುತ್ತ, ಬೆಳವಾಡಿ ತಂಡ ನಮ್ಮ ಹಿಂದೆ. ನಾ ಹೇಳಿದಂತೆ ಬೆಳವಾಡಿ ತಂಡದವರು ಹೆಚ್ಚಾಗಿ ಹಿರಿಯರು. ಪಾಪ! ಬಹಳಷ್ಟು ಸಾಮಾನು ಖರೀದಿಸಿ ಅವರಿಗೆ ಎತ್ತಿಕೊಂಡು ನಡೆಯಲಾಗುತ್ತಿಲ್ಲ. ಸರಿ, ನಾನು ಮತ್ತೆ ಅವರ ಸಾಮಾನು ತೆಗೆದುಕೊಂಡೆ. ವೆಂಕಟನಾರಾಯಣಪ್ಪನವರಂತೂ (ಇವರು ಎಲ್ಲರಿಗಿಂತ ಹಿರಿಯರು) ಅಳಹತ್ತಿಬಿಟ್ಟರು.

ಛತ್ರಕ್ಕೆ ಹಿಂತಿರುಗಿದ ನಂತರ ಉಳಿದಿದ್ದು ಊಟ ಹಾಗು ನಿದ್ದೆ. ಆದರೆ ಮಲಗುವ ಮುನ್ನ ನಾನು ಹಾಗು ಮಾಧವೇಶ್ವರರು ಮಾರನೆ ದಿನ ಹೊರಡುವ ಮುಂಚೆ ಪುನಃ ವಿಶ್ವೇಶ್ವರನ ದರ್ಶನ ಮಾಡಿಕೊಂಡು ಹೋಗುವ ಯೋಜನೆ ಹೂಡಿದೆವು.


ಭಾಗ ೧೧: ಬುದ್ಧಗಯ (ಬೋಧಗಯ)

೧೨ ಮೇ ೧೯೯೮.

ಮಾರನೆಯ ದಿನ ಮಂಗಳವಾರ ಬೇಗನೆ ಎದ್ದು ಎಲ್ಲರೂ ತಯಾರಾದೆವು. ಮಾಧವೇಶ್ವರ, ಬೆಳವಾಡಿ ತಂಡಗಳು ಹಾಗು ನಾನು - ನಾವೆಲ್ಲರೂ ಸೈಕಲ್ ರಿಕ್ಷಾ ಹತ್ತಿ (ಎಲ್ಲರಿಗೂ ಸೇರಿ ಮೂರು ಸೈಕಲ್ ರಿಕ್ಷಾಗಳು) ಮತ್ತೆ ವಿಶ್ವೇಶ್ವರ ದೇವಾಲಯವಿದ್ದ ವಿಶ್ವನಾಥ ಓಣಿಗೆ (ವಿಶ್ವನಾಥ್ ಗಲ್ಲಿ ಎಂದು ಇಲ್ಲಿಯ ಹೆಸರು) ಹೋದೆವು. ಅಷ್ಟು ಹೊತ್ತಿಗೆ ಅಲ್ಲಿಯ ಒಬ್ಬ ಪಂಡ (ಇಲ್ಲಿ ಪಂಡಿತರು/ದರ್ಶನ ಮಾಡಿಸುವವರು/ಪೂಜೆ ಮಾಡಿಸುವವರಿಗೆ ಪಂಡ ಎಂದು ಹೆಸರು) ನಮಗೆ ತಗುಲಿಹಾಕಿಕೊಂಡಿದ್ದ. ಸೈಕಲ್ ರಿಕ್ಷಾದಿಂದಿಳಿದು ನಾವು ಗಲ್ಲಿಗಳಲ್ಲಿ ದೇವಾಲಯಕ್ಕೆ ಹೋದೆವು. ದಾರಿಯಲ್ಲಿ ನೆನ್ನೆ ಮರೆತಿದ್ದ ಕಾಶಿ ದಾರಗಳನ್ನು ಖರೀದಿಸಿ, ನಂತರ ತಾವರೆ ಹಾಗು ಇತರ ಹೂಗಳನ್ನು ದೇವರಿಗರ್ಪಿಸಲು ಕೊಂಡೆವು. ಇಂದು ಮಂದಿರದ ಮೇಲಿನ ಗೋಪುರವೂ ಸರಿಯಾಗಿ ಕಂಡಿತು.

ದೇವಾಲಯ ತಲುಪುವಷ್ಟು ಹೊತ್ತಿಗೆ ಉಳಿದವರು ನನ್ನಿಂದ ಬೇರ್ಪಟ್ಟಿದ್ದರು. ನಾನೊಬ್ಬನೇ ಗರ್ಭಗುಡಿಗೆ ಹೋದೆ. ನೆನ್ನೆಯದಿನ ಕಾಶಿ ವಿಶ್ವೇಶ್ವರನ ದರ್ಶನವು ತಿಳಿಯದೇ ಇರುವಷ್ಟು ಬೇಗನೆ ಮುಗಿದಿತ್ತು. ಇಂದು ವ್ಯವಧಾನವಾಗಿ ಭಗವಂತನ ದರ್ಶನ ಮಾಡಿಕೊಂಡೆ. ದೇವರನ್ನು ಮುಟ್ಟಿ ಅಭಿಷೇಕ ಮಾಡಿ ಹೂವು ಅರ್ಪಿಸಿ ನಮಸ್ಕರಿಸಿದೆ. ಪಕ್ಕದ ಅನ್ನಪೂರ್ಣೇಶ್ವರಿ ದೇವಾಲಯಕ್ಕೂ ಹೊಕ್ಕು ದೇವಿಯ ದರ್ಶನ ಮಾಡಿಕೊಂಡೆ. ನಂತರ ಹಿಂತಿರುಗಲು ತಯಾರಾದೆ. ದಾರಿಯಲ್ಲಿ ಊರಿಗೆ ಹೋದ ನಂತರ ಹಂಚಲು ಇನ್ನಷ್ಟು ಪ್ರಸಾದ, ವೀಭೂತಿ, ಇತ್ಯಾದಿಗಳನ್ನು ಕೊಂಡೆ. ದೇಶಪಾಂಡೆ ಕುಟುಂಬವನ್ನು ಕಂಡು ಅವರೊಂದಿಗೆ ಛತ್ರಕ್ಕೆ ಹಿಂತಿರುಗಿದೆ. ಬಳಿಕ, ಇಡ್ಲಿ ಸಾಂಬಾರ್ ತಿಂದೆವು. ಆ ತಿಂಡಿಯ ಒಂದೇ ನೆನಪು ನನಗೆ. ಇಡ್ಲಿ ಕಲ್ಲಿನಂತೆ - ಬೇಡ ಹೋಗಲಿ ರಬ್ಬರ್‌ನಂತೆ ಗಟ್ಟಿಯಾಗಿತ್ತು. ಗೋಡೆಗೆಸೆದರೆ ಹಿಂತಿರುಗಿ ಕೈಗೆ ಬರುವಂತಿದೆ ಎಂದುಕೊಂಡು ಎಲ್ಲರೂ ತಿಂದರು.

ತಿಂಡಿ ತಿಂದ ಮೇಲೆ ನವೀನ್‌ಕುಮಾರವರ ಜೊತೆ ಅವರ ಕನ್ನಡಕ ತರಲು ಮತ್ತೆ ಕನ್ನಡಕದ ಅಂಗಡಿಗೆ ಹೋದೆ. ಅವರು ಬೇರೆ ಔಷಧಿಗಳೂ ಕೊಳ್ಳಬೇಕಿತ್ತು. ಬರುವುದು ಸ್ವಲ್ಪ ನಿಧಾನವಾಗಿ ನಮ್ಮ ಬಸ್ಸೇ ಹೊರಟುಹೋಗುವುದರಲ್ಲಿತ್ತು. ಆದರೆ ನವೀನ್‌ಕುಮಾರವರ ಉಳಿದ ಸಂಗಡಿಗರು ನಮಗಾಗಿ ಬಸ್ ತಡೆಹಿಡಿದಿದ್ದರು. ಸರಿ ಕೋಲಾಹಲ ಮುಗಿದು ಸಧ್ಯ ಹೊರಟೆವು. ಅಂದು ಬುದ್ಧಗಯ ತಲುಪುವುದಿತ್ತು.

ಭಾರತ ದೇಶದ ಒಂದು ಅತೀ ಹಳೆಯ ಹೆದ್ದಾರಿಯ ಮೇಲೆ ಬೇಸರದ ಪ್ರಯಾಣವಾಗಿತ್ತು. ಆಚೆ ನೋಡಲು ಬಯಲು ಬಿಟ್ಟರೆ ಬೇರಿಲ್ಲ. ಸ್ವಲ್ಪ ದೂರ ಹೋಗಿ ಬಿಹಾರ ರಾಜ್ಯವನ್ನು ಮುಟ್ಟಿದೆವು. ಅನುಕೂಲವಿದ್ದ ಒಂದು ಸ್ಥಳದಲ್ಲಿ ಊಟಕ್ಕೆ ನಿಂತು ಮತ್ತೆ ಹೊರಟರೆ ಮತ್ತೊಂದು ಟ್ರಾಫಿಕ್ ಜಾಮ್ ಒಳಗೆ ಸಿಕ್ಕಿಕೊಳ್ಳಬೇಕೇ? ಇದಂತು ಒಂದು ಕೆಟ್ಟ ಜಾಮ್‌ಆಗಿತ್ತು. ಸುಮಾರು ೨೦೦೦ ಲಾರಿಗಳಿದ್ದಿರಬಹುದೆಂದು ಊಹೆ ಮಾಡಿದೆವು. ಆದರೆ ಸುಮಾರು ಒಂದು ಘಂಟೆ ಅಲ್ಲೇ ನಿಂತ ನಂತರ ಮುಂದೆ ಹೋಗುವ ಅವಕಾಶವಾಯಿತು. ನಾವು ಆ ಇಡೀ ಜಾಮ್ ತಪ್ಪಿಸಿಕೊಂಡು ಹೋಗುವ ಅವಶ್ಯಕತೆ ಇರಲಿಲ್ಲ. ಸ್ವಲ್ಪ ದೂರದಲ್ಲೇ ಬುದ್ಧಗಯದ ಕಡೆಗೆ ಒಂದು ಇದ್ದಿದ್ದರಲ್ಲಿ ಕಡಿಮೆ ವಾಹನಗಳು ಚಲಿಸುತ್ತಿದ್ದ ರಸ್ತೆಗೆ ತಿರುಗಿಕೊಂಡೆವು.

ಸಂಜೆ ಸುಮಾರು ೫:೦೦ ಘಂಟೆಗ ಬುದ್ಧಗಯ ತಲುಪಿದೆವು. ಇಲ್ಲಿ ನಮ್ಮ ದೊಡ್ಡ ಬಸ್ ಓಡಾಡಲು ಸ್ವಲ್ಪ ಕಷ್ಟವೇ ಆಯಿತು. ಅಂತೂ ಅಲ್ಲಿಯ ಒಬ್ಬ ಮಾರ್ಗದರ್ಶಕನನ್ನು ಹಿಡಿದು ಅಲ್ಲಿಯ ಸ್ತೂಪ, ಚೈತ್ಯ, ವಿಹಾರಗಳನ್ನು ನೋಡಲು ಹೊರಟೆವು. ಹತ್ತಾರು ದೇಶಗಳು ಇಲ್ಲಿ ಬುದ್ಧಾಲಯ ಹಾಗು ಇತರ ವಿಹಾರಗಳನ್ನು ನಿರ್ಮಿಸಿದ್ದಾರೆ. ಟಿಬೆಟ್, ಬರ್ಮಾ, ಜಪಾನ್, ಥಾಯ್‌ಲ್ಯಾಂಡ್ ಇತ್ಯಾದಿ ದೇಶಗಳ ಕೊಡುಗೆಗಳಿವೆ. ನಮ್ಮ ಹಳೆಯ ಮಿತ್ರ ವೆನ್ ಸಾಂಗ್ ೭ನೇ ಶತಮಾನದಲ್ಲಿ ಇಲ್ಲಿಗೂ ಭೇಟಿ ಕೊಟ್ಟು (ಎಲ್ಲಿ ಹೋದರೂ ಈತ ಬೆನ್ನು ಬಿಡುವಂತಿಲ್ಲ!) ಈ ಸ್ಥಳದ ಚೈತ್ಯ ವಿಹಾರ ಸ್ತೂಪಗಳ ವೈಭವವನ್ನು ವರ್ಣಿಸಿದ್ದಾನಂತೆ.

ಶಾಂತವಾಗಿರುವ ಈ ಸಣ್ಣ ಊರು ಬೌದ್ಧರಿಗೆ ಅತ್ಯಂತ ಪವಿತ್ರ ಪುಣ್ಯಕ್ಷೇತ್ರ. ಇದೇ ಸ್ಥಳದಲ್ಲಿ ರಾಜಕುಮಾರ ಸಿದ್ಧಾರ್ಥ ಜ್ಞಾನೋದಯ ಹೊಂದಿ ಬುದ್ಧನಾದದ್ದು. ಇಲ್ಲಿಯ ಬೋಧೀ (ಪೀಪಲ್) ವೃಕ್ಷದ ಕೆಳಗೆ ಬೌದ್ಧ ಧರ್ಮದ ಮೂಲಗಳಿವೆ.

ನಾವು ಮೊದಲು ಹೋದದ್ದು ಥಾಯ್‌ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ ೪೦ ವರ್ಷಗಳಾಗಿದ್ದವು (೧೯೯೮ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ - ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ ತುಂಬಿದೆ.

ಇದಾದ ನಂತರ ಒಂದು ೮೦ ಅಡಿ ಎತ್ತರದ ಕುಳಿತಿರುವ ಬುದ್ಧನ ಪ್ರತಿಮೆ ನೋಡಲು ಹೋದೆವು. ಈ ಪ್ರತಿಮೆಯನ್ನು ಕೆಂಪು (ಇಟ್ಟಿಗೆ) ಬಣ್ಣದ ಮರಳುಗಲ್ಲಿನಿಂದ (ಸ್ಯಾಂಡ್‌ಸ್ಟೋನ್) ಮಾಡಲಾಗಿದೆ. ಬುದ್ಧನು ಒಂದು ತಾವರೆ ಹೂವಿನಾಕಾರದ ಆಸನದ ಮೇಲೆ ಕುಳಿತಿದ್ದಾನೆ. ಈ ಆಸನವನ್ನು ಹಳದಿ ಮರಳುಗಲ್ಲಿನಿಂದ ಮಾಡಲಾಗಿದೆ. ಬುದ್ಧನ ತಲೆಯಮೇಲೆ ಸುವರ್ಣಬಣ್ಣದ ಮುಂಗುರುಳು ಇದೆ. ಇದು ಭಾರಿ ಕಂಚು ಎಂದು ನಮ್ಮ ಮಾರ್ಗದರ್ಶಕ ಹೇಳಿದ. ಈ ಪ್ರತಿಮೆಯನ್ನು ಭಾರತದಲ್ಲೇ ಮಾಡಿಸಿದ್ದಂತೆ. ಬುದ್ಧನ ೧೦ ಶಿಷ್ಯರು ಅವನ ಸುತ್ತಲೂ ವಿವಿಧ ಆಸನಗಳಲ್ಲಿ ನಿಂತಿದ್ದಾರೆ. ನವೆಂಬರ್ ೧೯೮೯ರಲ್ಲಿ ಈ ಪ್ರತಿಮೆಯನ್ನು ಉದ್ಘಾಟಿಸಲಾಯಿತಂತೆ.

ಹೀಗೆ ಇನ್ನಷ್ಟು ಬುದ್ಧಾಲಯಗಳನ್ನು ನೋಡಿದೆವು. ನಮ್ಮ ಪ್ರೇಕ್ಷಣೆಯ ಕೊನೆಯ ವಿಹಾರ ಮಹಾಬೋಧಿ ಚೈತ್ಯವಾಗಿತ್ತು. ಇದು ಬೌದ್ಧರ ಅತ್ಯಂತ ಆದರಣೀಯ ಚೈತ್ಯ, ಹಾಗು ಬುದ್ಧನಿಗೆ ಜ್ಞಾನೋದಯವಾದ ಸ್ಥಳದ ಸಂಕೇತವಾಗಿದೆ. ಆದಿ ಶಂಕಾರಾಚಾರ್ಯರು ಬೌದ್ಧರನ್ನು ತರ್ಕದಲ್ಲಿ ಸೋಲಿಸಿದ ಕಾರಣ ಈ ಚೈತ್ಯವು ಸುಮಾರು ಶತಮಾನಗಳ ಕಾಲ ಅಲ್ಲಿಯ ಹಿಂದು ಶಂಕರಾಚಾರ್ಯ ಮಠದ ಆಧೀನದಲ್ಲಿದ್ದು, ಸ್ವಾತಂತ್ರ್ಯದ ನಂತರ ಮಠದ ಮಠಾಧಿಪತಿಯು ಈ ಚೈತ್ಯವನ್ನು ಭಾರತದ ಆಗಿನ ರಾಷ್ಟ್ರಪತಿಯಾದ ಡಾ ರಾಜೇಂದ್ರ ಪ್ರಸಾದರಿಗೆ ಉಡುಗೊರೆಯಾಗಿ ಕೊಟ್ಟರೆಂದು ನಮ್ಮ ಮಾರ್ಗದರ್ಶಿ ತಿಳಿಸಿದನು.

ಮಹಾಬೋಧಿ ಚೈತ್ಯವನ್ನು ಸಾಮ್ರಾಟ್ ಅಶೋಕನೇ ಸ್ವತಃ ಕಟ್ಟಿಸಿದ್ದಂತೆ. ಅವನು ಗೋಪುರಗಳನ್ನು ೩೦ ಅಡಿ ಎತ್ತರ ಕಟ್ಟಿ ಅಲ್ಲಿಗೆ ನಿಲ್ಲಿಸಿದ್ದನಂತೆ. ಆದರೆ ಗುಪ್ತ ವಂಶದ ಚಕ್ರವರ್ತಿ ಸಮುದ್ರಗುಪ್ತನು ಗೋಪುರವನ್ನು ೧೮೦ ಅಡಿಗೆ ಎತ್ತರಿಸಿದನಂತೆ. ಈ ಚೈತ್ಯವನ್ನು ಕಟ್ಟಲು ಸಿಮೆಂಟ್ ಅತವ ಬೇರೆ ಯಾವ ಗಾರೆಯನ್ನು ಬಳಸಿಲ್ಲವಂತೆ. ಇಟ್ಟಿಗೆ, ಸುಣ್ಣ, ಮಣ್ಣು, ಮರಳು ಹಾಗು ಬೆಲ್ಲದಿಂದ ಕಟ್ಟಲ್ಪಟ್ಟಿದೆಯಂತೆ. ಮುಸಲ್ಮಾನ ದಳಪತಿಯಾದ ಇಖ್ತಿಯಾರ್ ಖಿಲ್ಜಿ (ಭಖ್ತಿಯಾರ್ ಖಿಲ್ಜಿ ಎಂದೂ ಹೇಳುವರು - ಈತನೇ ನಾಳಂದಾ ವಿಶ್ವವಿದ್ಯಾನಿಲಯವನ್ನು ಧ್ವಂಸ ಮಾಡಿದ್ದು ಎಂದು ಇತಿಹಾಸ ಹೇಳುತ್ತದೆ) ೧೨ನೇ ಶತಮಾನದಲ್ಲಿ ಈ ಚೈತ್ಯವನ್ನು ಮುರಿಯಲು ಯತ್ನಿಸಿ ನಂತರ ಭೂಮಿಯಲ್ಲಿ ಹುಗಿಸಿಬಿಟ್ಟನಂತೆ. ಬ್ರಿಟೀಷರ ಕಾಲದಲ್ಲಿ ಲಾರ್ಡ್ ಕನ್ನಿಂಗ್‌ಹಾಮ್ ಎಂಬಾತ ಈ ಸ್ಥಳವನ್ನು ಭೂಶೋಧನೆಮಾಡಿ ರಿಪೇರಿ ಮಾಡಿಸಿದನಂತೆ. ಈಗಲೂ ಈ ಚೈತ್ಯಕ್ಕೆ ಹೋಗಲು ನೆಲ (ರಸ್ತೆ) ಮಟ್ಟದಿಂದ ಹಲವಾರು ಮೆಟ್ಟಲುಗಳಿಳಿದು ಹೋಗಬೇಕು.

ಈ ಚೈತ್ಯವು ಸುಮಾರು ೨೩೦೦ ವರ್ಷ ಹಳೆಯದೆಂದು ಹೇಳಲಾಗುತ್ತದೆ. ಮಿಯಾನ್ಮಾರ್ (ಬರ್ಮ) ದೇಶವು ಉಡುಗೊರೆ ಕೊಟ್ಟ ೫೦೦ ಕೆ.ಜಿ. ತೂಕದ ಒಂದು ಗಂಟೆಯನ್ನು ಇಲ್ಲಿ ನೋಡಬಹುದು. ಚೈತ್ಯದ ಪಕ್ಕದಲ್ಲಿ ಇನ್ನು ಎರಡು ಗುಡಿಗಳಿವೆ. ಮುಖ್ಯ ಚೈತ್ಯದ ಸುತ್ತಲೂ ೪೮೦ ಸಣ್ಣ ಸಣ್ಣ ಸ್ತೂಪಗಳನ್ನು ಹಾಗು ಇತರ ಕಟ್ಟಡಗಳನ್ನು ನೋಡಬಹುದು. ಚೈತ್ಯದ ಹಿಂದೆ ಮಹಾಬೋಧಿ ವೃಕ್ಷ ಹಾಗು ಬುದ್ಧನಿಗೆ ಜ್ಞಾನೋದಯವಾದ ಆಸನಗಳನ್ನು (ಇದಕ್ಕೆ ವಜ್ರಾಸನ ಎಂದು ಹೆಸರು) ಕಾಣಬಹುದು. ಬುದ್ಧನು ಆ ಆಸನದಲ್ಲಿ ಕುಳಿತು ಕಣ್ಣು ಮಿಟುಕಿಸದೆ ಈ ವೃಕ್ಷವನ್ನು ಒಟ್ಟಿಗೆ ೭ ದಿನಗಳ ಕಾಲ ನೋಡಿದ್ದನಂತೆ. ಭಕ್ತಿಯಾರ್ ಖಿಲ್ಜಿಯು ಆ ಬೋಧೀ ವೃಕ್ಷವನ್ನು ಕಡಿಸಿಬಿಟ್ಟಿದ್ದನಂತೆ. ನಂತರ ನಿಂತ ಬೋಧಿ ವೃಕ್ಷವನ್ನು ಒಬ್ಬ ಹಿಂದೂ ರಾಜನು ಕಡಿಸಿದನಂತೆ. ಮೂರನೆಯದು ವಯಸ್ಸಾಗಿ ಬಿದ್ದುಹೋಯಿತಂತೆ. ಆದರೆ ಮೂಲ ಬೋಧಿ ವೃಕ್ಷದ ಸಸಿಗಳನ್ನು ಸಾಮ್ರಾಟ್ ಅಶೋಕನ ಮಕ್ಕಳು ಶ್ರೀಲಂಕೆಗೆ ಒಯ್ದಿದ್ದರಂತೆ. ಅದರ ಸಸಿ ಪುನ: ಶ್ರೀಲಂಕೆಯಿಂದ ತರಿಸಿ ಈ ಸ್ಥಳದಲ್ಲಿ ನೆಡಲಾಯಿತಂತೆ. ಬೋಧೀ ವೃಕ್ಷ ಹಾಗು ಆಸನಗಳಿರುವ ಈ ಸ್ಥಳವು ೨೬೦೦ ವರ್ಷ ಹಳೆಯದ್ದಂತೆ.

ಹತ್ತಿರದಲ್ಲೇ ಒಂದು ೧೦೦ ಅಡಿ ಎತ್ತರದ ಅಶೋಕ ಸ್ಥಂಭವಿತ್ತೆಂದು ಕೇಳಿದೆವು. ಆದರೆ ಮುಸಲ್ಮಾನರು ಅದನ್ನೂ ಕಡಿದು ಈಗ ಅದು ಪಾಳುಬಿದ್ದು ಬರೀ ಮೋಟು ಕ್ರಡು ಮಾತ್ರ ನಿಂತಿದೆ. ಚೈತ್ಯದ ಬಲಭಾಗದಲ್ಲಿ "ಮೋಚಲೀನ್ ಸರೋವರ್" ಎಂಬ ಒಂದು ಸರೋವರವಿದೆ. ಜ್ಞಾನೋದಯದ ನಂತರ ಬುದ್ಧನು ಈ ಸರೋವರದಲ್ಲಿ ಸ್ನಾನ ಮಾಡುತ್ತಿದ್ದಾಗ ಬಿರುಗಾಳಿ ಸಹಿತೆ ಮಳೆ ಬರಲು ಶುರುವಾಯಿತಂತೆ. ಆಗ ಒಂದು "ಮೂಚ್ ವಾಲ ಸಾಪ್" (ಮೀಸೆಯುಳ್ಲ ಸರ್ಪ) ಅವನಿಗೆ ರಕ್ಷಣೆ ಕೊಟ್ತಿತಂತೆ. ಆದ್ದರಿಂದಲೇ ಆ ಸರೋವರಕ್ಕೆ ಆ ಹೆಸರು ಹಾಗು ಬುದ್ಧನು ವಿಷ್ಣುವಿನ ಅವತಾರವೆಂದು ಪ್ರತೀತಿ (ಬುದ್ಧನು ೯ನೆ ಅವತಾರವೆಂದು ನಾನು ನಂಬುವುದಿಲ್ಲ. ನನ್ನ ಪ್ರಕಾರ ಅವತಾರಗಳ ಶ್ರೀಣಿ: ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಹಲಾಯುಧ, ರಾಮ, ಕೃಷ್ಣ, ಹಾಗು ಕಲ್ಕಿ. ಹಲಾಯುಧನ ಕಥೆಗಳು - ಬುದ್ಧನಿಗೆ ಈ ಶ್ರೀಣಿಯಲ್ಲಿ ಸ್ಥಳಾವಕಾಶ ಮಾಡಲೆಂದು - ಬಲರಾಮನೊಡನೆ ಸೇರಲ್ಪಟ್ಟವು ಎಂದು ನನ್ನ ನಂಬಿಕೆ. ಇದರ ವಿಶ್ಲೇಷಣೆ ಬಹುಶಃ ಇನ್ನೊಂದು ಲೇಖನದಲ್ಲಿ)

ಚೈತ್ಯದ ಸುತ್ತಲೂ ನೋಡಿದ ಮೇಲೆ ಕೊನೆಗೆ ನಾವು ಒಳಗೆ ಹೋದೆವು. ಬುದ್ಧನ ಪ್ರತಿಮೆ ಸುಮಾರು ೧೦ ಅಡಿ ಎತ್ತರವಿರಬಹುದು. ಬುದ್ಧನು ಪದ್ಮಾಸನದಲ್ಲಿ ಕುಳಿತಿದ್ದು ಆಚೆ ಹೊನ್ನಿನ ಬಣ್ಣದಾಗಿದೆ. ಈ ಪ್ರತಿಮೆಯನ್ನೂ ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯದಲ್ಲಿ ಒಂದು ಶಿವಲಿಂಗವೂ ಇದೆ. ಆದಿ ಶಂಕರಾಚಾರ್ಯರು ಬೌದ್ಧರನ್ನು ತರ್ಕದಲ್ಲಿ ಸೋಲಿಸಿದ ನಂತರ ಸ್ಥಾಪಿಸಿದ ಲಿಂಗವೆಂದು ನಮ್ಮ ಮಾರ್ಗದರ್ಶಕ ಹೇಳಿದ. ಅದೇ ಕಾರಣಕ್ಕಾಗಿ ಈ ಬೌದ್ಧ ತೀರ್ಥದಲ್ಲಿ ಶಂಕರಮಠವೂ ಸಹ.

ಬುದ್ಧಗಯ ಮುಗಿಸಿ ಬಸ್ ಹತ್ತಿ ಸಮೀಪದಲ್ಲೇ ಇದ್ದ (ಸುಮಾರು ೧೦ ಕಿ.ಮೀ ಅಂತರ) ಗಯಕ್ಕೆ ಹೋದೆವು. ಛತ್ರಕ್ಕೆ ಹೋಗಿ ಮಲಗುವ ತಯಾರಿ ಮಾಡಿಕೊಂಡೆವು. ಎಲ್ಲರಿಗೂ ಕೋಣೆಗಳಿದ್ದವು. ನಾನು ಮನೆಗೆ ಫೋನ್ ಮಾಡಲು ಆಚೆ ಹೋದೆ. ಹೋಗಿಬಂದ ಮೇಲೆ ಸಾಧಾರಣವಾದ ಊಟ ಮಾಡಿ ಮಲಗಿದೆವು.


ಭಾಗ ೧೨: ಗಯ

೧೩ ಮೇ ೧೯೯೮

ಈ ಉತ್ತರ ಭಾಗಗಳಲ್ಲಿ ಬೇಸಿಗೆ ಕಾಲದಲ್ಲಿ ಬೇಗನೇ ಬೆಳಗಾಗುತ್ತದೆ. ನಾನು ೫:೩೦ಕ್ಕೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡೆ. ಅಂದು ತಿಂಡಿಯ ಕಾರ್ಯಕ್ರಮವಿರಲಿಲ್ಲ. ನವೀನ್‌ಕುಮಾರ್ ಅಡಿಗೆಯಾತನಿಂದ ಸ್ವಲ್ಪ ಅನ್ನ ಪಡೆದಿದ್ದರು. ಅವರೇ ಸ್ವಲ್ಪ ಪುಳಿಯೋಗರೆ ಗೊಜ್ಜು ಸಹ ತಂದಿದ್ದರು. ಏಕೋ ಎನೋ ಅಂತು ನನ್ನೊಬ್ಬನನ್ನು ಅವರೊಂದಿಗೆ ತಿಂಡಿ ತಿನ್ನಲು ಕರೆದರು. ಅನ್ನ ಗೊಜ್ಜು ಸೇರಿಸಿ ಪುಳಿಯೋಗರೆ ನಾನೇ ಕಲೆಸಿದೆ. ನಾನು, ನವೀನ್‌ಕುಮಾರ್, ಅವರ ಪತ್ನಿ ಹಾಗು ಅವರ ಮಗು ಎಲ್ಲರೂ ಅದನ್ನು ತಿಂದೆವು. ನಮ್ಮ ಛತ್ರದಿಂದಾಚೆ ಅಂಗವಸ್ತ್ರ, ಪಂಚೆ, ಇತ್ಯಾದಿಗಳನ್ನು ಮಾರುತ್ತಿದ್ದರು. ನಾನು ಅಲ್ಲಿಗೊಮ್ಮೆ ಹೋಗಿ ಒಂದು ಅಂಗವಸ್ತ್ರ ಖರೀದಿಸಿದೆ. ನಂತರ ಗಯದ ದೇವಾಲಯಗಳನ್ನು ನೋಡಲು ಹೋದೆವು.

ಗಯ ಬಿಹಾರ ರಾಜ್ಯದ ಮಧ್ಯ ಭಾಗದಲ್ಲಿ (೧೯೯೮ರ ಬಿಹಾರ ರಾಜ್ಯ), ಫಾಲ್ಗು ನದಿಯ (ಫಾಲ್ಗು ಗಂಗಾನದಿಯ ಉಪನದಿ) ತೀರದಲ್ಲಿದೆ. ಗಯ ಹಿಂದೂಗಳ ಅತ್ಯಂತ ಪುಣ್ಯಕ್ಷೇತ್ರಗಳಲ್ಲೊಂದು - ಹೆಚ್ಚಾಗಿ ವೈಷ್ಣವರಿಗೆ. ಇಲ್ಲಿನ ದೇವಾಲಯವು ಶ್ರೀಮನ್ನಾರಾಯಣನ ಪಾದದಚ್ಚಿನಮೇಲೆ ಕಟ್ಟಲಾಗಿರುವುದೆಂದು ಪ್ರತೀತಿ. ಅಗ್ನಿಪುರಾಣದ ಪ್ರಕಾರ ಶಿವನಿಂದ ತ್ರಿಪುರಾಸುರ ದಹನವಾದಮೇಲೆ, ತ್ರಿಪುರಾಸುರನ ಮಗನಾದ ಗಯಾಸುರನೆಂಬ ದಾನವನು ತಪಸ್ಸು ಯಾಗ ಯಜ್ಞಗಳನ್ನು ಮಾಡಿ ವಿಷ್ಣುವನ್ನು ಒಲಿಸಿಕೊಂಡು ತಾನು ಎಲ್ಲ ತೀರ್ಥಗಳಿಗಿಂತ ಪುನೀತನಾಗುವ ವರ ಪಡೆದನಂತೆ. ಇದರಿಂದಾಗಿ ಗಯಾಸುರ ಯಾರನ್ನು ಬೇಕಾದರೂ ಸ್ವರ್ಗಲೋಕಕ್ಕೆ ಕಳುಹಿಸುವ ಶಕ್ತಿ ಪಡೆದು, ಯಮನ ಅಧಿಕಾರಕ್ಷೇತ್ರವನ್ನು ಆಕ್ರಮಿಸಿಕೊಂಡನಂತೆ. ಕಂಗಾಲಾದ ದೇವತೆಗಳು ನಾರಾಯಣನನ್ನು ಉಪಾಯ ಕೇಳಿದಾಗ ನಾರಾಯಣನು ದೇವತೆಗಳಿಗೆ ಪುಣ್ಯತೀರ್ಥ ಒಂದರದಲ್ಲಿ ಯಾಗಮಾಡಲು ಹೇಳಿದನು. ಗಯಾಸುರ ಎಲ್ಲ ತೀರ್ಥಗಳಿಗಿಂತ ಪುನೀತನಾದ ಕಾರಣ ದೇವತೆಗಳು ಅವನ ಕಾಯದ ಮೇಲೆ ಯಾಗ ಮಾಡಲು ಅವಕಾಶ ಕೊಡಲು ಯಾಚಿಸಿದಕೊಂಡರಂತೆ. ಒಪ್ಪಿಕೊಂಡ ಗಯಾಸುರನ ರುಂಡ ಮುಂಡಗಳು ಬೇರ್ಪಟ್ಟು, ದೇವತೆಗಳು ಆ ರುಂಡವಿಲ್ಲದ ಕಾಯದಮೇಲೆ ಯಜ್ಞಕುಂಡ ಸ್ಥಾಪಿಸಿ ಯಜ್ಞಮಾಡಲು ಹೊರಟಾಗ ಆ ಕಾಯವು ಅಲುಗಾಡತೊಡಗಿತಂತೆ. ಎಲ್ಲ ದೇವತೆಗಳೂ ಆ ಕಾಯದ ಮೇಲೆ ಕುಳಿತರೂ ಅದು ಇನ್ನೂ ಅಲುಗಾಡುತಲಿತ್ತಂತೆ. ಆಗ ಶ್ರೀಮನ್ನಾರಾಯಣನೇ ಬಂದು ಗಯಾಸುರನಮೇಲೆ ತನ್ನ ಕಾಲಿಟ್ಟು ಯಜ್ಞಕುಂಡವನ್ನು ಸ್ಥಿರವಾಗಿಸಿದನಂತೆ. ಯಜ್ಞದ ನಂತರ ಗಯಾಸುರನು ಏಳಲಾಗದೆ, ನಾರಾಯಣನಲ್ಲಿ ತಾನು ಕಲ್ಲಾಗಿ ಅಲ್ಲೇ ಉಳಿದು ಪುಣ್ಯತೀರ್ಥವಾಗಿ ಆ ಪುಣ್ಯ ತೀರ್ಥಕ್ಕೆ ತನ್ನ ಹೆಸರು ಕೊಡುವ ವರ ಕೇಳಿದನಂತೆ. ಅಂದಿನಿಂದ ಗಯಾಸುರನ ರಾಕ್ಷಸ ಕಾಯದ ಗಾತ್ರವು ಗಯಾತೀರ್ಥವಾಯಿತಂತೆ. ನಾರಾಯಣನ ಪಾದದಚ್ಚು ಆ ಕಲ್ಲಿನ ಮೇಲೆ ಹಾಗೇ ಉಳಿಯಿತಂತೆ.

ಗಯ ತೀರ್ಥಕ್ಕೆ ಹೋದರೆ ಸುತ್ತಿಕೊಂಡ ಪಾಪದ ಸುರುಳಿಯ ವಿಮೋಚನೆಯಾಗುವುದೆಂದು ಶ್ರೀಮನ್ನಾರಾಯಣನು ಈ ಪ್ರದೇಶಕ್ಕೆ ವರ ಕೊಟ್ಟನಂತೆ. ರಾಮಾಯಣದಲ್ಲೂ ಗಯದ ಬಗ್ಗೆ ಹೇಳಲಾಗುತ್ತದೆ. ಸೀತೆಯು ಫಾಲ್ಗು ನದಿಗೆ ಕೊಟ್ಟ ಶಾಪದ ಕಾರಣ ನದಿಯಲ್ಲಿ ನೀರಿಲ್ಲವಂತೆ - ಬರೀ ಮರಳು. ಆದರೆ ನದೀಪಾತ್ರದಲ್ಲಿ ಸಣ್ಣ ಗುಂಡಿ ತೆಗೆದರೂ ನೀರೂರುತ್ತದೆಯಂತೆ. ಕ್ರಿ. ಪೂ. ೩ನೆ ಶತಮಾನದಲ್ಲಿ ಈ ತೀರ್ಥವು ಮೌರ್ಯರ ಆಧೀನದಲ್ಲಿತ್ತು. ಸಾಮ್ರಾಟ್ ಅಶೋಕನ ಶಾಸನಗಳು ಇಲ್ಲಿ ಸಿಕ್ಕಿವೆ. ಮುಘಲರ ಕಾಲದಲ್ಲಿ ಈ ಕ್ಷೇತ್ರವು ಅವರ ಆಧೀನದಲ್ಲಿತ್ತು.

