Friday, February 26, 2010

ವಿಪತ್ಕಾಲ

ವಿಪತ್ಕಾಲ

ಆರ್ಯದೇವ ಧ್ಯಾನದಲ್ಲಿ ನಿರತನಾಗಿದ್ದ. ಕೆಂಪು ವರ್ಣದ ವಸ್ತ್ರಗಳನ್ನು ಧರಿಸಿದ್ದ ಅವನ ತಲೆಯಮೇಲೆ ಕೂದಲೊಂದೂ ಇರಲಿಲ್ಲ. ಅವನ ಸಣ್ಣ ಕೋಣೆಯ ಪಶ್ಚಿಮ ದಿಕ್ಕಿಗಿದ್ದ ತೆರೆದ ಕಿಟಕಿಯಿಂದ ಸೂರ್ಯಾಸ್ತ ಕಾಣಿಸುತ್ತಿತ್ತು. ತುಂಗಾನದಿ ಪಕ್ಕದಲ್ಲೇ ಹರಿಯುತ್ತಿದ್ದು ತಣ್ಣನೆ ಗಾಳಿ ಬೀಸುತ್ತಿತ್ತು.

’ಇಲ್ಲಿಗೆ ಬಂದು ಒಂದು ರೀತಿ ನನ್ನ ಧರ್ಮವೇ ಅಸ್ತವಾಗುವಂತೆ ಮಾಡುತ್ತಿದ್ದೀನಿ’ ಎಂಬ ಉಪಮಾನವನ್ನು ಕಂಡು ನೊಂದುಕೊಂಡ. ಆದರೂ ಕುಲಪತಿಯ ಆದೇಶ ಹೀಗೇ ಇದ್ದದ್ದು. ಅದನ್ನು ಪಾಲಿಸುವುದು ತನ್ನ ಕರ್ತವ್ಯವೆಂದುಕೊಂಡು ಸಮಾಧಾನ ಮಾಡಿಕೊಂಡ.

ಸ್ವಲ್ಪ ಹೊತ್ತು ಕಳೆದು ಕತ್ತಲೆಯಾಗಿತ್ತು. ಕೋಣೆಯೊಳಗೆ ಯಾರೋ ಬಂದಂತಾಗಿ ತಿರುಗಿ "ಯಾರು?" ಎಂದ.

ಯಾವ ಉತ್ತರವೂ ಬರಲಿಲ್ಲ. ಕೇವಲ ನಿಟ್ಟುಸಿರಿನ ಶಬ್ಧ. ಕತ್ತಲಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಆರ್ಯದೇವನಿಗೆ ತನ್ನ ಕತ್ತಿನ ಸುತ್ತ ಯಾರೋ ಹಗ್ಗ ಬಿಗಿದಂತಾಯಿತು. ಅನಿಯಂತ್ರಿತವಾಗಿ ಅವನ ಕೈಗಳು ಕುತ್ತಿಗೆಗೆ ಹೋಗಿ ಹಗ್ಗವನ್ನು ಸಡಿಲಗೊಳಿಸಲು ಪ್ರಯತ್ನಿಸಿದಾಗ ಅದು ಹಗ್ಗವಲ್ಲ, ರುದ್ರಾಕ್ಷಿಮಾಲೆಯೆಂಬ ಅರಿವಾಯಿತು. ಮುಂದಿನ ಯೋಚನೆ ಮಾಡುವಷ್ಟು ಸಮಯವಿರಲಿಲ್ಲ. ಆಗಲೆ ಉಸಿರು ಕಟ್ಟಿ ತಲೆ ತಿರುಗಲಾರಂಭಿಸಿತ್ತು. ಕೂಗಲು ಪ್ರಯತ್ನಿಸಿದಾಗ ಸಣ್ಣನೆಯ ಗೊಗ್ಗರು ಧ್ವನಿ ಹೊರಬಂತು.

ಕುತ್ತಿಗೆಯಬಳಿ ಇದ್ದ ಕೈಗಳು ತೋಯ್ದು ಒದ್ದೆಯಾದಂತಾಗಿ, ಕೈಯನ್ನು ನೋಡಿಕೊಂಡ. ಕತ್ತಲಲ್ಲಿ ಏನೂ ಕಾಣಿಸದಿದ್ದರೂ ಹಸಿ ರಕ್ತದ ದುರ್ನಾಥವನ್ನು ಗುರುತಿಸಿದ. ರುದ್ರಾಕ್ಷಿಗಳು ತನ್ನ ಕಂಠವನ್ನು ಛೇದಿಸಿವೆ ಎಂಬ ಅರಿವಾಗುವಷ್ಟರಲ್ಲಿ ಜ್ಞಾನ ತಪ್ಪಿತು. ಇನ್ನು ಕೆಲವು ಕ್ಷಣಗಳ ಒತ್ತಡದ ನಂತರ ತೆರೆದಿದ್ದ ಕಣ್ಣುಗಳಿಂದ ಜ್ಯೋತಿ ಆರಿಹೋಯಿತು. ಕೊಲೆಗಾರ ಆರ್ಯದೇವನನ್ನು ಹಾಗೇ ಬಿಟ್ಟು ಹೊರಟುಹೋದ.

*****

ಅರ್ಕಶರ್ಮ ರಾಷ್ಟ್ರಕೂಟ ದೊರೆಗಳ ಸಾಮಂತನಾಗಿದ್ದ ಶೃಂಗಗಿರಿಯ ರಾಜ ಚಂದ್ರವರ್ಮನ ಆಸ್ಥಾನದಲ್ಲಿ ಕೆಳದರ್ಜೆಯ ಮಂತ್ರಿ. ತುರ್ತಾಗಿ ಬರಬೇಕೆಂದು ಚಂದ್ರವರ್ಮನ ಮಹಾಮಂತ್ರಿಯ ದೂತ ಬಂದು ಸಂದೇಶ ತಲುಪಿಸಿದಾಗ ಅರ್ಕ ಬೇಗನೆ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಮಹಾಮಂತ್ರಿಯ ಸಂದರ್ಶನ ಮಾಡಿದ. ಮಹಾಮಂತ್ರಿ ಚೆಲುವರಾಯ ವ್ಯಕ್ತಿಯೋರ್ವರೊಡನೆ ಮಾತನಾಡುತ್ತಿದ್ದು, ಅರ್ಕಶರ್ಮನನ್ನು ಅವರಿಗೆ ಪರಿಚಯ ಮಾಡಿಸಿದರು.

"ಅರ್ಕಶರ್ಮ, ಇವರು ಶಾರದಾಪೀಠದಿಂದ ಬಂದಿದ್ದಾರೆ. ಅಲ್ಲಿ ಗಂಭೀರ ಸಮಸ್ಯೆಯೊಂದು ಉತ್ಪತ್ತಿಯಾಗಿದೆ. ಅಲ್ಲಿ ವಿಚಾರಣೆ ನಡೆಸಿ ಬಂದು ನಮಗೆ ತಿಳಿಸುವುದು ನಿನ್ನ ಕಾರ್ಯ"

ಅರ್ಕ ಶಾರದಾಪೀಠದಿಂದ ಬಂದಿದ್ದ ವ್ಯಕ್ತಿಯ ಕಡೆ ತಿರುಗಿದ. "ಏನು ಸಮಸ್ಯೆ?"

"ಉತ್ತರದಲ್ಲಿ ಚಾಂದೇಲರ ರಾಜ್ಯದಲ್ಲಿರುವ ನಾಲಂದಾ ನಿಮಗೆ ಗೊತ್ತಿರಬಹುದು. ಅದು ಬೌದ್ಧತತ್ತ್ವವನ್ನು ಆಚರಿಸುವವರ ಕೇಂದ್ರವಾಗಿದೆ. ಇತ್ತೀಚೆಗೆ ಪಶ್ಚಿಮ ದೇಶಗಳಿಂದ ಬಂದಿರುವ ಮ್ಲೇಚ್ಛ-ತುರುಷ್ಕರ ಆಕ್ರಮಣಗಳು ಆ ಪ್ರದೇಶದಲ್ಲಿ ಹೆಚ್ಚಾಗಿ, ನಾಲಂದಾ ತತ್ತರಿಸುತ್ತಿದೆ. ಹಾಗಾಗಿ ಆ ಬುದ್ಧಾನುಯಾಯಿಗಳು ತಮ್ಮ ಧರ್ಮ ರಕ್ಷಣೆಗೆಂದು ನಮ್ಮವರ ಸಹಕಾರ ಕೇಳುತ್ತಿದ್ದಾರೆ. ಅದೇ ವಿಚಾರವಾಗಿ ಅಲ್ಲಿನಿಂದ ಆರ್ಯದೇವ ಎಂಬ ಪಂಡಿತರು ಈ ಕೆಲವು ದಿನಗಳ ಹಿಂದೆ ಶಾರದಾಪೀಠಕ್ಕೆ ಆಗಮಿಸಿದ್ದರು. ಪೀಠಾದಿಪತಿ ಆಚಾರ್ಯ ವಿದ್ಯಾತೀರ್ಥರೊಡನೆ ಮಾತು-ಕತೆಗಳನ್ನು ನಡೆಸುತ್ತಿದ್ದರು. ಆದರೆ ನೆನ್ನೆಯ ದಿನ ಅವರ ಹತ್ಯೆಯಾಗಿದೆ"

"ಹತ್ಯೆ!?" ಅಚ್ಚರಿಯಿಂದ ಕೇಳಿದ ಅರ್ಕ. "ಹತ್ಯೆಯೆಂದು ಹೇಗೆ ನಿಗಮನ ಮಾಡಿದ್ದೀರಿ?"

"ರುದ್ರಾಕ್ಷಿಮಾಲೆಯಿಂದ ಅವರ ಕತ್ತು ಬಿಗಿದು ಅವರ ಹತ್ಯೆ ಮಾಡಲಾಗಿದೆ. ಆ ಮಾಲೆ ಅವರ ಕತ್ತಿನ ಸುತ್ತಲೇ ಸುರುಳಿ ಸುತ್ತಿಕೊಂಡಿತ್ತು. ರುದ್ರಾಕ್ಷಿ ಮಣಿಗಳು ಅವರ ಕತ್ತನ್ನು ಛೇಧಿಸಿ ರಕ್ತ ಚೆಲ್ಲಿತ್ತು. ಸುರುಳಿಬಿಡಿಸಿಕೊಳ್ಳಲು ಪ್ರಯತ್ನ ಮಾಡಿದಂತೆ ಆ ರಕ್ತ ಅವರ ಕೈಗಳಿಗೂ ಹತ್ತಿತ್ತು"

"ರುದ್ರಾಕ್ಷಿ? ಹಾಗಾದರೆ ಹತ್ಯೆ ಮಾಡಿದವರಾರು?"

"ಅಲ್ಲೇ ಇರುವುದು ತೊಂದರೆ. ಆರ್ಯದೇವರ ಜೊತೆ ಮತ್ತೊಬ್ಬ ಯುವಕ ಭಿಕ್ಕು ಬಂದಿದ್ದ - ಬಂದಿದ್ದಾನೆ. ಅವನ ಹೆಸರು ವಸುಕೀರ್ತಿ ಎಂದು. ರುದ್ರಾಕ್ಷಿಮಾಲೆಯನ್ನು ನೋಡಿ ಅವನು ’ಯಾರೋ ನಿಮ್ಮವರೇ ಹತ್ಯೆ ಮಾಡಿರಬೇಕು, ಸಹಕಾರ ಕೇಳ ಬಂದರೆ ಕೊಂದಿದ್ದೀರ’ ಎಂದು ಸಮಸ್ಯೆ ಹುಟ್ಟಿಸಿದ್ದಾನೆ. ಅದಕ್ಕೆ ನಿಜವಾದ ಕೊಲೆಗಾರನನ್ನು ಪತ್ತೆ ಮಾಡಿ ಅವನಿಗೆ ಶಿಕ್ಷೆ ವಿಧಿಸಬೇಕು"

ಮಹಾಮಂತ್ರಿ ಜೋಡಿಸಿದರು "ಹೌದು, ಇದು ನಮ್ಮ ಧರ್ಮದ, ನಮ್ಮ ರಾಜ್ಯದ, ಮಹಾರಾಜ ಚಂದ್ರವರ್ಮರ ಘನತೆ-ಗೌರವದ ಪ್ರಶ್ನೆ. ನೀನು ಇವರೊಡನೆ ಪೀಠಕ್ಕೆ ಹೋಗಿ ವಿಚಾರಣೆ ಮಾಡಿ ಅಪರಾಧಿಯನ್ನು ಪತ್ತೆ ಮಾಡಬೇಕು"

"ಆಗಲಿ ಮಹಾಮಂತ್ರಿ" ಎಂದು ಅರ್ಕ ಪೀಠಾಧಿಕಾರಿಯ ಕಡೆಗೆ ತಿರುಗಿ, "ನಡೆಯಿರಿ ಪೀಠಕ್ಕೆ ಹೋಗೋಣ" ಎಂದು ಮುನ್ನಡೆದ.

*****

ಎರಡು ದಿನಗಳ ನಂತರ ಅರ್ಕಶರ್ಮ ಮಹಾಮಂತ್ರಿಯನ್ನು ಮತ್ತೆ ಭೇಟಿ ಮಾಡಿದ.

"ಸ್ವಾಮಿ, ಶಾರದಾಪೀಠದಲ್ಲಿ ನಡೆದ ಕೊಲೆ ವಿಚಾರಣೆ ಮಾಡಿದೆ. ಅದರ ವರದಿ ತಿಳಿಸಲು ಬಂದಿದ್ದೇನೆ" ಎಂದ.

ಮಹಾಮಂತ್ರಿ "ಹೂಂ, ಹೇಳು" ಎಂದರು.

"ಪೀಠಾಧಿಕಾರಿ ಹೇಳಿದಂತೆ ಅದು ಕೊಲೆಯೇ. ಅದರಲ್ಲಿ ಯಾವ ಸಂದೇಹವೂ ಇಲ್ಲ"

"ಕೊಲೆಗಾರ?"

"ನಾನು ಪೀಠದಲ್ಲಿರುವ, ಹಾಗು ಆರ್ಯದೇವನ ಜೊತೆ ಯಾವುದೇ ಸಂಬಂಧವಿದ್ದ ಎಲ್ಲರ ಜೊತೆ ಮಾತನಾಡಿದ್ದೇನೆ. ಅವನು ಬಂದಿದ್ದ ವಿಚಾರ ತಿಳಿದಿದ್ದು ಕೇವಲ ನಾಲ್ವರಿಗೆ - ಮಠಾಧಿಪತಿಗಳು, ಅವರ ಶಿಷ್ಯರಲ್ಲೊಬ್ಬ, ಪೀಠಾಧಿಕಾರಿ ಮತ್ತೆ..."

"ಮತ್ತೆ?"

"ನಾಲಂದಾದಿಂದ ಆರ್ಯದೇವನೊಡನೆ ಬಂದಿದ್ದ ಮತ್ತೊಬ್ಬ ಭಿಕ್ಕು. ನಾನು ಎಲ್ಲರೊಡನೆ ಮಾತನಾಡಿದೆ. ಇವರಲ್ಲಿ ಯಾರಿಗೂ ಆರ್ಯದೇವನ ಮರಣದಿಂದ ಯಾವ ರೀತಿಯ ಲಾಭವಿರುವುದೂ ಗೋಚರವಾಗುತ್ತಿಲ್ಲ. ಇನ್ನು ಅವನ ಮೇಲೆ ಹಿಂಸಾಚಾರ ನಡೆಸಿ ಇವರ ಹತ್ಯೆ ಮಾಡುವುದು ದೂರ. ಆದರೆ..."

"ಆದರೆ?"

"ನನಗೆ ಆ ಮಾರಕಾಶಸ್ತ್ರದ ವಿಷಯದಲ್ಲಿ ಏಕೋ ಕಸಿವಿಸಿ"

"ಹಾಗೆಂದರೆ?"

"ನೀವು ಯಾರನ್ನಾದರೂ ಕೊಲೆ ಮಾಡುವುದಾದರೆ ಯಾವ ಶಸ್ತ್ರ ಉಪಯೋಗಿಸುವಿರಿ?"

"ಹಾಂ?" ಮಹಾಮಂತ್ರಿಗಳ ಮುಖದಲ್ಲಿ ಕೋಪ ಕಾಣಿಸಿತು

"ಕ್ಷಮಿಸಿ, ಸ್ವಾಮಿ, ಹಾಗಲ್ಲ. ಸಾಧಾರಣ ಕೊಲೆಗಾರ ಹತ್ಯೆ ಮಾಡಲು ಎಂತಹ ಆಯುಧ ಉಪಯೋಗಿಸಿಯಾನು?"

"ಎದುರಿಗೆ ನಿಂತು ಕೊಲೆ ಮಾಡುವುದಾದರೆ ಕತ್ತಿ. ಯಾರಿಗೂ ಸಂದೇಹ ಬಾರದ ಹಾಗೆ ಕೊಲೆ ಮಾಡುವುದಾದರೆ ಬಹುಶಃ ವಿಷವನ್ನು ಹಾಕಿ, ಇಲ್ಲವೇ ಬಹುಶಃ ನೀರಿನಲ್ಲಿ ಮುಳುಗಿಸಿ, ನದಿಯಲ್ಲಿ ಶವ ತೇಲಿ ಬಿಡಬಹುದು"

"ಅದೇ ನಾನೂ ಹೇಳುತ್ತಿರುವುದು. ರುದ್ರಾಕ್ಷಿ ಮಾಲೆಯಲ್ಲಿ - ಧರ್ಮಪೀಠದಲ್ಲಿ ಎಲ್ಲರೂ ರುದ್ರಾಕ್ಷಿ ಮಾಲೆ ಧರಿಸುವವರೇ - ಕತ್ತು ಬಿಗಿದು ಕೊಲೆ ಮಾಡುವ ಕಾರಣವೇನಿರಬಹುದು?"

"ಕೊಲೆಗಾರ ಆತುರದಲ್ಲಿದ್ದಿರಬಹುದು. ಕೈಗೆ ಸಿಕ್ಕ ಉಪಕರಣದಿಂದ ಕೊಲೆ ಮಾಡಿರಬಹುದು"

"ಇಲ್ಲ, ಸ್ವಾಮಿ. ಹಾಗಿರಲು ಸಾಧ್ಯವಿಲ್ಲ. ಆರ್ಯದೇವನ ಕೋಣೆಯ ಸುತ್ತ ರುದ್ರಾಕ್ಷಿ ಮಾಲೆಗಿಂತ ಯೋಗ್ಯ ಆಯುಧಗಳನ್ನು ನಾನೇ ಕಂಡಿದ್ದೇನೆ. ಸಾಧಾರಣ ರುದ್ರಾಕ್ಷಿ ಮಾಲೆ ಕತ್ತು ಬಿಗಿದಾಗ ಕಿತ್ತು ಹೋಗಬಹುದು. ಆದರೆ ಈ ಮಾಲೆಯನ್ನು ಸುಲಭವಾಗಿ ಕಿತ್ತುಹೋಗಲಾರದ ದಾರದಿಂದ ಮಾಡಲಾಗಿತ್ತು. ಕೊಲೆಗಾರ ಈ ಆಯುಧವನ್ನು ಈ ಕೆಲಸಕ್ಕೇ ಪ್ರತ್ಯೇಕವಾಗಿ ಮಾಡಿರಬೇಕು. ಹಾಗೇ ಆಗಿದ್ದಲ್ಲಿ ಕೊಲೆಗಾರ ಮಾಲೆಯನ್ನು ಕೊಲೆಯಾದವನ ಕತ್ತಿನಲ್ಲೇ ಬಿಟ್ಟು ಹೋಗಲು ಕಾರಣವೇನು?"

"ಯಾರೋ ಅನಿರೀಕ್ಷಿತವಾಗಿ ಕೊಲೆಯಾದ ಸ್ಥಳಕ್ಕೆ ಬಂದಿರಬಹುದು"

"ನಾನೂ ಹಾಗೇ ಯೋಚಿಸಿದೆ, ಆದರೆ ಕೊಲೆಯಾಗಿರುವುದು ತಿಳಿಯುವಷ್ಟು ಹೊತ್ತಿಗೆ ಸುಮಾರು ಸಮಯ ಕಳೆದಿತ್ತು. ಶವ ಆಗಲೇ ಸೆಡೆದುಕೊಂಡಿತ್ತಂತೆ. ಗೊತ್ತಾಗಿದ್ದು ಬೆಳಗ್ಗೆ, ಅಂದರೆ ಹಿಂದಿನ ದಿನ ರಾತ್ರಿಯೇ ಕೊಲೆಯಾಗಿರಬೇಕು. ಕೊಲೆಯಾಗುತ್ತಿರುವಾಗ ಅನಿರೀಕ್ಷಿತವಾಗಿ ಯಾರಾದರೂ ಬಂದಿದ್ದರೆ ಇನ್ನೂ ಮುಂಚೆಯೇ ಈ ವಿಚಾರ ಗೊತ್ತಾಗಬೇಕಿತ್ತು. ಕೊಲೆಗಾರ ಆ ಮಾಲೆಯನ್ನು ಅಲ್ಲೇ ಬಿಟ್ಟು ಏನೋ ಸಂದೇಶ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ ಎನಿಸುತ್ತಿದೆ"

"ಎಂತಹ ಸಂದೇಶ?"

"ಏನೋ... ಗೊತ್ತಾಗುತ್ತಿಲ್ಲ, ಮಹಾಮಂತ್ರಿ"

"ಹಂ... ಹಾಗಾದರೆ ಮುಂದೇನು?" ಮಹಾಮಂತ್ರಿ ಕೇಳಿದರು

"ನನಗೇನೂ ತೋಚುತ್ತಿಲ್ಲ ಸ್ವಾಮಿ. ಕೊಲೆಗಾರನ ಸುಳಿವು ತಣ್ಣಗಾದಂತಿದೆ. ಆದರೆ ಮತ್ತೊಂದು ವಿಚಾರ..."

"ಹೇಳು"

"ವಿಚಾರಣೆ ಮಾಡುವಾಗ ವಸುಕೀರ್ತಿಯೊಡನೆಯೂ ಮಾತನಾಡಿದೆ. ಅವನು.."

"ವಸುಕೀರ್ತಿ? ಯಾರದು?" ಮಹಾಮಂತ್ರಿ ಕೇಳಿದರು

"ಆರ್ಯದೇವನ ಜೊತೆ ನಾಲಂದಾದಿಂದ ಬಂದವ - ಅವನು ಬಹಳ ನಿಷ್ಟುರವಾಗಿ ಮಾತನಾಡುತ್ತಾನೆ. ನಾವು ಕೊಲೆಗಾರನನ್ನು ಹಿಡಿಯಲು ಸಾಕಷ್ಟು ಪ್ರಯತ್ನ ಮಾಡುತ್ತಿಲ್ಲವೆಂದು ಅವನ ಅನಿಸಿಕೆ. ಎಷ್ಟು ಒಳ್ಳೆ ಮಾತನ್ನಾಡಿದರೂ ಅವನಿಗೆ ರಣೋತ್ಸಾಹ. ಕೊಲೆಗಾರನನ್ನು ಹಿಡಿಯದೆ ಅವನನ್ನು ನಾಲಂದಾಗೆ ಕಳಿಸಿಕೊಟ್ಟರೆ ಅಲ್ಲಿ ಮಹಾರಾಜರ, ಮತ್ತು ಶಾರದಾಪೀಠದ ಘನತೆ-ಗೌರವ ನುಚ್ಚು ನೂರಾಗುವುದು ಖಚಿತ"

"ಹಂ... ನಿನಗೇನೆನಿಸುತ್ತದೆ?"

"ಸ್ವಾಮಿ, ಆರ್ಯದೇವ ನಾಲಂದಾ ಕುಲಪತಿಯ ದೂತನಾಗಿ ಶಾರದಾಪೀಠಕ್ಕೆ ಬಂದಿದ್ದನಂತೆ. ವಸುಕೀರ್ತಿ ಮಾತನಾಡುವುದು ನೋಡಿದರೆ ಆರ್ಯದೇವನನ್ನು ನಾವೇ ಕೊಲೆ ಮಾಡಿಸಿದ್ದನ್ನು ಕಣ್ಣಾರೆ ಕಂಡೆ ಎಂದು ಹೇಳಲೂ ಹೇಸುವವನಲ್ಲ. ಅದಕ್ಕೆ ವಸುಕೀರ್ತಿಯ ಜೊತೆ ನಮ್ಮವರಾರಾದರೂ ಹೋಗಿ ನಾಲಂದಾದ ಕುಲಪತಿಯಲ್ಲಿ ಸನ್ನಿವೇಶದ ನಮ್ಮ ವರದಿ ಒಪ್ಪಿಸಬೇಕು, ಇಲ್ಲವಾದರೆ ಶಾರದಾಪೀಠದಲ್ಲಿ ನಾಲಂದಾ ಕುಲಪತಿಯಿತ್ತಿರುವ ನಂಬಿಕೆಯ ಉಲ್ಲಂಘನೆಯಾದೀತು"

"ಅದರ ಬಗ್ಗೆ ಯೋಚಿಸೋಣ. ನೀನಿನ್ನು ಹೋಗಿಬಾ" ಎಂದು ಮಹಾಮಂತ್ರಿ ಅರ್ಕಶರ್ಮನನ್ನು ಕಳುಹಿಸಿಕೊಟ್ಟರು.

*****

"ಎಲ್ಲವನ್ನೂ ಬಿಟ್ಟು ನಿಮ್ಮನ್ನು ನಮ್ಮ ಸಂಗಡ ಕಳುಹಿಸಿದ್ದಾರೆ." ವಸುಕೀರ್ತಿ ಅರ್ಕಶರ್ಮನಲ್ಲಿ ಕೇಳುತ್ತಿದ್ದ. ವಸುಕೀರ್ತಿಗೆ ಕನ್ನಡವಾಗಲಿ ದಕ್ಷಿಣದ ಇತರ ಭಾಷೆಗಳಾಗಲಿ ಮಾತನಾಡಲು ಬರುತ್ತಿರಲಿಲ್ಲ. ಹಾಗಾಗಿ ಈ ಸಂವಾದವು ಸಂಸ್ಕೃತದಲ್ಲಿ ನಡೆಯುತ್ತಿತ್ತು. "ಇಷ್ಟಕ್ಕೂ ನೀವಲ್ಲಿಗೆ ಬಂದು ಮಾಡುವುದಾದರೂ ಏನು? ಆರ್ಯದೇವರ ಕೊಲೆಯ ವಿಚಾರದ ವರದಿ ಒಪ್ಪಿಸುವುದಕ್ಕೆ ನಿಮ್ಮ ಹಸ್ತಕ್ಷೇಪದ ಅಗತ್ಯವಾದರೂ ಏನು? ಪೀಠದವರೇ ಅವರ ಹತ್ಯೆ ಮಾಡಿಸಿದ್ದನ್ನು ಕುಲಪತಿಯಲ್ಲಿ ನಾನು ಹೇಳಲಾರೆನೇ?"

ಅರ್ಕಶರ್ಮ ಮಹಾಮಂತ್ರಿಗೆ ಒಪ್ಪಿಸಿದ ವರದಿಯ ಎರಡು ದಿನಗಳ ನಂತರ ಮಹಾಮಂತ್ರಿ ಪುನಃ ಅರ್ಕಶರ್ಮನನ್ನು ಬರಹೇಳಿದ್ದರು. ತಾವು ಅರ್ಕನ ವರದಿಯ ವಿಚಾರದಲ್ಲಿ ಆಲೋಚನೆ ಮಾಡಿರುವುದಾಗಿಯೂ, ಅವನ ಸಲಹೆಯಂತೆ ಪೀಠದ ಪರ ವರದಿಯನ್ನು ನಾಲಂದಾ ಕುಲಪತಿಯಲ್ಲಿ ಒಪ್ಪಿಸುವುದಕ್ಕೆ ದೂತನೊಬ್ಬನನ್ನು ಕಳಿಸುವುದೇ ಉತ್ತಮವೆಂದು ಸಮ್ಮತಿಸುವುದಾಗಿಯೂ ತಿಳಿಸಿದರು. ಅರ್ಕನೇ ಆ ದೂತನಾಗಬೇಕೆಂಬ ಅಜ್ಞೆಯನ್ನಿತ್ತರು.

ಮರುದಿನ ಅರ್ಕನಿಗೆ ಮಹಾರಾಜ ಚಂದ್ರವರ್ಮನ ಮುದ್ರೆಯುಳ್ಳ ಪರಿಚಯ ಪತ್ರ, ಚಂದ್ರವರ್ಮನಿಂದ ಕುಲಪತಿಯ ಹೆಸರಿಗೆ ಸಂದೇಶ, ಹಾಗು ಅವನು ನಾಲಂದಾಗೆ ಪ್ರಯಾಣ ಮಾಡಲು ಬೇಕಾಗುವ ಅನುಜ್ಞಾ ಪತ್ರಗಳು ದೊರಕಿದವು. ಮತ್ತೆರಡು ದಿನಗಳ ನಂತರ ವಸುಕೀರ್ತಿಯ ಜೊತೆ ಕುದುರೆ ಸವಾರನಾಗಿ, ಸಾರ್ಥವೊಂದನ್ನು ಕೂಡಿ ಅರ್ಕಶರ್ಮ ಉತ್ತರ ದೇಶದಲ್ಲಿದ್ದ ನಾಲಂದಾಗೆ ಪ್ರಯಾಣ ಪ್ರಾರಂಭಿಸಿದ.

ಸಾರ್ಥಗಳು ಕೆಲವು ನಿಗದಿತ ಮಾರ್ಗಗಳಲ್ಲಿ ಪ್ರಯಾಣ ಮಾಡುತ್ತಿದ್ದವು. ದೇಶಾದ್ಯಂತ ಇಂತಹ ಹಲವಾರು ಸಾರ್ಥ-ಮಾರ್ಗಗಳು. ಈ ಮಾರ್ಗಗಳು ಒಂದಕ್ಕಒಂದು ದಾಟುವುದೂ ಉಂಟು. ಅಂತಹ ಸ್ಥಳಗಳು ವಾಣಿಜ್ಯ ಕೇಂದ್ರಗಳು. ಪಯಣಿಸುವ ಸಾರ್ಥಗಳು ತಮ್ಮ ತಮ್ಮ ಸರಕನ್ನು, ಅಥವ ಸರಕಿಗೆ ಹೊನ್ನನ್ನು ಬದಲಾಯಿಸಿಕೊಳ್ಳುವವು. ವ್ಯಾಪಾರ ಮುಗಿದ ನಂತರ ತಮ್ಮ ತಮ್ಮ ದಾರಿ ಹಿಡಿಯುವವು. ಇಂಥದ್ದೇ ವಾಣಿಜ್ಯ ಕೇಂದ್ರಗಳಲ್ಲಿ ಒಂದು ಸಾರ್ಥವನ್ನು ಬಿಟ್ಟು ಮತ್ತೊಂದು ಸಾರ್ಥದ ಜೊತೆ ಮಾಡಿಕೊಂಡು ಅರ್ಕ, ವಸುಕೀರ್ತಿಯಿಬ್ಬರೂ ನಾಲಂದಾದ ಕಡೆ ಸಾಗಿದ್ದರು.

ದಾರಿಯಲ್ಲಿ ನಡೆದ ಒಂದೆರಡು ವಿಚಿತ್ರ ಘಟನೆಗಳು ಅರ್ಕಶರ್ಮನನ್ನು ಕಾಡುತ್ತಿದ್ದವು. ಸಾರ್ಥವು ಬಯಲು ಪ್ರದೇಶದಲ್ಲಿ ನದಿಯ ತೀರದಲ್ಲಿ ವಿಶ್ರಾಂತಿಗೆಂದು ಒಂದು ದಿನ ತಂಗಿತ್ತು. ಆಗ ಮರವೊಂದಕ್ಕೆ ಒರಗಿ ಅರ್ಕ ತೂಕಡಿಸುತ್ತಿದ್ದ. ಒಮ್ಮೆಲೆ ಎರಡು ಪ್ರತ್ಯೇಕ ಘಟನೆಗಳು ಘಟಿಸಿದವು. ಕೂತು ಮರಕ್ಕೊರಗಿದ್ದ ಅರ್ಕ ತೂಕಡಿಸಿ ದೇಹದ ಆಯ ತಪ್ಪಿ, ಕೆಳಗುರುಳಿದ. ಅದೇ ಸಮಯಕ್ಕೆ ಕುಡುಗತ್ತಿಯೊಂದು ಛಂಗ್ ಎಂದು ಅರ್ಕ ಒರಗಿದ್ದ ಸ್ಥಳದಲ್ಲಿ ಮರಕ್ಕೆ ನಾಟಿಕೊಂಡಿತು. ಅರ್ಕನಿಗೆ ಒಮ್ಮೆಲೆ ಎಚ್ಚರವಾಯಿತು. ಆತ್ಮರಕ್ಷಣೆ ಪರಮವಾಯಿತು. ಮರದ ಹಿಂದೆ ಹೋಗಿ ಅವಿತ. ಮೆಲ್ಲನೆ ಬಗ್ಗಿ ಸುತ್ತಲೂ ನೋಡಿದ ಯಾರೂ ಕಾಣಲಿಲ್ಲ. ಆ ಕ್ಷಣದಲ್ಲಿ ಅದು ತನ್ನ ಪ್ರಾಣದ ಮೇಲೆ ಯಾರೋ ಮಾಡಿದ ಆಕ್ರಮಣವೆನಿಸಿ ನಂತರ ಒಂದೆರಡು ದಿನ ಜಾಗರೂಕವಾಗಿ ಯಾವಾಗಲೂ ಗುಂಪಿನಲ್ಲಿರುತ್ತಿದ್ದ. ಕ್ರಮೇಣ ’ಬಹುಶಃ ಆ ಪ್ರಸಂಗ ಆಕಸ್ಮಿಕವಿರಬಹುದೇ?’ ಎಂದು ಯೋಚಿಸ ತೊಡಗಿದ.

ಕುಡುಗತ್ತಿ ಘಟನೆಯಾದದ್ದು ಪ್ರಯಾಣದ ಮೊದಲ ವಾರದಲ್ಲೇ. ಮತ್ತೊಂದು ಘಟನೆಯಾದದ್ದು ಇನ್ನೂ ಎರಡು ಸಪ್ತಾಹಗಳು ಕಳೆದ ನಂತರ. ಪ್ರಯಾಣ ಆಗಲೇ ಕಳಿಂಗ ದೇಶದಲ್ಲಿನ ಮಹಾನದಿ ತೀರವನ್ನು ತಲುಪಿತ್ತು. ಇನ್ನೇನು ನಾಲಂದಾ ಸೇರಲು ಹೆಚ್ಚು ದೂರ, ಸಮಯವಿಲ್ಲವೆಂದು ಹರ್ಷಿತನಾಗಿದ್ದ. ಮಳೆಗಾಲ, ಬೆಟ್ಟ-ಗುಡ್ಡ ಪ್ರದೇಶವಾದ್ದರಿಂದ ಮಹಾನದಿ ರಭಸದಿಂದ ಹರಿಯುತ್ತಿತ್ತು. ತೀರದಲ್ಲಿ ಬಂಡೆಯೊಂದರ ಮೇಲೆ ಕೂತು ಸಂಧ್ಯಾವಂದನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ನೀರಿನಲ್ಲಿ ಬಿದ್ದು ಹೋದ. ಶೃಂಗಗಿರಿಯಲ್ಲಿ ತುಂಗಾನದಿಯಲ್ಲಿ ಸುಳಿಯಾಗುತ್ತದೆ. ಹಾಗಾಗಿ ಅಲ್ಲಿಯವರೆಲ್ಲ ಉತ್ತಮ ಈಜುಗಾರರಾಗಿರುತ್ತಾರೆ. ಅರ್ಕನೂ ಚಿಕ್ಕಂದಿನಿಂದ ಈಜು ಕಲಿತಿದ್ದವ. ಕಷ್ಟ ಪಟ್ಟು ಹೇಗೋ ಎರಡು ಕ್ರೋಶಗಳಷ್ಟು ದೂರ ತೇಲಿ ಹೋಗಿ ದಡ ಸೇರಿಕೊಂಡ. ’ಈಜು ಬಾರದಿದ್ದರೆ ಏಳುತ್ತಿದ್ದದ್ದು ಸಮುದ್ರದಲ್ಲೇ’ ಎಂದುಕೊಂಡ. ಬಂಡೆಯ ಮೇಲೆ ಕೂತಿದ್ದವ ತಾನಾಗಿ ತಾನೇ ನದಿಯೊಳಗೆ ಬೀಳಲಿಲ್ಲ. ಯಾರೋ ಹಿಂದಿನಿಂದ ತಳ್ಳಿದ ಆಭಾಸ. ಆದರೆ ಯಾರು? ಹಿಂದೆ ಕುರುಬಾಕು ಪ್ರಸಂಗ ನಿಜವಾಗಿ ಆಕಸ್ಮಿಕವೇ? ಯಾವುದಕ್ಕೂ ಉತ್ತರ ಕಾಣಿಸುತ್ತಿರಲಿಲ್ಲ.

ಇಷ್ಟೆಲ್ಲ ನಡೆಯುವುದರ ಮಧ್ಯೆ ವಸುಕೀರ್ತಿ ಹೆಸರಿಗೆ ಅರ್ಕನ ಜೊತೆ ಪ್ರಯಾಣ ಮಾಡುತ್ತಿದ್ದ. ಅರ್ಕನ ಜೊತೆ ಮಾತನಾಡುವುದಾಗಲಿ, ಏಳುವುದು-ಕೂರುವುದಾಗಲಿ ಮಾಡುತ್ತಿರಲಿಲ್ಲ. ಸಾರ್ಥದಲ್ಲಂತೂ ಅವನೇ ಬೇರೆ, ಇವನೇ ಬೇರೆ. ಒಟ್ಟಿನಲ್ಲಿ ಸುಮಾರು ೩೫ ದಿನಗಳ ಪ್ರಯಾಣದ ನಂತರ ಚೋಳ, ಕಾಕತೀಯ, ಕಳಿಂಗ, ಚಾಂದೇಲ ಹಾಗು ಪಾಳ ದೇಶಗಳನ್ನು ದಾಟಿ ಇಬ್ಬರೂ ನಾಲಂದಾ ಸೇರಿದರು.

*****

ನಾಲಂದಾ ಸೇರಿದ ಕೂಡಲೆ ಅರ್ಕನನ್ನು ಬಿಟ್ಟು ವಸುಕೀರ್ತಿ ಸಂಪೂರ್ಣವಾಗಿ ಮಾಯವಾದ. ವಿಚಾರಿಸಿದಾಗ ಕುಲಪತಿಯಿರುವುದು ಬೌದ್ಧ ವಿದ್ಯಾಲಯದೊಳಗೆಂದು ಅರಿವಾಯಿತು. ವಿದ್ಯಾಲಯದ ಒಳಗೆ ಹೋಗಲು ಯತ್ನಿಸಿದಾಗ ಅಲ್ಲಿ ಭೋತದೇಶದ ಯೋಧರ ಪಹರೆ. ಭೋತವೆಂದರೆ ಜಂಬೂದ್ವೀಪದ ಹೊರಗೆ ಹಿಮಾಲಯದಾಚೆಯಿರುವ ಒಂದು ಶೀತಲ ಮರುಭೂಮಿ. ಆ ದೇಶದ ಯೋಧರು ಕತ್ತಿವರಸೆ ಹಾಗು ಶಸ್ತ್ರರಹಿತ ಕದನಕಲೆಗಳಲ್ಲಿ ನಿಪುಣರು. ಇವರಿಗೆಲ್ಲ ನಾಯಕ ನಾಲಂದಾದ ದ್ವಾರಪಂಡಿತ. ಇವನಾದರೋ ಅವರಂತೆ ಯೋಧನಲ್ಲ. ಹೆಸರಿಗೆ ತಕ್ಕಂತೆ ವೇದಾಂತ-ಪಂಡಿತ. ವಿದ್ಯಾಲಯಕ್ಕೆ ಅಧ್ಯಯನ ಮಾಡಲು ಬರುವವರನ್ನೆಲ್ಲ ಈತ ಪರೀಕ್ಷೆ ಮಾಡುವನು. ವಿದ್ಯಾರ್ಥಿಗಳು ದ್ವಾರಪಂಡಿತನ ಜೊತೆ ತರ್ಕ ಮಾಡತಕ್ಕದ್ದು. ನಂತರ ವಿದ್ಯಾರ್ಥಿ ನಾಲಂದಾದಲ್ಲಿ ಸಾಧನೆ ಮಾಡಲು ಯೋಗ್ಯನೇ, ಅಲ್ಲವೇ ಎಂದು ದ್ವಾರಪಂಡಿತ ನಿರ್ಣಯಮಾಡುವನು. ವಿದ್ಯಾಲಯವನ್ನು ಯಾವುದೇ ರೀತಿಯಲ್ಲಿ ಆಕ್ರಮಣ ಮಾಡಲು ಬಂದವರು ಭೋತ-ಯೋಧರನ್ನು ಎದುರಿಸಬೇಕಾಗುತ್ತಿತ್ತು.

ಅರ್ಕಶರ್ಮ ಕುಲಪತಿಯನ್ನು ಕಂಡು ತನ್ನ ವರದಿಯೊಪ್ಪಿಸಲು ವಿದ್ಯಾಲಯಕ್ಕೆ ಬಂದಾಗ ದ್ವಾರಪಂಡಿತನ ಎದುರಾದ. "ನೀವು ನೋಡಿದರೆ ಬ್ರಾಹ್ಮಣರಂತೆ ಕಾಣುತ್ತಿದ್ದೀರ. ಇದು ತಥಾಗಥನ ಧರ್ಮವನ್ನವಲಂಭಿಸುವವರ ಆಲಯ. ಇಲ್ಲಿ ಅವರಿಗೆ ಮಾತ್ರ ಪ್ರವೇಶವಿರುವುದು. ನೀವೂ ಧರ್ಮ ಬದಲಾಯಿಸಿ ಪರೀಕ್ಷೆಯನ್ನೆದುರಿಸುವುದಾದರೆ ನಿಮಗೆ ಪ್ರಾಯಶಃ ಪ್ರವೇಶ ಸಿಗಬಹುದು. ಇಲ್ಲವೇ ಹೊರಟುಹೋಗಿ" ಎಂದ.

"ಸ್ವಾಮಿ, ನನ್ನ ಹೆಸರು ಅರ್ಕಶರ್ಮ. ನಾನು ದಕ್ಷಿಣದಲ್ಲಿರುವ ಆದಿ ಶಂಕರಾಚಾರ್ಯ ಸ್ಥಾಪಿತ ಶಾರದಾಪೀಠವಿರುವ ಶೃಂಗಗಿರಿಯವನು. ಇಲ್ಲಿನಿಂದ ಅಲ್ಲಿಗೆ ಆರ್ಯದೇವ ಎಂಬ ಪಂಡಿತರು ಆಗಮಿಸಿದ್ದರು. ಅವರ ವಿಚಾರವಾಗಿ ನಾನಿಲ್ಲಿಗೆ ಬಂದಿರುವೆನೇ ಹೊರತು ಇಲ್ಲಿ ವಿದ್ಯಾಭ್ಯಾಸ ಮಾಡಲು ಬಂದಿಲ್ಲ. ಕುಲಪತಿಯನ್ನು ಕಾಣುವ ಅವಕಾಶ ಮಾಡಿಕೊಟ್ಟರೆ ನಿಮ್ಮ ಆಭಾರಿಯಾಗಿರುತ್ತೇನೆ" ಎಂದು ಅರ್ಕ ವಿನಯದಿಂದ ಹೇಳಿದ.

"ಆರ್ಯದೇವರ ವಿಚಾರವೇ? ಅವರೆಲ್ಲಿದ್ದಾರೆ? ನಿಮ್ಮನ್ನು ದೂತನಾಗಿ ಕಳಿಸಿದ್ದಾರೆಯೇ? ಅದು ಹೇಗೆ ಸಾಧ್ಯ? ಅವರೊಂದಿಗಿದ್ದ ವಸುಕೀರ್ತಿಯನ್ನೇ ಕಳುಹಿಸಬಹುದಿತ್ತಲ್ಲ? ಅದಿರಲಿ ನಿಮಗೆ ತಥಾಗಥನ ಈ ಆಲಯದೊಳಗೆ ಪ್ರವೇಶವಿಲ್ಲ. ಕುಲಪತಿಯನ್ನು ಬಿಟ್ಟರೆ ನಾನೇ ಈ ವಿದ್ಯಾಲಯಕ್ಕೆ ನಾಯಕ. ವಿಚಾರವೇನಿದ್ದರೂ ನನ್ನಲ್ಲಿ ಹೇಳಿ ಹೊರಟುಹೋಗಿ" ದರ್ಪದಿಂದ ದ್ವಾರಪಂಡಿತ ಹೇಳಿದ.

"ಮಹಾನೀಯರೇ, ನಾನು ಬಂದಿರುವುದು ಕುಲಪತಿಯನ್ನು ನೋಡಲು. ನಮ್ಮ ಮಹಾರಾಜರ ಓಲೆಯೊಂದು ನನ್ನ ಬಳಿ ಇರುವುದು. ಅದು ಕುಲಪತಿಯ ಹೆಸರಿಗೆ ಬರೆಯಲಾಗಿದೆ. ಆ ಓಲೆಯನ್ನು ಕುಲಪತಿಯ ಕೈಯಲ್ಲೇ ಇತ್ತು ನನ್ನ ವರದಿ ಹೇಳಬೇಕೆಂಬ ನಮ್ಮ ಮಹಾರಾಜರ ಆಜ್ಞೆಯಾಗಿದೆ. ದಯವಿಟ್ಟು ನನಗೆ ಪ್ರವೇಶ ಕೊಡಿ" ಅರ್ಕ ಪುನಃ ವಿನಯವಾಗಿಯೇ ಕೇಳಿಕೊಂಡ.

"ಹಾಗೋ ವಿಚಾರ? ಆಗಲಿ, ಹೋಗಿಬನ್ನಿ. ಆದರೆ ವಿದ್ಯಾಲಯದೊಳಗಿರುವ ಸಮಯದಲ್ಲಿ ನಮ್ಮ ಧರ್ಮದ ವಿರುದ್ಧ ಯಾವ ಕಾರ್ಯವನ್ನೂ ಮಾಡಬಾರದು, ನಿಮ್ಮ ಧರ್ಮಾಚರಣೆಯನ್ನು ನಡೆಸಬಾರದು. ಹಾಗೇನಾದರೂ ಆದಲ್ಲಿ ನಮ್ಮ ಭೋತ ಯೋಧರನ್ನು ಎದುರಿಸಬೇಕಾದೀತು" ಎಂಬ ಎಚ್ಚರಿಕೆ ಕೊಟ್ಟು, ದ್ವಾರಪಂಡಿತ ಕುಲಪತಿಯನ್ನು ಸಂದರ್ಶಿಸಲು ಮಾರ್ಗದರ್ಶನ ಮಾಡಿದ.

*****

ಅರ್ಕಶರ್ಮ ಕುಲಪತಿಯನ್ನು ಕಂಡು ನಡೆದ ವಿಚಾರವನ್ನೆಲ್ಲಾ ವಿವರಿಸಿದ. ತಾನು ಎಲ್ಲರೊಡನೆ ಮುಖಾಮುಖಿ ನಡೆಸಿದ ಸಂದರ್ಶನವನ್ನು ವಿವರಿಸಿ, ಶಾರದಾಪೀಠದಲ್ಲಿ ಯಾರಿಗೂ ಆರ್ಯದೇವನ ಸಂಹಾರ ಮಾಡಲು ಪ್ರಚೋದನೆಯಿರುವ ಲಕ್ಷಣಗಳು ಕಾಣಿಸಲಿಲ್ಲವೆಂದು ತಿಳಿಸಿದ.

ಕುಲಪತಿ ವಯಸ್ಸಾದ ವ್ಯಕ್ತಿ; ವ್ಯಾವಹಾರಿಕ ಚಾತುರ್ಯತೆಯುಳ್ಳವರಾಗಿ ಕಂಡು ಬಂದರು. ತನ್ನ ದೃಷ್ಟಿಕೋನವನ್ನು ಅವರೂ ಕಂಡವರಂತೆ ಅರ್ಕನಿಗೆನಿಸಿತು. ವಿನಯವಾಗಿ "ಅರ್ಕಶರ್ಮರೇ, ಆರ್ಯದೇವರ ಹತ್ಯೆ ರುದ್ರಾಕ್ಷಿ ಮಾಲೆಯಿಂದ ಮಾಡಿರುವ ಕಾರಣ ನನಗೆ ಅರ್ಥವಾಗಲಿಲ್ಲ. ಇದರ ಬಗ್ಗೆ ನೀವೇನಾದರೂ ಬೆಳಕು ಚೆಲ್ಲಬಲ್ಲಿರಾ?"

ಕುಲಪತಿಯ ತಾದಾತ್ಮ್ಯದಿಂದ ಅರ್ಕನಿಗೂ ಅವರಲ್ಲಿ ಗೌರವ ಮೂಡಿತ್ತು. "ಕ್ಷಮಿಸಿ, ಕುಲಪತಿ. ನನಗೂ ಈ ವಿಚಾರದಲ್ಲಿ ತೃಪ್ತಿಯಿಲ್ಲವಾದರೂ ಇದರ ನೆಲೆಗಾಣುವುದು ಸುಲಭವಾಗಿ ಕಾಣುತ್ತಿಲ್ಲ. ಆರ್ಯದೇವರ ಮರಣದ ವಿಚಾರದಲ್ಲಿ ಸಧ್ಯಕ್ಕೆ ನಾನಿಷ್ಟೇ ಹೇಳಬಲ್ಲೆ: ಅಜ್ಞಾತ ಕಾರ್‍ಅಣಗಳಿಂದ ಅಪರಿಚಿತ ವ್ಯಕ್ತಿ-ಯಾ-ವ್ಯಕ್ತಿಗಳು ರುದ್ರಾಕ್ಷಿ ಮಾಲೆಯಿಂದ ಅವರನ್ನು ನೇಣು ಹಾಕಿ ಅವರ ವಧೆ ಮಾಡಿದ್ದಾರೆ. ಈ ಕೃತ್ಯವನ್ನು ಮಾಡಿದವರು ಪತ್ತೆಯಾದರೆ ಅವರಿಗೆ ತಕ್ಕ ಶಿಕ್ಷೆ ವಿಧಿಸುವುದಾಗಿ ಮಹಾರಾಜ ಚಂದ್ರವರ್ಮರು ತಮ್ಮ ವ್ಯಕ್ತಿಗತ ಆಶ್ವಾಸನೆ ಕಳುಹಿಸಿದ್ದಾರೆ"

ಕುಲಪತಿ ಸ್ವಲ್ಪ ಹೊತ್ತು ಚಿಂತನೆಯಲ್ಲಿ ಮುಳುಗಿದ್ದರು. ಬಹುಶಃ ನಿದ್ರಾವಸ್ತೆಯ ವಶವಾಗಿರಬಹುದೆಂದು ಯೋಚಿಸಿ ಅರ್ಕಶರ್ಮ ಇನ್ನೇನು ನಿರ್ಗಮಿಸಬೇಕೆಂದಿದ್ದ, ಆಗ ಕುಲಪತಿ ಕೇಳಿದರು: "ನಿಮಗೆ ಆರ್ಯದೇವ ಶಾರದಾಪೀಠಕ್ಕೆ ಬಂದಿದ್ದ ಕಾರಣ ತಿಳಿದಿದೆಯೇ?"

"ಮ್ಲೇಚ್ಛ-ತುರುಷ್ಕರ ಆಕ್ರಮಣಗಳಿಂದ ಬಳಲುತ್ತಿರುವ ನೀವು ಸಹಾಯ ಕೇಳಲು ಆರ್ಯದೇವನನ್ನು ನಮ್ಮ ಪೀಠಕ್ಕೆ ಕಳುಹಿಸಿದ್ದೀರಿಯೆಂದು ಪೀಠಾಧಿಕಾರಿಗಳು ತಿಳಿಸಿದರು" ಅರ್ಕ ಉತ್ತರಿಸಿದ. "ಆದರೆ.."

"ಆದರೆ?"

"ಈ ವಿಚಾರದಲ್ಲಿ ನಮ್ಮ ಪೀಠದವರು ಹೇಗೆ ನಿಮ್ಮ ಸಹಾಯ ಮಾಡಿಯಾರೆಂದು ನನಗೆ ಅರ್ಥವಾಗಿಲ್ಲ"

ಕುಲಪತಿ ನಿಗೂಢ ನಗೆಯೊಂದನ್ನು ಬೀರಿ ಮತ್ತೊಂದು ಪ್ರಶ್ನೆ ಹಾಕಿದರು: "ಆರ್ಯದೇವರ ಮರಣದ ವಿಚಾರ ಮತ್ತಾರಿಗೆ ತಿಳಿದಿದೆ?"

"ಆರ್ಯದೇವರ ಜೊತೆ ಬಂದಿದ್ದ ವಸುಕೀರ್ತಿಗೆ ಎಲ್ಲ ವಿಚಾರವೂ ತಿಳಿದಿದೆ. ಜೊತೆಗೆ ನಿಮ್ಮ ದ್ವಾರಪಂಡಿತರಿಗೆ ನಾನು ಆರ್ಯದೇವರ ವಿಚಾರವಾಗಿ ಇಲ್ಲಿಗೆ ಆಗಮಿಸಿರುವೆ ಎಂದು ಹೇಳಿದ್ದೇನೆ"

"ವಸುಕೀರ್ತಿ? ಯಾರದು?"

"ನಿಮಗೆ ಗೊತ್ತಿಲ್ಲವೇ? ಆರ್ಯದೇವರ ಜೊತೆ ನಮ್ಮ ದೇಶಕ್ಕೆ ಬಂದಿದ್ದರು"

"ಹಾ... ಹೌದು. ವಸುಕೀರ್ತಿ..." ಎಂದು ತಡವರಿಸಿ ಕುಲಪತಿ ಸ್ವಲ್ಪ ಹೊತ್ತು ಪುನಃ ಚಿಂತಾಗ್ರಸ್ಥರಾಗಿದ್ದರು. ಕೊನೆಗೆ ಒಮ್ಮೆಲೆ ಅವರ ಮನೋಭಾವ ಹಗುರವಾದಂತಾಗಿ "ಅರ್ಕಶರ್ಮರೇ, ನಾಲಂದಾದ ವೈಭವವನ್ನು ತಥಾಗಥನ ಅನುಯಾಯಿಗಳು ಮಾತ್ರ ಕಂಡಿದ್ದಾರೆ. ಬನ್ನಿ ನಿಮಗೆ ನಾಲಂದಾ ವೈಭವಯಾತ್ರೆಯನ್ನು ಮಾಡಿಸುತ್ತೇನೆ. ನೀವು ನಿಮ್ಮ ಊರನ್ನು ತಲುಪಿದ ನಂತರ ನಮ್ಮ ವಿದ್ಯಾಲಯವನ್ನು ನಿಮ್ಮ ಪೀಠದವರಿಗೆ ವಿವರಿಸಲು ಸಹಾಯವಾದೀತು" ಎನ್ನುತ್ತ ಅರ್ಕನನ್ನು ನಾಲಂದಾ ತೋರಿಸಲು ಕರೆದೊಯ್ದರು.

*****

"ನಾಲಂದಾ ಸುಮಾರು ೭೦೦ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ವಿದ್ಯಾಲಯ. ಒಂದು ಕಾಲದಲ್ಲಿ ಸುಮಾರು ೧೦೦೦೦ ವಿದ್ಯಾರ್ಥಿಗಳು, ೨೦೦೦ ಆಚಾರ್ಯರು ಈ ಆವರಣದಲ್ಲೇ ವಾಸವಾಗಿದ್ದರು. ಬರೀ ಭಾರತವರ್ಷವಷ್ಟೇ ಅಲ್ಲ ದೂರ ದೇಶಗಳಿಂದ ಕೂಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆಂದು ಇಲ್ಲಿಗೆ ಬರುತ್ತಿದ್ದರು" ಕುಲಪತಿ ಅರ್ಕಶರ್ಮನಿಗೆ ನಾಲಂದಾ ದೃಶ್ಯಗಳನ್ನು ತೋರಿಸುತ್ತ ವಿವರಣೆಯಿತ್ತರು.

ಮುಂದುವರೆಸುತ್ತ "ನಾಲಂದಾದಲ್ಲಿ ಒಟ್ಟು ೧೮ ಸಂಘಾರಾಮಗಳಿವೆ. ಇಲ್ಲಿ ಧರ್ಮಶಾಸ್ತ್ರ, ವೇದಾಂತ, ರಾಜನೀತಿ, ವಿಜ್ಞಾನ, ವೈದ್ಯಶಾಸ್ತ್ರ, ಇತ್ಯಾದಿ ವಿಷಯಗಳಲ್ಲಿ ಶಿಕ್ಷಣ ನೀಡಲಾಗುತ್ತದೆ. ನಮ್ಮ ಗ್ರಂಥಾಲಯದಲ್ಲಿ ಸುಮಾರು ಒಂದು ಲಕ್ಷ ಹಸ್ತಲಿಖಿತ ಪುಸ್ತಗಳಿವೆ. ಅಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಐಚ್ಛಿಕ ವಿಷಯಗಳಲ್ಲಿ ಸಂಶೋಧನೆ ಮಾಡಬಹುದು"

ಅರ್ಕಶರ್ಮ ಚಕಿತನಾಗಿ ಕುಲಪತಿಯ ಒಂದೊಂದು ಮಾತು ಮುತ್ತನ್ನೂ ಜೋಡಿಸಿಕೊಳ್ಳುತ್ತಿದ್ದ. "೭೦೦ ವರ್ಷವೆಂದಿರಿ, ಹಾಗಾದರೆ ಇದನ್ನು ಸ್ಥಾಪಿಸಿದ್ದು, ಪೋಷಿಸಿದವರಾರು?"

"ಗುಪ್ತವಂಶದ ಚಕ್ರವರ್ತಿ ಕುಮಾರಗುಪ್ತರು ಸ್ಥಾಪಿಸಿದ್ದು. ಅವರು ನಿಮ್ಮ ಧರ್ಮದವರೇ ಆದರೂ ತಥಾಗಥನ ತತ್ತ್ವಗಳೆಂದರೆ ಉನ್ನತ ಗೌರವ ತೋರಿಸುತ್ತಿದ್ದರು. ನಂತರ ಗುಪ್ತವಂಶದ ಅನೇಕ ಚಕ್ರವರ್ತಿಗಳು ಪ್ರಧಾನವಾಗಿ ಬುದ್ಧಗುಪ್ತ, ಪುರಾಗುಪ್ತ ಹಾಗು ನರಸಿಂಹಗುಪ್ತರು ಈ ವಿದ್ಯಾಲಯವನ್ನು ಪೋಷಿಸಿದ್ದಾರೆ. ನಂತರ ಹರ್ಷ-ಚಕ್ರವರ್ತಿ, ಮತ್ತು ಪಾಳ ವಂಶದ ಅರಸರೂ ಇದನ್ನು ಪೋಷಿಸಿದ್ದಾರೆ. ಕ್ಷಮಿಸಿ ಆದರೆ ನಿಮ್ಮ ಧರ್ಮದವರಲ್ಲಿ ನಮ್ಮ ವೈರಿಗಳಾಗಿದ್ದವರೂ ಉಂಟು ಉದಾಹರಣೆಗೆ ಗೌಡದೇಶದ ಶಶಾಂಕರಾಜ, ಮತ್ತು ಮಗಧದೇಶದ ಮಿಹಿರಕುಳ. ಇವರನ್ನು ಹತೋಟಿಗೆ ತಂದವರೂ ನಿಮ್ಮ ಧರ್ಮದವರೇ ಆದ್ದರಿಂದ ಆಕ್ಷೇಪಣ ಮಾಡಲಾರೆ"

"ಮಹನೀಯರೇ, ಈ ವಿದ್ಯಾಲಯ ಬಹು ದೊಡ್ಡದಾಗಿ ಕಾಣಿಸುತ್ತಿದೆ - ಇದರ ವಿಸ್ತಾರವೆಷ್ಟು?"


"ಅಹುದು ಇದು ಬಹಳ ದೊಡ್ಡದಾಗಿದೆ. ಇಂದು ಸುಮಾರು ೩೫ ಎಕರೆಗಳಷ್ಟು ವಿಸ್ತಾರವಾಗಿದೆ. ಇದು ಕೇವಲ ವಿದ್ಯಾಲಯ ಮಾತ್ರ. ಸುತ್ತ-ಮುತ್ತ ಹಲವಾರು ಗ್ರಾಮಗಳನ್ನು, ಭೂಮಿಯನ್ನೂ ಅನೇಕ ರಾಜ-ಚಕ್ರವರ್ತಿಗಳು ವಿದ್ಯಾಲಯಕ್ಕೆ ದತ್ತಿ ಕೊಟ್ಟಿದ್ದಾರೆ. ಮೇಲಾಗಿ ಆ ರಾಜ-ಮಹಾರಾಜರುಗಳು ಆಗಾಗ ಕಾಣಿಕೆಯನ್ನೂ ನೀಡುತ್ತಾರೆ, ಹಾಗಾಗಿ ವಿದ್ಯಾಲಯ ಸ್ವಾವಲಂಬಿಯಾಗಿದೆ. ಬನ್ನಿ, ನಿಮಗೆ ಇಲ್ಲಿಯ ಲಕ್ಷಣಗಳನ್ನು ತೋರಿಸುತ್ತೇನೆ"

ಇಬ್ಬರೂ ನಡೆದು ಹೊರಟರು. "ನಾವೀಗಿರುವುದು ವಿದ್ಯಾಲಯ ಆವರಣದ ದಕ್ಷಿಣ ಭಾಗದಲ್ಲಿ. ನಮ್ಮ ಹಿಂದಿರುವ ಸರೋವರ ಇಂದ್ರಕುಂಡ. ಅಗೋ ಅಲ್ಲಿ ಎಡಕ್ಕೆ ಕುವಾಕುಂಡ ಅದರ ಪಕ್ಕದಲ್ಲಿ ಬಲೇನಕುಂಡ ಮೂಂದೆ ದೇಹರಕುಂಡ. ಇನ್ನೂ ಮುಂದೆ ಹೋದರೆ ಸೂರ್ಯಕುಂಡ ಕಾಣಿಸುತ್ತದೆ. ಇತ್ತ ಬಲಕ್ಕೆ ಕಾಣಿಸುತ್ತಿರುವುದು ತಾರ್ಸಿಂಗಕುಂಡ, ಅದರ ಪಕ್ಕ ಆ ಸಣ್ಣದು ಲೋಕನಾಥಕುಂಡ, ಮುಂದೆ ದೊಡ್ಡದು ಪಂಸುಕರಕುಂಡ"

"ಸ್ವಾಮೀ, ಏಕಿಷ್ಟೊಂದು ಸರೋವರಗಳು?"

"ಸಹಸ್ರಾರು ವಿದ್ಯಾರ್ಥಿ-ಆಚಾರ್ಯರ ಸ್ನಾನಾಚಮಾನಾದಿಗಳಿಗೆ ಇದು ಅಗತ್ಯವಾಗಿದೆ. ಹೀಗೆ ಬನ್ನಿ; ಇದೇ ಮುಖ್ಯಮಾರ್ಗ"

ಇಬ್ಬರೂ ಮುನ್ನಡೆದರು. ಮಾರ್ಗದ ಎಡಭಾಗದಲ್ಲಿ ಒಂದು ಭವ್ಯ ಗುಡಿ ಕಾಣಿಸಿತು. ಅದನ್ನು ತೋರಿಸಿ ಕುಲಪತಿ "ಅದು ನಮ್ಮ ಅತೀ ಪ್ರಧಾನ ಸ್ತೂಪ. ಅದರಲ್ಲಿ ತಥಾಗಥನ ಕೇಶ ಹಾಗು ನಖಗಳನ್ನು ಸ್ಥಾಪನೆ ಮಾಡಲಾಗಿದೆ. ರೋಗಿಗಳು ಆ ಸ್ತೂಪಕ್ಕೆ ಆಗಮಿಸಿದರೆ ಅವರ ರೋಗ-ರುಜಿನವು ಗುಣವಾಗುವುದು" ಎಂದು ನುಡಿದರು. ಸ್ವಲ್ಪ ದೂರ ನಡೆದು ಪದ್ಮಾಸನದಲ್ಲಿ ಧ್ಯಾನನಿರತ ಬುದ್ಧನ ಶಿಲ್ಪವೊಂದನ್ನು ತೋರಿಸಿ "ಅಗೋ ನೋಡಿ ಅವಲೋಕಿತೇಶ್ವರನ ಪ್ರತಿಮೆ. ಅವಲೋಕಿತೇಶ್ವರ ಎಂದರೆ ಕೆಳಗೆ ನೋಡುವ ದೇವನೆಂದರ್ಥ. ಅವಲೋಕಿತೇಶ್ವರನ ಕಂಗಳು ನೆಲವನ್ನೇ ನೋಡುತ್ತಿರುತ್ತವೆ"

ಕೊಂಚ ದೂರ ಸಾಗಿದರು. ಕುಲಪತಿ ಮಾರ್ಗದ ಎಡಭಾಗ ತೋರಿಸುತ್ತ ವಿವರಿಸುತ್ತಲೇ ಇದ್ದರು "ಇದು ಮತ್ತೊಂದು ಸ್ತೂಪ. ಒಳಗೆ ತಥಾಗಥನ ಪ್ರತಿಮೆಯಿದೆ. ಅಲ್ಲಿ ಮುಂದಿರುವುದೊಂದು ವಿಹಾರ. ವಿಹಾರದೊಳಗೆ ಒಂದು ಬೃಹತ್ ಧಾನ್ಯಾಗರವಿರುವುದು. ಅಡಿಗೆಮನೆಯೂ ಅದರ ಜೊತೆಯಲ್ಲೇ ಇದೆ. ಪ್ರಯಾಣಿಕರಿಗೆ, ವಿದ್ಯಾಲಯಕ್ಕೆ ಭೇಟಿ ಕೊಡಲು ಬಂದವರಿಗೆ ತಂಗಲು ಸ್ಥಳ, ಭೋಜನಕ್ಕೆ ವ್ಯವಸ್ಥೆ ಅಲ್ಲೇ. ನಿಮಗೂ ಅಲ್ಲೇ ಸ್ಥಳ ಮಾಡಿಕೊಡುತ್ತೇವೆ. ಅಗೋ ಅಲ್ಲಿ ಮತ್ತೊಂದು ಚೈತ್ಯ"

"ಇಗೋ ಈಕಡೆ ನೋಡಿ" ಎಂದು ಮಾರ್ಗದ ಬಲಕ್ಕೆ ಬೆರಳು ತೋರಿಸಿದರು. ಮಹಾದ್ವಾರವಿದ್ದ ಒಂದು ಪ್ರಾಕಾರ, ಪ್ರಾಕಾರದೊಳಗೆ ಒಂದು ದೊಡ್ಡ ಕಟ್ಟಡವಿತ್ತು. "ಇದು ವಿದ್ಯಾರ್ಥಿನಿಲಯ. ಒಳಗೆ ವಿದ್ಯಾರ್ಥಿ ಕೋಣೆಗಳು. ಒಬ್ಬೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಕೋಣೆ ನೀಡಲಾಗುತ್ತದೆ. ಇದನ್ನು ಬುದ್ಧಗುಪ್ತ ಚಕ್ರವರ್ತಿ ಕಟ್ಟಿಸಿದ್ದು. ಅದರ ಪಕ್ಕದಲ್ಲಿರುವ ನಿಲಯವನ್ನು ಸಕ್ರಾದಿತ್ಯರಾಜ ಕಟ್ಟಿಸಿದ್ದು. ಸಕ್ರಾದಿತ್ಯನಿಲಯದ ಹಿಂಭಾಗದಲ್ಲಿರುವುದು ಆಚಾರ್ಯನಿಲಯ. ಇದಕ್ಕೆ ತಥಾಗಥ ಆಶ್ರಮವೆಂದೇ ಹೆಸರು. ನಮ್ಮ ವಾಸವೂ ಅಲ್ಲೇ"

ಇನ್ನೂ ಸ್ವಲ್ಪ ಮುನ್ನಡೆದರು. ಎಡಕ್ಕೆ ತೋರಿಸಿ "ಅದು ಮತ್ತೊಂದು ವಿಹಾರ. ಇತ್ತ ಬಲಕ್ಕೆ ವಜ್ರಾಶ್ರಮ, ಅದರ ಹಿಂದೆ ಬಾಲಾದಿತ್ಯರಾಜ ಕಟ್ಟಿಸಿದ ನಿಲಯ" ಬಾಲಾದಿತ್ಯರಾಜ ನಿಲಯವು ಉನ್ನತ ಶಿಖರವುಳ್ಳ ಕಟ್ಟಡವಾಗಿತ್ತು, ಅದರ ಪಕ್ಕದಲ್ಲಿ ಸಣ್ಣ ನೀರಿನ ಕುಂಡವೊಂದಿತ್ತು. ಕುಂಡವನ್ನು ತೋರಿಸಿ ಕುಲಪತಿ "ಆ ಕುಂಡ ಹಿಂದಿನ ಕಾಲದಲ್ಲಿ ದೊಡ್ಡದಾಗಿತ್ತು ಅದರೊಳಗೆ ನಾಲಂದನೆಂಬ ದೈತ್ಯ ಸರ್ಪವೊಂದಿತ್ತು. ಅದರ ಹೆಸರನ್ನೇ ಈ ವಿದ್ಯಾಲಯಕ್ಕೆ, ಈ ಸ್ಥಳಕ್ಕೆ ಕೊಡಲಾಗಿದೆ" ಎಂಬ ಸ್ಥಳಪುರಾಣವನ್ನು ತಿಳಿಸಿದರು.

ಮುಂದೆ ಎಡಕ್ಕೆ ತೋರಿಸಿ ಅದು ಅವಲೋಕಿತೇಶ್ವರನ ವಿಹಾರವೆಂದೂ, ಬಲಕ್ಕೆ ಮತ್ತೊಂದು ಆಶ್ರಮವನ್ನೂ ತೋರಿಸಿದರು. ಮುಂದೆ ಬಲಕ್ಕೆ ತಪಸ್ವಿ ಬುದ್ಧನ ಉನ್ನತ ಪ್ರತಿಮೆ ಕಾಣಿಸಿತು, ಎಡಕ್ಕೆ ಬಾಲಾದಿತ್ಯನ ಸಂಘಾರಾಮವನ್ನು ತೋರಿಸಿದರು. ಇನ್ನೂ ಸ್ವಲ್ಪ ಮುನ್ನಡೆದು ಬಲಕ್ಕೆ ಜೈನ ಬಸದಿಯೊಂದನ್ನೂ, ಎಡಕ್ಕೆ ತಾರಾಬೋಧಿಸತ್ವರ ವಿಹಾರವನ್ನೂ ತೋರಿಸಿದರು.

"ಜೈನ ಬಸದಿ ನಿಮ್ಮ ವಿದ್ಯಾಲಯದೊಳಗೆ?" ಅರ್ಕಶರ್ಮ ಆಶ್ಚರ್ಯದಿಂದ ಕೇಳಿದ.

"ಜೈನ ಧರ್ಮದವರಿಗೆ, ನಮಗೆ, ನಿಮಗೆ ಹೆಚ್ಚು ವ್ಯತ್ಯಾಸವಿರುವುದೇ, ಅರ್ಕಶರ್ಮರೇ?" ಕುಲಪತಿ ಕೇಳಿದರು.

’ವ್ಯತ್ಯಾಸವಿದೆಯೆಂದೇ ನೀವು ನಿಮ್ಮ ರೀತಿ ಧರ್ಮಾಚರಣೆ ಪ್ರಾರಂಭಿಸಿದ್ದು. ಜೈನ ಧರ್ಮ, ಬುದ್ಧನ ಧರ್ಮವೆಂದು ಪ್ರತ್ಯೇಕ ಧರ್ಮಗಳನ್ನೂ ನೀವೇ ಹುಟ್ಟಿಸಿದವರಲ್ಲವೇ?’ ಎಂದು ಮನದಲ್ಲೇ ಯೋಚಿಸಿದರೂ ಅರ್ಕಶರ್ಮ ಅದಕ್ಕೆ ವಾಕ್‍ರೂಪ ಕೊಡಲಿಲ್ಲ.

"ಅಲ್ಲಿ ಆ ಮೂಲೆಯಲ್ಲಿ ನಮ್ಮ ಗೋಶಾಲೆ ಹಾಗು ಅಶ್ವಶಾಲೆ" ಎಂದು ವಿದ್ಯಾಲಯದ ಆವರಣದ ಉತ್ತರ ದಿಕ್ಕಿನಲ್ಲಿ ಕುಲಪತಿ ತೋರಿಸಿದರು. ನಡೆದು ಇಬ್ಬರೂ ಗೋಶಾಲೆಗೆ ಹೋದರು. ಒಳಗಿನಿಂದ ವ್ಯಾಘ್ರವೊಂದರ ಘರ್ಜನೆ ಕೇಳಿಬರುತ್ತಿತ್ತು. ಅದನ್ನು ಕೇಳಿದ ಅರ್ಕನ ಹೆಜ್ಜೆಗಳು ನಿಧಾನವಾದವು. ಕುಲಪತಿ ಅವನೆಡೆ ತಿರುಗಿ "ಹೆದರಬೇಡಿ, ಬನ್ನಿ" ಎಂದರು. ಧೈರ್ಯಗೊಂಡು ಅರ್ಕ ಮುನ್ನಡೆದ. ಕಟ್ಟಡದ ಎಡಭಾಗದಲ್ಲಿ ಗೋಶಾಲೆ. ನೂರಾರು ಎತ್ತು, ಹಸು-ಕರುಗಳು ಅಲ್ಲಿದ್ದವು. "ವಿದ್ಯಾಲಯಕ್ಕೆ ಬೇಕಾಗುವ ಹಾಲು, ಮೊಸರು, ತುಪ್ಪಗಳು ಇಲ್ಲಿನಿಂದ ಬರುತ್ತವೆ" ಕುಲಪತಿ ಹೇಳಿದರು. ಎಡಭಾಗದ ಕಡೆ ನಡೆದಾಗ ವ್ಯಾಘ್ರ-ಘರ್ಜನೆ ತೀವ್ರವಾಯಿತು.

ಒಳಗೆ ಅರ್ಕ ವಿಚಿತ್ರ ದೃಶ್ಯವೊಂದನ್ನು ಕಂಡ. ಅದು ಅಶ್ವಶಾಲೆಯೆಂದು ಬಿಡಿಸಿ ಹೇಳುವ ಅಗತ್ಯವಿರಲಿಲ್ಲ. ಆದರೆ ಅಲ್ಲಿ ಅಶ್ವಗಳ ಜೊತೆ ಲೋಹದ ಸಲಾಕೆಗಳಿಂದ ಮಾಡಿದ ಪಂಜರವೊಂದರೊಳಗೆ ಇತ್ತಲಿಂದತ್ತ ಚಡಪಡಿಸುತ್ತ ಓಡಾಡುತ್ತ ವ್ಯಾಘ್ರವೊಂದು ಘರ್ಜಿಸುತ್ತಿತ್ತು. ತೆರೆದ ಬಾಯಿ ತೆರೆದಂತೇ ನೋಡುತ್ತ ನಿಂತ ಅರ್ಕನನ್ನು ಕಂಡು ಮುಗುಳ್ನಕ್ಕ ಕುಲಪತಿ "ನಮ್ಮ ಭೋತದೇಶದ ಯೋಧರು ಅಶ್ವಾರೋಹಣ ಮಾಡಲು, ಬೇಟೆಯಾಡಲು ಕಾಡಿಗೆ ಹೋದಾಗ ಅಶ್ವಗಳು ವ್ಯಾಘ್ರ-ಘರ್ಜನೆಗೆ ಹೆದರಿ ನಿಯಂತ್ರಣವಿಲ್ಲದೆ ಓಡುತ್ತಿದ್ದವು. ಅದಕ್ಕೇ ಈ ರೀತಿ ಅಶ್ವಗಳಿಗೆ ವ್ಯಾಘ್ರನ ಘರ್ಜನೆ ಕೇಳಿ ಹೆದರದಿರಲು ತರಬೇತಿ ಕೊಡುತ್ತಿದ್ದಾರೆ" ಎಂದರು.

"ವ್ಯಾಘ್ರ ಏನಾದರೂ... ತಪ್ಪಿಸಿಕೊಂಡರೆ?" ಭಯಭೀತನಾದ ಅರ್ಕ ಕೇಳಿದ.

ಕುಲಪತಿ ಕೇವಲ ಮುಗುಳ್ನಕ್ಕರು.

*****

ಮರುದಿನ ಬೆಳಗ್ಗೆ ಬಾಗಿಲು ಬಡಿಯುವುದನ್ನು ಕೇಳಿ ಅರ್ಕನಿಗೆ ಎಚ್ಚರವಾಯಿತು. ಒಂದು ಕ್ಷಣ ತಾನೆಲ್ಲಿರುವೆಯೆಂಬುದೂ ಮರೆತುಹೋಗಿತ್ತು. ವಿಹಾರದಲ್ಲಿ ಅವನಿಗೆ ತಂಗಲು ಕೊಟ್ಟ ಕೋಣೆಯ ಬಾಗಿಲು ತೆರೆದಾಗ ದ್ವಾರಪಂಡಿತನ ಭೋತ ಯೋಧರು ಮುಖ ಸಿಂಡರಿಸಿ ನಿಂತಿದ್ದರು. ಅವರ ಭಾಷೆಯಲ್ಲಿ ಏನೋ ಕೂಗಿದರೂ ಅರ್ಕನಿಗೆ ಏನೂ ಅರ್ಥವಾಗಲಿಲ್ಲ. ತಬ್ಬಿಬ್ಬಾಗಿ ನೋಡುತ್ತ ನಿಂತ ಅವನನ್ನು ಬಂಧಿಸಿ ಅಶ್ವಶಾಲೆಯತ್ತ ಕರೆದೊಯ್ದರು. ಇಷ್ಟು ಹೊತ್ತಿಗೆ ಅರ್ಕನಿಗೆ ಸಂಪೂರ್ಣವಾಗಿ ಎಚ್ಚರವಾಗಿತ್ತು. ಅಶ್ವಶಾಲೆಯಲ್ಲಿ ವ್ಯಾಘ್ರ ಇನ್ನೂ ಘರ್ಜಿಸುತ್ತಲೇ ಇತ್ತು. ಮೂಲೆ-ಮರೆಯಲ್ಲಿ ಕೆಳಗಿಳಿದುಹೋಗಲು ಮೆಟ್ಟಲುಗಳಿದ್ದವು. ಅವುಗಳ ಕೆಳಗೆ ಅರ್ಕನನ್ನು ಎಳೆದುಕೊಂಡೊಯ್ಯಲಾಯಿತು.

ಅಶ್ವಶಾಲೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಪಟ್ಟಣವೇ ಇತ್ತು. ಅಲ್ಲಲ್ಲೇ ಭೋತ ಕಾವಲುಗಾರರು. ಅನೇಕಾನೇಕ ಕೋಣೆಗಳು, ಕೆಲವು ಕಾರಾಗೃಹಗಳು, ಆಯುಧಶಾಲೆಗಳು, ಶಸ್ತ್ರರಹಿತ ಕದನಾಭ್ಯಾಸ ಮಾಡುತ್ತಿರುವ ಯೋಧರು, ಒಟ್ಟಿನಲ್ಲಿ ಒಂದು ಸಣ್ಣ ಸೈನ್ಯದ ಪ್ರಧಾನ ಕಾರ್ಯಸ್ಥಳದಂತಿತ್ತು. ಎಲ್ಲೆಡೆ ಕತ್ತಲೆ. ಅಲ್ಲಲ್ಲೇ ಸಣ್ಣ ದೀಪಗಳು ಬೆಳಕು ಚೆಲ್ಲುತ್ತಿದ್ದವು.

ಅರ್ಕ ಕಕ್ಕಾಬಿಕ್ಕಿಯಾಗಿ ನೋಡುತ್ತಲೇ ಇದ್ದಂತೆ ಅವನನ್ನು ಹತ್ತಾರು ಪರಸ್ಪರ ದಾಟುವ ಪಡಸಾಲೆಗಳನ್ನು ಹಾಯುತ್ತ ಕರೆದೊಯ್ದು ಕಾರಾಗೃಹವೊಂದಕ್ಕೆ ತಳ್ಳಿ, ಯೋಧನೊಬ್ಬ ಹೊರಗೆ ಕಾವಲು ನಿಂತ. ಯಾರ ಮಾತೂ ಅವನಿಗೆ ಅರ್ಥವಾಗಲಿಲ್ಲ. ತನ್ನಿಂದಾದ ಅಪರಾಧವಾದರೂ ಏನೆಂದು ತಿಳಿಯದೆ ಆಲೋಚಿಸತೊಡಗಿದ.

ದ್ವಾರಪಂಡಿತ ನೆನ್ನೆಯಿತ್ತ ಎಚ್ಚರಿಕೆ ನೆನಪಾಯಿತು. ತನ್ನಿಂದ ಅವರ ಧರ್ಮಕ್ಕೇನಾದರೂ ಅಪಚಾರವಾಯಿತೇ ಯೋಚಿಸಿದ. ಏನೂ ತೋಚಲಿಲ್ಲ. ಯುಕ್ತವಾದ ಕೋಪ ಅವನಲ್ಲಿ ಮೂಡತೊಡಗಿತು. ಹಿಂದಿನ ದಿನ ಕುಲಪತಿ ಕೊಟ್ಟ ವೈಭವಯಾತ್ರೆ, ಅವರು ಆಡಿದ ಮೈತ್ರಿಯ ಮಾತುಗಳು ನೆನಪಾದವು. ಬಹುಶಃ ಅವರ ನೈತಿಕ ಬಲ ಉಪಯೋಗಿಸಬಹುದೇ ಎಂದು ಯೋಚಿಸತೊಡಗಿದ.

"ಏಯ್! ಯಾರಲ್ಲಿ? ನನ್ನನ್ನೇಕೆ ಇಲ್ಲಿ ಬಂಧಿಸಿದ್ದೀರ? ನನ್ನನ್ನು ಬಿಡಿ, ಇಲ್ಲವಾದರೆ ಕುಲಪತಿಯನ್ನು ಕರೆಯಿರಿ. ಅವರೇ ನಾನಾರೆಂದು ಹೇಳುತ್ತಾರೆ. ದೂತನಾಗಿ ಬಂದ ನನ್ನನ್ನು ಬಂಧಿಸಿದರೆ ಕುಲಪತಿಗೆ ಕೋಪ ಬಂದೀತು. ತೆಗೆಯಿರಿ ಕದವನ್ನು!" ಎಂದು ಕೂಗಿದ.

ಯೋಧನೊಬ್ಬ ಸಲಾಕೆಗಳಿಂದ ಮಾಡಿದ ಬಾಗಿಲ ಮುಂದೆ ಬಂದು ಏನೋ ಮಾತನಾಡಿದ. ಅರ್ಕನಿಗೆ ಅರ್ಥವಾಗಲಿಲ್ಲ. ಆದರೂ ವಿಸ್ತಾರವಾಗಿ ಅಭಿನಯ ಮಾಡಿ "ಕುಲಪತಿ...ಕುಲಪತಿ ಕರೆಯಿರಿ. ಇಲ್ಲಿಗೆ, ಈಗ" ಎಂದ.

"ನಾಟಕ...ನಾಟಕವನ್ನೂ ಬಹಳ ಚನ್ನಾಗಿ ಮಾಡುತ್ತೀರ" ದ್ವಾರಪಂಡಿತ ಕಾಣಿಸಿಕೊಳ್ಳುತ್ತ ಸಂಸ್ಕೃತದಲ್ಲಿ ಹೇಳಿದ.

"ನಾಟಕ? ಹಾಗೆಂದರೆ? ದ್ವಾರಪಂಡಿತರೇ ನನ್ನನ್ನೇಕೆ ಬಂಧಿಸಿದ್ದೀರ?" ಆವೇಶದಿಂದ ಅರ್ಕ ಕೇಳಿದ.

"ಕುಲಪತಿಯ ಹತ್ಯೆಯ ಅಪರಾಧದ ಮೇರೆಗೆ ನಿಮ್ಮನ್ನು ಬಂಧಿಸಲಾಗಿದೆ"

"ಕುಲಪತಿಯ..." ಅರ್ಕನಿಗೆ ಮಾತೇ ಹೊರಡಲಿಲ್ಲ.

"ಅಹುದು. ನೆನ್ನೆಯ ದಿನ ಕುಲಪತಿಯನ್ನು ಕಾಣಲು ಹೋದ ನೀವು ಅವರ ಹತ್ಯೆ ಮಾಡಿದ್ದೀರ"

"ಇಲ್ಲ! ಸಾಧ್ಯವಿಲ್ಲ! ನಾನೇಕೆ ಅವರ ಕೊಲೆ ಮಾಡಲಿ? ಅದಕ್ಕೆ ಪ್ರೇರಣೆಯಾದರೂ ಏನಿದ್ದೀತು? ನೆನ್ನೆ ಅವರು ನಾಲಂದಾ ವೈಭವಯಾತ್ರೆ ಮಾಡಿಸಿದ ನಂತರ ನಾನು ಅವರನ್ನು ನೋಡಲೇ ಇಲ್ಲ"

"ಹಾಗೆಂದು ನೀವು ಹೇಳುತ್ತೀರ. ಆದರೆ ಕುಲಪತಿಯ ಶವ ಸಿಕ್ಕಿದೆ. ಅವರ ಕೊಲೆ ಹೇಗಾಗಿದೆ ಗೊತ್ತೇ? ಚಕ್ರವೊಂದರಿಂದ ಅವರ ಕೊರಳನ್ನು ಕತ್ತರಿಸಲಾಗಿದೆ. ಇಂದ್ರಕುಂಡದ ಬಳಿ ರುಂಡ-ಮುಂಡಗಳು ಬೇರೆ ಬೇರೆಯಾಗಿ ಬಿದ್ದಿವೆ, ಆಯುಧ ಪಕ್ಕದಲ್ಲೇ ಬಿದ್ದಿದೆ"

"ಇದು...ಇದು ನನ್ನ ಕೃತ್ಯವೆಂದು ಹೇಗೆ ನಿರ್ಧಾರ ಮಾಡಿದ್ದೀರಿ?"

"ಚಕ್ರ - ವಿಚಿತ್ರವಾದ ಆಯುಧ. ಯಾರೂ ಉಪಯೋಗಿಸುವುದಿಲ್ಲ. ನಿಮ್ಮ ಧರ್ಮದ ದೇವತೆಗಳೇ ಇಂತಹ ಆಯುಧವನ್ನು ಉಪಯೋಗಿಸುವವರು. ಈ ವಿದ್ಯಾಲಯದಲ್ಲಿ ಬೌದ್ಧೇತರರೆಂದರೆ ಸಧ್ಯಕ್ಕೆ ನೀವೊಬ್ಬರೇ. ಮೇಲಾಗಿ ಆರ್ಯದೇವರ ಕೊಲೆ ಹೇಗಾಗಿತ್ತೆಂದಿದ್ದಿರಿ? ರುದ್ರಾಕ್ಷಿಮಾಲೆಯಿಂದ ಅವರನ್ನು ನೇಣುಹಾಕಲಾಗಿತ್ತಲ್ಲವೇ? ಅಲ್ಲೂ ವಿಚಿತ್ರ ಬ್ರಾಹ್ಮಣ ಆಯುಧ. ಈ ಸರಣಿಯಲ್ಲಿ ನಮಗೇಕೋ ಒಂದು ಮಾದರಿ ಕಾಣಿಸುತ್ತಿದೆ. ಎರಡೂ ಕೊಲೆಗೆ ಇರುವ ಸಾಮ್ಯ ನೀವೊಬ್ಬರೆ. ಅಂದರೆ ಎರಡು ಕೊಲೆಗಳಿಗೂ ನೀವೇ ಕಾರಣರಾಗಿರಬೇಕು"

"ಆದರೆ..."

"ನೀವು ಅಪರಾಧಿಯೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ವಿದ್ಯಾಲಯದ ನಿಯಮಗಳ ಪ್ರಕಾರ ಕುಲಪತಿಯ ಮರಣ ಯಾ ಅಧಿಕಾರಗಳ ಪರಿತ್ಯಾಗದ ಸಮಯದಲ್ಲಿ ವಿದ್ಯಾಲಯದ ದ್ವಾರಪಂಡಿತನೇ ವಿದ್ಯಾಲಯದ ಪ್ರಮುಖ ಅಧಿಕಾರಿ. ನಿಯಮಗಳ ಪ್ರಕಾರ ಪ್ರಧಾನ ಆಚಾರ್ಯರೇ ಮುಂದಿನ ಕುಲಪತಿ. ಆ ವಿಚಾರಗಳನ್ನು ನಾನಿನ್ನು ನೋಡಿಕೊಳ್ಳಬೇಕು. ನಿಮ್ಮೊಡನೆ ಮಾತನಾಡಲು ನನಗೆ ಸಮಯವಿಲ್ಲ. ಸದ್ಯಕ್ಕೆ ನಿಮ್ಮನ್ನು ಸೆರೆ ಹಿಡಿದಿರುವುದು ಯಾರಿಗೂ ತಿಳಿಸಿಲ್ಲ. ಪ್ರಧಾನ ಆಚಾರ್ಯರ ವಿಷಯ ನೋಡಿಕೊಂಡು ನಂತರ ನಿಮ್ಮ ವಿಷಯ ಇತ್ಯರ್ಥ ಮಾಡುತ್ತೇವೆ" ಎಂದು ದ್ವಾರಪಂಡಿತ ಹೊರಟುಹೊದ.

*****

ನೆಲಮಾಳಿಗೆಯ ಕಾರಾಗೃಹದಲ್ಲಿ ಸೂರ್ಯನ ಬೆಳಕು ಪ್ರವೇಶಿಸುತ್ತಿರಲಿಲ್ಲ. ನಾಲ್ಕು ಹೊತ್ತೂ ಕೇವಲ ದೀಪದ ಬೆಳಕು. ಸಮಯ ಕಳೆಯುವುದು ಗೊತ್ತಾಗುತ್ತಲೇ ಇರಲಿಲ್ಲ. ಅರ್ಕಶರ್ಮನಿಗೆ ಅನೇಕ ಅಪರಾಧಗಳ ವಿಚಾರಣೆ ನಡೆಸಿ ಅನುಭವವಿತ್ತು. ಅವನ ವಿವಾಚನಾ ಶಕ್ತಿ ಪ್ರಬಲವಾಗಿತ್ತು. ಬಹಳಹೊತ್ತು ಯೋಚಿಸುತ್ತಿದ್ದ. ನಂತರ ಒಂದು ನಿರ್ಧಾರಕ್ಕೆ ಬಂದ. ಸ್ವರಕ್ಷಣೆ, ವಿದ್ಯಾಲಯದ ರಕ್ಷಣೆ, ಶಾರದಾಪೀಠದ ಹಾಗು ಶೃಂಗಗಿರಿಯ ಮಾನ-ಗೌರವಗಳ ರಕ್ಷಣೆ ಎಲ್ಲವೂ ತಾನು ಈ ಸೆರೆಮನೆಯಿಂದ ತಪ್ಪಿಸಿಕೊಳ್ಳುವುದರ ಮೇಲೆ ಕೇಂದ್ರಿತವಾಗಿದೆಯೆಂಬುದನ್ನು ಅರಿತ.

ಅಷ್ಟು ಹೊತ್ತಿಗಾಗಲೆ ಅನೈಚ್ಛಿಕವಾಗಿ ಸುತ್ತ ವಾತಾವರಣವನ್ನು ತಿಳಿದುಕೊಂಡಿದ್ದ. ಸಲಾಕೆಯ ಬಾಗಿಲಿಗೆ ಬೀಗವಿರಲಿಲ್ಲ, ಕೇವಲ ಬೆಣೆಯೊಂದಿತ್ತು. ಬಾಗಿಲ ಹೊರಗೆ ನಿಂತಿದ್ದ ಕಾವಲುಗಾರ ಆಗಾಗ ತೂಕಡಿಸಿ ನಿದ್ರಿಸುತ್ತಿರುವುದು ಗೊತ್ತಾಯಿತು. ತಾನು ಈಗಿರುವ ವೇಷದಲ್ಲಿ ಒಂದು ಪಕ್ಷ ತಪ್ಪಿಸಿಕೊಂಡರೂ ಯಾರ ಕಣ್ಣಿಗಾದರೂ ಬಿದ್ದು ಮತ್ತೆ ಸೆರೆಯಾಗುವುದರಲ್ಲಿ ಸಂದೇಹವಿಲ್ಲವೆಂದು ನಿರ್ಧರಿಸಿದ. ತಾನು ನೆಲಮಾಳಿಗೆಗೆ ಇಳಿದನಂತರ ಬಂದಿದ್ದ ದಾರಿಯೂ ಮರೆತು ಹೋಗಿತ್ತು. ಆ ಪಡಸಾಲೆಗಳಾದರೋ ಚಕ್ರವ್ಯೂಹವೇ ಸರಿ. ಇನ್ನೇನು ಮಾಡುವುದು? ನೆಲಮಾಳಿಗೆಯಿಂದ ಹೊರಹೋಗುವುದು ಸೆರೆ ಬಿಡಿಸಿಕೊಂಡಮೇಲೆ ನೋಡಿದರಾಯಿತೆಂದು ಯೋಚಿಸಿದ.

ಅರ್ಕ ಬಹಳ ಹೊತ್ತು ಅಲುಗಾಡದೆ, ಒಂದೇಸಮದ ಉಸಿರಾಟ ಬಿಟ್ಟರೆ ಬೇರೇನೂ ಸಪ್ಪಳ ಮಾಡದೆ ಮಲಗಿದ್ದ. ಹೊರಗಿನ ಕಾವಲುಗಾರ ಪೂರ್ಣ ನಿದ್ರಾವಸ್ತೆಯಲ್ಲಿದ್ದಾನೆಂಬುದು ಖಚಿತವಾದಮೇಲೆ ನಿಧಾನವಾಗಿ ಎದ್ದ. ಒಂದೊಂದೇ ಮೆಟ್ಟಿನಗಾಲ ಹೆಜ್ಜೆಯಿಡುತ್ತ ಬಾಗಲ ಬಳಿ ಹೋಗಿ ನಿಂತ. ಕಾವಲುಗಾರನಿಗೆ ಇನ್ನೂ ಎಚ್ಚರವಿಲ್ಲ. ಆದಷ್ಟೂ ಶಬ್ಧ ಮಾಡದೆ ಬೆಣೆಯನ್ನು ಒಂದೊಂದು ಕಿರುಬೆರಳಿನಷ್ಟು ಜರುಗಿಸ ತೊಡಗಿದ. ಕಾವಲುಗಾರ ನಿದ್ರೆಯಲ್ಲಿ ಏನೋ ಗೊಣಗಿದಾಗ ಶಿಲ್ಪವಾಗಿ ನಿಂತಿದ್ದ. ನಂತರ ಮತ್ತೆ ಕೆಲಸವನ್ನು ಮುಂದುವರೆಸಿದ. ಸ್ವಲ್ಪ ಹೊತ್ತಿನ ಬಳಿಕ ಬಾಗಿಲನ್ನು ತಡೆಹಿಡಿದ್ದ ಬೆಣೆ ಅರ್ಕನ ಕೈಗೆ ಬಂತು. ಬಾಗಿಲನ್ನು ಮೆಲ್ಲನೆ ತೆಗೆದು ಸೆರೆಮನೆಯ ಹೊರಬಂದ. ಪಡಸಾಲೆಯಲ್ಲಿ ಯಾರೂ ಕಾಣಿಸಲಿಲ್ಲ.

ಆವರಿಸಿದ್ದ ಕತ್ತಲು ಅವನ ಮಿತ್ರನೂ ವೈರಿಯೂ ಒಮ್ಮೆಲೆ ಎರಡೂ ಆಗಿತ್ತು. ಅವನಿಗೆ ಅಲ್ಲಿದ್ದ ಯೋಧರು ಕಾಣಿಸದಿದ್ದರೆ, ಇವನೂ ಅವರಿಗೆ ಕಾಣಿಸುತ್ತಿರಲಿಲ್ಲ. ನಿದ್ರಿಸುತ್ತಿದ್ದ ಕಾವಲುಗಾರನ ತಲೆಗೆ ಕೈಯಲ್ಲಿದ್ದ ಲೋಹದ ಬೆಣೆಯಿಂದ ಚೆಚ್ಚಿದಾಗ ಆತ ಜ್ಞಾನತಪ್ಪಿ ಸದ್ದಿಲ್ಲದೆ ನೆಲಕ್ಕುರುಳಿದ. ಅವನನ್ನು ಸೆರೆಮನೆಯೊಳಕ್ಕೆಳೆದು ತಂದು ಅವನ ವಸ್ತ್ರಗಳನ್ನು ಅವನಿಂದ ಕಳಚಿ ತಾನು ಧರಿಸಿದ. ಬಳಿಕ ಹೊರಗೆ ಹೋಗಿ ಕಾವಲುಗಾರನಿದ್ದ ಆಸನದಲ್ಲೇ ಅವನಂತೇ ಕುಳಿತ. ಯಾರಿಗೂ ಏನೂ ತಿಳಿದಂತೆನಿಸಲಿಲ್ಲ.

ಒಳಗೆ ಜ್ಞಾನತಪ್ಪಿ ಬಿದ್ದಿದ್ದ ಕಾವಲುಗಾರ ಯಾವ ಕ್ಷಣದಲ್ಲಾದರೂ ಏಳಬಹುದೆಂಬ ಅರಿವು ಅರ್ಕನಿಗಿತ್ತು. ಸ್ವಲ್ಪ ಹೊತ್ತಿನ ನಂತರ ಎದ್ದು ಹೊರಮಾರ್ಗ ಹುಡುಕುತ್ತ ಪಡಸಾಲೆಗಳನ್ನು ಅಲೆಯಲಾರಂಬಿಸಿದ. ಬಹಳ ಹೊತ್ತು ಯಾವ ಕೊನೆಯೂ ಕಾಣಲಿಲ್ಲ. ಈ ಸ್ಥಳಕ್ಕಾಗಲೇ ಬಂದಾಯಿತೇ ಅಥವ ಇದು ಬೇರೆಯೇ? ಹಲವಾರು ಬಾರಿ ಗೊಂದಲವಾಯಿತು. ಎಲ್ಲ ಸ್ಥಳಗಳೂ ಒಂದೇರೀತಿ ಕಾಣಿಸುತ್ತಿದ್ದವು. ನಿರತನಾಗಿ ಪಡಸಾಲೆಗಳಲ್ಲಿ ನಡೆಯುತ್ತಲೇ ಇದ್ದ.

ಕೊನೆಗೊಮ್ಮೆ ವ್ಯಾಘ್ರ-ಘರ್ಜನೆ ಕೇಳಿಸಿದ ಕ್ಷಣದಲ್ಲೇ ಹಿಂದಿನಿಂದ ಬೇರೊಂದು ಕೂಗು ಕೇಳಿಸಿತು. ಜ್ಞಾನ ತಪ್ಪಿ ಬಿದ್ದಿದ್ದ ವ್ಯಕ್ತಿ ಎಚ್ಚರಗೊಂಡು ಉಳಿದವರಿಗೆ ಎಚ್ಚರಿಕೆ ಕೊಟ್ಟಿರಬೇಕೆಂದುಕೊಂಡ. ಅರ್ಕ ಘರ್ಜನೆಯನ್ನು ಅನುಚರಿಸಿಕೊಂಡು ಅಶ್ವಶಾಲೆಗೆ ಹತ್ತುವ ಮೆಟ್ಟಿಲುಗಳನ್ನು ಹುಡುಕುತ್ತ ಓಡತೊಡಗಿದ. ಹಿಂದೆ ಭೋತ ಯೋಧರು ಅರ್ಕನನ್ನು ಅಟ್ಟಿಸಿಕೊಂಡು ಓಡಿಬರುತ್ತಿದ್ದರು.

ವ್ಯಾಘ್ರಘರ್ಜನೆ ತಲೆಯಮೇಲೇ ಆದಂತೆನಿಸಿದಾಗ ಅಶ್ವಶಾಲೆಗೆ ಹೋಗುವ ಮೆಟ್ಟಿಲು ಮಬ್ಬು ಬೆಳಕಿನಲ್ಲಿ ಕಾಣಿಸಿದವು. ಹತ್ತಿಕೊಂಡು ಮೇಲೋಡಿದವನೇ ಕುದುರೆಯೊಂದನ್ನೇರಿದ. ಅಲ್ಲಿದ್ದ ಇತರ ಕುದುರೆಗಳನ್ನು ನೋಡಿ ಆ ಯೋಧರು ತನ್ನನ್ನು ಕೆಲವೇ ಕ್ಷಣಗಳಲ್ಲಿ ಹಿಡಿದುಹಾಕುವರೆಂದು ತಿಳಿದು ಅವರ ಗಮನ ಬೇರೆಡೆ ಸೆಳೆಯಲು ಸಾಧವನ್ನು ಹುಡುಕತೊಡಗಿದ. ವ್ಯಾಘ್ರನ ಪಂಜರದ ಬಾಗಿಲು ಉದ್ದನೆಯ ಹಗ್ಗದಿಂದ ಕಟ್ಟಲಾಗಿತ್ತು. ಆ ಹಗ್ಗವನ್ನು ಕೈಯಲ್ಲಿ ಹಿಡಿದು ಕುದುರೆ ಏರಿ ಓಡಿಸತೊಡಗಿದ. ಅಂತರದಿಂದ ಹಗ್ಗವು ಬಿಗಿಯಾಗಿ ಎಳೆದುಕೊಂಡಾಗ ಪಂಜರದ ಬಾಗಿಲು ತೆರೆದುಕೊಂಡಿತು.

ಯೋಧರು ನೆಲಮಾಳಿಗೆಯಿಂದ ಮೇಲೆ ಬರುವುದಕ್ಕೂ ವ್ಯಾಘ್ರವು ಪಂಜರದಿಂದ ಹೊರಬರುವುದಕ್ಕೂ ಸಮಯ ಸರಿಯಾಯಿತು. ಹೊರಬಂದ ವ್ಯಾಘ್ರ ಉಳಿದ ಅಶ್ವಗಳ ಮೇಲೆ ಬಿದ್ದು ಅವು ಚದುರಿ ಓಡಿದಾಗ ಅಶ್ವಶಾಲೆಯಲ್ಲಿ ಕೋಲಾಹಲವುಂಟಾಯಿತು. ಭೋತ ಯೋಧರು ನೆಲಮಾಳಿಗೆಯಲ್ಲೇ ಉಳಿದುಹೋದರು. ಆ ಕ್ಷೋಭೆಯಲ್ಲಿ ಅರ್ಕಶರ್ಮ ಸೆರೆಮನೆಯಿಂದ ತಪ್ಪಿಸಿಕೊಂಡಿದ್ದ.

*****

ಹೊರಗಾಗಲೇ ಸಂಜೆಯಾಗಿತ್ತು. ಅಂದು ಬೆಳಗ್ಗೆ ತನ್ನನ್ನು ಸೆರೆ ಹಿಡಿದರೇ? ಹಿಂದಿನ ದಿನವೇ? ಒಂದೂ ತಿಳಿಯಲಿಲ್ಲ. ಕತ್ತಲಾಗುವವರೆವಿಗೂ ಅವಿತುಕೊಂಡಿರಬೇಕು, ಆದರೆ ಪ್ರಧಾನ ಆಚಾರ್ಯರನ್ನೂ ಕಂಡು ಅವರಿಗೆ ಎಚ್ಚರಿಕೆ ಕೊಡಬೇಕು - ಎರಡು ವಿಕಲ್ಪಗಳ ಮಧ್ಯೆ ಸಿಲುಕಿದ್ದ. ಕೊನೆಗೆ ದ್ವಾರಪಂಡಿತ ಪ್ರಧಾನ ಆಚಾರ್ಯರನ್ನು ಸಂಪರ್ಕಿಸುವ ಮುನ್ನ ತಾನು ಅವರನ್ನು ನೋಡಲೇಬೇಕು, ಅದರಿಂದ ತಾನು ಮರುಸೆರೆ ಬೀಳುವ ಅಪಾಯವಿದ್ದರೆ ಆದದ್ದಾಗಲಿಯೆಂದು ಯೋಚಿಸಿ ಕುಲಪತಿಯ ವೈಭವಯಾತ್ರೆಯೆನ್ನು ಸ್ಮರಿಸಿಕೊಂಡ. ಆಚಾರ್ಯರಿದ್ದದ್ದು ಸಕ್ರಾದಿತ್ಯನಿಲಯದ ಹಿಂದಿನ ತಥಾಗಥಾಶ್ರಮದಲ್ಲಿ. ಕುಲಪತಿಯೂ ಅಲ್ಲೇ ವಾಸವಾಗಿದ್ದವರು. ಪ್ರಧಾನ ಆಚಾರ್ಯರೂ ಅಲ್ಲೇ ವಾಸಿಸಬೇಕು. ಅವರನ್ನು ಸಂಪರ್ಕಿಸಬೇಕಾದರೆ ಅಲ್ಲೇ ಹೋಗಬೇಕು.

ಅಶ್ವಶಾಲೆಯಿಂದ ಹೊರಬಂದಾಗ ಅರ್ಕಶರ್ಮ ಅದರಾಚೆಯಿದ್ದ ಗಿಡಗಂಟೆಗಳಿಂದ ತುಂಬಿದ್ದ ಸಣ್ಣ ಕಾಡೊಂದರಲೊಳಗೆ ಹೊಕ್ಕಿದ್ದ. ಅಶ್ವಶಾಲೆಯಿದ್ದದ್ದು ವಿದ್ಯಾಲಯದ ಆವರಣದ ಉತ್ತರ-ಪಶ್ಚಿಮ ಮೂಲೆಯಲ್ಲಿ. ತಥಾಗಥಾಶ್ರಮ ಬಲೇನಕುಂಡದಿಂದ ಸ್ವಲ್ಪ ದೂರದಲ್ಲಿ. ಅಂದರೆ ತಾನು ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ದೂರ ಸಾಗಬೇಕೆಂಬುದು ಗ್ರಹಿಸಿದ. ಕುದುರೆಯನ್ನು ಅಲ್ಲೇ ಬಿಟ್ಟು ಸಮೀಪದಲ್ಲಿದ್ದ ಸೂರ್ಯಕುಂಡದಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನ ಕೆಂಪು ವಸ್ತ್ರಗಳನ್ನು ಹಾರಿಸಿ, ಅವುಗಳನ್ನು ಧರಿಸಿಕೊಂಡು ತಥಾಗಥಾಶ್ರಮದ ಕಡೆ ನಡೆಯಲಾರಂಭಿಸಿದ.

ಭೋತ ಯೋಧರು ಅರ್ಕ ಮೊದಲು ಓಡಿದ ದಿಕ್ಕಿನಲ್ಲಿ ಅವನನ್ನು ಹುಡುಕುತ್ತಿದ್ದರು. ಯಾರಿಗೂ ಅವನು ಮರುವೇಷ ಧರಿಸಿ ವಿದ್ಯಾಲಯದೊಳಕ್ಕೆ ಬಂದಿರುವುದು ತಿಳಿದಂತೆ ಕಾಣಲಿಲ್ಲ. ಯಾವುದೇ ಅನಪೇಕ್ಷಿತ ಪ್ರಸಂಗ ಘಟಿಸದೆ ತಥಾಗಥಾಶ್ರಮವನ್ನು ಸೇರಿದ. ಅಷ್ಟು ಹೊತ್ತಿಗೆ ಸಂಪೂರ್ಣ ಕತ್ತಲಾಗಿ ವಿದ್ಯಾರ್ಥಿ-ಆಚಾರ್ಯರೆಲ್ಲರೂ ತಮ್ಮ ನೆಲೆಗಳಿಗೆ ತೆರಳಿದಂತಿತ್ತು. ಎಲ್ಲೆಡೆ ನಿಶ್ಯಬ್ಧ.

ಆಶ್ರಮದ ಮಹಾದ್ವಾರ ತೆರೆದೇ ಇತ್ತು. ಒಳಗೆ ಹೋದಾಗ ಆವರಣವೊಂದರ ಸುತ್ತ ಕೋಣೆಗಳಿರುವುದು ಕಾಣಿಸಿತು. ಪ್ರಧಾನ ಆಚಾರ್ಯರು ಯಾವ ಕೋಣೆಯಲ್ಲಿರುವರು? ಹೇಗೆ ಪತ್ತೆ ಮಾಡುವುದು? ಇಲ್ಲೋ ಹೆಚ್ಚು ವಿದ್ಯಾರ್ಥಿಗಳಿರಲಿಲ್ಲ. ಯಾರನ್ನೂ ಕೇಳುವ ಹಾಗೂ ಇಲ್ಲ. ತಾನು ವಿದ್ಯಾರ್ಥಿ ವೇಷದಲ್ಲಿ ಓಡಾಡುವುದನ್ನು ಯಾರಾದರೂ ನೋಡಿದರೆ ಸಂದೇಹವುಂಟಾದೀತು.

ನಿಶ್ಯಬ್ಧವಾಗಿ ಆಶ್ರಮವನ್ನು ಅಲೆಯುತ್ತಿದ್ದಾಗ ಉಚ್ಛಸ್ವರದಲ್ಲಿ ಯಾರೋ ವಾಗ್ವಾದ ಮಾಡುತ್ತಿರುವಂತೆ ಕೇಳಿಸಿತು. ಲಕ್ಷ್ಯವಿಟ್ಟು ಕೇಳಿಸಿಕೊಂಡಾಗ ದ್ವಾರಪಂಡಿತನ ಧ್ವನಿಯಿರಬಹುದೇ ಎಂಬ ಸಂದೇಹ ಬಂದಿತು. ಆ ಧ್ವನಿಗಳನ್ನೇ ಆಲಿಸಿಕೊಂಡು ಬಂದು ಕೋಣೆಯೊಂದರ ಹೊರಗೆ ನಿಂತ. ದ್ವಾರಪಂಡಿತನ ಧ್ವನಿಯೇ - ಸಂದೇಹವಿಲ್ಲ ಎಂದು ಖಚಿತವಾಗಿತ್ತು. ಇನ್ನೇನು ಒಳಗೆ ಹೋಗಿ ದ್ವಾರಪಂಡಿತನೊಡನೆ ಸಾಕ್ಷಿ-ಸಮ್ಮುಖನಾಗಬೇಕೆಂದಿದ್ದ ಅಷ್ಟರಲ್ಲಿ

"ಆಹ್..." ಎಂಬ ಕೂಗು ತೊಯ್ದ ಗೋಣೀಚೀಲ ಹರಿಯುವಂತಹ ಶಬ್ಧದೊಂದುಗೆ ಮೊಳಗಿತು. ಓಡುತ್ತ ಕೋಣೆಯೊಳಗೆ ಹೋದಾಗ ತ್ರಿಶೂಲವೊಂದು ಕಂಠದ ಆರುಪಾರಾಗಿ ವ್ಯಕ್ತಿಯೊಬ್ಬ ಕೆಳಗೆ ಸತ್ತು ಬಿದ್ದಿದ್ದ. ಆ ತ್ರಿಶೂಲವನ್ನು ಇನ್ನೂ ಕೈಯಲ್ಲಿ ಹಿಡಿದಿದ್ದ ದ್ವಾರಪಂಡಿತ ಸತ್ತ ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದ. ದ್ವಾರಪಂಡಿತನ ಕಣ್ಣುಗಳಲ್ಲಿ ಕೊಲೆಗಾರನ ಭಾವಾವೇಶ ತುಂಬಿತ್ತು.

ಅರ್ಕ ಒಳಗೆ ಬಂದ ಸಪ್ಪಳ ಕೇಳಿದ ದ್ವಾರಪಂಡಿತ ಆತನ ಕಡೆ ತಿರುಗಿ ದುರುಗುಟ್ಟಿ ನೋಡಿ "ನೀನು!?" ಎಂದ. ಇನ್ನೂ ಅವನ ಕಣ್ಣುಗಳಲ್ಲಿ ಮನೋವಿಕಾರ ತುಂಬಿತ್ತು.

ಅರ್ಕ ಸತ್ತು ಬಿದ್ದಿದ್ದ ವ್ಯಕ್ತಿಯನ್ನು ನೋಡುತ್ತ "ಪ್ರಧಾನ ಆಚಾರ್ಯ?" ಎಂದು ಕೇಳಿದ.

ದ್ವಾರ ಪಂಡಿತನ ಉದ್ರೇಕ ನೋಡುತ್ತಿದ್ದಂತೆ ಕಡಿಮೆಯಾಯಿತು. "ಹೌದು. ಈವನೂ ಅವರಂತೆಯೇ! ದ್ರೋಹಿ!"

"ಏಕೆ?" ಅರ್ಕ ಕೇಳಿದ

"ಇವರೆಲ್ಲ ಬೌದ್ಧ ಧರ್ಮಕ್ಕೇ ಕಳಂಕ. ತಥಾಗಥ ಈ ಧರ್ಮವನ್ನೇಕೆ ಬೋಧಿಸಿದ್ದು? ನಿಮ್ಮ ಬ್ರಾಹ್ಮಣ ಧರ್ಮಕ್ಕಿಂತ ಪ್ರತ್ಯೇಕವಾದ, ಉತ್ತಮವಾದ ಧರ್ಮವೆಂದು. ಇವರೆಲ್ಲ ಸೇರಿ ಆ ಮಹಾತ್ಮನ ಅಸ್ತಿತ್ವವನ್ನೇ ಅಳಿಸಲು ಹೊರಟಿದ್ದರು"

ಅರ್ಕನಿಗೆ ತಾನು ಅಪಾಯದಲ್ಲಿರುವುದು ಅರ್ಥವಾಯಿತು. ಆತ್ಮರಕ್ಷಣೆಯಾಗಬೇಕಾದರೆ ದ್ವಾರಪಂಡಿತನನ್ನು ಮಾತನಾಡಿಸುತ್ತಲೇ ಇರಬೇಕೆಂದು ನಿರ್ಧರಿಸಿದ. "ಹಾಗೆಂದರೆ? ಅರ್ಥವಾಗಲಿಲ್ಲ!"

"ನಿನಗೆ ಗೊತ್ತಿದೆಯೆಂದು ನೀನು ತಿಳಿದಿರುವಷ್ಟು ವಿಷಯಗಳು ನಿನಗೆ ಗೊತ್ತಿಲ್ಲ. ಆರ್ಯದೇವ ನಿಮ್ಮ ಶಾರದಾಪೀಠಕ್ಕೆ ಬಂದದ್ದೇಕೆ ತಿಳಿದಿದೆಯೇ?"

"ನನಗೆ ಮೊದಲಿನಿಂದಲೂ ಆ ವಿಚಾರ ಅರ್ಥವಾಗಿಲ್ಲ. ಮ್ಲೇಚ್ಛರ ವಿರುದ್ಧ ನಾವೇನು ಸಹಾಯ ಮಾಡಬಲ್ಲೆವು?"

"ಹಾ! ಅದೊಂದು ನೆಪವಷ್ಟೆ! ಇವರು ಅಲ್ಲಿ ಹೋಗಿ ನಮ್ಮ ಧರ್ಮವನ್ನು ನಿಮ್ಮ ಧರ್ಮದ ಜೊತೆ ಜೋಡಿಸುವ ದುಸ್ಸಾಹಸ ನಡೆಸಿದ್ದರು. ಬುದ್ಧ ನಿಮ್ಮ ದೇವರ ಒಂದು ಅವತಾರವಂತೆ, ಎಲ್ಲರೂ ಒಂದೇ ಧರ್ಮದವರಂತೆ. ಭಾರತವರ್ಷದಲ್ಲಿ ಕೇವಲ ಬ್ರಾಹ್ಮಣಧರ್ಮವಂತೆ" ದ್ವಾರಪಂಡಿತ ತಿರಸ್ಕಾರದ ಧ್ವನಿಯಲ್ಲಿ ಹೇಳಿದ.

ಮುಂದುವರೆಸುತ್ತ "ಆ ಕುಲಪತಿಯೇ ಆರ್ಯದೇವನ ತಲೆ ಕೆಡೆಸಿ ನಿಮ್ಮಲ್ಲಿಗೆ ಕಳಿಸಿದ್ದು. ಇದೇ ರೀತಿ ಕಾಶಿಗೂ, ಇನ್ನೂ ಹಲವು ಬ್ರಾಹ್ಮಣ ತೀರ್ಥಗಳಿಗೂ ದೂತರನ್ನು ಕಳಿಸಿದ್ದ. ಆರ್ಯದೇವನ ಜೊತೆ ನಾನು ವಸುಕೀರ್ತಿಯನ್ನು ಕಳುಹಿಸಿದೆ - ಆರ್ಯದೇವನ ರಕ್ಷಣೆಗೆ ಎಂದು ಹೇಳಿ"

"ಕುಲಪತಿಯಲ್ಲಿ ವಸುಕೀರ್ತಿಯ ವಿಚಾರ ಹೇಳಿದಾಗ ಅವರಿಗೆ ವಸುಕೀರ್ತಿ ಯಾರೆಂದು ತಿಳಿದಿರಲಿಲ್ಲ. ಆಗಲೇ ಏನೋ ವಿಕಾರವಿದೆಯೆಂದುಕೊಂಡಿದ್ದೆ. ಹಾಗಾದರೆ ಆರ್ಯದೇವ...?"

"ವಸುಕೀರ್ತಿ ಸಮಯ ನೋಡಿ ರುದ್ರಾಕ್ಷಿ ಮಾಲೆಯಿಂದ ಆರ್ಯದೇವನ ಉಸಿರು ಬಿಗಿದು ಅವನನ್ನು ಕೊಂದ"

"ಆರ್ಯದೇವನ ಹತ್ಯೆಯ ಬಗ್ಗೆ ನಿಮಗೆ ನಾನು ಹೇಳಿರಲಿಲ್ಲ. ಆದರೆ ಕಾರಾಗೃಹದಲ್ಲಿ ನೀವು ನನ್ನಲ್ಲಿ ಆರ್ಯದೇವನ ಕೊಲೆಯ ವಿವರಗಳನ್ನು ಹೇಳಿದಿರಿ. ಆಗಲೇ ನನಗೆ ಸಂದೇಹ ಬಂದದ್ದು"

"ಬಲು ಚತುರ ನೀನು" ವ್ಯಂಗ್ಯವಾಗಿ ಹೇಳಿದ ದ್ವಾರಪಂಡಿತ. "ಎಲ್ಲ ವಿಷಯವನ್ನು ವಸುಕೀರ್ತಿ ನನಗೆ ಹೇಳಿದ್ದ. ದಕ್ಷಿಣದಿಂದ ಹಿಂದಿರುಗುವಾಗ ನೀನು ಅವನ ಜೊತೆಯಾದೆ. ದಾರಿಯಲ್ಲಿ ವಸುಕೀರ್ತಿ ನಿನ್ನನ್ನೂ ಸಂಹಾರ ಮಾಡಿದ್ದಿದ್ದರೆ ತೊಂದರೆಯಿರುತ್ತಿರಲಿಲ್ಲ. ಪ್ರಯತ್ನ ಪಟ್ಟನಂತೆ ಸಾಧ್ಯವಾಗಲಿಲ್ಲ"

"ಅಂದರೆ... ಮರಕ್ಕೆ ನಾಟಿದ ಕುಡುಗತ್ತಿ? ಪ್ರವಾಹಯುಕ್ತ ಮಹಾನದಿಯೊಳಕ್ಕೆ ತಳ್ಳಿದ್ದು..."

"ವಿಫಲ ಪ್ರಯತ್ನಗಳು. ನೀನಿಲ್ಲಿಗೆ ಬಂದಾಗಲೇ ಕುಲಪತಿಯ ತಲೆ ಮತ್ತಷ್ಟು ಕೆಡಿಸುವೆಯೆಂದು ನನಗೆ ತಿಳಿದಿತ್ತು. ಆದರೆ ಆ ಸಮಯದಲ್ಲಿ ವಿಧಿಯಿರಲಿಲ್ಲ. ನಿನ್ನ ಮಾತುಗಳು ಕೇಳಿ ಕುಲಪತಿಗಾಗಲೆ ಯಾವುದೋ ಒಳಸಂಚಿನ ಸಂದೇಹ ಬಂದಿತ್ತು. ವಸುಕೀರ್ತಿಯೇ ಚಕ್ರಾಯುಧವನ್ನು ಬಳಸಿ ಕುಲಪತಿಯನ್ನು ಕೊಂದ. ಮರುದಿನ ನಿನ್ನನ್ನು ಸೆರೆ ಹಿಡಿದೆವು. ’ಬೌದ್ಧ ಧರ್ಮದ ಈರ್ವರು ತತ್ವಜ್ಞಾನಿಗಳನ್ನು ಕೊಲೆ ಮಾಡಿದ ಬ್ರಾಹ್ಮಣ’ ಎಂದು ನಿನ್ನನ್ನು ಶಿಕ್ಷೆಗೆ ಗುರಿಮಾಡಲೆಂದು"

"ಹಾಗಾದರೆ ಈತ?" ಶವವನ್ನು ತೋರಿಸುತ್ತ ಕೇಳಿದ ಅರ್ಕ.

"ಇವನ ತಲೆಯನ್ನೂ ಕುಲಪತಿಯಾಗಲೆ ಕೆಡೆಸಿಯಾಗಿತ್ತು. ಬ್ರಾಹ್ಮಣರನ್ನು ನಂಬಿದರೆ ಏನಾಗುವುದೆಂದು, ಆರ್ಯದೇವ ಹಾಗು ಕುಲಪತಿಯ ಕೊಲೆಗಳನ್ನು ಮಾಡಿಸಿದವರು ಬ್ರಾಹ್ಮಣ ಧರ್ಮದವರೆಂದು ತಿಳಿಸಿ, ಇವನು ವಿದ್ಯಾಲಯದ ಕುಲಪತಿಯಾದಮೇಲೆ ಬೌದ್ಧಧರ್ಮದ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಪರಿಪರಿಯಾಗಿ ಬೇಡಿಕೊಂಡೆ. ಇವನು ಒಪ್ಪಲಿಲ್ಲ! ಮ್ಲೇಚ್ಛ-ತುರುಷ್ಕರಿಂದ ಅಪಾಯವಂತೆ, ಎಲ್ಲರೂ ಸೇರಿ ಆ ಅಪಾಯವನ್ನು ಎದುರಿಸಬೇಕಂತೆ. ಅದಕ್ಕೆ ಬ್ರಾಹ್ಮಣಧರ್ಮದವರೊಂದಿಗೆ ಬೆರೆತು ಹೋಗುವುದೊಂದೇ ದಾರಿಯಂತೆ. ಕಡೆಗೆ ಇವನನ್ನೂ..."

ಅರ್ಕನ ಕಣ್ಣುಗಳು ಕಂಠಕ್ಕೆ ತ್ರಿಶೂಲ ನಾಟಿದ್ದ ಶವವನ್ನೇ ನೋಡುತ್ತಿದ್ದವು "ಈ ತ್ರಿಮೂರ್ತಿಗಳ ನಾಟಕವೇನು?"

"ಹಾಹ್! ನಿಮ್ಮ ದೇವತೆಗಳ ಸೇಡೆಂದು ನಮ್ಮವರಿಗಷ್ಟೇ ಅಲ್ಲ ನಿಮ್ಮ ಧರ್ಮದವರಿಗೂ ತೋರಿಸುವ ಪರಿ. ಆರ್ಯದೇವ ಬ್ರಹ್ಮನ ಸೇಡು, ಕುಲಪತಿ ವಿಷ್ಣುವಿನ ಸೇಡು, ಪ್ರಧಾನ ಆಚಾರ್ಯ ಮಹೇಶ್ವರನ ಸೇಡು!"

"ಮುಂದೆ...?"

"ಕುಲಪತಿ, ಅವನ ಉತ್ತರಾಧಿಕಾರಿ ಇಬ್ಬರೂ ಹತರಾಗಿದ್ದಾರೆ. ಬೌದ್ಧ ಧರ್ಮದ ಕೇಂದ್ರವಾಗಿರುವ ನಾಲಂದಾ ವಿದ್ಯಾಲಯದ ಕುಲಪತಿಯ ಸ್ಥಾನ - ಅಂದರೆ ಬೌದ್ಧಧರ್ಮದ ನಾಯಕನ ಸ್ಥಾನ ರಿಕ್ತವಾಗಿದೆ. ಆ ಸ್ಥಾನಕ್ಕೆ ನಾನೇ ಈಗ ಉತ್ತರಾಧಿಕಾರಿ. ನಿಮ್ಮ ದೇವತೆಗಳ, ನಿಮ್ಮ ಧರ್ಮದವರ ಕ್ರೌರ್ಯವನ್ನು ಸಾರಿ ಹೇಳುತ್ತೇನೆ. ನಮ್ಮವರು ನಿಮ್ಮ ಧರ್ಮಕ್ಕೆ ಸೇರುವುದಿರಲಿ ನಿಮ್ಮವರೂ ನಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಾರೆ. ನನ್ನ ನೇತೃತ್ವದಲ್ಲಿ ಬೌದ್ಧ ಧರ್ಮವನ್ನು ಉನ್ನತ ಶಿಖರಕ್ಕೆ.." ದ್ವಾರಪಂಡಿತನ ಮಾತುಗಳು ಒಮ್ಮೆಲೇ ನಿಂತುಹೋದವು.

ಹೊರಗೆ ಕೋಲಾಹಲವುಂಟಾಗಿತ್ತು. ದ್ವಾರಪಂಡಿತನ ಗಮನ ಅತ್ತ ಹರಿದಿದ್ದನ್ನು ನೋಡಿ ಅರ್ಕಶರ್ಮ ಅಲ್ಲಿಂದ ತಪ್ಪಿಸಿಕೊಂಡು ಓಡಿದ.

*****

"ಓಡುತ್ತ ಓಡುತ್ತ ಪುನಃ ಅಶ್ವಶಾಲೆಯ ಬಳಿಯೇ ಬಂದೆ. ವಿದ್ಯಾಲಯವಿಡೀ ಯುದ್ಧಭೂಮಿಯೇ ಆಗಿತ್ತು. ಎಲ್ಲೆಡೆ ಭೋತ ಯೋಧರು ಮತ್ತೊಂದು ದಳದ ಸೈನಿಕರ ಜೊತೆ ಕಾದಾಡುತ್ತಿದ್ದರು. ನನಗಾವುದನ್ನೂ ನೋಡುವ ವ್ಯವಧಾನವಿರಲಿಲ್ಲ. ಅಶ್ವಶಾಲೆಯಲ್ಲಿ ಮೆಟ್ಟಿಲುಗಳನ್ನು ಇಳಿದು ನೆಲಮಾಳಿಗೆಯಲ್ಲಿ ಅವಿತಿದ್ದೆ. ಸುಮಾರು ಮೂರು ದಿನಗಳ ಕಾಲ ಹೊರಬರಲಿಲ್ಲ. ಹೊರಗಿನ ಗದ್ದಲ ಕೇಳಿಸುತ್ತಲೇ ಇತ್ತು. ಮೇಲೆ ಅಶ್ವಶಾಲೆಯಲ್ಲಿ ಯಾರೋ ಬಂದಂತಾದರೂ ಮೆಟ್ಟಿಲುಗಳನ್ನು ಯಾರೂ ಇಳಿದು ಬರಲಿಲ್ಲ - ಬಹುಶಃ ಯಾರಿಗೂ ಅವುಗಳಿರುವುದು ಗೊತ್ತಾಗಲೇ ಇಲ್ಲ" ಅರ್ಕಶರ್ಮ ಹೇಳುತ್ತಿದ್ದ. ಅವನು ನಾಲಂದಾದಿಂದ ಹಿಂತಿರುಗಿ ಎರಡು ದಿನಗಳಾಗಿದ್ದವು. ಸುಧಾರಿಸಿಕೊಂಡ ನಂತರ ಮಹಾಮಂತ್ರಿಯೊಡನೆ ಸಂದರ್ಶನದಲ್ಲಿ ಅಲ್ಲಿ ನಡೆದ ಕಥೆಯನ್ನೆಲ್ಲ ಹೇಳಿ, ಈಗ ಕೊನೆಯ ಭಾಗವನ್ನು ವಿವರಿಸುತ್ತಿದ್ದ.

"ನಾಲ್ಕನೆಯ ದಿನ ಗದ್ದಲವೆಲ್ಲ ನಿಂತಂತೆ ಕಾಣಿಸಿತು. ಮೆಲ್ಲನೆ ಹೊರಬಂದೆ. ಎಲ್ಲೆಡೆ ಬೆಂಕಿಯ ಹೊಗೆ. ಎಲ್ಲೆಲ್ಲೂ ಹತರಾದ ಮನುಷ್ಯರ ಶವಗಳು. ಸಾವಿರಾರು ಮಂದಿ ಆ ವಿದ್ಯಾಲಯದಲ್ಲಿ ಮಡಿದಂತಿತ್ತು. ಅಲ್ಲೊಬ್ಬ ಇಲ್ಲೊಬ್ಬ ವಿದ್ಯಾರ್ಥಿಗಳು ಸ್ವಲ್ಪ ಅಥವ ಹೆಚ್ಚು ಗಾಯಗೊಂಡು ಇನ್ನೂ ಬದುಕಿದ್ದರು. ಶಕ್ತಿಯಿದ್ದವರು ಬಳಲುತ್ತಿರುವವರಿಗೆ ಅವರ ಕೈಲಾದ ಸಹಾಯ ಮಾಡುತ್ತಿದ್ದರು. ನಾನೂ ಹೊರಗಿನಿಂದ ನೆರವು ಬರುವವರೆಗು ನನ್ನ ಕೈಲಾದ ಸಹಾಯ ಮಾಡಿದೆ. ಆಗ ಬದುಕುಳಿದವರ ಸಂಗಡ ಮಾತನಾಡುತ್ತ ಸ್ವಲ್ಪ ವಿಷಯಗಳು ತಿಳಿದವು" ಅರ್ಕ ವಿವರಿಸಿದ

ಸ್ವಲ್ಪ ಮೌನದ ನಂತರ "ವಿದ್ಯಾಲಯಕ್ಕೆ ದಾಳಿಯಿಟ್ಟವರು ಮ್ಲೇಚ್ಛ-ತುರುಷ್ಕರಂತೆ. ಯಾರೋ ಘೋರಿಯ ಮೊಹಮ್ಮದನಂತೆ - ಅವನ ದೇಶವಿರುವುದು ಕಾಶ್ಮೀರದಾಚೆ ಗಾಂಧಾರದ ಬಳಿಯಂತೆ. ಭಾರತವರ್ಷದ ಉತ್ತರಭಾಗದಲ್ಲಿರುವ ರಾಜ್ಯಗಳಿಗೆ ದಾಳಿಯಿಡುವುದು, ಸೋತವರ ಸಿರಿ ದೋಚುವುದು, ಜನಸಾಮಾನ್ಯರನ್ನು ಕೊಚ್ಚುವುದು ಅವನ ಕಸುಬಂತೆ. ಅಂತಹ ಕೇಡಿಗನ ಒಬ್ಬ ದಳನಾಯಕನಂತೆ - ಯಾರೋ ಭಕ್ತಿಯಾರ್ ಖಿಲ್ಜಿ ಎಂಬುವನು. ಆಗಲೇ ವಿಕ್ರಮಶಿಲೆಯನ್ನು ಧ್ವಂಸ ಮಾಡಿದ್ದನಂತೆ. ಅವನ ದಂಡು ನಾಲಂದಾ ವಿದ್ಯಾಲಯವನ್ನು ಆಕ್ರಮಿಸಿದರಂತೆ. ಕೇವಲ ಮುನ್ನೂರು ಸೈನಿಕರು - ಕಂಡು ಕಂಡವರನ್ನೆಲ್ಲ ಕೊಚ್ಚಿ ಹಾಕಿದರಂತೆ. ಯುವಕ, ಮುದುಕ, ರೋಗಿ, ಯೋಧ ಯಾವ ಭೇಧವೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕೊಂದರಂತೆ. ಭೋತ ಯೋಧರು ಅವರೊಡನೆ ವೀರಾವೇಶದಿಂದ ಕೊನೆಯ ಉಸಿರಿರುವವರೆಗೂ ಹೋರಾಡಿದರಂತೆ, ಆದರೆ ತುರುಷ್ಕರ ಸಾಟಿ ಅವರಾಗಿರಲಿಲ್ಲ. ಒಬ್ಬರೂ ಬಿಡದಂತೆ ಭೋತದೇಶದ ಯೋಧರು ಸತ್ತು ಬಿದ್ದಿದ್ದರು. ದ್ವಾರಪಂಡಿತನನ್ನೂ ಯುದ್ಧವೆಲ್ಲ ಮುಗಿದ ನಂತರ ಸ್ವಯಂ ಭಕ್ತಿಯಾರ್ ಖಿಲ್ಜಿಯೇ ತಲೆ ಕಡಿದು ಕೊಂದನಂತೆ. ಆಮೇಲೆ ಪ್ರತಿಯೊಂದು ಚೈತ್ಯ-ಸ್ತೂಪಾಗಳಿಗೂ ನುಗ್ಗಿ ಒಳಗಿದ್ದ ಬುದ್ಧನ ಪ್ರತಿಮೆಗಳನ್ನು ಒಡೆದು ಹಾಕಿದರಂತೆ. ಕುಲಪತಿ ತೋರಿಸಿದ್ದ ಅಪಾರ ಬುದ್ಧನ ಪ್ರತಿಮೆಯ ತಲೆ ನೆಲಕ್ಕುರುಳಿತ್ತು. ಅವಲೋಕಿತೇಶ್ವರನ ಪ್ರತಿಮೆಯ ತಲೆ, ಕೈಗಳು ಕತ್ತರಿಸಿ ಎಲ್ಲೋ ಮಾಯವಾಗಿದ್ದವು. ಧಾನ್ಯಗಾರ, ಅಶ್ವಶಾಲೆ, ಗೋಶಾಲೆಗಳನ್ನು ದೋಚಿ ಎಲ್ಲವನ್ನೂ ಸಾಗಿಸಿಕೊಂಡರಂತೆ. ಅಲ್ಲಲ್ಲೇ ಬೆಂಕಿಯಿಟ್ಟು, ಕೊನೆಗೆ ಗ್ರಂಥಾಲಯದೊಳಕ್ಕೆ ನುಗ್ಗಿ ಎಲ್ಲ ಹಸ್ತಪ್ರತಿಗಳನ್ನು ಸೇರಿಸಿ ಅವುಗಳನ್ನೂ ಸುಟ್ಟುಬಿಟ್ಟರಂತೆ. ಒಂದು ಕಲ್ಲೂ ನಿಂತಿರದಂತೆ ಪ್ರತಿಯೊಂದು ಸಂಘಾರಾಮ, ಚೈತ್ಯ, ಸ್ತೂಪ, ವಿಹಾರಾಶ್ರಮಗಳನ್ನು ಕೆಡವಿ ಮೂರು ದಿನಗಳ ಹಿಂದೆ ಜೀವ ತುಂಬಿದ್ದ ವಿದ್ಯಾಲಯದ ಸ್ಥಳದಲ್ಲಿ ಕೇವಲ ಭಗ್ನಾವಶೇಷಗಳನ್ನು, ಶವಗಳನ್ನು ಬಿಟ್ಟು ಹೊರಟುಹೋದರಂತೆ"

"ನಂತರ ಏನಾಯಿತು?" ಮಹಾಮಂತ್ರಿ ವಿಚಾರಿಸಿದರು.

"ಮತ್ತೆರಡು ದಿನಗಳ ನಂತರ ಪಾಳ ಅರಸರ ಸಣ್ಣ ಸೈನ್ಯವೊಂದು ವಿದ್ಯಾಲಯದಲ್ಲಿ ಇನ್ನೂ ಬದುಕಿದ್ದವರ ನೆರವಿಗೆ ಬಂತು. ಆಗ ನಾನು ನಾಲಂದಾ ಬಿಟ್ಟು, ಸಾರ್ಥಗಳನ್ನು ಸೇರಿಕೊಂಡು ಊರಿಗೆ ಬಂದು ತಲುಪಿದೆ"

ಸ್ವಲ್ಪ ಹೊತ್ತು ಮೌನ ಕವಿದಿತ್ತು. ನಂತರ ಅರ್ಕ ಪುನಃ ಮುಂದುವರೆಸಿದ.

"ಮಹಾಮಂತ್ರಿಗಳೇ, ಈಗ ಬೌದ್ಧ ಧರ್ಮ ನಾಯಕನಿಲ್ಲದ ದಳದಂತಾಗಿದೆ. ಅನುಯಾಯಿಗಳಿಗೆ ಮಾರ್ಗದರ್ಶನಕ್ಕೆತ್ತ ನೋಡಬೇಕೆಂಬುದು ತಿಳಿಯಲಾಗಿದೆ. ಈ ಮ್ಲೇಚ್ಛ ಆಕ್ರಮಣಕಾರರ ದಾಳಿ, ಅವರು ಮಾಡುವ ಸರ್ವನಾಶವನ್ನು ಕಣ್ಣಾರೆ ಕಂಡಿದ್ದೇನೆ. ಅಪಾಯ - ಇಡೀ ಭಾರತವರ್ಷಕ್ಕೇ ಇವರುಗಳಿಂದ ಅಪಾಯವಿದೆ. ಅವರಿಗೆ ಯೋಧರು, ಯುದ್ಧದಲ್ಲಿ ಭಾಗವಹಿಸದವರೆಂಬ ಭೇದವಿಲ್ಲ. ಎಲ್ಲರನ್ನೂ ಒಂದೇ ರೀತಿ ಕೊಚ್ಚಿಹಾಕುತ್ತಾರೆ. ನಮ್ಮ ವೇದಾಂತ ನಿಮ್ಮ ವೇದಾಂತಕ್ಕಿಂತ ಉತ್ತಮವೆಂದು ತರ್ಕ ಮಾಡುವುದಾಗಲಿ, ನಿಮ್ಮ ಧರ್ಮವಾದರೂ ಏನೆಂದು ಕೇಳುವ ಸಹನೆಯಾಗಲಿ ಅವರಿಗಿಲ್ಲ. ಅವರ ಆರ್ಭಟ ಒಂದೇ - ’ನಮ್ಮ ಧರ್ಮ ಸ್ವೀಕರಿಸು ಇಲ್ಲವೇ ಮಡಿ’. ಮಾತನಾಡಿದರೆ ಒಂದು ಕ್ಷಣದಲ್ಲಿ ರುಂಡ ಹಾರಿಸಿಯಾರು. ಚೈತ್ಯ, ಸ್ತೂಪ, ಬಸದಿ, ದೇವಾಲಯಗಳಿಗೆ ಗೌರವವಿಲ್ಲ; ನಮ್ಮ ಕಲೆ, ಪಾಂಡಿತ್ಯ, ಸಂಸ್ಕೃತಿ, ಸಂವೇದನೆಗಳ ಬಗ್ಗೆ ಆದರವಿಲ್ಲ. ಕೇವಲ ದ್ವೇಷವಷ್ಟೇ. ಈಗ ಉತ್ತರದಲ್ಲಿ ಧ್ವಂಸ-ನೃತ್ಯ ಮಾಡುತ್ತಿದ್ದಾರೆ. ನಾಳೆ ಇಲ್ಲಿ ದಕ್ಷಿಣಕ್ಕೆ ಬರುತ್ತಾರೆ. ನಾವು ಜಾಗ್ರತೆಯಾಗಿರಬೇಕು. ನಮ್ಮ ಧರ್ಮವನ್ನು, ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸಿದ್ಧರಾಗಿರಬೇಕು"

ಮಹಾಮಂತ್ರಿ ನುಡಿದರು "ನಮ್ಮಲ್ಲಿ ಧರ್ಮಾಚರಣೆ ಕೇವಲ ಪೀಠದಂತಹ ಕೇಂದ್ರಗಳಿಗೆ ಸೀಮಿತವಾಗಿಲ್ಲ. ಮನೆ ಮನೆಗಳಲ್ಲೂ ಪ್ರತಿಯೊಬ್ಬ ವ್ಯಕ್ತಿ ಬಡವ-ಶ್ರೀಮಂತ, ತರುಣ-ವೃದ್ಧ, ಪುರುಷ-ಸ್ತ್ರೀ ಎನ್ನದಂತೆ ಎಲ್ಲರೂ ನಿತ್ಯಕರ್ಮಗಳನ್ನು ಮಾಡುತ್ತ ಬಂದಿದ್ದಾರೆ, ಹೀಗೆಯೇ ತಂದೆ ಮಕ್ಕಳಿಗೆ ತಿಳಿಸಿ ಈ ಪರಂಪರೆ ಮುಂದುವರೆಯುವುದು ಎಂಬ ನಂಬಿಕೆ ನನಗಿದೆ. ಹಾಗಾಗಿ ಬೌದ್ಧರಿಗೆ ಮಾಡಿದಂತೆ ನಮ್ಮನ್ನು ಬೇರು ಸಹಿತ ಕಿತ್ತೆಸೆಯಲಾರರು. ಆದರೆ ನೀನು ಹೇಳುವುದು ಸರಿ. ನಮ್ಮನ್ನು ನಾವು ಕಾಪಾಡಿಕೊಳ್ಳಲು ಸಿದ್ಧರಾಗಿರಬೇಕು!"

*****

ಇಂತಹ ಘಟನೆಗಳಿಂದ ಪ್ರೇರಿತವಾಗಿಯೇ ವಿದ್ಯಾರಣ್ಯರಂತಹ ಮೇಧಾವಿ-ಋಷಿಗಳ ಉತ್ತೇಜನದಿಂದ ಹರಿಹರ ಹಾಗು ಬುಕ್ಕರಾಯರು ತುರುಷ್ಕರ ದಕ್ಷಿಣ ಭಾರತ ಆಕ್ರಮಣವನ್ನು ತಡೆದು ನಿಲ್ಲಿಸಲೆಂದು ವಿಜಯನಗರ ಸಂಸ್ಥಾನವನ್ನು ಸ್ಥಾಪಿಸಿದರು. ಮುನ್ನೂರೈವತ್ತು ವರ್ಷಗಳ ಕಾಲ ಈ ಸಂಸ್ಥಾನವು ಸಾಮ್ರಾಜ್ಯವಾಗಿ ಬೆಳೆದು ಕೇವಲ ಸನಾತನ ಧರ್ಮವನ್ನಷ್ಟೇ ಅಲ್ಲ ಇಡೀ ಭಾರತ-ಸಂಸ್ಕೃತಿಯನ್ನೇ ಎತ್ತಿ ಹಿಡಿದು ವೈಭವದಿಂದ ಮೆರೆಯಿತು.

*****

ಲೇಖಕರ ಮಾತು



ಈ ಕಥೆಯು ಎರಡು ಕಾದಂಬರಿಗಳ ಪ್ರೇರಣೆ ಪಡೆದಿದೆ - ಎಸ್. ಎಲ್. ಭೈರಪ್ಪನವರ "ಸಾರ್ಥ" ಹಾಗು ಡ್ಯಾನ್ ಬ್ರೌನ್‍ರವರ "Angels and Demons"

ಈ ಕಥೆ ೧೨ನೇ ಶತಮಾನದ ಕೊನೆಯಭಾಗದಲ್ಲಿ ಘಟಿಸುತ್ತದೆ. ಈ ಕಥೆಯು ಐತಿಹಾಸಿಕ ನಿಖರತೆಯನ್ನು ಶೃತಪಡಿಸುತ್ತಿಲ್ಲ, ಆದರೆ ಸನ್ ೧೧೯೩ರಲ್ಲಿ ಭಕ್ತಿಯಾರ್ ಖಿಲ್ಜಿ ವಿಕ್ರಮಶಿಲೆ ಹಾಗು ನಾಲಂದಾ ವಿಶ್ವವಿದ್ಯಾನಿಲಯಗಳನ್ನು ಆಕ್ರಮಣ ಮಾಡಿ ಧ್ವಂಸ ಮಾಡಿದ್ದು ದಾಖಲೆಯಾಗಿರುವ ಇತಿಹಾಸ. ವಿಕ್ರಮಶಿಲೆ ಹಾಗು ನಾಲಂದಾ ಇಂದಿಗೂ ಬಿಹಾರ ರಾಜ್ಯದಲ್ಲಿ ಭಗ್ನಾವಶೇಷಗಳಾಗಿ ಉಳಿದಿವೆ.

ಭಕ್ತಿಯಾರ್ ಖಿಲ್ಜಿಯ ಸಹಾಯದಿಂದಲೇ ಕುತ್ಬುದ್ದೀನ್ ಐಬಕ್ ಸನ್ ೧೨೦೬ರ (ಮಹಮ್ಮದ್ ಘೋರಿಯ ಮರಣದ) ನಂತರ ಗುಲಾಮ-ವಂಶವನ್ನು ಸ್ಥಾಪಿಸಿ (ಉತ್ತರ) ಭರತವನ್ನು ದೆಹಲಿ ಸಲ್ತನತ್ ಎಂದು ಮೊದಲಬಾರಿ ಮುಸಲ್ಮಾನ ಆಳ್ವಿಕೆಗೀಡು ಮಾಡಿದ್ದು.

ಸ್ತೂಪ ಹಾಗು ಚೈತ್ಯ ಪದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಉಪಯೋಗಿಸುತ್ತಾರೆ. ವಿಹಾರವೆಂದರೆ ಛತ್ರವಿದ್ದಂತೆ. ಸಂಘಾರಾಮವೆಂದರೆ ಇಂದಿನ ’ಕಾಲೇಜ್’ಗೆ ಸಮಾನವಾದ ಸಂಸ್ಥೆ. ನಾಲಂದಾ ವರ್ಣನೆಯನ್ನೂ ಅನೇಕ ಐತಿಹಾಸಿಕ ಸೂತ್ರಗಳಿಂದ ಆರಿಸಲಾಗಿದೆ. ನಾಲಂದಾ ಭಗ್ನಾವಶೇಷಗಳನ್ನು ಸನ್ ೧೮೧೨ರಲ್ಲಿ ಡಾ. ಫ್ರಾನ್ಸಿಸ್ ಬ್ಯುಕ್ಯಾನನ್ ಎಂಬಾತ ಮೊದಲ ಬಾರಿ ಐತಿಹಾಸಿಕ ದೃಷ್ಟಿಯಿಂದ ಪರಿಶೀಲಿಸಿದರು. ನಾಲಂದಾ ನಕ್ಷೆಯನ್ನು ಸನ್ ೧೮೧೨ರಲ್ಲಿ ಬ್ಯುಕ್ಯಾನನ್ ಮತ್ತು ಸನ್ ೧೮೬೨-೬೫ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್‍ಹ್ಯಾಮ್ ಎಂಬ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞ ಮಾಡಿದ ಸಂಶೋಧನೆ ಹಾಗು Archaeological Survey of India ಪರವಾಗಿ ಕನ್ನಿಂಗ್‍ಹ್ಯಾಮ್ ಬರೆದ Four Reports Made During The Years 1862-63-64-65 ಎಂಬ ವರದಿಯಿಂದ ಆರಿಸಲಾಗಿದೆ. ಎಲ್ಲೂ ಈ ಕಥೆಯಲ್ಲಿ ಬರುವ ಅಶ್ವಶಾಲೆ-ಗೋಶಾಲೆಗಳ ದಾಖಲೆಯಿಲ್ಲ; ಅವು ಕಾಲ್ಪನಿಕ ಮಾತ್ರ.

ಅಂತೆಯೇ ವಿಜಯನಗರ ಸಾಮ್ರಾಜ್ಯವು ಸ್ಥಾಪಿತವಾದದ್ದು ದಕ್ಷಿಣಭಾರತದ ಮುಸಲ್ಮಾನ ಆಕ್ರಮಣವನ್ನು ನಿಲ್ಲಿಸಲೆಂದೇ. ವಿಜಯನಗರದ ವೈಭವದ ಸೂಕ್ಷ್ಮ ವಿವರಗಳು ತಿಳಿದದ್ದು ಸನ್ ೧೯೦೦ರಲ್ಲಿ ರಾಬರ್ಟ್ ಸಿವೆಲ್ ಎಂಬ ಮದ್ರಾಸಿನಲ್ಲಿದ್ದ ಬ್ರಿಟೀಷ್ ಸರ್ಕಾರಿ ನೌಕರ ಪೋರ್ಚುಗೀಸ್ ಪ್ರವಾಸಿಗಳಾದ ಡೊಮಿಂಗೋ ಪಯಸ್ ಹಾಗು ಫರ್ನಾಒ ನೂನ್ಯೆಜ್ ಸನ್ ೧೫೨೦ ಹಾಗು ೧೫೩೦ರ ದಶಕಗಳಲ್ಲಿ ಬರೆದ ಪತ್ರಗಳ ಸಂಶೋಧನೆ ಮಾಡಿದರಿಂದ. ಇಡೀ ದಕ್ಷಿಣ ಭಾರತವನ್ನು ಆವರಿಸಿ, ೩೫೦ ವರ್ಷಗಳ ಕಾಲ ವೈಭವದಿಂದ ಮೆರೆದ ನಂತರ ವಿಜಯನಗರ ಸಾಮ್ರಾಜ್ಯವು ಸನ್ ೧೫೬೫ರ ತಾಳೀಕೋಟೆ ಯುದ್ಧದ ಬಳಿಕ ದಖನೀ ಸುಲ್ತಾನರ ಕೈವಶವಾಗಿ ನಿರ್ನಾಮವಾಯಿತು. ವಿಜಯನಗರ ಸಾಮ್ರಾಜ್ಯ ಇಂದು ಕೇವಲ ಭಗ್ನಾವಶೇಷಗಳಾಗಿ (ಪ್ರಮುಖವಾಗಿ) ಕರ್ನಾಟಕದ ಹಂಪೆಯಲ್ಲಿ ಉಳಿದಿದೆ.

ಭೋತದೇಶವೆಂದರೆ ಇಂದಿನ ಟಿಬೆಟ್. ಟಿಬೆಟ್, ಚೀನಾ, ಕೊರಿಯಾ, ಇಂಡೋನೇಶಿಯಾ, ಥಾಯಿಲೆಂಡ್, ಶ್ರೀಲಂಕಾ, ಬರ್ಮಾ ಮತ್ತಿತರ ದೇಶಗಳಿಂದ ವಿದ್ಯಾರ್ಥಿಗಳು ನಾಲಂದಾಕ್ಕೆ ಬಂದಿರುವ ದಾಖಲೆಗಳಿವೆ. ನಾಲಂದಾದಲ್ಲಿ ದ್ವಾರಪಂಡಿತನೊಬ್ಬ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡುತ್ತಿದ್ದನೆಂದು ೭ನೇ ಶತಮಾನದ ಚೀನೀ ಪ್ರವಾಸಿ-ವಿದ್ಯಾರ್ಥಿ ವೆನ್ ಸಾಂಗ್ (Hiuen Tsang) ತಿಳಿಸುತ್ತಾನೆ. ಯೋಧರು ಎಲ್ಲಿಂದಲೂ ಬಂದ ಯಾವ ದಾಖಲೆಯೂ ಇಲ್ಲ; ಅದು ಕೇವಲ ಕಾಲ್ಪನಿಕ.

ಗಾಂಧಾರ ಇಂದಿನ ಅಫ್ಘಾನಿಸ್ಥಾನದಲ್ಲಿರುವ ಕಂದಾಹರ್. ಘೋರಿ (ಘುವರ್) ಇಂದಿನ ಮಧ್ಯ-ಅಫ್ಘಾನಿಸ್ಥಾನದಲ್ಲಿ, ಕಾಬುಲ್‍ನ ಪಶ್ಚಿಮಕ್ಕೆ ಸುಮಾರು ೨೫೦ ಕಿ.ಮೀ ದೂರದಲ್ಲಿದೆ.

ಯಾವ ಧರ್ಮವನ್ನೂ ಟೀಕಿಸುವ ಅಥವ ಖಂಡಿಸುವ ದುಸ್ಸಾಹಸ ಇದಲ್ಲ. ಈ ಕಥೆ ಕೇವಲ ಕಾಲ್ಪನಿಕ ಮಾತ್ರ.


2 comments:

bhadra said...

ಹಿಂದೊಮ್ಮೆ ಓದಿದ್ದೆ ಅನ್ಸತ್ತೆ - ಆದರೂ ಕುತೂಹಲ ಓದು ಕೊಡುವ ನಿಮ್ಮ ಬರಹಕ್ಕೆ ವಂದನೆಗಳು :)

೧೦/೧೦

ಮಹೇಶ ಭಟ್ಟ said...

ಐತಿಹಾಸಿಕವಾಗಿ ತುಂಬ ಮಹತ್ವ, ಹಾಗೂ ಸೂಕ್ಷ್ಮತೆಯಿರುವ ಕತೆ ತುಂಬಾ ಚೆನ್ನಾಗಿದೆ. ನಿಮ್ಮ ಬರಹಗಳನ್ನು ನಿಲ್ಲಿಸಬೇಡಿ