Thursday, July 24, 2025

ಜ್ಯೋತಿಷ್ಮತಿ

ಕಥೆಯು KKNC 2024 ಸ್ವರ್ಣಸೇತು ಸಂಚಿಕೆಯಲ್ಲಿ ಪ್ರಕಟವಾಗಿದ್ದು, ಅದರ ಕಥಾಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸಿತ್ತು



ಕ್ರಿ.ಶ. ೧೧ನೇ ಶತಮಾನದ ಮಧ್ಯಭಾಗ, ಪಾಂಡ್ಯ ರಾಜ್ಯದ ದಕ್ಷಿಣ ಪ್ರದೇಶ


"ಸಂಜೆ ಭೋಜನಕ್ಕೆ ಅಡಿಗೆ ಮಡೋದಕ್ಕೆ ಮನೇಲಿ ಏನೂ ಭಕ್ಷ್ಯಪಾನಗಳಿಲ್ಲ. ಇವತ್ತೂ ಕ್ಷುದಿತರಾಗಿಯೇ ಮಲಗಬೇಕೋ ಏನೋ" ನಾಚಾರು ತನ್ನಲ್ಲಿ ತಾನೇ ಮಾತನಾಡಿಕೊಳ್ಳುತ್ತಿದ್ದಳು. "ನಮ್ಮಿಬ್ಬರಿಗಾದರೂ ಹೇಗೋ ನಡೆದೀತು... ಆದರೆ ಮಗುವಿಗೂ ಏನೂ ಇಲ್ಲವಲ್ಲ" ಎಂದು ಪೇಚಾಡಿಕೊಳ್ಳುತ್ತಿದ್ದಳು. ನಾಚಾರು, ಅವಳ ಪತಿ ಕಾಶೀಪತಿ, ಪುತ್ರ ಏಳು ವರ್ಷದ ನೀಲಕಂಠ, ಇವರು ಮೂವರ ಕುಟುಂಬ. ನಾಚಾರು ಅತ್ತೆ-ಮಾವಂದಿರು ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ದೊಡ್ಡವರೆಂದು ನಾಚಾರು ತಂದೆ ಅದೇ ಊರಿನಲ್ಲಿ ವಾಸವಾಗಿದ್ದರೂ ಅವರಲ್ಲೂ ಸಹ ಅದೇ ನಿರ್ಧನತ್ವ - ಹಾಗಾಗಿ ಆ ದಿಕ್ಕಿನಿಂದಲೂ ಹೆಚ್ಚು ಸಹಾಯ ಅಪೇಕ್ಷಿಸುವಂತಿರಲಿಲ್ಲ. ನಾಚಾರು ನಿಟ್ಟುಸಿರೆಳೆದು ದೀಪ ಹಚ್ಚಲು ಹೊರಟಳು.


ಅಂದು ರಾತ್ರಿ ಹೊಟ್ಟೆ ಹಸಿದೇ ಮಲಗಲು ಹೋದಾಗ, ನಾಚಾರು-ಕಾಶೀಪತಿ ಇಬ್ಬರಿಗೂ ಈ ಬಡತನದ ಅಂತ್ಯವೇ ಕಾಣಿಸಲೊಲ್ಲದಾಗಿತ್ತು. ತುತ್ತು ತುತ್ತಿಗೂ ಮಾಡಬೇಕಾದ ಸಂಘರ್ಷ ತಾಳಲಾರದೆ, ಬಹಳ ದಿನಗಳಿಂದ ತನ್ನ ತಲೆಯಲ್ಲಿ ಓಡಾಡುತ್ತಿದ ಒಂದು ಸಂದಿಗ್ಧ ಪ್ರಸ್ತಾಪವನ್ನು ನಾಚಾರು ತನ್ನ ಪತಿಯಲ್ಲಿ ಇಟ್ಟಳು. "ನಮ್ಮ ಈ ದಿನನಿತ್ಯದ ವೈಷಮ್ಯದಿಂದ ಬಿಡಿಸಿಕೊಳ್ಳೋಕ್ಕೆ ಒಂದೇ ಉಪಾಯ ಕಾಣಿಸುತ್ತಿದೆ - ಜ್ಯೋತಿಷ್ಮತಿತೈಲ"


ಕಾಶೀಪತಿ ದಿಗ್ಭ್ರಾಂತನದ "ನಾಚಾರು.. ಅದು..ಅದೂ"


"ಗೊತ್ತು... ಅದು ಶಿರೋವಿರೇಚನ ದ್ರವ್ಯ" ನಾಚಾರು ವಿನಯವಾಗಿ ನುಡಿದಳು "ಅದನ್ನು ಸೇವಿಸಿದರೆ ಮೂರು ಸಾಧ್ಯತೆಗಳಿವೆ - ಮರಣ, ಉನ್ಮಾದ ಅಥವ ಅಪ್ರತಿಮ ಜ್ಞಾನ. ಏನೂ ಅಂದರೆ... ನಮ್ಮಿಬ್ಬರಿಗೆ ಯಾವುದು ದಕ್ಕಿದರೂ ಚಿಂತೆಯಿಲ್ಲ, ಮಗು ಜ್ಞಾನಿಯಾಗುತ್ತಾನೆ ಅಂದರೆ ಈ ಆಪತ್ತು ಕೈಗೆತ್ತಿಕೊಳ್ಳಲೇಬೇಕು. ಕಡೆ ಪಕ್ಷ ಅವನಾದರೂ ಈ ಕಷ್ಟ-ಜೀವನದಿಂದ ಪಾರಾಗುವಂತಿದ್ದರೆ..."


ನಾಚಾರು ಕಾಶೀಪತಿಯನ್ನು ಹೇಗೋ ಒಪ್ಪಿಸಿ, ಮರುದಿನ ಆ ಕಾರ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಕೂಡಿಸಿಕೊಳ್ಳಲು ಹೊರಟಳು. ಪಲಾಶ ಗಿಡದ ಹೂವುಗಳು, ಹೋಮಕ್ಕೆ ಎರಕ್ಕು, ಕರುಂಗಳಿ ಸಮಿತ್ತುಗಳು, ದರ್ಭೆ ಮತ್ತು ಅರುಗ ಹುಲ್ಲುಗಳು, ಮಾಲ್ಕಂಗನಿ ಗಿಡದ ಬೀಜಗಳು, ಇತ್ಯಾದಿ. ಮಧ್ಯರಾತ್ರಿಯಲ್ಲಿ ಹೋಗಿ ಹತ್ತಿರದಲ್ಲಿದ್ದ ಶ್ರೀಶೈಲನಾಥಪತಿ ದೇವಾಲಯದ ಬಾವಿಯಿಂದ ತಾಮ್ರದ ಕೊಡದಲ್ಲಿ ನೀರು ಸೇದಿಕೊಂಡು ತಂದಿಟ್ಟಳು. ಅಂದು ಕಾಶೀಪತಿ ಅಗ್ನಿಕಾರ್ಯ ಮುಗುಸಿದ ನಂತರ ಆರಿದ ಹೋಮದ ಭಸ್ಮವನ್ನು ತಗೆದಿಟ್ಟಳು.


ಮರುದಿನ ಪ್ರಾತಃ ಸ್ನಾನದ ನಂತರ ಮಡಿಯನ್ನುಟ್ಟು, ಆಯುರ್ವೇದ ಸಂಹಿತೆಯಲ್ಲಿ ಹೇಳಿರುವಂತೆ ವಿಧಿವತ್ತಾಗಿ ಜ್ಯೋತಿಷ್ಮತಿತೈಲವನ್ನು ನಿರ್ಮಿತಮಾಡಲು ಆರಂಭ ಮಾಡಿದಳು. ದೇವಸ್ಥಾನದ ಕೂಪದಿಂದ ನಡುರಾತ್ರಿಯಲ್ಲಿ ಸೇದಿ ತಂದಿದ್ದ ನೀರಿನಲ್ಲಿ ಹವನದ ಭಸ್ಮವನ್ನು ಕದರಿ ಇಪ್ಪತ್ತೊಂದು ಬಾರಿ ಅದನ್ನು ಕುದಿಸಿ, ಆರಿಸಿ, ಬಟ್ಟೆಯಲ್ಲಿ ಶೋಧಿಸಿದಳು. ನಂತರ ಒಣಗಿದ  ಪಲಾಶ ಹೂವುಗಳನ್ನು ಬೀಸಿ ಅದನ್ನು ಭಸ್ಮ ಕದರಿ ಶೋಧಿಸಿದ ನೀರಿನಲ್ಲಿ ಬೆರೆಸಿ, ಏಳು ಬಾರಿ ಕುದಿಸಿ ಆರಿಸಿದಳು. ಈ ಕೆಲಸವು ಮೂರು ದಿನಗಳ ಕಾಲ ಹಿಡಿಯಿತು. ಇಷ್ತು ಹೊತ್ತಿಗೆ ಮಾಲ್ಕಂಗನಿ ಗಿಡದ ಬೀಜಗಳು ಒಣಗಿ ರಸವತ್ತಾಗಿದ್ದವು. ಇವುಗಳನ್ನು ಜೆಜ್ಜಿ ಎಣ್ಣೆ ತೆಗೆದು, ಶೊಧಿಸಿ, ನಂತರ ಪಲಾಶ ಹೂವು-ಭಸ್ಮದ ನೀರಿನಲ್ಲಿ ಹಾಕಿ ಮೂರಾವರ್ತಿ ಕುದಿಸಿಕೊಂಡು, ನಂತರ ಮೇಲೆ ತೇಲಿಬಂದ ಎಣ್ಣೆಯನ್ನು ಬೇರ್ಪಡಿಸಿಕೊಂಡಳು. ಕಂದು ಬಣ್ಣದ ಗಾಢವಾದ ಜ್ಯೋತಿಷ್ಮತಿತೈಲ ಉದ್ಯತವಾಗಿತ್ತು, ಆದರೆ ಅದನ್ನು ಇನ್ನೂ ಸೇವಿಸುವಂತಿರಲಿಲ್ಲ.


ಕಾಶೀಪತಿಯು ಪಂಚಾಂಗವನ್ನು ನೋಡಿ ಎರಡು ದಿನಗಳ ನಂತರ ಬರುವ ನವಮಿಯ ದಿನವೇ ಈ ಕಾರ್ಯಕ್ಕೆ ಸರಿಯಾದ ಮುಹೂರ್ತವೆಂದು ನಿರ್ಧರಿಸಿದ. ಅಂತೆಯೇ ಆ ನವಮಿಯ ರಾತ್ರಿ ಕಾಶೀಪತಿ-ನಾಚಾರು ಇಬ್ಬರೂ ಕೂಡಿ ಯಜ್ಞವನ್ನು ಮಾಡಿ, ಶಾಸ್ತ್ರ ವಿಧಿಯಂತೆ ದೇವತೆಗಳಿಗೆ ಹಾಗು ಧನ್ವಂತ್ರಿಗೆ ಪ್ರಾರ್ಥನೆಗಳನ್ನು ಸಲ್ಲಿಸಿ ಜ್ಯೋತಿಷ್ಮತಿತೈಲವನ್ನು ನೈವೇದ್ಯ ಮಾಡಿದರು. ನಂತರ, ಮಲಗಿದ್ದ ಮಗನನ್ನು ಎಬ್ಬಿಸಿ, ಮೂವರೂ ಮಂತ್ರ ಪರಿಶುದ್ಧವಾದ ಆ ಜ್ಯೋತಿಷ್ಮತಿತೈಲವನ್ನು ವಿಧಿ ಪ್ರಕಾರವಾಗಿ ಸೇವಿಸಿದರು.


ಮನುಷ್ಯ ಒಂದು ಬಗೆದರೆ ದೈವ ಮತ್ತೊಂದು ಬಗೆಯುವುದು ಎನ್ನುವಂತೆ ಅಂದು ಆ ಮನೆಯಲ್ಲಿ ಮಹಾದುರಂತವೇ ನಡೆಯಿತು. ಯಾವ ಮಗುವಿನ ಏಳ್ಗೆಗಾಗಿ ಈ ಅಪಾಯಕಾರಿ ಕೆಲಸವನ್ನು ಕೈಗೊಂಡಿದ್ದರೋ ಆ ಮಗುವು ಮೃತಪಟ್ಟಿತು. ಕಾಶೀಪತಿಗೆ ಬುದ್ಧಿ ಭ್ರಮಣೆಯಾಗಿ ಬಾಗಿಲು ತೆರೆದು ಹೋದವ ಮತ್ತೆ ಕಾಣಿಸಿಕೊಳ್ಳಲೇಯಿಲ್ಲ. ಗಂಟಲು-ಎದೆ-ಮೈಯುರಿಯ ವೇದನೆಗಳನ್ನು ತಾಳಲಾರದೆ, ನಾಚಾರು ಮನೆಯ ಬಾಗಿಲು ತೆರೆದು ಶ್ರೀಶೈಲನಾಥಪತಿ ದೇವಾಲಯದೆಡೆ ಓಡಿದಳು.


⌘⠀⠀⁜⠀⁓⠀※⠀⁓⠀⁜⠀⠀⌘


ಕ್ರಿ.ಶ. ೨೦೨೪, ಮೈಸೂರು 


"ಈ ನಾಚಾರುಳನ್ನೇ ಮುಂದೆ ‘ನಾಚಾರಮ್ಮ’ ಎಂದು ಕರೆದರು. ಇವಳು ಹಿಂದೆಂದೂ ಕಾಣದಂತಹ ಒಂದು ಜನಾಂಗದ ವಲಸೆಗೆ ಕಾರಣಳಾದಳು. ಇವಳ ಅನುಯಾಯಿಗಳು ಇಂದಿಗೂ ಇವಳನ್ನು ದೇವತೆಯಂತೆಯೇ ಪೂಜಿಸುತ್ತಾರೆ" ಡಾ|ಚರಣ್ ಪ್ರಸಾದ್ ಹೇಳುತ್ತಿದರು. ಸುಮಾರು ೪೫ ವರ್ಷ ವಯಸ್ಸಿನ ಡಾ|ಚರಣ್ ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ‘ಮಧ್ಯಯುಗೀನ ಭಾರತದಲ್ಲಿ ಸಂಕ್ರಮಣ (Migrations in Medieval India)’ ಎಂಬ ವಿಷಯದ ಮೇಲೆ ಬಹಳ ವರ್ಷಗಳಿಂದ ಸಂಶೋದನೆ ನಡೆಸುತ್ತಿದ್ದರು. ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‏ನಲ್ಲಿ ೧೦ರಿಂದ ೧೫ನೇ ಶತಮಾನದ ಕಾಲದಲ್ಲಿ ಕರ್ನಾಟಕಕ್ಕೆ ವಲಸೆ ಬಂದ ಜನಾಂಗ-ಸಮುದಾಯಗಳನ್ನು ಕುರಿತು ಉಪನ್ಯಾಸ ಕೊಡುತ್ತ, ನಾಚಾರು ಕಥೆಯನ್ನು ಹೇಳಿ ಮುಗಿಸಿದ್ದರು.


ಪ್ರೊ|ಉದಯ್ ನಿಥಿ ಚೆನ್ನೈ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಮತ್ತು ಇತಿಹಾಸ ವಿಭಾಗದ ಪ್ರೊಫೆಸರ್, ಹಾಗು ಈ ನಿರ್ದಿಷ್ಟ ವಿಷಯದಲ್ಲಿ ಡಾ|ಚರಣ್‌ರವರ ಪ್ರತಿಸ್ಪರ್ಧಿ. ಪ್ರೇಕ್ಷಕ ವರ್ಗದಲ್ಲಿ ಕೂತಿದ್ದ ಪ್ರೊ|ನಿಥಿ ಮೂಗುಮುರಿದಂತೆ ಡಾ|ಚರಣ್ ಕಡೆ ನೋಡಿ, ಹೀಯಾಳಿಸುವ ಸ್ವರದಲ್ಲಿ ಹೇಳಿದರು "ಎಲ್ಲ ಊಹೆ-ಕಲ್ಪನೆ-ಅಭಿಪ್ರಾಯ. ನಿಮ್ಮ ಈ ಇಮಾರತ್ತಿನ ಅಡಿಗಲ್ಲು ನಿಮ್ಮ ಕಾಲ್ಪನಿಕ ಜ್ಯೋತಿಷ್ಮತಿತೈಲ. ಆದನ್ನು ನಂಬೋದೇ ಕಷ್ಟ. ಅದನ್ನು ಆಧಾರ ಮಾಡಿಕೊಂಡು ನಿಮ್ಮ ಕಥೆಯನ್ನು ಹೇಗೆ ನಂಬೋದು?"


ಡಾ|ಚರಣ್ ಸಮಾಧಾನವಾಗಿ ಹೇಳಿದರು "ನಾಚಾರಮ್ಮನ ಜೊತೆಗೆ ವಲಸೆ ಬಂದ ಸಮುದಾಯಕ್ಕೆ ಸಂಕೇತಿ-ಜನಾಂಗವೆಂದೇ ಹೆಸರು. ಈವತ್ತಿಗೂ ಕರ್ನಾಟಕವೇ ಏಕೆ, ಪ್ರಪಂಚದಾದ್ಯಂತ ಹರಡಿರುವ ಈ ಸಮುದಾಯದ ಐತಿಹಾಸಿಕ ಸ್ಮರಣೆಯಲ್ಲಿ ಈ ಕತೆಯೇ ಇರುವುದು. ಜೊತೆಗೆ, ಸುಮಾರು ೧೫೦ ವರ್ಷಗಳ ಹಿಂದೆ ೧೮೭೧ನಲ್ಲಿ ಖಾನೇಷುಮಾರಿ - ಅಂದರೆ ಜನಗಣತಿ ರಿಪೋರ್ಟ್ ನಲ್ಲಿ, ಅಲ್ಲದೆ ಎಲ್.ಕೆ.ಅನಂತಕೃಷ್ಣ ಅಯ್ಯರ್ ಹಾಗು ಎಮ್.ಕೇಶವಯ್ಯನವರು ತಮ್ಮ ತಮ್ಮ ಸಂಶೋಧನೆಗಳಲ್ಲಿ ಇದೇ ಪ್ರಸಂಗವನ್ನೇ ಉಲ್ಲೇಖಿಸಿದ್ದಾರೆ. ಇದು ಕೇವಲ ಒಂದು ಕಡೆ ಹೇಳಿರುವ, ಕೇಳಿರುವ ದಂತಕಥೆಯಲ್ಲ"


ಪ್ರೊ|ನಿಥಿ ಹುಸಿನಗೆ ಬೀರುತ್ತ ತಲೆಯಾಡಿಸಿದರು. "ಸಾರಿ ಡಾ|ಚರಣ್, ಇದು ಸಂದೇಹಾಸ್ಪದ ಸಂಶೋಧನೆ, ಬಯ್ಮಾತನ್ನು ರಿಸರ್ಚ್ ಅಂತ ಪ್ರಸ್ತುತ ಪದೆಸುತ್ತಿದ್ದಿರ. ಈ ಜ್ಯೋತಿಷ್ಮತಿತೈಲದ ಸ್ಯಂಪಲ್ ಕೈಗೆ ಸಿಕ್ಕಿದರೆ, ಬಹುಶಃ ಪ್ರಮಾಣ ಇದೆ ಅಂತ ಹೇಳಬಹುದೋ ಏನೊ" ಟೀಕಿಸುವ, ಹೀಯಾಳಿಸುವ ಧ್ವನಿಯಲ್ಲಿ ಹೇಳಿದರು.


ಪ್ರೊ|ನಿಥಿಯವರ ಈ ಉಪಾಹುತಿಗೆ ಕಾರಣವಿದ್ದಿತು. ಕೆಲವು ದಿನಗಳ ಹಿಂದೆ ಪ್ರೊ|ನಿಥಿಗೆ ಒಂದು ಫೋನ್‍ ಕರೆ ಬಂದಿತ್ತು. ಪ್ಯಾಟ್ರಿಕ್ ಡೇವಿಸ್, ಇಂಗ್ಲ್ಯಾಂಡಿನ ಕರ್ಕ್ ಎಂಬ ಫಾರ್ಮಸ್ಯೂಟಿಕಲ್ ಕಂಪನಿಯ ಅಧಿಕಾರಿಯೊಬ್ಬನ ಮಾತಿನ ತಾತ್ಪರ್ಯ ಹೀಗಿತ್ತು:


ಕರ್ಕ್‍‏ನವರಿಗೆ ಈ ಜ್ಯೋತಿಷ್ಮತಿತೈಲದ ಕಥೆ ಸತ್ಯವೆಂದು ತಿಳಿದುಬಂದು ಅವರು ಅನೇಕ ರೀತಿಗಳಲ್ಲಿ ಅದನ್ನು ತಯಾರಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಎಳು ವರ್ಷಗಳ ನಿರಂತರ ಸಂಶೋಧನೆಯ ನಂತರ ಅದು ಫಲಿಸದೆ ಕೈಬಿಡಬೇಕಾಗಿ ಬಂದಿತ್ತು. ಅದೇ ನಿಟ್ಟಿನಲ್ಲಿ, ನಾಚಾರಮ್ಮನ ಕಥೆಯನ್ನು ಸ್ವಲ್ಪ ಕೆದಕಿ ಪರಿಶೀಲಿಸಿದಾಗ ಅವರಿಗೆ ಅದರ ಅಸ್ತಿತ್ವ ನಿಜವಾಗಿರುವ ಉನ್ನತ ಸಂಭಾವ್ಯತೆ ಇದೆಯೆಂದು ತಿಳಿದುಬಂದಿತ್ತು. ಅಂತೆಯೇ ನಾಚಾರಮ್ಮ ತಯಾರಿಸಿ ಸೇವಿಸಿದ ಆ ಜ್ಯೋತಿಷ್ಮತಿತೈಲ ಪರಿಣೀತವಾಗದೆ ಅದರ ಒಂದು ಭಾಗವನ್ನು ಎಲ್ಲೋ ಅಡಗಿಸಿಟ್ಟಿರುವ ಸಾಧ್ಯತೆಯೂ ಇರಬಹುದೆಂದೂ ತಿಳಿದು ಬಂದಿತ್ತು. ಆ ಉಳಿದ ಭಾಗ ಎಲ್ಲಿದ್ದರೂ, ಯಾವ ಸ್ಥಿತಿಯಲ್ಲಿದ್ದರೂ, ಕೊನೆ ಪಕ್ಷ ಅದರ ಆಧಾನವನ್ನಾದರೂ ಹುಡುಕಿಸಿಕೊಟ್ಟರೆ ಒಂದು ನೂರು ಮಿಲಿಯನ್ ಡಾಲರ್‏ಗಳ ಸಂಭಾವನೆ ಕೊಡುವುದಾಗಿ ಪ್ಯಾಟ್ರಿಕ್ ಪ್ರೊ|ನಿಥಿಯವರಲ್ಲಿ ಪ್ರಸ್ತಾಪವಿಟ್ಟಿದ್ದ. 


ನಾಚಾರಮ್ಮ ಹಾಗು ಸಂಕೇತಿ ಸಮುದಾಯದ ಬಗ್ಗೆ ಅತಿಶಯ ಜ್ಞಾನವಿಟ್ಟಿದ್ದವರು ಡಾ|ಚರಣ್ ಎಂದು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲ ತಿಳಿದೇಯಿತ್ತು. ಹೀಗೆ ಡಾ|ಚರಣ್‍ಗೆ ಅವರ ಸಂಶೋಧನೆಯ ವಿಚಾರವಾಗಿ ಟೀಕಿಸಿದರೆ, ಬಹುಶಃ ಅವರು ನಾಚಾರಮ್ಮ ಅಡಗಿಸಿಟ್ಟಿದ್ದ ಆ ಜ್ಯೋತಿಷ್ಮತಿತೈಲವನ್ನು ಅಥವ ಅದರ ಪಾತ್ರೆಯ ಶೋಧನೆ ಮಾಡಿಯಾರು ಎಂದು ಪ್ರೊ|ನಿಥಿ ಎಣಿಸಿದ್ದರು.


⌘⠀⠀⁜⠀⁓⠀※⠀⁓⠀⁜⠀⠀⌘


ಮರುದಿನ ಪ್ರಾತಃಕಾಲದಲ್ಲಿ ನಾಚಾರು-ಕಾಶೀಪತಿಯ ಮನೆಯ ಬಾಗಿಲು ತೆರೆದಿರುವುದು, ಮನೆಯೊಳಗೆ ಹೋಮದ ಹೊಗೆ, ಉರಿದ ಸಮಿತ್ತು, ಭಸ್ಮ ಚೆಲ್ಲಾಪಿಲ್ಲಿಯಾಗಿರುವುದು ಹಾಗೂ ಮೃತಪಟ್ಟ ಹುಡುಗನನ್ನು ನೋಡಿ ನೆರೆಹೊರೆಯವರು ನಾಚಾರುಳ ತಂದೆಯನ್ನು ಕರೆದು ತಂದರು. ಕಾಶೀಪತಿ ಕಿತವನಾಗಿ ಕೂಗುತ್ತ ಊರಿನ ಹೊರಗೆ ಓಡಿಹೋದನೆಂದು ತಿಳಿದುಬಂತು. 


ಶೋಕಭರದಲ್ಲಿ "ನಾಚಾರು ಎಲ್ಲಿ... ನಾಚಾರು ಎಲ್ಲಿ" ಎಂದು ಅವಳ ತಂದೆಯೂ, ನೆಂಟರೂ ಹುಡುಕಲು, "ನಾನು ಇಲ್ಲಿ ಕೂಪದಲ್ಲಿದ್ದೇನೆ" ಎಂದು ಸಂಸ್ಕೃತ ಭಾಷೆಯಲ್ಲಿ ನಾಚಾರು ಧ್ವನಿ ಶ್ರೀಶೈಲನಾಥಪತಿ ದೇವಾಲಯದ ಬಾವಿಯಿಂದ ಹೊರಬಂದಿತು. ಬಾವಿಯ ಸುತ್ತಲೂ ಊರಿನ ಜನರು ಸೇರಿ ನಾಚಾರುಳನ್ನು ಹೊರಕ್ಕೆತ್ತಿ ಅವಳ ಪ್ರಾಣ ಉಳಿಸಿದರು. 


ಚೇತರಿಸಿಕೊಂಡ ನಾಚಾರು ಮುಖದಲ್ಲಿ ಅದೇನೋ ಒಂದು ಖಳೆ... ಒಂದು ತೇಜಸ್ಸು. ಸಾಕ್ಷಾತ್ ಸರಸ್ವತೀದೇವಿಯೇ ಧರೆಗಿಳಿದು ಬಂದಂತೆ ಕಾಣಿಸುತ್ತಿತ್ತು. ಸುತ್ತಲು ನೆರೆದಿದ್ದ ಜನರಲ್ಲಿದ್ದ ಪಂಡಿತರುಗಳು ಬಾವಿಯಲ್ಲಿ ಬಿದ್ದು ಮೈಲಿಗೆ ಮಾಡಿದ್ದೀಯೇ ಎಂದು ಅವಳ ಧೂಷಣೆ ಮಾಡಲಾರಂಭಿಸಿದರು. ಮುಖದಲ್ಲಿ ಉಪಶಾಂತಿ ತುಂಬಿಕೊಂಡು, ಅವಳು ಮಡಿ-ಮೈಲಿಗೆ ಹೇಳುತ್ತಿದ್ದ ಪಂಡಿತರನ್ನು ಶಾಸ್ತ್ರಾರ್ಥ ಆಲೋಚನೆಗೆ ಕರೆದಳು. ಆಕೆಯ ಮುಖದ ತೇಜಸ್ಸು ಹಾಗು ಅವಳ ತುಟಿಗಳಿಂದ ಹೊರಬಿದ್ದ ಒಂದೆರಡು ವಾಕ್ಯಗಳಿಂದಲೇ ಅವಳಲ್ಲಿ ಯಾವುದೋ ದೈವಾನುಗ್ರಹದಿಂದ ಅಸಾಧಾರಣ ಪಾಂಡಿತ್ಯ ಬಂದಿರುವುದನ್ನರಿತ ನೆರೆದಿದ್ದ ಪಂಡಿತರು ಹಿಮ್ಮೆಟ್ಟಿ, ಅವಳ ಮಗನ ಅಂತಿಮ ಕ್ರಿಯೆಗಳು ಮುಗಿದ ಮೇಲೆ ಇತ್ಯರ್ಥ ಮಾಡುವುದಾಗಿ ಶಾಸ್ತ್ರಾರ್ಥ ತರ್ಕವನ್ನು ಮುಂದೂಡಿಸಿದರು.


ಮಗನ ಕ್ರಿಯೆಗಳೆಲ್ಲ ಮುಗಿದು, ವೈಕುಂಠ ಸಮಾರಾಧನೆಯ ದಿನ, ಕೆಲ ದುಷ್ಟ ಪಂಡಿತರು ಸೇರಿ ನಾಚಾರುಳಿಗೆ ಸೀರೆಯೊಂದನ್ನು ಕೊಟ್ಟು, ಅವಳು ಅದನ್ನೇ ಉಟ್ಟು ಸಂತರ್ಪಣೆಯಲ್ಲಿ ತುಪ್ಪ ಬಡಿಸಬೇಕಾಗಿರುವುದು ವಾಡಿಕೆಯೆಂದು ಹೇಳಿಸಿದರು. ಸೀರೆಯ ಮಡಿಕೆಗಳಲ್ಲಿ ಬಳಪದ ಕಲ್ಲಿನ ಪುಡಿ ಸವರಿದ್ದು, ನಾಚಾರು ಅದನ್ನು ಉಟ್ಟಾಗ ಅದು ಜಾರಿ, ಬಿಡಿಸಿಕೊಂಡು, ಅವಳಿಗೆ ಅವಮಾನವಾಗುವುದು, ಅದರಿಂದ ಅವಳಲ್ಲಿ ಶಸ್ತ್ರಾರ್ಥ ಮಾಡುವ ಯೋಗ್ಯತೆ ಇರುವುದಿಲ್ಲವೆಂಬ ಸಂಚನ್ನು ಆ ಪಂಡಿತರು ಹೂಡಿದ್ದರು. ಸಂಚನ್ನು ಅರಿತ ನಾಚಾರು ಆ ಸೀರೆಯ ಸೆರಗನ್ನು ಹೆಗಲ ಮೇಲಿಂದ ತಂದು ಗಂಟಿಕ್ಕಿ ಜಾರಿಹೋಗದಂತೆ ಕಟ್ಟಿಕೊಂಡು ತುಪ್ಪವನ್ನು ಬಡಿಸಿ ಮುಗಿಸಿದಳು. ನಂತರ ಕ್ಷಣಾರ್ಧದಲ್ಲಿ, ಆ ದುಷ್ಕರ್ಮದಿಂದ ನೊಂದ ಅವಳ ಬಾಯಿಂದ ಶಾಪವೊಂದು ಹೊರಬಿತ್ತು. "ಅನ್ಯಾಯವಾಗಿ ನನಗೆ ಅವಮಾನ ಮಾಡಲಿಚ್ಛಿಸಿರುವ ನಿಮ್ಮಲ್ಲಿ ಪ್ರತಿಯೊಬ್ಬನೂ ಅಲ್ಪಾಯುವಾಗಿಲಿ, ಅಥವ ಸಂತಾನಹೀನನಾಗಲಿ ಇಲ್ಲವೇ ದರಿದ್ರನಾಗಲಿ. ಅಲ್ಲದೆ ನಿಮ್ಮಲ್ಲಿ ಪರ್ಯಂತವಾಗಿ ಪರಸ್ಪರ ಕಲಹವು ತಪ್ಪದಿರಲಿ"


ಮಹಾಸಭೆಯನ್ನು ಒಂದು ವಿಧವಾದ ಭಯವು ಆವರಿಸಿತ್ತು. ಸಾಕ್ಷಾತ್ ಕಾಳಿಮಾತೆಯೇ ಬಂದು ಶಪವನ್ನಿತ್ತಂತೆ ಆಭಾಸ. ಸಂಚು ಹೂಡಿದ್ದ ಪಂಡಿತರು ಗಡಗಡನೆ ನಡುಗತೊಡಗಿದರು. ಸ್ತ್ರೀಯರ, ಶಿಶುಗಳ ರೋಧನೆಯ ಸ್ವರಗಳು ಕರ್ಣಬೇಧಿತವಾಗಿತ್ತು. ನಾಚಾರು ಅಪರಾಧಿಗಳು ಅವರವರ ಅಂತಃಕರಣದಲ್ಲೇ ಯಾತನೆಗಳನ್ನು ಅನುಭವಿಸಿ, ಸಭೆಯಲ್ಲಿ ತಲೆ ತಗ್ಗಿಸಿ ಕೂತರು.


ಕೊನೆಯಲ್ಲಿ ನೆರೆದಿದ್ದ ಬಹಳಷ್ಟು ಜನಸಭೆಯು ನಾಚಾರು ಪಾದಗಳನ್ನು ಹಿಡಿದು "ತಾಯಿಯೇ ಕೆಲವು ಅವಿವೇಕಿಗಳು ಮಾಡಿದ ಅಪರಾಧಕ್ಕೆ ಎಲ್ಲರನ್ನೂ ಶಿಕ್ಷಿಸಬೇಡ. ನೀನೇ ನಮ್ಮೆಲ್ಲರ ತಾಯಿ, ನಮ್ಮ ಗುರು, ನಮ್ಮೆಲ್ಲರ ಕುಲದೈವ ಎಂದು ಅರಿತಿದ್ದೀವಿ. ನಾವೆಲ್ಲ ನಿನ್ನ ಅನುಯಾಯಿಗಳು. ನಿನಗೆ ನಾವೆಲ್ಲ ಶರಣಾಗತರಾಗಿದ್ದೇವೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಕಾಪಾಡು" ಎಂದು ಪರಿಪರಿಯಾಗಿ ಬೇಡಿಕೊಂಡು ಅವಳಲ್ಲಿ ಮೊರೆಯಿಟ್ಟರು.


⌘⠀⠀⁜⠀⁓⠀※⠀⁓⠀⁜⠀⠀⌘


ಒಂದೆರಡು ತಿಂಗಳ ನಂತರ ಪ್ಯಾಟ್ರಿಕ್ ಡೇವಿಸ್ ಹಾಗು ಸರಕಾರೇತರ ಸಂಸ್ಥೆಯೊಂದರ ಮೂಲಕ ಪ್ರೊ|ನಿಥಿ ಗುಪ್ತವಾಗಿ ಡಾ|ಚರಣ್‍ಗೆ ಒಂದು ಪ್ರಸ್ತಾಪ ಕಳಿಸಿದರು. ಅದರಲ್ಲಿ ’ನಮಗೆ ನಿಮ್ಮ ಸಂಕೇತಿ ಜನಾಂಗದ ಸಂಶೋಧನೆ ಕುತೂಹಲಕಾರಿ ಹಾಗು ಮುನ್ನಡಸಲು ಯೋಗ್ಯವೆಂದೆನಿಸಿದೆ. ನೀವೂ ಈ ಸಂಶೋಧನೆ ಮುನ್ನಡೆಸುವ ಸಂಕಲ್ಪ ಮಾಡಿಕೊಂಡಿದ್ದರೆ ನಾವು ಅದಕ್ಕಾಗಿ ಎರಡು ಲಕ್ಷ ಡಾಳರ್‌ಗಳ ಅನುದಾನ ಕೊಡಲು ಸಿದ್ಧವಾಗಿದ್ದೇವೆ. ನೀವು ನಾಚಾರಮ್ಮಳ ಮೂಲ ಸ್ಥಳಕ್ಕೆ ಹೋಗುವುದು, ನಾಚಾರಮ್ಮಳ ಅಸ್ತಿತ್ವ ಹಾಗು ಅವಳ ಜೀವನದ ಘಟನೆಗಳ ಬಗ್ಗೆ ಹೆಚ್ಚು ಮಾಹಿತಿ ಹಾಗು ಅದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿರುತ್ತದೆ. ನಿಮ್ಮ ಸಂಶೋಧನೆಗೆ ಬೇರೆ ಯಾವ ಪ್ರತಿಬಂಧನೆಗಳೂ ಇರುವುದಿಲ್ಲ’ ಎಂದು ಹೇಳುವ ಒಂದು ಅಧಿಕೃತ ಸಂವಹನ ಕಳಿಸಲಾಗಿತ್ತು.


ಆ ಮಧ್ಯೆ ಪ್ರೊ|ನಿಥಿ ಎಸೆದ ಸವಾಲು ಡಾ|ಚರಣ್‌ಅವರ ಕುತೂಹಲ ಕೆರಳಿಸಿದ್ದು, ಅವರು ಅಷ್ಟು ಹೊತ್ತಿಗಾಗಲೆ ನಾಚಾರಮ್ಮ ಹಾಗು ಜ್ಯೋತಿಷ್ಮತಿತೈಲಗಳ ವಿಚಾರವಾಗಿ ಇನ್ನು ಹೆಚ್ಚು ವಿವರಗಳ ಅನ್ವೇಷಣೆ ಮಾಡಲು ಆರಂಭಿಸಿದ್ದರು. ಅನೇಕ ಗ್ರಂಥ, ದಂತಕಥೆ, ತಾಳಪತ್ರಲಿಪಿಗಳ ಅವಲೋಕನದ ನಂತರ, ಡಾ|ಚರಣ್‌ಗೂ ನಾಚಾರಮ್ಮ ತಯಾರಿಸಿದ ಜ್ಯೋತಿಷ್ಮತಿತೈಲದ ಒಂದು ಭಾಗವನ್ನು ಎಲ್ಲೋ ಅಡಗಿಸಿಟ್ಟಿರುವ ವಿಷಯ ಸ್ಪಷ್ಟವಾಯಿತು. ಅಂತೆಯೇ, ಅದರ ಪ್ರಸಂಗದಲ್ಲೇ ಒಂದು ವಿಚಿತ್ರವಾದ ಮಂತ್ರ ಅಂದಿನಿಂದ ಇಂದಿನವರೆಗು ಆ ಸಮುದಾಯದವರು ಹೇಳಿಕೊಂಡು ಬಂದದ್ದು ತಿಳಿದುಬಂದಿತು. ಆ ಮಂತ್ರದ ಪ್ರಕಾರ ಉಚ್ಛಾರಕನು ನರ್ಮದೆಯನ್ನು ಕುರಿತು ನನ್ನನ್ನು ವಿಷಸರ್ಪಗಳಿಂದ ಕಾಪಾಡು ಎಂದು ಕೇಳಿಕೊಳ್ಳುತ್ತಾನೆ. ಇದು ಈ ಸಮುದಾಯದ ಜನರಿಗೆ ವಿಶಿಷ್ಟ; ಬೆರೆ ಎಲ್ಲೂ ಈ ಮಂತ್ರ ಹೆಚ್ಚಾಗಿ ಉಪಯೋಗಿಸುವುದಿಲ್ಲ. ಅಷ್ಟಕ್ಕೂ ನರ್ಮದೆ ಎಲ್ಲಿ, ನಾಚಾರಮ್ಮ ಇದ್ದ ಕೇರಳ-ತಮಿಳುನಾಡಿನ ಗಡಿಪ್ರದೇಶವೆಲ್ಲಿ, ವಿಷಸರ್ಪಗಳೆಲ್ಲಿ. ಕರೆಯಲೇ ಬೇಕಾದರೆ ಬಳಿಯಲ್ಲೇ ಇದ್ದ ಇಳಂಜಿ ಅಥವ ಕಲ್ಲಡ ನದಿಗಳನ್ನಾಗಲಿ ಅಥವ ಸ್ಥಳೀಯ ಮಹಾನದಿಗಳಾದ ಕಾವೇರಿ/ವೈಗೈ ನದಿಗಳನ್ನಾಗಲಿ ಏಕೆ ಕರೆಯಲಿಲ್ಲ ಎಂದು ಯೋಚಿಸಿ, ಕೆದಕಿ, ಅಗೆದು ನಿರೀಕ್ಷಿಸಿದಾಗ, ಬಹುಶಃ ಅಡಗಿಸಿಟ್ಟ ಜ್ಯೋತಿಷ್ಮತಿಗೂ, ಈ ಮಂತ್ರಕ್ಕೂ ಎನೋ ಸಂಬಂಧವಿದ್ದರೂ ಇರಬಹುದೆಂಬುದು ಗೋಚರವಾಯಿತು.


ಅಷ್ಟರಲ್ಲೇ ಬಂದ ಪ್ಯಾಟ್ರಿಕ್ ಡೆವಿಸ್‍ನ ಅನುದಾನಕ್ಕೆ ಯಾವ ಪ್ರತಿಬಂಧನೆಗಳು ಇಲ್ಲವಾದ ಕಾರಣ ಸಂಗ್ರಹಿಸಿದ ಜ್ಞಾನವನ್ನು ಸಾರ್ವಜನಿಕವಾಗಿ ಪ್ರಕಟ ಮಾಡಬಹುದೆಂದು ಎಣಿಸಿ, ಡಾ|ಚರಣ್ ಆ ಪ್ರಸ್ತಾಪವನ್ನು ಸ್ವೀಕರಿಸಿದರು. ಅದರಂತೆಯೇ ನಾಚಾರಮ್ಮನ ಅನುಯಾಯಿಗಳಾದ ಸಂಕೇತಿ ಸಮುದಾಯದ ತವರೂರು ಎಂದೇ ಗುರುತಿಸಲಾದ ತಮಿಳುನಾಡಿನ ಟೆಂಕಾಸಿ ಜಿಲ್ಲೆಯ ಶೆಂಕೊಟ್ಟೈ ಎಂಬ ಊರಿನಲ್ಲಿಯೇ ಮುಂದಿನ ಸಂಶೋಧನೆ ನಡೆಸುವುದು ಯತಾರ್ಥವಂದು ನಿರ್ಧರಿಸಿ ತಮ್ಮ ರಿಸರ್ಚ್ ಟೀಂ ಒಗ್ಗೂಡಿಸಲು ಪ್ರಾರಂಭಿಸಿದರು.


ಡಾ|ಚರಣ್‍ರವರ ರಿಸರ್ಚ್ ಅಸಿಸ್ಟೆಂಟ್ ನಯನಾ, ಕ್ಯಾಮರಾ ಮತ್ತು ಕಂಪ್ಯೂಟರ್ ಸ್ಪೆಶಲಿಸ್ಟ್ ವೇಣು ಹಾಗು ಪುರಾತತ್ವಶಾಸ್ತ್ರಜ್ಞ ಡಾ|ಶುಭಕರ ಸೇರಿ ಒಟ್ಟು ನಾಲ್ಕು ಮಂದಿಯ ತಂಡ. ಅನುದಾನವಿದ್ದ ಕಾರಣ ಸಧ್ಯಕ್ಕೆ ಹಣದ ಕೊರತೆ ಇರಲಿಲ್ಲ. ಬೇಕಾಗಿದ್ದ ಉಪಕರಣಗಳನ್ನು ಕಲೆ ಹಾಕಿಕೊಂಡು, ಕೇವಲ ಆರು ವಾರಗಳ ನಂತರ ಡಾ|ಚರಣ್ ಮತ್ತು ರಿಸರ್ಚ್ ಟೀಮ್ ಟೆಂಕಾಸಿ ಕಡೆ ಪ್ರಸ್ಥಿತರಾದರು.


ಮೈಸೂರಿನಿಂದ ಕಾರ್ ಮಾಡಿಕೊಂಡು ಹೊರಟ ರಿಸರ್ಚ್ ಟೀಮ್, ಸಂಜೆಯ ಹೊತ್ತಿಗೆ ಶೆಂಕೊಟ್ಟೈ ಊರನ್ನು ಸೇರಿದರು. ನಾಚಾರಮ್ಮಳ ಬಗ್ಗೆ ಆ ಊರಿನವರಿಗೆ ಬಹುಶಃ ಸ್ವಲ್ಪ ಅಭಿನ್ನತವಿರಬಹುದೆಂದು ಡಾ|ಚರಣ್ ಭಾವಿಸಿದ್ದರೂ ಅದು ನಿಜವಲ್ಲವೆಂದು ಅಲ್ಲಿಗೆ ಹೋದಮೇಲೆ ತಿಳಿದು ಬಂತು. ಅಲ್ಲಿಯ ಜನರೂ ಈಗಲೂ ನಾಚಾರಮ್ಮಳನ್ನು ಸರಸ್ವತಿಯ ರೂಪವೆಂದೇ ನಂಬುತ್ತಾರೆ ಹಾಗು ಅವಳಿತ್ತ ಶಾಪವಿಮೋಚನೆಗಾಗಿ ಇಂದಿಗೂ ಪ್ರಯತ್ನಿಸುತ್ತಾರೆಂಬುದು ಸ್ಪಷ್ಟವಾಯಿತು.


ಶಿವಸ್ವಾಮಿ ಎಂಬ ಹೆಸರಿನ ೨೮ ವರ್ಷದ ವ್ಯಕ್ತಿಯೊಬ್ಬನು ಡಾ|ಚರಣ್ ರಿಸರ್ಚ್ ಟೀಮ್‍ಗೆ ಸ್ಥಳೀಯ ಮರ್ಗದರ್ಶಕನಾಗಲು ಒಪ್ಪಿಕೊಂಡನು. ಶೆಂಕೊಟ್ಟೈ ಸಣ್ಣ ಊರಾಗಿದ್ದು ಅಲ್ಲಿ ತಂಗುವ ಸ್ಥಳಗಳಿಲ್ಲದೆ, ಎಲ್ಲರೂ ಪಕ್ಕದ ಊರಾದ ವೆಳ್ಳಮ್‍ನ ಕುತ್ತಳಂ ಹೆರಿಟೇಜ್ ಹೊಟೆಲ್‍ನಲ್ಲಿ ತಂಗಿ, ಅದನ್ನೇ ತಮ್ಮ ಸಂಶೋಧನೆಯ ಮುಖ್ಯ ಕಾರ್ಯಸ್ಥಳ ಮಾಡಿಕೊಂಡರು.


⌘⠀⠀⁜⠀⁓⠀※⠀⁓⠀⁜⠀⠀⌘


ಊರಿನ ಜನರ ಪ್ರಾರ್ಥನೆಗಳನ್ನು ಕೇಳಿ ನಾಚಾರುಳ ಹೃದಯ ಕರಗಿ ನೀರಾಯಿತು. ಮುಖ ಪುನಃ ಶಾಂತವಾಯಿತು. ಕಣ್ಣಿನ ಅಂಚಿಂದ ಭಾಷ್ಪಗಳು ಹರಿಯಲಾರಂಭಿಸಿದವು. ಆ ಅಬಲೆಯು ತನ್ನ ಕಂಬನಿಗಳನ್ನು ತಡೆದುಕೊಂಡು ಅಲ್ಲಿದ್ದವರನ್ನು ಸಂಬೋಧಿಸಿದಳು.


"ಸಹೋದರರೆ, ಕೆಲವರು ಮಾಡಿದ ದುಷ್ಕರ್ಮಕ್ಕೆ ನನ್ನ ಬಾಯಿಯಿಂದ ಹೊರಬಿದ್ದ ಆ ಶಾಪದ ಮಾತುಗಳು ದೈವೇಚ್ಛೆಯೇ ಹೊರತು ಮನುಷ್ಯಪ್ರಯತ್ನವಲ್ಲ. ಅವಿವೇಕದಿಂದ ಮಾಡಿದ ದೌರ್ಜನ್ಯಕ್ಕೆ ನೀವು ಪಶ್ಚಾತಾಪ ಪಡುತ್ತಿದ್ದೀರೆಂದು ಕಂಡು ನನ್ನ ಹೃದಯ ತುಂಬಿ ಬಂದಿದೆ. ನಿಮ್ಮ ಅಂತಃಕರಣಗಳು ಪರಿಶುದ್ಧವಾಗಿವೆಯೆಂದು ನಂಬಿದ್ದೇನೆ. ಆದರೂ ಈಶ್ವರೇಚ್ಛೆಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಈ ಸ್ಥಳದಲ್ಲಿರಲು ನನಗೆ ಮನಸ್ಸಿಲ್ಲ."


ನಾಚಾರು ಎದ್ದು ನಿಂತಳು "ನಾವೆಲ್ಲ ಹಲವಾರು ತಲೆಮಾರುಗಳ ಹಿಂದೆ ಉತ್ತರ ದಿಕ್ಕಿನಿಂದ, ನರ್ಮದಾ ತೀರದಿಂದ ಬಂದವರು ಎಂಬ ಪ್ರತೀತಿ ಇದೆ. ಅದಕ್ಕೇ ಇಲ್ಲಿಯವರು ನಮ್ಮನ್ನು ವಡಮಾ - ಉತ್ತರ ದಿಕ್ಕಿನಿಂದ ಬಂದವರು - ಎಂದು ಕರೆಯುತ್ತಾರೆ. ನಾನು ಇದೇ ಈಗಲೆ ಈ ಸ್ಥಳವನ್ನು ಬಿಟ್ಟು ಹೊರಟೆ. ಜೊತೆಯಲ್ಲಿ ಯಾರು ಬರುವ ಇಷ್ಟವಿದ್ದರೂ ಯಾವ ಅಡ್ಡಿಯೂ ಇಲ್ಲ. ಉತ್ತರ ದಿಕ್ಕಿನಲ್ಲಿ ಹೋಗೋಣ. ಎಲ್ಲಿ ಯತಾರ್ಥವಾದ ನೆಲೆ ಸಿಗುತ್ತದೆಯೋ ಅಲ್ಲಿಯೇ ನೆಲೆಸೋಣ. ಬದುಕು, ಭೂಮಿ, ಪ್ರಪಂಚವನ್ನು ಸಮೃದ್ಧಗೊಳಿಸೋಣ. ನಮ್ಮ ಸಾಕ್ಷಾತ್ಕಾರ ಇನ್ನೇನಿದ್ದರೂ ಉತ್ತರ ದಿಕ್ಕಿನಲ್ಲಿದೆ" ಎನ್ನುತ್ತ ಕೋಲೊಂದನ್ನು ಕೈಯಲ್ಲಿ ಹಿಡಿದು ನಡೆಯುತ್ತ ಹೊರಟಳು. ಹೆಗಲಿಂದ ಸೆರಗನ್ನು ಸೇರಿಸಿ ಕಟ್ಟಿದ ಗಂಡಿ ಸೀರೆ ಇನ್ನೂ ಹಾಗೆಯೇ ಇತ್ತು.


⌘⠀⠀⁜⠀⁓⠀※⠀⁓⠀⁜⠀⠀⌘


ಡಾ|ಚರಣ್ ಹಲವಾರು ಸ್ಥಳೀಯ ಜನರ ಜೊತೆ ಮಾತನಾದಿ, ಹಲವಾರು ಸ್ಥಾನೀಯ ತಾಳೆ/ತಾಮ್ರ ಲಿಪಿಗಳನ್ನು ಸಂಶೋದಿಸಿದ ಮೇಲೆ, ಶೆಂಕೋಟ್ಟೈ ದಂತ ಕಥೆಗಳಲ್ಲಿ ನಾಚಾರಮ್ಮ ಇದ್ದ ಸ್ಥಳಕ್ಕೆ ಹಲವಾರು ಪ್ರತಿಸ್ಪರ್ಧಿಗಳ ನಿದರ್ಶನವಾಯಿತು. ಒಂದುಕಡೆ ಸ್ವಯಂ ಶೆಂಕೋಟ್ಟೈಯೇ ಇದ್ದರೆ ಇನ್ನೊಂದುಕಡೆ ಟೆಂಕಾಸಿ, ಐಲಾಂ‌ಗ್ರಾಮ, ನರಸಿಂಗಗ್ರಾಮ, ಅಂಬಾಸಮುದ್ರಮ್, ಹೀಗೆ ಅನೇಕ ಊರುಗಳು ಆ ಸ್ಥಳಕ್ಕೆ ಸ್ಪರ್ದಾಳುಗುಳು. ಅವೆಲ್ಲಕ್ಕೂ ಹೆಚ್ಚಾಗಿ ಒಂದು ಊರಿನ ಹೆಸರು ಪದೇ ಪದೆ ಕಾಣಿಸಿಕೊಂಡಿತು: ಶಾಪತ್ತೂರು. ಆದರೆ ಈ ಹೆಸರಿನ ಯಾವ ಊರೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಇರಲಿಲ್ಲ. 


ಶಿವಸ್ವಾಮಿಯ ಮಾರ್ಗದರ್ಶನದಲ್ಲಿ ಸುತ್ತಮುತ್ತಲಿನ ಊರುಗಳಲ್ಲಿ ಹಲವಾರು ಪಾಳುಬಿದ್ದ ಅಥವ ಪ್ರಾಚೀನ ದೇವಾಲಯಗಳನ್ನು ಪರಿಶೀಲಿಸಿ ಬಂದರು. ಆದರೆ ಸಂಶೋದನಾತಂಡಕ್ಕೆ ನಾಚಾರಮ್ಮನ ವಿಷಯವಾಗಿ ಎಲ್ಲಿಯೂ ಯಾವ ಸುಳಿವೂ, ಯಾವ ಪುರಾವೆಯೂ ಸಿಗಲಿಲ್ಲ. ಅಂತೆಯೇ ಶಾಪತ್ತೂರು ಎಂಬ ಊರಿನ ಅನಾವರಣವೂ ಆಗಿರಲಿಲ್ಲ. ದಿನಗಳು ಕಳೆಯುತ್ತಿದ್ದಂತೆ ಶಾಪತ್ತೂರು - ಶಾಪತ್ತೆ ಊರು - ಸಂಕೇತಿ ಭಾಷೆಯಲ್ಲಿ ಶಪಕ್ಕೆ ಈಡಾದ ಊರು - ಈ ಊರೇ ತಾವು ಹುಡುಕುತ್ತಿರುವ, ನಾಚಾರಮ್ಮ ವಾಸಿಸಿದ ತಾಣ ಎಂಬುದು ಡಾ|ಚರಣ್‌ ಮನದಾಳದಲ್ಲಿ ಧೃಡವಾಗಹತ್ತಿತ್ತು. 


ಹೀಗಿರಲು ಶಿವಸ್ವಾಮಿಯು ಕುತೂಹಲಾಸ್ಪದವಾದ ಸಮಾಚಾರದೊಂದಿಗೆ ಒಂದು ಸಂಜೆ ಡಾ|ಚರಣ್‌ರನ್ನು ಬಂದು ಕಂಡ. "ಟೆಂಕಾಸಿಯಲ್ಲ ಪಕ್ಕದ ಜಿಲ್ಲೆ - ತಿರುನೆಲ್ವೇಲಿಯಲ್ಲಿ ಆಳ್ವಾರ್‌ಕುರಿಚಿ ಎಂಬ ಊರು - ಆ ಊರಿನ ಹಳೆಯ, ಪಾಳು ಬಿದ್ದ ಒಂದು ಅಗ್ರಹಾರಕ್ಕೆ ಶಾಪತ್ತೂರು ಎಂಬ ಅಡ್ಡಹೆಸರು ಇದೆ ಎಂದು ಕೇಳಿ ಬಂದಿದೆ. ಆದರೆ... ಅದು ನಾವು ಹುಡುಕುತ್ತಿರುವ ಕ್ಷೇತ್ರದಿಂದ ಸ್ವಲ್ಪ ಹೆಚ್ಚಿನ ದೂರದಲ್ಲಿದೆ - ಇಲ್ಲಿಂದ ಸುಮಾರು ಮೂವತ್ತು-ಮೂವತ್ತೈದು ಕಿಲೋಮೀಟರ್. ನೋಡ್ತೀರಾ? ಇಲ್ಲವೇ ಇಲ್ಲೇ ಹತ್ತಿರದಲ್ಲಿ ಇನ್ನೂ ಹುಡುಕಬೇಕಾ?" ಎಂದು ಶಿವಸ್ವಾಮಿ ಕೇಳಿದ.


ವಿಷಯ ಕೇಳಿ ಡಾ|ಚರಣ್‍ರ ಕುತೂಹಲ ಕೆರಳಿತು "ಮೂವತ್ತು ಕಿಲೋಮೀಟರ್ ಅಂದರೆ ಆಗಿನ ಕಾಲದಲ್ಲಿ ಸುಮಾರು ಒಂದು ದಿನದ ಪ್ರಯಾಣವಾದರು ನಮಗೆ ಅರ್ಧಘಂಟೆಯಷ್ಟೇ. ನೋಡಲೇಬೇಕು. ನಾಳೆಯೇ ಅಲ್ಲಿಗೆ ಹೋಗೋಣ. ಬೇಕಾದ ಸಿದ್ಧತೆ ಮಾಡಿಕೊ." ಎಂದು ಹೇಳಿ ಕಳಿಸಿಕೊಟ್ಟರು.


ಮರುದಿನ ಆಳ್ವಾರ್‌ಕುರಿಚಿ ಊರಿಗೆ ಹೋದಾಗ ಡಾ|ಚರಣ್ ಸ್ವಲ್ಪ ಹತಾಷರಾದರು. ಆ ಊರು ಆಧುನಿಕ ಕಾಲದ ಹಳ್ಳಿಯಂತೆ ಕಾಣಿಸುತ್ತಿತ್ತು. ಶಿವಸ್ವಾಮಿಯು ತಾಳ್ಮೆ ಎಂಬ ಸನ್ನೆ ಮಾದಿ, ಕಾರಿನಿಂದ ಇಳಿದು ಹೋಗಿ ಊರಿನವರ ಜೊತೆ ಮಾತನಾಡಿಕೊಂಡು ಬಂದ. "ಊರು ತುಂಬ ಹಳೆಯದು, ಹಳೆಯ ಪಾಳುಬಿದ್ದ ಅಗ್ರಹಾರವು ಅಲ್ಲಿ ಊರಿನ ತುದಿಯಲ್ಲಿ ಇದೆಯಂತೆ - ತಳಪಾಯಗಳು ಬಿಟ್ಟರೆ ಬೇರೇನೂ ಇಲ್ಲ. ಒಂದೆರಡು ಪ್ರಾಚೀನ, ಪಾಳುಬಿದ್ದ ದೇವಾಲಯಗಳೂ ಇವೆಯಂತೆ - ನರಸಿಂಗನಾಥ ಸ್ವಾಮಿ ಮಂದಿರ ಹಾಗು ಶ್ರೀಶೈಲನಾಥ ಸ್ವಾಮಿ ದೇವಸ್ಥಾನ. ದೇವಸ್ಥಾನಗಳಿಗೆ ಯಾರೂ ಹೋಗೋದಿಲ್ಲವಂತೆ ಹಾಗಾಗಿ ಪಾಳುಬಿದ್ದಿವೆ. ವಯಸ್ಸಾದ ಆತ ಒಬ್ಬರು ಆ ಪಾಳುಬಿದ್ದ ಅಗ್ರಹಾರಕ್ಕೆ ಶಾಪತ್ತೂರು ಎಂದು ಕರೆಯುತ್ತಾರೆ ಅಂತ ಹೇಳಿದರು. ಊರಿಗೆ ಆಳ್ವಾರ್‌ಕುರಿಚಿ ಎಂಬ ಹೆಸರಿರುವುದರಿಂದ ಶಾಪತ್ತೂರು ಯಾವ ಮ್ಯಾಪ್‌ನಲ್ಲೂ ಕಾಣಿಸೋದಿಲ್ಲ. ಇದೆಲ್ಲ ಕೇಳಿದರೆ ನೀವು ಹುಡುಕುತ್ತಿರೋ ಸ್ಥಳ ಇದೇ ಅಂತ ಅನ್ಸುತ್ತೆ" ಎಂದ.


ಡಾ|ಚರಣ್ ಪುನಃ ಉತ್ಸುಕರಾದರು. ಕಾರು ಎಲ್ಲೆಡೆ ಹೋಗುವ ಸೌಲಭ್ಯವಿರಲಿಲ್ಲವಾದ್ದರಿಂದ ಡಾ|ಚರಣ್ ತಂಡವು ಗಾಡಿಯಿಂದಿಳಿದು ಕಾಲ್ನಡುಗೆಯಲ್ಲೇ ಹೊರಟರು. ಪಾಳುಬಿದ್ದ ತಳಪಾಯಗಳು ಪುರುಚಲು ಕಾಡಿನಲ್ಲಿ ಮುಚ್ಚಿ ಹೋಗಿದ್ದವು. ಆ ಹಳೆಯ ಕಾಲುದಾರಿಯಲ್ಲಿ ನಡೆಯುತ್ತಿರಲು ಡಾ|ಚರಣ್‌ಗೆ ನೂರಾರು ವರ್ಷಗಳ ಹಿಂದೆ ನಾಚಾರು ನಡೆದ ಸ್ಥಳಗಳಲ್ಲಿಯೇ ನಡೆಯುತ್ತಿರುವ ಆಭಾಸ. ಮೊದಲಿಗೆ ನರಸಿಂಗನಾಥಸ್ವಾಮಿ ದೇವಾಲಯಕ್ಕೆ ಹೋದರು - ಹಳೆಯದಾದರೂ ಪ್ರಾಚೀನ ದೇವಾಲಯವಲ್ಲ. ವಿಜಯನಗರ ಶೈಲಿಯ ಮುಖಮಂಟಪಗಳಿದ್ದ ವೇಸರ ಶೈಲಿಯ ದೇವಸ್ಥಾನ. ಆವರಣದ ಸುತ್ತ ಸ್ವಲ್ಪ ಹೊತ್ತಿನ ಪರಶೀಲನೆ ಫಲಿಸದೆ, ಮುಂದೆ ಸಾಗಿದರು. ನಂತರ, ವಹ್ನಿನಾಥೇಶ್ವರ ದೇವಸ್ಥಾನ - ಗೋಪುರ ಸಮೇತ ಮತ್ತೊಂದು ವಿಜಯನಗರ ಶೈಲಿಯ ದೇವಾಲಯ. ಇಲ್ಲಿಯೂ ಸಂಶೋದನಾತಂಡಕ್ಕೆ ಪ್ರಾಸಂಗಿಕ ವಿಜ್ಞಾಪ್ತಿಯಾವುದೂ ಕೈಹತ್ತಲಿಲ್ಲ. ಕೊಂಚ ಹತಾಷರಾಗಿಯೇ ಕೊನೆಗೆ ಶ್ರೀಶೈಲನಾಥಪತಿ ದೇವಸ್ಥಾನದ ಕಡೆ ಹೊರಟರು.


ಶಿವಸ್ವಾಮಿಯು ಪುನಃ ಮಾರ್ಗದರ್ಶಕನಾದ "ಆ ವಯಸ್ಸಾದ ವ್ಯಕ್ತಿಯ ಪ್ರಕಾರ ಈ ದೇವಸ್ಥಾನದ ಬಾಗಿಲು ಇತ್ತೀಚಿನವರೆಗು ವರ್ಷಕ್ಕೆ ಕೇವಲ ಒಮ್ಮೆ ತೆಗೆಯುತ್ತಿತ್ತಂತೆ, ಬೇರೆ ಸಮಯದಲ್ಲಿ ಇಲ್ಲಿ ಯಾರೂ ಸುಳಿಯುತ್ತಿರಲಿಲ್ಲ. ಅಲ್ಲಿ, ಆ ಮಂಟಪದ ಕೆಳಗಿರುವ ನೆಲಭಾವಿಯಕೆಡೆಯಂತೂ ಇಂದಿಗೂ ಯಾರೂ ನೋಡುವುದೂ ಇಲ್ಲವಂತೆ. ಹಿಂದೊಮ್ಮೆ ರಥೊತ್ಸವ ನಡೆಯುತ್ತಿದ್ದಾಗ, ಜನರೆಲ್ಲ ಸೇರಿ ಎಳೆದರೂ ರಥವು ಎರಡು ದಿನಗಳ ಪ್ರಯತ್ನದ ನಂತರವೂ ಅಲುಗಾಡಲಿಲ್ಲವಂತೆ. ಸುಸ್ತಾಗಿ, ಕಂಗಾಲಾದ ಭಕ್ತಾದಿಗಳು ರಾತ್ರಿ ಇಲ್ಲೆ ದೇವಸ್ಥಾನದ ಮುಖಮಂಟಪದ ಜಗುಲಿಯ ಮೇಲೆ ಮಲಗಿದ್ದರಂತೆ. ನಡುರಾತ್ರಿಯಲ್ಲಿ ರಥವು ತಾನಾಗಿ ತಾನೆ ರಥಬೀದಿ ಸುತ್ತಿ ಬಂದು ಮಲಗಿದ್ದ ಭಕ್ತಾದಿಗಳ ಮೇಲೆ ಹರಿದು ಹೋಗಿ, ಹಲವಾರು ಜನರ ಮರಣವಾಯಿತಂತೆ. ಆಗ ಮೃತ ದೇಹಗಳನ್ನು ಆ ನೆಲಬಾವಿಯಲ್ಲಿ ಹಾಕಿ, ಮೇಲೆ ಮಂಟಪ ಕಟ್ಟಿಸಿದರಂತೆ. ಹಾವುಗಳ ಕಾಟ ಬೇರೆಯಂತೆ" ಎಂದು ಸ್ಥಳ ಪುರಾಣವನ್ನು ತಿಳಿಸಿದ.


ಬಾವಿ, ಮಂಟಪ ಎಂದ ಕೂಡಲೆ, ಡಾ|ಚರಣ್‌ಗೆ ನಾಚಾರಮ್ಮನ ಅನುಯಾಯಿಗಳು ಇಂದಿಗೂ ಹೇಳುವ ಸಂಜೆಯ ದೀಪ ಹಚ್ಚುವ ಪದವೊಂದರ ನೆನಪಾಯಿತು. ಅದರ ತಾತ್ಪರ್ಯ ’ನರ್ಮದೆಯಿಂದ ನೀರು ಒಂಬತ್ತು ಕೊಡಗಳಲ್ಲಿ ತುಂಬಿಸಿ, ಅದರ ಮೇಲೆ ಒಂದು ದೀಪವಿಟ್ಟು, ನಾಚಾರು-ಬೆಳಕೇ-ಜ್ಞಾನವೇ ನಮ್ಮ ಬದುಕನ್ನು ಸಂತೃಪ್ತ ಮಾಡು’ ಎಂದಿದೆ. 


ಹಾಗೇಯೇ ಸಂಕೇತಿ ಭಾಷೆಯಲ್ಲಿ ಯಾವ ನದಿಯಾದರೂ ಅದಕ್ಕೆ ’ಕಾವೇರಿ’ ಎಂದೇ ಕರೆಯುವುದು ಅಭ್ಯಾಸ, ’ನದಿ’ ಹಾಗು ’ಕಾವೇರಿ’ ಸಮಾನಾರ್ಥ ಪದಗಳು. ಈ ಸಮುದಾಯದವರು ಅದಕ್ಕೂ ಹಿಂದೆ ನರ್ಮದಾ ತೀರದಿಂದ ಬಂದು ಇಲ್ಲಿ - ಅಂದರೆ ಕೇರಳ-ತಮಿಳುನಾಡಿನ ಗಡಿ ಪ್ರದೇಶದಲ್ಲಿ ನೆಲೆಸಿದವರು. ಹತ್ತಿರದಲ್ಲಿ ಯಾವ ಮಹಾನದಿಯೂ ಇಲ್ಲ. ಹೀಗಿರುವಲ್ಲಿ ನೀರಿನ ನೆಲೆ - ಅಂದರೆ ಬಾವಿಯನ್ನೇ - ’ನರ್ಮದಾ’ ಎಂದು ಕರೆಯುವ ಅಭ್ಯಾಸವಿದ್ದಿರಬಹುದೇ? ನರ್ಮದಾ-ವಿಷಸರ್ಪದ ಮಂತ್ರ, ದೀಪದ ಪದ, ಇಲ್ಲಿಯ ಮಂಟಪದ ಕೆಳಗೆ ನೆಲಭಾವಿ, ಅಲ್ಲಿ ಯಾರೂ ಸುಳಿಯದಂತೆ ಕಟ್ಟಿರುವ ಕಥೆಗಳು, ಜ್ಯೋತಿಷ್ಮತಿತೈಲದ ಶೇಷ ಭಾಗ, ಎಲ್ಲವೂ ಡಾ|ಚರಣ್ ತಲೆಯಲ್ಲಿ ಚಿತ್ರ ಸಮಸ್ಯೆಯಂತೆ ಒಂದಕ್ಕೆ ಒಂದು ಜೋಡಿಸಿಕೊಳ್ಳ ತೊಡಗಿದವು.


ಶಿವಸ್ವಾಮಿಯ ಆಕ್ಷೇಪಣೆ ಮೀರಿ, ಡಾ|ಚರಣ್ ಮಂಟಪದ ಕೆಳಗಿದ್ದ ಬಾವಿಯತ್ತ ಧಾವಿಸಿದರು. ಅವರ ತಂಡ ಸ್ವಲ್ಪ ಹಿಂಜರಿದರೂ ಅವರ ಹಿಂದೆಯೇ ಹೋದರು. ಬಾವಿಯ ಕಟ್ಟೆಯ ಮೇಲಿಂದ ಇಣುಕಿ ನೋಡಿದಾಗ ಬಾವಿಯಲ್ಲಿ ಬರೀ ಕತ್ತಲೆ. ನೀರೂ ಕಾಣಿಸಲಿಲ್ಲ, ಅಥವ ಹೇಳಿದ ಮೃತ ಜನರ ದೇಹ/ಅಸ್ತಿಪಂಜರಗಳೂ ತೋರಲಿಲ್ಲ. ಬಾವಿಯ ಗೋಡೆಯನ್ನು ದೊಡ್ಡ ದೊಡ್ಡ ಕಲ್ಲುಗಳಿಂದ ಮಾಡಲಾಗಿತ್ತು. ಕೆಳಗೆ ಇಳಿದು ಹೋಗಲು ಸುತ್ತ ಮೆಟ್ಟಲಲ್ಲದಿದ್ದರೂ ಕಲ್ಲುಗಳು ಬಾವಿಯ ಗೋಡೆಯಿಂದ ಚಾಚಿಕೊಂಡಿದ್ದವು. ಒಂದು ಸಣ್ಣ ಕಲ್ಲನ್ನು ಬಾವಿಯೊಳಕ್ಕೆ ಎಸೆದಾಗ ಬಹಳವೇನೂ ಆಳವಿಲ್ಲವೆಂದೂ, ಬಾವಿಯಲ್ಲಿ ನೀರಿಲ್ಲವೆಂದೂ ತಿಳಿದು ಬಂತು. ಲೈಟ್ ಇದ್ದ ಹೆಲ್ಮೆಟ್ ಒಂದನ್ನು ಧರಿಸಿ, ಡಾ|ಚರಣ್ ಹಾಗು ಡಾ|ಶುಬಕರ್ ಬಾವಿಯೊಳಗೆ ಇಳಿಯಲು ಸಿದ್ಧರಾದರು. ಕ್ಯಾಮರ ಹಿಡಿದು ವೇಣು ಕೂಡ ಅವರ ಹಿಂದೆ ಹೋಗಲು ಸಿದ್ಧನಾದ. ನಯನಾ ಮೇಲೇ ಉಳಿಯುವವಳಿದ್ದಳು, ಶಿವಸ್ವಾಮಿಯು ಹೆದರಿ ಇದರಲ್ಲಿ ತಾನು ಭಾಗವಹಿಸುವುದಿಲ್ಲವೆಂದು ತಂಡವನ್ನು ಬಿಟ್ಟು ಹೊರಟು ಹೋದ.


ನಿಧಾನವಾಗಿ ಚಾಚಿಕೊಂಡಿರುವ ಕಲ್ಲುಗಳನ್ನು ಹಿಡಿದು, ಅವುಗಳ ಮೇಲೇ ಕಾಲಿಡುತ್ತ ಕೆಳಗಿಳಿದು, ಡಾ|ಚರಣ್ ಮತ್ತು ಡಾ|ಶುಬಕರ್ ಕೇವಲ ೧೫-೨೦ ನಿಮಿಷಗಳಲ್ಲಿ ಬಾವಿಯ ತಳ ಮುಟ್ಟಿದರು. ದೂರವೆಲ್ಲೋ ನೋಡುತ್ತ, ಡಾ|ಚರಣ್ ಕಲ್ಲಿನ ಸಾಲುಗಳನ್ನು ಎಣಿಸತೊಡಗಿದರು. "ಏನ್ ಯೋಚನೇ ಮಾಡ್ತಿದೀರ ಚರಣ್?" ಶುಬಕರ್ ಕೇಳಿದರು, ಆದರೆ ಚರಣ್ ಉತ್ತರಿಸಲಿಲ್ಲ. ಬದಲಿಗೆ ಮುಖ ಮೇಲೆ ಮಾಡಿ ನಯನಾ ಕಡೆ ಕೂಗಿದರು. "ಆ ದೀಪದ ಪದ ಎನು ಹೇಳು, ನಯನಾ"


’ನರ್ಮದೆಯಿಂದ ನೀರು ಒಂಬತ್ತು ಕೊಡಗಳಲ್ಲಿ ತುಂಬಿಸಿ, ಅದರ ಮೇಲೆ ಒಂದು ದೀಪವಿಟ್ಟು... " ನಯನಾ ಹೇಳಲು ಆರಂಭಿಸಿದಳು. ಅಷ್ತರಲ್ಲೇ ಕಲ್ಲುಗಳನ್ನು ಏಣಿಸುತ್ತಿದ್ದ ಡಾ|ಚರಣ್ ಕೂಗಿದರು. ಒಂಭತ್ತು ಸಾಲು ಬಿಟ್ಟು ಹತ್ತನೆಯ ಸಾಲಿನ ಒಂದೊಂದು ಕಲ್ಲನೂ ಸಮೀಕ್ಷವಾಗಿ ಪರೀಕ್ಷಿಸಲು ಶುರು ಮಾಡಿದರು. ಒಂದೂ ಅಲುಗಾಡಲಿಲ್ಲ. ಎಲ್ಲವೂ ಬಲವಾಗಿ ಗೋಡೆಯಲ್ಲಿ ಹೂತಿದ್ದವು. ಡಾ|ಚರಣ್‏ಗೆ ನಂಬಿಕೆಯಾಗಲಿಲ್ಲ "ಐ ವಾಸ್ ಸೋ ಶೂರ್" ಎಂದು ಗೊಣಗಿದರು.


"ಏನು? ಏನಾಯಿತು?" ಡಾ|ಶುಬಕರ್ ಕೇಳಿದರು.


"ಒಂಭತ್ತು ಕೊಡ, ಹತ್ತನೆಯದು ದೀಪ - ಆ ದೀಪದ ಪದ. ಹತ್ತನೆಯ ಸಾಲಿನಲ್ಲಿ ಏನೋ ಇರುತ್ತೆ ಅಂತ..."


"ಹಂಂ... ಮೇಲಿಂದಲೋ ಕೆಳಗಿಂದಲೋ?"


"ಓಹ್ ನಿಜ. ಆಗಿನ ಕಾಲದಲ್ಲಿ ಈ ಭಾವಿಯಲ್ಲಿ ನೀರಿದ್ದಿರಬೇಕು. ನಾಚಾರಮ್ಮ ಜ್ಯೋತಿಷ್ಮತಿತೈಲ ಸೇವಿಸಿದ ನಂತರ ತಣಿಸಿದ್ದು ಈ ಬಾವಿಯಲ್ಲೇ ಇರಬೇಕು. ಸೊ... " ಡಾ|ಚರಣ್ ಕಲ್ಲುಗಳನ್ನು ಹಿಡಿದು ನಿಧಾನವಾಗಿ ಮೇಲೆ ಹತ್ತಲಾರಂಭಿಸಿದರು. "ಆ ಮೇಲಿನ ೧೦-೧೨ ಸಾಲುಗಳು ಸಣ್ಣ ಇಟ್ಟಿಗೆಗಳು ಅವು ನಂತರ ಸೇರಿಸಿರಬೇಕು. ಮೇಲಿನಿಂದ ಹತ್ತನೆಯ ಸಾಲು....ಓಹ್" ಎಂದು ಚರಣ್ ಕೂಗಿದರು.


ಹತ್ತನೇ ಸಾಲಿನಲ್ಲಿ ಒಂದು ಕಲ್ಲು ಮಾತ್ರ ವಿಭಿನ್ನವಾಗಿತ್ತು. ಬಣ್ಣ, ಕೆತ್ತನೆ ಎಲ್ಲವೂ ಬೇರೆ. ಕಲ್ಲು ಸಡಿಲವಾಗಿತ್ತು - ನಿಧಾನವಾಗಿ ಅದನ್ನು ಹೊರತೆಗೆಯಲು ಚರಣ್ ಪ್ರಯತ್ನಿಸಿದರು, ಆದರೆ ಆಗಲಿಲ್ಲ. ಭರವಾದ ಕಲ್ಲು ಅವರ ಕೈಜಾರಿ ಬಾವಿಯ ತಳ ಸೇರಿತು. ಕಲ್ಲಿನ ಹಿಂದೆ ಒಂದು ಸಣ್ಣ ಗೂಡಿನಂತಿತ್ತು. ಕತ್ತಲೊಳಕ್ಕೆ ಹೆಲ್ಮೆಟಿನ ಬೆಳಕು ಹರಿಸಿದಾಗ ಅದರೊಳಗೆ ಒಂದು ಸಣ್ಣದಾದ ಬಾಯಿ ಕಟ್ಟಿದ ಮಡಿಕೆ ಕಾಣಿಸಿತು. ಮುಟ್ಟಿದಕೂಡಲೆ ಬಾಯಿಗೆ ಕಟ್ಟಿದ್ದ ಅಜಿನವು ಧೂಳಾದರೂ, ಮಡಿಕೆಯ ಬಾಯನ್ನು ಒಂದು ರೀತಿಯ ಗಾರೆಯಿಂದ ಮುಚ್ಚಲಾಗಿತ್ತು. ಸಣ್ಣ ಮಡಿಕೆಯನ್ನು ಚರಣ್ ನಿಧಾನವಾಗಿ ಹೊರತೆಗೆದರು. ಅಷ್ಟು ಹೊತ್ತಿಗೆ ಸರಿಯಾಗಿ ಮೇಲಿನಿಂದ ಕರೆ ಬಂತು.


⌘⠀⠀⁜⠀⁓⠀※⠀⁓⠀⁜⠀⠀⌘


ಊರು ಬಿಟ್ಟು ಹೊರಡುವ ಮುನ್ನ ನಾಚಾರುಳಿಗೆ ತಾನು ಪರಿಶುಂಭಿಸಿದ, ಸೇವಿಸಿದ ಜ್ಯೋತಿಷ್ಮತಿತೈಲ ಸ್ವಲ್ಪ ಉಳಿದಿದೆ - ಇನ್ನು ತಯಾರಿಸಿದ ಕುಂಭದಲ್ಲಿಯೇ ಇದೆಯೆಂದು ನೆನಪಾಯಿತು. ಬಹಳ ಅಪಾಯಕಾರಿಯಾದ ದ್ರವ್ಯ - ತನಗೆ, ತನ್ನ ಕುಟುಂಬಕ್ಕೆ ಆದ ದುರಂತ ಬೇರೆ ಯಾರಿಗೂ ಆಗಬಾರದು, ಆದರೂ ಬಲಾನ್ವಿತ ಪದಾರ್ಥ - ಶಾಸ್ತ್ರೋಕ್ತವಾಗಿ ನೈವೇದ್ಯ ಬೇರೆಯಾಗಿದೆ. ಹಾಗಾಗಿ ಅದನ್ನು ಕ್ಷಿಯಮಾಡುವುದೂ ಪರ್ಯಾಪ್ತವಲ್ಲ. ಹೀಗಿರುವಲ್ಲಿ ಏನು ಮಾಡುದುವು? ಸ್ವಲ್ಪ ಹೊತ್ತಿನ ಧ್ಯಾನದ ನಂತರ ಏನು ಮಾಡಬೇಕೆಂಬುದು ಗೋಚರವಾಯಿತು. ಜಾಡಿಯನ್ನು ಹಿಡಿದು ತನ್ನ ವಿಶ್ವಸ್ತನೊಬ್ಬನ ಜೊತೆ ಶ್ರೀಶೈಲನಾಥ ದೇವಾಲಯಕ್ಕೆ ಹೋಗಿ ಪಕ್ಕದಲ್ಲಿದ ಭೂಕೂಪದ ಮುಂದೆ ನಿಂತು ಪುನಃ ಕೆಲ ಕ್ಷಣಗಳ ಕಾಲ ಚಿಂತನೆ ಮಾಡಿದಳು. ತೈಲವನ್ನು ತಯಾರಿಸಲು ಈ ವಾಪಿಯ ಉದಕವನ್ನೇ ಉಪಯೋಗಿಸಿದ್ದು. ಜ್ಯೋತಿಷ್ಮತಿತೈಲ ಸೇವನೆಯ ನಂತರ ತನ್ನ ತನು-ವೇದನೆಯನ್ನು ಶಾಂತ ಗೊಳಿಸಿದ್ದೂ ಈ ಕೂಪದ ನೀರೇ. ಈ ತೀರ್ಥದಲ್ಲಿ ಆ ಜ್ಯೋತಿಷ್ಮತಿಯನ್ನು ಅಂತರ್ಭವಿಸುವ ಯಾವುದೋ ವಿಶೇಷ ಗುಣಲಕ್ಷಣವಿರಬೇಕು. ಹಾಗಾಗಿ ಶೇಷ ಜ್ಯೋತಿಷ್ಮತಿತೈಲದ ಕುಂಭವನ್ನು ಈ ಕೂಪದಲ್ಲೇ ಅಡಗಿಸಿಟ್ಟು ತನ್ನ ಹಿಂದಿನ ಜೀವನಕ್ಕೆ ಒಂದು ಅಧೋರೇಖೆ ಎಳೆಯಬೇಕೆಂದು ನಿರ್ಧರಿಸಿದಳು.


ಮರುದಿನ ಬೆಳಗ್ಗೆ ನಾಚಾರುಳ ಮಹಾತ್ಮ್ಯವನ್ನರಿತ ಸುಮಾರು ಎಪ್ಪತ್ತು-ಎಂಬತ್ತು ಒಕ್ಕಲುಗಳು - ಒಟ್ಟು ಸುಮಾರು ನಲ್ಕರಿಂದ ಐದುನೂರು ಜನರ ಸಾರ್ಥ ಅವಳ ಹಿಂದೆ ಗಂಟು ಮೂಟೆ ಕಟ್ಟಿ ಅವಳನ್ನೇ ಅನುಸರಿಸಿ ಹೊರಟಿತು. ಕೂಪದ ಸುತ್ತಲು ವಿಷಸರ್ಪಗಳಕಾಟ - ಶಾಪವಿರುವುದು ಎಂಬ ವಷಯ ಕಡ್ಗಿಚ್ಚಿನಂತೆ ಊರಿನಲ್ಲೆಲ್ಲ ಹರಡಿತು. ನಂದನವನದಂತಿದ್ದ ಅಗ್ರಹಾರ ಶಾಪಿತ ಊರು - ಶಪತ್ತೆ‌ ಊರು - ಶಾಪತ್ತೂರ್ ಆಗಿ ಬದಲಾಯಿತು. ಶ್ರೀಶೈಲನಾಥಪತಿ ದೇವಾಲಯ, ಹಾಗು ಅದರ ಕೂಪದ ಹತ್ತಿರ ಸಾಮಾನ್ಯ ಜನರು ಸುಳಿಯದಿರುವಂತಾಯಿತು.


⌘⠀⠀⁜⠀⁓⠀※⠀⁓⠀⁜⠀⠀⌘


"ದಟ್ಸ್ ಎನಫ್. ಥ್ಯಾಂಕ್ಯೂ ಡಾ|ಚರಣ್. ಅದನ್ನ ನನಗೆ ಕೊಡಿ" ಬಾವಿಯೊಳಗಿಂದ ಮೇಲೆ ನೋಡಿದಾಗ ಪ್ರೊ|ನಿಥಿ ಮುಖ ಕಾಣಿಸಿತು. ಏನೂ ತೋಚದೆ ಡಾ|ಚರಣ್ ಬಾವಿಯ ಕೇಳಕ್ಕೆ ನೋಡಿದರು "ಆ.. ಆ.. ನಿಮ್ಮ ಜನ ನಮ್ಮ ಹತ್ತಿರ ಇದ್ದಾರೆ. ಅವರು ಬದುಕಬೇಕು ಅಂದರೆ ನಿಧಾನವಾಗಿ ಆ ಮಡಿಕೆಯನ್ನ ಮೇಲಕ್ಕೆ ತನ್ನಿ"


"ಪ್ರೊ|ಉದಯ್ ನಿಥಿ? ನನಗೆ ಅರ್ಥವಾಗ್ತಾ ಇಲ್ಲ. ನಿಮಗೆ ಈ ವಿಶಯದಲ್ಲಿ...?" ಡಾ|ಚರಣ್ ತಬ್ಬಿಬ್ಬಾಗಿ ಕೇಳಿದರು


ಪ್ರೊ|ನಿಥಿ ಅಪಹಾಸ್ಯದಿಂದ ನಕ್ಕರು "ಅಷ್ಟೆಲ್ಲ ಯೋಚನೆ ಮಾಡಬೇಡಿ ಚರಣ್. ನಿಮ್ಮ ಸಂಶೋಧನೆಯಲ್ಲಿ ಯಾರಿಗೂ ಆಸಕ್ತಿ ಇಲ್ಲ. ಆದರೆ ಆ ಮಡಿಕೆ ಹುಡುಕಿಸೋಕ್ಕೆ ಅಂತಲೇ ನಾನು ನಿಮಗೆ ಗ್ರ್ಯಾಂಟ್ ಬರೋ ಹಾಗೆ ಮಾಡಿದ್ದು"


"ಪ್...ಪ್ಯಾಟ್ರಿಕ್ ಡೇವಿಸ್...?"


"ಯಸ್! ನಮ್ಮ ಇಂಟರೆಸ್ಟ್ ಏನಿದ್ದರೂ ನೀವು ಹಿಡಿದಿರೋ ಮಡಿಕೆಯಲ್ಲಿ. ಬಿಗ್ ಫಾರ್ಮಾ ವಾಂಟ್ಸ್ ದಟ್ ಸ್ಟಫ್ ಎಂಡ್ ವಿಲ್ ಪೇ ಮಿಲಿಯನ್ಸ್. ಈಗ ಒಳ್ಳೆ ಮಾತಿನಲ್ಲಿ ಹೊರಗೆ ತನ್ನಿ"


ನೂರು ಮೈಲಿ ವೇಗದಲ್ಲಿ ಚರಣ್ ತಲೆ ಓಡುತ್ತಿತ್ತು. ಫಾರ್ಮಸ್ಯೂಟಿಕಲ್ ಕಂಪನಿಗಳಿಗೆ ಜ್ಯೋತಿಷ್ಮತಿ ತೈಲದಲ್ಲಿ ಆಸಕ್ತಿಯೇ? ನಾಚಾರಮ್ಮ, ಜ್ಯೋತಿಷ್ಮತಿ, ಬಿಗ್ ಫಾರ್ಮಾ, ಪ್ಯಾಟ್ರಿಕ್ ಡೇವಿಸ್, ಪ್ರೊ|ನಿಥಿ ಎಲ್ಲವೂ ಸರಪಳಿಯ ಕೊಂಡಿಗಳಂತೆ ಒಂದಕ್ಕೊಂದು ಜೋಡಿಕೊಳ್ಳತೊಡಗಿದವು. ಕೊನೆಯ ಕೊಂಡಿ ದೊಡ್ಡ ಡಾಲರ್‏ಗಳು.


ನೆಲ ಮಟ್ಟ ಸೇರಿದಾಗ ಉದಯ್ ನಿಥಿಯ ಗೂಂಡಾಗಳು ನಯನಾ ಮತ್ತು ವೇಣು ತಲೆಗಳಿಗೆ ಬಂದೂಕುಗಳನ್ನು ಹಿಡಿದು ನಿಂತಿದ್ದರು. ಪ್ರೊ|ನಿಥಿ ಕೈಯಲ್ಲೂ ಗನ್ ಇತ್ತು.


ಹಿಂದಿನಿಂದ ಮೆಲ್ಲನೆಯ ಶಬ್ಧವಾಗಿ ಡಾ|ಚರಣ್ ಆ ಬದಿ ಗೋಪ್ಯವಾಗಿ ನೋಡಲು, ಶಿವಸ್ವಾಮಿ ನಿಧಾನವಾಗಿ ಮರೆಯಿಂದ ಇಣುಕುತ್ತಿದ್ದ. ಉಳಿದದ್ದೆಲ್ಲವು ಕೆಲವೇ ನಿಮಿಷಗಳಲ್ಲಿ ಮುಗಿದುಹೋಯಿತು: ಶಿವಸ್ವಾಮಿ ಉದಯ್ ನಿಥಿ ಮೇಲೆ ಹಾರಿ, ಇಬ್ಬರೂ ಹೊಡೆದಾಡಿದರು. ನಯನಾ, ವೇಣು, ಚರಣ್ ಹಾಗು ಶುಬಕರ್ ಸೇರಿ ಉಳಿದ ಇಬ್ಬರು ಗೂಂಡಾಗಳನ್ನು ತರಾಟೆಗೆ ತೆಗೆದುಕೊಂಡರು. ಅಷ್ಟು ಹೊತ್ತಿಗೆ ಪೋಲೀಸ್ ಕೂಡ ಶಿವಸ್ವಾಮಿಯಿಂದ ಕರೆಯಲ್ಪಟ್ಟು ಅಲ್ಲಿಗೆ ಬಂದು, ಪ್ರೊ|ನಿಥಿ ಮತ್ತು ಗೂಂಡಾಗಳನ್ನು ಬಂಧಿಸಿ ಕರೆದೊಯ್ದರು.


⌘⠀⠀⁜⠀⁓⠀※⠀⁓⠀⁜⠀⠀⌘


ನಾಚಾರಮ್ಮನ ಅನುಯಾಯಿಗಳು ಕ್ರಿ.ಶ. ೧೦ನೇ ಶತಮಾನದ ಉತ್ತರಾರ್ಧದಲ್ಲಿ (ಇಂದಿನ) ಆಳ್ವಾರ್ ಕುರಿಚಿ → ಶೆಂಕೋಟ್ಟೈ → ಮದುರೈ → ತಿರುಚಿರಪಲ್ಲಿ → ಈರೋಡ್ → ಸೇಲಂ → ಶಿವನಸಮುದ್ರ ಮಾರ್ಗವಾಗಿ ಸುಮಾರು ೧೧೦೦-೧೨೦೦ ಕಿಲೋಮೀಟರ್‏ಗಳ ಪ್ರಯಾಣ ಮಾಡಿ, ಕರ್ನಾಟಕದ (ಇಂದಿನ) ಮೈಸೂರು, ಹಾಸನ ಹಾಗು ಶಿವಮೋಗ್ಗ ಜಿಲ್ಲೆಗಳ ಹಳ್ಳಿಗಳಿಗೆ ಬಂದು ನೆಲೆಸಿ, ಸಂಕೇತಿ ಜನಾಂಗವೆನಿಸಿಕೊಂಡರು. ವೇದ-ಮಂತ್ರ, ಸಂಗೀತ, ವ್ಯವಸಾಯಗಳನ್ನು ಮಾಡಿಕೊಂಡು, ಭಾಷೆ ಪ್ರಾಚೀನ ತಮಿಳಿನಂತಾದರೂ ಮನಸಿನಿಂದ ಕನ್ನಡಿಗರೇ ಆಗಿಹೋದರು.


⌘⠀⠀⁜⠀⁓⠀※⠀⁓⠀⁜⠀⠀⌘


ಪ್ರೊ|ನಿಥಿ ಬಂಧನ ಹಾಗು ಶಾಪತ್ತೂರಿನ ಪ್ರಸಂಗಗಳ ನಂತರ ಹಲವು ವಾರಗಳು ಕಳೆದಿದ್ದವು. ನಯನಾ ಮತ್ತು ಡಾ|ಚರಣ್ ವಿಶ್ವವಿದ್ಯಾಲಯದಲ್ಲಿದ್ದ ಅವರ ಅಫೀಸಿನಿಲ್ಲಿ ಬೇರೆ ಯಾವುದೋ ಹೊಸ ವರದಿ ಬರೆಯುವುದರಲ್ಲಿ ನಿರತರಾಗಿದ್ದರು.


"ಆ ಮಡಿಕೆಯಲ್ಲಿ ಏನಿತ್ತು, ಡಾ|ಚರಣ್. ಅದರ ಅನಾಲಿಸಿಸ್ ಆಯ್ತಾ? ಅದರ ವಿಚಾರವಾಗಿ ಮುಂದೇನು?" ನಯನಾ ಡಾ|ಚರಣ್‏ರನ್ನು ಸಂಬೋಧಿಸಿ ಕೇಳಿದಳು. 


"ಮಡಿಕೆ? ಯಾವ ಮಡಿಕೆ?" ಡಾ|ಚರಣ್ ಆಶ್ಚರ್ಯಭಾವದಿಂದ ಕೇಳಿದರು. 


ನಯನಾಳ ತೆರೆದ ಬಾಯಿ ತೆರೆದೇ ಇತ್ತು. ಡಾ|ಚರಣ್ ಮುಗುಳ್ನಗೆ ನಕ್ಕರು. "ಅದರ ವಿಷಯ ಮಾತಾಡಿದರೆ ಇಂತಹ ಉತ್ತರಗಳೇ ಸಿಗುವುದು. ತಿರುವನಂತಪುರ ದೇವಸ್ಥಾನದ ನಿಧಿಯಂತೆ, ಆ ಮಡಿಕೆಯಲ್ಲಿ ಜ್ಯೋತಿಷ್ಮತಿತೈಲವೇ ಇದ್ದಲ್ಲಿ, ಅದಕ್ಕೆ ಈ ಪ್ರಪಂಚ ಇನ್ನು ತಯಾರಾಗಿಲ್ಲ. ಅದು ಸರಕಾರದ ಕ್ಲ್ಯಾಸಿಫೈಡ್ ಫೈಲ್‏‏‎ ‎ನಲ್ಲಿ ಎಲ್ಲೋ ಹೂತು ಹೋಗಿದೆ. ಅದಕ್ಕೆ ಯಾವಾಗ ಸಮಯ ಬರುತ್ತೋ ಗೊತ್ತಿಲ್ಲ. ಶಾಪತ್ತೂರಿನಲ್ಲಿ ನಮಗಾದ ಅನಾಹುತದ ನಂತರ ನನಗಂತೂ ಆ ವಿಷಯವಾಗಿ ಯಾವ ಆಪತ್ತಿಯೂ ಇಲ್ಲ" ಎಂದು ಸ್ವಲ್ಪ ಹೊತ್ತು ಏನೋ ಯೋಚಿಸುತ್ತ ಸುಮ್ಮನಾದರು. "ಆದರೆ ನಾಚಾರಮ್ಮಳ ಕಥೆಗೆ ಖಂಡಿತವಾಗಿ ಧೃದವಾದ ಆಧಾರ ಸಿಕ್ಕಿದೆ" ಎಂದು ಪುನಃ ಮುಖದಲ್ಲಿ ಮಂದ ಸ್ಮಿತೆ ಮೂಡಿಸಿಕೊಂಡರು . "ಶೀ ವಾಸ್ ಎ ಗ್ರೇಟ್ ವುಮನ್... ಅವತಾರ ಎತ್ತಿದ ದೇವತೆಯೇ ಸರಿ"


꧁⠀⠀⠀⌘⠀⠀⁜⠀⁓⠀※⠀ᜑ⠀⁜⠀⠀⌘⠀⠀⠀꧂



ಲೇಖಕರ ಮಾತು


ಇತಿಹಾಸ ಆಧಾರಿತ ಕಥೆಗಳಲ್ಲಿ ಸ್ಥಾಪಿತ ಇತಿಹಾಸ ಎಲ್ಲಿ ಮುಗಿಯುತ್ತದೆ ಮತ್ತು ಕಲ್ಪನೆ ಎಲ್ಲಿ ಆರಂಭವಾಗುತ್ತದೆ ಎಂಬುದು ಓದುಗರಿಗೆ ಬೇರ್ಪಡಿಸುವುದು ಸುಲಭವಾಗಿಲ್ಲದಿದ್ದರೆ, ಬರಹಗಾರನ ಕೆಲಸ ಸಫಲವೇ ಸರಿ


ಈ ಕತೆಯಲ್ಲಿ ಬರುವ ನಾಚಾರಮ್ಮನ ವೃತ್ತಾಂತದ ಪೂರ್ವ ಭಾಗದ ರೂಪರೇಖೆ - ಅಂದರೆ ಅವಳ ಬಡತನ, ಜ್ಯೋತಿಷ್ಮತಿ ಸೇವನೆ, ಮಗುವಿನ ಮರಣ, ಪತಿಯ ಬುದ್ಧಿ ಭ್ರಮಣೆ ಹಾಗು ಅವಳ ಜ್ಞಾನೋದಯ, ಅವಳಿಗೆ ಅವಮಾನ ಮಾಡುವ ಪ್ರಯತ್ನ, ಊರಿಗೆ ಶಾಪ ಕೊಟ್ಟು ನಂತರ ಊರಿನವರ ಜೊತೆ ವಲಸೆ ಹೋಗುವುದು (ಹೆಚ್ಚು ಕಡಿಮೆ) ಸ್ಥಾಪಿತ ಇತಿಹಾಸವಾದರೂ ನಾಚಾರಮ್ಮನ ಪತಿಯ, ಮಗನ ಹೆಸರುಗಳಾಗಲಿ, ಜ್ಯೋತಿಷ್ಮತಿ ತಯಾರಿಸುವ ವಿಧಾನವಾಗಲಿ ಎಲ್ಲೂ ಉಲ್ಲೇಖಿಸಿಲ್ಲ. ಸಂಕೇತಿ ಸಮುದಾಯವು ಕರ್ನಾಟಕದ ಮೈಸೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲೆಸಿರುವುದೂ ಸತ್ಯ ಸಂಗತಿ, ಹಾಗು ಆ ವಲಸೆಯನ್ನು ೧೧ನೇ ಶತಮಾನದ ಉತ್ತರ ಭಾಗಕ್ಕೆ ಲಂಗರು ಹಾಕಲು ಅನೇಕ ಆಧಾರಗಳಿವೆ. 


ಶೆಂಕೊಟ್ಟೈ, ಆಳ್ವಾರ್‌ಕುರಿಚಿ, ಪಾಳ್ಬಿದ್ದ ಶಾಪತ್ತೂರು, ಅಲ್ಲಿಯ ದೇವಸ್ಥಾನಗಳು, ಕೂಪ, ಅದರ ಮೇಲಿನ ಮಂಟಪ ಎಲ್ಲವೂ ನಿಜವಾಗಿ ಇವೆ. ಜೊತೆಗೆ ಆ ರಥವು ತಾನಾಗಿ ತಾನೆ ರಥಬೀದಿ ಸುತ್ತಿ ಬಂದು ಭಕ್ತಾದಿಗಳ ಮೇಲೆ ಹರಿದ ಕಥೆಯೂ ಅಲ್ಲಿಯ ಸ್ಥಳ ಪುರಾಣವೇ ಸರಿ. 


ನರ್ಮದೆಯ ಮಂತ್ರದ ವಿಷಯ ನಿಜವೇ ಆದರೂ, ಅದನ್ನು ಹೇಳುವ ಸನ್ನಿವೇಷ ಕಥೆಯಲ್ಲಿರುವಂತಲ್ಲ. ಅಂತೆಯೇ ದೀಪದ ಪದವನ್ನು ಕಥಾನುಕೂಲವಾಗಿ ಬದಲಿಸಲಾಗಿದೆ. ಜ್ಯೋತಿಷ್ಮತಿತೈಲದ ಶೇಷ ಭಾಗ ಮತ್ತು ಅದನ್ನು ಅಡಗಿಸಿಟ್ಟ ಸ್ಥಳ ಕಾಲ್ಪನಿಕ. ಅಂತೆಯೇ ಡಾ|ಚರಣ್/ಪ್ರೊ|ನಿಥಿ ಕತೆಯೂ ಕರ್ಕ್ ಎಂಬ ಫಾರ್ಮಾ ಕಂಪನಿ ಸಮೇತ ಸಂಕೂರ್ಣವಾಗಿ ಕಾಲ್ಪನಿಕ


ಉಲ್ಲೇಖನ: ಸಂಕೇತಿ ಅಧ್ಯಯನ ಸಂಪುಟ - ೧, ಸಂಕೇತಿ: ಒಂದು ಅಧ್ಯಯನ (ಸಂಸ್ಕೃತಿ-ಸಮೀಕ್ಷೆ), ಡಾ.⠀ಪ್ರಣತಾರ್ತಿಹರನ್, ಸಮುದಾಯ ಅಧ್ಯಯನ ಕೇಂದ್ರ, ಮೈಸೂರು


No comments: