Tuesday, January 23, 2018

ಕಾಲಾತೀತ

ಕಾಲಾತೀತ

"ದಿನಾ ದಿನ ಟೂರು ಟೂರೂಂತ ಊರೂರು, ದೇಶಾಂತರ ಸುತ್ತುತಾ ಇದ್ದರೆ ಮನೆ ಕಡೆ ಕೆಲಸ ಎಲ್ಲ ಯಾರು ನೋಡೂರು? ನನಗೂ ಕೆಲಸ ಮಾಡಿ ಮಾಡಿ ಸಾಕಾಗಿಹೋಗಿದೆ. ಮನೆಕಡೆ ಒಂದು ಚೂರೂ ಸಹಾಯ ಮಾಡದೆ ಇದ್ದರೆ ಸಂಸಾರ ನಿಭಾಯಿಸೋದಾದರೂ ಹೇಗೆ?" ವಿರಾಜನ ಹೆಂಡತಿ ಶಾಂತಿ ಕೂಗಾಡುತ್ತಿದ್ದಳು. ವಿರಾಜ್ ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವರ್ಷಕ್ಕೊಂದೆರಡು ಬಾರಿ ಆಫೀಸ್ ಕೆಲಸದ ಮೇಲೆ ಹೊರದೇಶಕ್ಕೆ ಹೋಗಬೇಕಾಗಿ ಬರುತ್ತಿತ್ತು. ಇಂದಿನ ದಿನ ಶಾಂತಿಯ ಕೋಪಕ್ಕೆ ಅದೇ ಕಾರಣವಾಗಿತ್ತು.

ಶಾಂತಿಯ ಕೋಪ ವಿರಾಜನಿಗೆ ಹೊಸತೇನು ಅಲ್ಲ. ಇತ್ತೀಚೆಗಂತೂ ದಿನೇ ದಿನೇ ಮನೆಯಲ್ಲಿ ಕಿರುಚಾಟ-ರಂಪಾಟ ಸಾಮಾನ್ಯವಾಗಿ ಹೋಗಿತ್ತು. ಮನೆಯ ಕೆಲಸದಲ್ಲಿ ವಿರಾಜ್ ಆದಷ್ಟೂ ಸಹಾಯ ಮಾದುತ್ತಿದ್ದ. ಆದರೂ ಶಾಂತಿಯ ಕೋಪ ಹೆಚ್ಚುತ್ತಲೇಯಿತ್ತೇ ಹೊರತು ಕಡಿಮೆಯಂತೂ ಆಗಿರಲಿಲ್ಲ. ಪ್ರಯತ್ನ ಪಡುವಷ್ಟು ಪಟ್ಟು ವಿರಾಜ್ ’ಇದು ಈಡೇರುವ ಸಮಸ್ಯೆಯಲ್ಲ’ ಎಂದು ಕೈಬಿಟ್ಟು, ಅವರ ಏಳು ವರ್ಷದ ಪುಟ್ಟ ಮಗಳಿಗಾಗಿ ಸಹಿಸಿಕೊಂಡು ಹೋಗುತ್ತಿದ್ದ.

ಶಾಂತಿ ಕೋಪಿಸಿಕೊಂಡು ರೂಮಿನೊಳಗೆ ಹೋಗಿ ದೀಪ ಆರಿಸಿ ಮಲಗಿದಳು. ವಿರಾಜ್ ತನಗೆ ಮರುದಿನಕ್ಕೆ ಬೇಕಾದ ಸೂಟ್‌ಕೇಸ್ ಪ್ಯಾಕ್ ಮಾಡಿಕೊಂಡು, ಮಗಳ ಕೋಣೆಗೆ ಹೋಗಿ ಅವಳ ಹಣೆ ಸವರಿ ನಂತರ ತಾನೂ ಹೋಗಿ ಮಲಗಿದ. ಶಾಂತಿ ಗೋಡೆ ಕಡೆ ತಿರುಗಿ ಮಲಗಿದ್ದಳು. ತಾನು ಬಂದಿದ್ದು ಆಕೆಗೆ ಗೊತ್ತಾಯಿತೋ ಇಲ್ಲವೋ ತಿಳಿಯಲಿಲ್ಲ.

ಕೈಮೇಲೆ ಹುಳು ಓಡಾಡಿದಂತಾಗಿ ಎಚ್ಚರವಾಯಿತು. ಕೈಗಡಿಯಾರ ಅಲಾರ್ಮ್ ಸೂಚಿಸುತ್ತಿದೆಯೆಂದು ಗ್ರಹಿಸಿ ಎಚ್ಚರ ಮಾಡಿಕೊಂಡ. ಶಾಂತಿ ಇನ್ನೂ ಗೋಡೆ ಕಡೆಯೇ ತಿರುಗಿ ಮಲಗಿದ್ದಳು. ನಿಶಬ್ಧವಾಗಿ ಎದ್ದು ಬಚ್ಚಲುಮನೆ ಸೇರಿ ಸ್ನಾನಾದಿಗಳನ್ನು ಮುಗಿಸಿಕೊಂಡ. ಬಟ್ಟೆ ಧರಿಸಿ ಮಗಳಿದ್ದ ಕೋಣೆಗೆ ಹೋದಾಗ ಮಗು ಎಚ್ಚರ ಮಾಡಿಕೊಂಡಿತು.

"ಗುಡ್‌ಮಾರ್ನಿಂಗ್, ಪುಟ್ಟಿ" ವಿರಾಜ್ ಪಿಸುಮಾತಿನಲ್ಲಿ ಹೇಳಿದ.

"ಗುಡ್‌ಮಾರ್ನಿಂಗ್, ಅಪ್ಪ"

"ನಾನು ಇವತ್ತು ಟೂರ್ ಹೊರಡ್ತಾ ಇದೀನಿ, ಪುಟ್ಟೀ. ನಿನಗೆ ಬೈ ಹೇಳಿ ಹೋಗೋಣ ಅಂತ ಬಂದೆ"

"ಓಕೆ ಅಪ್ಪ. ಯಾವಾಗ ವಾಪಸ್ ಬರ್ತೀರ?"

"ಒಂದು ವಾರ ಆಗುತ್ತೆ, ಚಿನ್ನ"

"ಸರಿ ಅಪ್ಪ. ಬೈ. ಸೀ ಯು ನೆಕ್ಸ್ಟ್-ವೀಕ್"

"ಇನ್ನೂ 4:30. ನೀನು ಇನ್ನೊಂದು ಸ್ವಲ್ಪ ಹೊತ್ತು ತಾಚಿ ಮಾಡಿಕೊ. ಅಮ್ಮನಿಗೆ ಕಷ್ಟ ಕೊಡಬೇಡ. ಸೀ ಯು ನೆಕ್ಸ್ಟ್-ವೀಕ್, ಚಿನ್ನ"

ವಿರಾಜನ ಹೃದಯ ಖುಷಿಯಿಂದ ತುಂಬಿತು. ಮಗುವಿಗೆ ಮುತ್ತು ಕೊಟ್ಟು ಪುನಃ ಮಲಗಿಸಿದ. ಶಾಂತಿಯನ್ನು ಎಬ್ಬಿಸಿದರೆ ಇನ್ನೇನು ಮಾತಿಗೆ ಈಡಾಗಬೇಕಾಗುತ್ತೋ ಎಂದು ಯೋಚಿಸಿ, ಆಮೇಲೆ ಫೋನ್ ಮಾಡಿದರಾಯಿತೆಂದು ಸೂಟ್‌ಕೇಸ್ ಹಿಡಿದು ಸದ್ದಿಲ್ಲದೇ ಮನೆಯಿಂದ ಹೊರಬಿದ್ದ. ಹತ್ತಿರದಲ್ಲೇ ಇದ್ದ ಆಟೋ-ಸ್ಟ್ಯಾಂಡಿಗೆ ನಡೆದು ಹೋಗಿ, ಆಟೋ ಹತ್ತಿ ಏರ್‌ಪೋರ್ಟ್ ಕಡೆಗೆ ರವಾನೆಯಾದ.

***
ಶಿವಾಜಿನಗರದ ಆಟೋ ಸ್ಟಾಂಡಿನಿಂದ ಅಬ್ದುಲ್ ರಹ್ಮಾನ್ ಆತಂಕ ಭರಿತನಾಗಿ ಆಟೋವೊಂದನ್ನು ಹತ್ತಿ ಏರ್‌ಪೋರ್ಟ್ ಕಡೆ ಹೊರಟಿದ್ದ. ಪಾರ್ಕಿನ್ಸನ್ಸ್ ಡಿಸೀಸ್ ರೋಗ ಇರುವವರಂತೆ ಅವನ ಕೈ ನಡುಗುತ್ತಿತ್ತು. ಆತಂಕ ಕಡಿಮೆ ಮಾಡಿಕೊಳ್ಳಲು ಸಿಗರೇಟ್ ತುಟಿಗೇರಿಸಿ ಬೆಂಕಿಕಡ್ಡಿ ಗೀರಿ, ಹೊತ್ತಿಸಿಕೊಂಡು ಆಳವಾಗಿ ಹೊಗೆಯೆಳೆದು, ಅದನ್ನು ತನ್ನ ಶ್ವಾಸಕೋಶದ ತುಂಬ ತುಂಬಿಕೊಂಡಾಗ ನಡುಕ ಸ್ವಲ್ಪ ಕಡಿಮೆಯಾಯಿತು. 

ಆಟೋ ಚಾಲಕ ಕೋಪದಿಂದ, "ಕ್ಯಾ ಬಾ... ಆಟೋ ಮೇ ನೋ-ಸ್ಮೋಕಿಂಗ್ ಸೊ" ಎಂದ. 

ರಹಮಾನ್ "ಚಲ್-ಚಲ್ ರೇ" ಎಂದು ಅವನನ್ನು ಗದರಿಸಿ ಸಿಗರೇಟ್ ಮುಂದುವರೆಸಿದ. 

ರಹಮಾನ್ ಆತಂಕಕ್ಕೆ ಕಾರಣವಿತ್ತು: ಅವನು ಬಹಳ ದಿನಗಳಿಂದ ಇದಕ್ಕಾಗಿಯೇ ಕಾಯುತ್ತಿದ್ದ. ಕೊನೆಗೆ, ನೆನ್ನೆಯಷ್ಟೇ ಅವನ ಮನೆಗೆ ಪಾಷಾ ಕಡೆಯ ಸಣ್ಣ ಹುಡುಗನೊಬ್ಬ ಬಂದು ’ಚಲ್ ಬಾ, ಪಾಶ ಬುಲಾಸೊ’ ಎಂದು ಹೇಳಿ ಪಾಷಾ ಮನೆಗೆ ಕರೆದೊಯ್ದಿದ್ದ. ಅಲ್ಲಿ ಪಾಷಾ ಅವನ ಕೈಗೆ ’ಅಕ್ಬರ್ ಹಮೀದುಲ್ಲ’ ಎಂಬ ಹೆಸರಿನ ಜೊತೆಗೆ ರಹಮಾನನ ಫೋಟೋ ಇದ್ದ ಪಾಸ್ಪೋರ್ಟ್ ಕೊಟ್ಟಿದ್ದ.

"ತುಮ್ಹಾರ ಪಾಸ್ಪೋರ್ಟ್ ಹೋಗಯಾ. ಕಲ್ಕೋ ತುಮ್ಹಾರ ಜಾನೇಕ ದಿನ್. ಯೇ ಲೋ, ಟಿಕೆಟ್" ಎಂದು ಹೇಳಿ ಮರುದಿನ ಬೆಳಗ್ಗೆ ದುಬೈ‌ಗೆ ಹೋಗುವ ಅರೇಬಿಯಾನಾ ಏರ್‌ಲೈನ್ಸ್‌ನ ಟಿಕೆಟ್ ಕೈಗಿಟ್ಟಿದ್ದ. 

"ಶುಕ್ರಿಯಾ ಪಾಷಾ-ಭಾಯ್" ಎಂದು ಹೇಳಿ ರಹಮಾನ್ ಪಾಷಾ ಮನೆಯಿಂದ ಹೊರಬಿದ್ದಿದ್ದ. ನೆನ್ನೆಯ ದಿನವಿಡೀ ಹೊರಡುವ ತಯಾರಿಯಲ್ಲೀ ಕಳೆದು ಹೋಗಿತ್ತು. ’ಅಕ್ಬರ್ ಹಮೀದುಲ್ಲ, ಅಕ್ಬರ್ ಹಮೀದುಲ್ಲ’ ಎಂದು ತನ್ನ ಹೊಸ ಹೆಸರನ್ನು ಜಪ ಮಾಡುತ್ತ ಜೋಪಾನವಾಗಿ ಸೂಟ್ಕೇಸ್ ಪ್ಯಾಕ್ ಮಾಡಿದ್ದ. ಆ ಸೂಟ್ಕೇಸ್ ಒಂದು ಕ್ಯಾರಿ-ಆನ್ ಬ್ಯಾಗಿನ ಜೊತೆ ಈಗ ಅವನ ಪಕ್ಕದಲ್ಲಿ ಸೀಟಿನ ಮೇಲಿತ್ತು. ಅದನ್ನು ತನ್ನ ಹತ್ತಿರ ಎಳೆದುಕೊಂಡು, ಪ್ರೀತಿ-ಭಕ್ತಿಗಳಿಂದ ಅದರ ಸುತ್ತ ಕೈಹಾಕಿದ. 

ರಹಮಾನ್ ಸಿಗರೇಟು ಮುಗಿಸಿ, ತುಂಡನ್ನು ಹೊರಗೆಸೆದು, ಹಿಂದಕ್ಕೊರಗಿ ಏರ್‌ಪೋರ್ಟ್ ತಲುಪುವುದನ್ನು ಕಾದು ಕುಳಿತ.

***
ವಿರಾಜ್ ಚೆಕಿನ್‌ಗಾಗಿ ಅರೇಬಿಯಾನಾ ಏರ್‌ಲೈನ್ಸ್ ಕೌಂಟರಿನಲ್ಲಿ ನಿಂತಿದ್ದ. ಅವನ ಮುಂದೆ ಖೋಪಡಿ-ಟೋಪಿ ಧರಿಸಿದ ಯಾರೋ ಮುಸಲ್ಮಾನ ಮನುಷ್ಯ. ಖೋಪಡಿ-ಟೋಪಿಯ ಚೆಕಿನ್ ಲಗೇಜ್ ಒಳಗೆ ಹಾಕಿಸಿ ಕೌಂಟರಿನವಳು "ಫ್ಲೈಟ್-6479 ಬ್ಯಾಂಗಲೋರ್-ಟು-ದುಬೈ, ಸೀಟ್-12A, ಗೇಟ್-7" ಎಂದು ಹೇಳಿ ಬೋರ್ಡಿಂಗ್-ಪಾಸ್ ಜೊತೆಗೆ ಅವನನ್ನು ಕಳುಹಿಸಿಕೊಟ್ಟಳು. "ನೆಕ್ಸ್ಟ್ ಪ್ಲೀಸ್"

ವಿರಾಜ್ ತನ್ನ ಪಾಸ್ಪೋರ್ಟ್, ಟಿಕೆಟ್ ಇತ್ಯಾದಿಗಳನ್ನು ಅವಳ ಮುಂದಿಟ್ಟ. ಚೆಕಿನ್ ಲಗೇಜ್ ಇರಲಿಲ್ಲ. "ಯೋರ್ ಬೋರ್ಡಿಂಗ್-ಪಾಸಿಸ್, ಸರ್. ಫ್ಲೈಟ್-6479 ಬ್ಯಾಂಗಲೋರ್-ಟು-ದುಬೈ, ಸೀಟ್-12B, ಗೇಟ್-7, ಫ್ಲೈಟ್-84, ದುಬೈ-ಟು-ಸ್ಯಾನ್‌ಫ್ರಾಂಸಿಸ್ಕೋ, ಸೀಟ್-28C. ಹ್ಯಾವ್ ಎ ನೈಸ್ ಟ್ರಿಪ್" ಎಂದು ಹೇಳಿ ಅವನ ಬೋರ್ಡಿಂಗ್ ಪಾಸ್ ಕೈಗಿತ್ತಳು.

***
"ಫ್ಲೈಟ್-ಅಟೆಂಡೆಂಟ್ಸ್ ಪ್ರಿಪೇರ್ ಫಾರ್ ಟೇಕಾಫ್" ಎಂದು ಕ್ಯಾಪ್ಟನ್ ಧ್ವನಿ ಬರುತ್ತಿದ್ದಂತೆ ವಿಮಾನ ಗಗನಕ್ಕೇರಿತು. ಅಬ್ದುಲ್ ರಹಮಾನ್ ತನ್ನ ಸೀಟಿನ ಹ್ಯಾಂಡಲ್‌ಗಳನ್ನು ಬಲವಾಗಿ ಹಿಡಿದು ಕೂತಿದ್ದ. ಭಯ ಅವನ ಕಣ ಕಣಗಳಲ್ಲಿ ತುಂಬ್ ಹರಿದಾಡುತ್ತಿರುವಂತೆ ಭಾಸವಾಗುತ್ತಿತ್ತು. ಅವನ ಮನಸಿನಲ್ಲಿ "ಅಲ್ಲಾಹು-ಅಕ್ಬರ್" ಜೊತೆಗೆ "ಅಕ್ಬರ್ ಹಮೀದುಲ್ಲಾ" ಮಂತ್ರ ಕಿತ್ತಾಡುತ್ತಿತ್ತು. ಪಕ್ಕದಲ್ಲಿ ಕೂತಿದ್ದ ಮನುಷ್ಯ ಚೆಕಿನ್ ಸಮಯದಲ್ಲಿ ತನ್ನ ಹಿಂದೆ ನಿಂತಿದ್ದವನೆಂದು ಗುರುತಿಸಿದ. ಈಗ ತನ್ನನ್ನೇ ದಿಟ್ಟಿಸಿ ನೋಡುತ್ತಿರುವನೆಂದು ಭಾವಿಸಿ ಅವನ ಆತಂಕ ಇನ್ನೂ ಹೆಚ್ಚಾಯಿತು. 

ಸ್ವಲ್ಪ ಹೊತ್ತಿನಲ್ಲಿ ವಿಮಾನ 33000 ಅಡಿಗೇರಿ ಸಮಮಟ್ಟವಾಯಿತು. ಅಷ್ಟು ಹೊತ್ತಿಗೆ ಗಗನಸಖಿಯರು ಆಹಾರೋಪಾಸನೆ ಆರಂಭಿಸಿದ್ದರು. ಪಾಷಾ ’ಪ್ಲೇನ್‌ನಲ್ಲಿ ಹಲಾಲ್-ಖಾನಾ ಸಿಕ್ಕೋದಿಲ್ಲ, ವೆಜಿಟೇರಿಯನ್ ಮಾತ್ರ ತಿನ್ನಬೇಕು’ ಎಂದು ಹೇಳಿದ್ದು ನೆನಪಾಯಿತು. ಸುಂದರಳಾದ ಏರ್‌ಹೋಸ್ಟೆಸ್ ಬಂದಾಗ ತಪ್ಪದೆ "ವೆಜಿಟೇರಿಯನ್-ಮೀಲ್" ಎಂದು ಕೇಳಿಕೊಂಡ. ಆಹಾರ ತಿಂದಮೇಲೆ ಆತಂಕ ಕಡಿಮೆಯಾಯಿತು. ಹೊಟ್ಟೆ ತುಂಬಿ ಕಣ್ಣೆಳೆಯ ತೊಡಗಿತು. ತಲೆ ಹಿಂದಕ್ಕೂರಿದಾಗ ನಿದ್ರೆ ಹತ್ತಿತು. 

***
ವಿರಾಜ್ ನಿರ್ಜನವಾದ ಕಾಡಿನಲ್ಲಿ ಓಡುತ್ತಿದ್ದಾನೆ. ಒಂದೆಡೆ ಕಾಡು ಮತ್ತೊಂದು ಕಡೆ ಆಳವಾದ ಕಣಿವೆ. ಮಳೆ ಬಂದು ನೆಲವೆಲ್ಲ ಒದ್ದೆಯಾಗಿದೆ. ಓಡುತ್ತ ಓಡುತ್ತ ಬಂದು ಸುಸ್ತಾಗಿ ಬಂಡೆಯೊಂದರ ಮೇಲೆ ನಿಂತಾಗ, ಬಂಡೆಯೇ ಕುಸಿದು ಪಾತಾಳಗರಡಿಗೆ ಜಾರಲಾರಂಭಿಸುತ್ತದೆ. ಕೈಗೆ ಸಿಕ್ಕ ಗಡವೊಂದನ್ನು ಬಲವಾಗಿ ಹಿಡಿಯುತ್ತಾನೆ. ಆದರೂ ಭೂಕುಸಿತ, ಪ್ರಪಂಚವನ್ನೇ ಅಲ್ಲಾಡಿಸುವಂತಹ ಶಕ್ತಿ. 

ನಿದ್ರೆಯಿಂದ ಒಮ್ಮೆಲೆ ಎಚ್ಚರವಾಗಿ ನೋಡಿದರೆ ವಿಮಾನವು ಬಿರುಗಾಳಿಯಲ್ಲಿ ಅದುರುವ ಎಲೆಯಂತೆ ಅಲುಗಾಡುತ್ತಿದೆ. ಸೀಟಿನ ಹ್ಯಾಂಡಲ್‌ಗಳನ್ನು ಬಲವಾಗಿ ಹಿಡಿದುಕೊಂಡಿದ್ದಾನೆ. ವಿಮಾನ ಕೆಳಗಿಳಿಯುತ್ತಿರುವ ಅನಿಸಿಕೆ. ಕ್ಯಾಪ್ಟನ್ ಧ್ವನಿ: "ಪ್ಲೀಸ್ ಫಾಸನ್ ಯೋರ್ ಸೀಟ್‌ಬೆಲ್ಟ್ಸ್. ವೀ ಆರ್ ಎನ್ಕೌಂಟರಿಂಗ್ ಎಕ್ಸ್‌ಟ್ರೀಂ ಟರ್ಬುಲೆನ್ಸ್". ವಿರಾಜ್ ತನ್ನ ಸೀಟ್‌ಪಟ್ಟಿಯನ್ನು ಎಳೆದು ನೋಡಿಕೊಂಡ. ಇನ್ನೂ ಹಾಕಿಯೇ ಇತ್ತು. 

ಸ್ವಲ್ಪ ಹೊತ್ತಿನ ಬಳಿಕ ಪುನಃ ಕ್ಯಾಪ್ಟನ್ ಧ್ವನಿ "ವಿ ಹ್ಯಾವ್ ಲಾಸ್ಟ್ ಕಾಂಟ್ಯಾಕ್ಟ್ ವಿತ್ ಏರ್ ಟ್ರಾಫಿಕ್ ಕಂಟ್ರೋಲ್. ಟರ್ಬುಲೆನ್ಸ್ ಇಸ್ ವೆರಿ ಸಿವಿಯರ್. ಅಟೆಂಪ್ಟಿಂಗ್ ಟು ಟರ್ನ್ ಬ್ಯಾಕ್. ಪ್ಲೀಸ್ ಹೋಲ್ಡ್ ಆನ್ ಟು ಯೋರ್ ಸೀಟ್ಸ್" ಮೂರು ಭಾಷೆಗಳಲ್ಲಿ ಮರುಕಳಿಸಿತು.

ವಿಮಾನ ಎಡಕ್ಕೆ ತಿರುಗುತ್ತಿರುವಂತಹ ಆಭಾಸ. ಪಕ್ಕದಲ್ಲಿ ಏನೋ ಗೊಣಗುವ ಶಬ್ಧ. ತಿರುಗಿ ನೋಡಿದಾಗ ಪಕ್ಕದವ "ಅಲ್ಲಾಹು-ಅಕ್ಬರ್, ಅಲ್ಲಾಹು-ಅಕ್ಬರ್" ಎಂದು ಪಠಿಸುತ್ತಿದ್ದ. ಅವನ ಕೈಯಲ್ಲಿ ಒಂದು ರಿಮೋಟ್-ಕಂಟ್ರೋಲ್. ವಿರಾಜನಿಗೆ ಆತ ಅದರಲ್ಲಿ ಯಾವುದೋ ಒಂದು ಗುಂಡಿ ಒತ್ತುತ್ತಿದ್ದಂತೆ ಕಾಣಿಸುತ್ತಿತ್ತು.

ವಿರಾಜ್ ಅವನಿಗೆ "ಏ..." ಎಂದು ಏನೋ ಹೇಳಲು ಹೊರಟ. ಅಷ್ಟರಲ್ಲಿ ವಿಮಾನ ಹತ್ತಾರು ಸಾವಿರ ಅಡಿ ಕೆಲವೇ ಕ್ಷಣಗಳಲ್ಲಿ ಕುಸಿಯಿತು. ಪ್ರಯಾಣಿಕರಿಗೆಲ್ಲ ಅಂತರಿಕ್ಷದಲ್ಲಿ ತೇಲುತ್ತಿರುವ ಅನುಭವ, ವೇದನೆ. ಕೆಲವರು ಜ್ಞಾನವನ್ನೇ ಕಳೆದುಕೊಂಡರು. ವಿರಾಜನಿಗೆ ಇನ್ನೇನು ಎಲ್ಲವೂ ಮುಗಿದೇ ಹೋಯಿತೆನ್ನಿಸಿತು. "ಅಯ್ಯೋ! ಮಗುವನ್ನು ಮತ್ತೆ ನೋಡುವ ಅವಕಾಷವೇ ಇಲ್ಲವೇ? ಶಾಂತಿಗೆ ’ಹೋಗಿಬರ್ತೀನಿ’ ಎಂದು ಹೇಳಿ, ಒಂದೆರಡು ಒಳ್ಳೆಯ ಮಾತಾಡಿಯಾದರೂ ಬರಬಹುದಿತಲ್ಲಾ" ಎಂಬ ಯೋಚನೆಗಳು ಬಂದವು. ಮರುಕ್ಷಣ ಮಿಂಚಿನಂತೆ ತೀವ್ರ ಬೆಳಕು ಹೊಳೆದು ನಂತರ ಎಲ್ಲವೂ ಕತ್ತಲಾಯಿತು.

***
ಬೆಂಗಳೂರು, ಮಾರ್ಚ್ 10,2014 

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ-ನಿಲ್ದಾಣದಿಂದ ಹೊರಟ ಅರೇಬಿಯಾನ ಏರ್‌ಲೈನ್ಸ್ ಫ್ಲೈಟ್-6479, 223 ಪ್ರಯಾಣಿಕರು ಹಾಗು 9 ಸಿಬ್ಬಂದಿಗಳ ಸಮೇತ ಕಾಣೆಯಾಗಿದೆ. ಆ ಬೋಯಿಂಗ್ 757-300 ವಿಮಾನ ಬೆಂಗಳೂರಿನಿಂದ IST7:50ಕ್ಕೆ ದುಬೈಗೆ ರವಾನೆಯಾಗಿ, 2707ಕಿಲೋಮೀಟರ್, ಹಾಗು 4:30 ಘಂಟೆಗಳ ಪ್ರಯಾಣದ ನಂತರ GST10:30ಕ್ಕೆ ದುಬೈ ತಲುಪಲಿತ್ತು. ಆದರೆ ಸುಮಾರು IST8:53ರ ಹೊತ್ತಿಗೆ ಏರ್ ಟ್ರಾಫಿಕ್ ಕಂಟ್ರೋಲ್ ವಿಮಾನದ ಜೊತೆ ಸಂಪರ್ಕ ಕಳೆದುಕೊಂಡಿತು. ಆ ಸಮಯದಲ್ಲಿ ವಿಮಾನವು ಅರಬೀ ಸಮುದ್ರದ ಮಧ್ಯದಲ್ಲಿ ಹಾರುತ್ತಿತ್ತು. 

ವಿಮಾನ ಚಾಲಕರು ಯಾವುದೇ ತೊಂದರೆಯಾಗಿರುವ ಸೂಚನೆಗಳನ್ನು ಕೊಟ್ಟಿರಲಿಲ್ಲ. ಮಾಯವಾಗುವ ಮುನ್ನ ವಿಮಾನ ಹಿಂದಕ್ಕೆ ತಿರುಗುವ ಪ್ರಯತ್ನ ಮಾಡಿರಬಹುದೆಂದು RADAR ಮೂಲಗಳು ತೋರಿಸಿವೆಯೆಂದು ಸೂತ್ರಗಳು ತಿಳಿಸಿವೆ. ಭಾರತ ಮತ್ತು ಯು.ಏ.ಇ ಸಿವಿಲ್ ಏವಿಯೇಷನ್ ಇಲಾಖೆಗಳು ತುರ್ತಾಗಿ ವಿಮಾನದ ಹುಡುಕಾಟ ಹಾಗು ತನಿಖೆಗಳನ್ನು ಪ್ರಾರಂಭ ಮಾಡಲಿವೆ.

***
ಬೆಂಗಳೂರು, ಮಾರ್ಚ್ 12,2014

ಮಾರ್ಚ್ 10ರಂದು ಬೆಂಗಳೂರಿನಿಂದ ಹೊರಟು, ಅರಬೀ ಸಮುದ್ರದ ಮಧ್ಯ ಮಾಯವಾದ ಅರೇಬಿಯಾನ ಏರ್‌ಲೈನ್ಸ್ ಫ್ಲೈಟ್-6479 ಇನ್ನೂ ಪತ್ತೆಯಾಗಿಲ್ಲ. ಮೂರು ದಿನಗಳಿಂದ ಐದು ದೇಶಗಳ 311 ಸಿಬ್ಬಂದಿಗಳು 29 ವಿಮಾನ ಹಾಗು 45 ಹಡಗುಗಳಲ್ಲಿ ನಿರಂತರವಾಗಿ ಹುಡುಕುತ್ತಲೇಯಿದ್ದರೂ ವಿಮಾನ ಯಾ ಭಗ್ನಾವಶೆಷಗಳೂ ಇನ್ನೂ ಸಿಕ್ಕಿಲ್ಲ. ವಿಮಾನದ ಪ್ಲೈಟ್-ಡೇಟಾ-ರೆಕಾರ್ಡರ್ ಸಿಗುವವರೆಗೂ ಏನಾಯಿತೆಂದು ಹೇಳಲಾಗುವುದಿಲ್ಲವೆಂದು ಸಿವಿಲ್ ಏವಿಯೇಷನ್ ಅಧಿಕಾರಿ ಶ್ರೀರಾಮ್ ಶುಕ್ಲ ಹೇಳಿದ್ದಾರೆ. 

ಇತ್ತ, ತನಿಖೆಯು ’ಅಕ್ಬರ್ ಹಮೀದುಲ್ಲ’ ಹೆಸರಿನ ನಕಲಿ ಪಾಸ್ಪೋರ್ಟ್‌ನೊಂದಿಗೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಏಕಾಗ್ರವಾಗಿದೆ. ಈತ ಯಾರು, ಇವನ ಗುರಿಗಳೇನಿರಬಹುದೆಂದು ಬೆಂಗಳೂರು ಪೋಲೀಸ್ ವಿಚಾರಣೆ ನಡೆಸಿದ್ದಾರೆ. ಏವಿಯೇಶನ್ ಅಧಿಕಾರಿಗಳು ವಿಮಾನ ಅಪಹರಣ, ಉಗ್ರವಾದ, ಚಾಲಕ ಪ್ರಮಾದ ಹಿಡಿದು ತನಿಖೆಯ ಎಲ್ಲಾ ಪಥಗಳನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ. ದಿನಗಳು ಉರುಳಿದಂತೆ ಅಪಘಾತಕ್ಕೀಡಾದ ವಿಮಾನ-ಪ್ರಯಾಣಿಕರ ಸಂಬಂಧಿಗಳ ಆಶಾಕಿರಣಗಳು ಮಸುಕುತ್ತಿವೆ.

***
ಬೆಂಗಳೂರು, ಆಗಸ್ಟ್ 17,2014

ಮಾರ್ಚ್ 10ರಂದು ಅರಬೀ ಸಮುದ್ರದ ಮಧ್ಯ ಮಾಯವಾದ ಅರೇಬಿಯಾನ ಏರ್‌ಲೈನ್ಸ್ ಫ್ಲೈಟ್-6479ನ ಹುಡುಕಾಟ ಇಂದಿಗೆ ಮುಕ್ತಾಯವಾಗಿದೆ. ಐದು ತಿಂಗಳ ಸತತ ಹುಡುಕಾಟದ ನಂತರವೂ ದುರ್ವಿಧಿಗೀಡಾದ ಆ ವಿಮಾನದ ಒಂದು ತುಣುಕೂ ಸಿಕ್ಕಿಲ್ಲ. ವಿಮಾನ-ಪ್ರಯಾಣಿಕರ ಸಂಬಂಧಿಗಳು ತಾವೇ ಹುಡುಕಾಟ ಮುಂದುವರೆಸುವುದಾಗಿ ಪಣ ತೊಟ್ಟಿದ್ದಾರೆ. ಫ್ಲೈಟ್-6479ನ ಮರ್ಮ ಮರ್ಮವಾಗಿಯೇ ಉಳಿದುಹೋಗಿದೆ.

***
"ವಿ ಹ್ಯಾವ್ ಪಾಸ್ಡ್ ದ ಸ್ಟಾರ್ಮ್. ವಿ ಸ್ಟಿಲ್ ಹ್ಯಾವ್ ನೋ ಕಾಂಟ್ಯಾಕ್ಟ್ ವಿತ್ ಏರ್ ಟ್ರಾಫಿಕ್ ಕಂಟ್ರೋಲ್. ವಿ ಅರ ರಿಟರ್ನಿಂಗ್ ಬ್ಯಾಕ್ ಟು ಬ್ಯಾಂಗಲೋರ್. ಕ್ಲಿಯರ್ ವೆದರ್ ಆಲ್ ದ ವೇ ಬ್ಯಾಕ್" ವಿರಾಜನಿಗೆ ಕ್ಯಾಪ್ಟನ್ ಧ್ವನಿಯಲ್ಲಿ ಏನೋ ಗೊಂದಲ ಇರುವಂತೆ ಕೇಳಿಸಿತು. ಆದರೂ ಅದನ್ನು ಕಡೆಗಾಣಿಸಿ, ಆಗಿದ್ದೆಲ್ಲ ಒಳ್ಳೆಯದಕ್ಕೆ ಎಂದು ಯೋಚಿಸಿದ. ಊರಿಗೆ ಹಿಂತಿರುಗಿದ ಮೇಲೆ ತನ್ನ ಟ್ರಿಪ್ ರದ್ದು ಮಾಡಿಕೊಂಡು, ಶಾಂತಿಯ ಜೊತೆ ಹೇಗಾದರೂ ಸಂಧಾನ ಮಾಡಿಕೊಂಡು, ಕೆಲಸಕ್ಕೆ ರಜ ಹಾಕಿ, ಹೆಂಡತಿ-ಮಗಳ ಜೊತೆ ಒಂದಿಷ್ಟು ದಿನ ಕಳೆಯಬೇಕೆಂಬ ನಿರ್ಧಾರ ಮಾಡಿದ. 

ಪಕ್ಕದ ಸೀಟಿನಲ್ಲಿ ಕುಳಿತವನ ವಿಚಿತ್ರ ವರ್ತನೆ ನೆನಪಾಗಿ ಅವನ ಕಡೆ ತಿರುಗಿ ಅವನೊಡನೆ ಮಾತನಾಡ ತೊಡಗಿದ. ರಹ್ಮಾನನಿಗೂ ಇಷ್ಟು ಹೊತ್ತಿಗೆ ಜೀವಭಯ, ದೈವಭಯ ಎರಡೂ ತುಂಬಿ ಎದೆ ಹಗುರ ಮಾಡಿಕೊಳ್ಳಲು ಯಾರೊಂದಿಗಾದರೂ ಮಾತು ಬೇಕೆನಿಸಿತ್ತು. ಮಾತು ಮಾತಿನಲ್ಲಿ, ವಿರಾಜನಿಗೆ ರಹ್ಮಾನ್ ಕಥೆ ತಿಳಿಯಿತು. ಸಣ್ಣ ಕಳ್ಳತನ ಮಾಡಿ, ರಹ್ಮಾನ್ ಕೆಲ ದಿನಗಳ ಕಾಲ ಜೈಲ್ ಸೇರಿದ್ದ. ನಂತರ ದುಬೈಗೆ ಹೋಗಿ ಹಣ ಸಂಪಾದಿಸುವ ಅಸೆ ಬಂದಾಗ ಪಾಸ್‌ಪೋರ್ಟ್‌ಗೆ ಪೋಲೀಸ್ ವೆರಿಫಿಕೇಶನ್ ಬೇಕೆಂದು ತಿಳಿಯಿತು. ಅದಕ್ಕೆ ತನ್ನ ಪರಿಚಯದ ಪಾಷಾ ಸಹಾಯದಿಂದ ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡು ದುಬೈಗೆ ಹೊರಟಿದ್ದ. ಅವನಿಗೆ ವಿಮಾನಗಳು, ಹಾರುವುದು ಎಂದರೆ ಮಹಾಭಯ. 

ತಾನು ತಿಳಿದಂತೆ ರಹ್ಮಾನ್ ರಿಮೋಟಿನಿಂದ ಯಾವ ಬಾಂಬನ್ನು ಸಿಡಿಸುತ್ತಿರಲಿಲ್ಲವೆಂದು, ಅದು ಇನ್-ಫ್ಲೈಟ್ ವಿಡಿಯೋ ಸಿಸ್ಟಮ್ ರಿಮೋಟ್ ಎಂದೂ ವಿರಾಜನಿಗೆ ತಿಳಿಯಿತು. ಆತುರ ಬುದ್ಧಿಗೆ ತನ್ನನ್ನು ತಾನೇ ಬೈದುಕೊಂಡು ವಿರಾಜ್ ಹಿಂದಕ್ಕೊರಗಿದ. 

ವಿಮಾನ ನೆಲಕ್ಕಿಳಿದು ಗೇಟಿನಲ್ಲಿ ಬಂದು ನಿಂತಿತು. ಪ್ರಯಾಣಿಕರೆಲ್ಲ ಚಪ್ಪಾಳೆ ತಟ್ಟಿ ಟರ್ಮಿನಲ್‌ಗೆ ಹೋದಾಗ ವಿರಾಜನಿಗೆ ಏನೋ ವಿಚಿತ್ರಾಭಾಸ. ಹೊರಟಾಗ ಇನ್ನೂ ಬೆಳಗಿನಜಾವ. ಹೆಚ್ಚೆಂದರೆ ಒಂದು ನಾಲ್ಕು ಘಂಟೆಗಳ ಕಾಲ ವಿಮಾನದಲ್ಲಿದ್ದಿರಬಹುದು. ವಿಮಾನದೊಳಗೆ ಕಿಟಕಿಗಳನ್ನು ಇಳಿಸಲಾಗಿತ್ತು ಹಾಗಾಗಿ ಹಗಲು, ರಾತ್ರಿ ಗೊತ್ತಾಗಿರಲಿಲ್ಲ. ಈಗ ನೋಡಿದರೆ  ಕತ್ತಲೆಯಾಗಿದೆ. ಕೈಗಡಿಯಾರ ನೋಡಿಕೊಂಡ; ಬೆಳಗ್ಗೆ 8:53ಕ್ಕೇ ನಿಂತುಹೋಗಿತ್ತು. 

ಸುತ್ತಲೂ ತನಗೆ ಪರಿಚಿತವಾದ ಬೆಂಗಳೂರು ಏರ್‌ಪೋರ್ಟೇ, ಆದರೂ ಎಲ್ಲವೂ ಬೆಳಗ್ಗೆ ನೋಡಿದಾಗಿನಿಂದ ಬದಲಾದಂತಿದೆ. ಜನರಲ್ಲೂ ಏನೇನೋ ಬದಲಾವಣೆಗಳು: ವಸ್ತ್ರವಿನ್ಯಾಸದಲ್ಲಿ, ಮಾತನಾಡುತ್ತಿರುವ ಶೈಲಿಯಲ್ಲಿ, ವರ್ತನೆಯಲ್ಲಿ... 

"ಪ್ಯಾಸೆಂಜರ್ಸ್ ಎಕ್ಸಿಟಿಂಗ್ ಗೇಟ್-137 ಆರ್ ರಿಕ್ವೆಸ್ಟೆಡ್ ಟು ರಿಮೇನ್ ಅಟ್ ದ ಗೇಟ್ ಅಂಟಿಲ್ ಫರ್ದರ್ ನೋಟಿಸ್" ಧ್ವನಿವರ್ಧಕಗಳು ಮೂರು ಭಾಷೆಗಳಲ್ಲಿ ಕೂಗುತ್ತಿದ್ದವು. ’ಬೆಂಗಳೂರು ಏರ್‌ಪೋರ್ಟಿನಲ್ಲಿ 137 ಗೇಟುಗಳೇ ಇಲ್ಲವಲ್ಲ’ ಎಂದು ಯೋಚಿಸುತ್ತ ತಿರುಗಿ ನೋಡಿದಾಗ ತಾನು ಬಂದದ್ದು ಗೇಟ್-137ನಿಂದಲೇಯೆಂಬ ಅರಿವಾಯಿತು. ಸುತ್ತಲು ಸೆಕ್ಯೂರಿಟಿ ನಿಂತಿದ್ದರು. ಪ್ಲೇನ್‌ನಿಂದ ಇಳಿದವರನ್ನು ಗೇಟಿನ ಹೊರಹೋಗಲು ಬಿಟ್ಟಿರಲಿಲ್ಲ. ಇದು ಬೆಂಗಳೂರೇ ಅಥವಾ ಬೇರೆಯೂರೇ ತಿಳಿಯಲು ಹತ್ತಿದರಲ್ಲಿದ್ದ ಸ್ಕ್ರೀನ್ ಒಂದರ ಬಳಿ ಹೋದ. ’ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್’ ಎಂದು ಬರೆದಿದ್ದಂತೂ ಕಾಣಿಸಿತು. ಆದರೆ ತಾರೀಖು... 

ಕೂಡಲೆ ಬಳಿಯೇ ಇದ್ದ ಸೆಕ್ಯೂರಿಟಿ ಹೆಂಗಸೊಬ್ಬಳನ್ನು ಕೇಳಿದ "ಎಕ್ಸ್‌ಕ್ಯೂಸ್-ಮಿ, ಇವತ್ತಿನ ತಾರೀಖು ಎಷ್ಟು ಹೇಳ್ತೀರ, ಪ್ಲೀಸ್?" 

ಆಕೆ "ವಾಟ್? ಓಹ್, ಮಾರ್ಚ್ 10" ಎಂದಳು. 

"ವರ್ಷ?"

"ಆ? 2029" 

2029... ವಿರಾಜ್ ಸ್ಕ್ರೀನ್ ಮೇಲ್ಕಂಡ ತಾರೀಖು ಅದೇ. ಹೊರಟಿದ್ದು ಮಾರ್ಚ್ 10,2014. ಹಾಗಾದರೆ... ಹಾಗಾದರೆ... ಹದಿನೈದು ವರ್ಷ ಭವಿಷ್ಯದಲ್ಲಿ ಬಂದಿಳಿದಿದ್ದರೇ?

***
ಸಮರ್ಪಣೆ: ಮಾರ್ಚ್ 8, 2014ರಂದು ಕ್ವಾಲಾ ಲಂಪುರ್‌ನಿಂದ ಹೊರಟ ಮಲೇಶಿಯಾ ಏರ್‌ಲೈನ್ಸ್ MH370 ಪ್ರಯಾಣಿಕರು ಹಾಗು ಸಿಬ್ಬಂದಿ ವರ್ಗದವರು.


#sciencefiction #timetravel #thriller #kkncmagazine

Friday, June 10, 2016

ನಾಟಕ: ಡಾಕ್ಟರ್. ನೋ




ಪಾತ್ರಗಳು:

ರಮೇಶ
ಧಾರಿಣಿ - ರಮೇಶನ ಹೆಂಡತಿ
ಪಾಂಡುರಂಗ - ರಮೇಶನ ಅಣ್ಣ
ಮಣಿ - ಪಾಂಡುರಂಗನ ಹೆಂಡತಿ
ಡಾಕ್ಟರ್ - ಧಾರಿಣಿಯ ಭಾವ

೧

[ರಮೇಶ, ಧಾರಿಣಿ, ಪಾಂಡುರಂಗ, ಮಣಿ ನಾಲ್ವರೂ ಸೋಫಾ ಮೇಲೆ ಕೂತಿರುವರು, ರಮೇಶ ಸ್ವೀಟ್‍ಬಾಕ್ಸ್‍ನಿಂದ ಸ್ವೀಟ್ ತಿನ್ನುತ್ತಿರುತ್ತಾನೆ]

ಧಾರಿಣಿ: [ರಮೇಶನ ಕೈಯಿಂದ ಸ್ವೀಟ್ ಬಾಕ್ಸ್ ಕಿತ್ತು ಮಣಿ ಕೈಗೆ ಕೊಡುತ್ತ] ಸಾಕು ಸಾಕು, ಎಷ್ಟ್ ಸ್ವೀಟ್ ತಿಂತೀರ? ಎಲ್ಲಾರಿಗೂ ಕೊಡಿ

ಪಾಂಡುರಂಗ: [ಒಂದು ಸ್ವೀಟ್ ಕೈಗೆತ್ತಿಕೊಳ್ಳುತ್ತ] ಅದಕ್ಕೇನಂತೆ ತಿನ್ಲಿ ಬಿಡು. ಅದರಿಂದ ಏನು ತೊಂದರೆ?

ರಮೇಶ: ಹೂಂ... ಸ್ವೀಟ್ ತಿನ್ನೋದರಿಂದ ಖಾಯಿಲೆ ಬರತ್ತೆ ಅನ್ನೋಹಾಗಿದ್ರೆ ಎಲ್ಲಾ ಸ್ವೀಟ್ ಡಬ್ಬದ ಮೇಲು ಹಾಕಿರ್ತಿತ್ತು "ಸ್ವೀಟ್ ಈಟಿಂಗ್ ಈಸ್ ಇಂಜೂರಿಯಸ್ ಟು ಹೆಲ್ತ್" ಅಂತ

ಪಾಂಡುರಂಗ: ನಾವೇನು ಕೇಜಿ-ಪೌಂಡ್ ಗಟ್ಟಲೆ ತಿಂತೀವೇ? ಇಷ್ಟರಲ್ಲಿ ಏನೂ ತೊಂದರೆ ಆಗೋಲ್ಲ. [ಏಳುತ್ತ] ಅರೆ! [ತಲೆ ನೋವು ಬಂದಂತೆ ಹಣೆ ಹಿಡಿದು ಮತ್ತೆ ಸೋಫಾ ಮೇಲೆ ಕುಸಿಯುವನು]

[ರಮೇಶ, ಧಾರಿಣಿ, ಮಣಿ ಎಲ್ಲರೂ "ಅರೆ ಏನಾಯಿತು ಏನಾಯಿತು ಅಣ್ಣಯ್ಯ, ಏನಾಯಿತು ರೀ?" ಎಂದು ಅವನ ಸುತ್ತ ಹೋಗುವರು]

ರಮೇಶ: ಅಣ್ಣಯ್ಯ ತುಂಬಾ ಸ್ವೀಟ್ ತಿಂದುಬಿಟ್ಟೆಯಾ?

ಪಾಂಡುರಂಗ: ಅಯ್ಯೋ ಇಲ್ಲ ಇಲ್ಲ ಇಲ್ಲ ಇಲ್ಲ - ಸೊಲ್ಪ ತಲೆ ತಿರುಗಿತು ಅಷ್ಟೇಯ.

ಧಾರಿಣಿ: ರೀ, ಬೇಗ ನಮ್ಮ ಡಾಕ್ಟರ್ ಭಾವನಿಗೆ ಫೋನ್ ಮಾಡಿ. ಒಂದು ನಿಮಿಷ ಬಂದು ನೋಡ್ತಾರೆ. [ರಮೇಶ ನಿರ್ಗಮಿಸುವನು]

ಧಾರಿಣಿ: ಅಣ್ಣಯ್ಯ ನೀವು ಒಂದು ಐದು ನಿಮಿಷ ಹಾಗೇ ಮಲಗಿಕೊಳ್ಳಿ [ನಿರ್ಗಮಿಸುವಳು]

ಪಾಂಡುರಂಗ: [ಮೇಲೆದ್ದು ನಿಲ್ಲುತ್ತ] ಯಾಕೆ? ಯಾಕೆಲ್ಲಾರೂ ಇಷ್ಟು ಗಾಬರಿ ಆಗಿದ್ದೀರ? ನನಗೇನೂ ಆಗಿಲ್ಲ

ಮಣಿ: ಮತ್ತೇಕೆ ತಲೆ ತಿರುಗಿತು? ಡಾಕ್ಟರ್ ಬರೋವರೆಗೂ ನೀವು ಇಲ್ಲೇ ಕಾಲು ಚಾಚಿಕೊಂಡು ಮಲಗಿಕೊಳ್ಳಿ. [ಪಾಂಡುರಂಗ ಸೋಫಾ ಮೇಲೆ ಕಾಲು ನೀಡಿ ಮಲಗುವನು; ಮಣಿ ನಿರ್ಗಮಿಸುವಳು]

[ರಮೇಶ ಮತ್ತು ಡಾಕ್ಟರ್ ಇಬ್ಬರೂ ಬರುತ್ತಾರೆ]

ರಮೇಶ: ಬನ್ನಿ ಭಾವ, ಬನ್ನಿ ಬನ್ನಿ.

ಪಾಂಡುರಂಗ: ಅವರಿಗ್ಯಾಕೆ ತೊಂದರೆ ಕೊಟ್ರಿ - ನನಗೇನೂ ಆಗಿಲ್ಲ.

ರಮೇಶ: ಹಾಗಾದರೆ ತಲೆ ಸುತ್ತು ಯಾಕೆ ಬಂತು? ಸೊಲ್ಪ ನೋಡಿ ಭಾವ.

ಮಣಿ: [ಬರುತ್ತ] ತುಂಬಾ ಸ್ಟ್ರೆಸ್ಸು ಇವರಿಗೆ. ಮೂರುಹೊತ್ತೂ ಕೆಲಸ ಕೆಲಸ ಕೆಲಸ. ಅದಕ್ಕೇ ಹೀಗೆ.

[ಡಾಕ್ಟರ್ ಪಾಂಡುರಂಗನ ನಾಡಿ ಹಿಡಿದು ಬಹಳ ಹೊತ್ತು ತೂಗುತ್ತಿರುತ್ತಾನೆ]

ರಮೇಶ: [ಧಾರಿಣಿಗೆ] ಇವರು ಮನುಷ್ಯರ ಡಾಕ್ಟರ್ರೇ ತಾನೆ?

ಧಾರಿಣಿ: [ರಮೇಶನಿಗೆ ಒಂದು ಸಣ್ಣ ಏಟು ಕೊಡುತ್ತ ಮುಖ ಸಿಂಡರಿಸಿ] ಶ್‍ಶ್...

ರಮೇಶ: [ಧಾರಿಣಿಗೆ] ಆಗ್ಲೆ ಐದಾರು ನಿಮಿಷ ಆಯಿತು ಯಾಕೋ ಡಾಕ್ಟರ್ ಭಾವ ನಿದ್ದೆ ಮಾಡಿದ ಹಾಗಿದೆ...

ಪಾಂಡುರಂಗ: [ಕೈ ಅಲ್ಲಾಡಿಸುತ್ತ] ಡಕ್ಟರ್ ಸಾಕು.

ಡಾಕ್ಟರ್: [ನಿದ್ದೆಯಿಂದ ಎದ್ದವನಂತೆ] ನೋ ನೋ ನೋ ನೋ ನೋ - ಇನ್ನೂ ಬ್ಲಡ್ ಪ್ರೆಶರ್ ಚೆಕ್ ಮಾಡಬೇಕು

ಪಾಂಡುರಂಗ: ನೆನ್ನೆ ಇನ್ನೂ ಚೆಕ್ ಮಾಡಿಸಿದ್ದೀನಿ, ಎಲ್ಲ ನಾರ್ಮಲ್ ಆಗಿದೆ

ಡಾಕ್ಟರ್: ನೋ ನೋ ನೋ ನೋ ನೋ - ಇವತ್ತು ನಾನು ಚೆಕ್ ಮಾಡ್ತೀನಿ. ನನ್ನ ಮೆಥಡ್ಡೇ ಬೇರೆ ತರಹ.

ಡಖ್ಟರ್: [ಬ್ಲಡ್ ಪ್ರೆಶರ್ ನೋಡುತ್ತ] ವಾಹ್! ನೆನ್ನೆ ಹಿಂಗೆ ಇತ್ತು ಅಂದ್ರೆ ಇವತ್ತೂ ನೆನ್ನೆ ಹಂಗೇ ಇದೆ!

ಪಾಂಡುರಂಗ: ಡಕ್ಟರ್ ನಾನು ಹೇಳಿದ್ನಲ್ಲ - ನನಗೇನೂ ಆಗಿಲ್ಲ

ಡಖ್ಟರ್: ನೋ ನೋ ನೋ ನೋ ನೋ - ಅದನ್ನ ನೀವು ಹೇಗೆ ಹೇಳ್ತೀರ? ಅದನ್ನ ನಾನು ಹೇಳ್ಬೇಕು.

ಪಾಂಡುರಂಗ: ಹಾಗಾದರೆ ನಾನು ಹೋಗಬಹುದಾ?

ಡಾಕ್ಟರ್: ನೋ ನೋ ನೋ ನೋ ನೋ - ಮೊದಲು ನಾನು ನಿಮ್ಮ ರಕ್ತ ಎಳೀತೀನಿ

ಉಳಿದ ಎಲ್ಲರೂ: ಆ!?

ಡಾಕ್ಟರ್: ಬ್ಲಡ್ ಟೆಸ್ಟ್ ಮಾಡಕ್ಕೆ ಅಷ್ಟೆ [ವಿಕಾರವಾಗಿ ನಗುವನು]

[ಡಾಕ್ಟರ್ ಸೂಜಿ ಚುಚ್ಚುವ ಅಭಿನಯ ಮಾಡುತ್ತಾನೆ]

ಪಾಂಡುರಂಗ: ಆಹ್!

ಮಣಿ: ಇಷ್ಟೊಂದಾ?

ಡಾಕ್ಟರ್: [ಪಾಂಡುರಂಗನ ಕೈ ಮಡಿಸುತ್ತ] ಬ್ಯೂಟಿಫುಲ್ - ಎಂಥ ಕಲರ್!

ಮಣಿ: ಇವರಿಗೆ ಏನಾಗಿದೆ ಡಕ್ಟರ್?

ಡಖ್ಟರ್: ನೋ ನೋ ನೋ ನೋ ನೋ - ಕೇಳೋ ಅವಷ್ಯಕತೆ ಇಲ್ಲ! ನಾನೇ ಹೇಳ್ತೀನಿ.

ರಮೇಶ: ಸರಿ ಹಾಗಾದ್ರೆ ನೀವೇ ಹೇಳಿಬಿಡಿ.

ಡಾಕ್ಟರ್: ನೋ ನೋ ನೋ ನೋ ನೋ - ಇವರಿಗೆ ಏನೂ ಆಗಿಲ್ಲ. ಆರಾಮಾಗಿದ್ದಾರೆ.

ಪಾಂಡುರಂಗ: ಸರಿ ನಾನು ಹಾಗಾದ್ರೆ ಸೊಲ್ಪ ಆಫೀಸ್ ಕಡೆ ಹೋಗಬಹುದಾ?

ಡಕ್ಟರ್: ನೋ ನೋ ನೋ ನೋ ನೋ - ನಿಮಗೆ ಇಷ್ಟ ಇದ್ದರೆ ಹೋಗಿಬನ್ನಿ. [ಬೇರೆಯವರನ್ನು ಕುರಿತು] ನೀವೆಲ್ಲ ಇವರಿಗೆ ಟೆಂಶನ್ ಕೊಡಬೇಡಿ. ಟೆಂಶನ್‍ನಿಂದ ರೋಗ ಇಲ್ದೆ ಹೋದ್ರೂ ಬಂದುಬಿಡತೆ. ನನಗೂ ತುಂಬಾ ಟೆಂಶನ್ನು.

ರಮೇಶ: ನಡೀರಿ ಹಾಗಿದ್ರೆ [ರಮೇಶ ಡಾಕ್ಟರ್ ಇಬ್ಬರೂ ಉಳಿದವರಿಂದ ದೂರ ಹೋಗುತ್ತಾರೆ; ಧಾರಿಣಿ ನಿರ್ಗಮಿಸುತ್ತಾಳೆ]

ರಮೇಶ: ಡಕ್ಟರ್ ’ನೋ ನೋ ನೋ ನೋ ನೋ’, ಏನೂ ಚಿಂತೆ ಇಲ್ಲ ತಾನೆ?

ಡಕ್ಟರ್: ನೋ ನೋ ನೋ ನೋ ನೋ - ಇದ್ದರೂ ಇರಬಹುದು. ಅದಕ್ಕೇ ನಾನು ಬ್ಲಡ್ ಸ್ಯಾಂಪಲ್ ತೊಗೊಂಡಿದ್ದು.

ರಮೇಶ: ಹಾಗಾದ್ರೆ ನಿಮಗೆ ಏನಿರಬಹುದು ಅನ್ನಿಸುತ್ತೆ?

ಡಕ್ಟರ್: ದಯಾಬಿಟಿಸ್! ಸಕ್ಕರೆ ಖಾಯಿಲೆ ಇದ್ದರೂ ಇರಬಹುದು ಅನ್ನಿಸುತ್ತೆ.

ರಮೇಶ: ನೋ ನೋ ನೋ ನೋ ನೋ - ಅಣ್ಣಯ್ಯನಿಗೆ ವಯಸ್ಸಾದರೂ ಎಷ್ಟು?

ಡಕ್ಟರ್: ಡಯಾಬಿಟಿಸ್‍ಗೆ ವಯಸ್ ಇಲ್ಲ - ಈ ನಡುವೆ ತುಂಬಾ ಕಾಮನ್ ಆಗಿದೆ. ಸಕ್ಕರೆ ತಿಂದ್ರೆ, ಟೆಂಶನ್ ತಿಂದ್ರೆ, ಏನು ತಿಂದ್ರೂ ಡಯಾಬಿಟಿಸ್ ಬರಹಬುಸು.

[ಅತ್ತ ಮಣಿ-ಪಾಂಡುರಂಗ]

ಮಣಿ: ಇವತ್ತಾದ್ರು ಮನೇಲೇ ಸೊಲ್ಪ ರೆಸ್ಟ್ ತೊಗೊಳಿ.

ಪಾಂಡುರಂಗ: ಅಯ್ಯೋ ಸಾಧ್ಯವಿಲ್ಲ ಕಣೆ. ಏನಾದ್ರು ಸ್ನ್ಯಾಕ್ ಕೊಡು ತೊಗೊಂಡ್ ಹೋಗಕ್ಕೆ. [ಇಬ್ಬರೂ ನಿರ್ಗಮಿಸುವರು]

[ಇತ್ತ ರಮೇಶ-ಡಾಕ್ಟರ್]

ಡಕ್ಟರ್: [ರಮೇಶನಿಗೆ] ನೆನಪಿಟ್ಟುಕೊಳಿ - ಡಯಾಬಿಟಿಸ್, ನೊ ಶುಗರ್, ನೋ ಟೆಂಶನ್, ಬರ್ತೀನಿ...

[ಇತ್ತಲಿಂದ ಧಾರಿಣಿ ಬರುತ್ತಾಳೆ]

ಧಾರಿಣಿ: ರೀ - ಏನ್ ಹೇಳಿದ್ರು ಭಾವ?

ರಮೇಶ: ಅಣ್ಣಯ್ಯನಿಗೆ ಡಯಾಬಿಟಿಸ್ ಇದ್ದರೂ ಇರಬಹುದು ಅಂತ ಹೇಳಿದ್ರು.

ಧಾರಿಣಿ: ಹಾ! ಡಯಾಬಿಟಿಸ್? ಎಂಥ ಡೇಂಜರಸ್ ರೋಗ! ಮೊದಲೇ ಅಣ್ಣಯ್ಯನಿಗೆ ಸ್ವೀಟ್ ಅಂದ್ರೆ ತುಂಬಾ ಇಷ್ಟ. ಈಗೇನು ಮಾಡೋದು. ಭಾವ ’ಇದ್ದರೂ ಇರಬಹುದು’ ಅಂದ್ರೋ ’ಇದ್ದೇ ಇದೇ’ ಅಂದ್ರೋ?

ರಮೇಶ: ಒಂಥರ ’ಇದ್ದರೂ ಇದ್ದೇ ಇದೆ’ ಅಂತ ಹೇಳಿದ್ರು. ನಾಳೆ ಬ್ಲಡ್ ರಿಪೋರ್ಟ್ ಬಂದ್ರೆ ಗೊತ್ತಾಗತ್ತೆ, ನೀನು ಈಗ್ಲಿಂದಲೇ ಯಾಕಿಷ್ಟು ನರ್ವಸ್ ಆಗಿದ್ದೀಯ?

ಧಾರಿಣಿ: ಅಯ್ಯೋ! ಅಣ್ಣಯ್ಯನಿಗೆ ಏನಾದ್ರೂ ಆದ್ರೆ...

ರಮೇಶ: ಧಾರೂ, ನೀನು ಇಷ್ಟು ಹೆದರಿಕೊಂಡ್ರೆ ಅಣ್ಣಯ್ಯ ಸ್ವೀಟ್ ತಿನ್ನದೇ ಇರೋ ಹಾಗೆ ನೋಡೋರು ಯಾರು. ಇವಾಗ ಅಣ್ಣಯ್ಯನಿಗೆ ಈ ವಿಚಾರ ಹೇಳೋದು ಬೇಡ. ರಿಪೋರ್ಟ್ ಬಂದ ಮೇಲೆ ನೋಡೋಣ. [ತಿರುಗುತ್ತಾನೆ] ಅರೆ ಹೌದು - ಮದ್ನಿಗೂ ಹೇಳೋದು ಬೇಡ.

ಧಾರಿಣಿ: ಮದ್ನಿಗಾದ್ರೂ ಹೇಳಲೇಬೇಕಲ್ವ

ರಮೇಶ: ಏನೇ ಕಾರಣಕ್ಕೂ ಬೇಡ. ನಿನಗೆ ಗೊತ್ತಲ್ಲ ಮದ್ನಿ ಹೊಟ್ಟೇಲಿ ಏನೂ ಉಳಿಯಲ್ಲ - ಮೊದಲು ಹೋಗಿ ಅಣ್ಣಯ್ಯನಿಗೆ ಹೇಳ್ತಾರೆ ಅಷ್ಟೆ. ಆಮೇಲೆ ಮತ್ತೆ ಟೆಂಶನ್. ಡಕ್ಟರ್ ನೋ ನೋ ನೋ ನೋ ನೋ ಏನ್ ಹೇಳಿದ್ರು? ನೋ ಸ್ವೀಟ್ ನೋ ಟೆಂಶನ್.

ಧಾರಿಣಿ: ಹೌದು ಹೌದು. ಅಣ್ಣಯ್ಯನಿಗೆ ಚೂರೂ ಟೆಂಶನ್ ಕೊಡಬಾರದು. ಹಾ! ಮದ್ನಿ ಅಣ್ಣಯ್ಯನಿಗೆ ಸ್ನ್ಯಾಕ್ ಪ್ಯಾಕ್ ಮಾಡ್ತಿರ್ತಾರೆ. ಸ್ವೀಟ್ ಹಾಕ್ಬಿಟ್ರೆ...

ರಮೇಶ: ಹೋಗು ಹೋಗು - ನೋಡು....


೨

[ರಮೇಶ, ಪಾಂಡುರಂಗ ಪೇಪರ್/ಲ್ಯಾಪ್ಟಾಪ್ ಹಿಡಿದು ಕೂತಿರುವರು]

ಧಾರಿಣಿ: [ಲೋಟವೊಂದನ್ನು ಪಾಂಡುರಂಗನಿಗೆ ಕೊಡುತ್ತ] ಅಣ್ಣಯ್ಯ ನಿಮಗೆ ಅಂತ ಸ್ಪೆಶಲ್‍ಆಗಿ ಮಾಡಿದ್ದು. ಕುಡೀರಿ

ಪಾಂಡುರಂಗ: ಅರೆ ವಾ! ಕಾಫಿ ಬೇಕಾಗಿತ್ತು ನನಗೆ. ಥ್ಯಾಂಕ್ಯೂ! [ಕುಡಿದು ಉಗಿಯುವನು] ಏನಿದು?

ಧಾರಿಣಿ: ಇದು ಹಾಗಲಕಾಯಿ ಸೂಪ್. ಇಂಥ ಸಮಯದಲ್ಲಿ ಕುಡೀಬೇಕು

ಮಣಿ: [ಬರುತ್ತ] ಇಂಥ ಸಮಯ? ಎಂಥ ಸಮಯ?

ಧಾರಿಣಿ: ಅಲ್ಲ ಅಲ್ಲ - ಅಂದ್ರೆ - ಎಂಥಾ ಸಮಯದಲ್ಲೂ ಕುಡೀಬೇಕು - ಹೆಲ್ತ್‍ಗೆ ತುಂಬಾ ಒಳ್ಳೇದು. ಅಣ್ಣಯ್ಯ ನಾನು ನಿಮಗೆ ಅಂತನೇ ಮಾಡಿದ್ದೀನಿ ಕುಡೀರಿ ಪ್ಲೀಸ್.

ಪಾಂಡುರಂಗ: [ರಮೇಶನ ಕಡೆ ನೋಡಿ] ಏನೋ ಇದು ರಮೇಶ....

ರಮೇಶ: ಅಣ್ಣಯ್ಯ ಕುಡಿದುಬಿಡು. ಹಾಗಲಕಾಯಿ ರಕ್ತಾನ ಕ್ಲೀನ್ ಮಾಡತ್ತೆ.

ಪಾಂಡುರಂಗ: ನನ್ನದು ನಿನ್ನದು ಒಂದೇ ರಕ್ತ ಕಣೋ - ನನ್ನದು ಕೊಳೆಯಾಗಿದ್ರೆ ನಿನ್ನದೂ....

ರಮೇಶ: ಅಣ್ಣಯ್ಯ ಸುಮ್ಮನೆ ಮಾತಾಡಬೇಡ ಕುಡಿದುಬಿಡು.

ಮಣಿ: ನನಗೇನು ಕುಡಿಯೋದಾದ್ರೆ ಕುಡೀರಿ [ನಿರ್ಗಮಿಸುವಳು]

ಧಾರ್ಣಿ: ರೀ ಬನ್ನಿ! ಅಟ್ಯಾಕ್! [ರಮೇಶ ಬರುವನು] ಹಿಡ್ಕೊಳಿ

[ಧಾರಿಣಿ, ರಮೇಶ ಇಬ್ಬರೂ ಸೇರಿ ಪಾಂಡುರಂಗನಿಗೆ ಕುಡಿಸುವರು]

ರಮೇಶ: ವಾ! ಎಂಥ ಸೀನು. ಅಣ್ಣಯ್ಯ ಇನ್ ಸೂಪ್! ಆಸಂ!

ಧಾರಿಣಿ: [ರಮೇಶನನ್ನು ಒಂದು ಕಡೆ ಎಳೆದುಕೊಂಡು ಹೋಗಿ] ಅಣ್ಣಯ್ಯನಿಗೆ ಡಯಾಬಿಟಿಸ್ ಇದೆಯಲ್ಲ ಸೊಲ್ಪ ರಿಲೀಫ್ ಸಿಗಲಿ ಅಂತ ಹಾಗಲಕಾಯಿ ಸೂಪ್ ಮಾಡಿಕೊಟ್ಟೆ.

ರಮೇಶ: ಧಾರೂ, ಧಾರೂ - ನೀನ್ ಯಾಕೆ ಇಷ್ಟೊಂದ್ ನರ್ವಸ್ ಆಗಿದ್ದೀಯ?

ಧಾರಿಣಿ: ನರ್ವಸ್? ನಾನೆಲ್ಲಿ ನರ್ವಸ್ ಆಗಿದ್ದೀನಿ? ನರ್ವಸ್ ನರ್ವಸ್ ಅಂತ ನೀವು ನನ್ನನ್ನ ನರ್ವಸ್ ಮಾಡಿಸ್ತ ಇದೀರ. ರಿಪೋರ್ಟ್ ಇನ್ನೂ ಬಂದಿಲ್ವ?

ರಮೇಶ: ಧಾರೂ - ರಿಪೋರ್ಟ್ ನಾಳೆ ಬರತ್ತೆ ಅಂದಿದ್ರು ನಿಮ್ಮ ಭಾವ. ಅಣ್ಣಯ್ಯನಿಗೆ ಡಯಾಬಿಟಿಸ್ ಆಗಿಲ್ಲ - ಇದ್ದರೂ ಇರಬಹುದು ಅಂದ್ರು ಅಷ್ಟೆ. ಅಣ್ಣಯ್ಯನಿಗೆ ಸ್ವೀಟ್ ಕೊಡಬೇಡ ಅಂತ ನಿನಗೆ ಹೇಳಿದ್ದೆ ಅಷ್ಟೆ.

ಧಾರಿಣಿ: [ಪಾಂಡುರಂಗನ ಕೆಡೆ ಹೋಗುತ್ತ] ಮುಗೀತಾ ಅಣ್ಣಯ್ಯ?

ಪಾಂಡುರಂಗ: ಹೂಂ - ತೊಗೊಮ್ಮ. [ಲೋಟವನ್ನು ಧಾರಿಣಿಗೆ ಕೊಡುವನು; ಅವಳು ನಿರ್ಗಮಿಸುವಳು]

ಮಣಿ: [ಬರುತ್ತ] ರೀ - ನಿಮ್ಮ ಫೇವ್ರೇಟ್ ಸ್ವೀಟ್ ಇದೆ - ತೊಗೊಳ್ಳಿ [ಪಾಂಡುರಂಗನ ಕೈಗೆ ಡಬ್ಬ ಕೊಡುವಳು]

ಪಾಂಡುರಂಗ: ಅರ್ರೆ ವಾ! [ಡಬ್ಬ ತೆಗೆಯುವನು]

ಧಾರಿಣಿ: [ಬರುತ್ತ] ರೀ... [ಸ್ವೀಟ್ ಕಡೆ ಕೈ ಮಾಡಿ ತೋರಿಸುವಳು]

ರಮೇಶ: ಅರ್ರೆ! ಮದ್ನಿ! ನನಗೂ ಇದು ಫೇವ್ರೇಟ್! [ಸ್ವೀಟ್ ದಬ್ಬ ಕಿತ್ತುಕೊಳ್ಳುವನು]

ಧಾರಿಣಿ: ನನಗೂ ತುಂಬಾ ಇಷ್ಟ! [ರಮೇಶ ಅವಳಿಗೂ ಸ್ವೀಟ್ ಕೊಡುವನು]

ರಮೇಶ: ಮದ್ನಿ ನೀವೂ ತೊಗೊಳಿ. ಆ... [ಬಾಯಿಗೇ ಇಡುವನು]

ಪಾಂಡುರಂಗ: ರಮೇಶ - ನನಗೂ ಕೊಡೋ.

ರಮೇಶ: [ಧಾರಿಣಿ ಕೈಗೆ ಕೊಡಲು ಹೋಗಿ] ಅಯ್ಯಯ್ಯೊ ಅಯ್ಯಯ್ಯೋ! [ಡಬ್ಬ ಬೀಳಿಸುವನು]

ರಮೇಶ: [ಧಾರಿಣಿಗೆ] ನೋದಿದೆಯಾ ನೋಡಿದೆಯಾ! ಎತ್ತಿ ಹಾಕಿಬಿಟ್ಟೆ. ಪಾಪ ಅಣ್ಣಯ್ಯ ಏನು ನೆಲದ ಮೇಲೆ ಬಿದ್ದಿದ್ದನ್ನ ತಿನ್ನೋಕ್ಕೆ ಆಗುತ್ತ? ಅಣ್ಣಯ್ಯನಿಗೆ ಸಾರಿ ಹೇಳು. ಆಮೇಲೆ ಕ್ಲೀನಪ್ ಮಾಡಿ ಟ್ರ್ಯಾಶ್‍ಗೆ ಹಾಕು.

ಧಾರಿಣಿ: ಸಾರಿ ಅಣ್ಣಯ್ಯ!

ಮಣಿ: [ರೇಗಿದವಳಾಗಿ ಕೈ ಬೀಸುತ್ತ] ಹಫ್! [ಉದ್ಗಾರ ತೆಗೆದು ನಿರ್ಗಮಿಸುವಳು]


೩

[ರಮೇಶ ಲ್ಯಾಪ್ಟಾಪ್ ಹಿಡಿದು ಕೂತಿರುತ್ತಾನೆ; ಪಾಂಡುರಂಗ ತಲೆಗೆ ಬಟ್ಟೆ ಕಟ್ಟಿಕೊಂಡು ಬರುತ್ತಾನೆ]

ರಮೇಶ: ಅಣ್ಣಯ್ಯ ಏನಾಯಿತೋ? ತಲೆಗೆ ಪಟ್ಟಿ ಯಾಕೆ ಕಟ್ಟಿಕೊಂಡಿದ್ದೀಯ?

ಪಾಂಡುರಂಗ: ಏನು ಇಲ್ಲ ರಮೇಶ ಸೊಲ್ಪ ತಲೆ ನೋವು ಅಷ್ಟೇಯ

ರಮೇಶ: ಮಾತ್ರೆ ಕೊಡ್ಲೇನೋ?

ಧಾರಿಣಿ: [ಬರುತ್ತ] ಬೇಡ ಬೇಡ - ಮಾತ್ರೆ ಒಳ್ಳೆದಲ್ಲ. ನೀವೇ ಸೊಲ್ಪ ತಲೆ ಮಸಾಜ್ ಮಾಡಿ ಕೊಡಿ.

ರಮೇಶ: ಸರಿ - ಬಾರೋ ಅಣ್ಣಯ್ಯ.

[ಪಾಂಡುರಂಗ ಕೂರುತ್ತಾನೆ, ರಮೇಶ ಹಿಂದೆ ನಿಂತು ಅವನ ತಲೆ ಮಸಾಜ್ ಮಾಡುತ್ತಾನೆ]

ಮಣಿ: [ಡಬ್ಬ ಹಿಡಿದು ಬರುತ್ತ] ಅರೆ! ಮತ್ತೆ ನಿಮ್ಮ ತಲೆ ನೋಯ್ತಾ ಇದೆಯ

ಪಾಂಡುರಂಗ: ಹೂ - ಯಾಕೋ ಮತ್ತೆ ತಲೆ ನೋಯ್ತಾ ಇದೆ. ಮೂರು ಚಮಚ ಸಕ್ಕರೆ ಹಾಕಿ ಒಂದು ಕಪ್ ಸ್ಟ್ರಾಂಗ್ ಕಾಫಿ ಮಾಡಿಕೊಡ್ತಿಯಾ?

ಮಣಿ: ಹೂಂ! ಈಗ ತಂದೆ [ಹೊರಡುವಳು]

ಧಾರಿಣಿ: [ಪಾಂಡುರಂಗನ ಕಡೆ ನೋಡುತ್ತ] ಮದ್ನಿ, ಮದ್ನಿ! ಬೇಡ - ನಾನೇ ಮಾಡಿ ತರ್ತೀನಿ.

ಪಾಂಡುರಂಗ: ಧಾರಿಣಿ - ಮತ್ತೆ ಹಾಗಲಕಾಯಿ ಸೂಪ್ ಮಾಡಿ ತರಲ್ಲ ತಾನೆ?

ಧಾರಿಣಿ: ಅಣ್ಣಯ್ಯ - ಆಮೇಲೆ ನಿಮಗೆ ಗೊತ್ತಾಗತ್ತೆ ಅದು ಹಾಗಲಕಾಯಿ ಸೂಪ್ ಅಲ್ಲ ನಮ್ಮ ವಿಶ್ವಾಸ ಅಂತ [ಹೋಗುವಳು]

ಪಾಂಡುರಂಗ: [ಮಣಿ ಹಿಡಿದಿರುವ ಡಬ್ಬ ತೋರಿಸಿ] ಏನೇ ಅದು?

ಮಣಿ: ನಿಮ್ಮ ಫೇವ್ರೇಟ್ ಸ್ವೀಟ್ ಮತ್ತೆ ತಂದಿದ್ದೀನಿ. [ಪಾಂಡುರಂಗನ ಪಕ್ಕ ಕೂರುತ್ತಾಳೆ]

ಪಾಂಡುರಂಗ: ಅರ್ರೆ ವಾ! ಏನು ವಿಷೇಶ?

ಮಣಿ: ಏನೂ ಇಲ್ಲ. [ರಮೇಶನ ಕಡೆ ದುರ್ಗುಟ್ಟಿ ನೋಡಿ] ನೆನ್ನೆ ಅಷ್ಟೂ ಹಾಳಾಗಿ ಹೋಯ್ತಲ್ಲಾ, ಅದಕ್ಕೆ.

ಪಾಂಡುರಂಗ: ಅಲ್ಲಿ ಇಡು - ಕಾಫಿ ಕುಡಿದು ತಿಂತೀನಿ.

ಮಣಿ: [ಮತ್ತೆ ರಮೇಶನನ್ನು ದುರ್ಗುಟ್ಟಿ ನೋಡುತ್ತ] ಉಹೂಂ! ಈ ಸರ್ತಿ ನನ್ನ ಕೈಯಿಂದಲೇ ತಿನ್ನಿಸಬೇಕು ಅಂತ ಆಸೆ ನನಗೆ. [ತಿನ್ನಿಸಲು ಹೊರಡುವಳು]

ಧಾರಿಣಿ: [ಕಾಫಿ ತರುತ್ತ, ದೃಷ್ಯವನ್ನು ನೋಡಿ, ರಮೇಶನಿಗೆ ಸನ್ನೆ ಮಾಡಿ] ಆ! [ಕುಸಿದು ಬೇಳುವಳು]

ಪಾಂಡುರಂಗ: ಅರೆ! ಏನಾಯಿತು ಧಾರಿಣಿಗೆ?

ರಮೇಶ: [ನಾಟಕೀಯವಾಗಿ] ಓಹೋ! ಜ್ಞಾನ ತಪ್ಪಿ ಬಿದ್ದುಹೋದ್ಲು ಅಂತ ಅನ್ಸುತ್ತೆ.

ಮಣಿ: ರಮೇಶ ಬೇಗ ಡಕ್ಟರ್‌ಗೆ ಫೋನ್ ಮಾಡೋ.


[ಎಲ್ಲರೂ ಕೂತಿದ್ದಾರೆ. ಮತ್ತೆ ಡಾಕ್ಟರ್ ಬಂದು ಧಾರಿಣಿಯನ್ನು ಪರೀಕ್ಷೆ ಮಾಡಿ, ವಿಕಾರವಾಗಿ ನಗುತ್ತ ಬ್ಲಡ್ ಡ್ರಾ ಮಾಡುವನು]

ಡಕ್ಟರ್: [ರಕ್ತದ ಸಿರಿಂಜ್ ನೋಡಿ] ವಾಹ್! ಎಂಥ ಕಲರ್ ಇದೆ!

ರಮೇಶ: [ಪಾಂಡುರಂಗನಿಗೆ] ಅಣ್ಣಯ್ಯ - ಇವರು ಡಾಕ್ಟರ್ರೋ ಇಲ್ಲ ಡ್ರಾಕುಲಾನೋ?

ಪಾಂಡುರಂಗ: ಏ ಸುಮ್ಮನಿರೋ.

ಡಕ್ಟರ್: [ಚೀಟಿ ಬರೆದು] ಇಗೋ ಈ ಕ್ಯಾಪ್ಸೂಲ್ ತೊಗೊಳಿ ಎಲ್ಲ ಸರಿ ಹೋಗತ್ತೆ. ನಾನಿನ್ನು ಬರ್ತೀನಿ.

ಪಾಂಡುರಂಗ: ನಡೀರಿ ಡಾಕ್ಟರ್. [ಮಣಿ ಪಾಂಡುರಂಗ ಡಕ್ಟರ್ ಜೊತೆ ಒಂದು ಕಡೆ ಸರಿಯುವರು]

ರಮೇಶ: ಈಗ ಹೇಗೆ ಅನ್ನಿಸುತ್ತಿದೆ ಧಾರೂ?

ಧಾರಿಣಿ: ಒಳ್ಳೆ ಹೆಲ್ತಿಯಾಗಿದ್ದೆ - ಭಾವ ಅಷ್ಟೊಂದು ರಕ್ತ ತೊಗೊಂಡಮೇಲೆ ವೀಕ್ನೆಸ್ ಆಗ್ಬಿಟ್ಟಿದೆ.

ರಮೇಶ: ಏನೂ ಯೋಚನೆ ಮಾಡಬೇಡ ಧಾರೂ, ನಿನ್ನ ಬ್ಲಡ್ ಡೊನೇಶನ್ ವೇಸ್ಟ್ ಆಗಲ್ಲ.

[ಅತ್ತ]

ಮಣಿ: ಡಕ್ಟರ್ - ಧಾರಿಣಿಗೆ ಏನಾಗಿದೆ?

ಡಾಕ್ಟರ್: ಡಯಾಬಿಟಿಸ್

ಮಣಿ: ಡಯಾಬಿಟಿಸ್?

ಡಾಕ್ಟರ್: ನೋ ನೋ ನೋ ನೋ ನೋ - ಇದ್ದರೂ ಇರಬಹುದು. ಬ್ಲಡ್ ರಿಪೋರ್ಟ್ ಬಂದಮೇಲೆ ಗೊತ್ತಾಗತ್ತೆ. ಅಲ್ಲಿವರೆಗು ಅವಳಿಗೆ ಸ್ವೀಟ್ ತಿನ್ನೋಕ್ಕೆ ಬಿಡಬೇಡಿ. [ನಿರ್ಗಮಿಸುವನು]

ಮಣಿ: ಧಾರಿಣಿಗೆ ಡಯಾಬಿಟಿಸ್? ಈಗೇನು ಮಾಡೋದು? ಅವಳಿಗಂತೂ ಸ್ವೀಟ್ ಅಂದ್ರೆ ತುಂಬ ಇಷ್ಟ!

[ಇತ್ತ]

ರಮೇಶ: ನಡಿ ಧಾರೂ ಹೋಗಿ ಸೊಲ್ಪ ಮಲಗಿಕೋ.

ಧಾರಿಣಿ: ಹೂ.. [ಹೊರ್ಡುವಳು] ಅರೆ! ಆ ಸ್ವೀಟ್ ಡಬ್ಬ ಇನ್ನೂ ಅಲ್ಲೇ ಇದೆ. ಅಣ್ಣಯ್ಯನ ಕೈಗೆ ಸಿಕ್ಕಿದರೆ? ತೊಗೊಂಡು ಬರ್ತೀನಿ.


[ಅತ್ತ]

ಮಣಿ: ನಾನು ಧಾರಿಣಿಗೆ ಸ್ವೀಟ್ ತಿನ್ನೋಕ್ಕೆ ಬಿಡಲ್ಲ.

[ಧಾರಿಣಿ, ಮಣಿ ಇಬ್ಬರೂ ಒಟ್ಟಿಗೆ ಸ್ವೀಟ್ ಡಬ್ಬದ ಕಡೆ ಓಡುವರು; ಧಾರಿಣಿ ಕೈಯಿಂದ ಡಬ್ಬ ಕಿತ್ತುಕೊಂಡು ಮಣಿ ಓಡುವಳು]


ರಮೇಶ: ಮದ್ನಿ ಮದ್ನಿ - ಏನ್ ಮಾಡ್ತ ಇದ್ದೀರ? ಅಣ್ಣಯ್ಯನಿಗೆ ಅದು ವಿಷದ ಸಮಾನ

ಮಣಿ: ಹೌದಾ? ಹಾಗಾದ್ರೆ ಧಾರಿಣಿ ಯಾಕೆ ಸೆಲ್ಫ್ ಸುಸೈಡ್ ಮಾಡ್ಕೊಳ್ಳಕ್ಕೆ ಹೊರ್ಟಿದ್ಲು?

ರಮೇಶ: ಧಾರಿಣಿಗೆ ಏನೂ ಆಗಿಲ್ಲ - ಆಗಿರೋದೆಲ್ಲ ಅಣ್ಣಯ್ಯನಿಗೆ!

ಮಣಿ: ಏನು?

ಧಾರಿಣಿ: ಡಯಾಬಿಟಿಸ್!

ಮಣಿ: ಅಯ್ಯೋ ರಾಮಾ!

ಪಾಂಡುರಂಗ: [ಬರುತ್ತ] ಯಾರು ಹೇಳಿದ್ದು ನನಗೆ ಡಯಾಬಿಟಿಸ್ ಇದೆ ಅಂತ?

ಧಾರಿಣಿ: ಡಕ್ಟರ್ ಭಾವ ಇವರಿಗೆ ಹೇಳಿದ್ರು.

ಪಾಂಡುರಂಗ: ನನ್ನ ಹತ್ತಿರ ನಿನಗೆ ಡಯಾಬಿಟಿಸ್ ಇದೆ ಅಂತ ಹೇಳಿ ಹೋದ್ರು.

ಧಾರಿಣಿ: ನನಗೆ? ಚೀ! ನಾನು ನಿಮ್ಮನ್ನ ಮದ್ನಿ ತಂದಿದ್ದ ಸ್ವೀಟ್‍ಇಂದ ಸೇವ್ ಮಾಡಕ್ಕೆ ಸುಳ್ಳು ಸುಳ್ಳೇ ಮೂರ್ಛೆ ಬಿದ್ದೆ.

ಮಣಿ: ಈಗ ನನಗೆ ಎಲ್ಲ ಅರ್ಥವಾಗ್ತ ಇದೆ - ಹಾಗಲ ಕಾಯಿ ರಸ, ಸ್ವೀಟ್ ಬೀಳಿಸೋದು, ಮೂರ್ಛೆ ಬೀಳೋದು ಎಲ್ಲ.

ಮಣಿ: [ಪಾಂಡುರಂಗನ ಕಡೆ ತಿರುಗಿ] ಏನ್ರೀ.. ನಿಮಗೆ ಡಯಾಬಿಟಿಸ್ ಇಲ್ಲ ತಾನೆ?

ಪಾಂಡುರಂಗ: ಅಯ್ಯೋ ಇಲ್ಲಾಮ್ಮಾ - ನನಗೆ ಡಯಾಬಿಟಿಸ್ ಇಲ್ಲ!

ಡಕ್ಟರ್: [ಬರುತ್ತ] ನೋ ನೋ ನೋ ನೋ ನೋ - ನೀವು ಹೇಗೆ ಹೇಳ್ತೀರ ನಿಮಗೆ ಡಯಾಬಿಟಿಸ್ ಇಲ್ಲ ಅಂತ? ಅದನ್ನ ನಾನು ಹೇಳ್ಬೇಕು. ಅಂದಹಾಗೆ ನಿಮಗೆ ಡಯಾಬಿಟಿಸ್ ಇಲ್ಲ. ನಿಮ್ಮ ರಿಪೋರ್ಟ್ ಕೊಡೋಕ್ಕೆ ಮರೆತಿದ್ದೆ. ತೊಗೊಳಿ [ಪಾಂಡುರಂಗನಿಗೆ ರಿಪೋರ್ಟ್ ಕೊಡುವನು]

ಮಣಿ: ಅಬ್ಬ! ಸಧ್ಯ! ರಮೇಶ - ಡಾಕ್ಟರ್‌ಗೆ ಸ್ವೀಟ್ ಕೊಡಪ್ಪ.

ಡಕ್ಟರ್: ನೋ ನೋ ನೋ ನೋ ನೋ - ನನಗೆ ಸ್ವೀಟ್ ಕೊಡಬೇಡ ರಮೇಶ.

ಎಲ್ಲರೂ: ಯಾಕೇ?

ಡಕ್ಟರ್: ನನಗೆ ಡಯಾಬಿಟಿಸ್ ಇದೆ!