2007 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.
Language: Kannada
Category: Thriller, Fantasy
Abstract: This is the story of a legendary treasure, weird clues for finding it, and finally the surprising location it exists in. It has historical, fantasy and comtemporary elements.
Keywords: hampi, history, thriller, stone chariot, treasure, vijayanagar, kannada, treasure-hunt, kallina ratha, mysore palace, varaha emblem
Disclaimer: Although this piece alludes to many historical facts, most of them true, not all are. No claims are made for historical accuracy.
"ಸುಮಾರು ಮೂರು ಸಾವಿರ ವರ್ಷಗಳಿಂದ ಕ್ರಿಸ್ತ ಪೂರ್ವ ಹದಿನಾರನೇ ಶತಮಾನದವರೆಗೂ ಭಾರತವೇ ವಿಶ್ವದ ಅತ್ಯಂತ ಸಿರಿವಂತ ದೇಶವಾಗಿತ್ತು. ಒಂಬತ್ತನೇ ಶತಮಾನದಿಂದ ಮಧ್ಯ-ಏಶಿಯಾದ ಮುಸಲ್ಮಾನ ಆಕ್ರಮಣಕಾರರು, ಬಿಡದೆ ಒಂದೇಸಮನೆ ನಮ್ಮ ದೇಶವನ್ನು ಕೊಳ್ಳೆಹೊಡೆದು ಸಂಪತ್ತನ್ನು ಹೊರದೇಶಗಳಿಗೆ ಸಾಗಿಸಿದ್ದರೂ, ಅವರು ಈ ದೇಶದಲ್ಲಿದ್ದ ಸಂಪತ್ತಿನ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ಹೊರತೆಗೆದುಕೊಂಡು ಹೋಗಿದ್ದರು. ಹದಿನಾರನೇ ಶತಮಾನದಲ್ಲೂ ಈ ಅಪಾರ ಸಂಪತ್ತಿನ ಪ್ರದರ್ಶನವನ್ನು ಕಾಣಬಹುದು" ಭಾಸ್ಕರ ಹೇಳುತ್ತಿದ್ದ.
ಭಾಸ್ಕರ ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಪ್ರೊಫೆಸರ್. ಅವನ ಸ್ಪೆಶಲೈಸೇಶನ್ ದಕ್ಷಿಣ-ಭಾರತದ ಸಾಮ್ರಾಜ್ಯಗಳು. 'ಹಂಪೆ ಉತ್ಸವ'ದ ಅಂಗವಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಭಾರತೀಯ ವಿಶ್ವ ಸಂಸ್ಕೃತಿ ಸಂಸ್ಥೆಯಲ್ಲಿ ಭಾರತದ ಐತಿಹಾಸಿಕ ಸಂಪತ್ತಿನ ಬಗ್ಗೆ ಉಪನ್ಯಾಸ ಮಾಡುತ್ತಿದ್ದ.
"ಈ ಸಂಪತ್ತು ರಾತ್ರೋ-ರಾತ್ರಿ ಹುಟ್ಟಿಕೊಂಡದ್ದಲ್ಲ. ಇದು ಸಾವಿರಾರು ವರ್ಷಗಳಿಂದ ಶೇಖರಿಸಿಕೊಂಡು ಬಂದಂತಹ ಐಶ್ವರ್ಯ. ಇದರ ಬೀಜ ಮೌರ್ಯವಂಶದ ಸಾಮ್ರಾಟ್ ಅಶೋಕನ ಕಾಲದಲ್ಲಿ ಬಿತ್ತಿದ್ದಿರಬಹುದು. ನಂತರ ಶತವಾಹನರ ಕಾಲದಲ್ಲಿ-ಅಂದರೆ ಸುಮಾರು ಕ್ರಿ.ಪೂ.ನಾಲ್ಕನೆಯ ಶತಮಾನದವರೆಗು ಶತವಾಹನರು ಇದನ್ನು ನಿಭಾಯಿಸಿಕೊಂಡು ಬಂದರು. ಶತವಾಹನರ ನಂತರ ಈ ನಿಧಿಯು ಮಯೂರಶರ್ಮನೆಂಬ ಬ್ರಾಹ್ಮಣನ ಕೈಹತ್ತಿದಾಗ ಅವನು ಪಲ್ಲವರ ವಿರುದ್ಧ ದಂಗೆಯೆದ್ದು ವೈಜಯಂತೀನಗರಿ-ಇಂದಿನ ಬನವಾಸಿಯಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಅದೇ ಸಮಯದಲ್ಲಿ ಈ ನಿಧಿಯು ದ್ವಿಗುಣವಾಯಿತೆಂದು ತೋರುತ್ತದೆ. ಸುಮಾರು ಇನ್ನೂರು ವರ್ಷಗಳ ಕಾಲ ಕದಂಬರು ಇದನ್ನು ಉಣಿಸುತ್ತ ಕಾಪಾಡಿದರು. ಮುಂದೆ ಐದನೇ ಶತಮಾನದ ಮಧ್ಯಭಾಗದಲ್ಲಿ ಕದಂಬರ ಸಾಮಂತನಾಗಿದ್ದ ಪುಲಿಕೇಶಿ ಇದನ್ನು ಅಪಹರಿಸಿ ವಾತಾಪಿ-ಇಂದಿನ ಬಾದಾಮಿಯಲ್ಲಿ ಚಾಳುಕ್ಯವಂಶವನ್ನು ಸ್ಥಾಪಿಸಿದ. ಅನೇಕ ಯುದ್ಧಗಳಿಂದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಈ ಬೊಕ್ಕಸಕ್ಕೆ ಮಧ್ಯಭಾರತದ ಸಂಪತ್ತು ಸೇರಿಕೊಂಡು ಇದು ನೂರುಪಟ್ಟು ಹೆಚ್ಚಿತು. ಚಾಳುಕ್ಯರ ನಂತರ ಏಳನೇ ಶತಮಾನದ ಮಧ್ಯಭಾಗದಲ್ಲಿ ಈ ನಿಧಿಯನ್ನು ರಾಷ್ಟ್ರಕೂಟರು ವಶಪಡಿಸಿಕೊಂಡರು. ರಾಷ್ಟ್ರಕೂಟರ ಕೆಳಗೆ ಈ ನಿಧಿಯು ಕೌತುಕ ಬೆಳವಣಿಗೆ ಕಾಣದಿದ್ದರೂ ಕ್ರಮೇಣ ಬೆಳೆಯುತ್ತಲೇ ಬಂದಿತು. ರಾಷ್ಟ್ರಕೂಟರ ನಂತರ ಹೊಯ್ಸಳರ ಕೆಳಗೆ ಹನ್ನೊಂದನೇ ಶತಮಾನದಿಂದ ಹದಿನಾಲ್ಕನೇ ಶತಮಾನದ ಮಧ್ಯಭಾಗದವರೆಗೂ ಪುನಃ ಅಧಿಕವಾಗಿಯೇ ವರ್ಧಿಸಿತು. ಕ್ರಿ.ಪೂ.೧೩೩೬ರಲ್ಲಿ ಈ ನಿಧಿಯು ಹರಿಹರ-ಬುಕ್ಕರ ಕೈಸೇರಿ ಅವರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಅರಸರ ಕೆಳಗೆ ಮತ್ತೆ ಅತಿಯಾದ ಅಭಿವೃದ್ಧಿ ಕಂಡ ಈ ಬೊಕ್ಕಸ ಕ್ರಿ.ಪೂ.೧೫೬೫ರಲ್ಲಿ ನಡೆದ ತಾಳೀಕೋಟೆ ಯುದ್ಧದ ನಂತರ ಸಂಪೂರ್ಣವಾಗಿ ಮಾಯವಾಯಿತು. ಅಂದಿನಿಂದ ಇಂದಿನವರೆಗು ಇದನ್ನು ಯಾರೂ ಕಂಡಿಲ್ಲ, ಇದರ ಬಗ್ಗೆ ಕೇಳಿಲ್ಲ" ಎನ್ನುತ್ತ ಭಾಸ್ಕರ ವೇದಿಕೆಯ ಮೇಲೆ ಇಟ್ಟಿದ್ದ ಮಿನರಲ್ ವಾಟರ್ ಲೋಟಕ್ಕೆ ಬಗ್ಗಿಸಿಕೊಂಡು ಕುಡಿಯುತ್ತ ತಾನು ಹೇಳಿದ ಮಾತುಗಳನ್ನು ಶ್ರೋತೃಗಳು ಅರಗಿಸಿಕೊಳ್ಳಲು ಕೊಂಚ ಸಮಯ ಕೊಟ್ಟ.
ಎರಡು ನಿಮಿಷಗಳ ಸಂಪೂರ್ಣ ಮೌನದ ನಂತರ ಸಭಿಕರು ಚೇತರಿಸಿಕೊಂಡು, ಅವರಲ್ಲೊಬ್ಬ ಕೈಯೆತ್ತಿದ. ಭಾಸ್ಕರ ಅವನ ಕಡೆ ಬೆರಳು ಮಾಡಿ ತೋರಿಸಿದಾಗ ಆತ ಎದ್ದು "ಪ್ರೊಫೆಸರ್, ವಿಜಯನಗರವನ್ನು ಆಕ್ರಮಿಸಿದ ಬಹಮನಿ ಸುಲ್ತಾನರು ಆರು ತಿಂಗಳ ಕಾಲ ಹಂಪೆಯನ್ನು ಕೊಳ್ಳೆಹೊಡೆದು ಅಲ್ಲಿದ್ದ ಸಂಪತ್ತನ್ನು ಲೂಟಿ ಮಾಡಿದರಲ್ಲವೇ? ಈ ನಿಧಿಯನ್ನೇ ದೋಚಿರಬೇಕು" ಎಂದ
"ಆಹಾ! ಅಲ್ಲೇ ಇರೋದು ವಿಚಿತ್ರ!" ಭಾಸ್ಕರ ಉದ್ವಿಗ್ನನಾಗಿ ಹೇಳಿದ. "ಆ ವಿಚಾರಕ್ಕೆ ಹಿಂತಿರುಗುವೆ. ಏತನ್ಮಧ್ಯೆ ಯೋಚಿಸಿ-ಘಾಝ್ನಿಯ ಮಾಹ್ಮೂದ್, ಘೌರಿಯ ಮಹಮ್ಮದ್, ಪರ್ಶಿಯಾದ ನಾದಿರ್ ಶಾಹ್, ಸೇರಿದಂತೆ ಅಲೆಕ್ಸಾಂಡರ್‌ನಿಂದ ಹಿಡಿದು ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯವರೆಗು ಅನೇಕ ಲೂಟಿದಾರರು-ಎಲ್ಲರೂ ಭಾರತಕ್ಕೇ ಏಕೆ ಧಾಳಿ ಇಡುತ್ತಿದ್ದರು? ಚೈನಾಗೆ, ಆಫ್ರಿಕಾಗೆ, ರಶಿಯಾಗೆ ಏಕೆ ಹೋಗುತ್ತಿರಲಿಲ್ಲ? ಈ ಅದ್ಭುತ ನಿಧಿಯ ವಿಚಾರ ಎಲ್ಲೆಲ್ಲೂ ಪ್ರಚಲಿತವಾಗಿತ್ತು. ಎಲ್ಲರೂ ಬರುತ್ತಿದ್ದದ್ದು ಈ ಅಪಾರ ನಿಧಿಯನ್ನು ಪಡೆಯಲೆಂದೇ"
ನಂತರ ಸೌಮ್ಯ ಧ್ವನಿಯಲ್ಲಿ ಮುಂದುವರಿಸಿದ "ಘಾಝ್ನಿಯ ಮಾಹ್ಮೂದ್ ಭಾರತವನ್ನು ಲೂಟಿ ಮಾಡಲು ಹದಿನೇಳು ಬಾರಿ ಏಕೆ ಬರಬೇಕಿತ್ತು? ವಿಚಿತ್ರವೆನಿಸುವುದಿಲ್ಲವೇ? ಒಂದೇ ಬಾರಿ ಬಂದು ಎಲ್ಲವನ್ನೂ ದೋಚಲಾಗುತ್ತಿರಲಿಲ್ಲವೇ? ಒಮ್ಮೆ ಲೂಟಿ ಮಾಡಿದ ನಂತರ ಮರುವರ್ಷವೇ ಪುನಃ ದೋಚಲು ಭಾರೀ ಸಂಪತ್ತು ಹೇಗೆ ಬಂದಿರುತ್ತಿತ್ತು?"
ಸಭಿಕರ ಮುಖಗಳಲ್ಲಿ ಕುತೂಹಲವನ್ನು ಕಂಡು "ಎಲ್ಲವೂ ಆ ಗುಪ್ತ ನಿಧಿಯ ಪರಿಣಾಮ! ಇಂದಿನ ಕಾಲದಲ್ಲಿ ನಮ್ಮ ಪರ್ಸ್ ಯಾರಾದರೂ ಹೊಡೆದರೆ ಬ್ಯಾಂಕಿಗೆ ಹೋಗಿ ಮತ್ತಷ್ಟು ಹಣ ಡ್ರಾ ಮಾಡುವುದಿಲ್ಲವೇ? ಅದೇ ರೀತಿ ಅತ್ತ ಮಾಹ್ಮೂದ್ ಲೂಟಿ ಮಾಡುತ್ತಿದ್ದ, ಅವನು ತನ್ನ ತಾಣಕ್ಕೆ ಹಿಂತಿರುಗಿದ ನಂತರ ಸಾಗರದಿಂದ ಉದ್ಧರಣೆ ನೀರು ತೆಗೆದಂತೆ ಪುನಃ ಚಲಾವಣೆಗೆ ಬೇಕಾಗುವಷ್ಟು ಸಂಪತ್ತನ್ನು ನಿಧಿಯಿಂದ ಹೊರತೆಗೆದು ಬಳಸಿಕೊಳ್ಳುತ್ತಿದ್ದರು" ಎಂದ ಭಾಸ್ಕರ
ಮತ್ತೊಬ್ಬ ವಯಸ್ಸಾದ ವ್ಯಕ್ತಿ ಕೈಯೆತ್ತಿದರು "ಹಾಗಾದರೆ ಆ ನಿಧಿಯನ್ನೇ ಏಕೆ ಯಾರೂ ಅಪಹರಿಸಲಿಲ್ಲ?"
"ಪ್ರತಿ ಬಾರಿ ಹೊರತೆಗೆದ 'ಚಲಾವಣೆ ಸಂಪತ್ತು' ತ್ಯಾಗ ಮಾಡುವುದು ಒಂದು ರೀತಿಯಲ್ಲಿ ಲೂಟಿದಾರರನ್ನು ತಡೆಹಿಡಿಯುವ ಸಾಧನೆಯಾಗಿತ್ತು-ಡೆಟರ್ರೆಂಟ್ ಅಗೈನ್ಸ್‌ಟ್ ರಾಬರಿ. ಆ ಗುಪ್ತ-ನಿಧಿಯ ಒಟ್ಟು ಮೊತ್ತ ಬಿಗಿಯಾಗಿ ಕಾಪಾಡಿಕೊಂಡು ಬಂದ ರಹಸ್ಯವಾಗಿತ್ತು. ಮಾಹ್ಮೂದ್‌ಗೆ ತಿಳಿದಿದ್ದು ನಿಧಿ ಇದೆಯೆಂದು. ಭಾರತಕ್ಕೆ ಬರುತ್ತಿದ್ದ, ದೋಚುತ್ತಿದ್ದ. ಮಾಹ್ಮೂದ್ ಪ್ರತಿ ಬಾರಿ ಲೂಟಿ ಮಾಡುತ್ತಿದ್ದದ್ದು ಬೃಹತ್ತಾದ ಮೊತ್ತವಾದರೂ ಈ ನಿಧಿಯ ಪಾಲಿಗೆ ತೃಣಮಾತ್ರವಾಗಿತ್ತು. ಅವನನ್ನು ತಡೆಹಿಡಿಯಲು, ನಿಧಿಯನ್ನು ಕಾಪಾಡಲು ಆ ತೃಣವನ್ನು ಬಿಟ್ಟುಕೊಡಲು ಸಿದ್ಧವಾಗಿದ್ದರು. ತಾನು ಲೂಟಿ ಮಾಡಿದ್ದೇ ರಹಸ್ಯ ನಿಧಿಯೆಂದು ಭಾವಿಸಿ, ಮಾಹ್ಮೂದ್ ಹಿಂತಿರುಗುತ್ತಿದ್ದ"
ಪುನಃ ಮೌನ ತಾಳಿತು. ಭಾಸ್ಕರ ತಾನು ಮಾಡಿದ ಅಂಶ ಒತ್ತಿ ಹೇಳಲು ಮೊದಲ ಪ್ರಶ್ನೆ ಕೇಳಿದವನ ಕಡೆ ಬೆರಳು ಮಾಡಿ "ಬಹಮನಿ ಸುಲ್ತಾನರ ಸೈನ್ಯ ವಿಜಯನಗರದ ರಾಜಧಾನಿಯನ್ನು ಆರು ತಿಂಗಳ ಕಾಲ ಏಕೆ ದೋಚಬೇಕಿತ್ತು? ಆ ಗಾತ್ರದ ಊರನ್ನು ದೋಚಲು ದೊಡ್ಡ ಸೈನ್ಯವೊಂದಕ್ಕೆ ಆರು ತಿಂಗಳು ಬೇಕೇ? ಅದೇನು ಇಂದಿನ ಬೆಂಗಳೂರಿನಷ್ಟು ದೊಡ್ಡದಲ್ಲ" ನೆರೆದಿದ್ದ ಜನ ಕಿರುನಗೆ ನಕ್ಕರು "ಇಲ್ಲ! ಬಹಮನಿ ಸುಲ್ತಾನರೂ ಆ ಅಪಾರ ರಹಸ್ಯ ನಿಧಿಯ ವಿಚಾರವನ್ನು ಕೇಳಿದ್ದರು. ಆರು ತಿಂಗಳ ಕಾಲ ಅದನ್ನೇ ಹುಡುಕುತ್ತಿದ್ದರು. ಅವರಿಗೆ ಯಾವುದೋ ಒಂದು ಸಣ್ಣ ಗಂಟು ಸಿಕ್ಕಿ ಅದೇ ಆ ನಿಧಿಯೆಂದು ಭಾವಿಸಿಯೋ ಅಥವ ನಿಧಿಯೇ ಸುಳ್ಳೆಂದು ನಿರ್ಧರಿಸಿಯೋ ವಿಜಯನಗರವನ್ನು ಬಿಟ್ಟು ಹೊರಟುಹೋದರು. ಒಟ್ಟಿನಲ್ಲಿ ಆ ನಿಧಿ ಅವರ ಕೈಹತ್ತಿದ ಸೂಚನೆಗೆಳು ಕಾಣುವುದಿಲ್ಲ. ಅವರ ಕೈಗೆ ಹತ್ತಿದ್ದು ಬಹುಶಃ ವಿಜಯನಗರದಲ್ಲಿ ಚಲಾವಣೆಗೆ ಹೊರತೆಗೆದಿದ್ದ ಸಂಪತ್ತು ಮಾತ್ರ. ಮೂಲ ನಿಧಿ ಹಾಗೆಯೇ ಉಳಿಯಿತು"
ಈ ಬಾರಿ ಒಬ್ಬ ಹೆಂಗಳೆ ಕೈ ಎತ್ತಿದಳು. ಭಾಸ್ಕರ ಅವಳ ಕಡೆ ಕೈಮಾಡಿ ತೋರಿಸಿದಾಗ ಆಕೆ ನಿಂತು ಕೇಳಿದಳು. "ಹಾಗಾದರೆ ನೀವು ಹೇಳುತ್ತಿರುವ ನಿಧಿಯ ಒಟ್ಟು ಮೊತ್ತ ಎಷ್ಟಿರಬಹುದು?" ಉಳಿದವರು ಗೊಣಗತೊಡಗಿದರು.
