Monday, September 23, 2013

ನಾಟಕ: ಗಬ್ಬರ್ ಸಿಂಗ್ v2.0

(Modified version of ಸಿಹಿ ಗೂಳಿ ಕಳ್ಳ, performed at Kannada Koota Northern California, ಕನ್ನಡೋತ್ಸವ 2013)


ಪಾತ್ರಗಳು:
ರಮೇಶ
ಧಾರಿಣಿ - ರಮೇಶನ ಹೆಂಡತಿ
ಅನು - ರಮೇಶ ಧಾರಿಣಿಯರ ಮಗಳು, ಹೈಸ್ಕೂಲ್ ಹುಡುಗಿ, ತಿಂಡಿಪೋತಿ
ಕಳ್ಳ

       
[Stage: ಕನಿಷ್ಠ ಒಂದು ಡೈನಿಂಗ್ ಟೇಬಲ್, ಮೂರು/ನಾಲ್ಕು ಕುರ್ಚಿ, ಒಂದು ಸೋಫಾ. ಸಾಧ್ಯವಾದರೆ ಒಂದು center table. ಅದರ ಮೇಲೆ (ತಪ್ಪಿದರೆ ಡೈನಿಂಗ್ ಟೇಬಲ್ ಮೇಲೆ) ಒಂದು ರಿಮೋಟ್ ಕಂಟ್ರೋಲ್]
 
[ರಾತ್ರಿಯ ವೇಳೆ - ಅನು, ರಮೇಶ ಟೇಬಲ್ ಮುಂದೆ ಕೂತಿದ್ದಾರೆ. ರಮೇಶ ಪೇಪರ್ ಓದುತ್ತಿದ್ದಾನೆ]
 
[ಹಿನ್ನೆಲೆಯಲ್ಲಿ शॊले ಪಿಚ್ಚರ್ ಹಾಡು ’यॆ दॊसति’ ಮೊಳಗುತ್ತಿದೆ]
 
ರಮೇಶ: ಅಯಯಯಯ... ಯಾವ ಮುಟ್ಠಾಳ ಹಾ.... ಓ... ಒಯ್!!
 
ಅನು: ಏನಪ್ಪ ನೀವು? ಇನ್ನೂ ಬೆಳಗ್ಗೆ ನ್ಯೂಸ್ ಪೇಪರ್ ನೇ ಹಿಡ್ಕೊಂಡು ಓ, ಒಯ್ ಅಂತಿದ್ದೀರ? ಓದದೇ ಹೋದರೆ ತಿಂದಿದ್ದು ಅರಗಲ್ವೇ?
 
ರಮೇಶ: ಮಗೂ, ಇದೇ ನಮಗೆ ಸ್ವೀಟ್ ದಿಶ್ ಇದ್ದಹಾಗೆ ಕಣೇ
 
ಅನು: [ಮುಖ ಅರಳಿಸಿ] ಆ... ಸ್ವೀಟಾ? [ನಿರಾಶೆಯಿಂದ] ಅಮ್ಮಾ ಇವತ್ತೂ ಸ್ವೀಟ್ ಹಾಗೇ ಅಡ್ಜಸ್ಟ್ ಮಾಡ್ಬಿಟ್ರಾ...
 
ಧಾರಿಣಿ: [ಒಳಗಿನಿಂದ] ಸ್ವೀಟ್ ಬೇಕಾ ಸ್ವೀಟ್? ಬಿಸ್ಕತ್ ತಿನ್ನು ಬೇಕಿದ್ರೆ. ಇಲ್ಲ ಅಂದ್ರೆ ಬೆಲ್ಲದ ಡಬ್ಬ ಕೊಡಲ?
 
ಅನು: [ಅಸಹ್ಯದಿಂದ] ಬಿಸ್ಕತ್ತಾ? ವ್ಯಾ!! [ಸ್ವಗತ] ಹೋಗತ್ಲಾಗೆ... ಇವತ್ತೂ ಸ್ವೀಟ್ ಜೈ ಆಯಿತು..
 
ರಮೇಶ: [ಇನ್ನೂ ಪೇಪರ್ ಓದುತ್ತ] ಜೈ ಆಗಿಲ್ಲ; ಆಗ್ತಾಇದೆ...
 
ಅನು: ಆಗ್ತಾ ಇದೆಯಾ? ಹಾಗಂದ್ರೆ?
 
ರಮೇಶ: [ಸಂಚಿನ ದನಿಯಲ್ಲಿ] ಮನೇಲಿ ಜಾಮೂನ್ ತಯಾರ್ ಆಗ್ತಿದೆ
 
ಅನು: [ಉತ್ಸಾಹದಿಂದ] ಜಾಮೂನ್...ಜಾಮೂನಾ? ಎಲ್ಲಿ? ಎಲ್ಲಿ? ಏನ್ ಸಮಾಚಾರ ಅಪ್ಪ?
 
ರಮೇಶ: ಹೋಗಿ ನಿಮ್ಮ ಅಮ್ಮನ್ನೆ ಕೇಳಿಯಪ್ಪ, ನಿಮ್ಮನ್ನ ಸ್ವಲ್ಪ ಜಾಸ್ತಿನೇ ಚೆನಾಗಿ ನೋಡ್ಕೋತಾಳಲ್ಲಪ್ಪ.
 
[ಧಾರಿಣಿ ಜಾಮೂನು
ಪಾತ್ರೆ ಎತ್ತಿಕೊಂಡು ಬರುವಳು]
 
ಅನು: [ಪುಸಲಾಯಿಸುತ್ತ] ಅಮ್ಮಾ, ಮೈ ಸ್ವೀಟ್ ಅಮ್ಮ [ಪಾತ್ರೆಗೆ ಕೈ ಹಾಕುತ್ತ] ನನಗೆ ಜಾಮೂನ್ ಬಿಸಿ ಬಿಸಿಯಾಗೆ ಇಷ್ಟ.
 
ಧಾರಿಣಿ: [ಕೈಗೆ ಏಟು ಹಾಕುತ್ತ] ನಿನಗೆ ಮಾಡಿಲ್ಲ ಕಣೇ.
 
ಅನು: [ಆಶ್ಚರ್ಯದಿಂದ] ಮತ್ತೆ? ಇನ್ಯಾರಿಗೆ? ನನಗಿಂತ ಇನ್ಯಾರು ಹೆಚ್ಚಾಗಿ ಹೋದ್ರಾ ಯಾರೋ? [ಮತ್ತೆ ಕೈ ಹಾಕುವಳು]
 
ಧಾರಿಣಿ: [ಮತ್ತೆ ಕೈ ಮೇಲೆ ಏಟು ಹಾಕುತ್ತ] ತೆಗಿ ಕೈ... ನಾಳೆ ನನ್ನ ಫ಼್ರಿಂಡ್ಸ್ ಬರ್ತಾ ಇದಾರೆ. ಅವರಿಗೆ ಕೊಟ್ಟು ಉಳಿದರೆ ನೋಡೋಣ. ಎಣಿಸಿ ಸರಿಯಾಗಿ ೨೦ ಮಾಡಿದ್ದೀನಿ
 
ಅನು: ಬರೀ ಇಪ್ಪತ್ತಾ? ಒಹ್ ರೆಡಿ ಟು ಮೇಕ್ ಚಮತ್ಕಾರ ಇರಬೇಕು... ಒಂದ್ ಪ್ಯಾಕೆಟ್ ನಲ್ಲಿ ೨೦ ಜಾಮೂನ್ ಆಗತ್ತೆ..
 
ಧಾರಿಣಿ: ರೆಡೀ ಟು ಮೇಕ್ ಆದ್ರೆ ನಾಟ್ ರೆಡೀ ಟು ಈಟ್... ನೀನು ಇದರ ಹತ್ತಿರವೂ ಸುಳಿಯಕ್ಕೂಡದು.
 
ರಮೇಶ: [ಜಾಮೂನು ಪಾತ್ರೆಯೊಳಗೆ ನೋಡುತ್ತ] ಧಾರೂ, ಯಾಕೋ ಇದು ಸರಿಯಾಗಿ ಬೆಂದ ಹಾಗೆ ಕಾಣಿಸ್ತಿಲ್ಲ ಕಣೆ. ಪಾಪ ಮಗು ಒಂದು ರುಚಿ ನೋಡಲಿ ಬಿಡು.
 
ಅನು: ಕರೆಕ್ಟ್ ಅಮ್ಮ, [ಅನೌನ್ಸರ್ ಸ್ಟೈಲ್ ನಲ್ಲಿ] ದಿ ಅಫಿಶಿಯಲ್ ಟೇಸ್ಟರ್ ಇಸ್ ಸ್ಟ್ಯಾಂಡಿಂಗ್ ರೈಟ್ ಹಿಯರ್ ಟ್ಯಾಣ್-ಟ್ಯಣಾಣ್ ಅನ್ಡ್ ವಿಲ್ ಟೇಸ್ಟ್ ಒನ್ ನೌ [ಮತ್ತೆ ಕೈ ಹಾಕುವಳು.]
 
ಧಾರಿಣಿ: [ಕೋಪದಿಂದ] ಅನು [ಮತ್ತೆ ಕೈಗೆ ಹೊಡೆಯುತ್ತಾ] ಇಪ್ಪತ್ತರಲ್ಲಿ ಒಂದು ಕಡಿಮೆಯಾದರೂ ನಾನೆಷ್ಟು ಕೆಟ್ಟವಳಾಗ್ತೀನಿ ಅಂತ ನನಗೇ ಗೊತ್ತಿಲ್ಲ.
 
ರಮೇಶ: [ಅನುಗೆ] ಷಿ ಸೌಂಡ್ಸ್ ಸೀರಿಯಸ್
 
ಅನು: ಅದು ಹಾಗಲ್ಲ ಅಪ್ಪ, ಇನ್ನೂ ಜಾಮೂನ್ ಬಿಸಿ ಆಗಿದೆಯಲ್ಲ, ಅದಕ್ಕೆ ಅಮ್ಮನ ತಲೆ ಕೂಡ ಬಿಸಿ ಇದೆ. ಜಾಮೂನ್ ತಣ್ಣಗಾದ್ರೆ, ತಲೆನೂ ತಣ್ಣಗಾಗತ್ತೆ. [ರಾಗವಾಗಿ] ನೋಡಿ, ಆಗ್ಲೆ ತಣ್ಣಗಾಯ್ತು... [ಮತ್ತೆ ಕೈ ಹಾಕುವಳು, ಧಾರಿಣಿ ಮತ್ತೆ ಅವಳ ಕೈಗೆ ಹೊಡೆಯುವಳು]
 
ರಮೇಶ: ಅಯಯಯ ಇದೇನಪ್ಪ ಇದು ತಾಯಿ ಮಗಳ ಜಗಳ ಕಿತ್ತಾಟ ಅಂದ್ರೆ. ಸರಿ, ಮಲಗೋಕೆ ಮುಂಚೆ ಇವತ್ತಿನ ಕೊನೆ ನ್ಯೂಸ್ ಒಂದ್ಸರ್ತಿ ನೋಡಿಬಿಡೋಣ [ರಿಮೋಟ್
ಹಿಡಿದು (ಜನರ ಕಣ್ಣಿಗೆ ಕಾಣಿಸದ) ಟೀವಿ ಆನ್ ಮಾಡುವನು. ಮುವರೂ ಪಾತ್ರಧಾರಿಗಳು ರಂಗದ ಹೊರಗೆ ನೋಡುವರು]
 
ಟೀವಿ: ಉದಯ ಟೀವಿ ವಿಶೇಷ ಸಮಾಚಾರಗಳು - ಇದೊಂದು ವಿಶೇಷ ಸೂಚನೆ: ನಗರದ ಎರಡು ಬಡಾವಣೆಗಳಲ್ಲಿ ಕಳೆದ ವಾರದಿಂದ ಆರು ಕಳ್ಳತನ ಹಾಗು ಡಕಾಯಿತಿಗಳು ನಡೆದಿವೆಯೆಂದು ಮೂಲ ಪೋಲೀಸ್ ಸೂತ್ರಗಳು ತಿಳಿಸಿವೆ. ಈ ದರೋಡೆಗಳು ಹೆಚ್ಚಾಗಿ ರಾತ್ರಿಯ ವೇಳೆಯಲ್ಲಿ ನಡೆದಿದ್ದು, ಒಟ್ಟು ೪೦ಲಕ್ಷ ರೂಪಾಯಿಗಳಿಗೂ ಮೀರಿದ ನಷ್ಟವಾಗಿದೆಯೆಂದು ತಿಳಿದು ಬಂದಿದೆ. ಬಾಗಿಲುಕಿಟಕಿಗಳನ್ನು ಭದ್ರಪಡಿಸಿಕೊಳ್ಳಬೇಕೆಂದು, ಹಾಗು ಕಳ್ಳ ಅಥವ ಕಳ್ಳರು ಬಂದಲ್ಲಿ, ಜನರು ತಾವೇ ಯಾವ ಕ್ರಮವನ್ನು ತೆಗೆದುಕೊಳ್ಳದೆ, ತುರ್ತಾಗಿ ಪೋಲೀಸ್ ಕಂಟ್ರೋಲ್ ರೂಂ‍ಗೆ ಫೋನ್ ಮಾಡಬೇಕೆಂದು ಪೋಲೀಸ್ ಕಮಿಶನರ್ ಠಾಕುರ್ ಬಲ್ದೇವ್ ಸಿಂಗ್ ಸಾರ್ವಜನಿಕ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ವಿಶೇಷ ಸೂಚನೆ ಮುಕ್ತಾಯವಾಯಿತು. [ಅಷ್ಟರಲ್ಲಿ ನಂತರ ಬಾಗಿಲ ಬೆಲ್ ಶಬ್ಧ]

 
[Alternatively
ರಮೇಶ: ಒಹ್ ಧಾರೂ, ಅನು - ಇಲ್ಲೊಂದು ಇಂಪಾರ್ಟೆಂಟ್ ನ್ಯೂಸ್. ಯಾರೋ ಒಬ್ಬ ಕಳ್ಳ ನಮ್ಮ ಏರಿಯಾದಲ್ಲಿ ಕಳ್ಳತನ ಮಾಡ್ತಿದಾನಂತೆ. ಎಲ್ಲರೂ ಮನೆ ಸರಿಯಾಗಿ ಬೀಗ ಹಾಕ್ಕೊಂಡು ಮಲಗಿಗೊಳ್ಳಿ ಅಂತ ಪಬ್ಲಿಕ್ ವಾರ್ನಿಂಗ್ ಕೊಟ್ಟಿದ್ದಾರೆ.]
 
ಅನು: (ಭಯದಿಂದ.) ಕ ಕ ಕ ಕ ಕಳ್ಳನಾ?
 
ರಮೇಶ: ಅನೂ, ಹೋಗಿ ಬಾಗಿಲು ತೆಗಿ.
 
ಅನು: ಬ ಬ ಬ ಬಾಗಿಲಾ? ನಾನಾ? ಅಪ್ಪಾ, ನೇವೇ ತೆಗೀರಿ, ಇಲ್ಲ ಇಬ್ಬರೂ ಒಟ್ಟಿಗೇ ಹೋಗಿ ತೆಗೆಯೊಣ
 
ರಮೇಶ: ಅನೂ, ಹೋಗಿ ಬಾಗಿಲು ತೆಗಿ ಅಂದೆ.
 
[ಧಾರಿಣಿ ತಲೆ ಚೆಚ್ಚಿಕೊಂಡು ಬಾಗಿಲು ತೆಗೆಯಲು ಹೋಗುವಳು, ಧಾರಿಣಿ, ಪದ್ಮ ಒಳಗೆ ಬರುವರು. ಪದ್ಮ ಕೈಯಲ್ಲಿ ಒಂದು tabloid]
 
ಪದ್ಮ: [ಗಾಬರಿಯಿಂದ ಬರುತ್ತ] ಅಯ್ಯೋ ಏನ್ ಹೇಳಲಿರಿ, ಧಾರಿಣಿ.
 
ಧಾರಿಣಿ: ಓಹ್, ಪದ್ಮ! ಏನ್ ಸಮಾಚಾರ ಇಷ್ಟ್‍ಹೊತ್ನಲ್ಲಿ?
 
ಪದ್ಮ: ಇವತ್ತಿನ ನ್ಯೂಸ್ ನೋಡಿದ್ರಾ?
 
ಧಾರಿಣಿ: ಎಲ್ಲಿ [tabloid ತೊಗೊಂಡು ಏನೋ ಗೊಣಗುತ್ತ ರಮೇಶನಿಗೆ ಕೊಡುವಳು]
 
ರಮೇಶ: "ಪಕ್ಕದ ಊರಿನಲ್ಲಿ ಹಲವಾರು ತಿಂಗಳಿಂದ ಕಳ್ಳತನ, ದರೋಡೆಗಳನ್ನು ನಡೆಸುತ್ತಿದ್ದ ಕಳ್ಳನೊಬ್ಬ ಇದೀಗ ಈ ಊರಿಗೆ ಆಗಮಿಸಿ, ಕಳೆದ ವಾರದಿಂದ ಈ ಊರಿನಲ್ಲಿ ನಡೆದ ಮೂರ‍್ನಾಲ್ಕು ಕಳ್ಳತನಗಳಿಗೆ ಕಾರಣನಾಗಿದ್ದಾನೆಂದು ನಂಬಲಾಗಿದೆ. ಈತ ಬಹಳ ಚಾಲಾಕ್ ಆಗಿದ್ದು, ಅರವತ್ತಕ್ಕೂ ಹೆಚ್ಚು ಕಳ್ಳತನಗಳನ್ನು ನಡೆಸಿರುವ ಗುಮಾನಿಯಿದ್ದರೂ, ಇಲ್ಲಿಯವರೆಗು ಈತನನ್ನು ಕಣ್ಣಾರೆ ಕಂಡಿರುವ ಯಾವ ಸಾಕ್ಷಿಯೂ ಮುಂದೆ ಬಂದಿಲ್ಲ. ಬಲ್ಲ ಪೋಲೀಸ್ ಮೂಲಗಳು ಇವನನ್ನು 'armed and dangerous' ಎಂದು ವರ್ಣಿಸಿದ್ದಾರೆ. ಯಾವಾಗಲೂ ಮುಸುಕು ಹಾಕಿಕೊಂಡು ಕಳ್ಳತನ ಮಾಡುತ್ತಾನೆಂದು ನಂಬಲಾಗಿರುವ ಈತನಿಗೆ ಜನರು ’ಮುಸುಕಿನ ಕಳ್ಳ’ ಹಾಗು ’ಗಬ್ಬರ್ ಸಿಂಗ್ v2.0’ ಎಂಬ ಹೆಸರುಗಳಿಂದ ಕರೆಯುತ್ತಾರೆಂದು ಅನೇಕ ಸೂತ್ರಗಳಿಂದ ತಿಳಿದು ಬಂದಿದೆ" ಅಯ್ಯಾ... ಅದೇ ಇದೇ ಈಗ ನಾವೂ ಟೀವೀಲಿ ಕೇಳಿದ ಸುದ್ಧಿ.
 
ಪದ್ಮ: [ಹೊಸ ಗಾಬರಿಯಿಂದ] ಓಹ್... ಟೀವೀಲೂ ಬಂದುಬಿಡ್ತಾ. ಅಯ್ಯಯ್ಯೋ ಈಗೇನ್ರೀ ಮಾಡೋದು?!
 
ರಮೇಶ: ಏ ಏನು ಯೋಚನೆ ಮಾಡಬೇಡಿ. ನಾವೆಲ್ಲ ಜೊತೆಲಿದೀವಲ್ಲ.
 
ಪದ್ಮ: ರಮೇಶವರೆ, ಈ ನನ್ನ ಒಡವೆಯೆಲ್ಲ ನಿಮ್ಮ ಮನೇಲೇ ಜೋಪಾನವಾಗಿ ಇಟ್ಟುಕೊಂಡಿರಿ [ಒಂದು ಸಣ್ಣ ಚೀಲ ತೆಗೆಯುವಳು]. ಅದೂ, ನಮ್ಮ ಮನೇಲಿ ಕಳ್ಳತನವಾದರೆಯಂತ ಅಷ್ಟೆ.
 
ರಮೇಶ: ಅರೆರೆ... ಇಲ್ಲೂ ಕಳ್ಳತನವಾಗಬಹುದಲ್ರೀ
 
ಪದ್ಮ: ನಿಮ್ಮ ಮನೆಯಿಂದ ಕಳ್ಳತನವಾದರೆ ನಾನು ನಿಮ್ಮಿಂದ ವಸೂಲಿ ಮಾಡಬಹುದು, ಬಿಡಿ. ನಮ್ಮ ಮನೆಯಿಂದ ಕಳ್ಳತನವಾದರೆ ಕಳ್ಳನ್ನ ಕೈಯಿಂದ ಹೇಗೆ ವಸೂಲಿಮಾಡೋದು?
 
ಧಾರಿಣಿ: ಅಹಾಹಾಹ ಚನ್ನಾಗಿದೆ ಕಣ್ರಿ. ನಿಮ್ಮ ಒಡವೆ ನೀವೇ ಇಟ್ಟುಕೊಳಿ, ನಮಗೆ ಅದರ ಸಹವಾಸವೂ ಬೇಡ.
 
ಅನು: ಪದ್ಮ ಆಂಟಿ, ನೀವು ಒಂದು ಕೆಲಸ ಮಾಡಿ. ಕಳ್ಳ ಪಕ್ಕದ ಊರಿಂದ ಇಲ್ಲಿಗೆ ಬಂದಿದ್ದಾನೆ ಅಲ್ವೇ? ನೀವು ನಿಮ್ಮ್ ಒಡವೆ ತೊಗೊಂಡು ಪಕ್ಕದ ಊರಿಗೆ ಹೋಗ್ಬಿಡಿ. ನೀವೂ ಸೇಫು, ನಿಮ್ಮ ಒಡವೆನೂ ಸೇಫು.
 
ಪದ್ಮ: [ಯೋಚಿಸುತ್ತ] ಹಂ.. ಅದೇನೋ ಸರಿ...
 
ರಮೇಶ: ನೋಡಿ, ನೋಡಿ - ಗಾಬರಿಯಾಗೋ ವಿಚಾರ ಏನೂ ಇಲ್ಲ. ನೀವು ನಿಮ್ಮ ಒಡವೆನ ನಿಮ್ಮ ಮನೇಲೇ ಇಟ್ಕೊಳಿ. ಏನೂ ಆಗೋದಿಲ್ಲ. ಹೋಗಿಬನ್ನಿ.
 
[ಪದ್ಮ ಹೊರಗೆ ಹೋಗುತ್ತಾರೆ. ರಮೇಶ ಅವರ ಹಿಂದೆ ಹೋಗುತ್ತಾನೆ]
 
ರಮೇಶ: [ಹಿಂತಿರುಗಿ ಬರುತ್ತಾ] ಈ ಟ್ಯಾಬ್ಲಾಯ್ಡ್ ನವರಿಗೆ, ಮಾಡಕ್ಕೆ ಕೆಲಸ ಇಲ್ಲ. ಸುಮ್ಮನೆ ಎಲ್ಲಾರನ್ನೂ ಹೆದರಿಸ್ತಾರೆ. ಎಲ್ಲ ಬಾಗಿಲು ಹಾಕಿದೀನಿ.. ಸರಿ ನಡಿ ಅನು ತಾಚಿ ಟೈಮಾಯಿತು ..
 
ಅನು: ನಾನು ಇವತ್ತು ನಿಮ್ ರೂಮ್ ನಲ್ಲೆ ಮಲಗಿಕೊಳ್ಳಲ?
 
ರಮೇಶ: ಯಾಕಮ್ಮ?
 
ಅನು: ಏನಿಲ್ಲ, ನನಗೇನೂ ಭಯ ಇಲ್ಲ, ಸುಮ್ನೆ ಕಳ್ಳ ಬಂದ್ರೆ ನಿಮಗೇ ಭಯ ಆಗ್ಬಾರ್ದು ಅಂತ ಹೇಳಿದೆ ಅಷ್ಟೇ..
 
ರಮೇಶ: ನಡಿ ನಡಿ ಹೋಗಿ ನಿನ್ನ ರೂಮ್ ನಲ್ಲೆ ಮಲಕ್ಕೊ
 
[ರಮೇಶ ಹೋಗುವನು]
 
ಧಾರಿಣಿ: ಮತ್ತೆ ಅನು, ಗೊತ್ತಾಗಲ್ಲ ಅಂತ ಏನಾದ್ರೂ ಜಾಮೂನ್ ಗೆ ಕೈ ಹಾಕಿದ್ಯೋ, ಸರೀಯಗಿ ಏಟು ಕೊಡ್ತೀನಿ ಮರೀಬೇಡ. ೨೦ ಜಾಮೂನ್ ಇದೆ. ಒಂದೇ ಒಂದು ಕಮ್ಮಿ ಆದ್ರೂ ನೋಡ್ಕೊ..
 
[ಧಾರಿಣಿ ಹೋಗುವಳು]
 
ಅನು: [ಅವರು ಹೋದಮೇಲೆ] ಇವತ್ತು ನನ್ನ ರೂಮ್ ಬೇಡ, ಇಲ್ಲೆ ಒಂದು ದಿಂಬು ಹಾಕಿಕೊಂದು ಮಲಕ್ಕೊತೀನಿ..
 
-2-
 
[ರಾತ್ರಿ ಆಗಿದೆ, ಅನು ಸೋಫಾ ಮೇಲೆ ದಿಂಬು ಹಾಕಿ ಮಲಗಿದಾಳೆ. ಜಾಮೂನು ಪಾತ್ರೆ ಟೇಬಲ್ ಮೇಲೆ ಇರುತ್ತದೆ]

 
[ಜೀರುಂಡೆಗಳು ಕೂಗುತ್ತಿರುವಂತೆ ಗಡಿಯಾರ ೧೨ ಘಂಟೆ ಹೊಡೆಯುವ ಶಬ್ಧ. ಗಡಿಯಾರ ಮುಗಿಸಿದ ನಂತರ ಗಾಜು ಒಡೆಯುವ ಶಬ್ಧ]

 
[ಕಳ್ಳ ಬರುತ್ತಾನೆ. ಅತ್ತಿತ್ತ ನೋಡಿ ಅಲ್ಲೊಂದು ಇಲ್ಲೊಂದು ಸಾಮಾನು ಚೀಲಕ್ಕೆ ಹಾಕಿಕೊಳ್ಳುವನು. ನಂತರ ಜಾಮೂನಿನ ಪಾತ್ರೆ ನೋಡಿ]
 
ಕಳ್ಳ: ಅರೆ ವಾ ! ಜಾಮೂನ್! ಗುಲಾಬ್ ಜಾಮೂನ್ ! ಅಹಹ
 
[ಒಂದೊಂದಾಗಿ ತಿನ್ನುವನು. ಮೂರ್ನಾಲ್ಕು ತಿಂದಮೇಲೆ ಪಾತ್ರೆಯ ಮುಚ್ಚಳ ಬೀಳಿಸುವನು]

 
ಧಾರಿಣಿ: [ಒಳಗೆ ಬರುತ್ತಾ] ಏನೋ ಶಬ್ದ ಆಯ್ತಲ್ಲ... ಈ ಅನುನೆ ಇರಬೇಕು: ಜಾಮೂನ್... ತಡಿ ಮಾಡ್ತೀನಿ ಅವಳಿಗೆ
 
[ಕಳ್ಳ ಅಷ್ಟರಲ್ಲಿ ಟೇಬಲ್ ಕೆಳಗೆ ಬಚ್ಚಿಟ್ಟುಕೊಳ್ಳುವನು]
 
ಧಾರಿಣಿ: [ಪಾತ್ರೆ ನೋಡಿ]
ಅರೆ! ಇವಳ ಧೈರ್ಯ ನೋಡು ಐದು ಜಾಮೂನ್ ತಿಂದಿದಾಳೆ, ಅನು... [ಎಬ್ಬಿಸುತ್ತ್ತ] ಎಷ್ಟು ತಿನ್ದ್ಬೇಡ ಅಂತ ಹೇಳಿದ್ರೂ ಕಳ್ಳ..
 
ಅನು: [ಕೂಡಲೆ, ಅಮ್ಮ ಮಾತು ಮುಗಿಸುವ ಮೊದಲೇ] ಕಳ್ಳ..ಕಳ್ಳ ಕಳ್ಳಾ... [ಕಿರುಚುತ್ತ ಏಳುವಳು]
 
ಧಾರಿಣಿ: ಯಾಕೇ... ಯಾಕೆ ಕೂಗ್ಕೋತಾ ಇದೀಯ?
 
ಅನು: ಏ ಇಲ್ಲಪ್ಪ, ನಾನೆಲ್ಲಿ ಕೂಗ್ಕೊಂಡೆ? ಸುಮ್ಮನೆ ಕೂಗೋ ಪ್ರಾಕ್ಟೀಸ್ ಮಾಡತಾ ಇದೀನಿ. ಒಂದು ವೇಳೆ ಕಳ್ಳ ಬಂದ್ರೆ ಗಂಟಲು ಟ್ಯೂನ್ ಆಗಿರ್ಲಿ ಅಂತ
 
ಧಾರಿಣಿ: ಟ್ಯೂನಾ? ನಿನ್ನನ ಸರಿಯಾಗಿ ಟ್ಯೂನಿಂಗ್ ಮಾಡ್ತೀನಿ. ಪಾಪಿ, ಯಾಕೇ ತಿಂದೆ ಜಾಮೂನು?
 
ಅನು: ಜಾಮೂನ? ನಾನ? ಅಮ್ಮ, ದಿಸ್ ಈಸ್ ನಾಟ್ ಫೇರ್! ನಾನು ಜಾಮೂನ್ ನೋಡಿಯೂ ಇಲ್ಲ..
 
[ಅಷ್ಟರಲ್ಲಿ ಕಳ್ಳ ಟೇಬಲ್ ಕೆಳಗಿನಿಂದ ಕೈಹಾಕಿ ಮತ್ತೆ ಜಾಮೂನ್ ತಿನ್ನುವನು]
 
ಧಾರಿಣಿ: ನೀನಲ್ಲದ ಇನ್ಯಾವ ಕಳ್ಳ ಬಂದು ತಿಂದ ? ಬಾ ಇಲ್ಲಿ ನೋಡು, (ಕಿವಿ ಹಿಡಿದು ಕರೆ ತಂದು, ಪಾತ್ರೆ ತೋರಿಸುತ್ತಾ), ನೋಡು.. ಹಾ! ಈಗ ಒಂದು ನಿಮಿಷದಲ್ಲಿ ೧೫ ಇತ್ತು! ಈಗ ಬರೀ ೧೦ ಇವೆ.! ಏನೇ ಮಾಡಿದೆ?
 
ಅನು: ನಾನೇನ್ ಮಡ್‍ದೆ ಅಮ್ಮ? ನೀವು ೧೫ ಎಣಿಸಿದಾಗಿಂದ ನಾನು ನಿಮ್ಮ ಮುಂದೆನೇ ಇದೀನಿ.
 
ಅನು: [ಕೆಲ ಕ್ಷಣಗಳ ನಂತರ] ಅಮ್ಮ... are you sure ನೀವು ೨೦ ಜಾಮೂನ್ ಮಾಡಿದ್ರಿ ಅಂತ?
 
ಧಾರಿಣಿ: [ಸಿಟ್ಟಿನಿಂದ] ಅನು! ನೀನೇ ಹೇಳಲಿಲ್ಲವಾ - ಒಂದು ಪ್ಯಾಕೆಟ್‍ನಲ್ಲಿ ಇಪ್ಪತ್ತಾಗುತ್ತೆ ಅಂತ?
 
ಅನು: ಸರಿ, ಸರಿ. ನೀವು ೨೦ ಜಾಮೂನ್ ಮಾಡಿದ್ರಿ. ನಾನಂತು ಒಂದೂ ತಿಂದಿಲ್ಲ. [ಕೆಲ ಕ್ಷಣಗಳ ನಂತರ] ಹಾಗಾದರೆ ಇದು ಅಪ್ಪನ ಕೆಲಸವೇ ಇರಬೇಕು.
 
ಧಾರಿಣಿ: ಏ ಇಲ್ಲ ಕಣೆ. ಅವರಿಗೆ ಜಾಮೂನ್ ಇಷ್ಟನೇ ಇಲ್ಲ.
 
ಅನು: ಒಂದ್ಸರ್ತಿ ಅಪ್ಪನ್ನೇ ಕೇಳೋಣ. ಅಪ್ಪಾ ಅಪ್ಪಾ!!
 
[ಈ ಮಧ್ಯೆ ಕಳ್ಳ ಮತ್ತೆ ಟೇಬಲ್ ಕೆಳಗಿನಿಂದ ಕೈಹಾಕಿ ಜಾಮೂನ್ ತಿಂದಿರುತ್ತಾನೆ]
 
ರಮೇಶ: [ಬರುತ್ತ] ಏನ್ರಪ್ಪ ಇವರದ್ದು, ಇಷ್ಟ್‍ಹೊತ್ನಲ್ಲಿ... ಏನೇ?
 
ಅನು: ಅಪ್ಪಾ - ಜಾಮೂನೆಲ್ಲ ತಿಂದ್ಬಿಟ್ಟು ಈಗ ನನ್ನನ್ನ ಸಿಗ್‍ಹಾಕಿಸ್ತ ಇದೀರ?
 
ಧಾರಿಣಿ: ೨೦ ಜಾಮೂನ್ ಮಾಡಿದ್ದೆ ರೀ. ಈಗ ಬರೀ ೧೦ ಇವೆ.
 
ರಮೇಶ: ಓ... ಅದನ್ನ ಕಂಡ್ರೂ ಆಗೋಲ್ಲ ನನಗೆ. ಹಯ್ಯ - ನಿಮ್ಮಿಬ್ಬರಿಗೂ ಏಣಿಸೋಕ್ಕೂ ಬರಲ್ಲ. ಹತ್ತೆಲ್ಲಿವೆ? ನೋಡು! ಬರೀ ನಾಲಕ್ಕಿವೆ.
 
ಧಾರಿಣಿ: ಹಯ್ಯೂ!
 
ಅನು: ಅಪ್ಪ ನೀವೂ ತಿಂದಿಲ್ಲ, ನಾನೂ ತಿಂದಿಲ್ಲ [ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಳ್ಳುವರು]
 
ಅನು/ರಮೇಶ: ಅಮ್ಮಾ/ಧಾರೂ
 
[ಕಳ್ಳ ಪುನಃ ಜಾಮೂನ್ ತಿನ್ನುವನು]
 
ಧಾರಿಣಿ: ನ.. ನ.. ನಾನಾ? ನಾನಲ್ಲ. ನಾನು ೨೦ ಜಾಮೂನ್ ಮಾಡಿದ್ದೆ. ಈಗ.. [ಪಾತ್ರೆ ನೋಡುತ್ತಾಳೆ] ಬ... ಬ... ಬರೀ ಒಂದಿದೆಯಲ್ರೀ!
 
ಅನು: ಹಾಗಿದ್ರೆ ಆ ಕ ಕ ಅಕ ....
 
ಕಳ್ಳ: ಕಳ್ಳನೆ ಬಂದು ತಿಂದಿರಬೇಕು .. [ಉಳಿದ ಒಂದು ಜಾಮೂನು ತಿಂದು ಓಡಿಹೋಗುವನು. ಕಳ್ಳನಿಗೂ ರಮೇಶನಿಗೂ ಮುಖಾಮುಖಿ. ಕಳ್ಳ ರಮೇಶನನ್ನು ತಳ್ಳುವನು. ರಮೇಶ ಬಿದ್ದಂತೆ ಕಳ್ಳ ತನ್ನ ಚೀಲ ಎತ್ತಿಕೊಂಡು ಓಡಿಹೋಗುವನು. ಅನು ಜೋರಾಗಿ ಕಿರುಚಿಕೊಳ್ಳುವಳು]
 
ಧಾರಿಣಿ: ರೀ, ಮೊದಲು ನಿಮ್ಮ ಮಾವ ಪೊಲಿಸ್ ಕಮಿಶನರ್ ಇದಾರಲ್ಲ ಅವರಿಗೆ ಫೋನ್ ಮಾಡಿ..
 
ರಮೇಶ: [ಫೋನ್ ಹುಡುಕುತ್ತ] ಅಯ್ಯೋ ಪೋನನ್ನೂ ಕದ್ದುಕೊಂಡು ಹೋಗಿದ್ದಾನಲ್ಲೇ.
 
ಧಾರಿಣಿ: ಒಳಗಿರೋ ಫೋನ್‍ನಲ್ಲಿ ಮಾಡಬಾರದಾ?
 
ರಮೇಶ: [ಹೊರಗೆ ಹೋಗುವನು, ಹೊರಗಿನಿಂದ, ಫೋನ್ ಡಯಲ್ ಮಾಡುವ ಶಬ್ಧ] ಹಲೋ! ಪೊಲಿಸ್ ಸ್ಟೇಶನ್ನಾ? ನಾನೂ ರಮೇಶ್ ಅಂತ... ನಮ್ಮ ಮನೇಲಿ... ಗಬ್ಬರ್, ಗಬ್ಬರ್....
 
[ಅನು, ಧಾರಿಣಿ ಕೂಡ ಹೋಗುವರು]


[Come September Interlude sound track ಮೊಳಗುತ್ತೆ]
-3-
 
[ಎರಡನೇ ದಿನ ಬೆಳಗ್ಗೆ, ಅನು ಟೇಬಲ್ ಮುಂದೆ ಕುಳಿತು ಕಾಪಿ ಕುಡಿಯುತ್ತ ಪೇಪರ್ ಓದುತ್ತಿದ್ದಾಳೆ]

 
[ಸುಪ್ರಭಾತ ಮೊಳಗುತ್ತಿದೆ ನಂತರ ರೇಡಿಯೋದಲ್ಲಿ: "ಆಕಾಶವಾನಿ ಭದ್ರಾವತಿ ಬೆಂಗಳೂರು. ಚಿತ್ರಗೀತೆಗಳು. ಮೊದಲಿಗೆ ಪ್ರೇಮದ ಕಾಣಿಕ್ಗೆ ಚಿತ್ರದ ಗೀತೆ, ಡಾ. ರಾಜ್‍ಕುಮಾರ್ ಅವರ ಕಂಠ". ಇದು ಯಾರು ಬರೆದ ಕಥೆಯೋ ಹಾಡಿನ ಮೊದಲ ಕೆಲವು ಸಾಲುಗಳು ಮೊಳಗುತ್ತವೆ]

 
[ಸುಪ್ರಭಾತ ಬರುತ್ತಿರುವಂತೆ ರಮೇಶ ಒಂದು ದೊಣ್ಣೆ, ಹಾಗು ಒಂದು ಹಗ್ಗ ತಂದು ಟೇಬಲ್ ಮೇಲೆ ಇಟ್ಟು ಹೊರಗೆ ಹೋಗುವನು. ಸುಪ್ರಭಾತ ಮುಗಿದು ಹಾಡು ಬರುತ್ತಿರುವಂತೆ ರಮೇಶ ಮತ್ತೆ ಆಗಮಿಸುತ್ತಾನೆ. ಹಾಡು ಮುಗಿದ ನಂತರ ಅತ್ತಿತ್ತ ಟೆನ್ಷನ್‍ನಲ್ಲಿ ಒಡಾಡುತ್ತಿದ್ದಾನೆ]

 
ಅನು: [ಉತ್ಸಾಹದಿಂದ] ಅಪ್ಪ, ಅಪ್ಪಾ, ಇಲ್ಲಿ ನೋಡಿ ಪೇಪರಲ್ಲೆಲ್ಲ ಬರೀ ನಿಮ್ಮದೇ ನ್ಯೂಸ್...
 
ರಮೇಶ: [ಓಡಾಡುವುದು ನಿಲ್ಲಿಸಿ] ಅಯ್ಯೋ ಸುಮ್ನಿರೆ! ಬೆಕ್ಕಿಗೆ ಚೆಲ್ಲಾಟ, ಇಲ್ಲಿ ಇಲೀಗೆ ಪ್ರಾಣ ಸಂಕಟ. ಈ ಪೇಪರ್ನವರು ಬಾಯಿಗೆ ಬಂದಿದ್ದೆಲ್ಲ ಬರೆದಿದಾರೆ ನನ್ನ ಬಗ್ಗೆ
 
ಅನು: [ಹಾಸ್ಯದ ಧ್ವನಿಯಲ್ಲಿ] ಏನೇನೋ ಬರ್ದಿಲ್ಲ ಅಪ್ಪ, ನೆನ್ನೆ ನೀವು ಹೇಳಿದ್ದನ್ನೇ ಬರೆದಿದಾರೆ - ಜಂಬ ಕೊಚ್ಕೋತಿದ್ರಲ್ಲ, ನಾನು ಕಳ್ಳನ್ನ ನೋಡಿದೀನಿ, ಮತ್ತೆ ಕಾಣಿಸಿದರೆ ಗುರುತು ಹಿಡೀತೀನಿ, ಹಾಗೆ ಹೀಗೆ ಅಂತ- ಅದನ್ನೆ ಬರೆದಿದಾರೆ ಅಷ್ಟೇ!
 
ರಮೇಶ: ನೀನು ನಿಮ್ಮಮ್ಮ ಏನ್ಮಾಡ್ತಾ ಇದ್ರಿ? ಅಗ್ಲೆ ಹೇಳ್ಬೇಕಿತ್ತು ಸುಮ್ಮನಿರಿ ಅಂತ. ಅದು ಬಿಟ್ಟು ನಾನು ಹೇಳಿದ್ದಕೆಲ್ಲ ಇಬ್ರೂ ತಲೆ ಆಡಿಸ್ತಿದ್ರಿ! ಈಗ ಏನಾದ್ರು ಆದ್ರೆ ನೀವೂ ಅನುಭವಿಸಿ ಅಷ್ಟೆ.
 
ಧಾರಿಣಿ: [ಪಾತ್ರೆ ಹಿಡಿದು ಒಳಗೆ ಬರುತ್ತಾ, ಅನ್ನೌನ್ಚೆರ್ ಧ್ವನಿಯಲ್ಲಿ]
"ರಮೇಶ್ ಅವರು ಕಳ್ಳನನ್ನು ಸ್ವತಃ ಕಣ್ಣಿನಿಂದ ನೋಡಿದ್ದು ಅವನನ್ನು ಸುಲಭವಾಗಿ ಗುರುತಿಸಬಲ್ಲೆ ಎಂದು ಹೇಳಿದ್ದಾರೆ. ಹೀಗಾಗಿ ರಮೇಶ್ ಅವರಿಗೆ ಮತ್ತೆ ಹಾನಿ ಮಾಡುವ ಕಾರಣಕ್ಕಗಿ ಕಳ್ಳ ಬಂದರೂ ಬರಬಹುದೆಂದು ನಿರೀಕ್ಷಿಸಲಾಗಿದೆ, ಅಂತಹ ಸಂದರ್ಭದಲ್ಲಿ ಕಳ್ಳನನ್ನು ಹಿಡಿಯಲು ಪೊಲಿಸ್ ಭಾರೀ ಬಂದೋಬಸ್ತ್ ಮಾಡುವ ಸಾಧ್ಯತೆಗಳಿವೆ"... ನಿಮ್ಮದು ಎಲ್ಲದಕ್ಕೂ ಅರ್ಜೆಂಟ್.. ಹೋಗ್ಲಿ ಈಗ ಸ್ವಲ್ಪ ಸಮಾಧಾನ ಮಾಡ್ಕೊಳಿ ಜಾಮೂನ್ ಮತ್ತೆ ಮಾಡಿದೀನಿ, ಸ್ವಲ್ಪ ತಿಂದು ಧೈರ್ಯ ಹೆಚ್ಚಿಸ್ಕೊಳ್ಳಿ
 
ಅನು: [ತಮಾಷಿಯಾಗಿ] ಅಮ್ಮ, ಅಪ್ಪ ಅದನ್ನ ತಿನ್ನಲ್ಲವಂತೆ, ಅದು ಕಳ್ಳನ ತಿಂಡಿ
 
ಧಾರಿಣಿ: ಎಲ್ಲ ತಿಂತಾರೆ, ಸುಮ್ನಿರೇ... ತೊಗೊಳ್ರೀ ಜಾಮೂನು, ಎಲ್ಲ ಸರಿ ಹೋಗತ್ತೆ..
 
ರಮೇಶ: ಏನು ಸರಿ ಹೋಗತ್ತೆ ನಿನ್ನ ತಲೆ? ಪೊಲಿಸ್ ನವರು ಏನೆಲ್ಲಾ ಹೇಳ್ತಿದ್ರು, ಪೆಹರೆ ಇಡಿಸ್ತೀವಿ, ಸೆಕ್ಯುರಿಟಿ ಕೊಡ್ತೀವಿ, ಹಾಗ್ಮಾಡ್ತೀವಿ ಹೀಗ್ಮಾಡ್ತೀವಿ, ಅಂತ... ಎಲ್ಲೇ ಯಾರು ಕಾಣಲ್ವಲ್ಲ! ಏನಾದ್ರು ಆದ್ರೆ ಏನಪ್ಪ ಮಾಡೋದು!
 
ಧಾರಿಣಿ: ರೀ ಅಷ್ಟು ಯೋಚನೆ ಮಾಡ್ಬೇಡಿ
 
ರಮೇಶ: ನಿಮ್ಗಳಿಗಂತು ಏನೂ ಅರ್ಥ ಆಗಲ್ಲ... ಕಳ್ಳ ಒಂದು ವೇಳೆ ಮುಸುಕು ಹಾಕ್ಕೊಂಡು ಬಂದರೆ ಮಾತ್ರ ನನಗೆ ಅವನ್ನ ಗುರುತು ಹಿಡಿಯೋದು ಸಾಧ್ಯ, ಯಾಕಂದ್ರೆ ನಾನು ಅವನನ್ನ ನೋಡಿದ್ದು ಮುಸುಕಿನ ಸಮೇತ ತಾನೆ. ಅವನು ಒಂದುವೇಳೆ ಮುಸುಕು ಹಾಕಿಕೊಳ್ಳ್ದದೆ ಬಂದುಬಿಟ್ಟರೆ ಏನಪ್ಪ ಗತಿ ಶಿವನೇ...
 
ಧಾರಿಣಿ: ಸಮಾಧಾನ ಮಾಡ್ಕೊಳ್ರಿ...
 
ರಮೇಶ: ಹಂ... [ಕೆಲ ಕ್ಷಣಗಳ ನಂತರ] ಧಾರು, ನಿನಗೆ ಆ ಕಳ್ಳನ ಮುಖ ನೆನಪಿದೆಯಾ?
 
ಧಾರಿಣಿ: ಇಲ್ಲ, ನನಗೆ ಅನು ಮುಖ ಮಾತ್ರ ನೆನಪಿದೆ. ಒಳ್ಳೆ ಹೆದರ್ಕೊಂಡು ಪತರ್ಗುಟ್ಟುತ್ತಿದ್ದಳು..
 
ರಮೇಶ: ಅವನ ಕೈ ಕಾಲಿನ ಮೇಲೆ ಏನಾದ್ರೂ ಗುರುತು? ಅವನ ಸ್ಟೈಲ್, ಎತ್ತರ, ದಪ್ಪ, ನಡೆ, ನುಡಿ ಏನಾದ್ರು?
 
ಧಾರಿಣಿ: ನನಗೆ ಅನು ಕಿರ್ಚಾಡಿದ್ದು ಬಿಟ್ಟು ಏನೂ ನೆನಪಿಲ್ಲ.. ಬೇರೆ ಏನನ್ನೂ ಗಮನಿಸೋ ಸ್ಥಿತಿಯಲ್ಲಿ ಇರಲಿಲ್ಲ
 
ರಮೇಶ: ಅಯ್ಯೋ! ನನ್ನ ಕರ್ಮ!!
 
ಧಾರಿಣಿ: ರೀ... ನಿಮ್ಮ ಮಾವನಿಗೆ ಮತ್ತೆ ಫೋನ್ ಮಾಡಿ, ಗಾರ್ಡ್ಸ್ ಯಾವಾಗ ಬರ್ತಾರೆ ಅಂತ ಕೇಳ್ರೀ.. ನೀವು ಒದ್ದಾಡೋದನ್ನ ನೋಡಕ್ಕಾಗಲ್ಲ
 
ರಮೇಶ: ಹಯ್ಯ ಅವರನ್ನ ಏನು ನಂಬೋದೊ! [ಫೋನ್ ತೆಗೆದುಕೊಳ್ಳುತ್ತ
ಫೋನ್ ಡಯಲ್ ಶಬ್ಧ] ಹಲೋ ಮಾವ, ನಾನೇ ರಮೇಶ... ಆ?! ಯಾವ ರಮೇಶ ನ? ಏನ್ ಮಾವ ಹೀಗ್‍ಹೇಳ್ತೀರಾ?... ಹೂ ಅದೇ ರಮೇಶ. ಏನು ಪೆಹರೆ ಇಡಿಸ್ತೀನಿ, ಸೆಕ್ಯುರಿಟಿ ಕೊಡ್ತೀನಿ ಅಂತ ಹೇಳಿ ನನ್ನ ಫೋಟೊ ಪೇಪರಲ್ಲಿ ಹಾಕಿಸ್ಬಿಟ್ಟು, ಈಗ ಕೈ ಕೊಟ್ಟಿದೀರಲ್ಲ ಮಾವಾ! ...ಆ..ಅ.. ಏನೋ ರೈಡ್ ನಲ್ಲಿ ಬಿಸೀ ಇದ್ರಾ? ಸರಿಯಾಯಿತು... ನೀವು ರೈಡಲ್ಲಿ ಬಿಸಿಯಾಗಿರಿ, ಇಲ್ಲಿ ಕಳ್ಳ ಬಂದು ನಮ್ಮನ್ನ ಮತ್ತೆ ರೈಡ್ ಮಾಡಿ ಹೋಗ್ತಾನೆ... ಹೂಮ್...ಆದಷ್ಟು ಬೇಗ ಸೆಕ್ಯೂರಿಟಿ ಕಳ್ಸಿ ಮಾವ! ಓ... ಹೊರಟಿದ್ದಾರ? ಸರಿ ಸರಿ, ಓಕೆ ಬೈ. [ಫೋನ್ ಇಡುವನು] ಸ್ವಲ್ಪ ಸಮಾಧಾನ ಆಯ್ತು..ಸದ್ಯ
 
[ಬಾಗಿಲ ಘಂಟೆಯ ಶಬ್ದ]
 
ಅನು: ಅಮ್ಮಾ ಕಳ್ಳನೇ ಬಂದನೋ ಏನೋ ಮತ್ತೆ.
 
ಧಾರಿಣಿ: ಅಯ್ಯೋ ಸುಮ್ಮಿರೇ! [ಬಾಗಿಲು ತೆಗೆಯಲು ಹೋಗುವಳು]
 
[ರಮೇಶ ಮತ್ತು ಅನು ಇನ್ನೂ ಹೆದರಿಯೇ ಇರುವರು. ಬಾಗಿಲಿನಿಂದ ಕಳ್ಳ, ಮಫ್ತಿಯಲ್ಲಿರುವ ಪೋಲಿಸ್ ವೇಷದಲ್ಲಿ ಬರುವನು. ಜೇಮ್ಸ್ ಬಾಂಡ್ ಥೀಮ್ ಸಂಗೀತ ಹಿನ್ನೆಲೆಯಲ್ಲಿ]

 
ಕಳ್ಳ: [ಒಳಕ್ಕೆ ಬಂದು] ಯಾರು ಬಾಗಿಲು ತೆಗೆದಿದ್ದು?
 
ಧಾರಿಣಿ: ಆ.. ನಾನೇ ಅಲ್ವೇ..?
 
ಕಳ್ಳ: ತೆಗೆಯೋಕ್ ಮುಂಚೆ ಏನಾದ್ರೂ ಪೀಪ್ ಹೋಲ್ ನಿಂದೆ ಹೊರಗೆ ನೋಡಿದ್ರಾ? ಚೈನ್ ಹಾಕ್ದೇ ಯಾಕೆ ತೆಗೆದ್ರಿ?
 
ಧಾರಿಣಿ: ಅದು.. ನೋಡೋಣ ಅಂತಲೇ ಹೊರಟಿದ್ದೆ..
 
ಕಳ್ಳ: ಇನ್ನು ಏನ್ ನೋಡೋದು? ನಾನಾಗಲೇ ಒಳಗೆ ಬಂದಾಗಿದೆ! ನಿಮಗೆ ಬಾಗಿಲು ತೆಗೆಯೋಕ್ಕೆ ಬರಲ್ಲ.. ಎಲ್ಲರ ಪ್ರಾಣನೂ ಡೇಂಜರ್ ನಲ್ಲಿ ಹಾಕಿದೀರ.
 
ರಮೇಶ: ಅರೆ ಮಹಾಶಯ ..ನೀನ್ಯಾರಪ್ಪ?
 
ಕಳ್ಳ: ಕಳ್ಳ!
 
ರಮೇಶ: ಕಳ್ಳ ..ಕಳ್ಳ .. (ಓಡಲಾರಂಭಿಸುವನು, ಕಳ್ಳನೂ ಓಡುವನು, ಮತ್ತೆ ನಿಂತು)
 
ಅನು: ಕಳ್ಳ ಕಳ್ಳ (ಗಟ್ಟಿಯಾಗಿ ಕಿರುಚುವಳು)
 
ಕಳ್ಳ: ಕಳ್ಳ ಆಗಿದ್ದರೂ ಆಗಿರಬಹುದಿತ್ತು, ನೀವು ಸರಿಯಾಗಿ ಬಾಗಿಲು ತೆಗೀಬೇಕು, ಚೈನ್ ಹಾಕಿ ನೋಡಿ, ಕಳ್ಳ ಅಲ್ಲ ಅಂತ ಖಾತ್ರಿ ಮಾಡ್ಕೊಂಡು ಬಾಗಿಲು ತೆಗೀಬೇಕು ಅಂತ ಹೇಳ್ತಾ ಇದ್ರೆ, ಅಷ್ಟರಲ್ಲೇ ನಿಮ್ಮದೇನ್ರೀ ಫಜೀತಿ!
 
ಅನು: ಕಳ್ಳ ಕಳ್ಳ (ಮತ್ತೆ ಕಿರುಚುವಳು)
 
ಕಳ್ಳ: ಮಾತು ಕೇಳಿಸ್ಕೊಳ್ಳದೇ ಕಿರುಚಬೇಡಿ. ಎಲ್ಲರೂ ಸೇಫ್ಟಿ ರೂಲ್ಸ್ ಫಾಲೋ ಮಾಡಬೇಕು!
 
ರಮೇಶ: ನೀವ್ಯಾರೂ ಅಂತ ಹೇಳಲೇ ಇಲ್ಲವಲ್ರ‍ೀ ಸ್ವಾಮೀ.
 
ಕಳ್ಳ: ಮೊದಲೇ ಯಾಕೆ ಕೇಳಲಿಲ್ಲ? ಈಗ ಯಾಕ್ ಕೇಳ್ತಿದೀರ?
 
ರಮೇಶ, ಧಾರಿಣಿ: (ಒಬ್ಬರ ಮುಖ ಒಬ್ಬರು ನೋಡುತ್ತ) ಅಷ್ಟ್‍ಹೊತ್ನಿಂದ ಕೇಳ್ತನೇ ಇದ್ದೀವಲ್ರೀ
 
ಕಳ್ಳ: ಸರಿಯಾಗಿ ಕೇಳಿಸ್ಕೊಳ್ಳಿ. ಇದು ಸೇಫ್ಟೀ ರೂಲ್ಸ್ ಅಷ್ಟೇ ಇಂಪಾರ್ಟೆಂಟ್. ಬಾಗಿಲು ಸರಿಯಾಗಿ ತೆಗೀಬೇಕು. ಕಿಟಕಿ ಬಾಗಿಲು ಮುಚ್ಚಿಟ್ಟಿರಬೇಕು. ಸುಮ್ಮನೇ ಕಿಟಾರ್ ಅಂತ ಕಿರುಚ್ ಬಾರದು. (ಅನುವಿಗೆ) ಮತ್ತೆ ನಡುಗೋದು ನಿಷಿದ್ಧ
 
ರಮೇಶ: [ಕೋಪದಿಂದ] ಅಲ್ಲರೀ ಅಷ್ಟಕ್ಕೂ ನೀವು ಯಾರೂ ಅಂತ !
 
ಕಳ್ಳ: ಅಂಡರ್ ಕವರ್ ಡಿಟೆಕ್ಟಿವ್, ಕಮಿಷನರ್ ಆಫೀಸ್ನಿಂದ
 
ರಮೇಶ: ಓಹ್ ನೀವೇನಾ? ಸದ್ಯ! ಅಂತೂ ಬಂದ್ರಲ್ಲ. ನಾನು ರಮೇಶ. ಈಕೆ ಧಾರಿಣಿ,. ಇವಳು ನಮ್ಮ ಮಗಳು ಅನು. ನಮ್ಮ ಪ್ರೊಟೆಕ್ಷನ್ ಗೇ ನೀವಿಲ್ಲಿ ಬಂದಿರೋದು
 
ಕಳ್ಳ: ಓಹ್ ಹೋ! ನಿಮ್ಮ ಫೋಟೋನೇ ಅಲ್ವಾ ಪೇಪರ್ ನಲ್ಲಿ ಬಂದಿದ್ದು? ನೀವೊಬ್ಬರು ದೊಡ್ಡ ಹೀರೋ ಕಣ್ರಿ ನೀವು.
 
ರಮೇಶ: [ಈಗ ಧೈರ್ಯದಿಂದ] ಹಾ! ಅದೇನ್ಮಹಾ ಬಿಡಿ. ನೀವು ಬರದೇ ಹೋದರೂ ಕಳ್ಳ ಬಂದರೆ ಅಂತ ಪೂರ್ತಿ ತಯಾರಿ ಮಾಡೇ ಇಟ್ಟಿದೀವಿ. ಇಲ್ಲಿ ನೋಡಿ, ಅವನನ್ನ ಬಡೀಯಕ್ಕೆ ಕೋಲು, ಕಟ್ಟಿಹಾಕೋಕೆ ಹಗ್ಗ, ಮತ್ತೆ ಆ ಸಿಹಿ ಗೂಳಿಗೆ ಅಂತ ಸ್ಪೆಶಲ್ ಜಾಮೂನ್
 
ಕಳ್ಳ: ಸ್ಪೆಶಲ್ ಜಾಮೂನಾ? ಏನು ಹಾಗಂದ್ರೆ?
 
[ಟೇಬಲ್ ಮೇಲೆ ಒಂದು ಪಾತ್ರೆ ಮತ್ತು ಒಂದು ಬಟ್ಟಲಲ್ಲಿ ಜಾಮೂನ್ ಇರುವುದು]

 
ಧಾರಿಣಿ: ಅಂದ್ರೆ ಮೂರ್ಛೆ ಬೀಳಿಸುವಂಥ ಜಾಮೂನ್!
 
ಕಳ್ಳ: ಹಾಗಾದ್ರೆ ಜಾಮೂನ್ ಒಳಗೆ ನಿದ್ದೆ ಔಷಧಿ ಹಾಕಿದೀರಾ?
 
ಅನು: ಬರೀ ಆ ಬಟ್ಲಲ್ಲಿರೋ ಜಾಮೂನಿಗೆ
 
ಕಳ್ಳ: (ಹಸನ್ಮುಖಿಯಾಗಿ, ಪಾತ್ರೆ ತೋರಿಸುತ್ತ) ಹಾಗಾದ್ರೆ, ಇವೆಲ್ಲ ಚೆನ್ನಾಗಿದೆಯಾ? ನಾನಿದನ್ನ ತಿನ್ನಬಹುದಾ?
 
ರಮೇಶ: ಓಹೋ ತಿನ್ನಿ! ಖಂಡಿತ ತಿನ್ನಿ! ಸಂತೋಷವಾಗಿ ತಿನ್ನಿ!!
 
ಕಳ್ಳ: [ಜಾಮೂನು ತಿನ್ನುತ್ತ] ವಾಹ್ ವಾಹ್ !! ತುಂಬಾ ಚೆನ್ನಾಗಿದೆ ... (ತಿಂದು...) ಎಲ್ಲ ಮುಗಿದೇ ಹೋಯಿತು. (ರಮೇಶನ ಕತ್ತಿನ ಸುತ್ತ ಸ್ನೇಹದಿಂದೆಂಬಂತೆ ಕೈಹಾಕಿ ಎಳೆಯುತ್ತ) ಹಾಗಿದ್ರೆ ಮಿಸ್ಟರ್ ಹೀರೋ, ನಿಮಗೆ ಪೇಪರ್ನಲ್ಲಿ ಫೋಟೋ ಹಾಕಿಕೊಳ್ಳೋದು ಅಂದ್ರೆ ತುಂಬಾ ಇಷ್ಟಾನಾ?
 
ರಮೇಶ: ಚೆ ಚೆ ಚೆ - ನನಗೆ ಈ ಪೇಪರ್ರು ಪಬ್ಲಿಸಿಟಿ ಅಂದ್ರೆ ಆಗಿ ಬರಲ್ಲ... ಆದ್ರೆ ನಿಮ್ಮ ಕಮಿಷನರ್ರೇ ನನ್ನ ಸಹಾಯ ಕೇಳಿದ್ರು. ಕಳ್ಳನ್ನ ಹಿಡಿಯಕ್ಕೆ ಸಹಾಯ ಆಗತ್ತೆ, ನಿಮ್ಮ ಫೋಟೋ ಪೇಪರ್ನಲ್ಲಿ ಹಾಕಿಸ್ಕೊಳಿ ಅಂತ ಪಾಪ ಬೇಡಿಕೊಂಡ್ರು. ಏನೋ ಅಷ್ಟೊಂದು ಕೇಳ್ಕೊತಾ ಇದಾರೆ, ಹಾಳಾಗಿ ಹೋಗಲಿ ಅಂತ ಹೂಂ ಅದೆ, ಅಷ್ಟೇಯ.
 
ಕಳ್ಳ: ಹೌದು ಹೌದು ಒಳ್ಳೇ ಐಡಿಯಾ ಅದು. ಹಾಗಾದ್ರೆ ನಿಮ್ಮಫೋಟೋ ಪೇಪರ್ನಲ್ಲಿ ಪ್ರಿಂಟ್ ಆದ್ರೆ ಕಳ್ಳನಿಗೆ ನಿಮ್ಮ ಮೇಲೆ ಕೋಪ ಬರತ್ತೇ. ಅವನು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳೋಕೆ ಇಲ್ಲಿಗೆ ಬರ್ತಾನೆ ಅಂತಾನಾ? ಅವನು ಇಲ್ಲಿಗೆ ಬಂದಾಗ ಸಿಕ್ಕಿಹಾಕಿಕೊಳ್ಳುತ್ತಾನಾ ? [ರಮೇಶನ ಕುತ್ತಿಗೆಯ ಸುತ್ತಾ ಕೈ ಬಿಗಿಯುವನು]
 
ರಮೇಶ: ಹಂಗೇ ಏನೋ ಹೇಳ್ತಿದ್ರು ನಿಮ್ ಕಮಿಶನರ್ರು
 
ಕಳ್ಳ: ಗುಡ್ ಗುಡ್ ಗುಡ್ ಗುಡ್. ನೀವು ಮಹಾ ಧೈರ್ಯಶಾಲಿ ಮನುಷ್ಯ. ಮಹಾ ಧೈರ್ಯಶಾಲಿ [ಜೋರಾಗಿ ಬೆನ್ನು ತಟ್ಟುವನು]
 
ರಮೇಶ: [ನಾಟಕೀಯವಾಗಿ] ಅದು ನನ್ನ ಕರ್ತವ್ಯ ಅಷ್ಟೇ..
 
ಕಳ್ಳ: [ಸುತ್ತ ನೋಡುತ್ತ] ಹಾ.. ಎಲ್ಲ ಬಾಗಿಲು ಕಿಟಿಕಿ ಸರಿಯಾಗಿ ಹಾಕಿದೀರಾ?
 
ರಮೇಶ: ಹೌದು ಸರ್, ಎಲ್ಲ ಲಾಕ್ ಮಾಡಿ ಬಂದೋಬಸ್ತ್ ಮಾಡಿಟ್ಟಿದೀವಿ
 
ಕಳ್ಳ: ಎಲ್ಲಿ, ಆ ಕೋಲು ತೊಗೊಂಡು ಹೋಗಿ ಒಳಗಿಟ್ಟುಬಿಡಿ, ಆ ಹಗ್ಗನ ಇಲ್ಲಿ ಕೊಡಿ.
 
[ಧಾರಿಣಿ ಕೋಲು ತೆಗೆದುಕೊಂಡು ಹೋಗುವಳು, ರಮೇಶ ಹಗ್ಗ ಕಳ್ಳನಿಗೆ ಕೊಡುವನು]

 
ಕಳ್ಳ: ಆ ಮೂರು ಕುರ್ಚಿಗಳನ್ನ ಸಾಲಾಗಿ ಇಡಿ ಇಲ್ಲಿ.
 
ರಮೇಶ: ಏನ್ ಸಾರ್ ಜೋಕ್ ಮಾಡ್ತಿದೀರಾ ಏನ್ಕತೆ?
 
ಕಳ್ಳ: ರೀ ಹೇಳಿದ್ ಕೇಳ್ರಿ. ಜಾಸ್ತಿ ಮಾತಾಡಿದ್ರೆ, ಒಳಕ್ಕೆ ತಳ್ಳಿ ಏರೋಪ್ಲೇನ್ ಹತ್ತಿಸ್‍ಬಿಡ್ತೀನಿ.
 
ರಮೇಶ: ಸರಿ, ನೀವು ಪೋಲಿಸ್. ನೀವು ಹೇಳಿದಂತೆಯೇ ಮಾಡ್ತೀವಿ
 
[ರಮೇಶ, ಅನು ಕುರ್ಚಿಗಳನ್ನ ಜೋಡಿಸುವರು , ಆ ಹೊತ್ತಿಗೆ ಧಾರಿಣಿ ಒಳಕ್ಕೆ ಬರುವಳು]

 
ಕಳ್ಳ: ನೀವು ಮೂರು ಜನ ಕುರ್ಚಿ ಮೇಲೆ ಕೂತ್ಕೊಳಿ
 
ಮೂರೂಜನರೂ ಒಟ್ಟಿಗೆ: ಯ..ಯ.. ಯಾಕೆ?
 
ಕಳ್ಳ: [ಪಿಸ್ತೂಲ್ ತೆಗೆಯುತ್ತ, ವಿಲನ್ ಧ್ವನಿಯಲ್ಲಿ] ಕೂತ್ಕೊಳಿ ಅಂದೆ
 
ಧಾರಿಣಿ: ಏನೋ ನನಗೆ ಅರ್ಥವಾಗ್ತ ಇಲ್ಲ..
 
(ಈ ಮಾತುಗಳನ್ನಾಡುವಾಗ ಮೂರು ಜನರನ್ನೂ ಕುರ್ಚಿಗೆ ಕಟ್ಟುವನು)
 
ಕಳ್ಳ: ಹ್ಹ ಹ್ಹ ಹ್ಹ! [ಗಬ್ಬರ್ ಸಿಂಗ್ ನಗೆ ಶಬ್ಧ]
ಇನ್ನೂ ಅರ್ಥವಾಗಲಿಲ್ಲವಾ? ಅಯ್ಯೋ ಪೆದ್ದುಗಳಾ! ನಾನೇ ಆ ಮುಸುಕಿನ ಕಳ್ಳ - ನೆನ್ನೆ ಬಂದಿದ್ದು ನಾನೇ! ಈಗ ನಿಮ್ಮನ್ನೆಲ್ಲ ಶೂಟ್ ಮಾಡ್ತೀನಿ.
 
ರಮೇಶ/ಧಾರಿಣಿ/ಅನು: ಅಯ್ಯೋ ಶೂಟ್.. ?
 
ಕಳ್ಳ: ಹೌದು ಹ ಹ ಹ !
 
ರಮೇಶ: ನ .. ಮ್ಮ.. ನ್ನ ಯಾಕೆ ಶೂಟ್ ಮಾಡ್ತೀರ ಮಿಸ್ಟರ್ ಕಳ್ಳ?
 
ಕಳ್ಳ: ನಿಮ್ಮಿಂದ ನನ್ನ ಪ್ರೆಸ್ಟೀಜ್ ಕಡಿಮೆಯಾಗಿ ಹೋಗಿದೆ. ನಾನು ಫೇಮಸ್ ಆಗಬೇಕು ಅಂತಿದ್ದೆ. ಎಲ್ಲಾರೂ ನನ್ನ ಕಂಡು ಹೆದರಬೇಕು, ಗಡಗಡ ನಡುಗಬೇಕು. [शॊले ಚಿತ್ರದ ಗಬ್ಬರ್ ಸಿಂಗ್ ಡೈಲಾಗ್ के यहान से पचस पचस कोस दूर गांव मे, जब बच्च रात को रोत है, तो मा केहति है ’बेटे सोजा... सोजा नहि तो गब्बर सिंग आजायेगा’. और ये तीन हराम जादे, ये गब्बर सिंग का नाम पूरा मिट्‍टि मे मिलयि दिये ಸೌಂಡ್ ಟ್ರ್ಯಾಕ್ ಮೊಳಗುತ್ತದೆ]
 
[Alternatively ಕಳ್ಳ: ಗಬ್ಬರ್ ಸಿಂಗ್ ಧ್ವನಿಯಲ್ಲಿ] ದೂರದ ಊರಲ್ಲಿ ಯಾರಾದ್ರೂ ಮಗು ಅತ್ತಾಗ, ಅದರ ಅಮ್ಮ ಹೇಳಬೇಕು - ’ಮಲಕ್ಕೋ ಮಗು, ಮಲಕ್ಕೋ. ಇಲ್ದೆ ಇದ್ರೆ ಮುಸುಕಿನ ಕಳ್ಳ ಬಂದು ಬಿಡ್ತಾನೆ’ [ಗಬ್ಬರ್ ಸಿಂಗ್ ನಗುವಿನ ಶಬ್ಧ] ಅಂತ
 
ಧಾರಿಣಿ: ಒಳ್ಳೆ ಫಿಲ್ಮಿ ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ ನಮಗೆ
 
ಕಳ್ಳ: [ಧಾರಿಣಿ ಕಡೆ ನೋಡುತ್ತ ಬೇಸರದಿಂದ] ನಿಮ್ಮನ್ನ ಶೂಟ್ ಮಾಡಕ್ಕೆ ಸ್ವಲ್ಪ ಬೇಜಾರಾಗತ್ತೆ ನನಗೆ. ನೀವು ಜಾಮೂನ್ ತುಂಬಾ ಚೆನ್ನಾಗಿ ಮಾಡ್ತಿದ್ರಿ.
 
ಧಾರಿಣಿ: ಥ್ಯಾಂಕ್ಸ್. ಅಡುಗೆ ಮನೇಲಿ ಇನ್ನೂ ಜಾಮೂನ್ ಇದೆ. ನಮ್ಮನ್ನ ಶೂಟ್ ಮಾಡಿದ ಮೇಲೆ ನಿಧಾನವಾಗಿ ತಿಂದುಕೊಳ್ಳಿ
 
ಕಳ್ಳ: [ಕಣ್ಣರಳಿಸಿ ಖುಷಿಯಿಂದ ಇನ್ನೂ ಜಾಮೂನ್ ಇದೆಯಾ? ನಿಜವಾಗಿ? ಈಗ ಬಂದೆ, ಜೋಕೆ ಯಾರೂ ಅಲ್ಲಾಡಬೇಡಿ. ಇಲ್ಲದೆ ಹೋದರೆ ಶೂಟ್ ಮಾಡಿಬಿಟ್ಟೇನು, ಹುಷಾರ್! [ಒಳಕ್ಕೆ ಹೋಗುವನು]
 
[ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕ್ಕೆ ಯಾವತ್ತು ಹೋಗ್ಬಾರ್ದು ರೀ
sound track ಮೊಳಗುತ್ತದೆ]
 
[ರಮೇಶ ಧಾರಿಣಿ ಹಗ್ಗವನ್ನು ಬಿಡಿಸಿಕೊಳ್ಳುತ್ತಾರೆ, ಅಷ್ಟರಲ್ಲಿ ಕಳ್ಳ ಜಾಮೂನ್ ತಿನ್ನುತ್ತಾ ಬರುತ್ತಾನೆ]

 
ಕಳ್ಳ: ಜಾಮೂನ್ ತುಂಬಾ ಚೆನ್ನಾಗಿದೆ [ತೂರಾಡುತ್ತ] ನಿಮ್ಮೆಲ್ಲಾರನ್ನೂ ಶೂಟ್ .. ಶೂಟ್ ಮಾಡ್ತೀನಿ ...
 
[ಕಳ್ಳ ತಲೆ ತಿರುಗಿ ಬೀಳುವನು; ರಮೇಶ, ಧಾರಿಣೀ ಅನು ಹಗ್ಗದಿಂದ ಕಳ್ಳನನ್ನು ಕಟ್ಟಿಹಾಕುವರು]
 
[ಹಿನ್ನೆಲೆಯಲ್ಲಿ ಪೋಲೀಸ್ ಸೈರನ್ ಶಬ್ಧ
 
ಧಾರಿಣಿ: ಅಂತು ಬಂದ್ರು! ಫಿಲ್ಮಿ ಕಳ್ಳನಿಗೆ ಸರಿಯಾದ ಫಿಲ್ಮಿ ಪೋಲೀಸ್. ಎಲ್ಲ ಆದ್ಮೇಲೆ ಕೊನೆಗ್ ಬಂದರು.
 
***
 

No comments: