ಪಾತ್ರಗಳು:
ರಮೇಶ
ಧಾರಿಣಿ - ರಮೇಶನ ಹೆಂಡತಿ
ಪಾಂಡುರಂಗ - ರಮೇಶನ ಅಣ್ಣ
ಮಣಿ - ಪಾಂಡುರಂಗನ ಹೆಂಡತಿ
ಶೇಖರ - ಧಾರಿಣಿಯ ಭಾವ
ಮದ್ನಿ=ಅತ್ತಿಗೆ
ವಿ.ಸೂ: ಕೆಲವು ಸಂಕೇತಿ ವಾಕ್ಯಗಳು ತಪ್ಪಿರಬಹುದು. ತಿದ್ದುಪಡಿಯನ್ನು ಇಮೇಲ್ ಮೂಲಕ ಕಳಿಸುವುದು.
೧
[ಧಾರಿಣಿ ಸೋಫಾ ಮೇಲೆ ಕೂತು ಮ್ಯಾಗಝೀನ್ ಓದುತ್ತಿರುತ್ತಾಳೆ, ಅತ್ತಲಿಂದ ರಮೇಶ ಒಂದು ಲಾಂಡ್ರಿ ಬಾಸ್ಕೆಟ್ ಹಿಡಿದು ಬರುತ್ತಾನೆ]
ಧಾರಿಣಿ: ರೀ - ಈ ಸರ್ತಿ ಸಂಕ್ರಾಂತಿ ಹಬ್ಬದಲ್ಲಿ...
ರಮೇಶ: ಹಬ್ಬದಲ್ಲಿ...?
ಧಾರಿಣಿ: [ಎದ್ದು ಬರುತ್ತ] ಪ್ರತೀ ಸರ್ತಿ ನಿಮ್ಮ ಅಣ್ಣನ ಮನೆಗೇ ಹೋಗೀ ಹೋಗೀ ಬೋರ್ ಆಗಿಲ್ವಾ?
ರಮೇಶ: ಹೂಂ ಹೂಂ ಈ ಸರ್ತಿ ತಲೆ ಮರಿಸ್ಕೊಂಡು ಎಲ್ಲಾದ್ರು ಹೋಗ್ಬಿಡೋಣ ಅಂತೀಯಾ?
ಧಾರಿಣಿ: ಅದೇ ಯೋಚನೆ ಮಾಡ್ತಿದ್ದೆ... ಈ ಸರ್ತಿ ನಮ್ಮ ಮನೆಲೇ ಹಬ್ಬ ಮಾಡಿದ್ರೆ ಹೇಗೆ?
ರಮೇಶ: [ಅಶ್ಚರ್ಯದಿಂದ] ನಮ್ಮನೆಲಾ? ಇಲ್ಲ ಬೇಡ ಉಹೂಂ, ಆಗೋಲ್ಲ ಸುಮ್ಮನೆ ಇರು.
ಧಾರಿಣಿ: [ಮುಖ ಸಿಂಡರಿಸಿ] ಯಾಕೆ?
ರಮೇಶ: ಏನ್ ಈ ಸರ್ತಿ ಸೀದಾ ಅಂಟಾರ್ಟಿಕಾಗೆ ಟಿಕೆಟ್ ಬುಕ್ ಮಾಡೋಣ ಅಂತನಾ ಏನ್ ಕತೆ?
ಧಾರಿಣಿ: [ನಗುತ್ತ] ಯಾಕ್ರೀ? ನಮಗೂ ಮದುವೆ ಆಗಿ ಹತ್ತು ವರ್ಷ ಆಯ್ತು. ಮಕ್ಕಳು ಮರಿ ಎಲ್ಲ ಆದಮೇಲೆ ಅವರಿಗೂ ಹಬ್ಬ ಹರಿದಿನ ತೋರಿಸಿ ಕೊಡಬೇಕಲ್ವೇ. ಇಲ್ದೆ ಹೋದ್ರೆ ಅವರಿಗೆ ಸಂಸ್ಕಾರಗಳು ಬರೋದೇ ಇಲ್ಲ.
ರಮೇಶ: ಈ ವರ್ಷ ಯಾಕೆ? ಪ್ರತಿ ವರ್ಷ ನಮ್ಮ ಅಣ್ಣನಮನೆಗೇ ಹೋಗೋಲ್ವೇ...
ಧಾರಿಣಿ: ಅದಕ್ಕೇ ಹೇಳಿದ್ದು...
ರಮೇಶ: ನಮ್ಮ ಅತ್ತಿಗೆಗೆ ಈ ತರಹ ಪ್ಲಾನ್ಸ್ ಚೇಂಜ್ ಮಾಡೋದು ಇಷ್ಟ ಇಲ್ಲ ಅಂತ ಗೊತ್ತಲ್ಲ - ಹೋದ್ ಸರ್ತಿ ನೀನು ಹೀಗೆ ಮಾಡಿದಾಗ...
ಧಾರಿಣಿ: ಏನ್ ಮಹಾ ಆಗಿಹೋಯ್ತು? ಈ ಸರ್ತಿ ಅವರೇ ನಮ್ಮ ಮನೆಗೆ ಬರ್ತಾರೆ ಅಷ್ಟೇ.
ರಮೇಶ: ನಮ್ಮ ಅತ್ತಿಗೆ ಎಷ್ಟು ಚನ್ನಾಗಿ ಅಡಿಗೆ ಮಾಡ್ತಾರೆ - ಅವರು ಮಾಡಿದ ಪೊಂಗಲ್ ತಿಂದ್ರೆ ಸಂಕ್ರಾಂತಿ ಹಬ್ಬಾನೇ ಸಾರ್ಥಕ ಅನ್ಸುತ್ತೆ.
ಧಾರಿಣಿ: ಅಂದ್ರೆ, ನಾನು ಚನ್ನಾಗಿ ಅಡಿಗೆ ಮಾಡಲ್ಲ ಅಂತಾನ?
ರಮೇಶ: ಧಾರೂ, ಹಾಗೆಲ್ಲಿ ಹೇಳ್ದೆ ನಾನು... ಎಲ್ಲಾದಕ್ಕು ಉಲ್ಟ ಅರ್ಥನೇ ಮಾಡ್ಕೊಳ್ಳೋದಾ?
ಧಾರಿಣಿ: [ಮುನಿಸಿಕೊಂಡು] ಹೂಂ.. [ಮತ್ತೆ ಕೂರುವಳು]
ರಮೇಶ: ಧಾರೂ... ಯಾಕಮ್ಮ ಬೇಕು ನಿಂಗೆ ಆ ತರ್ಲೆ ಎಲ್ಲ? ಸಾಮಾನ್ ತರೋದು, ಹೆಚ್ಕೊಂಡು, ರುಬ್ಕೊಂಡು, ಬೇಯಿಸಿ ಅಡಿಗೆ ಮಾಡೋದು, [ಸ್ವಗತ] ಆಮೇಲೆ ಪಾತ್ರೆ ಬಳಿಯೋದು ಬೇರೆ ನನ್ನ ತಲೆಮೇಲೆ ಬೀಳತ್ತೆ...
ಧಾರಿಣಿ: ಹೂಂ... ಅದನ್ನೇ ನಾನೂ ಹೇಳ್ತಿರೋದು - ನನಗೂ ಅದೆಲ್ಲ ಮಾಡಕ್ಕೆ ಒಂದು ಚಾನ್ಸ್ ಸಿಗತ್ತೆ.
[ಬಾಗಿಲು ಬಡಿಯುವ ಶಬ್ಧ - ತೆಗೆಯುವುದರೊಳಗೆ ಬಾಗಿಲು ತೆರೆದುಕೊಂಡು ಮಣಿ, ಪಾಂಡುರಂಗ ಬರುತ್ತಾರೆ]
ಮಣಿ: ಹೈ, ಹಲೋ ಹೇಗಿದ್ದೀರ ಎಲ್ಲಾರು?
ಧಾರಿಣಿ: ಎಲ್ಲ ಚನ್ನಾಗಿದ್ದೀವಿ ಮದ್ನಿ. ನೀವೆಲ್ಲ? ಮಕ್ಕಳು ಬರಲಿಲ್ಲವ?
ಪಾಂಡುರಂಗ: ಉಹೂಂ - ಇಬ್ಬರೂ ಮನೇಲೇ ಉಳ್ಕೊಂಡ್ರು. ವೀನೋ ಎಂಥದೋ ಆಡ್ತ ಕೂತಿದ್ರು.
ಮಣಿ: ಎಳ್ಳಿನ ಕೆಲಸ ಎಲ್ಲ ಆಯ್ತ?
ಧಾರಿಣಿ: ಹೂಂ... ಆಗ್ತಾಇದೆ, ಮದ್ನಿ. ಆದರ ವಿಚಾರನೇ ಮಾತಾಡ್ತಿದ್ವಿ... ಅದೂ ಈ ಸರ್ತಿ ಸಂಕ್ರಾಂತಿ ಹಬ್ಬಕ್ಕೆ ನೀವೂ ನಮ್ಮ ಮನೆಗೇ ಬನ್ನಿ ಅಂತ ಕರೆಯೋಣ ಅಂತ ಅಂದ್ಕೊಳ್ತಿದ್ವಿ.
ಮಣಿ: [ನಗುತ್ತ] ಎಲ್ಲಾದ್ರು ಉಂಟಾ? ಕೆಲಸವಿಲ್ಲ. ಅಲ್ಲಾ - ನೀನ್ಯಾಕೆ ಅಷ್ಟೆಲ್ಲ ಕಷ್ಟ ಪಡಬೇಕೂ ಅಂತ?
ರಮೇಶ: ಅದೇ ನಾನೂ ಹೇಳ್ತಿದ್ದೆ, ಯಾಕೆ ಕೆಲಸವಿಲ್ಲದಿರೊ ಕೆಲಸ ಅಂತ.
[ಧಾರಿಣಿ ಜೋರಾಗಿ ಗಂಟಲು ಸರಿಪಡಿಸಿಕೊಳ್ಳುತ್ತಾಳೆ]
ರಮೇಶ: ಮದ್ನಿ, ಧಾರಿಣಿ ಈ ಸರ್ತಿ ನಮ್ಮ ಮನೆಲೇ ಹಬ್ಬ ಮಾಡ್ಬೇಕು ಅಂತ ಇದ್ದಾಳೆ - ನಾನೂ ಅಷ್ಟೆ...
ಮಣಿ: ರಮೇಶ, ಪ್ರತಿ ವರ್ಷ ಅಲ್ಲೇ ಬರ್ತೀರಲ್ಲೋ....
ರಮೇಶ: ಮದ್ನಿ, ಈ ವರ್ಷ ಇಲ್ಲಿ ನಮ್ಮ ಮನೇಲಿ ಹಬ್ಬ ಮಾಡೋಣ, ಮುಂದಿನ ವರ್ಷ ನಿಮ್ಮ ಮನೆಗೆ ಬರ್ತೀವಿ. ನಮ್ಮ ಮನೆಲೂ ಹಬ್ಬ ಮಾಡ್ಬೇಕು ಅಂತ ಇಷ್ಟ ಇವಳಿಗೆ.
ಮಣಿ: [ಕೋಪದಿಂದ] ಸರಿಯಾಯಿತು! ಒಳ್ಳೆ ಚನ್ನಾಗಿದೆ! ಈ ವರ್ಷಾನೇ ಯಾಕೇ? ಮುಂದಿನ ವರ್ಷನೇ ನಿಮ್ಮ ಮನೇಲಿ ಮಾಡ್ಕೊಳಿ.
ರಮೇಶ: ಮದ್ನಿ, ಯಾವಾಗ್ಲೋ ಒಂದು ಸರ್ತಿ ಶುರು ಮಾಡ್ಬೇಕಲ್ಲ, ಧಾರಿಣಿ ಈ ವರ್ಷ ಶುರು ಮಾಡ್ತಿದಾಳೆ ಅಷ್ಟೆ.
ಮಣಿ: [ಪಾಂಡುರಂಗನ ಕಡೆ ತಿರುಗಿ] ರೀ, ನೀವಾದ್ರು ನಿಮ್ಮ ತಮ್ಮನಿಗೆ ಹೇಳ್ರಿ.
ಪಾಂಡುರಂಗ: [ಹೊಟ್ಟೆ ಸವರಿಕೊಳ್ಳುತ್ತ] ಎಲ್ಲಾದ್ರೇನು? ನನಗಂತೂ ಸ್ವೀಟು ಖಾರ ಪೊಂಗಲ್ ತಿನ್ನಕ್ಕೆ ಸಿಕ್ಕಿದರಾಯಿತು.
ಮಣಿ: [ತಿರುಗಿ ಹೊರಡುತ್ತ, ಪಾಂಡುರಂಗನಿಗೆ] ಸರಿ - ನಿಮಗೆ ಎಲ್ಲಿ ಬೇಕೋ ಅಲ್ಲೇ ತಿನ್ಕೊಳಿ. ನಾನಂತೂ ಯಾವಾಗ್ಲೂ ಮಾಡೋ ಹಾಗೆ ಹಬ್ಬದ ಅಡಿಗೆ ಮಾಡ್ತೀನಿ.
ರಮೇಶ: [ದೂರ ಎಲ್ಲೋ ನೋಡುತ್ತ] ಹಬ್ಬದ ಊಟ...
ಮಣಿ: ಹೂಂ... ಹಬ್ಬದ ಊಟ [ನಿರ್ಗಮಿಸುತ್ತಾಳೆ]
ರಮೇಶ: [ಇನ್ನೂ ದೂರ ಎಲ್ಲೋ ನೋಡುತ್ತ] ಮದ್ನಿ ಹಬ್ಬದ ಅಡಿಗೆ ಮಾಡ್ತಿದ್ದಾರೆ...
ಪಾಂಡುರಂಗ: ನಾನೇನು ಎರಡು ಕಡೆನೂ ಊಟ ಮಾಡಬಹುದು - ಡಬ್ಬಲ್ ಪೊಂಗಲ್...
೨
[ಧಾರಿಣಿ ರೆಸಿಪೀ ಪುಸ್ತಕವನ್ನು ಓದುತ್ತಿರುವಳು]
ರಮೇಶ: [ಅತ್ತಲಿಂದ ಬರುತ್ತ] ಧಾರೂ... ಹೇಗೆ ನಡಿತಿದಿಯೇ ತಯಾರಿ?
ಧಾರಿಣಿ: ಊಂ... ಆಗ್ತಾ ಇದೆ.
ರಮೇಶ: ಏನ್ ಗೊತ್ತಾ? ಇಷ್ಟಕ್ಕೆಲ್ಲ ಕೊನೆಗೆ ಸಂಕ್ರಾಂತಿ ಚನ್ನಾಗೇ ಇರತ್ತೋ ಏನೋ...
ಧಾರಿಣಿ: ಯಾಕೆ ಹಾಗೆ ಹೇಳ್ತೀರಾ?
ರಮೇಶ: ಅಣ್ಣಯ್ಯ-ಮದ್ನಿ ಬರ್ತ ಇಲ್ಲ, ಬರೀ ನವುಗಳಷ್ಟೆ... ನೀನು ಅಡಿಗೆ ಮಾಡು, ನಾನು ಹಾಯಾಗಿ ಕೂತ್ಕೊಂಡು ತಿನ್ಕೊಂಡು ಕ್ರಿಕೆಟ್ ಮ್ಯಾಚ್ ನೋಡ್ತೀನಿ.
ಧಾರಿಣಿ: ಏನು ಬೇಡ - ನಮ್ಮ ಭಾವನಿಗೆ ಕ್ರಿಕೆಟ್ ಕಂಡ್ರೆ ಆಗಲ್ಲ ಅಂತ ನಿಮಗೆ ಗೊತ್ತಿಲ್ವಾ?
ರಮೇಶ: [ಕಣ್ಣರಳಿಸಿ] ನಿಮ್ಮ ಅಕ್ಕ-ಭಾವ ಬರ್ತಿದ್ದಾರ?
ಧಾರಿಣಿ: ಹೂಂ... ನಮ್ಮ ಮನೇಲಿ ಸಂಕ್ರಾಂತಿ ಮಾಡ್ತಿದ್ದೀವಿ ಅಂತ ಹೇಳಿದ್ದಕ್ಕೆ ತುಂಬಾ ಖುಷಿ ಪಟ್ರು.
ರಮೇಶ: [ಸ್ವಗತ] ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷದಲ್ಲಿ ಅನ್ನೋ ಹಾಗೆ ಆಯ್ತಲ್ಲ...
ಧಾರಿಣಿ: ಏನು? ಏನು?
ರಮೇಶ: ಆ... ಏನೂ ಇಲ್ಲ, ಏನೂ ಇಲ್ಲ
ಧಾರಿಣಿ: ನಿಮ್ಮ ಅಣ್ಣ-ಅತ್ತಿಗೆನೂ ಇಲ್ಲಿಗೇ ಬರಲಿ ಅಂತ ನನ್ನಾಸೆ
ರಮೇಶ: ಹಾಂ? ಇದೆಲ್ಲ ಯಾಕೋ ಉಳ್ಟ ಹೊಡೀತಿದ್ಯಲ್ಲ...
ಧಾರಿಣಿ: ಯಾಕ್ರೀ ಹಾಗೆ ಹೇಳ್ತೀರ? ಹಬ್ಬ ಎಲ್ಲಾರೂ ಸೇರಿ ಮಾಡಿದ್ರೇನೇ ಚನ್ನಾಗಿರೋದು. ಆಸ್ಟ್ರೇಲಿಯಾನೂ, ಸೌತ್ ಆಫ್ರಿಕಾನೂ ಬರಲ್ಲ ಅಂದ್ರೆ ಹೇಗಿರತ್ತೆ ನಿಮ್ಮ ಕ್ರಿಕೆಟ್ ವರ್ಲ್ಡ್ ಕಪ್?
ರಮೇಶ: ಹೇಗಿರತ್ತೆ? ಫಸ್ಟ್ ಕ್ಲಾಸ್ ಆಗಿರತ್ತೆ. ಇಂಡಿಯಾನೇ ವರ್ಲ್ಡ್ ಕಪ್ ಗೆಲ್ಲತ್ತೆ.
ಧಾರಿಣಿ: ಇಲ್ಲ ರೀ - ನಿಮ್ಮ ಅಣ್ಣ-ಅತ್ತಿಗೆನೂ ಬರಬೇಕೂ ಅಂತ ತುಂಬಾ ಇಷ್ಟ ನನಗೆ.
ರಮೇಶ: ಯಾಕೆ? ನೀನು ಮದ್ನಿ ಒಳಗೊಳಗೇ ಜಗಳ ಮಾಡ್ತಾ ಇರಬಹುದು ಅಂತನಾ? ಈ ಕಡೆ ಅಣ್ಣಯ್ಯ ಸಕತ್ತಾಗಿ ಪೊಂಗಲ್ ಬಾರ್ಸಿ ಕೂತ್-ಕೂತಲ್ಲೇ ಗೊರಕೆ ಹೊಡೀತಾನೆ.
ಧಾರಿಣಿ: ಅದಂತೂ ಆಗಲ್ಲ ಬಿಡಿ - ಈ ಸರ್ತಿ ಪೊಂಗಲ್ ಬದಲು ನಾನೂ....
ರಮೇಶ: ಹೋ ಹೋ ಹೋ ತಾಳು ತಾಳು ತಾಳು... ಏನೋ ಸರಿಯಾಗಿ ಕೇಳಿಸಲಿಲ್ಲ - ಪೊಂಗಲ್ ಬದಲು ಅಂದ್ಯಾ?
ಧಾರಿಣಿ: ಪೊಂಗಲ್ ಬದಲು ನಾನು ಬಿಸಿಬೇಳೆ ಭಾತ್ ಮಾಡೋಣ ಅಂತ ಇದ್ದೀನಿ.
ರಮೇಶ: [ಕೆಳಗೆ ಮೇಲೆ ನೋಡುತ್ತ] ಬಿಸಿಬೇಳೆ ಭಾತಾ? ಸಂಕ್ರಾಂತಿ ದಿನ? ಒಳ್ಳೆ ಫಾಸ್ಟ್ ಪಿಚ್ ಮೇಲೆ ನಲ್ಕು ಸ್ಪಿನ್ ಬೋಲರ್ಸ್ ಆಡಿಸಿದ ಹಾಗಾಯಿತು. ಇನ್ನಿಂಗ್ಸ್ ಡಿಫೀಟ್ ಗ್ಯಾರಂಟಿ.
ಧಾರಿಣಿ: ಪೊಂಗಲ್ ಗಿಂತ ಬಿಸಿಬೇಳೆ ಭಾತು ತುಂಬಾ ಹೆಲ್ತಿ. ತರಕಾರಿ ಎಲ್ಲ ಹಾಕಿದ್ರೆ ಒಳ್ಳೆ ಬಣ್ಣವಾಗೂ ಇರತ್ತೆ, ಅದೆ ಪೊಂಗಲ್ಲು ಒಳ್ಳೆ ತಿಳೀ ಹಳದೀ ಬಣ್ಣ - ಏನೂ ಸತ್ವ ಇರಲ್ಲ...
ರಮೇಶ: [ಇನ್ನೂ ನಂಬಲಾರದವನಂತೆ] ಸೀರಿಯಸ್ ಆಗಿ ಹೇಳ್ತಿದ್ದೀಯಾ?
ಧಾರಿಣಿ: ಹೂಂ - ನಾನು ಎಲ್ಲೋ ಓದಿದ್ದೆ - ಹಿಂದೆಲ್ಲ ಸಂಕ್ರಾಂತಿ ಅಂದ್ರೆ ಪೊಂಗಲ್ ಮಾಡ್ತಿರ್ಲಿಲ್ಲವಂತೆ - ಇತ್ತೀಚೆಗೆ ಆ ಅಭ್ಯಾಸ ಮಾಡ್ಕೊಂಡಿರೋದಂತೆ.
ರಮೇಶ: ಹಿಂದಿನ ಕಾಲದಲ್ಲಿ ಕುಂಭ ಸ್ನಾನನೂ ಮಾಡ್ತಿದ್ರಂತೆ, ಹರಿದ್ವಾರಕ್ಕೆ ಹೋಗೋದು ಬೇಡವಾ. ಅಣ್ಣಯ್ಯ-ಮದ್ನಿನ ಕರೀಬೇಕು ಅಂತೀಯ, ಆದರೆ ಓಟಕ್ಕೆ ಪೊಂಗಲ್ ಅಲ್ಲ ಬ್-ಬ್-ಬಿಸಿಬೇಳೆ ಭಾತಾ?
ಧಾರಿಣಿ: ನೋಡ್ರಿ, ನಿಮ್ಮ ಅತ್ತಿಗೆ ತುಂಬಾ ಚನ್ನಾಗಿ ಪೊಂಗಲ್ ಮಾಡ್ತಾರೆ, ಅದು ಅವರ ಸ್ಪೆಶಾಲಿಟಿ.
ರಮೇಶ: ಹೂಂ... ನೀನು ಚನ್ನಾಗಿ ಬಿಸಿಬೇಳೆಭಾತ್ ಮಾಡ್ತೀಯ
ಧಾರಿಣಿ: ಹೌದು
ರಮೇಶ: ಆದರೆ ಸಂಕ್ರಾಂತಿ ಹಬ್ಬದಲ್ಲಾ? ಬೇರೆ ದಿನ - ಯುಗಾದಿ ಹಬ್ಬದಲ್ಲೋ, ದೀಪಾವಳಿಲೋ ಮಾಡು ಬೇಕಾದ್ರೆ. ಏನೋ ಕೊಳಕಟ್ಟೆನೋ, ಚೋಮಾಯೋ ಆದ್ರೆ ಸರಿ; ಪೊಂಗಲ್ ಹಬ್ಬದ ದಿನ...?
೩
[ಹಬ್ಬದ ದಿನ - ಧಾರಿಣಿ ಪಾತ್ರೆ-ಪರಟಿ ಹರಡಿಕೊಂಡು, ರೆಸಿಪೀ ಪುಸ್ತಕಗಳನ್ನು ತೆಗೆದಿಟ್ಟು ಅಡಿಗೆ ಮಾಡುತ್ತಿರುವಳು]
ರಮೇಶ: [ಗ್ರೋಸರಿ ಚೀಲ ಕಯ್ಯಲ್ಲಿ ಹಿಡಿದು ಬರುತ್ತ] ತೊಗೋ - ಇದೇ ಕೊನೇ ಪ್ಯಾಕೆಟ್ ಇದ್ದಿದ್ದು ಅಂಗಡೀಲಿ, ಇಬ್ಬರು ಅಜ್ಜಿಯರ ಜೊತೆ ಕಿತ್ತಾಡಿ ತೊಗೊಂಡ್ ಬಂದೆ.
ಧಾರಿಣಿ: ಹೇಗೆ ಕಿತ್ತಾಡಿದ್ರಿ?
ರಮೇಶ: [ಸ್ವಲ್ಪ ಯೋಚಿಸಿ] ಅಯ್ಯೋ! ಹೋಗ್ಲಿ ಬಿಡು. ಅಂದಹಾಗೆ ದಾರೀಲಿ ಅಣ್ಣಯ್ಯ-ಮದ್ನಿನೂ ಬರ್ತಾರೆ ಅಂತ ಕನ್ಫರ್ಮ್ ಮಾಡ್ಕೊಂಡು ಬಂದೆ. ನಿನ್ನ ಇಷ್ಟಾರ್ಥ ಎಲ್ಲ ನೆರೆವೇರಿತಲ್ಲ, ಮಜ ಹೊಡಿ.
ಧಾರಿಣಿ: ದಟ್ಸ್ ಗುಡ್! ಮದ್ನಿ ತರಲೆ ಮಡದಿದ್ದರಾಯಿತು.
ರಮೇಶ: ಧಾರೂ, ಈಗ್ಲೂ ಹೇಳ್ತೀನಿ ಕೇಳು - ಈ ಬಿಸಿಬೇಳೆ ಭಾತ್ ಕೈಬಿಟ್ಟು ಪೊಂಗಲ್ ಮಾಡು, ಇಲ್ದೆ ಹೋದ್ರೆ ಎಲ್ಲಾರು ನಿನ್ನ ನೋಡಿ ನಗ್ತಾರೆ.
ಧಾರಿಣಿ: ಉಹೂಂ, ನಿಮ್ಮ ಅತ್ತಿಗೆ ಪೊಂಗಲ್ ತುಂಬಾ ಚನ್ನಾಗಿ ಮಾಡ್ತಾರೆ, ಅವರ ಮೈಯಲ್ಲಿ ರಕ್ತ ಅಲ್ಲ ಹೆಸರು ಬೇಳೆ ಕಟ್ಟೇ ಹರಿಯತ್ತೆ. ನಾನು ಎಷ್ಟೇ ಚನ್ನಾಗಿ ಮಾಡಿದ್ರೂ ಅವರು ಅದರಲ್ಲಿ ಒಂದು ಕೊಂಕು ಹುಡುಕ್ತಾರೆ.
ರಮೇಶ: ಸರಿ ನಾನು ಹೇಳೋದು ಹೇಳ್ದೆ. ಇನ್ನು ನಿನ್ನ ಹಣೆ ಬರಹ. [ಕೈ ಮುಗಿದು] ತಿಳಿದವರಿಗೆ ಹೆಚ್ಚು ಹೇಳಲು ಶಕ್ತನಲ್ಲ ಇಂತಿ ನಮಸ್ಕಾರಗಳು. ನಾನಿನ್ನು ಹೋಗಿ ಕ್ರಿಕೆಟ್ ನೋಡ್ತೀನಿ.
ಧಾರಿಣಿ: ಆ? ಕ್ರಿಕೆಟ್, ಪಕೆಟ್ ಏನೂ ಇಲ್ಲ. ನೀವೂ ಕೆಲಸ ಮಾಡ್ಬೇಕು... [ರಮೇಶ ತಂದ ಪ್ಯಾಕೆಟ್ ನೋಡುತ್ತ] ರೀ ಇದು ಬೇಕಿಂಗ್ ಸೋಡ ಅಲ್ಲ, ಬೇಕಿಂಗ್ ಪೌಡರ್ ತಂದಿದ್ದೀರ.
ರಮೇಶ: ಸೋಡನೋ, ಪೌಡರೋ - ಎಂಥದ್ದೋ ಒಂದು ಬೇಕಿಂಗು...
ಧಾರಿಣಿ: ಬೇಕಿಂಗ್ ಸೋಡ ಇಲ್ದೆ ಬೋಂಡ ಹೇಗೆ ಮಾಡೋದು?
ರಮೇಶ: ಸರಿ ನಾನಿನ್ನೇನ್ ಮಾಡ್ಲಿ?
ಧಾರಿಣಿ: ಛೆ! ಈಗ ಮೆನು ಚೇಂಜ್ ಮಾಡಬೇಕು. ಸರಿ ಅಲ್ಲಿ - ಆ ಕ್ಯಾರ್‍ಅಟ್ ತೊಗೊಂಡು ಹೂವಿನ ಶೇಪಲ್ಲಿ ಕಟ್ ಮಾಡಿ - ಸಾಲಡ್ ಮಾಡಕ್ಕೆ.
ರಮೇಶ: ನಾನೇನು ಪಿ ಸಿ ಸರ್ಕಾರ್ ಅಂದ್ಕೊಂಡ್ಯಾ? ಮ್ಯಾಜಿಕ್ ಇದೆಯಾ ನನ್ನ ಕೈಲಿ? ಗಂಡ್ಸು ಮಾಡೋ ಅಂಥ ಕೆಲ್ಸ ಕೊಡು - ಬೆಲ್ಲ ಜೆಜ್ಜೋದೋ, ತೆಂಗಿನಕಾಯಿ ಒಡೆಯೋದೋ, ಪಾತ್ರೆ ತೊಳೆಯೋದೋ ಹೇಳು ಮಾಡ್ತೀನಿ. ಅದು ಬಿಟ್ಟು...
[ಇಬ್ಬರೂ ಸ್ವಲ್ಪ ಹೊತ್ತು ಮೌನದಿಂದ ಕೆಲಸ ಮಾಡುತ್ತಾರೆ]
ರಮೇಶ: ಆಗ್ಲೆ ಕ್ರಿಕೆಟ್ ಮ್ಯಾಚ್ ಒಂದು ಇನ್ನಿಂಗ್ಸ್ ಮುಗಿದೇ ಹೋಗಿರತ್ತೆ.
ಧಾರಿಣಿ: ಇಲ್ಲಿ ತೊಗೊಳಿ - ಸೊಲ್ಪ ಹೊತ್ತು ಇದನ್ನ ಕೂಡಸ್ತ ಇರಿ.
ರಮೇಶ: [ಕೂಡಿಸುವ ಆಟ ಮಾಡುತ್ತ] ಡ್ರಾವಿಡ್ ಹೀಗೇ ಫೋರ್ ಹೊಡೆಯೋದು
ಧಾರಿಣಿ: [ಅತ್ತಿತ್ತ ಹುಡುಕುತ್ತ] ಅಯ್ಯೋ ಎಲ್ಲಿ ಹೋಯ್ತು?
ರಮೇಶ: ಏನು? ಏನು?
ಧಾರಿಣಿ: ಓಹ್! ಎಷ್ಟು ಕೆಲಸ ಮಾಡಲಿ... ದೊಣ್ಣೆ ಮೆಣಸಿನಕಾಯಿ ಎಲ್ಲೋ ಕಳೆದು ಹೋಗಿದೆ - ನೀವೇನಾದ್ರೂ....
ರಮೇಶ: ನನಗೇನು ಗೊತ್ತು - ನಾನು ಬೇಕಿಂಗ್ ತರಕ್ಕೆ ಅಂಗಡಿಗೆ ಹೋಗಿದ್ದೆ..
[ಧಾರಿಣಿ ತಲೆ ಮೇಲೆ ಕೈ ಹೊತ್ತು ಸ್ತಬ್ದವಾಗಿ ನಿಲ್ಲುವಳು]
ರಮೇಶ: [ದೊಣ್ಣೆ ಮೆಣಸಿನಕಾಯಿ ಅವಳಿಗೆ ಕೊಡುತ್ತ] ಧಾರೂ, ಧಾರೂ - ಇಲ್ಲೇ ಇದೆ, ರಿಲ್ಯಾಕ್ಸ್. ತರಕಾರಿ ಕಳೆದು ಹೋದ್ರೆ ಒಳ್ಳೆ ಮಗೂ ಕಳೆದು ಹೋಗಿದೆ ಅನ್ನೋ ಹಾಗೆ ಆಡ್ತಿಯಲ್ಲ...
ಧಾರಿಣಿ: ಓಹ್! ತುಂಬಾ ಕೆಲಸ - ಸುಸ್ತಾಗಿದೆ ಅಷ್ಟೆ.
ರಮೇಶ: ರಿಲ್ಯಾಕ್ಸ್ - ನೋ ಟೆನ್ಶನ್. ನಾನಿಲ್ಲಿ ಕ್ಲೀನಪ್ ಮಾಡ್ತೀನಿ, ನೀನು ಹೋಗಿ ರೆಡಿಯಾಗು.
ರಮೇಶ: [ನಾಟಕದ ರಾಗದಲ್ಲಿ ಹಾಡು ಹೇಳುವನು]
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹರಾಣಿಯ ಹಾಗೆ
ಆಯಾಸ ಪಡದಿರು ನೀನು ಕೂಗುತ ಹೀಗೆ
ಎಲ್ಲ ಕೆಲಸ ಮಾಡಿ ಮುಗಿಸುವೆ, ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
೪
[ಅಡಿಗೆ ತಯಾರ್ ಆಗಿದೆ, ಎಲ್ಲ ಟೇಬಲ್ ಮೇಲೆ ಇಟ್ಟಿದೆ. ರಮೇಶ, ಧಾರಿಣಿ ಇಬ್ಬರೂ ನೋಡುತ್ತಿದ್ದಾರೆ]
ರಮೇಶ: ಎಲ್ಲ ರೆಡಿ. ಸಕತ್ತಾಗಿ ಕಾಣಿಸ್ತ ಇದೆ, ಧಾರೂ.
[ಬಾಗಿಲ ಘಂಟೆಯ ಶಬ್ಧ, ತೆಗೆಯಲು ರಮೇಶ ಹೋಗುತ್ತಾನೆ, ಬಾಗಿಲಲ್ಲಿ ಶೇಖರ]
ರಮೇಶ: [ಇಣುಕಿ ನೋಡಿ] [ಸ್ವಗತ] ಇಪ್ಪೊ ಸಂಕೇತಿಲೆ ವರ್ತೆ ಚೊಲ್ಲಣ್ಮೇ [ಶೇಖರನಿಗೆ] ಓಹ್, ವರಂಗೋ ಭಾವ, ವರಂಗೋ.
(ಇವಾಗ ಸಂಕೇತಿ ಭಾಷೆಯಲ್ಲಿ ಮಾತನಾಡಬೇಕಲ್ಲಾ - ಬನ್ನಿ, ಭಾವ, ಬನ್ನಿ)
ಧಾರಿಣಿ: [ಹಿಂದೆ ಇಣುಕಿ ನೋಡುತ್ತ] ಒತ್ತ್ರೆ ವಂದಿಳಾ?
(ಒಬ್ಬರೇ ಬಂದಿದ್ದೀರಾ)
ಶೇಖರ: ಹಾಮ ಮ. ಉಂಗದೆ ಅಕ್ಕನಿಕ್ಕಿ ಬಡ ಹೊಟ್ಟೆ ಅಪ್ಸೆಟ್ ಆಯಿಟ್ರಾಂದಿ.
(ಹೌದಮ್ಮ - ನಿಮ್ಮ ಅಕ್ಕನಿಗೆ ಸೊಲ್ಪ ಹೊಟ್ಟೆ ಅಪ್ಸೆಟ್ ಆಗಿದೆ)
ಧಾರಿಣಿ: ಅತ್ತಕ್ಕ್ ಲೇಟ್ ಆಚಿ?
(ಯಾಕೆ ಲೇಟ್ ಆಯಿತು?)
ಶೇಖರ: ಹೆಂಬಿ ಕಾರ್ಯು ಮ, ಉಂಗಡೆ ಅಕ್ಕನಕ್ಕಿ ವೋರೆ ಅಪ್ಸೆಟ್ಟ್ ಆಯಿಟ್ರಾಂದಿ. ದಾರಿಲೆ ಟ್ರಾಫಿಕ್ಕಿ - ಎಲ್ಲ ಶೇರಿ ಲೇಟ್ ಆಚಿ.
(ತುಂಬ ಕೆಲಸ ಮ, ನಿಮ್ಮ ಅಕ್ಕನಿಗೆ ಬೇರೆ ಅಪ್ಸೆಟ್ ಆಗಿದೆ. ದಾರಿಲಿ ಟ್ರಾಫಿಕ್ಕು, ಎಲ್ಲ ಸೇರಿ ಲೇಟ್ ಆಯಿತು)
ಧಾರಿಣಿ: ಓಹ್ ಹಾಮಾವಾ? ಅಕ್ಕನೂ ವಂದಿಂದಾಕ್ ಅಳಹಾ ಇರಾಣಿಂದಿ.
(ಓಹ್ ಹೌದಾ? ಅಕ್ಕನೂ ಬಂದಿದ್ರೆ ಚನ್ನಾಗಿರ್ತಿತ್ತು.)
ಶೇಖರ: ರಮೇಶು ಬಡ ಟಿವಿಯ ಪೋಡಪ್ಪ - ಇಂಡೇನು ರೈಡರ್ ಕಪ್ ನಡವಣ್ರಾಂದಿ - ಟೈಗರ್ ವುಡ್ಸ್ ಹೆಂಬ ಅಳಹ ಆಡಾಣಿಂದಿ.
(ರಮೇಶ - ಸೊಲ್ಪ ಟಿವಿ ಹಾಕಪ್ಪ - ಇವತ್ತು ರೈಡರ್ ಕಪ್ ನಡೀತಿದೆ - ಟೈಗರ್ ವುಡ್ಸ್ ತುಂವ ಚನ್ನಾಗಿ ಆಡ್ತಿದ್ದ)
ರಮೇಶ: [ಟಿವಿ ಹಾಕುತ್ತ] ಅಣ್ಣಯ್ಯ-ಮದ್ನಿ ಇನ್ನೂ ಯಾಕೆ ಬಂದಿಲ್ಲ...?
ಧಾರಿಣಿ: [ರಮೇಶನಿಗೆ] ನಿಮ್ಮ ಅತ್ತಿಗೆ ಬೇಕೂಂತ ಹೀಗೆ ಮಾಡ್ತಿದ್ದಾರೆ - ನಾನು ಮಾಡಿರೋ ಅಡಿಗೆ ಎಲ್ಲ ಆರಿ ಊಳಿಯಾಗಿ ಒಣಗಿ ಹೋಗಲಿ ಅಂತ.
ರಮೇಶ: [ಧಾರಿಣಿಗೆ] ಇನ್ನೊಂದ್ ರೌಂಡ್ ಅಳಬೇಡ...
[ಮತ್ತೊಮ್ಮೆ ಬಾಗಿಲ ಘಂಟೆಯ ಶಬ್ಧ]
ರಮೇಶ: [ಧಾರಿಣಿಗೆ] ಎಲ್ಲ ಸರೀಗಿರತ್ತೆ, ಓಕೆ? ಎಲ್ಲಾರಿಗೂ ನಿನ್ನ ಅಡಿಗೆ ಇಷ್ಟ ಆಗತ್ತೆ, ಅಳಬೇಡ...
[ಬಾಗಿಲು ತೆಗೆಯಲು ಹೋಗುವನು; ಬಾಗಿಲಲ್ಲಿ ಮಣಿ-ಪಾಂಡುರಂಗ, ಮಣಿ ಕೈಯಲ್ಲಿ ದೊಡ್ಡ ಪಾತ್ರೆ]
ಮಣಿ: ಹ್ಯಾಪೀ ಸಂಕ್ರಾಂತಿ ಎವ್ರಿವನ್
ರಮೇಶ: [ವಾಸನೆ ನೋಡುತ್ತ] ಮದ್ನಿ - ಏನಿದು?
ಮಣಿ: ಏನೋಪ್ಪ ಧಾರಿಣೀ ಬಿಸಿಬೇಳೆ ಭಾತ್ ಮಾಡ್ತಾಳೆ ಅಂದ ಹೇಳಿದ್ಯಲ್ಲ ಅದಕ್ಕೆ ಇಷ್ಟ ಇದ್ದವರು ಪೊಂಗಲ್ ತಿನ್ನಲಿ ಅಂತ ಪೊಂಗಲ್ ಮಾಡ್ಕೊಂಡು ತೊಗೊಂಡ್ಬಂದೆ.
ಧಾರಿಣಿ: [ರಮೇಶನಿಗೆ] ಅದನ್ನೂ ಅವರಿಗೆ ಹೇಳಿ ಬಂದಿದ್ರಾ?
ರಮೇಶ: [ಧಾರಿಣಿಗೆ, ಹೆಗಲೇರಿಸುತ್ತ] ಅದು ಸೀಕ್ರೆಟ್ ಅಂತ ನನಗೇನು ಗೊತ್ತು?
ಧಾರಿಣಿ: ಮದ್ನಿ, ಏನ್ ಮಾಡಕ್ಕೆ ಟ್ರೈ ಮಾಡ್ತಾ ಇದ್ದೀರಾ?
ಮಣಿ: ಓಹ್ - ಏನಿಲ್ಲ ಇದು ಸುಮ್ನೆ... ಪೊಂಗಲ್ಲು ಅಷ್ಟೆ.... ಆದ್ರೆ ತುಂಬಾ ಇದೆ - ಎಲ್ಲಿಡ್ಲಿ?
ರಮೇಶ: ಕೊಡಿ ಕೊಡಿ ನಾನು ಇಡ್ತೀನಿ.
ಪಾಂಡುರಂಗ: [ಅಸಹ್ಯದ ಮುಖ ಮಾಡುತ್ತ] ರಮೇಶಾ - ವ್ಯಾ ಇದೇನೋ ಇದು - ಈ ಗಲೀಜ್ ಆಟ ನೋಡ್ತಿದ್ದೀಯ? ಕ್ರಿಕೆಟ್ ಯಾಕೋ ಹಾಕಿಲ್ಲ?
ಶೇಖರ: ಅತ್ಥ ಚೊಲ್ಲಾಂರಾಂಡ ನಿಂಗ, ಪಾಂಡುರಂಗ? ಟೈಗರ್ ಅತ್ನ ಅಳಹ ಆಡಾಣ್ರಾಂದಿ - ವರಂಗೊ ಪಾರಮು.
(ಏನು ಹೇಳ್ತಿದೀರ್‍ಅ ನೀವು ಪಾಂಡುರಂಗ? ಟೈಗರ್ ಎಷ್ಟು ಚನ್ನಾಗಿ ಆಡ್ತಿದ್ದಾನೆ. ಬನ್ನಿ ನೋಡೋಣ)
ಪಾಂಡುರಂಗ: ಹ್ಯಾ? ಈ ಗುಗ್ಗು ಆಟನಾ? ನಾವು ಚಿಕ್ಕವರಾಗಿದ್ದಾಗ ಗೋಲಿ ಆಟ ಆಡ್ತಿದ್ವಿ - ನಮ್ಮ ಅಮ್ಮ ಬೈಯ್ಯೋರು "ಪಡ್ಡೆ ಹುಡುಗರ ಆಟ" ಅಂತ. ಇದೂ ಅದೇ ಗೋಲಿ ಆಟನೇ - ಕೋಲಲ್ಲಿ ಆಡೋ ಗೋಲಿ ಆಟ.
ಶೇಖರ: ಕ್ರಿಕೆಟ್ ಅತ್ಥಾದಿ? ಚಿಣ್ಣಿ ದಾಂಡು ಆಟಮೇ?
(ಕ್ರಿಕೆಟ್ ಏನು? ಚಿನ್ನಿ ದಾಂಡು ಆಟವೇ?)
ಪಾಡುರಂಗ: ರಮೇಶ ಇನ್ನೊಂದ್ ಟಿವಿ ಎಲ್ಲಿದೆ ಹೇಳಪ್ಪ. ನಾನು ಅಲ್ಲಾದ್ರೂ ಕ್ರಿಕೆಟ್ ನೋಡ್ತೀನಿ.
ರಮೇಶ: ಅಣ್ಣಯ್ಯ - ತಾಳೋ - ನಾನೂ ಬರ್ತೀನಿ...
ಶೇಖರ: ಓ - ಇಂಗೇ ಪಾತ್ಕ್ಯಂಗೊ, ಪೋಕ್ಷಿಡಿ. ಗಾಲ್ಫ್ ಕವರೇಜ್ ಮುಡಂದ್ ಪೋಚಿ.
(ಓ ಹೋಗ್ಲಿ ಇಲ್ಲೇ ನೋಡ್ಕೊಳಿ. ಗಾಲ್ಫ್ ಕವರೇಜ್ ಮುಗಿದುಹೋಯಿತು)
೫
[ಎಲ್ಲರೂ ಕೂತು ಊಟ ಮಾಡುತ್ತಿರುವರು]
ಪಾಂಡುರಂಗ: ಸರಿ ಊಟ ಶುರು ಮಾಡೋಣವಾ?
ಶೇಖರ: ಧಾರಿಣಿ - ಅತ್ಥಾದಮ್ಮ, ಹೆಂಬ ವರೈಟೀಸ್ ರಾಂದೇ.. ವಿಷಿಷ್ಠ ಬೋಜನ
[ನಾಟಕ ರಾಗದಲ್ಲಿ ಹಾಡುವನು]
ಸಂಕ್ರಾಂತಿ ಭೋಜನವಿದು, ವಿಚಿತ್ರ ಭಕ್ಷಗಳಿವು
ನಂಗಳಿಗೆ ಔತಣವಿದು ದೊರಕೊಂಡಿತೆನಗೆ ಬಂದು
ಹ ಹ ಹ ಹ ಹ ಹಹ ಹ ಹ ಹ ಹ ಹ ಹಹ
[ಎಲ್ಲರೂ ತಿನ್ನಲಾರಂಭಿಸುವರು]
ಪಾಂಡುರಂಗ: ಹೇ - ಈ ಬಿಸಿಬೇಳೆ ಭಾತ್ ತುಂಬಾ ಚನ್ನಾಗಿದೆ.
ಧಾರಿಣಿ: ಥ್ಯಾಂಕ್ಸ್ ಅಣ್ಣಯ್ಯ
ಮಣಿ: ರಮೇಶ, ಪೊಂಗಲ್ ಚನ್ನಾಗಿದಿಯಾ?
ರಮೇಶ: [ಮಣಿ ಕಡೆ ನೋಡಿ] ಉಹೂಂ ಇನ್ನೂ ತಿಂದಿಲ್ಲ, ತಿಂತೀನಿ [ಧಾರಿಣಿ ಕಡೆ ನೋಡಿ] ತಿನ್ನಲ್ಲ [ಮತ್ತೆ ಮಣಿ ಕಡೆ ನೋಡಿ] ತಿಂತೀನಿ [ಮತ್ತೆ ಧಾರಿಣಿ ಕಡೆ ನೋಡಿ ತಲೆಯಾಡಿಸುವನು]
[ಪಾಂಡುರಂಗ ಕೆಮ್ಮಲಾರಂಭಿಸುತ್ತಾನೆ]
ಶೇಖರ: ಅತ್ಥಾದಾಚಿ ಪಾಂಡುರಂಗ?
(ಏನಾಯಿತು ಪಾಂಡುರಂಗ)
ಪಾಂಡುರಂಗ: [ಗೊಗ್ಗರು ಧ್ವನಿಯಲ್ಲಿ] ಏನೀಲ್ಲ ನೆತ್ತಿ ಹತ್ತಿದೆ ಅಷ್ಟೆ, ಸರಿ ಹೋಗತ್ತೆ.
ಮಣಿ: ಬಿಸಿಬೇಳೆ ಭಾತ್ ತುಂಬಾ ಖಾರ ಅನ್ಸುತ್ತೆ. ಅದಕ್ಕೆ ಇರಬೇಕು...
ಧಾರಿಣಿ: ಬಿಸಿಬೇಳೆ ಭಾತೇ ಅಂತ ಹೇಗೆ ಗೊತ್ತು, ಪೊಂಗಲ್ಲೇ ಇರಬಹುದು
[ಪಾಂಡುರಂಗ ಇನ್ನೂ ಕೆಮ್ಮುತ್ತ]
ಶೇಖರ: ಓ ಅತ್ಥಾದು ಇಲ್ಲಪ್ಪ. ತೀರ್ಥು ಸಾಪ್ಡಂಗೊ, ಪಾಂಡುರಂಗ.
(ಓ ಏನೂ ಇಲ್ಲಪ್ಪ. ನೀರು ಕುಡೀರಿ ಪಾಂಡುರಂಗ, ಸರಿಹೋಗತ್ತೆ)
ಮಣಿ: ಬಿಸಿಬೇಳೆ ಭಾತೇ ಇರಬೇಕು
ಧಾರಿಣಿ: ಹೇಗೆ ಹೇಳ್ತೀರ? ಪೊಂಗಲ್ಲೂ ಇರಬಹುದು...
ಪಾಂಡುರಂಗ: [ಇನ್ನೂ ಗೊಗ್ಗರು ಧ್ವನಿಯಲ್ಲಿ] ಬಿಸಿಬೇಳೆ ಭಾತ್...
ಮಣಿ: ನನಗೆ ಗೊತ್ತಿತ್ತು ಬಿಸಿಬೇಳೆ ಭಾತೇ ಅಂತ
ಧಾರಿಣಿ: [ಎದ್ದು ಹೋಗುತ್ತ] ಸಂತೋಷ ಆಯಿತಾ? [ಕೋಪದಿಂದ ನಿರ್ಗಮಿಸುವಳು]
ರಮೇಶ: ಧಾರೂ, ಧಾರೂ.... [ನಿರ್ಗಮಿಸುವನು]
ಶೇಖರ: ಅತ್ಥಾದಪ್ಪ ಪಾಂಡುರಂಗ. ಬಿಸಿಬೇಳೆ ಭಾತ್ ಇತ್ನ ಅಳಹ ರಾಂದಿ - ನಿಂಗ ಖಾರ ಅಣ್ಣಾಂರ್‍ಆಂಡ
(ಏನಪ್ಪ ಪಾಂಡುರಂಗ. ಬಿಸಿಬೇಳೆ ಭಾತ್ ಎಷ್ಟು ಚನ್ನಾಗಿದೆ - ನೀವು ಸುಮ್ಮನೆ ಖಾರ ಅಂತಿದ್ದೀರ)
ಪಾಂಡುರಂಗ: ತುಂಬ ಚನ್ನಾಗಿದೆ ಬಿಸಿಬೇಳೆ ಭಾತ್ - ಇನ್ನೂ ಸೊಲ್ಪ ಬಿಸಿಬೇಳೆ ಭಾತ್ ಬಡಿಸಿ ಯಾರಾದ್ರು...
ಶೇಖರ: ಪಾರಂಗೊ - ನಿಂಗ ಗಲಾಟೆ ಪಣ್ಣಿಂದಿ ಎಲ್ಲ ಬೇಜಾರ್ ಪಣ್ಕ್ಯೊಂಡ್ ಪೋಯುಟ್ಟ.
(ನೋಡಿ ನೀವು ಗಲಾಟೆ ಮಾಡಿದ್ದು ಎಲ್ಲ ಬೇಜಾರ್ ಮಾಡಿಕೊಂಡು ಹೋಗಿಬಿಟ್ರು)
೭
ಧಾರಿಣಿ: [ಸ್ವಗತ] ಕೊಂಕು ಹುಡುಕದೆ ಇದ್ದರೆ ಆಗೋದೆ ಇಲ್ಲ ಅವರಿಗೆ.
ಮಣಿ: ಧಾರಿಣಿ ನೀನು ಹೇಳಿದ್ದು ಕೇಳಿಸ್ತು - ಹಬ್ಬ ತುಂಬಾ ಚನ್ನಾಗಿ ಆಯಿತು. ಅಡಿಗೆ ಎಲ್ಲ ತುಂಬಾ ರುಚಿಯಾಗಿತ್ತು.
ಧಾರಿಣಿ: ಮದ್ನಿ...?
ಮಣಿ: ಸಾರಿ ಧಾರಿಣಿ, ನೀನು ಹಬ್ಬ ಮಾಡೋವಾಗ ನಾನು ಪೊಂಗಲ್ ಮಾಡಿ ತರಬಾರದಿತ್ತು. ನೀನು ಮಾಡಿದ ಬಿಸಿಬೇಳೆ ಭಾತ್ ತುಂಬಾ ಚನ್ನಾಗಿತ್ತು - ನಾನು ಬಿಸಿಬೇಳೆ ಭಾತ್ ಮಾಡಿದ್ರೆ ಇವರು ಮೂಸೋದೂ ಇಲ್ಲ.
ಧಾರಿಣಿ: ಮದ್ನಿ ಹಾಗೆ ಯಾಕೆ ಹೇಳ್ತೀರ?
ಮಣಿ: ಇಲ್ಲ ಧಾರಿಣಿ, ನಿಜವಾಗಿಯೂ ಸಂಕ್ರಾಂತಿ ಹಬ್ಬ ತುಂಬಾ ಚನ್ನಾಗಿ ಆಯಿತು. ಅಗೋ ಅಲ್ಲಿ ನೋಡು ಮೂರೂ ಜನ ಊಟ ಹೊಡೆದು ಟೀವಿ ಹಾಕಿಕೊಂಡು ಕೂತಲ್ಲೇ ಗೊರಕೆ ಹೊಡೀತಿದ್ದಾರೆ.
[ಇಬ್ಬರು ಬಗ್ಗಿ ನೋಡುವರು]
ಮಣಿ: ಇನ್ನು ಮೇಲೆ ನಾನ್ಯಾಕೆ ಕಷ್ಟ ಪಡಲಿ? ಪ್ರತಿ ವರ್ಷ ಹಬ್ಬಕ್ಕೆ ನಾವೆಲ್ಲ ನಿಮ್ಮ ಮನೆಗೇ ಬರ್ತೀವಿ.
[ಮಣಿ ಧಾರಿಣಿ ಇಬ್ಬರೂ ತಬ್ಬಿಕೊಳ್ಳುವರು]
No comments:
Post a Comment