"ಒಳ್ಳೆ ಪ್ರಶ್ನೆ!" ಭಾಸ್ಕರ ವಿಪರ್ಯಾಸಕರವಾಗಿ ಹೇಳಿದ "ಯಾರಿಗೂ ತಿಳಿಯದು. ಯಾರೂ ಬಹುಶಃ ಈ ನಿಧಿಯನ್ನು ಇಡಿಯಾಗಿ ಕಂಡಿಲ್ಲ-ಕಂಡಿದ್ದರೆ ಎಲ್ಲೂ ವಿವರಿಸಿಲ್ಲ. ವಿವರಿಸುವುದೇನು-ಎಲ್ಲಿಯೂ, ಯಾರೂ ಇದರ ಉಲ್ಲೇಖ ಕೂಡ ಮಾಡಿಲ್ಲ. ಆದರೆ ಇದರ ಉಪಸ್ಥಿತಿಯ ಪ್ರಭಾವಗಳು ಇತಿಹಾಸದಲ್ಲಿ ಎಲ್ಲೆಲ್ಲೂ ಕಂಡು ಬರುತ್ತವೆ. ರಾಜ-ವಂಶಗಳ ಉದಯ-ಅಸ್ತಗಳನ್ನು ವಿಧಿಸುವಂತಹ ನಿಧಿ ಇದು! ದೇಶ-ಸಾಮ್ರಾಜ್ಯಗಳ ಅರಳು-ಉರುಳುಗಳನ್ನು ನಿಯಂತ್ರಿಸುತ್ತಿದ್ದ ನಿಧಿ ಇದು! ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆ ಜನರ ವೈಭವವಂತೂ ಹೇಳಿಯೇ ಮುಗಿಯದು! ಎಲ್ಲೆಲ್ಲೂ ಚಿನ್ನ, ಬೆಳ್ಳಿ, ವಜ್ರ, ವಢೂರ್ಯಗಳ ವಿವರಣೆಗಳನ್ನು ಪೋರ್ಚುಗೀಸ್ ಪ್ರಯಾಣಿಕರಾದ ಡೊಮಿಂಗೋಸ್ ಪಯಸ್ ಮತ್ತು ಫರ್ನೊ ನ್ಯೂನಿಝ್ ಬಿಟ್ಟಿದ್ದಾರೆ. ಬೀದಿ ಬೀದಿಗಳಲ್ಲಿ ಈ ಅತ್ಯಮೂಲ್ಯ ವಸ್ತುಗಳ ವ್ಯಾಪಾರ ನಡೆಯುತ್ತಿದ್ದ ವಿವರಗಳನ್ನು ಬರೆದಿದ್ದಾರೆ. ಆ ಕಾಲದಲ್ಲಿ ಹತ್ತಾರು ಕೋಟಿ ಚಿನ್ನದ ವರಾಹಗಳ ಕಾಣಿಕೆ ವಿಜಯನಗರದ ರಾಯನಿಗೆ ಸಾಮಂತರು ತಂದುಕೊಡುತ್ತಿದ್ದ ಬಗ್ಗೆ ವಿವರಣೆಗಳನ್ನು ಬಿಟ್ಟಿದ್ದಾರೆ. ಒಂದೊಂದು ವರಾಹವೂ ಕನಿಷ್ಠ ಮೂರರಿಂದ ನಾಲ್ಕು ಗ್ರಾಂ ಎಂದು ಭಾವಿಸಿದರೆ ನೀವೇ ಲೆಕ್ಕ ಹಾಕಿ" ಎಂದು ಹೇಳಿ ಯೋಚಿಸಲು ಸಮಯ ಕೊಟ್ಟ.
"ಹದಿಮೂರನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ವಲ್ಪ ಮುಂಚೆ ಕ್ರಿ.ಪೂ. ೧೩೧೦ರಲ್ಲಿ ಆಗಿನ ದೆಹಲಿ ಸುಲ್ತಾನನಾದ ಅಲಾಉದ್ದೀನ್ ಖಿಲ್ಜಿಯ ದಂಡನಾಯಕ ಮಲಿಕ್ ಕಫೂರ್ ಡಖನ್‍ಅನ್ನು ಲೂಟಿ ಮಾಡಿದ. ಮಲಬಾರ್ ತೀರದುದ್ದಕ್ಕೂ ಎಲ್ಲ ದೇವಾಲಯಗಳನ್ನು ಲೂಟಿ ಮಾಡಿದ್ದಲ್ಲದೆ ಇಂದಿನ ಕರ್ನಾಟಕವಿರುವ ಪ್ರದೇಶವನ್ನು ಸಂಪೂರ್ಣವಾಗಿ ಕೊಳ್ಳೆಹೊಡೆದ. ಮುಸಲ್ಮಾನ ಸಾಹಿತಿ ಫಿರಿಷ್ತಾ ಪ್ರಕಾರ ಅವನು ಸುಲ್ತಾನನಿಗೆ ಕೊಟ್ಟ ಕಾಣಿಕೆ ೩೧೨ ಆನೆ, ೨೦೦೦೦ ಕುದುರೆ, ೯೬೦೦೦ ಮಣ ಬಂಗಾರ ಹಾಗು ಮುತ್ತು, ರತ್ನ, ಪಚ್ಚೆ, ವಜ್ರ-ವೈಢೂರ್ಯಗಳಿಂದ ತುಂಬಿದ ಹತ್ತಾರು ಪೆಟಾರಿಗಳು. ಅಂದಿನ ಲೆಕ್ಕದಲ್ಲಿ ಮದ್ರಾಸಿನ ಮಣವೆಂದರೆ ೨೫ ಪೌಂಡು, ಮುಂಬೈ ಮಣ ೨೮ ಪೌಂಡು, ಹಾಕಿನ್ಸ್ ಒಂದು ಮಣಕ್ಕೆ ೫೫ ಪೌಂಡು ಎಂದರೆ, ಮಿಡ್ಲ್‌ಟನ್ ೩೩ ಪೌಂಡು ಎನ್ನುತ್ತಾನೆ. ಮಿತವಾಗಿ ಮದ್ರಾಸ್ ಮಣವೆಂದುಕೊಂಡರೂ ಈ ಬಂಗಾರ ಸುಮಾರು ೨,೪೦೦,೦೦೦ ಪೌಂಡು ಅಂದರೆ ಸುಮಾರು ಒಂದುನೂರ-ಎಂಟು ಕೋಟಿಗಿಂತ ಹೆಚ್ಚು ಗ್ರಾಂ ಬಂಗಾರ. ಇದರಿಂದ ಎಷ್ಟು ನೆಕ್‍ಲೇಸ್ ಮಾಡಿಸಿಕೊಳ್ಳಬಹುದು ಎಣಿಸಿಕೊಳ್ಳಿ" ಎಂದು ಭಾಸ್ಕರ ಹೇಳಿದಾಗ ಎಲ್ಲರೂ ನಕ್ಕರು.
"ಮಲಿಕ್ ಕಫೂರ್ ಸುಲ್ತಾನನಿಗೆ ಸಲ್ಲಿಸಿದ್ದು ತಾನು ಲೂಟಿ ಮಾಡಿದ ಬಂಗಾರದ ಶೇಕಡ ೫೦%ರಷ್ಟು ಎಂದು ಭಾವಿಸಿದರೂ ಅವನು ಲೂಟಿ ಮಾಡಿದ ಬಂಗಾರದ ಒಟ್ಟು ಮೊತ್ತ ಇವತ್ತಿನ ಲೆಕ್ಕದಲ್ಲಿ ಕನಿಷ್ಠ ಎರಡು-ಲಕ್ಷ-ಕೋಟಿ ರೂಪಾಯಿ ಅಂದರೆ ಐದು ಬಿಲಿಯನ್ ಅಮೇರಿಕನ್ ಡಾಲರ್-ಹಾಕಿನ್ಸ್‌ನ ಮಣ ತೆಗೆದುಕೊಂಡರೆ ಇದು ದ್ವಿಗುಣವಾದೀತು. ಇದಲ್ಲದೆ ಮುತ್ತು-ರತ್ನ ವಜ್ರ-ವೈಢೂರ್ಯಗಳು ತುಂಬಿದ ಹಲವಾರು ಪೆಟಾರಿಗಳು. ಪಯಸ್ ಮತ್ತು ನ್ಯೂನಿಝ್ ಕೋಳಿಮೊಟ್ಟೆಗಾತ್ರದ ವಜ್ರಗಳ ಬಗ್ಗೆ ಬರೆದಿದ್ದಾರೆ. ೩೦-೪೦ ಕ್ಯಾರಟ್ ಭಾರವಿರುವ ವಜ್ರಗಳು ಸಾಮಾನ್ಯವಾಗಿ ಗಣಿಗಳಲ್ಲಿ ದೊರಕುತ್ತಿದ್ದವೆಂದು ಹೇಳಿದ್ದಾರೆ. ವಿಶ್ವವಿಖ್ಯಾತ ಕೋಹಿನೂರ್ ವಜ್ರ ಕೂಡ ಈ ಬೊಕ್ಕಸದಿಂದಲೇ ಬಂದಿರಬಹುದು. ತಾಳೀಕೋಟೆ ಯುಧ್ಧದ ನಂತರ ವಿಜಯನಗರ ನಾಶವಾದಮೇಲೂ ಸಮೀಪವಿರುವ ಚಂದ್ರಗಿರಿಯ ರಾಜನ ಬಳಿ ಮೂರು ದೊಡ್ಡ ಪೆಟಾರಿ ಭರ್ತಿ ವಜ್ರಗಳಿದ್ದವೆಂದು ಮತ್ತೊಬ್ಬ ಪೋರ್ಚುಗೀಸ್, ಮಾನುವಲ್ ಬರ್ರಡಸ್ ಬರೆದಿದ್ದಾನೆ. ಅಷ್ಟಾಗಿ ಇದು ಕೇವಲ ಖರ್ಚಿಗೆ ಹೊರತೆಗೆದಿದ್ದ 'ಪಾಕೆಟ್ ಚೇಂಜ್'. ಹೋಗಲಿ ಕಾಲ ಕ್ರಮೇಣ ಒಟ್ಟು ಶೇಕಡ ೨೫%ರಷ್ಟು ಖಾಲಿಯಾಗಿದೆಯೆಂದುಕೊಂಡರೂ ಆ ನಿಧಿಯ ಒಟ್ಟು ಮೊತ್ತ ಎಷ್ಟಿರಬಹುದು ಎಂದು ಕಲ್ಪಿಸಿಕೊಳ್ಳುವುದೂ ಕಷ್ಟವೇ ಅಲ್ಲ ಅಸಾಧ್ಯ"
ಉಪನ್ಯಾಸ ಮುಗಿದ ನಂತರ ಭಾಸ್ಕರ ತನ್ನ ಹೋಟಲ್‍ಗೆ ಹಿಂತಿರುಗಲು ಹೊರ ಹೋಗುತ್ತಿದ್ದಾಗ ಸುಮಾರು ೩೦-೩೫ ವಯಸ್ಸಿನ ದೇಹದಾರ್ಢ್ಯವುಳ್ಳ ವ್ಯಕ್ತಿಯೊಬ್ಬ ಅವನ ಎದುರಾಗಿ "ಗುಡ್ ಲೆಕ್ಚರ್, ಪ್ರೊಫೆಸರ್. ನಿಮ್ಮನ್ನು ಇನ್ನೂ ಕೆಲವು ಪ್ರಶ್ನೆಗಳು ಕೇಳಬೇಕು-ಇಂದು ಸಮಯವಾಗಲಿಲ್ಲ. ನಿಮ್ಮನ್ನು ಎಲ್ಲಿ ಭೇಟಿ ಮಾಡಬಹುದು?" ಎಂದ.
ಜೇಬಿನಿಂದ ತನ್ನ ಬಿಸಿನೆಸ್-ಕಾರ್ಡ್ ಹೊರತೆಗೆದು ಅವನ ಕೈಗೆ ಕೊಡುತ್ತ "ಇಗೋ-ನನ್ನ ಕಾರ್ಡ್. ನೀವು..?" ಎಂದ ಭಾಸ್ಕರ
"ಓಹ್-ಸಾರಿ! ರಾಜೇಶ್ ನಾಗೇಶನ್. ಹಿಸ್ಟರಿ ನನ್ನ ಹಾಬಿ" ಎನ್ನುತ್ತ ಕೈ ಕುಲುಕಿ ತನ್ನ ಕಾರ್ಡ್ ಭಾಸ್ಕರನ ಕೈಗಿಟ್ಟ.
"ರಾಜೇಶ್-ನಾಗೇಶನ್, ನಾಗೇಶನ್ಸ್ ಆಂಟೀಕಾರ್ಟ್ಸ್, ಎಂ.ಜಿ.ರಸ್ತೆ, ಬೆಂಗಳೂರು" ಓದಿಕೊಂಡ ಭಾಸ್ಕರ.
"ಸೋ...ನಿಮ್ಮನ್ನು ಬಂದು ಕಾಣಲು ಅಪಾಯಿಂಟ್ಮೆಂಟ್ ಮಾಡಿಕೊಳ್ಳಬೇಕೇ?" ರಾಜೇಶ್ ಕೇಳಿದಾಗ ಭಾಸ್ಕರ ಪಕ್ಕ ತಿರುಗಿ "ಉಜ್ವಲ?" ಎಂದ.
ಮುಂದೆ ಬಂದ ಯುವತಿಯನ್ನು ತೋರಿಸಿ "ಉಜ್ವಲಾ-ನನ್ನ ರಿಸರ್ಚ್ ಅಸಿಸ್ಟೆಂಟ್, ಉಜ್ವಲಾ-ರಾಜೇಶ್ ನಾಗೇಶನ್" ಎಂದು ಪರಿಚಯ ಮಾಡಿಸಿದ. "ನಾಗೇಶನ್ ನನ್ನೊಡನೆ ಕನ್ಸಲ್ಟ್ ಮಾಡಲು ಯಾವಾಗ ಸಮಯವಿದೆ ನನ್ನ ಕ್ಯಾಲೆಂಡರ್ ನೋಡಿ ಹೇಳುವೆಯಾ?
ಉಜ್ವಲಾ ತನ್ನ ಬಳಿ ಇದ್ದ ಡೈರಿಯೊಂದನ್ನು ತಿರುಗಿಸಿ "ನಾಳೆ ಮಧ್ಯಾಹ್ನ ಫ್ರೀ ಇದ್ದೀರ, ಪ್ರೊಫೆಸರ್" ಎಂದಳು
"ನಾಳೆ ಮಧ್ಯಾಹ್ನ-ಸೇ ತ್ರೀ-ಓ-ಕ್ಲಾಕ್? ನಾನು ಹೋಟೆಲ್ ಚಾಳುಕ್ಯದಲ್ಲಿ ಇಳಿದುಕೊಂಡಿದ್ದೀನಿ" ಭಾಸ್ಕರ ನಾಗೇಶನ್ ಕಡೆ ತಿರುಗಿ ಹೇಳಿದ
"ಶೂರ್, ಪ್ರೊಫೆಸರ್! ಸೀ ಯು ಟುಮಾರೋ"
*****
"ಸೋ, ಬ್ಯಾಟಲ್-ಆಫ್-ತಾಳೀಕೋಟೆಯ ನಂತರ ಆ ನಿಧಿಗೆ ಏನಾಯಿತು?" ಮರುದಿನ ಮಧ್ಯಾಹ್ನ ಭಾಸ್ಕರನ ಹೋಟಲ್‍ನ ರೆಸ್ಟೊರಾಂಟ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತ ಮಾತನಾಡುತ್ತಿದ್ದಾಗ ನಾಗೇಶನ್ ಕೇಳಿದ.
"ಸಂಪೂರ್ಣವಾಗಿ ಮಾಯವಾಯಿತು. ಅದನ್ನು ಬಹಮನಿ ಸುಲ್ತಾನರ ಸೈನ್ಯ ದೋಚಿತೆಂದೇ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನಾನು ಹೇಳಿದಂತೆ ಹಾಗಾಗಿರಲು ಸಾಧ್ಯವಿಲ್ಲ" ಭಾಸ್ಕರ ಹೇಳಿದ.
"ಏನೂ ಸುಳಿವಿಲ್ಲವೇ? ಯಾರಾದರೂ ಕಕ್ಷಿದಾರರು? ಅನಿಥಿಂಗ್?"
"ಉಹೂಂ. ಆದರೂ...ಆಗಿನ ಮೈಸೂರ ಅರಸ ವಿಜಯನಗರದ ಸಾಮಂತನಾಗಿದ್ದ-ಇಮ್ಮಡಿ ತಿಮ್ಮರಾಜ. ಅವನ ಸೇನಾಧಿಪತಿಯಾಗಿದ್ದ ನರಸಪ್ಪನಾಯಕ ತಾಳೀಕೋಟೆ ಯುದ್ಧಕ್ಕೆ ತಿಮ್ಮರಾಜನ ಪ್ರತಿನಿಧಿಯಾಗಿ ಹೋಗಿದ್ದ. ಯುದ್ಧದಲ್ಲಿ ಗಾಯಗೊಂಡಿದ್ದ ನರಸಪ್ಪ ವಿಜಯನಗರದ ಸೋಲಿನ ನಂತರ ವಿಜಯನಗರದ ವರಾಹ ರಾಜ್ಯ-ಲಾಂಛನದೊಂದಿಗೆ ತಿಮ್ಮರಾಜನಿಗೆ ಸಂದೇಶವನ್ನು ಹೊತ್ತು ಮೈಸೂರಿಗೆ ರವಾನೆಯಾದ. ಮೈಸೂರು ತಲುಪುವ ಹೊತ್ತಿಗೆ ತನ್ನ ಕೊನೆ ಉಸಿರೆಳೆಯುತ್ತಿದ್ದ ನರಸಪ್ಪನಾಯಕ ಸಂದೇಶವನ್ನು ಹೇಳುವ ಮುನ್ನವೇ ಹತನಾದ. ಮೈಸೂರು ರಾಜ್ಯವೇ ವಿಜಯನಗರಕ್ಕೆ ಸ್ವಾಭಾವಿಕ ಉತ್ತರಾಧಿಕಾರಿಯೆಂದು ಲಾಂಛನದ ಜೊತೆ ಆ ನಿಧಿಯ ಗುಟ್ಟು ನರಸಪ್ಪನೊಡನೆ ಹೋಗಿದ್ದಿರಬಹುದೆಂದು ನನ್ನ ರೆಸರ್ಚ್ ತೋರುತ್ತದೆ" ಭಾಸ್ಕರ ಹೇಳಿದ
"ಮೈಸೂರಿನಲ್ಲಿರುವ ವಿಜಯನಗರದ ಆ ಲಾಂಛನದಲ್ಲಿ ಈ ನಿಧಿಯನ್ನು ಕುರಿತು ಏನು ಮಾಹಿತಿ ಇರಬಹುದು? ನಿಧಿ ಎಲ್ಲಿದೆಯೆಂದು ಹೇಳಲು ಒಂದು ಮ್ಯಾಪ್? ಅಥವ ಸ್ಥಳ ವಿವರಿಸಲು ಒಂದು ಪತ್ರ? ಏನಿರಬಹುದು, ಪ್ರೊಫೆಸರ್?"
"ಏನಾದರು ಮಾಹಿತಿ ಇರಬಹುದು ಎನ್ನುವುದೇ ಊಹೆ. ಇದ್ದರೆ ಅದು ಎಂತಹ ಸ್ವರೂಪದಲ್ಲಿರಬಹುದೆನ್ನುವುದಂತು ತೆರೆದ-ಪ್ರಶ್ನೆ. ಬಹುಶಃ ಆ ಲಾಂಛನವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರೆ ಸ್ಪಷ್ಟವಾಗಬಹುದು, ಬಟ್ ಅದರ್‌ವೈಸ್, ಇಮ್‌ಪಾಸಿಬಲ್ ಟು ಸೇ" ಎಂದ ಭಾಸ್ಕರ
"ಹೋಗಲಿ ನಿಮ್ಮ ಅನಿಸಿಕೆಯಲ್ಲಿ ಆ ನಿಧಿ ಎಲ್ಲಿರಬಹುದು? ಮೈಸೂರಿನಲ್ಲೇ? ಹಂಪೆಯಲ್ಲೇ? ಅಥವ ಬೇರೆ ಇನೆಲ್ಲೋ?" ನಾಗೇಶನ್ ನಿಧಿಯ ಮಾಹಿತಿಗಾಗಿ ಕೆದಕುತ್ತಿದ್ದ.
"ಅಗೇನ್, ಇಮ್‌ಪಾಸಿಬಲ್ ಟು ಸೇ. ಆ ನಿಧಿ ಕೈಯಿಂದ ಕೈಗೆ ಬದಲಾಯಿಸಿದಾಗ ಅದರ ನೆಲೆಯನ್ನು ಬದಲಾಯಿಸುತ್ತಿದ್ದರೇ, ಇಲ್ಲವೇ ಅದು ಒಂದೇ ಕಡೆ ಭದ್ರವಾಗಿ ನೆಲೆಸಿತ್ತೇ ತಿಳಿಯದು. ಹಳೆಯ ಕಾಲದ ರಾಜಧಾನಿಗಳು-ಬನವಾಸಿ, ಬಾದಾಮಿ, ಮಣ್ಯಖೇತ, ಹಳೇಬೀಡು, ಹಂಪೆ ಕೂಡ-ಸಂಭವನೀಯ ನೆಲೆಗಳು. ಬಟ್ ದೆನ್ ಅಗೇನ್, ಇಲ್ಲೇ ಬೆಂಗಳೂರಿನಲ್ಲೂ ಇರಬಹುದು, ಇಲ್ಲವೇ ಯಾವುದೋ ಕಾಡಿನ ಮಧ್ಯೆ ಇರಬಹುದು" ಭಾಸ್ಕರ ಉದ್ರಿಕ್ತ ಧ್ವನಿಯಲ್ಲಿ ಹೇಳಿದ.
ಕೊಂಚ ಮೌನ ತಾಳಿ ನಂತರ "ಆ ನಿಧಿಯನ್ನು ನೀವು ಹುಡುಕುತ್ತಿದ್ದೀರ, ಪ್ರೊಫೆಸರ್? ಹಿಂದೆ ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದೀರ, ಇಲ್ಲವೇ ಮುಂದೆ ಮಾಡಲಿದ್ದೀರ? ನಿಮಗೆ ಅದನ್ನು ಹುಡುಕುವ ಇಚ್ಛೆ ಇದೆಯೇ?" ಕೇಳಿದ ನಾಗೇಶನ್.
"ದೇ..." ಏನೋ ಹೇಳಲು ಹೊರಟು ಸುಮ್ಮನಾದ ಭಾಸ್ಕರ ಮತ್ತೆ ಮುಂದುವರೆಸಿದ "ನರಸಪ್ಪನಾಯಕ ತಂದ ವಿಜಯನಗರದ ರಾಜ್ಯ-ಲಾಂಛನ ಇಂದಿಗೂ ಮೈಸೂರಿನ ಅರಮನೆಯ ಒಂದು ಗುಪ್ತ ಕೋಣೆಯಲ್ಲಿದೆಯೆಂದು ನನಗೆ ತಿಳಿದುಬಂದಿದೆ. ಅದನ್ನು ಪರೀಕ್ಷಿಸಲು ಪ್ಯಾಲೆಸ್ ಟ್ರಸ್ಟಿನವರನ್ನು ಆರು ತಿಂಗಳಿಂದ ಪರ್ಮಿಶನ್ ಕೇಳುತ್ತಿದ್ದೇನೆ-ಆದರೆ ಸಿಗುತ್ತಿಲ್ಲ. ಅದು ಸಿಕ್ಕರೆ ನಿಧಿಯ ಮುಂದಿನ ಕ್ಲೂ ಸಿಗಬಹುದು"
"ಹಮ್‍ಮ್‍ಮ್.." ಎಂದು ಕೊಂಚ ಯೋಚಿಸಿ "ನಿಮಗೊಂದು ಬಿಜಿನೆಸ್ ಪ್ರಪೋಸಲ್ ಹೇಳಲೇ, ಪ್ರೊಫೆಸರ್? ಮೈಸೂರಿನ ಆ ಎಂಬ್ಲಮ್ ಪರೀಕ್ಷಿಸುವ ಅವಕಾಶ ಮಾಡಿಕೊಟ್ಟರೆ ನಿಮ್ಮ ಹುಡುಕಾಟ ಮುಂದುವರೆಸುತ್ತೀರ? ನನ್ನನ್ನೂ ಜೊತೆಗೆ ಸೇರಿಸಿಕೊಳ್ಳುತ್ತೀರ?" ನಾಗೇಶನ್ ಕೇಳಿದ
"ಅದು...ಹೇಗೆ ಸಾಧ್ಯ? ನಾನು ಪ್ರಯತ್ನ ಮಾಡುತ್ತಲೇ ಇದ್ದೀನಿ"
"ನಿಮ್ಮ ದಾರಿ ಹಿಡಿದರೆ ಅದನ್ನು ಜನ್ಮದಲ್ಲಿ ನೀವು ಪರೀಕ್ಷಿಸಲಾಗದು. ಅದನ್ನು ಪರೀಕ್ಷಿಸಲು, ಪಡೆಯಲು ಬೇರೆ ಸಾಧನಗಳೂ ಇವೆ, ಪ್ರೊಫೆಸರ್. ಬೈ ಹುಕ್-ಆರ್-ಕ್ರುಕ್ ಅದನ್ನು ನಿಮ್ಮ ಮುಂದಿಟ್ಟರೆ?" ನಾಗೇಶನ್ ಖಳನಂತೆ ಹಲ್ಲುಕಿರಿದು ಕೇಳಿದ.
"ಅಂದರೆ....? ನೋ! ನಾನು ಗೈರು-ಕಾನೂನಿ ಕೆಲಸ ಮಾಡಲಾರೆ, ಒಪ್ಪಲಾರೆ" ಸದಾಚಾರದ ಕೋಪ ತುಂಬಿದ ಧ್ವನಿಯಲ್ಲಿ ಹೇಳಿದ ಭಾಸ್ಕರ.
"ನಿಮಗೆ ಆ ಲಾಂಛನ ಪರೀಕ್ಷಿಸಿ ನಿಧಿಯನ್ನು ಹುಡುಕುವುದು ಮುಖ್ಯವೋ? ಇಲ್ಲ...? ನನ್ನನ್ನು ನಿಮ್ಮ ಟ್ರೆಶರ್-ಹಂಟ್‍ನಲ್ಲಿ ಪಾರ್ಟ್ನರ್ ಮಾಡಿಕೊಂಡರೆ ನಾನು ಆ ಲಾಂಛನವೊಂದೇ ಅಲ್ಲ ಫೈನಾನ್ಸಿಂಗ್ ಕೂಡ ನೋಡಿಕೊಳ್ಳುತ್ತೇನೆ"
"ಮಿ. ನಾಗೇಶನ್, ನಾನು ಹಣಕ್ಕಾಗಿ ಈ ಖಜಾನೆಯನ್ನು ಹುಡುಕುತ್ತಿಲ್ಲ. ನನ್ನ ಧ್ಯೇಯಗಳೇ ಬೇರೆ. ನಮ್ಮ ಚರ್ಚೆ ಮುಗಿದಿದೆಯೆಂದು ಭಾವಿಸುತ್ತೇನೆ, ಗುಡ್-ಬೈ" ಭಾಸ್ಕರ ನಿಲ್ಲುತ್ತ ಕಿರುಗಣ್ಣು ಮಾಡಿಕೊಂಡು ಕಟುವಾಗಿ ಹೇಳಿದ.
"ಓ.ಕೇ. ಪ್ರೊಫೆಸರ್. ನೀವು ಇನ್‍ಡಿಸ್ಪೆಸಿಬಲ್ ಅಲ್ಲ. ನಾನೇ ಮುಂದಿನ ದಾರಿ ನೋಡಿಕೊಳ್ಳುತ್ತೇನೆ. ಗುಡ್-ಬೈ" ಎನ್ನುತ್ತ ನಾಗೇಶನ್ ಹೊರಟುಹೋದ.
"ಗುಡ್-ರಿಡೆನ್ಸ್" ಎಂದು ಗೊಣಗುತ್ತ "ಉಜ್ವಲಾ? ಕೇಳಿದೆಯಾ..?" ಅಲ್ಲೇ ಇದ್ದ ಉಜ್ವಲಾಳನ್ನು ಕುರಿತು ಹೇಳಿದ ಭಾಸ್ಕರ.
"ಯಸ್, ಪ್ರೊಫೆಸರ್. ನಾಗೇಶನ್ ಕೈಗೆ ಆ ಲಾಂಛನ ಅಥವ ನಿಧಿ ಸಿಕ್ಕರೆ ಒಳ್ಳೆಯದಾಗಲಾರದು" ನಿಧಾನವಾಗಿ ಉಸುರಿದಳು ಉಜ್ವಲಾ.
"ಆ ಲಾಂಛನ ನಾಗೇಶನ್ ಕೈಸೇರುವ ಮುಂಚೆ ನಾವೇ ಅದನ್ನು ಹೇಗಾದರು ಪರೀಕ್ಷಿಸಬೇಕು. ಅದು ಅವನ ಕೈಸೇರಿದರೆ ಅನಾಹುತವಾದೀತು!" ಎಂದ ಭಾಸ್ಕರ.
*****
ತುರ್ತಾಗಿ ಭಾಸ್ಕರ, ಉಜ್ವಲ ಮೈಸೂರಿಗೆ ರವಾನೆಯಾಗಿ, ಅರಮನೆ ರಕ್ಷಣಾ ಅಧಿಕಾರಿಯಾದ ಇನ್ಸ್‌ಪೆಕ್ಟರ್ ಮಹೇಶ್ವರನನ್ನು ಭೇಟಿ ಮಾಡಿದರು.
"ಹಲೋ ಇನ್ಸ್‌ಪೆಕ್ಟರ್. ನಾನು ಪ್ರೊಫೆಸರ್ ಭಾಸ್ಕರ, ಹಂಪೆ ಕನ್ನಡ ಯೂನಿವರ್ಸಿಟಿ, ಹಿಸ್ಟರಿ ಡಿಪಾರ್ಟ್‍ಮೆಂಟ್" ಭಸ್ಕರ ಇನ್ಸ್‌ಪೆಕ್ಟರ್ ಕೈಕುಲುಕುತ್ತ ಹೇಳಿದ. ಇಬ್ಬರೂ ತಮ್ಮ ಬಿಸಿನೆಸ್ ಕಾರ್ಡ್‌ಗಳನ್ನು ಬದಲಾಯಿಸಿಕೊಂಡರು.
"ನಮಸ್ಕಾರ ಪ್ರೊಫೆಸರ್. ನಿಮಗೇನು ಸೇವೆ ಮಾಡಬಲ್ಲೆ?" ಇನ್ಸ್ಪೆಕ್ಟರ್ ವಿಚಾರಿಸಿದ.
"ಸುತ್ತಿ ಬಳಸಿ ಮಾತನಾಡೋದಿಲ್ಲ, ನೇರವಾಗಿ ಹೇಳುತ್ತೇನೆ. ಯಾರೋ ಅರಮನೆಯನ್ನು ದರೋಡೆ ಮಾಡುವವರಿದ್ದಾರೆ" ಭಾಸ್ಕರ ಪೀಠಿಕಿಯಿಲ್ಲದೆ ಹೇಳಿದ.
ಇನ್ಸ್‌ಪೆಕ್ಟರ್ ಮುಖದಲ್ಲಿ ಕಿರುನಗೆ ಕಾಣಿಸುತ್ತಿತ್ತು "ಪ್ರೊಫೆಸರ್, ಅದು ಸಾಧ್ಯವಿಲ್ಲ. ಹಗಲಲ್ಲಿ ಗಾರ್ಡ್‌ಗಳು ಸುತ್ತಲೂ ಇರುತ್ತಾರೆ, ರಾತ್ರಿಯಿಡೀ ಪಟ್ರೋಲ್ ಮಾಡುತ್ತೇವೆ. ಅರಮನೆ ಸುರಕ್ಷಿತವಾಗಿದೆಯೆಂದು ನಿಮಗೆ ಆಶ್ವಾಸನೆ ಕೊಡುತ್ತೇನೆ"
ಭಾಸ್ಕರನ ಮುಖ ಗಂಭೀರವಾಗಿತ್ತು "ನನಗದರಲ್ಲಿ ವಿಶ್ವಾಸವಿಲ್ಲ, ಆದರೆ ಅರಮನೆಯಲ್ಲಿರುವ ಒಂದು ವಸ್ತು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟರೆ, ದರೋಡೆಯ ಸಾಧ್ಯತೆ ಇದೆಯೇ, ಇಲ್ಲವೇ ಹೇಳಬಲ್ಲೆ"
"ಆ 'ವಸ್ತು'ವಿನಲ್ಲಿ ಏನಿದೆಯೆನ್ನುವುದು ನಿಮ್ಮ ಅನಿಸಿಕೆ, ಪ್ರೊಫೆಸರ್?"
"ನಿಖರವಾಗಿ ಹೇಳಲಾಗುವುದಿಲ್ಲ, ಇನ್ಸ್‌ಪೆಕ್ಟರ್. ಆದರೆ ಇಡೀ ವಿಶ್ವವನ್ನೇ ಅಲುಗಾಡಿಸುವ ಮಾಹಿತಿ ಇರಬಹುದು"
"ವಿಶ್ವವನ್ನಲುಗಾಡಿಸುವ ಮಾಹಿತಿಯುಳ್ಳ ಅನಾಮಧೇಯ ವಸ್ತುವಿನ ಕಾರಣ ಅರಮನೆಯಲ್ಲಿ ದರೋಡೆಯಾಗಲಿದೆ, ಹೌದಾ?" ಇನ್ಸ್‌ಪೆಕ್ಟರ್ ಮುಖದಲ್ಲಿ ಅಪನಂಬಿಕೆಯಿತ್ತು. "ಆದರೆ ನಿಮಗೆ ಆ ವಸ್ತುವನ್ನು ಪರೀಕ್ಷಿಸುವ ಅವಕಾಶ ಕೊಡಲು ನನಗೆ ಅಧಿಕಾರವಿಲ್ಲ. ಅದಕ್ಕೆ ಪ್ಯಾಲೆಸ್ ಟ್ರಸ್ಟೊಂದಿಗೆ..."
"ಥ್ಯಾಂಕ್ಸ್, ಇನ್ಸ್‌ಪೆಕ್ಟರ್. ನಾವಿನ್ನು ಬರುತ್ತೇವೆ, ನಮಸ್ಕಾರ" ಎನ್ನುತ್ತ ಭಾಸ್ಕರ ಎದ್ದು ಹೊರಟ.
*****
ಭಾಸ್ಕರ ಹಾಗು ಉಜ್ವಲಾ ಪ್ರವೇಶ-ಟಿಕೆಟ್ ಖರೀದಿಸಿ ಅರಮನೆಯ ಸಂಚಾರ ಮಾಡುತ್ತಾ ಗೊಂಬೆ-ತೊಟ್ಟಿಯನ್ನು ಹಾಯ್ದು ಆನೆ-ದ್ವಾರದ ಮುಂದೆ ಬಂದು ನಿಂತರು. ಗಂಡುಭೇರುಂಡದ ಚಿಹ್ನೆಯನ್ನು ಹೊಂದಿದ್ದ ಇದು ಅರಮನೆಯ ಹೆಬ್ಬಾಗಿಲು. ಬಾಗಿಲೊಳಗಿದ್ದ ಪ್ರಾಕಾರವನ್ನು ಸುತ್ತಿ ಅಷ್ಟಕೋನಾಕಾರದ ಕಲ್ಯಾಣ ಮಂಟಪಕ್ಕೆ ಹೋದರು. ಕಲ್ಯಾಣ ಮಂಟಪದಿಂದ ಮೆಟ್ಟಿಲುಗಳನ್ನೇರಿ ಆನೆ ದಂತದ ಅಲಂಕಾರವನ್ನು ಕೆತ್ತಿ ಕೂರಿಸಿದ ಬೀಟೆ ಮರದ ಬಾಗಿಲನ್ನು ಹಾಯ್ದು ಅಂಬಾವಿಲಾಸಕ್ಕೆ ಬಂದರು. ನಂತರ ವಿಶಾಲವಾದ ದಿವಾನ್-ಏ-ಆಮ್ ದರ್ಬಾರ್ ದಾಟಿ ಪುನಃ ಮೆಟ್ಟಿಲನ್ನೇರಿ ಆಯುಧಶಾಲೆಯನ್ನು ತಲುಪಿದರು. ಉದ್ದಕ್ಕೂ ಒಂದೇ ಸಮನೆ ವರ್ಣನೆ ಒದರುತ್ತಿದ್ದ ಗೈಡ್ ಒಬ್ಬ ಹೇಳುತ್ತಿದ್ದ "ಈ ಆಯುಧಶಾಲೆ ವಿಶಿಷ್ಟವಾದದ್ದು. ಇಲ್ಲಿ ಹದಿನಾಲ್ಕನೇ ಶತಮಾನದಿಂದ ಉಪಯೋಗಿಸಲ್ಪಟ್ಟ ಶಸ್ತ್ರಾಸ್ತ್ರ-ಕವಚಗಳನ್ನು ಕಾಣಬಹುದು. ಇಗೋ ಇದು ನೋಡಿ ವ್ಯಾಘ್ರಾಂಖ, ಇದು ವಜ್ರಮುಷ್ಠಿ-ಕಂಠೀರವ ನರಸರಾಜ ಒಡೆಯರು ಉಪಯೋಗಿಸಿದ ಕತ್ತಿ. ಒಟ್ಟು ೭೨೫ ಆಕ್ರಮಣ-ಆತ್ಮರಕ್ಷಣೆಯ ಆಯುಧಗಳಿವೆ. ಹಳೆ ಕಾಲದ ಮುದ್ಗರ, ಸುರಾಗಿ, ಜಾಂಬಿಯ, ಭರ್ಜಿಗಳನ್ನೂ ಇಲ್ಲಿ..."
ಭಾಸ್ಕರ ಒಂದು ಬೀಗ ಹಾಕಿದ್ದ ಕೋಣೆಯ ಬಾಗಿಲಿಗೆ ಹೋಗಿ ಚಿಂತಾಮಗ್ನನಾಗಿ ನಿಂತಿದ್ದ. "ದಸರಾ ಮೆರವಣಿಗೆಯಲ್ಲಿ ಬಳಸುವ ಬಂಗಾರದ ರಾಜ-ಸಿಂಹಾಸನ ಈ ಕೋಣೆಯಲ್ಲಿ ಇರುತ್ತದೆ" ಭಾಸ್ಕರ ನಿಂತ ಬಾಗಿನನ್ನು ತೋರಿಸುತ್ತ ಗೈಡ್ ಹೇಳಿದ. "ಮೈಸೂರಿನ ರಾಜ್ಯ-ಲಾಂಛನ, ಇತರ ಪತಾಕೆಗಳನ್ನೂ ಇಲ್ಲಿಯೇ ಇರಿಸಿರುತ್ತಾರೆ. ಮುಂದೆ ದೇವಾಲಯಗಳಿಗೆ ಹೋಗೋಣ". ಜನರೆಲ್ಲರೂ ಅವನ ಹಿಂದೆ ಹೊರಟರು. ಭಾಸ್ಕರ, ಉಜ್ವಲಾ ಹಿಂದುಳಿದರು.
ಮುಚ್ಚಿದ್ದ ಬಾಗಿಲನ್ನು ನೋಡಿ, ನಂತರ ಉಜ್ವಲಾಳನ್ನು ನೋಡಿ ಹೌದೆಂದು ಭಾಸ್ಕರ ಕತ್ತು ಕುಲುಕಿದ. ಉಜ್ವಲಾ ಕಣ್ಣಿನಲ್ಲೇ ತನಗೆ ಅರ್ಥವಾಗಿರುವುದೆಂದು ತೋರಿಸಿದಳು. ಭಾಸ್ಕರ ಬೆರಳುಮಾಡಿ ಆಚೆ ತೋರಿಸಿದಾಗ ಇಬ್ಬರೂ ಅರಮನೆಯಿಂದ ಹೊರಬಿದ್ದರು. ಕೂಡಲೇ ಉಜ್ವಲಾ ತಲೆ ಬಗ್ಗಿಸಿಕೊಂಡು ಭಾಸ್ಕರನ ಕೈ ಹಿಡಿದು ಎಳೆದುಕೊಂಡು ಸರ-ಸರನೆ ಓಡತೊಡಗಿದಳು.
"ಯಾ..ಏ...??" ಭಾಸ್ಕರ ಎನ್ನುವಷ್ಟರಲ್ಲಿ ಅರಮನೆಯ ಪ್ರವೇಶ-ದ್ವಾರದ ಹೊರಗಿದ್ದರು.
"ನಾಗೇಶನ್! ಒಳಗೆ!" ಉಜ್ವಲಾ ಹೇಳಿದಾಗ ಭಾಸ್ಕರನಿಗೆ ಗಾಬರಿಯಾಯಿತು.
"ಹಾಗಾದರೆ ಅವನು ಇವತ್ತೇ...?"
"ಹೌದು ಪ್ರೊಫೆಸರ್..." ಉಜ್ವಲಾ ಹೇಳಿದಳು
"ಹಾಗಾದರೆ ಒಂದೇ ದಾರಿ. ಹೇಗಾದರೂ ಆಯುಧಶಾಲೆಗೆ ಹೋಗಿ ಆ ಕೋಣೆಯ ಬಾಗಿಲಿನ ಬೀಗ ತೆಗೆದು ಒಳಗೆ ನೋಡಬೇಕು" ಭಾಸ್ಕರ ಧೃಡವಾಗಿ ನಿರ್ಧರಿಸಿದ.
*****
ಅಂದು ಭಾನುವಾರವಾಗಿದ್ದರಿಂದ ಸಂಜೆ ೭:೦೦ರಿಂದ ೮:೦೦ಘಂಟೆಯವರೆಗು ಅರಮನೆಯನ್ನು ಇಲೆಕ್ಟ್ರಿಕ್ ದೀಪಗಳಿಂದ ಪ್ರಕಾಶಿಸಲಾಗಿತ್ತು. ಭಾಸ್ಕರ ಹಾಗು ಉಜ್ವಲಾ ಮುಖ್ಯದ್ವಾರವನ್ನು ಪ್ರವೇಶಿಸಿ ಆ ಸುಂದರ ದೃಷ್ಯವನ್ನು ನೋಡುತ್ತ ಅರಮನೆಯ ಅಂಗಳದಲ್ಲಿ ಕುಳಿತರು.
"ಆ ಲಾಂಛನ ಈ ಹೊಸ ಅರಮನೆಗೆ ಹೇಗೆ ಬಂದಿರಬಹುದು? ಇದು ಇತ್ತೀಚೆಗೆ ಕಟ್ಟಿದ ಅರಮನೆಯಲ್ಲವೆ?" ಉಜ್ವಲಾ ಕೇಳಿದಳು.
"ಹೌದು, ಇಲ್ಲಿದ್ದ ಹಳೆಯ ಅರಮನೆ ೧೮೯೭ರಲ್ಲಿ ಸುಟ್ಟು ಭಸ್ಮವಾಯಿತು. ಅದೇ ಸ್ಥಳದಲ್ಲಿ ಈ ಹೊಸ ಅರಮನೆಯನ್ನು ೧೯೧೨ರಲ್ಲಿ ಕಟ್ಟಲಾಯಿತು. ಹಳೆ ಅರಮನೆಯಲ್ಲಿದ್ದ ರಾಜ-ಸಿಂಹಾಸನ, ರಾಜ್ಯ-ಲಾಂಛನ-ಪತಾಕೆಗಳನ್ನು ಇದ್ದಂತೆಯೇ ಹೊಸ ಅರಮನೆಗೆ ಸಾಗಿಸಲಾಯಿತು. ಒಂದು ರೀತಿ ಮೂಢನಂಬಿಕೆಯೆಂದುಕೋ-ಮೊದಲಿದ್ದಂತೆಯೇ ಕಾಪಾಡಿಕೊಂಡು ಬಂದರೆ ಅದೃಷ್ಟದೇವಿ ಜೊತೆಗೇ ಬರುವಳೆಂದು. ಆ ಸಮಯದಲ್ಲಿ ವಿಜಯನಗರದ ವರಾಹ ಲಾಂಛನವೂ ಉಳಿದ ಪತಾಕೆಗಳೊಂದಿಗೆ ಬಂದಿರಲೇಬೇಕು. ಒಡೆಯ ವಂಶದ ಅರಸರು ವರಾಹ ಸ್ವಾಮಿಯ ಭಕ್ತರು. ಹಾಗಾಗಿ ಆ ವರಾಹ ಲಾಂಛನವನ್ನು ಬಿಸಾಡಿರಲಾರರು. ಮೇಲಾಗಿ ಮೈಸೂರಿನ ಪಾರಂಪರಿಕ ಪತಾಕೆಗಳಲ್ಲಿ ಒಂದು ವರಾಹ ಲಾಂಛನವೂ ಇದೆಯೆಂದು ಮೂಲ ಸೂತ್ರಗಳಿಂದ ನನಗೆ ತಿಳಿದು ಬಂದಿದೆ. ಮೈಸೂರಿನ ಲಾಂಛನ ಗಂಡುಭೇರುಂಡ, ಹಾಗಾಗಿ ವರಾಹ ಲಾಂಛನವೆಂದರೆ ನರಸಪ್ಪನಾಯಕ ತಂದ ವಿಜಯನಗರದ ಲಾಂಛನವೇ ಆಗಿರಬೇಕು" ಭಾಸ್ಕರ ವಿವರಿಸಿದ. "ರಾಜ ಸಿಂಹಾಸನ, ಪತಾಕೆಗಳು ಆ ಕೋಣೆಯಲ್ಲಿದ್ದರೆ ನಮಗೆ ಬೇಕಾಗಿರುವ ವಸ್ತುವೂ ಅಲ್ಲೇ ಇರಬೇಕು"
ನೋಡುತ್ತಿದ್ದಂತೆ ಘಂಟೆ ೮:೦೦ಆಯಿತು. ಅಂಗಳದಲ್ಲಿ ಕುಳಿತು ನೋಡುತ್ತಿದ್ದ ಜನ ಒಬ್ಬೊಬ್ಬರಾಗಿ ಹೊರಗೆ ಹೋದರು. ಭಾಸ್ಕರ ಹಾಗು ಉಜ್ವಲಾ ಬಳಿಯಿದ್ದ ಬೆಂಚುಗಳ ಕೆಳಗೆ ಅವಿತು ಕುಳಿತಿದ್ದರು. ೯:೦೦ಘಂಟೆ ಹೊಡೆದ ನಂತರ ಅರಮನೆ ಸೆಕ್ಯೂರಿಟಿ-ಗಾರ್ಡ್ಸ್ ಬಂದು ಅರಮನೆಯ ಅಂಗಳದಲ್ಲಿ ಕಾಟಾಚಾರಕ್ಕೊಮ್ಮೆ ಪಹರೆ ನಡೆಸಿ ಹೊರಟುಹೋದರು. ೧೦:೦೦ಘಂಟೆಗೆ ಪೋಲೀಸ್ ಸಿಬ್ಬಂದಿಗಳು ಬಂದು ಪಹರೆ ಕೊಟ್ಟು ಹೋದರು. ಯಾರೂ ಅವಿತುಕೊಂಡಿದ್ದ ಭಾಸ್ಕರ, ಉಜ್ವಲಾರನ್ನು ಗಮನಿಸಲಿಲ್ಲ. ೧೧:೦೦ಘಂಟೆಗೆ ಎಲ್ಲವೂ ಶಾಂತವಾಗಿತ್ತು. ಭಾಸ್ಕರ ಇನ್ನೂ ಸ್ವಲ್ಪ ಹೊತ್ತು ಅಲುಗಾಡಲಿಲ್ಲ. ಕೊನೆಗೆ ಇಬ್ಬರೂ ಹೊರಗೆ ಬಂದರು. ಭಾಸ್ಕರ "ಯೋಚಿಸದೆ ನಾನು ನಿನ್ನನ್ನು ಈ ಪಿತೂರಿಗೆ ಎಳೆದಿದ್ದೀನಿ. ಆದರೆ ನೋ ಮೋರ್. ನೀನು ಹೊರಗೇ ಇರು, ನಾನು ಒಳಗೆ ಹೋಗಿ ಹುಡುಕುವೆ. ನಾನೇನಾದರೂ ಸಿಕ್ಕಿಹಾಕಿಕೊಂಡರೆ ನೀನು ಅರಮನೆ ನೋಡಲು ಬಂದು ನಿದ್ದೆ ಮಾಡಿಬಿಟ್ಟಿದ್ದೆ ಎಂದು ಹೇಳಿ ತಪ್ಪಿಸಿಕೊ. ಉದ್ದಕ್ಕೂ ಸೆಲ್ ಫೋನ್ ಮೇಲೆ ಕಾಂಟ್ಯಕ್ಟ್‍ನಲ್ಲಿರೋಣ" ಎಂದು ಹೇಳಿ ಅರಮನೆಯೊಳಗೆ ಹೊರಟ.
ಗೊಂಬೆ-ತೊಟ್ಟಿಯನ್ನು ಹಾಯ್ದು ಆನೆ-ದ್ವಾರಕ್ಕೆ ಬಂದು ನಿಂತ. ಮುಖ್ಯದ್ವಾರದ ಪಕ್ಕದಲ್ಲಿದ್ದ ಒಂದು ಸಣ್ಣ ಬಾಗಿಲಿಗೆ ಬೀಗಗಳಿರಲಿಲ್ಲ. ಅದನ್ನು ನಿಧಾನವಾಗಿ ತೆಗೆದು ಅರಮನೆಯೊಳಗೆ ಹೊಕ್ಕ. ಸುತ್ತಲು ನರಪಿಳ್ಳೆಯೂ ಇಲ್ಲದಿರುವುದು ವಿಚಿತ್ರವೆನಿಸಿತು. ಬೆಳಗ್ಗೆ ಹೋದ ದಾರಿಯನ್ನೇ ಹಿಡಿದು ಕಲ್ಯಾಣ ಮಂಟಪ ದಾಟಿ ಮೆಟ್ಟಿಲುಗಳನ್ನೇರಿ ಅಂಬಾವಿಲಾಸ ಹಾಗು ದಿವಾನ್-ಏ-ಆಮ್ ದರ್ಬಾರುಗಳನ್ನು ಹಾಯ್ದು ಪುನಃ ಮೆಟ್ಟಿಲನ್ನೇರಿ ಆಯುಧಶಾಲೆಯನ್ನು ಪ್ರವೇಶಿಸಿ, ಬೀಗ ಹಾಕಿದ್ದ ಕೋಣೆಯ ಮುಂದೆ ಬಂದು ನಿಂತ.
"ಓ.ಕೆ. ಲಾಕ್ಡ್-ರೂಂ ಮುಂದೆ ಬಂದಿದ್ದೇನೆ. ಈಗ ಬೀಗ ತೆಗೆಯುವುದು ಹೇಗೆಂದು ನೋಡಬೇಕು" ಕಿವಿಗೆ ಸಿಕ್ಕಿಸಿಕೊಂಡಿದ್ದ ತನ್ನ ಮೋಬೈಲಿನ ಹ್ಯಾಂಡ್ಸ್-ಫ್ರೀ ಮೈಕ್ರೋಫೋನಿನೊಳಕ್ಕೆ ಹೇಳಿದ.
"ಗಾಟ್ ಇಟ್, ಪ್ರೊಫೆಸರ್" ಹೊರಗಿದ್ದ ಉಜ್ವಲಾಳ ಧ್ವನಿ ಭಾಸ್ಕರನ ಕಿವಿಯಲ್ಲಿ ಮೊಳಗಿತು.
ಭಾಸ್ಕರ ಬೀಗವನ್ನು ಒಡೆಯಲು ಯಾವುದಾದರೂ ಆಯುಧವನ್ನು ಹುಡುಕತೊಡಗಿದ. "ಆಯುಧಶಾಲೆಯಲ್ಲಿ ಒಂದು ಬೀಗ ಒಡೆಯಲು ಆಯುಧಗಳು ಸಿಗುವುದಿಲ್ಲ!" ಎಂದು ಗೊಣಗಿಕೊಂಡ. ಕೆಲ ನಿಮಿಷಗಳು ಮೌನದಲ್ಲೇ ಕಳೆದವು. ಭಾಸ್ಕರ ತೆಳ್ಳನೆಯ ತಂತಿಯೊಂದನ್ನು ಇನ್ನೂ ಹುಡುಕುತ್ತಲೇ ಇದ್ದ.
ಉಜ್ವಲಾಳ ತಾತುರಿಯ ಧ್ವನಿ ಕಿವಿಯಲ್ಲಿ ಬಂತು "ಪ್ರೊಫೆಸರ್, ಯಾರೋ ಬಾಗಿಲ ಒಳಗೆ ಬರುತಿದ್ದಾರೆ. ಪೋಲೀಸರ ಹಾಗೆ ಕಾಣಿಸುತ್ತಿಲ್ಲ. ಬಹುಶಃ ನಾಗೇಶನ್ ಕಡೆಯವರಿರಬಹುದು"
ಅನಿರ್ದಿಷ್ಟ ಶಬ್ದ ಮಾಡುತ್ತ, ಭಾಸ್ಕರ ಸುತ್ತ ನೋಡಿದಾಗ ಅವನ ಕಣ್ಣು ಬಿದ್ದದ್ದು ಮುದ್ಗರವೆಂಬ ಗದೆಯೊಂದರಮೇಲೆ. ಭಾರವಾಗಿದ್ದ ಗದೆಯನ್ನು ಎತ್ತಿಕೊಂಡು ಹೋಗಿ ಆ ಬಾಗಿಲ ಮೇಲೆ ಬಲವಾಗಿ ಪ್ರಹಾರ ಮಾಡಿದ. ಎರಡು ಏಟುಗಳಿಗೆ ಬಾಗಿಲು ಮುರಿಯಿತು.
ಗುಪ್ತ ಕೋಣೆಯಳಹೊಕ್ಕ ಭಾಸ್ಕರನ ದೃಷ್ಟಿ ಮೊದಲು ಬಿದ್ದದ್ದು ಗೋಡೆಗೆ ಒರಗಿಸಿಟ್ಟ ಪತಾಕೆಗಳ ಮೇಲೆ. ಕೋಣೆಯಲ್ಲಿದ್ದ ಏಕೈಕ ವರಾಹ ಲಾಂಛನ ಮೂಲೆಯಲ್ಲಿತು. ಎರಡು ಅಡಿ ಅಡ್ಡಳತೆಯಿದ್ದ ವೃತ್ತಾಕಾರದಲ್ಲಿದ್ದ ಅದರ ಬಲಭಾಗದಲ್ಲೊಂದು ವರಾಹವಿತ್ತು, ವರಾಹದ ತಲೆಯ ಮೇಲೊಂದು ಅರ್ಧ-ಚಂದ್ರ, ಎಡಭಾಗಲ್ಲಿ ಒಂದು ಕತ್ತಿ, ಅದರ ಪಕ್ಕದಲ್ಲೊಂದು ಸಣ್ಣ ಗುಂಡಿ. ಭಾಸ್ಕರ ಲಾಂಛನವನ್ನು ಕೈಗೆತ್ತಿಕೊಂಡು ಅದರ ಮೇಲಿನ ಧೂಳನ್ನು ಒರೆಸುತ್ತಿದ್ದಾಗ ಅವನ ಕೈಬೆರಳು ಲಾಂಛನದಮೇಲಿದ್ದ ಗುಂಡಿಯನ್ನು ಒತ್ತಿತು. ಒಮ್ಮೆಲೆ ಕತ್ತಿ ಜಾರಿ ಕೆಳಕ್ಕೆ ಬಿತ್ತು. ಕತ್ತಿ ಖಾಲಿ ಮಾಡಿದ್ದ ಕಂದರದೊಳಗೆ ರಥವೊಂದರ ಚಿತ್ರ ಕಾಣಿಸಿತು. ದಿಟ್ಟಿಸಿ ನೋಡಿದಾಗ ಇದು ಹಂಪೆಯ ಕಲ್ಲಿನ ರಥದ ಚಿತ್ರವೆಂದು ಅರ್ಥವಾಯಿತು.
"ಪ್ರೊಫೆಸರ್, ಪಹರೆ ಕೊಡುತ್ತಿದ್ದ ಗಾರ್ಡ್‍ಗಳು ಎಚ್ಚೆತ್ತುಕೊಂಡಿದ್ದಾರೆ, ಅವರೂ ಅರಮನೆಯೊಳಕ್ಕೆ ನುಗ್ಗುತ್ತಿದ್ದಾರೆ" ಪುನಃ ಆತಂಕದಿಂದ ಕೂಡಿದ ಉಜ್ವಲಾಳ ಧ್ವನಿ ಭಾಸ್ಕರನ ಕಿವಿಯಲ್ಲಿ ಕೂಗಿತು. ಅದೇ ಸಮಯಕ್ಕೆ ಸರಿಯಾಗಿ ನಾಲ್ಕೈದು ಜನರು ಓಡುತ್ತ ಸಮೀಪಿಸುತ್ತಿದ್ದ ಶಬ್ದವೂ ಕೇಳಿಸಿತು. ನೆಲಕ್ಕೆ ಬಿದ್ದಿದ್ದ ಕತ್ತಿಯನ್ನೂ ಎತ್ತಿಕೊಂಡು ತನ್ನ ಕೋಟಿನ ಜೇಬಿನಲ್ಲಿರಿಸಿಕೊಂಡು, ಭಾಸ್ಕರ ಅಲ್ಲಿನಿಂದ ಓಡ ತೊಡಗಿದ. ಕೆಳಗೆ ಕಲ್ಯಾಣ ಮಂಟಪದಲ್ಲಿ ಗಾರ್ಡ್‍ಗಳು ನಾಗೇಶನ್‌ನ ಗೂಂಡಾಗಳೊಡನೆ ವ್ಯಸ್ಥರಾಗಿದ್ದರು. ಭಾಸ್ಕರ ಆನೆ-ದ್ವಾರವನ್ನು ದಾಟಿ ಓಡುತ್ತಿದ್ದಾಗ ಇನ್ಸ್‌ಪೆಕ್ಟರ್ ಮಹೇಶ್ವರ ಎದುರಿನಿಂದ ಬಂದ.
"ಪ್ರೊಫೆಸರ್..?!"
ಭಾಸ್ಕರ ನಿಷ್ಕ್ರಿಯನಾಗಿ ನಿಂತ. ಇನ್ಸ್‌ಪೆಕ್ಟರ್ ಒಳಗಿನಿಂದ ಬರುತ್ತಿದ್ದ ಕಾಳಗದ ಶಬ್ದವನ್ನು ತಪಾಸಣೆ ಮಾಡುವುದೋ, ಭಾಸ್ಕರನನ್ನು ಹಿಡಿಯುವುದೋ ನಿರ್ಧರಿಸಲಾಗದೆ ಹಿಂದುಮುಂದೆ ನೋಡುತ್ತ ನಿಂತ. ಒಳಗಿನಿಂದ ಗುಂಡು ಹಾರಿಸಿದ ಶಬ್ದ ಬಂದಿತು. ಬರಿಗೈ ಭಾಸ್ಕರನ ಮೇಲೆ ಒಳಗಿನ ಯುದ್ಧ ಗೆದ್ದಿತು. ಇನ್ಸ್ಪೆಕ್ಟರ್ ಏನು ನಡೆಯುತ್ತಿದೆ ನೋಡಲು ಒಳಗೆ ಹೋದ. ಅವಕಾಶವನ್ನು ಉಪಯೋಗಿಸಿಕೊಂಡು ಭಾಸ್ಕರ ಉಜ್ವಲಾಳ ಜೊತೆಗೂಡಿ ಇಬ್ಬರೂ ಅರಮನೆಯ ಆವರಣವನ್ನು ಬಿಟ್ಟು ಪರಾರಿಯಾದರು.
*****
ಭಾಸ್ಕರ ಮತ್ತು ಉಜ್ವಲಾ ಹೋಟಲ್‌ಗೆ ಹಿಂತಿರುಗುವ ಹೊತ್ತಿಗೆ ಸುಮಾರು ೩:೦೦ಘಂಟೆಯಾಗಿತ್ತು. ತಮ್ಮ ಸಾಮಾನು ಎತ್ತಿಕೊಂಡು ಹೋಟಲ್ ಖಾಲಿ ಮಾಡಿದಾಗ ೫:೦೦ಘಂಟೆ ಹೊಡೆದಿತ್ತು. ಹೋಟಲ್ ಕೋಣೆಯಿಂದಲೇ ಫೋನ್ ಮಾಡಿ ಭಾಸ್ಕರ ಟ್ಯಾಕ್ಸಿ ಗೊತ್ತು ಮಾಡಿಕೊಂಡಿದ್ದ. ಟ್ಯಾಕ್ಸಿ ಹತ್ತಿ ಇಬ್ಬರೂ ಪ್ರಯಾಣ ಆರಂಭ ಮಾಡಿದರು.
ಸುಮಾರು ಹೊತ್ತಿನ ಮೌನದ ಬಳಿಕ ಉಜ್ವಲಾಳ ತಾಳ್ಮೆ ಮೀರಿತ್ತು. "ಎಲ್ಲಿಗೆ ಹೊರಟಿದ್ದೇವೆ, ಪ್ರೊಫೆಸರ್? ಅರಮನೆಯಿಂದ ಬಂದಾಗಿನಿಂದ ಒಂದೂ ಮಾತನಾಡಿಲ್ಲ ನೀವು"
"ಸಾರಿ! ಯೋಚನೆ ಮಾಡುತ್ತಿದ್ದೆ. ಈ ಚಿತ್ರಬಂಧದ ಅನೇಕ ತುಣುಕುಗಳನ್ನು ಜೋಡಿಸಿ ನೋಡುತ್ತಿದ್ದೆ. ನಾವೀಗ ಮನೆಗೆ ಹಿಂತಿರುಗುತ್ತಿದ್ದೇವೆ" ಭಾಸ್ಕರ ದೂರದಲ್ಲೆಲ್ಲೋ ದೃಷ್ಟಿ ತೇಲಿಸಿ ಮೆಲ್ಲಗೆ ಮಾತನಾಡುತ್ತಿದ್ದ.
"ಮನೆಗೆ? ಅಂದರೆ..?"
"ವಾಪಸ್ ಹಂಪೆಗೆ. ನಾನು ಯೋಚಿಸುತ್ತಿರುವುದು ನಿಜವೇ ಆಗಿದ್ದರೆ, ಈ ಚಿತ್ರದ ಉಳಿದ ಭಾಗ ಹಂಪೆಯಲ್ಲೇ ಇದೆ"
"ಅರಮನೆಯಲ್ಲಿ ಏನಾಯಿತು? ಅದು ತಿಳಿಯದೆ ನಿಮ್ಮ ಈ ಚಿತ್ರ ನನಗೆ ಕಾಣಿಸುತ್ತಲೇ ಇಲ್ಲ"
"ಓಹ್! ಅರಮನೆಯ ಆ ಕೋಣೆಯಲ್ಲಿ ಸ್ವಲ್ಪ ಹುಡುಕಿದ ನಂತರ ಒಂದು ವರಾಹ ಎಂಬ್ಲಮ್ ಸಿಕ್ಕಿತು. ಅಲಿದ್ದದ್ದು ಒಂದೇ ಅಂತಹ ಲಾಂಛನ. ಅದರ ಆಕಾರ ನೋಡಿದರೆ ೧೪-೧೫ನೇ ಶತಮಾನದಲ್ಲಿ ಮಾಡಿದ್ದೆಂದು ತೋರುತ್ತಿತ್ತು. ಹಾಗಾಗಿ ನರಸಪ್ಪನಾಯಕ ತಂದ ಲಾಂಛನ ಅದೇ ಆಗಿರಬೇಕು. ಜಸ್ಟ್ ಬೈ ಪ್ಲೈನ್ ಲಕ್-ನಾನು ಧೂಳು ಒರೆಸುತ್ತಿದ್ದಾಗ ನನ್ನ ಕೈ ಲಾಂಛನದ ಮೇಲಿದ್ದ ಒಂದು ಗುಂಡಿಯನ್ನು ತಾಕಿತು. ಆಗ ಲಾಂಛನದಿಂದ ಕತ್ತಿಯೊಂದು ಕಳಚಿ ಕೆಳಗೆ ಬಿತ್ತು. ಆ ಕತ್ತಿಯ ಹಿಂದೆ ಕಲ್ಲಿನ ರಥದ ಒಂದು ಚಿತ್ರವಿತ್ತು. ಆಗಿನ ಕಾಲದ ರೂಢಿಯಾನುಸಾರವಾಗಿ ಅದರ ಅರ್ಥ ಕಲ್ಲಿನ ರಥವೇ ಬೀಗ, ಈ ಕತ್ತಿಯೇ ಅದರ ಬೀಗದಕೈ ಎಂದು" ಎನ್ನುತ್ತ ತಾನು ಅರಮನೆಯಿಂದ ತಂದ ಕತ್ತಿಯನ್ನು ಕರ್ಚೀಫಿನಲ್ಲಿ ಸುತ್ತಿದಂತೆ ತನ್ನ ಕೋಟ್ ಜೇಬಿನಿಂದ ಹೊರತೆಗೆದ.
"ವಾವ್!" ಉಜ್ವಲಾ ಕತ್ತಿಯನ್ನು ಕೈಗೆತ್ತಿಕೊಂಡು ನಾಜೂಕಾಗಿ ಪರೀಕ್ಷಿಸಿದಳು.
"ಈ ಬೇಗದಕೈಯಿನಿಂದ ಆ ಬೀಗವನ್ನು ಹೇಗೆ ತೆಗೆಯುವುದು ಅಲ್ಲಿ ಹೋಗಿಯೇ ನೋಡಬೇಕು. ಅದಕ್ಕೆ ಅಲ್ಲಿಗೆ ಹೊರಟಿದ್ದೇವೆ" ಭಾಸ್ಕರ ಮುಗಿಸಿದ.
"ಉಜ್ವಲಾ, ನೀನು ನನ್ನ ಜೊತೆ ಬರುವ ಅಗತ್ಯವಿಲ್ಲ. ಪರಿಸ್ಥಿತಿ ಬಹಳ ಅಪಾಯಕಾರಿಯಾಗುತ್ತಿದೆ" ಭಾಸ್ಕರ ತನ್ನ ಕಳವಳ ಹೇಳಿಕೊಂಡ.
"ಪ್ರೊಫೆಸರ್, ಐ ವುಡ್ ನಾಟ್ ಮಿಸ್ ಇಟ್ ಫಾರ್ ಎನಿಥಿಂಗ್. ಈ ದಾರಿ ಹಿಡಿದು ಹೊರಟಿದ್ದೀವಿ. ಎಲ್ಲಿ ಮುಗಿಯುತ್ತದೆಯೋ ನೋಡಿಯೇ ಬಿಡೋಣ"
*****
ಮಧ್ಯಾಹ್ನ ೧:೦೦ಘಂಟೆಗೇ ಹಂಪೆಯನ್ನು ತಲುಪಿದರೂ, ಪ್ರವಾಸಿಗಳಿರುವ ಸಮಯದಲ್ಲಿ ಏನೂ ಮಾಡುವಂತಿರಲಿಲ್ಲ. ಭಾಸ್ಕರ ಹಾಗು ಉಜ್ವಲಾ ಸೂರ್ಯ ಬಾನಿನಿಂದ ಇಳಿದ ಮೇಲೆ ವಿಜಯವಿಠ್ಠಲನ ದೇವಾಲಯದ ಆವರಣಕ್ಕೆ ಹೋಗಿ ಪ್ರಾಕಾರದಲ್ಲಿ ಕಲ್ಲಿನ ರಥವನ್ನು ನೋಡುತ್ತ ಕುಳಿತರು.
ಹಂಪೆಯ ಕಲ್ಲಿನ ರಥದ ವೈಭವ ಹೇಳಿಯೇ ತೀರದು! ಸುತ್ತಲೂ ಹಚ್ಚಿದ್ದ ಇಲೆಕ್ಟ್ರಿಕ್ ದೀಪಗಳು ರಥವನ್ನು ಬೆಳಗುತ್ತಿದ್ದವು. ದೇವಾಲಯದ ರಥದ ಕಲ್ಲಿನ ಅಚಲ ಸ್ವರೂಪ, ಸುಮಾರು ೨೨ ಅಡಿ ಎತ್ತರವಿತ್ತು. ಕೆಳಗಿನ ಭಾಗದಲ್ಲಿ ಕಲ್ಲಿನ ಇರಚಿಗೆ ಸಿಕ್ಕಿಸಿದ್ದ ನಾಲ್ಕು ಸುಂದರ ಕೆತ್ತನೆಗಳುಳ್ಳ ಕಲ್ಲಿನ ಚಕ್ರಗಳು. ಮಧ್ಯ ಭಾಗದಲ್ಲಿ ಗರುಡನ ಗುಡಿ. ಅದರ ಮೇಲೆ ಛಾವಣಿ. ರಥವನ್ನು ಎಳೆಯುತ್ತ ಸ್ತಬ್ಧವಾದಂತೆ ನಿಂತ ಕಲ್ಲಿನ ಆನೆಗಳು. ಮೇಲಿನಿಂದ ಕೆಳಗಿನವರೆಗು ಸೂಕ್ಷ್ಮ ಕೆತ್ತನೆಗಳು. ಕತ್ತಿ-ಬೀಗದಕೈಗೆ ಬೀಗವನ್ನು ಅಡಗಿಸಲು ಅತಿಯೋಗ್ಯ ಸ್ಮಾರಕ.
ರಾತ್ರಿ ೧೦:೦೦ಘಂಟೆಯ ಹೊತ್ತಿಗೆ ಕಲ್ಲಿನ ರಥದ ಸುತ್ತಲು ಇದ್ದ ದೇಪಗಳನ್ನು ಆರಿಸಲಾಗಿತ್ತು. ವಿಜಯವಿಠ್ಠಲ ದೇವಾಲಯ ನರಪಿಳ್ಳೆಯೂ ಇಲ್ಲದ ನಿರ್ಜನ ಪ್ರದೇಶವಾಗಿತ್ತು. "ಲೆಟ್ಸ್ ಗೋ" ಎನ್ನುತ್ತ ಉಜ್ವಲಾ ಎದ್ದಾಗ ತನ್ನ ಲೋಕದಲ್ಲಿಯೇ ಮುಳುಗಿ ಹೋಗಿದ್ದ ಭಾಸ್ಕರ ಎಚ್ಚೆತ್ತುಕೊಂಡ.
ಇಬ್ಬರೂ ಶಕ್ತಿಶಾಲಿ ಟಾರ್ಚ್‍ಗಳನ್ನು ತಂದಿದ್ದರು. "ರೈಟ್!" ಎನ್ನುತ್ತ ಭಾಸ್ಕರ ಎದ್ದು ತನ್ನ ಟಾರ್ಚ್ ಹತ್ತಿಸಿದ. ಇಬ್ಬರೂ ಕಲ್ಲಿನ ರಥದ ಬಳಿ ಹೋದರು. "ನಾವು ಹುಡುಕುತ್ತಿರುವುದು ಆ ಕತ್ತಿಯನ್ನು ಕೂರಿಸಲಾಗುವಂತಹ ಗುಳಿಯನ್ನು. ಅಡ್ಡಕ್ಕಿರಬಹುದು, ಉದ್ದಕ್ಕಿರಬಹುದು ಇಲ್ಲವೇ ತಿವಿಯುವಂತಹ ತೂತವಿರಬಹುದು. ಜಾಗರೂಕವಾಗಿ ಪ್ರತಿಯೊಂದು ಇಂಚನ್ನೂ ಪರೀಕ್ಷೆ ಮಾಡಿನೋಡು. ಯಾವ ಸಣ್ಣ ರಂಧ್ರವನ್ನೂ ಬಿಡಬೇಡ. ನೀನು ಕೆಳಗಿನ ಭಾಗವನ್ನು ನೋಡು, ನಾನು ಮೇಲಿನ ಭಾಗವನ್ನು ನೋಡುತ್ತೇನೆ" ಭಾಸ್ಕರ ಆಜ್ಞೆ ಮಾಡಿ ರಥದ ಮೇಲುಪಾಯವನ್ನು ಹತ್ತಿದ.
ಇಬ್ಬರೂ ಹುಡುಕತೊಡಗಿದರು. ಟಾರ್ಚ್ ಜೊತೆಗೆ ತಿವಿದು ನೋಡಲು ಸಣ್ಣ ಸ್ಕ್ರೂ-ಡ್ರೈವರ್, ಕೆರೆಯಲು ಬ್ರಶ್‍ಗಳು, ಕುಟ್ಟಲು ಪುಟಾಣಿ ಸುತ್ತಿಗೆಗಳು ಹಿಡಿದು ಬಂದಿದ್ದರು. ಕೆಲನಿಮಿಷಗಳು ಕುಟ್ಟುವ, ಉಜ್ಜುವ, ಸಪ್ಪಳ ಬಿಟ್ಟರೆ ಬೇರೇನೂ ಶಬ್ದ ಬರುತ್ತಿರಲಿಲ್ಲ. ನಂತರ ಉಜ್ವಲಾ ಕೂಗಿದಳು "ಇದನ್ನು ನೋಡಿ, ಪ್ರೊಫೆಸರ್. ಇದೇನಾದರೂ ಇರಬಹುದೇ?"
ಭಾಸ್ಕರ ಕೆಳಗಿಳಿದು ಬಂದ. ಕಲ್ಲಿನಲ್ಲಿ ಬಿರುಕು ಬಿಟ್ಟಂತೆ ಸಣ್ಣ ರಂಧ್ರವೊಂದು ಕಾಣಿಸುತ್ತಿತ್ತು. ಭಾಸ್ಕರ ತನ್ನ ಸ್ಕ್ರೂ-ಡ್ರೈವರ್ ಅದರೊಳಗೆ ತಿವಿದ. ಅದು ಎರಡು-ಮೂರು ಇಂಚ್ ಒಳಗೆ ಹೋಗಿ ನಿಂತಿತು. ತಲೆಯಾಡಿಸುತ್ತ ಕತ್ತಿಯನ್ನು ತೆಗೆದು ಅದರೊಳಗೆ ಹಾಕಲು ಯತ್ನಿಸಿದ. ಕತ್ತಿ ತುದಿಯಲ್ಲಿಯೇ ಕಚ್ಚಿಕೊಂಡು ಒಳಗೆ ಹೋಗಲೇ ಇಲ್ಲ. "ಓಹ್, ವೆಲ್" ಎಂದುಕೊಂಡು ಪುನಃ ಮೇಲೆ ಹತ್ತಿದ. ಉಜ್ವಲಾ ಕೆಳಗೆ ಹುಡುಕಾಟ ಮುಂದುವರೆಸಿದಳು.
ಇದೇ ರೀತಿ ಎರಡು-ಮೂರು-ನಾಲ್ಕು ಘಂಟೆಗಳು ಕಳೆದವು. ಆಗಾಗ ಬೀಗದಕೈ ಸಿಕ್ಕಿಸಬಹುದಾದಂತಹ ರಂಧ್ರಗಳು ಸಿಗುತ್ತಿದ್ದವು ಆದರೆ ಯಾವುದೂ ಸಫಲವಾಗಲಿಲ್ಲ. ಕೊನೆಗೆ ಕಂಗೆಟ್ಟು ಬೇಸರದಿಂದ ಕೆಲಸ ನಿಲ್ಲಿಸಿದರು.
"ಬಹುಶಃ ನಾನು ಅರ್ಥಮಾಡಿಕೊಂಡಿದ್ದೇ ತಪ್ಪು-ಅ ಕತ್ತಿಗೂ, ಈ ರಥಕ್ಕೂ ಯಾವ ಸಂಬಂಧವೂ ಇಲ್ಲದಿರಬಹುದು. ಅಷ್ಟಾಗಿ ಇದೆಲ್ಲ ಬರೀ ಊಹೆಗಳ ಮೇಲೆ ಕಟ್ಟಿದ ಕಟ್ಟಡ! ನಿಧಿ ಇದ್ದರೆ, ಅದರ ಕ್ಲೂ ನರಸಪ್ಪನಾಯಕ ತೆಗೆದುಕೊಂಡು ಹೋಗಿದ್ದರೆ, ಆ ಸುಳಿವು ನನಗೆ ಸಿಕ್ಕ ಲಾಂಛನವೇ ಆಗಿದ್ದರೆ, ಅದರಿಂದ ಬಿದ್ದ ಕತ್ತಿ ಬೀಗ ದಕೈ ಆಗಿದ್ದರೆ, ಕಲ್ಲಿನ ರಥವೇ ಬೀಗವಾಗಿದ್ದರೆ... ಛೆ, ಛೆ...ಯಾರಾದರೂ ಕೇಳಿಸಿಕೊಂಡರೆ ನಕ್ಕಾರು" ಎದೆಗುಂದಿದ ಭಾಸ್ಕರ ಹೇಳಿದ.
ಉಜ್ವಲಾ ಮಾತನಾಡಲಿಲ್ಲ, ಅವನನ್ನು ಹುರಿದುಂಬಿಸಲೂ ಇಲ್ಲ. ಸುಸ್ತಾಗಿ ರಥವನ್ನು ಎಳೆಯುತ್ತಿದ್ದ ಆನೆಯ ಮೇಲೆ ಒರಗಿ ಕುಳಿತಳು. ಅವಳನ್ನು ನೋಡಿದ ಭಾಸ್ಕರ ಒಮ್ಮೆಲೆ ಚೇತರಿಸಿಕೊಂಡ.
"ಅರೆರೆ...ಅಷ್ಟು ಸರಳವಾಗಿರಬಹುದೇ? ಉಹೂಂ...ಆದರೂ..."
"ಪ್ರೊಫೆಸರ್, ಏನು ಮಾತನಾಡುತ್ತಿದ್ದೀರಿ?"
"ಆ ಆನೆ! ಮೊದಲು ಈ ರಥವನ್ನು ಕುದುರೆಗಳು ಎಳೆಯುತ್ತಿದ್ದವಂತೆ-ಆ ಆನೆಗೆಳ ಬದಲಿಗೆ ಕಲ್ಲಿನ ಕುದುರೆಗಳಿದ್ದವು. ನಂತರ ಆ ಕುದುರೆಗಳನ್ನು ಬದಲಾಯಿಸಿ ಅದೇ ಸ್ಥಳದಲ್ಲಿ ಆನೆಗಳನ್ನು ಕೆತ್ತಲಾಯಿತು. ಈ ಬೀಗದಕೈ ಕಿಂಡಿ ಅಡಗಿಸಲೆಂದೇ ಕುದುರೆಯನ್ನು ಬದಲಾಯಿಸಿ ಆನೆಯನ್ನು ಇರಿಸಿರಬಹುದೇ?" ಎನ್ನುತ್ತಾ ಭಾಸ್ಕರ ಆನೆಯೊಂದರ ಮುಂದೆ ಮಂಡಿಯೂರಿ ಅದನ್ನು ಪರಿಶೀಲಿಸಲಾರಂಭಿಸಿದ. ಮೊದಲ ಆನೆಯಲ್ಲಿ ಏನೂ ಕಾಣಿಸದೆ ಎರಡನೆಯದಕ್ಕೆ ಸರಿದ. ಅದನ್ನು ವಿಸ್ತಾರವಾಗಿ ಪರಿಶೀಲಿಸಿದ ನಂತರ ಪುನರಾಲೋಚನೆಮಾಡಿ ಮೊದಲನೆಯದಕ್ಕೆ ಮರಳಿ, ಅದರ ಬಾಯೊಳಕ್ಕೆ ಸ್ಕ್ರೂ-ಡ್ರೈವರ್ ತೂರಿಸಿದ.
"ಆಹಾ!" ಎನ್ನುತ್ತ ಜೇಬಿನಿಂದ ಕತ್ತಿಯನ್ನು ತೆಗೆದು ಆನೆಯ ಬಾಯೊಳಕ್ಕೆ ತೂರಿಸಿದ. ಕತ್ತಿ ಹಿಡಿ ತಡೆಯುವವರೆಗು ಒಳಗೆ ಹೋಯಿತು.
ಗುಡುಗಿನಂತಹ ಶಬ್ದ ಬಂತು. ನೋಡುತ್ತಿದ್ದಂತೆಯೇ ಅಚಲ ಕಲ್ಲಿನ ರಥ ಮುಂದೆ ಸಾಗಲಾರಂಭಿಸಿತು. ಸುಮಾರು ೧೦-ಅಡಿ ಮುಂದೆ ಸರಿದು ನಿಂತಿತು. ಭಾಸ್ಕರ ಮತ್ತು ಉಜ್ವಲಾ ರಥವು ಖಾಲಿ ಮಾಡಿದ ಸ್ಥಳಕ್ಕೆ ತಮ್ಮ ಟಾರ್ಚುಗಳನ್ನು ಬೆಳಗಿಸಿದರು. ಹುಳ-ಹುಪ್ಪೆಗಳು ಓಡಿಹೋದ ನಂತರ ಆ ಸ್ಥಳದಲ್ಲಿ ಒಂದು ಆಕಳಿಸುವ ಕಿಂಡಿ ಕಾಣಿಸತೊಡಗಿತ್ತು. ಕಿಂಡಿಯ ಸುತ್ತ ಜೇಡರ ಬಲೆ ಕಟ್ಟಿತ್ತು. ಮೆಟ್ಟಿಲುಗಳು ಕಿಂಡಿಯಿಂದ ಕೆಳಗಿಳಿದು ಕತ್ತಲಿನಲ್ಲಿ ಮಾಯವಾಗುತ್ತಿದ್ದವು. ಕಿಂಡಿಯೊಳಕ್ಕೆ ಟಾರ್‍ಚ್ ಬೆಳಗಿಸಿದರೂ ಆ ಬೆಳಕು ಹೆಚ್ಚು ದೂರ ಹೋಗಲಿಲ್ಲ. ಮಾತು ಹೊರಡದೆ ದವಡೆ ಇಳಿಬಿಟ್ಟು ಇಬ್ಬರೂ ಕಿಂಡಿಯನ್ನೇ ನೋಡುತ್ತ ನಿಂತರು.
"ಥ್ಯಾಂಕ್ಸ್, ಪ್ರೊಫೆಸರ್. ನನಗೆ ನಿಮ್ಮ ಮೇಲೆ ಸಂಪೂರ್ಣ ಭರವಸೆ ಇತ್ತು" ಪರಿಚಿತ ಧ್ವನಿ ಕೇಳಿಸಿತು. ತಿರುಗಿ ನೋಡಿದಾಗ ಕೈಯಲ್ಲಿ ರಿವಾಲ್ವರ್ ಹಿಡಿದು ನಾಗೇಶನ್ ಅವರಿದ್ದೆಡೆಗೆ ನಡೆದು ಬರುತ್ತಿದ್ದ. ಅವನೊಡನೆ ಮೂವರು ಗೂಂಡಾಗಳು ಬಂದೂಕುಗಳನ್ನು ಹಿಡಿದು ಬರುತ್ತಿದ್ದರು.
ಭಾಸ್ಕರ, ಉಜ್ವಲಾ ಎರಡೇ ನಿಮಿಷಗಳಲ್ಲಿ ಎರಡನೆ ಬಾರಿ ಬಾಯ್ತೆರೆದು ಅಚ್ಚರಿಯಿಂದ ನೋಡುತ್ತ ನಿಂತರು. ನಾಗೇಶನ್ ಹಗುರವಾಗಿ "ಓಹ್! ಅಷ್ಟು ಆಶ್ಚರ್ಯ ಪಡಬೇಡಿ, ಪ್ರೊಫೆಸರ್. ನೀವು ಬೆಂಗಳೂರು ಬಿಟ್ಟಾಗಿನಿಂದ ನಮ್ಮವರು ನಿಮ್ಮನ್ನು ಹಿಂಬಾಲಿಸುತ್ತಲೇ ಇದ್ದಾರೆ. ನಾನು ನಿಮಗೆ ಅನ್ಯಾಯ ಮಾಡಿಲ್ಲ. ಪಾರ್ಟ್ನರ್ ಮಾಡಿಕೊಳ್ಳಿಯೆಂದು ಮೊದಲಿಗೇ ಕೇಳಲಿಲ್ಲವೇ? ಈಗ ಇಡೀ ನಿಧಿ ನನ್ನದೇ. ಆದರೆ ನಿಮಗೂ ಒಮ್ಮೆ ಅದನ್ನು ನೋಡುವ ಅವಕಾಶ ಕೊಡುತ್ತೇನೆ. ನಡೆಯಿರಿ ಹೋಗೋಣ" ಎನ್ನುತ್ತ ತನ್ನ ರಿವಾಲ್ವರ್‌ನಿಂದ ಕಿಂಡಿಯ ಕಡೆ ಸನ್ನೆ ಮಾಡಿದ.
ಎಲ್ಲರೂ ನೆಲದಲ್ಲಿದ್ದ ಕಿಂಡಿಯನ್ನು ಸುತ್ತುವರಿದು ನಿಂತರು. "ಆ ಕತ್ತಲು, ಭಯಾನಕ ಗುಂಡಿಯೊಳಕ್ಕೆ ಯಾರು ಮೊದಲು ಹೋಗ್ತೀರ?" ಒಬ್ಬ ಗೂಂಡ ಉಸುರಿದ.
ನಾಗೇಶನ್ ಅವನನ್ನು ದುರ್ಗುಟ್ಟಿ "ಮಾರ, ಭದ್ರ, ನನ್ನ ಜೊತೆ. ಖಾನ್, ನೀನಿಲ್ಲೇ ಇರು. ನಾನಿಲ್ಲದೆ ಯಾರಾದರೂ ಆಚೆ ಬಂದರೆ...ಏನು ಮಾಡಬೇಕು ನಿನಗೆ ಗೊತ್ತೇ ಇದೆ. ನಡೆಯಿರಿ" ಎಂದ.
ಭಾಸ್ಕರ ಟಾರ್ಚ್ ಹಿಡಿದು ಮೆಲ್ಲನೆ ಕಿಂಡಿಯೊಳಗಿನ ಮೆಟ್ಟಿಲುಗಳನ್ನು ಇಳಿಯ ತೊಡಗಿದ. ಅವನ ಹಿಂದೆ ಒಬ್ಬೊಬ್ಬರಾಗಿ ಉಳಿದವರೂ ಹೊರಟರು-ಭಾಸ್ಕರನ ಹಿಂದೆ ನಾಗೇಶನ್, ಅವನ ಹಿಂದೆ ಉಜ್ವಲಾ, ನಂತರ ಮಾರ, ಭದ್ರ. ಸುಮಾರು ೨೫-ಮೆಟ್ಟಲುಗಳು ಇಳಿದ ನಂತರ ಒಂದು ಇಕ್ಕಟ್ಟಾದ ಸುರಂಗಕ್ಕೆ ಬಂದರು. ಭಾಸ್ಕರ ದಾರಿ ತೋರಿಸುತ್ತಿದ್ದ, ಉಳಿದವರು ಸಾಲಾಗಿ ಒಬ್ಬರ ಹಿಂದೆ ಒಬ್ಬರು ನಿಧಾನವಾಗಿ ನಡೆಯ ತೊಡಗಿದರು. ಸ್ವಲ್ಪ ದೂರ ಹೋದ ನಂತರ ಒಂದು ಸಣ್ಣ ಕೋಣೆಗೆ ಬಂದರು. ಸಮಯ ನೋಡಿ ಉಜ್ವಲಾ ಭಾಸ್ಕರನ ಪಕ್ಕಕ್ಕೆ ಹೋಗಿ ನಿಂತಳು.
ಭಾಸ್ಕರ, ಉಜ್ವಲಾರ ಟಾರ್‍ಚ್‍ಗಳು ಹಲವು ಘಂಟೆಗಳ ಕಾಲ ಬೆಳಗಿದ್ದರಿಂದ ಅವುಗಳೊಳಗಿದ್ದ ಬ್ಯಾಟರಿಗಳು ಸಾಯುತ್ತಿದ್ದವು. ಮಬ್ಬಾದ ಬೆಳಕಲ್ಲಿ ಕೋಣೆಯಲ್ಲಿ ತೂಗಿಹಾಕಿದ್ದ ಪಂಜು ಕೈಗೆತ್ತಿಕೊಳ್ಳುತ್ತ, ಭಾಸ್ಕರ ಕೇಳಿದ "ಬೆಂಕಿಕಡ್ಡಿ ಇದೆಯೇ?"
ನಾಗೇಶನ್ ತನ್ನ ಜೇಬಿನಿಂದ ಲೈಟರ್ ಒಂದನ್ನು ಹೊರತೆಗೆದು, ಚಲಾಯಿಸಿ ಭಾಸ್ಕರನ ಕೈಯಲ್ಲಿದ್ದ ಪಂಜನ್ನು ಹೊತ್ತಿಸಿದ. ಬೆಳಕು ಸ್ವಲ್ಪ ಹೆಚ್ಚಾಯಿತು.
"ವಾವ್" ಉಜ್ವಲಾ ಉದ್ಗಾರ ತೆಗೆದಳು.
ತಳ ಕಾಣಿಸದ ಬಾವಿಯೊಂದರ ತುದಿಯಲ್ಲಿ ಕಟ್ಟಿದ್ದ ಜಗಲಿಯಮೇಲೆ ನಿಂತಿದ್ದರು. ಬಾವಿಯ ಅಡ್ಡಳತೆ ಸುಮಾರು ೪೦-ಅಡಿಯಾಗಿತ್ತು. ಬಾವಿಯ ಗೋಡೆಗೆ ಅಂಟಿದಂತೆ ಇಕ್ಕಟ್ಟಾದ ಚಕ್ರಾಕಾರ ಮೆಟ್ಟಿಲುಗಳು ಕೆಳಕ್ಕೆ ಹೋಗುತ್ತಿದ್ದವು. ರಕ್ಷಣೆಗಾಗಿ ಮೆಟ್ಟಿಲಿಗೆ ಮರದ ಸಾರುವೆಯನ್ನು ಕಟ್ಟಲಾಗಿತ್ತು.
"ಆಗಿನ ಕಾಲದಲ್ಲಿ ಇಷ್ಟೆಲ್ಲ ಹೇಗೆ ಕಟ್ಟಿರಲು ಸಾಧ್ಯ?" ಬೆರಗಾಗಿ ನಾಗೇಶನ್ ಕೇಳಿದ.
"ಮೇಲಿನ ದೇವಾಲಯಗಳನ್ನು ಹೇಗೆ ಕಟ್ಟಿದರೋ ಹಾಗೆ" ಭಾಸ್ಕರ ಉತ್ತರಿಸಿದ.
"ಅದೇನು?" ಮೇಲಿನಿಂದ ತೂಗಿಹಾಕಿದ್ದ ೮-ಅಡಿ ಅಗಲವಾದ ವಸ್ತುವೊಂದನ್ನು ತೋರಿಸುತ್ತ ಕೇಳಿದ ಭದ್ರ.
"ಅದು ದೀಪ ಗುಚ್ಛ" ಎನ್ನುತ್ತ ಭಾಸ್ಕರ ಬಗ್ಗಿ ಅದನ್ನೂ ಹೊತ್ತಿಸಿದ. ಬಾವಿಯಲ್ಲಿ ಸಾಕಷ್ಟು ಬೆಳಕಾಯಿತು, ಆದರೆ ತಳವಿನ್ನೂ ಕಾಣಿಸುತ್ತಿರಲಿಲ್ಲ.
"ನಡೆಯಿರಿ, ಇನ್ನೇನು ತಡ" ನಾಗೇಶನ್ ಹೇಳಿದ.
ಮಾರ ಮುಂದೆ ಹೊರಟ, ಆದರೆ ಉಜ್ವಲಾ ಹಿಂಜರಿದಳು. "ಐದು-ನೂರು ವರ್ಷಗಳಿಂದ ಗೆದ್ದಲು ಹತ್ತಿದ ಆ ಮರದ ಸಾರುವೆಯನ್ನು ನಂಬಿಕೊಂಡು ನಾನು ಬರೋದಿಲ್ಲ"
ನಾಗೇಶನ್ ತನ್ನ ರಿವಾಲ್ವರ್ ಅವಳ ಕಡೆ ತಿರುಗಿಸಿದಾಗ ಭಾಸ್ಕರ ನಿಷ್ಕೃಷ್ಟವಾಗಿ ಹೇಳಿದ "ಉಜ್ವಲಾ, ನಡಿ ಹೋಗೋಣ"
ಪುನಃ ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತ ಒಬ್ಬರ ಹಿಂದೆ ಒಬ್ಬರು ಹೊರಟರು. ಒಂದು ಸ್ಥಳದಲ್ಲಿ ಒಂದು ಮೆಟ್ಟಿಲು ಮಾಯವಾಗಿತ್ತು. ಮಾರ ಕೆಳಗಿನ ಮೆಟ್ಟಿಲಿಗೆ ನೆಗೆಯಲು ಮರದ ಸಾರುವೆಯ ಆಸರೆ ಪಡೆಯಲೆಂದು ಅದರೆ ಮೇಲೆ ಒರಗಿ ಭಾರ ಬಿಟ್ಟ. ಗೆದ್ದಲು ಹತ್ತಿದ ಸಾರುವೆ ಮುರಿದು ಮಾರನ ಸಮೇತ ಬಾವಿಯೊಳಗೆ ಬೀಳಲಾರಂಭಿಸಿತು. ಮುಂದಿನ ೧೦-ಸೆಕೆಂಡ್‍ಗಳು ಹತ್ತು ವರ್ಷಗಳಂತೆ ಕಳೆದವು, ಮಾರ ಕಣ್ಮರೆಯಾದರೂ ಅವನ ಕೂಗು ಕೇಳಿಸುತ್ತಲೇ ಇತ್ತು. ನಿಧಾನವಾಗಿ ಅದೂ ಮೌನವಾಯಿತು. ಭಾಸ್ಕರ, ಉಜ್ವಲಾ ಭೀತಿಗ್ರಸ್ಥರಾಗಿ ನೋಡುತ್ತಿದ್ದರು. ನಾಗೇಶನ್ ಕೆಲ ಕ್ಷಣಗಳನಂತರ ಎಚ್ಚೆತ್ತು ಆ ಮೆಟ್ಟಿಲನ್ನು ಇಳಿದು ಮುಂದೆ ಹೋಗಲಾರಂಭಿಸಿದ.
"ನಾಗೇಶನ್, ಬೇಡ. ಬಹಳ ಅಪಾಯಕಾರಿ"
"ನಿಮ್ಮ ಪ್ರಾಣ ಮಾರನ ಪ್ರಾಣಕ್ಕಿಂತ ಅಮೂಲ್ಯವೆಂದುಕೊಂಡಿದ್ದೀರ? ಲೆಟ್ಸ್ ಗೋ"
ಭಾಸ್ಕರ, ಉಜ್ವಲಾ ದಂಗಾಗಿ ಅವನ ಹಿಂದೆ ಹೊರಟರು.
ಸುಮಾರು ೨೦-ನಿಮಿಷ ಇದೇ ರೀತಿ ಮೆಟ್ಟಿಲುಗಳನ್ನು ಇಳಿದು ಹೋದ ನಂತರ ಪುನಃ ಮತ್ತೊಂದು ಜಗಲಿಗೆ ಬಂದು ನಿಂತರು. ಮೆಟ್ಟಿಲುಗಳೂ ಅಲ್ಲಿಗೇ ನಿಂತು ಹೋಗಿದ್ದವು. ಬಾವಿಯ ಗೋಡೆಗೆ ಅಂಟಿದಂತೆ ಒಂದು ವಿಶಾಲ ಲೋಹದ ಬಾಗಿಲು ಅವರನ್ನು ಅಡ್ಡಗಟ್ಟಿತ್ತು.
"ಓ.ಕೇ. ಪ್ರೊಫೆಸರ್. ತೆಗೆಯಿರಿ ಬಾಗಿಲನ್ನು" ನಾಗೇಶನ್ ಹೇಳಿದ.
ಭಾಸ್ಕರ ಬಾಗಿಲ ಚಿಲುಕವನ್ನು ಹುಡುಕ ತೊಡಗಿದ. ಐದು ನಿಮಿಷಗಳ ನಂತರ ಯಾವುದೂ ಕಾಣದೆ, "ಇದನ್ನು ತೆಗೆಯುವ ರಹಸ್ಯ ನನಗೆ ಗೊತ್ತಿಲ್ಲ" ಎಂದ.
"ನನ್ನ ಜೊತೆ ಆಟವಾಡಬೇಡಿ, ಪ್ರೊಫೆಸರ್" ಎನ್ನುತ್ತ ನಾಗೇಶನ್ ಪ್ರೊಫೆಸರ್ ತಲೆಗೆ ರಿವಾಲ್ವರ್ ಇಟ್ಟ. ಭಾಸ್ಕರ ಕಣ್ಣು ಮುಚ್ಚಿಕೊಂಡ. ಕೆಲ ಕ್ಷಣಗಳ ಮೌನದ ನಂತರ "ಶಿಟ್! ನಿಮ್ಮನ್ನು ಶೂಟ್ ಮಾಡಿದರೆ ಬಾಗಿಲನ್ನು ತೆಗೆಯುವವರು ಯಾರೂ ಇರುವುದಿಲ್ಲ. ಅದೇ ಈಕೆಯನ್ನು..." ಎನ್ನುತ್ತ ಉಜ್ವಲಾಳ ಕಡೆ ರಿವಾಲ್ವರ್ ತಿರುಗಿಸಿದ.
ಉಜ್ವಲಾಳ ಕಣ್ಣುಗಳಲ್ಲಿ ಭೀತಿ ತುಳುಕುತ್ತಿತ್ತು. ಅವಳನ್ನು ನೋಡಿ ಭಾಸ್ಕರ "ಈಸೀ, ಈಸೀ" ಎಂದು ಪುನಃ ಬಾಗಿಲ ಕಡೆ ತಿರುಗಿದ. ಬಾಗಿಲ ಚೌಕಟ್ಟಿನಲ್ಲಿ ಅಡಗಿದ್ದ ಗುಂಡಿಯೊಂದನ್ನು ಒತ್ತಿದಾಗ ಒಳಗಿನಿಂದ ಲೋಹವನ್ನು ಬಡಿದ ಶಬ್ದ ಬಂತು. ನಿಧಾನವಾಗಿ ಆ ಬಾಗಿಲುಗಳನ್ನು ತಳ್ಳಿದ. ಬಾಗಿಲ ಆಚೆ ಒಂದು ಮಧ್ಯಮಗಾತ್ರದ ಕೋಣೆಯಿತ್ತು. ಮಧ್ಯದಲ್ಲಿ ಒಂದೇ ಒಂದು ಪುಟ್ಟ ಕಲ್ಲಿನ ಆನೆ ಬಿಟ್ಟರೆ ಕೋಣೆಯಲ್ಲಿ ಬೇರೇನೂ ಇರಲಿಲ್ಲ.
"ಎಲ್ಲಿದೆ ನಿಧಿ?" ನಾಗೇಶನ್ ಕೇಳಿದ.
"ಇದೇ. ಇಷ್ಟೇ ನಿಧಿ"
"ಇದಕ್ಕೆ ಇಷ್ಟು ದೂರ ಬಂದೆವಾ?"
ಭಾಸ್ಕರ ಮಾತನಾಡಲಿಲ್ಲ. ಉಜ್ವಲಾ ಬಡಬಡಾಯಿಸ ತೊಡಗಿದಳು "ಏನಾದರೂ ಇರಲೇಬೇಕು, ಪ್ರೊಫೆಸರ್! ಮತ್ತೊಂದು ಕ್ಲೂ, ಅಥವಾ..."
"ಇಷ್ಟೇ, ಉಜ್ವಲಾ. ಇದೇ ಕೊನೆ, ಇನ್ನೇನೂ ಕ್ಲೂ ಇಲ್ಲ, ನಿಧಿ ಇನ್ನಿಲ್ಲ" ಭಾಸ್ಕರ ಸಹನೆ ಮೀರಿ ಹೇಳಿದ.
"ನನ್ನ ಜೊತೆ ಮತ್ತೆ ಆಟವಾಡುತ್ತಿದ್ದೀರ, ಪ್ರೊಫೆಸರ್?" ನಾಗೇಶನ್ ರೀವಾಲ್ವರ್ ಭಾಸ್ಕರನ ಕಡೆ ತೋರಿಸುತ್ತ, ಕೋಣೆಯಿಂದ ಹಿಂಜರಿಯಲಾರಂಭಿಸಿದ. ಭದ್ರ ಅವನ ಪಕ್ಕದಲ್ಲೇ ಹಿಂಜರಿಯುತ್ತಿದ್ದ. ಇಬ್ಬರೂ ಲೋಹದ ಬಾಗಿಲಾಚೆ ಹೋದಮೇಲೆ "ಭದ್ರ, ಬಾಗಿಲನ್ನು ಮುಚ್ಚು" ಎಂದ ನಾಗೇಶನ್.
"ನಮ್ಮನ್ನು ಇಲ್ಲಿ ಸಿಕ್ಕಿಸಿ ಹೋಗಬೇಡ. ಬಾಗಿಲನ್ನು ಒಳಗಿನಿಂದ ತೆಗೆಯಲಾಗೋದಿಲ್ಲ" ಎಂದಳು ಉಜ್ವಲಾ .
"ನಿಲ್ಲು, ನೀನು ಹೀಗೆ ಮಾಡೋ ಹಾಗಿಲ್ಲ" ಎಂದ ಭಾಸ್ಕರ.
"ಹಾಗೇ ಮಾಡುತ್ತೇನೆ-ಪ್ರೊಫೆಸರ್, ಮುಂದಿನ ಕ್ಲೂ ಹೇಳದಿದ್ದರೆ..."
"ನೀವುಗಳು ಹೋಗಿ, ನಮಗೂ...." ಉಜ್ವಲಾ ಮಾತನಾಡಲು ಹೊರಟಳು.
"ಮತ್ತೆ ಮಾತನಾಡಬೇಡ" ಅಕೆಯ ಕಡೆ ರಿವಾಲ್ವರ್ ತಿರುಗಿಸುತ್ತ ಹೇಳಿದ ನಾಗೇಶನ್. "ಪ್ರೊಫೆಸರ್?"
"ಆನೆ..." ಭಾಸ್ಕರ ಹೇಳ ಹೊರಟ.
"ಪ್ರೊಫೆಸರ್!" ಕಠಿಣ ಧ್ವನಿಯಲ್ಲಿ ಹೇಳಿದಳು ಉಜ್ವಲಾ. "ಹೇಳಬೇಡಿ".
"ಆ ಆನೆಯೇ ಮುಂದಿನ ಕ್ಲೂ. ಅದರ ಅರ್ಥ ನಿಧಿ ಆನೆ-ಲಾಯದಲ್ಲಿದೆಯೆಂದು" ಭಾಸ್ಕರ ಮುಂದುವರೆಸಿದ.
"ಥ್ಯಾಂಕ್ಸ್, ಪ್ರೊಫೆಸರ್. ಬಾಗಿಲು ಮುಚ್ಚು, ಭದ್ರ" ಎನ್ನುತ್ತ ನಾಗೇಶನ್ ತಿರುಗಿದ.
"ನಿಲ್ಲು! ನಮ್ಮನ್ನು ಇಲ್ಲಿ ಕೂಡಿಹಾಕಬೇಡ" ಉಜ್ವಲಾ ಕೂಗಿದಳು.
"ಯಾಕೆ?" ಮುಗುಳ್ನಗುತ್ತ ಕೇಳಿದ ನಾಗೇಶನ್
"ಪ್ರೊಫೆಸರ್ ಸುಳ್ಳು ಹೇಳಿದ್ದರೆ? ಅಥವ ಅಲ್ಲಿ ಮತ್ತೊಂದು ಕ್ಲೂ ಇದ್ದರೆ?"
"ಆಗ ನಿಮ್ಮನ್ನು ಎಲ್ಲಿ ಹಿಡಿಯಬೇಕೆಂದು ಗೊತ್ತು. ಗುಡ್-ಬೈ, ಪ್ರೊಫೆಸರ್" ಎನ್ನುತ್ತ ನಾಗೇಶನ್ ಮೆಟ್ಟಿಲನ್ನೇರ ತೊಡಗಿದ. ಭದ್ರ ಬಾಗಿಲನ್ನು ಮುಚ್ಚಿದ.
"ತೆಗಿ ಬಾಗಿಲು" ಉಜ್ವಲಾ ಅರಚಿದಳು. "ಪ್ರೊಫೆಸರ್, ನಾವಿನ್ನು ಇಲ್ಲೇ..." ಉದ್ವೇಗದಿಂದ ಕೂಗಾಡ ತೊಡಗಿದಳು.
"ಶಾಂತವಾಗು, ಉಜ್ವಲಾ. ಏನೂ ಆಗೋದಿಲ್ಲ. ಇಲ್ಲಿಂದ ಹೊರಗೆ ಹೋಗುತ್ತೇವೆ" ಭಾಸ್ಕರ ಸಾಂತ್ವನ ಹೇಳಿದ. "ನಾಗೇಶನ್‌ಗೆ ಕ್ಲೂ ಬೇಕಿತ್ತು ಕ್ಲೂ ಕೊಟ್ಟೆಯಷ್ಟೆ"
"ಸುಳ್ಳು ಕ್ಲೂ! ಅದು ಸುಳ್ಳೆಂದು ಗೊತ್ತಾಗಿ ನಾಗೇಶನ್ ಇಲ್ಲಿಗೆ ಹಿಂತಿರುಗಿದರೆ ನಾವಿನ್ನೂ ಇಲ್ಲೇ ಇರುತ್ತೇವೆ, ಆಗ ನಮ್ಮನ್ನು ಶೂಟ್ ಮಾಡುತ್ತಾನೆ" ಇನ್ನೂ ಉಜ್ವಲಾಳ ಆತಂಕ ಕಡಿಮೆಯಾಗಿರಲಿಲ್ಲ.
"ಇಲ್ಲ ಮರಿ. ನಾವು ಅವನ ಕೈಗೆ ಸಿಗೋದಿಲ್ಲ" ಭಾಸ್ಕರ ಕೋಣೆಯ ಸುತ್ತ ಓಡಾಡತೊಡಗಿದ್ದ. "ಇಲ್ಲಿಂದ ಹೊರಹೋಗಲು ಇನ್ನೊಂದು ದಾರಿ ಇದೆ"
"ಎಲ್ಲಿ?"
"ನಿಧಿ ಇರುವ ಕೋಣೆಯಿಂದ" ಎನ್ನುತ್ತ ಕೋಣೆಯ ಮಧ್ಯದಲ್ಲಿದ್ದ ಆನೆಯನ್ನು ತಿರುಗಿಸಿದ.
'ಭುಸ್'ಎಂದು ಗೋಡೆಯಾಚೆಯಿಂದ ಹೊಯ್ಗಾಳಿ ಹೊಡೆಯಿತು. ಗೋಡೆಯ ಒಂದು ಭಾಗ ಸರಿದುನಿಂತು, ಅದರಾಚೆ ಮತ್ತೊಂದು ಕೋಣೆ ಕಾಣಿಸುತ್ತಿತ್ತು.
ಭಾಸ್ಕರ ಪಂಜನ್ನು ಹಿಡಿದು ಆಚೆಯಿದ್ದ ಕೋಣೆಗೆ ದಾಟಿದ. ಉಜ್ವಲಾ ಅವನ ಹಿಂದೆಯೇ ಹೋದಳು. ಕೋಣೆಯಲ್ಲಿ ಕಾಣಿಸಿದ್ದು ಬರೀ ಮುರಿದ ಪೆಟಾರಿಗಳು, ತುಣುಕು ಹಗ್ಗಗಳು, ಒಡೆದ ಮಡಿಕೆಗಳು ಮತ್ತಿತರ ಅವಶೇಶಗಳು ಮಾತ್ರ.
ಭಾಸ್ಕರ ಸಂಪೂರ್ಣವಾಗಿ ಕುಗ್ಗಿ ಹೋದ. "ಇಲ್ಲ! ಖಾಲಿಯಾಗಿದೆ! ಯಾರೋ ನಮ್ಮ ಮೊದಲೇ ಇದನ್ನು ಕಂಡುಹಿಡಿದು ಖಾಲಿ ಮಾಡಿರಬೇಕು! ಛೆ! ನಿಧಿಯೂ ಇಲ್ಲ ಮಣ್ಣೂ ಇಲ್ಲ! ಎಲ್ಲ ನನ್ನ ಭ್ರಮೆ! ಒಳ್ಳೆ ಹುಚ್ಚನ ಸಾಹವಾಸ ಮಾಡಿದ್ದೀಯ, ಉಜ್ವಲಾ!"
"ಇಲ್ಲ ಪ್ರೊಫೆಸರ್! ಖಂಡಿತ ಇಲ್ಲ. ಈ ಕೋಣೆ ನೋಡಿ! ಇದರ ಅರ್ಥ ನಿಧಿ ಇದೆಯೆಂದು. ಇಲ್ಲಿಯವರೆಗು ಕ್ಲೂಗಳನ್ನು ಪತ್ತೆ ಮಾಡಿಕೊಂಡು, ಆ ನಿಧಿಯನ್ನು ಅಟ್ಟಿಸಿಕೊಂಡು ಬಂದಿದ್ದೇವೆ ಎಂದು. ಇಲ್ಲಿಲ್ಲದಿದ್ದರೆ ನಿಧಿ ಬೇರೆಲ್ಲೋ ಇರಬೇಕು. ಮತ್ತೆ ಹುಡುಕೋಣ" ಉಜ್ವಲಾ ಅವನಿಗೆ ಉತ್ತೇಜನ ನೀಡಿದಳು. ಸ್ವಲ್ಪ ಮೌನದ ನಂತರ "ಮತ್ತೊಂದು ದಾರಿ ಇದೆಯೆಂದಿದ್ದರಲ್ಲ, ಎಲ್ಲಿದೆ?" ವಿಚಾರಿಸಿದಳು.
"ಅದೇ ನನಗೂ ಅರ್ಥವಾಗುತ್ತಿಲ್ಲ! ಈ ಹೊಂಡ ತೆಗೆದ ಕೂಡಲೆ, ಇದನ್ನು ಕಟ್ಟಿದವರು ಹಿಂದಿನಿಂದ ಮತ್ತೊಂದು ಸುರಂಗ ಕೊರೆದಿರಬೇಕು-ಗಾಳಿಯಾಡಿಸಲು, ಜೊತೆಗೆ ನೆಲ-ಕುಸಿತವಾದರೆ ತಪ್ಪಿಸಿಕೊಳ್ಳಲು. ಆಗಲೇ ಆತ್ಮವಿಶ್ವಾಸ ಮೂಡಿ ಸುತ್ತಿಗೆಯಿಂದ ಗೋಡೆಯನ್ನು ಕುಟ್ಟುತ್ತ ಕೋಣೆಯ ಸುತ್ತ ಓಡಾಡಲಾರಂಭಿಸಿದ್ದ ಭಾಸ್ಕರ. ಗೋಡೆಯಲ್ಲಿ ಉಬ್ಬಿದ್ದ ಗುಬುಟೊಂದನ್ನು ಒತ್ತಿದಾಗ ನೆಲವೇ ಆಕಳಿಸಿ ಬಾಯಿ ಬಿಟ್ಟಂತೆ ಕಿಂಡಿಯೊಂದು ತೆರೆಯಿತು. ಅಗಲವಾಗಿದ್ದ ಮೆಟ್ಟಿಲುಗಳು ಕೆಳಗಿಳಿದು ಹೋಗುತ್ತಿದ್ದವು. ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡು ಭಾಸ್ಕರ, ಉಜ್ವಲಾ ಕೆಳಗಿಳಿಯಲು ಆರಂಭಿಸಿದರು. ಹಲವು ಮೆಟ್ಟಿಲು ಇಳಿದ ನಂತರ ನೆಲ ಮಟ್ಟವಾಗಿ ಒಂದು ಮೂಗಸಾಲೆಗೆ ಬಂದು ನಿಂತರು.
"ವಾವ್!"
"ಓಹ್!"
ಉಜ್ವಲಾ ಮತ್ತು ಭಾಸ್ಕರ ವಿಗ್ರಹಗಳು, ಪೆಟಾರಿಗಳು ಮತ್ತು ಗಡಿಗೆಗಳಿಂದ ತುಂಬಿದ್ದ ಕೋಣೆಯಲ್ಲಿ ನಿಂತಿದ್ದರು. ಮೂಗಸಾಲೆಯಿಂದ ಇನ್ನೂ ಕೆಳಗಿಳಿಯಲು ಕಲ್ಲಿನ ಮೆಟ್ಟಿಲುಗಳಿದ್ದವು. ಪಾತಿಯೊಂದು ಮೆಟ್ಟಿಲ ಜೊತೆಯೇ ಹೋಗುತ್ತಿತ್ತು. ಭಾಸ್ಕರ ಪಾತಿಯಲ್ಲಿ ಕೈಹಾಕಿ ಅದರೊಳಗಿದ್ದ ಪುಡಿಯನ್ನು ಮುಟ್ಟಿ ನೋಡಿ ಅದಕ್ಕೆ ತನ್ನ ಕೈಯಲ್ಲಿದ್ದ ಪಂಜಿನ ಬೆಂಕಿಯನ್ನು ತಾಗಿಸಿದ. ಪಾತಿಯುದ್ದಕ್ಕೂ ಬೆಂಕಿ ಹತ್ತಿಕೊಳ್ಳುತ್ತ, ಬೆಳಕು ಚೆಲ್ಲುತ್ತ ಹೋಯಿತು. ಕಣ್ಣಿಗೆ ಎಟಕುವಷ್ಟು ದೂರಕ್ಕೂ ಇನ್ನೂ ಹೆಚ್ಚಿನ ಬಂಗಾರ, ಬೆಳ್ಳಿ ಹಾಗು ಕಲ್ಲಿನ ವಿಗ್ರಹಗಳು, ಸಾವಿರಾರು ಚಿನ್ನದ ಆಭರಣಗಳು, ವಜ್ರ-ವೈಢೂರ್ಯಗಳು ತುಂಬಿದ್ದ ಪೆಟಾರಿಗಳು, ಇನ್ನೂ ಹೆಚ್ಚು ಚಿನ್ನದ ನಾಣ್ಯಗಳು ತುಂಬಿದ್ದ ಹೂಜಿಗಳು, ಸಾವಿರಾರು ತಾಳೆಗರಿಯ ಹಸ್ತ-ಪ್ರತಿಗಳು, ಇನ್ನೂ ಹೆಚ್ಚು ಹೇಳಲಾಗದ ನಾನಾರೀತಿಯ ಅತ್ಯಮೂಲ್ಯ ವಸ್ತುಗಳು ಪಾತಿಯಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲಿ ಕಂಗೊಳಿಸುತ್ತಿದ್ದವು.
ಭಾಸ್ಕರ, ಉಜ್ವಲಾ, ಬಹಳ ಹೊತ್ತು ಮಾತನಾಡಲಾರದೆ ಈ ದೃಷ್ಯವನ್ನು ನೋಡುತ್ತ ನಿಂತರು. ಕೊನೆಗೊಮ್ಮೆ ಮೌನ ಮುರಿದಾಗ ಉಜ್ವಲಾಳ ಅಳುವಿನ ಶಬ್ದ ಕೇಳಿಬಂತು. ಅವಳೆಡೆ ನಡೆಯುತ್ತ ಭಾಸ್ಕರ ಪಿಸುಮಾತಿನಲ್ಲಿ ಕೇಳಿದ "ಉಜ್ವಲಾ, ಆರ್ ಯು ಓ.ಕೆ? ಹುಷಾರಾಗಿದ್ದೀಯ, ಮರಿ?"
ಬೆರಳು ತೋರಿಸುತ್ತ ಉಜ್ವಲಾ "ಅಲ್ಲಿ ನೋಡಿ! ಮೇಲೆ ಹೋಗಲು ಮೆಟ್ಟಿಲು!" ಎಂದಳು.
*****
"ಓ.ಕೆ. ಪ್ರೊಫೆಸರ್. ನನಗೇನು ಮಾಡಬಲ್ಲಿರಿ ನೀವು?" ಇನ್ಸ್‌ಪೆಕ್ಟರ್ ಮಹೇಶ್ವರ ಕೇಳುತ್ತಿದ್ದ.
ಉಜ್ವಲಾ ಹಾಗು ಭಾಸ್ಕರ ನಿಧಿಯ ಕೋಣೆಯಲ್ಲಿದ್ದ ಮೆಟ್ಟಿಲುಗಳಿಂದ ತಪ್ಪಿಸಿಕೊಂಡು, ಹೊರಬಂದಿದ್ದರು. ಅರಮನೆಯ ಕಳವಿನ ವಿಚಾರವಾಗಿ ನಾಗೇಶನ್ ಕಡೆಯವರನ್ನು ಹಿಂಬಾಲಿಸುತ್ತ ಹಂಪೆಗೆ ಬಂದಿದ್ದ ಇನ್ಸ್‌ಪೆಕ್ಟರ್ ಮಹೇಶ್ವರ ಹಂಪೆಯ ಪೋಲೀಸರೊಂದಿಗೆ ಕೂಡಿ ತನಿಖೆ ನಡೆಸುತ್ತಿದ್ದ. ಹಾಗಾಗಿ, ಭಾಸ್ಕರ ಹಂಪೆಯ ಪೋಲೀಸರನ್ನು ಸಂಪರ್ಕಿಸಿದಾಗ ಮಹೇಶ್ವರನ ಎದುರಾಗಿದ್ದರು.
"ಒಂದು ಹತ್ತು..ನೂರು ಕೋಟಿ ಲಂಚ?"
"ತಮಾಷೆ ಮಾಡುತ್ತಿದ್ದೀರ, ಪ್ರೊಫೆಸರ್? ನಿಮ್ಮ ನಿಧಿ ಬಗ್ಗೆ ನನಗೆ ಗೊತ್ತಾಗಿದೆ"
"ನೀವು ಅದರ ಮೇಲೆ ನಿಂತಿದ್ದೀರ, ಇನ್ಸ್‌ಪೆಕ್ಟರ್. ನಿಮ್ಮ ಕಾಲಿನ ಸುಮಾರು ನೂರು ಅಡಿ ಕೆಳಗಿದೆ. ಆ ನಿಧಿ ಯಾರೊಬ್ಬರ ಕೈಗೂ ಸಿಗಬಾರದು. ಅದಕ್ಕೇ ಅದನ್ನು ಪ್ರಾಚೀನ ಕಾಲದಿಂದಲೂ ಯಾರ ಕಣ್ಣಿಗೂ ಕಾಣದಂತೆ ಇರಿಸುತ್ತಿದ್ದರು. ಇದಕ್ಕೆ ಒಂದೇ ದಾರಿ"
"ಜನರಿಗೆ ಹಂಚುವುದು" ಇನ್ಸ್‌ಪೆಕ್ಟರ್ ಅಸಾಧಾರಣ ಜಾಣ್ಮೆಯಿಂದ ನುಡಿದ.
"ದೇಶಾದ್ಯಂತ ಮ್ಯೂಸಿಯಮ್‌ಗಳು, ಧರ್ಮ-ಕ್ಷೇತ್ರಗಳು, ವಿಶ್ವವಿದ್ಯಾಲಯಗಳಿಗೆ ಹಂಚಬೇಕು. ಬರೀ ಸಂಪತ್ತೊಂದೇ ಅಲ್ಲ ಅಲ್ಲಿ ನೂರಾರು-ಸಾವಿರಾರು ವರ್ಷಗಳ ಇತಿಹಾಸವೂ ಅಡಗಿದೆ"
"ಮತ್ತೇನು?"
"ಈ ನಿಧಿ ಹುಡುಕಿದ್ದಕ್ಕೆ ನಾನೊಬ್ಬನೇ ಅಲ್ಲ, ಉಜ್ವಲಾಳಿಗೂ ಮನ್ನಣೆ ಸಿಗಬೇಕು. ಓಹ್! ಆ ಅರಮನೆ ವಿಚಾರ-ಉಜ್ವಲಾಗು ಅದಕ್ಕು ಸಂಬಂಧವಿಲ್ಲ. ಅವಳ ಹೆಸರು ಆ ವಿಚಾರದಲ್ಲಿ ಎಲ್ಲೂ ಬರಬಾರದು"
"ಆಹಾ?"
"ನಾನೂ ಆ ಅರಮನೆ ವಿಚಾರದಲ್ಲಿ ಜೈಲಿಗೆ ಹೋಗದಿರಲು ಇಷ್ಟ ಪಡುತ್ತೇನೆ"
"ಯಾರಾದರೂ ಒಬ್ಬರು ಹೋಗಲೇಬೇಕಲ್ಲಾ?"
"ಹಂ...ಹಾಗಿದ್ದರೆ ಆನೆ-ಅಸ್ತಬಲದ ಕಡೆ ನಿಮ್ಮ ಸೈನ್ಯ ತಿರುಗಿಸಿದರೆ ಅಲ್ಲಿ ನಿಧಿ ಹುಡುಕುತ್ತಿರುವ ಗೂಂಡಾಗಳನ್ನು ಹಿಡಿದು ಜೈಲಿಗೆ ಹಾಕಬಹುದು" ಭಾಸ್ಕರ ಬಿಟ್ಟುಕೊಟ್ಟ.
*****
ಆರು ತಿಂಗಳು ಉರುಳಿದವು. ಒಂದು ದಿನ ವಿಶ್ವವಿದ್ಯಾಲಯದಲ್ಲಿ ಭಾಸ್ಕರ ತನ್ನ ಆಫೀಸಿನಲ್ಲಿ ಕುಳಿತಿದ್ದಾಗ ಅವನ ಮೇಜಿನಮೇಲೆ ಉಜ್ವಲಾ ಒಂದು ಪುಸ್ತಕವನ್ನು ತಂದಿಟ್ಟಳು. "ಸರ್, ಇದು ನನ್ನ ಪಿ.ಎಚ್.ಡಿ ಡಿಸರ್ಟೇಶನ್"
ಭಾಸ್ಕರ ಅದನ್ನು ಕೈಗೆತ್ತಿಕೊಂಡು ಅದರ ಶೀರ್ಷಿಕೆ ಓದಿದ: "ರಾಷ್ಟ್ರನಿಧಿ"
*****
No comments:
Post a Comment