Tuesday, January 23, 2018

ಕಾಲಾತೀತ

ಕಾಲಾತೀತ

"ದಿನಾ ದಿನ ಟೂರು ಟೂರೂಂತ ಊರೂರು, ದೇಶಾಂತರ ಸುತ್ತುತಾ ಇದ್ದರೆ ಮನೆ ಕಡೆ ಕೆಲಸ ಎಲ್ಲ ಯಾರು ನೋಡೂರು? ನನಗೂ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ. ಮನೆಕಡೆ ಒಂದು ಚೂರೂ ಸಹಾಯ ಮಾಡದೆ ಇದ್ದರೆ ಸಂಸಾರ ನಿಭಾಯಿಸೋದಾದರೂ ಹೇಗೆ?" ವಿರಾಜನ ಹೆಂಡತಿ ಶಾಂತಿ ಕೂಗಾಡುತ್ತಿದ್ದಳು. ವಿರಾಜ್ ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವರ್ಷಕ್ಕೊಂದೆರಡು ಬಾರಿ ಆಫೀಸ್ ಕೆಲಸದ ಮೇಲೆ ಹೊರದೇಶಕ್ಕೆ ಹೋಗಬೇಕಾಗಿ ಬರುತ್ತಿತ್ತು. ಇಂದಿನ ದಿನ ಶಾಂತಿಯ ಕೋಪಕ್ಕೆ ಅದೇ ಕಾರಣವಾಗಿತ್ತು.

ಶಾಂತಿಯ ಕೋಪ ವಿರಾಜನಿಗೆ ಹೊಸತೇನು ಅಲ್ಲ. ಇತ್ತೀಚೆಗಂತೂ ದಿನೇ ದಿನೇ ಮನೆಯಲ್ಲಿ ಕಿರುಚಾಟ-ರಂಪಾಟ ಸಾಮಾನ್ಯವಾಗಿ ಹೋಗಿತ್ತು. ಮನೆಯ ಕೆಲಸದಲ್ಲಿ ವಿರಾಜ್ ಆದಷ್ಟೂ ಸಹಾಯ ಮಾದುತ್ತಿದ್ದ. ಆದರೂ ಶಾಂತಿಯ ಕೋಪ ಹೆಚ್ಚುತ್ತಲೇಯಿತ್ತೇ ಹೊರತು ಕಡಿಮೆಯಂತೂ ಆಗಿರಲಿಲ್ಲ. ಪ್ರಯತ್ನ ಪಡುವಷ್ಟು ಪಟ್ಟು ವಿರಾಜ್ ’ಇದು ಈಡೇರುವ ಸಮಸ್ಯೆಯಲ್ಲ’ ಎಂದು ಕೈಬಿಟ್ಟು, ಅವರ ಏಳು ವರ್ಷದ ಪುಟ್ಟ ಮಗಳಿಗಾಗಿ ಸಹಿಸಿಕೊಂಡು ಹೋಗುತ್ತಿದ್ದ.

ಶಾಂತಿ ಕೋಪಿಸಿಕೊಂಡು ರೂಮಿನೊಳಗೆ ಹೋಗಿ ದೀಪ ಆರಿಸಿ ಮಲಗಿದಳು. ವಿರಾಜ್ ತನಗೆ ಮರುದಿನಕ್ಕೆ ಬೇಕಾದ ಸೂಟ್‌ಕೇಸ್ ಪ್ಯಾಕ್ ಮಾಡಿಕೊಂಡು, ಮಗಳ ಕೋಣೆಗೆ ಹೋಗಿ ಅವಳ ಹಣೆ ಸವರಿ ನಂತರ ತಾನೂ ಹೋಗಿ ಮಲಗಿದ. ಶಾಂತಿ ಗೋಡೆ ಕಡೆ ತಿರುಗಿ ಮಲಗಿದ್ದಳು. ತಾನು ಬಂದಿದ್ದು ಆಕೆಗೆ ಗೊತ್ತಾಯಿತೋ ಇಲ್ಲವೋ ತಿಳಿಯಲಿಲ್ಲ.

ಕೈಮೇಲೆ ಹುಳು ಓಡಾಡಿದಂತಾಗಿ ಎಚ್ಚರವಾಯಿತು. ಕೈಗಡಿಯಾರ ಅಲಾರ್ಮ್ ಸೂಚಿಸುತ್ತಿದೆಯೆಂದು ಗ್ರಹಿಸಿ ಎಚ್ಚರ ಮಾಡಿಕೊಂಡ. ಶಾಂತಿ ಇನ್ನೂ ಗೋಡೆ ಕಡೆಯೇ ತಿರುಗಿ ಮಲಗಿದ್ದಳು. ನಿಶಬ್ಧವಾಗಿ ಎದ್ದು ಬಚ್ಚಲುಮನೆ ಸೇರಿ ಸ್ನಾನಾದಿಗಳನ್ನು ಮುಗಿಸಿಕೊಂಡ. ಬಟ್ಟೆ ಧರಿಸಿ ಮಗಳಿದ್ದ ಕೋಣೆಗೆ ಹೋದಾಗ ಮಗು ಎಚ್ಚರ ಮಾಡಿಕೊಂಡಿತು.

"ಗುಡ್‌ಮಾರ್ನಿಂಗ್, ಪುಟ್ಟಿ" ವಿರಾಜ್ ಪಿಸುಮಾತಿನಲ್ಲಿ ಹೇಳಿದ.

"ಗುಡ್‌ಮಾರ್ನಿಂಗ್, ಅಪ್ಪ"

"ನಾನು ಇವತ್ತು ಟೂರ್ ಹೊರಡ್ತಾ ಇದೀನಿ, ಪುಟ್ಟೀ. ನಿನಗೆ ಬೈ ಹೇಳಿ ಹೋಗೋಣ ಅಂತ ಬಂದೆ"

"ಓಕೆ ಅಪ್ಪ. ಯಾವಾಗ ವಾಪಸ್ ಬರ್ತೀರ?"

"ಒಂದು ವಾರ ಆಗುತ್ತೆ, ಚಿನ್ನ"

"ಸರಿ ಅಪ್ಪ. ಬೈ. ಸೀ ಯು ನೆಕ್ಸ್ಟ್-ವೀಕ್"

"ಇನ್ನೂ 4:30. ನೀನು ಇನ್ನೊಂದು ಸ್ವಲ್ಪ ಹೊತ್ತು ತಾಚಿ ಮಾಡಿಕೊ. ಅಮ್ಮನಿಗೆ ಕಷ್ಟ ಕೊಡಬೇಡ. ಸೀ ಯು ನೆಕ್ಸ್ಟ್-ವೀಕ್, ಚಿನ್ನ"

ವಿರಾಜನ ಹೃದಯ ಖುಷಿಯಿಂದ ತುಂಬಿತು. ಮಗುವಿಗೆ ಮುತ್ತು ಕೊಟ್ಟು ಪುನಃ ಮಲಗಿಸಿದ. ಶಾಂತಿಯನ್ನು ಎಬ್ಬಿಸಿದರೆ ಇನ್ನೇನು ಮಾತಿಗೆ ಈಡಾಗಬೇಕಾಗುತ್ತೋ ಎಂದು ಯೋಚಿಸಿ, ಆಮೇಲೆ ಫೋನ್ ಮಾಡಿದರಾಯಿತೆಂದು ಸೂಟ್‌ಕೇಸ್ ಹಿಡಿದು ಸದ್ದಿಲ್ಲದೇ ಮನೆಯಿಂದ ಹೊರಬಿದ್ದ. ಹತ್ತಿರದಲ್ಲೇ ಇದ್ದ ಆಟೋ-ಸ್ಟ್ಯಾಂಡಿಗೆ ನಡೆದು ಹೋಗಿ, ಆಟೋ ಹತ್ತಿ ಏರ್‌ಪೋರ್ಟ್ ಕಡೆಗೆ ರವಾನೆಯಾದ.

***
ಶಿವಾಜಿನಗರದ ಆಟೋ ಸ್ಟಾಂಡಿನಿಂದ ಅಬ್ದುಲ್ ರಹ್ಮಾನ್ ಆತಂಕ ಭರಿತನಾಗಿ ಆಟೋವೊಂದನ್ನು ಹತ್ತಿ ಏರ್‌ಪೋರ್ಟ್ ಕಡೆ ಹೊರಟಿದ್ದ. ಪಾರ್ಕಿನ್ಸನ್ಸ್ ಡಿಸೀಸ್ ರೋಗ ಇರುವವರಂತೆ ಅವನ ಕೈ ನಡುಗುತ್ತಿತ್ತು. ಆತಂಕ ಕಡಿಮೆ ಮಾಡಿಕೊಳ್ಳಲು ಸಿಗರೇಟ್ ತುಟಿಗೇರಿಸಿ ಬೆಂಕಿಕಡ್ಡಿ ಗೀರಿ, ಹೊತ್ತಿಸಿಕೊಂಡು ಆಳವಾಗಿ ಹೊಗೆಯೆಳೆದು, ಅದನ್ನು ತನ್ನ ಶ್ವಾಸಕೋಶದ ತುಂಬ ತುಂಬಿಕೊಂಡಾಗ ನಡುಕ ಸ್ವಲ್ಪ ಕಡಿಮೆಯಾಯಿತು. 

ಆಟೋ ಚಾಲಕ ಕೋಪದಿಂದ, "ಕ್ಯಾ ಬಾ... ಆಟೋ ಮೇ ನೋ-ಸ್ಮೋಕಿಂಗ್ ಸೊ" ಎಂದ. 

ರಹಮಾನ್ "ಚಲ್-ಚಲ್ ರೇ" ಎಂದು ಅವನನ್ನು ಗದರಿಸಿ ಸಿಗರೇಟ್ ಮುಂದುವರೆಸಿದ. 

ರಹಮಾನ್ ಆತಂಕಕ್ಕೆ ಕಾರಣವಿತ್ತು: ಅವನು ಬಹಳ ದಿನಗಳಿಂದ ಇದಕ್ಕಾಗಿಯೇ ಕಾಯುತ್ತಿದ್ದ. ಕೊನೆಗೆ, ನೆನ್ನೆಯಷ್ಟೇ ಅವನ ಮನೆಗೆ ಪಾಷಾ ಕಡೆಯ ಸಣ್ಣ ಹುಡುಗನೊಬ್ಬ ಬಂದು ’ಚಲ್ ಬಾ, ಪಾಶ ಬುಲಾಸೊ’ ಎಂದು ಹೇಳಿ ಪಾಷಾ ಮನೆಗೆ ಕರೆದೊಯ್ದಿದ್ದ. ಅಲ್ಲಿ ಪಾಷಾ ಅವನ ಕೈಗೆ ’ಅಕ್ಬರ್ ಹಮೀದುಲ್ಲ’ ಎಂಬ ಹೆಸರಿನ ಜೊತೆಗೆ ರಹಮಾನನ ಫೋಟೋ ಇದ್ದ ಪಾಸ್ಪೋರ್ಟ್ ಕೊಟ್ಟಿದ್ದ.

"ತುಮ್ಹಾರ ಪಾಸ್ಪೋರ್ಟ್ ಹೋಗಯಾ. ಕಲ್ಕೋ ತುಮ್ಹಾರ ಜಾನೇಕ ದಿನ್. ಯೇ ಲೋ, ಟಿಕೆಟ್" ಎಂದು ಹೇಳಿ ಮರುದಿನ ಬೆಳಗ್ಗೆ ದುಬೈ‌ಗೆ ಹೋಗುವ ಅರೇಬಿಯಾನಾ ಏರ್‌ಲೈನ್ಸ್‌ನ ಟಿಕೆಟ್ ಕೈಗಿಟ್ಟಿದ್ದ. 

"ಶುಕ್ರಿಯಾ ಪಾಷಾ-ಭಾಯ್" ಎಂದು ಹೇಳಿ ರಹಮಾನ್ ಪಾಷಾ ಮನೆಯಿಂದ ಹೊರಬಿದ್ದಿದ್ದ. ನೆನ್ನೆಯ ದಿನವಿಡೀ ಹೊರಡುವ ತಯಾರಿಯಲ್ಲೀ ಕಳೆದು ಹೋಗಿತ್ತು. ’ಅಕ್ಬರ್ ಹಮೀದುಲ್ಲ, ಅಕ್ಬರ್ ಹಮೀದುಲ್ಲ’ ಎಂದು ತನ್ನ ಹೊಸ ಹೆಸರನ್ನು ಜಪ ಮಾಡುತ್ತ ಜೋಪಾನವಾಗಿ ಸೂಟ್ಕೇಸ್ ಪ್ಯಾಕ್ ಮಾಡಿದ್ದ. ಆ ಸೂಟ್ಕೇಸ್ ಒಂದು ಕ್ಯಾರಿ-ಆನ್ ಬ್ಯಾಗಿನ ಜೊತೆ ಈಗ ಅವನ ಪಕ್ಕದಲ್ಲಿ ಸೀಟಿನ ಮೇಲಿತ್ತು. ಅದನ್ನು ತನ್ನ ಹತ್ತಿರ ಎಳೆದುಕೊಂಡು, ಪ್ರೀತಿ-ಭಕ್ತಿಗಳಿಂದ ಅದರ ಸುತ್ತ ಕೈಹಾಕಿದ. 

ರಹಮಾನ್ ಸಿಗರೇಟು ಮುಗಿಸಿ, ತುಂಡನ್ನು ಹೊರಗೆಸೆದು, ಹಿಂದಕ್ಕೊರಗಿ ಏರ್‌ಪೋರ್ಟ್ ತಲುಪುವುದನ್ನು ಕಾದು ಕುಳಿತ.

***
ವಿರಾಜ್ ಚೆಕಿನ್‌ಗಾಗಿ ಅರೇಬಿಯಾನಾ ಏರ್‌ಲೈನ್ಸ್ ಕೌಂಟರಿನಲ್ಲಿ ನಿಂತಿದ್ದ. ಅವನ ಮುಂದೆ ಖೋಪಡಿ-ಟೋಪಿ ಧರಿಸಿದ ಯಾರೋ ಮುಸಲ್ಮಾನ ಮನುಷ್ಯ. ಖೋಪಡಿ-ಟೋಪಿಯ ಚೆಕಿನ್ ಲಗೇಜ್ ಒಳಗೆ ಹಾಕಿಸಿ ಕೌಂಟರಿನವಳು "ಫ್ಲೈಟ್-6479 ಬ್ಯಾಂಗಲೋರ್-ಟು-ದುಬೈ, ಸೀಟ್-12A, ಗೇಟ್-7" ಎಂದು ಹೇಳಿ ಬೋರ್ಡಿಂಗ್-ಪಾಸ್ ಜೊತೆಗೆ ಅವನನ್ನು ಕಳುಹಿಸಿಕೊಟ್ಟಳು. "ನೆಕ್ಸ್ಟ್ ಪ್ಲೀಸ್"

ವಿರಾಜ್ ತನ್ನ ಪಾಸ್ಪೋರ್ಟ್, ಟಿಕೆಟ್ ಇತ್ಯಾದಿಗಳನ್ನು ಅವಳ ಮುಂದಿಟ್ಟ. ಚೆಕಿನ್ ಲಗೇಜ್ ಇರಲಿಲ್ಲ. "ಯೋರ್ ಬೋರ್ಡಿಂಗ್-ಪಾಸಿಸ್, ಸರ್. ಫ್ಲೈಟ್-6479 ಬ್ಯಾಂಗಲೋರ್-ಟು-ದುಬೈ, ಸೀಟ್-12B, ಗೇಟ್-7, ಫ್ಲೈಟ್-84, ದುಬೈ-ಟು-ಸ್ಯಾನ್‌ಫ್ರಾಂಸಿಸ್ಕೋ, ಸೀಟ್-28C. ಹ್ಯಾವ್ ಎ ನೈಸ್ ಟ್ರಿಪ್" ಎಂದು ಹೇಳಿ ಅವನ ಬೋರ್ಡಿಂಗ್ ಪಾಸ್ ಕೈಗಿತ್ತಳು.

***
"ಫ್ಲೈಟ್-ಅಟೆಂಡೆಂಟ್ಸ್ ಪ್ರಿಪೇರ್ ಫಾರ್ ಟೇಕಾಫ್" ಎಂದು ಕ್ಯಾಪ್ಟನ್ ಧ್ವನಿ ಬರುತ್ತಿದ್ದಂತೆ ವಿಮಾನ ಗಗನಕ್ಕೇರಿತು. ಅಬ್ದುಲ್ ರಹಮಾನ್ ತನ್ನ ಸೀಟಿನ ಹ್ಯಾಂಡಲ್‌ಗಳನ್ನು ಬಲವಾಗಿ ಹಿಡಿದು ಕೂತಿದ್ದ. ಭಯ ಅವನ ಕಣ ಕಣಗಳಲ್ಲಿ ತುಂಬ್ ಹರಿದಾಡುತ್ತಿರುವಂತೆ ಭಾಸವಾಗುತ್ತಿತ್ತು. ಅವನ ಮನಸಿನಲ್ಲಿ "ಅಲ್ಲಾಹು-ಅಕ್ಬರ್" ಜೊತೆಗೆ "ಅಕ್ಬರ್ ಹಮೀದುಲ್ಲಾ" ಮಂತ್ರ ಕಿತ್ತಾಡುತ್ತಿತ್ತು. ಪಕ್ಕದಲ್ಲಿ ಕೂತಿದ್ದ ಮನುಷ್ಯ ಚೆಕಿನ್ ಸಮಯದಲ್ಲಿ ತನ್ನ ಹಿಂದೆ ನಿಂತಿದ್ದವನೆಂದು ಗುರುತಿಸಿದ. ಈಗ ತನ್ನನ್ನೇ ದಿಟ್ಟಿಸಿ ನೋಡುತ್ತಿರುವನೆಂದು ಭಾವಿಸಿ ಅವನ ಆತಂಕ ಇನ್ನೂ ಹೆಚ್ಚಾಯಿತು. 

ಸ್ವಲ್ಪ ಹೊತ್ತಿನಲ್ಲಿ ವಿಮಾನ 33000 ಅಡಿಗೇರಿ ಸಮಮಟ್ಟವಾಯಿತು. ಅಷ್ಟು ಹೊತ್ತಿಗೆ ಗಗನಸಖಿಯರು ಆಹಾರೋಪಾಸನೆ ಆರಂಭಿಸಿದ್ದರು. ಪಾಷಾ ’ಪ್ಲೇನ್‌ನಲ್ಲಿ ಹಲಾಲ್-ಖಾನಾ ಸಿಕ್ಕೋದಿಲ್ಲ, ವೆಜಿಟೇರಿಯನ್ ಮಾತ್ರ ತಿನ್ನಬೇಕು’ ಎಂದು ಹೇಳಿದ್ದು ನೆನಪಾಯಿತು. ಸುಂದರಳಾದ ಏರ್‌ಹೋಸ್ಟೆಸ್ ಬಂದಾಗ ತಪ್ಪದೆ "ವೆಜಿಟೇರಿಯನ್-ಮೀಲ್" ಎಂದು ಕೇಳಿಕೊಂಡ. ಆಹಾರ ತಿಂದಮೇಲೆ ಆತಂಕ ಕಡಿಮೆಯಾಯಿತು. ಹೊಟ್ಟೆ ತುಂಬಿ ಕಣ್ಣೆಳೆಯ ತೊಡಗಿತು. ತಲೆ ಹಿಂದಕ್ಕೂರಿದಾಗ ನಿದ್ರೆ ಹತ್ತಿತು. 

***
ವಿರಾಜ್ ನಿರ್ಜನವಾದ ಕಾಡಿನಲ್ಲಿ ಓಡುತ್ತಿದ್ದಾನೆ. ಒಂದೆಡೆ ಕಾಡು ಮತ್ತೊಂದು ಕಡೆ ಆಳವಾದ ಕಣಿವೆ. ಮಳೆ ಬಂದು ನೆಲವೆಲ್ಲ ಒದ್ದೆಯಾಗಿದೆ. ಓಡುತ್ತ ಓಡುತ್ತ ಬಂದು ಸುಸ್ತಾಗಿ ಬಂಡೆಯೊಂದರ ಮೇಲೆ ನಿಂತಾಗ, ಬಂಡೆಯೇ ಕುಸಿದು ಪಾತಾಳಗರಡಿಗೆ ಜಾರಲಾರಂಭಿಸುತ್ತದೆ. ಕೈಗೆ ಸಿಕ್ಕ ಗಡವೊಂದನ್ನು ಬಲವಾಗಿ ಹಿಡಿಯುತ್ತಾನೆ. ಆದರೂ ಭೂಕುಸಿತ, ಪ್ರಪಂಚವನ್ನೇ ಅಲ್ಲಾಡಿಸುವಂತಹ ಶಕ್ತಿ. 

ನಿದ್ರೆಯಿಂದ ಒಮ್ಮೆಲೆ ಎಚ್ಚರವಾಗಿ ನೋಡಿದರೆ ವಿಮಾನವು ಬಿರುಗಾಳಿಯಲ್ಲಿ ಅದುರುವ ಎಲೆಯಂತೆ ಅಲುಗಾಡುತ್ತಿದೆ. ಸೀಟಿನ ಹ್ಯಾಂಡಲ್‌ಗಳನ್ನು ಬಲವಾಗಿ ಹಿಡಿದುಕೊಂಡಿದ್ದಾನೆ. ವಿಮಾನ ಕೆಳಗಿಳಿಯುತ್ತಿರುವ ಅನಿಸಿಕೆ. ಕ್ಯಾಪ್ಟನ್ ಧ್ವನಿ: "ಪ್ಲೀಸ್ ಫಾಸನ್ ಯೋರ್ ಸೀಟ್‌ಬೆಲ್ಟ್ಸ್. ವೀ ಆರ್ ಎನ್ಕೌಂಟರಿಂಗ್ ಎಕ್ಸ್‌ಟ್ರೀಂ ಟರ್ಬುಲೆನ್ಸ್". ವಿರಾಜ್ ತನ್ನ ಸೀಟ್‌ಪಟ್ಟಿಯನ್ನು ಎಳೆದು ನೋಡಿಕೊಂಡ. ಇನ್ನೂ ಹಾಕಿಯೇ ಇತ್ತು. 

ಸ್ವಲ್ಪ ಹೊತ್ತಿನ ಬಳಿಕ ಪುನಃ ಕ್ಯಾಪ್ಟನ್ ಧ್ವನಿ "ವಿ ಹ್ಯಾವ್ ಲಾಸ್ಟ್ ಕಾಂಟ್ಯಾಕ್ಟ್ ವಿತ್ ಏರ್ ಟ್ರಾಫಿಕ್ ಕಂಟ್ರೋಲ್. ಟರ್ಬುಲೆನ್ಸ್ ಇಸ್ ವೆರಿ ಸಿವಿಯರ್. ಅಟೆಂಪ್ಟಿಂಗ್ ಟು ಟರ್ನ್ ಬ್ಯಾಕ್. ಪ್ಲೀಸ್ ಹೋಲ್ಡ್ ಆನ್ ಟು ಯೋರ್ ಸೀಟ್ಸ್" ಮೂರು ಭಾಷೆಗಳಲ್ಲಿ ಮರುಕಳಿಸಿತು.

ವಿಮಾನ ಎಡಕ್ಕೆ ತಿರುಗುತ್ತಿರುವಂತಹ ಆಭಾಸ. ಪಕ್ಕದಲ್ಲಿ ಏನೋ ಗೊಣಗುವ ಶಬ್ಧ. ತಿರುಗಿ ನೋಡಿದಾಗ ಪಕ್ಕದವ "ಅಲ್ಲಾಹು-ಅಕ್ಬರ್, ಅಲ್ಲಾಹು-ಅಕ್ಬರ್" ಎಂದು ಪಠಿಸುತ್ತಿದ್ದ. ಅವನ ಕೈಯಲ್ಲಿ ಒಂದು ರಿಮೋಟ್-ಕಂಟ್ರೋಲ್. ವಿರಾಜನಿಗೆ ಆತ ಅದರಲ್ಲಿ ಯಾವುದೋ ಒಂದು ಗುಂಡಿ ಒತ್ತುತ್ತಿದ್ದಂತೆ ಕಾಣಿಸುತ್ತಿತ್ತು.

ವಿರಾಜ್ ಅವನಿಗೆ "ಏ..." ಎಂದು ಏನೋ ಹೇಳಲು ಹೊರಟ. ಅಷ್ಟರಲ್ಲಿ ವಿಮಾನ ಹತ್ತಾರು ಸಾವಿರ ಅಡಿ ಕೆಲವೇ ಕ್ಷಣಗಳಲ್ಲಿ ಕುಸಿಯಿತು. ಪ್ರಯಾಣಿಕರಿಗೆಲ್ಲ ಅಂತರಿಕ್ಷದಲ್ಲಿ ತೇಲುತ್ತಿರುವ ಅನುಭವ, ವೇದನೆ. ಕೆಲವರು ಜ್ಞಾನವನ್ನೇ ಕಳೆದುಕೊಂಡರು. ವಿರಾಜನಿಗೆ ಇನ್ನೇನು ಎಲ್ಲವೂ ಮುಗಿದೇ ಹೋಯಿತೆನ್ನಿಸಿತು. "ಅಯ್ಯೋ! ಮಗುವನ್ನು ಮತ್ತೆ ನೋಡುವ ಅವಕಾಷವೇ ಇಲ್ಲವೇ? ಶಾಂತಿಗೆ ’ಹೋಗಿಬರ್ತೀನಿ’ ಎಂದು ಹೇಳಿ, ಒಂದೆರಡು ಒಳ್ಳೆಯ ಮಾತಾಡಿಯಾದರೂ ಬರಬಹುದಿತಲ್ಲಾ" ಎಂಬ ಯೋಚನೆಗಳು ಬಂದವು. ಮರುಕ್ಷಣ ಮಿಂಚಿನಂತೆ ತೀವ್ರ ಬೆಳಕು ಹೊಳೆದು ನಂತರ ಎಲ್ಲವೂ ಕತ್ತಲಾಯಿತು.

***
ಬೆಂಗಳೂರು, ಮಾರ್ಚ್ 10,2014 

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ-ನಿಲ್ದಾಣದಿಂದ ಹೊರಟ ಅರೇಬಿಯಾನ ಏರ್‌ಲೈನ್ಸ್ ಫ್ಲೈಟ್-6479, 223 ಪ್ರಯಾಣಿಕರು ಹಾಗು 9 ಸಿಬ್ಬಂದಿಗಳ ಸಮೇತ ಕಾಣೆಯಾಗಿದೆ. ಆ ಬೋಯಿಂಗ್ 757-300 ವಿಮಾನ ಬೆಂಗಳೂರಿನಿಂದ IST7:50ಕ್ಕೆ ದುಬೈಗೆ ರವಾನೆಯಾಗಿ, 2707ಕಿಲೋಮೀಟರ್, ಹಾಗು 4:30 ಘಂಟೆಗಳ ಪ್ರಯಾಣದ ನಂತರ GST10:30ಕ್ಕೆ ದುಬೈ ತಲುಪಲಿತ್ತು. ಆದರೆ ಸುಮಾರು IST8:53ರ ಹೊತ್ತಿಗೆ ಏರ್ ಟ್ರಾಫಿಕ್ ಕಂಟ್ರೋಲ್ ವಿಮಾನದ ಜೊತೆ ಸಂಪರ್ಕ ಕಳೆದುಕೊಂಡಿತು. ಆ ಸಮಯದಲ್ಲಿ ವಿಮಾನವು ಅರಬೀ ಸಮುದ್ರದ ಮಧ್ಯದಲ್ಲಿ ಹಾರುತ್ತಿತ್ತು. 

ವಿಮಾನ ಚಾಲಕರು ಯಾವುದೇ ತೊಂದರೆಯಾಗಿರುವ ಸೂಚನೆಗಳನ್ನು ಕೊಟ್ಟಿರಲಿಲ್ಲ. ಮಾಯವಾಗುವ ಮುನ್ನ ವಿಮಾನ ಹಿಂದಕ್ಕೆ ತಿರುಗುವ ಪ್ರಯತ್ನ ಮಾಡಿರಬಹುದೆಂದು RADAR ಮೂಲಗಳು ತೋರಿಸಿವೆಯೆಂದು ಸೂತ್ರಗಳು ತಿಳಿಸಿವೆ. ಭಾರತ ಮತ್ತು ಯು.ಏ.ಇ ಸಿವಿಲ್ ಏವಿಯೇಷನ್ ಇಲಾಖೆಗಳು ತುರ್ತಾಗಿ ವಿಮಾನದ ಹುಡುಕಾಟ ಹಾಗು ತನಿಖೆಗಳನ್ನು ಪ್ರಾರಂಭ ಮಾಡಲಿವೆ.

***
ಬೆಂಗಳೂರು, ಮಾರ್ಚ್ 12,2014

ಮಾರ್ಚ್ 10ರಂದು ಬೆಂಗಳೂರಿನಿಂದ ಹೊರಟು, ಅರಬೀ ಸಮುದ್ರದ ಮಧ್ಯ ಮಾಯವಾದ ಅರೇಬಿಯಾನ ಏರ್‌ಲೈನ್ಸ್ ಫ್ಲೈಟ್-6479 ಇನ್ನೂ ಪತ್ತೆಯಾಗಿಲ್ಲ. ಮೂರು ದಿನಗಳಿಂದ ಐದು ದೇಶಗಳ 311 ಸಿಬ್ಬಂದಿಗಳು 29 ವಿಮಾನ ಹಾಗು 45 ಹಡಗುಗಳಲ್ಲಿ ನಿರಂತರವಾಗಿ ಹುಡುಕುತ್ತಲೇಯಿದ್ದರೂ ವಿಮಾನ ಯಾ ಭಗ್ನಾವಶೆಷಗಳೂ ಇನ್ನೂ ಸಿಕ್ಕಿಲ್ಲ. ವಿಮಾನದ ಪ್ಲೈಟ್-ಡೇಟಾ-ರೆಕಾರ್ಡರ್ ಸಿಗುವವರೆಗೂ ಏನಾಯಿತೆಂದು ಹೇಳಲಾಗುವುದಿಲ್ಲವೆಂದು ಸಿವಿಲ್ ಏವಿಯೇಷನ್ ಅಧಿಕಾರಿ ಶ್ರೀರಾಮ್ ಶುಕ್ಲ ಹೇಳಿದ್ದಾರೆ. 

ಇತ್ತ, ತನಿಖೆಯು ’ಅಕ್ಬರ್ ಹಮೀದುಲ್ಲ’ ಹೆಸರಿನ ನಕಲಿ ಪಾಸ್ಪೋರ್ಟ್‌ನೊಂದಿಗೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಏಕಾಗ್ರವಾಗಿದೆ. ಈತ ಯಾರು, ಇವನ ಗುರಿಗಳೇನಿರಬಹುದೆಂದು ಬೆಂಗಳೂರು ಪೋಲೀಸ್ ವಿಚಾರಣೆ ನಡೆಸಿದ್ದಾರೆ. ಏವಿಯೇಶನ್ ಅಧಿಕಾರಿಗಳು ವಿಮಾನ ಅಪಹರಣ, ಉಗ್ರವಾದ, ಚಾಲಕ ಪ್ರಮಾದ ಹಿಡಿದು ತನಿಖೆಯ ಎಲ್ಲಾ ಪಥಗಳನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ. ದಿನಗಳು ಉರುಳಿದಂತೆ ಅಪಘಾತಕ್ಕೀಡಾದ ವಿಮಾನ-ಪ್ರಯಾಣಿಕರ ಸಂಬಂಧಿಗಳ ಆಶಾಕಿರಣಗಳು ಮಸುಕುತ್ತಿವೆ.

***
ಬೆಂಗಳೂರು, ಆಗಸ್ಟ್ 17,2014

ಮಾರ್ಚ್ 10ರಂದು ಅರಬೀ ಸಮುದ್ರದ ಮಧ್ಯ ಮಾಯವಾದ ಅರೇಬಿಯಾನ ಏರ್‌ಲೈನ್ಸ್ ಫ್ಲೈಟ್-6479ನ ಹುಡುಕಾಟ ಇಂದಿಗೆ ಮುಕ್ತಾಯವಾಗಿದೆ. ಐದು ತಿಂಗಳ ಸತತ ಹುಡುಕಾಟದ ನಂತರವೂ ದುರ್ವಿಧಿಗೀಡಾದ ಆ ವಿಮಾನದ ಒಂದು ತುಣುಕೂ ಸಿಕ್ಕಿಲ್ಲ. ವಿಮಾನ-ಪ್ರಯಾಣಿಕರ ಸಂಬಂಧಿಗಳು ತಾವೇ ಹುಡುಕಾಟ ಮುಂದುವರೆಸುವುದಾಗಿ ಪಣ ತೊಟ್ಟಿದ್ದಾರೆ. ಫ್ಲೈಟ್-6479ನ ಮರ್ಮ ಮರ್ಮವಾಗಿಯೇ ಉಳಿದುಹೋಗಿದೆ.

***
"ವಿ ಹ್ಯಾವ್ ಪಾಸ್ಡ್ ದ ಸ್ಟಾರ್ಮ್. ವಿ ಸ್ಟಿಲ್ ಹ್ಯಾವ್ ನೋ ಕಾಂಟ್ಯಾಕ್ಟ್ ವಿತ್ ಏರ್ ಟ್ರಾಫಿಕ್ ಕಂಟ್ರೋಲ್. ವಿ ಅರ ರಿಟರ್ನಿಂಗ್ ಬ್ಯಾಕ್ ಟು ಬ್ಯಾಂಗಲೋರ್. ಕ್ಲಿಯರ್ ವೆದರ್ ಆಲ್ ದ ವೇ ಬ್ಯಾಕ್" ವಿರಾಜನಿಗೆ ಕ್ಯಾಪ್ಟನ್ ಧ್ವನಿಯಲ್ಲಿ ಏನೋ ಗೊಂದಲ ಇರುವಂತೆ ಕೇಳಿಸಿತು. ಆದರೂ ಅದನ್ನು ಕಡೆಗಾಣಿಸಿ, ಆಗಿದ್ದೆಲ್ಲ ಒಳ್ಳೆಯದಕ್ಕೆ ಎಂದು ಯೋಚಿಸಿದ. ಊರಿಗೆ ಹಿಂತಿರುಗಿದ ಮೇಲೆ ತನ್ನ ಟ್ರಿಪ್ ರದ್ದು ಮಾಡಿಕೊಂಡು, ಶಾಂತಿಯ ಜೊತೆ ಹೇಗಾದರೂ ಸಂಧಾನ ಮಾಡಿಕೊಂಡು, ಕೆಲಸಕ್ಕೆ ರಜ ಹಾಕಿ, ಹೆಂಡತಿ-ಮಗಳ ಜೊತೆ ಒಂದಿಷ್ಟು ದಿನ ಕಳೆಯಬೇಕೆಂಬ ನಿರ್ಧಾರ ಮಾಡಿದ. 

ಪಕ್ಕದ ಸೀಟಿನಲ್ಲಿ ಕುಳಿತವನ ವಿಚಿತ್ರ ವರ್ತನೆ ನೆನಪಾಗಿ ಅವನ ಕಡೆ ತಿರುಗಿ ಅವನೊಡನೆ ಮಾತನಾಡ ತೊಡಗಿದ. ರಹ್ಮಾನನಿಗೂ ಇಷ್ಟು ಹೊತ್ತಿಗೆ ಜೀವಭಯ, ದೈವಭಯ ಎರಡೂ ತುಂಬಿ ಎದೆ ಹಗುರ ಮಾಡಿಕೊಳ್ಳಲು ಯಾರೊಂದಿಗಾದರೂ ಮಾತು ಬೇಕೆನಿಸಿತ್ತು. ಮಾತು ಮಾತಿನಲ್ಲಿ, ವಿರಾಜನಿಗೆ ರಹ್ಮಾನ್ ಕಥೆ ತಿಳಿಯಿತು. ಸಣ್ಣ ಕಳ್ಳತನ ಮಾಡಿ, ರಹ್ಮಾನ್ ಕೆಲ ದಿನಗಳ ಕಾಲ ಜೈಲ್ ಸೇರಿದ್ದ. ನಂತರ ದುಬೈಗೆ ಹೋಗಿ ಹಣ ಸಂಪಾದಿಸುವ ಅಸೆ ಬಂದಾಗ ಪಾಸ್‌ಪೋರ್ಟ್‌ಗೆ ಪೋಲೀಸ್ ವೆರಿಫಿಕೇಶನ್ ಬೇಕೆಂದು ತಿಳಿಯಿತು. ಅದಕ್ಕೆ ತನ್ನ ಪರಿಚಯದ ಪಾಷಾ ಸಹಾಯದಿಂದ ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡು ದುಬೈಗೆ ಹೊರಟಿದ್ದ. ಅವನಿಗೆ ವಿಮಾನಗಳು, ಹಾರುವುದು ಎಂದರೆ ಮಹಾಭಯ. 

ತಾನು ತಿಳಿದಂತೆ ರಹ್ಮಾನ್ ರಿಮೋಟಿನಿಂದ ಯಾವ ಬಾಂಬನ್ನು ಸಿಡಿಸುತ್ತಿರಲಿಲ್ಲವೆಂದು, ಅದು ಇನ್-ಫ್ಲೈಟ್ ವಿಡಿಯೋ ಸಿಸ್ಟಮ್ ರಿಮೋಟ್ ಎಂದೂ ವಿರಾಜನಿಗೆ ತಿಳಿಯಿತು. ಆತುರ ಬುದ್ಧಿಗೆ ತನ್ನನ್ನು ತಾನೇ ಬೈದುಕೊಂಡು ವಿರಾಜ್ ಹಿಂದಕ್ಕೊರಗಿದ. 

ವಿಮಾನ ನೆಲಕ್ಕಿಳಿದು ಗೇಟಿನಲ್ಲಿ ಬಂದು ನಿಂತಿತು. ಪ್ರಯಾಣಿಕರೆಲ್ಲ ಚಪ್ಪಾಳೆ ತಟ್ಟಿ ಟರ್ಮಿನಲ್‌ಗೆ ಹೋದಾಗ ವಿರಾಜನಿಗೆ ಏನೋ ವಿಚಿತ್ರಾಭಾಸ. ಹೊರಟಾಗ ಇನ್ನೂ ಬೆಳಗಿನಜಾವ. ಹೆಚ್ಚೆಂದರೆ ಒಂದು ನಾಲ್ಕು ಘಂಟೆಗಳ ಕಾಲ ವಿಮಾನದಲ್ಲಿದ್ದಿರಬಹುದು. ವಿಮಾನದೊಳಗೆ ಕಿಟಕಿಗಳನ್ನು ಇಳಿಸಲಾಗಿತ್ತು ಹಾಗಾಗಿ ಹಗಲು, ರಾತ್ರಿ ಗೊತ್ತಾಗಿರಲಿಲ್ಲ. ಈಗ ನೋಡಿದರೆ  ಕತ್ತಲೆಯಾಗಿದೆ. ಕೈಗಡಿಯಾರ ನೋಡಿಕೊಂಡ; ಬೆಳಗ್ಗೆ 8:53ಕ್ಕೇ ನಿಂತುಹೋಗಿತ್ತು. 

ಸುತ್ತಲೂ ತನಗೆ ಪರಿಚಿತವಾದ ಬೆಂಗಳೂರು ಏರ್‌ಪೋರ್ಟೇ, ಆದರೂ ಎಲ್ಲವೂ ಬೆಳಗ್ಗೆ ನೋಡಿದಾಗಿನಿಂದ ಬದಲಾದಂತಿದೆ. ಜನರಲ್ಲೂ ಏನೇನೋ ಬದಲಾವಣೆಗಳು: ವಸ್ತ್ರವಿನ್ಯಾಸದಲ್ಲಿ, ಮಾತನಾಡುತ್ತಿರುವ ಶೈಲಿಯಲ್ಲಿ, ವರ್ತನೆಯಲ್ಲಿ... 

"ಪ್ಯಾಸೆಂಜರ್ಸ್ ಎಕ್ಸಿಟಿಂಗ್ ಗೇಟ್-137 ಆರ್ ರಿಕ್ವೆಸ್ಟೆಡ್ ಟು ರಿಮೇನ್ ಅಟ್ ದ ಗೇಟ್ ಅಂಟಿಲ್ ಫರ್ದರ್ ನೋಟಿಸ್" ಧ್ವನಿವರ್ಧಕಗಳು ಮೂರು ಭಾಷೆಗಳಲ್ಲಿ ಕೂಗುತ್ತಿದ್ದವು. ’ಬೆಂಗಳೂರು ಏರ್‌ಪೋರ್ಟಿನಲ್ಲಿ 137 ಗೇಟುಗಳೇ ಇಲ್ಲವಲ್ಲ’ ಎಂದು ಯೋಚಿಸುತ್ತ ತಿರುಗಿ ನೋಡಿದಾಗ ತಾನು ಬಂದದ್ದು ಗೇಟ್-137ನಿಂದಲೇಯೆಂಬ ಅರಿವಾಯಿತು. ಸುತ್ತಲು ಸೆಕ್ಯೂರಿಟಿ ನಿಂತಿದ್ದರು. ಪ್ಲೇನ್‌ನಿಂದ ಇಳಿದವರನ್ನು ಗೇಟಿನ ಹೊರಹೋಗಲು ಬಿಟ್ಟಿರಲಿಲ್ಲ. ಇದು ಬೆಂಗಳೂರೇ ಅಥವಾ ಬೇರೆಯೂರೇ ತಿಳಿಯಲು ಹತ್ತಿದರಲ್ಲಿದ್ದ ಸ್ಕ್ರೀನ್ ಒಂದರ ಬಳಿ ಹೋದ. ’ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್’ ಎಂದು ಬರೆದಿದ್ದಂತೂ ಕಾಣಿಸಿತು. ಆದರೆ ತಾರೀಖು... 

ಕೂಡಲೆ ಬಳಿಯೇ ಇದ್ದ ಸೆಕ್ಯೂರಿಟಿ ಹೆಂಗಸೊಬ್ಬಳನ್ನು ಕೇಳಿದ "ಎಕ್ಸ್‌ಕ್ಯೂಸ್-ಮಿ, ಇವತ್ತಿನ ತಾರೀಖು ಎಷ್ಟು ಹೇಳ್ತೀರ, ಪ್ಲೀಸ್?" 

ಆಕೆ "ವಾಟ್? ಓಹ್, ಮಾರ್ಚ್ 10" ಎಂದಳು. 

"ವರ್ಷ?"

"ಆ? 2029" 

2029... ವಿರಾಜ್ ಸ್ಕ್ರೀನ್ ಮೇಲ್ಕಂಡ ತಾರೀಖು ಅದೇ. ಹೊರಟಿದ್ದು ಮಾರ್ಚ್ 10,2014. ಹಾಗಾದರೆ... ಹಾಗಾದರೆ... ಹದಿನೈದು ವರ್ಷ ಭವಿಷ್ಯದಲ್ಲಿ ಬಂದಿಳಿದಿದ್ದರೇ?

***
ಸಮರ್ಪಣೆ: ಮಾರ್ಚ್ 8, 2014ರಂದು ಕ್ವಾಲಾ ಲಂಪುರ್‌ನಿಂದ ಹೊರಟ ಮಲೇಶಿಯಾ ಏರ್‌ಲೈನ್ಸ್ MH370 ಪ್ರಯಾಣಿಕರು ಹಾಗು ಸಿಬ್ಬಂದಿ ವರ್ಗದವರು.


#sciencefiction #timetravel #thriller #kkncmagazine

No comments: