Sunday, March 19, 2023

ನಾಟಕ: ಇರುಳಿನ ನಿರೀಕ್ಷೆ (Wait Until Dark)

Adaptation/translation of the English film/play "Wait Until Dark". This work was done almost 12 years ago in an attempt to enact, although it never came to fruition. Some areas are not fully rounded out, and has some 'TBDs' left in. 


Act 1, Scene 1  

[ರಾಜೇಶ, ಚಂದ್ರು ಮತ್ತು ಮಹೇಶ ಸರಸು-ಸೋಮು ಮನೆಯಲ್ಲಿ ಏನನ್ನೋ ಹುಡುಕುತ್ತಿದ್ದಾರೆ. ಜೋಪಾನವಾಗಿ ಇದ್ದ ಸಾಮಾನು ಇದ್ದ ಸ್ಥಳದಲ್ಲೇ ಬಿಡುತ್ತಾರೆ. Watch out for lighting, etc ]

ಚಂದ್ರು: ಉಹೂಂ! ಎಲ್ಲೆಲ್ಲೂ ಇಲ್ಲ. ಕಳೆದ ಎರಡು ಘಂಟೆಗಳಿಂದ ಹುಡುಕಿ ಹುಡುಕಿ ಸುಸ್ತಾಯಿತು. ಒಳ್ಳೆ ಕೆಲಸ ಇಲ್ದೆ ಇರೋ ಕೆಲಸ ಆಯಿತು. 

ಮಹೇಶ: ಏ ಸುಮ್ಮನಿರೊ. ಇರೋ ಬರೋ ಜಾಗದಲ್ಲೆಲ್ಲ ಹುಡುಕಿಯಾಯಿತು ಬಾಸ್. ಎಲ್ಲೂ ಆ ಗೊಂಬೆ ಇಲ್ಲ. ಈ ಮನೆಗೆ ಹೇಗೆ ಬಂತು ಆ ಗೊಂಬೆ? 

ರಾಜೇಶ: ಎಲ್ಲಾ ಆ ಲತಾ ಮಾಡಿದ ಕೆಲಸ. ಗೋವಾ ಇಂದ ಸೋಮು - ಅದೆ ಈ ಮನೆ ಓನರ್ರು - ಲತ ಇಬ್ಬರೂ ಒಟ್ಟಿಗೆ ಬರುತ್ತಿದ್ದರಂತೆ. ಮಾಲು ಜೋಪಾನವಾಗಿರಲಿ ಅಂತ ಗೊಂಬೆನ ಸೋಮು ಕೈಯಲ್ಲಿ ಕೊಟ್ಟಿದ್ದಳಂತೆ. ಬೆಂಗಳೂರಲ್ಲಿ ಅವಳನ್ನ ಸೆಕ್ಯೂರಿಟಿ ಹಿಡಿದು  ಹೊರಗೆ ಬರೋದು ಲೇಟಾಯಿತಂತೆ. ಅಷ್ಟು ಹೊತ್ತಿಗೆ ಇವನು ಗೊಂಬೆನೂ ಎತ್ತಿಕೊಂಡು ಮೈಸೂರಿಗೆ ಬಂದಿದ್ದ. 

ಮಹೇಶ: ಆಮೇಲೆ? 

ರಾಜೇಶ: ಸಧ್ಯ ಅವನ ಅಡ್ರಸ್ ಇಸ್ಕೊಂಡಿದ್ಲು. ಗೊಂಬೆ ವಾಪಸ್ ಇಸ್ಕೊಳಕ್ಕೆ ನೆನ್ನೆ ಇಲ್ಲಿಗೇ ಬಂದಿದ್ಲು. [ಕ್ರೂರವಾಗಿ+ಕೋಪದಿಂದ ಹಲ್ಲು ಕಡಿಯುತ್ತ] ಸೋಮು ಗೊಂಬೆ ಕಳೆದು ಹೋಗಿದೆ ಅಂತ ಹೇಳಿದ ಅಂತ ಬರೀ ಕೈಯಲ್ಲೇ ಬಂದಳು. 

ಚಂದ್ರು: ಓಹೋ ಹಾಗಾದರೆ ಈ ಸೋಮು ಪೋಲೀಸೋ, ಕಸ್ಟಮ್ಸೋ ಇರಬೇಕು. ನಮ್ಮ ವಿಚಾರ ಎಲ್ಲ ಗೊತ್ತಾಗಿರಬೇಕು. ಈಗೇನು ಮಾಡೋದು, ಬಾಸ್. 

ಮಹೇಶ: ಏ ಸುಮ್ಮನಿರೊ. ಕಳೆದು ಹೋಗಿದೆ ಅಂದರೆ? ಆಮೇಲೆ ಲತ ಏನು ಮಾಡಿದಳು? 

ರಾಜೇಶ: ಆಮೇಲೆ ಅವಳು ಯಾರಿಗೂ ಏನೂ ಮಾಡೋ ಸ್ಥಿತಿಯಲ್ಲಿರಲಿಲ್ಲ. 

ಮಹೇಶ: ಅಂದರೆ

ರಾಜೇಶ: ನಾಳೆ ಪೋಲೀಸರಿಗೆ ಇಲ್ಲೇ ಹತ್ತಿರ ಇರೋ ಕಸದ ತೊಟ್ಟಿಯ ಹಿಂದೆ ಸಿಕ್ತಾಳೆ. 

ಚಂದ್ರು: ಅವಳನ್ನೇ ಮುಗಿಸಿ ಬಿಟ್ರ, ಬಾಸ್? 

ಮಹೇಶ: ಏ ಸುಮ್ಮನಿರೊ. ಈಗೇನು ಮಾಡೋದು, ಬಾಸ್? ಗೊಂಬೆನೂ ಹುಡುಕಿದ್ದಾಯಿತು ಸಿಗಲಿಲ್ಲ. ಅವರಿಗೆ ಅನುಮಾನ ಬಂದು ಎಲ್ಲಾದರೂ ಬಚ್ಚಿಟ್ಟಿದ್ದ್ರೆ...? 

ಚಂದ್ರು: ಅವನನ್ನ ತೋರಿಸಿ, ಬಾಸ್. ಅವನ ಕಾಲು ಮುರಿದು ಗೊಂಬೆ ಎಲ್ಲಿದೆ ಅಂತ ಬಾಯಿ ಬಿಡಿಸ್ತೀನಿ. 

ರಾಜೇಶ: ಅವನನ್ನ ಬಾಯಿ ಮುಚ್ಚಿಸ್ತಿಯೋ ಇಲ್ಲ ಲತ ಜೊತೆ ಅವನನ್ನು... [ಚಂದ್ರು ಕೈಯನ್ನು ಬಾಯಿಮೇಲೆ ಇಟ್ಟುಕೊಳ್ಳುವನು]

ಮಹೇಶ: ಗೊಂಬೆ ಪಡೆಯೋದಕ್ಕೆ ಪ್ಲಾನ್ ಏನು, ಬಾಸ್? 

ರಾಜೇಶ: ಇದು ಶಕ್ತಿಯಿಂದ ಅಲ್ಲ ಯುಕ್ತಿಯಿಂದ ಮಾಡಬೇಕಾದ ಕೇಲಸ. ಗೊಂಬೆ ಅವರೇ ಹುಡುಕಿ ಕೊಡೋ ಹಾಗೆ ಮಾಡಬೇಕು. ಅದಕ್ಕೆ ನನ್ನದೊಂದು ಮಾಸ್ಟರ್ ಪ್ಲಾನ್ ಇದೆ. [ಕಿಟಕಿಯಿಂದ  ಹೊರಗೆ ನೋಡಿ] ಅಲ್ಲಿ ನೋಡಿ - ಫೋನ್ ಬೂತ್ ಕಾಣಿಸ್ತಾ ಇದಿಯಾ? 

ಮಹೇಶ: ಹೂಂ. 

ರಾಜೇಶ: ಅದರ ನಂಬರ್ ಬರ್ಕೊ: 441-6349. ಎಲ್ಲ ನೀವಿಬ್ಬರು ಎಷ್ಟು ಚನ್ನಾಗಿ ಆಕ್ಟಿಂಗ್ ಮಾಡ್ತೀರ ಅನ್ನೋದರ ಮೇಲೆ ಹೋಗತ್ತೆ.

ಚಂದ್ರು: [Blinds operateಮಾಡುತ್ತ] ಏನು ಆಕ್ಟಿಂಗ್? ನೀವು ಸೀನ್ ಹೇಳಿ, ಬಾಸ್. ಜಮಾಯಿಸ್ಬಿಡ್ತೀವಿ!

ರಾಜೇಶ: [ಚೂರಿ ತೆಗೆಯುತ್ತ ಚಂದ್ರು ಕಡೆ ಹೋಗುವನು, ಚಂದ್ರು ಮಹೇಶನ ಹಿಂದೆ ಬಚ್ಚಿಟ್ಟುಕೊಳ್ಳುವನು] ಬಾಯಿ ತೆಗೀಬೇಡ ನೀನು! 

ಮಹೇಶ: ಅವನನ್ನ ಬಿಡಿ ಬಾಸ್. [ಚೇರ್ ಎಳೆದು ರಾಜೇಶನಿಗೆ ಕೂರಲು ತೋರಿಸುವನು] ನೀವು ಪ್ಲಾನ್ ಹೇಳಿ. 

ರಾಜೇಶ: ನಾಳೆ ಸೋಮು ಕಾನ್‍ಫರೆನ್ಸ್‍ಗೆ ಅಂತ ಬೆಂಗಳೂರಿಗೆ ಹೋಗ್ತಿದ್ದಾನೆ. ಮನೇಲಿ ಅವನ ಹೆಂಡತಿ ಒಬ್ಬಳೆ ಇರ್ತಾಳೆ. ಸೋಮು ಹೆಂಡತಿ... [ಹೊರಗಿನಿಂದ ಕೋಲು ಕುಟ್ಟುವ ಶಬ್ಧ. ಯಾರೋ ಬಂದು ಬಾಗಿಲ ಬೀಗ ತೆಗೆಯುವ ಶಬ್ಧ. ರಾಜೇಶ ಎಲ್ಲರಿಗೂ ಮೌನವಾಗಲು ಸನ್ನೆ ಮಾಡುತ್ತಾನೆ. ಎಲ್ಲರೂ ನಿಂತಲ್ಲೇ ನಿಲ್ಲುತ್ತಾರೆ] 

ಸರಸು: [ಒಳಗೆ ಬರುತ್ತ, ಒಂದು ಕ್ಷಣ ನಿಂತು ಕೇಳಿಸಿಕೊಳ್ಳುತ್ತಾಳೆ] ಸೋಮು? [ದೀಪಗಳ ಸ್ವಿಚ್ ಮುಟ್ಟಿ ನೋಡುತ್ತಾಳೆ] ಗೌರಿ? [ಫೋನ್ ತೆಗೆದು ಡಯಲ್ ಮಾಡಿ] ಸೋಮು... ಇನ್ನೂ ಅಲ್ಲೇ ಇದೀರಾ? .... ನಾನು ಮನೆಗೆ ಬಂದಾಯಿತು.... ಆಟೋ ತೊಗೊಂಡು ಮನೆಗೆ ಬಂದೆ... ಉಹೂಂ ಸಂಗೀತ ಸುಮಾರಾಗಿತ್ತು. ನೀವಿಲ್ಲದೆ ಬೋರ್ ಆಗಿಹೋಯ್ತು..... ಎಷ್ಟ್‍ಹೊತಿಗೆ ಬರ್ತೀರ.... ಮಿಸ್ ಯು. [ಫೋನ್ ಇಡುವಳು. ತಿರುಗಿ ಹೊರಡುವಾಗ ಮಹೇಶ ಎಳೆದ ಚೇರ್ ಮೇಲೆ ಎಡವುವಳು] ಅಯ್ಯೋ ಕತ್ತೆ. ಗೌರಿ! ನೀನಿಲ್ಲೇ ಇದಿಯ ಅಂತ ನನಗೆ ಗೊತ್ತು, ಗೌರಿ! [ಮತ್ತೆ ನಿಂತು ಕೇಳಿಸಿಕೊಳ್ಳುವಳು, ಹೆಗಲೇರಿಸಿ ಮನೆಯೊಳಗೆ ಹೋಗುವಳು. ಇತ್ತ ಮುವರು ಹೊರಗೆ ಹೋಗುವರು]


 Act 2, Scene 1  

[ಸರಸು ಮತ್ತು ಸೋಮು ಮನೆಯಲ್ಲಿ ಇರುತ್ತಾರೆ. ಸೋಮುವಿನ ಬ್ರೀಫ್‍ಕೇಸ್/ಸೂಟ್‍ಕೇಸ್ ಪಕ್ಕದಲ್ಲಿರುತ್ತದೆ. ಸರಸು ಏನಾದರೂ ಮನೆ ಕೆಲಸ (ಬಟ್ಟೆ ಮಡಿಸುವುದು?) ಮಾಡುತ್ತಿರುತ್ತಾಳೆ. ಸೋಮು ತಿಂಡಿ ತಿನ್ನುತ್ತ ಪೇಪರ್ ಓದುತ್ತಿರುತ್ತಾನೆ]

ಸರಸು: ರೀ... ಆ ಕೊಲೆ ವಿಚಾರ ಕೇಳಿದ್ರಾ? 

ಸೋಮು: [ತಿನ್ನುವುದನ್ನು ಮುಂದುವೆರೆಸುತ್ತ] ಹಾಂ? ಕೊಲೆನಾ?

ಸರಸು: ಹೂಂ. ಇಲ್ಲೇ ಎಲ್ಲೋ ಬಾಡಿ ಸಿಕ್ಕಿತಂತೆ. ಆಗಲೇ ರೇಡಿಯೋಲಿ ಹೇಳ್ತಿದ್ರು. ನಂಜನಗೂಡಿನವಳು ಯಾರೋ ಅಂತೆ. 

ಸೋಮು: [ಸಣ್ಣದಾಗಿ ನಗುತ್ತ] ನನ್ನನ್ನ ಮನೇಲೇ ಇರಿಸಿಕೋಬೇಕು ಅಂತ ಕತೆ ಕಟ್ತಿದ್ದೀಯಾ?

ಸರಸು: ಇಲ್ಲ ನಿಜವಾಗಿ!

ಸೋಮು: [ಗಂಭೀರವಾಗಿ] ಭಯ ಆಗ್ತಿದಿಯಾ, ಸರಸು? ಟ್ರಿಪ್ ಕ್ಯಾನ್ಸಲ್ ಮಾಡಿ ನಿನ್ನ ಜೊತೆನೇ ಇರಲೇ?

ಸರಸು: [ನಗುತ್ತ] ಇಲ್ಲ ಹಾಗೇನಿಲ್ಲ ರೀ... ಅಂದರೆ ನೀವು ಮನೇಲಿ ಇರೋದು ನನಗೆ ಇಷ್ಟನೇ ಆದರೆ ನನ್ನಿಂದ ನಿಮ್ಮ ಟ್ರಿಪ್ ಏನೂ ಕ್ಯಾನ್ಸಲ್ ಮಾಡಬೇಡಿ. ನನಗೇನು ಭಯ ಇಲ್ಲ. 

ಸೋಮು: ಅದೇ ನೋಡು ನಮ್ಮ ಛಾಂಪಿಯನ್ ಹುಡುಗಿ. ಈಗ ಬೇಗ ಹೇಳು - ಎಮರ್ಜೆನ್ಸಿ ನಂಬರ್

ಸರಸು: ೧೦೦ ಡಯಲ್ ಮಾಡಿ ನಾನು ಕುರುಡಿ ಅಂತ ಹೇಳ್ತೀನಿ

ಸೋಮು: ಅದು ಪೋಲೀಸ್ ಕಂಟ್ರೋಲ್ ರೂಂ. ಸಹಾಯ ಬರೋದು ನಿಧಾನ ಆಗುತ್ತೆ. ಲೋಕಲ್ ಪೋಲೀಸ್ ಸ್ಟೇಶನ್ ನಂಬರ್ ಹೇಳು ನೋಡೋಣ? 

ಸರಸು:  440-0100. ಪಕ್ಕದ ಮನೆ ನಂಬರ್ 440-3217 ಡಾಕ್ಟರ್ ಕ್ಲಿನಿಕ್ ನಂಬರ್ 443-6600 ಸ್ವಲ್ಪ ಹೊತ್ತಿನ ಮೇಲೆ ಗೌರಿ ಬರ್ತಾಳೆ. 4:00 ಘಂಟೆಗೆ ನಾನು ಬ್ಲೈಂಡ್ ಸ್ಕೂಲ್‍ಗೆ ಹೋಗ್ಬೇಕು. ನಾನು ಛಾಂಪಿಯನ್ ಕುರುಡಿ - ಎಲ್ಲ ನೋಡ್ಕೊತೀನಿ, ನೀವು ಆರಾಮವಾಗಿ ಹೋಗಿ ಬನ್ನಿ. 

ಸೋಮು: ಸರಿ ಹಾಗಿದ್ರೆ. ನಾನು ಹೋಗ್ತಿರೋದು ಎಲ್ಲಿಗೆ? 

ಸರಸು: ಬೆಂಗಳೂರಿಗೆ ಹೋಗ್ತಿದ್ದೀರ, ಹೋಟೆಲ್ ತಾಜ್‍ನಲ್ಲಿ ಸೇಲ್ಸ್ ಕಾನ್ಫರೆನ್ಸ್‍ಗೆ. ಅಲ್ಲಿಯ ಫೋನ್ ನಂಬರ್ 806-660-4444 ಕಾನ್‍ಫರೆನ್ಸ್ ಮುಗಿಸಿಕೊಂಡು ಸಂಜೆ ವಾಪಸ್ ಬರ್ತೀರ. 

ಸೋಮು: ಸರಿ ಹಾಗಿದ್ರೆ. ನಾನು ತಲುಪಿದ ತಕ್ಷಣ ಫೋನ್ ಮಾಡ್ತೀನಿ. ಹೊರಡೋ ಮುಂಚೆನೂ ಫೋನ್ ಮಾಡ್ತೀನಿ. ಆ ಗೊಂಬೆ ಹೆಂಗಸು ಫೋನ್ ಮಾಡಿದರೆ ಗೊಂಬೆ ಇನ್ನೂ ಸಿಕ್ಕಿಲ್ಲ ಅಂತ ಹೇಳು. ಅವಳ ಫೋನ್ ನಂಬರ್ ಕೇಳು. 

ಸರಸು: [ಸ್ವಗತ] ಗೌರಿ ಆ ಗೊಂಬೆ ನೋಡಿದ್ದಾಳೋ ಏನೋ? 

ಸೋಮು: ಇಲ್ಲ ಅವರ ಅಮ್ಮನ್ನ ಕೇಳಿದೆ. ಅವಳಿಗೆ ಗೊತ್ತಿಲ್ಲವಂತೆ. ಆದರೆ ಗೌರಿ ಬಂದಾಗ ಅವಳಿಗೆ ಹುಡುಕೋದಕ್ಕೆ ಹೇಳು.

ಸರಸು: ಅವಳು ಬಂದರೆ... ಯಾಕೋ ಈ ನಡುವೆ ಅವಳಿಗೆ ಜವಾಬ್ದಾರಿ ಹೆಚ್ಚಾಗೋ ಬದಲು ಕಡಿಮೆ ಆಗ್ತ ಇದೆ. 

ಸೋಮು: ಯಾಕೆ? 

ಸರಸು: ನೆನ್ನೆ - ನಾನು ಬಂದಾಗ - ಫರ್ನೀಚರ್ ಎಲ್ಲ ಜರುಗಿಸಿದ್ದಳು. ನಾನು ಮನೆಗೆ ಬಂದಾಗ ಇಲ್ಲೇ ಇದ್ದಳು. ಕೂಗಿದರೂ ಕೇಳಿಸಿಕೊಳ್ಳದೆ ಹೋಗಿಬಿಟ್ಟಳು.

ಸೋಮು: ಪಾಪ, ಚಿಕ್ಕದು, ಬಿಡು. ಆದರೂ ಒಳ್ಳೆ ಹುಡುಗಿ. ಸರಿ ನನಗೆ ಟೈಮ್ ಆಯಿತು. ಹೋಗಿ ಬರ್ತೀನಿ. ನೀನು ಆಚೆ ಹೋಗಿ ಒಬ್ಬಳೇ ವಾಕಿಂಗ್ ಮಾಡೋದು ಅಭ್ಯಾಸ ಮಾಡಿಕೋ.

ಸರಸು: ಜೋಪಾನವಾಗಿ ಹೋಗಿ ಬನ್ನಿ. ನೀವು ಬರೋದನ್ನೇ ಕಯ್ತಾ ಇರ್ತೀನಿ. [ಹೊರಗೆ ಹೋಗುವಳು]

[ಸೋಮು ಕ್ಯಾಂಡಲ್ (ದೇವರ ದೀಪ? scented candle? - production based) ಒಂದನ್ನು ಹಚ್ಚಿ, ಸೂಟ್‍ಕೇಸ್ ಎತ್ತಿಕೊಂಡು ಹೋಗುವನು  possible  ದುರ್ವಾಸನೆ  dialog]

 Act 2, Scene 2 (Continues)  

[ಸ್ವಲ್ಪ ಹೊತ್ತಿನ ನಂತರ ಸರಸು ಮತ್ತೆ ಬರುತ್ತಾಳೆ] 

ಸರಸು: [ಮೂಸುತ್ತ] ಅರೆ! ಹೊಗೆ ವಾಸನೆ! [ಅಲ್ಲಿ ಇಲ್ಲಿ ಓಡಾಡುತ್ತ ಎಲ್ಲಿಂದ ಬರುತ್ತಿದೆ ಎಂದು ಕಂಡು ಹಿಡಿಯಲು ಪ್ರಯತ್ನಿಸುತ್ತಾಳೆ, ಆಗುವುದಿಲ್ಲ] 

ಸರಸು: [ಜೋರಾಗಿ] ಸೋಮು.....? ಗೌರಿ.... ? ಯಾರಾದರೂ ಇದ್ದೀರ? [ಆತಂಕದಿಂದ ಅತ್ತಿತ್ತ ನೋಡುತ್ತ ಫೋನ್ ಕಡೆ ಹೋಗುತ್ತಾಳೆ - ಕೈಗೆತ್ತಿಕೊಂಡು ಡಯಲ್ ಮಾಡಿ] ಹಲೋ? ಫಯರ್ ಡಿಪಾರ್ಟ್ಮೆಂಟಾ? ... ನನಗೆ ಕಣ್ಣು ಕಾಣಿಸೋದಿಲ್ಲ ಆದರೆ ಮನೇಲೆಲ್ಲ ಹೊಗೆ ವಾಸನೆ. ಕ್ಯಾಂಡಲ್ ಇರಬಹುದೋ ಏನೋ ಆದರೆ ಏನಾದರು ಅನಾಹುತ ಅಗಿರಬಹುದೋ ಅಂತ ಭಯ ಆಗಿದೆ... ಹೂ ನಮ್ಮ ಅಡ್ರಸ್ಸು ನಂ. ೨೨ ೧ನೇ ಕ್ರಾಸ್ ಕೃಷ್ಣಮೂರ್ತಿಪುರಂ [ಬಾಗಿಲು ಬಡಿಯುವ ಶಬ್ಧ] ಓಹ್ ತಾಳಿ ಯಾರೋ ಮನೆ ಬಾಗಿಲು ತಟ್ಟುತ್ತಿದ್ದಾರೆ. [ಫೋನ್ ಇಟ್ಟು ಬಾಗಿಲನ್ನು ತೆಗೆಯಲು ಹೋಗುತ್ತಾಳೆ, ಬಾಗಿಲಲ್ಲಿ ಮಹೇಶ]

ಮಹೇಶ: ಇದು ಸೋಮು ಮನೆ..? 

ಸರಸು: ಅಬ್ಬ ಸಧ್ಯ! ಬನ್ನಿ ಬನ್ನಿ, ಒಳಗೆ ಬನ್ನಿ. ಹೊಗೆ ವಾಸನೆ ಬರ್ತಿದೆ. ಎಲ್ಲೋ ಬೆಂಕಿ ಹತ್ತಿಕೊಂಡಿರಬೇಕು. ಸ್ವಲ್ಪ ಬಂದು ನೋಡ್ತೀರ, ಪ್ಲೀಸ್? 

ಮಹೇಶ: ಜೋಪಾನ! [ಸರಸು ಎಡವುತ್ತಾಳೆ] ನಿಧಾನವಾಗಿ!

ಸರಸು: [ಆತಂಕದಿಂದ] ಕಾಣಿಸುತ್ತಿದೆಯಾ? ಬೆಂಕಿ? ಹೊಗೆ ವಾಸನೆ.... ನನಗೆ ಕಣ್ಣು ಕಾಣಿಸೋದಿಲ್ಲ. 

ಮಹೇಶ: ಇಲ್ಲೇ ಇದೆ. ಕ್ಯಾಂಡಲ್ ಉರೀತಿದೆ. ಏನೂ ಅಪಾಯವಿಲ್ಲ. [ಕ್ಯಾಂಡಲ್ ಆರಿಸುವನು] 

ಸರಸು: [ಎದೆಯ ಮೇಲೆ ಕೈಯಿಟ್ಟು] ಅಬ್ಬ! ತುಂಬಾ ಭಯವಾಗಿ ಹೋಗಿತ್ತ. ಥ್ಯಾಂಕ್ಸ್!. ಎಲ್ಲಿತ್ತು ಕ್ಯಾಂಡಲ್. 

ಮಹೇಶ: ದೇವರ ಫೋಟೋ ಮುಂದೆ (?  or where ever)

ಸರಸು: [ಫೋನ್ ಎತ್ತಿಕೊಳ್ಳುತ್ತ] ಹಲೋ? ಇಲ್ಲ ಕ್ಯಾಂಡಲ್ ಉರೀತಿತ್ತು ಆರಿಸಿದ್ದೀವಿ. ಏನೋ ಎಮರ್ಜೆನ್ಸಿ ಇಲ್ಲ. .... ಥ್ಯಾಂಕ್ಸ್. 

ಸರಸು: [ಮಹೇಶನನ್ನು ಕುರಿತು] ಸಾರಿ ಸುಮ್ಮನೆ ಆತಂಕ ಪಟ್ಟೆ. ಹೊಗೆ ಎಲ್ಲಿಂದ ಬರ್ತಿದೆ ಅಂತ ಹೇಳೋಕ್ಕೆ ಆಗಲ್ಲ ನನಗೆ. ಅಂದಹಾಗೆ ನೀವು ಯಾರು ಅಂತ ಗೊತ್ತಾಗಲಿಲ್ಲ. 

ಮಹೇಶ: ನನ್ನ ಹೆಸರು ಮಹೇಶ್. ನಾನು ಸೋಮುವಿನ ಹಳೆ ಫ್ರೆಂಡ್. ನೀವು...?

ಸರಸು: ನಾನು ಸರಸ್ವತಿ (ಕೈ ಕುಲುಕಲು ಕೈ ಚಾಚುವಳು ?) ಸೋಮು ಹೆಂಡತಿ. ಆದರೆ ಸೋಮು ಈಗ ಸ್ವಲ್ಪ ಹೊತ್ತಿನಲ್ಲಿ ಬೆಂಗಳುರಿಗೆ ಹೊರಟರು. ಸಂಜೆ ಬರ್ತಾರೆ. 

ಮಹೇಶ: ಓಹ್ ಹೌದೆ? ನಾನು ಫೋನ್ ಮಾಡಿ ಬರಬೇಕಿತ್ತು. ನೆನ್ನೆ ಸಂಜೆ ಸುಮಾರು ೯:೦೦ ಘಂಟೆಗೆ ಫೋನ್ ಮಾಡಿದ್ದೆ ಆದರೆ ಯಾರೂ ಎತ್ತಲಿಲ್ಲ. 

ಸರಸು: ಅಹ್... ಹೌದು. ಆಗ ನಾವು ಮನೇಲಿ ಇರಲಿಲ್ಲ. ಕೂತ್ಕೊಳ್ಳಿ. 

ಮಹೇಶ: ಒಂದೆರಡೇ ನಿಮಿಷ - ನಾನೂ ಸ್ವಲ್ಪ ಹೊತ್ತಿನಲ್ಲಿ ಹಾಸನಕ್ಕೆ ಹೊರಟಿದ್ದೀನಿ. ಹಾಗೇ ಸೋಮುನ ಮಾತಾಡಿದಿಕೊಂಡು ಹೋಗೋಣ ಅಂತ ಬಂದೆ. 

ಸರಸು: ನಿಮಗೆ ಸೋಮು ಹೇಗೆ ಗೊತ್ತು? ಕಾಲೇಜಿನಲ್ಲಿ ಒಟ್ಟಿಗೆ ಇದ್ದರ? 

ಮಹೇಶ: ಹೌದು... [ಜೇಬಿನಿಂದ ಸಣ್ಣ ಪುಸ್ತಕವೊಂದನ್ನು ತೆಗೆದುಕೊಂಡು ಅದರಲ್ಲಿ ನೋಡುತ್ತ] ಮಹಾರಾಜಾಸ್ ಕಾಲೇಜ್ [ಸರಸು ಮಹೇಶ ಒಟ್ಟಿಗೆ ಹೇಳುತ್ತಾರೆ] - ಹೌದು ಮಹಾರಾಜಾಸ್‍ನಲ್ಲಿ ಒಟ್ಟಿಗೆ ಓದುತ್ತಿದ್ದೆವು. ನನಗೆ ತುಂಬ ಸಹಾಯ ಮಾಡಿದ್ದಾನೆ ಆ ಸಮಯದಲ್ಲಿ ಸೋಮು... ನಿಮ್ಮ ಮದುವೆ..?

ಸರಸು: ಈಗ ಏಪ್ರಿಲ್ ಬಂದರೆ ಒಂದು ವರ್ಷವಾಗುತ್ತೆ. [ಮಹೇಶ ಪುಸ್ತಕದಲ್ಲಿ ಬರೆದುಕೊಳ್ಳುತ್ತಾನೆ]

ಮಹೇಶ: ನಿಮ್ಮ ದೃಷ್ಠಿ...? 

ಸರಸು: ಈಗ ಎರಡು ವರ್ಷದಲ್ಲಿ ಆಕ್ಸಿದೇಂಟ್‍ನಲ್ಲಿ ಕಳೆದುಕೊಂಡೆ. ಕಣ್ಣು ಕಳೆದುಕೊಂಡಮೇಲೆ ಒಂದು ದಿನ ರಸ್ತೆ ಕ್ರಾಸ್ ಮಾಡ್ತಿದ್ದಾಗ ಸೋಮು ನನ್ನ ಕೈ ಹಿಡಿದ್ ಸಹಾಯ ಮಾಡಿದರು. ಆಮೇಲೆ ಕೈ ಬಿಡಲೇಯಿಲ್ಲ. [ಕೆಲ ಕ್ಷಣಗಳ ನಂತರ] ಕಾಫಿ, ಟೀ, ಹಾಲು ಏನು ತೊಗೋತೀರ? 

ಮಹೇಶ: [ blinds/curtain ತೆಗೆದು] ಓಹ್! ಯಾವುದೂ ಬೇಡ, ಥ್ಯಾಂಕ್ಸ್. ನಾನಿನ್ನು ಹೊರಡುತ್ತೇನೆ. ಸೋಮು ಬಂದಮೇಲೆ ಅವನಿಗೆ ಹೇಳಿ. 

ಸರಸು: ಓಹೋ ಖಂಡಿತವಾಗಿ. ನೀವು ಏನಾದರು ತೊಗೋ ಬಹುದಿತ್ತು. ಮುಂದಿನ ಸರ್ತಿ ಬಂದಾಗ ಖಂಡಿತ ಊಟಕ್ಕೇ ಬರಬೇಕು. 

ಮಹೇಶ: ಓಹೋ! ಅದಕ್ಕೇನಂತೆ! [ಎದ್ದು ಹೊರಡುವನು]

[ಬಾಗಿಲು ಬಡಿಯುವ ಶಬ್ಧ. ಸರಸು ಬಾಗಿಲು ತೆಗೆಯಲು ಹೊರಡುವಳು, ಬಾಗಿಲಲ್ಲಿ ವಯಸ್ಸಾದ ರಾಜೇಶ]

ರಾಜೇಶ: ಎಲ್ಲಿ? ಮಿ. ಶಾಮ್ ಎಲಿಇದಾರೆ? ನಾನವರ ಹತ್ತಿರ ಸೊಲ್ಪ ಮಾತನಾಡಬೇಕು. ಎಲ್ಲಿದ್ದಾರೆ ಮಿ. ಶಾಮ್? 

ಸರಸು: [ತಬ್ಬಿಬ್ಬಾಗಿ] ಆ? ಏನಂದ್ರಿ? ನೀವು ಯಾರು ಅಂತ ಹೇಳ್ತೀರ?

ರಾಜೇಶ: ಎಲ್ಲಿದ್ದಾಳೆ? ಎಲ್ಲಿದ್ದಾಳೆ ಅವಳು? [ರಾಜೇಶ ಮನೆಯೊಳಗೆ ನುಗ್ಗುವನು, ಸುತ್ತಲೂ ನೋಡುವನು]

ಸರಸು: ಯಾರು? ಯಾರನ್ನ ಕೇಳ್ತಿದ್ದೀರ? ತಪ್ಪು ಅಡ್ರಸ್‍ಗೆ ಬಂದಿದ್ದೀರ ಅಂತ ಕಾಣ್ಸುತ್ತೆ. ಇಲ್ಲಿ ಶಾಮ್ ಅನ್ನೋರು ಯಾರೂ ಇಲ್ಲ. ನೀವು ಯಾರು... ? ನನಗೆ ಕಣ್ಣು...

ರಾಜೇಶ: [ಸುಸ್ತಾದಂತೆ ಕೂತು] ಹುಷಪ್ಪ! ನನಗೆ ತುಂಬಾ ಸುಸ್ತಾಗ್ತಾ ಇದೆ, ಸೊಲ್ಪ ನೀರು ಕೊಡ್ತೀರ, ಪ್ಲೀಸ್? 

ಸರಸು: ಆಯಿತು! ಇಲ್ಲೇ ಕೂತುಕೊಳ್ಳಿ ನಾನು ನೀರು ತರ್ತೀನಿ. [ಹೊರಗೆ ಹೋಗುವಳು]

ಮಹೇಶ: ಏನಾದರೂ ಸಹಾಯ ಬೇಕಾ, ಸರಸ್ವತೀ? [ಅವಳ ಹಿಂದೆ ಹೋಗುವನು] 

[ರಾಜೇಶ ತಟ್ಟನೆ ಎದ್ದು side table ಮೇಲೆ ಇಟ್ಟಿರುವ ಸರಸು-ಸೋಮುವಿನ ಫೋಟೋವೊಂದನ್ನು ಎತ್ತಿಕೊಂಡು ಬಾಗಿಲ ಬಳಿ ಹೋಗುವನು. ಅಷ್ಟರಲ್ಲಿ ಸರಸು ನೀರಿನ ಲೋಟ ಹಿಡಿದು, ಅವಳ ಹಿಂದೆ ಮಹೇಶ ಹಿಂತಿರುಗುವರು]

ಸರಸು: ಇಗೋ ತೊಗೊಳಿ ನೀರು.... 

ರಾಜೇಶ: ಅವನಿಗೆ ಹೇಳಿಬಿಡಿ - ಶಾಮ್‍ಗೆ ಹೇಳಿಬಿಡಿ ಮತ್ತೆ ಅವಳ ತಂಟೆಗೆ - ನನ ಸೊಸೆ ತಂಟೆಗೆ ಬಂದರೆ ನಾನು ಅವನನ್ನ ಜೀವ ಸಹಿತ ಬಿಡೋದಿಲ್ಲ ಅಂತ. ನಮ್ಮ ಮನೆತನದ ಮಾನ ಮಣ್ಣು ಪಾಲು ಮಾಡಿದರೆ ಕೊಂದು ಹಾಕ್ತೀನಿ ಅವನನ್ನ. 

ಮಹೇಶ: ರೀ ಸ್ವಲ್ಪ ತಾಳಿ ಸ್ವಾಮಿ! ಯಾರ್ರೀ ನೀವು? ಏನೇನೋ ತಲೆಹರಟೆ ಮಾತಾಡ್ತಾ ಇದೀರ? ಕೈಯಲ್ಲಿ ಏನ್ರೀ ಹಿಡ್ಕೊಂಡಿದ್ದೀರಾ? [ಅವನನ್ನು ಹಿಡಿಯಲು ಹೋಗುವನು]

ರಾಜೇಶ: ಹಾ! ಅದನ್ನ ಶಾಮ್‍ಗೆ ಹೇಳಿ. ಈ ಪಾಪದ ಮನೆಯಿಂದ ನಾನು ಹೊರಟೆ. 
[ಹೊರಗೆ ಹೋಗುವನು, ಹೊರಗಿನಿಂದ] ಡ್ರೈವರ್, ನಡಿಯಪ್ಪ!

ಸರಸು: [ಭಯದಿಂದ] ಯಾರದು? ಏನಾಯಿತು ಮಹೇಶ್? ನನಗ್ಯಾಕೋ ತುಂಬಾ ಭಯವಾಗ್ತಾ ಇದೆ. 

ಮಹೇಶ: ಯಾರೋ ಸೊಲ್ಪ ಲೂಸು ಅಂತ ಕಾಣ್ಸುತ್ತೆ. ಕೈಯಲ್ಲಿ ಬೇರೆ ಏನೋ ಹಿಡ್ಕೊಂಡಿದ್ದ - ಬಂದಾಗ ಅವನ ಕೈಯಲ್ಲಿ ಏನೂ ಇರಲಿಲ್ಲ. ಏನೇ ಆಗಲಿ ನಾನು ಪೋಲೀಸ್‍ಗೆ ಫೋನ್ ಮಾಡ್ತೀನಿ. ಅವರೇ ಬಂದು ವಿಚಾರ ಮಾಡಲಿ. 

ಸರಸು: ಥ್ಯಾಂಕ್ಸ್! ಇಲ್ಲಿಯ ಪೋಲೀಸ್ ಸ್ಟೇಶನ್ ಫೋನ್ ನಂಬರ್ರು [ಸ್ವಲ್ಪ ಯೋಚಿಸಿ] 440-0100

ಮಹೇಶ: [ತನ್ನ ಜೇಬಿನಿಂದ ಪುಸ್ತಕ ತೆಗೆಯುತ್ತ, ಅದನ್ನೇ ನೋಡಿಕೊಂಡು ಡಯಲ್ ಮಾಡುವನು] ಏನೂ ಯೋಚನೆ ಮಾಡಬೇಡಿ ಸರಸ್ವತಿ, ಎಲ್ಲಾ ಸರಿಗೋಗುತ್ತೆ. 440 ಆಮೇಲೆ ಏನಂದ್ರಿ? 

ಸರಸು: 0100

ಮಹೇಶ: [ಇನ್ನೂ ತನ್ನ ಪುಸ್ತಕವನ್ನೇ ನೋಡಿಕೊಂಡು] 0100. ನೀವೇನು ಚಿಂತೆ ಮಾಡ ಬೇಡಿ ನಾನು ಈ ಪೋಲೀಸ್ ಕೆಲಸ ಮುಗಿಸಿ ಸ್ವಲ್ಪ ನಿಧಾನವಾಗಿಯೇ ಹೊರಡುತ್ತೀನಿ. ಹಾ.. ಹಲೋ ಪೋಲೀಸ್ ಸ್ಟೇಶನ್ನಾ....?

ಸರಸು: ಅಬ್ಬ ಸಧ್ಯ! ಥ್ಯಾಂಕ್ಸ್. 

[ lights dim and brighten indicating passage of time ]

 Act 2, Scene 3  

[ಚಂದ್ರು ಪೋಲೀಸ್ ಇನ್ಸ್‍ಪೆಕ್ಟರ್ ವೇಷದಲ್ಲಿ, ತನಿಖೆ ಮಾಡುತ್ತಿರುತ್ತಾನೆ, ಮಹೇಶ ಅವನ ಹಿಂದೆ ಹೋಗುತ್ತಾನೆ, ಸರಸು ಕೂತಿರುತ್ತಾಳೆ ]

ಮಹೇಶ: ಆದರೆ ಇನ್ನು ಸ್ವಲ್ಪವೇ ಹೊತ್ತಲ್ಲಿ ನಾನು ಹಾಸನಕ್ಕೆ ಹೊರಡಬೇಕು. 

ಚಂದ್ರು: ಹಾಗಾದರೆ ನಿಮ್ಮ ಮನೆಗೆ ನುಗ್ಗಿದ ಮನುಷ್ಯ ಸಿಕ್ಕಿದರೆ ಅವನನ್ನು ಯಾರು ಗುರುತಿಸುತ್ತಾರೆ? ಅವನನ್ನು ಶಿಕ್ಷೆ ಕೊಡಿಸೋಕ್ಕೆ ಇಷ್ಟವಲ್ಲವೇ ನಿಮಗೆ? [ಸ್ವಲ್ಪ ತಡದ ನಂತರ] ಮೇಲಿನ ಮನೆಯವರು ಗುರುತಿಸಬಹುದೇ? 

ಸರಸು: ಉಹೂಂ - ಅಲ್ಲಿ ತಾಯಿ ಮಗಳು ಇಬ್ಬರೇ ಇರೋದು. ಮಗಳು ಸ್ಕೂಲಿಗೆ ಹೋಗಿದ್ದಾಳೆ. ತಾಯಿ ಕೆಲಸಕ್ಕೆ ಹೋಗಿದ್ದಾರೆ. 

ಚಂದ್ರು: [ಮಹೇಶನನ್ನು ಕುರಿತು] ಆ ಮನುಷ್ಯ ಹೋಗಬೇಕಾದರೆ ಕೈಯಲ್ಲಿ ಏನೋ ಹಿಡಿದುಕೊಂಡಿದ್ದ ಅಂತ ಹೇಳಿದ್ರಾ?

ಮಹೇಶ: ಹೂಂ - ಎನೋ ಒಂದು ಬುಕ್ ತರಹ ಇತ್ತು. 

ಚಂದ್ರು: ಅದು ಏನಿರಬಹುದು ಅಂತ ಗೊತ್ತಿಲ್ಲ ನಿಮಗೆ? 

ಸರಸು: [ಹತಾಷಳಾಗಿ] ಉಹೂಂ! ಏನೂ ಅಂತ ಹೇಳಲಿ? 

ಚಂದ್ರು: [ಮಹೇಶನಿಗೆ] ಸರಿ ನಿಮ್ಮ ಅಡ್ರಸ್ ಕೊಡಿ - ಅಕಸ್ಮಾತು ನಿಮ್ಮನ್ನ ಕಾನ್ಟ್ಯಾಕ್ಟ್ ಮಾಡಬೇಕಾದರೆ. 

ಮಹೇಶ: [ಜೇಬಿನಿನ್ಂದ ಕಾರ್ಡ್ ತೆಗೆದು ಕೊಡುತ್ತ] ಇಗೋ ತೊಗೊಳಿ. 

ಚಂದ್ರು: ಕ್ಷಮಿಸಿ ಸರಸ್ವತಿಯವರೆ, ಇಲ್ಲಿ ಸೊಲ್ಪ ಕತ್ತಲಾಗಿದೆ. [ blinds/curtain ತೆಗೆಯುತ್ತಾನೆ] 

[ಸರಸು ನಿಂತಿರುವ lamp ಮುಟ್ಟಿ ನೋಡಿ ಕೈತಿರುಚುವಳು]

ಚಂದ್ರು: ಸರಿ ಹಾಗಿದ್ದರೆ. ನಾನಿನ್ನು ಹೊರಡುತ್ತೀನಿ. ಏನಾದರು ಪತ್ತೆಯಾದರೆ ನಿಮಗ ತಿಳಿಸುತ್ತೇವೆ. ಏನಾದರು ಕಳೆದು ಹೋಗಿರುವುದು ಗೊತ್ತಾದರೆ ನನಗೆ ಫೋನ್ ಮಾಡಿ ತಿಳಿಸಿ.

ಸರಸು: ಖಂಡಿತ ಮಾಡ್ತೀವಿ. ತುಂಬಾ ಥ್ಯಾಂಕ್ಸ್!

ಚಂದ್ರು ನಮ್ಮ ಕೆಲಸ ಬಿಡಿ [ಬಾಗಿಲ ಆಚೆ ಹೋಗುವನು, ಫೋನ್ ಕೂಗುವುದು, ಸರಸು ಎತ್ತಿಕೊಳ್ಳುವಳು]

ಸರಸು: ಹಲೋ?... ಹಾ ಹೌದು... ಹೂಂ ಬಂದಿದ್ದರು - ಈಗಷ್ಟೇ ಹೊರಟರು, ತಾಳಿ ನೋಡ್ತೀನಿ. [ಗಟ್ಟಿಯಾಗಿ] ಇನ್ಸ್‍ಪೆಕ್ಟರ್ ಚಂದ್ರು? ಇನ್ಸ್‍ಪೆಕ್ಟರ್ ಚಂದ್ರು? ನಿಮಗೆ ಫೋನ್ ಬಂದಿದೆ. 

ಮಹೇಶ: ನಾನು ಕರೀತೀನಿ ತಾಳಿ. [ಗಟ್ಟಿಯಾಗಿ] ಇನ್ಸ್‍ಪೆಕ್ಟರ್.... ಇನ್ಸ್‍ಪೆಕ್ಟರ್.... [ಬಾಗಿಲ ಬಳಿ ಹೋಗುವನು]

[ಚಂದ್ರು ಹಿಂತಿರುಗಿ ಬರುತ್ತ ಸರಸು ಕೈನಿಂದ ಫೋನ್ ತೆಗೆದುಕೊಳ್ಳುವನು]

ಚಂದ್ರು: [ಫೋನ್ ಒಳಕ್ಕೆ] ಹಲೋ? ಇನ್ಸ್‍ಪೆಕ್ಟರ್ ಚಂದ್ರು ಮಾತಾಡ್ತಿದ್ದೀನಿ.... ಹಾ ಹೇಳಿ ಸಾರ್ [ಸಲ್ಯುಟ್ ಹೊಡೆಯುವನು] .. ಹೌದಾ ಸಾರ್ ... ಮುದುಕ ನಾ? ಇಲ್ಲಿಂದ ಬಂದಂತಾ? .... ಗೊಂಬೆ ಆಂತ ಹೇಳಿದ್ರಾ? .... ಅಲ್ಲ ಎಂಥ ಗೊಂಬೆ? [ಸರಸು ಎದೆಯ ಮೇಲೆ ಕೈಯಿಟ್ಟುಕೊಳ್ಳುವಳು] ಹೌದಾ? ಐದು ನಿಮಿಷ ಸಾರ್ ನಾನು ವಿಚಾರಣೆ ಮಾಡಿ ಬರ್ತೀನಿ.... ಯೆಸ್ ಸಾರ್! [ಮತ್ತೆ ಸಲ್ಯುಟ್] 

ಸರಸು: ಆತ ಸಿಕ್ಕಿದರೇ? ನಮ್ಮ ಮನೆಗೆ ನುಗ್ಗಿದವರು...? 

ಚಂದ್ರು: ಮೇಡಮ್ - ನಿಮಗೆ ಒಂದು ವಿಚಾರ ಹೇಳಬೇಕಿತ್ತು - ಸುಮ್ಮನೇ ಆತಂಕ ಪಡಿಸೋದು ಬೇಡ ಅಂದುಕೊಂಡಿದ್ದೆ, ಆದರೆ... ಇಲ್ಲೇ ಹತ್ತಿರದಲ್ಲಿ ಒಬ್ಬ ಹೆಂಗಸಿನ ಬಾಡಿ ಸಿಕ್ಕಿದೆ. ಯಾರೋ ಆಕೆನ ಕೊಲೆ ಮಾಡಿದ್ದಾರೆ.

ಸರಸು: ಗೊತ್ತು... ನಂಜನಗೂಡಿನವಳು....

ಚಂದ್ರು: [ಆಶ್ಚರ್ಯದಿಂದ] ಏನೂ? ಆಕೆ ನಿಮಗೆ ಗೊತ್ತೆ?

ಸರಸು: ಇಲ್ಲ - ಕೊಲೆ ವಿಚಾರ ಗೊತ್ತು - ಬೆಳಗ್ಗೆ ರೇಡಿಯೋಲಿ ಬರ್ತಿತ್ತು. 

ಚಂದ್ರು: ಓಹ್! ಹಾಗಾದರೆ ಆಕೆ ನಿಮ್ಮ ಗಂಡನಿಗೆ ಗೊತ್ತಿದ್ದಳೆ? 

ಮಹೇಶ: ಸೋಮುಗೂ ಗೊತ್ತಿರಲಿಲ್ಲ, ಇನ್ಸ್‍ಪೆಕ್ಟರ್!

ಚಂದ್ರು: ಕ್ಷಮಿಸಿ ಮಿ. ಮಹೇಶ್! ನಾವು ವಿಚಾರಣೆ ಮಾಡಬೇಕು. ನಿಮಗೆ ಗೊತ್ತಿದ್ದಳೇ? 

ಮಹೇಶ: [ತಬ್ಬಿಬ್ಬಾಗಿ] ಹಾ?

ಚಂದ್ರು: ಮೇಡಮ್ - ನೆನ್ನೆ ರಾತ್ರೆ ನಿಮಗೆ ಏನಾದರೂ ವಿಚಿತ್ರವಾಗಿರೋದು ಕೇಳಿಸಿತೇ? 

ಸರಸು: ಇಲ್ಲ - ಗೊತ್ತಿಲ್ಲ - ನಾವು ನೆನ್ನೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ವಿ. ಬರೋ ಹೊತ್ತಿದೆ ತಡವಾಗಿತ್ತು.....

ಚಂದ್ರು: ಅಷ್ಟು ಹೊತ್ತು ಇಬ್ಬರೂ ಒಟ್ಟಿಗೆ ಇದ್ದಿರಾ? 

ಸರಸು: ಉಹೂಂ - ಸೋಮುಗೆ - ನನ್ನ ಗಂಡನಿಗೆ - ಬೇರೆ ಕೆಲಸ ಇತ್ತು. ನನ್ನನ್ನ ಅಲ್ಲಿ ಬಿಟ್ಟು ಆಪೀಸ್ ಕೆಲಸವಾಗಿ ಹೋಗಿದ್ದರು. 

ಚಂದ್ರು: ಹಾಗಾದರೆ ನಿಮ್ಮ ಗಂಡ ಆ ಹೊತ್ತಿನಲ್ಲಿ ಇಲ್ಲಿಗೇ ಬಂದಿರಬಹುದೇ? 

ಮಹೇಶ: ಏನು? ಏನು, ಇನ್ಸ್‍ಪೆಕ್ಟರ್? ಏನು ಮಾತನಾಡ್ತಾ ಇದ್ದೀರ ನೀವು? 

ಸರಸು: ಉಹೂಂ... ಅವರಿಗೆ ಏನೋ ಆಫೀಸ್ ಕೆಲಸ ಇತ್ತು.... 

ಮಹೇಶ: ವಿಚಾರಣೆ ನಡಸ್ತಾ ಇದ್ದೀರಾ, ಇನ್ಸ್‍ಪೆಕ್ಟರ್? ಹಾಗಿದ್ದರೆ ಅವರ ಲಾಯರ್‌ನ ಕರೀಬೇಕಾದೀತು. 

ಚಂದ್ರು: ಉಹೂಂ ಇಲ್ಲ ಏನೂ ವಿಚಾರಣೆ ಇಲ್ಲ. ನೀವು ಲಾಯರ್ರಾ, ಮಿ. ಮಹೇಶ್? 

ಮಹೇಶ: ಉಹೂಂ - ನಾನು ಲಾಯರ್ ಅಲ್ಲ!

ಚಂದ್ರು: ಅಂದುಕೊಂಡೆ! ನನಂದುಕೊಂಡೆ ಹಗೇ ಅಂತ. ಎನಿವೇ - ನಾನಿನ್ನು ಬರ್ತೀನಿ. ಮಿ. ಮಹೇಶ್ ನಾವು ವಿಚಾರಣೆ -- ಆ ಮುದುಕ ಇವರ ಮನೆಗೆ ನುಗ್ಗಿದ ವಿಚಾರಣೆ -- ಮಾಡಬೇಕಾದರೆ ನಿಮ್ಮನ್ನ ಕರೆಸಬೇಕಾಗಬಹುದು. [ಹೊರಗೆ ಹೋಗುವನು].

ಮಹೇಶ: [ಚೇರ್ ಒಂದರ ಮೇಲೆ ಕುಸಿಯುತ್ತ] ಇವನೂ ಒಬ್ಬ ಇನ್ಸ್‍ಪೆಕ್ಟರ್ರಾ? ಆ ಮುದುಕ ಇಷ್ಟು ಹೊತ್ತಿಗೆ ಮಂಡ್ಯಾ ದಾಟಿರ್ತಾನೆ!

ಸರಸು: [ಚೇರೊಂದರ ತುದಿಯಲ್ಲಿ ಕೂರುತ್ತ] ನನಗ್ಯಾಕೋ ಭಯವಾಗ್ತಾ ಇದೆ. 

 Act 2, Scene 4 (continues)  

[ಮತ್ತೆ ಬಾಗಿಲು ಬಡಿಯುವ ಶಬ್ಧ] 

ಮಹೇಶ: ನಾನು ನೋಡ್ತೀನಿ - ಆ ಇನ್ಸ್‍ಪೆಕ್ಟರ್ ಆಗಿದ್ರೇ...

[ಬಾಗಿಲಲ್ಲಿ ರಾಜೇಶ - ಸ್ವಂತ ವೇಷದಲ್ಲಿ]

ರಾಜೇಶ: ನಮಸ್ಕಾರ, ನಾನ್ನ ಹೆಸರು ರಾಜೇಶ್. ಮಿ. ಶಾಮ್? 

ಮಹೇಶ: ನಾನು ಮಹೇಶ್; ಇದು ಶ್ರೀಮತಿ ಸರಸ್ವತಿ ಮತ್ತು ಶ್ರೀ ಸೋಮು ಅವರ ಮನೆ. 

ರಾಜೇಶ: ಸೋಮು-ಸರಸ್ವತಿ? ಹಾಗಾದರೆ ಇದು [ಸಣ್ಣ ಪುಸ್ತಕ ನೋಡಿಕೊಂಡು] ನಂಬರ್ ೨೨ ೧ನೇ ಕ್ರಾಸ್ ಕೃಷ್ಣಮೂರ್ತಿಪುರಂ ಅಲ್ವೇ? 

ಮಹೇಶ: ಹೌದು... ಆದರೆ..?

ರಾಜೇಶ: ಕ್ಷಮಿಸಿ - ಈಗ ಸ್ವಲ್ಪ ಹೊತ್ತಿನಲ್ಲಿ ಒಬ್ಬ ವಯಸ್ಸಾದವರು ಇಲ್ಲಿಗೆ ಬಂದಿದ್ದರೆ? 

ಮಹೇಶ: ಬಂದಿದ್ದರು ಅನ್ನಲಾರೆ, ನುಗ್ಗಿದ್ದರು....

[ರಾಜೇಶ, ಮಹೇಶ ಇಬ್ಬರೂ ಒಳಗೆ ಬರುವರು]

ಮಹೇಶ: ಮಿ. ರಾಜೇಶ್ - ಸರಸ್ವತಿಯವರಿಗೆ ಕಣ್ಣು ಕಾಣಿಸುವುದಿಲ್ಲ. 

ರಾಜೇಶ: ಓಹ್! [ಸರಸು ಕಡೆ ಹೋಗುವನು, ಆಕೆ ಅಂಜಿ ಹಿಂಜರಿಯುವಳು]

ಸರಸು: ಮಹೇಶ್!

ಮಹೇಶ: [ಸರಸು ಬಳಿ ಹೋಗುತ್ತ] ಹೇಳಿ ಸರಸ್ವತಿ. ಕೂತ್ಕೊಳ್ತೀರಾ? 

ರಾಜೇಶ: ಕ್ಷಮಿಸಿ ಮಿ. ಮಹೇಶ್, ಸರಸ್ವತಿಯವರೆ. ಆಗ ನಿಮ್ಮ ಮನೆಗೆ ಬಂದಿದ್ದವರು [ಮಹೇಶನ ಕಡೆ ತಿರುಗು] ನುಗ್ಗಿದವರು - ನಮ್ಮ ತಂದೆ. ಅವರ ಮಾನಸಿಕ ಸ್ಥಿತಿ ಸ್ವಲ್ಪ ಸರಿಯಾಗಿಲ್ಲ. ಅವರ ಪರವಾಗಿ ನಾನು ಕ್ಷಮೆ ಕೋರುತ್ತೀನಿ - ಆದರೆ ಅವರು ಯಾರಿಗು ಹಿಂಸೆ ಮಾಡುವಂಥವರಲ್ಲ್.

ಮಹೇಶ: ಏನೋಪ್ಪ - ಯಾರೋ ಮಿ. ಶಾಮ್‍ನ ಕೊಂದುಬಿಡ್ತೀನಿ ಅಂತ ಹೇಳ್ತಿದ್ದ್ರು

ರಾಜೇಶ: ನಮ್ಮ ತಂದೆ ಏನು ಹೇಳಿದರು? 

ಮಹೇಶ: ಯಾರೋ ಶಾಮ್ ಅವರ ಸೊಸೆ ತಂಟೆಗೆ ಬಂದರೆ ಅವನನ್ನ ಕೊಂದುಬಿಡ್ತೀನಿ ಅಂತ ಹೇಳಿದರು. 

ರಾಜೇಶ: ಅದನ್ನ ನಾನು ವಿವರಿಸುತ್ತೀನಿ, ಕೇಳಿ. ನಮ್ಮ ತಂದೆ ಈ ಮನೆಯಲ್ಲಿ ಯಾರೋ ಶಾಮ್ ಅನ್ನುವವರು ಇದ್ದಾರೆ ಅಂದುಕೊಂಡಿದ್ದಾರೆ. ಆ ಶಾಮ್‍ಗೂ, ನನ್ನ ಹೆಂಡತಿಗೂ ಏನೋ ಸಂಬಂಧ ಇದೆ ಅಂತ ನಮ್ಮ ತಂದೆಗೆ ಅನುಮಾನ. 

ಸರಸು: ಇಲ್ಲಿ ಶಾಮ್ ಇರ್ತಾರೆ ಅಂತ ಯಾರು ಹೇಳಿದರು ನಿಮಗೆ? 

ರಾಜೇಶ: ಕ್ಷಮಿಸಿ - ನೆನ್ನೆ ನನ್ನ ಹೆಂಡತಿ ಒಂದು ಗೊಂಬೆ ಶಾಮ್ ಕೈಯಲ್ಲಿ ಕೊಟ್ಟಿದ್ದೀನಿ ಅದನ್ನು ವಾಪಸ್ ಇಸ್ಕೋಬೇಕು ಅಂತ ಹೇಳಿ ಡ್ರೈವರ್ ಜೊತೆ ಈ ಅಡಸ್‍ಗೆ ಬಂದಳಂತೆ. 

ಸರಸು: [ಮತ್ತೆ ಎದೆಯಮೇಲೆ ಕೈಯಿಟ್ಟುಕೊಂಡು] ಗೊಂಬೆನೇ? 

ರಾಜೇಶ: ಹೂಂ ಹೌದು. ಸಾಮಾನ್ಯವಾದ ಗೊಂಬೆಯಲ್ಲ ಸಂಗೀತ ಹಾಡ್ತಿತ್ತು. [ಶಿಲ್ಲೆ ಹಾಕಿ ಸಂಗೀತ ಹಾಡುವನು] ಹಾಗೆ ಶಬ್ಧ ಮಾಡ್ತಿತ್ತು. ಅದನ್ನ ವಾಪಸ್ ತೊಗೊಳ್ಳೋಕ್ಕೆ ಈ ಅಡ್ರಸ್‍ಗೇ ಬಂದಳು ಅಂತ ಡ್ರೈವರ್ ನಮ್ಮ ತಂದೆಗೆ ಹೇಳಿದನಂತೆ. [blinds/curtain ತೆಗೆದು] ನೆನ್ನೆ ರಾತ್ರೆ ಅವಳು.. ಅವಳು ಮನೆಗೇ ಬರಲೇಯಿಲ್ಲ.  ಅದನ್ನ ಕೇಳಿ ನಮ್ಮ ತಂದೆ ಸೀದಾ ಇಲ್ಲಿಗೇ ಬಂದಿರಬೇಕು ಅಂತ ನಾನು ಅವರ ಹಿಂದೆನೇ ಬಂದೆ.

ಸರಸು: [ಮೆಲ್ಲನೆ ದನಿಯಲ್ಲಿ] ಯಾರು? ಯಾರು ಮನೆಗೆ ಬರಲಿಲ್ಲ.

ರಾಜೇಶ: ನನ್ನ...ನನ್ನ ಹೆಂಡತಿ - ನನ್ನ ಲತ. 

[ಫೋನ್ ಕೂಗುವುದು. ರಾಜೇಶ ಕೈ ಎತ್ತಿ ಮಹೇಶನನ್ನು ನಿಲ್ಲಿಸಿ ಸರಸು ಕಡೆ ಬೆರಳು ತೋರಿಸುವನು. ಸರಸು ಇನ್ನೂ ಶಾಕ್ ನಲ್ಲೇ ಇದ್ದಾಳೆ]

ಮಹೇಶ: ಸರಸ್ವತಿ - ಫೋನ್ ನೋಡ್ತೀರಾ? ಅಥವಾ ನಾನೇ ನೋಡಲೇ? 

[ಸರಸು ಇನ್ನೂ ಏನೂ ಮಾತನಾಡುವುದಿಲ್ಲ. ಮಹೇಶ ಫೋನ್ ತೆಗೆಯುತ್ತಾನೆ]

ಮಹೇಶ: ಹಲೋ? ಯಾರು? .... ಓಹ್ ಇನ್ಸ್‍ಪೆಕ್ಟರ್ ಚಂದ್ರು ಹೇಳಿ. ನಾನು ಮಹೇಶ್... ಏನು? ಆ ಮುದುಕನ - ಸರಸ್ವತಿ ಮನೆಗೆ ನುಗ್ಗಿದ ಮನುಷ್ಯನ ವಿಚಾರವೇ? ಅದೆಲ್ಲ ಇತ್ಯರ್ಥವಾಯಿತು ಬಿಡಿ. ಅವರ ಮಗೆ ಇಲ್ಲೇ ಇದ್ದಾರೆ - ಮಿ. ರಾಜೇಶ್. [ಫೋನ್ ರಾಜೇಶನಿಗೆ ಕೊಡುತ್ತ] ನಿಮ್ಮ ಹತ್ತಿರ ಮಾತನಾಡಬೇಕಂತೆ. 

ರಾಜೇಶ: [ಮೆಲು ದನಿಯಲ್ಲಿ, ತಲೆಯಾಡಿಸುತ್ತ] ನಾನು ಹೊರಟುಹೋದೆ ಅಂತ ಹೇಳಿ. [ತಿರುಗುವನು] 

ಮಹೇಶ: ನಿಮ್ಮ ಹೆಂಡತಿಯ ವಿಚಾರವಂತೆ [ಸರಸು ತಿರುಗುತ್ತಾಳೆ]

ರಾಜೇಶ: ಹಲೋ?.... ಅವಳು.. ಕ್ಷೇಮವಾಗಿದ್ದಾಳೆಯೆ? ... ಉಹೂಂ ಈಗಲೇ ಹೇಳಿ. [ಫೋನ್ ಗಟ್ಟಿಯಾಗಿ ಹಿಡಿಯುವನು, ನಂತರ ಫೋನ್ ಕೆಳಗೆಸೆದು ಓಡುತ್ತ ಹೊರಗೆ ಹೋಗುವನು]

ಮಹೇಶ: [ಗಟ್ಟಿಯಾಗಿ] ಮಿ. ರಾಜೇಶ್... ಮಿ. ರಾಜೇಶ್. [ಸ್ವಗತ] ಅಪ್ಪ ಮಗ ಒಂದೇ ತರಹ [ಫೋನ್ ಒಳಕ್ಕೆ] ಹಲೋ? [ಕೆಳಗಿಟ್ಟು, ಬಾಗಿಲ ಕಡೆ ಹೋಗುವನು]

ಸರಸು: ಮಹೇಶ್! ಹೋಗಬೇಡಿ ಪ್ಲೀಸ್! ತುಂಬ ಭಾಯವಾಗ್ತಾ ಇದೆ!

ಮಹೇಶ: ನಾನೆಲ್ಲೂ ಹೋಗ್ತಿಲ್ಲ ಸರಸ್ವತಿ. ಬಾಗಿಲು ಹಾಕಿ ಬರ್ತೀನಿ. ಒಳ್ಳೆ ಅಪ್ಪ-ಮಗ. ಅಪ್ಪ ಅಲ್ಲಿ ಪೋಲೀಸ್ ಸ್ಟೇಶನ್‍ಗೆ ಹೋದನಂತೆ. ಇಲ್ಲಿ ರಾಜೇಶ್ ಹೆಂಡತಿಗೆ ಏನೋ ಆಕ್ಸಿಡೆಂಟ್ ಆಗಿದೆ....

ಸರಸು: [ನಿಧಾನವಾಗಿ] ಆಕ್ಸಿಡೆಂಟ್ ಅಲ್ಲ ಮಹೇಶ್! ಅವಳು ಸತ್ತು ಹೋಗಿದ್ದಾಳೆ! ಅವಳ ಕೊಲೆಯಾಗಿದೆ!

ಮಹೇಶ: ಏನು? ಏನಂದ್ರಿ?

ಸರಸು: ನೆನ್ನೆ ರಾತ್ರಿಯಷ್ಟೇ ಇಲ್ಲೇ ಹತ್ತಿರದಲ್ಲಿ ಅವಳ ಕೊಲೆಯಾಗಿದೆ. ಆ ಇನ್ಸ್‍ಪೆಕ್ಟರ್ ಹೇಳ್ತಿದ್ದ ಕೊಲೆ... ಅವಳೇ... 

ಮಹೇಶ: ಛೆ ಛೆ! ಇಬ್ಬರೂ ಒಬ್ಬರೇ ಆಗಿರಲಾರರು. ಕಾಕತಾಳೀಯವಷ್ಟೆ!

ಸರಸು: ಇಲ್ಲ... ಇಲ್ಲ ಮಹೇಶ್! ಇಬ್ಬರೂ ಒಬ್ಬರೆ. ಅವಳೇ ಆ ರಾಜೇಶ್ ಹೆಂಡತಿ ಲತ!

ಮಹೇಶ: ಇಷ್ಟು ಹೊತ್ತೂ ನಿಮಗೆ ಆ ವಿಚಾರ ಗೊತ್ತಿತ್ತೇ? ಇನ್ಸ್‍ಪೆಕ್ಟರ್‌ಗೆ ಯಾಕೆ ಹೇಳಲಿಲ್ಲ ಈ ವಿಚಾರ? 

ಸರಸು: ಇಲ್ಲ ಮಹೇಶ್, ನನಗೆ ಗೊತ್ತಿರಲಿಲ್ಲ! ಈಗಷ್ಟೇ ಫೋನಿನಲ್ಲಿ ಮಾತಾಡ್ತಿದ್ದಾಗ ಹೊಳೀತು.

ಮಹೇಶ: ಅಯ್ಯೋ! ಏನೇನೋ ಯೋಚನೆ ಮಾಡಬೇಡಿ - ಆ ರಾಜೇಶ್‍ನೇ ಹೇಳಿದನಲ್ಲ ಅವರಪ್ಪನಿಗೆ ಸೊಲ್ಪ ತಿಕಲು ಅಂತ. 

ಸರಸು: ಇಲ್ಲ ಆದರೆ ಮೊನ್ನೆ ಬಿಸಿನೆಸ್ ಟ್ರಿಪ್ ಹೋಗಿದ್ದಾಗ ಸೋಮು ಅಂಥದ್ದೇ ಒಂದು ಗೊಂಬೆ ತಂದಿದ್ದರು. 

ಮಹೇಶ: ಛೆ-ಛೆ! ಅದೇ ಗೊಂಬೆ ಆಗೋಕ್ಕೆ ಸಾಧ್ಯವೇ? ಬೇರೆ ಇರಬೇಕು!

ಸರಸು: ಅದೇ ತರಹ ಸಂಗೀತ ಹಾಡ್ತಿತ್ತು. ಸೋಮು ಬಂದಮೇಲೆ ಸೂಟ್ಕೇಸ್ ತೆಗೀತಿದ್ದಾಗ ನನ್ನ ಕೈ ತಾಕಿ ಆ ಗೊಂಬೆ ಕೆಳಗೆ ಬಿತ್ತು. ಆಗ ಅದೇ ಹಾಡು ಹಾಡ್ತಿತ್ತು. ನನಗೆ ಸರ್‌ಪ್ರೈಸ್‍ಆಗಿ ತಂದಿದ್ದಾರೆ ಅಂದುಕೊಂಡೆ. ಆದರೆ ಯಾರೋ ಲತ ಅನ್ನೋಳು ಕೈತುಂಬಾ ಲಗೇಜ್ ಇತ್ತು ಅದಕ್ಕೆ ಅವರ ಕೈಗೆ ಕೊಟ್ಟಳು ಅಂತ ಸೋಮು ಹೇಳಿದ್ರು. ಆಕೆ - ರಾಜೇಶನ ಹೆಂಡತಿ - ನೆನ್ನೆ ಇಲ್ಲಿಗೂ ಬಂದಿದ್ದಳು. ಆದರೆ ಆ ಗೊಂಬೆ ಕಾಣೆಯಾಗಿದೆ. 

ಮಹೇಶ: ಇರಬಹುದು ಅದಕ್ಕೇನಂತೆ. 

ಸರಸು: [ಫೋಟೋ ಇಟ್ಟಿದ್ದ ಸೈಡ್ ಟೇಬಲ್ ತಡವರಿಸುತ್ತ] ಮಹೇಶ್ ಈ ಟೇಬಲ್ ಮೇಲೆ ಒಂದು ಫೋಟೋ ಇತ್ತು - ನನ್ನ ಸೋಮುವಿನ ಫೋಟೋ ಕಾಣಿಸುತ್ತಿದೆಯೇ? 

ಮಹೇಶ: ಉಹೂಂ - ಯಾವ ಫೋಟೋನೂ... ಅರ್ರೆ - ಆ ಮುದುಕ ಆ ಫೋಟೋವನ್ನೇ ತೊಗೊಂಡು ಹೋಗಿದ್ದು. ತಾಳಿ ಈಗಲೇ ಆ ಇನ್ಸ್‍ಪೆಕ್ಟರ್ ಚಂದ್ರು‍ಗೆ ಫೋನ್ ಮಾಡಿ ಹೇಳೋಣವಂತೆ. 

ಸರಸು: ನೋ ನೋ - ಬೇಡ ಮಹೇಶ್ - ನಾವು ಪೋಲೀಸ್‍ಗೆ ಇನ್ನು ಏನೂ ಹೇಳಬಾರದು. ಇನ್ಸ್‍ಪೆಕ್ಟರ್ ಫೋನ್ ನಲ್ಲಿ ಏನೋ ಗೊಂಬೆಯ ವಿಚಾರ ಮಾತನಾಡಿದರು. ಆಮೇಲೆ ಸೋಮು ಬಗ್ಗೆ ಏನೇನೊ ಪ್ರಶ್ನೆ ಕೇಳಿದರು. ರಾಜೇಶ್ ಬೇರೆ ಏನೇನೋ ಕತೆ ಹೇಳಿದರು. ಈಗ ನಮ್ಮ ಫೋಟೋ ಕಾಣೆಯಾಗಿದೆ. ನನಗನ್ನಿಸುತ್ತೆ - ನನಗನ್ನಿಸುತ್ತೆ ಪೋಲೀಸ್‍ಗೆ ಸೋಮುನೇ ಲತಾಳ ಕೊಲೆ ಮಾಡಿದ್ದಾರೆ ಅಂತ ಅನುಮಾನ ಬಂದಿದೆ. 

ಮಹೇಶ: [ blinds/curtain ತೆಗೆದು] ಸರಸ್ವತಿ! ಆಚೆಕಡೆ ಒಂದು ಪೋಲೀಸ್ ವ್ಯಾನ್ ನಿಂತಿದೆ. ಈ ಕಡೆನೇ ನೋಡ್ತಿದ್ದಾರೆ. 

ಸರಸು: [ಮೆಲು ದನಿಯಲ್ಲಿ] ಆ ಗೊಂಬೆ! ಅದೇ ಈ ಎಲ್ಲಾ ಕನ್‍ಫ್ಯೂಶನ್ ಮಧ್ಯೆ ಇರೋದು. ಅದು ಪೋಲೀಸ್ ಕೈಗೆ ಸಿಕಬಾರದು. ಆದರೆ ಎಲ್ಲಿದೆ ಅಂತ ಗೊತ್ತಿಲ್ಲ. 

 Act 2, Scene 5  

[lights dim and brighten indicating passage of time ]

ಮಹೇಶ: ಒಂದು ಘಂಟೆಯಿಂದ ಹುಡುಕಿ ಹುಡುಕಿ ಸುಸ್ತಾಯಿತು. ಆ ಗೊಂಬೆಯ ಪತ್ತೆಯೂ ಇಲ್ಲ. ಇನ್ನು ಎಲ್ಲಿರಬಹುದು ನೆನಪಿಸಿಕೊಳ್ಳಿ ಸರಸ್ವತಿ!

ಸರಸು: ನಾನೂ ನನಗೆ ತೋಚುವ ಕಡೆಯೆಲ್ಲ ಹೇಳಿಯಾಯಿತು. ನನಗೂ ಏನೂ ಗೊತ್ತಾಗುತ್ತಿಲ್ಲ. ಹೂಂ ಒಂದು ನಿಮಿಷ [ಒಳಗೆ ಹೋಗಿ ಒಂದು ಸಣ್ಣ ಸೂಟ್‍ಕೇಸ್/ಡಬ್ಬ/ಕಾರ್ಟನ್ ಬಾಕ್ಸ್ ತರುವಳು] ಇದರಲ್ಲಿ ಏನಾದರೂ...? 

ಮಹೇಶ: [ತೆಗೆದು ನೋಡುತ್ತ] ಉಹೂಂ. ಇದರಲ್ಲಿ ಬರೀ ಪೇಪರ್ ಇದೆ. ಸೋಮು ಪೇಪರ್ಸ್ ಅನ್ಸುತ್ತೆ - ಏನೋ ಟೆನಿಕಲ್ ಆಗಿದೆ. 

ಸರಸು: [lamp ಹಿಡಿದು ನಿಂತಿರುವಳು. ಸ್ವಿಚ್ ಮುಟ್ಟಿ ನೋಡುತ್ತ] ನಿಮಗೆ ಓದೋಕ್ಕೆ ಕಾಣಿಸುತ್ತಿದೆಯೆ? [ಸ್ವಿಚ್ ಆರಿಸಿ/ಹಾಕಿ] ಲೈಟ್ ಆನ್/ಆಫ್ ಆಗ್ತಿದೆಯೇ? ಈ ಲೈಟ್ ಇಷ್ಟು ಹೊತ್ತೂ ಆನ್ ಆಗಿತ್ತೋ ಆಫ್ ಆಗಿತ್ತೋ? 

ಮಹೇಶ: ಆನ್ ಆಗಿತ್ತು. 

ಸರಸು: ವಿಚಿತ್ರ. ಆಗ ಕತ್ತಲಾಗಿದೆ ಅಂತ ಇನ್ಸ್‍ಪೆಕ್ಟರ್ ಚಂದ್ರು ಕಿಟಕಿ ತೆಗೆದರು.... ಆಮೇಲೆ... ಆಮೇಲೆ ರಾಜೇಶ್ ಕೂಡ ಕಿಟಕಿ ತೆಗೆದರು. 

ಮಹೇಶ: ಹೌದೇ? 

ಸರಸು: ಹೂಂ... ರಾಜೇಶ್ ಬಂದಾಗ ನನಗೆ ಭಯವಾಯಿತು ನೆನಪಿದೆಯಾ? ಒಂದು ನಿಮಿಷ ನಾನು ಅವರ ತಂದೆ ಮತ್ತೆ ಬಂದರೇನೋ ಅಂದುಕೊಂಡೆ. ಇಬ್ಬರದ್ದೂ ಒಂದೇ ತರಹ ಶೂ ಶಬ್ಧ ಕೇಳಿಸ್ತಿತ್ತು. 

ಮಹೇಶ: [ನಗುತ್ತ] ಒಂದೇ ತರಹ ಶೂ ಇರಬಹುದು... 

ಸರಸು: ಉಹೂಂ.... ಮಹೇಶ್ ಮತ್ತೆ ನೋಡ್ತೀರ ಇನ್ನೂ ಪೋಲೀಸ್ ವ್ಯಾನ್ ಆಚೆನೇ ನಿಂತಿದೆಯಾ ಅಂತ? 

ಮಹೇಶ: [ಬಗ್ಗಿ ನೋಡಿ] ಹೂಂ ನಿಂತಿದೆ

ಸರಸು: ಈಗ ಒಳಗಿರೋರು ಯಾರಾದರೂ ಕಾಣಿಸ್ತಾರಾ ನೋಡಿ - ಅದರಲ್ಲೂ ಮಿ. ರಾಜೇಶ್ ಕಾಣಿಸ್ತಾರ ನೋಡಿ. ಅವರೂ ಪೋಲೀಸ್ನವರೇ ಇರಬೇಕು ಅಂತ ಅನ್ಸುತ್ತೆ ನನಗೆ. ಲತ ಕೊಲೆ ಮಾಡಿರೋದು ಸೋಮುನೇ ಅಂತ ಪೋಲೀಸರಿಗೆ ಅನುಮಾನ ಇದ್ದರೆ ಸೋಮುನ ಸಿಕ್ಕಿ ಹಾಕಿಸೋದಕ್ಕೆ ಪ್ರಯತ್ನ ಮಾಡ್ತಿರಬಹುದು. 

ಮಹೇಶ: ಛೆ-ಛೆ! ಪೋಲೀಸರು ಹಾಗೆಲ್ಲ ಕೆಲಸ ಮಾಡೋದಿಲ್ಲ. 

ಸರಸು: ಎನೇ ಆಗಲಿ. ನನ್ನ ಸೋಮು ನನಗೆ ಗೊತ್ತು. ಆ ರಾಜೇಶನಿಗಿಂತ ನನ್ನ ಸೋಮು ಮೇಲೆ ನನಗೆ ನಂಬಿಕೆ. ಅವರು ಇಂತಹ ಕೆಲಸ ಮಾಡಿಲ್ಲ ಅಂತ ನನಗೆ ಭರವಸೆ ಇದೆ. 

ಮಹೇಶ: ಆ ಗೊಂಬೆ ಮತ್ತೆಲ್ಲಿ ಇರಬಹುದು? ಬೇರೆ ಎಲ್ಲಾದ್ರು...? 

ಸರಸು: ಉಹೂಂ - ನನಗಿನ್ನೇನೂ ತೋಚುತ್ತಿಲ್ಲ. 

ಮಹೇಶ: ಸರಿ ಹಾಗಿದ್ದರೆ ನಾನು ಬರ್ತೀನಿ. ನನ್ನ ಸಾಮಾನು ನನ್ನ ಹೊಟೇಲ್‍ನಲ್ಲೇ ಇದೆ. ರೂಮ್ ಖಾಲಿ ಮಾಡಬೇಕು ಮಾಡಿಕೊಂಡು ಮತ್ತೆ ಬರ್ತೀನಿ. 

ಸರಸು: ಹಾಗಾದರೆ ನಿಮ್ಮ ಫೋನ್ ನಂಬರ್ ಕೊಡಿ. 

ಮಹೇಶ: ಯಾವ ಫೋನ್ ನಂಬರ್. 

ಸರಸು: ನಿಮ್ಮ ಹೊಟೇಲ್ ಫೋನ್ ನಂಬರ್. ಗೊಂಬೆ ಸಿಕ್ಕಿದರೆ ಫೋನ್ ಮಾಡ್ತೀನಿ. 

ಮಹೇಶ: [ಬುಕ್ ತೆಗೆದು ನೋಡಿ] 441-6349 [ತಿರುಗಿ ಹೊರಡುವನು]

ಸರಸು: ಮಹೇಶ್! [ಮಹೇಶ ತಿರುಗುವನು] ತುಂಬಾ ಥ್ಯಾಂಕ್ಸ್! ಇವತ್ತು ನೀವಿಲ್ಲದಿದ್ದರೆ ಏನು ಮಾಡುತ್ತಿದ್ದೆನೋ ನನಗೇ ಗೊತ್ತಿಲ್ಲ! [ಮಹೇಶ ಹೋಗುವನು]

 Act 2, Scene 6  

[ಗೌರಿ ಗೊಂಬೆ ಹಿಡಿದುಕೊಂಡು ಬರುವಳು. ಸರಸು ಏನಾದರೂ ಕೆಲಸ ಮಾಡುತ್ತಿರುತ್ತಾಳೆ (ಹುಡುಕುತ್ತಿರುತ್ತಾಳೆ?) ಗೌರಿ ಗೊಂಬೆಯನ್ನು ಸೋಪಾ/ಟೇಬಲ್/ಛೇರ್ ಕೆಳಗೆ ತಳ್ಳುತ್ತಾಳೆ] 

ಸರಸು: ಯಾರದು? ಗೌರೀ? 

ಗೌರಿ: ಹೂಂ - ನಾನೇ ಅಕ್ಕ. 

ಸರಸು: ಅಬ್ಬ ಅಂತೂ ಬಂದೆಯಾ! ಎಷ್ಟು ಹೊತ್ತಿನಿಂದ ಕಾಯ್ತ ಇದ್ದೆ ನಿನಗೆ. 

ಗೌರಿ: ಆಗಲೇ ನಿಮ್ಮ ಮನೆಗೆ ಪೋಲೀಸರು ಬಂದಿದ್ರಾ, ಅಕ್ಕ? 

ಸರಸು: ಹೂಂ ಬಂದಿದ್ದರು. 

ಗೌರಿ: ನೆನ್ನೆ ಕೊಲೆಯಾಯಿತಲ್ಲ ಆದಕ್ಕ? 

ಸರಸು: [ಕಿಟಕಿಯ ಬಳಿ ಹೋಗುತ್ತ] ಪುಟ್ಟ, ಬಾಯಿಲ್ಲಿ. [ಗೌರಿ ಬರುವಲು] ಆಚೆ ಕಡೆ ನೋಡು ಪೋಲೀಸ್ ವ್ಯಾನ್ ಏನಾದರೂ ಕಾಣಿಸ್ತಿದಿಯಾ ಅಂತ. 

ಗೌರಿ: ಉಹೂಂ. ಯಾವ ಪೋಲೀಸ್ ವ್ಯಾನೂ ಇಲ್ಲ. 

ಸರಸು: ಸರಿಯಾಗಿ ನೋಡು

ಗೌರಿ: ಇಲ್ಲ ಅಕ್ಕ ಯಾವ ಪೋಲೀಸ್ ವ್ಯಾನೂ ಇಲ್ಲ. 

ಸರಸು: ಈಗ ಸ್ವಲ್ಪ ಹೊತ್ತಿನಲ್ಲಿ ಅಲ್ಲೇ ಇತ್ತು - ಹೋಗಲಿ ಯಾರಾದರೂ ಪೋಲೀಸ್‍ನೋರು ನಿಂತಿದ್ದಾರಾ ನೋಡು. 

ಗೌರಿ: ಇಲ್ಲ ಅಕ್ಕ ಯಾರೂ ಪೋಲೀಸ್‍ನೋರು ಇಲ್ಲ. 

ಸರಸು: ಏನು ವಿಚಿತ್ರ.... ಯಾರಾದ್ರು ಇಲ್ಲಿ ಈ ಮನೆ ಕಡೆ ನೋಡ್ತಿದ್ದಾರಾ? 

ಗೌರಿ: ಇಲ್ಲ ಅಕ್ಕ ಯಾರೂ ಕಾಣಿಸ್ತಿಲ್ಲ. 

ಸರಸು: ಸರಿ ಬಿಡು - ಹೋಗಲಿ ರಸ್ತೆ ಮೂಲೆಲಿ ಫೋನ್ ಬೂತ್ ಇದೆಯಲ್ಲ ಕಾಣಿಸ್ತಿದೆಯಾ? 

ಗೌರಿ: ಹೂಂ ಅಕ್ಕ - ಫೋನ್ ಬೂತ್ ಅಲ್ಲೇ ಇದೆ. 

ಸರಸು: ಸರಿಯಾಗಿ ನೋಡು - ಆ ಫೋನ್ ಬೂತ್ ಹತ್ತಿರ ಯಾರಾದ್ರೂ ಇದಾರ ಅಂತ. 

ಗೌರಿ: ಇಲ್ಲ ಅಕ್ಕ ಯಾರೂ ಇಲ್ಲ - ಆದರೆ ಅಲ್ಲೊಂದು ಮಾರುತಿ ವ್ಯಾನ್ ನಿಂತಿದೆ. 

ಸರಸು: ಒಳಗಡೆ ಯಾರಾದರೂ ಕಾಣಿಸ್ತಿದ್ದಾರ? 

ಗೌರಿ: ಇಲ್ಲ ಅಕ್ಕ ಒಳಗೆ ತುಂಬಾ ಕತ್ತಲೆ ಏನೂ ಕಾಣಿಸ್ತಿಲ್ಲ [ಒಂದು ಕ್ಷಣದ ನಂತರ] ಹೂಂ ಅಕ್ಕ - ಯಾರೋ ಒಬ್ಬ ಇಳಿದು ಆಚೆ ಬಂದ. 

ಸರಸು: ಯಾರು ಪೋಲೀಸ್‍ನೋರಾ? 

ಗೌರಿ: ಇಲ್ಲ ಅಕ್ಕ ಪೋಲಿಸ್ ಬಟ್ಟ ಹಾಕಿಕೊಂಡಿಲ್ಲ. 

ಸರಸು: ಗೌರಿ ನನಗೆ ಸೊಲ್ಪ ಸಹಾಯ ಮಾಡ್ತೀಯಾ? ತುಂಬಾ ಕಷ್ಟದ ಕೆಲಸ. ಜೋಪಾನವಾಗಿ ಮಾಡಬೇಕು. 

ಗೌರಿ: ಮಾಡ್ತೀನಿ, ಅಕ್ಕ. ಏನು ಅಂತ ಹೇಳು. 

ಸರಸು: ಮೇಲೆ ನಿಮ್ಮ ಮನೆಯಿಂದ ಆ ಫೋನ್ ಬೂತ್ ಕಾಣ್ಸುತ್ತೆ ಅಲ್ವಾ?

ಗೌರಿ: ಹೂಂ - ಕಾಣ್ಸುತ್ತೆ. 

ಸರಸು: ನಮ್ಮ ಫೋನ್ ನಂಬರ್ ಬರ‍್ಕೋ. ಯಾರಾದರೂ ಫೋನ್ ಬೂತ್‍ನಿಂದ ಫೋನ್ ಮಾಡಿ ಆ ಮಾರುತಿ ವ್ಯಾನ್ ಒಳಕ್ಕೆ ಹೋದರೆ ನಮ್ಮ ಮನೆಗೆ ನೀನು ಫೋನ್ ಮಾಡು. ನಾನು ಎತ್ತೋದಿಲ್ಲ. ಎರಡು ಸರ್ತಿ ರಿಂಗ್ ಆದಮೇಲೆ ಕಟ್ ಮಾಡಿಬಿಡು. ಎರಡೇ ಸರ್ತಿ - ಕಡಿಮೆಯಲ್ಲ ಹೆಚ್ಚಲ್ಲ. ಮಾಡೋಕ್ಕೆ ಆಗುತ್ತಾ? 

ಗೌರಿ: ಒಂಥರ ಸಿಗ್ನಲ್ ಥರನಾ ಅಕ್ಕಾ? ಹೂಂ ಮಾಡ್ತೀನಿ. 

ಸರಸು: ಗೌರಿ, ಇನ್ನೊಂದು ವಿಚಾರ - ನಮ್ಮ ಮನೇಲಿ ಒಂದು ಗೊಂಬೆ ಇತ್ತು ನೆನಪಿದೆಯಾ? ಸಂಗೀತ ಹಾಡ್ತಿತ್ತು... ಅದು ಆ ಕೊಲೆಯಾದವಳ ಗೊಂಬೆಯಂತೆ. ಪೋಲೀಸರು ಅದನ್ನ ಹುಡುಕ್ತಿದ್ದಾರೆ. ಅದರಿಂದ ಸೋಮುಗೆ ಅಪಾಯವಾಗಬಹುದು. ಅದನ್ನ ನೀನೇನಾದರೂ ನೋಡಿದ್ದೀಯಾ? 

ಗೌರಿ: ಇಲ್ಲ ಅಕ್ಕ. ನೋಡಿಲ್ಲ. [ಗೌರಿ ನಿಧಾನವಾಗಿ ಗೊಂಬೆಯನ್ನು ಸೋಫಾ/ಟೇಬಲ್ ಅಡಿಗೆ ತಳ್ಳುತ್ತಾಳೆ. ಆದರೆ ಅಷ್ಟರಲ್ಲಿ ಗೋಮ್ಬೆ ಹಾಡು ಹಾಡುತ್ತದೆ]

ಸರಸು: ಗೌರಿ! ಆ ಗೊಂಬೆ.

[ಅಷ್ಟರಲ್ಲಿ ಬಾಗಿಲು ಬಡಿಯುವ ಶಬ್ಧ] 

ಸರಸು: ಗೌರಿ! ಬೇಗ ಬೇಗ - ಗೊಂಬೆನ ಎಲ್ಲಾದರು ಬಚ್ಚಿಡು [suitable hiding place] ನೀನು ಹಿಂದಿನ ಬಾಗಿಲಿಂದ ಆಚೆ ಹೋಗು. ಫೋನ್ ಬೂತ್ ನೋಡ್ಕೊಂಡು ಫೋನ್ ಮಾಡೋದು ಮರೀಬೇಡ! ಓಡು! [ಗೌರಿ ಓಡುತ್ತಾಳೆ] 

ಸರಸು: [ಬಾಗಿಲ ಕಡೆ ಹೋಗಿ] ಯಾರದು? 

ಚಂದ್ರು: ಇನ್ಸ್‍ಪೆಕ್ಟರ್ ಚಂದ್ರು.

ಸರಸು: [ಬಾಗಿಲು ತೆಗೆದು] ಏನು ಸಮಾಚಾರ ಇನ್ಸ್ಪೆಕ್ಟರ್? 

ಚಂದ್ರು: ಮಿ. ಸೋಮೂ ಬಂದರೆ? ಅವರ ಹತ್ತಿರ ಆ ಗೊಂಬೆಯ ವಿಚಾರ ಕೇಳಬೇಕಿತ್ತು. 

ಸರಸು: ಯಾವ ಗೊಂಬೆ? 

ಚಂದ್ರು: ಮಿ. ರಾಜೇಶ್ ಹೆಂಡತಿ ಲತ ನಿಮ್ಮ ಗಂಡ ಮಿ. ಸೋಮುಗೆ ಕೊಟ್ಟ ಗೊಂಬೆ [ಒಳಗೆ ಬರುತ್ತ] ಏನೋ ಹುಡುಕುತ್ತಿರೋ ಹಾಗಿದೆ? 

ಸರಸು: ಆ ಏನೂ ಇಲ್ಲ... ಸುಮ್ಮನೆ ಕ್ಲೀನ್ ಮಾಡ್ತಿದ್ದೆ. 

ಚಂದ್ರು: ಕ್ಲೀನ್? ಎಲ್ಲ ಮೊದಲಿಗಿಂತ ಗಲೀಜಾಗಿ ಕಾಣಿಸ್ತ ಇದೆ!

ಸರಸು: ಇನ್ಸ್‍ಪೆಕ್ಟರ್ - ನಿಮ್ಮ ಹತ್ತಿರ ಮಿ. ರಾಜೇಶ್ ಫೋನ್ ನಂಬರ್ ಏನಾದರೂ ಇದೆಯಾ? 

ಚಂದ್ರು: ಇದ್ದರೂ ನಾವು ಹಾಗೆಲ್ಲ ಕೊಡೋಕ್ಕೆ ಆಗೋದಿಲ್ಲ. 

ಸರಸು: ಸರಿ ಬಿಡಿ - ನಾನು ಪೋಲೀಸ್ ಸ್ಟೇಶನ್‍ಗೇ ಫೋನ್ ಮಾಡಿ ಕೇಳ್ತೀನಿ.  440-0100 

ಚಂದ್ರು: [ಲೈನ್ ಕಟ್ ಮಾಡುತ್ತ] ನನ್ನ ಹತ್ತಿರ ಇದೆ - ನಾನೇ ಅವರಿಗೆ ಫೋನ್ ಮಾಡ್ತೀನಿ ತಾಳಿ. [ಪುಸ್ತಕ ತೆಗೆದುಕೊಂಡು ಫೋನ್ ಮಾಡುತ್ತಾನೆ] ಹಾಂ. ಮಿ. ರಾಜೇಶ್? ಸರಸ್ವತಿಯವರು ನಿಮ್ಮ ಹತ್ತಿರ ಏನೋ ಮಾತನಾಡಬೇಕಂತೆ ತೊಗೊಳ್ಳಿ. [ಫೋನ್ ಸರಸ್ವತಿಯ ಕೈಗೆ ಕೊಡುತ್ತಾನೆ] 

ಸರಸು: [ಕೈಗೆ ಫೋನ್ ತೊಗೊಳುತ್ತ] ಮಿ. ರಾಜೇಶ್? ನಾನು ನಮ್ಮ ಲಾಯರ್‌ಗೆ ಫೋನ್ ಮಾಡಿದ್ದೇನೆ. ನಿಮ್ಮ ತಂದೆ ಏನಾದರು ಸೋಮುವಿನ ಮೇಲೆ ಸುಳ್ಳು ಆರೋಪ ಹೊರೆಸಿದರೆ ನಿಮ್ಮ ಮೇಲೆ ಮಾನ ನಷ್ಟ ಮುಕದ್ದಮೆ ಹೂಡಬೇಕಾಗುತ್ತೆ ಜೋಕೆ! [ಜೋರಾಗಿ ಫೋನ್ ಕೆಳಗೆ ಇಡುವಳು]

ಚಂದ್ರು: ನಾವು ನಿಮ್ಮ ಮನೆ ಹುಡುಕಬಹುದು ಗೊತ್ತಲ್ಲ? ಆ ಗೊಂಬೆ ಇದ್ದರೆ ನಮಗೆ ಒಪ್ಪಿಸಿಬಿಡಿ. 

[ಫೋನ್ ಎರಡು ಬಾರಿ ಕೂಗಿ ಸುಮ್ಮನಾಗುವುದು.]

ಸರಸು: [ಸಣ್ನದಾಗಿ ನಗುತ್ತ] ಇನ್ಸ್‍ಪೆಕ್ಟರ್ ನಿಮ್ಮ ಹತ್ತಿರ ಸರ್ಚ್ ವಾರಂಟ್ ಇದೆಯೇ? 

ಚಂದ್ರು: [ತಬ್ಬಿಬ್ಬಾಗಿ] ಅದಕ್ಕೇನಂತೆ? ಐದು ನಿಮಿಷದಲ್ಲಿ ತರ್ತೀನಿ ಇಲ್ಲೇ ಇರಿ

ಸರಸು: ನಾನು ಇಲ್ಲೇ ಇರ್ತೀನಿ, ಹೋಗಿಬನ್ನಿ! [ಚಂದ್ರು ಹೋಗುವನು]

[ಸರಸು ಮತ್ತೆ ಫೋನ್ ತೆಗೆದುಕೊಂಡು ಮಹೇಶ ಕೊಟ್ಟ ನಂಬರ್ ಡಯಲ್ ಮಾಡುವಳು]

ಸರಸು: 441-6349 ... ಹಲೋ? ಮಹೇಶ್? ... ಸಿಕ್ಕಿಬಿಡ್ತು! ಆ ಗೊಂಬೆ ಸಿಕ್ಕಿಬಿಡ್ತು... ಹೂಂ... ಇಲ್ಲ .. ಪಕ್ಕದ ಮನೆ ಹುಡುಗಿ ಗೌರಿ ತೊಗೊಂಡು ಹೋಗಿದ್ದಳು ... ಈಗಷ್ಟೇ ವಾಪಸ್ ತಂದಳು, ಅದಕ್ಕೆ ನಮಗೆ ಸಿಗಲಿಲ್ಲ... ಹೂಂ... ಬೇಗನೇ ಬನ್ನಿ.... ಇಲ್ಲ ಆ ಇನ್ಸ್‍ಪೆಕ್ಟರ್ ಮೇಲೆ ನನಗೆ ಯಾಕೋ ಅನುಮಾನ ... ಹೂಂ ಅವರು ನಕಲಿ ಇನ್ಸ್‍ಪೆಕ್ಟರ್ ಅನ್ಸುತ್ತೆ ... ಪೋಲೀಸ್ ಸ್ಟೇಶನ್‍ಗೆ ಫೋನ್ ಮಾಡ್ತೀನಿ ಅಂದ ತಕ್ಷಣ ತುಂಬ ಹೆದರಿಕೊಂಡು ಬಿಟ್ಟರು... ಓಕೆ ಓಕೆ.. ಬನ್ನಿ, ನನಗೆ ಭಯವಾಗ್ತಿದೆ. 

[ಸರಸು ಫೋನ್ ಕೆಳಗಿಟ್ಟು ಎದ್ದು ಹೋಗುತ್ತಾಳೆ. ಅಷ್ಟರಲ್ಲೇ ಫೋನ್ ಎರಡು ಬಾರಿ ಕೂಗಿ ಸುಮ್ಮನಾಗುತ್ತದೆ]

ಸರಸು: [ಸ್ವಗತ] ಮಹೇಶ್! ನೀವೂ?!?! [ಸ್ವಲ್ಪ ಯೋಚಿಸಿ] ಇದೊಂದು ಮೋಸದ ಪಂಜರ! ಆ ಇನ್ಸ್‍ಪೆಕ್ಟರ್ ನಕಲಿ ಇನ್ಸ್‍ಪೆಕ್ಟರ್ - ಪೋಲೀಸ್ ಸ್ಟೇಶನ್‍ಗೆ ಫೋನ್ ಮಾಡ್ತೀನಿ ಅಂದರೆ ಭಯ ಪಟ್ಟುಕೊಂಡ. ಅವನು ರಾಜೇಶ್ಗೆ ಫೋನ್ ಮಾಡಿದ. ರಾಜೇಶ್ ಆ ಮಾರುತಿ ವ್ಯಾನ್‍ನಲ್ಲಿ ಇದ್ದಾನೆ. ಅವರಿಬ್ಬರೂ ಒಟ್ಟಿಗೆ ಸೇರಿದ್ದಾರೆ - ಅವರು ಪೋಲೀಸರಲ್ಲ. ಈಗ ಮಹೇಶ್ ಕೂಡ ಮಾರುತಿ ವ್ಯಾನ್‍ನಲ್ಲಿ ಇದ್ದಾರೆ.

ಸರಸು: [ಸ್ವಗತ - ಮುಂದುವರೆಸುತ್ತ] ಮಹೇಶ್ ಪೋಲೀಸ್ ವ್ಯಾನ್ ಮನೆ ಮುಂದೆ ನಿಂತಿದೆ ಅಂದರು - ಆದರೆ ಗೌರೀ ಯಾವ ವ್ಯಾನೂ ನಿಂತಿಲ್ಲ ಅಂದಳು. ಮೂವರು ಒಟ್ಟಿಗೆ ಸೇರಿದ್ದಾರೆ, ಮೂವರೂ ಕಳ್ಳರೇ ಇರಬೇಕು. ಆ ಗೊಂಬೆ ಪಡೆಯೋಕ್ಕೆ ನಾಟಕ ಮಾಡಿರಬೇಕು. ಈಗ ಗೊಂಬೆ ಇಲ್ಲಿದೆ ಅಂತ ಗೊತ್ತಾಗಿದೆ. ಇಲ್ಲಿಗೇ ಬರ್ತಿದ್ದಾರೆ.  ಯಾವುದಕ್ಕೂ ಪೋಲೀಸ್ ಸ್ಟೇಶನ್‍ಗೆ ಫೋನ್ ಮಾಡಿಬಿಡ್ತೀನಿ. 

[ಫೋನ್ ಕೈಗೆತ್ತಿಕೊಳ್ಳುವಳು. ಬಟನ್ ಒತ್ತುತ್ತ...] 

ಸರಸು: ಹಲೋ? ಹಲೋ?? ಯಾಕೋ ಫೋನ್ ಕೆಟ್ಟುಹೋಗಿದೆಯೋ ಏನೋ! ಅಯ್ಯೋ ದೇವರೇ! [ಸ್ವಲ್ಪ ತಡ] ಹೊರಗೆ ಕತ್ತಲಾಗಿರಬೇಕು! ಮನೆಯನ್ನೂ ಪೂರ್ತಿ ಕತ್ತಲು ಮಾಡಿದರೆ ನನಗೆ ಅವರಿಗೆ ಏನೂ ವ್ಯತ್ಯಾಸವಿರೋದಿಲ್ಲ. 

[ಎಲ್ಲಾ ದೀಪಗಳನ್ನೂ ಆರಿಸುತ್ತಾಳೆ, ಮನೆ ಕತ್ತಲೆಯಾಗುತ್ತದೆ]

End of Act 2

Act 3 

[ಬಾಗಿಲು ಬಡಿಯುವ ಶಬ್ಧ, ಬಾಗಿಲು ತೆಗೆದು ಮಹೇಶ ಒಳಗೆ ಬರುವನು]

ಮಹೇಶ: ಸರಸ್ವತಿ... ಸರಸ್ವತಿ...

ಸರಸು: [ಗಂಭೀರವಾಗಿ] ಬನ್ನಿ ಮಹೇಶ್. ನೀವು ಬರೋದನ್ನೇ ಕಾಯ್ತಿದ್ದೆ!

ಮಹೇಶ: ಗೊಂಬೆ....?

ಸರಸು: [’ಇಲ್ಲ’ ಅನ್ನುವಂತೆ ತಲೆಯಾಡಿಸುವಳು]

ಮಹೇಶ: ಯಾವಾಗ ಗೊತ್ತಾಯಿತು? 

ಸರಸು: ಯಾವ ವಿಚಾರ? 

ಮಹೇಶ: ನನ್ನ ವಿಚಾರ... ಈ ಮೋಸದ ವಿಚಾರ!

ಸರಸು: [ವಿನೋದವಿಲ್ಲದ ನಗೆ ನಗುವಳು]

ಮಹೇಶ: ಎಲ್ಲಿದೆ ಆ ಗೊಂಬೆ?

ಸರಸು: ಅದು ನಿಮಗೆ ಬೇಕಾದರೆ ಅದನ್ನು ಕೊಂಡುಕೊಳ್ಳಬೇಕು. 

ಮಹೇಶ: [ಜೇಬಿಗೆ ಕೈ ಹಾಕುತ್ತ] ಎಷ್ಟು? 

ಸರಸು: ನನಗೆ ಹಣ ಬೇಡ. ಗೊಂಬೆಗೆ ಬದಲಾಗಿ ನಿಜ ಹೇಳಿ.

ಮಹೇಶ: ಇಲ್ಲೇ, ಈ ಮನೇಲೇ ಇದಿಯಾ? 

ಸರಸು: ಶಾಮ್ ... ಆ ಹೆಂಗಸು?

ಮಹೇಶ: ಶಾಮ್ ಹೇಳಿದ ಹಾಗೆ ಆಕೆ ಶಾಮ್‍ಗೆ ಗೊಂಬೆ ಕೊಟ್ಟಿದ್ದಂತು ನಿಜ ಆದರೆ ಶಾಮ್ ಅವಳನ್ನು ಕೊಲೆ ಮಾಡಿಲ್ಲ. 

ಸರಸು: ಹಾಗಾದರೆ... ನೀವು ಶಾಮ್ ಫ್ರೆಂಡ್ ಅಲ್ಲ? ಇನ್ಸ್‍ಪೆಕ್ಟರ್ ಚಂದ್ರು ಪೋಲೀಸ್ ಅಲ್ಲ?

ಮಹಾಸ: ಅಲ್ಲ, ಅಲ್ಲ! ಗೊಂಬೆ ಎಲ್ಲಿದೆ ಸರಸ್ವತಿ? 

ಸರಸು: ಆಕೆನ ನೀವು ಕೊಂದಿದ್ದಾ? 

ಮಹೇಶ: ಇಲ್ಲ ನಾನು ಆಕೆನ ಕೊಂದಿಲ್ಲ. ಸರಸ್ವತಿ - ಆ ಗೊಂಬೆ ನನ್ನ ಕೈಗೆ ಈಗಲೇ ಕೊಟ್ಟುಬಿಡಿ. ಇಲ್ಲದೆ ಹೋದರೆ... 

ಸರಸು: ನಾನು ಕೊಡೋಲ್ಲ ಮಹೇಶ್! ನಾನು ಕೊಡೋಲ್ಲ! ನಿಮ್ಮ ಕೈಯಲ್ಲಾದರೆ ಕಿತ್ತುಕೊಳ್ಳಿ.

ಮಹೇಶ: ಸರಸ್ವತಿ - ನಾನು ಎಷ್ಟು ಕೆಟ್ಟವನು ಅಂತ ನಿಮಗೆ ಗೊತ್ತಿಲ್ಲ...

ಸರಸು: ಇಲ್ಲ ಮಹೇಶ್! ನೀವು ನನಗೆ ಹಿಂಸೆ ಕೊಡೋಲ್ಲ - ನೀವು ಅಷ್ಟು ಕೆಟ್ಟವರಲ್ಲ. 

ಮಹೇಶ: ನಾನು ಇಲ್ಲಿಂದ ಹೊರಗೆ ಹೋದರೆ ಆಚೆ ರಾಜೇಶ್ ಕಾಯ್ತಿದ್ದಾನೆ. ಅವನು ಯಾವ ಹಿಂಸೆ ಕೊಡೋಕ್ಕೂ ಹೇಸಲ್ಲ! ನನ್ನ ಕೈಗೇ ಕೊಟ್ಟುಬಿಡಿ ಸರಸ್ವತಿ, ನಾನು ಹೊರಟು ಹೋಗ್ತೀನಿ. 

ಸರಸು: ಗೆಟ್ ಔಟ್, ಮಹೇಶ್! ಅವನು ಏನು ಮಾಡಿದರೂ ನೀವೇ ಮಾಡಿದ ಹಾಗೆ ಅನ್ನೋದು ಮರೀಬೇಡಿ. 

ಮಹೇಶ: ಸರಿ ನಿಮ್ಮ ಇಷ್ಟದಂತೇ ಆಗಲಿ. ಆ ದರಿದ್ರ ಗೊಂಬೆ ನನಗೆ ಬೇಕಾಗಿಲ್ಲ. ಇನ್ನು ನಿಮಗೆ ಏನೂ ಭಯವಿಲ್ಲ - ಚಂದ್ರು ರಾಜೇಶನನ್ನು ಸಾಯಿಸಿದ್ದಾನೆ. ನೀವು ನಿಶ್ಚಿಂತೆಯಿಂದ ಇರಿ. ಮತ್ತೆ ನಿಮ್ಮನ್ನ ನಾನು ಭೇಟಿಯಾಗಲ್ಲ. ಗುಡ್ ಬೈ!

[ಮಹೇಶ ಹೊರಗೆ ಹೋಗುವನು. ಹೋಗುತ್ತಿದ್ದಂತೆ "ಆಹ್" ಎಂಬ ಕೂಗು. ರಾಜೇಶ ತನ್ನ ರಕ್ತವಾಗಿದ್ದ ತನ್ನ ಚಾಕು ಒರೆಸಿಕೊಳ್ಳುತ್ತ ಒಳಗೆ ಬರುವನು]

ರಾಜೇಶ: [ಕೈಯಲ್ಲಿ ಒಂದು ಪೆಟ್ರೋಲ್ ಕ್ಯಾನ್ ಹಿಡಿದು ಮನೆಯೊಳಗೆ ಬರುತ್ತ] ಅವನು ನನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ, ನಾನು ಅವನನ್ನ ಕೊಂದೆ ಅಷ್ಟೆ. ಇದ್ರಲ್ಲಿ ನನ್ನ ತಪ್ಪೇನೂ ಇಲ್ಲ. ನನಗೆ ಆ ಗೊಂಬೆ ಬೇಕು ಅಷ್ಟೇ. ಮತ್ತೇನು ಬೇಡ. ಕೊಟ್ಟುಬಿಡಿ ನಾನು ಹೊರಟು ಹೋಗ್ತೀನಿ.  [ಮನೆಯೆಲ್ಲ ಓಡಾಡುತ್ತ lampಗಳನ್ನು ಆನ್/ಆಫ್ ಮಾಡುತ್ತಾನೆ]

ಸರಸು: ನನಗೆ ಗೊತ್ತಿಲ್ಲ. 

ರಾಜೇಶ: ನಿಧಾನವಾಗಿ ಕೊಡಿ ಪರವಾಗಿಲ್ಲ. [ಬೆಂಕಿ ಪೊಟ್ಟಣ ತೆಗೆದು ಟೇಬಲ್ ಮೇಲಿಟ್ಟು, ಮನೆಯಲ್ಲೆಲ್ಲ ಪೆಟ್ರೋಲ್ ಚೆಲ್ಲುವನು. ಪೆಟ್ರೋಲ್ ಚೆಲ್ಲುವಾಗ ಸರಸು ನಿಧಾನವಾಗಿ ಬೆಂಕಿ ಪೊಟ್ಟಣ ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಳ್ಳುವಳು] ಮನೆಯಲ್ಲೆಲ್ಲ ಪೆಟ್ರೋಲ್ ಚೆಲ್ಲಿದ್ದೀನಿ. ಒಂದು ಬೆಂಕಿ ಕಡ್ಡಿ ಗೀರಿದರೆ ಇಡೀ ಮನೆಯೇ ಸುಟ್ಟು ಭಸ್ಮವಾಗಿಬಿಡತ್ತೆ. ಆಗ ನೀವು ಇಲ್ಲೇ ಒಲಗೆ ಇರ್ತೀರೊ ಅಥವ ಹೊರ್ಗೆ ಇರ್ತೀರೊ ಯೋಚನೆ ಮಾಡಿಕೊಳ್ಳಿ. ಅಂದಹಾಗೆ ನಿಮ್ಮ ಸೋಮು ಬರೋಕ್ಕೆ ಇನ್ನೂ ತುಂಬಾ ಟೈಮ್ ಇದೆ. ನಿಮಗೆ ಸಣ್ಣ ಆಕ್ಸಿಡೆಂಟ್ ಆಗಿ ನೀವು ಆಸ್ಪತ್ರೆಯಲ್ಲಿದ್ದೀರ ಅಂತ ಸಮಾಚಾರ ಕಳಿಸಿದ್ದೀನಿ. ಅವನು ಸೀದಾ ಆಸ್ಪತ್ರೆಗೇ ಹೋಗ್ತಾನೆ. ಬರೋ ಅಷ್ಟುಹೊತ್ತಿಗೆ  ತುಂಬಾ ಲೇಟ್ ಆಗತ್ತೆ.  [ಪೆಟ್ರೋಲ್ ಕ್ಯಾನ್ ಟೇಬಲ್ ಮೇಲೆ ಇಡುವನು]

ಸರಸು: ಇಲ್ಲ.. ಇಲ್ಲ ನಾನು ಕೊಡೋದಿಲ್ಲ. 

ರಾಜೇಶ: [ಅಣಕಿಸುತ್ತ] ’ಇಲ್ಲ ನಾನು ಕೊಡೋದಿಲ್ಲ’. ’ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲ’ ಅಂತ ಹೇಳ್ತ ಇದ್ರು ಯಾರೋ ಇಷ್ಟು ಹೊತ್ತು. ಈಗ ’ನಾನು ಕೊಡೋದಿಲ್ಲ’ ಆಯಿತೇ? [ತೆಳ್ಳನೆಯ ಬಟ್ಟೆ ತೆಗೆದು ಸರಸ್ವತಿ ಮೇಲೆ ಎಸೆಯುವನು. ಸರಸ್ವತಿ ಭಯದಿಂದ ಹಿಂಜರಿಯುವಳು] ಸರಸ್ವತಿ, ನಿಮಗೆ ಬೇಗ ಹೆದರಿಕೆಯಾಗುತ್ತಾ? ಬಟ್ಟೆ ಅಷ್ಟೆ - ಅಲ್ಲೇ ನಿಮ್ಮ ಮುಂದೆ ಬಿದ್ದಿದೆ. ಒಳ್ಳೆ ಮಾತಿನಿಲ್ಲೆ ಕೊಟ್ಟರೆ ನಾನು ಹೊರಟು ಹೋಗ್ತೀನಿ. ಇಲ್ದೇಹೋದರೆ ನಾನು ಕೆಟ್ಟವನಾಗಬೇಕಾಗತ್ತೆ ಸರಸ್ವತಿ. ಎಲ್ಲಿದೆ ಗೊಂಬೆ? 

ಸರಸು: ನಾನು ಕೊಡೋದಿಲ್ಲ, ಕೊಡೋದಿಲ್ಲ, ಕೊಡೋದಿಲ್ಲ!!

ರಾಜೇಶ: ಸುಮ್ಮನೆ ಹಟ ಮಾಡ್ತಿದ್ದೀರ. ಏನೋ - ಒಳ್ಳೆ ಮಾತಿನಲ್ಲಿ ಹೇಳೋದು ನಾನು ಹೇಳಿದೆ. ದಂಡಂ ದಶಗುಣಂ. [ಚೂರಿಯೊಂದನ್ನು ತೆಗೆಯುತ್ತ] ನನ್ನ ಕೈಯಲ್ಲಿ ಚಾಕು ಇದೆ, ಸರಸ್ವತಿ. ನಿಮ್ಮ ಬಾಯಿ ಬಿಡಿಸೋದು ಕಷ್ಟವಲ್ಲ. ನಿಧಾನವಾಗಿ ನೋವು ಮಾಡ್ತೀನಿ. ನೀವೇ ಬಾಯಿ ಬಿಡ್ತೀರ. [ಸರಸು ಕಡೆ ಹೊರಡುವನು] 

[ಸರಸು  flower vase? (production based) ತೆಗೆದು ರಾಜೇಶನ ಮೇಲೆ ಎಸೆಯುವಳು. ರಾಜೇಶ ಕೈಯಲ್ಲಿನ ಚೂರಿ ಬೀಳೀಸಿ ಕೈಯಳನ್ನು ಮುಖಕ್ಕೆ ಹಿಡಿಯುವನು. ಸರಸು ಅಷ್ಟರಲ್ಲಿ ಚೂರಿ ಕೈಗೆತ್ತಿಕೊಳ್ಳುವಳು] 

ಸರಸು: [ದೂರ ಸರಿಯುತ್ತ] ನಿಮ್ಮ ಚೂರಿ ನನ್ನ ಕೈಯಲ್ಲಿದೆ ಮಿ. ರಾಜೇಶ್! ಅಲ್ಲೇ ಇರಿ ಹತ್ತಿರ ಬರಬೇಡಿ. 

ರಾಜೇಶ: ನನ್ನ ಕೈಯಲ್ಲಿ ಬೆಂಕಿ ಪೊಟ್ಟಣ ಇದೆ, ಸರಸ್ವತಿ. ನನಗೆ ನೀವು ಕಾಣಿಸ್ತಿದ್ದೀರ. [ಸರಸು ಪೆಟ್ರೋಲ್ ಕ್ಯಾನ್ ಕೈಗೆತ್ತಿಕೊಂಡು ರಾಜೇಶನ ಮುಖದ ಮೇಲೆ ಎರಚುವಳು]

ಸರಸು: ಈಗ ಗೀರಿ ಬೆಂಕಿ ಕಡ್ಡಿ!

ರಾಜೇಶ: ಇಲ್ಲ! ಇಲ್ಲ - ಹಚ್ಚೋಲ್ಲ. ನನಗೇನೂ ಕಾಣಿಸ್ತಿಲ್ಲ ಸರಸ್ವತಿ. ನಾನು ಇಲ್ಲೇ ಇರ್ತೀನಿ. ನೀವು ಎಕ್ಸೈಟ್ ಆಗಬೇಡಿ. 

ಸರಸು: ಈಗ ನನಗೆ ನಿಮಗೆ ಏನು ವ್ಯತ್ಯಾಸವಿಲ್ಲ, ಮಿ. ರಾಜೇಶ್. ನನ್ನ ಹತ್ತಿರ ಬರಬೇಡಿ ಬಂದರೆ ನನಗೆ ಗೊತ್ತಾಗುತ್ತೆ. ನಿಧಾನವಾಗಿ ಹೋಗಿ ಬಾಗಿಲ ಪಕ್ಕ ಇರೋ ನನ್ನ ಕೋಲು ತೊಗೊಳ್ಳಿ. [ದೂರ ಸರಿಯುವಳು, ರಾಜೇಶ್ ಕೋಲು ತೆಗೆದುಕೊಳ್ಳುವನು] 

ಸರಸು: ಹಾಗೆ. ಈಗ ಕೋಲು ನೆಲಕ್ಕೆ ಕುಟ್ಟಿ. ಕುಟ್ಟ್‍ತಾನೇ ಇರಿ. 

ರಾಜೇಶ: ನಿಮ್ಮ ಧೈರ್ಯ, ಸಾಹಸ ಮೆಚ್ಚಬೇಕಾದ್ದೆ ಸರಸ್ವತಿ. ಹ್ಯಾಟ್ಸ್ ಆಫ್. [ಕುಟ್ಟುತ್ತಲೇ ಇರುವನು] 

ಸರಸು: [ಶಬ್ಧ ನಿಂತಾಗ] ಕುಟ್ಟುತ್ತಾ ಇರಿ ಮಿ. ರಾಜೇಶ್, ಕುಟ್ಟುತ್ತಾ ಇರಿ. 

ರಾಜೇಶ: ನೀವು ಎಲ್ಲಾ ಯೋಚನೆ ಮಾಡಿದ್ದೀರ ಅಲ್ವೇ? ಕತ್ತಲೆ ಮಾಡಿ ಇಬ್ಬರಿಗೂ ಸಮ ಮಾಡಿದ್ದೀರಿ. ನನ್ನ ಚೂರಿ ನಿಮ್ಮ ಕೈಯಲ್ಲಿದೆ. ಎಲ್ಲ ಯೋಚನೆ ಮಾಡಿದ್ದೀರಿ ಆದರೆ... 

ಸರಸು: ಆದರೆ...? 

ರಾಜೇಶ:  missed light source -  production based - Fridge? torch? whatever ಬಗ್ಗೆ ಯೋಚನೆ ಮಾಡಿಲ್ಲ. [ಲೈಟ್ ಹತ್ತಿಸುವನು] 

[ರಾಜೇಶ ಸರಸು ಮೇಲೆ ಹಾರುವನು. ಸರಸು  light source neutralize ಮಾಡುವಳು.  stage  ಪೂರ್ತಿ ಕತ್ತಲಾಗುವುದು. ಸರಸು ಕಿರುಚುವ ಶಬ್ಧ. 

ಸರಸು: ಹೆಲ್ಪ್!! ಹೆಲ್ಪ್!! ( or suitable plea)

ಸೋಮು: [ಹಿಂತಿರುಗುತ್ತಾನೆ, ಟಾರ್ಚ್ ಹಿಡಿದಿರುತ್ತಾನೆ; (spotlights? Add another policeman? ) ಒಳಗೆ ಬರುತ್ತ] ಸರಸು?? ಸರಸು!! ಎಲ್ಲಿದಿಯ, ಸರಸು? 

ಗೌರಿ: [ಒಳಗೆ ಬರುತ್ತ] ಅಕ್ಕ! ಏನೋ ಕಿರುಚಿದ್ದು ಕೇಳಿಸ್ತು ಅಕ್ಕ! [ಸರಸುವನ್ನು ಎತ್ತಿ ಸಹಾಯ ಮಾಡಲು ಹೋಗುವಳು] 

ಸರಸು: ರೀ! ಬಂದುಬಿಟ್ರಾ! ಅಬ್ಬ! [ಗೌರೀ ಸಹಾಯದಿಂದ ಏಳಲು ಶುರು ಮಾಡುವಳು] 

ಸೋಮು: ಗೌರಿ! ಬಿಡು ಅವಳನ್ನ ಅವಳೇ ಏಳ್ತಾಳೆ!

ಸರಸು: ಚಾಂಪಿಯನ್ ಕುರುಡಿ ನಾನು! [ಎದ್ದು ಸೋಮು ಕಡೆ ನಡೆಯುತ್ತಾಳೆ]

No comments: