Showing posts with label fiction. Show all posts
Showing posts with label fiction. Show all posts

Thursday, January 08, 2009

ಸಮ್ಮೋಹನ

ಸಮ್ಮೋಹನ

2008 KKNC ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೊದಲ ಬಹುಮಾನ ಬಂದಿದೆ.
2008 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.


ಕ್ರಿ.ಶ.೧೭ನೇ-ಶತಮಾನದ ಆದಿಭಾಗ; ಮುಘಲ್-ಸಾಮ್ರಾಜ್ಯದ ಒಳನಾಡು

ಶಿಶಿರಋತುವಿನ ಅಂತ್ಯಭಾಗವಾಗಿತ್ತು. ಶೀತಲ ವಾತಾವರಣದಲ್ಲಿ ಕಮಲದಹೂ ಹಾಗು ಮಾವು-ನಾರಿಕೀಳಗಳ ಕಲಶ ಹೊತ್ತ ಉನ್ನತ ಶಿಖರವುಳ್ಳ ಅಗ್ರೇಶ್ವರ ಮಹಾದೇವನ ನಳಿನಳಿಸುವ ಅಮೃತಶಿಲೆಯ ಮಹಾಲಯ ಕೈಲಾಸಪರ್ವತವೇ ಬಂದು ನಿಂತಂತೆ ಕಂಗೊಳಿಸುತ್ತಿತ್ತು. ಪಕ್ಕದಲ್ಲಿಯೇ ಹರಿಯುತ್ತಿದ್ದ ಯಮುನೆ ಮಹಾದೇವನ ತಾಣವನ್ನೇ ನಕಲು ಮಾಡಲೆಂಬಂತೆ ತಂಗಾಳಿ ಸೂಸುತ್ತಿದ್ದಳು.

ಅಂದು ಶಿವರಾತ್ರಿ-ಅಗ್ರೇಶ್ವರ ಮಹಾದೇವನ ಪ್ರತೀಕವಾದ, 'ನಾಗನಾಥೇಶ್ವರ' ಎಂಬ ಹೆಸರುಳ್ಳ ಅಮೃತಶಿಲೆಯ ಅಗಾಧ ಜ್ಯೋತಿರ್ಲಿಂಗವಿದ್ದ ಗರ್ಭಗುಡಿಯಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲು ಸಿದ್ಧತೆಗಳು ಸಾಗಿದ್ದವು. ದೂರ-ದೂರದಿಂದ ಬಂದು ನೆರೆದಿದ್ದ ಭಕ್ತಾದಿಗಳಿಗೆ ಮಹಾಲಯದ ಎರಡೂ ಬದಿಗಳಲ್ಲಿದ್ದ ಛತ್ರಗಳಲ್ಲಿ ತಂಗುವ ಏರ್ಪಾಡು ಮಾಡಲಾಗಿತ್ತು. ಅಂದು ಉಪವಾಸವಾದ್ದರಿಂದ ಗರ್ಭಗುಡಿಯ ನೆಲಮಾಳಿಗೆಯಲ್ಲಿದ್ದ, ದಿನನಿತ್ಯ ನೂರಾರು ಜನರಿಗೆ ಅನ್ನ ಹಾಕುವ ವಿಶಾಲ ಪಾಕಶಾಲೆಯಲ್ಲಿ ಹೆಚ್ಚು ಚಟುವಟಿಕೆ ಕಾಣಿಸುತ್ತಿರಲಿಲ್ಲ. ಮಹಾಲಯದ ಹಿಂಬದಿಯಲ್ಲಿ ಯಮುನೆಯೊಳಕ್ಕೆ ಇಳಿದು ಹೋಗುತ್ತಿದ್ದ ಘಟ್ಟಗಳ ಮೇಲೆ ಸ್ನಾನ-ಸಂಧ್ಯಾವಂದನೆಗಳಲ್ಲಿ ಕೆಲವರು ವ್ಯಸ್ಥರಾಗಿದ್ದರೆ ಇನ್ನು ಕೆಲವರು ಮಹಾದೇವನ ಅಭಿಶೇಖಕ್ಕೆಂದು ನೀರು ತುಂಬಿದ ಕುಂಭಗಳನ್ನು ಹೊತ್ತು ಗುಡಿಯತ್ತ ನಡೆದಿದ್ದರು. ಮಂದಿರದ ಎರಡು ನಗಾರಿಖಾನೆಗಳಿಂದ ಢೋಲು-ಢಮರು-ನಗಾರಿಗಳ ಧ್ವನಿ ಮೊಳಗುತ್ತಿತ್ತು.

ನಗಾರಿಖಾನೆಯ ಪಕ್ಕದಲ್ಲಿ ಒಂದು ಬಹು-ಅಗಲವಾದ ಅಷ್ಟಕೋನಾಕಾರದ ಕೂಪ. ನೀರಿಗೆ ಹೋಗಲು ಮೇಲಿನಿಂದ ಕೆಳಗಿನವರೆಗು ಚಕ್ರಾಕಾರದ ಮೆಟ್ಟಿಲುಗಳು. ಕೂಪದ ಒಳಗೋಡೆಯಲ್ಲಿ ಸುತ್ತಲೂ ಒಂದರ ಕೆಳಗೊಂದು ಎಂಟು ಅಂತಸ್ತುಗಳಲ್ಲಿ ಕಛೇರಿಗಳು. ಈ ದಫ್ತರುಗಳಲ್ಲಿ ಮಹಾಲಯದ ವ್ಯವಸ್ಥಾಪಕರು, ಕೋಶಾಧಿಕಾರಿಗಳು, ಕರಣಿಕರು, ಗುಮಾಸ್ಥರು ಮತ್ತಿತರ ಅಧಿಕಾರಿಗಳು ಅವರವರ ಕೆಲಸಗಳಲ್ಲಿ ವ್ಯಸ್ಥರಾಗಿದ್ದರು. ಮೇಲಿನ ಅಂತಸ್ತಿನಲ್ಲಿದ್ದ ವ್ಯವಸ್ಥಾಪಕರ ಕಛೇರಿಯಲ್ಲಿ ರಾಜ್​ಪೂತ-ಮಹಾರಾಜ ರತ್ನಸಿಂಹನು ಮಹಾಲಯದ ವ್ಯವಸ್ಥಾಪಕ, ಶಂಭುಶರ್ಮರ ಜೊತೆ ಮಾತನಾಡುತ್ತಿದ್ದನು.

"ಪ್ರಣಾಮ್...ಎಲ್ಲವೂ ಕುಶಲವೇ? ಮಂದಿರದ ನಿರ್ವಹಣೆ ಹೇಗೆ ನಡೆಯುತ್ತಿದೆ?"

"ವಿಜಯೀಭವ. ಇಂದಿನ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ. ಎಲ್ಲವೂ ನಿಮ್ಮಂಥವರ ಉತ್ತೇಜನದಿಂದಲೇ ಸಾಧ್ಯವಲ್ಲವೆ?" ಶಂಭುಶರ್ಮರು ಉತ್ತರಿಸಿದರು.

"ಹಿಂದಿನ ಬಾರಿ ಬಂದಾಗ ಹಲವು ದುರುಸ್ತಿ ಕೆಲಸಗಳ ಬಗ್ಗೆ ಹೇಳಿದ್ದಿರಿ. ಶಹನಶಾಹರ ಫರ್ಮಾನಿನ ಪ್ರಕಾರ ಯಾವ ಹಿಂದೂ-ಮಂದಿರವನ್ನೂ ದುರುಸ್ತಿ ಮಾಡಿಸುವಂತಿಲ್ಲ. ಆದರೂ ಮಹಾರಾಜ್-ಜೈ​ಸಿಂಹರ ಜೊತೆಗೆ ಮಾತನಾಡಿ ಮಧ್ಯರಾತ್ರಿಯ ಸಮಯದಲ್ಲಿ ಆದಷ್ಟೂ ಕೆಲಸ ಮಾಡಿಸುವ ಏರ್ಪಾಡು ಮಾಡುತ್ತೇವೆ. ನೀವದರ ಬಗ್ಗೆ ಚಿಂತಿಸಬೇಡಿ" ರತ್ನಸಿಂಹ ಹೇಳಿದ.

"ಧನ್ಯವಾದ. ಮಹಾರಾಜರಿಗೆ ಹೇಳಿ ಶಹನಶಾಹರಿಂದ ದುರುಸ್ತಿಗೆ ಅನುಮತಿ ಪಡೆಯಲು ಸಾಧ್ಯವೇ? ಇದೇ ಸ್ಥಳದಲ್ಲೊಂದು ಕಲ್ಯಾಣಮಂಟಪ ಕಟ್ಟಿಸಿದರೆ ಭಕ್ತಾದಿಗಳಿಗೆ ಬಹಳ ಅನುಕೂಲವಾದೀತು"

"ಅದು ಸಾಧ್ಯವಾಗುವುದರ ಬಗ್ಗೆ ನಮಗೆ ಬಹಳ ಅನುಮಾನವಿದೆ. ಆದರೂ ಪ್ರಯತ್ನಿಸುತ್ತೇವೆ. ನೋಡುವ ಏನಾಗುತ್ತದೆ" ಎಂದು ಕೊಂಚ ಮೌನದ ನಂತರ ವಿನಯ ಧ್ವನಿಯಲ್ಲಿ "ಮಹಾದೇವನಿಗೆ ಅರ್ಪಿಸಲು ಕಾಣಿಕೆಯನ್ನು ತಂದಿದ್ದೇವೆ. ದಯವಿಟ್ಟು ಸ್ವೀಕರಿಸಬೇಕು"

"ತಥಾಸ್ತು...ನಡೆಯೆರಿ ಕೋಶಾಧಿಕಾರಿಗಳ ಬಳಿ ಹೋಗಿ ಜಮಾ ಮಾಡಿಸೋಣ" ಎಂದ ಶಂಭುಶರ್ಮರು ಎದ್ದು ಕೂಪದ ಒಳಗೋಡೆಯ ಸುತ್ತಲಿದ್ದ ಮೆಟ್ಟಿಲುಗಳನ್ನು ಇಳಿಯಲಾರಂಭಿಸಿದರು. ಉದ್ದಕ್ಕೂ ಒಂದೊಂದು ಅಂತಸ್ತಿನ ಕೊಠಡಿಗಳಲ್ಲಿ ಒಂದೊಂದು ದಫ್ತರುಗಳು ಇರುವುದನ್ನು ರತ್ನಸಿಂಹನಿಗೆ ವಿವರಿಸುತ್ತಿದ್ದರು. ಮೇಲಿನಿಂದ ಎರಡನೆಯ ಅಂತಸ್ತಿನಲ್ಲಿ ಜ್ಯೋತಿಷ್ಯ-ಪಂಚಾಂಗ-ತಿಥಿಗಳನ್ನು ನಿರ್ಧರಿಸುವ ದಫ್ತರು, ಕೆಳಗೆ ಮೂರು-ನಾಲ್ಕನೆಯ ಅಂತಸ್ತುಗಳಲ್ಲಿ ಮಹಾಲಯದ ಇತಿಹಾಸ ಮತ್ತಿತರ ವಿಷಯಗಳ ದಸ್ತಾವೇಜುಗಳು. ಐದು-ಆರನೆಯ ಅಂತಸ್ತುಗಳಲ್ಲಿ ವೇದ-ಪುರಾಣ-ವೇದಾಂತಗಳ ಒಂದು ವಿಶಾಲ ಗ್ರಂಥಾಲಯ. ಅತೀ ಕೆಳಗಿನ ಎರಡು ಅಂತಸ್ತುಗಳಲ್ಲಿ ಹಣಕಾಸು-ವಿಚಾರಣೆ, ಮಹಾಲಯದ ಬೊಕ್ಕಸ, ಅನೇಕ ದೇವರುಗಳ ಪ್ರತಿಮೆಗಳ ಸಂಗ್ರಹ ಮತ್ತು ಕೋಶಾಧಿಕಾರಿಯ ದಫ್ತರು.

ರತ್ನಸಿಂಹನನ್ನು ಕೋಶಾಧಿಕಾರಿಯ ಬಳಿ ಬಿಟ್ಟು ಶಂಭುಶರ್ಮರು ಪುನಃ ಮೇಲಿನ ಅಂತಸ್ತಿನಲ್ಲಿದ್ದ ತಮ್ಮ ಕಛೇರಿಗೆ ಹತ್ತಲಾರಂಭಿಸಿದರು. ಆರನೆಯ ಮಹಡಿಯನ್ನು ದಾಟಿದ್ದರು ಅಷ್ಟರಲ್ಲಿ ರತ್ನಸಿಂಹನ ರಕ್ಷಾಪಡೆಯ ನಾಯಕ ಸರಸರನೆ ಇಳಿದು ಬರುತ್ತಿದ್ದದ್ದು ಕಾಣಿಸಿತು.

"ಮಹಾರಾಜ್...ಎಲ್ಲಿದ್ದಾರೆ?" ನಾಯಕ ಅತಂಕದಿಂದ ಕೇಳಿದ.

"ಕಳಗೆ-ಕೋಶಾಧಿಕಾರಿಯ ಬಳಿ...ಏಕೆ-ಏನಾಯಿತು?" ಶರ್ಮರು ವಿಚಾರಿಸಿದರು.

ರತ್ನಸಿಂಹನು ಗದ್ದಲವನ್ನು ಕೇಳಿಸಿಕೊಂಡು ಹೊರಬಂದನು.

"ಮಹಾರಾಜ್- ​ಕೀ-ಜೈ-ಹೋ. ಮಹಾರಾಜ್, ತುರುಷ್ಕರು ಮಂದಿರಕ್ಕೆ ಮುತ್ತಿಗೆಯಿಟ್ಟಿದ್ದಾರೆ. ನೊಡಿದರೆ ಶಹನಶಾಹನ ಸೈನ್ಯದಂತೆ ಕಾಣಿಸುತ್ತಿದೆ. ಸುಮಾರು ಐದುಸಹಸ್ರ ಸೈನಿಕರ ತುಕಡಿ ಬಂದಿದೆ. ಇಲ್ಲಿ ಅವರನ್ನೋಡಿಸಲು ನಮ್ಮ ರಕ್ಷಾತುಕಡಿ ಬಿಟ್ಟರೆ ತರಬೇತಿ ಪಡೆದವರು ಬೇರಾರೂ ಇಲ್ಲ. ಮಹಾಲಯದ ರಕ್ಷಣೆ ಮಾಡುವುದು ಸಂದೇಹಾಸ್ಪದವಾಗಿ ಕಾಣಿಸುತ್ತಿದೆ" ಉದ್ವಿಗ್ನನಾಗಿ ಹೇಳಿದ. 'ಅಲ್ಲಾಹು-ಅಕ್ಬರ್' ಎಂಬ ನಾರೆ ಆಗಲೇ ಕೇಳಬರುತ್ತಿತ್ತು.

ರತ್ನಸಿಂಹನು "ಶರ್ಮಾಜಿ, ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ" ಎನ್ನುತ್ತ ತುಕಡಿಯ ನಾಯಕತ್ವ ವಹಿಸಿಕೊಳ್ಳಲು ಮುಖ್ಯ-ದ್ವಾರದ ಕಡೆಗೆ ಧಾವಿಸಿದ.

ರಾಜ್​ಪೂತರ "ಹರ-ಹರ-ಮಹಾದೇವ್" ಘೋಷಣೆ, ಶಹನಶಾಹನ ಸೈನ್ಯದ "ಅಲ್ಲಾಹು-ಅಕ್ಬರ್" ನಾರೆಯೊಂದಿಗೆ ಭೀಕರ ಘರ್ಷಣೆ ನಡೆಯಿತು. ಭಕ್ತಾದಿಗಳೊಡನೆ ಕೂಡಿ ರಾಜಪೂತರು ವೀರಾವೇಶದಿಂದ ಹೋರಾಡಿದರೂ ಪರಿಣಾಮ ಮೊದಲೇ ತಿಳಿದಿದ್ದ ವಿಚಾರವಾಗಿತ್ತು.

ಯುದ್ಧಾನಂತರ ಶಹನಶಾಹನ ನಾಯಕ ಮಹಾಲಯವನ್ನು ಪ್ರವೇಶಿಸಿದಾಗ ಅವನಿಗೆ ದೇವಾಲಯದ ಸಂಪತ್ತಾಗಲಿ, ದಾಖಲೆ-ಗ್ರಂಥಗಳಾಗಲಿ, ದೇವ-ದೇವತೆಗಳ ಮೂರ್ತಿಗಳಾಗಲಿ ಸಿಗಲಿಲ್ಲ. ಕೇವಲ ಖಾಲಿ ಇಮಾರತ್ತು ಅವನ ಕೈಹತ್ತಿತು. "ಸುವರ್ ಕಾಫೀರರು. ಅವರ ಆರಾಧ್ಯ ಕಲ್ಲುಗಳು ನಮ್ಮ ಮಸೀದಿಯ ಹಾದಿಯಲ್ಲಿ ಹಾಕಿ ದಿನವೂ ನಮಾಜ್​ಗೆ ಹೋಗುವಾಗ ತುಳಿದು ಹೋಗೋಣವೆಂದರೆ, ಕೈಗೆ ಸಿಗದಂತೆ ಮಾಡಿದ್ದಾರೆ" ಎಂದು ಶಪಿಸುತ್ತ ಮಂದಿರವನ್ನು ವಶಪಡಿಸಿಕೊಂಡನು.


ಕ್ರಿ.ಶ.೨೦೦೭-ನವದೆಹಲಿ

ಜನ್ ​ಪಥ್​ನಲ್ಲಿರುವ ಆರ್ಕಿಯಾಲಾಜಿಕಲ್-ಸರ್ವೇ-ಆಫ್-ಇಂಡಿಯಾದ ಪ್ರಧಾನಕಾರ್ಯಾಲಯದೊಳಗೆ ಡೈರೆಕ್ಟರ್-ಜನರಲ್​ರ ಕ್ಯಾಬಿನ್​ನಲ್ಲಿ ಡಿ.ಜಿ. ಅನ್ಶುಮಾನ್ ವಸಿಷ್ಟ್ ತಮ್ಮ ಕೆಳಗೆ ಡೈರೆಕ್ಟರ್-ಆಫ್-ಮಾನ್ಯುಮೆಂಟ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶುಭಕರನೊಂದಿಗೆ ಮಾತನಾಡುತ್ತಿದ್ದರು.

"ನೀನು ಕೇಳ್ತಿರೋದು ಎಂಥಹ ಸೂಕ್ಷ್ಮ ವಿಚಾರವೆಂದು ನಿನಗೆ ತಿಳಿದಿದೆಯೇ, ಶುಭಕರ್? ಈ ವಿಚಾರವನ್ನು ನಾನು ಮಿನಿಸ್ಟ್ರಿ-ಆಫ್-ಕಲ್ಚರ್​ನಲ್ಲಿ ಪ್ರಸ್ತಾಪಿಸಿದರೆ ಎರಡೇ‌ ಸೆಕೆಂಡುಗಳಲ್ಲಿ ನನ್ನನ್ನೂ-ನಿನ್ನನ್ನೂ‌ ವರ್ಗಾಯಿಸಿಯಾರು. ನೀನು ಉತ್ತೇಜನ ಕೊಟ್ಟು ತೆಗೆಸಿದ ಡಾಕ್ಯುಮೆಂಟರೀನೇ ತೊಗೋ-ಪ್ರದರ್ಶನದ ಮುಂಚೆಯೇ ಬ್ಯಾನ್ ಮಾಡಲಿಲ್ಲವೇ?"

ಶುಭಕರ ಸುಮಾರು ೩೫-ವರ್ಷದ ವ್ಯಕ್ತಿ. ತೆಳ್ಳನೆಯ-ಕ್ರೀಡಾಸಕ್ತನ ಮೈಕಟ್ಟು, ತಲೆ ತುಂಬ ಕೂದಲು, ಸಾಹಸವನ್ನು ಹುಡುಕುತ್ತಿರುವಂತೆ ಹೊಳೆವ ಚುರುಕು ಕಣ್ಣುಗಳು. ಎರಡು ವರ್ಷಗಳ ಹಿಂದೆ ಡಿ.ಜಿ.ವಸಿಷ್ಟ್ ಅಮೇರಿಕದ ಆರಿಜೋನಾ-ರಾಜ್ಯದಲ್ಲಿ ಟ್ಯೂಸಾನ್​ನಲ್ಲಿರುವ ಯೂನಿವರ್ಸಿಟಿ-ಆಫ್-ಅರಿಜೋನಾಗೆ ಭೇಟಿ ಕೊಟ್ಟಾಗ ಅಲ್ಲಿಯ ಡಿಪಾರ್ಟ್​ಮೆಂಟ್-ಆಫ್-ಆರ್ಕಿಯಾಲಜಿಯಲ್ಲಿ ರಿಸರ್ಚ್-ಪ್ರೊಫೆಸರ್​ಆಗಿದ್ದ ಡಾಕ್ಟರ್-ಶುಭಕರನ ಪರಿಚಯವಾಯಿತು. ಶುಭಕರ ಪ್ರಾಕ್ತನಶಾಸ್ತ್ರಕ್ಕೆ ತಂತ್ರಜ್ಞಾನದ ಕಿಚ್ಚು ಹೊತ್ತಿಸಿ ಇಜಿಪ್ತ್, ಇಸ್ರೇಲ್, ಹಾಗು ಗ್ರೀಸ್ ದೇಶಗಳಲ್ಲಿ ಉತ್ಖನನಗೊಂಡ ಅವಶೇಷಗಳನ್ನು ಹುಡುಕಿ, ಹೊರತೆಗೆದು ಆರ್ಕಿಯಾಲಜಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದ. ಕಾಲ-ಕ್ರಮೇಣ ಇಬ್ಬರ ನಡುವೆ ಸ್ನೇಹ-ಗೌರವ ಬೆಳೆದು, ವಸಿಷ್ಟ್ ಶುಭಕರನಿಗೆ ಏ.ಎಸ್.ಐ ಡೈರೆಕ್ಟರ್-ಆಫ್-ಮಾನ್ಯುಮೆಂಟ್ಸ್ ಹುದ್ದೆ ನೀಡಿದಾಗ ಶುಭಕರ ಅದನ್ನು ಸ್ವೀಕರಿಸಿ ಭಾರತಕ್ಕೆ ಹಿಂತಿರುಗಿದ್ದ. ಕಳೆದ ಎರಡು ವರ್ಷಗಳಲ್ಲಿ ಇಬ್ಬರ ಮೈತ್ರಿ ಇನ್ನೂ‌ ಹೆಚ್ಚಾಯಿತೇ ಹೊರತು, ಮೇಲಾಧಿಕಾರಿ-ಕೀಳಾಧಿಕಾರಿಯೆಂಬ ಸಂಬಂಧ ಬೆಳೆಯಲಿಲ್ಲ. ಹಾಗಾಗಿ ಶುಭಕರ ಮನಸು ಬಿಚ್ಚಿ ಮಾತನಾಡಿದ:

"ಹುಹ್!‌ ನಮ್ಮ ದೇಶದಲ್ಲಿ ಬಿಡಿ-ಹೆಸರಿಗೆ ಮಾತ್ರ ಫ್ರೇ-ಪ್ರೆಸ್, ಡೆಮಾಕ್ರಸಿ. ಪುಸ್ತಕ, ಸಿನಿಮಾ, ಎಟ್ಸೆಟ್ರಾ ಬ್ಯಾನ್ ಮಾಡ್ತಿರೋವರೆಗು ನಮ್ಮವರು ಉದ್ಧಾರವಾಗೋದಿಲ್ಲ. ಮೈನಾರಿಟಿ-ಸೆಂಟಿಮೆಂಟ್​ಗೆ ಅಥವ ರಾಜಕಾರಣಿಗಳಿಗೆ ನೋವಾಗುತ್ತೆ ಅನ್ನೋ ನೆಪ ಮಾಡಿ ಕಂಡಿದ್ದನ್ನೆಲ್ಲ ಬ್ಯಾನ್ ಮಾಡೋದು ಕೇವಲ ಪಬ್ಲಿಸಿಟಿ ಮತ್ತೆ ವೋಟ್​ಬ್ಯಾಂಕ್ ಗಟ್ಟಿ ಮಾಡಿಕೊಳ್ಳೋ ಸಾಧನ. ಮೆಜಾರಿಟಿ-ಸೆಂಟಿಮೆಂಟ್​ಗೆ ನೋವಾಗುತ್ತೆಯಂತ ಯಾವ ಪುಸ್ತಕವಾಗಲಿ, ಸಿನಿಮಾ-ಆಗಲಿ ಬ್ಯಾನ್ ಮಾಡಿದ್ದಾರೆಯೇ? ಸಾಕ್ಷಿ ಸಹಿತ ತಯಾರ್ ಮಾಡಿದ್ದ ಡಾಕ್ಯುಮೆಂಟರಿ ಅದು. ಯಾರಿಗಾದರೂ‌ ಬೇಕಿದ್ದರೆ ಆ ಸಾಕ್ಷಿಳು ತಪ್ಪೆಂದು ವಾದ ಮಾಡಲಿ-ನಾನು ಸಮ್ಮತಿಸಿಕೊಳ್ಳುವೆ. ಇಲ್ಲವೇ ನೋವಾಗಿದ್ದಲ್ಲಿ ನ್ಯಾಯಾಂಗ ಇರೋದೇಕೆ?‌ ಮುಕದ್ದಮೆ ಹೂಡಲಿ-ಅಲ್ಲೂ‌ ವಾದ ಮಾಡೋಕ್ಕೆ ಸಿದ್ಧ ನಾನು. ಅದೆಲ್ಲಾ ಬಿಟ್ಟು ಬ್ಯಾನ್ ಮಾಡಿದರೆ...ಹೋಗಲಿ ಬಿಡಿ, ನಿಮ್ಮೆದುರು ಅದನ್ನ ಹೇಳಿಕೊಂಡು ಉಪಯೋಗವಿಲ್ಲ"

ಗರ್ಭಿತ ಮೌನ ತಾಳಿತು. ಶುಭಕರ ವಸಿಷ್ಟರ ಮುಜುಗರವನ್ನು ಕಂಡು ವಿಚಿತ್ರವಾದ ತೃಪ್ತಿ ಕಾಣತೊಡಗಿದ. ಕೊಂಚ ಸಮಯದ ನಂತರ ವಸಿಷ್ಟರೇ ಮುಂದುವರೆಸಿದರು

"ಸೋ...?"

"ನೋಡಿ ಸರ್, ಪುಢಾರಿಗಳ ಜೊತೆ ಕಿತ್ತಾಡೋಕ್ಕೆ ನನಗೆ ಬರೋದಿಲ್ಲ. ಅದು ನಿಮ್ಮ ಕೆಲಸ. ನನಗೆ ಈ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಡೋದಾಗಿ ಹೇಳಿಯೇ ನೀವು ನನಗೆ ಈ‌ ಕೆಲಸ ನೀಡಿದ್ದು. ಈಗ ಆ ಭಾಷೆಗೆ ಹಿಂದೆ ಹೋದರೆ ನನ್ನ ರೆಸಿಗ್ನೇಶನ್ ನಿಮ್ಮ ಟೇಬಲ್​ಮೇಲೆ ತಲುಪಿಸ್ತೀನಿ" ಶುಭಕರ ಕಠೋರತನದ ನಟನೆ ಮಾಡುತ್ತ ಹೇಳಿದ.

ವಸಿಷ್ಟರಿಗೆ ಈ ನಟನೆ ತಿಳಿದರೂ‌ ಶುಭಕರ ಅನ್ಯಾಯವಾಗಿ ಯಾವುದಕ್ಕೂ‌ ಒತ್ತಾಯ ಪಡಿಸುವವನಲ್ಲವೆಂದು ಅರಿತವರು. ಅವರೂ‌ ಕೋಪದ ನಟನೆ ಮಾಡುತ್ತ "ನಿನಗೆ ಕೊಟ್ಟ ಭರವಸೆ ಒಂದಲ್ಲ ಒಂದಿನ ನನ್ನ ಕುತ್ತಿಗೆಗೇ ಬರುತ್ತೆ. ಒಳ್ಳೆ ದಶರಥ-ಕೈಕೇಯಿಯರ ಕಥೆಯಾಯಿತು" ಎಂದು ಗೊಣಗಿದರು.

"ಹೂಂ-ನಾನೇ ಕೈಕೇಯಿ...ಇಷ್ಟಾಗಿ ನೀವಾದರೂ‌ ಆ ಸಾಕ್ಷ್ಯಚಿತ್ರ ನೋಡಿದ್ದೀರ?" ಶುಭಕರ ಧ್ವನಿ ಬದಲಾಯಿಸಿ ಕೇಳಿದ. ಅವನ ಕಣ್ಣುಗಳಲ್ಲಿ ಮುಗುಳ್ನಗೆ ತುಂಬಿತ್ತು.

"ಊಂ...ಆಂ...ಅದೂ..."‌ ತಡವರಿಸಿದರು ವಸಿಷ್ಟ್.

"ಏಕೆ?‌ ನೀವೂ‌ ಕೂಡ ಫಾಲ್ಸ್-ಲಿಬರಲ್ ಆಗಿದ್ದೀರ್ಯೇ? ಇಲ್ಲವೇ ಸೂಡೋ-ಸೆಕ್ಯುಲರಿಸ್ಟ್ ಎನ್ನಲೆ?"

"ಹಾಗೇನಿಲ್ಲ...ಸಮಯವಾಗಿಲ್ಲ...ನೀನ್ಯಾಕೆ ನನ್ನನ್ನ ಧರ್ಮಸಂಕಟಕ್ಕೆ ಸಿಕ್ಕಿಸಿ ಅದರಿಂದ ಮಜಾ ತೊಗೊಳ್ತೀಯ?"

ಶುಭಕರ ಜೋರಾಗಿ ನಕ್ಕಿದ. ವಸಿಷ್ಟರೂ‌ ಅವನೊಂದಿಗೆ ಸೇರಿಕೊಂಡರು. "ಹೇಗಿದ್ದರೂ‌ ನೊಣ ಹೊಡೀತ್ತಿದ್ದೀರಿ. ಈಗಲೇ ಏಕೆ ಒಮ್ಮೆ ಆ ಚಿತ್ರ ನೋಡಬಾರದು?"‌ ಶುಭಕರ ಕೇಳಿದ.

"ಅದೀಗೆಲ್ಲಿ ಸಿಕ್ಕೀತು?"

"ನಿಮಗಾಗಿಯೇ ನನ್ನ ಆಫೀಸಿನಲ್ಲಿ ಒಂದು ಕಾಪಿ ಇಟ್ಟುಕೊಂಡಿದ್ದೀನಿ. ತರುತ್ತೀನಿ ನಿಲ್ಲಿ-ಲ್ಯಾಪ್​ಟಾಪಿನಲ್ಲಿ ಪ್ಲೇ-ಮಾಡಬಹುದು" ಎನ್ನುತ್ತ ಶುಭಕರ ಎದ್ದು ಹೊರಟ.


ಮುಝಾಫರಾಬಾದ್, ಪಾಕಿಸ್ತಾನ-ಆಕ್ರಮಿಸಿದ-ಕಾಶ್ಮೇರ

ಶಲ್ವಾರ್ ಧರಿಸಿದ್ದ ಲತೀಫ್ ತನ್ನ ತಲೆಯ ಪೇಟವನ್ನು ಮುಖಕ್ಕೆ ಮುಚ್ಚಿಕೊಂಡು ಸಣ್ಣ ಗಲ್ಲಿಗಳನ್ನು ಹಾಯ್ದು ಊರ ಮಧ್ಯವಿದ್ದ ಹಳೆಯ ಮೊಹಲ್ಲಾವೊಂದರೊಳಗೆ ಪ್ರವೇಶಿಸಿದ. ಅಲ್ಲಿ ಒಂದು ಚಿಲ್ಲರೆ ಅಂಗಡಿಯನ್ನು ಹೊಕ್ಕು ತನ್ನ ಮುಸುಕು ತೆಗೆದಾಗ ಮಾತನಾಡದೆ ಅಂಗಡಿಯ ಮಾಲಿಕ ತನ್ನ ಹಿಂದಿದ್ದ ಬಾಗಿಲಕಡೆ ಸನ್ನೆ ಮಾಡಿ ತೋರಿಸಿದ. ಬಾಗಿಲೊಳ ಹೊಕ್ಕ ಲತೀಫ್ ಒಳಗಿನ ಕೋಣೆಯ ನೆಲದಲ್ಲಿದ್ದ ಬಾಗಿಲೊಂದನ್ನು ತೆಗೆದು ಏಣಿ ಇಳಿದು ಕೆಳಗೆ ಹೋದ. ಅಲ್ಲಿ ನಮಾಜ್ ಮಾಡುತ್ತಿದ್ದ ಜನಾಬ್-ಕಾಝಿಯನ್ನು ಕಂಡು ಸದ್ದಿಲ್ಲದೆ ನಿಂತ. ಕಾಝಿ ನಮಾಜ್ ಮುಗಿಸಿ ಎದ್ದಮೇಲೆ

"ಅಸ್ಸಲಾಂ-ಅಲೈಕುಮ್, ಭಾಯ್ಜಾನ್"‌ ಲತೀಫ್ ವಿನಯದಿಂದ ಹೇಳಿದ.

"ವಾಲೆಕುಂ-ಸಲಾಂ"‌ ಮೀಸೆಯಿಲ್ಲದ ದಟ್ಟ ಗಡ್ಡ ಹಾಗು ಧಡೂತಿ ಮೈಕಟ್ಟನ್ನು ಹೊಂದಿದ್ದ ಕಾಝಿ ಗಾಢ ದ್ವನಿಯಲ್ಲಿ ಮಾತನಾಡಿದ.ಸೂರ್ಮಾ ಮೆತ್ತಿದ ಕಪ್ಪು ಕಣ್ಣುಗಳಲ್ಲಿ ಕಟುಕತನ ತುಂಬಿತ್ತು. ಬಣ್ಣ-ರಹಿತ ತೆಳ್ಳನೆ ತುಟಿಗಳಲ್ಲಿ ಎಂದೂ ಮುಗುಳ್ನಗೆ ಮೂಡಿರಲಿಲ್ಲ. ಕಾಝಿ ಭಾರತದ ಕಾಶ್ಮೇರದಲ್ಲಿ ನಡೆದ ಅರ್ಧ ಭಯೋತ್ಪಾದಕ ಘಟನೆಗಳ ಪ್ರಚೋದಕ. ೯೦ರ ದಶಕದ ಆರಂಭದಲ್ಲಿ ಹತ್ತಾರು ಘಟನೆಗಳಲ್ಲಿ ಭಾಗವಹಿಸಿ, ನೂರಾರು ಜನರ ಸಾವಿಗೆ ಕಾರಣನಾಗಿ, ನಂತರ ತನ್ನ ಮೇಲೆ ಭಾರತೀಯ ಸೇನೆಯ ಬಿಸಿ ಹೆಚ್ಚಾದಾಗ ಮುಝಾಫರಾಬಾದಿಗೆ ಪಲಾಯನ ಮಾಡಿ ಅಲ್ಲಿನಿಂದ ಲತೀಫ್​ನಂತಹ ಪಧಾತಿಗಳ ಮೂಲಕ ಭಾರತದ ಮೇಲೆ ಹಿಂಸಾಚಾರ ಮುನ್ನಡೆಸುತ್ತಿದ್ದ. "ಬಾ ಲತೀಫ್-ಅಲ್ಲಾಹ್ ನಿನ್ನನ್ನು ಉನ್ನತ ಕೆಲಸಗಳಿಗೆ ಆರಿಸಿದ್ದಾನೆ"

"ಅಲ್ಲಾಹ್-ಮೆಹೆರ್ಬಾನ್"‌ ಎಂದಷ್ಟೇ ಹೇಳಿ ಲತೀಫ್ ಸುಮ್ಮನಾದ.

ಕೊಂಚ ಸಮಯ ಭಾರತದ ವಿರುದ್ಧ ನಡೆಸುತ್ತಿದ್ದ ಆತಂಕವಾದದ ವಿಚಾರ ಕುರಿತು ಮಾತನಾಡಿದರು. ಕೊನೆಗೆ ಕಾಝಿ ಲತೀಫ್​ನನ್ನು ಕರೆಸಿದ ಕಾರಣ ವಿವರಿಸ ತೊಡಗಿದ.

"ಹಿಂದೋಸ್ಥಾನದಲ್ಲಿರುವ ಎಷ್ಟೋ‌ ಇಮಾರತ್ತುಗಳು ನಮ್ಮ ಕೌಮಿನವರು ಕಟ್ಟಿಸಿದ್ದು. ತುಘ್ಲಕರು, ಲೋಧಿಗಳು, ಮುಘಲರು, ಕಟ್ಟಿಸಿದ ಇಮಾರತ್ತುಗಳು. ವತನ್ ವಿಭಾಗದ ಸಮಯದಲ್ಲಿ ನಾವು ಇವುಗಳನ್ನೆಲ್ಲ ಕೆಡವಿ ಒಂದೊಂದು ಕಲ್ಲನ್ನೂ‌ ನಮ್ಮ ಪಾಕ್-ವತನ್​ಗೆ ಸಾಗಿಸಿ, ಇಲ್ಲಿ ಪುನಃ ಸಂಯೋಜಿಸುವುದಾಗಿ ಹೇಳಿದೆವು. ಆದರೆ ಫಿರಂಗಿಯರ ದುಸ್ಸಾಹಸ, ಕಾಫೀರ್-ಹಿಂದೂಗಳ ಕುತಂತ್ರದಿಂದ ಇದು ಸಾಧ್ಯವಾಗದೆ ನಮ್ಮ ಕೌಮಿಗೇ ದೂಷಣೆಯಂತೆ ಇಂದಿಗೂ‌ ಅವು ಆ ಕಾಫೀರ್-ದೇಶದಲ್ಲೇ ನಿಂತಿವೆ. ಅವು ನಮಗೆ ಸಿಗದಿದ್ದರೆ ಬೇಡ; ಆ ದಾರ್-ಉಲ್-ಹರಬ್​ನಲ್ಲಿ ನಿಂತಿರುವುದು, ಅಲ್ಲಿಗೆ ಶಾನ್ ತರುವುದು ಅಲ್ಲಾಹ್​ನಿಗೆ ಒಪ್ಪಿಗೆಯಿಲ್ಲ. ಬಾರ್ಡರ್ ದಾಟಿ, ಹಿಂದೋಸ್ಥಾನಕ್ಕೆ ಹೋಗಿ ಆ ಇಮಾರತ್ತುಗಳನ್ನು ನಿರ್ನಾಮ ಮಾಡುವುದು ನಿನಗೆ ನಿಗದಿಸಿದ ಕೆಲಸ"‌

"ಭಾಯ್ಜಾನ್, ಇಸ್ಲಾಮೀ ಇಮಾರತ್ತುಗಳನ್ನೇಕೆ ಕೆಡವಬೇಕು?‌ ಮಸೀದಿಗಳನ್ನು ತಮಾಮ್ ಮಾಡುವುದು ಅಲ್ಲಾಹನಿಗೆ ಪ್ರಿಯವಾದೀತೇ?‌ ಅದರ ಬದಲು ಕಾಫಿರ್..."

"ಖಾಮೋಷ್, ಗುಸ್ಥಾಖ್"‌ ಕಾಝಿ ಗುಡುಗಿದ. ನಂತರ ಸ್ವಲ್ಪ ಸಮಾಧಾನದಿಂದ "ನಾನು ಮಸೀದಿಯನ್ನು ನಷ್ಟಮಾಡುವುದರ ಬಗ್ಗೆ ಮಾತನಾಡುತ್ತಿಲ್ಲ. ಕುತುಬ್​ಮಿನಾರ್, ಚಾರ್​ಮಿನಾರ್, ಗೋಲ್​ಗುಂಬಝ್​ನಂತಹ ಪ್ರವಾಸೀ‌ ಇಮಾರತ್ತುಗಳ ಮೇಲೆ ಧಾಳಿ ನಡೆಸಿದರೆ ಆ ಕಾಫಿರ್​ಸ್ಥಾನದಲ್ಲಿ ದಂಗಾ-ಫಸಾದ್ ಉಂಟಾಗುತ್ತೆ, ಜೊತೆಗೆ ಆ ಕಾಫಿರರಿಗೆ ಅವರ ಒಂದೊಂದು ಹಳ್ಳಿಯೂ, ಪಟ್ಟಣವೂ‌ ಸುರಕ್ಷಿತವಲ್ಲವೆಂಬ ಆತಂಕ ಹುಟ್ಟುತ್ತೆ. ಮೇಲಾಗಿ ಇಸ್ಲಾಮೀ‌ ಇಮಾರತ್ತುಗಳ ಮೇಲೆ ಹಮ್ಲಾ ಮಾಡಿದರೆ ಅದರ ಶಕ್ ಕಾಫಿರರ ಮೇಲೇ ಬೀಳುತ್ತೆ. ಗಡಿಯಲ್ಲಿ ಹಿಂದೋಸ್ಥಾನದ ಆರ್ಮಿ ಒಳಗೆ-ಹೊರಗೆ ಎರಡೂ‌ಕಡೆ ನೋಡಬೇಕಾದರೆ ನಮ್ಮಮೇಲಿರುವ ಬಿಸಿ ಸ್ವಲ್ಪ ತಂಪಾದೀತು" ಎಂದು ವಿವರಿಸಿದ.

"ಆಗಲಿ, ಭಾಯ್ಜಾನ್-ಈ ಆಪರೇಶನ್​ಗೆ ಏನು ಇನ್ತಝಾಮ್ ಮಾಡಬೇಕು?" ನಮ್ರನಾಗಿ ಲತೀಫ್‌ ಕೇಳಿದ.

"ತಲಾ ಆರು ಆದ್ಮಿಯ ಐದು ಲಶ್ಕರ್ ತಯಾರಿಸಿಕೋ. ಸಮಯ ನೋಡಿ ಬಾರ್ಡರ್ ಪಾರು ಮಾಡಬೇಕು. ಆಮೇಲೆ..."‌ ಕಾಝಿ ತನ್ನ ಉಪಾಯ ಮುಂದುವರೆಸಿದ.


ನವದೆಹಲಿ

"ತಾಜ್ ​ಮಹಲ್-ವಿಶ್ವದ ಎಂಟನೆ ವಿಸ್ಮಯವೆನ್ನುತ್ತಾರೆ, ಪ್ರೇಮದ ಸ್ಮಾರಕವೆನ್ನುತ್ತಾರೆ. ಇದೇ ಜಗಜನಿತ ವಿಚಾರ. ಇದು ಶಹ್​ಜಹಾನ್-ಮುಮ್ತಾಝ್ ಗೋರಿಯೇ? ಅಥವ ವಾಸ್ತವವಾಗಿ ಹಿಂದು ದೇವಾಲಯವೇ? ಬನ್ನಿ ಈ ವಿಚಾರವಾಗಿ ಕೆಲವು ಸಾಕ್ಷಿಗಳನ್ನು ಪರೀಕ್ಷೆ ಮಾಡೋಣ"‌ ತಾಜ್​ಮಹಲ್​ನ ಚಿತ್ರ ತೋರಿಸುತ್ತ ಹಿನ್ನೆಲೆಯಲ್ಲಿ ವ್ಯಾಖ್ಯಾನಕಾರ ಹೇಳುತ್ತಿದ್ದ.

ಸ್ಕ್ರೀನ್ ಮೇಲೆ ತಾಜ್​ಮಹಲ್​ನ ಜಗಜನಿತ ಇತಿಹಾಸ ಸಂಕ್ಷಿಪ್ತವಾಗಿ ಮೂಡಿಬರುತ್ತಿತ್ತು. ಡಿ.ಜಿ ಕ್ಯಾಬಿನ್​ನಲ್ಲಿ ವಸಿಷ್ಟ್ ಶುಭಕರನ ಕಡೆ ನೋಡಿ ಹುಬ್ಬೇರಿಸಿದರು. ಶುಭಕರ ಮುಗುಳ್ನಗೆ ಬೀರಿದರೂ ಮಾತನಾಡಲಿಲ್ಲ.

"ವಾಸ್ತುಶಾಸ್ತ್ರದ ಪ್ರಕಾರ ತಾಜ್​ಮಹಲ್ ನೋಡಿದರೆ ಮೊಗಲ್ ಕಟ್ಟಡದಂತೆ ತೋರುತ್ತದೆಯೇ?‌ ಗುಮ್ಮಟವನ್ನು ಕಂಡ ಕೂಡಲೆ ಸಾರಸೆನಿಕ್-ಶೈಲಿಯ ಮೊಗಲ್-ವಾಸ್ತು ನೆನಪಿಗೆ ಬರುತ್ತದೆ. ಆದರೆ ಮೊಗಲ್ ಶೈಲಿಯ ಗುಮ್ಮಟವೆಂದರೇನು? ಇದು ನಿಜವಾಗಿ ಮೊಗಲ್ ಶೈಲಿಯೇ?"‌ ಎಂದು ಕಾಮೆಂಟೇಟರ್ ಅಖಂಡನೀಯ ಆಧಾರಗಳ ಸಮೇತ ಸಮರ್​ಖಂಡ್​ನ ಸಾರಾಸೆನಿಕ್ ಶೈಲಿ ಭಾರತದಲ್ಲೇ‌ ಜನಿಸಿರಬಹುದೆಂದು, ಕೆನಿಷ್ಠ ಪಕ್ಷ ತಾಜ್​ಮಹಲ್​ನ ಛಾವಣಿಯಾಗಿರುವ ಉಬ್ಬಿದ-ಗುಮ್ಮಟ ಮತ್ತು ಏಕಶೃಂಗ-ಕಮಾನುಗಳು ಕೇವಲ ಇಸ್ಲಾಂನ ಕಟ್ಟಡಗಳಿಗೆ ಸೀಮಿತವಲ್ಲವೆಂದು ಸಾಬೀತು ಪಡಿಸಿದ. ತಾಜ್​ಮಹಲ್ ಸುತ್ತಲಿರುವ ನಾಲ್ಕು ಮಿನಾರುಗಳು ಕೂಡ ಮೂಲ ಕಟ್ಟಡದಲ್ಲಿಲ್ಲದೆ ನಂತರ ಸೇರಿಸಿದವೆಂಬುದನ್ನೂ‌ ವ್ಯಕ್ತಪಡಿಸಿದ. ತಾಜ್​ಮಹಲ್ ಬಲಭಾಗದಲ್ಲಿರುವ ಕಟ್ಟಡ ಮುಸಲ್ಮಾನರ ಅತಿಶ್ರೇಷ್ಠ ಪಟ್ಟಣವಾದ ಮಕ್ಕಾ‌ದೆಡೆ-ಪಶ್ಚಿಮಕ್ಕೆ ತಿರುಗಿರದೆ ಪೂರ್ವಕ್ಕೆ ತಿರುಗಿರುವುದರಿಂದ ಅದು ಮಸೀದಿಯಾಗಿರಲು ಸಾಧ್ಯವಿಲ್ಲ, ಮೇಲಾಗಿ ಭವ್ಯ ಗೋರಿಯ ಪಕ್ಕದಲ್ಲಿ ಸಾಧಾರಣ ಮಸೀದಿಯ ಅಗತ್ಯವೂ ಇಲ್ಲವಾದ್ದರಿಂದ ತಾಜ್​ಮಹಲ್ ಎರಡು ಬದಿಯಲ್ಲಿರುವ ಕಟ್ಟಡಗಳು ತಾಜ್​ಮಹಲ್​ನ ಹಿಂದಿನ ಅವತಾರದಲ್ಲಿ ಛತ್ರಗಳಾಗಿದ್ದಿರಬೇಕೆಂದು ವಿವರಿಸಿದ.

"ಹಲವಾರು ರಾಜ್​ಪೂತ್ ಅರಮನೆಗಳಲ್ಲಿ ಹಾಗು ಹಿಂದು ದೇವಾಲಯಗಳಲ್ಲಿ ಇದೇ ವಾಸ್ತುಶೈಲಿಯನ್ನು ಕಾಣಬಹುದು. ಮಧ್ಯೆ ದೊಡ್ಡ ಗುಮ್ಮಟವಿದ್ದು, ಸುತ್ತ ನಾಲ್ಕು ಸಣ್ಣ ಗುಮ್ಮಟಗಳಿವೆ. ಹಿಂದು ಮನೆಗಳಲ್ಲಿನ ದೇವರ-ಮಂಟಪ ಕೂಡ ಇದೇ ರೀತಿ ಮಧ್ಯ ದೊಡ್ಡ ಗುಬುಟು,ಸುತ್ತ ನಾಲ್ಕು ಸಣ್ಣ ಗುಬುಟುಗಳು ಸೇರಿದಂತಿರುತ್ತದೆ.‌ ಈ ಗುಬುಟುಗಳಿಗೆ 'ಕಲಶ'ವೆಂದೇ ಹೆಸರು. ಗುಮ್ಮಟಗಳ ಮೇಲೆ ಕವಿಚಿದ ಕಮಲದ ಹೂವಿದ್ದು, ಆ ಹೂವಿನ ತೊಟ್ಟು ಶಿಖರದ ತುದಿಯಾಗಿದೆ. ಶಿಖರದಲ್ಲಿರುವುದು ಇಸ್ಲಾಂನ ಬಾಲಚಂದ್ರ-ತಾರೆಯ ಚಿಹ್ನೆಯಲ್ಲ, ಮಾವಿನಎಲೆ-ತೆಂಗಿನಕಾಯಿ ಹೊತ್ತ ಕುಂಭದ ಕಲಶ-ಇದರ ಪ್ರತಿರೂಪವನ್ನು ತಾಜ್​ನ ಪೂರ್ವ-ಒಳಾಂಗಣದಲ್ಲೂ ಕಾಣಬಹುದು. ತಾಜ್​ನಲ್ಲಿ ಹಲವಾರು ಕಡೆ ಶಂಖ, ತಾವರೆ, ಹಾಗು ಓಂ-ಅಕ್ಷರಗಳ ಕೆತ್ತನೆಯಲ್ಲದೆ ಆನೆ-ಸರ್ಪಗಳ ಚಿತ್ರಣವನ್ನೂ ಕಾಣಬಹುದು-ಆದರೆ ಪ್ರಾಣಿ ಚಿತ್ರಣ ಇಸ್ಲಾಂನಲ್ಲಿ ನಿಷೇಧ. ಎಲ್ಲವೂ‌ ತಾಜ್​ಗೆ ಹಿಂದೂ‌ ಮೂಲವಿರುವುದನ್ನು ತೋರಿಸುತ್ತವೆ" ಎಂದು ಹಿನ್ನೆಲೆ-ವ್ಯಾಖ್ಯಾನ ವಿವರಿಸಿತು.

ಕೆಲ ಕ್ಷಣಗಳ ನಂತರ ತಾಜ್​ಮಹಲ್​ನ ಹಿನ್ನೆಲೆಯಲ್ಲಿ ವ್ಯಾಖ್ಯಾನಕಾರ ಬಂದು ನಿಂತ. "ತಾಜ್​ಮಹಲ್ ಕಟ್ಟಿಸುವುದು ಶಹ್​ಜಹಾನ್​ನಿಗೆ ಆರ್ಥಿಕವಾಗಿ ಬಹುಭಾರದ ಸಮಸ್ಯೆಯೇ ಆಗಿದ್ದಿರಬೇಕು. ಶಹ್​ಜಹಾನ್​ನ ದಿನನಿತ್ಯ ಆಡಳಿತದ ವಿಚಾರ ಕುರಿತು ಆಸ್ಥಾನ-ಪತ್ರಗಳು ಸಿಕ್ಕಿವೆ. ಅವನ ಆಸ್ಥಾನ-ಕವಿಗಳು ಆವನ ಒಂದೊಂದು ಹೆಗ್ಗಳಿಕೆಯನ್ನೂ ಗಗನದೆತ್ತರ ಹಾಡಿ-ಹೊಗಳಿದ್ದಾರೆ. ಶಹ್​ಜಹಾನ್ ಜಾರಿ ಮಾಡಿದ ಕೆಲವು ಫರ್ಮಾನ್​ಗಳು ಸಿಕ್ಕಿವೆ-ಅವು ಸಹಕರಿಸದ ರಾಜಾ-ಜೈಸಿಂಹನಿಗೆ ಮಕ್ರಾನ ಕಲ್ಲುಗಣಿಯಿಂದ ಅಮೃತಶಿಲೆಯನ್ನು ತರಿಸಲು ಅಡ್ಡಿಮಾಡದಿರಲು ಶಹ್​ಜಹಾನ್ ಹಾಕಿದ ಬೆದರಿಕೆಗಳಂತೆ ತೋರುತ್ತವೆಯಷ್ಟೆ. ಎಲ್ಲಿಯೂ ತಾಜ್​ಮಹಲ್​ ನಿರ್ಮಾಣದ ಆರಂಭ-ಅಂತ್ಯಗಳ ದಿನಾಂಕವಷ್ಟೇಯೇಕೆ 'ತಾಜ್​ಮಹಲ್' ಏಂಬ ಹೆಸರಿನ ಉಲ್ಲೇಖವನ್ನೂ ಮಾಡಿಲ್ಲ". ಶಹ್​ಜಹಾನ್​ನನ್ನು ಕುರಿತು ಬರೆದ ಹಲವಾರು ಕವಿಗಳ, ಪ್ರಸಂಗಗಳ, ಚರಿತ್ರೆಗಳ ಹಾಗು ಫರ್ಮಾನ್​ಗಳ ಉದಾಹರಣೆ ಕೊಟ್ಟು ಅವುಗಳಲ್ಲಿ ತಾಜ್​ಮಹಲ್​ನ ನಿಗೂಢ ಗೈರುಹಾಜರಿಯ ವಿಚಾರ ವಿನಿಮಯಿಸಿ ಕಾಮೆಂಟೇಟರ್ ಮರೆಯಾದ.

ಹಿನ್ನೆಲೆ ಸಂಗೀತದ ವಿರಾಮದ ನಂತರ "ಫ್ರೆಂಚ್ ಪ್ರವಾಸಿ ಟೆವರ್ನಿಯೇ ಪ್ರಕಾರ ತಾಜ್​ಮಹಲ್ ಕಟ್ಟಲು ರೂ.೩,೧೭,೪೮,೦೨೬ ವೆಚ್ಛವಾಗಿದೆ, ಇದರ ಮುಖ್ಯ ವಾಸ್ತುಶಿಲ್ಪಿ ಉಸ್ತಾದ್-ಎಸ್ಸಾ; ಕಟ್ಟಲು ೨೦೦೦೦ ಕಾರ್ಮಿಕರು ೨೨ ವರ್ಷಗಳ ಕಾಲ ೧೬೩೧ಇಂದ-೧೬೫೩ವರೆಗೆ ನಿರೆಂತರ ಕೆಲಸ ಮಾಡಿದ್ದಾರೆ. ಇವರುಗಳ ಬಗ್ಗೆ ಹೆಚ್ಚು ವಿವರಣೆ ಸಿಕ್ಕಿಲ್ಲವಾದರೂ ಮುಖ್ಯ ವಾಸ್ತುಶಿಲ್ಪಿಗಳ ಸಂಬಳ ಕುರಿತು ಮತ್ತು ಮುಮ್​ತಾಝ್​ಳ ಗೋರಿ ಕಟ್ಟಲು ೪೦-ಲಕ್ಷ-ರೂಪಾಯಿ ವೆಚ್ಛವಾಗಿದೆ ಎಂದು ತಿಳಿಸುವ ಶಹ್​ಜಹಾನ್ ಆಸ್ಥಾನದ ಕೆಲವು ಕಾಗದ-ಪತ್ರಗಳು ಸಿಕ್ಕಿವೆ. ಟೆವರ್ನಿಯೇ ಪ್ರಮಾಣಗಳಿಗೂ, ಶಹ್​ಜಹಾನ್ ಆಸ್ಥಾನ-ಪತ್ರಗಳಿಗೂ ಹೊಂದಾಣಿಕೆ ಸಿಗುವುದಿಲ್ಲ. ಇದಲ್ಲದೆ ಟೆವರ್ನಿಯೇ ದಾಖಲೆಗಳಲ್ಲಿ ಇನ್ನೂ ಹಲವಾರು ಅಸಮಂಜಸ ಕಾಣಬರುವುದರಿಂದ ಇವನ ಯಾವುದೇ ಅಭಿಲೇಖಗಳಿಗೆ ಮುಖಬೆಲೆ ಕೊಡುವುದು ಅಪಾಯಕಾರಿಯಾಗಿ ತೋರುತ್ತದೆ. ಆದರೂ, ಶಹ್​ಜಹಾನ್ ಅಮೃತಶಿಲೆ ತರಿಸಿದ್ದ, ವಾಸ್ತುಶಿಲ್ಪಿಗಳಿಗೆ ಸಂಬಳ ಕೊಟ್ಟಿದ್ದ ಎನ್ನುವುದರ ಬಗ್ಗೆ ಸಂದೇಹವಿಲ್ಲ. ಇವರುಗಳು ಮೊದಲೇ ನಿಂತಿದ್ದ ತಾಜ್​ನೊಳಗೆ ಅರಬೀ ಬರಹವಿರುವ ಅಮೃತಶಿಲೆಗಳನ್ನು ಕೂರಿಸಿ, ಮುಸಲ್ಮಾನ ಗೋರಿಯಾಗಿ ಬದಲಾಯಿಸುವ ಕೆಲಸದಲ್ಲಿ ತೊಡಗಿದ್ದಿರಬೇಕು. ತಾಜ್​ಮಹಲ್ ಮುಂದಿರುವ ತೋಟ-ಕಾರಂಜಿಗಳಂತು ಮೊಘಲರ ಸಂಕಲನವೆಂದು ತೋರುತ್ತದೆ"‌ ಎಂದು ನೀರೂಪಕ ವಿಷದ ಪಡಿಸಿದ. ಇದಲ್ಲದೆ ಪೀಟರ್ ಮಂಡಿ ಎಂಬ ಬ್ರಿಟೀಷ್-ಪ್ರವಾಸಿ ತಾಜ್​ಮಹಲ್ ಬಹು ಹಳೆಯ ಕಟ್ಟಡವೆಂದು, ಪೋರ್ಚುಗೀಸ್-ಪ್ರವಾಸಿ ಸೆಬಾಸ್ಟಿಯನ್ ಮನ್ರೀಕ್ ಇದರ ಮುಖ್ಯ ವಾಸ್ತುಶಿಲ್ಪಿ ಈಟಲೀ-ದೇಶದ ಗೆರೋನಿಮೋ-ವೆರೋನಿಯೋ‌ ಎಂಬಾತನೆಂದು ಹೇಳಿರುವುದು ಸೇರಿದಂತೆ ಮತ್ತಿತರ ಪ್ರವಾಸಿಗಳ ರುಜುವಾತುಗಳನ್ನು ಪ್ರಸ್ತುತಪಡಿಸಿ ಅವುಗಳಲ್ಲಿರುವ ಅಸಾಮ್ಯಗಳನ್ನು ವಿವರಿಸಿ, "ಮುಘಲ್ ಸಾಮ್ರಾಜ್ಯ ಇತಿಹಾಸದ ಸೂಕ್ಷ್ಮ ವಿವರಗಳ ದಾಖಲೆಗಳಿರಬೇಕಾದರೆ ಅದರ ಉನ್ನತ-ಶಿಖರವೆನಿಸಿದ ತಾಜ್​ಮಹಲ್ ವಿಚಾರದಲ್ಲಿ ಈ‌ ನಿರ್ಲಕ್ಷ್ಯವೇಕೆ?" ಎ೦ಬ ಪ್ರಶ್ನೆ ಹಾಕಿದಾಗ ಮತ್ತೊಂದು ಅಂಕವಿರಾಮ ತಾಳಿತು.

"ಬಾದ್​ಶಹನಾಮಾದಲ್ಲಿ ಹೀಗೆ ಹೇಳಲಾಗಿದೆ 'ಅಕ್ಬರಾಬಾದಿ​ನ (ಆಗ್ರಾ) ದಕ್ಷಿಣಭಾಗದಲ್ಲಿ ರಾಜಾ-ಮಾನ್​ಸಿಂಹನ ಪೌತ್ರನಾದ ರಾಜಾ-ಜೈಸಿಂಹನ ಒಡೆತನದಲ್ಲಿರುವ ಆರಮನೆ [ಮಹಾಲಯ?] ಇರುವ ಸ್ಥಳವನ್ನು ಮುಂತಾಝ್-ಉಲ್-ಝಮಾನಿಯ ಗೋರಿಯಾಗಿ ಆರಿಸಲಾಗಿದೆ. ರಾಜಾ-ಜೈಸಿಂಹನು ಪೂರ್ವಿಕರಿಂದ ತನಗೆ ಬಂದ ಆ ಮಹಲ್​ಅನ್ನು ಬಿಟ್ಟುಕೊಡಲು ಹಿಂಜರಿದರೂ‌ ಶಹನ್​ಶಾಹ್-ಶಹ್​ಜಹಾನ್​ನನಿಗೆ ಮುಫ್ತಾಗಿ ಕೊಡಬೇಕಾಯಿತು. ಆ‌ ಭವ್ಯ ಆಲಯದ ಬದಲಿಗೆ ರಾಜಾ-ಜೈಸಿಂಹನಿಗೆ ಸರಕಾರದಿಂದ ಜಮೀನು ಕೊಡಲಾಯಿತು.ಮರುವರ್ಷ ಆ‌ ಗಗನದೆತ್ತರದ ಸಮಾಧಿ-ಸೌಧದಲ್ಲಿ ಬೇಗಮ್-ಮುಂತಾಝ್​ಳ ಹೆಣವನ್ನು ಜಗತ್ತಿನಿಂದ ಅಡಗಿಸಿಡಲಾಯಿತು' ಇದರ ಅರ್ಥ ಬಿಡಿಸಿ ಹೇಳುವ ಅವಶ್ಯಕತೆಯೇ ಇಲ್ಲ. ಜೈಸಿಂಹನ ಒಡೆತನದಲ್ಲಿದ್ದ ಅರಮನೆಯಲ್ಲಿ ಮುಂತಾಝ್​ಳ ಗೋರಿ ಮಾಡಲಾಯಿತೆಂದರೆ ಅದರ ನಿರ್ಮಾಪಕ ಶಹಜನಾನ್ ಅಲ್ಲವೆಂದಾಯಿತು"‌ ಕಾಮೆಂಟೇಟರ್ ಸ್ವಲ್ಪ ಮೌನತಾಳಿ ಹಿನ್ನೆಲೆ ಸಂಗೀತ ಮೊಳಗಿದಾಗ ವಸಿಷ್ಟ್ ಪುನಃ ಶುಭಕರನ ಕಡೆ ತಿರುಗಿದರು. ಶುಭಕರ ಹೌದೆಂದು ತಲೆಯಾಡಿಸಿದ.

ಇನ್ನೇನು ಸಾಕ್ಷ್ಯಚಿತ್ರದ ಅಂತ್ಯ ಹತ್ತಿರವಾಗಿತ್ತು. ನಿರ್ದೇಶಕ ಚಿತ್ರವನ್ನು ಚಿಂತಾಜನಕ ಪ್ರಶ್ನೆಗಳೊಡನೆ ಅಂತ್ಯ ಮಾಡಿದ್ದ:

"ತಾಜ್ ​ನಲ್ಲಿ ಕನಿಷ್ಠ ಆರು ಮಹಡಿಗಳಿವೆ-ನಾಲ್ಕು ಅಮೃತಶಿಲೆಯ ಪೀಠದಮೇಲೆ, ಎರಡು ಕೆಳಗೆ; ಹತ್ತಾರು-ನೂರಾರು ಕೋಣೆಗಳಿವೆ. ಗೋರಿಯಲ್ಲಿ ಇಂತಹ ಗುಪ್ತ ಕೋಣೆಗಳಿಗೇನು ಕೆಲಸ?‌ ಬಹುಶಃ ಮಹಾಲಯದ ಪಾಕಶಾಲೆ-ಗೊದಾಮುಗಳಾಗಿರಬಹುದೆ?"

"ತಾಜ್​ನ ಅಮೃತಶಿಲೆಯ ಕಟ್ಟಡದ ಕೆಳಗೆ, ಹಿಂಭಾಗದಲ್ಲಿ ಹರಿಯುವ ಯಮುನಾ-ನದಿ ಪಕ್ಕದಲ್ಲಿ ೨೨-ಕೋಣೆಗಳಿವೆ. ಇವುಗಳನ್ನು ಶಹ್​ಜಹಾನ್ ಇಟ್ಟಿಗೆಗಳಿಂದ ಮುಚ್ಚಿಹಾಕಿದ್ದಾನೆ. ಏ.ಎಸ್.ಐ ಕೂಡ ಇವುಗಳಿಗೆ ಬೀಗ ಬಡಿದಿಟ್ಟಿದೆ. ಈ‌ ಕೋಣೆಗಳನ್ನು ಒಡದು ತೆಗೆದರೆ ಒಳಗೇನು ಸಿಗಬಹುದು?"

"ತಾಜ್ ಆವರಣದೊಳಗೇ‌ ತಾಜ್​ನ ಎರಡೂ‌ಬದಿಯಲ್ಲಿ ಎರಡು ನಗಾರಿಖಾನೆಗಳಿವೆ-ಇಂದಿಗೂ ಇವುಗಳಿಗೆ 'ನಕ್ಕರ್-ಖಾನಾ' ಎಂದೇ ಹೆಸರು. ಶಾಂತಿಯಿರಬೇಕಾದ ಗೋರಿಯಲ್ಲಿ ನಗಾರಿಯೇ?‌ ಮೇಲಾಗಿ ತಾಜ್ ಪಕ್ಕದಲ್ಲಿಯೇ ಮಸೀದಿಯೂ ಇದೆ. ಸಂಗೀತ ಇಸ್ಲಾಂನಲ್ಲಿ ನಿಶೇಧ. ಹೀಗಿರುವಾಗ ಇಲ್ಲಿ ನಗಾರಿಖಾನೆಗಳೇಕಿವೆ? ನಗಾರಿಖಾನೆಗಳು ಅಲ್ಲಿದ್ದ ದೇವಾಲಯದ ಭಾಗವಾಗಿದ್ದಿರಬಹುದೇ?"

"ತಾಜ್ ಆವರಣದಲ್ಲಿ ಮತ್ತೊಂದು ಅವಿವರಣೀಯ ಕಟ್ಟಡ ಮುಖ್ಯದ್ವಾರದ ಪೂರ್ವದಲ್ಲಿರುವ 'ಗೋಶಾಲೆ'. ಇಂದಿಗೂ ಅದಕ್ಕೆ ಗೋಶಾಲೆಯೆಂದೇ ಹೆಸರು. ಗೋರಿಯಲ್ಲೇಕೆ ಗೋಶಾಲೆ?‌ ದೇವಾಲಯದ ಅಭಿಶೇಖಾದಿಗಳಿಗೆ ಬೇಕಾಗುವೆ ಹಾಲು-ಮೊಸರು-ಬೆಣ್ಣೆ-ತುಪ್ಪಗಳ ಸರಬರಾಜಿಗೆ ಈ‌‌ ಗೋಶಾಲೆ ಕಟ್ಟಿಸಿದ್ದಿರಬಹುದೇ?"

"ಅಮೃತಶಿಲೆಯ ತಾಜ್​ ಕಡೆ ಮುಖ ಮಾಡಿ ಅದರ ಎರಡೂ ಬದಿಯಲ್ಲಿ ಒಂದೇ ರೀತಿಯ ಎರಡು ಕಟ್ಟಡಗಳಿವೆ. ಒಂದು ಮಸೀದಿ, ಮತ್ತೊಂದು ಸಭಾಂಗಣ. ಗೋರಿಯಲ್ಲಿ ಮಸೀದಿ-ಸಭಾಂಗಣಗಳಿಗೇನು ಕೆಲಸ?‌ ಮಸೀದಿ ಏಕೆ ಮಕ್ಕಾ-ಮುಖವಾಗಿಲ್ಲ?‌ ಮಸೀದಿ-ಸಭಾಂಗಣದಂತಹ ಎರಡು ವಿಭಿನ್ನ ಕಟ್ಟಡಗಳು ಒಂದೇ ರೀತಿಯೇಕಿವೆ?‌ ಇವು ಮಸೀದಿ-ಸಭಾಂಗಣಗಳೇ?‌ ಅಥವ ಮಂದಿರಕ್ಕೆ ಜೋಡಿಕೊಂಡಿದ್ದ, ಭಕ್ತಾದಿಗಳಿಗೆ ತಂಗುಲು ಕಟ್ಟಿಸಿದ್ದ ಛತ್ರಗಳೇ?

"ತಾಜ್​ನ ಹಿಂಭಾಗದಲ್ಲಿ ಯಮುನಾ ನದಿಗೆ ಇಳಿದು ಹೋಗಲು ಸ್ನಾನ ಘಟ್ಟಗಳೇಕಿವೆ?‌ ಮಂದಿರಕ್ಕೆ ಬಂದ ಭಕ್ತಾದಿಗಳಿಗೆ ಸ್ನಾನ ಮಾಡುವ ಸೌಕರ್ಯಕ್ಕೆ ಮಾಡಿದ್ದಿರಬಹುದೇ?"

"ಅರಬೀ ಬರವಣಿಗೆ ಇರುವ ಅಮೃತಶಿಲೆ ಬಿಳಿ ಬಣ್ಣದ್ದಾಗಿದ್ದರೆ ತಾಜ್​ನ ಉಳಿದ ಅಮೃತಶಿಲೆಗೆ ನಸುಹಳದಿ ಬಣ್ಣವಿದೆ. ಅರಬಿಕ್ ಬರವಣಿಗೆಯ ಕಲ್ಲು ಮೂಲ ಕಟ್ಟಡ ಕಟ್ಟಿದಾನಂತರ ಕೂರಿಸಿರಬಹುದೇ?"

ಫತೇಪುರ್-ಸಿಕ್ರಿಯ ಅಕ್ಬರನ ಗೋರಿ, ದೆಹಲಿಯ ಜಾಮಾ-ಮಸ್ಜಿದ್, ಹಾಗು ಸಫ್ದರ್​ಜಂಗನ ಗೋರಿ, ಹೈದರಾಬಾದಿನ ಕುಲಿ-ಕುತ್ಬ್-ಶಾಹ್​ನ ಗೋರಿ ಹಾಗು ಚಾರ್ಮಿನಾರ್, ಬಿಜಾಪುರಿನ ಗೋಲ್-ಗುಂಬಝ್, ಕೈರೋನಗರದಲ್ಲಿರುವ ಮಹಮದ್​ಅಲಿ-ಮಸೀದಿ, ಲಹೋರಿನ ಬಾದ್​ಶಾಹೀ-ಮಸೀದಿ, ಟರ್ಕಿಯ ನೀಲಿ-ಮಸೀದಿ, ಇರಾನಿನ ಗೋಹರ್ಶದ್-ಮಸೀದಿ ಈ‌ ಎಲ್ಲ ಕಟ್ಟಡಗಳಲೂ ಸುತ್ತ ನಾಲ್ಕು ಸ್ಥಂಭಗಳಿವೆ-ಆದರೆ ಆ ನಾಲ್ಕು ಸ್ಥಂಭಗಳು ಮುಖ್ಯ ಕಟ್ಟಡಕ್ಕೆ ಸೇರಿದಂತೆಯೇ ಇವೆ. ತಾಜ್​ನಲ್ಲಿ ನಾಲ್ಕು ಸ್ಥಂಭಗಳು ಕಟ್ಟಡದಿಂದ ದೂರದಲ್ಲಿ, ಕಟ್ಟಡವನ್ನು ಮುಟ್ಟದಂತೇಕಿವೆ?‌ ಇವುಗಳ ಉಪಯೋಗ ಬೇರೆಯೇ?‌ ಇಲ್ಲವೇ ನಂತರ ಕಟ್ಟಿದ ಸೇರ್ಪಡೆಗಳೇ?

"ತಾಜ್ ​ನೊಳಗೆ ಹಲವಾರು ಹಿಂದು ಸಂಕೇತಗಳು ಕಂದು ಬರುತ್ತವೆ, "ಓಂ' ಆಕಾರದ ಹೂವಿನ ಕೆತ್ತನೆ, ಶಂಖ-ಕಮಲದಹೂಗಳ ಕೆತ್ತನೆ, ಗುಮ್ಮಟದ ಮೇಲುಭಾಗದಲ್ಲಿ ಸೂರ್ಯ-ನಾಗಗಳ ಹೊನ್ನಿನ ಚಿತ್ರಣ, ಇತ್ಯಾದಿ. ಇಸ್ಲಾಂನಲ್ಲಿ ಪ್ರಾಣಿ-ಪಕ್ಷಿಗಳ ಚಿತ್ರಣ ನಿಶೇಧವಾಗಿದೆ. ಹೀಗಿರುವಲ್ಲಿ ಈ ಸಂಕೇತಗಳು ತಾಜ್​ನ ಹಿಂದೂ ಮೂಲವನ್ನು ಸೂಚಿಸುತ್ತಿವೆಯೇ?"

"ನಗಾರಿಖಾನೆಯಿಂದ ಕೊಂಚ ದೂರದಲ್ಲಿ ಒಂದು ಸ್ಥಂಭದೊಳಗೆ ಅಷ್ಟಕೋನಾಕಾರದ ವಿಶಾಲ ಬಾವಿ ಇದೆ. ಈ ಬಾವಿಯ ಒಳಗೋಡೆಯಲ್ಲಿ ಮೇಲಿನಿಂದ ನೀರಿನವರೆಗು ಇಳಿದು ಹೋಗಲು ಮೆಟ್ಟಿಲುಗಳಿವೆ. ಬಾವಿಯ ಒಳಗೋಡೆಯ ಸುತ್ತಲು ಎಂಟು-ಅಂತಸುಗಳಲ್ಲಿ ಕೊಠಡಿಗಳಿವೆ. ಗೋರಿಯಲ್ಲಿ ಇಂತಹ ವಿಸ್ತಾರವಾದ ಬಾವಿಯ ಉದ್ದೇಶವೇನಿದ್ದಿರಬಹುದು?‌ ಹಿಂದಿನ ಕಾಲದಲ್ಲಿ ಇಂತಹ ಬಾವಿಗಳು ಪುಷ್ಕಳ ಹಿಂದು-ದೇವಾಲಯಗಳಲ್ಲಿ ಸರ್ವೇಸಾಮಾನ್ಯವಾಗಿದ್ದವು. ಮಂದಿರದ ಕೋಶಾಧಿಕಾರಿಯ-ಕಛೇರಿ ಇಂತಹ ಕೊಠಡಿಯಲ್ಲಿದ್ದು, ಖಜಾನೆ-ಪೇಟಿಗಳನ್ನು ಮತ್ತಿತರ ಅಮೂಲ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿತ್ತು. ದೇವಾಲಯ ಕೈಬಿಟ್ಟು ಹೋಗುವಹಾಗಾದರೆ ಖಜಾನೆಯನ್ನು ಬಾವಿಯೊಳಕ್ಕೆ ತಳ್ಳಿಲಾಗುತ್ತಿತ್ತು-ಖಜಾನೆ ಶತ್ರುವಿನ ಕೈ ಸೇರಲು ಅವಕಾಶ ಕೊಡದಿರುವ, ದೇವಾಲಯ ಪುನರ್ಜೈಸಿದ ನಂತರ ಹೊರತೆಗೆಯುವ ದೂರಾಲೋಚನೆಯಿಂದ. ತಾಜ್ ​‌ಆವರಣದಲ್ಲಿರುವ ಬಾವಿಯೂ ಹಿಂದು ದೇವಾಲಯಗಳ ಸಾಂಪ್ರದಾಯಿಕ ಕೋಶ-ಕೂಪವಿರಬಹುದೇ?"

"ತಾಜ್​ಮಹಲ್ ಎಂಬ ಹೆಸರು-ಇಲ್ಲಿದ್ದ ಮಂದಿರದ ಹೆಸರಾದ 'ತೇಜೋಮಹಾಲಯ'ದ ಬ್ರಷ್ಟ-ರೂಪವಿರಬಹುದೇ?"

ಪುನಃ ಪ್ರಸ್ತುತಕ ಸ್ರೀನ್ ಮೇಲೆ ಬಂದ. "ಈ ಚಿತ್ರದಲ್ಲಿ ತೋರಿಸಿರುವ ಯಾವ ಸಂದೇಶವೂ‌ ಬಹುಶಃ‌ ತಾಜ್ ಹಿಂದೂ ದೇವಾಲಯವೆಂದು ಸಾಧಿಸುವುದಿಲ್ಲ. ಆದರೆ ಇದರ ಮೊಘಲ್ ಮೂಲಗಳ ಮೇಲೂ ಪ್ರಶ್ನೆ-ಚಿಹ್ನೆಗಳು ಏಳುತ್ತವೆ. ಈ ಎಲ್ಲಾ ಗೊಂದಲಗಳಿಂದ ಕೂಡಿರುವ 'ತಾಜ್​ಮಹಲ್' ಎಂಬ ಎನಿಗ್ಮಾ‌ ಎಂದಿಗಾದರೂ‌ ಬಿಡಿಸಲಾದೀತೆ?‌ ಭಾರತ ಸರಕಾರ ತಾಜ್​​ನೊಳಗೆ ಅಂತರರಾಷ್ಟ್ರೀಯ ಪರಿಣಿತರಿಗೆ ಸ್ವಾವಲಂಬೀ-ಸಂಶೋಧನೆ ಮಾಡಲು ಅವಕಾಶ ಮಾಡಿಕೊಡುತ್ತದೆಯೇ? ತಾಜ್​ನ ಸತ್ಯ ಇತಿಹಾಸ ಎಂದಿಗಾದರೂ‌ ಹೊರಬರುವ ಸಾಧ್ಯತೆ ಇದೆಯೇ?" ಎನ್ನುವಲ್ಲಿಗೆ ತಾಜ್​ಮಹಲ್​ನ ಚಿತ್ರದ ಹಿನ್ನೆಲೆಯಲ್ಲಿ ಕ್ರೆಡಿಟ್ಸ್ ಓಡ ತೊಡಗಿದವು.

"ಹಂಮ್​ಮ್..." ಎಂದು ಸ್ವಲ್ಪಕಾಲ ವಸಿಷ್ಟ್ ಮೌನರಾದರು. ನಂತರ "ಈ ಎಲ್ಲ ಪಾಯಿಂಟ್ಸ್ ನೀನೇ ಸಂಗ್ರಹಿಸಿದೆಯೇ?"

"ಛೆ-ಛೆ, ನಾಟ್-ಅಟ್-ಆಲ್-ನಾನು ಈ‌ ಡಾಕ್ಯುಮೆಂಟರಿಗೆ ನಾನು ಕೇವಲ ಎಕ್ಸ್​ಪರ್ಟ್-ಕನ್ಸಲ್ಟೆಂಟ್ ಅಷ್ಟೆ-ಪ್ರೊಡ್ಯೂಸರ್ ಅಲ್ಲ. ಇದ್ಯಾವುದೂ ಹೊಸತಲ್ಲ. ಬಹಳ ಹಿಂದೆ-ನೈನ್ಟೀನ್​-ಸೆವೆಂಟೀಸ್​ರಲ್ಲಿ-ನಮ್ಮ ಡೆಪಾರ್ಟ್ಮೆಂಟ್​ನವರೇಆದ ಪುರುಶೋತ್ತಮ್-ನಾರಾಯಣ್ ಓಕ್ ಎಂಬಾತ ಪ್ರತಿಪಾದಿಸಿದ ಥಿಯರಿ ಇದು. ಕೆಲವು ಪುಸ್ತಕಗಳನ್ನೂ ಬರೆದಿದ್ದಾರೆ. ಇವರೊಬ್ಬರೇ ಅಲ್ಲ-ವಿ.ಎಸ್.ಗೋಡ್ಬೋಲೆ, ಮಾರ್ವಿನ್ ಮಿಲ್ಸ್, ಪಿ.ಎಸ್.ಭಟ್, ಎ.ಎಲ್.ಅಥಾವಳೆ, ಇ.ಬಿ.​ಹ್ಯಾವೆಲ್, ಸರ್ ಡಬ್ಯು.ಡಬ್ಯು.ಹಂಟರ್​ಹ್ಯಾವ್ ಮತ್ತಿತರರೂ ಈ ವಿಚಾರದ ಬಗ್ಗೆ ಬರೆದಿದ್ದಾರೆ. ಆಗಲೇ ಅಷ್ಟೋ‌-ಇಷ್ಟೋ‌ ರೆಸರ್ಚ್​ಗೆ ಅವಕಾಶ ಕೊಟ್ಟಿದ್ದಿದ್ದರೆ ಅಲ್ಲೇ ವಿಚಾರ ಮುಗಿದುಹೋಗಿರುತ್ತಿತ್ತು. ರಾಜಕೀಯ ಹಿಂದೇಟಿಗೆ ಹೆದರಿ ಆಗಿನ ಇಂದಿರಾ ಗಾಂಧಿ ಕಾಂಗ್ರೆಸ್ ಸರಕಾರ ಈ‌ ವಿಚಾರ ಮುಚ್ಚಿಹಾಕೋದಲ್ಲದೆ ಓಕ್​ರ ಪುಸ್ತಕಗಳನ್ನೂ ಬ್ಯಾನ್ ಮಾಡಿತು" ಕೊಂಚ ಮೌನವಾಗಿ ನಂತರ "ಈಗ ಈ ಡಾಕ್ಯುಮೆಂಟರಿಯನ್ನೂ‌ ಸರಕಾರ ಬ್ಯಾನ್ ಮಾಡಿದೆ. ನಮ್ಮವರಿಗೆ ಸತ್ಯ, ಇತಿಹಾಸಗಳ ಬಗ್ಗೆ ಆಸಕ್ತಿಯೇ ಇಲ್ಲವೇ?‌ ಇವುಗಳಿಗೆ ಬೆಲೆಯೇ ಇಲ್ಲವೇ? ಫ್ರೀ-ಸ್ಪೀಚ್, ಡೆಮಾಕ್ರಸಿ ಎಲ್ಲ ಬರೀ‌ ಓಳು"‌ ಶುಬಕರ ಖಿನ್ನನಾಗಿ ಹೇಳಿದ. "ಅದು ಹಿಂದೂ ಕಟ್ಟಡವಾಗಲಿ, ಮುಸಲ್ಮಾನ ಕಟ್ಟಡವಾಗಲಿ ನನಗೆ ಯಾವ ಪ್ರೆಜುಡಿಸ್ ಕೂಡ ಇಲ್ಲ. ಇತಿಹಾಸದ ಸತ್ಯ ಏನು ಅನ್ನೋದನ್ನ ಮಾತ್ರ ತಿಳಿದುಕೊಳ್ಳುವ ಆಶಯವಷ್ಟೇ. ಶಹ್​ಜಹಾನ್​ನೇ ಕಟ್ಟಿದ್ದೆಂದು ಪ್ರೂವ್ ಆದರೆ ಅದೇ ಸರಿ. ಇಲ್ಲದಿದ್ದರೂ ಅದು ಮಂದಿರವಾಗೋದು ಬೇಡ, ಮುಮ್​ತಾಝ್​ಳ ಗೋರಿಯಾಗಿಯೇ ಉಳಿಯಲಿ. ಈ‌ ಡೌಟ್, ಸ್ಪೆಕ್ಯುಲೇಶನ್, ರೂಮರ್ ಎಲ್ಲಾವುದನ್ನೂ‌ ಒಮ್ಮೆಲೇ ಮಲಗಿಸಬಹುದು"

"ಫಿಲಾಸಾಫಿಕಲ್ ಆಗಬೇಡ, ಶುಬಕರ್. ಇದರ ಬಗ್ಗೆ ಮುಂದೇನು ಮಾಡಬೇಕೆಂದಿದ್ದೀಯ?"

ಶುಬಕರ ತೀವ್ರವಾಗಿ "ಮತ್ತೆ ಅದನ್ನೇ ಕೇಳ್ತಿದ್ದೀರಲ್ಲ ಸರ್" ಎಂದ. "ಆಗಲೇ ಹೇಳಿದೆನಲ್ಲ-ಡೈರೆಕ್ಟರ್-ಆಫ್-ಮಾನ್ಯುಮೆಂಟ್ಸ್​ಆಗಿ ತಾಜ್​ಮಹಲ್ ನನ್ನ ನಿರ್ವಹಣೆಗೆ ಸೇರಿದೆ. ನಾನು ತಾಜ್​ನ ರಿಸರ್ಚ್​ಗೆ ತೆಗೆಯಬೇಕೆಂಬ ನಿರ್ಧಾರ ಮಾಡಿದ್ದೇನೆ. ಶುರುವಲ್ಲಿ ನಮ್ಮ ಡಿಪಾರ್ಟ್ಮೆಂಟ್​ ಮಾತ್ರ ಇನ್ವಾಲ್ವ್ ಆಗಿರುತ್ತೆ. ಆಮೇಲೆ ಇನ್ಟರ್​ನ್ಯಾಶನಲ್-ಎಕ್ಸ್​ಪರ್ಟ್ಸ್​ಗೆ ಅವಕಾಶ"

"ನೋಡಯ್ಯ, ಏನು ರಿಸರ್ಚ್ ಇದ್ದರೂ‌ ಅದು ಮಿನಿಸ್ಟ್ರಿ-ಆಫ್-ಕಲ್ಚರ್​ನಿಂದ ಅನುಮತಿ ಪಡೆದ ಮೇಲೆ. ನನ್ನ ಕೈಯಲ್ಲಿ ಏನೂ ಇಲ್ಲ-ರೂಲ್ಸ್ ಇರೋದೇ ಹಾಗೆ. ನಿನಗಾಗಿ ನಾನು ಪ್ರಯತ್ನ ಮಾಡ್ತೀನಿ, ಆದರೆ ಇದು ಸಾಧ್ಯವಾಗೋದು ಸಂದೇಹಕರ" ನಿರ್ಣಾಯಕ ಧ್ವನಿಯಲ್ಲಿ ವಸಿಷ್ಟ್ ಹೇಳಿದರು.

"ನನಗದೆಲ್ಲ ಗೊತ್ತಿಲ್ಲ. ಗಬ್ಬು-ಪಾಲಿಟಿಕ್ಸ್ ನಿಮ್ಮ ಕೆಲಸ. ನಾನು ಈಗಿಂದೀಗಲೇ ರೆಸರ್ಚ್ ಶುರು ಹಚ್ತೀನಿ"

"ಯಾಕಪ್ಪಾ ಚೂರಿಯಿಂದ ಇರೀತೀಯ ಇಲ್ಲ ತಲೆ ಮೇಲೆ ಚಪ್ಪಡಿ-ಕಲ್ಲು ಎಳೀತೀಯ?‌ ಅನುಮತಿ ಸಿಗೋವರೆಗೂ‌ ಏನೂ ಮಾಡುವಹಾಗಿಲ್ಲಾಂತ ಹೇಳಿದೆನಲ್ಲ"‌

"ರಿಸರ್ಚ್ ಶುರುವಾಗೋದು ಆ ಬಾವಿಯಿಂದ ನೀರೆಲ್ಲ ತೆಗೆದು ಒಳಗೇನಿದೆ ಅಂತ ನೋಡೋದರಿಂದ. 'ರೆಗ್ಯುಲರ್-ಮೇಂಟೆನೆನ್ಸ್' ಅಂತ ಹೇಳಿ ನಾನೇ ನಿಂತು ಅದನ್ನ ಶುರು ಮಾಡಿಸುತ್ತೀನಿ. ನಿಮ್ಮ ಮಿನಿಸ್ಟ್ರಿ ಅನುಮತಿ ಸಿಕ್ಕ ಮೇಲೆ ತಾಜ್​ನೊಳಕ್ಕೆ ಪ್ರವೇಶ. ಇದು ಭಾರತದ ಇತಿಹಾಸಕ್ಕೆ ನಿಮ್ಮ ಕೊಡುಗೆ ಆಂದುಕೊಳ್ಳಿ"‌ ಶುಭಕರ ಚೌಕಾಶಿ ಮಾಡಿದ.

"ನನಗೇ‌ ಪೆಪ್-ಟಾಕ್ ಕೊಡ್ತೀಯಾ?" ವಸಿಷ್ಟ್ ನಕ್ಕರು. "ಮತ್ತೆ ನಿನ್ನ ರಿಸರ್ಚ್-ರೆಸಲ್ಟ್ಸ್?

"ನಿಮಗೆ ಹೇಳದೆ ಪಬ್ಲಿಶ್ ಮಾಡೋದಿಲ್ಲ"

"ಹಂಮ್​ಮ್...ಸರಿ-ಆದರೆ ಜೋಕೆ"‌ ವಸಿಷ್ಟ್ ಹೇಳಿದರು.


ಭಾರತ-ಪಾಕಿಸ್ತಾನ ಗಡಿ

ಐದು ಭಯೋತ್ಪಾದಕ ತಂಡಗಳು ಕಾಝಿಯ ಮಿಶನ್ ಸಾಧಿಸಲೆಂದು ಕಾಶ್ಮೇರದ ಅನಂತ್​ನಾಗ್ ಜಿಲ್ಲೆಯಲ್ಲಿ ಭಾರತದೊಳಕ್ಕೆ ನುಗ್ಗಲು ಹೊರಟವು. ಮಂಜು ಕವಿದು, ಪ್ರಪಂಚವೇ ಶ್ವೇತವಾಗಿತ್ತು, ಛಳಿ ಕೊರೆಯುತ್ತಿತ್ತು. ಏ.ಕೆ.೪೭/ಎ.ಕೆ.೫೬-ಅಸಾಲ್ಟ್-ರೈಫಲ್​ಗಳನ್ನು ಹೊತ್ತು ಬಿಳಿಯ ಶಲ್ವಾರ್​ಗಳನ್ನು ಧರಿಸಿದ್ದ ಆತಂಕವಾದಿಗಳು ಅಕಸ್ಮಾತಾಗಿ ಬಾರ್ಡರ್-ಸೆಕ್ಯೂರಿಟಿ-ಫೋರ್ಸ್​ನ ಎದುರಾದರು. ಘಟಿಸಿದ ಬಂದೂಕು-ಯುದ್ಧದಲ್ಲಿ ಮೂರು ಭಯೋತ್ಪಾದಕ-ತಂಡಗಳು ಸಂಪೂರ್ಣವಾಗಿ ಅಳಿಸಿಹೋದವು. ನಾಲ್ಕನೆಯ ತಂಡದಲ್ಲಿ ಇಬ್ಬರು ಗಾಯಗೊಂಡು ಯಾವ ಮಿಶನ್​ನಲ್ಲೂ‌ ಭಗವಹಿಸುವಂತಿರಲಿಲ್ಲ. ಲತೀಫನ ತಂಡದಲ್ಲಿ ಒಬ್ಬ ಗುಂಡೇಟು ತಿಂದು ನೆಲಕ್ಕುರುಳಿದರೆ, ಉಳಿದವರು ಕೇವಲ ತರಚಿದ ಗಾಯಗಳೊಂದಿಗೆ ತಪ್ಪಿಸಿಕೊಂಡರು.

ಗಡಿ ಪಾರುಮಾಡಿದ ಲತೀಫ್ ತಂಡ ಮೊದಲಿಗೆ ಗಡಿಪ್ರದೇಶದ ಒಬ್ಬ ಪಾಕಿಸ್ತಾನ-ಪಕ್ಷಪಾತಿಯ ಮನೆಯಲ್ಲಿ ತಂಗಿದರು. ಎರಡು ದಿನಗಳ ನಂತರ ತಮ್ಮ ಗಾಯ-ದಣಿವುಗಳನ್ನಾರಿಸಿಕೊಂಡು, ಆಯುಧಗಳನ್ನು ಅಲ್ಲಿಯೇ ಬಿಟ್ಟು, ಬಸ್ ಹತ್ತಿ ಪಂಜಾಬ್-ಹರ್ಯಾಣಾಗಳ ಮೂಲಕ ಬಂದು ದೆಹಲಿಯಲ್ಲಿಳಿದರು. ದೆಹಲಿಯಿಂದ ಕಾರೊಂದನ್ನು ಮಾಡಿಕೊಂಡು ಪುನಃ ದಕ್ಷಿಣ-ದಿಕ್ಕಿನಲ್ಲಿ ಪ್ರಯಾಣ ಮಾಡುತ್ತ ಆಗ್ರಾಕ್ಕೆ ಬಂದು ತಲುಪಿದರು.


ತಾಜ್​ಮಹಲ್, ಆಗ್ರಾ

ಶುಭಕರ ತನ್ನ ರಿಸರ್ಚ್ ತಂಡವನ್ನು ಸೇರಿಸಿಕೊಂಡು ತಾಜ್​ಮಹಲ್ ಆವರಣದಲ್ಲಿ ಕೆಲಸ ಆರಂಭ ಮಾಡಿಸಿದ್ದ. ಆಫ್-ಸೀಸನ್ ಆಗಿದ್ದರಿಂದ ತಾಜ್​ನೊಳಗೆ ಬಹಳಷ್ಟು ಪ್ರವಾಸಿಗಳೇನೂ ಇರಲಿಲ್ಲ. ಬಾವಿಯಿದ್ದ ಸ್ಥಂಭದ ಬೀಗವನ್ನು ತೆಗೆಸಿ ಒಳಬಂದಾಗ ಹತ್ತಾರು ವರ್ಷಗಳಲ್ಲಿ ಯಾರೂ‌ ಅಲ್ಲಿ ಹಾಯ್ದ ಹಾಗೆ ಕಾಣಿಸಲಿಲ್ಲ. ಶುಭಕರ ಬಾವಿಯ ಸುತ್ತ ನಡೆದು ತನಿಖೆ ಮಾಡಿದ. ಸುಮಾರು ೨೦ಅಡಿ ಅಗಲ ಅಷ್ಟಕೋನಾಕಾರದ ಬಾವಿ-ಬಾವಿಕಟ್ಟೆ ಅಲ್ಲಲ್ಲಿ ಸ್ವಲ್ಪ ಮುರಿದಂತೆ ಕಂಡರೂ ಬಿದ್ದುಹೋಗುವ ಭಯವಿರಲಿಲ್ಲ. ಬಾವಿಯ ನೀರಿನಲ್ಲಿ ಕೊಳಕು ತುಂಬಿ ಹಸಿರಾದ ಕೊಚ್ಚೆಯಂತಾಗಿ, ಅದರಿಂದ ದುರ್ನಾಥ ಹೊಮ್ಮುತ್ತಿತ್ತು. ತನ್ನ ಕರ್ಚೀಫ್​ನಿಂದ ಮೂಗು ಮುಚ್ಚಿಕೊಂಡ ಶುಭಕರ ಬಾವಿಯೊಳಕ್ಕೆ ಇಳಿದು ಹೋಗಲು ಒಳಗೋಡೆಗೆ ಅಂಟಿದಂತೆ ನೀರಿನ ಸಮದವರೆಗು ಹೋಗಿತ್ತಿದ್ದ ಮೆಟ್ಟಿಲುಗಳ ಮೇಲೆ ನಿಂತು ಪರೀಕ್ಷೆ ಮಾಡಿದ. ಮೆಟ್ಟಿಲು ಗಟ್ಟಿಯಾಗಿ ಕಂಡಾಗ, ಹಸಿರು-ಪಾಚಿ ಕಟ್ಟಿದ ಗೋಡೆ ಹಿಡಿದು ನಿಧಾನವಾಗಿ ಇಳಿಯಲಾರಂಭಿಸಿದ. ಬಾವಿಯ ಒಳಗೋಡೆಯಲ್ಲಿ ಅನೇಕ ಬಾಗಿಲು-ಕಿಟಿಕಿಗಳಿದ್ದವು. ಶುಭಕರ ಒಟ್ಟು ಎಂಟು ಅಂತಸ್ತುಗಳನ್ನು ಎಣಿಸಿದ. ಮೆಟ್ಟಲುಗಳ ಮಧ್ಯೆ ಮೊದಲ ಚೌಕ-ನಿಲುಗಡೆಗೆ ಬಂದಾಗ ಬಾವಿಯ ಗೋಡೆಯೊಳಗೆ ಬಲಭಾಗಕ್ಕೆ ಇದ್ದ ದ್ವಾರವನ್ನು ಪ್ರವೇಶ ಮಾಡಿದ. ನೂರಾರು ವರ್ಷಗಳ ಧೂಳು ಅವನ ಕಾಲ್ಕೆಳಗೆ ಚದರುತ್ತಿತ್ತು. ದ್ವಾರದೊಳಗೆ ಒಂದು ಸಣ್ಣ ಕೊಠಡಿ-ನೆಲದಲ್ಲಿ ಕುಳ್ಳ ಕಟ್ಟೆಗಳು. ಮೂಲೆಗಳನ್ನು ಕತ್ತಲು ಆವರಿಸಿತ್ತು.

ಶುಭಕರನ ಹಿಂದೆ ಬಂದಿದ್ದ ಕೆಲಸದಾಳುಗಳ ಮೇಸ್ತ್ರಿ ಕೂಗಿದ "ಸಾಬ್-ಇದೇ ಬಾವಿನಾ?"

ಶುಭಕರ ತಿರುಗಿ ಅವನೆಡೆ ನೋಡಿದ. ಹೊರಗೆ ಬಂದು "ಹೌದು-ಇದೇ. ಮೊದಲು ಆಳ ಎಷ್ಟಿದೆ ನೋಡಿ, ಹೊರತೆಗೆದ ನೀರು ದೂರ ಹರಿದು ಹೋಗೋಕ್ಕೆ ಪೈಪ್ ಹಾಕಿ. ಆಮೇಲೆ ನೀರೆಲ್ಲ ತೆಗೆಯಬೇಕು. ಎಷ್ಟು ಸಮಯವಾಗಬಹುದು?" ಎಂದು ಕೇಳಿದ

ಮೇಸ್ತ್ರಿ ತಲೆ ಕೆರೆಯುತ್ತ "ಗೊತ್ತಾಗ್ತಿಲ್ಲ ಸಾಬ್" ಎಂದು ಸಣ್ಣ ಕಲ್ಲೊಂದನ್ನು ಬಾವಿಗೆ ಎಸೆದ. ನೀರಿಗೆ ಬಿದ್ದ ಕಲ್ಲು 'ಬುಳುಕ್' ಎಂದದ್ದನ್ನು ಕೇಳಿ "ಎರಡ್-ಮೂರ್ ದಿನ ಆಗ್ಬಹುದು. ನಣ್ಣ ಪೈಪ್ ಬೇರೆ ಹಾಕ್ಬೇಕು ಅಂತೀರ"

"ಸರಿ-ಶುರು ಮಾಡಿ. ಆದರೆ ನೀರು ಬಿಟ್ಟು ಏನೂ ಹೊರಗೆ ಹೋಗಬಾರದು" ಎಂದು ಶುಭಕರ ಎಚ್ಚರಿಸಿದಮೇಲೆ ಕೆಲಸ ಆರಂಭವಾಗಿತ್ತು.

ಮೇಸ್ತ್ರಿ ಹೇಳಿದ ಮೂರು ದಿನಗಳು ಕಳೆದರೂ ಬಾವಿಯ ತಳ ಕಾಣಲೊಲ್ಲದಾಗಿತ್ತು. ನಾಲ್ಕು-ಐದನೆಯ ದಿನಗಳೂ ಕಳೆದ ನಂತರ, ಮಧ್ಯಾಹ್ನದ ವೇಳೆಯಲ್ಲಿ ಸ್ವಲ್ಪ ದೂರ ಕುಳಿತು ಸುಧಾರಿಸಿಕೊಳ್ಳುತ್ತಿದ್ದ ಶುಭಕರನ ಬಳಿ ಬಂದ ಮೇಸ್ತ್ರಿ "ಸಾಬ್. ಕೆಳ್ಗೆ ಏನೇನೋ ಕಾಣ್ತಿದೆ" ಎಂದ.

ತುರ್ತಾಗಿ ಬಾವಿಯಕಡೆ ಓಡಿದ ಶುಭಕರ ನೀರು ಹೊರಹಾಕುತ್ತಿದ್ದ ಪಂಪ್​ಗಳು ಶಾಂತವಾರುವುದನ್ನು ಗಮನಿಸಿದ. ಕೊಳಚೆ ನೇರೆಲ್ಲ ಹೊರಹೊಗಿ, ಶುದ್ಧ ನೀರು ಬಾವಿಯೊಳಗೆ ಉಳಿದಿತ್ತು. ಕೊನೆಯವರೆಗೆ ಮೆಟ್ಟಿಲುಗಳು ಹೋಗುತ್ತಲೇ ಇದ್ದವು. ನೀರು ಮೇಲಿನಿಂದ ಸುಮಾರು ೭೦-ಅಡಿ ಕೆಳಗಿತ್ತು. ನೀರಿನ ಸಮದ ಸುಮಾರು ಎರಡು ಅಡಿ ಕೆಳಗೆ ಅಸ್ಫುಟ ವಸ್ತುಗಳು ಕಾಣಿಸುತ್ತಿದ್ದವು.

"ಥ್ಯಾಂಕ್ಸ್. ಈಗ ಜೋಪಾನವಾಗಿ-ನಿಧಾನವಾಗಿ ನೀರು ಪಂಪ್ ಮಾಡಿ. ಖಾಲಿ ಆಗಬೇಕು-ಆದರೆ ಆ ವಸ್ತುಗಳಿಗೆ ಯಾವ ಗಾಯವೂ ಆಗಬಾರದು" ಶುಭಕರ ಹೇಳಿದ.

"ಆಯ್ತು, ಸಾಬ್" ಎಂದವನೇ‌ ಮೇಸ್ತ್ರಿ ಕೆಲಸಗಾರನೊಬನನ್ನು ಕೆಳಗೆ ಕಳುಹಿಸಿದ. ಶುಭಕರ ನೋಡುತ್ತ ಬಾವಿಕಟ್ಟೆಯನ್ನು ಒರಗಿ ಅಲ್ಲಿಯೇ‌ ನಿಂತ. ಪಂಪ್​ಗಳು ನೀರನ್ನು ಪುನಃ ನಿಧಾನವಾಗಿ ಹೀರ ತೊಡಗಿದವು.

****

ಲತೀಫ್ ತಾಜ್​ಮಹಲ್​ನೊಳಗೆ ಹೋಗಲು ಪಾರುಮಾಡಬೇಕಾದ ಸೆಕ್ಯೂರಿಟಿ-ಚೆಕ್​ಅನ್ನು ಯಶಸ್ವಿಯಾಗಿ ಪಾರು ಮಾಡಿ ತಾಜ್​ಮಹಲ್​ನ ಲಾಲ್-ದರ್ವಾಝಾದಲ್ಲಿ ನಿಂತು ಆ ಬಿಳಿ-ಕಟ್ಟಡವನ್ನು ನೋಡುತ್ತಿದ್ದ. ಆವರಣದ ಒಳಗೆ-ತಾಜ್​ಮಹಲ್​ನ ಮುಂದಿರುವ ಹೂದೋಟದಲ್ಲಿ ಸ್ವಲ್ಪ ಮೊದಲೇ ಬಂದು ನಿಂತಿದ್ದ ಲತೀಫ್​ನ ಸಹೋದ್ಯೋಗಿ ಅಬ್ದುಲ್ ಅವನ ಕಣ್ಣಿಗೆ-ಕಣ್ಣು ಮಿಲಾಯಿಸಿ, ಅತಿಸೂಕ್ಷ್ಮವಾಗಿ ತಲಿ ಕುಲುಕಿ, ತಕ್ಷಣ ಬೇರೆಡೆ ನೋಡಿದ. ಈ‌ ಮೂಕ-ಸಂವಾದದಿಂದ ಲತೀಫನಿಗೆ ತನ್ನ ತಂಡದ ಉಳಿದ ಮೂರು ಮಂದಿ-ಬಿಲ್ಲಾ, ಶರೀಫ್ ಮತ್ತು ಬಷೀರ್ ಕೂಡ ತಾಜ್ ಆವರಣದೊಳಗೆ ಬಂದಿರುವುದು ಖಚಿತವಾಯಿತು.

ತಾಜ್ ಹೊರಗಿದ್ದ ಸೆಕ್ಯೂರಿಟಿ-ಚೆಕ್​ ಬಂದೋಬಸ್ತಾಗಿದ್ದ ಕಾರಣ ಯಾವ ಆಯುಧವನ್ನೂ‌ ಆ ದಾರಿಯ ಮೂಲಕ ಸಾಗಣೆ ಮಾಡುವ ಹಾಗಿರಲಿಲ್ಲ. ಕಾಝಿ ಹೂಡಿದ ಯೋಜನೆಯ ಪ್ರಕಾರ ವ್ಯವಸ್ಥಾಪಡೆಯೊಂದು ಯಮುನಾ ನದಿಯ ಮೂಲಕ ತಾಜ್​ಮಹಲ್ ಹಿಂಭಾಗದಲ್ಲಿ 'ಆಪರೇಶನ್'ಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ದೋಣಿಯಲ್ಲಿ ಸಾಗಣೆ ಮಾಡಿಸಿ ನಿರ್ದಿಷ್ಟ ಸ್ಥಳದಲ್ಲಿ ಇರಿಸುವುದಾಗಿತ್ತು. ತಾಜ್ ಒಳಗೆ ಹೊಕ್ಕ ದಳ ಅಡಗಿಸಿಟ್ಟ ಆಯುಧ-ಸಿಡಿಮದ್ದುಗಳನ್ನು ಹುಡುಕಿ ವಶಪಡಿಸಿಕೊಂಡು, ತಾಜ್ ಒಳಗೆ ನುಗ್ಗಿ, ವಿಸ್ಫೋಟಕಗಳನ್ನು ಕಟ್ಟಡಕ್ಕೆ ಜೀವಾಧಾರವಾದ ಸ್ಥಳಗಳಲ್ಲಿ ಇರಿಸಿ, ಟೈಮರ್​ಗಳನ್ನು ತೊಡಗಿಸಿ ಪುನಃ ನೆದಿಯ ಮೂಲಕ ತಪ್ಪಿಸಿಕೊಂಡು ದೋಣಿ ಹತ್ತಿ ಪರಾರಿಯಾಗುವುದಾಗಿತ್ತು. ತಾಜ್​ಮಹಲ್​ ಆಪರೇಶನ್​ಗೆ ಮುಖಂಡನಾಗಿದ್ದ ಲತೀಫ್ ನಾಲ್ಕಾರು ದಿನ ಕಾಝಿ ಸಂಪಾದಿಸಿದ್ದ ತಾಜ್​ನ ನೆಲನಕ್ಷೆಯನ್ನು ನೋಡಿ ಅದನ್ನು ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿದ್ದ.

ನೋಡುವವರಿಗೆ ಅವರು ಯಾರೂ‌ ಆತಂಕವಾದಿಗಳಂತೆ ಕಾಣಿಸುತ್ತಿರಲಿಲ್ಲ. ಶಲ್ವಾರ್-ಪಗಡಿಗಳನ್ನು ತ್ಯಜಿಸಿ ಜೀನ್ಸ್-ಟೀಶರ್ಟ್​ಗಳನ್ನು ಧರಿಸಿದ್ದರು. ಗಡ್ಡ-ಮೀಸೆಗಳನ್ನು ಬೋಳಿಸಿಕೊಂಡು ಸಾಧಾರಣ ಯಾತ್ರಿಕರಂತ ಕಾಣಿಸುತ್ತಿದ್ದರು. ದರ್ವಾಝಾದಲ್ಲೊಬ್ಬ, ಒಳಗೆ ಹೂದೋಟದಲ್ಲಿಬ್ಬರು, ಕಾರಂಜಿ-ಕಟ್ಟೆಯ ಮೇಲೊಬ್ಬ ಮುಂದೆ ಮೇಲುಪಾಯದ ಮೇಲೊಬ್ಬ ಹೇಗೆ ಎಲ್ಲೆಡೆ ಹರಡಿಕೊಂಡು ಆಸಕ್ತ-ಪ್ರವಾಸಿಗಳಂತೆ ತಾಜ್​ಮಹಲ್​ಅನ್ನು ಪ್ರೇಕ್ಷಿಸುತ್ತಿದ್ದರು.

ಕೊಂಚ ಸಮಯದ ನಂತರ ಲತೀಫ್‌ ಜೇಬಿನಿಂದ ಕರ್ಚೀಫ್‌ ತೆಗೆದು ಮುಖ ಒರೆಸಿಕೊಂಡ. ಅವನ ತಂಡಕ್ಕೆ ಅದು ಸಂಕೇತವಾಗಿತ್ತು. ಐವರೂ ಭಯೋತ್ಪಾದಕರು ಬೇರೆ ಬೇರೆ ದಾರಿಗಳಿಂದ ತಜ್​ಮಹಲ್ ಹಿಂಭಾಗದ ಕಡೆ ಹೊರಟರು. ಲತೀಫ್ ಮತ್ತು ಬಿಲ್ಲಾ ತಾಜ್ ಬಲಭಾಗದಿಂದ ಹೊರಟರೆ, ಅಬ್ದುಲ್ ಮತ್ತು ಬಷೇರ್ ಎಡಭಾಗದಿಂದ ಹೊರಟರು. ಮೇಲುಪಾಯಿಯ ಮೇಲೆ ನಿಂತಿದ್ದ ಶರೀಫ್ ಪಕ್ಕದಲ್ಲಿದ್ದ ಮೆಟ್ಟಿಲುಗಳನ್ನಿಳಿದು ಹೊರಟ.

*****

"ಸಾಬ್-ಬಾವಿಯಲ್ಲಿ ನೀರು ಖಾಲಿಯಾಗಿದೆ" ಮೇಸ್ತ್ರಿ ಶುಭಕರನಿಗೆ ಹೇಳಿದ.

ಬಾವಿಯ ಬುಡದಲ್ಲಿ ಅನೇಕ ವಸ್ತುಗಳು ಕಾಣಿಸ ತೊಡಗಿದ್ದವು-ಪೆಟಾರಿಗಳು, ಕಲ್ಲಿನ ವಿಗ್ರಹಗಳು, ಮಣ್ಣಿನ ಜಾಡಿಗಳು ಇತ್ಯಾದಿ. ಶುಭಕರ "ಬನ್ನಿ ನೋಡೋಣ"‌ ಎಂದ.

"ಇಲ್ಲ ಸಾಬ್-ಹಳೆ ಹಾಳ್ಬಾವಿ ಒಳ್ಗೆ ನಾನ್ಬರಲ್ಲ. ಕೆಲಸಗಾರರನ್ನೆಲ್ಲ ಕಳಿಸ್ದೆ, ನಾನೂ ಹೋಗ್ತೀನಿ" ಎಂದು ಮೇಸ್ತ್ರಿ ಹೊರಟುಹೋದ.

ಶುಭಕರನಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ಅತೀನಿಗೂಢ ರಹಸ್ಯವೊಂದು ಬಹೀರಂಗವಾಗಲಿದೆಯೆಂದು ಗ್ರಹಿಸಿದ.ದೊಡ್ಡ ಟಾರ್ಚ್​ಒಂದನ್ನು ಹಿಡಿದು ಮೆಟ್ಟಿಲುಗಳನ್ನಿಳಿದು ಹೊರಟ. ಇನ್ನೂ ಮಧ್ಯಾಹ್ನವಾಗಿದ್ದರಿಂದ ಸಾಕಷ್ಟು ಬೆಳಕಿತ್ತು. ಬಾವಿಯ ಬುಡದವರೆಗೂ‌ ಮೆಟ್ಟಿಲುಗಳು ಹೋಗುತ್ತಿರುವುದು ಕಾಣಿಸಿತು. ಗೋಡೆಯನ್ನು ಹಿಡಿದು ನಿಧಾನವಾಗಿ ಕೆಳಗಿಳಿದು ಹೋದ. ಬುಡದಲ್ಲಿ ಒಂದು ೧೨-ಅಡಿ ಎತ್ತರವಾಗಿದ್ದ ಈಶ್ವರ-ಲಿಂಗವಿತ್ತು. ಕಟ್ಟಿದ್ದ ಪಾಚಿಯನ್ನು ಬೆರಳಲ್ಲಿ ಒರೆಸಿದಾಗ ಅದು ಅಮೃತಶಿಲೆಯದೆಂದು ತಿಳಿಯಿತು. ನೀರು ಸೋರದಂತೆ ಅರಗಿನಿಂದ ಮುಚ್ಚಿ ಧೃಡಪಡಿಸಿದ ಹತ್ತಾರು ಲೋಹದ ದೊಡ್ದ ಪೆಟಾರಿಗಳು ಸುತ್ತಲು ಬಿದ್ದಿದ್ದವು. ನೂರಾರು ವರ್ಷ ನೀರಿನಲ್ಲಿ ಬಿದ್ದಿದ್ದರೂ, ವಿಸ್ಮಯಕರವಾಗಿ ಆ ಲೋಹದ ಪೆಟಾರಿಗಳು ಕಿಲುಬು ಹಿಡಿದಿರಲಿಲ್ಲ. ದೆಹಲಿಯ ಕುತುಬ್​ಮಿನಾರ್ ಬಳಿ ಇರುವ, ತುಕ್ಕು ಹಿಡಿಯದ, ಪುರಾತನ ಕಾಲದ ಲೋಹದ ಕಂಬ ಮನಸ್ಸಿಗೆ ಬಂದು, ಶುಭಕರ ಪ್ರಾಚೀನ ಭಾರತದ ಲೋಹವಿಜ್ಞಾನ ಬಹಳ ಮುಂದುವರೆದಿತ್ತೆಂಬುದನ್ನು ಸ್ಮರಿಸಿಕೊಂಡ. ಸುತ್ತಲೂ ಮರದ ಅಂಟಿನೊಳಗದ್ದಿ ಜಲನಿರೋಧಕವಾಗಿಸಿದ ಬಟ್ಟೆಗಳಿಂದ ಬಾಯಿ ಕಟ್ಟಿದ ಹತ್ತಾರು ಅನೇಕ ಗಾತ್ರಾಕಾರಗಳ ಪಿಂಗಾಣಿ ಜಾಡಿಗಳು ಬಿದ್ದಿದ್ದವು. ಬಟ್ಟೆ ಅಲ್ಲಲ್ಲಿ ಕೊಳೆತು ಲಡ್ಡಾಗಿದ್ದರೂ, ಜಾಡಿಗಳ ಮುಚ್ಚಳಗಳಿಗೆ ಹಾಕಿದ್ದ ಅರಗು ಭದ್ರವಾಗಿದ್ದರಿಂದ ಅವುಗಳೊಳಗೂ ನೀರು ಸೋರಿರಲಾದದೆನಿಸಿತು. ಕೆಲವು ಮುರಿದ ಜಾಡಿಗಳು ಕಂಡರೂ ಅವುಗಳೊಳಗೇನಿದದ್ದಿರಬಹುದೆಂದು ಊಹಿಸಲಾಗದಂತೆ ಮಾಯವಾಗಿದ್ದವು.

*****

ಸಂಜೆ-ಸೂರ್ಯ ಮುಳುಗುವ ಸಮಯವಾಗಿತ್ತು, ಮಳೆ ಹನಿಯುತ್ತಿತ್ತು; ಜನಸಂಚಾರ ಕಡಿಮೆಯಾಗಿತ್ತು. ಐವರೂ‌ ತಾಜ್ ಹೊರಭಾಗದಲ್ಲಿ ಸಂಧಿಸಿದರು. ಸುತ್ತ ಯಾರೂ ಇರಲಿಲ್ಲ. ಲತೀಫನ ಎದೆ ನೂರು-ಮೈಲಿ ವೇಗದಲ್ಲಿ ಓಡುತ್ತಿತ್ತು. ಬೆವರಿಳಿಯಲಾರಂಭಿಸಿದಾಗ ತನ್ನ ತೋಳಿನಲ್ಲೇ ಒರೆಸಿಕೊಂಡ. ಕಾಝಿ ಹೇಳಿದಂತೆ ಆಕ್ರಮಣ-ಸಲಕರಣೆಗಳು ಒಂದು ದೊಡ್ಡ ಹಸಿರು ಬಣ್ಣದ ಕಿಟ್​ನೊಳಗೆ ಕಾಯುತ್ತಿದ್ದವು. ಮಂಡಿಯೂರಿ ಕುಳಿತ ಲತೀಫ್ ಝಿಪ್ ಎಳೆದು ಕಿಟ್ಟನ್ನು ತೆಗೆದ. ಒಂದು ಎ.ಕೆ.೫೬-ರೈಫಲ್, ನಾಲ್ಕು ಆಟೋಮ್ಯಾಟಿಕ್-ಮಶೀನ್-ಪಿಸ್ಟಲ್​ಗಳು, ಮೂರು ನೇರವಾಗಿ-ಕ್ರೂರವಾಗಿದ್ದ ಚೂರಿಗಳು, ೪೦-ಕೆ.ಜಿ. ಆರ್-ಡಿ-ಎಕ್ಸ್-ಪ್ಲಾಸ್ಟಿಕ್​-ಎಕ್ಸ್​ಪ್ಲೋಸಿವ್, ೨೦ ಡೆಟೋನೇಟರ್​ಗಳು, ಮತ್ತು ೨೦ ಟೈಮರ್​ಗಳು ಕಿಟ್ನೊಳಗಿದ್ದವು. ಜೊತೆಗೆ ವಿಸ್ಫೋಟಕಗಳನ್ನು ಇಡಬೇಕಾದ ಸ್ಥಳಗಳನ್ನು ತೋರಿಸುವ ತಾಜ್​ಮಹಲ್​ನ ಒಂದು ನೆಲನಕ್ಷೆ.

ಶರೀಫ್ ಒಂದು ರೈಫಲ್ ಮತ್ತು ಒಂದು ಚೂರಿಯನ್ನು ಕೈಗೆತ್ತಿಕೊಂಡ. ಬಷೀರ್, ಬಿಲ್ಲಾ, ಲತೀಫ್ ಮತ್ತು ಅಬ್ದುಲ್ ಕೈಗಳಿಗೆ ಒಂದೊಂದು ಮಶೀನ್-ಪಿಸ್ಟಲ್ ಸೇರಿತು. ಜೊತೆಗೆ ಲತೀಫ್ ಚೂರಿಯೊಂದನ್ನು ತನ್ನ ನಡುಪಟ್ಟಿಗೆ ಸೇರಿಸಿಕೊಂಡು ಮತ್ತೊಂದನ್ನು ಅಬ್ದುಲ್ ಕೈಗೆ ಕೊಟ್ಟ. ಪ್ಲಾಸ್ಟಿಕ್-ಎಕ್ಸ್​ಪ್ಲೋಸಿವ್ ತಲಾ ೨೦-ಕೆ.ಜಿ.ಯ ಎರಡು ಬ್ಯಾಕ್​ಪ್ಯಾಕ್​ಗಳಲ್ಲಿದ್ದವು. ಎರಡೂ ಬ್ಯಾಕ್​ಪ್ಯಾಕ್​ಗಳಿಗೆ ಹತ್ತು ಟೈಮರ್, ಹತ್ತು ಡೆಟೋನೇಟರ್​ಗಳನ್ನು ಸೇರಿಸಿದರು. ಒಂದನ್ನು ಬಿಲ್ಲಾ ಹಿಡಿದು ಲತೀಫ್‌​ನ ಜೊತೆ ಹೊರಟ, ಮತ್ತೊಂದನ್ನು ಅಬ್ದುಲ್ ಹಿಡಿದು ಬಷೇರ್ ಜೊತೆ ಹೊರಟ.

ಯೋಜನೆಯ ಪ್ರಕಾರ ನಾಲ್ವರು ತಾಜ್​ಮಹಲ್ ಒಳಗೆ ಬಾಂಬ್​ಗಳನ್ನು ಜೋಡಿಸಿ ಟೈಮರ್ ಶುರು ಮಾಡಿ ಬರುವವರೆಗು ಇಬ್ಬರು ಮರೆಯಲ್ಲಿ ನಿಂತು ಅನಿರೀಕ್ಷಿತ ವಿಪತ್ತುಗಳ ವಿರುದ್ಧ ಕಾಯುವುದಿತ್ತು. ಗಡಿಯಲ್ಲಿ ತಂಡದವನೊಬ್ಬ ಹತನಾಗಿದ್ದರಿಂದ, ಕಾವಲಿಗೆ ಉಳಿದವ ಶರೀಫ್‌ ಒಬ್ಬನೆ.

ಲತೀಫ್, ಅಬ್ದುಲ್, ಬಷೀರ್ ಮತ್ತು ಬಿಲ್ಲಾ ತಾಜ್​ಮಹಲ್​ನೊಳಗೆ ಹೊಕ್ಕಿ ಬಾಂಬ್​-ಸ್ಥಾಪನೆಗೆ ಸಮಯ ಸಾಧಿಸುತ್ತಿದ್ದರು. ಮರೆಯಲ್ಲಿ ಓಡಿಯಾಡುತ್ತಿದ್ದ ಶರೀಫ್ ಮೂಲೆ ತಿರುಗಿದಾಗ ಸೆಕ್ಯೂರಿಟಿ-ಗಾರ್ಡ್ ಒಬ್ಬನ ಮುಖಕ್ಕೆದುರಾದ. ಯೋಚಿಸದೆ ತನ್ನ ಎ.ಕೆ-೫೬​ಅನ್ನು ಮೇಲಕ್ಕೆತ್ತಿ ಕುದುರೆ ಒತ್ತಿದಾಗ ಸೆಕ್ಯೂರಿಟಿ-ಗಾರ್ಡ್ ನೆಲಕ್ಕುರುಳಿದ. ನಿಶ್ಯಬ್ಧವಾಗಿದ್ದ ಸಂಜೆಯಲ್ಲಿ ಬಂದೂಕಿನಿಂದ ಗುಂಡು ಹಾರಿದ ಶಬ್ಧ ಕವುಡಾಗಿಸುವಂತಿತ್ತು. ಆ ಕ್ಷಣದಲ್ಲಿ ಅಪಾಯದ ಅರಿವಾದ ಶರೀಫ್ ಉಳಿದ ನಾಲ್ವರೊಡನಿರಲು ಒಳಗೋಡಿದ.

ಶಬ್ಧವನ್ನು ಕೇಳಿ ಸಿಕ್ಯೂರಿಟಿ-ಫೋರ್ಸ್ ತನಿಖೆ ಮಾಡಲು ಬಂದಾಗ ಬಂದೂಕಿನಿಂದ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಗಾರ್ಡ್​ನನ್ನು ಕಂಡು ತಾಜ್​ಮಹಲ್ ಒಳಗೆ ಹೋಗಲು ಪ್ರಯತ್ನಿಸಿದರು. ಒಳಗಿದ್ದ ಭಯೋತ್ಪಾದಕರ ಗುಂಡು-ಮಳೆಗೆ ಎದುರಾದ ಸೆಕ್ಯೂರಿಟಿ-ಫೋರ್ಸ್ ಕಟ್ಟಡಕ್ಕೆ ಹಾನಿಯಾಗುವುದನ್ನು ಹೆದರಿ ನಿಂತಾಗ ಬಿಕ್ಕಟ್ಟು ಸ್ಥಾಪನೆಯಾಯಿತು.

*****

ಎ.ಎಸ್.ಐ-ಲೆಬೋರೆಟರಿಗೆ ಒಯ್ದು ಪರೀಕ್ಷಿಸಲೆಂದು ಸಣ್ಣ ಜಾಡಿಯೊಂದನ್ನು ಕೈಯಲ್ಲಿ ಹಿಡಿದು ಶುಭಕರ ಕೌತುಕನಾಗಿ ಮೇಲೆ ಹತ್ತಲಾರಂಭಿಸಿದ. ಹತ್ತುತ್ತ ಈ‌ ಶೋಧನೆಯ ಬಗ್ಗೆ ಯೋಚಿಸುತ್ತಿದ್ದ ಅವನಿಗೆ ಅದರ ಸಂಕೀರ್ಣ-ಪರಿಣಾಮದ ಅರಿವಾಯಿತು. ಬೆರಗಾದ ಅವನು ತನ್ನ ಚಿಂತನೆಗಳ ವಿನ್ಯಾಸ ಮಾಡಿಕೊಳ್ಳಲು ಅಲ್ಲಿಯೇ ಮೆಟ್ಟಲುಗಳ ಮೇಲೆ ಅಂಬರದಾಚೆಯ ವಿಸ್ತಾರವನ್ನು ದಿಟ್ಟಿಸಿ ನೋಡುತ್ತಿರುವಂತೆ ಕುಳಿತು, ಕತ್ತಲಾಗುತ್ತಿದ್ದರಿಂದ ಕೈಯಲ್ಲಿ ಹಿಡಿದಿದ್ದ ಟಾರ್ಚ್​ಅನ್ನು ಆಲಸ್ಯಕರವಾಗಿ ಅತ್ತಿತ್ತ ಆಡಿಸುತ್ತಿದ್ದ. ಅಚಾನಕವಾಗಿ ಅವನು ಮೇಲಿನಿಂದ ಎಂಟನೆ ಮಹಡಿಯ ಕಟ್ಟೆಯ ಮೇಲೆ ಕುಳಿತಿರುವುದನ್ನು ಗಮನಿಸಿ ಬಲಕ್ಕಿದ್ದ ಕೊಠಡಿಯ ಒಳಗೆ ಬೆಳಕು ಹರಿಸಿದ. ಕತ್ತಲಾವರಿಸಿದ್ದ ಮೂಲೆಗೆ ಬೆಳಕು ಹರಿದಾಗ ಅಲ್ಲಿದ್ದ ಸಣ್ಣದೊಂದು ಬಾಗಿಲು ಅವನ ಕಣ್ಣಿಗೆ ಬಿತ್ತು. ಎದ್ದು ಅದರ ಬಳಿ ಹೋದ. ಲೋಹದ ಬಾಗಿಲಾಗಿತ್ತು, ಹಿಡಿಯನ್ನು ಹಿಡಿದು ಎಳೆದ. ಕಿಲುಬು ಹಿಡಿದಿದ್ದ ತಿರುಗಣೆ ಅಲುಗಾಡಲಿಲ್ಲ. ಇನ್ನೂ‌ ಸ್ವಲ್ಪ ಶಕ್ತಿ ಹರಿಸಿದಾಗ ಲೋಹಕ್ಕೆ-ಲೋಹ ತಿಕ್ಕುವ ಶಬ್ಧದೊಂದಿಗೆ ಬಾಗಿಲು ತೆರೆಯಿತು. ಹಿಂದೆ ಹಳಸಲಾದ ಧೂಳು-ವಾಸನೆ, ಕತ್ತಲು ತುಂಬಿದ ಸುಮಾರು ಮೂರು-ಅಡಿ ಎತ್ತರ, ಎರಡು-ಅಡಿ ಅಗಲದ ಸುರಂಗಮಾರ್ಗ ಉತ್ತರ ದಿಕ್ಕಿಗೆ ಹೊರಟಿತ್ತು.

ಶಭಕರ ಸುರಂಗದ ಒಳಹೊಕ್ಕ.ಇಟ್ಟಿಗೆಗಳಿಂದ ಮಾಡಿದ ಗೋಡೆ, ನೆಲ, ಸುಣ್ಣದ ಗಾರೆಯ ಛಾವಣಿಗಳಿದ್ದು, ಅಲ್ಲಲ್ಲೇ ಮುರಿದು ಬಿದ್ದ ಸುಣ್ಣದ ಹಿಂದೆ ಗೆದ್ದಲು ಹಿಡಿದ ಮರದ ತೊಲೆಗಳು ಕಾಣಿಸುತ್ತಿದ್ದವು. ಸುಮಾರು ೧೦-೧೫-ಮೀಟರ್ ಕುಕ್ಕರಗಾಲಿನಲ್ಲಿ ಕುಳಿತು ಮುನ್ನಡೆದ ಮೇಲೆ ಸುರಂಗ ನಿಂತು ನಡೆಯುವಷ್ಟು ದೊಡ್ಡದಾಗಿ ಕವಲೊಡೆಯಿತು. ಒಂದು ಕವಲು ಎಡಕ್ಕೆ ಪಶ್ಚಿಮ ದಿಕ್ಕಿಗೆ ಹೋದರೆ ಮತ್ತೊಂದು ಉತ್ತರಕ್ಕೆ ಮುಂದುವರೆಯುತ್ತಿತ್ತು. ಉತ್ತರದಲ್ಲಿ ತಾಜ್ ಕಟ್ಟಡವಿದೆಯೆಂದು ಗಣಿಸಿದ ಶುಭಕರ ಆ ದಿಕ್ಕಿನ ಕವಲನ್ನೇ ಹಿಡಿದು ನಡೆಯಲಾರಂಭಿಸಿದ. ಸುಮಾರು ಅರ್ಧ ಕಿಲೋಮೀಟರ್ ದೂರ ನಡೆದ ನಂತರ ಮತ್ತೊಂದು ಬಾಗಿಲು ಅಡ್ಡವಾಯಿತು. ಸಂಪೂರ್ಣವಾಗಿ ಗೆದ್ದಲು ಹಿಡಿದು ಧೂಳಾಗಿದ್ದ ಬಾಗಿಲೊಳಗೆ ಸುಲಭವಾಗಿ ಸೇರ್ಪಡೆ ಸಿಕ್ಕಿತು.

ತಾನು ನಡೆದಿರುವ ಅಂತರ, ದಿಕ್ಕುಗಳನ್ನು ಎಣಿಕೆ ಮಾಡಿದ್ದ ಶುಭಕರ ಆಗಲೇ ತಾನು ತಾಜ್​ಮಹಲ್​ನ ನೆಲಮಾಳಿಗೆಯಲ್ಲಿರುವುದಾಗಿ ನಿರ್ಧರಿಸಿದ್ದ. ಗೋಡೆಯೊಡೆಯದೆ ತನ್ನ ಲಕ್ಷ್ಯ ಪ್ರಾಪ್ತವಾಯಿತೆಂದು ಹರ್ಷವಾಯಿತು. ಸುತ್ತಲೂ ಟಾರ್ಚ್-ಬೆಳಕು ಬಿಟ್ಟು ನೋಡಿದ. ದೊಡ್ಡ ಸಭಾಂಗಣದಂತಹ ಕೋಣೆಯಲ್ಲಿರುವುದು ಗೊತ್ತಾಯಿತು. ನೆಲದಲ್ಲಿ ಸುಣ್ಣ ಮತ್ತಿತರ ರಂಗುಗಳಿಂದ ಬರೆದ ರಂಗೋಲಿ ಚಿತ್ರಗಳು ಕಾಣಿಸಿದವು. ಗೋಡೆಗಳ ಮೇಲೆ ಅಲ್ಲಲ್ಲೆ ಓಂಕಾರ ಹಾಗು ಸ್ವಸ್ತಿಕಗಳ ಚಿತ್ರಗಳಿದ್ದವು. ಸಂಪೂರ್ಣ ನಿಶ್ಯಬ್ಧ ಆವರಿಸಿತ್ತು. ಶುಭಕರ ನಿಧಾನವಾಗಿ ನಡೆದು ಹೋದ. ಅವನ ಹೆಜ್ಜೆಗಳ ಸಪ್ಪಳ ದೂರದ ಗೋಡೆಗಳಿಂದ ಪ್ರತಿದ್ವನಿಸುತ್ತಿದ್ದವು. ಮೂಲೆಯೊಂದರಲ್ಲಿ ಯಜ್ಞಕುಂಡ ಕಾಣಿಸಿತು. ಅದರ ಸುತ್ತ ಗಾರೆ-ಮೆತ್ತಿದ-ಇಟ್ಟಿಗೆಗಳ ಗೋಡೆಯಿತ್ತು. ಶುಭಕರ ಯಜ್ಞಕುಂಡದ ಸುತ್ತ ಗಾಳಿಯಾಡಲು ಗೋಡೆಯಲ್ಲಿ ಕಿಂಡಿಗಳಿದ್ದವೆಂದು ಊಹಿಸಿದ. ಕೊಂಚ ಮುನ್ನಡೆಯಲು ಮೂಲೆಯಲ್ಲಿ ಹತ್ತಾರು ನಷ್ಟವಾದ ಅನೇಕ ದೇವ-ದೇವತೆಯರ ಶಿಲಾಶಿಲ್ಪಗಳು ಕಾಣಿಸಿದವು. ಢಮರು ಕಟ್ಟಿದ ತ್ರಿಶೂಲವೊಂದು ಗೋಡೆಗೊರಗಿ ನಿಂತಿತ್ತು. ವಿಸ್ಮಿತನಾಗಿ ಶುಭಕರ ನಡೆದಿದ್ದ. ಸಭಾಂಗಣದ ಕೊನೆಯಲ್ಲಿ ಬಾಗಿಲಿಲ್ಲದ ವಾಸ್ಕಲ್ಲಿತ್ತು. ಅದರ ಹೊಸ್ತಿಲು ದಾಟಿ ಮೊಗಸಾಲೆಯೊಂದಕ್ಕೆ ಪ್ರವೇಶಿಸಿದ. ಮೊಗಸಾಲೆಯ ಎರಡೂ ಬದಿಯಲ್ಲಿ ಇಪ್ಪತ್ತಕ್ಕೂ‌ ಹೆಚ್ಚು ಕೋಣೆಗಳಿದ್ದವು. ಎಲ್ಲ ಕೋಣೆಗಳಲ್ಲೂ ಬಾಗಿಲು-ರಹಿತ ಚೌಕಟ್ಟುಗಳಿದ್ದವು. ಒಂದು ಕೋಣೆ ಕಣಜವಾಗಿ ತೋರಿದರೆ, ಮತ್ತೊಂದರೆಲ್ಲಿ ಅನೇಕ ಆಕಾರಗಳ ಮಸಿ ಹಿಡಿದ ದೀಪಗಳಿದ್ದವು. ಒಂದರಲ್ಲಿ ಅಡಿಗೆಗೆ ಬೇಕಾಗುವ ದೊಡ್ಡ-ದೊಡ್ಡ ಪಾತ್ರೆ-ಭಾಂಡ-ಹಾಪೆಗಳು; ಮತ್ತೊಂದರೆಲ್ಲಿ ಲೋಹದ ದೇವ-ದೇವತೆಗಳ ಮೂರ್ತಿಗಳಿದ್ದವು. ಬೇರೊಂದರಲ್ಲಿ ಒಡೆದ ಹೂಜಿ-ಜಾಡಿಗಳಿದ್ದವು; ಇನ್ನೂವೊಂದರಲ್ಲಿ ಶ್ರೀಚಕ್ರ ಮತ್ತಿತರ ಮಂಡಲಗಳ ಚಿತ್ರಗಳಿದ್ದವು. ಕೊನೆಯಲ್ಲಿ ಕೊಂಚ ದೊಡ್ಡದಾಗಿದ್ದ ಕೋಣೆಯಲ್ಲಿ ಒಲೆಗುಂಡಗಳು, ಅವುಗಳೊಳಗೆ ಸುಟ್ಟು ಭಸ್ಮವಾದ ಸೌದೆ ಅದು ಅಡಿಗೆಮೆನೆಯೆಂದು ಸೂಚಿಸುತ್ತಿತ್ತು.

ಶುಭಕರ ಸಂಪೂರ್ಣವಾಗಿ ಬೆರಗಾಗಿದ್ದ. ಅಡಿಗೆಮನೆಯಿಂದ ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿದ್ದವು. ಅವುಗಳ ಮೇಲೇರಿ ಸಾಗಿದ. ಮೂರು-ನಾಲ್ಕು ಮಹಡಿಯಷ್ಟು ಮೆಟ್ಟಲುಗಳನ್ನೇರಿದಾಗ ಎಲ್ಲೋ‌ ತಾಜ್​ಮಹಲ್​ನ ಮೇಲಿನ ಮಹಡಿಗಳಲ್ಲಿರುವಹಾಗೆನಿಸಿತು. ಮೆಟ್ಟಿಲುಗಳು ಮೂರನೆಯ ಮಹಡಿಯ ಕೋಣೆಯೊಂದರ ಕಪಾಟಿನಲ್ಲಿ ತೆರೆಯಿತು. ಹೊರಬಂದು ಸುತ್ತ ನೋಡಿದಾಗ ಕಪಾಟಿನ ಬಾಗಿಲು ಕಾಣದಿರುವಂತೆ ಅಕ್ಕ-ಪಕ್ಕದ ಗೋಡೆಯಂತಿತ್ತು.

*****

ಮೊದಲ ಮಹಡಿಯಲ್ಲಿ ಲತೀಫ್‌ ಕಿಡಿಕಿಡಿಯಾಗಿದ್ದ. ಕೆಲಸ ಮುಗಿಸಿ ಸದ್ದಿಲ್ಲದೆ ಪರಾರಿಯಾಗುವ ಬದಲು ತಾಜ್​ಮಹಲ್​ನೊಳಗೆ ಒತ್ತೆಯಾಳುಗಳ ಸಮೇತ ಬಂಧಿತರಾಗಿದ್ದರು. ಆಪರೇಶನ್​ನಲ್ಲಿ ಈ‌ ಅಂಕಣ ಬರೆದಿರಲಿಲ್ಲ.

ಲತೀಫ್‌ ಈ ಅಚಾತುರ್ಯಕ್ಕೆ ಕಾರಣನಾದ ಶರೀಫ್​ನನ್ನು ತರಾಟೆಗೆ ತೆಗೆದುಕೊಂಡು, ಅವನನ್ನೂ, ತಾನೂ ಸೇರಿದಂತೆ ಬಿಲ್ಲಾ ಮತ್ತು ಅಬ್ದುಲ್​ರನ್ನೂ ನಾಲ್ಕು ದಿಕ್ಕುಗಳನ್ನು ಕಾಯುವ ಕೆಲಸಕ್ಕೆ ಹಚ್ಚಿದ. ಒಳಗಿದ್ದ ಪ್ರವಾಸಿಗಳು ಒತ್ತೆಯಾಳುಗಳಾದರು. ಅವರಿಂದ ಅಡಚಣೆಯಾಗಬಾರದೆಂದು ಎರಡನೆ ಮಹಡಿಯಲ್ಲಿದ್ದ ಕೋಣೆಯೊಂದರ ಬೀಗವನ್ನು ಒಡೆದು ಅವರನ್ನು ಅದರೊಳಗೆ ಕೂಡಿಟ್ಟು, ಬಷೀರ್​ನಿಗೆ ಅವರನ್ನು ಕಾಯುವ ಕೆಲಸ ಅಂಟಿಸಿದ. ಮಶೀನ್-ಪಿಸ್ಟಲ್ ಹಿಡಿದ ಬಷೀರ್ ಬೋನಿನೊಳಗಿನ ಹುಲಿಯಂತೆ ಅತ್ತಲಿಂದಿತ್ತ ಓಡಾಡತೊಡಗಿದ.

ಭಯೋತ್ಪಾದಕರು, ಅವರ ಕೈಯಲ್ಲಿ ಗನ್​ಗಳು, ಅವರು ಸೆರೆಹಿಡಿದ ಒತ್ತೆಯಾಳುಗಳು ಎಲ್ಲವನ್ನೂ ಮೇಲಿನಿಂದ ಗೋಡೆಯ ಮರೆಯಲ್ಲಿ ನಿಂತು ನೋಡುತ್ತಿದ್ದ ಶುಭಕರನಿಗೆ ಕ್ಷಣಾರ್ಧದಲ್ಲಿ ನಡೆದಿದ್ದ ಘಟನೆಯ ಸಾರಾಂಶ ಅರ್ಥವಾಯಿತು. ಅವನು ಬಷೀರನ ಕಡೆ ನೋಡಿದ ಕ್ಷಣದದಲ್ಲಿಯೇ ಬಷೀರನೂ ಅವನೆಡೆ ಕಣ್ಣುಹಾಯಿಸಿದ. ಶುಭಕರನ ಹಿಂದೆ ದೀಪ ಬೆಳಗುತ್ತಿದ್ದ ಕಾರಣ ಬಷೀರನಿಗೆ ಶುಭಕರನ ನೆರಳು ಕಾಣಿಸಿತು. ತನಿಖೆ ಮಾಡಲೆಂದು ಒತ್ತೆಯಾಳುಗಳ ಕೋಣೆಯ ಚಿಲಕ ಹಾಕಿ ಮೇಲಿನ-ಮಹಡಿಗೆ ಹತ್ತಿದ.

ಶುಭಕರನಿಗೆ ಓಡುವ ದಾರಿಯಿರಲಿಲ್ಲ. ಪುನಃ‌ ಕಪಾಟಿನೊಳಗೆ ಹೋಗಿ ಮೆಟ್ಟಿಲು-ಸುರಂಗ ಹಿಡಿಯುವ ಸಮಯವಿರಲಿಲ್ಲ. ಮೇಲಾಗಿ ಅಲ್ಲಿಗೂ‌ ಭಯೋತ್ಪಾದಕ ಹಿಂಬಾಲಿಸಿದರೆ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಉತ್ಕಟನಾಗಿ ನಿಂತಲ್ಲಿಯೇ ನಿಂತ.

ಗನ್ ​ ಹಿಡಿದ ಕೈ ಮುಂದಿಟ್ಟು ಬಷೀರ್ ಅತ್ತಿತ್ತ ನೋಡುತ್ತ ತಾನು ಕಂಡ ನೆರಳಿನ ಮೂಲವನ್ನು ಹುಡುಕತೊಡಗಿದ. ಮರೆಯಲ್ಲಿ ನಿಂತಿದ್ದ ಶುಭಕರ ಕತ್ತಲಿನ ಮೂಲೆಗೊತ್ತಿ ನಿಂತ. ಬಷೀರ್ ತಾನಿದ್ದ ಕೋಣೆಯಡೆ ತಿರುಗಿದಾಗ ಶುಭಕರ ಗಟ್ಟಿಯಾಗಿ ಉಸಿರೆಳೆದುಕೊಂಡ. ಅದು ಬಷೀರ್​ನ ಕಿವಿಗೆ ಬಿದ್ದಾಗ ಅವನು ಶಬ್ಧದತ್ತ ತಿರುಗಿ ನೋಡಿದ. ಇಬ್ಬರ ಕಣ್ಣೂ ಮಿಲಾಯಿಸಿತು. ಬಷೀರ್ ಮಾತನಾಡದೆ ಗನ್​ನಿಂದ ಸನ್ನೆ ಮಾಡಿ ಬೆಳಕಿಗೆ ಬರುವಂತೆ ಹೇಳಿದ. ಕೈ ಮೇಲೆತ್ತಿ ಶುಭಕರ ಹೊರಗೆ ಬಂದ.

ಅದೇ ಸಮಯಕ್ಕೆ ಸರಿಯಾಗಿ ಹೊರಗಿದ್ದ ಸೆಕ್ಯೂರಿಟಿ-ಫೋರ್ಸ್ ತಂಡವೊಂದು ತಾಜ್​ಗೆ ದಾಳಿಯಿಟ್ಟಿತ್ತು. ಗೋಲಿಬಾರಿಯ ಶಬ್ಧ ಕೇಳಿದ ಬಷೀರ್​ನ ಧ್ಯಾನ ಅತ್ತ ಹೋದಾಗ ಶಕ್ತಿಜನಕ ಅಡ್ರಿನಾಲಿನ್-ಅಂತಃಸ್ರಾವ ಶುಭಕರನ ರಕ್ತದಲ್ಲಿ ಹರಿದುಕ್ಕಲಾರಂಭಿಸಿತ್ತು. ಶುಭಕರ ಬೆಕ್ಕಿನಂತೆ ಬಷೀರ್​ನ ಮೇಲೆ ಹಾರಿ ಅವನ ಗನ್ ಹಿಡಿದ ಕೈಯನ್ನು ತನ್ನಿಂದ ದೂರ ತಿರುಗಿಸಿ ಗಟ್ಟಿಯಾಗಿ ಹಿಡಿದ. ಇಬ್ಬರೂ‌ ನೆಲಕ್ಕುರುಳಿದಾಗ ಬಷೀರ್​ನ ಗನ್ ಕೈತಪ್ಪಿ ದೂರ ಜಾರಿಹೋಯಿತು. ಬಷೀರ್ ತರಬೇತಿ ಹೊಂದಿದ್ದ ಸೈನಿಕನಾಗಿದ್ದರೂ ಶುಭಕರನೇನು ನಿತ್ರಾಣಿಯಾಗಿರಲಿಲ್ಲ. ಮೇಲಾಗಿ ಬಷೀರ್ ಅವನಿಂದ ವಿರೋಧವನ್ನು ನಿರೀಕ್ಷಿಸಿರಲಿಲ್ಲವಾದ್ದರಿಂದ ಆಶ್ಚರ್ಯಧಾತು ಶುಭಕರನ ಪರದಲ್ಲಿತ್ತು. ಇಬ್ಬರೂ‌ ನೆಲದಲ್ಲಿ ಹೊಡೆದಾಡ ತೊಡಗಿದರು. ಕೆಲವೇ ಕ್ಷಣಗಳ ನಂತರ ಬಷೀರ್ ಮೇಲುಗೈ ಸಾಧಿಸಿ ಶುಭಕರನ ಮೇಲೆ ಕೂತು ಅವನ ಕತ್ತಿನ ಮೇಲೆ ಕೈಯಿಟ್ಟ.

ಬಷೀರ್​ನ ಸೂರ್ಮಾ ತುಂಬಿದ ಕಪ್ಪು ಕಣ್ಣುಗಳು ಕ್ರೌರ್ಯದಿಂದ ಮಿನುಗುತ್ತಿದ್ದವು. ಒಂದು ದುಷ್ಟ ನಗೆ ಬೀರಿ ಶುಭಕರನ ಕತ್ತು ಹಿಸುಕಲಾರಂಭಿಸಿದ. ಉಸಿರು ಕತ್ತರಿಸಿಹೋದ ಶುಭಕರನ ಮುಖ ಹದಿನೈದು ಸೆಕೆಂಡುಗಳ ನಂತರ ನೀಲಿಯಾಗಲಾರಂಭಿಸಿತು. ಅರ್ಧ ನಿಮಿಷದ ನಂತರ ಕಣ್ಣುಗಳುಬ್ಬಿ ಕತ್ತಲಾವರಿಸ ತೊಡಗಿತು. ಯುವಕನಾಗಿದ್ದಾಗ ಎನ್.ಸಿ.ಸಿ-ಕೆಡೆಟ್​ಆಗಿದ್ದ ಶುಭಕರ ತನ್ನ ತರಬೇತಿಯನ್ನು ನೆನಪಿಸಿಕೊಳ್ಳುತ್ತ ದೇಹವನ್ನು ಸಡಿಲಗೊಳಿಸಿಕೊಂಡ. ಅದನ್ನು ಕಂಡ ಬಷೀರ್ ಒಂದು ಕ್ಷಣ ತನ್ನ ಜಾಗ್ರತೆಯನ್ನು ಕಳೆದುಕೊಂಡಾಗ ಶಕ್ತಿಯ ಕೊನೆ ಅಂಶವನ್ನುಪಯೋಗಿಸಿ ಬಷೀರ್​ನನ್ನು ತಳ್ಳಿ, ಏದುಸಿರೆಳೆಯುತ್ತ ಎದ್ದು ತಲೆಯಲ್ಲಾಡಿಸುತ್ತ ನಿಂತು ಕಣ್ಕತ್ತಲೆ ಹೋಗಿಸಿಕೊಳ್ಳಲು ಪ್ರಯತ್ನಿಸಿದ.

ಸಮತೋಲನ ಕಳೆದುಕೊಂಡ ಬಷೀರ್ ಕೆಳಗೆ ಬಿದ್ದಾಗ ಅವನ ಗಮನ ನೆಲದಮೇಲೆ ಬಿದ್ದಿದ್ದ ತನ್ನ ಮಶೀನ್-ಪಿಸ್ಟಲ್ ಮೇಲೆ ಬಿತ್ತು. ಅದನ್ನು ತೆಗೆದುಕೊಳ್ಳಲೆಂದು ಮೊಣಕಾಲು-ಕೈಗಳನ್ನೂರಿ ಹೊರಟಾಗ ಅವನನ್ನು ಗಮನಿಸಿದ ಶುಭಕರ ಓಡುತ್ತ ಬಂದು ಕೆಳಗಿದ್ದ ಬಷೀರ್​ನ ಪಕ್ಕೆಗೆ ಬಲವಾಗಿ ಒದ್ದ. ಸ್ತಬ್ಧನಾದ ಬಷೀರ್ ಮುಖ ಮೇಲೆ ಮಾಡಿಕೊಂಡು ಉರಿಳಿ, ಏಳಲು ಪ್ರಯತ್ನಿಸಿದ. ಸ್ವರಕ್ಷಣೆಯ ಆತಂಕದಲ್ಲಿ ಶುಭಕರ ಬಷೀರ್​ನ ಪಕ್ಕೆಗೆ ಮತೆರಡು ಬಾರಿ ಒದ್ದ. ತ್ರಾಣವನ್ನು ಸಂಪೂರ್ಣವಾಗಿ ಕಳೆದುಕೊಂಡ ಬಷೀರ್​ನ ಜ್ಞಾನ ತಪ್ಪಿತು.

ಶುಭಕರ ಸುಸ್ತಾಗಿ ಮಂಡಿಯಮೇಲೆ ಕೈಯೂರಿ ದೀರ್ಘವಾಗಿ ಉಸಿರಾಡುತ್ತ ನಿಂತ. ಇನ್ನು ಮುಂದಿನ ಕೆಲಸ ಸ್ಪಷ್ಟವಾಗಿತ್ತು. ಹೊರಗಿನ ಸೆಕ್ಯೂರಿಟಿ-ಫೋರ್ಸ್​ಗೆ ಒಳಗಿರುವ ಆತಂಕವಾದಿಗಳ ಸಂಖ್ಯೆಯಾಗಲಿ, ಅವರು ಮಾಡಿಕೊಂಡಿರುವ ರಕ್ಷಾ-ವ್ಯವಸ್ತೆಗಳಾಗಲಿ, ಒತ್ತೆಯಾಳುಗಳನ್ನು ಕೂಡಿಟ್ಟಿರುವ ಸ್ಥಳವಾಗಲಿ ಗೊತ್ತಿರಲಿಕ್ಕಿಲ್ಲವೆಂಬುದು ಊಹಿಸಿದ. ತಾನು ಹಿಂತಿರುಗಿ ಈ ಗುಪ್ತಮಾಹಿತಿಯನ್ನು ತಿಳಿಸಿದರೆ ಆತಂಕವಾದಿಗಳನ್ನು ಸದೆಬಡೆಯಲು ಸಾಧ್ಯವಾದೀತೆಂದು ಅರ್ಥ ಮಾಡಿಕೊಂಡ. ಕೂಡಲೆ ಕಪಾಟಿನ ಹಿಂದಿದ್ದ ಮೆಟ್ಟಿಲುಗಳನ್ನಿಳಿದು, ಅಡಿಗೆಮನೆ-ಮೊಗಸಾಲೆಗಳನ್ನು ದಾಟಿ, ಸುರಂಗ ಹಿಡಿದು ಬಾವಿಯೊಳಗಿಂದಾಚೆ ಬಿದ್ದ.

ಇಷ್ಟು ಹೊತ್ತಿಗೆ ಸಂಪೂರ್ಣ ಕತ್ತಲಾಗಿತ್ತು. ಶುಭಕರ ತನ್ನ ಎ.ಎಸ್.ಐ-ಪರಿಚಯವನ್ನು ಹೇಳಿ, ಸೆಕ್ಯೂರಿಟಿ-ಫೋರ್ಸ್​ನ ಕಮಾಂಡರ್​ನ ಜೊತೆ ಮಾತನಾಡಿ ಒಳಗಿನ ಎಲ್ಲ ವಿಚಾರವನ್ನು ತಿಳಿಸಿದ. ಜಾಗರೂಕವಾಗಿ ಬಾವಿ, ಸುರಂಗ ಹಾಗು ತಾಜ್ ನೆಲಮಾಳಿಗೆಯ ವಿಚಾರಗಳನ್ನು ಲೋಪ ಮಾಡಿದ.

ನಂತರ ಎಲ್ಲವೂ‌ ಬೇಗನೆ ನಡೆದುಹೋಯಿತು. ಸೆಕ್ಯೂರಿಟಿ ಫೋರ್ಸ್ ದಾಳಿ ಇಟ್ಟಾಗ ಕೂಗಿದರೂ ಉತ್ತರಿಸದ ಬಷೀರ್​ನನ್ನು ನೋಡಲು ಲತೀಫ್ ಬಲ್ಲಾನನ್ನು ಕಳಿಸಿದ್ದ. ಜ್ಞಾನ ತಪ್ಪಿ ಬಿದ್ದಿದ್ದ ಬಷೀರ್​ನನ್ನು ಕಂಡು ಬಿಲ್ಲಾ ಕೆಳಗೆ ಕೂಗಿದಾಗ ನೋಡಲು ಅಬ್ದುಲ್ ಮೇಲೆ ಬಂದಿದ್ದ. ಹಾಗಾಗಿ ಆಕ್ರಮಣ-ದಳ ಬಹು ಕಡಿಮೆ ವಿರೋಧವನ್ನೆದುರಿಸಿತು. ಕದನಾನಂತರ ಶರೀಫ್ ಮತ್ತು ಲತೀಫ್ ಹತರಾಗಿ ಬಿದ್ದಿದ್ದರು, ಅಬ್ದುಲ್ ಮತ್ತು ಬಿಲ್ಲಾ ಸೆರೆ ಸಿಕ್ಕಿರು. ಭಯೋತ್ಪಾದಕರ ಐದು ಗನ್​ಗಳು, ೪೦-ಕೆ.ಜಿ ಪ್ಲಾಸ್ಟಿಕ್-ಎಕ್ಸ್​ಪ್ಲೋಸಿವ್ಸ್ ಮತ್ತಿತರ ಆಯುಧ-ಸಲಕರಣೆಗಳು ಬರಾಮತ್ತಾಗಿದ್ದವು.


ನವದೆಹಲಿ

ಶುಭಕರ, ವಸಿಷ್ಟ್ ಪುನಃ‌ ವಸಿಷ್ಟ್​ರ ಕ್ಯಾಬಿನ್​ನಲ್ಲಿ ಮಾತನಾಡುತ್ತಿದ್ದರು.

"ಇದೇನು ಅನ್ಯಾಯ, ಸರ್? ಇನ್ನೂ‌ ನಿಮ್ಮ ಮಿನಿಸ್ಟ್ರಿ ಈ ವಿಚಾರದ ಬಗ್ಗೆ ನಿಧಾನ ಮಾಡುತ್ತಿದೆಯೇ?" ಶುಭಕರ ಉಗ್ರತೆಯ ಹತ್ತಿರವಿದ್ದ ಅಸಮಾಧಾನದಿಂದ ಹೇಳಿದ.

"ಇದೇನು ಹೊಸತೇ,‌ ಶುಭಕರ್? ಇದೆಲ್ಲ ಘಂಟೆ-ದಿನಗಳಲ್ಲಾಗುವ ಕೆಲಸವೇ?" ವಸಿಷ್ಟ್ ಪ್ರತಿವಾದಿಸಿದರು

"ಹಾಗಾದರೆ ಆ ಸುರಂಗ-ಬಾವಿಗಳನ್ನೇಕೆ ಮತ್ತೆ ಸೀಲ್ ಮಾಡಿಸಿದ್ದೀರಿ?"

"ಅದೂ‌ ನನ್ನ ಕೈಯಲ್ಲಿಲ್ಲ-ಆದರೆ ನಿನಗಾಗಿ ಹೋರಾಡಿದ್ದಕ್ಕೆ ಈಗೊಂದು ಗುಡ್-ನ್ಯೂಸ್ ಕೊಡಲೆಂದೇ ನಿನಗೆ ಹೇಳಿಕಳಿಸಿದ್ದು"

"ಅಂದರೆ?"

"ಇಗೂ ಅನ್​ಸೀಲಿಂಗ್-ಆರ್ಡರ್. ನಿನ್ನ ರೆಸರ್ಚ್ ಪಬ್ಲಿಶ್ ಮಾಡಲೊಪ್ಪದಿದ್ದರೂ‌ ನಿನ್ನ ರಿಸರ್ಚ್ ಮುಂದುವರೆಸಬಹುದು"

ಶುಭಕರ ವಸಿಷ್ಟ್ ಕೊಟ್ಟ ಪತ್ರವನ್ನು ತಗೆದು ನೋಡಿದ. "ಇದೇನು? ಲಿಮಿಟೆಡ್ ಆರ್ಡರ್ರೇ?"

"ನಿನಗಂತೂ ಅನ್​ಲಿಮಿಟೆಡ್. ಆದರೆ ಅಕ್ಯಾಡಮಿಯಾ, ಇಂಟರ್​ನ್ಯಾಶನಲ್-ಎಕ್ಸ್​ಪರ್ಟ್ಸ್​ಗಳನ್ನು ಕರೆಯೋಕ್ಕೆ ಅವಕಾಶವಿಲ್ಲ. ಕೇವಲ ಎ.ಎಸ್.ಐ-ನಿನ್ನ ಟೀಮ್​ಗೆ ಸೀಮಿತ. ಇದರ ಬಗ್ಗೆ ಒಂದೇಒಂದು ಪದ ಹೊರಗೆ ಲೇಕ್​ಆದರೆ ತಕ್ಷಣ ಎಲ್ಲ ರಿಸರ್ಚ್ ಬಂದ್. ಸಾರಿ, ನಿನಗಾಗಿ ನಾನಿಷ್ಟೀ ಮಾಡಲಾಗಿದ್ದು"

"ನಿಮ್ಮ ಮಿನಿಸ್ಟ್ರಿ ಸತ್ಯ ಎಷ್ಟು ದಿನ ಅಂತ ಮುಚ್ಚಿಡತ್ತೆ? ಎಷ್ಟೇ ಮುಚ್ಚಿಟ್ಟರೂ ಒಂದಲ್ಲಾ-ಒಂದು ದಿನ ನಿಜ ಆಚೆ ಬರುತ್ತೆ, ಅವತ್ತು ಏನು ಮಾಡ್ತೀರ? ಜನರಿಗೆ ಏನು ಉತ್ತರ ಕೊಡ್ತೀರ?"

"ಶುಭಕರ್, ರಿಸರ್ಚ​ಗೆ ಅವಕಾಶವೇ ಇಲ್ಲದಿರೋ ಸ್ಥಿತಿಯಿಂದ ಇವತ್ತು ರಿಸರ್ಚ್ ಸಾಧ್ಯವಾಗುವ ಸ್ಥಿತಿ ಬಂದಿದೆ. ಒಂದಲ್ಲಾ ಒಂದು ದಿನ ನಿಜಾನೂ ಹೊರಗೆ ಬರುತ್ತೆ. ನಿಧಾನವಾಗಿ ಎವಲ್ಯೂಶನ್ ಆಗಲಿ ಬಿಡು-ರೆವಲ್ಯೂಶನ್ ಬೇಡ. ಬಿಲೀವ್-ಮಿ:ನಿನ್ನ ಶ್ರಮ ವ್ಯರ್ಥವಾಗೋಕ್ಕೆ ಬಿಡೋದಿಲ್ಲ. ಅದು ನನ್ನ ಆಶ್ವಾಸನೆ"

"ಥ್ಯಾಂಕ್ಸ್" ಎಂದು ಶುಭಕರ ಮುಂದಿನ ಕಾರ್ಯ-ಯೋಜನೆ ಹಾಕತೊಡಗಿದ.

Monday, January 15, 2007

ದ ದಶಾವತಾರ ಕೋಡ್



ದ ದಶಾವತಾರ ಕೋಡ್ (a la The da Vinci Code)2007 KKNC ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೊದಲ ಬಹುಮಾನ ಬಂದಿದೆ.
2007 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.

The Dashavatara Code
Language: Kannada

Category: Suspense-Thriller, Mystery

Abstract: This is a story based in part on Dan Brown's best seller The da Vinci Code.

Keywords: da vinci code, dashavatara, kannada, buddha, halayudha, balarama, fiction, thriller, buddhism, suspense


Disclaimer: This story has no resemblance to any person or organization past or present, nor does it make claims to historical accuracy , although many facts do indeed have a historical basis. This is a work of fiction, of course, based loosely on the bestseller/blockbuster The da Vinci Code. The plot, characters and situations have been modified beyond recognition.


ಪ್ರೊಫೆಸರ್ ನಾಗಾನಂದನಿಗೆ ಏನೂ ತೋಚುವಂತಿರಲಿಲ್ಲ. ಪಕ್ಕದಲ್ಲೊಬ್ಬ ವಿಚಿತ್ರ ಪೋಷಾಕು ಧರಿಸಿ, ತಲೆಗೆ ರಿವಾಲ್ವರ್ ಹಿಡಿದು ನಿಂತಿದ್ದರೆ ಯಾರಿಗೆ ತಾನೆ ಏನಾದರೂ ತೋಚೀಯಾತು?


ನಾಗಾನಂದ ಚೆನ್ನೈ ವಿಶ್ವವಿದ್ಯಾಲಯದಲ್ಲಿ ಧರ್ಮ-ಇತಿಹಾಸ ವಿಭಾಗದಲ್ಲೊಬ್ಬ ಪ್ರೊಫೆಸರ್. ಸ್ವಲ್ಪವೇ ಹೊತ್ತಿನ ಮುಂಚೆ ಎಂದಿನಂತೆ ಕಾಲೇಜಿನಿಂದ ಹಿಂತಿರುಗಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಬಾಗಿಲ ಘಂಟೆ ಬಾರಿಸಿತು. ತೆರೆದು ನೋಡಿದರೆ ರಕ್ತ-ಕೆಂಪು ವರ್ಣದ ಫಾದ್ರಿ ನಿಲುವಂಗಿಯಂತಹ ವಸ್ತ್ರ ಧರಿಸಿದ್ದ ವ್ಯಕ್ತಿ. ಬೆರಳಲ್ಲಿ ಕಮಲಹೂವಿನಾಕಾರದ ವಿಚಿತ್ರ ಉಂಗುರ. ಮಿಡಿಯುವುದರೊಳಗೆ ಆ ವ್ಯಕ್ತಿ ರಿವಾಲ್ವರ್ ತೋರಿಸಿ ಮನೆಯೊಳಗೆ ನುಗ್ಗಿದ್ದ.


ನಾಗಾನಂದ ಅವಿವಾಹಿತ -ಮನೆಯಲ್ಲಿ ಒಬ್ಬನೇ, ಹಾಗಾಗಿ ಯಾರೂ ಅವನ ಸಹಾಯಕ್ಕೆ ಇರಲಿಲ್ಲ. ಈಗ ಆ ಭಿಕ್ಕು "ನೀನು ಒಗ್ಗೂಡಿಸಿದ ಪುರಾವೆಗಳು ಯಾವುವು ಹೇಳು, ಪ್ರೊಫೆಸರ್; ಇಲ್ಲವಾದರೆ.." ಎಂದು ಬೆದರಿಸಿದ. ಆ ಭಿಕ್ಕುವಿನ ವೇಷ-ಭೂಷಣ ಕಂಡ ನಾಗಾನಂದನಿಗೆ ಆತ ಕೇಳುತ್ತಿರುವುದೇನೆಂದು ಬಿಡಿಸಿ ಹೇಳುವ ಅವಶ್ಯಕೆತೆ ಇರಲಿಲ್ಲ.


"ನೀವುಗಳು ಹೇಳಿದಂತೆ ಕೇಳಿಕೊಂಡು ಬಿದ್ದಿದ್ದೇನಲ್ಲ. ನಿಮಗಿನ್ನೇನು ತೊಂದರೆ? ಆ ಪುರಾವೆಗಳನ್ನಿಟ್ಟುಕೊಂಡು ಏನು ಮಾಡುತ್ತೀರ? ನನ್ನನ್ನು ಬಿಟ್ಟುಬಿಡಿಯೆಂದು ಪರಿಪರಿಯಾಗಿ ಬೇಡಿಕೊಂಡರೂ ಬೆನ್ನು ಹತ್ತಿದ ಬೇತಾಳದಂತೆ ನನ್ನನ್ನೇಕೆ ಕಾಡುತ್ತಿರುತ್ತೀರಿ?" ನಾಗಾನಂದನ ಧ್ವನಿಯಲ್ಲಿ ಅವನ ಕೋಪ, ಕಾರ್ಪಣ್ಯ ಬಿಂಬಿಸುತ್ತಿದ್ದವು.


"ನಿನ್ನ ಪುರಾವೆಗಳ ಮೂಲಗಳನ್ನೇ ನಾಶ ಮಾಡಿದರೆ ಉಸಿರೂ ಇರುವುದಿಲ್ಲ, ಕೊಳಲೂ ನುಡಿಸಲಾಗುವುದಿಲ್ಲ" ಹಂಗಿಸುವ ಧ್ವನಿಯಲ್ಲಿ ಭಿಕ್ಕು ಹೇಳಿದ. "ನಮ್ಮ ನಿಲುಕು ಎಷ್ಟರ ಮಟ್ಟಿಗಿದೆ ನಿನಗೆ ಗೊತ್ತೇ ಇದೆ, ಪ್ರೊಫೆಸರ್. ನೀನು ಪ್ರೂಫ್‌ಗಳು ಯಾವುವೆಂದು ಹೇಳಿದರೆ ಸಾಕು"


ನಾಗಾನಂದನಿಗೆ ತನ್ನ ಬಳಿ ಇದ್ದ ಮಾಹಿತಿ ಆ ಭಿಕ್ಕುವಿನ ಕಡೆಯವರಿಗೆ ನೇತುಹಾಕಿದ್ದ ಕತ್ತಿಯಂತೆ ಎಂದು ತಿಳಿದಿತ್ತು. ಆ ಮಾಹಿತಿ ಈ ಭಿಕ್ಕುವಿನ ಕೈಸೇರಿ ಮೂಲಗಳ ನಾಶನವಾದರೆ, ತನಗೆ ಉಳಿಗಾಲವಿಲ್ಲವೆಂಬುದೂ ಅರಿವಾಯಿತು. ಮನದಲ್ಲೇ ಧೃಡ ನಿರ್ಧಾರಕ್ಕೆ ಬಂದು ನಡುಗುವ ಮರ್ಮರ ಧ್ವನಿಯಲ್ಲಿ "ಹೂಂ, ಸರಿ, ಅಲ್ಲಿ ನನ್ನ ಕಂಪ್ಯೂಟರ್ ಟೇಬಲ್ ನಲ್ಲಿರುವ ಡ್ರಾನಲ್ಲಿ ಪಟ್ಟಿ ಇದೆ" ಎಂದ. ಡ್ರಾ ಒಳಗಿದ್ದದ್ದು ನಾಗಾನಂದನ ತಲಗೆ ತಾನು ಭಿಕ್ಕುವಿನ ವಿರುದ್ಧ ಉಪಯೋಗಿಸಲು ಯೋಗ್ಯವೆಂದು ಹೊಳೆದ ಏಕೈಕ ಆಯುಧ -ತನ್ನ ಪಿಸ್ತೂಲು.


"ನಿಧಾನವಾಗಿ ತೆಗೆದು ನನ್ನ ಕೈಗೆ ಕೊಡು. ಏನಾದರು ಹೆಚ್ಚು-ಕಡಿಮೆ ಪ್ರಯತ್ನಿಸಿದರೆ..." ಭಿಕ್ಕು ಬೆದರಿಕೆ ಹಾಕಿದಾಗ ನಾಗಾನಂದ ಟೇಬಲ್ ಕಡೆಗೆ ನಿಧಾನವಾಗಿ ಚಲಿಸ ತೊಡಗಿದ.


ನಾಗಾನಂದ ಡ್ರಾ ಒಳಗಿದ್ದ ಬಂದೂಕು ಹೊರತೆಗೆದು ಭಿಕ್ಕುವಿನಮೇಲೆ ಮರುಪ್ರಹಾರ ನಡೆಸುವ ಪ್ರಯತ್ನ ಮಾಡಿದಾಗ ಅಚ್ಚರಿಗೊಂಡ ಭಿಕ್ಕುವಿನ ಕೈಯಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಚಲಿಸಿತು. ಗುಂಡು ನೇರವಾಗಿ ನಾಗಾನಂದನ ಎದೆ ತಾಕಿದಾಗ ಕೆಂಪಗೆ ಕಾಯಿಸಿದ ಕಬ್ಬಿಣದ ಸಲಾಕೆಯಿಂದಿರಿದಂತಾಗಿ ನಾಗಾನಂದ ನೆಲಕ್ಕುರುಳಿದ. ಹತನಾಗಿ ಬಿದ್ದ ತನ್ನ ಬಲಿಪಶುವನ್ನು ಕಂಡ ಭಿಕ್ಕು ಸಂದಿಗ್ಧನಾಗಿ ಅಲ್ಲಿನಿಂದ ಪರಾರಿಯಾದ.


ಕೆಲ ನಿಮಿಷಗಳ ನಂತರ ನಾಗಾನಂದನಿಗೆ ಪುನಃ ಎಚ್ಚರವಾಯಿತು. 'ನಾನಿನ್ನೂ ಬದುಕಿದ್ದೇನೆಯೇ?' ಎಂದು ಯೋಚಿಸುತ್ತ, ಏದುಸಿರು ಏಳೆಯುತ್ತ ಮೇಲೆದ್ದ. ಆದರೆ ಅವನಿಗೆ ತಾನಿನ್ನು ಉಳಿಯುವುದಿಲ್ಲವೆಂಬುದು ಖಚಿತವಾಗಿತ್ತು. ಬಹಳಷ್ಟು ಕೆಲಸ ಬಾಕಿಯಿತ್ತು. ಮೊದಲಿಗೆ ಕಂಪ್ಯೂಟರ್ ಮುಂದೆ ಕುಳಿತು ಕೇಬೋರ್ಡಿನ ಮೇಲೆ ಏನೋ ಟೈಪ್ ಮಾಡಿದ. ನಂತರ ಹೊರಗಿನ ಕೋಣೆಗೆ ಹೋಗಿ ತನ್ನ ಮೇಜಿನ ಮೇಲಿದ್ದ ಪ್ಯಾಡಿನ ಮೇಲೆ ಬರೆಯಲಾರಂಭಿಸಿದ.



*****



"ಕಿಳಗಿಳಗಿಳಗಿಳ" ದಿನಕರನ ಮೋಬೈಲ್ ಕರೆ ಕೊಟ್ಟಿತು.


ದಿನಕರ ಅಮೇರಿಕಾದಲ್ಲಿ ವಾಸವಾಗಿದ್ದವ. ಮೂರು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ. ಇಂದು ಬೆಳಗ್ಗೆ ಚೆನ್ನೈಗೆ ಬಂದು ಅಮೇರಿಕನ್ ಎಂಬಸಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡಿದ್ದ. ಸ್ವಲ್ಪವೇ ಹೊತ್ತಿನಲ್ಲಿ ತನ್ನ ಹಳೆಯ ಸ್ನೇಹಿತ ನಾಗಾನಂದನ ಮನೆಗೆ ಹೋಗುವುದಿತ್ತು. ನಾಗಾನಂದನನ್ನು ಕಂಡು ಹಲವಾರು ವರ್ಷಗಳಾಗಿದ್ದವು. ಸಧ್ಯಕ್ಕೆ ರೆಸ್ಟೋರಾಂಟ್‌ನಲ್ಲಿ ತಿಂಡಿ ಮುಗಿಸಿ ಕಾಫಿ ಕುಡಿಯುತ್ತ ಕುಳಿತಿದ್ದ. ಫೋನ್ ಮೇಲೆ ಕಾಲರ್ ಐ.ಡಿ ನೋಡಿ ನಾಗಾನಂದನ ಮನೆ ಎಂದರಿವಾಯಿತು.


"ಹಲೋ..." ಫೋನ್ ಕೈಗೆತ್ತಿಕೊಂಡು ಮಾತನಾಡಿದ.


"ಮಿ. ದಿನಕರ್?" ನಾಗಾನಂದನ ಧ್ವನಿಯಲ್ಲ ಯಾರೋ ಬೇರೆ.


"ಹೌದು. ಯಾರು ಮಾತನಾಡುತ್ತಿರುವುದು?"


"ನಾನು ಇನ್ಸ್‌ಪೆಕ್ಟರ್ ಬ್ರಹ್ಮಾವರ್. ಪ್ರೊಫೆಸರ್ ನಾಗಾನಂದ್ ಮನೆಯಿಂದ. ನೀವು ಇಂದು ಪ್ರೊಫೆಸರ್ ಜೊತೆ ಭೇಟಿ ಮಾಡುವುದಿತ್ತಲ್ಲವೇ?"


"ಹೌದು. ಆ..."


"ತಕ್ಷಣ ಹೊರಟು ನಾಗಾನಂದ್ ಮನೆಗೆ ಬನ್ನಿ" ದಿನಕರನಿಗೆ ಮಾತನಾಡಲು ಅವಕಾಶ ಕೊಡದೆ ಫೋನಿನಿಂದ ಧ್ವನಿ ಬಂತು.


"ನೀ.." ಎನ್ನುವಷ್ಟರಲ್ಲಿ ಫೋನ್ ಲೈನ್ ಕತ್ತರಿಸಿ ಹೋಗಿತ್ತು. ಫೋನ್ ನಾಗಾನಂದನ ಮನೆಯಿಂದಲೇ ಬಂದಿತ್ತೆಂದು ಕಾಲರ್ ಐ.ಡಿ. ಇಂದ ಖಾತ್ರಿಯಾಗಿತ್ತು. ಹೇಗಿದ್ದರೂ ಹೋಗಲೇ ಬೇಕೆಂದು ಯೋಚಿಸಿ, ದಿನಕರ ಆಟೋರಿಕ್ಷಾ ಹಿಡಿದು ನಾಗಾನಂದನ ಮನೆಗೆ ಬಂದಿಳಿದ.


ಬಾಗಿಲಲ್ಲೇ ಇನ್ಸ್‌ಪೆಕ್ಟರ್ ಬ್ರಹ್ಮಾವರ್ ಕಾಯುತ್ತಿದ್ದ. ಗೇಟಿನಲ್ಲಿ ಕಾನ್ಸ್‌ಟೇಬಲ್ ಒಬ್ಬ ಕಾವಲು ನಿಂತಿದ್ದ. "ಮಿ. ದಿನಕರ್, ಪ್ರೊ. ನಾಗಾನಂದ್ ಮೃತರಾಗಿದ್ದಾರೆ" ಪೀಠಿಕೆ ಇಲ್ಲದೆ ಹೇಳಿದ. "ಒಳಗೆ ಬನ್ನಿ".


ತನ್ನ ಮಿತ್ರ ಇನ್ನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳುವುದರಲ್ಲಿ ಬ್ರಹ್ಮಾವರ್ ಜೊತೆ ಹೊರಗಿನ ಕೋಣೆಯಿಂದ ಹಾಯ್ದು ಒಳಗಿನ ಕೋಣೆಗೆ ತಲುಪಿದ್ದ. ಅಲ್ಲಿ ಒಂದು ವಿಚಿತ್ರ ದೃಷ್ಯ ಕಾದಿತ್ತು. ಕೋಣೆಯೊಳಗೊಂದು ಮರದ ನೇಗಿಲಿತ್ತು. ನೇಗಿಲಿಗೆ ಎರಡು ಬೆಳ್ಟ್‌ಗಳಿಂದ ಭಿಗಿಯಾಗಿ ಕಟ್ಟಿಕೊಂಡು ನೇಗಿಲು ಹೊತ್ತ ರೈತನಂತೆ ನೆಟ್ಟಗೆ ನಿಂತ ಶವ. ಕಣ್ಣುಗಳು ತೆರೆದೇ ಇದ್ದವು. ದಿನಕರ ಶವವನ್ನು ನಾಗಾನಂದನೇ ಎಂದು ಗುರುತಿಸಿದ.


"ಇದು ಕೊಲೆಗಾರನ ಕೆಲಸವಲ್ಲ" ಇನ್ಸ್‌ಪೆಕ್ಟರ್ ಹೇಳತೊಡಗಿದ. "ಬಾಗಿಲು ಒಳಗಿನಿಂದ ಬೀಗ ಹಾಕಿತ್ತು. ಗುಂಡು ಹಾರಿಸಿದ್ದು ಹೊರಗಿನ ಕೋಣೆಯಲ್ಲಿ -ಗೋಡೆಯ ಮೇಲೆ ರಕ್ತ ಚೆಲ್ಲಿರುವುದು ನೋಡಿದರೆ ತಿಳಿಯುತ್ತದೆ. ಗುಂಡು ತಿಂದ ನಂತರ ಇಲ್ಲಿ ಒಳಗೆ ಬಂದು ಕಂಪ್ಯೂಟರ್ ಮೇಲೆ ಕೆಲಸ ಮಾಡಿದ್ದಾರೆ -ಕೀಬೋರ್ಡ್ ಮೇಲೆ ರಕ್ತದ ಬೆರಳಚ್ಚುಗಳಿವೆ. ಹೊರಗಿನ ಕೋಣೆಯಲ್ಲಿ ತಮ್ಮೆ ಕೊನೆ ಸಂದೇಶವನ್ನೂ ತಮ್ಮ ಕೈಬರಹದಲ್ಲೇ ಬರೆದಿದ್ದಾರೆ -ಆ ಹಾಳೆ ಹಾಗು ಪೆನ್ ಮೇಲೂ ರಕ್ತದ ಬೆರಳಚ್ಚುಗಳಿವೆ. ನಂತರ ಬಂದು ಈರೀತಿ ನೇಗಿಲಿಗೆ ತಮ್ಮನ್ನೇ ತಾವು ಕಟ್ಟಿಕೊಂಡಿದ್ದಾರೆ. ನೀವು ನಾಗಾನಂದರನ್ನು ಭೇಟಿ ಮಾಡಲು ಬರುವವರಿದ್ದಿರಿ ಎಂದು ಅವರ ಡೈರಿಯಿಂದ ತಿಳಿಯಿತು, ಅಲ್ಲೇ ನಿಮ್ಮ ಫೋನ್ ನಂಬರ್ ಹಾಗು ಅಡ್ರಸ್ ಸಿಕ್ಕಿದ್ದು" ದಿನಕರನಿಗೆ ಯೋಚಿಸುವ ಸಮಯ ಕೊಡದೆ ಹೇಳಿದ ಬ್ರಹ್ಮಾವರ್. "ಇದರ ಅರ್ಥ ಏನೆಂದು ತಿಳಿದಿದೆಯೇ?" ಎಂದು ಮುಂದುವರಿಸಿದ.


ಗರ್ಭಿತ ಮೌನ ಆವರಿಸಿತು. ಭ್ರಾಂತಿಯಿಂದ ತಲೆಯಾಡಿಸುತ್ತ ದಿನಕರ ಇನ್ಸ್‌ಪೆಕ್ಟರ್ ಕಡೆ ನೋಡಿದ.


ಇನ್ಸ್‌ಪೆಕ್ಟರ್ ಹೊರಗಿನ ಕೋಣೆಗೆ ಹೋಗುತ್ತ "ದಿಸ್ ವೇ. ನಾಗಾನಂದರ ಕೊನೆ ಸಂದೇಶ ನೋಡುವಿರಂತೆ" ಎಂದ


ಭ್ರಮಿಷ್ಟನಂತೆ ಮಾತಾನಾಡದೆ ದಿನಕರ ಇನ್ಸ್‌ಪೆಕ್ಟರ್ ಹಿಂದೆ ನಡೆದ. ಟೇಬಲ್ ಮೇಲೆ ಒಂದು ಸ್ಕ್ರಾಚ್‌ಪ್ಯಾಡ್ ಇತ್ತು. ಪ್ಯಾಡಿನ ಮೇಲುಭಾಗ ಪುಸ್ತಕವೊಂದರಿಂದ ಮುಚ್ಚಿತ್ತು. ರಕ್ತದ ಕಲೆಗಳ ಮಧ್ಯೆ ದಿನಕರ ಓದಿದ:


BXL.234.102W

ಅರಮನೆಯಲ್ಲಿ ಶಾರದೆಯ ಪೀಠ

ಪೀಠದಲ್ಲಿ ಜ್ಞಾನ-ಬೊಕ್ಕಸ

ಬೊಕ್ಕಸದಲ್ಲಿ ದಹನ ವಾಣಿ


204.WB.X002

ಭದ್ರಕಾಳಿಯ ತವರೂರು

ತವರೂರಿನಲ್ಲಿ ವರ್ತಮಾನ-ಕೇಂದ್ರ

ಕೇಂದ್ರದಲ್ಲಿ ವೃಷಭನ ವೃತ್ತಾಂತ


ತಬ್ಬಿಬ್ಬಾದ ಮುಖಭಾವ ತೋರುತ್ತ ಪ್ಯಾಡ್ ಮೇಲಿದ್ದ ಪುಸ್ತಕ ಸರಿಸಲು ಕೈಚಾಚಿದ.


"ನೋ ಮಿ. ದಿನಕರ್. ಕ್ರೈಂ ಸೀನ್‌ನಲ್ಲಿ ಏನೂ ಬದಲಾಯಿಸುವಹಾಗಿಲ್ಲ" ಬ್ರಹ್ಮಾವರ್ ಹೇಳಿದ. "ಸಾಯುತ್ತಿರುವ ಮನುಷ್ಯ ಯಾವ ವಿಚಾರ ಕುರಿತು ಬರೆಯುತ್ತಿದ್ದಿರಬಹುದು?"


"ನಾ...ಊ... ತನ್ನ ಕೊಲೆಗಾರನ ಹೆಸರು ಹೇಳುವ ಪ್ರಯತ್ನ ಮಾಡುತ್ತಿರಬಹುದು... ಇಲ್ಲವೇ..." ತಡವರಿಸಿದ ದಿನಕರ.


"ಎಕ್ಸಾಕ್ಟ್‌ಲಿ, ಮಿ. ದಿನಕರ್, ಎಕ್ಸಾಕ್ಟ್‌ಲಿ. ಈಗ ಪ್ಯಾಡ್ ಮೇಲಿರುವ ಪುಸ್ತಕವನ್ನು ತೆಗೆಯುವೆ ನೋಡಿ" ಎಂದು ಪ್ಯಾಡಿನ ಮೇಲುಭಾಗವನ್ನು ಮುಚ್ಚಿದ್ದ ಪುಸ್ತಕವನ್ನು ಇನ್ಸ್‌ಪೆಕ್ಟರ್ ಕೈಗೆತ್ತಿಕೊಂಡ.


ದಿನಕರನ ಹೊಟ್ಟೆ ಪಾತಾಳಕ್ಕಿಳಿಯಿತು. ನಾಗಾನಂದ ಬರೆದಿದ್ದ ಮೊದಲ ಸಾಲಿನಲ್ಲಿ ದಿನಕರನ ಹೆಸರಿತ್ತು. ಇದರ ಅರ್ಥ ದಿನಕರನ ಮನಸ್ಸಿಗೆ ಒಸರಿಸುವ ಮುಂಚೆ ಬ್ರಹ್ಮಾವರ್ "ಮಿ. ದಿನಕರ್, ಪ್ರೊಫೆಸರ್ ನಾಗಾನಂದ್‌ಅವರ ಕೊಲೆ ಆಪಾದನೆ ಮೇಲೆ ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇನೆ. ಓಡುವ ಪ್ರಯತ್ನ ಮಾಡಬೇಡಿ, ಹ್ಯಾಂಡ್‌ಕಫ್ ತರುತ್ತೇನೆ" ಎನ್ನುತ್ತ ಒಳಗಿನ ಕೋಣೆಗೆ ಹೋದ.


ಆ ಕ್ಷಣಕ್ಕೆ ಸರಿಯಾಗಿ ತರುಣಿಯೊಬ್ಬಳು "ನಾನು ಚೆನ್ನೈ-ಹೆರಾಳ್ಡ್ ರಿಪೋರ್ಟರ್. ಏನೋ ಇನ್ಸಿಡೆಂಟ್ ನಡೆದಿದೆಯೆಂದು ನಮಗೆ ಫೋನ್ ಬಂದಿತ್ತು. ಈ ಅಡ್ರಸ್ ಕೊಡಲಾಗಿತ್ತು. ನೋಡಿ ಹೋಗೋಣವೆಂದು ಬಂದೆ" ಎನ್ನುತ್ತ ಬಾಗಿಲನ್ನು ಹಾಯ್ದು ಹೊರಗಿನ ಕೋಣೆಗೆ ಬಂದಳು. ಕತ್ತಿಗೆ ತನ್ನ ಫೋಟೋ ಹೊಂದಿದ್ದ ಚೆನ್ನೈ-ಹೆರಾಳ್ಡ್‌ನ ಬ್ಯಾಡ್ಜ್ ಒಂದನ್ನು ನೇತುಹಾಕಿಕೊಂಡಿದ್ದಳು. ಅದು ಅವಳ ಹೆಸರು ಪೂಜಾ ಎಂದು ಸಾರುತ್ತಿತ್ತು. ಕೈಬೆರಳಲ್ಲಿ ಬೀಗದ-ಕೈಯೊಂದನ್ನು ಸಿಕ್ಕಿಸಿಕೊಂಡಿದ್ದಳು.


ಟೇಬಲ್ ಕಡೆ ಹೊರಟಿದ್ದ ಬ್ರಹ್ಮಾವರ್ ತಿರುಗಿ ನೋಡಿದ. ಅವನ ಮುಖದಲ್ಲಿ ಸಿಟ್ಟು ಖನಗುತ್ತಿತ್ತು. ಮುಖ ಗಂಟು ಹಾಕಿ "ನೀನ್... ನೀವು ಒಳಗೆ ಹೇಗೆ ಬಂದಿರಿ. ಹೊರಗಿದ್ದ ಕಾನ್ಸ್‌ಟೇಬಲ್ ನಿಮ್ಮನ್ನು ತಡೆಯಲಿಲ್ಲವೇ?" ಎಂದು ರೇಗಿದ.


"ಕಾನ್ಸ್‌ಟೇಬಲ್? ಮೂಲೆ ಪೆಟ್ಟಿಗೆ ಅಂಗಡಿಯಲ್ಲಿ ಯಾರೋ ಒಬ್ಬ ಬೀಡಿ ಸೇದುತ್ತಿದ್ದ, ಅವನೇ ಇರಬೇಕು -ತಡೆಯಲಿಲ್ಲ" ಹಗುರವಾಗಿ ಹೇಳಿದಳು. ಅವಳು ಇನ್ಸ್‌ಪೆಕ್ಟರ್ ಕಡೆ ತಿರುಗಿದ್ದರಿಂದ ದಿನಕರನಿಗೆ ಬೆನ್ನು ಕೊಟ್ಟು ನಿಂತಿದ್ದಳು.


ಬ್ರಹ್ಮಾವರ್ ಪುನಃ ಟೇಬಲ್ ಕಡೆ ತಿರುಗಿ ಹೊರಟಾಗ ದಿನಕರ ಆತುರದಲ್ಲಿ ತನಗೆ ತೋರಿದ ಏಕೈಕ ಮಾರ್ಗವನ್ನಪ್ಪಿದ. ಥಟ್ಟನೆ ಓಡಿ ಎರಡು ಕೋಣೆಗಳ ಮಧ್ಯೆ ಇದ್ದ ಬಾಗಿಲನ್ನು ಜೋರಾಗಿ ಬಡಿದು ಬೋಲ್ಟ್ ಹಾಕಿದ. ಪೂಜಾ ತಿರುಗುವಷ್ಟರಲ್ಲಿ ಎರಡು ಬೆರಳನ್ನು ಅವಳ ಬೆನ್ನಿಗೆ ತಿವಿದು "ನನ್ನ ಕೈಯಲ್ಲಿ ಗನ್ ಇದೆ. ನಡಿ ಹೋಗುವ. ನಿನ್ನ ಬಳಿ ಏನೋ ವೆಹಿಕಲ್ ಇದೆ ಅಲ್ಲವೇ?" ಎನ್ನುತ್ತ ನಾಗಾನಂದನ ಅಂತಿಮ ಸಂದೇಶವಿದ್ದ ಹಾಳೆ ಹರಿದು ಜೇಬಿನಲ್ಲಿರಿಸಿಕೊಂಡ.


ಆಕೆ 'ಹೂಂ' ಎಂದು ತಲೆಯಾಡಿಸಿದಳು. "ಹಿಂದೆ ತಿರುಗಬೇಡ. ನಾನು ಹೇಳಿದಂತೆ ಕೇಳಿದರೆ ನಿನಗೇನು ತೊಂದರೆಯಾಗುವುದಿಲ್ಲ" ಎಂದ. ಇಷ್ಟು ಹೊತ್ತಿಗೆ ಇನ್ಸ್‌ಪೆಕ್ಟರ್ ಬಾಗಿಲು ಬಡಿಯಲಾರಂಭಿಸಿದ್ದ. ಮನೆಯ ಹೊರಬಿದ್ದು ಪೂಜಾಳ ಟೂವೀಲರ್ ಹತ್ತಿ ಹಿಂದೆ ಸವಾರಿ ಮಾಡುತ್ತ ದಿನಕರ ಕೊಲೆಯ ರಂಗದಿಂದ ಪರಾರಿಯಾದ.


ಹಿಂದೆ ಕೂತು ಸ್ವಗತವೆಂಬಂತೆ ಮಾತನಾಡುತ್ತ ತಾನು ಬಿದ್ದಿದ್ದ ಹಳ್ಳದ ಆಳವನ್ನು ಅಳೆಯಲಾರಂಭಿಸುತ್ತಿದ್ದ ದಿನಕರನ ಮಾತುಗಳು ವಾಹನ ಚಲಿಸುತ್ತಿದ್ದ ಪೂಜಾಳ ಕಿವಿಗೂ ಬಿದ್ದವು. ಕೆಲವೇ ಕ್ಷಣಗಳಲ್ಲಿ ಅವಳಿಗೆ ಪರಿಸ್ಥಿತಿಯ ಅರಿವಾಯಿತು. ತನ್ನ ಸ್ವಂತ ಲೋಕದಲ್ಲಿ ಕಳೆದು ಹೋಗಿದ್ದ ದಿನಕರನನ್ನು ಹಿಂದೆ ತಿರುಗಿ ನೋಡಿದಾಗ ಆತನ ಕೈಯಲ್ಲಿ ಗನ್ ಇಲ್ಲವೆಂಬುದು ಅರ್ಥವಾಯಿತು. ವಾಹನ ನಿಲ್ಲಿಸಿ, ಕೆಳಗಿಳಿದು ಧೈರ್ಯವಾಗಿ ದಿನಕರನನ್ನೆದುರಿಸಿ ನಿಂತಳು.


"ಗನ್..." ಕೈ ನೋಡಿಕೊಳ್ಳುತ್ತ ದಿನಕರ ಗೊಣಗಿದ.


"ನಿಮ್ಮ ಬಳಿ ಇಲ್ಲವೆಂದು ತಿಳಿದಿದೆ. ನೀವು ಕೊಲೆಗಾರರಲ್ಲವೆಂಬುದೂ ನನಗೆ ಅರಿವಾಗಿದೆ. ಆದರೆ ಪೋಲೀಸರು ಇದನ್ನು ಬೇರೆ ರೀತಿ ನೋಡುತ್ತಾರೆ. ನೀವೊಬ್ಬರೇ ಅಲ್ಲ ನಿಮ್ಮನ್ನು ಪರಾರಿ ಮಾಡಿದ ನಾನೂ ಕೂಡ ಮರ್ಡರ್ ಸಸ್ಪೆಕ್ಟ್" ಪರಿಸ್ಥಿತಿಯಲ್ಲಿ 'ಎಕ್ಸ್‌ಕ್ಲೂಸಿವ್ ಸ್ಟೋರಿ'ಒಂದನ್ನು ಕಾಣುತ್ತಿದ್ದ ರಿಪೋರ್ಟರ್ ಪೂಜಾ ಬುರುಡೆ ಬಿಟ್ಟಳು. "ಬೈ ದ ವೇ, ನೀವು?"


"ಓಹ್! ದಿನಕರ ಶಾಸ್ತ್ರಿ. ಡಾಕ್ಟರ್ ದಿನಕರ ಶಾಸ್ತ್ರಿ" ಎನ್ನುತ್ತ ಆಕೆಯ ಕೈ ಕುಲುಕಿದ.


ದಿನಕರ ಹೊಸ ಮಾಹಿತಿಯನ್ನು ತಲೆಯಲ್ಲಿ ಮೆಲುಕು ಹಾಕುವುದರೊಳಗೆ ಪುನಃ "ಮುಂದೆ? ಏನು ಮಾಡುವುದು?"


"ಗೊತ್ತಿಲ್ಲ! ಜೊತೆಗೆ ನನ್ನ ಹೆಸರು ಅಲ್ಲಿ ಏಕಿತ್ತು ಎನ್ನುವುದೂ ಅರ್ಥವಾಗುತ್ತಿಲ್ಲ. ಯೋಚಿಸಲೊಂದು ತಾಣ ಬೇಕು. ನನಗೆ ಈ ಊರಿನಲ್ಲಿ ನಾಗಾನಂದ ಒಬ್ಬನೇ ಪರಿಚಿತ. ಇಲ್ಲ ತಾಳು -ಜೀತ್ -ನಮ್ಮ ಜೊತೆ ಓದುತ್ತಿದ್ದ ಜೀತೇಂದ್ರ ಕೂಡ ಇಲ್ಲಿಯೇ ಇದ್ದಾನೆ. ನಾಗಾನಂದ ಹಾಗು ಜೀತ್ ಒಟ್ಟಿಗೆ ಕೆಲಸ ಮಾಡಿದ್ದರು. ಅವನ ಮನೆಯೇ ಸುರಕ್ಷಿತ ಸ್ಥಳ. ಜೊತೆಗೆ ನಾಗಾನಂದನ ವಿಚಾರ ಅವನಿಗೇನಾದರೂ ಗೊತ್ತಿರಬಹುದು"


"ನಡೆಯಿರಿ ಹಾಗಿದರೆ. ಅಡ್ರಸ್ ಹೇಳುವಿರಾ?" ಟೂವೀಲರ್ ಪುನಃ ಹತ್ತುತ್ತ ಕೇಳಿದಳು ಪೂಜಾ



*****



"ಹಂ‌ಂ... ನಾಗಾನಂದ್, ನಾನು ಜೊತೆಗೆ ಕೆಲಸ ಮಾಡುವುದು ಬಿಟ್ಟು ಹಲವು ವರ್ಷಗಳಾಗಿದ್ದವು. ಇತ್ತೀಚೆಗೆ ಹೆಚ್ಚು ಸಂಧಿಸಿಯೂ ಇರಲಿಲ್ಲ. ಆದರೆ ಈರೀತಿ ಅವನ ಕೊಲೆಯಾಗಿದೆಯೆಂದು ಕೇಳಿ ಬೇಸರವಾಗುತ್ತಿದೆ" ಜೀತ್ ಹೇಳಿದ. ದಿನಕರ ಹಾಗು ಪೂಜಾ ಜೀತ್ ಮನೆಗೆ ಬಂದಿದ್ದರು. ಜೀತ್‌ಗೆ ದಿನಕರ ತಕ್ಷಣ ಗುರುತು ಸಿಗದಿದ್ದರೂ ಹೆಸರು ಹೇಳಿದ ನಂತರ ಸ್ವಾಗತಿಸಿದ್ದ. ಡಿವೋರ್ಸ್ ಮಾಡಿಕೊಂಡಿದ್ದ ಜೀತ್ ಮನೆಯಲ್ಲಿ ಒಬ್ಬನೇ ಇದ್ದ. ಕಾಫಿ ಕುಡಿಯುತ್ತ ನಡೆದ ಸಂಗತಿಯನ್ನು -ನಾಗಾನಂದನ ಸಂದೇಶ, ತನ್ನ ಮೇಲಿನ ಆರೋಪಗಳನ್ನು ಬಿಟ್ಟು -ದಿನಕರ ವಿವರಿಸಿದ್ದ. ಇಷ್ಟು ಹೊತ್ತಿಗೆ ಘಂಟೆ ರಾತ್ರಿ ಹನ್ನೊಂದಾಗಿತ್ತು.


ಪೂಜಾ ಕೇಳಿದಳು "ನೇಗಿಲು! ಅದೇನು ವಿಚಿತ್ರ? ಏನಿದ್ದಿರಬಹುದು ಅದರ ಹಿಂದೆ?"


"ಓಹ್! ಹಲಾಯುಧ" ಜೀತ್ ಆರಾಮವಾಗಿ ಹೇಳಿದ


ಪೂಜಾಳ ಮೂಖ ಖಾಲಿಯಾಗಿತ್ತು. ದಿನಕರನ ಮುಖದಲ್ಲಿ ಸಂದೇಹ. "ಏನೂ? ನಿನಗೆ ಗೊತ್ತಿಲ್ಲವೇ? ದಿನಕರ್ ನಿನಗಂತೂ ಗೊತ್ತಿರಬೇಕು" ಎನ್ನುತ್ತ ಜೀತ್ ಎದ್ದ. ಪೂಜಾಳ ಕಡೆ ಬೆರಳು ಮಾಡಿ "ಬಾ ಇಲ್ಲಿ" ಎನ್ನುತ್ತ ಮನೆಯೊಳಗೆ ಹೋದ.


ಎರಡು ಅಡಿ ಎತ್ತರ ಹಾಗು ಸುಮಾರು ಹತ್ತು ಅಡಿ ಅಗಲವಾದ ದಶಾವತಾರ ವಿಗ್ರಹ ಸರಣಿ ಶೋಕೇಸಿನೊಳಗಿತ್ತು. "ಅದನ್ನು ನೋಡದೆ ದಶಾವತಾರಗಳು ಯಾವುವು ಹೇಳು ನೋಡೋಣ" ಜೀತ್ ಪೂಜಾಳಿಗೆ ಹೇಳಿದ.


"ಮತ್ಸ್ಯ, ಕೂರ್ಮ, ವರಾಹ, ರಾಮ, ಕೃಷ್ಣ, ಬುದ್ಧ, ಆಮೇಲೆ...ಹೂಂ ನಾರಸಿಂಹ... ಕಲ್ಕಿ.." ಎಂದು ತಡವರಿಸಿದಳು ಪೂಜ.


"ಈಗ ತಿರುಗಿ ನೋಡಿ ಹೇಳು"


"ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಷುರಾಮ" ಮುಂದಿನ ಅವತಾರ ಕಂಡು ಪೂಜಾ ಜೀತ್ ಕಡೆ ತಿರುಗಿದಳು.


"ಹಲಾಯುಧ, ಹೂಂ ಮುಂದೆ" ಜೀತ್ ಸೇರಿಸಿದ


"ರಾಮ, ಕೃಷ್ಣ, ಕಲ್ಕಿ" ಮುಗಿಸಿದಳು ಪೂಜಾ. "ಅರೆ! ಬುದ್ಧ ಇಲ್ಲವೇ ಇಲ್ಲ...?"


"ಕರಕ್ಟ್! ಬುದ್ಧ ಇಲ್ಲ. ಹಲಾಯುಧ, ಜೊತೆಗೆ ಸ್ಥಳಗಳು ಸ್ವಲ್ಪ ಹೆಚ್ಚು ಕಡಿಮೆ"


"ಹಲಾಯುಧ? ಅಂದರೆ ಬಲರಾಮ?" ಸಂಪೂರ್ಣ ಗೊಂದಲದಲ್ಲಿ ಕೇಳಿದಳು ಪೂಜಾ


"ಮಣ್ಣಂಗಟ್ಟಿ. ಎಲ್ಲ ಬುದ್ಧನನ್ನು ಸೇರಿಸಲು ಮಾಡಿದ ತರಲೆ" ಜೀತ್ ಸಿಟ್ಟಿನಿಂದ ಹೇಳಿದ.


"ಆದರೆ, ಆದರೆ..."


"ಬುದ್ಧನಿಗೆ ಹಿಂದೂ ಧರ್ಮಕ್ಕೆ ಯಾವ ಸಂಬಂಧವೂ ಈಲ್ಲ. ಯೋಚಿಸು -ಎಲ್ಲ ಅವತಾರಗಳಿಗೆ ಒಂದು ಗುರಿ, ಧ್ಯೇಯ ಇದೆ. ಮತ್ಸ್ಯ ಪ್ರಳಯದಲ್ಲಿ ಸಪ್ತ-ಋಷಿಗಳಿಗೆ ದಾರಿ ತೋರಿಸಿ, ಕೂರ್ಮ ಸಮುದ್ರ ಮಥನದಲ್ಲಿ ಮಂದಾರಪರ್ವತವನ್ನು ಎತ್ತಿ ಹಿಡಿದು, ವರಾಹ ಹಿರಣ್ಯಾಕ್ಷನನ್ನು ಕೊಂದು, ಭೂದೇವಿಯನ್ನು ರಕ್ಷಿಸಿ, ನರಸಿಂಹನು ಹಿರಣ್ಯಕಷಿಪುವನ್ನು ಕೊಂದು, ಪ್ರಹ್ಲಾದನನ್ನು ರಕ್ಷಿಸಿ, ಪರಷುರಾಮ ಧರ್ಮಭ್ರಷ್ಟರಾದ ಕ್ಷತ್ರಿಯರನ್ನು ಸಂಹರಿಸಿ, ರಾಮನು ತಾಟಕಿ, ರಾವಣಾಸುರ-ಕುಂಭಕರ್ಣರನ್ನು ವಧಿಸಿ, ಕೃಷ್ಣನು ಕಂಸನನ್ನು ಕೊಂದು, ಗೀತೆಯನ್ನು ಬೋಧಿಸಿ, ಕುರುಕ್ಷೇತ್ರದಲ್ಲಿ ಧರ್ಮವನ್ನು ಎತ್ತಿ ಹಿಡಿದು ಹೀಗೆ ಎಲ್ಲಾ ಅವತಾರಗಳು ಗುರಿಗಳನ್ನು ಸಾಧಿಸಿವೆ. ಬುದ್ಧ ಸಾಧಿಸಿರುವುದೇನನ್ನು?"


"ಬೌದ್ಧ ಧರ್ಮ ಸ್ಥಾಪನೆ ಮಾ..."


"ಹೂಂ ಬೌದ್ಧ ಧರ್ಮ! ವೇದದ ಮಹತ್ತನ್ನೇ ಪರಿತ್ಯಜಿಸಿದ ಬೌದ್ಧ ಧರ್ಮ ಎಂದಿಗೂ ಹಿಂದೂ ದೇವತೆಯ ಸ್ಥಾಪನೆಯಾಗಿರಲಾರದು. ಬುದ್ಧ ಹಿಂದೂ ದೇವತೆಯೇ ಆಗಿದ್ದರೆ ಆದಿ ಶಂಕರಾಚಾರ್ಯ, ಕುಮಾರಿಲಭಟ್ಟರಂತಹ ಮಹಾನ್ ಪುಣ್ಯಪುರುಷರು ಏಕೆ ಬೌದ್ಧ ಧರ್ಮವನ್ನು ನಿರ್ಮೂಲ ಮಾಡಲು ಶ್ರಮಿಸಿದ್ದಾರೆ? ಶಂಕರಾಚಾರ್ಯರು ಬೌದ್ಧ ಪಂಡಿತರನ್ನು ತರ್ಕದಲ್ಲಿ ಸೋಲಿಸಿದ ನಂತರ ಅವರ ಅತ್ಯಂತ ಶ್ರೇಷ್ಠ ಮಹಾಬೋಧಿ ದೇವಸ್ಥಾನ ಶಂಕರ ಮಠದ ಆಧೀನದಲ್ಲಿತ್ತು. ಅಲ್ಲೊಂದು ಈಶ್ವರನ ಲಿಂಗವೂ ಸ್ಥಾಪನೆಯಾಗಿದೆ ಗೊತ್ತೇ?"


"ದಾನವರನ್ನು, ಅಧರ್ಮಿಗಳನ್ನು ಅಡ್ಡಹಾದಿಗೆಳೆಯಲು ಹಿಂದೂ ಧರ್ಮದಿಂದ ಪ್ರಾಪ್ತವಾಗುವ ಪುಣ್ಯದಿಂದ ವಂಚಿಸಲು ಸುಳ್ಳು ಧರ್ಮ ಬೋಧನೆ..." ಮಧ್ಯೆ ದಿನಕರ ಸೇರಿಸಿದ.


"ಯಾಹ್ ರೈಟ್! ಬೌದ್ಧ ಧರ್ಮದ ಖ್ಯಾತ ಪಂಡಿತರಾರು? ನಾಗಾರ್ಜುನ, ದಿಗನಾಗ, ಧರ್ಮಕೀರ್ತಿ, ಅಸಂಗ, ವಸುಬಂದು ಇವರೆಲ್ಲ ಹುಟ್ಟು ಬ್ರಾಹ್ಮಣರೇ. ಇವರೆಲ್ಲ ದಾನವರೆನ್ನುತ್ತೀಯಾ? ಹೋಗಲಿ ಬುದ್ಧಿಸಂ ಇಂಡಿಯಾಲಿ ಸುಮಾರು ೮-೯ನೇ ಶತಮಾನದಲ್ಲಿ ಮಾಯವಾಯ್ತು. ಎಲ್ಲರೂ ಪುನಃ ಹಿಂದೂಗಳಾಗಿ ರೀಕನ್ವರ್ಟ್ ಆದರು. ಏನಾಯಿತು ನಿನ್ನ ದಾನವ, ಸುಳ್ಳು ಧರ್ಮ?"


"ಇನ್ನೂ ಇದೆ ಕೇಳಿ. ಪುರಾಣಗಳ ಪ್ರಕಾರ ಹತ್ತು ಅವತಾರಗಳಲ್ಲಿ ನಾಲ್ಕು ಕೃತ ಯುಗದಲ್ಲಿ, ಮೂರು ತ್ರೇತಾಯುಗದಲ್ಲಿ, ಎರಡು ದ್ವಾಪರ ಯುಗದಲ್ಲಿ ಹಾಗು ಒಂದು ಕಲಿಯುಗದಲ್ಲಿ ಮೂಡಬೇಕು. ಬುದ್ಧನ ಕಾಲ ಯಾವುದು?"


"ಎರಡುವರೆ-ಸಾವಿರ ವರ್ಷ, ಸುಮಾರು ೫೦೦ ಬಿ.ಸಿ." ಸಂಭಾಷಣೆ ಎತ್ತ ಹೋಗುತ್ತಿದೆಯೆಂದರಿತು ಪಿಸುಗುಟ್ಟಿದ ದಿನಕರ.


"ಹೂಂ. ಮಹಾಭರತದಲ್ಲಿ ಬರುವ ಇರ್ರೆಫ್ಯೂಟೆಬಲ್ ಆಸ್ಟ್ರೋನಾಮಿಕಲ್ ಎವಿಡೆನ್ಸ್ ಪ್ರಕಾರ ಮಹಾಭಾರತ ಯುದ್ಧವಾಗಿದ್ದು ೩೧೩೮ ಬಿ.ಸಿ, ಕೃಷ್ಣನ ಅಂತ್ಯವಾಗಿ ಕಲಿಯುಗ ಆರಂಭವಾಗಿದ್ದು ೩೧೦೨ ಬಿ.ಸಿ. ಎಂದು ಹಲವಾರು ಸ್ಕಾಲರ್ಸ್ ನಿರ್ಧರಿಸಿದ್ದಾರೆ. ಐಹೊಳೆ ಶಾಸನವೂ ಇದೇ ಹೇಳುತ್ತದೆ. ಕೆಲವರು ಬುದ್ಧನ ಕಾಲವನ್ನು ಸುಮಾರು ೧೮೦೦ ಬಿ.ಸಿ. ವರೆಗು ಎಳೆಯುತ್ತಾರೆ. ಆದರೂ, ಕ್ಲಿಯರ್ಲಿ, ಇದು ಕಲಿಯುಗದಲ್ಲಿ ಬಂದಿದೆ. ಅರ್ಥಾತ್, ೯ನೇ ಅವತಾರ ಬುದ್ಧನಲ್ಲ"


"ಹಾಗಿದ್ದರೆ ಹಳೇ ಕಾಲದ ದೇವಸ್ಥಾನಗಳು..." ಪೂಜಾ ನಿತ್ರಾಣ ಧ್ವನಿಯಲ್ಲಿ


"ಹಿಂದೂ ಧರ್ಮದಲ್ಲಿ ಆ ರೀತಿ ದೇವಾಲಯಗಳನ್ನು ಕಟ್ಟುವ ಸಂಪ್ರದಾಯವಿರಲಿಲ್ಲ. ಕರ್ಮಕಾಂಡ ಹಿಂದೂ ಧರ್ಮದ ಡೆಫಿನಿಶನ್ ಆಗಿತ್ತು. ದಶಾವತಾರ ಕೆತ್ತನೆ ಇರುವ ಅತೀ ಹಳೆ ಹಿಂದೂ ದೇವಸ್ಥಾನ ೯-೧೦ನೇ ಶತಮಾನದ್ದು. ಅಷ್ಟು ಹೊತ್ತಿಗೆ ಎಡವಟ್ಟಾಗಿಹೋಗಿತ್ತು"


"ಅಂದರೆ..."


"ಹುಟ್ಟುತ್ತಿದ್ದ ಬೌದ್ಧ ಧರ್ಮಕ್ಕೆ ಸ್ವಪರಿಚಯವಿರಲಿಲ್ಲ. ಹಿಂದೂ ದಂತಕತೆ-ಪುರಾಣಗಳಲ್ಲಿ ವಿಷ್ಣುವನ್ನು ತಗೆದು ಬುದ್ಧನನ್ನು ಹಾಕಿ ಅವುಗಳನ್ನು ತಮ್ಮದಾಗಿಸಿಕೊಂಡರು. ಸ್ತೂಪಾಗಳನ್ನು ಕಟ್ಟುವಾಗ ಈ ಕತೆಗಳನ್ನು ಆ ಸ್ತೂಪಾಗಳ ಮೇಲೆ ಕೆತ್ತಿಸಿದರು. ನಂತರ ಉಂಟಾದ ಕನ್‌ಫ್ಯೂಶನ್‌ನಲ್ಲಿ ಅದೇ ಸ್ಥಪತಿಗಳು ಹಿಂದೂ ದೇವಸ್ಥಾನಗಳನ್ನು ಕೆತ್ತುವಾಗ ಬುದ್ಧನನ್ನು ಅಲ್ಲಲ್ಲಿ ಕೆತ್ತಿರಬೇಕು. ಅಲ್ಲಿಂದ ಶುರುವಾಯಿತು ಎಲ್ಲಾ ತರಲೆ. ಅಂಥದ್ದರಲ್ಲೂ ಬಹಳಷ್ಟು ಕಡೆ ಹಲಾಯುಧನನ್ನು ಕೆತ್ತಲಾಗಿದೆ -ಹೆಚ್ಚಾಗಿ ದಕ್ಷಿಣದಲ್ಲಿ" ವಿವರಿಸಿದ ಜೀತ್.


ಇಬ್ಬರ ಶಂಕಾಮುಖಭಾವ ನೋಡಿ "ಲುಕ್, ಚೀನೀ-ಪ್ರಯಾಣಿಕರಾದ ಫಾ ಹಿಯಾನ್, ವೆನ್ ಸಾಂಗ್ ಇವರುಗಳು ಬುದ್ಧನ ಅವತಾರದ ಸ್ಟ್ಯಾಟಸ್ ಬಗ್ಗೆ ಯಾವ ಪುರಾವೆಗಳೂ ಬಿಟ್ಟಿಲ್ಲ. ಅದರಲ್ಲೂ ವೆನ್ ಸಾಂಗ್ -ಮಹಾನ್ ಅಹಂಕಾರಿ -ಬುದ್ಧ ಹಾಗು ಬೌದ್ಧ ಧರ್ಮದ ಒಂದೊಂದು ಸಣ್ಣ ಸಣ್ಣ ವಿಚಾರಗಳನ್ನೂ ಸವಿಸ್ತಾರವಾಗಿ ಬರೆದಿದ್ದಾನೆ. ಆದರೆ ಬುದ್ಧನ ಅವತಾರದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ನನ್ನ ಪ್ರಕಾರ ಕನ್‌ಕ್ಲೂಸಿವ್ ಪ್ರೂಫ್"


"ನಾಗಾನಂದ ನನ್ನ ಹೆಸರು ಬರೆದು ಒಂದು ಸಂದೇಶ ಬಿಟ್ಟು ಹೋಗಿದ್ದಾನೆ" ದಿನಕರನಿಗೆ ಅರಿವೆ ಗೋಚರವಾಗುತ್ತ ನಾಗಾನಂದನ ಚೀಟಿಯನ್ನು ತೆಗೆದು ಮೊದಲ ತ್ರಿಪದಿ ಓದಿದ.


ಜೀತ್ ಹಿಂದಕ್ಕೊರಗಿ ಆಲೋಚಿಸ ತೊಡಗಿದ. ಅಷ್ಟರಲ್ಲಿ ಫೋನ್ ಮೊಳಗಿತು.


"ಬಂದೆ ಒಂದು ನಿಮಿಷ" ಫೋನ್ ಕೈಗೆತ್ತಿಕೊಂಡು "ಹಲೋ..." ಎನ್ನುತ್ತ ಜೀತ್ ಒಳಗೆ ಹೋದ.


ಕೆಲ ನಿಮಿಷಗಳ ನಂತರ ಇನ್ನೂ ಫೋನ್ ಕೈಯ್ಯಲ್ಲೇ ಹಿಡಿದು ಹೊರಬಂದಾಗ ಪೂಜಾ ಕೇಳಿದಳು.


"ಸರಿ ಹಾಗಿದ್ದರೆ ಬುದ್ಧ ಅವತಾರವಾದರೆ ಫೈಲ್ಯುರ್, ಪ್ರಾಬಬ್ಲಿ ಅವತಾರವೇ ಅಲ್ಲವೆಂದು ತಿಳೀತು. ಹಾಗಾದರೆ ಹಲಾಯುಧ?"


"ದೇರ್ ಯು ಗೋ" ಜೀತ್ ಧ್ವನಿ ಹಗುರವಾಗಿತ್ತು. "ಹಲಾಯುಧ ಈಸ್ ದ ಸೆವೆನ್‌ತ್ ಅವತಾರ. ಪರಷುರಾಮ ಮತ್ತು ಕೃಷ್ಣರ ಮಧ್ಯೆ. ಹಲಾಯುಧನ ಕತೆಗಳು ಬೇಕಾದರೆ ಬಲರಾಮನ ಕತೆಗಳನ್ನು ನೋಡಬೇಕು. ಬಲರಾಮನ ರೈವತ-ರೇವತಿಯರ ಕತೆ, ಭೂಮಿಯಲ್ಲಿ ಬರ ಬಂದಾಗ ಹಲಪ್ರಹಾರದಿಂದ ಯಮುನೆಯ ದಿಕ್ಕು ಬದಲಾಯಿಸಿದ ಕತೆ ಇವೆಲ್ಲವೂ ಬಲರಾಮನಿಗೆ ಸ್ವಲ್ಪ ಔಟ್-ಆಫ್-ಪ್ಲೇಸ್ ಆಗಿ ಕಾಣುತ್ತವೆ. ಇವೆಲ್ಲ ಪ್ರಾಬಬ್ಲಿ ಈ ಹಲಾಯುಧನ ಕತೆಗಳಾಗಿದ್ದಿರಬೇಕು. ನಂತರ ಬುದ್ಧ ಸೀನ್‌ಗೆ ಬಂದಾಗ ಹಲಾಯುಧನನ್ನು ಕತ್ತರಿಸಿ, ಬುದ್ಧನನ್ನು ಕೊನೆಗೆ ಸೇರಿಸಿ, ಹಲಾಯುಧನ ಕತೆಗಳನ್ನು ಬಲರಾಮನಿಗೆ ಸೇರಿಸಿರಬೇಕು. ಇದಕ್ಕೇ ಪ್ರೂಪ್ ಹುಡುಕುತ್ತಿದ್ದ ನಮ್ಮ ನಾಗನಂದ್. ಅದನ್ನೇ ಅರ್ಥ ಮಾಡಿಸಲು ಹಲವನ್ನು ಹಿಡಿದಿದ್ದಿರಬೇಕು"


"ಇನ್ನೂ ಒಂದು ಆರ್ಗ್ಯೂಮೆಂಟ್ ಇದೆ. ದಶಾವತಾರದಲ್ಲಿ ಅನೇಕರು ಡಾರ್ವಿನ್‌ನ ಥಿಯರಿ ಆಫ್ ಎವಲ್ಯೂಶನ್ ಕಂಡಿದ್ದಾರೆ. ಮತ್ಸ್ಯ -ಲೈಫ್ ಒರಿಗಿನೇಟೆಡ್ ಇನ್ ದ ಓಶನ್, ನಂತರ ಕೂರ್ಮ -ಕೋಲ್ಡ್ ಬ್ಲಡೆಡ್, ಆಮ್‌ಫೀಬಿಯಸ್, ವರಾಹ -ಮ್ಯಾಮಲ್ ಆದರೂ ಕೊಳಚೆ ಪ್ರದೇಶದಲ್ಲಿರುತ್ತದೆ, ನರಸಿಂಹ -ಅರ್ಧ ಮಾನವ ಅರ್ಧ ಪ್ರಾಣಿ, ವಾಮನ -ಕುಬ್ಜ ಮನುಷ್ಯ: ಪ್ರಿ-ಹಿಸ್ಟೋರಿಕ್ ಮ್ಯಾನ್, ಪರಶುರಾಮ -ಕೊಡಲಿ ಹಿಡಿದ ಹಂಟರ್-ಗ್ಯಾದರರ್, ಈಗ ತೊಂದರೆ ಶುರು. ರಾಮ, ಕೃಷ್ಣ, ಬುದ್ಧ, ಕಲ್ಕಿ ತೊಗೊಂಡರೆ ರಾಮ -ರಾಜ್ಯ, ರಾಷ್ಟ್ರಗಳಾಗಿ ಜನ ಒಗ್ಗೂಡಿದ ಸಂಕೇತ, ಕೃಷ್ಣ -ನಿರತಿಶಯ ಮಾನವ, ಪರ್ಫೆಕ್ಟ್ ಬೀಯಿಂಗ್, ಬುದ್ಧ -ಜ್ಞಾನೋದಯವಾದ ಮಾನವ, ಕಲ್ಕಿ -ಬೇಕಾದರೆ ವಿನಾಶವೆನ್ನು ಇಲ್ಲವೇ ಸೂಪರ್ಮ್ಯಾನ್ ಅನ್ನು. ಆದರೆ ಇಲ್ಲಿ ಸ್ವಲ್ಪ ಸರಿಯಿಲ್ಲ: ನಿರತಿಶಯ ಮಾನವನಾದ ಮೇಲೆ ಜ್ಞಾನೋದಯವೇ? ವಿಚಿತ್ರವೆನಿಸುವುದಿಲ್ಲವೇ? ಇದರ ಬದಲು ಪರಶುರಾಮನ ನಂತರ ಹಲಾಯುಧನನ್ನು ಹಾಕಿದರೆ? ಹಲಾಯುಧ -ಜನರು ನೆಲೆಸಿ ವ್ಯವಸಾಯ ಶುರು ಮಾಡಿದ ಸಂಕೇತ, ನಂತರ ರಾಮ -ನೇಶನ್ ಬಿಲ್ಡಿಂಗ್, ಕೃಷ್ಣ -ಪರ್ಫೆಕ್ಟ್ ಬೀಯಿಂಗ್, ಕಲಿಕಿ -ಸೂಪರ್ ಮ್ಯಾನ್. ಈಗ ನೋಡು ಲಿಂಕು ಸರಿಯಾಗಿದೆ"


"ನೀವು ಹೇಳುತ್ತಿರುವುದರಲ್ಲೂ ಸ್ವಲ್ಪ ಅರ್ಥವಿದೆ" ಒಪ್ಪಿಕೊಂಡಳು ಪೂಜಾ.


"ನಾನು ಹೇಳುತ್ತಿರುವುದರಲ್ಲೇ ಅರ್ಥವಿರೋದು, ಮಗೂ, ನೀನು ತಿಳಿದುಕೊಂಡಿರುವುದರಲ್ಲಿ ಅರ್ಥವಿಲ್ಲ" ಜೀತ್ ಮುಗಿಸಿದ. "ದಿನಕರ್, ನಾಗಾನಂದ್ ಹತ್ತು ವರ್ಷಗಳಿಂದ ಈ ದಶಾವತಾರದ ವಿಷಯದಲ್ಲೇ ಕೆಲಸ ಮಾಡುತ್ತಿದ್ದ. ಪುರಾಣಗಳು ಹೇಗೆ ಬದಲಾದವು, ಬುದ್ಧ ಹೇಗೆ ಅವತಾರನಾದ, ಏಕೆ ಬುದ್ಧ ತಪ್ಪು, ಹಲಾಯುಧ ಸರಿ ಎಂದು ಸಿದ್ಧಪಡಿಸಲು ಪ್ರೂಫ್ ಒಗ್ಗೂಡಿಸುತ್ತಿದ್ದ. ಅವನಿಗೆ ಯಾರಮೇಲೂ ಹೆಚ್ಚು ನಂಬಿಕೆಯಿರಲಿಲ್ಲ. ತನ್ನ ಕೆಲಸದಲ್ಲಿ ಸೀಕ್ರೆಸಿ ಮೈನ್‌ಟೈನ್ ಮಾಡುತ್ತಿದ್ದ. ಅದಕ್ಕೇ ಕೇವಲ ನಿನಗರ್ಥವಾಗುವಂತೆ ತನ್ನ ರಿಸರ್ಚ್ ಬಗ್ಗೆ ಏನಾದರೂ ಕ್ಲೂ ಬಿಟ್ಟಿರಬೇಕು. ಎಲ್ಲಿ ಮತ್ತೊಮ್ಮೆ ಓದು"


ದಿನಕರ ಪುನಃ ಓದಿದ


"ಶಾರದೆಯ ಪೀಠ -ಅದಂತೂ ಶ್ರೂಂಗೇರಿಯೇ ಇರಬೇಕು. ಅಲ್ಲಿ ದಹನವಾಣಿಯೇ?"


"ಓಹ್! ಮೊದಲಿಗೆ ಏನೋ ಸಂಖ್ಯೆಗಳಿವೆ -BXL.234.102W"


"ಲೈಬ್ರರಿ" ಪೂಜಾ ಹೇಳಿದಳು


"ಆಂ?.."


"ಅದು ಲೈಬ್ರರಿ ಪುಸ್ತಕದ ಕಾಲ್-ನಂಬರ್. ನ..." ಅರ್ಧದಲ್ಲೇ ಪೂಜಾಳ ಧ್ವನಿ ಕತ್ತರಿಸಿ ಹೋಯಿತು. ರಕ್ತ-ಕೆಂಪು ನಿಲುವಂಗಿ ಧರಿಸಿದ್ದ ವ್ಯಕ್ತಿ ಪೂಜಾಳ ಕತ್ತಿಗೆ ಚಾಕುವೊಂದನ್ನು ಹಿಡಿದು ನಿಂತಿದ್ದ.


"ಆ ಚೀಟಿ ನನಗೆ ಕೊಟ್ಟುಬಿಡಿ. ಇಲ್ಲದಿದ್ದರೇ ಇವಳ ಕತ್ತು..."


"ಇಲ್ಲಿದೆ ಚೀಟಿ" ದಿನಕರ ಜೇಬಿನಲ್ಲಿಟ್ಟುಕೊಂಡಿದ್ದ ಚೀಟಿಯನ್ನು ನಿಧಾನವಾಗಿ ತೆಗೆದು ಕೈಯಲ್ಲಿ ಹಿಡಿದು ಕೈನೀಡಿ ಭಿಕ್ಕುವಿನ ಕಡೆ ಹೊರಟ. ಆ ಕ್ಷಣದಲ್ಲಿ ಚೂಪಾದ ಹೀಲ್ಸ್ ಉಳ್ಳ ಶೂ ಧರಿಸಿದ್ದ ಪೂಜಾ ಹಿಮ್ಮಡಿಯಿಂದ ಭಿಕ್ಕುವಿನ ಕಾಲನ್ನು ಬಲವಾಗಿ ತುಳಿದಳು. ಜೊತೆಗೇ ತನ್ನ ಮೊಣಕೈಯಿಂದ ಅವನ ಪಕ್ಕೆಗೆ ಗುದ್ದಿದಳು. ನೋವಿನಿಂದ ಕೆಳಬಗ್ಗಿದ್ದ ಭಿಕ್ಕುವನ್ನು ಜೀತ್ ಬಲವಾಗಿ ಚೆಚ್ಚಿದ. ಜ್ಞಾನ ತಪ್ಪಿ ಭಿಕ್ಕು ಕೆಳಗೆಬಿದ್ದ. ತಕ್ಷಣ ಜೀತ್, ದಿನಕರ ಇಬ್ಬರೂ ಸೇರಿ ಅವನನ್ನು ಕಟ್ಟಿ ಹಾಕಿದರು.


"ಆವತಂಶಕ!" ಜೀತ್ ಉದ್ಗಾರ ತೆಗೆದ


"ಹ್ಞಾ..?"


"ಈತ. ಆವತಂಶಕ ಸಂಘದವ. ಇವನ ಕೆಂಪು ಗೌನು, ಬೆರಳಲ್ಲಿರುವ ಲೋಟಸ್-ಸ್ಟ್ಯಾಂಪ್ ಉಂಗುರ ನೋಡು"


ಪೂಜಾ, ದಿನಕರ ಕಕ್ಕಾಬಿಕ್ಕಿ ಒಬ್ಬರನ್ನೊಬ್ಬರು ನೋಡಿದರು.


"ಆವತಂಶಕ ಎಂದರೆ ಒಂದು ಊಂ... ಹಿಂದೂನೂ ಅಲ್ಲ, ಬುದ್ಧಿಸ್ಟೂ ಅಲ್ಲ -ಎರಡರ ಮಧ್ಯದ ಒಂದು ನೆಬ್ಯುಲಸ್ ಆರ್ಗನೈಸೇಶನ್. ಅತ್ತ ಪರದೇಶಗಳಿಂದ ಬರುವ ಬುದ್ಧಿಸ್ಟ್ ಗ್ರಾಂಟ್‌ಗಳನ್ನೂ ಹೊಡೆಯುತ್ತಾರೆ, ಇತ್ತ ಬೌದ್ಧಾವತಾರ ಅದು ಇದು ಹೇಳುಕೊಂಡು ಹಿಂದೂಗಳ ದುಡ್ಡೂ ಹೊಡೆಯುತ್ತಾರೆ. ಒಟ್ಟಿನಲ್ಲಿ ಕಳೆದ ಐದೇ ವರ್ಷಗಳಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸ್ ಗಗನಕ್ಕೇರಿದೆ. ಇವರ ಫಾಲೋಅರ್ಸ್ ಎಲ್ಲೆಲ್ಲೂ ಇದ್ದಾರೆ. ಬಿಸಿನೆಸ್‌ಮೆನ್, ಬ್ಯಾಂಕರ್ಸ್, ಲಾಯರ್ಸ್, ಪಾಲಿಟಿಶ್ಯನ್ಸ್, ಹೀಗೆ. ಸಮಾಜದಲ್ಲಿ ತುಂಬಾ ಇನ್‌ಫ್ಲೂನ್ಸ್ ಇಟ್ಟಿದ್ದಾರೆ. ಎಷ್ಟರ ಮಟ್ಟಿಗೆಂದರೆ ೧೯೯೯ರಲ್ಲಿ ಕಾಂಚಿ-ಕಾಮಕೋಟಿ ಜಗದ್ಗುರು ಜಯೇಂದ್ರ ಸರಸ್ವತಿ ಹಾಗು ಮಹಾಬೋಧಿ ವಿಪಾಸನಾಚಾರ್ಯ ಸತ್ಯನಾರಾಯಣ ಗೊಯಂಕಾಜಿ ನಡುವೆ ಮಾತು-ಕತೆ ನಡೆದು ಇಬ್ಬರೂ ಸೇರಿ 'ಬೌದ್ಧಾವತಾರ ಒಂದು ಮಿಸ್‌ಕಾನ್ಸೆಪ್ಷನ್; ಇದು ನಿಜವಲ್ಲ, ಇದನ್ನು ಮುಂದುವರೆಸಬಾರದು' ಎಂದು ಒಂದು ಪ್ರೆಸ್ ರಿಲೀಸ್ ಕೊಟ್ಟರು. ಆಮೇಲೆ ಜಯೇಂದ್ರ ಸರಸ್ವತಿಗೆ ಏನಾಯಿತು ಎಲ್ಲಾರಿಗೂ ತಿಳಿದಿದೆ. ಕೇಸ್ ಆಫೀಸರ್ ಈ ಆವತಂಶಕ ಸಂಘದವನೆಂದು ನಂತರ ತಿಳಿದುಬಂತು. ಬಹಳ ಡೇಂಜರ್ ಜನ ಇವರು" ಜೀತ್ ವಿವರಿಸಿದ.


"ಹೂಂ -ಕಾಂಚಿ ಜಗದ್ಗುರು ಮರ್ಡರ್ ಕೇಸ್‌ನಲ್ಲಿ ಸಿಕ್ಕಿಬಿದ್ದರು -ನಾನೇ ಆ ಸ್ಟೋರಿ ಕವರ್ ಮಾಡಿದ್ದೆ. ಆದರೆ, ಈತ? ಇಲ್ಲಿ ಏಕೆ? ಪ್ರೊಫೆಸರ್ ನಾಗಾನಂದ್ ಸಂದೇಶಕ್ಕೂ ಇವನಿಗೂ ಏನು ಸಂಬಂಧ? ಅದನ್ನೇಕೆ ಕೇಳುತ್ತಿದ್ದ?" ಪೂಜಾ ಪ್ರಶ್ನಿಸಿದಳು.


"ನಾಗಾನಂದನ ರಿಸರ್ಚ್ ಬೌದ್ಧಾವತಾರ ಸುಳ್ಳೆಂದು ಕಡಾಖಂಡಿತವಾಗಿ ಸ್ಥಾಪಿಸಿದರೆ, ಆವತಂಶಕ ತೊಂದರೆಗೆ ಬಿದ್ದೀತು. ಅವರಿಗೆ ಬರುವ ಕೋಟ್ಯಾಂತರ ರೂಪಾಯಿ ಚಂದಾ-ಧಾರೆ ಒಣಗಿ ಹೋದೀತು. ಚೀಟಿಯನ್ನು ಕಸಿದು ಮೂಲಗಳನ್ನೇ ನಾಶ ಮಾಡಲು ಬಂದಿರಬೇಕು" ಜೀತ್ ಊಹಿಸಿದ.


"ಆದರೆ ಅವರಿಗೆ ಇಂತಹ ಸಂದೇಶವಿದೆ, ಅದೂ ಡಾ. ದಿನಕರ್ ಬಳಿ ಇದೆಯೆಂದು ತಿಳಿಯುವುದು ಹೇಗೆ ಸಾಧ್ಯ?"


"ಬ್ರಹ್ಮಾವರ್..." ದಿನಕರ ಉಸುರಿದ. ಜೀತ್, ಪೂಜಾ ಅವನಕಡೆ ತಿರುಗಿದರು.


"ಬ್ರಹ್ಮಾವರ್?"


"ನಾಗಾನಂದನ ಕೊಲೆ ಇನ್ವೆಸ್ಟಿಗೇಟ್ ಮಾಡಲು ಬಂದಿದ್ದ ಪೋಲೀಸ್ ಆಫೀಸರ್ -ನನ್ನನ್ನು ಕೊಲೆ ಆಪಾದನೆ ಮೇಲೆ ಅರೆಸ್ಟ ಮಾಡಲು ಹೊರಟಿದ್ದವ -ಅವನ ಬೆರಳಲ್ಲೂ ಇದೇ ರೀತಿ ಕಮಲದುಂಗುರವಿತ್ತು" ದಿನಕರ ವಿವರಿಸಿದ.


"ನಿನ್ನನ್ನು ಅರೆಸ್ಟ್...? ನಾಗಾನಂದನ ಕೊಲೆ ಆಪಾದನೆ ಮೇಲೆ?" ಕೋಪ, ಆಶ್ಚರ್ಯಗಳಿಂದ ಕೂಡಿದ ಜೀತ್ ಧ್ವನಿ.


"ನಾ..." ಮಾತನಾಡಲು ಹೊರಟ ದಿನಕರ ಬಾಯಿ ಮುಚ್ಚಿದ.


"ನಿಮ್ಮ ಸಹವಾಸವೇ ಬೇಡ. ಮರ್ಡರ್ ಸಸ್ಪೆಕ್ಟ್‌ಗಳಿಬ್ಬರಿಗೆ ಆಶ್ರಯ ಕೊಟ್ಟಿರುವುದಲ್ಲದೆ ಮನೆಯಲ್ಲೆಲ್ಲ ಖದೀಮರು, ದರೋಡೆಕೋರರು! ಈಗಲೇ ಪೋಲೀಸ್‌ಗೆ ಫೋನ್ ಮಾಡುವೆ!" ಎನ್ನುತ್ತ ಜೀತ್ ಫೋನ್ ಕಿವಿಗೇರಿಸಿದ.


"ಜೀತ್, ಜೀತ್ -ಇಲ್ಲಿ ನೋಡು ಇನ್ನೂ ಕ್ಲೂಗಳಿವೆ" ಹಾಳೆಯನ್ನು ತೋರಿಸುತ್ತ ಹೇಳಿದ ದಿನಕರ "ನಿನಗೂ ನಾಗಾನಂದ ಕಂಡ ಪ್ರೂಫ್ ಬೇಕಾ? ನಡಿ ಶೃಂಗೇರಿಗೆ ಹೋಗಿ ಒಟ್ಟಿಗೆ ಏನೆಂದು ನೋಡೋಣ"


ಜೀತ್ ಪೋನ್ ಕಿವಿಯಿಂದಿಳಿಸಿದ.


ವಿಚಾರಮಗ್ನ ಧ್ವನಿಯಲ್ಲಿ ದಿನಕರ ಮುಂದುವರೆಸಿದ "ಈ ಆವತಂಶಕ ಸಂಘದವರೇ ಬಹುಶಃ ನಾಗಾನಂದನ ಕೊಲೆಯ ಸಂಚು ಹೂಡಿರಬಹುದು -ಬ್ರಹ್ಮಾವರ, ಈ ಭಿಕ್ಕು, ಈ ನಿಗೂಢ-ರಹಸ್ಯದ ಎಲ್ಲ ತುಣುಕುಗಳು ಸ್ವಸ್ಥಾನಕ್ಕೆ ಸೇರುತ್ತಿವೆ" ಕೊಂಚ ಮೌನದ ನಂತರ "ನಮ್ಮ ಮಿತ್ರ ನಾಗಾನಂದನ ಕೊಲೆಯ ಸಂಚು ಹೊರತರಬೇಕಾದರೆ ಇದೊಂದೇ ದಾರಿ, ಜೀತ್, ಪ್ಲೀಸ್"



*****



"ಈ ಹಲಾಯುಧ-ಬುದ್ಧ ಎಕ್ಸ್‌ಚೇಂಜ್ ಹೇಗಾಯಿತು" ಕಾರಿನಲ್ಲಿ ಮುಂದೆ ಜೀತ್ ಪಕ್ಕ ಕುಳಿತಿದ್ದ ಪೂಜಾ ಕೇಳಿದಳು.


ದಿನಕರನ ಆಕ್ಷೋಭ ಮನವಿಯ ನಂತರ ಜೀತ್ ಸೌಮ್ಯವಾಗಿ, ಶೃಂಗೇರಿಗೆ ಹೋಗಲೊಪ್ಪಿದ್ದ. ಭಿಕ್ಕುವನ್ನು ಬಿಟ್ಟು ಹೋಗುವುದೂ ಕಷ್ಟ, ಪೋಲೀಸರಿಗೊಪ್ಪಿಸುವುದೂ ತೊಂದರೆಯೆಂದು ನಿರ್ಧರಿಸಿ, ಅವನನ್ನೂ ಕಟ್ಟಿ ಹಾಕಿದ್ದಂತೆಯೇ ಜೀತ್ ಕಾರಿನಲ್ಲಿ ದಿನಕರನೊಡನೆ ಹಿಂದಿನ ಸೀಟಿನಲ್ಲಿ ಕೂರಿಸಿ, ಜೀತ್ ಹಾಗೂ ಪೂಜಾ ಮುಂದೆ ಕುಳಿತು ಶೃಂಗೇರಿ ಕಡೆ ಸಾಗುತ್ತಿದ್ದರು. ರಸ್ತೆಗಳ ಮೇಲೆ ಹೆಚ್ಚು ವಾಹನಗಳಿಲ್ಲವಾಗಿ ವೇಗದಿಂದ ಸಾಗಿ ಬೆಳಗಾಗುವಷ್ಟರಲ್ಲಿ ಶೃಂಗೇರಿ ತಲುಪುವ ಹಾಗೆ ಕಾಣಿಸುತ್ತಿತ್ತು. ಜ್ಞಾನ ತಪ್ಪಿ ಬಿದ್ದ ಭಿಕ್ಕು ಒಮ್ಮೆ ಎದ್ದು ತನ್ನ ಕಟ್ಟುಗಳೊಡನೆ ಸ್ವಲ್ಪ ಹೊತ್ತು ಹೋರಾಡಿ, 'ಸುಮ್ಮನಾಗದಿದ್ದರೆ ಪುನಃ ಚೆಚ್ಚಿ ಜ್ಞಾನ ತಪ್ಪಿಸುವೆ' ಎಂದು ಬೆದರಿಸಿದ ನಂತರ ಸುಮ್ಮನಾಗಿ ಮಲಗಿದ್ದ. ಸುಸ್ತಾಗಿದ್ದ ದಿನಕರ ಕೂಡ ಕುಳಿತಲ್ಲೇ ನಿದ್ದೆ ಮಾಡಿದ್ದ. ಪೂಜಾ, ಕಾರ್ ಚಲಿಸುತ್ತಿದ್ದ ಜೀತ್‌ಗೆ ಕಂಪನಿ ಕೊಡಲೆಂದು ಜೀತ್ ಜೊತೆ ಮಾತನಾಡುತ್ತಿದ್ದಳು.


"ಇದಕ್ಕೆ ಒಂದು ಸ್ಟ್ರೇಟ್ ಆನ್ಸರ್ ಇಲ್ಲ. ಬರೀ ಊಹೆಗಳಷ್ಟೆ. ಆಗಲೇ ಹೇಳಿದಂತೆ, ಸ್ಥಪತಿಗಳಿಂದ ಒತ್ತಾಯವಾಗಿ ಹಿಂದೂ ಕತೆಗಳಲ್ಲಿ ಬುದ್ಧನನ್ನು ಸೇರಿಸಿ ಆ ದೃಷ್ಯಗಳನ್ನು ಸ್ತೂಪಾಗಳ ಮೇಲೆ ಕೆತ್ತಿಸುತ್ತಿದ್ದರು. ಕಾಲ ಕ್ರಮೇಣ ಆ ಸ್ಥಪತಿಗಳನ್ನು ಫೋರ್ಸಿಬಲ್‌ಆಗಿ ಬುದ್ಧಿಸಂಗೆ ಕನ್ವರ್ಟ್ ಮಾಡಿದ್ದರೆಂದು ಕಂಡು ಬರುತ್ತದೆ. ಧರ್ಮ ಬದಲಾಯಿಸಿದ ಸ್ಥಪತಿಗಳು, ಈ ಬುದ್ಧನ ಐಕನೋಗ್ರಫಿಯನ್ನೇ ಅವರ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟಿರಬೇಕು. ನಂತರ, ಪ್ರಾಚೀನ ಭಾರತದಲ್ಲಿ ಬುದ್ಧಿಸಂ ಮಾಯವಾದ ಮೇಲೆ ಈ ಸ್ಥಪತಿಗಳೆಲ್ಲ ಪುನಃ ಹಿಂದೂಗಳಾದರು. ಹಿಂದೂಗಳೂ ದೇವತೆಗಳ ವಿಗ್ರಹಗಳುಳ್ಳ ದೇವಾಲಯಗಳನ್ನು ಕಟ್ಟಿಸಿದಾಗ, ಅದೇ ಸ್ಥಪತಿಗಳು ಅವರಿಗೆ ತಿಳಿದಿದ್ದ ಬುದ್ಧನಿರುವ ದೃಷ್ಯಗಳನ್ನು ಕೆತ್ತಿರಬೇಕು. ಕಾಲ ಕ್ರಮೇಣ, ಅದನ್ನೇ ನಿಜವಾದ ಪುರಾಣವೆಂದು ಜನರು ಭಾವಿಸಿರಬೇಕು. ಇದೇ ಕಾರಣ ಒರಿಜಿನಲ್ ದಶಾವತಾರದ ಕೆತ್ತನೆಗಳು ವಿರಳವಾಗಿರುವುದಕ್ಕೆ. ಒಂದು ಸುಳ್ಳನ್ನು ಮೇಲೆ ಮೇಲೆ ಹೇಳಿ ಅದನ್ನೇ ನಿಜವಾಗಿಸಿದ ಪ್ರಸಂಗ ಇದು" ಜೀತ್ ವಿವರಿಸಿದ ಎಲ್ಲ ಅಂಶಗಳನ್ನು ಪೂಜಾ ತನ್ನ ಮನಸ್ಸಿನಲ್ಲೇ ಅಚ್ಚು ಇಳಿಸಿಕೊಂಡಳು.


"ಪುರಾಣಗಳು... ಕೊನೆ ಪಕ್ಷ ಅವುಗಳಾದರೂ ಬುದ್ಧನನ್ನು ಬಿಟ್ಟು ಹಲಾಯುಧನನ್ನು ಹೇಳಬೇಕಲ್ಲವೇ? ಹಳೇ ಕಾಲದ ರೆಕಾರ್ಡ್ಸ್...?"


"ಪುರಾಣಗಳ ಅತೀ ಪ್ರಾಚೀನ ಕಾಪಿಗಳು ಎಲ್ಲೂ ದೊರಕಿಲ್ಲ -ದೊರಕುವುದಿಲ್ಲ. ಅವುಗಳೆಲ್ಲ ಬೆಂಕಿ, ರಾಜಾಕ್ರಮಣಗಳು, ಧಾರ್ಮಿಕ ಕಳವಳ, ಕಾಲ ಇತ್ಯಾದಿಗಳಿಂದ ನಷ್ಟವಾಗಿರುತ್ತವೆ. ಹಿಂದಿನ ಕಾಲದಲ್ಲಿ ಪುಸ್ತಕಗಳನ್ನ ಕೈಯಲ್ಲೇ ಕಾಪಿ ಮಾಡಬೇಕಾಗುತ್ತಿತ್ತು. ಈ ಮ್ಯಾನುಸ್ಕ್ರಿಪ್ಟ್ ಕಾಪಿಗಳು ಯಾವಾಗಲೂ ಎಕ್ಸಾಕ್ಟ್‌ಆಗಿರೋದಿಲ್ಲ. ಕಾಪಿ ಮಾಡುವವರು ಸಹಜವಾಗಿ ತಮ್ಮದೇ ಆದ ತಿದ್ದುವಿಕೆಗಳನ್ನು ಕಾಪಿಯಲ್ಲಿ ಮಾಡಿರುತ್ತಾರೆ. ಹೀಗೆ ಪುರಾಣಗಳ ಪ್ರತಿ ಮಾಡುವವರು ಅಲ್ಲಿ ಹಲಾಯುಧನನ್ನು ಕಂಡು, ಅದು ತಾವು ಕೇಳಿದ/ನೋಡಿದ ಕತೆಗೆ ಹೋಲುವುದಿಲ್ಲವೆಂದು ನಿರ್ಧರಿಸಿ, ಅವನನ್ನು ಕಿತ್ತು ಬುದ್ಧನನ್ನು ಸೇರಿಸಿರಬೇಕು. ನಮಗೆ ಸಿಕ್ಕಿರುವ ಗ್ರಂಥಗಳೆಲ್ಲ ಈ ರೀತಿ ಡಕ್ಟರ್ಡ್ ಕಾಪೀಸ್ ಮಾತ್ರ. ಹಾಗಾಗಿ ಪುರಾಣಾದಿ ದಂತ ಕತೆಗಳಲ್ಲಿ ಬುದ್ಧನೇ ಇದ್ದು ಹಲಾಯುಧ ಮಾಯವಾಗಿದ್ದಾನೆ" ಎಂದು ಜೀತ್ ತರ್ಕ ಹೇಳಿದ.


"ವಾವ್!" ಎಂದು ಉದ್ಗಾರ ತೆಗೆಯುತ್ತ "ಹಾಗಿದ್ದರೆ ಪ್ರೊಫೆಸರ್ ನಾಗಾನಂದರ ಪ್ರೂಫ್ ಏನಿರಬಹುದು?" ಪೂಜ ಕೇಳಿದಳು


"ಪುರಾಣಗಳ, ಯಾ ಸಿಮಿಲರ್ ಸೋರ್ಸಸ್‌ಗಳ ಒಂದಾದಮೇಲೊಂದು ಕಾಪಿಗಳು -ವಿತ್ ಗ್ರ್ಯಾಜುಅಲ್ ಚೇಂಜಸ್. ಉದಾಹರಣೆಗೆ, ಯಾವುದೋ ಒಂದು ಪುರಾಣ ಅಂದುಕೊ. ಅದರ ಫಸ್ಟ್ ಕಾಪಿ, ಸೆಕೆಂಡ್ ಕಾಪಿ, ತರ್ಡ್ ಕಾಪಿ. ಮೊದಲನೆಯದರಲ್ಲಿ ಒರೀಜಿನಲ್ ಕತೆ -ಹಲಾಯುಧ. ಎರಡನೇ ಕಾಪಿಯಲ್ಲಿ ಕತೆ ಸ್ವಲ್ಪ ಬದಲು, ಫೈನಲಿ, ಮೂರನೆಯದರಲ್ಲಿ ಬುದ್ಧನ ಕತೆ. ನಾವು ಲಕಿಯಾಗಿದ್ದರೆ ಕಾಪಿ ಮಾಡಿದ ಪಂಡಿತರು ತಮ್ಮ ಅನಿಸಿಕೆ, ಕತೆ ಬದಲಾಯಿಸುವುದಕ್ಕೆ ಕಾರಣಾಂತರಗಳನ್ನೂ ಬರೆದಿರಬಹುದು. ಆ ರೀತಿ ಮ್ಯಾನುಸ್ಕ್ರ್‍ಇಪ್ಟ್ಸ್ ಸಿಕ್ಕಿದರೆ ಕನ್ಕ್ಲೂಸಿವ್ ಪ್ರೂಫ್ ಅನ್ನಬಹುದು" ಜೀತ್ ವಿವರಿಸಿದ.


"ಇದಕ್ಕೆ ಕನೆಕ್ಟೆಡ್ ಇನ್ನೊಂದು ಪ್ರಶ್ನೆ"


"ಕೇಳು"


"ಕೆಲವೊಮ್ಮೆ ಕೃಷ್ಣನ ಅಣ್ಣ ಬಲರಾಮ ಒಂದು ಅವತಾರವೆಂದು ಕೇಳಿದ್ದೇನೆ, ಅದರ ಎಕ್ಸ್‌ಪ್ಲನೇಶನ್ ಏನು?"


"ಇದು ವೈಷ್ಣವ/ಹರೆ ಕೃಷ್ಣ/ಇಸ್ಕಾನ್‌ನವರ ಇಂಟರ್‌ಪ್ರಿಟೇಶನ್. ಮಾಯವಾದ ಹಲಾಯುಧನ ಕತೆಗಳು ಬಲರಾಮನಿಗೆ ಕಟ್ಟಿದ್ದಿರಬೇಕು. ಆಗಲೇ ಎರಡು ಕತೆ ಹೇಳಿದೆನಲ್ಲ. ಇನ್ನೂ ಹಲವಾರಿವೆ. ಈ ಕತೆಗಳಿಂದಲೇ ಬಲರಾಮನಿಗೂ ನೇಗಿಲೇ ಅತೀ ಪ್ರಿಯ ಆಯುಧವೆಂಬ ಪ್ರತೀತಿ ಬಂದಿರಬೇಕು, ಅಷ್ಟೇ ಏಕೆ ಹಲಾಯುಧನೆಂಬ ನಾಮಾಂಕಣವೂ ಬಂದಿದೆ. ಆಕ್ಚುಅಲಿ, ಬಲರಾಮನ ಪ್ರಿಯ ಆಯುಧ ಗದೆ -ಭೀಮ, ದುರ್ಯೋಧನರಿಗೆ ಗುರು ಅಲ್ಲವೇ ಬಲರಾಮ?. ಅದು ಹಾಗಿರಲಿ, ಬಲರಾಮನು ಅವತಾರವೆನ್ನುವವರೂ ಬುದ್ಧ ಅವತಾರವಲ್ಲವೆಂದು ಗುರುತಿಸಿದ್ದಾರೆ. ಆದರೆ ಬುದ್ಧನನ್ನು ಕಿತ್ತು ಹಲಾಯುಧ -ಕನ್‌ಫ್ಯೂಸ್ಡ್ ವಿತ್ ಬಲರಾಮನನ್ನು -೯ನೇ ಅವತಾರ ಮಾಡಿದ್ದಾರೆ. ಇದೂ ಸರಿಯಲ್ಲವೆಂದು ಆಗಲೇ ಹೇಳಿದ್ದೇನೆ. ಸೋ, ಬಲರಾಮ ರಾಂಗ್, ಒಂಬತ್ತೆನೇ ಅವತಾರ ರಾಂಗ್" ಜೀತ್ ಸ್ಪಷ್ಟೀಕರಿಸಿದ


"ಫೈನಲಿ, ಜಸ್ಟ್ ಫಾರ್ ದ ಸೇಕ್ ಆಫ್ ಕಂಪ್ಲೀಟ್‌ನೆಸ್, ಈ ಚೇಂಜ್ ಯಾವ ಕಾಲದಲ್ಲಿ ಆಗಿರಬಹುದು?" ಪೂಜಾಳ ಕುತೂಹಲಕ್ಕೆ ಕೊನೆಯೇ ಕಾಣಿಸುತ್ತಿರಲಿಲ್ಲ.


"ಆಗಲೇ ಹೇಳಿದಂತೆ ವೆನ್ ಸಾಂಗ್ -ಹ್ಯೂಯನ್ ತ್ಸಾಂಗ್ ಅಲ್ಲ" ಎಂದು ನಕ್ಕು "ವೆನ್ ಸಾಂಗ್ ಎಲ್ಲೂ ಬುದ್ಧಾವತಾರದ ಬಗ್ಗೆ ಹೇಳಿಲ್ಲ. ಕಡಾಖಂಡಿತವಾಗಿ ೭೫೦ ಎ.ಡಿ.ಯಲ್ಲಿ ಈ ಕತೆ ಪ್ರತೀತಿಯಲ್ಲಿರಲಿಲ್ಲ. ಲೈಕ್‌ವೈಸ್, ಶಂಕರಾಚಾರ್ಯರ ಕಾಲದಲ್ಲೂ ಇದು ಪ್ರತೀತಿಯಲ್ಲಿರಲಿಲ್ಲ -ದಿಸ್ ವಾಸ್ ೮೨೦ ಎ.ಡಿ. ಒಟ್ಟಿನಲ್ಲಿ ಒರಿಯಾ ಕವಿ ಜಯದೇವನ ಪ್ರಸಿದ್ಧ ಸಂಸ್ಕೃತ ಕಾವ್ಯ 'ಗೀತ ಗೋವಿಂದ'ದಲ್ಲಿ ಬೌದ್ಧಾವತಾರ ಧೃಡವಾದಂತೆ ಕಾಣಿಸುತ್ತದೆ. ಆದರೂ, ೧೫ನೇ ಶತಮಾನದಲ್ಲೂ ಕನಿಷ್ಠ ದಕ್ಷಿಣದಲ್ಲಿ ಬೌದ್ಧಾವತಾರ ಪ್ರಚಲಿತವಾಗಿರಲಿಲ್ಲವೆಂದು ತೋರುತ್ತದೆ. ಫಾರ್ ಎಕ್ಸಾಂಪಲ್, ಹರಿದಾಸರು ದಶಾವತಾರ ಹಾಡೋವಾಗ 'ಬತ್ತಲೆ ನಿಂತವ, ಬೌದ್ಧಾವತಾರ' ಎಂದು ಹಾಡಿದ್ದಾರೆ. ಬುದ್ಧ ಎಂದೂ ಬತ್ತಲೆ ನಿಂತವನಲ್ಲವೇ ಅಲ್ಲ. ಬತ್ತಲೆ ನಿಂತವ ಜೈನ ತೀರ್ಥಂಕರ ಮಹಾವೀರ -ಜೈನ ದಿಗಂಬರರು. ಹರಿದಾಸರು ಪರೋಕ್ಷ ಜ್ಞಾನಿಗಳೆನಿಸಿದ್ದಾರೆ. ಬೇರೆ ಎಲ್ಲೂ ಇಂತಹ ತಪ್ಪು ಇಲ್ಲ. ಹಾಗಿದ್ದ ಮೇಲೆ ಅವತಾರ ಪುರುಷ ಬುದ್ಧನೋ ಅಥವ ಅವನಂತೆ ಮತ್ತೊಬ್ಬ ವ್ಯಕ್ತಿಯಾದ ಮಹಾವೀರನೋ ಎನ್ನುವ ಕನ್‌ಫ್ಯೂಶನ್ ಯಾಕೆ? ಒಂದೇ ಕಾರಣ -ದಕ್ಷಿಣದಲ್ಲಿ ೧೫ನೇ ಶತಮಾನದಲ್ಲೂ ಬೌದ್ಧಾವತಾರದ ಕತೆ ಇನ್ನೂ ಸಾಲಿಡ್ ಆಗಿರಲಿಲ್ಲ. ಅಂದರೆ -ಕ್ಲಿಯರ್ಲಿ -ಇದು ಸ್ವಲ್ಪ ಅಡ್‌ಜಸ್ಟ್ ಮಾಡಿರೋ ಕತೆ. ಇದಕ್ಕೆ ಇನ್ನೊಂದು ಆಧಾರ ಸೌತ್ ಇಂಡಿಯಾದ ೧೨ರಿಂದ ೧೫ನೇ ಶತಮಾನದ ದೇವಸ್ಥಾನಗಳಲ್ಲಿ ಕೆಲವೆಡೆ ಹಲಾಯುಧನಿದ್ದರೆ, ಇನ್ನು ಕೆಲವೆಡೆ ಬುದ್ಧನಿದ್ದಾನೆ" ಎಂದು ಜೀತ್ ಹೇಳಿದಾಗ ಪೂಜಾಳ ತಲೆ ಸುತ್ತುತ್ತಿತ್ತು.


ಸ್ವಲ್ಪ ಹೊತ್ತಿನ ಬಳಿಕ ದಿನಕರ ಎದ್ದು, ಮುಂದೆ ಬಂದು, ಡ್ರಿವ್ ಮಾಡ ತೊಡಗಿದ. ಜೀತ್ ಹಿಂದಿನ ಸೀಟಿಗೆ ಹೋಗಿ ಹಿಂದಕ್ಕೊರಗಿ ಕಣ್ಣುಮುಚ್ಚಿಕೊಂಡ. ಪೂಜಾ ಈಗ ದಿನಕರನನ್ನು ಕೇಳಿದಳು. "ನಿಮಗೆ ಈ ಕತೆ ಎಷ್ಟು ಗೊತ್ತಿತ್ತು, ಡಕ್ಟರ್?"


"ಹಿಂದೆ ಕೇಳಿದ್ದೆ. ನಾಗಾನಂದ ಆಗಾಗ ಹೇಳುತ್ತಿದ್ದ. ಆದರೆ ಇದು ಕೊಲೆ-ದರೋಡೆಗಳವರೆಗೆ ಹೋಗಬಹುದೆಂದು ಗೊತ್ತಿರಲಿಲ್ಲ" ದಿನಕರ ಹೇಳಿದ. "ನೀನಿನ್ನು ಮಲಗಿ ನಿದ್ದೆ ಮಾಡು. ಬೆಳಗ್ಗೆ ಎದ್ದು ಏನು ಕಾದಿದೆಯೋ".



*****




ಬೆಳಗ್ಗೆ ಸುಮಾರು ೯:೦೦ ಘಂಟೆಗೆ ಶೃಂಗೇರಿ ತಲುಪಿದರು. ಮಳೆಗಾಲವಾಗಿತ್ತು, ಹಾಗಾಗಿ ಊರಿನಲ್ಲಿ ಹೆಚ್ಚಾಗಿ ಯಾತ್ರಿಕರಿರಲಿಲ್ಲ. ಮಲೆನಾಡಿನ ಮಳೆ ಬೇರೆ. ಊರಿನ ಸಣ್ಣ ಸಣ್ಣ ರಸ್ತೆಗಳ ಮೇಲೆ ಕೊಚ್ಚೆ ನೀರು ನಿಂತಿತ್ತು. ನೇರವಾಗಿ ದೇವಸ್ಥಾನದ ಬೀದಿಗೆ ಹೋದರು. ದೇವಸ್ಥಾನದ ಮುಂಭಾಗದಲ್ಲಿ ಇರುವ ರಿಸೆಪ್ಶನ್/ಇನ್ಫರ್‌ಮೇಶನ್ ಕಛೇರಿಗೆ ಹೋಗಿ ವಿಚಾರಿಸಿದರು.


"ನಮಸ್ಕಾರ ಸಾರ್. ರೂಂ ಬೇಕಾ?" ಕುಳಿತಿದ್ದ ಗುಮಾಸ್ತ ಕೇಳಿದ


"ಬೇಡ ತ್ಯಾಂಕ್ಸ್" ಜೀತ್ ಉತ್ತರಿಸಿದ. "ನಮಗೆ ಶೃಂಗೇರಿಯಲ್ಲಿರುವ ಲೈಬ್ರರಿಗಳ ಬಗ್ಗೆ ಮಾಹಿತಿ ಬೇಕು"


"ಒಹ್?" ಗುಮಾಸ್ತ ಜೀತ್, ದಿನಕರ ಹಾಗು ಪೂಜಾರನ್ನು ವಿಚಿತ್ರವಾಗಿ ನೋಡಿದ. "ಶಾರದಾ ಪೀಠದ ಲೈಬ್ರರಿಗೆ 'ಸರಸ್ವತಿ ಭಂಡಾರ' ಎಂದು ಹೆಸರು. ಇದು ಚಿಕ್ಕಮಗಳೂರು ಜಿಲ್ಲೆಯಲ್ಲೇ ಏಕೆ, ಬಹುಶಃ ಇಡೀ ಕರ್ನಾಟಕದಲ್ಲೇ ಅತೀ ಹಳೆಯ ಲೈಬ್ರರಿ. ಪ್ರಾಚೀನ ಕಾಲದಿಂದ ಇಲ್ಲಿ ಧರ್ಮ, ವೇದಾಂತ, ಜ್ಯೋತಿಶ್ಯ ಶಾಸ್ತ್ರಗಳ ತಾಳೆಗರಿ ಪುಸ್ತಕಗಳಿದ್ದರೂ, ೧೪-೧೫ನೇ ಶತಮಾನದಲ್ಲಿ ನರಸಿಂಹ ಭಾರತಿ ಸ್ವಾಮಿಗಳು ಈ ಪುಸ್ತಕಗಳ ಮಹತ್ವವನ್ನರಿತು ಒಂದು ಪುಸ್ತಕ ಭಂಡಾರವನ್ನು ಸ್ಥಾಪಿಸಿದರು. ಆದರೆ.."


"ಏನು?"


"ಅಲ್ಲಿಗೆ ಹೋಗಲು ವಿಶೇಷ ಅನುಮತಿ ಪಡೆದುಕೋಳ್ಳಬೇಕು. ಇವತ್ತು ಆಗೋದಿಲ್ಲ"


"ನಾ.."


"ನಾನೊಬ್ಬ ರಿಪೋರ್ಟರ್" ಜೀತ್‌ಗೆ ಮಾತನಾಡಲು ಅವಕಾಶ ಕೊಡದೆ ಪೂಜಾ ಮುಂದೆ ಬಂದಳು. "ನನಗೆ ಪ್ರೆಸ್ ಆಕ್ಸೆಸ್ ಕ್ಲಿಯರೆನ್ಸ್ ಇದೆ. ಇಗೋ ನನ್ನ ಕಾರ್ಡ್. ಬೇಕಿದ್ದರೆ ನನ್ನ ಪೇಪರ್‌ಗೆ ಫೋನ್ ಮಾಡಿ ಕೇಳಿ"


"ನಂಗೊತ್ತಿಲ್ಲ..." ಸಂದೇಹದಿಂದ ತಲೆಕೆರೆಯುತ್ತ ಹೇಳಿದ ಗುಮಾಸ್ಥ "ನೀವು ಲೈಬ್ರರಿಯನ್‌ನೇ ಕೇಳಬೇಕು. ಪಕ್ಕದ ಗೇಟ್ ಒಳಗಿಂದ ಹೋಗಿ. ಶಾರದಾ ದೇವಸ್ಥಾನದ ಎರಡನೇ ಮಹಡಿ ಮೇಲೆ ಲೈಬ್ರರಿ ಇದೆ"


ದೇವಸ್ಥಾನದ ಹೆಬ್ಬಾಗಿಲಿನಿಂದ ಹಾಯ್ದು ಲೈಬ್ರರಿ ತಲುಪಿದರು. ಪೂಜಾಳ ಪ್ರೆಸ್ ಕ್ಲಿಯರನ್ಸ್ ಮಾಟದಂತೆ ಕೆಲಸ ಮಾಡಿತು. ಮೂವರೂ ಮಂದಿ ಕ್ಯಾಟಲಾಗ್ ಹಿಡಿದು ಕಾಲ್-ನಂಬರ್‌ಗಳನ್ನು ನೋಡತೊಡಗಿದರು.


ಮಧ್ಯಾಹ್ನ ಊಟದ ಸಮಯವಾಯಿತು. ನಾಗಾನಂದ ಬರೆದಿದ್ದ ಕಾಲ್-ನಂಬರ್ ಎಲ್ಲೂ ಕಾಣಿಸಲಿಲ್ಲ. ಕೊನೆಗೆ, ಜೀತ್ ಸೋತು ಕೈಬಿಟ್ಟ. "ಇಲ್ಲ. ಇಲ್ಲಂತೂ ಇಲ್ಲ. ನಾನೊಮ್ಮೆ ಹೋಗಿ ನಮ್ಮ ಬಂಧಿ ಹೇಗಿದ್ದಾನೆ ನೋಡಿ ಬರುತ್ತೇನೆ. ಹಿಂದೆ ಹಾಕಿ 'ಅಲುಗಾಡಿದರೆ ನನ್ನ ಮನೆಗೆ ನುಗ್ಗಿದ ದರೋಡೇಕೋರನೆಂದು ಪೋಲೀಸರಿಗೊಪ್ಪಿಸುವೆ' ಎಂದು ಹೇಳಿ ಬಂದಿದ್ದೆ. ಅವನಿಗೇನು ಬೇಕೋ ನೋಡಿಬರ್ತೀನಿ"


ಕೆಲವು ನಿಮಿಷಗಳ ನಂತರ ದಿನಕರ, ಪೂಜಾ ಇಬ್ಬರೂ ದೂರ, ಜನಸಂಚಾರವಿಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದ ಜೀತ್ ಕಾರ್ ಕಡೆ ಹೊರಟರು. ಅಲ್ಲಿ ನೋಡಿದರೆ ಭಿಕ್ಕು ಹೇಗೋ ತಪ್ಪಿಸಿಕೊಂಡು ರಿವಾಲ್ವರ್‌ವೊಂದನ್ನು ಜೀತ್ ತಲೆಗೆ ಹಿಡಿದು ನಿಂತಿದ್ದಾನೆ.


"ಪ್ರೊಫೆಸರ್ ನಾಗಾನಂದ್ ಬರೆದಿಟ್ಟ ಚೀಟಿ ನನ್ನ ಕೈಗೆ ಕೊಟ್ಟುಬಿಡಿ. ಇಲ್ಲವೇ..." ಎನ್ನುತ್ತ ಜೀತ್ ತಲೆಗೆ ರಿವಾಲ್ವರ್ ಒತ್ತಿದ.


ದಿನಕರನಿಗೆ ಬೇರೆ ದಾರಿ ಕಾಣಲಿಲ್ಲ. ಚೀಟಿಯನ್ನು ಭಿಕ್ಕುವಿನ ಕೈಗೆ ಕೊಟ್ಟ ನಂತರ ಭಿಕ್ಕು ಗನ್‌ನಿಂದ ಜೀತ್ ತಲೆ ಚೆಚ್ಚಿದ. ಜೀತ್‌ನ ಕಣ್ಣುಗಳು ಮುಚ್ಚಿದವು. ಜೀತ್‌ನನ್ನು ಅವನ ಕಾರಿನ ಡಿಕ್ಕಿಯಲ್ಲೇ ಹಾಕಿ ಮುಚ್ಚಿದ.


"ಈತನನ್ನು ಕಿಡ್ನಾಪ್ ಮಾಡುತ್ತಿರುವೆ -ಚೀಟಿ ಓದಲು ಇವನ ಸಹಾಯ ಬೇಕಾಗಬಹುದು. ಇನ್ನು ನೀವಿಬ್ಬರು -ಸಾರಿ" ಎಂದು ಗುಂಡು ಹಾರಿಸಲು ರಿವಾಲ್ವರ್ ಎತ್ತಿದ. ಆ ಹೊತ್ತಿಗೆ ಸರಿಯಾಗಿ ಮೇಲೆ ಹಾರುತ್ತಿದ್ದ ಪಾರಿವಾಳವೊಂದು ಭಿಕ್ಕುವಿನ ಕೈಮೇಲೆ ಹಿಕ್ಕೆ ಹಾಕಿತು. ಅವನ ಗಮನ ತಿರುಗಿದ್ದನ್ನು ನೋಡಿ ದಿನಕರ, ಪೂಜಾ ಅಲ್ಲಿಂದ ಓಡಿದರು. ಭಿಕ್ಕು ಏನಾಗುತ್ತಿದೆ ಎಂದು ಅರ್ಥ ಮಾಡಿಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸುವಷ್ಟು ಹೊತ್ತಿಗೆ ಇಬ್ಬರೂ ಜನ ಸಂಚಾರವಿರುವ ಕಡೆಗೆ ಓಡತೊಡಗಿದರು.


ಕೆಲ ನಿಮಿಶಗಳ ನಂತರ ಏದುಸಿರು ಎಳೆಯುತ್ತ ದಿನಕರ, ಪೂಜಾ ದಣಿವಾರಿಸಿಕೊಳ್ಳಲು ನಿಂತರು. ಭಿಕ್ಕು ಅವರನ್ನು ಹಿಂಬಾಲಿಸುತ್ತಿಲ್ಲವೆಂಬುದು ಖಚಿತವಾಗಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ಹತ್ತಿರವಿದ್ದ ರೆಸ್ಟೋರಾಂಟ್‌ಗೆ ಹೋದರು.


"ಈಗೇನು?" ಪೂಜಾ ಕೇಳಿದಳು.


"ಜೀತ್ ಜೀವಕ್ಕೇನೂ ಅಪಾಯವಿಲ್ಲ. ಆ ಒಗಟು ಬಿಡಿಸುವವರೆಗೂ ಅವರಿಗೆ ಜೀತ್ ಬೇಕು" ದಿನಕರ ಉತ್ತರಿಸಿದ.


"ಬಿಡಿಸಿಯಾದಮೇಲೆ?"


"ನಾವು ಅವರಿಗಿಂತ ಮುಂಚೆ ಆ ಒಗಟು ಬಿಡಿಸೋಣ" ಎನ್ನುತ್ತ ತನ್ನ ಫೋನ್ ಹೊರತೆಗೆದ.


"ಏನು ಮಾಡುತ್ತಿದ್ದೀರ?"


"ಶಾರದೆ ಹೆಸರುಳ್ಳ ಲೈಬ್ರರಿ ಬೇರೆಲ್ಲಿ ಇದೆ ಗೂಗಲಿಸುತ್ತಿದ್ದೀನಿ -ನನ್ನ ಫೋನ್‌ನಲ್ಲಿ ಇಂಟರ್‌ನೆಟ್ ಇದೆ... ಅರೆರೆ ಇದೇನು ನನ್ನ ಇಮೈಲ್ ಡೌನ್ ಆಗಿದೆಯೇ?" ಎರಡು ನಿಮಿಷಗಳು ನೋಡಿ "ಚೇ! ಇಷ್ಟು ದೂರ ಬಂದಿದ್ದು ದಂಡವಾಯಿತೇ? ನನಗೇಕೆ ಇದು ಮೊದಲೇ ಹೊಳೆಯಲಿಲ್ಲ?" ಎನ್ನುತ್ತ ಟೇಬಲ್ ಮೇಲೆ ಸ್ವಲ್ಪ ಹಣ ಹಾಕಿ ತರಿಸಿದ್ದ ತಿಂಡಿ ಹಾಗೇ ಬಿಟ್ಟು ಓಡಿ ಹೊರಟ.


"ಡಕ್ಟರ್? ಏನ್..?" ಪೂಜಾಳೂ ಅವನ ಹಿಂದೆಯೇ ಹೊರಟಳು.


ಮಧ್ಯಾಹ್ನ ಸಮಯ ೨:೦೦ ಘಂಟೆಯಾಗಿತ್ತು. ದಿನಕರ ನೇರವಾಗಿ ಟ್ಯಾಕ್ಸಿ ಬಾಡಿಗೆಗೆ ಸಿಗುವಲ್ಲಿಗೆ ನುಗ್ಗಿದ. ಕೆಲವೇ ನಿಮಿಷಗಳಲ್ಲಿ ಹೊರಬಂದು ಪೂಜಾಳ ಮೊಣಕೈ ಹಿಡಿದು ಅವಳನ್ನು ಟ್ಯಾಕ್ಸಿಯೊಂದಕ್ಕೆ ತಳ್ಳಿ ತಾನೂ ಹತ್ತಿದ. "ನಡೆಯಪ್ಪ" ಡ್ರೈವರ್‌ಗೆ ಹೇಳಿದ.


"ಏನಾಗುತ್ತಿದೆ ಹೇಳುತ್ತೀರ, ಡಾಕ್ಟರ್?" ಪೂಜಾ ಕೇಳಿದಾಗ ದಿನಕರ ತನ್ನ ಫೋನ್ ಎತ್ತಿ ಹಿಡಿದ.


"ಸರಸ್ವತಿ ಮಹಲ್ ಲೈಬ್ರರಿ, ತಂಜಾವುರ್" ಪೂಜಾ ಓದಿದಳು.



*****



ಸರ್ಫೋಜಿ ಸರಸ್ವತಿ ಮಹಲ್ ಲೈಬ್ರರಿ ತಂಜಾವೂರಿನ ಅರಮನೆ ಆವರಣದಲ್ಲಿದೆ. ದುರ್ಲಭ ಪ್ರಾಚೀನ ಗ್ರಂಥಗಳ ಭಂಡಾರಗಳಲ್ಲಿ ಇದೊಂದು. ತಂಜಾವೂರಿನ ತೆಲುಗು ನಾಯಕ ವಂಶದ ಮಹಾರಾಜರ ಕಾಲದಲ್ಲಿ (೧೬-೧೭ನೇ ಶತಮಾನ) ಇದು ಸರಸ್ವತಿ ಭಂಡಾರವೆಂಬ ಹೆಸರಿನಿಂದ ಪ್ರಾರಂಭವಾಯಿತು. ಮರಾಠರು ತಂಜಾವೂರನ್ನು ಸ್ವಾಧೀನ ಮಾಡಿಕೊಂಡ ನಂತರ ಸರಸ್ವತಿ ಭಂಡಾರವೂ ಅವರ ಅಧೀನಕ್ಕೆ ಬಂದಿತು. ಮರಾಠಾ ಮಹಾರಾಜ ಸರ್ಫೋಜಿ ೧೮೨೦ರಲ್ಲಿ ಕಾಶಿಗೆ ಯಾತ್ರೆ ಮಾಡಿದಾಗ ಈ ಭಂಡಾರಕ್ಕೆ ಬಹಳಷ್ಟು ಗ್ರಂಥಗಳ ಸೇರ್ಪಡೆಯಾಯಿತು. ಇದಾದ ನಂತರವೇ ಸರ್ಫೋಜೆಯ ಹೆಸರು ಈ ಗ್ರಂಥ ಭಂಡಾರಕ್ಕೆ ಸೇರಿಕೊಂಡಿತು. ಕನಿಷ್ಠ ಹನ್ನೊಂದು ಲಿಪಿಗಳಲ್ಲಿ, ೩೦೦೦೦ಕ್ಕೂ ಹೆಚ್ಚು ತಾಳೇಗರಿ, ತಾಮ್ರ ಹಾಗು ಕಾಗದದ ಮೇಲಿನ ಹಸ್ತಪ್ರತಿಗಳಿವೆ. ಸಂಸ್ಕೃತವೊಂದೇ ಅಲ್ಲದೆ ಕನ್ನಡ, ತಮಿಳು, ತೆಲುಗು, ಮರಾಠಿ ಭಾಷೆಗಳ ಪುಸ್ತಕಗಳು ಇಲ್ಲಿ ಲಭ್ಯವಿದೆ.


ದಿನಕರ, ಪೂಜಾ ಟ್ಯಾಕ್ಸಿಯನ್ನು ನೇರವಾಗಿ ತಂಜಾವೂರಿನ ಅರಮನೆ ಆವರಣದಲ್ಲಿ ತಂದು ನಿಲ್ಲಿಸಿದರು. ಆವರಣದಲ್ಲಿ ಲೈಬ್ರರಿ ಹುಡಿಕಿ, ಒಳಗೆ ಹೋದರು. ತಮ್ಮ ಬಳಿ ಇದ್ದ ಕಾಲ್-ನಂಬರ್ ವಿಚಾರವಾಗಿ ಕೇಳಿದ ನಂತರ, ಅಲ್ಲಿದ್ದ ಗುಮಾಸ್ತ ಅವರನ್ನು ಲೈಬ್ರರಿಯ ವಿಶಯಪಟ್ಟಿಯ ಕಡೆ ತಿರುಗಿಸಿದ.


"ಯಾವ ಸೆಕ್ಷನ್‌ನಲ್ಲಿ ಇರಬಹುದು, ಡಾಕ್ಟರ್? ವೇದ-ಸಂಹಿತ, ವೇದ-ಬ್ರಹ್ಮಣ, ಉಪನಿಷತ್ತು, ವೇದಾಂಗ, ಭಾಷ್ಯ-ಪ್ರಯೋಗ, ಧರ್ಮಶಾಸ್ತ್ರ, ಇತಿಹಾಸ, ಪುರಾಣ -ಈ ಎಲ್ಲ ಸೆಕ್ಷನ್‌ಗಳಿವೆ" ಪೂಜಾ ಹೇಳಿದಳು.


"ಪುರಾಣ. ಡಿಸೈಡೆಡ್ಲಿ ಪುರಾಣ. ಜೀತ್ ಪುರಾಣಗಳಲ್ಲೇ ಇರುವ ಚಾನ್ಸ್ ಹೆಚ್ಚು ಎಂದು ಹೇಳಿದ್ದ" ದಿನಕರ ಹೇಳಿದ.


ಸುಮಾರು ಹೊತ್ತು ಇಬ್ಬರೂ ಕ್ಯಾಟಲಾಗ್ ನೋಡುತ್ತಿದ್ದರು. ಕೊನೆಗೊಮ್ಮೆ "ಗಾಟ್ ಇಟ್" ಪೂಜಾ ಉಲ್ಲಾಸದಿಂದ ಕೂಗಿದಳು. "ಇಲ್ಲಿದೆ ನೋಡಿ -'ಅಗ್ನಿಪುರಾಣ', ೧೨ನೇ ಶತಮಾನ, ತಾಳೆಗರಿ ಪತ್ರ, ಕಲ್ಪ-ಪುರಾಣ ಸೆಕ್ಷನ್, ಮಹಾಪುರಾಣ ಸಬ್-ಸೆಕ್ಷನ್. ರೋ-ನಂಬರ್ ೮೭, ಶೆಲ್ಫ್-ನಾಂಬರ್ ೧೧, ರೆಫರೆನ್ಸ್ ಓನ್ಲಿ"


ಇಬ್ಬರೂ ೮೭ನೇ ಸಾಲನ್ನು ಹುಡುಕಿಕೊಂಡು ಹೊರಟರು. "'ರೆಫರೆನ್ಸ್ ಓನ್ಲಿ' ಎಂದರೆ ಪುಸ್ತಕ ಲೈಬ್ರರಿಯಿಂದ ಹೊರತೆಗೆಯುವ ಹಾಗಿಲ್ಲ. ಇಲ್ಲೇ ಆ ಪುಸ್ತಕ ಸುರಕ್ಷಿತವಾಗಿರುತ್ತೆ" ದಿನಕರ ತನ್ನ ಆಲೋಚನೆ ಹೇಳಿದ.


"ಆದರೆ ಆವತಂಶಕದ ನಿಲಿಕು ನೋಡಿದರೆ ಇದೂ ಸೇಫ್‌ಆಗಿರದಿರಬಹುದು. ಇಲ್ಲಿಂದಲೂ ಅದನ್ನು ಮಾಯ ಮಾಡಿದರೆ..." ಪೂಜಾ ತಿಳಿಸಿದಳು.


"ಹಾಗಿದ್ದರೆ ನಮಗೊಂದೇ ದಾರಿ. ಆ ಪುಸ್ತಕ ನಾವೇ ಕದಿಯಬೇಕು"


"ಹೂಂ..." ಪೂಜಾ ಆಶ್ಚರ್ಯವೇನೂ ವ್ಯಕ್ತ ಪಡಿಸಲಿಲ್ಲ.


ಪ್ರಸ್ತುತ ಅಗ್ನಿಪುರಾಣವಿದ್ದ ಸಾಲಿಗೆ ಹೋಗಿ ಅದನ್ನು ಹುಡುಕಿ ಕೈಗೆತ್ತಿಕೊಂಡರು.


"ಇಲ್ಲಿ ಕೊಡಿ ಅದನ್ನು" ಹಿಂದಿನಿಂದ ಪರಿಚಿತ ಧ್ವನಿ ಬಂತು


"ಜೀತ್? ನೀನು? ಆ ಭಿಕ್ಕು? ಹೇಗೆ..." ದಿನಕರ ಅಸಂಬದ್ಧಪ್ರಲಾಪ ಮಾಡಿದ


"ಅವನೇ? ಅವನಿಗೆ... ನನ್ನ ರಿವಾಲ್ವರ್ ಬುಲೆಟ್ಟಿನ ಜೊತೆ ಭೇಟಿ ಮಾಡುವುದಿತ್ತು"


"ನಾ...ಹಾ.." ಅತ್ತ ಜೀತ್ ತಪ್ಪಿಸಿಕೊಂಡನೆಂದು ಹರ್ಷವಾದರೆ ಇತ್ತ ತನಗೆ ಬಂದೂಕು ತೋರಿಸುತ್ತಿದ್ದಾನೆಂಬ ಆತಂಕ ದಿನಕರನಿಗೆ.


"ನನಗೆ ಅವನೊಬ್ಬ ಕೈಗೊಂಬೆಯಷ್ಟೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು ಅನ್ನೋಹಾಗೆ ನೀನು ಕೈಯಲ್ಲಿ ಹಿಡಿದಿರೋ ಸತ್ಯ ಹೊರತೆಗೆಯೋದಕ್ಕೆ ಅವನನ್ನು ಅವನ ಸಂಘವನ್ನೇ ಉಪಯೋಗಿಸಿಕೊಂಡೆ ಅಷ್ಟೆ" ಜೀತ್ ಹೇಳಿದ.


ಧಗ್ಗನೆ ದಿನಕರನಿಗೆ ಇದರ ಪರಮಾರ್ಥ ತಿಳಿಯಿತು. "ಹಾಗಾದರೆ... ನಾಗಾನಂದ?"


"ಆಕ್ಸಿಡೆಂಟ್... ಬಟ್ ವೆಲ್ ಡಿಸರ್ವ್ಡ್. ಆ ಆವತಂಶಕ ಸಂಘದವರು ಅವನನ್ನು ಹೆದರಿಸಿ, ಬೆದರಿಸಿ ಈ ಪ್ರೂಫ್ ಪಬ್ಲಿಶ್ ಮಾಡಬೇಡವೆಂದು ಹೇಳಿದರೆ ಇವನು ಮಹಾಧೀರ, ಕೇಳಿಕೊಂಡು, ಬಾಲ ಮುದುರಿಕೊಂಡು ಸುಮ್ಮನಿದ್ದ" ಜೀತ್ ಕೋಪದಿಂದ ಹೇಳಿದ.


"ಆಕ್ಸಿಡೆಂಟ್?" ದಿನಕರನ ದಿಗಿಲು ಗೋಚರವಾಗಿತ್ತು.


"ಯಾಹ್! ಆ ಮುಠ್ಠಾಳ ಭಿಕ್ಕು ಕೆಲಸ. ಪ್ರೂಫ್ ಕೇಳಕ್ಕೆ ಹೋದಾಗ ಆ ಪುಸುಕಲ ನಾಗಾನಂದ ಗನ್ ತೋರಿಸಿದನಂತೆ. ಹೆದರಿ ಇವನು ಶೂಟ್ ಮಾಡಿದನಂತೆ. ಇನ್ಕಾಂಪಿಟೆಂಟ್ ಫೂಲ್! ನಾಗಾನಂದ ಸತ್ತ ಮೇಲೆ ಆ ಪ್ರೂಫ್ ಕೂಡ ಸತ್ತು ಹೋಯಿತೆಂದುಕೊಂಡಿದ್ದೆ. ಆಗ ತಂಗಾಳಿ ಬಂದ ಹಾಗೆನೀವಿಬ್ಬರೂ ನೀವಾಗಿಯೇ ನನ್ನ ಬಳಿ ಬಂದಿರಿ. ನಾವು ಮಾತನಾಡುತ್ತಿದ್ದಾಗ ಬಂದ ಫೋನ್ ನೆನಪಿದೆಯಾ? ಭಿಕ್ಕುವನ್ನು ಮನೆಯೊಳಗೆ ಬರಹೇಳಿ ನಾಗಾನಂದನ ಒಗಟಿನ ಚೀಟಿ ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದು ನಾನೇ, ನಿನ್ನ ಇನ್ಸ್‌ಪೆಕ್ಟರ್ ಅಲ್ಲ" ಪೂಜಾಳ ಕಡೆ ನೋಡುತ್ತ "ನಿನ್ನ ಕೈಚಳಕದಿಂದ ಅಲ್ಲೂ ಫೇಲ್ ಆದ. ನಂತರ ಅವನನ್ನು ಪೋಲೀಸರಿಗೆ ಒಪ್ಪಿಸದೆ ನಮ್ಮ ಜೊತೆಯೇ ಕರೆದೊಯ್ಯುವ ಹಾಗೆ ಮ್ಯಾನಿಪ್ಯುಲೇಟ್ ಮಾಡಿದೆ. ನಂತರ ಶೃಂಗೇರಿಯಲ್ಲಿ ಹುಡುಕಾಟ ಫೇಲ್ ಆದ ತಕ್ಷಣ ನನಗೆ ನಾಗಾನಂದನ ಶಾರದಾ ಪೀಠ ಇದೆಂದು ಅರ್ಥವಾಯಿತು. ಅವನ ಕಟ್ಟು ಬಿಚ್ಚಿ ಬಂಧನದಿಂದ ಬಿಡಿಸಿ ನನ್ನನ್ನು 'ಕಿಡ್ನಾಪ್' ಮಾಡಿ ನಿಮ್ಮಿಬ್ಬರನ್ನು ಮುಗಿಸಲು ಹೇಳಿದೆ. ನೀವಿಬ್ಬರೂ ತಪ್ಪಿಸಿಕೊಂಡಿರಿ, ಮತ್ತೆ ವಿಫಲನಾದ. ಸರಿ ಶೃಂಗೇರಿಯಿಂದ ಇಲ್ಲಿಗೆ ರವಾನೆಯಾದಮೇಲೆ ದಾರಿಯಲ್ಲಿ ಅವನನ್ನು ಮುಗಿಸಿದೆ. ನಂತರ ಇಲ್ಲಿಗೆ ಬಂದರೆ ನೀವಿಬ್ಬರೂ ಇಲ್ಲೇ ಸಿಕ್ಕಿದ್ದಿರಿ"


"ಹಾಗಾದರೆ...ಹಾಗಾದರೆ... ಆವತಂಶಕ?" ಪೂಜಾ ಕೇಳಿದಳು


"ಓಹ್! ಆ ಭಿಕ್ಕು ನಿಜವಾಗಿ ಆವತಂಶಕದವನೇ. ನಾಗಾನಂದನ ಪ್ರೂಫ್ ಹೊರತರುವ ಸಲುವಾಗಿ ನಾನು ಅನಾನಿಮಸ್‌ಆಗಿ ಆವತಂಶಕದೊಂದಿಗೆ ಸಂಪರ್ಕ ಮಾಡಿ ಪ್ರೂಫ್‌ಗಳನ್ನು ನಾಶ ಮಾಡದಿದ್ದರೆ ಅವರಿಗೆ ಉಳಿಗಾಲವಿಲ್ಲವೆನ್ನುವುದನ್ನು ತೋರಿಸಿದೆ. ಅವರು ನಾನು ತೋಡಿದ ಹಳ್ಳಕ್ಕೆ ಬಿದ್ದರು -ನಾಗಾನಂದನಿಂದ ಆ ಪ್ರೂಫ್‌ಗಳನ್ನು ಪಡೆಯುವದಕ್ಕಾಗಿ ಅವರ ಆ ಭಿಕ್ಕುವನ್ನು ನನ್ನ ನಿಗ್ರಹಕ್ಕೆ ಒಪ್ಪಿಸಿದರು. ಆ ಭಿಕ್ಕು ನಾನು ಹೇಳಿದಂತೆ ಆಡುತ್ತಿದ್ದ" ಜೀತ್ ವಿಶದಪಡಿಸಿದ. "ಪ್ರೂಫ್ ಕೈಗೆ ಸಿಕ್ಕಮೇಲೆ ಆ ಭಿಕ್ಕು ಅವನ್ನು ನನಗೆ ತಲುಪಿಸುವವನಿದ್ದ. ನಂತರ ನಾನು ಆವತಂಶಕದವರನ್ನೂ ಡಬಲ್-ಕ್ರಾಸ್ ಮಾಡುವವನಿದ್ದೆ. ಆ ಪ್ರೂಫ್‌ಗಳನ್ನು ಪಬ್ಲಿಶ್ ಮಾಡಿ, ಬುದ್ಧಾವತಾರದ ಸುಳ್ಳನ್ನು ಜಗತ್ತಿನ ಮುಂದೆ ಇಡುವುದೇ ನನ್ನ ಧ್ಯೇಯ"


"ಪೋಲೀಸ್! ಗನ್ ಕೆಳಗೆ ಬಿಸಾಡಿ!" ಹಿಂದಿನಿಂದ ಕೂಗು ಬಂತು.


ಜೀತ್ ದಿಕ್ಕಾಪಾಲಾಗಿ ಅತ್ತಿತ್ತ ನೋಡಹತ್ತಿದ.


"ಬಿಸಾಡಿ! ಈಗ!" ಪುನಃ ಕರೆ ಬಂತು. ಹತ್ತಾರು ಮಂದಿ ಪೋಲೀಸರು ನುಗ್ಗಿ ಜೀತ್, ಪೂಜಾ, ದಿನಕರರನ್ನು ಸುತ್ತುವರಿದು ನಿಂತರು.


"ಆತ! ಅವನನ್ನು ಅರೆಸ್ಟ್ ಮಾಡಿ" ಜೀತ್‌ನನ್ನು ತೋರಿಸಿ ಇನ್ಸ್ಪೆಕ್ಟರ್ ಬ್ರಹ್ಮಾವರ್ ಮುಂಬರುತ್ತ ಹೇಳಿದ. ದಿನಕರನ ಕಡೆ ತಿರುಗಿ. "ಐ ಆಮ್ ಸಾರಿ ಮಿ. ದಿನಕರ್. ನಿಮಗೆ ತೊಂದರೆ ಕೊಡಬೇಕಾಯಿತು. ಕ್ಷಮಿಸಿ" ಎಂದ. ನಂತರ ಜೀತ್‌ನನ್ನು ನೋಡಿಕೊಂಡು "ಮಿ. ಜೀತೇಂದ್ರ, ನಿಮ್ಮ ಆ ಭಿಕ್ಕು-ವೇಷಧಾರಿಯನ್ನು ನೀವು ಬಳುವಳಿಯಾಗಿ ಕೊಟ್ಟ ಗುಂಡು ಕೊಲ್ಲಲಿಲ್ಲ. ಈಗ ನಮ್ಮ ನಿಗ್ರಹದಲ್ಲಿದ್ದಾನೆ; ಕೋಗಿಲೆಯಂತೆ ಹಾಡುತ್ತಿದ್ದಾನೆ. ನಿಮ್ಮ ಸಂಪೂರ್ಣ ಜಾತಕವನ್ನು ಆಗಲೇ ಒದರಿದ್ದಾನೆ. ನಿಮ್ಮನ್ನು ಕೊಲೆ ಆಪಾದನೆ ಮೇಲೆ ಅರೆಸ್ಟ್ ಮಾಡಲಾಗುತ್ತಿದೆ" ಎಂದ. "ಕರೆದೊಯ್ಯಿರಿ ಇವನನ್ನು" ಉಳಿದ ಪೋಲೀಸರಿಗೆ ಹೇಳಿದ.


"ಆವತಂಶಕ..." ದಿನಕರ ಇನ್ಸ್‌ಪೆಕ್ಟರ್ ಬೆರಳಿನಲ್ಲಿದ್ದ ಉಂಗುರ ನೋಡುತ್ತ ಉಸುರಿದ.


"ನೋ ಮಿ. ದಿನಕರ್" ಇನ್ಸ್‌ಪೆಕ್ಟರ್ ಮೆಲ್ಲಗೆ ದಿನಕರನಿಗೆ ಹೇಳಿದ. "ನನ್ನ ನಿಷ್ಠೆ ನನ್ನ ಕರ್ತವ್ಯದಲ್ಲಿ. ಕೊಲೆಗಾರನನ್ನು ಪತ್ತೆಹಚ್ಚುವುದು ನನ್ನ ಗುರಿಯಾಗಿತ್ತು. ಯು ಆರ್ ಫ್ರೀ"


ಗಡಿಬಿಡಿಯಲ್ಲಿ ದಿನಕರ ಮತ್ತು ಪೂಜ ಕೈಯಲ್ಲಿದ್ದ ಅಗ್ನಿಪುರಾಣವನ್ನು ಲೈಬ್ರರಿಯಿಂದ 'ಬಾಡಿಗೆ' ತೆಗೆದುಕೊಂಡು ಹೊರಬಿದ್ದರು.



*****



ಮಾರನೆಯ ದಿನ ಸಂಜೆ ರೆಸ್ಟೋರಾಂಟ್‌ನಲ್ಲಿ ಕುಳಿತು ದಿನಕರ ಹಾಗು ಪೂಜಾ ಡಿನ್ನರ್ ಮಾಡುತ್ತಿದ್ದರು.


"ಆ ಅಗ್ನಿಪುರಾಣದಲ್ಲಿ ಜೀತ್ ಹುಡುಕುತ್ತಿದ್ದ ಎಲ್ಲ ಪ್ರೂಫ್‌ಗಳೂ ಇವೆ. ಹಸ್ತಪ್ರತಿ ಮಾಡುವವ ಇನ್ನೂ ಹಿಂದಿನ ಕಾಲದ ಗ್ರಂಥವನ್ನು ಆಧಾರ ಮಾಡಿಕೊಂಡು ಬರೆದಿದ್ದಾನೆ. ಅದರಲ್ಲಿ ಹಲಾಯುಧ ಇರುವುದು, ತಾನು ತಿಳಿದಿರುವ ಬುದ್ಧನನ್ನು ಅದಲಿ ಬದಲಿ ಮಾಡುತ್ತಿರುವುದು ಎಲ್ಲವೂ ವಿಸ್ತಾರವಾಗಿ ಬರೆದಿದ್ದಾನೆ" ದಿನಕರ ಪೂಜಾಳಿಗೆ ಹೇಳುತ್ತಿದ್ದ. ಸ್ವಲ್ಪ ಮೌನದ ನಂತರ "ಬುದ್ಧ ವಾಸ್ ಎ ಗ್ರೇಟ್ ಮ್ಯಾನ್ ವಿಥೌಟ್ ಬೀಇಂಗ್ ಆನ್ ಅವತಾರ... ಅಂದಹಾಗೆ, ಎರಡನೇ ಕ್ಲೂ ಭದ್ರಕಾಳಿಯ ತವರೂರು, ಕೊಲ್ಕತ್ತಾ"


"ಓಹ್, ವಾವ್!" ಪೂಜಾಳ ಉದ್ಗಾರ.


"ಅಷ್ಟೇ ಅಲ್ಲ, ನನ್ನ ಈಮೈಲ್ ಪುನಃ ಅಪ್ ಆಗಿದೆ. ನಾಗಾನಂದ ತನ್ನ ರೆಸರ್ಚ್ ಮೆಟೀರಿಯಲ್ ಅಟ್ಯಾಚ್‌ಮೆಂಟ್‌ಆಗಿ ನನಗೆ ಈಮೈಲ್ ಕಳಿಸಿದ್ದಾನೆ. ಆದರಲ್ಲಿ ಇನ್ನೂ ಹಲವಾರು ಇದೇ ರೀತಿ ವಿವರಗಳಿವೆ. ಒಟ್ಟಿನಲ್ಲಿ ಜೀತ್ ಹೇಳುತ್ತಿದ್ದ, ಮುಖ್ಯವಾಗಿ ನನ್ನ ಮಿತ್ರ ನಾಗಾನಂದ ರಿಸರ್ಚ್ ಮಾಡುತ್ತಿದ್ದ ಹಲಾಯುಧನೇ ಮೂಲ ಅವತಾರ, ಬುದ್ಧ ನಂತರ ಸೇರಿಸಿದ ಅವತಾರವೆಂದು ಕನ್‌ಕ್ಲೂಸಿವ್‌ಆಗಿ ಪ್ರೂವ್ ಮಾಡುತ್ತದೆ" ದಿನಕರ ಮುಂದುವರೆಸಿದ.


"ಮುಂದೇನು, ಡಾಕ್ಟರ್? ನೀವು ಇದನ್ನು ಪಬ್ಲಿಶ್ ಮಾಡುವಿರಾ?" ಪೂಜಾ ಕೇಳಿದಳು. ನಾಗಾನಂದ ತಲೆಯಾಡಿಸಿದಾಗ "ಮತ್ತೆ ಆವತಂಶಕ?"


"ಆವತಂಶಕ ಬಿ ಡ್ಯಾಮ್ಡ್. ನನ್ನ ಮಿತ್ರ ನಾಗಾನಂದನಿಗೆ ಶ್ರದ್ಧಾಂಜಲಿಯಾಗಿ ಈ ಪುಸ್ತಕ ಖಂಡಿತವಾಗಿ ಪಬ್ಲಿಶ್ ಮಾಡಿಸುವೆ. ಇಲ್ಲಲ್ಲದಿದ್ದರೆ ಅಮೇರಿಕಾದಲ್ಲಿ" ದಿನಕರ ಢೃಡವಾಗಿ ಹೇಳಿದ. "ನೀನು? ನಿನ್ನ ಸ್ಟೋರಿ ಸಿಕ್ಕಿತೇ? ಇನ್ನೂ ಹೆಚ್ಚು ಸಿಕ್ಕಿತೇ?"


"ನಾನು? ನಾನು ಇನ್ನು ಮೇಲೆ ಸ್ಟೋರಿಯಲ್ಲ ಫಿಕ್ಷನ್-ಥ್ರಿಲ್ಲರ್ಸ್ ಬರೆಯೋಣವೆಂದು ನಿರ್ಧಾರ ಮಾಡಿದ್ದೇನೆ. ಮೊದಲ ಕತೆಗೆ ಸಾಕಷ್ಟು ಮೆಟೀರಿಯಲ್ ಸಿಕ್ಕಿದೆ" ಎಂದು ನಕ್ಕಳು.



*****