ಹೀಗೊಬ್ಬ ಗೆಳೆಯರು ೧೦ ವರ/ಶಾಪಗಳನ್ನು ಕೊಟ್ಟು reference to context ಕೇಳಿದ್ದರು. ಬೇರೆಲ್ಲೋ ಹಾಕಿದ್ದೆ. ಈಗ ಇಲ್ಲೂ ಹಾಕುವೆ. ಇನ್ನೂ ಯಾವವುವಾದರೂ ಬೇಕಿದ್ದರೆ ಕಾಮೆಂಟುಗಳಲ್ಲಿ ಹಾಕಿ - ಇವನ್ನು ಬೆಳೆಸೋಣ.
೧. ಕುರುಡ ತಂದೆತಾಯಿಗಳನ್ನು ಬುಟ್ಟಿಯಲ್ಲಿ ಹೊತ್ತವನ ಕೊಂದವನಿಗೆ
ಕ್ಯಾಟಿಗರಿ: ಶಾಪ
ಕತೆ: ರಾಮಾಯಣ/ಶ್ರವಣಕುಮಾರನ ಕತೆ
ಹೇಳಿದವರು: ಶ್ರವಣಕುಮಾರನ ಅಂಧ, ವಯೋವೃದ್ಧ ತಂದೆ
ಕೇಳಿದವರು: ದಶರಥ
ಸಂದರ್ಭ: ದಶರಥ ಶಬ್ಧವೇಧಿ ಬಾಣ ಚಲಯಿಸುವುದರಲ್ಲಿ ನಿಪುಣ. ಹೀಗೊಮ್ಮೆ ಬೇಟೆಗೆ ಹೋಗಿದ್ದಾಗ ಶ್ರವಣಕುಮಾರನೆಂಬ ಯುವಕ ತನ್ನ ಅಂಧ, ವಯೋವೃದ್ಧ ತಂದೆ-ತಾಯಿಯರನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆಗೆ ಕರೆದೊಯ್ಯುತ್ತಿದ್ದ. ಅವರಿಗೆ ನೀರಡಿಕೆಯಾದಾಗ ನೇರು ತರಲು ನದಿಯ ಬಳಿ ಹೋದ. ಆ ಶಬ್ಧವನ್ನು ಕೇಳಿದ ದಶರಥನು ಯಾವುದೋ ಪ್ರಾಣಿ ಬಂದಿರುವುದೆಂದು ಶಬ್ಧವೇಧಿ ಬಾಣ ಹೊಡೆದ. ಬಾಣವು ಶ್ರವಣನಿಗೆ ತಾಗಿ, ಶ್ರವಣ ಮೃತನಾದ. ಆ ವಿಚಾರವನ್ನು ದಶರಥನು ಬಳಿಯಿದ್ದ ಶ್ರವಣಕುಮಾರನ ತಂದೆ-ತಾಯಿಯಂದಿರಿಗೆ ಹೇಳಿದಾಗ, ಶ್ರವಣಕುಮಾರನ ತಂದೆ "ನೀನೂ ನನ್ನಂತೆ ಪುತ್ರ ವಿಯೋಗಲ್ದಲ್ಲಿ ಮರಳಿ ಮರಳಿ ಸಾಯುವೆ" ಎಂದು ಶಪ ಕೊಟ್ಟನು.
ಮುಂದೇನಾಯಿತು: ದಶರಥನು ಕೈಕೇಯಿಗೆ ಕೊಟ್ಟ ಭಾಷೆಯನ್ನು ಉಳಿಸಲು ಯುವರಾಜನಾಗಬೇಕಾಗಿದ್ದ ಶ್ರೀರಾಮನು ಕಾಡಿಗೆ ತೆರಳಿದನು. ಆ ಸಮಯದಲ್ಲಿ ಭರತ-ಶತ್ರುಘ್ನರು ಕೈಕೇಯಿಯ ತವರುಮನೆಯಾದ ಕೇಕಯಕ್ಕೆ ಹೋಗಿದ್ದರು. ಈ ಸಮಯದಲ್ಲಿ, "ಯುವರಾಜನಾಗಬೇಕಾಗಿದ್ದ ರಾಮನನ್ನು ಕಾಡಿಗೆ ಅಟ್ಟಿದೆನೇ" ಎಂದು ಮರಳುತ್ತಿದ್ದ ದಶರಥನು ನಾಲ್ಕು ಗಂಡುಮಕ್ಕಳಿದ್ದರೂ ಒಬ್ಬರೂ ಹತ್ತಿರವಿಲ್ಲದಿದ್ದಾಗ ಮರಣ ಹೊಂದಿದನು.
೨. ನೀನು ಕಲ್ಲಾಗಿ ಇಲ್ಲೇ ಬಿದ್ದಿರು
ಕ್ಯಾಟಿಗರಿ: ಶಾಪ
ಕತೆ: ರಾಮಾಯಣ/ಗೌತಮ-ಅಹಲ್ಯೆಯರ ಕತೆ
ಹೇಳಿದವರು: ಗೌತಮ ಮಹರ್ಷಿ
ಕೇಳಿದವರು: ಅಹಲ್ಯೆ
ಸಂದರ್ಭ: ಅಹಲ್ಯೆ ಮಹಾಪತಿವ್ರತೆ. ಹಾಗಾಗಿ, ಅವಳ ಮೇಲೆ ಪ್ರೇಮ/ಕ್ರೋಧ ಬೆಳೆಸಿಕೊಂಡಿದ್ದ ದೇವೇಂದ್ರನು ಬೇಗನೆ ಬೆಳಗಾಯಿತೆನ್ನುವ ಹಾಗೆ ಮಾಡಿ, ಗೌತಮ್ರು ಸ್ನಾನಕ್ಕೆ ಹೊಳೆಗೆ ಹೋದಾಗ, ತಾನು (ಇಂದ್ರ) ಗೌತಮರ ವೇಷ ಧರಿಸಿ ಅಹಲ್ಯೆಯ ಬಳಿಗೆ ಹೋದನು. ಸ್ನಾನದಿಂದ ಹಿಂತಿರುಗಿದ ಗೌತಮರು ಇಂದ್ರ-ಅಹಲ್ಯೆಯರನ್ನು ಒಟ್ಟಿಗೆ ಕಂಡು ಇಂದ್ರನಿಗೆ "ಮೈಯೆಲ್ಲ ಕಣ್ಣಾಗಿ ಹೋಗು" ಎಂದು (ಅನ್ಯ ಕತೆಗಳಲ್ಲಿ ಈ ಶಾಪ ಬೇರೆ ರೀತಿ ಇದೆ), ಮತ್ತು ಅಹಲ್ಯೆಗೆ "ಕಲ್ಲಾಗಿ ಇಲ್ಲೇ ಬಿದ್ದಿರು" ಎಂದು ಶಾಪವಿತ್ತರು. ಇಂದ್ರನ ವೇಷಧಾರಣೆಯಿಂದ ತನಗೆ ಗೊತ್ತಾಗಲಿಲ್ಲವೆಂದು ಬೇಡಿಕೊಂಡಾಗ, ಗೌತಮರು ಮಹಾವಿಷ್ಣುವಿನ ಶ್ರೀರಾಮಾವತಾರದಲ್ಲಿ ಈ ಶಾಪವಿಮೋಚನೆಯಾಗುವುದೆಂದು ಹೇಳಿದರು.
ಮುಂದೇನಾಯಿತು: ಕಲ್ಲಾಗಿ ಬಿದ್ದಿದ್ದ ಅಹಲ್ಯೆಯು ರಾಮನಾಮಜಪಿಸುತ್ತ ಯುಗ-ಯುಗಗಳನ್ನು ಕಳೆದಳು. ಕೊನೆಗೆ ತ್ರೇತಾಯುಗದಲ್ಲಿ ಶ್ರೀರಾಮನು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಭೇಟಿ ಕೊಟ್ಟು, ಕಲ್ಲಾದ ಅಹಲ್ಯೆಯನ್ನು ಕಾಲಿನಿಂದ ಒದ್ದನು. ಆಗ ಶಾಪವು ವಿಮೋಚನೆಯಾಗಿ ಅಹಲ್ಯೆ ಗೌತಮಿ(ಗೋದಾವರಿ) ನದಿಗೆ ಉಪನದಿಯಾಗಿ ಸೇರಿಕೊಂಡಳು
Extra Info: ಐದು ಪತಿವ್ರತೆಯರು (ಅವರ ಪತಿಯರು): ಅಹಲ್ಯ (ಗೌತಮ), ದ್ರೌಪದಿ (ಪಂಚ ಪಾಂಡವರು), ಸೀತೆ (ಶ್ರೀರಾಮ), ತಾರ (ವಾಲಿ), ಮಂಡೋದರಿ (ರಾವಣ)
೩. ರಣರಂಗದಲ್ಲಿ ನಿನಗೆ ಅಸ್ತ್ರಾಸ್ತ ಮಂತ್ರ ಮರೆಯಲಿ
ಕ್ಯಾಟಿಗರಿ: ಶಾಪ
ಕತೆ: ಮಹಾಭಾರತ/ಕರ್ಣ
ಹೇಳಿದವರು: ಪರಶುರಾಮ
ಕೇಳಿದವರು: ಕರ್ಣ
ಸಂದರ್ಭ: ಕರ್ಣ (ಹುಟ್ಟು ಕ್ಷತ್ರಿಯನಾದರೂ) ಸಾರಥಿ ಅದಿರಥನ ಸಾಕು ಮಗ. ಹಾಗಾಗಿ ಸೂತಪುತ್ರ. ದ್ರೋಣಾಚಾರ್ಯರು ಕರ್ಣನಿಗೆ ಬಿಲ್ಲು ವಿದ್ಯೆ ಹೇಳಿಕೊಡುವುದಿಲ್ಲವೆಂದು ಕಳಿಸಿದಾಗ, ಕರ್ಣ ತಾನು ದ್ರೋಣರ ನೆಚ್ಚಿನ ಶಿಶ್ಯ ಅರ್ಜುನನಿಗಿಂತ ಉತ್ತಮ ಧನುರ್ಧರನಾಗುವೆಯೆಂದು ಪಣ ತೊಟ್ಟು ಪರಶುರಾಮರ ಬಳಿ ಹೋಗುತ್ತಾನೆ. ಪರಶುರಾಮರು ಕ್ಷತ್ರಿಯದ್ವೇಶಿ ಹಾಗಾಗಿ ಬ್ರಾಹ್ಮಣರಿಗೆ ಮಾತ್ರ ಯುದ್ಧವಿದ್ಯೆ ಹೇಕೋಡುತ್ತಾರೆ (ಹಾಗಿದ್ದಲ್ಲಿ ದೇವವ್ರತ (ಭೀಷ್ಮ) ಇವರ ಶಿಷ್ಯ ಹೇಗೆ? ಗಂಗೆಯ ಮಾತಿಗೆ ಒಪ್ಪಿ). ಕರ್ಣನೂ ತಾನು ಬ್ರಾಹ್ಮಣನೆಂದು ಹೇಳಿಕೊಂಡು ಪರಶುರಾಮರ ಗುರುಕುಲಕ್ಕೆ ಸೇರುತ್ತಾನೆ. ಪರಶುರಾಮರ ಬಳು ಹಲವು ವರ್ಷಗಳ ಅಭ್ಯಾಸದ ನಂತರ, ಒಂದು ದಿನ ಗುರುಗಳು ಶಿಶ್ಯನ ತೊಡೆಯಮೇಲೆ ತಲೆಯಿಟ್ಟು ಮಲಗಿರುತ್ತಾರೆ. ಆಗ ದುಂಬಿಯೊಂದು ಬಂದು ಕರ್ಣನ ತೊಡೆ ಕಡಿಯುತ್ತದೆ (ಹಲವು ಕಡೆ ಈ ದುಂಬಿ ಇಂದ್ರನೇ ಎಂದು ಹೇಲಲಾಗಿದೆ). ಗುರುಗಳ ನಿದ್ರೆ ಹಾಳುಮಾಡಬಾರದೆಂದು ಕರ್ಣ ನೋವನ್ನು ತಡೆದುಕೊಂಡು ಹಾಗೆಯೇ ಕೂತಿರುತ್ತಾನೆ. ಎದ್ದ ನಂತರ ಗುರುಗಳು ರಕ್ತವನ್ನು ನೋಡಿ, ಇಂತಹ ನೋವನ್ನು ಅಲುಗಾಡದೆ ತಡೆದುಕೊಳ್ಳುವವನು ಬ್ರಾಹ್ಮಣನಾಗಿರಲು ಸಾಧ್ಯವಿಲ್ಲ. ಈತ ಕ್ಷತ್ರಿಯನೇ ಇರಬೇಕೆಂದು ಮೋಸ ಮಾಡಿ/ಸುಳ್ಳು ಹೇಳಿ ವಿದ್ಯೆ ಕಲಿತವನಿಗೆ ’ರಣರಂಗದಲ್ಲಿ ನಿನಗೆ ಅತೀ ಅಗತ್ಯ ಬಿದ್ದಾಗ ದಿವ್ಯಾಸ್ರ್ತಗಳ ಮಂತ್ರಗಳು ಮರೆತುಹೋಗಲಿ’ ಎಂದು ಶಾಪ ಕೊಟ್ಟರು. ಕರ್ಣ ಕ್ಷಮೆ ಬೇಡಲು ಪರಶುರಾಮರು ಅವನಿಗೆ ’ವಿಜಯ’ ಎಂಬ ತಮ್ಮ ಬಿಲ್ಲನ್ನು ಬಳುವಳಿಯಾಗಿ ಕೊಟ್ಟರು.
ಮುಂದೇನಾಯಿತು: ಕರ್ಣನು ಬೇರೊಮ್ಮೆ ಆಕಸ್ಮಿಕವಾಗಿ ಹಸುವೊಂದನ್ನು ಕೊಂದಾಗ ಅದರ ಒಡೆಯ, ಬ್ರಾಹ್ಮಣನೊಬ್ಬ ಕರ್ಣನಿಗೆ ’ರಣರಂಗದಲ್ಲಿ ನಿನ್ನ ರಥದ ಚಕ್ರ ಕುಸಿದುಬಿಡಲಿ’ ಎಂದು ಶಾಪ ಕೊಟ್ಟಿದ್ದನು. ಅದರಂತೆಯೇ ಕರ್ಣನ ರಥದ ಚಕ್ರ ಭೂಮಿಯಲ್ಲಿ ಕುಸಿದುಹೋಯಿತು. ದಿವ್ಯಾಸ್ತ್ರವ-ಪ್ರಯೋಗ ಮಾಡಿ ರಥವನ್ನು ಭೂಮಿಯಿಂದ ಬಿಡಿಸೋಣವೆಂದರೆ ಮಂತ್ರಗಳು ಮರೆತುಹೋದವು. ಹಾಗೆ ಚಕ್ರವನ್ನು ಬಿಡಿಸಲು ಹೋದಾಗ ಕೃಷ್ಣನ ಸೂಚನೆಯಂತೆ ಅರ್ಜುನ ಬಾಣಪ್ರಯೋಗ ಮಾಡಿ ಕರ್ಣನ ವಧೆ ಮಾಡಿದನು.
Extra Info: Wartime ಸಾರಥಿ, peacetime ಸಾರಥಿಗಳು ಬೇರೆಬೇರೆ ಎಂದು ತೋರುತ್ತದೆ. ಒಂದುರೀತಿ Taxi driver ಮತ್ತು Tank-driver ನಡುವಿನ ಅಂತರ ಅನ್ನಬಹುದೇ? Wartimeನಲ್ಲಿ ಕ್ಷತ್ರಿಯರು (ಗಂಡಸು/ಹೆಂಗಸು) ಸಾರಥಿಯಾಗಿರುವುದು ಕಾಣಬಹುದು - ಉದಾಹರಣೆಗೆ ಕೃಷ್ಣ -> ಅರ್ಜುನ, ಕೈಕೇಯಿ -> ದಶರಥ, ಶಲ್ಯ -> ಕರ್ಣ ಇತ್ಯಾದಿ. Peacetimeನಲ್ಲಿ ಸಾರಥಿಯಾದವರನ್ನು ’ಸೂತ’ ಎಂದು ಕರೆದು ಸ್ವಲ್ಪ ಕಡೆಗಾಣಿಸುತ್ತಿದ್ದದ್ದು ತೋರುತ್ತದೆ. ಆದರೆ ಸಂಜಯನೂ ಸಾರಥಿಯೇ, ಸೂತನೇ. ದೃತರಾಷ್ಟ್ರ ಅವನನ್ನೊಮ್ಮೆ ಯುದ್ಧದ ಮುಂಚೆ ಶಾಂತಿ-ದೂತನಾಗಿ ಪಾಂಡವರಲ್ಲಿ ಉಪಪ್ಲವ್ಯಕ್ಕೆ ಕಳುಹಿಸಿದ್ದ. ಜೊತೆಗೆ ಕೃಷ್ಣ ಅವನಿಗೆ (ದೃತರಾಷ್ಟ್ರನಿಗೆ) ಯುದ್ಧ ನೋಡಲು ದಿವ್ಯ ದೃಷ್ಟಿ ಕೊಡುವುದಾಗಿ ಹೇಳಿದರೂ, ದೃತರಾಷ್ಟ್ರ ತನಗಲ್ಲದೆ ಸಂಜಯನಿಗೆ ದಿವ್ಯದೃಷ್ಟಿ ಕೊಡಿಸಿ ಅವನಿಂದ ಯುದ್ಧದ ವರದಿ ಕೇಳಿದ. ಕರ್ಣನ ತಂದೆ ಆದಿರಥನಿಗೆ ಮಾತ್ರ ಏಕೋ ಕೀಳುಮಟ್ಟ.
೪. ಅಸುರರನ್ನು ಸೋಲಿಸಲು ಸಹಾಯ ಮಾಡಿದ ರಥಸಾರತಿ ಸತಿಗೆ ಏನು ಕೇಳಿದರು ಕೊಡುವೆ
ಕ್ಯಾಟಿಗರಿ: ವರ
ಕತೆ: ರಾಮಾಯಣ
ಹೇಳಿದವರು: ದಶರಥ
ಕೇಳಿದವರು: ಕೈಕೇಯಿ
ಸಂದರ್ಭ: ರಾಕ್ಷಸ ಶಂಭರಾಸುರನ ಜೊತೆ ದಶರಥನು ಯುದ್ಧ ಮಾಡಲು ಹೊರಟಾಗ, ಕೈಕೇಯಿ ಅವನ ಸಾರಥಿಯಾಗಿ ಹೊರಟಳು. ಯುದ್ಧದಲ್ಲಿ ದಶರಥನ ರಥ ನಿಂತು ಹೋಗಿ, ಅವನಿಗೆ ಬಾಣವೊಂದು ತಗುಲಿದಾಗ, ಕೈಕೇಯಿಯು ರಥವನ್ನು ಸರಿಪಡಿಸಿ ಅದನ್ನು ರಣರಂಗದಿಂದ ಹೊರಗೊಯ್ದು ದಶರಥನ ಸುಶ್ರೂಶೆ ಮಾಡಿದಳು. ಪ್ರಸನ್ನನಾದ ದಶರಥನು ಕೈಕೇಯಿಗೆ ಎರಡು ವರಗಳನ್ನು ಕೊಟ್ಟನು. ಕೈಕೇಯಿ ಆ ಕ್ಷಣದಲ್ಲಿ ಏನೂ ಕೇಳದೆ, ’ಬೇಕಾದಾಗ ಕೇಳುವೆ’ ಎಂದು ಹೇಳಿ ವರಗಳನ್ನು ಕಾದಿರಿಸಿಕೊಂಡಿದ್ದಳು.
ಮುಂದೇನಾಯಿತು: ದಶರಥನ ಮಕ್ಕಳಲ್ಲಿ ಜ್ಯೇಷ್ಠ ಶ್ರೀರಾಮ - ಕೌಸಲ್ಯೆಯ ಮಗ, ರಾಮನಿಗಿಂತ ಚಿಕ್ಕವನು (ಲಕ್ಷ್ಮಣನಿಗಿಂತ ದೊಡ್ದವನು) ಕೈಕೇಯಿಯ ಮಗ ಭರತ. ರಾಮನನ್ನು ಯುವರಾಜನಾಗಿ ಪಟ್ಟಾಭಿಶೇಖ ಮಾಡುವ ಸಂದರ್ಭದಲ್ಲಿ ಕೈಕೇಯಿ ದಶರಥ ತನಗಿತ್ತಿದ್ದ ಎರಡು ವರಗಳನ್ನು ಕೇಳಿಕೊಂಡಳು: ೧. ಶ್ರೀರಾಮ ೧೪ ವರ್ಷ ವನವಾಸಕ್ಕೆ ಹೋಗಬೇಕು. ೨. ತನ್ನ ಮಗನಾದ ಭರತ ಯುವರಾಜನಾಗಬೇಕು. ಅಂತೆಯೇ, ದಶರಥನ ವಚನ ಉಳಿಸಲು ರಾಮನು (ಸೀತಾ-ಲಕ್ಷ್ಮಣರೊಂದಿಗೆ) ವನವಾಸಕ್ಕೆ ತೆರಳಿದನು. ಭರತ ರಾಜ್ಯಭಾರವನ್ನು ಹೊತ್ತರೂ, ರಾಮನು ವನವಾಸದಿಂದ ಹಿಂತಿರುಗುವವರೆಗು ತಾನೂ ಸನ್ಯಾಸ ಜೀವನವನ್ನೇ ನಡೆಸುತ್ತ ರಾಮನ ಪಾದುಕೆಗಳನ್ನು ಪಟ್ಟದಮೇಲಿರಿಸಿ ಅವನ ಹೆಸರಲ್ಲಿ ರಾಜ್ಯ ನಡೆಸಿದನು.
೫. ನಿನ್ನ ಮಗನ ನೂರು ತಪ್ಪು ಕ್ಷಮಿಸುವೆ
ಕ್ಯಾಟಿಗರಿ: ವರ/ಶಾಪ
ಕತೆ: ಮಹಾಭಾರತ/ಶಿಶುಪಾಲನ ಕತೆ
ಹೇಳಿದವರು: ಕೃಷ್ಣ
ಕೇಳಿದವರು: ಶೃತಕೀರ್ತಿ (ಶಿಶುಪಾಲನ ತಾಯಿ)
ಸಂದರ್ಭ: ಶಿಶುಪಾಲ ಚೇದಿ ರಾಜನ (ದಮಘೋಷ) ಮಗ. ಅವನ ತಾಯಿ ಶೃತಕೀರ್ತಿ (ಕುಂತಿಯ ತಂಗಿ, ಕೃಷ್ಣನ ಅತ್ತೆ). ಮಹಾವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಸನಂದನ ಮತ್ತಿತರ ಋಷಿಗಳ ಶಾಪದಿಂದ ಹಿರಣ್ಯಾಕ್ಷ-ಹಿರಣ್ಯಕಷಿಪು, ರಾವಣ-ಕುಂಭಕರ್ಣ ಹಾಗು ಶಿಶುಪಾಲ-ದಂತವಕ್ರರಾಗಿ (ವಿಷ್ಣುವಿನ ಅವತಾರಗಳ ವೈರಿಗಳಾಗಿ) ಜನಿಸಿದರು. ಶಿಶುಪಾಲನ ಜನ್ಮ ಅಮಂಗಳಕಾರಿಯಾಗಿತ್ತು - ಮಗು ಮೂರು ಕಣ್ಣು, ನಾಲ್ಕು ಕೈ ಇತ್ಯಾದಿಗಳಿಂದ ವಿಕಾರವಾಗಿಯೂ ಇತ್ತು. ಆಕಾಶವಾಣಿಯೊಂದು ಶೃತಕೀರ್ತಿಗೆ ’ಇವನನ್ನು ಯಾರು ಮುಟ್ಟಿದಾಗ ಇವನ ವಿಕಾರಗಳು ಮಾಯವಾಗುತ್ತವೋ ಅವರೇ ಇವನ ಹತ್ಯೆ ಮಾಡುತ್ತಾರೆ’ ಎಂದು ಸೂಚಿಸಿತ್ತು. ಶೃತಕೀರ್ತಿಯ ಅಣ್ಣನ ಮಗ ಶ್ರೀಕೃಷ್ಣ ಮಗುವನ್ನು ಮುಟ್ಟಿದಾಗ ವಿಕಾರಗಳು ಮಾಯವಾದವು. ಆಗ ಶ್ರುತಕೀರ್ತಿಯು ಕೃಷ್ಣನಲ್ಲಿ ತನ್ನ ಮಗನು ಮಾಡುವ ಎಲ್ಲ ತಪ್ಪುಗಳನ್ನು ಕ್ಷಮಿಸಬೇಕೆಂದು, ಅವನನ್ನು ಕೊಲ್ಲಬಾರದೆಂದು ಬೇಡಿಕೊಂಡಳು. ಅದಕ್ಕೆ ಪ್ರತಿಯಾಗಿ ಕೃಷ್ಣನು ’ನಿನ್ನ ಮಗನ ನೂರು ತಪ್ಪುಗಳನ್ನು ಕ್ಷಮಿಸುವೆ. ನೂರೊಂದನೆ ತಪ್ಪು ಮಾಡಿದಾಗ ಅವನನ್ನು ಸಂಹಾರ ಮಾಡುವೆ’ ಎಂದು ವರ/ವಚನ ಕೊಟ್ಟನು.
ಮುಂದೇನಾಯಿತು: ಪಾಂಡವರು ಇಂದ್ರಪ್ರಸ್ಥ ಪಡೆದು ಅಲ್ಲಿಗೆ ಹೋಗಿ ರಾಜಸೂಯ ಯಾಗವನ್ನು ಮಾಡಲು, ಯುಧಿಷ್ಠಿರನು ಶ್ರೀಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಿದನು. ಇಷ್ಟುಹೊತ್ತಿಗೆ ಶಿಶುಪಾಲನ ಪಾಪದ ಕೊಡ ೧೦೦ ತಪ್ಪುಗಳಿಂದ ತುಂಬಿಹೋಗಿತ್ತು. ಶಿಶುಪಾಲನು ’ದನ ಕಾಯುವವನಿವನು. ರಾಜನಲ್ಲದ ಇವನಿಗೆಂತಹ ಅಗ್ರಪೂಜೆ’ ಎಂದು ಕೃಷ್ಣನ ಅಪಮಾನ ಮಾಡಿದನು. ಆಗ ಕೃಷ್ಣನು ಸುದರ್ಶನ ಚಕ್ರದಿಂದ ಶಿಶುಪಾಲನ ವಧೆ ಮಾಡಿದನು.
೬. ಈ ಮಣಿ ಪೂಜಿಸಿದರೆ ಪ್ರತಿದಿನವೂ ಮಣ ಚಿನ್ನ
ಕ್ಯಾಟಿಗರಿ: ವರ
ಕತೆ: ಮಹಾಭಾರತ/ಶ್ಯಮಂತಕೋಪಖ್ಯಾನ
ಹೇಳಿದವರು: ಸೂರ್ಯ
ಕೇಳಿದವರು: ಸತ್ರಾಜಿತ
ಸಂದರ್ಭ: ರಾಜಋಷಿ ಎನಿಸಿದ್ದ ಸತ್ರಾಜತ ಸೂರ್ಯದೇವನ ಭಕ್ತನಾಗಿದ್ದ. ಪ್ರಸನ್ನನಾದ ಸೂರ್ಯನು ಸತ್ರಾಜಿತನಿಗೆ ಶ್ಯಮಂತಕ ಮಣಿಯನ್ನು ಇತ್ತು, "ಇದು ದಿನವೂ ಎಂಟು ಭಾರ ಬಂಗಾರ ಕೊಡುತ್ತದೆ" ಎಂದನು. ಇದನ್ನು ಯಾರು ಧರಿಸುವರೋ ಅವರ ರಾಜ್ಯ ಪ್ರವಾಹ, ಕ್ಷಾಮ ಇತ್ಯಾದಿ ಪ್ರಮಾದಗಳಿಂದ ರಕ್ಷಿತವಾಗಿರುತ್ತದೆಯೆಂದು ಹೇಳಲಾಗುತ್ತಿತ್ತು.
ಮುಂದೇನಾಯಿತು: ಸತ್ರಾಜಿತ ಮಣಿಯನ್ನು ತನ್ನ ತಮ್ಮನಾದ ಪ್ರಸೇನನಿಗೆ ಕೊಟ್ಟಿದ್ದನು. ಪ್ರಸೇನ ಇತರ ಯಾದವರೊಂದಿಗೆ ಕಾಡಿಗೆ ಬೇಟೆಗೆ ಹೋಗಲು, ಸಿಂಹವೊಂದು ಪ್ರಸೇನನನ್ನು ಕೊಂದು ಆ ಮಣಿಯನ್ನು ಅಪಹರಿಸಿತು. ಭಾದ್ರಪದ ಶುಕ್ಲ ಚೌತಿಯ ಚಂದ್ರನ ದರ್ಶನ ಮಾಡಿದ್ದರಿಂದ ಮಣಿಯನ್ನು ಅಪಹರಿಸಿದನೆಂಬ ಆಪಾದನೆ ಶ್ರೀಕೃಷ್ಣನ ಮೇಲೆ ಬಂತು. (ರಾಮಾಯಣದ) ಜಾಂಬವಂತನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತೆಗೆದುಕೊಂಡು ತನ್ನ ಮಗಳಾದ ಜಾಂಬವತಿಗೆ ಕೊಟ್ಟಿತು. ಅಪವಾದ ತಾಳಲಾರದ ಕೃಷ್ಣ ಮಣಿಯನ್ನು ಹುಡುಕುತ್ತ ಮತ್ತೆ ಕಾಡಿಗೆ ಹೋದನು. ಅಲ್ಲಿ ಜಾಂಬವಂತನನ್ನು ಕಂಡು ಅವನೊಡನೆ ೨೧ ದಿನಗಳ ಯುದ್ಧ ಮಾಡಿ, ಅವನಿಗೆ ತನ್ನ ರಾಮಾವತಾರದ ದರ್ಶನ ಮಾಡಿಸಿದಾಗ ಜಾಂಬವಂತ ಸೋಲನ್ನೊಪ್ಪಿ ಜಾಂಬವತಿಯನ್ನು ಕೃಷ್ಣನಿಗೆ ಮದುವೆ ಮಾಡಿ ಮಣಿಯನ್ನು ಬಳುವಳಿಯಾಗಿ ಕೊಟ್ಟನು. ಈ ಕತೆ ಹೇಳಿದವರಿಗೂ, ಕೇಳಿದವರಿಗೂ ಭಾದ್ರಪದ ಶುಕ್ಲ ಚೌತಿಯ ಚಂದ್ರದರ್ಶನ ದೋಶದ ಪರಿಹಾರವಾಗುವುದೆಂದು ಹೇಳಲಾಗುತ್ತದೆ.
Extra Info: Technically ಅದು ’ಮಣ ಚಿನ್ನ’ ಅಲ್ಲ. ಎಂಟು ಭಾರ ಬಂಗಾರ.
೪ ಅಕ್ಕಿ ಕಾಳು=೧ ಗುಂಜ೫ ಗುಂಜ=೧ ಪಣ
೮ ಪಣ=೧ ಕರ್ಶ
೪ ಕರ್ಶ=೧ ಪಲ
೧೦೦ ಪಲ=೧ ತುಲಾ
೨೦ ತುಲ=೧ ಭಾರ
೮ ಬಾರ ಅಂದರೆ ಒಟ್ಟು ೧೨೮೦೦೦೦ ಅಕ್ಕಿಕಾಳು ಅಥವ ಸುಮಾರು ೭೮ ಕೆ.ಜಿ.
ರಾಮಾಯಣದಲ್ಲಿ ಜಾಂಬವಂತ ವಾನರಸೇನೆಯಲ್ಲೊಬ್ಬ ನಾಯಕ.
೭. ನಿನಗೆ ಆಶೀರ್ವದಿಸಿ ಕೊಡುವೆ ಈ ಪಾಶುಪತಾಸ್ತ್ರ
ಕ್ಯಾಟಿಗರಿ: ವರ
ಕತೆ: ಮಹಾಭಾರತ
ಹೇಳಿದವರು: ಶಿವ
ಕೇಳಿದವರು: ಅರ್ಜುನ
ಸಂದರ್ಭ: ಪಾಂಡವರು ವನವಾಸದಲ್ಲಿದ್ದಾಗ ಮುಂದೆ ಬರಲಿರುವ ಯುದ್ಧದಲ್ಲಿ ಅವಶ್ಯವಾಗಬಹುದೆಂದು ಅರ್ಜುನ ದಿವ್ಯಾಸ್ತ್ರಗಳನ್ನು ಪಡೆದುಕೊಳ್ಳುವ ನಿಶ್ಚಯ ಮಾಡಿಕೊಂಡ. ಅಂತೆಯೇ ಇಂದ್ರಕೀಲ ಪರ್ವತಕ್ಕೆ ಹೋಗಿ ಮಣ್ಣು/ಮರಳಿನಿಂದ ಶಿವಲಿಂಗವನ್ನು ರಚಿಸಿ ಅದನ್ನು ಪೂಜಿಸಿ, ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಹತ್ತಿದ. ಅರ್ಜುನನನ್ನು ಪರೀಕ್ಷೆಮಾಡಬೇಕೆಂದು ಶಿವ/ಪಾರ್ವತಿ/ಗಣರೆಲ್ಲರು ಕಿರಾತರ (ಬೇಡರ ಜಾತಿ) ವೇಷ ಧರಿಸಿ ಅರ್ಜುನನಿದ್ದಲ್ಲಿಗೆ ಆಗಮಿಸಿದರು. ಮೂಕಾಸುರನೆಂಬ ರಾಕ್ಷಸ ಅದೇ ಸಮಯಕ್ಕೆ ಕಾಡು ಹಂದಿ ವೇಷದಲ್ಲಿ ಅಲ್ಲಿಗೆ ಬಂದು ಅರ್ಜುನ ಮತ್ತಿತರ ಆಶ್ರಮ ವಾಸಿಗಳ ಪೂಜೆ-ಪುನಸ್ಕಾರಗಳನ್ನು ಭಂಗ ಮಾಡ ತೊಡಗಿದ. ಆಗ ಅರ್ಜುನ, ಕಿರಾತರಿಬ್ಬರೂ ಮೂಕಾಸುರನಮೇಲೆ ಬಾಣಪ್ರಯೋಗ ಮಾಡಿದರು. ಎರಡು ಬಾಣಗಳ ಮಧ್ಯೆ ಸಿಕ್ಕಿದ ಹಂದಿಯ/ಮೂಕಾಸುರನ ಸಂಹಾರವಾಯಿತು. ಅರ್ಜುನ, ಕಿರಾತರಿಬ್ಬರಿಗೂ ತಾನು ಹೊಡೆದಬಾಣದಿಂದ ಹಂದಿ ಸತ್ತಿತೆಂದು ಮಾತಾಗಿ, ಮಾತು ಜಗಳವಾಗಿ, ಜಗಳ ಕದನವಾಯಿತು. ಅರ್ಜುನನ ಬಾಣಗಳನ್ನು ಸುಲಭವಾಗಿ ತಡೆದು, ನಂತರ ಅವನ ಪ್ರಸಿದ್ಧ ಬಿಲ್ಲಾದ ಗಾಂಡೀವವನ್ನು ಕಿರಾತ ಕಿತ್ತೆಸೆದನು. ನಂತರ ನಡೆದ ಮಲ್ಲ ಯುದ್ಧದಲ್ಲಿ ಹೊಡೆತ ತಿಂದ ಅರ್ಜುನ ತಾನು ಪೂಜಿಸುತ್ತಿದ್ದ ಶಿವಲಿಂಗದ ಸಮೀಪ ಹೋಗಿ ಬಿದ್ದ. ಆಗ ಈಶ್ವರನನ್ನು ನೆನೆಯುತ್ತ ಅರ್ಜುನ ಭಕ್ತಿಯಿಂದ ಶಿವಲಿಂಗದ ಮೇಲೆ ಒಂದು ಹೂವಿನ ಹಾರವನ್ನು ಹಾಕಿದ. ತಿರುಗಿ ನೋಡಿದಾಗ ಆ ಹೂಮಾಲೆ ಕಿರಾತನ ಕೊರಳಿನಲ್ಲಿತ್ತು. ಸತ್ಯವನ್ನು ಒಂದೇ ಕ್ಷಣದಲ್ಲಿ ಅರಿತ ಅರ್ಜುನನ ಅಹಂ ಇಂಗಿಹೋಯಿತು. ಕಿರಾತನ ಕಾಲಿಗೆ ಬಿದ್ದು ಕ್ಷಮೆ ಕೋರಿದ. ನಸುನಗುತ್ತ ಕಿರಾತ ತನ್ನ ಶಿವ ಸ್ವರೂಪವನ್ನು ಧರಿಸಿ ಅರ್ಜುನನಿಗೆ ಆಶೀರ್ವಾದ ಮಾಡಿ ಬೇಕಾದ ವರ ಕೇಳಲು ಹೇಳಿದ. ಆಗ ಅರ್ಜುನ ತನಗೆ ಪಾಶುಪತಾಸ್ತ್ರದ ಗುಟ್ಟು ಹೇಳಿಕೊಡುವುದಾಗಿ ಕೇಳಿಕೊಂಡ. ಈಶ್ವರ ಅದನ್ನು ಅರ್ಜುನನಿಗೆ ಕರುಣಿಸಿದ.
ಮುಂದೇನಾಯಿತು: ಕರ್ಣನೊಡನೆ ಅಂತಿಮ ಯುದ್ಧ ಮಾಡುವ ಹಿಂದಿನ ರಾತ್ರಿ ಅರ್ಜುನ ಇಡೀ ಕತೆಯನ್ನು, ಮತ್ತು ಪಾಶುಪತಾಸ್ತ್ರದ ಮಂತ್ರಗಳನ್ನು ಸ್ಮರಿಸಿಕೊಳ್ಳುತ್ತಾನೆ. ಕನಸಿನಲ್ಲಿ ಶಿವನ ಸನ್ನಿಧಿಗೂ ಹೋಗಿ ಬರುತ್ತಾನೆ. ಆದರೆ ಕೊನೆಗೆ ಪಾಶುಪತಾಸ್ತ್ರವನ್ನು ಯುದ್ಧದಲ್ಲಿ ಬಳಸುವುದಿಲ್ಲ.
Extra Info: ಹಲವು ರಾಮಾಯಣದ ಕಂತುಗಳಲ್ಲಿ ಮೇಘನಾದ/ಇಂದ್ರಜಿತ್ ಇದನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿರುವ ಸೂಚನೆಯೂ ಇದೆ. ಪಾಶುಪತಾಸ್ತ್ರವನ್ನು ಕೇವಲ ಧರ್ಮವನ್ನು ಎತ್ತಿಹಿಡಿಯಲು ಉಪಯೋಗಿಸಬಹುದು.
೮. ಇದನ್ನು ಪೂಜಿಸಿದರೆ ಅತಿಥಿ ಸತ್ಕಾರಕ್ಕೆ ಎಂದು ಕೊರತೆಯಾಗದು
ಕ್ಯಾಟಿಗರಿ: ವರ
ಕತೆ: ಮಹಾಭಾರತ
ಹೇಳಿದವರು: ಸೂರ್ಯ
ಕೇಳಿದವರು: ಯುಧಿಷ್ಠಿರ
ಸಂದರ್ಭ: ಪಾಂಡವರು (ದ್ಯೂತದ ನಂತರ) ವನವಾಸಕ್ಕೆ ತೆರಳಿದಾಗ, ಅತಿಥಿಗಳಾಗಿ ಬಂದ ಋಷಿ-ಮುನಿಗಳಿಗೆ ಅನ್ನ ಬಡಿಸುವ ಶಕ್ತಿಯಿಲ್ಲವೆಂದು ಯುಧಿಷ್ಠಿರ ವ್ಯಾಕುಲನಾಗಿದ್ದ. ಆಗ ಋಷಿ ಧೌಮ್ಯರು ಅವನಿಗೆ ಸೂರ್ಯನನ್ನು ಪ್ರಾರ್ಥಿಸಲು ಹೇಳಿದರು. ಅಂತೆಯೇ ಮಾಡಿದಾಗೆ, ಸೂರ್ಯ ಯುಧಿಷ್ಠಿರನಿಗೆ ಪ್ರತ್ಯಕ್ಷನಾಗಿ ಅಪೂರ್ವವಾದ ಅಕ್ಷಯಪಾತ್ರೆಯನ್ನಿತ್ತ. ದಿನವೂ ದ್ರೌಪದಿ ಊಟ ಮಾಡಿಮುಗಿಸುವವರೆಗು ಅದರಲ್ಲಿ ಅಪರಿಮಿತ ಅನ್ನ (ಅಡಿಗೆ/ಊಟ) ದೊರಕುತ್ತಿತ್ತು. ಅದರಿಂದ ಪಾಂಡವರ ಅತಿಥಿ ಸಕ್ತಾರಕ್ಕೆ ಕೊರತೆಯಾಗುತ್ತಿರಲಿಲ್ಲ.
ಮುಂದೇನಾಯಿತು: ಹೀಗೊಮ್ಮೆ ಪಾಂಡವರನ್ನು ಹೀಯಾಳಿಸಲು, ಅವರನ್ನು ಸಂಕಟಕ್ಕೆ ಸಿಕ್ಕಿಸಲು ದುರ್ಯೋಧನ ಮತ್ತು ಅವನ ಸಂಗಡಿಗರು ಋಷಿ ದೂರ್ವಾಸ ಮತ್ತು ಅವರ ಶಿಷ್ಯರನ್ನು ಪಾಂಡವರ ಆಶ್ರಮಕ್ಕೆ ಬರುವಂತೆ ಮಾಡಿದರು. ದೂರ್ವಾಸರು ಹಸಿದಿರುವುದಾಗಿ ಹೇಳಲು, ಯುಧಿಷ್ಠಿರ, ಅಂದು ದ್ರೌಪದಿಯ ಊಟವಾಗಿ ಅಕ್ಷಯಪಾತ್ರೆ ಖಾಲಿಯಾಗಿದೆಯೆಂದು ತಿಳಿಯದೆ, ಊಟಕ್ಕೆ ಮುಂಚೆ ಸ್ನಾನ ಮುಗಿಸಿಕೊಳ್ಳಲು ಹೇಳಿದನು. ವಿಷಯ ತಿಳಿದ ತಕ್ಷಣ ಎಲ್ಲರೂ ಕಕ್ಕಾಬಿಕ್ಕಿಯಾಗಲು ದ್ರೌಪದಿ ಶ್ರೀಕೃಷ್ಣನನ್ನು ನೆನೆಸಿಕೊಂಡಳು. ಅಲ್ಲಿಗೆ ಆಗಮಿಸಿದ ಮೊದಲು ಏನಾದರೂ ತಿನ್ನಲು ಕೇಳಿದನು. ಅಕ್ಷಯ ಪಾತ್ರೆಯ ತಳದಲ್ಲಿ ಅಂಟಿದ್ದ ಒಂದೇಒಂದು ಅಗುಳನ್ನು ದ್ರೌಪದಿ ಶ್ರೀಕೃಷ್ಣನಿಗೆ ಕೊಟ್ಟಳು. ಅದನ್ನು ತಿಂದು ಶ್ರೀಕೃಷ್ಣ ಹೊಟ್ಟೆ ಸವರಿಕೊಂಡನು. ದೂರ್ವಾಸರು ಮತ್ತು ಅವರ ಶಿಷ್ಯರು ಹಿಂತಿರುಗಿದಾಗ ಅವರೂ ಇನ್ನೊಂದು ತುತ್ತೂ ಸೇರಲಾರದಷ್ಟು ಹೊಟ್ಟೆ ಭಾರವಾಗಿರುವುದಾಗಿ ಹೇಳಿ ಅಲ್ಲಿಂದ ಹೊರಟುಹೋದರು. ದುರ್ಯೋಧನನ ಯೋಜನೆ ವಿಫಲವಾಗಿತ್ತು.
೯. ಈ ಗರ್ಭದಿಂದ ಯಾದವ ಕುಲ ನಾಶವಾಗಲಿ
ಕ್ಯಾಟಿಗರಿ: ಶಾಪ
ಕತೆ: ಮಹಾಭಾರತ
ಹೇಳಿದವರು: ಹೆಸರಿಲ್ಲದ ಋಷಿಗಳು (ಕಿಸಾರಿ ಮೋಹನ್ ಗಾಂಗುಲಿ ಪ್ರಕಾರ ವಿಶ್ವಾಮಿತ್ರ, ಕಣ್ವ, ನಾರದ)
ಕೇಳಿದವರು: ಸಂಬ (ಸಂವ)
ಸಂದರ್ಭ: ಕುರುಕ್ಷೇತ್ರ ಯುದ್ಧವಾಗಿ ೩೬ ವರ್ಷಗಳಾಗಿತ್ತು. ಹೀಗೊಮ್ಮೆ ಮದ್ಯಭರಿತ ಯಾದವರು ಮೋಜಿನಲ್ಲಿದ್ದಾಗ ಅಲ್ಲಿಗೆ ಕೆಲವು ಬ್ರಾಹ್ಮಣರು/ಋಷಿಗಳು (ಗಾಂಗುಲಿ ಪ್ರಕಾರ ವಿಶ್ವಾಮಿತ್ರ, ಕಣ್ವ, ನಾರದ ಮಹರ್ಷಿಗಳು) ಅಲ್ಲಿಗೆ ಬಂದರು. ಕುಡಿದ ಅಮಲಿನಲ್ಲಿ ಯಾದವರು ಸಂಬನಿಗೆ (ಜಾಂಬವತಿಯಿಂದ ಕೃಷ್ಣನ ಮಗ, ಕೃಷ್ಣನ ಉತ್ತರಾಧಿಕಾರಿಯೆಂದಂತು ಹಲವು ಕಡೆ ಹೇಳಲಾಗಿದೆ) ಹೆಣ್ಣುವೇಷ ಹಾಕಿಸಿ ’ಈಕೆ ಗರ್ಭವತಿ, ಇವಳಿಗೆ ಗಂಡು ಮಗುವೋ ಹೆಣ್ಣು ಮಗುವೋ ಹೇಳಿ’ ಎಂದು ಬ್ರಾಹ್ಮಣರ ಮುಂದೆ ನಿಲ್ಲಿಸಿದರು. ಮೋಸವನ್ನು ತಕ್ಷಣ ಹಿಡಿದ ಬ್ರಾಹ್ಮಣರು ’ಈ ಗರ್ಭದಿಂದ ಯಾದವಕುಲ ನಾಶವಾಗಲಿ’ ಎಂದು ಶಾಪ ಕೊಟ್ಟರು.
ಮುಂದೇನಾಯಿತು: ಮಾರನೆಯ ದಿನವೇ ಸಂಬ ಒಂದು ಗದೆಯನ್ನು ಹೆತ್ತ. ಭಯಗೊಂಡ ಯಾದವರು ಅದನ್ನು ಪುಡಿ ಮಾಡಿ ಸಮುದ್ರ ತೀರದಲ್ಲಿ ಹರಡಿದರು. ಆ ಸ್ಥಳದಲ್ಲಿ ಎರಕ ಹುಲ್ಲು ಬೆಳೆದುಕೊಂಡಿತು. ಇನ್ನೊಮ್ಮೆ ಯಾದವರು ಆ ಎರಕ ಹುಲ್ಲು ಬೆಳೆದ ಸ್ಥಳದಲ್ಲಿ ಹೀಗೆ ಮೋಜಿನಲ್ಲಿದ್ದಾಗ ಸಾತ್ಯಕಿಗು (ಪಾಂಡವರ ಕಡೆ ಯುದ್ಧ ಮಾಡಿರುತ್ತಾನೆ), ಕೃತವರ್ಮನಿಗೂ (ಕೌರವರ ಕಡೆ ಯುದ್ಧ ಮಾಡಿರುತ್ತಾನೆ) ಹತ್ತಿಕೊಂಡಿತು. ಅದು ಜಗಳಕ್ಕೆ ತಿರುಗಿ, ಕುಡಿದ ಅಮಲಿನಲ್ಲಿ ಯಾದವರೆಲ್ಲರೂ ಗುದ್ದಾಡ ತೊಡಗಿದರು. ಅಲ್ಲಿ ಬೆಳೆದಿದ್ದ ಎರಕ ಹುಲ್ಲಿನ ಒಂದೊಂದು ದಳವೂ ಒಂದೊಂದು ಗದೆಯಾಯಿತು. ಗುದ್ದಾಟ ಕದನವಾಯಿತು. ಒಬ್ಬರನ್ನೊಬ್ಬರು ಹೊಡೆದು ಯಾದವ/ವೃಷಿಣಿ/ಅಂಧಕ ಕುಲಗಳು ಸಂಪೂರ್ಣ ನಾಶವಾದವು. ಬೇಸತ್ತ ಕೃಷ್ಣ ಕಾಡಿಗೆ ಹೋಗಿ ಮಲಗಿರಲು ಬೇಡನೊಬ್ಬ ಅವನ ಕಾಲನ್ನು ಜಿಂಕೆಯ ಬಾಯಿ ಎಂದು ತಿಳಿದು ಬಾಣ ಹೊಡೆಯಲು, ಕೃಷ್ಣನೂ ವೈಕುಂಠಕ್ಕೆ ಹಿಂತಿರುಗಿದನು. ಅದಕ್ಕೂ ಮುಂಚೆ ಬಲರಾಮ ಹಲವನ್ನು ಹೊತ್ತು ಸಮುದ್ರಕ್ಕಿಳಿದು ಕಾಯವನ್ನು ಬಿಟ್ಟಿದ್ದನು.
೧೦. ಯಾರಾನ್ನು ನೆನೆಯುತ್ತಿರುವೆಯೋ ಅವನು ನಿನ್ನನ್ನು ಮರೆಯಲಿ
ಕ್ಯಾಟಿಗರಿ: ಶಾಪ
ಕತೆ: ಅಭಿಜ್ಞಾನಶಾಂಕುಂತಲಂ/ಮಹಾಭಾರತ
ಹೇಳಿದವರು: ದೂರ್ವಾಸ
ಕೇಳಿದವರು: ಶಕುಂತಲೆ/ಅನುಸೂಯೆ/ಪ್ರಿಯಂವದೆ
ಸಂದರ್ಭ: ಹಸ್ತಿನಾಪುರದ ಮಹಾರಾಜ ದುಷ್ಯಂತನು ಶಕುಂತಲೆಯನ್ನು ಗಂಧರ್ವವಿವಾಹವಾಗಿ (ಒಂದು ಉಂಗುರವನ್ನು ಬಳುವಳಿಯಾಗಿ ಕೊಟ್ಟು), ಅವಳನ್ನು ಹಸ್ತಿನಾಪುರಕ್ಕೆ ಕರೆಸಿಕೊಳ್ಳುವುದಾಗಿ ಹೇಳಿ ಹಿಂತಿರುಗಿದ್ದನು. ಆಗೊಮ್ಮೆ ದುಷ್ಯಂತನ ನೆನಪಿನಲ್ಲಿ ಶಕುಂತಲೆ ಮೈಮರೆತಿದ್ದಾಗ, ಅಲ್ಲಿಗೆ ದೂರ್ವಾಸರು ಬಂದರು. ದುಷ್ಯಂತನ ನೆನಪಿನಲ್ಲಿ ಮಗ್ನಳಾಗಿದ್ದ ಶಕುಂತಲೆಗೆ ಅವರ ಕೂಗು ಕೇಳಿಸದಿದ್ದಾಗ, ಕೋಪಿಷ್ಟರಾದ ದೂರ್ವಾಸರು ’ಯಾರಾನ್ನು ನೆನೆಯುತ್ತಿರುವೆಯೋ ಅವನು ನಿನ್ನನ್ನು ಮರೆಯಲಿ’ ಎಂದು ಶಾಪ ಕೊಟ್ಟರು.
ಮುಂದೇನಾಯಿತು: ದುಷ್ಯಂತ ಅವಳನ್ನು ಮರೆತ ಕಾರಣ ಶಕುಂತಲೆ ತಾನೇ ಹಸ್ತಿನಾಪುರಕ್ಕೆ ಹೋಗುತ್ತಿದ್ದಾಗ ದುಷ್ಯಂತನ ಉಂಗುರ ನೀರಿನಲ್ಲಿ ಜಾರಿ, ಮೀನೊಂದು ಅದನ್ನು ನುಂಗಿತು. ಶಾಪದ ಪ್ರಭಾವದಿಂದ ದುಷ್ಯಂತ ಅವಳನ್ನು ಮರೆತಿದ್ದ ಕಾರಣ (ಗುರುತಿಗೆ ಉಂಗುರವೂ ಇಲ್ಲದೆ) ಶಕುಂತಲೆ ತಂದೆ ಕಣ್ವರ ಆಶ್ರಮವೂ ಲಭಿಸದೆ, ಗಂಡ ದುಷ್ಯಂತನ ಮನೆಯಲ್ಲೂ ಇರಲಾಗದೆ ತಾನೇ ಒಂದು ಕುಟೀರ ಕಟ್ಟಿಕೊಂಡು ಅಲ್ಲಿ ಭರತನಿಗೆ ಜನ್ಮಕೊಟ್ಟಳು. ಹಲವು ತಿಂಗಳ ನಂತರ ಆ ಮೀನು ಬೆಸ್ತನೊಬ್ಬನಿಗೆ ಸಿಕ್ಕಿ, ಶಕುಂತಲೆಯ ಉಂಗುರ ದುಷ್ಯಂತನಲ್ಲಿ ಸೇರಿತು. ಆಗ ಎಲ್ಲವನ್ನೂ ನೆನಪಿಸಿಕೊಂಡು ಕೊನೆಗೆ ದುಷ್ಯಂತ-ಭರತ-ಶಕುಂತಲೆಯರ ಸಮಾಗಮವಾಯಿತು.
Extra Info: ಕಾಳಿದಾಸನ ಅಭಿಜ್ಞಾನಶಾಂಕುಂತಲಂ ಓದುವಂಥದ್ದು!
No comments:
Post a Comment