Friday, November 23, 2007

ನಿಷಿದ್ಧ ನೆನಪುಗಳು

ನಿಷಿದ್ಧ ನೆನಪುಗಳು

ಈ ಕತೆಯ ಸಹಲೇಖಕಿ ಸೌಮ್ಯಾ ರವೀಂದ್ರ

2008 KKNC ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೂರನೆ ಬಹುಮಾನ ಬಂದಿದೆ.
2008 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.

ಪ್ರತಾಪನಿಗೆ ಬೆಳಗ್ಗೆ ಎಚ್ಚರವಾದಾಗ ಘಂಟೆ ಸುಮಾರು :೩೦ಯಾಗಿತ್ತು. ಮಂಪರು ಇಂಗಿ ಕಣ್ತೆರೆದು ನೋಡಿದಾಗ ಮೊಣಕಾಲು ಎದೆಗಪ್ಪಿ ಮನೆಯ ಕಪಾಟಿನೊಂದರೊಳಗೆ ಮಲಗಿರುವ ಅರಿವಾಯಿತು. ಎದೆಯಲ್ಲಿ ಏನೋಕಾತುರ. ಅಸಾಧಾರಣ ಆಸನದಲ್ಲಿ ಮಲಗಿದ್ದ ಕಾರಣ ಬೆನ್ನು-ಕತ್ತುಗಳು ಉಳುಕಿದಂತಾಗಿ ಯಾವುದೋನೆನಪಿಲ್ಲದ ದುಸ್ವಪ್ನದಿಂದುಂಟಾದ ಪೆಟ್ಟುಗಳೆನಿಸುತ್ತಿದ್ದವು.

ರಾತ್ರಿ ತನ್ನ ಮಂಚದಮೇಲೇ ಮಲಗಿದ್ದ ಪ್ರತಾಪನಿಗೆ, ಎದ್ದು ಬಂದು ಕಪಾಟಿನೊಳಗೆ ಮಲಗಿದ್ದ ನೆನಪಾಗಲಿಲ್ಲವಾದರೂ, ಪರಮಾಶ್ಚರ್ಯವೇನೂಆಗಲಿಲ್ಲ. ಇತ್ತೀಚೆಗೆ ಇದು ನಾಲ್ಕನೆಯ ಬಾರಿ ಈರೀತಿಯಾದದ್ದು. ಮೊದಲು ಮಂಚದ ಅಡಿ ಹೊಕ್ಕಿದ್ದ; ಮತ್ತೆರಡು ಬಾರಿ ಈಗಿನ ಹಾಗೆ ಕಪಾಟಿನಲ್ಲಿ ಮಲಗಿದ್ದ. ಪ್ರತೀಬಾರಿಯೂಒಂದೇ ಅನುಭವ: ಆತ್ಮವನ್ನೇ ಕದಲಿಸುವಂತಹ ಯಾವುದೋರೌದ್ರ ಕನಸು, ಎಚ್ಚರವಾದಾಗ ಅದರ ಒಂದು ತುಣುಕೂ ಉಳಿದಿಲ್ಲ. ಬರಿದಾದ ಪ್ರತಿಧ್ವನಿಯಂತೆ-ತಿಳಿಯದಭಾಷೆಯ ಒಂದೇ ಒಂದು ಪದದಂತೆ.

ಪೂರ್ಣ ಎಚ್ಚರವಾಗಿ ಹೊರಗೆದ್ದು ಬಂದಾಗ ಕೈ-ಕಾಲುಗಳು ಜೋಮು ಹಿಡಿದಿದ್ದ ಕಾರಣ ಆಯ ತಪ್ಪಿದಂತಾಯಿತು. ಸಂಭಾಳಿಸಿಕೊಂಡು ನೋಯುತ್ತಿದ್ದ ಕೈಲಾಲುಗಳನ್ನು ನೀಡುತ್ತ ತನ್ನ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಳ್ಳಲು ಬಾತ್ರೂಮಿನೊಳಹೊಕ್ಕು ವಾಶ್ಬೇಸಿನ್ಮೇಲೆ ತೂಗುಹಾಕಿದ್ದ ಕನ್ನಡಿಯಲ್ಲಿ ನೋಡಿದ. ವಯಸ್ಸು ಮೂವತ್ತೈದು ದಾಟಿ, ಗಡ್ಡ-ಮೀಸೆಗಳಿಲ್ಲದೆ ಸುಕ್ಕಿನ ತೀಕ್ಷ್ಣ ಗೆರೆಗಳು, ಹೊಳೆವ ಕಣ್ಗಳುಳ್ಳ ಮುಖದ ವ್ಯಕ್ತಿಯನ್ನು ಪ್ರತಾಪ್ ಕಂಡ. ರಾತ್ರಿ ಮಲಗಿದ್ದನಾದರೂ ಹಿಂದಿನ ದಿನದ ಸುಸ್ತು ಮುಖದಲ್ಲಿ ಕಾಣಿಸುತ್ತಿತ್ತು.

ನಿಟ್ಟುಸಿರು ಬಿಡುತ್ತ ಸುತ್ತ ನೋಡಿದಾಗ ತನಗೇ ನೆನಪಿಲ್ಲದ ತನ್ನ ರಾತ್ರಿಯ ಪ್ರವಾಸ ನೆನೆಸಿಕೊಂಡು ಕೊಂಚ ಪೆದ್ದೆನಿಸಿತು. ನೇರ ಮಂಚದಿಂದ ಕಪಾಟಿಗೆ ಹೋದೆನೋ, ಇಲ್ಲ ಹತ್ತಾರು-ನೂರಾರು ಕಿಲೋಮೀಟರ್ ಪ್ರಯಾಣ ಮಾಡಿದ್ದೇನೋ ಎಂದು ಯೋಚಿಸಿದ. ಕೊನೆಗೆ ಮತ್ತೊಮ್ಮೆ ನಿಟ್ಟುಸಿರೆಳೆದು, ಹಲ್ಲುಜ್ಜಿ, ಬಿಸಿ-ಬಿಸಿ ನೀರಿನಲ್ಲಿ ಸ್ನಾನ ಮಡಿಕೊಂಡ. ನಂತರ ಅಡಿಗೆ ಮನೆಗೆ ಹೋಗಿ ತಿಂಡಿ ತಿಂದು, ಲೋಟ ಕಾಫಿಯನ್ನು ಹಿಡಿದು ಕಿಟಕಿಯಿಂದಾಚೆ ನೋಡುತ್ತ ನಿಂತ. ಆಚೆ ತನ್ನ ಮನೆಯ ಕಾಂಪೌಂಡು, ಅದರಾಚೆ ಹೊಲ ಕಾಣಿಸಿತು.

ಪ್ರತಾಪ್ ಅವಿವಾಹಿತ. ಮದುವೆಯ ವಯಸ್ಸು ದಾಟಿಯಾಯಿತೆಂದು ಆಜೀವ ಬ್ರಹ್ಮಚಾರಿಯಾಗಲು ನಿರ್ಧರಿಸಿದ್ದ. ಕಳೆದ ವರ್ಷ ತನಗೊಂದು ಸಣ್ಣ ಲಾಟರಿ ಹೊಡೆದಾಗ, ತನ್ನ ಬೆಂಗಳೂರಿನ ಲಾಯರ್ ಕೆಲಸ ತ್ಯಜಿಸಿ, ಹವ್ಯಾಸವಾಗಿದ್ದ ತೋಟಗಾರಿಕೆಯನ್ನು ನಡೆಸಲೆಂದು ಕನಕಪುರದ ಬಳಿ ಸಣ್ಣ ಫಾರಮ್ಹೌಸ್ ಒಂದನ್ನು ಖರೀದಿಸಿ, ಅಲ್ಲಿಗೆ ತೆರಳಿದ್ದ.

ಹೊಲದಲ್ಲಿ ಬಿಟ್ಟಿದ್ದ ಬದನೇಯಾಯಿ-ಅವರೇಕಾಯಿಯ ಫಸಲನ್ನು ನೋಡುತ್ತ "ಸೋಮ್ನಾಬ್ಯುಲಿಸಂ"‌ ಎಂದು ಉದ್ಗಾರ ತೆಗೆದ. ಸೋಮ್ನಾಬ್ಯುಲಿಸಂ-ನಿದ್ರಾವಸ್ತೆಯಲ್ಲಿ ನಡೆದಾದುವುದು ಸಾಧಾರಣವಲ್ಲವಾದರೂಬಹುಪರಿಚಿತ ಮಾನಸಿಕ ಖಾಯಿಲೆ. ತನ್ನ ಬಾಯಲ್ಲೇ ಪದ ಬಂದರೂ, ಎಚ್ಚರವಿದ್ದಾಗ ರೀತಿಯ ಪ್ರಶ್ನೆಗಳು ತಲೆಯಲ್ಲಿ ಗ್ರಹಗಳಂತೆ ಸುತ್ತುತ್ತಿದ್ದರೂ, ನನಗೆ ಖಾಯಿಲೆಯಿಲ್ಲವೆಂದು ತನಗೆ ತಾನೇ ಹೇಳಿಕೊಳ್ಳುತ್ತ ಬೆಳಗಿನ ಸಮಾಚಾರ ನೋಡಲು ತನ್ನ ಕಂಪ್ಯೂಟರ್ ಆನ್ ಮಾಡಿದ. ಅವನ ಕಣ್ಣಿಗೆ ಮೊದಲು ಬಿದ್ದದ್ದು ಹಿಂದೆ ಕಾಣದ ಒಂದು ಫೈಲ್-ಅದನ್ನು ತೆರೆದು ನೋಡಿದಾಗ ಅದರೊಳಗೆ ಒಂದೇಪದ-ನೂರಾರು ಬಾರಿಬರೆದಿದೆ:

"ಭಯವಾಗುತ್ತಿದೆ-ಭಯವಾಗುತ್ತಿದೆ-ಭಯವಾಗುತ್ತಿದೆ..."

ಒಂದು ನಿಮಿಷ ಪ್ರತಾಪನಿಗೆ ಅರ್ಥವಾಗಲಿಲ್ಲ. ಈರೀತಿ ಮಾಡಿದವರಾರಿರಬಹುದು?‌ ನೆನ್ನೆ ರಾತ್ರಿ ಕಂಪ್ಯೂಟರ್ ಆರಿಸಿದಾಗ ಫೈಲ್ ಇರಲಿಲ್ಲ. ಹಾಗಿದ್ದರೆ ನಿದ್ರೆಯಲ್ಲಿ ತಾನೇ ಬಂದು ಕಂಪ್ಯೂಟರ್ ಆನ್ ಮಾಡಿ, ಫೈಲನ್ನು ಬರೆದಿರಬೇಕು! ಅವನಿಗಂತೂಅದರ ನೆನಪಾಗಲಿಲ್ಲ.

ಭಯ?‌ ಎಂಥಹ ಭಯ?‌ ಏನನ್ನು ಕಂಡರೆ ಭಯ?‌ ನಿದ್ರೆಯಲ್ಲಿ ನಡೆದಾಡುವ ಭಯವೇ?‌ ನಿದ್ರೆಯಲ್ಲಿ ನಡೆದಾಡಿದಾಗ ಏನನ್ನಾದರೂ ಕಂಡು ಭಯವೇ?‌ ತನ್ನ ಸಬ್ಕನ್ಶ್ಯಸ್-ಉಪಪ್ರಜ್ಞೆ ಏನಾದರೂ ಸಂದೇಶ ನೀಡುತ್ತಿದೆಯೇ? ಪುನಃ ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದದೂಏನೂ ತೋಚಲಿಲ್ಲ. "ಛೆ-ಹೋಗಲಿ ಬಿಡು"‌ ತನಗೆ ತಾನೇಹೇಳಿಕೊಳ್ಳುತ್ತ ಫೈಲನ್ನು ಡಿಲೀಟ್ ಮಾಡಿ, ಬೆಳಗಿನ ಸಮಾಚಾರ ಓದಿ ಮುಗಿಸಿದ.

ಸುಮಾರು ೧೧:೩೦ ಘಂಟೆಗೆ ಪ್ರತಾಪನ ಸೆಲ್ ಫೋನ್ ಮೊಳಗಿತು.

"ಹೇಯ್, ನಾನೋ!"‌ ಪ್ರತಾಪನ ಚಿಕ್ಕಪ್ಪನ ಮಗ, ನಾರಾಯಣ-ನಾಣಿ ಹೇಳಿದ. ಪ್ರತಾಪ್-ನಾಣಿ ಇಬ್ಬರೂ ಚಿಕ್ಕಂದಿನಲ್ಲಿ ಜೊತೆಗೇ ಓದಿದವರು, ಜೊತೆಯಲ್ಲೇಬೆಳೆದವರು. ಅಣ್ಣ-ತಮ್ಮಂದಿರ ಬಾಂಧವ್ಯ ಇಬ್ಬರಲ್ಲಿ ಬೆಳೆದಿತ್ತು, ಹಾಗಾಗಿ ನಾಣಿಯಲ್ಲಿ ಪ್ರತಾಪ್ ತನ್ನ ಬಳಲಿಕೆಯ ವಿಚಾರವಾಗಿ ಚರ್ಚಿಸಿದ್ದ. "ಏನಾಯಿತೋ‌ ?"

"ಇವತ್ತೂಎದ್ದಿದ್ದೆ ಮಾರಾಯ. ಮತ್ತೆ ವಾರ್ಡ್ರೋಬಿನೊಳಗೆ..."‌ ಪ್ರತಾಪ್ ಹೇಳಿದ.

"ಅಯ್ಯೋ! ಸರಿ-ನಾನು ಕೇಳಿದ್ದು ಡಕ್ಟರ್ ಹತ್ತಿರ ಹೋಗೂಂತ ಹೇಳಿದ್ದೆನಲ್ಲ ಅದರ ವಿಚಾರ ಏನಾಯಿತು"

"ಹೂನಪ್ಪ ಮೊನ್ನೆಯೇ ಹೋಗಿದ್ದೆ. ಪೂರ್ತಿ ಚೆಕಪ್ ಮಾಡಿದರು. ಯಾವ ಫಿಸಿಕಲ್ ತೊಂದರೆನೂ ಇಲ್ಲಾಂತ ಹೇಳಿದರು. ಬ್ಲಡ್ಟೆಸ್ಟ್ ಕೂಡ ಮಾಡಿಸಿಯಾಯಿತು. ನೆನ್ನೆ ಫೋನ್ ಮಾಡಿ ಅದೂ ನಾರ್ಮಲ್ ಅಂತ ಹೇಳಿದರು. ಸೈಕಾಲಾಜಿಕಲ್ ಡಿಸಾರ್ಡರ್ ಆಗಿರಲಿಕ್ಕಿಲ್ಲ, ಟ್ರೀಟ್ಮೆಂಟ್ ಪ್ರಯತ್ನ ಮಾಡೋಣ ಅಂತ ಹೇಳಿದರು. ಕೊನೆ ಪಕ್ಷ ಮಾನಸಿಕ ರೋಗವೇ ಆಗಿದ್ದರೆ ಆಗ ಸೈಕಿಯಾಟ್ರಿಸ್ಟ್ ಹತ್ತಿರ ಅಪಾಯಿಂಟ್ಮೆಂಟ್ ಮಾಡಿಸಿದರಾಯಿತು ಅಂದರು"

"ಸೋಮ್ನಾಬ್ಯುಲಿಸಂ ಬಗ್ಗೆ ಏನು ಹೇಳಿದರು?"

"ಸೋಮ್ನಾಬ್ಯುಲಿಸಂ ಆಗಿದ್ದಲ್ಲಿ ಯಾವ ತೊಂದರೆನೂ ಇಲ್ಲ-ಕೆಲವೇ ದಿನಗಳಲ್ಲಿ ತಾನಾಗಿ ತಾನೇ ವಾಸಿಯಾಗುತ್ತೆ ಆಂದರು. ಆದರೆ ಸೋಮ್ನಾಬ್ಯುಲಿಸಂ ಆಗಿದ್ದರೆ ಪೇಷೆಂಟ್ ಪ್ರತಿಸಾರಿ ನಿದ್ರೆಯಲ್ಲಿ ನಡೆದಾಗಲೂ ಒಂದೇ ರೀತಿ ಕೃತ್ಯಗಳನ್ನ ಮಾಡ್ತಾನೆ ಅಂದರು..."‌ ಪ್ರತಾಪ್ ಸ್ವಲ್ಪ ಸಂದೇಹದಿಂದ ಹೇಳಿದ.

"ಆದರೆ...ಏನೋ?‌ ಏನೋಹೇಳ್ತಾ ಇಲ್ಲ ನೀನು" ನಾಣಿ ಪ್ರತಾಪನನ್ನು ಹಿಡಿದುಹಾಕಿದ

"ಇವತ್ತು ಬಂದು ಕಂಪ್ಯೂಟರ್ ಆನ್ ಮಾಡಿ ಒಂದು ಫೈಲ್ ಬರೆದಿಟ್ಟಿದ್ದೆ"‌ ಎಂದು ಪ್ರತಾಪ್ ಅದರ ವೃತ್ತಾಂತವನ್ನು ಹೇಳಿಕೊಂಡ.

"ಏನೋಪ್ಪ-ನಾನು ಒಂದು ವರ್ಷ ಆಸ್ಟ್ರೇಲಿಯಾಗೆ ಹೋಗಿಬರೋ ಹೊತ್ತಿಗೆ ನೀನೋ ಕೆಲಸನೇ ಬಿಟ್ಟು ಅಲ್ಲೆಲ್ಲೋ ಕುಗ್ರಾಮದಲ್ಲಿ ವಾಸಕ್ಕೆ ಹೋಗಿಬಿಟ್ಟಿದ್ದೀಯ. ಡಾಕ್ಟರ್ ನೋಡಕ್ಕೂಇಲ್ಲಿವರೆಗೆ ಬರಬೇಕು!"

"ಹಾಗೇನಿಲ್ಲ...ಕೆಲಸ, ಬೆಂಗಳೂರು ಬೇಜಾರಾಗಿತ್ತು, ಲಾಟರಿ ಹೊಡೀತು, ಆರಾಮವಾಗಿ ಇರೋಣ ಅಂತ ಅಷ್ಟೆ" ಪ್ರತಾಪ್ ಉತ್ತರಿಸಿದ.

"ಸರಿನಪ್ಪ. ನೀನು ಸೈಕಿಯಾಟ್ರಿಸ್ಟ್ ನೋಡೋಹಾಗಿದ್ದರೆ ಭಾಮಾ ಫ್ರೆಂಡ್ ಒಬ್ಬಳು ಇಲ್ಲೇ ಜಯನಗರದಲ್ಲಿದ್ದಾಳೆ. ನಾನೇ ಅಪಾಯಿಂಟ್ಮೆಂಟ್ ಕೊಡಿಸುತ್ತೀನಿ" ಭಾಮಾ ನಾಣಿಯ ಹೆಂಡತಿ. ಪ್ರತಾಪನಿಗೂ ಚನ್ನಾಗಿ ಪರಿಚಿತಳಾಗಿದ್ದವಳು.

ವಿಷಯ ಬದಲಾಯಿಸುತ್ತ ಪ್ರತಾಪ್ ಕೇಳಿದ "ಭಾಮಾ ಹೇಗಿದ್ದಾರೆ?‌ ಮಗು?"‌

"ಮಾತು ಮರೆಸಬೇಡ. ಸೈಕಿಯಾಟ್ರಿಸ್ಟ್ ಹತ್ತಿರ ಹೋಗೋರೆಲ್ಲ ತಲೆ ಕೆಟ್ಟಿರೋರೇನಲ್ಲ. ಯೋಚನೆ ಮಾಡು" ನಾಣಿ ಬುದ್ಧಿವಾದ ಹೇಳಿದ.

"ಸರಿ, ಯೋಚನೆ ಮಾಡ್ತೀನಿ, ಬಿಡು" ಎನ್ನುತ್ತ ಪ್ರತಾಪ್ ಪೋನ್ ಕೆಳಗಿಟ್ಟ.

*****

ನಾಣಿಯ ಮಾತುಗಳನ್ನು ಕೇಳಿದ ಪ್ರತಾಪ್ ಬಹಳ ಹೊತ್ತು ಯೋಚಿಸುತ್ತ ಕುಳಿತಿದ್ದ. ಮಧ್ಯಾಹ್ನ ಊಟ ಮಾಡಿದ ಮೇಲೆ ಒಂದು ನಿರ್ಧಾರಕ್ಕೆ ಬಂದು ಪುನಃತಾನು ಹಿಂದಿನ ದಿನ ಕಂಡಿದ್ದ ಡಾಕ್ಟರ್ ಪ್ರಕಾಶ್ಗೆ ಫೋನ್ ಮಾಡಿದ. ಅವರಲ್ಲಿ ಹಿಂದಿನ ರಾತ್ರಿಯ ತನ್ನ ಕತೆಯನ್ನು ಹೇಳಿಕೊಂದ.

"ನಿಮ್ಮ ರಿಪೋರ್ಟ್ಸ್ ಎಲ್ಲ ನಾನು ನೆನ್ನೆ ರಾತ್ರೆ ಮತ್ತೆ ನೋಡಿದೆ. ಎಲ್ಲಾ ನಾರ್ಮಲ್ಆಗಿಯೇ ಇದೆ. ಇದೆಲ್ಲ ಕೇವಲ ಸ್ಟ್ರೆಸ್ನಿಂದ ಅಷ್ಟೆ" ಡಾಕ್ಟರ್ ಹೇಳಿದರು.

"ಬೇರೇನೂ ಟೆಸ್ಟ್ ಬೇಡವೇ? ಬ್ರೈನ್ ಟ್ಯೂಮರ್ ತರಹ ಏನಾದರೂ..."‌

"ಛೆ-ಛೆ, ನಾಟ್-ಅಟ್-ಆಲ್. ನೀವು ಏನೇನೋ ಯೋಚನೆ ಮಾಡ್ತಿದ್ದೀರ. ಏನಾದರೂತಲೆನೋವು? ಕಣ್ಣು-ಕತ್ತಲೆ ಬರುತ್ತದೆಯೇ?"

"ಉಹೂ-ಹಾಗೇನಿಲ್ಲ"

"ನಿಮ್ಮ ಕಣ್ಣು ನೆನ್ನೆಯೇ ಪರೀಕ್ಷೆ ಮಾಡಿದ್ದೀನಿ, ರೆಟೀನಾ ಮೇಲೆ ಏನೂಒತ್ತಡ ಇಲ್ಲ. ಹೊಟ್ಟೆ ತೊಳಸುವಿಕೆ, ವಾಂತಿ ಏನಾದರೂ?

"ಇಲ್ಲ"

"ತಲೆ ತಿರುಗುತ್ಯೇ? ಸುಮ್ಮನೆ ನಗು ಬರುವುದು? ಅಥವ ಸಡನ್ಆಗಿ ಸಂತೋಷ ಅಥವ ದುಃಖ?"

"ಉಹೂಂ"

"ಹಾಗಾದರೆ ರೀತಿ ಏನೂ ಇರಲಾರದು"

"ನನಗೆ...."

"ಏನೂ ಒಳಗಿಟ್ಟುಕೊಳ್ಳಬೇಡಿ, ಹೇಳಿಬಿಡಿ"

"ನನಗೆ ಸೈಕೋಥೆರಪಿ ಬೇಕೇ?‌ ಮಾನಸಿಕ ರೋಗೆ ಏನಾದರೂ..?"

"ನೋ-ನೋ, ಸಧ್ಯಕ್ಕೆ ನನಗೆ ಅದರ ಅವಶ್ಯಕತೆ ಕಾಣಿಸೋಲ್ಲ"

"ನಿದ್ದೆಗುಳಿಗೆ, ಅಥವ ಬೇರೇನಾದರೂಡ್ರಗ್ಸ್ ಉಪಯೋಗವಾದೀತೆ?"

"ನಿದ್ದೆಗುಳಿಗೆ ಅಡಿಕ್ಟಿವ್. ಶುರು ಮಾಡಿದರೆ ನಿಲ್ಲಿಸೋದು ಕಷ್ಟ. ಮೇಲಾಗಿ ನಿಮಗೆ ನಿದ್ದೆ ಬಾರದಿರುವ ತೊಂದರೆಯಿಲ್ಲವಲ್ಲ. ಪ್ರತಾಪ್, ನಾನು ಹೇಳೋದು ಕೇಳಿ. ಇವತ್ತು ಎಲ್ಲ ಯೋಚನೆ ಬಿಟ್ಟು ಹೊರಗ ಹೋಗಿ. ಎಲ್ಲಿಯಾದರೂ ದೂರ ವಾಕಿಂಗ್, ಎಕ್ಸರ್ಸೈಜ್, ಏನಾದರೂ ಫಿಸಿಕಲ್-ಆಕ್ಟಿವಿಟಿ ಮಾಡಿ. ರಾತ್ರಿ ಸುಸ್ತಾಗಿದ್ದರೆ ತಾನಾಗಿ ತಾನೇನಿದ್ರೆ ಬರುತ್ತೆ."‌ ಎಂದು ಹೇಳಿ, ಡಾಕ್ಟರ್ ಮಾತು ಮುಗಿಸಿದರು.

ಅವರು ಹೇಳಿದಂತೆಯೇ ಪ್ರತಾಪ್ ಹಿತ್ತಲಲ್ಲಿ ಒಣಗಿಹೋದಿದ್ದ ಮರವೊಂದನ್ನು ಕಡಿದು ಹಾಕಿ. ನಂತರ ಮಳೆ ಬರುವಂತಿದ್ದರಿಂದ ಛತ್ರಿ ಹಿಡಿದು ಪಕ್ಕದ ಹಳ್ಳಿಯವರೆಗು ನಡೆದು ಹೋದ. ಅಲ್ಲಿ ಸಣ್ಣ ಪೆಟ್ಟಿಗೆ ಅಂಗಡಿಯೊಂದರಲ್ಲಿ ಕಾಫಿ ಕುಡಿದು ಹಿಂತಿರುಗಿ ಬರುವಹೊತ್ತಿಗೆ ಕತ್ತಲಾಗಿತ್ತು. ಹಗುರವಾಗಿ ತಿಂಡಿ ತಿಂದು, ಸ್ವಲ್ಪ ಹೊತ್ತು ಪುಸ್ತಕವೊಂದನ್ನು ಓದುತ್ತಿದ್ದಂತೆ ಕಣ್ಣೆಳೆಯ ತೊಡಗಿತು. ಪುಸ್ತಕ ಕೆಳಗಿಟ್ಟು ಹೋಗಿ ಮಂಚದ ಮೇಲೆ ಮಲಗಿ, ದಿಂಬಿನಮೇಲೆ ತಲೆಯೂರಿದ ಕ್ಷಣದಲ್ಲಿ ಕಣ್ಣಿಗೆ ನಿದ್ರೆ ಹತ್ತಿತ್ತು.

*****

ಬೆಳಗ್ಗೆ ಎಚ್ಚರವಾದಾಗ ಕಪಾಟಿನಲ್ಲಿರಲಿಲ್ಲ. ಬೆಡ್ರೂಮಿನಲ್ಲೂ ಇರಲಿಲ್ಲ. ಮನೆಯ ಪಕ್ಕದಲ್ಲಿ ಹಿಂದೆ ಕೊಟ್ಟಿಗೆಯಾಗಿದ್ದ ಕೋಣೆಯಲ್ಲಿದ್ದ. ಎಚ್ಚರವಾದಾಗ ಆತಂಕದಿಂದ ಏದುಸಿರೆಳೆಯುತ್ತಿದ್ದ. ಅವನ ಎದೆ ನೂರು ಮೈಲಿ ವೇಗದಲ್ಲಿ ಹೊಡೆದುಕೊಳ್ಳುತ್ತಿತ್ತು. ಗಂಟಲು ಒಣಗಿ, ಕೈಕಾಲುಗಳು ಜೋಮುಹಿಡಿದು ನೋಯುತ್ತಿದ್ದವು.

ರಾತ್ರಿಯಲ್ಲಿ ಮನೆಯ ಬಾಗಿಲು ತೆಗೆದು ಕೊಟ್ಟಿಗೆಯೊಳಗೆ ಹೊಕ್ಕು, ಮೂಲೆಯಲ್ಲಿಟ್ಟಿದ್ದ ಗೊಬ್ಬರದ ಚೀಲಗಳನ್ನು ತಂದು ಭದ್ರಪಡಿಸಿಕೊಳ್ಳಲೇನೋಎಂಬಂತೆ ಸುತ್ತಲು ಇರಿಸಿ, ಒಣಗಿದ್ದ ತೊಟ್ಟಿಯೊಂದರಲ್ಲಿ ಮಲಗಿದ್ದ-ಬಚ್ಚಿಟ್ಟುಕೊಂಡಿದ್ದ.

ಯಾರಿಂದ?‌ ಏನನ್ನು ಕಂಡು?

ಈಗಲೂಎದ್ದು ಕೂತು ಅಂಗೈಯಿಂದ ಕಣ್ಣುಗಳನ್ನುಜ್ಜಿಕೊಳ್ಳುತ್ತ ಅವುಗಳಿಂದ ನಿದ್ರೆ ಜಾರುತ್ತಿದ್ದಂತೆ ನಿದ್ರೆಯ ಆತಂಕ ಇನ್ನೂ ಅವನ ಎದೆಯನ್ನು ಕವಿದಿತ್ತು. ಎದೆ ಹೊಡೆದುಕೊಳ್ಳುತ್ತಿತ್ತು. ಭಯ!

ಏತಕ್ಕೆ?

ಕನಸು-ಕೆಟ್ಟ ಕನಸು! ಕನಸಿನಲ್ಲಿ ಓಡುತ್ತಿದ್ದಿರಬೇಕು! ಯಾವುದೋಪೆಡಂಭೂತದಿಂದ ತಪ್ಪಿಸಿಕೊಳ್ಳುತ್ತಿದ್ದಿರಬೇಕು! ಕನಸಿನಲ್ಲಿ ಬಚ್ಚಿಟ್ಟುಕೊಳ್ಳಲು ಹೋದವ ನಿದ್ರೆಯಲ್ಲಿ ನಡೆದಾಗ ವಾಸ್ತವವಾಗಿ ಬಂದು ಅವಿತುಕೊಂಡಿರಬೇಕು! ಒಂದು ಕ್ಷಣ ಅಂತರ್ದೃಷ್ಟಿಯೊಂದು ಮೊಟ್ಟೆಯಂತಿದ್ದ ತನ್ನ ತಾಮಸವನ್ನು ಒಡೆದು ಅರಿವಿನ ಹೊಳೆ ಹರಿಸುವುದೇನೋಎನಿಸಿತು; ಆದರೆ ಕೂಡಲೆ ಹಿಮ್ಮಿಟ್ಟಲಾರಂಭಿಸಿ, ಒಂದೇ ಕ್ಷಣದಲ್ಲಿ ಜಾರಿಹೋಯಿತು.

ಕೊಟ್ಟಿಗೆಯಲ್ಲಿದ್ದ ಸಣ್ಣ ಗವಾಕ್ಷಿಯಿಂದ ಬರುತ್ತಿದ್ದ ಕೊಂಚ ಬೆಳಕಲ್ಲಿ ನೆರಳುಗಳು ಬೃಹತ್ತಾಗಿದ್ದವು. ಪೂರ್ಣ ಎಚ್ಚರ ಮಾಡಿಕೊಂಡು ಎದ್ದು ನಡೆದು ಮನೆಯೊಳಗೆ ಹೋದ. ಹೊರಗೆ ಮಲಗಿದ್ದ ಕಾರಣ ಛಳಿಯಾಗಿ ಮೈನಡುಗುತ್ತಿತ್ತು. ಕಾಫಿ ಮಾಡಿಕೊಂಡು ಬಿಸಿ ಕಾಫಿಯ ಲೋಟದಿಂದ ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳುತ್ತ ತನ್ನ ಕಂಪ್ಯೂಟರ್ ಆನ್ ಮಾಡಿದ. ಒಂದು ಗುಟುಕು ಕಾಫಿ ಹೀರಿ ಅದನ್ನು ನೇರ ನುಂಗದೆ ಒಂದು ಕ್ಷಣ ಬಾಯಲ್ಲಿರಿಸಿಕೊಂಡು ನಂತರ ನುಂಗಿದಾಗ ಜ್ವಾಲಾಮುಖಿಯಂತೆ ಬಿಸಿಯಾಗಿದ್ದ ಕಾಫಿ ಅವನ ಹೊಟ್ಟೆಯಲ್ಲಿ ಬೆಂಕಿ ಹೊತ್ತಿಸಿತು; ನೆನಪಿಲ್ಲದ ದುಸ್ವಪ್ನದ ಆತಂಕದ ಲೇಶವು ಹಾರಿ ಹೋಗಿ ಪ್ರಪಂಚವು ಮತ್ತೆ ಯಥಾಸ್ಥಿತಿಗೆ ಬಂದಂತಾಯಿತು.

ಹಿಂದಿನ ದಿನದಂತೆ ಏನಾದರೂ ಸಂದೇಶ ಬಿಟ್ಟುರುವೆನೇ ಎಂದು ಕಂಪ್ಯೂಟರ್ನಲ್ಲಿ ಹುಡುಕಿದ-ಏನೂಕ್ರಮಗೆಟ್ಟಂತೆ ಕಾಣಿಸಲಿಲ್ಲ; ಯಾವ ಹೊಸ ಸಂದೇಶವೂಇರಲಿಲ್ಲ. ಕಾಫಿ ಕುಡಿದು ಮುಗಿಸಿ, ದಿನದ ಸಮಾಚಾರವನ್ನು ಓದಿದ ನಂತರ ಎಲ್ಲವೂ ಸ್ಥಬ್ಧವೆನಿಸಿತು. ಬಹಳ ಹೊತ್ತು ಅಲ್ಲೇ ಯೋಚಿಸುತ್ತ ಕೂತಿದ್ದು, ಮನಸಿಗೆ ಏನಾದರೂ ಪ್ರಚೋದಿಸಬಹುದೆಂದು ಕೊಟ್ಟಿಗೆಗೆ ಮರಳಿದ. ಏನೂ ಹೊಳೆಯಲಿಲ್ಲ. ಗೊಬ್ಬರದ ಚೀಲಗಳನ್ನು ಮೂಲೆಗೆ ಎತ್ತಿಟ್ಟು ಸ್ನಾನಾದಿಗಳನ್ನು ಮುಗಿಸಲು ಮನೆಯೊಳಗೆ ಹೋದ.

ಬೆಳಗಿನಿಂದ ತನ್ನ ಬೆಡ್ರೂಮಿಗೆ ಹೋಗಿಯೇ ಇರಲಿಲ್ಲ. ಈಗ ಸ್ನಾನಕ್ಕೆ ಟವಲ್ ತೆಗೆದುಕೊಳ್ಳಲು ರೂಮಿಗೆ ಕಾಲಿಟ್ಟಾಗ ಏನೋ ವಿಚಿತ್ರ ಕಂಡಿತು. ಪ್ರಾಣಿಗಳನ್ನು ಹೊರಗಿಡಲು ಅಂಗಳಕ್ಕೆ ಹಾಕಿದ್ದ ಜಾಲಿ ಮುಳ್ಳಿನ ಬೇಲಿ ಬರುವವರನ್ನು ತಡೆಯಲೇನೋ ಎಂಬಂತೆ ನೆಲದಲ್ಲಿ ಉದ್ದಕ್ಕೆ ಬಿದ್ದಿತ್ತು. ಕತ್ತಲಲ್ಲಿ ಬಂದಿದ್ದರೆ ಮುಳ್ಳು ಕಾಲಿಗೆ ನಾಟಿ ಗಾಯವಾದೀತು! ತಕ್ಷಣ ಮುಳ್ಳು ಚುಚ್ಚಿದೆಯೇ ಎಂದು ಪಾದ ನೋಡಿಕೊಳ್ಳುವ ಮನಸಾದರೂ, ತಡೆದುಕೊಂಡ. ಮಂಚದ ಮೇಲಿದ್ದ ಇನ್ನೆರಡು ವಸ್ತುಗಳು ಅವನ ಗಮನ ಸೆಳೆದವು. ನೆನ್ನೆ ಹಿತ್ತಲ ಮರವನ್ನು ಕಡಿಯಲು ಬಳಸಿದ್ದ ಮಚ್ಚು ದಿಂಬಿನ ಪಕ್ಕದಲ್ಲಿತ್ತು. ಕೆಳಗೆ ನೆಲ ಅಗಿಯಲು ಬಳಸುತ್ತಿದ್ದ ಪಿಕಾಸಿ ಬಿದ್ದಿತ್ತು.

ಪ್ರತಾಪ್ ಮಚ್ಚನ್ನು ಕೈಯ್ಯಲ್ಲಿ ಹಿಡುದು ಮುಖ ಗಂಟಿಕ್ಕಿದ. ಮಚ್ಚು ಹರಿತವಾಗಿತ್ತು. ರಾತ್ರಿಯ ಅವೇಳೆಯಲ್ಲಿ ಏನು ಮಾಡುತ್ತಿದ್ದಿರಬಹುದು? ನೋಡಿದರೆ ಏನನ್ನೋ-ಯಾರನ್ನೋ-ತಡೆಯಲೋ, ಹೊಡೆಯಲೋ ಆಯುಧಗಳನ್ನು, ಬೇಲಿಯನ್ನು ತಂದಿದ್ದಿರಬೇಕು. ಆಮೇಲೆ ಅದು ವಿಫಲವೆನಿಸಿ ಕೊಟ್ಟಿಗೆಗೆ ಓಡಿ ಗೊಬ್ಬರದ ಚೀಲಗಳ ಮಧ್ಯೆ ಅವಿತುಕೊಂಡಿದ್ದಿರಬೇಕು. ರೂಮಿನ ಕಿಟಕಿಯಿಂದ ಹೊರಗೆ ನೋಡಿದ. ಬದನೆ-ಅವರೆಯ ಗೆಡಗಳು ತಂಗಾಳಿಯಲ್ಲಿ ತೂಗುತ್ತಿದ್ದವು. ನೆನ್ನೆ ರಾತ್ರಿಯಲ್ಲಿ ಆಸ್ಥಳದಲ್ಲಿ ಬೇರೇನೂಇದ್ದಂತೆ ಕಾಣಲಿಲ್ಲ, ಆದರೂ...

ಪ್ರತಾಪ್ ಚಿಂತಾಮಗ್ನನಾಗಿ ಸ್ನಾನ ಮುಗಿಸಿ, ತಿಂಡಿ ತಿಂದ. ಇನ್ನೂ ಸ್ವಲ್ಪ ಹೊತ್ತಿನ ಯೋಚನೆಯ ನಂತರ ಬೇರೆ ಯಾರೊಡನೆಯೂ ಮಾತನಾಡಲಾಗದೆಂದು ನಾಣಿಗೆ ಫೋನ್ ಮಾಡಿದ.

"ನಾಣಿ, ಒಂದೊಂದ್ಸರ್ತಿ ಅನ್ನಿಸುತ್ತೆ ನನಗೆ ಹುಚ್ಚೇ ಹಿಡಿದುಬಿಟ್ಟಿದೆ" ಪ್ರತಾಪ್ ಉದ್ವಿಗ್ನನಾಗಿ ಹೇಳಿದ.

"ಯಾಕೋ?‌ ಏನಾಯ್ತೋ?‌ ಹೀಗೆಲ್ಲ ಯಾಕೆ ಮಾತಾಡುತ್ತಾ ಇದ್ದೀಯ?" ನಾಣಿ ಗಾಬರಿಯಾಗಿ ಕೇಳಿದಾಗ ಪ್ರತಾಪ್ ಮಚ್ಚು-ಪಿಕಾಸಿ ಬಿಟ್ಟು ರಾತ್ರಿಯ ದೀರ್ಘ ಕತೆಯನ್ನು ವಿವರವಾಗಿ ಹೇಳಿದ.

"ನಿನ್ನ ತಲೆ. ಪೆದ್ದು ಪೆದ್ದಾಗಿ ಏನೇನೋ ಸೆಲ್ಫ್-ಡಯಾಗ್ನೋನ್ ಮಾಡಿಕೋಬೇಡ. ಡಾಕ್ಟರ್ರೇ ಸೈಕೋಥೆರಪಿ ಬೇಡಾಂದ್ರೂ ಅಂದೆ" ನಾಣಿ ಧೈರ್ಯ ಹೇಳಿದ.

"‌ಏನೋ ನನಗೇನು ತೋಚ್ತಾ ಇಲ್ಲ"‌

"ಸರಿ. ಇಬ್ಬರೂಸೇರಿ ಯೋಚನೆ ಮಾಡೋಣ. ನಿನಗೆ ಇದು ಬರೀ ಸ್ಟ್ರೆಸ್ನಿಂದ ಆಗ್ತಿದೆ ಅಂತ ಅನ್ನಿಸೋಲ್ಲ, ಅಲ್ಲವೇ?"

"ಉಹೂಂ. ಇಲ್ಲಿ ನನಗೆಂಥಹ ಸ್ಟ್ರೆಸ್? ಹೋಗಲಿ ಸುಮ್ಮನೆ ಒಂದೋ ಎರಡೋ ಸಾರಿ ನಿದ್ದೆಲಿ ನಡೆದಿದ್ದರೆ ಇರಬಹುದು ಅಂದುಕೊಳ್ತಿದ್ದೆ. ಇದಂತು ಹುಚ್ಚು...ಹುಚ್ಚೇ! ಮನೆ ಒಳಗೇ ಬೇಲಿ ಹಾಕಿಕೊಂಡಿದ್ದೆ. ಸ್ಟ್ರೆಸ್ ದೂರ ಇಡೋಕ್ಕೆ ಬೇಲಿ ಹಾಕ್ತೀನ್ಯೇ?"

"ಬೆಂಗಳೂರಿನ ಕೆಲಸ ಬಿಟ್ಟು ಬಂದಿದ್ದು ನಿನ್ನ ಮೇಲೆ ಸ್ಟ್ರಾಂಗ್ ಪ್ರಭಾವ ಬೀರಿರಬೇಕು"

"ಇಲ್ಲಪ್ಪ. ಇದೆಲ್ಲ ಶುರುವಾಗೋಕ್ಕೆ ಮುಂಚೆ ನಿಜವಾಗಿ ನಾನು ಆರಾಮವಾಗಿದ್ದೆ. ಈಗಲೂಒಂದು ದಿನವೂಬೆಂಗಳೂರಿನ ಯೋಚನೆ ಬಂದಿಲ್ಲ"

"ಹಾಗಿದ್ರೆ..."

"ಮಂಚದ ಅಡಿ ಮಲ್ಕೊತೀನಿ, ಕಪಾಟಿನೊಳಕ್ಕೆ ಬಚ್ಚಿಟ್ಟುಕೊತೀನಿ, ರಾತ್ರೋ ರಾತ್ರಿ ಕಂಪ್ಯೂಟರ್ ಮೇಲೆ ಮೆಸೇಜ್ ಬಿಡ್ತೀನಿ, ಮಂಚದ ಮೇಲೆ ಮಚ್ಚು..."

"ಮಚ್ಚು? ಮಚ್ಚಿನ ಬಗ್ಗೆ ನೀನೀನೂಹೇಳಲಿಲ್ಲ..."‌ ಮತ್ತೆ ಗಾಬರಿಯಿಂದ ನಾಣಿ ಕೇಳಿದ.

"ಹೂಂ...ನೆನ್ನೆ ಮರ ಕಡೀತಿದ್ದೆ. ಇವತ್ತು ಬೆಳಗ್ಗೆ ಮಚ್ಚು ನನ್ನ ದಿಂಬಿನ ಪಕ್ಕ ಇತ್ತು!"

"ಯಾಕೆ?"

"ನನ್ನನ್ನ ಯಾರು ಬೆನ್ನು ಹತ್ತಿದ್ದಾರೋಅವರಿಂದ ರಕ್ಷಣೆಗೆ!"

"ಯಾರು ನಿನ್ನ ಬೆನ್ನು ಹತ್ತಿದ್ದಾರೆ?"

"ನನಗೆ ಗೊತ್ತಿರೋಹಾಗೆ ಯಾರೂಇಲ್ಲ"

"ಯಾಕೋ ನನಗಿದು ಸರಿಯಾಗಿ ಕಾಣಿಸುತ್ತಾ ಇಲ್ಲ, ಪ್ರತಾಪ್. ಮಚ್ಚಿನಿಂದ ಏನಾದರೂ ನಿನಗೆ ನೀನೇ ಗಾಯ ಮಾಡಿಕೊಂಡಿದ್ದರೆ...?"

"ನಾಣಿ, ನನಗೆ ಅದಕ್ಕಿಂತ ಇನ್ನೂ ಹೆಚ್ಚು ಭಯವಾಗೋದು..."

"ಹೂಂ..?"

"ಬೇರೆ ಯಾರ ಮೇಲಾದರೂ ಅದರ ಪ್ರಯೋಗ ಮಾಡಿದರೆ...?"

"ನಿನ್ನ ತಲೆ!‌ ಏನೇನೋ ಯೋಚನೆ ಮಾಡಬೇಡ. ಒಂದು ಕೆಲಸ ಮಾಡು:‌ ಈಗಿಂದೀಗಲೇ ಹೊರಟು ಇಲ್ಲಿಗೆ ಬಾ. ಅಥವ ನಾನೇ ಅಲ್ಲಿಗೆ ಬರಲೋ?"‌ ಪ್ರತಾಪ್ ಬೇಡವೆಂದು, ತಾನೇ ಬರುವೆನೆಂದು ಹೇಳಿದಾಗ "ನಾನೂ ರಜ ತೊಗೋತೀನಿ. ಒಬ್ಬನೇ ಅಲ್ಲೆಲ್ಲೋ ದೂರದಲ್ಲಿದ್ದು ನಿನಗೇನೇನೋಆಗಿ ಹೋಗಿದೆ" ಎಂದು ಹೇಳಿ, ಬನಶಂಕರಿಯಲ್ಲಿದ್ದ ತನ್ನ ಮನೆಯಲ್ಲಿ ಸಂಧಿಸುವ ಯೋಜನೆ ಹೂಡಿ ನಾಣಿ ಫೋನ್ ಕೆಳಗಿಟ್ಟ.

*****

ಎಂದೂ ಇಲ್ಲದ್ದು ಅಂದು ಮನೆಯನ್ನು ಭದ್ರ ಪಡಿಸಿ, ಬೀಗ ಹಾಕಿಕೊಂಡು ಪ್ರತಾಪ್ ತನ್ನ ಪುಟ್ಟ ಟಾಟಾ ನ್ಯಾನೋಕಾರನ್ನು ಹತ್ತಿ ಬೆಂಗಳೂರು-ಕನಕಪುರ ರಸ್ತೆಯ ಕಡೆ ತಿರುಗಿಸಿದ. ಬೆಂಗಳೂರನ್ನು ಬಿಟ್ಟು ಬಂದಾಗ ತನ್ನ ಫಾರಂಹೌಸ್ ಜೊತೆಗೆ ಕಾರನ್ನೂಕೊಂಡಿದ್ದ. ಕೇವಲ ೬೩೦ ಸಿ.ಸಿ ಎಂಜಿನ್ ಕೆಪ್ಯಾಸಿಟಿ ಹೊಂದಿದ್ದ, ಕೇವಲ ೧೦ ಅಡಿ ಉದ್ದವಿದ್ದ ಪುಟಾಣಿ ಕಾರು ಪ್ರತಾಪ ಮನೆಯ ಸುತ್ತಲು ಇದ್ದ ಸಣ್ಣ ಗ್ರಾಮ ರಸ್ತೆಗಳಿಗೆ ಹೇಳಿ ಮಾಡಿಸಿದಂತಹ ಕಾರು. ಕಾರಿನ ಮೂಲೆಗಳಲ್ಲಿದ್ದ ಅದರ ನಾಲ್ಕು ಗಾಲಿಗಳು ಹಳ್ಳ-ಕೊಳ್ಳಗಳಿದ್ದ ರಸ್ತೆಗಳಲ್ಲಿ ಸ್ಮೂತ್-ರೈಡ್ ಕೊಡುತ್ತಿತ್ತು. ಸುಮಾರು ೨೦ ಕಿಲೋಮೀಟರ್ಗಳಿಗೆ ಒಂದು ಲೀಟರ್ ಪೆಟ್ರೋಲ್ ಕುಡಿಯುತ್ತಿದ್ದ ಕಾರಿನಿಂದ ಪ್ರತಾಪ್ ತೃಪ್ತನಾಗಿದ್ದ.

ಆಕಾಶದಲ್ಲಿ ಮೋಡ ಕವಿದಿತ್ತು. ಇನ್ನೇನು ಮಳೆ ಬರುವಹಾಗಿತ್ತು. ದಾರಿಯಲ್ಲಿ ಹಸಿರು ತೊಟ್ಟು ಕಂಗೂಳಿಸುತ್ತಿದ್ದ ಹೊಲ-ಗದ್ದೆಗಳಿಗೆ ದೂರದ ಬೆಟ್ಟಗಳು ಸೂಕ್ತ ಹಿನ್ನೆಲೆಯಾಗಿದ್ದವು. ತನ್ನ ವ್ಯಾಕುಲತೆಯನ್ನು ಮರೆತು ಪ್ರತಾಪ್ ಸುಂದರ ದೃಷ್ಯವನ್ನು ಶ್ಲಾಘಿಸುತ್ತಿದ್ದಂತೆ ಬೆಂಗಳೂರು-ಕನಕಪುರ ಹೈವೇ ಬಂದೇಬಿಟ್ಟಿತು. ’ಶುರುವಾಯಿತು ಪಲ್ಯೂಶನ್ಎಂದುಕೊಳ್ಳುತ್ತ ಸದಾ ಹೆಚ್ಚು ಟ್ರಾಫಿಕ್ ಇರುವ ರಸ್ತೆಯ ಮೇಲೆ ಪ್ರತಾಪ್ ಜೋಪಾನವಾಗಿ ಕಾರನ್ನು ಚಲಿಸಲಾರಂಭಿಸಿದ. ಗಾಳಿಯ ಮಲಿನ ಹೆಚ್ಚಾದಂತೆಇನ್ನೇನು ಊರು ಬಂತುಎನ್ನುವ ಭಾಸವಾಯಿತು. ಜೆ.ಪಿ.ನಗರದ ಬಳಿ ನೂರು ಅಡಿ ರಸ್ತೆಯನ್ನು ದಾಟಿ ಕೊಂಚ ಮುನ್ನಡೆದು ಮುಖ್ಯರಸ್ತೆಯಿಂದ ಎಡಕ್ಕೆ ತಿರುಗಿ, ಒಳರಸ್ತೆಗಳಲ್ಲಿ ಐದು ನಿಮಿಷ ಹೋಗಿ, ನಾಣಿಯ ಬಂಗಲೆಯ ಮುಂದೆ ಬಂದು ಕಾರನ್ನು ನಿಲ್ಲಿಸಿದ.

ಇಂಜಿನ್ ಆರಿಸಿದಾಗ ಪ್ರತಾಪ್ಗೆ ತನ್ನ ಕ್ಲೇಶಗಳಲ್ಲ ನೆನಪಾಗಿ, ತನ್ನನ್ನು ತಾನೇ ಸಂತೈಸಿಕೊಳ್ಳಲು ಒಂದೆರಡು ನಿಮಿಷ ಕಾರಿನಲ್ಲೇ ಕೂತಿದ್ದ. ಕೊನೆಗೆ ನಾಣಿಗೆ ಎದುರಾಗುವ ಧೈರ್ಯ ಮೂಡಿ, ಕಾರಿನಿಂದಿಳಿದು, ಹಿಂದೆ ಟ್ರಂಕ್ನಿಂದ ಅವರೆಕಾಯಿಯ ಬುಟ್ಟಿಯನ್ನು ಕೈಗೆತ್ತಿಕೊಂಡು, ಕಾರಿಗೆ ಬೀಗ ಹಾಕಿದ. ಗೇಟ್ ತೆಗೆದು, ಬಾಗಿಲ ಮುಂದಿದ್ದ ಎರಡು ಮೆಟ್ಟಿಲುಗಳನ್ನೇರಿ ಬಾಗಿಲ ಘಂಟೆಯನ್ನು ಒತ್ತಿದ.

ನಾಣಿಯನ್ನು ನೋಡುವೆ ಎಂದುಕೊಂಡಿದ್ದ ಪ್ರತಾಪ್ಗೆ ಅಪರಿಚಿತ ಮೆಹಿಳೆಯೊಬ್ಬಳು ಬಾಗಿಲು ತೆರೆದಾಗ ಸ್ವಲ್ಪ ಗೊಂದಲವೇ ಆಯಿತು. ಸುಮಾರು ೩೪-೩೫ ವರ್ಷ, ತ್ರಿಪುರ ಸುಂದರಿ ಅನ್ನುವಹಾಗಿಲ್ಲದಿದ್ದರೂ, ಲಾವಣ್ಯಮಯ ಉಪಸ್ಥಿತಿ ಹೊಂದಿದ್ದಾಳೆ. ಸುಮಾರು ಐದುವರೆ ಅಡಿ ಎತ್ತರ, ಲಘು ಮೈಕಟ್ಟು, ತೆಳ್ಳನೆಯ ಕನ್ನಡಕದ ಹಿಂದೆ ಚುರುಕು ಕಣ್ಣುಗಳು, ಫ್ಯಾಶನೆಬಲ್ಆಗಿದ್ದರೂ ಲಕ್ಷಣವಾಗಿದ್ದಾಳೆ. ನಾಣಿಯ ಮನೆಯಲ್ಲಿ ಈಕೆಯನ್ನು ಎಂದೂನೋಡಿಲ್ಲ-ಸರಿಯಾದ ಮನೆಗೆ ಬಂದೆನೆ?‌ಇಷ್ಟೆಲ್ಲ ಯೋಚನೆಗಳು ಕ್ಷಣಾರ್ಧದಲ್ಲಿ ಪ್ರತಾಪ್ ತಲೆಯಲ್ಲಿ ಓಡಿದವು.

ಪ್ರತಾಪ್ನನ್ನು ಕಂಡು ಮಂದಸ್ಮಿತೆಯನ್ನು ಸೂಸಿದಳು. ಪ್ರತಾಪ್ ಇನ್ನಷ್ಟು ತಬ್ಬಿಬ್ಬಾಗಿ "ನಾರಾಯಣ, ಭಾಮಾ....?" ಎಂದು ತಡವರಿಸಿದ.

"ಬಾ ಪ್ರತಾಪ್, ಒಳಗೆ ಬಾ" ಒಳಗಿನಿಂದ ಭಾಮಾ ಧ್ವನಿ ಬಂತು. "ಅಡಿಗೆ ಕೂಡಿಸುತ್ತಾ ಇದ್ದೀನಿ-ಕೈ ಬಿಡುವಾಗಲಿಲ್ಲ"

ಪ್ರತಾಪ್ ಬಾಗಿಲು ತೆರೆದವಳ ಕಡೆ ಕಿರುನಗೆ ಬೀರಿ, ’ಥ್ಯಾಂಕ್ಸ್ಹೇಳಿ ಒಳಗೆ ನಡೆದ. ದೊಡ್ಡ ಅಡಿಗೆಮನೆಯಲ್ಲಿ ಅಡಿಗೆಯಲ್ಲಿ ವ್ಯಸ್ಥಳಾಗಿದ್ದ ಭಾಮಾಳನ್ನು ಕಂಡು "ಚನ್ನಾಗಿದ್ದೀಯ ಭಾಮಾ?‌ ನಾಣಿ ಎಲ್ಲಿ?" ಎಂದು ಕೇಳುತ್ತ ಅವರೆಕಾಯಿಯ ಬುಟ್ಟಿಯನ್ನು ಅಡಿಗೆಮನೆಯ ಕಟ್ಟೆಗ ಮೇಲಿರಿಸಿದ.

ಸೊಗಡಿನ ಅವರೆಕಾಯಿಯ ವಾಸನೆ ಎಳೆಯುತ್ತ ಭಾಮ "ವಾವ್!" ಎಂದಳು "ಮಹಡಿಮೇಲೆ ಇರಬೇಕು. ನಿನ್ನ ಮಾತು ಕೇಳಿಸಿಕೊಂಡು ಬರ್ತಾರೆ"

ಇಷ್ಟು ಹೊತ್ತಿಗೆ ಬಾಗಿಲುತೆರೆದವಳು ಅಡಿಗೆಮನೆಗೆ ಬಂದಿದ್ದಳು. ಅವಳ ಕಡೆ ನೋಡಿ ಪ್ರತಾಪ್ "ಇವರೂ...?" ಎಂದ.

"ಓಹ್, ಸಾರಿ. ಈಕೆ ನನ್ನ ಫ್ರೆಂಡ್ ಸುಚಿತ್ರಾ-ಡಾಕ್ಟರ್ ಸುಚಿತ್ರಾ" ಭಾಮಾ ಪರಿಚಯ ಮಾಡಿದಳು. "ಇವರು ಪ್ರತಾಪ್-ನಮ್ಮ ಮನೆಯವರ ಕಸಿನ್"

ಪ್ರತಾಪ್ ಸುಚಿತ್ರಾ ಕಡೆ ತಿರುಗಿ "ಹಲೋ" ಎಂದ.

"ಹೈ" ಎಂದಳು ಸುಚಿತ್ರಾ. "ಮ್ಮ್ಮ್... ಸೂಪರ್ ಅವರೆಕಾಯಿ" ಸೊಗಡಿನಿಂದ ಹೊಮ್ಮುತ್ತಿದ್ದ ವಸನೆ ಹಿಡಿದು ಕೇಳಿದಳು "ಎಲ್ಲಿ ಸಿಗುತ್ತೆ?"

"ಇದು ನಮ್ಮ ಫಾರಂನಲ್ಲಿ ಬೆಳೆದಿದ್ದು. ಸೂಪರ್-ಫ್ರೆಶ್"‌ ಮುಗುಳ್ನಗುತ್ತ ಪ್ರತಾಪ್ ಹೇಳಿದ. "ಮುಂದಿನ ಸಾರಿ ಬಂದಾಗ ನಿಮಗೂ ಒಂದು ಬುಟ್ಟಿ ತರ್ತೀನಿ"

"ಫಾರಂ?‌ ವಾವ್! ವೀಕೆಂಡ್ ಗೆಟ್ಅವೇ ನಾ?"

"ಓಹ್! ಇಲ್ಲಮ್ಮಾ. ಪ್ರತಾಪ್ ರಿಟೈರ್ಮೆಂಟ್ ತೊಗೊಂಡು, ಈಗ ಅಲ್ಲೇ ಇರ್ತಾರೆ"‌ ಭಾಮಾ ಸಂವಾದಕ್ಕೆ ಸೇರಿಕೊಂಡಳು.

"ರಿಟೈರ್?" ಸುಚಿತ್ರಾ ಹಾಸ್ಯಕರವಾಗಿ ಪ್ರತಾಪನನ್ನು ಕೆಳಗೆ ಮೇಲೆ ನೋಡಿ "ಏನು ಸನ್ಯಾಸನೇ?" ನಗುತ್ತ ಕೇಳಿದಳು.

"ಹಾಗೇನಿಲ್ಲ...ಕೆಲಸ, ಬೆಂಗಳೂರು ಬೇಜಾರಾಗಿತ್ತು, ಲಾಟರಿ ಹೊಡೀತು, ಆರಾಮವಾಗಿ ಇರೋಣ ಅಂತ ಅಷ್ಟೆ" ಪ್ರತಾಪ್ ಉತ್ತರಿಸಿದ.

ವಿಚಿತ್ರ ಮೌನ ಆವರಿಸಿತು. ಯಾರಿಗೂಮಾತು ತೋಚಲಿಲ್ಲ. ಸಮಯಕ್ಕೆ ಸರಿಯಾಗಿ ನಾಣಿ ಪ್ರವೇಶಿಸಿದ.

"ಪ್ರತಾಪ್! ಹೇಗಿದ್ದೀಯೋ?" ತಟಸ್ತನಾಗಿ ನಾಣಿ ಕೇಳಿದ.

ಅಡಿಗೆಮನೆಯಲ್ಲೇ ಹಾಕಿದ್ದ ಡೈನಿಂಗ್ಟೇಬಲ್ ಮೇಲೆ ಸುಚಿತ್ರಾ, ನಾಣಿ ಮತ್ತು ಪ್ರತಾಪ್ ಕುಳಿತುಕೊಂಡರು.

"ಈಕೆ ಡಾಕ್ಟರ್ ಸುಚಿತ್ರಾ. ಭಾಮಾ ಫ್ರೆಂಡ್ ಅಂತ ಹೇಳಿದ್ದೆನಲ್ಲ-ಸೈಕಿಯಾಟ್ರಿಸ್ಟ್"‌ ನಾಣಿ ವಿವರಿಸಿದ.

"ಓಹ್..." ಪ್ರತಾಪ್ ಉದ್ಗಾರ ತೆಗೆದ. ನಾಣಿ ನನಗೆಸೆಟಪ್ಮಾಡಿದ್ದಾನೆ ಎಂಬ ಅಸಮಾಧಾನ ಒಂದು ಕ್ಷಣ ಉಂಟಾದರೂ ಮರುಕ್ಷಣ ಅವನ ಧ್ಯೇಯದ ಅರಿವಾಗಿ ಅದು ಶಮನವಾಯಿತು.

"ಪ್ರತಾಪ್, ನಿನಗೆ ಇಷ್ಟವಾಗೋಲ್ಲ ಅಂತ ಗೊತ್ತು, ಆದರೆ ನಾನು ನೀನು ಬೇರೆ-ಬೇರೆಯೇನೋ?" ನಾಣಿ ಮೆದುವಾಗಿ ಕೇಳಿದಾಗ ಪ್ರತಾಪ್ ಕರಗಿ ಹೋದ.

ಸುಚಿತ್ರಾಳ ಮಾತಿನ ಧಾಟಿ ಒಮ್ಮೆಲೆ ಬದಲಾಯಿತು. ವೃತ್ತಿನಿರತ ಧ್ವನಿಯಲ್ಲಿ ಮಾತನಾಡ ತೊಡಗಿದಳು. "ಮೊದಲು ನಿಮ್ಮ ಸಿಂಪ್ಟಂಸ್ ಬಗ್ಗೆ ಹೇಳಿ" ಎಂದಳು. ಪ್ರತಾಪ್ ತನ್ನ ಅನುಭವಗಳನ್ನು ವಿವರವಾಗಿ ಹೇಳಲಾರಂಭಿಸಿದ, ಸುಚಿತ್ರಾ ಕುರ್ಚಿಯಲ್ಲಿ ಹಿಂದಕ್ಕೊರಗಿ ಕಣ್ಣು ಮುಚ್ಚಿ ಸದ್ದಿಲ್ಲದೆ ಕುಳಿತಿದ್ದಳು. ನಿದ್ರೆ ಮಾಡಿರುವಳೇ ಎಂದು ಸಂದೇಹ ಪಡುತ್ತ ಪ್ರತಾಪ್ ನಾಣಿಯ ಕಡೆ ನೋಡಿದಾಗ, ನಾಣಿ ತಲೆದೂಗಿದ. ಉತ್ತೇಜನ ಪಡೆದ ಪ್ರತಾಪ್ ಮುಂದುವರೆಸಿ ಎಲ್ಲವನ್ನೂ ಹೇಳಿ ಮುಗುಸಿದ.

ಸುಚಿತ್ರಾ ಮೊಣಕೈ ಟೇಬಲ್ ಮೇಲೂರಿ ಎರಡೂಕೈಗಳ ಬೆರಳುಗಳ ತುದಿಗಳನ್ನು ಜೋಡಿಸಿ ಕೂತಳು. "ಇದೆಲ್ಲ ಶುರುವಾಗಿದ್ದು ಯಾವಾಗ?" ಎಂದು ಕೇಳಿದಳು.

"ಸುಮಾರು ಒಂದು ತಿಂಗಳಾಯಿತು-ಮೊದಲ ಸಾರಿ ನಿದ್ದೆಲಿ ನಡೆದು" ಪ್ರತಾಪ್ ಉತ್ತರಿಸಿದ.

"ಸ್ಟ್ರೆಸ್ ಏನಾದರೂ? ಕೆಲಸದಲ್ಲಿ? ಜೀವನದಲ್ಲಿ?"‌

"ಉಹೂಂ. ನನಗೆ ಸ್ಟ್ರೆಸ್ ಹತ್ತೋದೇಇಲ್ಲ"

" ಸಮಯದಲ್ಲಿ ನಿಮ್ಮ ಜೀವನದಲ್ಲೇನಾದರೂ ಬದಲಾಗಿತ್ತೇ, ಇಲ್ಲ ಬದಲಾಗುತ್ತಿತ್ತೇ?"

"ಉಹೂಂ. ಸುಮಾರು ಒಂದು ವರ್ಷದಿಂದ ಏನೂ ಬದಲಾಗಿಲ್ಲ"

"ಒಂದು ವರ್ಷದ ಹಿಂದೆ ಏನಾಗಿತ್ತು?"

"ಅದಕ್ಕೆ-ಇದಕ್ಕೆ ಏನು ಸಂಬಂಧ?" ಪ್ರತಾಪ್ ಕೊಂಚ ಮುಂಗೋಪದಿಂದಲೇ ಕೇಳಿದ

ಸುಚಿತ್ರಾಳಿಗೆ ಅದರಿಂದ ಕೋಪ ಬಂದಿದ್ದರೆ ತೋರಲಿಲ್ಲ. ನಿಷ್ಟುರವಾಗಿಯೇ ಹೇಳಿದಳು "ಅದನ್ನ ನಾನು ನಿರ್ಧಾರ ಮಾಡ್ತೀನಿ"

"ನಾನು ಬೆಂಗಳೂರು ಬಿಟ್ಟು ಹಳ್ಳಿ ಫಾರಂಹೌಸ್ಗೆ ಹೋದೆ"

"ಅದಕ್ಕೆ ಕಾರಣ ಏನು? ಸ್ಟ್ರೆಸ್ ಹೆಚ್ಚಾಗಿತ್ತೇ? ಇಲ್ಲ ಏನಾದರೂ ಕಾನೂನಿ ತೊಂದರೆ?"

"ಹಾಗೇನಿಲ್ಲ...ಕೆಲಸ, ಬೆಂಗಳೂರು ಬೇಜಾರಾಗಿತ್ತು, ಲಾಟರಿ ಹೊಡೀತು, ಆರಾಮವಾಗಿ ಇರೋಣ ಅಂತ ಅಷ್ಟೆ" ಪ್ರತಾಪ್ ಉತ್ತರಿಸಿದ.

ಸುಚಿತ್ರಾ ನಾಣಿಯ ಕಡೆ ನೋಡಿ ಪೇಪರ್-ಪೆನ್ ನನ್ನೆ ಮಾಡಿದಳು. ನಾಣಿ ತಂದು ಕೊಟ್ಟಾಗ ಏನೋ ಬರೆದುಕೊಂಡಳು.

"ಲಾಟರಿ ಅಂದಿರಿ. ಹಣದ ವಿಚಾರದಲ್ಲಿ ಏನಾದರು ಆತಂಕ?"

"ಉಹೂಂ. ಅಂತಹ ದೊಡ್ಡ ಲಾಟರಿ ಅಲ್ಲ ಬಿಡಿ"

".ಕೆ. ಮಿಸ್ಟರ್ ಪ್ರತಾಪ್.."

"ಬರೀ ಪ್ರತಾಪ್, ಪ್ಲೀಸ್" ಎಂದ ಪ್ರತಾಪ್

"ಸರಿ. ಪ್ರತಾಪ್-ನೀವು ಫಿಸಿಶ್ಯನ್ಗೆ ತೋರಿಸಿದ್ದೀರ?"

"ಹೂಂ. ಡಾಕ್ಟರ್ ಪ್ರಕಾಶ್ ಅಂತ ಒಬ್ಬರು ಆಗಲೇ ನನ್ನ ನೋಡಿದ್ದಾರೆ"

"ಏನು ಹೇಳಿದ್ದಾರೆ?‌"

"ಏನೂ ಖಚಿತವಾಗಿ ಹೇಳಿಲ್ಲ. ಸ್ಟ್ರೆಸ್ ಇರಬಹುದು ಅಂದಿದ್ದಾರೆ"

"ಆದರೆ ನೀವು ಸಮ್ಮತಿಸೋದಿಲ್ಲ..."

"ಉಹೂಂ. ನನಗೆ ಹಾಗೆ ಅನ್ನಿಸೋಲ್ಲ"

"ಸೈಕಿಯಾಟ್ರಿಸ್ಟ್ ನೋಡೋಕ್ಕೆ ಹೇಳಿದ್ದಾರ?"

"ಬೇಕಾದರೆ ನೋಡೋಣ ಅಂದಿದ್ದಾರೆ"

"ನೀವು ಸೈಕೋಥೆರಪಿಗೆ ತಯಾರಾಗಿದ್ದೀರ?"

ಪ್ರತಾಪ್ ನಾಣಿ ಕಡೆ ನೋಡಿದ. "ಹೂಂ..."

"ಹಪ್ನಾಟಿಕ್ ರೆಗ್ರೆಶನ್ ಥೆರಪಿಯಿಂದ ನಿಮ್ಮ ಮನಸ್ಸಿನಲ್ಲೇನಿದೆ ಅಂತ ತಿಳಿದುಕೊಳ್ಳೋಕ್ಕೆ ಬಹುಶಃ ಸಾಧ್ಯವಾದೀತು"

"ಹಾಗೆಂದರೆ?..."

"ಸಮ್ಮೋಹನ-ಅಂದರೆ ಹಿಪ್ನಾಸಿಸ್. ಹಿಪ್ನಟೈಸ್ ಮಾಡಿ ನಿಮ್ಮ ಸಬ್ಕಾನ್ಶ್ಯಸ್ ಅಂದರೆ ಉಪಪ್ರಜ್ಞೆಯಿಂದ ನಿಮ್ಮ ಪೀಢೆಗೆ ಕಾರಣ ಏನು ಅಂತ ತಿಳಿದುಕೊಳ್ಳೋಟೆಕ್ನಿಕ್ಗೆ ಹಿಪ್ನಾಸಿಸ್ ರೆಗ್ರೆಶನ್ ಥೆರಪಿ ಅಂತಾರೆ. ಇದರಿಂದ ಏನೂ ನೋವಾಗೋದಿಲ್ಲ. ಮಾನಸಿಕ ತೊಂದರೆಗೊಳಗಾಗೋ ರಿಸ್ಕ್ ಕೂಡ ತುಂಬಾ ಕಡಿಮೆ"

ನಾಣಿ ಪ್ರತಾಪ್ ಹಿಂದೆ ಬಂದು ನಿಂತಿದ್ದ. ಅವನ ಹೆಗಲ ಮೇಲೆ ಕೈಯಿಟ್ಟು ಧೈರ್ಯ ತುಂಬಿದಾಗ ಪ್ರತಾಪ್ ಒಪ್ಪಿಕೊಂಡ.

ಸುಚಿತ್ರಾ ಎಚ್ಚರಿಸಿದಳು "ಹಿಪ್ನಾಟಿಕ್ ರಿಗ್ರೆಶನ್ ಥೆರಪಿ ಮಾಡೋಕ್ಕೆ ಮುಂಚೆ ಕೆಲವು ಟೆಸ್ಟ್ಗಳು ಮಾಡಬೇಕು. ಒಂದೆರಡು ಸೆಶನ್ ನಿಮ್ಮ ತೊಂದರೆಯ ಬಗ್ಗೆ ಮಾತನಾಡಿ, ನಿಮ್ಮ ಮಾನಸಿಕ ಸ್ಥಿತಿ-ಗತಿ ಹೇಗಿದೆ, ನಿಮ್ಮ ತೊಂದರೆ ಚಿಕಿತ್ಸೆಯಿಂದ ಹೋಗಬಹುದೇ ಎಂದೆಲ್ಲ ತಿಳಿದುಕೊಂಡು, ನಂತರ ನನಗೆ ಅಗತ್ಯ ಅನ್ನಿಸಿದರೆ ಹಿಪ್ನಾಸಿಸ್ ಮಾಡ್ತೀನಿ. ಇದಕ್ಕ ನಾಲ್ಕಾರು ಸೆಶನ್, ಒಂದೆರಡು ತಿಂಗಳು ಸಮಯವಾಗಬಹುದು. ಇದ್ದಕ್ಕೆ ಸಿದ್ಧವಾಗಿರಬೇಕು"

"ಕ್ಷಮಿಸಿ ಡಾಕ್ಟರ್, ಇವನ ಹತ್ತಿರ ಅಷ್ಟೊಂದು ಸಮಯವಿಲ್ಲ. ಫೋನ್ನಲ್ಲಿ ಇವನ ಜೊತೆ ಮಾತನಾಡಿದಾಗಲೇ ಇವನು ಸಹನೆಯ ತುತ್ತ ತುದಿಗೆ ಹೋಗಿದ್ದಾನೆ ಅಂತ ಅರ್ಥವಾಯಿತು. ಅದಕ್ಕೇ ಇವನಿಗೂ , ನಿಮಗೂ ಇವತ್ತೇ ಇಲ್ಲಿಗೆ ಬರಲು ಹೇಳಿದ್ದು" ಮಚ್ಚಿನ ವೃತ್ತಾಂತ ಸ್ಮರಿಸುತ್ತ ನಾಣಿ ಪ್ರತಾಪನ ಸಹಾಯಕ್ಕೆ ಬಂದ.

"ಡಾಕ್ಟರ್, ಪ್ಲೇಸ್. ನನಗೆ ಹುಚ್ಚು ಹಿಡಿಯೋ ಮೊದಲು ನನ್ನ ಸಬ್ಕಾನ್ಶ್ಯಸ್ನಲ್ಲಿರೋ ಏನಾದರೂ ವಿಷಯ ನನ್ನ ಸ್ಥಿತಿಗೆ ಕಾರಣವೇ ತಿಳಿದುಕೊಳ್ಳಲು ಸಹಾಯ ಮಾಡಿ" ಪ್ರತಾಪ್ ಕೇಳಿಕೊಂಡ.

ಸುಚಿತ್ರಾ ಪ್ರತಾಪನ ಮುಖದಲ್ಲಿ ಅವನ ಹತಾಶೆಯನ್ನು ನೋಡಿ, ಮರುಗಿ ".ಕೆ. ಕೋಇನ್ಸಿಡೆಂಟಲಿ ಇವತ್ತು ಮಧ್ಯಾಹ್ನ ಇಲ್ಲೆಗೆ ಬರಬೇಕು ಅಂತ ನನ್ನ ಅಪಾಯಿಂಟ್ಮೆಂಟ್ಸ್ ಕ್ಯಾನ್ಸಲ್ ಮಾಡಿದ್ದೆ. ಇವತ್ತೇ ಒಂದು ಸೆಶನ್ ಮಾಡಬಹುದು, ಆದರೆ ಜಯನಗರದಲ್ಲಿರೋ ನನ್ನ ಕ್ಲಿನಿಕ್ಗೆ ಹೋಗಬೇಕು"‌ ಎಂದು ಹೇಳಿದಾಗ ಪ್ರತಾಪ್ ತಕ್ಷಣ ಒಪ್ಪಿದ.

"ಆದರೆ ಒಂದು ವಿಚಾರ ನೆನಪಿಟ್ಟುಕೊಳ್ಳಿ: ಇವತ್ತೇ ಥೆರಪಿ ಕಡೆಯಾಗಲಾರದು-ನಿಮ್ಮ ಬಳಲಿಕೆ ಗುಣವಾಗಲಾರದು. ಹಾಗೇನಾದರೂ ಆದರೆ ಅದು ಚಮತ್ಕಾರವೇ ಸರಿ" ಸುಚಿತ್ರಾ ಕೊನೆಯದಾಗಿ ಎಚ್ಚರಿಸಿದಳು.

ನಾಣಿಯ ಮನೆಯಲ್ಲಿ ಇಬ್ಬರೂ ಮಧ್ಯಾಹ್ನದ ಊಟ ಮುಗಿಸಿ ಜಯನಗರಕ್ಕೆ ಹೊರಟರು. ಭಾಮಾಇಬ್ಬರೂ ಸಂಜೆ ಇಲ್ಲಿಗೇ ಊಟಕ್ಕೆ ಬರಬೇಕುಎಂದು ಹೇಳಿಕಳಿಸಿದಳು. ಹೊರಗೆ ಹೋದ ಮೇಲೆ ಪ್ರತಾಪ್ "ಹೇಗಿದ್ದರೂ ಇಬ್ಬರೂ ಇಲ್ಲಿಗೇ ಬರಬೇಕು. ಒಂದೇ ಕಾರ್ನಲ್ಲಿ ಹೋಗೋಣ. ನಾನು ಡ್ರೈವ್ ಮಾಡ್ತೀನಿ" ಎಂದಾಗ ಸುಚಿತ್ರಾ ಒಪ್ಪಿದಳು.

ಆಕಾಶದಲ್ಲಿ ಕಾರ್ಮೋಡಗಳು ತುಂಬಿ ಮಧ್ಯಾಹ್ನವೇ ಕತ್ತಲು ಆವರಿಸಿದಂತಿತ್ತು. ಇನ್ನೂ ಮಳೆ ಬಾರದಿದ್ದರೂ ವಾತಾವರಣದಲ್ಲಿ ಹಸಿ ಮಣ್ಣಿನ ವಾಸನೆ ತುಂಬಿತ್ತು. ಬನಶಂಕರಿಯಿಂದ ಜಯನಗರ ೭ನೇ ಬ್ಲಾಕಿಗೆ ಹೋಗಲು ಕೇವಲ ೧೫ ನಿಮಿಷಗಳು ಬೇಕಾದವು. ನ್ಯಾಶನಲ್ ಕಾಲೇಜ್ನಿಂದ ಸ್ವಲ್ಪ ಮುಂದೆ ೩೬ನೇ ಕ್ರಾಸಿನಲ್ಲಿ ಸುಚಿತ್ರಾಳ ಕ್ಲಿನಿಕ್ ಇತ್ತು. ಹೊರಗೆ ಸಾಧಾರಣವಾಗಿ ಕಂಡರೂ ಒಳಗೆ ಮನಸಿಗೆ ಶಾಂತಿ ತರುವಂತಹ ವಾತಾವರಣ. ಒಂದು ಸೌಂಡ್-ಪ್ರೂಫ್ ರೂಮಿನಲ್ಲಿ ಹಿಂದಕ್ಕೊರಗಿ ಕುಳಿತುಕೊಳ್ಳಲು ಒಂದು ಸುಪ್ಪತಿಗೆಯಂತಹ ಕುರ್ಚಿ, ಡಕ್ಟರ್ಗಾಗಿ ಒಂದು ಸಣ್ಣ ಸ್ಟೂಲ್ ಇದ್ದವು. ಎಲ್ಲಿಯೂ ಚೂಪಾದ ಕೋನಗಳಾಗಲಿ, ರೋಗಿಯ ಗಮನ ಸೆಳೆಯುವ ಬೇರಾವ ವಸ್ತುವಾಗಲಿ ಇರಲಿಲ್ಲ. ಪ್ರತಾಪನಿಗೆ ಕುರ್ಚಿಯಮೇಲೆ ಮಲಗಲು ಹೇಳಿ ತಾನು ಸ್ಟೂಲ್ ಮೇಲೆ ಕೂತು ಸುಚಿತ್ರಾ ಚಿಕಿತ್ಸೆ ಆರಂಭಿಸಿದಳು.

*****

"....ಈಗ ನೀವು ಗಾಢವಾದ ನಿದ್ರೆಯಲ್ಲಿದ್ದೀರ. ಬಹಳ ಗಾಢ ನಿದ್ರೆ-ತುಂಬಾ ಹಾಯಾಗಿದೆ. ನಾನೇನು ಪ್ರಶ್ನೆ ಕೇಳಿದರೂ ನೀವು ಉತ್ತರ ಕೊಡಬೇಕು-ಕೊಡಲೇಬೇಕು, ತಪ್ಪಿಸಿಕೊಳ್ಳೋಹಾಗಿಲ್ಲ. ತಪ್ಪಿಸಿಕೊಳ್ಳಕ್ಕಾಗೋಲ್ಲ. ಅರ್ಥವಾಯಿತೇ?" ಸುಚಿತ್ರಾ ಹೇಳುತ್ತಿದ್ದಳು. ಚಿಕಿತ್ಸಾ ಕೋಣೆಯನ್ನು ಪೂರ್ಣ ಕತ್ತಲು ಮಾಡಿ ಪ್ರತಾಪನ ಪಕ್ಕ ಇದ್ದ ಒಂದೇ ಸಣ್ಣ ಒಂದು ಲೈಟು ಹತ್ತಿಸಿದ್ದಳು. ಅದರ ಮಬ್ಬು ಕೆಂಪು ಬೆಳಕು ಕತ್ತಲೆಯನ್ನು ಚೀರುವ ಶಕ್ತಿ ಹೊಂದಿರಲಿಲ್ಲ, ಪ್ರತಾಪನ ಕಣ್ಣು ಮುಚ್ಚಿದ್ದು, ರೆಪ್ಪೆಯ ಹಿಂದೆ ಕಣ್ಣು-ಗುಡ್ಡೆಗಳು ಹೆಚ್ಚು ಒಡಾಡುತ್ತಿರಲಿಲ್ಲ-ಇದು ಪ್ರತಾಪ್ ಬಾಹ್ಯಜ್ಞಾನ ತಪ್ಪಿದ್ದಾನೆಯಂಬ ಸಂಕೇತವಾಗಿತ್ತು.

"ಹೂಂ" ಪ್ರತಾಪ ಉತ್ತರಿಸಿದ.

"ಪ್ರತಾಪ್, ನೀವು ರಾತ್ರೆ ನಿದ್ರೆಯಲ್ಲಿ ಏಕೆ ಕಪಾಟಿನಲ್ಲಿ ಬಚ್ಚಿಟ್ಟುಕೊಂಡಿರಿ?"

"ಗೊತ್ತಿಲ್ಲ"

"ನನ್ನ ಹತ್ತಿರ ಸುಳ್ಳು ಹೇಳೋಹಾಗಿಲ್ಲ, ಅರ್ಥವಾಯಿತೇ? ಯಾಕೆ ಬಚ್ಚಿಟ್ಟುಕೊಂಡಿದ್ದಿರಿ?"‌ ಸುಚಿತ್ರಾ ಒತ್ತಾಯ ಮಾಡಿದಳು.

"ಗೊತ್ತಿಲ್ಲ"

"ಬೇಲಿಯ ಹಿಂದೆ ನಿಂತು ಯಾರನ್ನು ತಡೆಗಟ್ಟುತ್ತಿದ್ದಿರಿ?"

"ಗೊತ್ತಿಲ್ಲ"

"ಹಾಗಾದರೆ, ಮಚ್ಚು, ಪಿಕಾಸಿ ಏಕೆ ಬೇಕಾಗಿತ್ತು?"

"ಗೊತ್ತಿಲ್ಲ"

ಸುಚಿತ್ರಾ ಸಮಾಧಾನದ ಏದುಸಿರೆಳೆದಳು. "ಸರಿ ಹಾಗಿದ್ದರೆ ಒಂದು ಕೆಲಸ ಮಾಡೋಣ. ಸಮಯ ಹಿಂದಕ್ಕೆ ಹಾಕೋಣ. ನೀವು ಮಚ್ಚು ಹಿಡಿದು ನಿಮ್ಮ ಮನೆಯ ಹಿಂದಿರುವ ಮರ ಕಡೀತಿದ್ದೀರ"

"ಮರ ಕಡೀತಿದ್ದೀನಿ. ಸುಸ್ತು ಮಾಡ್ಕೊಳಕ್ಕೆ ಅಂತ. ಡಾಕ್ಟರ್ ಹೇಳಿದ್ದಾರೆ"

"ಮುಂದೇನಾಯಿತು ಹೇಳಿ"

"ಹಳೆ ಮರ. ಒಣಗಿ ಹೋಗಿದೆ-ಯಾವಾಗಲೋ ಸಿಡಿಲು ಬಡಿದಿರಬೇಕು. ಮಚ್ಚಿನಿಂದ ಏಟು ಹಾಕುತ್ತಾ ಇದ್ದೀನಿ. ಸಣ್ಣ ಟೊಂಗೆಗಳನ್ನ ಮೊದಲು ಕಡಿದುಹಾಕಿದೆ. ಆಮೇಲೆ ಬುಡಕ್ಕೆ ಏಟು ಹಾಕ್ತಿದ್ದೀನಿ."

"ಮರ ತಾನಾಗೇಬಿತ್ತಾ?"

"ಇಲ್ಲ ಕೆಲಸ ಬೇಗ ಮುಗಿಸೋಣ ಅಂತ ಸೊಲ್ಪ ಆದಮೇಲೆ ನಾನೇ ಬಲವಾಗಿ ತಳ್ಳಿ ಬೀಳಿಸಿದೆ"

"ಆಮೇಲೆ?"

"ಮೂಲೆಗೆ ಎಳೆದುಹಾಕಿ ವಾಕಿಂಗ್ ಹೊರಟೆ"

"ವಾಕಿಂಗ್ನಿಂದ ಬಂದಮೇಲೆ ಏನು ಮಾಡಿದಿರಿ?"

"ತಿಂಡಿ ತಿಂದೆ, ಪುಸ್ತಕ ಓದಿದೆ. ಎದ್ದು ಹೋಗಿ ಮಲಗಿದೆ"

"ನಿಮಗೆ ನಿದ್ದೆ ಬಂದಿದೆ. ಮಧ್ಯ ರಾತ್ರಿ ಎದ್ದಿದ್ದೀರ ಬಾಗಿಲು ತೆಗೆದು ಹೋಗ್ತಿದ್ದೀರ-ಬೇಲಿ ಹತ್ತಿರ"

"ಬೇಲಿ ಹತ್ತಿರ..."

"ಜಾಲಿ ಮುಳ್ಳು ತೊಗೊಂಡು ಒಳಗೆ ಬರ್ತಿದ್ದೀರ"

"ಜಾಲಿ ಮುಳ್ಳು..."

"ಯಾಕೆ ಬೇಕು ಜಾಲಿ ಮುಳ್ಳು?"

"ಗೊತ್ತಿಲ್ಲ"

"ಗೊತ್ತು, ನಿಮಗೆ ಗೊತು ಪ್ರತಾಪ್. ಸುಳ್ಳು ಹೇಳೋ ಹಾಗಿಲ್ಲ. ಯಾಕೆ ಬೇಕು ಹೇಳಿ"

"ಉಹ್-ಉಹ್-ಉಹ್..." ಗಡಗಡನೆ ನಡುಗಲಾರಂಭಿಸಿದ ಪ್ರತಾಪ್.

"ಹೇಳಿ ಪ್ರತಾಪ್, ಯಾಕೆ ಬೇಕು ಮುಳ್ಳಿನ ಬೇಲಿ? ಗಡಸಾಗಿ ಕೇಳಿದಳು ಸುಚಿತ್ರಾ

"......ಅವರು ಬಂದುಬಿಡ್ತಾರೆ" ಪಿಸುಗುಟ್ಟಿದ ಪ್ರತಾಪ್

"ಯಾರು ಬಂದುಬಿಡ್ತಾರೆ?"

"....ಅವರು!ಅವರು!! ಬಂದುಬಿಡ್ತಾರೆ!" ಅರಚಿಕೊಂಡ ಪ್ರತಾಪ್

"ನಿವು ಎಲ್ಲಿದ್ದೀರ ಪ್ರತಾಪ್?"

ಪ್ರತಾಪ್ ಮೌನವಾಗಿದ್ದಾಗ "ನೀವು ಉತ್ತರ ಕೊಡಲೇಬೇಕು, ಪ್ರತಾಪ್" ಎಂದು ಸುಚಿತ್ರಾ ಒತ್ತಾಯಿಸಿದಳು.

"ಗೊತ್ತಿಲ್ಲ. ನನಗೆ ಗೊತ್ತಿಲ್ಲ"

"ಯಾವ ಊರಿನಲ್ಲಿದ್ದೀರ?"

"ಬೆಂಗಳೂರು..."

"ತಾರೀಖು ಎಷ್ಟು?"

ಪ್ರತಾಪ್ ಸುಮಾರು ಒಂದು ವರ್ಷದ ಹಿಂದಿನ ತಾರೀಖು ಹೇಳಿದ. ಪ್ರತಾಪ್ನೊಂದಿಗೆ ಮೊದಲು ಮಾತನಾಡಿದಾಗಲಿಂದ ಸುಚಿತ್ರಾಳ ಮನಸ್ಸನ್ನು ಕಾಡುತ್ತಿದ್ದ ಒಂದು ವಿಚಾರ ಮರುಕಳಿಸಿತು. "ನೀವು ಬೆಂಗಳೂರು ಬಿಟ್ಟು ಫಾರಂಹೌಸಿಗೆ ಹೋಗಿದ್ದು ಇದಕ್ಕೇ?"

"ಹಾಗೇನಿಲ್ಲ...ಕೆಲಸ, ಬೆಂಗಳೂರು ಬೇಜಾರಾಗಿತ್ತು, ಲಾಟರಿ ಹೊಡೀತು, ಆರಾಮವಾಗಿ ಇರೋಣ ಅಂತ ಅಷ್ಟೆ" ಪ್ರತಾಪ್ ಧ್ವನಿ ಪೂರ್ಣ ಬದಲಾಗಿತ್ತು-ಪುಸ್ತಕದಲ್ಲಿ ಬರೆದಿರುವುದನ್ನು ಓದುತ್ತಿರುವಂತಾಗಿತ್ತು.

"ನೀವು ಬೆಂಗಳೂರು ಬಿಟ್ಟಿದ್ದು ಯಾವಾಗ?"

ಪ್ರತಾಪ್ ಒಂದು ತಾರೀಖು ಹೇಳಿದ.

"ನೀವು ಫಾರಂಹೌಸ್ಗೆ ಹೋಗಿದ್ದು ಯಾವಾಗ?"

ಪ್ರತಾಪ್ ಮತ್ತೊಂದು ದಿನಾಂಕ ಹೇಳಿದ

"ಎರಡರ ಮಧ್ಯೆ ಒಂದು ತಿಂಗಳು ಏನು ಮಾಡಿದಿರಿ?"

ಮೌನ.

"ಪ್ರತಾಪ್, ನಿಮಗೆ ಎಷ್ಟರ ಲಾಟರಿ ಹೊಡೀತು?"

"ನಲವತ್ತು ಲಕ್ಷ ರೂಪಾಯಿ"

"ನಿಮ್ಮ ಕೈಗೆ ಎಷ್ಟು ಬಂತು?"

"ಪೂರ್ತಿ ನಲವತ್ತು ಲಕ್ಷ"

"ನಿಮಗೆ ಹೊಡೆದಿದ್ದು ಯಾವ ಲಾಟರಿ?"

ಮೌನ.

"ಕರ್ನಾಟಕ ಸ್ಟೇಟ್ ಲಾಟರಿ ಇರಬಹುದೇ?"

"ಇರಬಹುದು"

"ಪ್ರತಾಪ್, ನಿಮಗೆ ಹೊಡೆದ ಲಾಟರಿ ನಂಬರ್ ಏನು?"

ಮೌನ.

"ನೀವು ಲಾಟರಿ ಟಿಕೆಟ್ ಎಲ್ಲಿ ಕೊಂಡಿದ್ದು?"

ಮೌನ.

"ಹೋಗಲಿ ಟಿಕೆಟ್ ಯಾವ ಬಣ್ಣ ಇತ್ತು?"

ಮೌನ.

"ಲಾಟರಿ ನಿಮಗೆ ಹೊಡೆದಿದೆಯೆಂದು ಹೇಗೆ ತಿಳೀತು?"

ಮೌನ.

"ಲಾಟರಿ ಹೊಡೆದಾಗ ನೀವು ಎಲ್ಲಿ ಅದನ್ನು ಕ್ಲೈಮ್ ಮಾಡಿದ್ದು?"

ಮೌನ.

"ನಿಮ್ಮ ಫಾರಂಹೌಸ್ಗೆ ಎಷ್ಟು ಬಲೆ ಕೊಟ್ಟಿದ್ದು?"

"ನನಗೆ ಗೊತ್ತಿಲ್ಲ! ಬಿಟ್ಟುಬಿಡಿ ನನ್ನನ್ನ!"

"ರಿಲ್ಯಾಕ್ಸ್, ಪ್ರತಾಪ್, ರಿಲ್ಯಾಕ್ಸ್. ಹೋಗಲಿ, ಅಂದು ರಾತ್ರಿ ಮುಳ್ಳಿನ ಬೇಲಿ ಏಕೆ ಅಡ್ಡ ಇಟ್ಟಿದ್ದು?"

"ಅವರು...ಬಂದುಬಿಡ್ತಾರೆ" ಭೀತಿಯಿಂದ ಹೇಳಿದ ಪ್ರತಾಪ್

"ಪ್ರತಾಪ್, ಈಗೊಂದು ಚಮತ್ಕಾರ ಮಾಡೋಣ-ಕಾಲವನ್ನು ಹಿಂದಕ್ಕೆ ಹೋಗೋಹಾಗೆ ಮಾಡೋಣ. ನಿಮಗೆ ಇದನ್ನು ತಡೆಯಲಾಗೋದಿಲ್ಲ. ಅರ್ಥವಾಯಿತೇ?‌ ಒಂದು ದಿನ, ಒಂದು ವಾರ, ಒಂದು ತಿಂಗಳು...ಈಗ ಪೂರ್ತಿ ಒಂದು ವರ್ಷ ಹಿಂದೆ ಹೋಗಿದ್ದೀರ. ನೀವು ನಿಮ್ಮ ಫಾರಂಹೌಸ್ಗೆ ಹೋಗೋಕ್ಕೆ ಮುಂಚಿನ ಸಮಯ...ಬೆಂಗಳೂರು ಬಿಟ್ಟಾಗಿದೆ, ಇನ್ನೂ ನಿಮ್ಮ ಫಾರ್ಂಹೌಸ್ಗೆ ಹೋಗಿಲ್ಲ"

"ಒಂದು ವರ್ಷ ಹಿಂದೆ...ಬಂದುಬಿಡ್ತಾರೆ! ಬಂದುಬಿಡ್ತಾರೆ!!"

"ಎಲ್ಲಿದ್ದೀರ?"

"ಗೊತ್ತಿಲ್ಲ. ನಾನು ಜಾಗ ಯಾವತ್ತೂ ನೋಡಿಲ್ಲ"

ಸುಚಿತ್ರಾಳಿಗೆ ಪ್ರತಾಪ್ ನಿಜವಾಗಿ ತನಗೆ ಸ್ಥಳ ಗೊತಿಲ್ಲವೆಂದು ಹೇಳುತ್ತಿದ್ದಾನೆ ಎಂದು ಅರ್ಥವಾಯಿತು. ಮುಂದುವರೆಸಿದಳು: " ಸ್ಥಳ ವಿವರಿಸಿ"

"ಬಿಳಿ-ಎಲ್ಲ ಕಡೆ ಬಿಳಿ. ಬಿಳಿ ಮಂಚ, ಬಿಳಿ ಹಾಸಿಗೆ, ನನ್ನ ಬಟ್ಟೆ ಬಿಳಿ.ಪಕ್ಕದಲ್ಲಿ ಸ್ಟೂಲ್ ಬಿಳಿ"

"ಆಸ್ಪತ್ರೆ ರೂಮಿನಲ್ಲಿದ್ದೀರಾ?"

"ಇಲ್ಲ...ಗೊತ್ತಿಲ್ಲ..."

"ನಿಂತಿದ್ದೀರ ಇಲ್ಲ ಕೂತಿದ್ದೀರ?"

"ಮಲಗಿದ್ದೀನಿ-ಮಂಚದಮೇಲೆ"

"ಹೂಂ...ಮುಂದೆ?"

"ನನ್ನ ಕೈ-ಕಾಲು ಮಂಚಕ್ಕೆ ಕಟ್ಟಿ ಹಾಕಿದೆ. ಬಿಗಿಯಾಗಿದೆ...ನೋಯುತ್ತಿದೆ"

"ಆಮೇಲೆ?"

"ಔಷಧಿ...ಫೆನಾಯಿಲ್ ವಾಸನೆ. ತಡಕೊಳ್ಳೋಕ್ಕಾಗ್ತಿಲ್ಲ"

"ಮತ್ತೇನು ಕಾಣಿಸುತ್ತಿದೆ?"

ಮೌನ.

"ಸುತ್ತ ನೋಡಿ, ಪ್ರತಾಪ್. ಇನ್ನೇನು ಕಾಣಿಸುತ್ತಿದೆ?"

ಪ್ರತಾಪ್ ಹಣೆಯಲ್ಲಿ ಬೆವರು ಸುರಿಯತೊಡಗಿತ್ತಾದರೂ ನಡುಗುತ್ತಿದ್ದ "......ಸೂಜಿ-ಇಂಜೆಕ್ಷನ್!" ಪಿಸುಗುಟ್ಟಿದ.

"ಎಂತಹ ಇಂಜೆಕ್ಷನ್?"

ಪ್ರತಾಪನ ಗಂಟಲಿಂದ ಗುಳುಗುಳು ಶಬ್ಧ ಬಂತು. ಉಸಿರಾಡಲಾರದವನಂತೆ ಏದುಸಿರೆಳೆಯಲಾರಂಭಿಸಿದ.

"ಪ್ರತಾಪ್, ರಿಲ್ಯಾಕ್ಸ್. ನಿಧಾನವಾಗಿ ಉಸಿರಾಡಿ"

ಪ್ರತಾಪ್ ಶಾಂತನಾದ.

ಸುಚಿತ್ರಾ ಪುನಃ ಕೇಳಿದಳು "ನೀವು ಮಂಚದಲ್ಲಿ ಮಲಗಿದ್ದೀರ, ನಿಮ್ಮ ಕಣ್ಣಿಗೆ ಸೂಜಿ ಕಾಣಿಸುತ್ತಿದೆ-ಎಂತಹ ಇಂಜೆಕ್ಷನ್, ಪ್ರತಾಪ್?"

"ಹೇಳೋಕ್ಕೆ, ಕೇಳೋಕ್ಕೆ ಬೇರೇನೂಯಿಲ್ಲ" ಪ್ರತಾಪನ ಧ್ವನಿ ಪುನಃಓದುತ್ತಿರುವಂತಿತ್ತು.

"ರಿಲ್ಯಾಕ್ಸ್, ಪ್ರತಾಪ್. ನನ್ನ ಪ್ರಶ್ನೆಗೆ ಉತ್ತರ ಕೊಡಿ"

"ಹೇಳೋಕ್ಕೆ, ಕೇಳೋಕ್ಕೆ ಬೇರೇನೂಯಿಲ್ಲ"

"ನನ್ನ ಪ್ರಶ್ನೆಗೆ ಉತ್ತರ ಕೊಡಲೇಬೇಕು, ಗೊತ್ತಲ್ಲ"

"ಹೇಳೋಕ್ಕೆ, ಕೇಳೋಕ್ಕೆ ಬೇರೇನೂಯಿಲ್ಲ"

"ಪ್ರತಾಪ್..."

"ಹೇಳೋಕ್ಕೆ, ಕೇಳೋಕ್ಕೆ ಬೇರೇನೂಯಿಲ್ಲ"

ಬಾರಿ ಸುಚಿತ್ರಾಳೇ ಮೌನಳಾದಳು. ಕೊನೆಗೆ, ಮುಂದುವರೆಸಲು "ಪ್ರತಾಪ್, ನೀವುಹೇಳೋಕ್ಕೆ, ಕೇಳೋಕ್ಕೆ ಬೇರೇನೂಯಿಲ್ಲಅನ್ನೋ ವಾಕ್ಯ ಮತ್ತೆ ಹೇಳೋಹಾಗಿಲ್ಲ. ಅದು ನಿಮ್ಮ ಮನಸ್ಸಿನಲ್ಲಿರೋ ಒಂದು ದಿಗ್ಬಂಧವಷ್ಟೇ. ನೀವು ನಡೆದು ಹೋಗುತ್ತಿದ್ದೀರ, ದಾರಿಯಲ್ಲಿ ದೊಡ್ದ ಬಂಡೆ ಇದೆ. ಅದನ್ನು ಪಕ್ಕಕ್ಕೆ ಸರಿಸದೆ ಮುಂದೆ ಹೋಗುವಹಾಗಿಲ್ಲ. ಪಕ್ಕಕ್ಕೆ ಸರಿಸೋದು ನಿಮಗೆ ಅಸಾಧ್ಯವಾದ ಕೆಲಸವಲ್ಲ. ಬಂಡೆ ಪಕ್ಕಕ್ಕೆ ತಳ್ಳಿ ಮುಂದೆ ಹೋಗಿ, ಪ್ರತಾಪ್. ಜೋರಾಗಿ ತಳ್ಳಿ, ಬಂಡೆ ಪಕ್ಕಕ್ಕೆ ಸರೀತಿದೆ...ಸರಿದೇಹೋಯ್ತು...ಇನ್ನೇನು ನಿಮ್ಮ ದಾರಿಗೆ ಅಡ್ಡ ಇಲ್ಲ, ತಿಳೀತೆ, ಪ್ರತಾಪ್?"

"ಬಂಡೆ...ಪಕ್ಕಕ್ಕೆ..." ಮನಸ್ಸಿನಲ್ಲೇ ಶಕ್ತಿಪ್ರಯೋಗ ಮಾಡುತ್ತಿರುವಂತೆ ಹೇಳಿದ ಪ್ರತಾಪ್.

"ಗುಡ್. ಈಗ ಫೆನಾಯಿಲ್ ವಾಸನೆ ಬರ್ತಿದೆ, ನಿಮಗೆ ತಡೆಯೋಕ್ಕೆ ಆಗ್ತಿಲ್ಲ. ಮತ್ತೆ ಇಂಜೆಕ್ಷನ್?"

"ಬಂದುಬಿಡ್ತಾರೆ! ಬಂದುಬಿಡ್ತಾರೆ!!"

"ರಿಲ್ಯಾಕ್ಸ್, ಪ್ರತಾಪ್. ಇಲ್ಲಿ ಯಾರೂ ಬರೋಲ್ಲ. ನಿಮಗೆ ಯಾರಾದರೂ ಇಂಜೆಕ್ಷನ್ ಕೊಡ್ತಿದ್ದಾರ್ಯೇ?"

"ಹೂಂ...ಬಿಳಿ ಕೋಟ್ ತೊಟ್ಟಿದ್ದಾನೆ...ಬಂದುಬಿಡ್ತಾನೆ"

" ಡಾಕ್ಟರ್-ಬಿಳಿ ಕೋಟ್ ತೊಟ್ಟವ-ಇವನನ್ನು ವಿವರಿಸಿ. ಕಾನ್ಸಂಟ್ರೇಟ್, ಪ್ರತಾಪ್"

"ಕುಳ್ಳ, ತಲೆ ಬಾಲ್ಡ್ ಆಗಿದೆ; ಕನ್ನಡಕ ಧರಿಸಿದ್ದಾನೆ. ಕ್ರೂರ ಕಣ್ಣುಗಳು. ಗೋಧಿ ಮೈಬಣ್ಣ. ಕೈಯಲ್ಲಿ..."‌ ನಡುಗಿದ ಪ್ರತಾಪ್

"ನಿಮಗೇನು ಮಾಡ್ತಿದ್ದಾನೆ?"

ಪ್ರತಾಪ್ ಸ್ವಲ್ಪ ಹೊತ್ತು ಯೋಚಿಸಿ, ಕೊನೆಗೆ "ಟ್ರೀಟ್ಮೆಂಟ್...?"‌ ಎಂದ.

"ಪ್ರತಾಪ್, ಇವತ್ತು ಇನ್ನೂ ನಿಮಗೆಉ ಟ್ರೀಟ್ಮೆಂಟ್ ಆಗಿಲ್ಲ. ಬಿಳಿ-ಕೋಟ್-ಕುಳ್ಳ ಬಂದಿದ್ದಾನೆ. ಏನು ಮಾಡ್ತಿದ್ದಾನೆ?"

"ಬ್ಲಡ್ ಪ್ರೆಶರ್, ನೋಡ್ತಿದ್ದಾನೆ. ಟೆಂಪ್ರೇಚರ್ ನೋಡ್ತಿದ್ದಾನೆ, ಇಂಜೆಕ್ಷನ್..."

"ನಿಮಗೆ ಕೊಡುತ್ತಿದ್ದಾನೆಯೇ?"

"ಹೂಂ...ಬೆಂಕಿ-ದನದ ಇಂಜೆಕ್ಷನ್ ಇದ್ದ ಹಾಗಿದೆ. ಅದರೊಳಗೆ ಬೆಂಕಿ ತುಂಬಿದೆ.."

"ಪ್ರತಾಪ್, ನಿಮ್ಮ ಧ್ವನಿಯೇಕೆ ತೊದಲ್ತಿದ್ದೆ?"

"ಮೈಯೆಲ್ಲ ಚಳಿ-ಜುಂ ಅನ್ನುತ್ತಿದೆ, ಗಾಳೀಲಿ ತೇಲ್ತಿದ್ದೀನಿ.."

"ಹೂಂ-ಮುಂದೆ?"

"ಮೇಲೆ...ಆಕಾಶದಲ್ಲಿ ಹಾರಾಡ್ತಿದ್ದೀನಿ...ಭಯ-ಭಯವಾಗ್ತಿದೆ"

"ನಿಮ್ಮ ಕತ್ತಿಗೆ ಏನಾಗಿದೆ, ಪ್ರತಾಪ್?"

"ಕತ್ತಿಗೆ ಇಂಜೆಕ್ಷನ್ ಕೊಟ್ಟಿದ್ದಾನೆ. ನೋವಾಗ್ತಿದೆ. ಮೈಯೆಲ್ಲ ನೋವು. ನಾಡಿಯಲ್ಲಿ ರಕ್ತ ಅಲ್ಲ-ಬೆಂಕಿ ಹರೀತಿದೆ. ಯಾರಾದರೂ ನನ್ನನ್ನ ಬೆಡಿಸಿ, ಪ್ಲೀಸ್-ಬಿಡಿಸಿ-ಪ್ಲೀಸ್" ಬೇಡಿಕೊಳ್ಳಲಾರಂಭಿಸಿದ ಪ್ರತಾಪ್.

"ರಿಲ್ಯಾಕ್ಸ್. ಸರಿ, ತೇಲ್ತಿದ್ದೀರ, ಮೈಯೆಲ್ಲ ಉರಿ. ಬಿಳಿ-ಕೋಟ್ ನಿಮ್ಮ ಜೊತೆ ಆತ ಮಾತನಾಡುತ್ತಿದ್ದಾನ್ಯೇ?"

"ದೂರ...ಬಾವಿಯಲ್ಲಿ ಕೂತು ಮಾತಾಡಿದ ಹಾಗಿದೆ"

"ನೀವು ಮಾತಾಡ್ತಿದ್ದೀರ?"

"ನನ್ನ ಮಾತೂ ಬಾವಿಯೊಳಗಿಂದ ಬಂದಂತಿದೆ"

"ಆತ ನಿಮ್ಮ ಸಬ್ಕಾನ್ಶ್ಯಸ್ಜೊತೆ ಮಾತನಾಡ್ತಿದ್ದಾನೆ. ನಿಮ್ಮ ಪ್ರಜ್ಞೆ ಮೇಲೆ ಹಾರಾಡ್ತಿದೆ, ಆದರೆ ನಿಮ್ಮ ಉಪಪ್ರಜ್ಞೆ ಅವನ ಜೊತೆ ಸಂಭಾಷಣೆ ನಡೆಸಿದೆ. ನಿಮ್ಮ ಸಬ್ಕಾನ್ಶ್ಯಸ್ ಒಳಗೆ ಇಣುಕಿ ನೋಡಿ ಆತ ಏನು ಹೇಳ್ತಿದ್ದಾನೆ?"

"ಕೇಳಿಸ್ತಿಲ್ಲ...ನನ್ನ ಒಂದು ಭಾಗವನ್ನು ಹರಿದು ಎಸೆದುಬಿಟ್ಟಿದ್ದಾನೆ..."

ಸುಚಿತ್ರಾ ಎಷ್ಟು ಪ್ರಯತ್ನ ಮಾಡಿದರೂ ಪ್ರತಾಪನಿಗೆ ನೆನಪಾಗಲಿಲ್ಲ. ಮುಂದುವರೆಸಿದಳು "ಸರಿ, ನಿಮಗೆ ಚುಚ್ಚಿದ್ದ ಇಂಜೆಕ್ಷನ್ ತೆಗೆದಾಗಿದೆ. ಈಗೇನಾಗ್ತಿದೆ?"

"ನೋವಿಲ್ಲ...ಇನ್ನೂ ತೇಲ್ತಿದ್ದೀನಿ. ಸಮೀರ್ ಬಂದಿದ್ದಾನೆ!"

"ಸಮೇರ್?‌ ಯಾರು ಸಮೇರ್?"

"ಬಂದುಬಿಡ್ತಾರೆ! ಬಂದುಬಿಡ್ತಾರೆ!!" ನಣ್ಣ ಏದುಸಿರುಗಳೆಯುತ್ತ ಪ್ರತಾಪ್ ಪುನಃಕಂಗಾಲಾದಾಗ ಸುಚಿತ್ರಾ ಟ್ರೀಟ್ಮೆಂಟ್ ಮುಂದುವರೆಸುವುದು ಸೂಕ್ತವಲ್ಲವೆಂದು ನಿರ್ಧರಿಸಿದಳು.

"ಪ್ರತಾಪ್, ಶಾಂತವಾಗಿ. ನೀವು ಬಿಳಿ-ಕೋಟ್ ಕಂಡರೆ ಹೆದರುವ ಅಗತ್ಯ ಇಲ್ಲ. ಅವನು ನಿಮ್ಮನ್ನೇನೂ ಮಾಡಲಾರ. ಗೊತ್ತಾಯಿತೇ?"

"ಭಯ ಇಲ್ಲ"

"ಈಗ ಸಮಯ ಪುನಃಮುಂದೋಡ್ತಿದೆ. ನೀವು ಬೆಂಗಳೂರು ಬಿಟ್ಟು ಫಾರಂಹೌಸ್ಗೆ ಹೋಗ್ತಿದ್ದೀರ. ಕನಸಿನಲ್ಲಿ ಓಡಾಟ, ಅಲ್ಲಿಂದ ಹೊರಟು ನಾರಾಯಣ್ ಮನೆಗೆ ಬರ್ತಿದ್ದೀರ. ನನ್ನ ಜೊತೆ ಭೇಟಿ. ಊಟದ ನಂತರ ಕ್ಲಿನಿಕ್ಗೆ ಬಂದಿದ್ದೀರ"

"ರಿಗ್ರೆಶನ್ ಥೆರಪಿ" ಪ್ರತಾಪ್ ಗೊಣಗಿದ.

"ಕರಕ್ಟ್! ಮೈಯೆಲ್ಲ ರಿಲ್ಯಾಕ್ಸ್ ಮಾಡ್ಕೊಳಿ. ಸ್ವಲ್ಪ ಹೊತ್ತು ರೆಸ್ಟ್ ತೊಗೊಂಡು ಆಮೇಲೆ ಏಳಿ" ಎಂದು ಹೇಳಿ ಸುಚಿತ್ರಾ ಸೆಶನ್ ನಡೆದಿದ್ದಾಗ ತಾನು ಮಾಡಿದ್ದ ನೋಟ್ಸ್ ಓದಲಾರಂಭಿಸಿದಳು.

ಸ್ವಲ್ಪ ಸಮಯದ ನಂತರ ಪ್ರತಾಪ್ಗೆ ಎಚ್ಚರವಾದಾಗ ಎದ್ದು ಕುಳಿತ. "ಏನಾಯಿತು, ಡಾಕ್ಟರ್?" ಎಂದು ಕೇಳಿದ?

"ನಿಮಗೆ ಇದು ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರ ನನಗನ್ನಿಸುತ್ತೆ ನಿಮ್ಮ ಜೀವನದ ಕೆಲವು ದಿನಗಳನ್ನು ಯಾರೋ ಕದ್ದಿದ್ದಾರೆ. ನೀವು ಗೆದ್ದ ಲಾಟರಿ...ನಿಜವಾಗಿ ನಿಮಗೆ ಹೊಡೆದಿಲ್ಲ. ನಮ್ಮ ಕಾನ್ಶ್ಯಸ್ನೆಸ್ಗೆ ಮರೆತು ಹೋಗಿದ್ದರೂ ಸಬ್ಕಾನ್ಶ್ಯಸ್ನಲ್ಲಿ ನಮ್ಮ ಒಂದೊಂದು ಅನುಭವದ ಅತಿಸೂಕ್ಷಮ ಮಾಹಿತಿಯೂ ಅಕ್ಷರಶಃ ನೆನಪಿರುತ್ತೆ. ಅದರೆ ನಿಮ್ಮ ಲಾಟರಿ ಟಿಕೆಟನ್ನು ಕೊಂಡಿದ್ದೂ ನಿಮಗೆ ನೆನಪಿಲ್ಲ, ನಂಬರ್ ಗೊತ್ತಿಲ್ಲ, ಕ್ಲೈಮ್ ಮಾಡಿದ್ದು, ಟ್ಯಾಕ್ಸ್ ಕೊಟ್ಟಿದ್ದು ಯಾವುದೂ ನೆನಪಿಲ್ಲ. ನಿಮ್ಮ ಫಾರಂಹೌಸ್ ಖರೀದಿಸಿದ್ದೂ ನೆನಪಿಲ್ಲ" ಪ್ರತಾಪ್ಗೆ ಅರಗಿಸಿಕೊಳ್ಳಲು ಕೆಲ ಕ್ಷಣಗಳ ಸಮಯ ಕೊಟ್ಟು ಮುಂದುವರಿಸಿದಳು "ಯಾರೋ ನಿಮಗೆ ಡ್ರಗ್ಸ್ ಹಾಗು ಹಿಪ್ನಾಟಿಸಂ ಮೂಲಕ ನಿಮ್ಮ ಜೀವನದ ಸುಮಾರು ಒಂದು ತಿಂಗಳನ್ನು ಮರೆಯುವಂತೆ ಮಾಡಿ, ನೀವು ಲಾಟರಿ ಗೆದ್ದಿದ್ದೀರ, ಹಣದಲ್ಲಿ ಫಾರಂಹೌಸ್ ಕೊಂಡಿದ್ದೀರ ಎಂದು ನಂಬಿಸಿ, ಬೆಂಗಳೂರು ಬೇಸರವಾಗಿದೆ, ಅದಕ್ಕೆ ಬೆಂಗಳೂರು ಬಿಟ್ಟು ಫಾರಂಹೌಸ್ಹೇ ಹೊರಟು ಹೋಗಿ ಅನ್ನೋ ಪೋಸ್ಟ್-ಹಿಪ್ನಾಟಿಕ್ ಸಜೆಶನ್ ನಿಮ್ಮ ಮನಸ್ಸಿನಲ್ಲಿಟ್ಟು ನೀವು ಬೆಂಗಳೂರಿನಿಂದ ಮಾಯವಾಗೋಹಾಗೆ ಮಾಡಿದ್ದಾರೆ. ನೀವು ಏಕೆ ಬೆಂಗಳೂರು ಬಿಟ್ಟು ಹೋದದ್ದು ಕೇಳಿದರೆ ನೀವು ಯಾವಾಗಲು ಒಂದೇ ಉತ್ತರ ಕೊಡುತ್ತೀರ..." ಎಂದು ವಿವರಿಸಿದಳು.

"ಹಾಗೇನಿಲ್ಲ...ಕೆಲಸ, ಬೆಂಗಳೂರು ಬೇಜಾರಾಗಿತ್ತು, ಲಾಟರಿ ಹೊಡೀತು, ಆರಾಮವಾಗಿ ಇರೋಣ ಅಂತ ಅಷ್ಟೆ" ಪ್ರತಾಪನ ಧ್ವನಿ ಮತ್ತೆ ರೋಬಾಟಿನ ಹಾಗಾಗಿತ್ತು.

"ಇಗೋಕೇಳಿ" ಎಂದು ಸುಚಿತ್ರಾ ಪಕ್ಕದಲ್ಲಿದ್ದ ಟೇಪ್ರೆಕಾರ್ಡರ್ ರಿವೈಂಡ್ ಮಾಡಿ ಪ್ಲೇ ಮಾಡಿದಳು.

ಪ್ರತಾಪನಿಗೆ ತನ್ನ ಧ್ವನಿ ಕೇಳಿ ಆಶ್ಚರ್ಯವಾಯಿತು. ಸ್ವಲ್ಪ ಹೊತ್ತು ಯೋಚಿಸಿ "ಯಾವ ಕಾರಣಕ್ಕೆ ತಿಳಿಯಿತೇ?" ಎಂದ.

"ಗೊತ್ತಾಗಲಿಲ್ಲ. ಅದು ತಿಳಿದುಕೊಳ್ಳೋಕ್ಕೆ ಇನ್ನೊಂದು ಸೆಶನ್ನಲ್ಲಿ ಪ್ರಯತ್ನ ಮಾಡೋಣ" ಸುಚುತ್ರಾ ಹೇಳಿದಳು.

ಪ್ರತಾಪ್ ಹತಾಷನಾದಾಗ "ಡೋಂಟ್ ವರಿ. ನಿಮಗೆ ಬೇಗನೆ ಗುಣವಾಗುತ್ತೆ"‌ ಎಂದು ಧೈರ್ಯ ತುಂಬಿದಳು. "ಅಂದಹಾಗೆ ನಿಮಗೆ ಒಬ್ಬ ಕುಳ್ಳ ಕನ್ನಡಕಧಾರಿ ಡಾಕ್ಟರ್ ನೆನಪಿದೆಯೇ?‌"

ಪ್ರತಾಪ್ ಸ್ವಲ್ಪ ಯೋಚಿಸಿ "ಉಹೂಂ" ಎಂದು ತಲೆಯಾಡಿಸಿದ.

"ನಾನಂದುಕೊಂಡ ಹಾಗೆ ಆತ ನಿಮಗೆ ಪರಿಚಿತನಲ್ಲ. ಹೋಗಲಿ ಸಮೀರ್ ಎಂಬಾತ ಯಾರಾದರೂ?"

"ಸಮೀರ್?"‌ ಪ್ರತಾಪ್ ಕುತೂಹಲದಿಂದ ಕೇಳಿದ "ಏಕೆ?"

"ನೀವು ಕೊನೆಯಲ್ಲಿ ಹೆಸರು ಹೇಳಿದಿರಿ. ಅದರ ಬಗ್ಗೆ ವಿಚಾರ ಮಾಡುವ ಮುಂಚೆ ನೀವು ಶಾಕ್ಗೆ ಹೋಗೊ ಹಾಗಿದ್ದರಿಂದ ಸೆಶನ್ ಅಲ್ಲಿಗೆ ನಿಲ್ಲಿಸ ಬೇಕಾಯಿತು"

"ಹಂ..." ಎಂದು ಯೋಚಸತೊಡಗಿದ ಪ್ರತಪ್.

"ನೀವು ಯೋಚನೆ ಮಾಡಿ, ನಾನು ಸೆಶನ್ ಫೈಲ್ ಮಾಡ್ತೀನಿ. ಆಮೇಲೆ ಲಾಕಪ್ ಮಾಡಿ ಭಾಮಾ-ನಾರಾಯಣ್ ಮನೆಗೆ ಹೋಗೋಣ" ಎನ್ನುತ್ತ ಸುಚಿತ್ರಾ ಎದ್ದಳು.

ಇಬ್ಬರೂಸೆಶನ್ ರೂಮಿನಿಂದ ಹೊರಗೆ ಹೋದರು. ಹೊರಗಿನ ಆಫಿಸ್ನಲ್ಲಿ ಸುಚಿತ್ರಾ ಫೈಲ್ ಮಾಡುತ್ತಿದ್ದಂತೆ ಪ್ರತಾಪ್ ತನ್ನ ಸೆಲ್ ಫೋನ್ ತೆಗೆದು ನೋಡಿ "ಡಾಕ್ಟರ್, ನನ್ನ ಬ್ಯಾಟರಿ ಡೆಡ್, ಒಂದು ಫೋನ್ ಮಾಡ್ತೀನಿ"‌ಎಂದು ಹೇಳಿ ಫೋನ್ ಮಾಡಿದ.

ಅರ್ಧಘಂಟೆಯ ನಂತರ ಸುಚಿತ್ರಾ ಎದ್ದು "ರೆಡಿ" ಎಂದಳು.

ಯೋಚನೆಯಲ್ಲಿ ಮುಳುಗಿದ್ದ ಪ್ರತಾಪ್ "ಓಹ್"‌ ಎನ್ನುತ್ತ ಎದ್ದ.

"ಲೇಟಾಗಿದೆ, ಆದರೆ ಭಾಮಾ ಮನೆಗೆ ಹೋಗೋಕ್ಕೆ ಮುಂಚೆ ನನ್ನ ಮನೆಗೆ ಒಂದೈದು ನಿಮಿಷ ಹೋಗಬೇಕು. ನಿಮಗೆ ತೊಂದರೆಯಾಗೋದಾದರೆ ನಾನು ಆಟೋ ತೊಗೊಂಡು ಹೋಗಿಬರ್ತೀನಿ" ಸುಚಿತ್ರಾಹೇಳಿದಳು.

"ನೋ ಪ್ರಾಬ್ಲಮ್, ನಡೀರಿ. ಅಂದಹಾಗೆ, ನಿಮ್ಮ ಫೀಸ್, ಡಾಕ್ಟರ್"

"ಇವತ್ತು ನನ್ನ ರಿಸೆಪ್ಶನಿಸ್ಟ್ ಇಲ್ಲ. ನಂತರ ನಿಮಗೆ ಬಿಲ್ ಕಳಿಸುವೆ"‌

"ಆಫ್ಟರ್ ಯು" ಎನ್ನುತ್ತ ಪ್ರತಾಪ್ ಬಾಗಿಲು ತೆಗೆದು ಹಿಡಿದ.

ಹೊರಗೆ ರಾತ್ರಿಯಾಗುತ್ತಿತ್ತು. ಕ್ಲಿನಿಕ್ಗೆ ಬೀಗ ಹಾಕಿ ಕಾರಿನತ್ತ ನಡೆದರು. ಪ್ರತಾಪನ ಹಣೆಯ ಮೇಲೆ ಒಂದು ಹನಿ ನೀರು ಬಿದ್ದಾಗೆ ಅವನು ಕತ್ತೆತ್ತಿ ಮೇಲೆ ನೋಡಿದ. ಮತ್ತೊಂದು, ಮಗದೊಂದು, ಒಂದರಮೇಲೊಂದು ಮಳೆ ಹನಿಗಳು ಬೀಳಲಾರಂಭಿಸಿದಾಗ ಇಬ್ಬರೂ ಕಾರಿನತ್ತ ಓಡಿದರು. ರಸ್ತೆ ದಾಟುವಾಗ ವೇಗವಾಗಿ ಬರುತ್ತಿದ್ದ ಬೆಳ್ಳಿ ಬಣ್ಣದ ಮಹಿಂದ್ರ ಬೊಲೇರೊ ಎಸ್.ಯು.ವಿ ಇಬ್ಬರ ಮುಂದೆ ಹಾಯ್ದು ಅಡ್ಡರಸ್ತೆಯಲ್ಲಿಯು-ಟರ್ನ್ತಿರುಗಿತು.

ಪ್ರತಾಪ್ "ಎಲ್ಲೋಧಿನಸಿ ಅಂಗಡಿಯಲ್ಲಿ ಲೈಸನ್ಸ್ ತೊಗೊಂಡಿರಬೇಕು" ಎಂದು ಗೊಣಗುತ್ತ ಕಾರ್ ಬೇಗ ತೆಗೆದ. ಇಬ್ಬರೂ ಕಾರ್ ಹತ್ತುತ್ತಿದ್ದಂತೆಯೇ ಕಾದು ನಿಂತಿದ್ದ ಮಳೆ ಆಕಾಶವೇ ಬಿರುಕು ಬಿಟ್ಟಂತೆ ಹುಯ್ಯಲಾರಂಭಿಸಿತು.

*****

ಸುಚಿತ್ರಾಳ ಮನೆ ಜೆ.ಪಿ.ನಗರ ೬ನೇ ಫೇಸ್ನಲ್ಲಿತ್ತು. ದಾರಿಯಲ್ಲಿ ಮಾತನಾಡಲು ಬೇರೆ ವಿಷಯವಿಲ್ಲದೆ ಪ್ರತಾಪ್ ಕೇಳಿದ: "ನಿಮ್ಮ ಮನೆಯಲ್ಲಿ ಯಾರಿರ್ತಾರೆ, ಡಾಕ್ಟರ್?‌"

"ಸಧ್ಯಕ್ಕೆ ನಾನೊಬ್ಬಳೆ" ಎಂದು ನಸುನಕ್ಕಳು ಸುಚಿತ್ರಾ. "ನಿಮ್ಮದೇನು ವಿಷಯ? ಕ್ಲಿನಿಕ್ನಿಂದ ಹೊರಟಾಗಿನಿಂದ ಬಹಳ ಸಂತೋಷವಾಗಿದ್ದೀರ? ನಿಮ್ಮ ಹಣೆಯ ಮೇಲಿದ್ದ ಸುಕ್ಕು ಚಪ್ಪಟ್ಟೆಯಾಗಿದೆ"

"ಎಲ್ಲ ನಿಮ್ಮ ಥೆರಪಿ ಪ್ರಭಾವ" ಎಂದು ನಿಗೂಢವಾಗಿ ಹೇಳಿದ ಪ್ರತಾಪ್.

"ಅಂದರೆ?"

"ಇದೆಲ್ಲ ಏನು ತಿಳಿದುಕೊಳ್ಳೋಣ ಅಂತ‌ ’ಸಮೀರ್ಗೆ ಫೋನ್ ಮಾಡಿದ್ದೆ"

"ಹೂಂ..."

"ಆಮೇಲೆ ಹೋಗಿ ಅವನ ಜೊತೆ ಮಾತನಾಡಿ ಇದೆಲ್ಲ ಏನೂಂತ ಇತ್ಯರ್ಥ ಮಾಡ್ಕೊತೀನಿ"

ಸುಚಿತ್ರಾಳಿಗೆ ಗಾಬರಿಯಾಯಿತು "ಆರ್ ಯು ಶೂರ್?‌ ಇವರುಗಳು ನಿಮ್ಮಿಂದ ನಿಮ್ಮನ್ನೇ ಬಚ್ಚಿಡೋಕ್ಕೆ ಇಷ್ಟೆಲ್ಲ ಕಷ್ಟ ಪಟ್ಟಿದ್ದಾರೆ ಅಂದರೆ ಇವರು ಡೇಂಜರಸ್ ಜನಾನೇ ಇರಬೇಕು"

"ನೋ, ನೋ. ಸಮೀರ್ ಕಂಡರೆ ಭಯ ಪಡುವಂಥದ್ದು ಏನೂ ಇಲ್ಲ"

"ಹಾಗಿದ್ದರೆ ಸಮೀರ್ ನೆನಪಿದೆಯೇ ನಿಮಗೆ?"

"-ಯಾಹ್"

ಸುಚಿತ್ರಾಳ ಅಪಾರ್ಟ್ಮೆಂಟ್ ಬಿಲ್ಡಿಂಗ್ ಕಾರ್ಪಾರ್ಕ್ನಲ್ಲಿ ಪ್ರತಾಪ್ ಕಾರ್ ನಿಲ್ಲಿಸಿದ.

"ಒಳಗೆ ಬನ್ನಿ, ಪ್ರತಾಪ್" ಸುಚಿತ್ರಾ ಕರೆದಳು.

"ಥ್ಯಾಂಕ್ಸ್. ನಾನು ಇಲ್ಲೇ ಕಾಯ್ತೀನಿ. ನೀವು ಹೋಗಿ ಬನ್ನಿ"

ಸುಚಿತ್ರಾ ಹೊರಟುಹೋದಳು. ಪ್ರತಾಪ್ ತನ್ನ ಸೀಟನ್ನು ಹಿಂದಕ್ಕೊರಗಿಸಿ ಯೋಚಿಸುತ್ತ ಕುಳಿತ. ಕೆಲವು ನಿಮಿಷಗಳ ನಂತರ ಬೆಳ್ಳಿ ಮಹಿಂದ್ರ ಬೊಲೆರೊವೊಂದು ಕಾರ್ಪಾರ್ಕಿಗೆ ಪ್ರವೇಶಿಸಿ, ಪ್ರತಾಪನ ನ್ಯಾನೋ ಪಕ್ಕದಲ್ಲಿ ನಿಧಾನವಾಗಿ ಸಾಗಿತು. ಸೀಟ್ ಹಿಂದಕ್ಕೊರಗಿಸಿ ಕೂತಿದ್ದ ಪ್ರತಾಪ್ ಹೊರಗಿನಿಂದ ಕಾಣಿಸುವಂತಿರಲಿಲ್ಲವಾದರೂ, ಪ್ರತಾಪನಿಗೆ ಬೆಳ್ಳಿ ಬೊಲೆರೊ ಕಾಣಿಸಿತು. ಕುತೂಹಲ, ಸಂದೇಹ ಅವನ ಮನಸಿನಲ್ಲಿ ಜಾಗೃತವಾದವು. ’ಇದು ಕ್ಲಿನಿಕ್ ಹತ್ತಿರ ನಮಗೆ ಅಡ್ಡ ಬಂದ ಕಾರ್ ಅಲ್ಲವೇ?’ ಎಂದು ಯೋಚಿಸಿದ. ಬೆಳ್ಳಿ ಬೊಲೆರೊನಲ್ಲಿರುವವರಿಗೆ ತಾನು ತನ್ನ ಕಾರಿನೊಳಗಿರುವುದು ಗೊತ್ತಿಲ್ಲವೆಂಬ ಅರಿವಾಯಿತು. ಇನ್ನೂ ಕೆಲವು ನಿಮಿಷಗಳು ಕಳೆದವು. ಪ್ರತಾಪ್ ನೋಡುತ್ತಿದ್ದಂತೆಯೇ ಬೆಳ್ಳಿ ಬೊಲೆರೊ ಕಾರ್ಪಾರ್ಕ್ ಮೂಲೆಗೆ ಹೋಗಿ, ಹೆಡ್ಲೈಟ್ ಆರಿಸಿ, ಇಂಜಿನ್ ನಿಲ್ಲಿಸದೆ ನಿಂತಿತು. ಇಣುಕಿ ನೋಡಿದ ಪ್ರತಾಪನಿಗೆ ಕತ್ತಲಿನಲ್ಲಿ ಕಾರಿನೊಳಗಿರುವವರು ಯಾರೂ ಕಾಣಿಸಲಿಲ್ಲ. ಮುಂದೇನು ಎಂದು ಯೋಚಿಸುವಷ್ಟರಲ್ಲಿ ಸುಚಿತ್ರಾ ಬಂದು ಕಾರಿನ ಬಾಗಿಲು ತೆಗೆದು ಒಳಗೆ ಕೂರುತ್ತ "ರೆಡಿ"‌ಎಂದಳು.

ಬಟ್ಟೆ ಬದಲಾಯಿಸಿಕೊಂಡು, ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣಿಸುತ್ತಿದ್ದ ಸುಚಿತ್ರಾಳನ್ನು ಕಂಡು ಪ್ರತಾಪ್ ಬೆರಗಾದ. "ಲೆಟ್ಸ್-ಗೋ" ಎಂದು ಬೆಳ್ಳಿ ಬೊಲೆರೊ ಬಗ್ಗೆ ತನ್ನ ಅನುಮಾನವನ್ನು ಹೇಳದೆ ಕಾರ್ ಸ್ಟಾರ್ಟ್ ಮಾಡಿದ. "ನೀವು ಬಹಳ...ಬದಲಾಗಿ ಕಾಣಿಸುತ್ತಿದ್ದೀರ, ಡಾಕ್ಟರ್"‌

"ಥ್ಯಾಂಕ್ಸ್, -ಇಥಿಂಕ್"‌ ನಗೆಬೀರಿದಳು ಸುಚಿತ್ರಾ. ಪ್ರತಾಪ್ ಮುಖ ಸಿಂಡರಿಸಿ ರೇರ್ವ್ಯೂ ಕನ್ನಡಿಯನ್ನು ಪದೇ ಪದೇ ನೋಡುತ್ತಿರುವುದನ್ನು ನೋಡಿ "ಏನಾಯಿತು?"‌ ಎಂದು ಕೇಳಿದಳು.

"ನಮ್ಮನ್ನು ಯಾರೋಹಿಂಬಾಲಿಸುತ್ತಿದ್ದಾರೆ. ನಿಮ್ಮ ಅನುಮಾನ ಸರಿಯಿರಬಹುದು-ಸಮೀರ್ ಕಡೆಯವರಿರಬಹುದು. ಅವನು ನೀನೆಲ್ಲಿದ್ದೀಅಂತ ಕೇಳಿದಾಗ ನಾನು ನಿಮ್ಮ ಕ್ಲಿನಿಕ್ ಹೆಸರು ಹೇಳಿದೆ. ಅಲ್ಲಿ ಬಂದ ಬೆಳ್ಳಿ ಬೊಲೆರೊ ನೆನಪಿದೆಯೇ?‌ ಅದು ಇನ್ನೂ ನಮ್ಮ ಹಿಂದೆ ಇದೆ" ಎಂದಾಗ ಸುಚಿತ್ರಾಗೆ ಗಾಬರಿಯಾಯಿತು. "ಸಾರಿ. ನನಗೆ ಗೊತ್ತಿಲ್ಲದೆ ನಿಮ್ಮನ್ನು ಇದಕ್ಕೆ ಸಿಕ್ಕಿಸಿದೆ"

ಸುಚಿತ್ರಾ ಮಾತನಾಡಲಿಲ್ಲ. ಪ್ರತಾಪ್ ಗಾಬರಿಯಾಗದೆ ಪ್ರಶಾಂತವಾಗಿರುವುದನ್ನು ಕಂಡು ಧೈರ್ಯ ತಂದುಕೊಂಡಳು.

ಪ್ರತಾಪ್ ಮೊದಲು ನಿಧಾನವಾಗಿ ಚಲಿಸಿದ. ಊರಿನಿಂದ ಸ್ವಲ್ಪ ದೂರಾವಾದರಿಂದ ಹೆಚ್ಚು ಟ್ರಾಫಿಕ್ ಇರಲಿಲ್ಲ. ಬೊಲೆರೊ ಅವನ ಹಿಂದೆ ಸುಮಾರು ೨೦೦ ಮೀಟರ್ ದೂರದಲ್ಲಿ ಹಿಂಬಾಲಿಸುತ್ತಿತ್ತು. ಪ್ರತಾಪ್ ಸಣ್ಣ ಗಲ್ಲಿಗಳನ್ನು ಹಿಡಿದು ಎಡ-ಬಲ ಹತ್ತಾರು ತಿರುವುಗಳನ್ನು ಮಾಡಿದ. ಇಂತಹ ರಸ್ತೆಗಳಿಗೆ ಪುಟಾಣಿ ನ್ಯಾನೋಸೂಕ್ತ ಕಾರು. ಅದರ ಟರ್ನಿಗ್-ರೇಡಿಯಸ್ ಚಿಕ್ಕದಾಗಿದ್ದು ಅಚಾನಕವಾಗಿ ತಿರುಗುವುದು ಸಾಧ್ಯವಾಗಿತ್ತು. ದೊಡ್ಡದಾದ ಬೊಲೆರೊ ಎಸ್.ಯು.ವಿಗೆ ಗಲ್ಲಿಗಳಲ್ಲೋಡುವುದು ಸ್ವಲ್ಪ ಕಷ್ಟವಾಗಿತ್ತು. ಕ್ರಮೇಣ ಎರಡು ಕಾರ್ಗಳ ನಡುವೆ ಅಂತರ ಹೆಚ್ಚಾಗಿ, ಒಂದು ತಿರುವಿನಲ್ಲಿ ಬೊಲೆರೊ ಮಾಯವಾಯಿತು.

"ಅಬ್ಬ! ನೇರ ರಸ್ತೆಗಳಿಗೆ ಹೋದರೆ ಒಂದೇ ನಿಮಿಷದಲ್ಲಿ ಹಿಡಿದು ಹಾಕಿಬಿಡತ್ತೆ ಬೊಲೆರೊ" ಎಂದು ಪ್ರತಾಪ್ ನಿಟ್ಟುಸಿರೆಳೆದ. ಇನ್ನೂಕೆಲ ನಿಮಿಷಗಳು ಗಲ್ಲಿಗಳಲ್ಲಿ ತಿರುಗಿ ಬೊಲೆರೊ ಹಿಂದಿಲ್ಲವೆಂದು ಖಚಿತ ಪಡಿಸಿಕೊಂಡು ಪ್ರತಾಪ್ ಮುಖ್ಯರಸ್ತೆಗೆ ತಿರುಗಿಸಿದ. ಮಬ್ಬುಗತ್ತಲಲ್ಲಿ ಒಂದೇ ನಿಮಿಷದೊಳಗೆ ಬೆಳ್ಳಿ ಬೊಲೆರೊ ಕಾಣಿಸಿಕೊಂಡಿತು. ಪ್ರತಾಪ್ ಮನಸ್ಸಿನಲ್ಲೇಅದನ್ನು ಬೈದು ಆಕ್ಸಿಲೇಟರ್ ನೆಲಕ್ಕೊತ್ತಿದ. ಸಣ್ಣ ಕಾರು ಬೆನ್ನಿಗೆ ಚಾವಟಿಯೇಟು ತಿಂದ ಕುದುರೆಯಂತೆ ನೆಗೆದು ಮುಂದೋಡಿತು. ಬೊಲೆರೊ ಆರಾಮವಾಗಿ ನ್ಯಾನೋವಿನ ವೇಗವನ್ನು ಮೀರಿಸಿತು. ಬೊಲೆರೊ ಬಾರಿ ಹಿಂಬಾಲಿಸುವ ಗೋಜಿಗೆ ಹೋಗಲಿಲ್ಲ. ನ್ಯಾನೋವನ್ನು ಅಟ್ಟಿಸಿಕೊಂಡು ಬಂದು, ಅದರ ವೇಗದ ಸಮಾನಾಗಿ ಪಕ್ಕದಲ್ಲಿ ಓಡತೊಡಗಿತು. ಬೊಲೆರೊವಿನ ಕಪ್ಪು ಬಡಿದಿದ್ದ ಕಿಟಕಿಯ ಗಾಜು ಇಳಿಯಿತು. ಕರಿ ಸನ್ಗ್ಲಾಸ್ ಧರಿಸಿದ್ದ ವ್ಯಕ್ತಿಯೊಬ್ಬ ಕಿರುನಗೆ ಬೀರುತ್ತ ಆತುರವಿಲ್ಲದೆ ದೊಡ್ಡ ರೈಫಲ್ ತೆಗೆದು ನ್ಯಾನೋಕಡೆ ಗುರಿಯಿಟ್ಟ.

ಅದನ್ನು ಕಂಡ ಪ್ರತಾಪ್ "ಕೆಳಗೆ ಬಗ್ಗಿ" ಎಂದು ದಿಗಿಲಾಗಿ ಕಲ್ಲಾಗಿದ್ದ ಸುಚಿತ್ರಾಳ ಕತ್ತು ಹಿಡಿದು ಕೆಳಗೆ ತಳ್ಳಿ, ತಾನೂ ಕೆಳಗೆ ಬಗ್ಗಿ ಬ್ರೇಕ್ ಒತ್ತಿದ. ನ್ಯಾನೋವನ್ನು ಹಿಂದೆ ಬಿಟ್ಟು ಮುಂದೋಡಿದ ಬೊಲೆರೊನಿಂದ ಹೊರಟ ಗುಂಡುಗಳು ಗುರಿ ತಪ್ಪಿ ಗಳಿಯಲ್ಲಿ ಹೋದವು. ಬೊಲೆರೊ ಬ್ರೇಕ್ ಹಾಕಿ ನಿಲ್ಲಿಸಿ ನಿಯಂತ್ರಣಕ್ಕೆ ಬರುವ ಹೊತ್ತಿಗೆ ನ್ಯಾನೋಆಗಲೇ ಮುಂದಕ್ಕೋಡಿತ್ತು. ಮರಳಿ ಬೆನ್ನಟ್ಟಿ ಬಂದು ಹಿಡಿದ ಬೊಲೆರೊ ಒಳಗಿದ್ದ ವ್ಯಕ್ತಿ ಈಬಾರಿ ನಗುತ್ತಿರಲಿಲ್ಲ. ರೋಷದಿಂದ ಮುಖ ಗಂಟಿಕ್ಕಿ ಮತ್ತೆ ರೈಫಲ್ನಿಂದ ಗುರಿಯಿಟ್ಟ. ಪ್ರತಾಪ್ ಪುನಃ ಹಳೆ ತಂತ್ರವನ್ನು ಮಾಡಿದ. ಬಾರಿ ಬೊಲೆರೊ ಅದಕ್ಕೆ ಸಿದ್ಧವಾಗಿತ್ತು. ಒಮ್ಮೆಲೆ ನ್ಯಾನೋವಿನ ಮುಚ್ಚಿದ್ದ ಕಿಟಕಿಯ ಗಾಜು ಮಾಯವಾಗಿ, ಸಾವಿರಾರು ಚೂರಾಗಿ, ಕಾರಿನ ಒಳಕ್ಕೂ, ಹೊರಗೆ ರಸ್ತೆಗೂ ಮಳೆಗರೆಯಿತು. ಒಂದು ಗುಂಡು ಪ್ರತಾಪನ ತೋಳನ್ನು ಹಾಯ್ದು ನ್ಯಾನೋಸೀಟಿನಲ್ಲಿ ಹೊಕ್ಕಿತು. ಪ್ರತಾಪ್ ಈಗ ಅಡ್ರಿನಾಲಿನ್ ಮೇಲೆ ಓಡುತ್ತಿದ್ದ. ಸ್ವರಕ್ಷಣೆ ಪರಮವಾಗಿತ್ತು. ತನ್ನ ಬಲಕ್ಕಿದ್ದ ಬೊಲೆರೊ ಕಡೆ ನ್ಯಾನೋವನ್ನು ತಿರುಗಿಸಿದ. ಅದಕ್ಕೆ ಸಿದ್ಧವಾಗದ ಬೊಲೆರೊ ನಿಯಂತ್ರಣ ಕಳೆದುಕೊಂಡು ರಸ್ತೆಯ ಹೊರಗೆ ಹೋಯಿತು.

"ಪ್ರತಾಪ್!‌ ನಿಮ್ಮ ಕೈ!"‌ ಸುಚಿತ್ರಾ ಕೂಗಿದಳು.

"ಆಮೇಲೆ..."

ಬೊಲೆರೊ ಆಗಲೆ ರಸ್ತೆಗೆ ಹಿಂತಿರುಗಿ ಬೆನ್ನಟ್ಟಿತ್ತು. ಅಟ್ಟಿಸಿಕೊಂಡು ಬಂದು ನ್ಯಾನೋವಿನ ಹಿಂಭಾಗಕ್ಕೆ ಗುದ್ದಿತು. ನ್ಯಾನೋವಿನ ಬಂಪರ್ ಮುರಿದು ನಲಕ್ಕೆ ಜಗ್ಗುತ್ತ ಜೋರಾಗಿ ಶಬ್ದಮಾಡಲಾರಂಭಿಸಿತು. ಬೊಲೆರೊ ಪುನಃ ಗುದ್ದಿತು. ಪ್ರತಾಪ್ ಮೂರನೆ ಗೇರಿಗೆ ಬದಲಾಯಿಸಿ ಆಕ್ಸಿಲೇಟರ್ ನೆಲಕ್ಕೊತ್ತಿ ಮುನ್ನೆಗೆದ. ಎದುರಿನಿಂದ ಲಾರಿಯೊಂದು ಬರುತ್ತಿತ್ತು. ನ್ಯಾನೋ ಅದಕ್ಕೆ ಢಿಕ್ಕಿ ಹೊಡೆಯುವಂತೆ ಕಾಣಿಸುತ್ತಿತ್ತು. ಕೊನೆ ಕ್ಷಣದಲ್ಲಿ ಸ್ಟೀರಿಂಗ್ ತಿರುಗಿಸಿ ಪ್ರತಾಪ್ ತಪ್ಪಿಸಿಕೊಂಡು ಲಾರಿಯ ಬಲಭಾಗದಲ್ಲಿ ಸಾಗಿದ. ನ್ಯಾನೋ ಬಲಕ್ಕಿದ್ದ ಬೊಲೆರೊ ಅದೃಷ್ಟ ಕೆಟ್ಟಿತ್ತು. ಅದರ ಚಾಲಕ ಬಲವಾಗಿ ಬಲಕ್ಕೆ ತಿರುಗಿಸಿದ. ಲಾರಿ ಬೊಲೆರೊವಿನ ಎಡಭಾಗವನ್ನು ಗೋಜಿ, ಆಟದ ಸಾಮಾನನ್ನು ಪಕ್ಕಕ್ಕೆಸೆಯುವಂತೆ ರಸ್ತೆಯಿಂದ ದೂರ ತಳ್ಳಿತು. ಗಾಬರಿಗೊಂಡ ಲಾರಿ ಡ್ರೈವರ್ ನಿಲ್ಲಿಸದೇ ಓಡಿದ. ಬೊಲೆರೊ ರಸ್ತೆಯ ಪಕ್ಕದಲ್ಲಿದ್ದ ಬಯಲಿಗುರುಳಿ ಎರಡು ಲಾಗ ಹಾಕಿತು.

ಆವರಿಸಿದ ಮೌನದಲ್ಲಿ ಮಳೆ ಕಾರಿನ ಮೇಲೆ ಮೃದಂಗ ಬಾರಿಸುತ್ತಿತ್ತು. ಪ್ರಾತಾಪ್ ನ್ಯಾನೋ ನಿಲ್ಲಿಸಿದವನೇ ಬೊಲೆರೊ ಕಡೆಯೋಡಿದ. ಅವನನ್ನು ತಡೆಯಲು ಸುಚಿತ್ರಾ ಅವನ ಹಿಂದೋಡಿದಳು. ಬೊಲೆರೊಗೆ ಬಂಕಿ ಹತ್ತಿತ್ತು, ಪೆಟ್ರೋಲ್ ಟ್ಯಾಂಕ್ ಒಡೆದು ಪೆಟ್ರೋಲ್ ಸೋರುತ್ತಿತ್ತು. ನೋಡುತ್ತಿದ್ದಂತೆಯೇ ವಿಸ್ಫೋಟವಾಗಿ ಬೊಲೆರೊ ಉರಿಯಲಾರಂಭಿಸಿತು. ಪ್ರತಾಪ್ ದಿಟ್ಟಿಸಿ ನೋಡುತ್ತ ನಿಂತ. ಕೆಲಕ್ಷಣಗಳ ನಂತರ ಗುಂಡಿನ ಗಾಯದಿಂದಾದ ರಕ್ತ ನಷ್ಟದಿಂದಲೋಏನೋತಲೆ ತಿರುಗಿ ನೆಲಕ್ಕೆ ಬಿದ್ದ. ಸುಚಿತ್ರಾ ಅವನನ್ನು ಎಬ್ಬಿಸಲು ಕೆಳಗೆ ಕೂತಳು. ಕಣ್ತೆರೆದು "ಎಲ್ಲ ನೆನಪಾಯಿತು, ಡಾಕ್ಟರ್"‌ ಎಂದು ಪಿಸುಗುಟ್ಟಿ ಕಣ್ಣುಮುಚ್ಚಿದ.

*****

"ರಾವ್-ಬಹದ್ದೂರ್ ರತ್ನಾಕರ್ ದಾಮ್ಜೀ ದೊಡ್ಡ ಶ್ರೀಮಂತರು. ನಾಲ್ಕುನೂರು ಕೋಟಿ ರುಪಾಯಿಗಳ ಆಸ್ತಿ ಅವರದ್ದು" ಪ್ರತಾಪ್ ಹೇಳುತ್ತಿದ್ದ. ಅರೆ-ಜ್ಞಾನವಿದ್ದ ಪ್ರತಾಪನನ್ನು ಹೇಗೋ ಕಾರಿನಲ್ಲಿ ಹಾಕಿಕೊಂಡು ಸುಚಿತ್ರಾ ನಾಣಿಯ ಮನೆಗೆ ಕರೆತಂದಿದ್ದಳು. ಅಲ್ಲಿ ಪ್ರತಾಪನಿಗೆ ಗುಂಡಿನ ಗಾಯದ ಸುಶ್ರೂಶೆಯಾಗಿ ಜ್ಞಾನ ಬಂದಿತ್ತು.

"ದಾಮ್ಜೀ ಎಕ್ಸೆಕ್ಯೂಟರ್ ನಾನು, ಎಸ್ಟೇಟ್-ಮ್ಯಾನೇಜರ್ ಸಮೀರ್; ಪರ್ಸನಲ್-ಡಾಕ್ಟರ್ ಕೊಟ್ರೇಶ್" ಪ್ರತಾಪ್ ಮುಂದುವರೆಸಿದ. "ದಾಮ್ಜೀ ಆಸ್ತಿ ಹೊಡೆಯುವ ಹೊಂಚು ಹಾಕಿದೆ. ಅವರ ಎಲ್ಲ ಆಸ್ತಿ ಒಂದು ಟ್ರಸ್ಟ್ಗೆ ಸೇರುವಹಾಗೆ ಮಾಡಿದೆ. ಸುತ್ತಿ-ಬಳಸಿ ಅದರ ಪಾಲುದಾರರು ನಾನು ೫೦%, ಸಮೀರ್, ಕೊಟ್ರೇಶ್ ತಲಾ ೨೫%. ನನ್ನ ಪ್ಲಾನ್ನಂತೆ ಸಮೀರ್-ಕೊಟ್ರೇಶ್ ಇಬ್ಬರೂ ಸೇರಿ ದಾಮ್ಜೀ ಕೊಲೆ ಮಾಡಿ, ಆಕ್ಸಿಡೆಂಟ್ಆಗಿ ಸಾಬೀತು ಮಾಡಿದರು" ಪ್ರತಾಪ್ ಮುಂದುವರೆಸಿದ.

ನಾಣಿ-ಭಾಮಾ ಇಬ್ಬರ ಕಣ್ಣಲ್ಲೂ ಪ್ರತಾಪನಿಗೆ ತಿರಸ್ಕಾರ ಮೂಡಿತು. ಸುಚಿತ್ರಾ ವೃತ್ತಿ-ಕುತೂಹಲದಿಂದ ನೋಡುತ್ತಿದ್ದಳು.

"ಮುಂದಿನದನ್ನು ಊಹಿಸಬಲ್ಲೆಯಷ್ಟೆ. ಸಮೀರ್-ಕೊಟ್ರೇಶ್ರನ್ನು ಚನ್ನಾಗಿ ಅರಿತಿದ್ದೆ. ನನಗೇನಾದರೂಆದರೆ ಟ್ರಸ್ಟ್ ಹಣ ಅವರಿಗೆ ಸಿಗದಿರೋಹಾಗೆ ಮಾದಿದ್ದೆಯಾದ್ದರಿಂದ ನನ್ನ ಕೊಲ್ಲೋಹಾಗಿರಲಿಲ್ಲ. ನನಗೆ ಬ್ರೇನ್ವಾಶ್ ಮಾಡಿ, ಪೂರ್ತಿ ಆಸ್ತಿ ಅವರೇ ಹೇಗೋ ಹೊಡೆದುಕೊಂಡಿರಬೇಕು; ಫಾರಂಹೌಸ್ ಸೆಟಪ್ ಮಾಡಿ ಯಾರಿಗೂ ಕಾಣದ ಹಾಗೆ ನನ್ನನ್ನು ದೂರ ಅಟ್ಟಿರಬೇಕು"

ಸ್ವಲ್ಪ ಸಮಯ ಯಾರೂ ಮಾತನಾಡಲಿಲ್ಲ. ಕೊನೆಗೆ ಪ್ರತಾಪ್ ಏಳುತ್ತ "ನಾನಿನ್ನು ಬರ್ತೀನಿ" ಎಂದ

ನಾಣಿ-ಭಾಮಾ ಮಾತನಾಡಲಿಲ್ಲ. ಸುಚಿತ್ರಾ "ಮುಂದೇನು, ಪ್ರತಾಪ್?" ಎಂದಳು.

"ನಾನೂ ತಪ್ಪೊಪ್ಪಿಕೊಂಡು, ಸಮೀರ್-ಕೊಟ್ರೇಶ್ ಅಥಾರಿಟೀಸ್ಗೆ ಒಪ್ಪಿಸ್ತೀನಿ" ಪ್ರತಾಪ್ ತಿರುಗಿ ನೋಡದೆ ಹೇಳಿದ.

"ಪ್ರತಾಪ್, ಹಾಗಾದರೆ...?" ನಾಣಿ ಪ್ರಶ್ನೆ ಕೇಳಹೊರಟ.

"ಗುಡ್-ಬಯ್, ನಾಣಿ-ಭಾಮ. ಥ್ಯಾಂಕ್ಸ್, ಡಾಕ್ಟರ್" ಪ್ರತಾಪ್ ನಾಣಿಗೆ ಮಾತು ಮುಗಿಸುವ ಅವಕಾಶ ಕೊಡದೆ ಹೇಳಿ ಹೊರಟು ಹೋದ.

ಕಾರಿನ ಬಳಿ ಹೋಗಿ ಬೀಗದ ಕೈ ಜೇಬಿನಲ್ಲಿ ಹುಡುಕಿ, ಸಿಗದಿದ್ದಾಗ ಮನೆ ಕಡೆ ಹೋಗಲು ತಿರುಗಿದ.

ಸುಚಿತ್ರಾ ನೀಡಿದ ಕೈಯಲ್ಲಿ ಬೀಗದ-ಕೈ ಹಿಡಿದು ಮುಗುಳ್ನಗುತ್ತ ನಿಂತಿದ್ದಳು. "ಕಮ್ಆನ್, ನಾನು ಡ್ರೈವ್ ಮಾಡ್ತೀನಿ"

1 comment:

bhadra said...

ಕಥಾನಕ ಕಲ್ಪಿತವಾದರೂ, ನೈಜತೆಯನ್ನು ಮೈಗೂಡಿಸಿಕೊಂಡಿದೆ
ಬಹಳ ಸೊಗಸಾಗಿ ಬರೆದಿದ್ದೀರಿ. ಇದನ್ನು ತಯಾರು ಮಾಡಲು ಬಹಳ ಸಮಯ ತೆಗೆದುಕೊಂಡಿರಬೇಕಲ್ವೇ?

ಬಹಳ ದಿನಗಳ ನಂತರ ಇಂತಹ ಕಥಾನಕ ಓದುವ ಸೌಭಾಗ್ಯ ಒದಗಿಸಿದ್ದಕ್ಕೆ ವಂದನೆಗಳು, ರವಿ