ನಾವು ಮೊದಲು ಹೋದದ್ದು ವಿಷ್ಣುಪಾದ ದೇವಸ್ಥಾನಕ್ಕೆ. ಇಲ್ಲಿ ಸಿಕ್ಕಿರುವ ಟೆರ್ರಕೋಟ ಈ ದೇವಾಲಯವನ್ನು ಸುಮಾರು ಕ್ರಿ.ಶ. ೪-೫ನೇ ಶತಮಾನದಷ್ಟು ಹಿಂದಿನದೆಂದು ಹೇಳುತ್ತದೆ. ಇದು ಕನಿಷ್ಠ ಎರಡು ಬಾರಿ ಧ್ವಂಸಮಾಡಲಾಗಿರುವ ಸಂಕೇತಗಳು ಕಂಡುಬಂದಿವೆ. ಈಗಿರುವ ದೇವಾಲಯವು ೧೭೮೩ರಲ್ಲಿ ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ (ಈಕೆಯಂತು ಎಲ್ಲೆಡೆ ದೇವಾಲಯಗಳನ್ನು ನಿರ್ಮಿಸಿದಂತೆ ಕಾಣುತ್ತದೆ!) ಕಟ್ಟಿಸಿದಳಂತೆ. ಈ ದೇವಾಲಯದಲ್ಲಿ ಧರ್ಮಶಿಲೆಯೆಂಬ ಬಂಡೆಯ ಮೇಲಿರುವ, ಸುಮಾರು ೪೦ ಇಂಚು ಉದ್ದದ ಶ್ರೀಮನ್ನಾರಾಯಣನ ಪಾದದ ಗುರುತನ್ನು ಪೂಜಿಸಲಾಗುವುದು. ಈ ಶಿಲೆಯು ಒಂದು ಬೆಳ್ಳಿಯ ಕಟ್ಟಕಟ್ಟೆಯಲ್ಲಿದೆ.

ದೇವಾಲಯವು ಗುಪ್ತಗಾಮಿನಿಯಾದ ಫಾಲ್ಗು ನದಿ ತೀರದಲ್ಲಿದ್ದು, ಇದರ ಅಷ್ಟಕೋನದ, ಬೆಳ್ಳಿಯ ತಗಡು ಹೊದಿಸಿದ, ೩೦ ಅಡಿ ಎತ್ತರದ ಗೋಪುರವು ಕಲ್ಲಿನ ಕಂಬಗಳ ಮೇಲೆ ನಿಂತಿದೆ. ದೇವಾಲಯವು ಪೂರ್ವಮುಖಿಯಾಗಿದೆ, ಹಾಗು ಅಷ್ಟಕೋನಾಕಾರದಲ್ಲಿದೆ. ಶಿಖರದ ಮೇಲೆ ತಾವರೆ ಹೂವಿನಾಕಾರ ಹಾಗು ಚಿನ್ನದ ಕಲಶವಿದೆ. ದೇವಾಲಯದ ಮುಂಭಾಗದಲ್ಲಿ ಒಂದು ಎರಡು ಅಂತಸ್ತಿನ ಸಭಾಮಂಟಪವಿದೆ, ಹಾಗು ಇದರ ಮೇಲೆ ಒಂದು ಗೋಳವಿದೆ (ಡೋಮ್). ಸೂಕ್ಷ್ಮ ಕೆತ್ತನೆಯುಳ್ಳ ೪೨ ಕಂಬಗಳು ಈ ಗೋಳವನ್ನು ಎತ್ತಿ ಹಿಡಿದಿವೆ. ಪಕ್ಕದಲ್ಲಿ ಲಕ್ಷ್ಮಿ ಹಾಗು ಶಿವನ ಗುಡಿಗಳಿವೆ. ಪ್ರಾಚೀನ ಕಾಲದ (೧೧ನೇ ಶತಮಾನ) ಗದಾಧರ, ನೃಸಿಂಹ, ಗಯೇಶ್ವರಿಯರ ಗುಡಿಗಳು ಇನ್ನು ಉಳಿದಿವೆ.

ನಂತರ ಮಂಗಳಗೌರೀ ದೇವಾಲಯಕ್ಕೆ ಹೋದೆವು. ಇದೂ ಒಂದು ಉಪಶಕ್ತಿ ಪೀಠವಂತೆ. ಶಕ್ತಿ ಮಾತೆಯನ್ನು ಪೋಷಿಸುವ ಮಾತೆಯಾಗಿ ಪೂಜಿಸಲಾಗುತ್ತದೆ. ವಾಯು, ಪದ್ಮ ಹಾಗು ಅಗ್ನಿ ಪುರಾಣಗಳಲ್ಲಿ ಈ ದೇವಾಲಯದ ಉಲ್ಲೇಖನವಿದ್ದು, ಈಗಿರುವ ಕಟ್ಟಡವು ಕ್ರಿ.ಶ ೧೫ನೇ ಶತಮಾನದ್ದಾಗಿದೆ. ದೇವಾಲಯವು ಮಂಗಳಗೌರೀ ಗುಡ್ಡದ ಮೇಲಿದೆ, ಹಾಗು ದೇವಾಲಯಕ್ಕೆ ಹೋಗುವುದಕ್ಕೆ ಮೆಟ್ಟಿಲುಗಳು ಹಾಗು ವಾಹನ ಚಲಿಸುವ ರಸ್ತೆ ಎರಡೂ ಇವೆ. ದೇವಾಲಯದ ಅಂಗಳದಲ್ಲಿ ಒಂದು ಹೋಮಕುಂಡವಿದೆ, ಹಾಗು ಹತ್ತಾರು ಸುಂದರ ಪ್ರತಿಮೆಗಳನ್ನು ಅಲ್ಲಲ್ಲೆ ಇರಿಸಲಾಗಿದೆ. ಗರ್ಭ ಗುಡಿಯಲ್ಲಿ ದೇವಿಯ ಪ್ರತೀಕವಿದ್ದು, ಪಕ್ಕದಲ್ಲಿ ಶಿವನಿಗೆ ಸಮರ್ಪಿತವಾದ ಗುಡಿಯಿದೆ. ಮಹಿಷಾಸುರ ಮರ್ಧಿನಿ, ಹಾಗು ದಕ್ಷಿಣ ಕಾಳಿಯ ಪ್ರತಿಮೆಗಳೂ ಇವೆ. ಈ ದೇವಾಲಯವು ತಾಂತ್ರಿಕರ ಪೂಜಾಸ್ಥಳ ಎನಿಸಿಕೊಂಡು ಪ್ರಾಣಿ ಬಲಿ ಕೊಡಲಾಗುತ್ತಿತ್ತೆಂಬ ಪ್ರತೀತಿ ಇದೆ.

ಈ ವೈಷ್ಣವ ತೀರ್ಥದಲ್ಲಿ ಶಿವನ ಒಂದು ಪ್ರಾಚೀನ ದೇವಾಲಯವೂ ಇದೆ. ಇದು ಪ್ರಾಪಿತ ಮಹೇಶ್ವರನ ದೇವಾಲಯ. ಈ ದೇವಾಲಯವು ಗಯ ತೀರ್ಥದ ಅತ್ಯಂತ ಹಳೆಯ ದೇವಾಲಯಗಳ್ಳಲ್ಲೊಂದಾಗಿ, ಪಾಳ ವಂಶದ ರಾಜರು ಇದನ್ನು ೧೧ನೇ ಶತಮಾನದಲ್ಲಿ ಕಟ್ಟಿಸಿದರೆಂದು ತಿಳಿಸುವ ಶಾಸನಗಳು ಸಿಕ್ಕಿವೆ. ಕರೀ ಕಗ್ಗಲ್ಲಿನಿಂದ ಕಟ್ಟಿರುವ ಈ ದೇವಾಲಯವೂ ಸಹ ಪೂರ್ವಮುಖಿಯಾಗಿ ಎರಡು ಪವಿತ್ರ ಗುಡ್ಡಗಳಾದ ಬ್ರಹ್ಮಯೋನಿ ಹಾಗು ವಾಸಮಕುಟ ಎಂಬ ಗುಡ್ಡಗಳ ಮಧ್ಯೆ ನಿಂತಿದೆ. ಸಭಾ ಮಂಟಪದ ಛಾವಣಿ ಕಲ್ಲಿನದ್ದಾಗಿದ್ದು ಅವುಗಳನ್ನು ಎತ್ತಿ ಹಿಡಿಯಲು ಬಹುಕೋನಾಕಾರದ ಕಲ್ಲಿನ ಸ್ತಂಭಗಳಿವೆ. ಮೇಲೆ ಐದು ಸುಂದರ ಗೋಳಗಳಿದ್ದು, ದೇವಾಲಯದ ಉಳಿದ ಭಾಗಗಳಿಗಿಂತ ಈ ಭಾರೀ ಸಭಾ ಮಂಟಪದ ಶೈಲಿಯು ವಿಭಿನ್ನವಾಗಿದೆ. ಗರ್ಭಗುಡಿಯಲ್ಲಿ ಒಂದು ಶಿವಲಿಂಗವಿದೆ, ಹಾಗು ದೇವಾಲಯದ ಶಿಖರದ ಮೇಲೆ ಮುರಿದು ಹೋಗಿರುವ ತ್ರಿಶೂಲವನ್ನು ಕಾಣಬಹುದು.

ಕೊನೆಗೆ ದಕ್ಷಿಣಾರ್ಕ ದೇವಾಲಯಕ್ಕೆ ಹೋದೆವು. ದಕ್ಷಿಣಾರ್ಕ ದೇವಾಲಯವು ಸೂರ್ಯದೇವನಿಗೆ ಸಮರ್ಪಿತವಾದ ಪ್ರಾಚೀನ ದೇವಾಲಯ. ಪಕ್ಕದಲ್ಲಿಯೇ ಸೂರ್ಯ ಕುಂಡ ಕಾಗು ದಕ್ಷಿಣಮಾನಸ ಕುಂಡಗಳೆಂಬ ಎರಡು ಕುಂಡಗಳಿವೆ. ಹಿಂದಿನಕಾಲದಲ್ಲಿ ಈ ಪ್ರದೇಶದಲ್ಲಿ ಸೂರ್ಯ ಪೂಜೆ ಸಾಮಾನ್ಯವಾಗಿತ್ತೆಂಬ ಸಂಕೇತಗಳು ಕಂಡು ಬರುತ್ತವೆ. ಈ ಪ್ರದೇಶದಲ್ಲಿ ಹಲವಾರು ಆದಿತ್ಯದೇವನ (ಸೂರ್ಯ) ಪ್ರತಿಮೆಗಳು ದೊರಕಿವೆ. ಸೂರ್ಯ ಪೂಜೆ ಮಾಡುತ್ತಿದ್ದವರು ಮಧ್ಯ ಏಶಿಯಾದ ಅಗ್ನಿ ಪೂಜೆ ಮಾಡುತ್ತಿದ್ದ ಜನಾಂಗದ ಪೀಳಿಗೆದಾರರಿರಬಹುದೆಂದು ಕೇಳಿಬಂತು.

ದಕ್ಷಿಣಾರ್ಕ ಎಂದು ಕರೆಯಲ್ಪಡುವ, ಗ್ರಾನೈಟ್ ಕಲ್ಲಿನ, ಆದಿತ್ಯ ದೇವನ ಈ ಪ್ರತಿಮೆಯು ಕಂಚುಕ (ಜಾಕೆಟ್), ಸೊಂಟ ಪಟ್ಟಿ, ಹಾಗು ಪಾದರಕ್ಷೆ ಧರಿಸಿದ್ದು, ಇರಾನೀ ಶೈಲಿಯಲ್ಲಿದೆ. ಈ ದೇವಾಲಯವನ್ನು ಬಹಳ ಪ್ರಾಚೀನವೆಂದೆಣಿಸಲಾದರೂ ಈಗಿರುವ ಕಟ್ಟಡ ದಕ್ಷಿಣ ಭಾರತದ ಚಕ್ರವರ್ತಿಯಾದ ವಾರಂಗಲ್ಲಿನ ಪ್ರತಾಪರುದ್ರನು ೧೩ನೇ ಶತಮಾನದಲ್ಲಿ ಕಟ್ಟಿಸಿದನೆಂದು ಹೇಳಲಾಗುತ್ತದೆ.

ದೇವಾಲಯವು ಪೂರ್ವಮುಖಿಯಾಗಿದ್ದು, ವಿಷ್ಣುಪಾದದೇವಾಲಯದ ಹತ್ತಿರವಿದೆ. ದೇವಾಲಯದ ಪೂರ್ವಭಾಗದಲ್ಲಿ ಸೂರ್ಯಕುಂಡವೆಂಬ ಕುಂಡವಿದೆ. ದೇವಾಲಯವು ಸಾಧಾರಣವಾದ ಕಟ್ಟಡ, ಮೇಲೆ ಗೋಳವಿದೆ. ಗರ್ಭಗುಡಿಯ ಮುಂದೆ ಸಭಾಮಂಟಪವಿದ್ದು, ಛಾವಣಿ ಎತ್ತಿಹಿಡಿಯಲು ದೊಡ್ಡ ಕಂಬಗಳಿವೆ. ಶಿವ, ವಿಷ್ಣು, ಬ್ರಹ್ಮ, ದುರ್ಗೆ ಹಾಗು ಸೂರ್ಯನ ಪ್ರತಿಮೆಗಳನ್ನು ಈ ಮಂಟಪದಲ್ಲಿ ಕಾಣಬಹುದು. ಫಾಲ್ಗು ನದಿ ತೀರದಲ್ಲಿ ಉತ್ತರ ಮಾನಸ ಕುಂಡವೆಂಬ ಕುಂಡದ ಬಳಿಯಿರುವ ಗಯಾದಿತ್ಯನ ದೇವಾಲಯ ಈ ಪ್ರದೇಶದ ಇನ್ನೊಂದು ಸೂರ್ಯ ದೇವಾಲಯವಂತೆ. ಇದನ್ನು ನೋಡಲು ನಮಗೆ ಕಾಲಾವಕಾಶವಿರಲಿಲ್ಲ.

ನಾನು ಎಲ್ಲರಿಗಿಂತ ಮುಂಚೆ ಹರಿಯಪ್ಪನ ಜೊತೆ ಕೋಣೆಗೆ ಹಿಂತಿರುಗಿದೆ. ಉಳಿದವರು ಆವರವರ ಕೆಲಸಗಳನ್ನು ಮುಗಿಸಿ ನಿಧಾನವಾಗಿ ಹಿಂತಿರುಗಿದರು. ನಾನು ಎಲ್ಲರೂ ಬರುವವರೆಗು ಸ್ವಲ್ಪ ಠಾಳಾಯಿಸುತ್ತಿದ್ದು, ಎಲ್ಲರೂ ಬಂದ ಮೇಲೆ ಒಟ್ಟಿಗೆ ಊಟ ಮಾಡಿದೆವು. ಯಾವುದಾದರೂ ಒಂದು ತರಕಾರಿ ಗಯದಲ್ಲಿ ಬಿಡುವ ಪದ್ಧತಿಯಂತೆ. ನಾನು ಯಾವುದನ್ನೂ ಬಿಡಲಿಲ್ಲವಾದರೂ ನನಗಿಷ್ಟವಿಲ್ಲದ ಯಾವುದೇ ತರಕಾರಿ ಮಾಡಿದರೂ ಗಯದಲ್ಲಿ ಬಿಟ್ಟುಬಂದೆ ಎಂದು ಅಂದಿನಿಂದ ಇಂದಿನವರೆಗೂ ತಮಾಷೆ ಮಾಡುತ್ತೀನಿ.

ಮಧ್ಯಾಹ್ನದ ಮೇಲೆ ಗಯದಿಂದ ಹೊರಟು ಪ್ರಸಂಗರಹಿತ ಪ್ರಯಾಣದ ನಂತರ ಮಧ್ಯರಾತ್ರಿ ಸುಮಾರು ೧:೦೦ ಘಂಟೆಗೆ ಪ್ರಯಾಗ (ಅಲಹಾಬಾದ್) ಸೇರಿದೆವು. ಒಂದು ಪುರಾತನ ಕಾಲದ ಮನೆಯ ಆಧುನಿಕ ಅಂಗದಲ್ಲಿ ಕೋಣೆಗಳು ಸಿಕ್ಕವು. ಕೋಣೆಗೆ ಸೇರಿದ ಬಾತ್‌ರೂಮ್ ಸಹ ಇದ್ದವು. ಕೋಣೆಯಿಂದ ಸುಮಾರು ೧೦೦-೧೫೦ ಮೀಟರ್ ದೂರದಲ್ಲೇ ಗಂಗೆ ಹರಿಯುತ್ತಿದ್ದದ್ದು ಕಾಣಿಸುತ್ತಿತ್ತು, ಕೇಳಿಸುತ್ತಿತ್ತು. ಕೋಣೆಗೆ ಹೋಗುವ ರಸ್ತೆ ನದಿ ತೀರದಲ್ಲೇ ಹಾಯ್ದು ಹೋಯಿತು. ರಾತ್ರಿ ಹೊತ್ತಾದರಿಂದ ಎಲ್ಲರೂ ಮಲಗಿ ನಿದ್ದೆಮಾಡಿದೆವು.


ಭಾಗ ೧೩: ಪ್ರಯಾಗ

೧೪ ಮೇ ೧೯೯೮

ಕಾಶಿಯಿಂದ ಸುಮಾರು ೧೩೦ ಕಿಲೋಮೀಟರ್ ದೂರದಲ್ಲಿರುವ ಪ್ರಯಾಗವು ಗಂಗಾ ಹಾಗು ಯಮುನಾ ನದಿಗಳ ಸಂಗಮ ಸ್ಥಳ. ಪ್ರಯಾಗವು ಭಾರತ ದೇಶದ ಅತ್ಯಂತ ಹಳೆಯ ಊರುಗಳಲ್ಲಿ ಹಾಗು ಅತ್ಯಂತ ಆದರಣೀಯ ತೀರ್ಥಕ್ಷೇತ್ರಗಳಲ್ಲಿ ಮತ್ತೊಂದು. ದೇವತಾಖ್ಯಾನದಲ್ಲಿ ಈ ಸ್ಥಳಕ್ಕೆ 'ತೀರ್ಥರಾಜ'ನೆಂದೇ ಹೆಸರು. ಸೃಷ್ಟಿಕರ್ತನಾದ ಬ್ರಹ್ಮನು ಪವಿತ್ರ ನದಿಗಳ ಸಮಾಗಮದ ಈ ಸ್ಥಳದಲ್ಲಿ ಪ್ರಕೃಷ್ಟ ಯಾಗವನ್ನು ಮಾಡಿ ಈ ಪುಣ್ಯ ಕ್ಷೇತ್ರಕ್ಕೆ ತೀರ್ಥರಾಜ ಎನಿಸುವ ವರ ಕೊಟ್ಟನಂತೆ.

ಪ್ರಯಾಗವು ತ್ರಿವೇಣೀ ಸಂಗಮವೆಂದೇ ಪ್ರಖ್ಯಾತವಾಗಿದೆ - ಗಂಗಾ, ಯಮುನ ಹಾಗು ಸರಸ್ವತಿ, ಈ ಮೂರು ನದಿಗಳ ಸಂಗಮ ಸ್ಥಳ. ಗಂಗೆ ಹಾಗು ಯಮುನಾ ನದಿಗಳು ಕಾಣಿಸುವಂತಿದ್ದರೂ ಸರಸ್ವತಿ ನದಿ ಇಲ್ಲಿ ಕಾಣುಸುವುದಿಲ್ಲ. ಸರಸ್ವತಿ ಗುಪ್ತಗಾಮಿನಿ - ಭೂಮಿಯ ಕೆಳಗೆ ಹರಿಯುವ ನದಿ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಒಂದು ಅನ್ಯ ವಿಷ್ಲೇಶಣೆ ಇದೆ.

ಸರಸ್ವತಿ ನದಿಯು ಹಿಂದಿನ ಕಾಲದಲ್ಲಿ ಉತ್ತರ-ಪಶ್ಚಿಮ ಭಾರತದಲ್ಲಿ (ಈಗಿನ ರಾಜಸ್ಥಾನ) ಹರಿಯುತಿದ್ದ ನದಿ ಎಂದು ರುಜುವಾತು ಮಾಡಲಾಗಿದೆ. ಆಗ ಸರಸ್ವತಿಯೇ ಆ ಪ್ರದೇಶದ ಅತಿ ದೊಡ್ಡ (ಸಿಂಧು ನದಿಗಿಂತ) ನದಿಯಾಗಿತ್ತು ಎಂದು ಉಪಗ್ರಹ ಚಿತ್ರಗಳು ಸಿದ್ಧಪಡಿಸುತ್ತವೆ. ಋಗ್ವೇದವೂ ಈ ನದಿಯನ್ನು "ಅಂಬಿತಮೆ ದೇವಿತಮೆ ನದೀತಮೆ ಸರಸ್ವತಿ" ಎಂದು ಹಾಡಿ ಹೊಗಳುತ್ತದೆ. ಸರಸ್ವತಿಯೂ ಸಹ ಗಂಗಾ-ಯಮುನಾ ನದಿಗಳಂತೆ ಹಿಮಾಲಯದ 'ಬಂದರ್ ಪೂಂಚ್' ಹಿಮನದಿಯಲ್ಲಿ ಜನಿಸುತ್ತಿತ್ತು. ಆದರೆ ಗಂಗಾ-ಯಮುನಾ ಪೂರ್ವ ದಿಕ್ಕಿನಲ್ಲಿ ಹರಿದು ಹೋದರೆ ಈ ನದಿ ಪಶ್ಚಿಮ ದಿಕ್ಕಿನಲ್ಲಿ ಹರಿದು ಹೋಗುತ್ತಿತ್ತು. ಸುಮಾರು ೪೦೦೦ ವರ್ಷಗಳ ಹಿಂದೆ ಭೂಕಂಪ ಅಥವಾ ಭೂಮಿಗೆ ಸಂಬಂಧಿಸಿದ ಇತರ ಅಪಘಾತಗಳಿಂದ ಈ ನದಿಯು ಬತ್ತು ಹೋಯಿತೆಂದು ಭೂವೈಜ್ಞಾನಿಕರು ಹೇಳುತ್ತಾರೆ. ಸರಸ್ವತಿ ನದಿಯ ಬಯಲು ಸೀಮೆಯ ಉಪನದಿಗಳು (ಝೇಲಮ್ ಅಥವ ವಿತಸ್ತ, ಚೇನಬ್ ಅಥವ ಅಸ್ಕಿನಿ, ರವಿ ಅಥವ ಐರಾವತಿ, ಬೀಯಸ್ ಅಥವ ವಿಪಾಸ, ಸಟ್ಲಜ್ ಅಥವ ಶತಾದ್ರು) ಸಿಂಧೂ ನದಿಯನ್ನು ಸೇರಿ ಆ ನದಿ ಮಹಾನದಿಯಾಯಿತು. ಆದರೆ ಸರಸ್ವತಿಯ ಹಿಮಾಲಯ ಪ್ರದೇಶದ ಉಪನದಿಗಳು ಗಂಗಾ-ಯಮುನಾ ನದಿಗಳನ್ನು ಸೇರಿಕೊಂಡಿರಬೇಕು. ಹೀಗಾಗಿ ಈ ಎರಡು ನದಿಗಳು ಸಮಾಗಮಿಸುವ ಸ್ಥಳದಲ್ಲಿ ಸರಸ್ವತಿಯೂ ಬಂದು ಸೇರಿಕೊಂಡು ನಿಜವಾಗಿ ತ್ರಿವೇಣಿ ಸಂಗಮವಾಗುತ್ತದೆ. ಗಂಗೆ-ಯಮುನೆಯರೊಳಗೇ ಕೂಡಿಬರುವುದರಿಂದ ಸರಸ್ವತಿಯು ಗುಪ್ತಗಾಮಿನಿಯೂ ಆಗಿರುತ್ತಾಳೆ. ಹೀಗೆ ಪ್ರಯಾಗವನ್ನು ತ್ರಿವೇಣಿ ಸಂಗಮವೆಂದು ಹಾಗು ಸರಸ್ವತಿಯನ್ನು ಗುಪ್ತಗಾಮಿನಿಯೆಂದು ಕರೆಯುವುದು ಉಚಿತವಾಗಿದೆ.

ಇತಿಹಾಸ-ಪುರಾಣಗಳಲ್ಲೂ ಪ್ರಯಾಗದ ಉಲ್ಲೇಖವಿದೆ. ಗಂಗಾ ಯಮುನಾ ನದಿಗಳ ಮಧ್ಯದ ಪ್ರದೇಶವನ್ನು ಲೋಕದ ಅತ್ಯಂತ ಸಮೃದ್ಧ ಪ್ರದೇಶವೆಂದು ಹೇಳಲಾಗುತ್ತದೆ. ಋಗ್ವೇದದಲ್ಲೂ ಪ್ರಯಾಗ ಕ್ಷೇತ್ರವನ್ನು ಹಾಡಿ ಹೊಗಳಿದ್ದಾರೆ. ರಾಮಾಯಣ-ಮಹಾಭಾರತ ಮಹಾಕಾವ್ಯಗಳಲ್ಲಿ ಹಲವಾರು ಬಾರಿ ಪ್ರಯಾಗ ತೀರ್ಥದ ಉಲ್ಲೇಖವಿದೆ. ಆಲದ ಮರದ ಎಲೆಯಮೇಲೆ ಮಗುವಾಗಿ, ಶ್ರೀಮನ್ನಾರಾಯಣನು ಇಲ್ಲಿ ಯೋಗಮೂರ್ತಿಯಾಗಿ ನಿವಾಸಿಸುವ ಕಾರಣ ಪ್ರತಿ ಯುಗಾಂತರದಲ್ಲಿ ಬರುವ ಪ್ರಳಯವೂ ಪ್ರಯಾಗ ಕ್ಷೇತ್ರವನ್ನು ನಿರ್ವಿಕಾರಗೊಳಿಸುವುದಿಲ್ಲವೆಂದು ಹೇಳಲಾಗುತ್ತದೆ. ಇಂತಹ ಶ್ರೀಮನ್ನಾರಾಯಣನನ್ನು ವೇಣಿ ಮಾಧವನೆಂದು ಕರೆಯುತ್ತಾರೆ. ಈಶ್ವರನು ಇಲ್ಲಿರುವ ಅಕ್ಷಯ ವಟವೃಕ್ಷದ ವ್ಯಕ್ತಿತ್ವಾರೋಪಣೆ ಎಂದೂ ಹೇಳಲಾಗುತ್ತದೆ.

ಚೀನೀ ಪ್ರವಾಸಿಗಳಾದ ಫಾ ಹಿಯಾನ್ (೫ನೇ ಶತಮಾನ) ಹಾಗು (ಹರಿದ್ವಾರದಿಂದ ನಮ್ಮೊಡನೆ ಬರುತ್ತಿರುವ) ವೆನ್ ಸಾಂಗ್ (೭ನೇ ಶತಮಾನ) ಇಬ್ಬರೂ ಇಲ್ಲಿಗೆ ಭೇಟಿ ನೀಡಿದ್ದರಂತೆ. ಇಬ್ಬರೂ ಅವರವರು ಬಂದ ಕಾಲಗಳಲ್ಲಿ ಈ ತೀರ್ಥವನ್ನು ಸಮೃದ್ಧವಾದ ಕ್ಷೇತ್ರವೆಂದು ಹೇಳಿದ್ದಾರೆ. ಪ್ರಯಾಗ ಕ್ಷೇತ್ರಕ್ಕೆ ಹರ್ಷ ಚಕ್ರವರ್ತಿಯೂ ಭೇಟಿಕೊಟ್ಟಿರುವ ಉಲ್ಲೇಖಗಳಿವೆ. ಕ್ರಿ.ಶ. ೧೫೭೫ರಲ್ಲಿ ಮುಘಲ್ ಅಧಿಪತಿಯಾದ ಅಕ್ಬರನು ಈ ಸ್ಥಳದ ಕೌಶಲ್ಯತೆ ಅರಿತು, ಇಲ್ಲಿ ಒಂದು ಕೋಟೆ ಕಟ್ಟಿಸಿ, ಈ ಊರಿಗೆ ಅಲಹಾಬಾದ್ ಅಥವ ಇಲಹಾಬಾದ್ ಎಂದು ಹೆಸರಿಟ್ಟನಂತೆ. ನನ್ನದು ತೀರ್ಥ ಯಾತ್ರೆಯಾದರಿಂದ ನಾನು ಈ ಕ್ಷೇತ್ರವನ್ನು ಇದರ ಹಿಂದೂ ಹೆಸರಾದ ಪ್ರಯಾಗವೆಂದೇ ಕೂಗಿದ್ದೀನಿ. ಸ್ವಾತಂತ್ರ್ಯ ಹೋರಾಟದಲ್ಲೂ ಈ ಊರು ಪ್ರಸಿದ್ಧವಾಗಿತ್ತು. ರಾಜ ನೈತಿಕ ಮನೆತನವಾದ ನೆಹರೂಗಳ ಮನೆಯೂ ಇಲ್ಲೇ ಇದೆ.

ಇಂದು ಪ್ರಯಾಗವು ತೀರ್ಥ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಇದರ ಧಾರ್ಮಿಕ, ಸಾಂಸ್ಕೃತಿಕ ಹಾಗು ಐತಿಹಾಸಿಕ ಪರಂಪರೆಯಿಂದ ಹಲವಾರು ಕವಿಗಳು, ಲೇಖಕರು, ಯೋಚನಾಪರರು ಹಾಗು ರಾಜನೀತಿಜ್ಞರು ಪ್ರೇರಿತರಾಗಿದ್ದಾರೆ. ಕುಮಾರಿಲ ಭಟ್ಟ, ಆದಿ ಶಂಕರಾಚಾರ್ಯ, ಚೈತನ್ಯ ಮಹಾಪ್ರಭು, ವಲ್ಲಭಾಚಾರ್ಯ, ಆಚಾರ್ಯ ರಮಾನಂದ ಇತ್ಯಾದಿ ಮಹಾಪುರುಷರು ಈ ಸ್ಥಳಕ್ಕೆ ಸಂಬಂಧಿಸಿದ್ದಾರೆ. ಪ್ರಯಾಗವು ಇಂದು ಮೂರು ನದಿಗಳ ಸಂಗಮದಂತೆಯೇ ಇತಿಹಾಸ-ಸಂಸ್ಕೃತಿ-ಧರ್ಮಗಳ ಸಂಗಮದ ಸಂಕೇತವಾಗಿದೆ.

ಸಮುದ್ರ ಮಥನದಿಂದ ದೊರಕಿದ ಅಮೃತದ ಕಥೆಗೂ ಪ್ರಯಾಗದ ಸಂಬಂಧವಿದೆ. ಒಂದು ಕಥೆಯ ಪ್ರಕಾರ ಶುಕ್ರಾಚಾರ್ಯರು ಅಮೃತವು ದಾನವರಿಗೆ ಸಿಗಬಾರದೆಂದು ಅಮೃತದ ಕುಂಭವನ್ನು ಎತ್ತಿಕೊಂಡು ಪ್ರಯಾಗ ಕ್ಷೇತ್ರಕ್ಕೆ ಓಡಿಬಂದರಂತೆ. ಅವರನ್ನಟ್ಟಿಸಿ ಬಂದ ದಾನವರೊಡನೆ ನಡೆದ ಹೋರಾಟದಿಂದ ನಾಲ್ಕು ತೊಟ್ಟು ಅಮೃತವು ಪ್ರಯಾಗ, ಹರಿದ್ವಾರ, ಉಜ್ಜಯನಿ ಹಾಗು ನಾಸಿಕದಲ್ಲಿ ಚೆಲ್ಲಿದವಂತೆ. ಪ್ರತಿ ೧೨ ವರ್ಷ ಗ್ರಹಗಳ ಅದೇ ರೀತಿಯ ಸಂಧಾನವಾದಾಗ ಮಹಾ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಭಕ್ತರು ಆ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಮಹಾ ಕುಂಭಮೇಳದ ೬ ವರ್ಷಗಳ ನಂತರ ಅರ್ಧ ಕುಂಭಮೇಳ ನಡೆಯುತ್ತದೆ. ಈ ಎರಡೂ ಕುಂಭಮೇಳಗಳಿಲ್ಲದ ವರ್ಷಗಳಲ್ಲಿ ಮಾಘ ಮಾಸದಲ್ಲಿ ಮಾಘಮೇಳ ನಡೆಯುತ್ತದೆ. ಈ ಮೇಳಗಳ ಸಮಯದಲ್ಲಿ ಸಂಗಮದ ನದಿ ತೀರದಲ್ಲೆ ಒಂದು ಊರನ್ನು ಹೂಡಿ ಭಕ್ತರು ಅಲ್ಲೇ ವಾಸಮಾಡುತ್ತಾರೆ.

ಮಾರನೆಯ ದಿನ ನಿಧಾನವಾಗಿ ಎದ್ದು ನಮ್ಮ ನಮ್ಮ ಕೆಲಸಗಳನ್ನು ಮುಗಿಸಿಕೊಂಡು ಸುಮಾರು ೭:೩೦ರ ಹೊತ್ತಿಗೆ ಮತ್ತೆ ಬಸ್ ಏರಿದೆವು. ಬಸ್ ನಮ್ಮನ್ನು ಯಮುನಾತಟದಲ್ಲಿಳಿಸಿತು. ಯಮುನಾ ತಟದಲ್ಲಿ ಎಲ್ಲರೂ ಓರಣ ದೋಣಿಗಳಲ್ಲಿ (ಎಲ್ಲರಿಗೂ ಸೇರಿ ೨ ದೋಣಿಗಳು) ಹತ್ತಿಕೊಂಡೆವು. ದೋಣಿಯವ ನಮ್ಮನ್ನು ಸಂಗಮಕ್ಕೆ ಕರೆದೊಯ್ದು, ಅಲ್ಲಿಳಿಸಿದ.

ಈ ತ್ರಿವೇಣಿ ಸಂಗಮವು, ಸ್ನಾನ ಮಾಡಲು ಇಡೀ ಲೋಕದಲ್ಲೇ ಅತ್ಯಂತ ಪವಿತ್ರ ಸ್ಥಳವೆಂದು ಹೇಳಲಾಗುತ್ತದೆ. ಸಂಗಮವು ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣಿಸುತ್ತದೆ. ಕಡಿಮೆ ಆಳ ಹಾಗು ಹೆಚ್ಚು ರಭಸದಿಂದ ಬರುವ ಗಂಗಾ ನದಿಯ ಮಣ್ಣು ಬಣ್ಣದ ನೀರು, ಶಾಂತವಾದ, ನೀಲಿ-ಹಸಿರು ಬಣ್ಣದ-ಆಳವಾದ ಯಮುನಾನದಿಯೊಡನೆ ಸಮಾಗಮಿಸುತ್ತದೆ. ಎರಡು ನದಿಗಳು ಸುಮಾರು ೧೨೦ ಡಿಗ್ರಿ ಕೋನದಲ್ಲಿ ಬಂದು ಸೇರಿ ಸಂಗಮದಿಂದ ಹೊರಡುವ ನದಿ ಈ ಎರಡೂ ನದಿಗಳಿಂದ ೧೨೦ ಡಿಗ್ರಿ ಕೋನದಲ್ಲಿ ಹರಿದು ಹೋಗುತ್ತದೆ. ಮಕರ ಸಂಕ್ರಾಂತಿ, ಪುಷ್ಯ ಪೂರ್ಣಿಮಾ, ಮೌನೀ ಅಮಾವಾಸ್ಯೆ, ಬಸಂತ ಪಂಚಮಿ, ಮಾಘ ಪೂರ್ಣಿಮ ಹಾಗು ಮಹಾಶಿವರಾತ್ರಿಯ ದಿನಗಳು ಸಂಗಮದಲ್ಲಿ ಸ್ನಾನಕ್ಕೆ ಶ್ರೇಷ್ಠವೆಂದು ಹೇಳಲಾಗುತ್ತದೆ.

ಎಲ್ಲರೂ ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾದೆವು. ಸ್ನಾನದ ಪ್ರಯುಕ್ತ ನನ್ನ ಮೈಗೆ ಹಚ್ಚಿಕೊಳ್ಳುವ ಎರಡು ಸೋಪುಗಳು ರಭಸದಿಂದ ಹರಿಯುವ ನದಿಯಲ್ಲಿ ತೇಲಿ ಹೋದವು. ನಮ್ಮ ಸ್ನಾನಗಳಾದಮೇಲೆ ಉಳಿದವರಿಗೆ ಕಾಯಹತ್ತಿದೆವು. ಪತಿ-ಪತ್ನಿಯರು ಪ್ರಯಾಗದ ಸಂಗಮದಲ್ಲಿ ವೇಣೀದಾನವೆಂಬ ಒಂದು ಧರ್ಮಾಚರಣೆ ಮಾಡುತ್ತಾರೆ. ಇದಕ್ಕೆ ಸಂಗಮದ ತಟದಲ್ಲೇ ಪಂಡಿತರು ಇರುತ್ತಾರೆ. ವೇಣೀದಾನದ ಕಾರ್ಯವು ಒಂದು ಸಣ್ಣ ಮದುವೆಯಿದ್ದಂತೆ ಎಂದು ಕೇಳಿಬಂತು. ಪೂಜೆಯ ಕೊನೆಯಲ್ಲಿ ಪತಿಯು ಪತ್ನಿಯ ಮುಡಿಯ ತುದಿಯನ್ನು ಕತ್ತರಿಸಿ ಸಂಗಮಕ್ಕೆ ಅರ್ಪಿಸುತ್ತಾನಂತೆ. ದಕ್ಷಿಣದವರು ಕೊನೆಗೆ ನದಿಗೆ ಬಾಗಿಣವನ್ನೂ ಕೊಡುವ ವಾಡಿಕೆಯಿದೆ. ನಮ್ಮ ಮಾಧವೇಶ್ವರ್, ನವೀನ್‌ಕುಮಾರರ ತಂದೆ, ಬೆಳವಾಡಿ ತಂಡದವರು, ಬಹುಶಃ ಕೋದಂಡರಾಮರು, ದೇಶಪಾಂಡೆ ಮತ್ತು ಪ್ರಭಾಕರರು ಇದರಲ್ಲಿ ಪಾಲ್ಗೊಂಡರು. ನಾನು ಹಾಗು ನವೀನ್‌ಕುಮಾರ್ ಅಷ್ಟು ಹೊತ್ತೂ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದೆವು.

ತಿಂಡಿಯನ್ನು ಅಲ್ಲಿಗೇ ಮಾಡಿ ತರಲಾಗಿತ್ತು. ವೇಣಿದಾನ ಮುಗಿದ ನಂತರ ನದಿ ತೀರದಲ್ಲೇ ಪೊಂಗಲ್ ಹಾಗು ಗೊಜ್ಜಿನ ತಿಂಡಿ ತಿಂದೆವು. ಬಳಿಕ ಅಲ್ಲೇ ಇದ್ದ ಹನುಮಂತನ ಗುಡಿಗೆ ಹೋದೆವು. ಇಲ್ಲಿ ಮಲಗಿರುವ ಹನುಮಂತನ ಪ್ರತಿಮೆ ಇದೆ. ಗಂಗೆ ಉಕ್ಕಿ ಹರಿದು ಹನುಮಂತನ ಪಾದ ಮುಟ್ಟಿ ಮತ್ತೆ ಶಾಂತಳಾಗುವಳಂತೆ.

ಸಂಗಮದ ಹತ್ತಿರವೇ ಯಮುನಾ ತೀರದಲ್ಲಿ ಮುಘಲ್ ಬಾದಶಹ ಅಕ್ಬರನು ಕ್ರಿ.ಶ. ೧೫೮೩ರಲ್ಲಿ ಕಟ್ಟಿಸಿದ ಕೋಟೆಯೊಂದಿದೆ. ಒಳಗೆ ಒಂದು ಜೆನಾನ ಹಾಗು ಹಲವಾರು ಆವರಣಗಳಿವೆ. ಕೌಸಂಬೀ ರಾಜ್ಯದಿಂದ ಸಾಗಿಸಿದ ಕ್ರಿ.ಪೂ. ೩ನೇ ಶತಮಾನದ ೧೦.೫ ಅಡಿ ಎತ್ತರದ ಅಶೋಕ ಸ್ಥಂಭ, ಅದರ ಜೊತೆಯಿದ್ದ ಹಲವು ಶಾಸನಗಳು ಇವೆ. ಮುಸಲ್ಮಾನರ ಕಟ್ಟಡವಾದರೂ ಕೋಟೆಯೊಳಗೆ ಸರಸ್ವತಿ ನದಿಯ ಉಗಮಸ್ಥಳವೆನಿಸುವ ಸರಸ್ವತಿ ಕೂಪವೆಂಬ ಬಾವಿಯಿದೆ. 'ಅಕ್ಷಯ ವಟ'ವೆಂದು ಹೆಸರು ಪಡೆದಿರುವ ಅಮೃತ ಆಲದ ಮರ ಹಾಗು ಪಾತಾಳಪುರಿ ದೇವಸ್ಥಾನಗಳಿವೆ. ಪ್ರಳಯ ಬಂದಾಗಲೂ ಈ ಅಕ್ಷಯವಟವು ನಿರ್ವಿಕಾರವಾಗಿರುತ್ತದೆಯಂತೆ. ರಾಮಾಯಣದ ಶ್ರೀರಾಮನೇ ಈ ಅಕ್ಷಯವಟವನ್ನು ನೋಡಲು ಬಂದಿದ್ದನಂತೆ. ಚೀನೀ ಪ್ರವಾಸಿ ವೆನ್ ಸಾಂಗನೂ ಈ ಸ್ಥಳದ ಬಗ್ಗೆ ಬರೆದಿದ್ದಾನೆ. ಪಾತಾಳಪುರಿ ದೇವಾಲಯವು ಕೋಟೆಯ ನೆಲಮಾಳಿಗೆಯಲ್ಲಿದ್ದು, ಇದನ್ನು ಪುರಾಣ ಇತಿಹಾಸಗಳಲ್ಲಿ ಉಲ್ಲೇಖಿಸಲಾಗಿದೆ. ಈಶ್ವರನೇ ಈ ಅಕ್ಷಯವಟವೃಕ್ಷದ ವ್ಯಕ್ತಿತ್ವಾರೋಪಣೆಯೆಂದು ಹೇಳಲಾಗುತ್ತದೆ. ಇಲ್ಲಿ ಹಲವಾರು ಕಲ್ಲಿನಿಂದ ಕೆತ್ತಿದ ಪ್ರತಿಮೆಗಳಿವೆ.

ಇವೆಲ್ಲವೂ ನೋಡಿ ಪುನಃ ದೋಣಿಗೆ ಹಿಂತಿರುಗಿದೆವು. ದೋಣಿ ನಮ್ಮನ್ನು ಬಸ್ ಬಳಿಗೆ ಕರೆದೊಯ್ಯಿತು. ಬಸ್ ಹತ್ತಿ ಜವಹರಲಾಲ್ ನೆಹರು ಜನಿಸಿದ ಮನೆಯಾದ 'ಆನಂದ ಭವನ'ಕ್ಕೆ ಹೋದೆವು. ಇದೊಂದು ದೊಡ್ಡ ಮನೆ - ಮೋತೀಲಾಲ್, ಜವಹರಲಾಲ್, ಇಂದಿರಾ ಹೀಗೆ ಎಲ್ಲರ ಕೋಣೆಗಳನ್ನು ನೋಡಬಹುದು. ಜವಹರಲಾಲರ ಒಂದು ಭಾವಚಿತ್ರದ ಜೀವನ ವೃತ್ತಾಂತ ಹಾಗು ಒಂದು ಪುಸ್ತಕದ ಅಂಗಡಿ ಇವೆ. ಇದು ಮುಗಿಸಿ ಒಂದು "ಭಾರದ್ವಾಜ ಆಶ್ರಮ" ಎನ್ನುವ ಸ್ಥಳಕ್ಕೆ ಹೋದೆವು. ಈ ಸ್ಥಳಕ್ಕೆ ರಾಮ ಬಂದಿದ್ದನೆಂಬ ಪ್ರತೀತಿ ಇದೆ. ಈಗಂತು ಇದು ಧಾರ್ಮಿಕ ವಂಚಕರ ತಾಣದ ಹಾಗೆ ಕಾಣಿಸಿದಾದ್ದರಿಂದ ನಾನಂತು ಅಲ್ಲಿಂದ ಒಡನೆ ಕಾಲು ಕಿತ್ತೆ. ಮರಳಿ ಬಸ್ ಹತ್ತಿ ಕೋಣೆಗೆ ಹಿಂತಿರುಗೆದೆವು.

ಊಟ ಮಾಡಿ, ನಂತರ ಬಟ್ಟೆಗಳನ್ನು ಒಗೆದುಕೊಂಡೆ. ನನ್ನನ್ನು ನೋಡಿ ಎಲ್ಲರೂ ತಾವೂ ಬಟ್ಟೆ ಒಗಯಲಾರಂಭಿಸಿದರು. ಇಂದು ವಿರಾಮದ ಮಧ್ಯಾಹ್ನವಾಗಿತ್ತು. ಕಾಶಿಯಲ್ಲಿ ಕೊಂಡ ಸ್ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಳ್ಳುವ ಕೆಲಸವಿತ್ತು. ಸರಿ ಯಾರೋ ಒಬ್ಬನನ್ನು ಕರೆಸಿದರು. ಹರಿದ್ವಾರದ ಗಂಗಾನದಿ ನೀರನ್ನು ಕಾಶಿಯ ಚೊಂಬುಗಳಲ್ಲಿ ತುಂಬಿಸಿ ಪ್ರಯಾಗದಲ್ಲಿ ಗಾಳಿ ತೂರದ ಮುಚ್ಚಳಗಳನ್ನು ಹಾಕಿಸಿಕೊಂಡು ಅತ್ಯಂತ ಪವಿತ್ರ ಗಂಗೆ ಸ್ಥಾಲಿಗಳಾಗಿಸಿಕೊಂಡೆವು.

ಮಧ್ಯಾಹ್ನ ಸ್ವಲ್ಪ ಮಲಗಿ, ಸಂಜೆ ಎದ್ದು ಪೇಟೆಗೆ ಹೋದೆವು. ನನ್ನ ಸೋಪಿನ ಡಬ್ಬ ಹಾಗು ಸೋಪು ಸಂಗಮದಲ್ಲಿ ತೇಲಿಹೋಗಿತ್ತು. ಹಾಗಾಗಿ ನಾನು ಸೋಪ್ ಹಾಗು ಡಬ್ಬ ಕೊಳ್ಳಬೇಕಿತ್ತು. ಗಲ್ಲಿಗಳನ್ನು ಹಿಡಿದು ನಡೆದೇ ಹೋದೆವು - ನಾನು ನನ್ನ ಸೋಪ್ ಕೊಂಡೆ, ಉಳಿದವರು ನಿಂಬೆಹಣ್ಣು, ಹಾಲು, ಬಳೆಗಳು ಇತ್ಯಾದಿಗಳನ್ನು ಕೊಂಡರು.

ದಾರಿಯಲ್ಲಿ ವೇಣಿ ಮಾಧವನ ದೇವಾಲಯಕ್ಕೆ ಹೋದೆವು. ವೇಣಿ ಮಾಧವ ದೇವಾಲಯವು ಪ್ರಯಾಗದ ಅತ್ಯಂತ ಹಳೆಯ ದೇವಾಲಯವೆಂದು ಹೇಳಲಾಗಿದೆ. ಈ ದೇವಾಲಯದ ಕಥೆ ಹೀಗಿದೆ: ತ್ರೇತಾಯುಗದಲ್ಲಿ ಗಜಕರ್ಣನೆಂಬ ಅಸುರನೊಬ್ಬ ಘೋರ ತಪಸ್ಸು ಮಾಡಿ ವರಗಳನ್ನು ಪಡೆದು ನಂತರ ಇಂದ್ರನನ್ನು ಸ್ವರ್ಗದಿಂದ ಒದ್ದೋಡಿಸಿ ಸ್ವರ್ಗಾಧಿಪತಿಯಾದನಂತೆ. ದೇವತೆಗಳೆಲ್ಲರೂ ನಾರದರಬಳಿ ಹೋಗಿ ಉಪಾಯ ಕೇಳಿದರಂತೆ. ನಾರದರು ಗಜಕರ್ಣಾಸುರನ ಬಳಿ ಹೋಗಿ ನಾರಾಯಣನ ಸ್ಥುತಿ ಮಾಡಿದಾಗ ಅಸುರನಿಗೆ ಕೋಪ ಬಂದು ನಾರದರನ್ನು ಕೊಲ್ಲ ಹೊರಟನಂತೆ. ಹೇಗೋ ಅಂತು ಅಸುರನನ್ನು ಶಾಂತ ಮಾಡಿ ನಾರದರು ಅವನನ್ನು ಮುಗಿಸುವ ಯೋಚನೆ ಮಾಡಲಾರಂಭಿಸಿದರಂತೆ.

ಗಜಕರ್ಣಾಸುರನು ಕಜ್ಜಿ ರೋಗ ಪೀಡಿತನಾಗಿ ಆತನ ಕಾಲು ಯಾವಾಗಲು ಕಡಿಯುತ್ತಿದ್ದಿತಂತೆ. ನಾರದರು ಅವನಿಗೆ ಮಾಘಮಾಸದಲ್ಲಿ ಪ್ರಯಾಗದ ಸಂಗಮಸ್ನಾನದಿಂದ ಈ ರೋಗದ ನಿವಾರಣೆಯಾಗುವುದಾಗಿ ಹೇಳಿ, ಅವನು ಆ ರೀತಿ ಮಾಡಿದಾಗ ರೊಗ ಗುಣವಾಯಿತಂತೆ. ಮೂರು ಪವಿತ್ರ ಹಾಗು ರೋಗ ನಿವಾರಣಾ ಶಕ್ತಿಯುಳ್ಳ ನದಿಗಳನ್ನು ನೋಡಿ, ಅಸುರನು ಅವುಗಳನ್ನು ತನ್ನ ತಾಣಕ್ಕೆತ್ತಿಕೊಂಡು ಹೋಗುವ ಯೋಜನೆ ಹೂಡಿ, ಮೂರು ನದಿಗಳನ್ನು ಹೀರಿಬಿಟ್ಟನಂತೆ. ಆಗ ಆ ಪ್ರದೇಶವು ಬರಡು ಭೂಮಿಯಾಗಿ, ಎಲ್ಲರೂ ಭಗವಂತನನ್ನು ಕಾಪಾಡು ಎಂದು ಪ್ರಾರ್ಥಿಸಿದರಂತೆ. ಆಗ ಮಾಧವನು ಬಂದು ಗಜಕರ್ಣಾಸುರನ ತಲೆ ತನ್ನ ಚಕ್ರದಿಂದ ಕತ್ತರಿಸಿದನಂತೆ. ಅಷ್ಟು ಹೊತ್ತಿಗೆ ರಾಕ್ಷಸನು ಸರಸ್ವತಿಯನ್ನು ಅರಗಿಸಿಕೊಂಡು ಆಕೆ ಮಾಯವಾದಳಂತೆ. ಯಮುನೆ ಆತನ ನಾಡಿಗಳಲ್ಲೋಡುತ್ತಿದ್ದರಿಂದ, ಯಮುನೆ ನೀಲಿಯಾದಳಂತೆ. ಗಂಗೆ ಅವನ ಹೊಟ್ಟೆಯಲ್ಲಿದ್ದರಿಂದ ಹಳದಿ ಬಣ್ಣ ತಿರುಗಿದಳಂತೆ. ಅನ್ಯ ಅಸುರರ ಭಯದಿಂದ ಪ್ರಯಾಗವು ಭಗವಂತನನ್ನು ಆ ಸ್ಥಳ ಬಿಟ್ಟು ಹೋಗದಿರಲು ಪ್ರಾರ್ಥಿಸಿತಂತೆ. ಮಾಧವನು ಹಾಗೇ ಆಗಲೆಂದು ಅಲ್ಲೇ ವೇಣಿ ಮಾಧವನಾಗಿ ನೆಲೆಸಿದನಂತೆ. ಹೀಗಾಗಿ, ವೇಣಿ ಮಾಧವನ ದರ್ಶನವಿಲ್ಲದೆ ಸಂಗಮದ ಸ್ನಾನದ ಫಲ ದೊರಕುವುದಿಲ್ಲ ಎಂದು ಹೇಳುತ್ತಾರೆ.

ನಾವು ಹಿಮಾಲಯದ ತಪ್ಪಲು ಬಿಟ್ಟಾಗಿನಿಂದ ಮಳೆಯೂ ನಮ್ಮೊಡನೆಯೇ ಬರುತ್ತಿದ್ದರಿಂದ ಇಲ್ಲಿಯವರೆಗು ಶಕೆ ಅಷ್ಟೆನಿಸಿರಲಿಲ್ಲ. ಇಂದು ಪ್ರಯಾಗದಲ್ಲಿ ಶಕೆ ತಡೆಯಲಾರದಾಗಿತ್ತು. ಆದರೆ ಮುಂಬರುವ ಶಕೆಯ ಮುಂದೆ ಇದೇನೂ ಇರಲಿಲ್ಲವೆಂದು ಹೇಳಬೇಕು. ಪೇಟೆಯಲ್ಲಿ ಎಲ್ಲರೂ 'ಲಸ್ಸಿ' ಕುಡಿದೆವು. ಆಹಾ! ಬಹು ರುಚಿಕರ ಲಸ್ಸಿ - ಪುಟ್ಟ ಮಣ್ಣಿನ ಮಡಿಕೆಗಳಲ್ಲಿ ಕೊಡುತ್ತಾರೆ, ಗುಲಾಬಿಯ ಸ್ವಾದ ಕೂಡಿರುತ್ತದೆ. ಅಂತಹ ಲಸ್ಸಿ ನಾನೆಂದೂ ಕುಡಿದಿರಲಿಲ್ಲ, ಅಂದಿನಿಂದ ಕುಡಿದಿಲ್ಲ. ಎಲ್ಲರೂ ಕೋಣೆಗೆ ಹಿಂತಿರುಗಿದೆವು. ಶಕೆ ತಪ್ಪಿಸಿಕೊಳ್ಳಲು ನಾನು ಮತ್ತೆ ಸ್ನಾನ ಮಾಡಿದೆ. ಸ್ನಾನದ ನಂತರ ಊಟ, ನಿದ್ದೆ.

ಭಾಗ ೧೪: ಆಗ್ರಾ, ಮಥುರಾ, ವೃಂದಾವನ

ಈ ಊರುಗಳ ಬಗ್ಗೆ ಎಷ್ಟು ಬರೆದರೂ ಕಡಿಮೆ, ಆದರೆ ಈ ಮೂವರನ್ನೂ ನಾವು ಕೇವಲ ಅರ್ಧ ದಿನದಲ್ಲಿ (ಸುಮಾರು ೭-೮ ಘಂಟೆಗಳಲ್ಲಿ) ನೋಡಿದರಿಂದ, ಯಾವುದರ ಬಗ್ಗೆಯೂ ಹೆಚ್ಚು ಮಾಹಿತಿ ಕೊಡಲಾರೆ. ಹಾಗಾಗಿ ತಿಳಿದಷ್ಟನ್ನು ನಮ್ಮ ಕಥೆಗೆ ಸೇರಿಸಿ ಬರೆಯುವೆ.

೧೫ ಮೇ ೧೯೯೮

೧೫ನೇ ತಾರಿಖು ಬೇಗನೆ ಹೊರಡುವುದಿತ್ತು. ಸರಿ ೪:೦೦ ಘಂಟೆಗೇ ಎದ್ದು ಎಲ್ಲರೂ ತಯಾರಾದೆವು. ೫:೩೦ ಅಷ್ಟು ಹೊತ್ತಿಗಾಗಲೆ ಬಸ್ಸಿನೊಳಗೆ ಪ್ರಯಾಣ ಮಾಡುತ್ತಿದ್ದೆವು. ದೂರದ ಪ್ರಯಾಣವಾಗಿತ್ತು, ನನಗೋ ನಿದ್ದೆ - ಬೆಳಿಗ್ಗೆ ಎಲ್ಲ ನಿದ್ದೆ ಮಾಡಿದೆ. ತಿಂಡಿ ತಿನ್ನಲು ಅನುಕೂಲವಾದ ಒಂದು ಕಡೆ ನಿಂತು ಶಾವಿಗೆ ಭಾತ್ ಹಾಗು ಸಿಹಿ ಅವಲಕ್ಕಿ ತಿಂದು ಮತ್ತೆ ಹೊರಟೆವು. ದಾರಿಯಲ್ಲಿ ಮತ್ತೆ ನಮ್ಮ ಹಳೆ ನಕ್ಷತ್ರಿಕನಾದ ಟ್ರಾಫಿಕ್ ಜಾಮ್ ಒಳಗೆ ಸಿಕ್ಕೆವು. ಯಾರೋ ಲಾರಿಯವ ಜನರಿಂದ ತುಂಬಿದ್ದ ಟ್ರಾಕ್ಟರ್ ತಪ್ಪಿಸಲು ಹೋದಾಗ ಆ ಲಾರಿಗೆ ಸೈಕಲ್ ಒಂದು ಸಿಕ್ಕಿ ಸೈಕಲ್‌ನವ ಮೃತಪಟ್ಟಿದ್ದನಂತೆ. ಹಳ್ಳಿಯವರು ಆ ಕಾರಣದಿಂದ ಟ್ರಾಫಿಕ್ ಜಾಮ್ ಮಾಡಿಸಿದ್ದರಂತೆ. ಇದು ನಾವು ಕೇಳಿದ ಕಥೆ. ನಿಜ ಸಂಗತಿ ತಿಳಿಯದು - ನಮಗಲ್ಲಿ ಯಾವ ಅಪಘಾತದ ಸುಳಿವೂ ಕಾಣಿಸಲಿಲ್ಲ. ಸುಮಾರು ಎರಡು ಘಂಟೆಗಳು ಹೀಗೆ ಕಳೆದವು. ನಂತರ ಹೊರಟಾಗ ನಾನು ಮತ್ತೆ ನಿದ್ದೆ ಮಾಡಿದೆ.

ಎದ್ದಾಗ ಸುಮಾರು ೧೨:೦೦ ಆಗಿದ್ದಿರಬಹುದು. ಆಚೆ ತಾಪಮಾನ ಸುಮಾರು ೪೫ ಡಿಗ್ರಿ ಇದ್ದಿರಬಹುದು. ಶಕೆ ತಾಳಲಾರದಾಗಿತ್ತು. ಮಧ್ಯಹ್ನದ ಊಟ ಅಲ್ಲೇ ಇದ್ದ ಒಂದು ಜನರಿಲ್ಲದ ಡಾಬಾದೊಳಗೆ ಮಾಡಿಕೊಂಡೆವು. ಸಧ್ಯ ಅಲ್ಲೊಂದು ಕೊಳವೆ ಬಾವಿ ಇತ್ತು. ಊಟದ ನಂತರ ಮತ್ತೆ ಹೊರಟೆವು. ದಾರಿಯಲ್ಲೊಮ್ಮೆ ಚಹಾಗೆ ನಿಂತು, ಕೊನೆಗೆ ೯:೦೦ ಘಂಟೆಗೆ ಆಗ್ರಾ ತಲುಪಿದೆವು. ನಮ್ಮ ತಂಗುಸ್ಥಳದ ಹೆಸರು ನಮ್ಮ ದಕ್ಷಿಣದ ಹೆಸರಾಗಿತ್ತು: ಕಾವೇರಿ ಲಾಡ್ಜ್. ರಾತ್ರಿ ೧೦:೩೦ಕ್ಕೆ ಹಗುರ ಊಟದ ನಂತರ ೧೧:೩೦ ಅಷ್ಟು ಹೊತ್ತಿಗೆ ಮಲಗಿದೆವು.

೧೬ ಮೇ ೧೯೯೮

ಮಾರನೆಯ ದಿನ ಕಾರ್ಯಕ್ರಮದ ೮:೦೦ ಘಂಟೆಗೆ ಪ್ರಾರಂಭವಾಗುವುದಿದ್ದರೂ, ನಾನು ೫:೦೦ಕ್ಕೇ ಎದ್ದು ಕೆಲಸಗಳನ್ನು ಮೊದಲು ಮುಗಿಸಿಕೊಂಡು, ಎರಡು ದಿನದಿಂದ ಬಿಟ್ಟು ಹೋಗಿದ್ದ ನನ್ನ ದಿನಚರಿ ಮರೆಯುವ ಮುನ್ನ ತುಂಬಿಸಿದೆ. ಎಲ್ಲ ಮುಗಿದ ಮೇಲೆ ಇನ್ನೂ ಸುಮಾರು ೧:೦೦ ಘಂಟೆ ಕಾಲಾವಕಾಶವಿತ್ತು. ಹಾಗೆಯೆ ಕಾಲ ಹಾಕಿದೆ. ಕಾರ್ಯಕ್ರಮದಲ್ಲಿ ವೃಂದಾವನಕ್ಕೆ ಹೋಗುವುದಿದ್ದರೂ ಮಥುರೆಗೆ ಹೋಗುವಂತಿರಲಿಲ್ಲ. ಹರಿಯಪ್ಪ ಹಾಗು ಡ್ರೈವರ್ ಇಬ್ಬರೂ ಸೇರಿ ಏನೋ ಪಿತೂರಿ ನಡೆಸಿದ್ದು, ಹಿಂದಿನ ದಿನವೇ ಒಪ್ಪಂದ ಮಾಡಿಕೊಂಡಿದ್ದೆವು - ಪ್ರತಿ ತಲೆ ರೂ.೭೦ ಕೊಟ್ಟು ಮಥುರ ನೋಡುವುದೆಂದು. ಅಂದು ಸಂಜೆ ಜಯ್‌ಪುರ್‌ಗೆ ರವಾನೆಯಾಗುವುದಿತ್ತು.

ಬೆಳಗ್ಗೆಯ ತಿಂಡಿ ಮುಗಿಸಿ ಸುಮಾರು ೮:೩೦ಗೆ ಹೊರಟೆವು. ಮೊದಲು ಹೋದದ್ದು ರಾಧಾಸ್ವಾಮಿ ದೇವಾಲಯಕ್ಕೆ. ಇದನ್ನು ತಾಜ್‌ಮಹಲ್ಲನ್ನು ಮೀರಿಸುವ ಅಪೇಕ್ಷೆಯಿಂದ ಕಟ್ಟುತ್ತಿದ್ದಾರಂತೆ. ಇಡೀ ದೇವಸ್ಥಾನವೇ ಅಮೃತಶಿಲೆಯದಾಗಿದ್ದು, ಬಹಳ ದೊಡ್ಡದಾಗಿದೆ. ಒಳಗೆ ಸುಂದರ ಕೆತ್ತನೆಗಳಿವೆ. ಇಡೀ ಗುಲಾಬಿ ಹೂಗಳನ್ನೇ ಅಮೃತಶಿಲೆಯಲ್ಲಿ ಕೆತ್ತಿದ್ದಾರೆ.

ಇದನ್ನು ಮುಗಿಸಿ ನಾವು ಆಗ್ರಾದ ಕೋಟೆಗೆ ಹೋದೆವು. ಇದೊಂದು ಬಹು ದೊಡ್ಡ ಕೋಟೆಯಂತೆ. ಮೂರನೆ ಒಂದು ಭಾಗ ಮಾತ್ರ ಜನ ಸಾಮಾನ್ಯರ ದರ್ಶನಕ್ಕೆ ಇರಿಸಲಾಗಿದೆ. ಇನ್ನುಳಿದ ಭಾಗ ಭಾರತದ ಸೇನೆಯ ನಿಗ್ರಹದಲ್ಲಿದೆ. ಒಳಗೆ ಹಲವಾರು ಅರಮನೆಗಳು, ಉದ್ಯಾನವನಗಳು, ಇತ್ಯಾದಿ ಕಂಡೆವು. ಮಾರ್ಗದರ್ಶಕರಿಂದ ಮುಘಲ್ ಸಾರ್ವಭೌಮರು ಹಾಗು ಅವರ ಕೃತ್ಯಗಳ ಬಗ್ಗೆ ಚಿತ್ರ-ವಿಚಿತ್ರ ಕಥೆಗಳನ್ನು ಕೇಳಿದೆವು. ಕೋಟೆಯಲ್ಲಿ ಬಂಧಿಯಾಗಿದ್ದ ಶಹಜಹಾನನು ಗೋಡೆಗೆ ಸಿಕ್ಕಿಸಿದ್ದ ವಜ್ರದೊಳಗೆ ತಾಜ್‌ಮಹಲಿನ ಬಿಂಬ ನೋಡುತ್ತಿದ್ದದ್ದು, ಇತ್ಯಾದಿ. ವಜ್ರ ಹೊಳೆಯುತ್ತದೆ, ಆದರೆ ಅದು ಕನ್ನಡಿಯಲ್ಲ - ಬಿಂಬ ಕಾಣಿಸುವುದೆ? ಕಾಣಿಸಿದರೂ ಅದು ಅಷ್ಟು ಚಿಕ್ಕದು! ಕೋಟೆಯಿಂದ (ಆ ಕೋಣೆಯಿಂದ) ಹಾಗೆ ನೋಡಿದರೆ ತಾಜ್‌ಮಹಲ್ ಸುಲಭವಾಗಿ, ಸುಂದರವಾಗಿ ಕಾಣಿಸುತ್ತದೆ. ಹಾಗಿದ್ದಲ್ಲಿ ವಜ್ರದೊಳಗಿನ ಬಿಂಬ ನೋಡುವ ಅಗತ್ಯವೇನು? ಹೀಗಾಗಿ ಈ ಸ್ಥಳವು ಬಹಳ ದೊಡ್ಡದಾಗಿದ್ದು, ಇನ್ನು ಹೆಚ್ಚು ವಿವರಣೆಗೆ ಆಱವಾಗಿದ್ದರೂ, ನಾನು ಇದರ ಮೇಲೆ ಹೆಚ್ಚು ಗಮನ ಕೊಡಲಿಲ್ಲವಾದ್ದರಿಂದ ಇಲ್ಲಿಗೆ ನಿಲ್ಲಿಸುವೆ.

ಮತ್ತೆ ಹೊರಟು ಒಂದು ಅಂಗಡಿಗೆ ಕರೆದೊಯ್ದರು - ಎಲ್ಲ ಸುಟ್ಟು ಮಾರುವ ಅಂಗಡಿ! ನನಗೆ ತಿಳಿದಿದ್ದರಿಂದ ಏನನ್ನೂ ಕೊಳ್ಳಲಿಲ್ಲ. ಮುಂದೆ ತಾಜ್ ಮಹಲ್‌ಗೆ ಹೋದೆವು. ವಾಹನದ ನಿಲುಗಡೆಯಿಂದ ಸ್ವಲ್ಪ ದೂರ ನಡೆಯಬೇಕು. ನಾವು ನಡೆದು ಹೋಗಿ ಗೇಟ್ ದಾಟಿ ಸಾಗಿದೆವು. ಒಂದು ತರಹದ ಆಶಾಭಂಗ, ಒಂದು ತರಹ ರೋಮಾಂಚನ. ನಾನೊಮ್ಮೆ ನೋಡಿದ್ದೆಯಾದ್ದರಿಂದ ಹೆಚ್ಚು ಕುತೂಹಲವಿರಲಿಲ್ಲ. ತಾಜ್‌ಮಹಲನ್ನು ನಾನು ವರ್ಣಿಸುವ ಅಗತ್ಯವಿಲ್ಲ, ಹಾಗಾಗಿ ನಮ್ಮ ಕಥೆ ಹೇಳುವೆ. ಅಮೃತ ಶಿಲೆಯ ಮೆಟ್ಟಲುಗಳನ್ನು ಹತ್ತಿ ಹೋದೆವು. ಕಟ್ಟಡದ ಒಳಗೆ ಹೊರಟಾಗ ಆ ದುರ್ವಾಸನೆ ತಡೆಯಲಾಗದೆ ಆಚೆಯೇ ಕುಳಿತೆವು. ನಾನು ಮುಂಚೆಯೇ ಇದು ಮುಸಲ್ಮಾನರ ಕಟ್ಟಡವಲ್ಲ, ಹಿಂದೂಗಳು ಅಗ್ರೇಶ್ವರ ಮಹಾದೇವನನ್ನು (ಹೀಗಾಗಿ ಆಗ್ರಾ!) ಪೂಜಿಸುತ್ತಿದ್ದ ದೇವಾಲಯವೆಂದು ಕೇಳಿದ್ದೆ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ (?) ಪುರುಶೋತ್ತಮ್ ನಾರಾಯಣ್ ಓಕ್ ಎಂಬಾತ ಹಿಂದೆಯೇ ಇದರ ಬಗ್ಗೆ ಬರೆದಿದ್ದಾರೆ. ನನಗಂತೂ ಇದರ ಬಗ್ಗೆ ನಂಬಿಕೆಯಿರಲಿಲ್ಲ. ಅವರು ಹೇಳಿರುವ ಎಲ್ಲ ವಿಚಾರಗಳು ನನಗೆ ನೆನಪಿರಲಿಲ್ಲವಾದರೂ ಕೆಲವನ್ನಾದರೂ ಪರೀಕ್ಷಿಸಿ ನೋಡೋಣವೆಂದು ನೋಡಿದೆ. ಎಲ್ಲೆಡೆ ಅಂಚಿನ ಕೆತ್ತನೆಗಳು ಹಿಂದೂ ಧರ್ಮದ ಸಂಕೇತಗಳಾಗಿವೆ, ಕಟ್ಟಡದ ಮೇಲಿನ ಗೋಳ ಮುಸಲ್ಮಾನ ಶೈಲಿಯಲಿಲ್ಲದೆ ತಾವರೆ ಹೂವು ಸಹಿತವಾಗಿ ಹಿಂದೂ ಶೈಲಿಯಲ್ಲಿದೆ. ಗೋಳದ ಶಿಖರ ಹಾಗು ಒಳಗಿನ ಅಂಗಳದಲ್ಲಿ ಮಾವು-ತೆಂಗಿನಕಾಯಿಯ ಕಲಶದಾಕಾರಗಳಿವೆ. ಹಿಂದೂ ದೇವಾಲಯಗಳ ಹಾಗೆ ನಗಾರಿ ಖಾನೆಯೂ ನಿಜವಾಗಿ ಇದೆ. ಇವೆಲ್ಲವೂ ಮುಸಲ್ಮಾನ ಗೋರಿಯಲ್ಲೆ ಏಕಿರಬೇಕು ಎಂದುಕೊಂಡೆ. ಪಿ. ಎನ್. ಓಕ್ ಹೇಳಿರುವುದು ನಿಜವಿರಬಹುದೇ ಎಂಬ ಯೋಚನೆಯಲ್ಲಿ ತೊಡಗಿದೆ. ಬಸ್ ಹತ್ತಿ, ಮತ್ತೆ ನಮ್ಮ ತಂಗುಸ್ಥಳಕ್ಕೆ ಹಿಂತಿರುಗಿದೆವು. ಊಟ ಮಾಡಿ, ಸಾಮಾನು ತುಂಬಿಸಿಕೊಂಡು, ತಂಪು ಪಾನೀಯ ಕುಡಿದು ಮತ್ತೆ ಹೊರಟೆವು - ಮಥುರಾಗೆ.

ಮಥುರ ಶ್ರೀಕೃಷ್ಣನ ಜನ್ಮಸ್ಥಾನ. ಈ ಪ್ರದೇಶವನ್ನು ಬ್ರಜ್‌ಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ ಕಥೆಗಳು ಹಾಗು ಸ್ಥಳ ಪುರಣಗಳ ಬಗ್ಗೆಯೂ ನಾನೇನೇ ಹೇಳಿದರು ಅದು ಸಂಪೂರ್ಣವಾಗಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಕಥೆ ಮಾತ್ರ ಹೇಳುವೆ. ಬಸ್ಸಿನಿಂದ ಇಳಿದು ಹಳೆಯದಾದ ನೀರಿನ ಕೊಂಡವನ್ನು ಕಂಡೆವು. ಇಲ್ಲಿ ಕೃಷ್ಣ ಸ್ನಾನ ಮಾಡುತ್ತಿದ್ದನಂತೆ. ಮುನ್ನಡೆಯುತ್ತ ಕೃಷ್ಣ ಜನ್ಮಭೂಮಿ ದೇವಾಲಯಕ್ಕೆ ಹೋದೆವು. ಇಲ್ಲಿಯೂ ಸಹ ಮೂಲ ದೇವಾಲಯವಿದ್ದ ಸ್ಥಳದಲ್ಲಿ ಒಂದು ಮಸೀದಿ ಇದೆ. ಇದೇ ಜಾಮಾ ಮಸೀದಿ. ಔರಂಗಜೇಬನು ೧೬೬೧ರಲ್ಲಿ (ತಾರೀಖು ಸ್ವಲ್ಪ ಸಮಸ್ಯೆಯಲ್ಲಿದೆ. ೧೬೬೧ ಅಥವಾ ೧೬೬೯ ಎಂದು ಹೇಳುತ್ತಾರೆ) ಅಲ್ಲಿದ್ದ ಕೃಷ್ಣ ಜನ್ಮಭೂಮಿ ದೇವಾಲಯವನ್ನು ಧ್ವಂಸ ಮಾಡಿಸಿದನಂತೆ. ನಂತರ ಅಲ್ಲಿಯ ರಾಜ್ಯ ಪಾಲಿಸುತ್ತಿದ್ದ ಅಬೆ-ಇ-ನಬೀರ್ ಖಾನ್ ಈಗಿರುವ ಕೆಂಪು ಕಲ್ಲಿನ ಮಸೀದಿ ಕಟ್ಟಿಸಿದನಂತೆ. ಈ ಸ್ಥಳದಲ್ಲಿಯೇ ಕೃಷ್ಣನ ಜನ್ಮವಾಗಿದ್ದು ಎಂದು ಹೇಳಲಾಗುತ್ತದೆ.

ಈಗಿನ ದೇವಾಲಯ (ಬಿರ್ಲಾ ಮಂದಿರ) ಆ ಮಸೀದಿಯ ಹಿಂದೆಯೇ ಇದೆ. ಇಲ್ಲಿಯೂ ಕಟ್ಟುನಿಟ್ಟಾದ ಭದ್ರತಾ ನಿಗ್ರಹ. ಎಲ್ಲೂ ಫೋಟೋ ತೆಗೆಯುವಂತಿಲ್ಲ. ದೇವಾಲಯದೊಳಗೆ ಹೋಗಿ, ದೇವರ ದರ್ಶನ ಮಾಡಿಕೊಂಡು ದೇವರಿಗೆ ಸಿಹಿ ತಿಂಡಿಯ ನೈವೇದ್ಯ ಮಾಡಿಸಿದೆ. ಆಚೆ ಬಂದು ಹತ್ತಿರವೇ ಇರುವ ಶ್ರೀಕೃಷ್ಣ ಹುಟ್ಟಿದ ಕೋಣೆಯೊಳಗೆ ಹೋಗಿ ನಮಿಸಿ ಬಂದೆವು. ಆಚೆ ಬಂದು ಸ್ವಲ್ಪ ಖರೀದಿಗಳನ್ನು ಮಾಡಿ ಮತ್ತೆ ಬಸ್ ಹತ್ತಿ ಹೊರಟೆವು.

ನಮ್ಮ ಮುಂದಿನ ನಿಲುವು ವೃಂದಾವನವಾಗಿತ್ತು - ಶ್ರೀ ಕೃಷ್ಣನು ತನ್ನ ಬಾಲ್ಯದ ದಿನಗಳನ್ನು ಕಳೆದ ಸ್ಥಳ. ವೃಂದಾವನದಲ್ಲಿ ನಾವು ಮೊದಲು ಹೋದದ್ದು ಶ್ರೀ ರಂಗನಾಥನ ದೇವಾಲಯಕ್ಕೆ. ಈ ಗುಡಿಯನ್ನು ೧೮೫೧ರಲ್ಲಿ ಸೇಠ್ ಗೋವಿಂದ್ ದಾಸ್ ಎಂಬಾತ ಕಟ್ಟಿಸಿದ್ದಂತೆ. ಇದರ ವೆಚ್ಚ ಆಗಿನ ಕಾಲದಲ್ಲಿ ಸುಮಾರು ರೂ.೪೦ ಲಕ್ಷವಾಗಿತ್ತಂತೆ. ಮುಖ್ಯದ್ವಾರ ರಜಪೂತ ಶೈಲಿಯಲ್ಲಿದ್ದರೂ, ದೇವಾಲಯವು ದಕ್ಷಿಣ ಭಾರತದ ಶೈಲಿಯಲ್ಲಿದೆ. ಇದು ವೃಂದಾವನದಲ್ಲಿ ಅತ್ಯಂತ ದೊಡ್ಡ ದೇವಾಲಯವಂತೆ. ಇಲ್ಲಿಯ ಪ್ರಮುಖ ದೇವರು ಶ್ರೀರಂಗನಾಥ. ವೆಂಕಟೇಶ್ವರ, ರಾಧಾ-ಕೃಷ್ಣ, ಇತ್ಯಾದಿ ಗುಡಿಗಳೂ ಇಲ್ಲಿವೆ. ದಕ್ಷಿಣ ಭಾರತ ಶೈಲಿಯ ಗೋಪುರವಿದ್ದು, ಇಲ್ಲಿಯ ೫೦ ಅಡಿ ಎತ್ತರದ ಗರುಡಗಂಬ ಗಂಧದ ಮರದ್ದಾಗಿದ್ದು, ೧೨.೫ ಮಣ ಭಾರದ ಚಿನ್ನದ ತಗಡನ್ನು ಹೊದ್ದಿದೆ.

ನಂತರ ಗೋಪಾಲ-ಕೃಷ್ಣ ದೇವಾಲಯಕ್ಕೆ ಹೋದೆವು. ಇದು ರಾಧಾ-ಕೃಷ್ಣರ ದೇವಾಲಯ. ಇಲ್ಲಿ ಎಲ್ಲರೂ ನಮ್ಮ ನಮ್ಮ ಕಾಣಿಕೆಗಳನ್ನು ಹಾಕಿದೆವು. ಅನ್ನದಾನ ಹಾಗು ಗೋದಾನಗಳನ್ನು ಮಾಡಿಸುವ ಅವಕಾಶವೂ ಇದೆ. ಆ ಸಮಯದಲ್ಲಿ ದೇವಾಲಯವನ್ನು ನವೀಕರಿಸುತ್ತಿದ್ದರು. ಈ ದೇವಾಲಯದಲ್ಲಿ ನಮ್ಮ ತಂಡದವರಿಂದ ನಾನು ಬೇರ್ಪಟ್ಟು, ಬಸ್ ಕಡೆ ನಡೆಯತೊಡೆಗಿದೆ. ದಾರಿಯಲ್ಲಿ ಹರಿಯಪ್ಪ ಸಿಕ್ಕರು. ನಾವು ರಾತ್ರಿಯ ವರೆಗು ಅಲ್ಲೇ ತಂಗಿ, ರಾತ್ರಿ ಜೈಪುರ್‌ಗೆ ಪ್ರಯಾಣ ಮಾಡುವ ಕಾರ್ಯಕ್ರಮ ಹೂಡಿರುವುದಾಗಿ ಹೇಳಿದರು. ಹತ್ತಿರದಲ್ಲೇ ಮದನ ಮೋಹನ ದೇವಾಲಯವಿರುವುದನ್ನೂ ಹೇಳಿದರು. ನೋಡೋಣವೆಂದು ನಾನು ಮದನ ಮೋಹನ ದೇವಾಲಯಕ್ಕೆ ಹೋದೆ.

ಮದನ ಮೋಹನ ದೇವಾಲಯವನ್ನು ಮುಲ್ತಾನಿನ (ಮುಲ್ತಾನ್ ಈಗ ಪಾಕಿಸ್ತಾನದಲ್ಲಿದೆ, ಇದರ ಮೂಲ ಹೆಸರು ಮೂಲಸ್ಥಾನ) ಕಪೂರ್ ರಾಮ್ ದಾಸ್ ಎಂಬಾತ ಕ್ರಿ. ಶ. ೧೫೮೦ ಕಟ್ಟಿಸಿದನಂತೆ. ಇಂದು ಇದು ವೃಂದಾವನದ ಅತ್ಯಂತ ಹಳೆಯ ದೇವಾಲಯ. ಚೈತನ್ಯ ಮಹಾಪ್ರಭುವೂ ಇಲ್ಲಿಗೆ ಬಂದಿದ್ದರಂತೆ. ದೇವರ ಮೂಲ ಮೂರ್ತಿಯನ್ನು ಸನಾತನ ಗೋಸ್ವಾಮಿಯು ಒಂದು ಆಲದ ಮರದ ಬುಡದಲ್ಲಿ ಕಂಡರಂತೆ. ಮುಘಲ್ ಅಧಿಪತಿಯಾದ ಔರಂಗಜೇಬನ ಕಾಲದಲ್ಲಿ ಅವನ ಆಕ್ರಮಣಕ್ಕೆ ಹೆದರಿ ಆ ಮೂಲ ಪ್ರತಿಮೆಯನ್ನು ಈಗ ರಾಜಾಸ್ಥಾನದಲ್ಲಿರುವ ಕರೊಲಿಗೆ ಸಾಗಿಸಿದರಂತೆ. ಈ ದೇವಾಲಯದಲ್ಲಿ ಅದರಂತಹ ಇನ್ನೊಂದು ಮೂರ್ತಿ ಇರಿಸಿದರಂತೆ. ಇಂದು ಈ ದೇವಾಲಯದಲ್ಲಿ ಪೂಜಿಸುವುದು ಈ ಪ್ರತಿಮೂರ್ತಿಯನ್ನೇ.

ಮದನ ಮೋಹನ ದೇವಾಲಯ ನೋಡಿ ನಾನು ನಮಗಾಗಿ ಮಾಡಿದ್ದ ಕೋಣೆಗೆ ಹೋದೆ. ಕೋಣೆಯಿರಲಿಲ್ಲ ಅಂದುಕೊಳ್ಳಿ - ಯಾರದ್ದೋ ಮನೆಯ ಅಂಗಳ ಅಡಿಗೆ ಮಾಡಲು ಹಾಗು ಒಂದೆರಡು ಚಾರ್ಪಾಯಿ (ಒಂದು ತರಹ ಹಗ್ಗದ ಮಂಚ) ಕೂರಲು. ಬಾತ್‌ರೂಂ ಅವಕಾಶವಿತ್ತು ಅಷ್ಟೆ. ಸ್ವಲ್ಪ ಹೊತ್ತಿನ ಬಳಿಕ ಬೇಜಾರಾಗಿ ಮತ್ತೆ ಮುಂಬೈನ ದೇಶಪಾಂಡೆಯವರ ಜೊತೆ ಹೊರಹೋದೆ. ಹಾಗೆ ಅಡ್ಡಾಡಿ ದಾರಿಯಲ್ಲಿ ಲಸ್ಸಿ ಕುಡಿದು, ಹಿಂತಿರುಗಿದೆವು. ರಾತ್ರಿಯ ಊಟ (ಪೂರಿ, ಸಾಗು, ಸಾಂಬಾರು, ಇತ್ಯಾದಿ) ಮಾಡಿ ಸುಮಾರು ೯:೩೦ಘಂಟೆಗೆ ಬಸ್ ಹತ್ತಿ ಜೈಪುರ್‌ಗೆ ಹೊರಟೆವು.

ಜೈಪುರ್ ಪ್ರಯಾಣ ಬಹಳ ಕಷ್ಟಕರವಾಗಿತ್ತು. ಬಸ್ ನಿಂತರೆ ಬೆವರಿಳಿಸುವ ಶೆಕೆ. ದಾರಿಯಲ್ಲಿ ಎರಡು ಬಾರಿ ನಿಲ್ಲಬೇಕಾಯಿತು. ಮೊದಲು ರಾಜಸ್ಥಾನ ರಾಜ್ಯದೊಳಗೆ ಹೋಗಲು ಒಂದು ನಿಗ್ರಹ ಸ್ಥಳ (ಚೆಕ್ ಪೋಸ್ಟ್), ಇಲ್ಲಿ ಒಂದು ಹತ್ತು ನಿಮಿಷದ ದಗೆಯ ನಂತರ ಡ್ರೈವರ್ ಫ್ಯಾನ್ ಚಲಿಸಿದ (ಹೌದು ಬಸ್ ಒಳಗೆ ಫ್ಯಾನುಗಳಿದ್ದವು). ಎರಡನೆಯ ಬಾರಿ ಡ್ರೈವರ್ ತನಗೆ ನಿದ್ದೆ ಬಂತೆಂದು ನಿಲ್ಲಿಸಿಬಿಟ್ಟ - ಒಂದು ನಿರ್ಜನ ಡಾಬಾದಲ್ಲಿ. ಈ ಬಾರಿ ನಾನು ಪೆದ್ದನಾಗಲಿಲ್ಲ. ಕೆಳಗಿಳಿದು ಅಲ್ಲೆ ಇದ್ದ ಒಂದು ಚಾರ್ಪಾಯಿಯ ಮೇಲೆ ಮಲಗಿದೆ. ಎರಡು ಘಂಟೆಗಳ ನಂತರ ಮತ್ತೆ ಎದ್ದು ಹೊರಟೆವು. ಬಸ್ ಒಳಗೇ ಕುಳಿತಿದ್ದ ಆ ಪಾಪದ ಪ್ರಾಣಿಗಳ ಕಥೆ ಏನಾಗಿತ್ತೋ! ಅಂತು ಬೆಳಗಾಗುವಷ್ಟರಲ್ಲಿ ಜೈಪುರ್ ಸೇರಿದ್ದೆವು. ತಂಗು ಸ್ಥಳ ಅತ್ಯಂತ ಗಲೀಜಿನ ಜಾಗವಾಗಿತ್ತು. ಆದರೆ ರಾತ್ರಿ ಇಳಿಯುವುದಿರಲಿಲ್ಲವಾದ ಕಾರಣ ಹೆಚ್ಚು ಪೇಚಾಡುವಷ್ಟಿರಲಿಲ್ಲ.


ಭಾಗ ೧೫: ಜೈಪುರ್, ದೆಹಲಿ, ಮರಳಿ ಬೆಂಗಳೂರು.

೧೭ ಮೇ ೧೯೯೮

ಬಾತ್‌ರೂಂ ಅಂದು ಸ್ವಲ್ಪ ತೊಂದರೆಯೇ ಆಯಿತು. ಆದರೂ ಹೇಗೋ ಅಂತು ಮುಗಿಸಿಕೊಂಡು ಬಂದೆ. ಆಲ್ಲೇ ಮುಂದಿದ್ದ ಒಂದು ಕಲೆ-ಕೈಗಾರಿಕೆ (ಆರ್ಟ್ಸ್ ಹ್ಯಾಂಡಿಕ್ರಾಫ್ಟ್ಸ್) ಅಂಗಡಿಗೆ ನುಗ್ಗಿ ಸ್ವಲ್ಪ ಸಮೀಕ್ಷೆ ಮಾಡಿದೆ. ಹಾಗೆಯೇ ಬೆಳಗಿನ ತಿಂಡಿ ಹಾರಿಸಿ ಅಲ್ಲೇ ಸ್ವಲ್ಪ ಚಹ ಕುಡಿದೆ. ಬಳಿಕ ಬಸ್ ಹತ್ತಿ ಮತ್ತೆ ಹೊರಟೆವು - ಜೈಪುರ್ ಊರು ನೋಡಲು.

ನಮ್ಮ ಮೊದಲ ನಿಲುವು ಮತ್ತೆ ಬಿರ್ಲಾ ಮಂದಿರವಾಗಿತ್ತು. ಇದೊಂದು ಹಳೆಯ ದೇವಾಲಯ, ಬಿರ್ಲಾ ಟ್ರಸ್ಟ್ ಇದನ್ನು ನವೀಕರಿಸಿದೆಯಂತೆ. ಆದರೆ ಈ ದೇವಾಲಯ ಮುಚ್ಚಿದ್ದ ಕಾರಣ ದೇವರ ದರ್ಶನವಾಗಲಿಲ್ಲ. ಇದಾದ ನಂತರ ಅಮೆರ್ (ಅಂಬರ್) ಕೋಟೆಗೆ ಹೋದೆವು. ಈ ಕೋಟೆಯೊಳಗೆ ನಾಲ್ಕಾರು ಸುಂದರ ಅರಮನೆಗಳು, ಹಾಗು ಕನ್ನಡಿ ಕೋಣೆಗಳಿವೆ (ಮಿರರ್ ಪ್ಯಾಲೆಸ್). ಈ ಕನ್ನಡಿ ಕೋಣೆಯನ್ನು ಹಗಲು ಬೆಳಕಲ್ಲೂ ಕತ್ತಲೆ ಮಾಡಬಹುದು. ಕೋಣೆಯ ಛಾವಣಿಯ ಮೇಲೆ ಸಾವಿರಾರು ಸಣ್ಣ ಸಣ್ಣ ಕನ್ನಡಿಗಳನ್ನು ಬೇರೆ ಬೇರೆ ಕೋನಗಳಲ್ಲಿ ಅಂಟಿಸಲಾಗಿದೆ. ಈ ಕತ್ತಲು ಕನ್ನಡಿ ಕೋಣೆಯಲ್ಲಿ ಒಂದು ಸಣ್ಣ ದೀಪ ಹಚ್ಚಿದರೆ ಕನ್ನಡಿಯೊಳಗಿನ ಬಿಂಬಗಳು ಆಕಾಶದ ಸಾವಿರಾರು ತಾರೆಗಳಂತೆ ಕಾಣಿಸುತ್ತವೆ. ಅಲ್ಲಿಯ ರಾಜನು ಆ ತಾರೆಗಳೊಡನೆ ಚಂದ್ರನನ್ನು ನೋಡುತ್ತಿದ್ದನಂತೆ. ಒಹೋ! ಚಂದ್ರ ಎಲ್ಲಿಂದ ಬಂದ ಅಂತ ಕೇಳಿದಿರಾ? ರಾಜನ ಸುಂದರ ರಾಣಿಯಾದ ಚಂದ್ರಾವತಿಯ ಮುಖವೇ ಚಂದ್ರನಂತೆ! ರಾಜನು 'ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್' ಎಂದು ಹಾಡುತ್ತಿದ್ದ ಎಂದು ಹೇಳಿ ನಮ್ಮ ಮಾರ್ಗದರ್ಶಿ ತಮಾಷೆ ಮಾಡಿದ. ಈ ಕೋಟೆಯ ಇನ್ನೊಂದು ವಿಶಿಷ್ಟತೆ ಇಲ್ಲಿಯ ಒಂದು ಕೆತ್ತನೆ. ನೋಡಲು ಹೂವಿನ ಹಾಗಿದೆ. ಆದರೆ ಒಂದು ಭಾಗ ಮುಚ್ಚಿದರೆ ಛೇಳು! ಮತ್ತೊಂದು ಭಾಗ ಮುಚ್ಚಿದರೆ ನಾಗರ ಹಾವು! ಇನ್ನೊಂದು ರೀತಿ ನೋಡಿದರೆ ಹೂದಾನಿ!

ಅಲ್ಲಿಂದ ಹಿಂತಿರುಗುತ್ತ ಬೆಟ್ಟ ಗುಡ್ಡಗಳ ಮೇಲೆ ನಾಲ್ಕಾರು ಕೋಟೆಗಳನ್ನು ನೋಡಿದೆವು. ಆ ಕೋಟೆಗಳಲ್ಲೊಂದರಲ್ಲಿ ಪ್ರಪಂಚದ ಅತ್ಯಂತ ದೊಡ್ಡ ತೋಪು ಇದೆ ಎಂದು ಕೇಳಿದೆವು. ಇದು ಹಲವಾರು ಟನ್ ಭಾರವಿದ್ದು ಇದು ೨೨ ಮೈಲಿಯವರೆಗೆ ಗುಂಡನ್ನೆಸೆಯ ಬಲ್ಲದಂತೆ! ಬಳಿಕ ಜಲ್‌ಮಹಲ್ ಅರಮನೆಯನ್ನು ಕಂಡೆವು. ಈ ಅರಮನೆ ಒಂದು ಸರೋವರದ ಮಧ್ಯದಲ್ಲಿದೆ. ಇದು ೪ ಅಂತಸ್ತಿನ ಅರಮನೆಯಂತೆ - ಎರಡು ಅಂತಸ್ತು ನೀರಿನ ಮೇಲೆ, ಎರಡು ಕೆಳಗೆ! ಇದನ್ನು ದೂರದಿಂದಲೇ ನೋಡಿದ್ದು, ಹತ್ತಿರ ಕರೆದೊಯ್ಯಲಿಲ್ಲ. ಹೀಗೆ ಮತ್ತೊಂದು ಅರಮನೆ ಸಂಗೀತ ಮಹಲ್ ಅಂತೆ. ಆದರೆ ಆ ಸಮಯದಲ್ಲಿ ಇದನ್ನು ರಿಪೇರಿ ಮಾಡುತ್ತಿದ್ದ ಕಾರಣ ಪ್ರೇಕ್ಷಕರನ್ನು ಒಳಗೆ ಬಿಡುತ್ತಿರಲಿಲ್ಲ.

ಊರಿಗೆ ಹಿಂತಿರುಗಿ ನಾವು "ಪಿಂಕ್ ಸಿಟಿ" ಒಳಗೆ ಹೋದೆವು. ಜೈಪುರ್‌ಗೆ "ಪಿಂಕ್ ಸಿಟಿ" ಎಂಬ ಹೆಸರು ತಿಳಿದಿದ್ದರೂ ಇದೇಕೆ ಇಂತಹ ಹೆಸರೆಂದು ಯೋಚಿಸುತ್ತಿದ್ದೆ. ಈಗ ಅರ್ಥವಾಯಿತು! ಇಂಗ್ಲೆಂಡ್‌ನಲ್ಲಿರುವ ವೇಲ್ಸ್‌ನ ರಾಜಕುಮಾರ (ಪ್ರಿನ್ಸ್ ಆಫ್ ವೇಲ್ಸ್) ಜೈಪುರ್‌ಗೆ ಬಂದಿದ್ದಾಗ ಆತನ ಸನ್ಮಾನಕ್ಕಾಗಿ ಜೈಪುರ್‌ನ ಮಹಾರಾಜ ಊರಿನ ಎಲ್ಲ ಕಟ್ಟಡಗಳಿಗೂ "ಪಿಂಕ್" ಬಣ್ಣ (ವಾಸ್ತವವಾಗಿ ಇದು ಇಟ್ಟಿಗೆ ಬಣ್ಣ) ಹೊಡೆಸಿದನಂತೆ. ಹಾಗಾಗಿ ಊರಿಗೆ ಪಿಂಕ್ ಸಿಟಿ ಎಂದು ಹೆಸರು. ಊರಿನ ಈ ಭಾಗದಲ್ಲಿ ಎಲ್ಲಾ ಕಟ್ಟಡಗಳೂ ಇಟ್ಟಿಗೆಯ ಬಣ್ಣ.

ಮುನ್ನಡೆಯುತ್ತ 'ಜಂತರ್ ಮಂತರ್'ಗೆ ಹೋದೆವು. ಜಂತರ್ ಮಂತರ್ ಎಂದರೆ ಯಂತ್ರ-ಮಂತ್ರ. ಭಾರತದಲ್ಲಿ ಈ ರೀತಿಯವು ಎರಡಿವೆಯಂತೆ - ಒಂದು ಇಲ್ಲಿ ಮತ್ತೊಂದು ದೆಹಲಿಯಲ್ಲಿ (ಏಶಿಯಾಡ್ ೧೯೮೨ ಚಿನ್ಹೆ ಇದೇ ಆಗಿತ್ತು) ಇಲ್ಲಿ ಮಂತ್ರವೆಂದರೆ ವೇದ-ಮಂತ್ರವಲ್ಲ - ಗಣಿತದ ಮಂತ್ರಗಳು. ಈ ಸ್ಥಳವು ರೋಮಾಂಚಕವಾಗಿತ್ತು! ಭಾರತೀಯ ಹಾಗು ಪಾಶ್ಚಿಮಾತ್ಯ ಸಮಯ, ರಾಶಿ, ನಕ್ಷತ್ರ ಇತ್ಯಾದಿಗಳನ್ನು ಹೇಳುವ ಸಾಧನಗಳಿವೆ - ಬರಿ ಸೂರ್ಯನ ಬೆಳಕಿನಿಂದ. ಅಲ್ಲಿರುವ ರಾಶಿ ಯಂತ್ರ, ಉತ್ತರಾಯಣ-ದಕ್ಷಿಣಾಯಣ ಹೇಳುವ ಯಂತ್ರ, ಇತ್ಯಾದಿಗಳನ್ನು ವರ್ಣಿಸಲು ಬಹಳ ಜಾಗ ಬೇಕಾಗುವುದರಿಂದ ಅವನ್ನೆಲ್ಲಾ ಇಲ್ಲಿ ಹೇಳಲಾರೆ.

ನಮ್ಮ ಮುಂದಿನ ಪ್ರೇಕ್ಷಣೆ 'ಸಿಟಿ ಪ್ಯಾಲೆಸ್' ಆಗಿತ್ತು. ಇದೊಂದು ಸುಂದರ ಅರಮನೆ - ನಮ್ಮ ಮೈಸೂರು ಅರಮನೆ ನೆನಪಿಗೆ ಬಂದರೂ ಇದು ಅಷ್ಟು ಚಂದವಲ್ಲ ಎನಿಸಿತು. ಅರಮನೆಯಲ್ಲಿ, ರತ್ನ-ವೈಢೂರ್ಯಗಳನ್ನು ಪುಡಿ ಮಾಡಿ ಅದರಿಂದ ಮಾಡಿದ ಬಣ್ಣ ಹಚ್ಚಿರುವರೆಂದು ಕೇಳಿದೆವು. ಅರಮನೆಯನ್ನು ಮೂರು ಭಾಗಗಳಾಗಿ ವಿಭಜಿಸಲಾಗಿದೆ - ವೇಷ-ಪೋಷಾಕು, ಶಸ್ತ್ರಾಸ್ತ್ರಗಾರ, ಹಾಗು ಚಿತ್ರಕಲೆ ಪ್ರದರ್ಶನ ಮಂದಿರ. ಮೊದಲಿಗೆ ಹಲವಾರು ಒಡವೆ-ವಸ್ತ್ರಗಳನ್ನು ನೋಡಿದೆವು - ಯಾರೋ ಮಹಾರಾಣಿಯ ೯ ಕೆ.ಜಿ ಸೀರೆಯಂತೆ, ೭ ಅಡಿ ಎತ್ತರ, ೪ ಅಡಿ ಅಗಲವಿದ್ದ (!) ರಾಜನೊಬ್ಬನ ಪೋಷಾಕು, ಇತ್ಯಾದಿ. ನಂತರ ಶಸ್ತ್ರಗಾರ - ಹತ್ತಾರು ಚಿತ್ರ-ವಿಚಿತ್ರ ಚಾಕು-ಬಾಕುಗಳು, ಒಂದೇ ಒರೆಯಲ್ಲಿ ಎರಡು ಕತ್ತಿಗಳು, ದೊಡ್ಡ ಬಂದೂಕುಗಳು, ಇತ್ಯಾದಿಗಳನ್ನು ಕಂಡೆವು. ಕೊನೆಯದಾಗಿ ಚಿತ್ರಕಲೆ ಪ್ರದರ್ಶನ - ಹಲವಾರು ಮೂರು ಆಯಾಮದ ಚಿತ್ರಗಳು (ನಾವು ಯಾವ ಮೂಲೆಯಿಂದ ನೋಡಿದರೂ ನಮ್ಮನ್ನೇ ನೋಡುವಂತಹ ಕಣ್ಣುಗಳುಳ್ಳ ಮನುಷ್ಯರ ಚಿತ್ರಗಳು), ರತ್ನಗಂಬಳಿಗಳು, ರಾಜರ ಹಾಗು ರಾಜರು ರಚಿಸಿದ ಹಲವಾರು ಚಿತ್ರಗಳು ಇತ್ಯಾದಿ ನೋಡಿ ಸಿಟಿ ಪ್ಯಾಲೆಸ್ ಮುಗಿಸಿದೆವು.

ಕೊನೆಗೆ ಗಾಳಿ ಅರಮನೆಯಾದ 'ಹವಾ ಮಹಲ್' ನೋಡಿ ಕೋಣೆಗೆ ಹಿಂತಿರುಗಿದೆವು. ಬೆಳಗ್ಗೆ ತಿಂಡಿ ಹಾರಿಸಿದ್ದರಿಂದ ಹೆಚ್ಚು ಹೊಟ್ಟೆ ಹಸಿವಾಗಿ ಸರಿಯಾಗಿ ಊಟ ಬಾರಿಸಿದೆ. ಮೊದಲೆ ಹೇಳಿದ, ಪಕ್ಕದಲ್ಲಿದ್ದ ಕಲೆ-ಕೈಗಾರಿಕೆ ಅಂಗಡಿಗೆ ಮತ್ತೆ ನುಗ್ಗಿ ನೋಡುತ್ತಿದ್ದಂತೆ ನಮ್ಮ ಮಾಧವೇಶ್ವರ ಯಾವುದೋ ಕಾರು ಗೊತ್ತು ಮಾಡಿ ಎಲ್ಲೊ ಹೊರಟಿದ್ದರು. ನನ್ನನ್ನೂ ಕೂಗಿದಾಗ ಅವರೊಂದಿಗೆ ಹೊರಟೆ. ಇದು ಕೇವಲ 'ಶಾಪಿಂಗ್ ಟ್ರಿಪ್' ಆಗಿತ್ತು. ಸ್ವಲ್ಪ ಮೀನ ಮೇಷ ಎಣಿಸಿ ಅವರು ಬಾಂಧಿನೆ ಸೀರೆ ಇತ್ಯಾದಿಗಳನ್ನು ಕೊಂಡರು. ಅಂತೆಯೇ ನಾನೂ ಏನೇನೊ ಒಂದಿಷ್ಟು ಕೊಂಡೆ. ಊರೊಳಗೆ ಲಸ್ಸಿ ಕುಡಿದು ಕೋಣೆಗೆ ಹಿಂತಿರುಗಿದೆವು. ಪುನಃ ಪಕ್ಕದ ಕಲೆ-ಕೈಗಾರಿಕೆ ಅಂಗಡಿಗೆ ಕರೆದೊಯ್ದರು - ನಾನು ಅವರಿಗೆ ಅಂಗಡಿಯವನ ಜೊತೆ ಭಾಷಾಂತರ ಮಾಡುತ್ತಿದ್ದೆ. ಜೈಪುರ್‌ನ ಹಾಸಿಗೆ ಹಾಸು, ಕೊಳ್ಳೋಣವೆಂದರೆ ಅಂಗಡಿಯಾತನ ಮೈತ್ರಿಯಿಲ್ಲದ ಮಾತುಗಳನ್ನು ಕೇಳಿ ಹೊರಬಿದ್ದೆವು. ಪಕ್ಕದಲ್ಲಿದ್ದ ಮತ್ತೊಂದು ಅಂಗಡಿ ಹೊಕ್ಕೆವು. ಅಲ್ಲಿ ಹಾಸುಗಳೂ ಚೆನ್ನಾಗಿದ್ದು, ಒಂದೆರಡು ಖರೀದಿಸಿದೆ. ಹಿಂತಿರುಗಿ ಸಾಮಾನುಗಳನ್ನು ಬಸ್‌ಗೆ ತುಂಬಿಸಿ, ಊಟ ಮಾಡಿ ರಾತ್ರಿ ಸುಮಾರು ೮:೩೦ ಘಂಟೆಗೆ ದೆಹಲಿಗೆ ರವಾನೆಯಾದೆವು.

೧೮ ಮೇ ೧೯೯೮

ಪ್ರಸಂಗರಹಿತ ಪ್ರಯಾಣದ ನಂತರ ದೆಹಲಿ ಸೇರಿ, ಬೆಳಗಿನ ಜಾವ ೨:೪೫ಘಂಟೆಗೆ ಮೊದಲ ದಿನ ತಂಗಿದ ತಾಣಕ್ಕೇ ಮತ್ತೆ ಹೋದೆವು. ಅಲ್ಲಿ ನೋಡಿದರೆ ನೂಕು ನುಗ್ಗುಲು. ನಮಗೆ ಸಿಗಬೇಕಿದ್ದ ಕೋಣೆಯಲ್ಲಿ ಯಾರೋ ಇದ್ದು, ಅವರು ಬೆಳಗ್ಗೆ ೮:೩೦ ೯:೦೦ ಘಂಟೆಗೆ ಬಿಟ್ಟುಹೋಗುವರಿದ್ದರು. ನಾನು ಆ ದಗೆಯಲ್ಲಿ ಕೂತು ನಿದ್ದೆ ಮಾಡಲಾರದೆ, ಕೆಳಗಿಳಿದು ಬಸ್ ಛಾವಣಿಯ ಮೇಲೆ ಹತ್ತಿ ೨-೩ ಘಂಟೆ ನಿದ್ದೆ ತೆಗೆದೆ. ಬೆಳಿಗ್ಗೆ ಸುಮಾರು ೮:೦೦ ಘಂಟೆಗೆ ನಮ್ಮ ಕೋಣೆ ಸಿಕ್ಕಿತು. ಸ್ನಾನ ಇತ್ಯಾದಿಗಳನ್ನು ಮಾಡಿಕೊಂಡು ದೆಹಲಿ ನೋಡಲು ಹೊರಟೆವು - ಇನ್ನೂ ಅದೇ ಬಸ್ಸಿನೊಳಗೆ. ಮಹಾತ್ಮ ಗಾಂಧಿ ಸಮಾಧಿ, ಇಂದಿರಾ, ರಾಜೀವ ಗಾಂಧಿಯರ ಸಮಾಧಿ, ಖುತುಬ್ ಮಿನಾರ್ ಇತ್ಯಾದಿಗಳನ್ನು ಬೇಯುವ ಶೆಕೆಯಲ್ಲಿ ನೋಡಿದೆವು. ನಂತರ ತಾವರೆ ಮಂದಿರಕ್ಕೆ (ಲೋಟಸ್ ಟೆಂಪಲ್) ಹೋದೆವು. ಇದೊಂದು ಸುಂದರ ಕಟ್ಟಡ. ಇದು ಸರ್ವ ಧರ್ಮ ಮಂದಿರವಂತೆ. ಏನೇನೊ ತೊಂದರೆಗಳ ಕಾರಣ ನಮ್ಮನ್ನು ಒಳಗೆ ಬಿಡಲಿಲ್ಲ. ಆಚೆಯಿಂದಲೇ ನೋಡಿ ಫೋಟೋ ತೆಗೆದುಕೊಂಡು ಬಂದೆವು. ನಂತರ ಇಂಡಿಯಾ ಗೇಟ್‌ಗೆ ಹೋಗಿ ಅದನ್ನು ನೋಡಿ, ಸುಮಾರು ೨:೦೦ ಘಂಟೆಗೆ ಕೋಣೆಗೆ ಹಿಂತಿರುಗಿದೆವು. ನಾನು ಮತ್ತೊಮ್ಮೆ ಸ್ನಾನ ಮಾಡಿ, ಸ್ವಲ್ಪ ಮೊಸರನ್ನ ಊಟ ಮಾಡಿ ಎರಡು ದಿನಗಳಿಂದ ಬಿಟ್ಟು ಹೋದ ದಿನಚರಿ ಪೂರ್ಣಗೊಳಿಸಿದೆ.

ಸಂಜೆ ಮತ್ತೆ ನಾವಾಗಿ ಆಚೆ ಹೋಗಿ ಹಿಂತಿರುಗಿದೆವು. ಅಂದು ನನ್ನ ಕನ್ನಡಕ ಮುರಿದುಹೋಯಿತು. ಅದೃಷ್ಟವಶಾತ್ ನಾನು ನನ್ನ ಕಾಂಟ್ಯಾಕ್ಟ್ ಲೆನ್ಸ್ ಒಯ್ದಿದ್ದೆ. ಉಳಿದೆರಡು ದಿನಗಳನ್ನು ಅವುಗಳನ್ನು ಹಾಕಿಕೊಂಡೇ ಕಳೆದೆ.



೧೯ ಮೇ ೧೯೯೮

ಮಾರನೆಯ ದಿನ ಬೇಗನೆ ಎದ್ದು ಕೆಲಸಗಳನ್ನು ಮುಗಿಸಿಕೊಂಡು ಉಳಿದವರು ತಯಾರಾಗುವವರೆಗು ಮತ್ತೆ ಮಲಗಿದ್ದೆ. ತಿಂಡಿ ತಿಂದು ಹೊರಟೆವು. ಇಂದು ಎನೂ ಕಾರ್ಯಕ್ರಮವಿರಲಿಲ್ಲ. ನಮಗೆ ಬೇಕಾದ ಹಾಗೆ ಮಾಡಿಕೊಳ್ಳುವುದಾಗಿತ್ತು. ಮಾಧವೇಶ್ವರರಿಗೆ ಇಲ್ಲೂ ಒಂದು ಕಾರ್ ಬಂದಿತ್ತು. ನನ್ನನ್ನು ಕರೆದರೂ ನಾನು ಹೋಗಲಿಲ್ಲ. ಅಲ್ಲಿಯ ಸಿಟಿ ಬಸ್ ಏರಿ ಮೊದಲು ಕನಾಟ್ ಪ್ಲೇಸ್‌ಗೆ ಹೋಗಿ ನೆಲಮಾಳಿಗೆಯಲ್ಲಿರುವ ಪಾಲಿಕಾ ಬಜಾರ್‌ಗೆ ಭೇಟಿ ಕೊಟ್ಟು ಬಂದೆ. ಮತ್ತೆ ಬಸ್ ಏರಿ ಕರೋಲ್ ಬಾಗ್‌ಗೆ ಹೋಗಿ ಬಂದೆ. ಕೊನೆಗೆ ಹತ್ತಿರವೇ ಇದ್ದ ಗೋಲ್ ಮಾರ್ಕೆಟ್‌ಗೆ ಹೋಗಿ ಎರಡು ಮಾವಿನ ಹಣ್ಣು ಕೊಂಡೆ - ಪ್ರಯಾಣಕ್ಕಾಗಿ. ಕೋಣೆಗೆ ಹಿಂತಿರುಗಿದರೆ ಯಾರೂ ಇರಲಿಲ್ಲ. ಇಷ್ಟು ಹೊತ್ತಿಗೆ ಸುಸ್ತು, ಬೇಸರ ಹಾಗು ಶೆಕೆ ನನ್ನ ಉತ್ಸಾಹ ಭಂಗ ಮಾಡಿದ್ದವು. ಮಧ್ಯಾಹ್ನ ಕೋಣೆಯಲ್ಲೇ ವಿಶ್ರಮಿಸಿಕೊಂಡೆ. ಸಂಜೆ ದೇಶಪಾಂಡೆಯವರ ಜೊತೆ ಹತ್ತಿರವಿದ್ದ ಬಿರ್ಲಾ ಮಂದಿರಕ್ಕೆ ಹೋಗಿ ದಾರಿಯಲ್ಲಿ ಒಂದು ಪೌಂಡ್ ಬ್ರೆಡ್ ಹಾಗು ಒಂದು ಪೊಟ್ಟಣ ಚಿಪ್ಸ್ ಖರೀದಿಸಿದೆ - ಪ್ರಯಾಣಕ್ಕಾಗಿ.

ಎಲ್ಲರೂ ಹಿಂತಿರುಗಿದ ಮೇಲೆ ಎಲ್ಲರ ಜೊತೆಗೆ ಫೋಟೋಗಳನ್ನು ತೆಗೆದುಕೊಂಡು, ಬಳಿಕ ರೈಲು ನಿಲ್ದಾಣಕ್ಕೆ ಹೊರಟೆವು. ನನ್ನ ಒಂದು ದೊಡ್ಡ ಸೂಟ್‌ಕೇಸ್ ಈಗ ಎರಡಾಗಿತ್ತು - ಆ ಸೂಟ್‌ಕೇಸ್ ಜೊತೆಗೆ ಒಂದು ದೊಡ್ಡ ಚೀಲ. ಎರಡೂ ಎತ್ತಿಕೊಂಡು ರೈಲು ಹತ್ತುವಷ್ಟೋ ಹೊತ್ತಿಗೆ ಪೂರ್ಣ ಸುಸ್ತಾಗಿದ್ದೆ. ಮುಂದೆ ಬಂದ ರೈಲು ಪ್ರಯಾಣದ ಎರಡು ದಿನಗಳು ನನ್ನ ಪಾಲಿಗೆ ನರಕವಾಗಿತ್ತು . ಈ ಪ್ರಯಾಣದ ವಿವರಣೆ ಕೊಟ್ಟು ಎಲ್ಲರಿಗೂ ಬೋರ್ ಹೊಡೆಸುವುದಿಲ್ಲ. ನಾನು ಮೇಲಿನ ಬರ್ತ್ ಮೇಲೆ ಎರಡೂ ದಿನಗಳನ್ನು ಕಳೆದೆ - ಬರೆ ಬ್ರೆಡ್, ಚಿಪ್ಸ್ ಹಾಗು ಒಂದು ಮಾವಿನಹಣ್ಣು ತಿಂದುಕೊಂಡು. ಒಮ್ಮೆ ದೇಶಪಾಂಡೆಯವರನ್ನು ಬೀಳ್ಕೊಡಲು ಅವರ ಬೋಗಿಗೆ ಹೋಗಿದ್ದಷ್ಟೆ.

ಎರಡನೆ ದಿನ ರೈಲು ಸುಮಾರು ಒಂದೂವರೆ ಘಂಟೆ ತಡವಾಗಿ ಬೆಂಗಳೂರು ತಲುಪುವಂತಾಗಿ, ನನ್ನ ತೊಳಲಾಟ ಇನ್ನೂ ಹೆಚ್ಚು ಮಾಡಿಸಿತು. ನನ್ನ ಭಾರಿ ಸಾಮಾನುಗಳನ್ನು ಎತ್ತಿಕೊಂಡು ಆಚೆ ಬಂದು ಇನ್ನೇನು ಆಟೋ ಹತ್ತುವುದರಲ್ಲಿದ್ದೆ. ಅಷ್ಟು ಹೊತ್ತಿಗೆ ಆಣ್ಣ ಸಿಕ್ಕರು. ಅಂತು ಹೇಗೋ ಸಾಮಾನುಗಳನ್ನು ಹಿಡಿದು, ಸ್ಕೂಟರ್ ಮೇಲೆ ಕೂತು ಮನೆ ತಲುಪಿದೆವು. ಸ್ನಾನ ಮಾಡಿ ಅಮ್ಮ ಮಾಡಿಟ್ಟ ಅಡಿಗೆ ಊಟ ಮಾಡಿದ ಮೇಲೆ ನಾನೂ ಮನುಷ್ಯವೆಂದೆನಿಸಿತು. ಉಳಿದಿದ್ದು ಸಾಮಾನು ಬಿಚ್ಚುವುದು, ಫೋಟೋ ಪ್ರಿಂಟ್ ಹಾಕಿಸುವುದು, ಇತ್ಯಾದಿ. ಸುಮಾರು ೮೫೦೦-೯೦೦೦ ಕಿಲೋಮೀಟರ್‌ಗಳ ಪ್ರವಾಸ ಮಾಡಿ ಬಂದಿದ್ದೆ! ಭಾರತದೇಶದ ಹಲವಾರು ತೀರ್ಥಗಳನ್ನು ನೋಡಿದ ಆನಂದ ಹಾಗು ತೃಪ್ತಿ ದೊರಕಿತ್ತು!

ಈಗ ಏಳು ವರ್ಷಗಳು ಕಳೆದ ಮೇಲೆ ಇದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವುದರಲ್ಲಿ ಇನ್ನೂ ಹೆಚ್ಚು ಸಂತೋಷವಾಗಿದೆ, ನಾನೇ ಮತ್ತೊಮ್ಮೆ ಹೋಗಿಬಂದಂತಾಗಿದೆ.

1 comment:

ಲಕ್ಷ್ಮಿಎಸ್ ಎಸ್ said...

Very nice experience. Its tempting me to go to all those places by reading your experience. Anyway you are very lucky. Thanks for writing such a wonderful experience